Saturday, 4 July 2015

ನೇಗಿಲು ಮತ್ತು ನೇಣುಗಂಬದ ನಡುವೆ ಅನ್ನದಾತ


ಇದು ಕರ್ನಾಟಕ ರೈತರ ಗೋಳಿನ ಕಥೆ ಮಾತ್ರವಲ್ಲ, ಇಡೀ ಭಾರತಕ್ಕೆ ಆವರಿಸಿಕೊಂಡ ಅನ್ನದಾತನ ಅತಂತ್ರ ಸ್ಥಿತಿಯ ಕಥೆ. ಕಳೆದ ಕಳೆದ ಹದಿನೈದು ದಿನಗಳಿಂದ ಸಮೂಹ ಸನ್ನಿಗೆ ಒಳಗಾದವರಂತೆ ಆತ್ಮ ವಿಶ್ವಾಸ ಕಳೆದು ಕೊಂಡು ಸಾವಿನ ಮನೆ ತಟ್ಟುತ್ತಿರುವ  ಕರ್ನಾಟಕ ರೈತರ ಸಾವಿಗೆ ಸಾಕ್ಷಿಯಾಗುವಾಗ, ಮೈ ಮತ್ತು ಮನಸ್ಸಿಗೆ ಸೂತಕದ ಛಾಯೆ ಆವರಿಸಿಕೊಂಡಂತಾಗಿದೆ. ಕಳೆದ ಆರು ತಿಂಗಳಿನ ಅವಧಿಯಲ್ಲಿ ಕರ್ನಾಟಕದಲ್ಲಿ ಐವತ್ತರೆಡು ಮಂದಿ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಸಿರಿ ಹಾಗೂ ಸಮೃದ್ಧ ಜಿಲ್ಲೆಯೆನಿಸಿದ ಮಂಡ್ಯ ಜಿಲ್ಲೆಯನ್ನೂ ಒಳಗೊಂಡಂತೆ ಹದಿನೈದು ದಿನಗಳಲ್ಲಿ ಹನ್ನೊಂದು ಮಂದಿ ರೈತರು ಸಾವಿಗೆ ಶರಣಾಗಿದ್ದಾರೆ. ಇದಕ್ಕಿಂತ ಆತಂಕದ ಸಂಗತಿಯೆಂದರೆ, ನೆರೆಯ ಮಹಾರಾಷ್ಟ್ರದಲ್ಲಿ ಕಳೆದ ಜನವರಿ ತಿಂಗಳಿನಿಂದ ಮೇ ತಿಂಗಳ ಅಂತ್ಯಕ್ಕೆ ಒಂದು ಸಾವಿರದ ಎಂಬತ್ತೆಂಟು ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದರೆ, ಏಪ್ರಿಲ್ ಮತ್ತು ಮೇ ಎರಡು ತಿಂಗಳಿನಲ್ಲಿ ಆತ್ಮ ಹತ್ಯೆ ಮಾಡಿಕೊಂಡವರ ಸಂಖ್ಯೆ ನಾಲ್ಕುನೂರ ಎಂಬತ್ತೇಳಕ್ಕೆ ತಲುಪಿದೆ. ಇದೊಂದು ಅಂತ್ಯವಿಲ್ಲದ ದುರಂತದ ಸಾವಿನ ಸರಣಿಯೇನೋ ಎಂಬ ಆತಂಕ ದೇಶದ ಪ್ರಜ್ಞಾವಂತರನ್ನು ಕಾಡುತ್ತಿದೆ. ಇಂತಹ ದುರಂತಕ್ಕೆ ಕೇವಲ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಅಥವಾ ಬಟವಾಡೆಯಾಗದ ಸಕ್ಕರೆ ಕಾರ್ಖಾನೆಗಳ ರೈತರ ಕಬ್ಬಿನ ಬಾಕಿ ಇಲ್ಲವೆ, ಆಳುವ ಸರ್ಕಾರಗಳ ನಿರ್ಲಕ್ಷ್ಯತನ ಎಂದು ಸಾರಾ ಸಗಟಾಗಿ ನಾವು ದೂರುವುದು ಸುಲಭದ ಸಂಗತಿ ನಿಜ. ಆದರೆ, ಇವುಗಳಿಗೂ ಮೀರಿದ ಅನೇಕ ಕಾರಣಗಳನ್ನು ಮತ್ತು ವಿವಿಧ ಆಯಾಮಗಳನ್ನು ನಿಖರವಾಗಿ ಗುರುತಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಂಡು ಕೊಳ್ಳುವಲ್ಲಿ ನಾವು ಸಂಪೂರ್ಣವಾಗಿ ಸೋತಿದ್ದೇವೆ ಎಂಬುದು ಅಷ್ಡೇ ಕಟು ವಾಸ್ತವದ ಸತ್ಯ.
ದಕ್ಷಿಣ ಕನ್ನಡದ ಲೇಖಕ ಹಾಗೂ ಕೃಷಿ ಕುರಿತು ಪ್ರೀತಿಯಿಂದ ಲೇಖನಗಳನ್ನು ಬರೆಯುತ್ತಾ ಬಂದಿರುವ ಶ್ರೀ. ನರೇಂದ್ರ ರೈ ದೇರ್ಲರವರುಹಸಿರು ಕೃಷಿಯ ನಿಟ್ಟುಸಿರುಗಳುಎಂಬ ತಮ್ಮ ಕೃತಿಯಲ್ಲಿ  ದಾಖಲಿಸಿರುವವ ಮಾತುಗಳಿವು. “ನಮ್ಮ ದೇಶದಲ್ಲಿ ಯುದ್ಧ ಮಾಡಿ ಭೂಮಿ ವಶಪಡಿಸಿಕೊಂಡವರ ಬಗ್ಗೆ, ದೇವಾಲಯ ಕಟ್ಟಿದವರ ಬಗ್ಗೆ, ಮುರಿದವರ ಬಗ್ಗೆ ದಾಖಲೆಗಳು ಬೇಕಾದಷ್ಟು ಸಿಗುತ್ತವೆ. ರಾಜಕಾರಣಿಗಳ, ವಿಜ್ನಾನಿಗಳ, ಸಮಾಜ ಸುಧಾಕರ, ಬುದ್ಧಿಜೀವಿ ಮೂರ್ತಿಗಳು, ಅಲ್ಲಲ್ಲಿ ಅಡ್ಡವಾಗುತ್ತವೆ. ಆದರೆ, ಕೃಷಿ, ಮತ್ತು ಕೃಷಿಕರ ಬೆವರು. ರಕ್ತ, ಶ್ರಮ, ಇವೆಲ್ಲವೂ ತಾಮ್ರಪಟ, ಶಿಲೆ, ಕಾಗದಗಳಿಗೆ ಅಂಟಿದ್ದು ತೀರಾ ಕಡಿಮೆ.”
ಸ್ವಾತಂತ್ರ್ಯಾನಂತರದ ಭಾರತದ ಕೃಷಿಯಲ್ಲಾದ ಪಲ್ಲಟಗಳ ಕುರಿತು ನಾವು ಗಂಭೀರವಾಗಿ ಚಿಂತಿಸಿದ್ದು ತೀರಾ ಕಡಿಮೆ. ಭಾರತದ ಒಟ್ಟು ವರಮಾನ ಮತ್ತು ಆಂತರೀಕ ಉತ್ಪಾದನೆಯಲ್ಲಿ ಶೇಕಡ 47 ರಷ್ಟು ಪಾಲು ಪಡೆದಿದ್ದ ಕೃಷಿ ವಲಯದ ಪಾಲು ಈಗ ಕೇವಲ ಶೇಕಡ 13 ಕ್ಕೆ ಕುಸಿದಿದೆ. ಇದು ನಮ್ಮನ್ನಾಳುವ ಸರ್ಕಾರಗಳ ಬೇಜವ್ದಾರಿಗೆ ಹಿಡಿದ ಕೈಗನ್ನಡಿ ಎಂದು ಹೇಳಬಹುದು.

ಇಡೀ ಜಗತ್ತಿನಲ್ಲಿ ಕೃಷಿಯನ್ನು ಮೂಲ ಆಧಾರ ಮಾಡಿಕೊಂಡಿರುವ, ದೇಶದ ಆರ್ಥಿಕ ಬೆಳವಣಿಗೆಯ ಬೆನ್ನೆಲುಬಾಗಿರುವ ಹಾಗೂ ಭಾರತದ ಶೇಕಡ ಎಪ್ಪತ್ತರಷ್ಟು ಜನರ ಪಾಲಿಗೆ ಜೀವನಾಡಿಯಾಗಿರುವ ಕೃಷಿ ಲೋಕದ ಬಗ್ಗೆ ಏಕೆ ಇಷ್ಟು ಅನಾದಾರ? ನೆಲದ ಅನ್ನದಾತ ಎನಿಸಿಕೊಂಡ ರೈತ ಕೃಷಿಯನ್ನು ಎಂದೂ ಒಂದು ಉದ್ಯಮವೆಂದು ಪರಿಗಣಿಸದೆ, ವೃತ್ತಿಯನ್ನು ಒಂದು ಕಾಯಕದಂತೆ, ತಪ್ಪಸ್ಸಿನಂತೆ ಕಾಯ್ದುಕೊಂಡ ಬಂದ ಫಲಕ್ಕೆ ಭಾರತದ ವ್ಯವಸ್ಥೆ ನೀಡಿರುವ  ಬಹುಮಾನವೆ?
ಭಾರತದ ಕೃಷಿ ಪರಂಪರೆ ಇಂದು ನಿನ್ನೆಯದಲ್ಲ, ಅದಕ್ಕೆ ಸಾವಿರಾರು ವರ್ಷಗಳ ಪರಂಪರೆಯಿದೆ. ಅದರ ಪರಂಪರೆಯ ಕೊಂಡಿಗಳನ್ನು ಕಳಚಿಕೊಂಡ ಫಲವಾಗಿ ರೈತ ಸಮುದಾಯ ಇಂದು ದಿಕ್ಕೆಟ್ಟು ಅನಾತವಾಗಿದೆ. ಶಿಲಾಯುಗದ ಮಾನವ ಕಲ್ಲಿನ ಆಯುಧದಿಂದ ಮುಂದುವರಿದು, ಕಬ್ಬಿಣವನ್ನು ತನ್ನ ಆಯುಧ ಮಾಡಿಕೊಳ್ಳುವುದರ ಜೊತೆಯಲ್ಲಿ ಅಂದರೆ, ಕ್ರಿಸ್ತಪೂರ್ವ ಎಂಟೂವರೆ ಸಾವಿರ ವರ್ಷಗಳ ಹಿಂದಿನಿಂದ ಭಾರತದಲ್ಲಿ ಕೃಷಿ ಅಸ್ತಿತ್ವದಲ್ಲಿತ್ತು.   ಭಾರತದ ಮೂಲದ ಆಹಾರ ಬೆಳೆಗಳು, ಹಣ್ಣು ಹಂಪಲಗಳು, ಹಾಗೂ ವಿವಿದ ಬಗೆಯ ತರಕಾರಿಗಳು ನಮ್ಮ ವೇದಕಾಲದ ಗ್ರಂಥಗಳಲ್ಲಿ ದಾಖಲಾಗಿವೆ. ಋಗ್ವೇದದಲ್ಲಿ ನೇಗಿಲ ಉಳುಮೆ ಮತ್ತು  ಕೃಷಿ ಭೂಮಿಯ ವೈವಿಧ್ಯತೆ ಹಾಗೂ ನೀರಾವರಿ ಪದ್ಧತಿ ಇವುಗಳನ್ನು ಒಳಗೊಂಡಂತೆ  ಕಾಲದಲ್ಲಿ ಬೆಳೆಯಲಾಗುತ್ತಿದ್ದ ಹಣ್ಣುಗಳು, ತರಕಾರಿಗಳು, ವಿವಿಧ ಆಹಾರ ಬೆಳಗಳ ವಿವರಗಳಿವೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ದೊರೆತ ಸಂಸೃತ ಗ್ರಂಥವೊಂದರಲ್ಲಿ ಕೃಷಿ ಭೂಮಿಯನ್ನು ಹನ್ನೆರೆಡು ವಿಧಗಳಲ್ಲಿ ವರ್ಗೀಕರಿಸಿರುವುದರ ಕುರಿತು ದಾಖಲಾಗಿದೆ.

ಸುಮಾರು ಐದು ಸಾವಿರ ವರ್ಷಗಳ ಹಿಂದೆಯೆ ಭಾರತದಲ್ಲಿ ಕೃಷಿಕರು, ಬೇಸಾಯದ ಜೊತೆಗೆ ಕುದುರೆ, ಹಸು, ಕುರಿ, ಕೋಳಿ, ಮೇಕೆ, ಹಂದಿ ಮುಂತಾದ ಪ್ರಾಣಿಗಳ ಪಾಲನೆಯಲ್ಲಿ ತೊಡಗಿದ್ದರು ಎಂಬುದು ದಾಖಲಾಗಿದೆ. ಶತಮಾನಗಳು ಕಳೆದಂತೆ, sಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ದೇಶಿ ತಂತ್ರಜಾÐನಗಳನ್ನು ಅವಿಷ್ಕರಿಸಿಕೊಂಡು ಅಳವಡಿಸಿಕೊಂಡ ನಮ್ಮ ರೈತರುಹತ್ತಿ  ಸೇರಿದಂತೆ ಹಲವು ಬಗೆಯ ದ್ವಿದಳ ಧಾನ್ಯಗಳು, ದ್ರಾಕ್ಷಿ, ಹಲಸು, ಔಡಲ ಬೀಜಗಳು, ಕೇಸರಿ, ದೇಸಿ ಬಟಾಣಿ ಮಾವು, ರೇಷ್ಮೆಭತ್ತ, ರಾಗಿ, ಜೋಳ ಸೇರಿದಂತೆ ಏಲಕ್ಕಿ, ಮೆಣಸು, ಮುಂತಾದ ಸಂಬಾರ ಬೆಳೆಗಳಲ್ಲಿ  ಪರಿಣಿತರಾಗಿದ್ದರು.
 ಕ್ರಿಸ್ತಪೂರ್ವ ನಾಲ್ಕು ಶತಮಾನಗಳ ಹಿಂದೆ ಭಾರತಕ್ಕೆ ಬೇಟಿ ನೀಡಿದ್ದ ಪರ್ಷಿಯನ್ನರು, ಗ್ರೀಕರು ತಮ್ಮ ಜೊತೆ ಸಿಹಿಯನ್ನು  ಉತ್ಪಾದಿಸಬಲ್ಲ ಅನೇಕ ಗೆಡ್ಡೆಗಳನ್ನು ಭಾರತಕ್ಕೆ ತಂದಿದ್ದರು. ಅದಕ್ಕೂ ಮೊದಲು ನಮ್ಮಲ್ಲಿ ಸಿಹಿ ಎಂಬುದು ಜೇನು ತುಪ್ಪದ ರೂಪದಲ್ಲಿ ನೈಸರ್ಗಿಕವಾಗಿ ಮಾತ್ರ ದೊರೆಯುತ್ತಿತ್ತು. ಆನಂತರ ಬಂದ ಮೆಸಿಡೋನಿಯನ್ ಸೈನಿಕರು ತಮ್ಮ ಜೊತೆ ತಂದ ಕಬ್ಬಿನ ಬೆಳೆ ಭಾರತದಲ್ಲಿ ಬೆಲ್ಲ ಮತ್ತು ಸಕ್ಕರೆ ಉತ್ಪಾದನೆಗೆ ನಾಂದಿಹಾಡಿತು. ಕಬ್ಬಿನಿಂದ ರಸವನ್ನಷ್ಟೇ ತೆಗೆದು ಕುಡಿಯುವುದು ಗೊತ್ತಿದ್ದ ಪಾಶ್ಚಿಮಾತ್ಯರಿಗೆ, ಭಾರತದ ಕೃಷಿಕರು ಕಬ್ಬಿನ ರಸದಿಂದ ಅವಿಷ್ಕರಿಸಿದ ಬೆಲ್ಲ ಮತ್ತು ಹರಳು ರೂಪದ ಸಕ್ಕರೆ, ಅವರ ಬದುಕಿನ ಅವಿಭಾಜ್ಯ ಅಂಗವಾಯಿತು.
ಹದಿನೆಂಟನೆ ಶತಮಾನದ ವೇಳೆಗೆ ಭಾರತದಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿ ಪರಿವರ್ತನೆಗೊಂಡಿತು. ಭಾರತದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗುತ್ತಿದ್ದಂತೆ, ಹಲವಾರು ವರ್ತಕರು ಸಕ್ಕರೆಯನ್ನು ವಿದೇಶಗಳಿಗೆ ರಫ್ತು ಮಾಡುವ ವ್ಯವಹಾರಕ್ಕೆ ಇಳಿದರು. ಬ್ರಿಟೀಷರ ಆಳ್ವಿಕೆಯಲ್ಲಿ ಭಾರತದಿಂದ ಹತ್ತಿ ಮತ್ತು ಸಕ್ಕರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರಫ್ತಾಗುವ ಪ್ರಮುಖ ಕೃಷಿ ಉತ್ಪನ್ನಗಳಾಗಿದ್ದವು. ಜಗತ್ತಿನಾದ್ಯಂತ ಸಕ್ಕರೆ ಬಳಕೆ ಆಹಾರದ ಒಂದು ಭಾಗವಾಗುತ್ತಿದ್ದಂತೆ ಜಾಗತಿಕ ಕೃಷಿ ರಂಗದಲ್ಲಿ  ಹಲವಾರು ಪ್ರಮುಖ ಬದಲಾವಣೆಗೆ ಕಾರಣವಾಯಿತು.
ಬ್ರಿಟೀಷರ ಆಳ್ವಿಕೆಯಲ್ಲಿ ತಾವು ಯಾವ ಬೆಳೆಯನ್ನು ಬೆಳೆಯಬೇಕು ಎಂಬುದರ ಬಗ್ಗೆ ಇದ್ದ ಸಾರ್ವಭೌಮ ಹಕ್ಕನ್ನು  ಭಾರತದ ರೈತರು ಕಳೆದುಕೊಂಡರು. ಬ್ರಿಟೀಷ್ ಸಕಾರದ ಒತ್ತಡಕ್ಕೆ ಮಣಿದು, ರಫ್ತು ಆಧಾರಿತ ಹತ್ತಿ, ನೀಲಿ ಬೆಳೆಗಳನ್ನು ಬೆಳೆಯ ಬೇಕಾಯಿತು. 1947 ರಲ್ಲಿ ಸ್ವಾತಂತ್ಯಾನಂತರ ಕೃಷಿಯಲ್ಲಿ ರೈತರಿಗೆ ಸ್ವಾವಲಂಬನೆ ಲಭ್ಯವಾದರೂ, ದೇಶದಲ್ಲಿ ಏರುತ್ತಿದ್ದ ಜನ ಸಂಖ್ಯೆಯ ಅನುಗುಣವಾಗಿ ಆಹಾರ ಉತ್ಪಾದನೆ ಸಾಧ್ಯವಾಗಿರಲಿಲ್ಲ.

ಸ್ವತಂತ್ರ ಭಾರತದಲ್ಲಿ ಆಚರಣೆಗೆ ಬಂದ ಪಂಚವಾರ್ಷಿಕ ಯೋಜನೆಗಳ ಮೂಲಕ ಕೈಗೆತ್ತಿಕೊಳ್ಳಲಾದ ನೀರಾವರಿ ಯೋಜನೆಗಳ ಪರಿಣಾಮ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿತು. ದಕ್ಷಿಣ ಭಾರತದಲ್ಲಿ ಭತ್ತ ಮತ್ತು ಉತ್ತರ ಭಾರತದಲ್ಲಿ ಗೋಧಿ ಎರಡು ಬೆಳೆಗಳನ್ನು ನೀರಾವರಿ ಪ್ರದೇಶಗಳಲ್ಲಿ ವಾರ್ಷಿಕವಾಗಿ ಎರಡು ಬಾರಿ ಬೆಳೆಯತೊಡಗಿದ ಪರಿಣಾಮವಾಗಿ ಕೊಂಚ ಮಟ್ಟಿಗೆ ದೇಶದ ಆಹಾರ ಸಮಸ್ಯೆ ನೀಗಿತು. ಆದರೆ, ಇಳುವರಿ ಮಾತ್ರ ತೀರಾ ಕಡಿಮೆ ಪ್ರಮಾಣದಲ್ಲಿತ್ತು.
1970 ದಶಕದಲ್ಲಿ ಅಮೇರಿಕಾದಿಂದ ಭಾರತಕ್ಕೆ ಆಮದಾದ ಹೈಬ್ರಿಡ್ ಗೋಧಿ ಬೀಜದ  ಬೆಳೆಯಿಂದಾಗಿ  ಭಾರತಲ್ಲಿ ಹಸಿರು ಕ್ರಾಂತಿಯುಂಟಾಗಿ ಆಹಾರದಲ್ಲಿ  ಸಂಪೂರ್ಣ ಸ್ವಾವಲಂಬನೆ ಸಾಧ್ಯವಾಯಿತು. ಆನಂತರ ಹೈಬ್ರಿಡ್ ಬತ್ತದ ತಳಿಗಳು ಭಾರತಕ್ಕೆ ಲಗ್ಗೆ ಇಟ್ಟ ಫಲವಾಗಿ ಭಾರತದ ಕೃಷಿಯ ಚಿತ್ರಣ ಸಂಪೂರ್ಣ ಬದಲಾಯಿತು ಜೊತೆಗೆ  ಅನೇಕ ಅವಘಡಗಳಿಗೆ ಕಾರಣವಾಗಿ ಭಾರತದ ರೈತರನ್ನು ನೇಣು ಕುಣಿಕೆಯ ಹತ್ತಿರ ತಂದು ನಿಲ್ಲಿಸಿತು.ದುರಂತದ ಮುಂದುವರಿದ ಭಾಗವಾಗಿ ಇಂದು ಕಬ್ಬು ಬೆಳೆದ ಕರ್ನಾಟಕದ ರೈತರು ಮತ್ತು ಹತ್ತಿ ಬೆಳೆದ ಮಹಾರಾಷ್ಟ್ರದ ರೈತರು ಹಾಗೂ ಆಂಧ್ರದ ರೈತರು ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ಭಾರತಕ್ಕೆ ಭೀಕರ ಬರಗಾಲವಾಗಲಿ, ಕ್ಷಾಮವಾಗಲಿ ಹೊಸತೇನಲ್ಲ. ಅದೆಷ್ಟೋ ಬರಗಾಲಗಳನ್ನು ನೋಡಿದ್ದ ರೈತ ಸಮುದಾಯ ಎಂದೂ ಆತ್ಮ ವಿಶ್ವಾಸ ಕಳೆದುಕೊಂಡು ಆತ್ಮ ಹತ್ಯೆಗೆ ಮುಂದಾಗಿರಲಿಲ್ಲ. ಹಾಗಾದರೆ, ನಾಡಿನ ಅನ್ನದಾತ ಎಲ್ಲಿ ದಾರಿ ತಪ್ಪಿದಆತನ ಪಾರಂಪರಿಕ ಕೃಷಿ ಜ್ಞಾನವನ್ನು ಕಸಿದುಕೊಂಡು, ವನನ್ನು ವಾಣಿಜ್ಯ ಬೆಳೆಗಳಿಗೆ ಕಟ್ಟಿಹಾಕಿದವರು ಯಾರು? ಸ್ವಾವಲಂಬಿಯಾಗಿದ್ದ ರೈತ ಪರಾವಲಂಬಿಯಾದದ್ದು ಹೇಗೆ? ಇಂತಹ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು , ಕಳೆದ ಒಂದು ದಶಕದಲ್ಲಿ 32 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡ ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ ಪ್ರಾಂತ್ಯದ  ಜಿಲ್ಲೆಗಳಲ್ಲಿ ಸುತ್ತಾಡಿ ಕ್ರೇತ್ರ ಕಾರ್ಯ ನಡೆಸಿದ ನನಗೆ, ಇದು ನಾವು ಸ್ವಯಂ ಸೃಷ್ಟಿ ಮಾಡಿಕೊಂಡ ವ್ಯವಸ್ಥೆಯೊಂದರ ಕ್ರೌರ್ಯ ಎಂಬುದು ಮನದಟ್ಟಾಯಿತು.
ದಶಕದ ಹಿಂದೆ ಮಹಾರಾಷ್ಟ್ರದ ಪ್ರಾಂತ್ಯಗಳ ರೈತರು ಮುಂಗಾರು ಮತ್ತು ಹಿಂಗಾರು  ಮಳೆಯಾಶ್ರಯದಲ್ಲಿ  ಶೆಂಗಾ, ಉದ್ದು, ತೊಗರಿ, ದೇಶಿ ಹತ್ತಿ, ಮೆಣಸಿನಕಾಯಿ, ಸಾಸಿವೆ ಅಥವಾ ಎಳ್ಳು ಹೀಗೆ ಯಾವುದಾದರೊಂದು ಬೆಳೆ ಬೆಳೆದು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಪರಸ್ಪರ ವಿನಿಮಯದ ಮೂಲಕ ದೊರಕುತ್ತಿದ್ದ ದೇಶಿ ಬಿತ್ತನೆ ಬೀಜಗಳು ಮತ್ತು ಭೂಮಿಗೆ ಬಳಸುತ್ತಿದ್ದ ನಾಟಿ ಗೊಬ್ಬರ ಇವುಗಳ ಫಲವಾಗಿ ಬೇಸಾಯದ ಖರ್ಚು ರೈತನಿಗೆ ದುಬಾರಿಯಾಗಿರಲಿಲ್ಲ. ಆದರೆ, 2004 ರಲ್ಲಿ ಇವರ ಎದೆಯೊಳಗೆ ಕಾಂಚಾಣದ ಕನಸುಗಳನ್ನು ಬಿತ್ತಿ , ಬಿ.ಟಿ. ಹತ್ತಿಯನ್ನು  ಪರಿಚಯಿಸಿದರ ಫಲವಾಗಿ ರೈತರ ಬದುಕು ಮೂರಾ ಬಟ್ಟೆಯಾಯಿತು. ಕೇವಲ 250 ರೂಪಾಯಿಂದ 350 ರೂಪಾಯಿಗೆ ಒಂದು ಕಿಲೋಗ್ರಾಂ ದೇಶಿ ಹತ್ತಿ ಬೀಜಗಳ ಬದಲಿಗೆ ನಾಲ್ಕು ಸಾವಿರ ರೂಪಾಯಿ ತೆತ್ತು  ರೈತರು ಬಿ.ಟಿ. ಹತ್ತಿ ಬೀಜಗಳನ್ನು ಕೊಳ್ಳತೊಡಗಿದರು. ಬೀಜ ಕಂಪನಿಗಳ ಸಲಹೆ ಮತ್ತು ಸೂಚನೆ ಮೇರೆಗೆ  ಎಕರೆಯೊಂದಕ್ಕೆ ಮುವತ್ತು ಸಾವಿರ ರೂಪಾಯಿ ಮೌಲ್ಯದ ಕೀಟನಾಶಕ ಮತ್ತು ರಸ ಗೊಬ್ಬರವನ್ನು ಬಳಸತೊಡಗಿದರು. ಮಹಾರಾಷ್ಟ್ರದಲ್ಲಿ ಮಳೆಯಾಶ್ರಿತ ಭೂಮಿಯ ಕೃಷಿ ಚಟುವಟಿಕೆಗೆ ಬ್ಯಾಂಕುಗಳು ಒಂದು ಎಕರೆಗೆ ವಾರ್ಷಿಕ 6 ರೂಪಾಯಿ ಬಡ್ಡಿ ದರದಲ್ಲಿ ಕೇವಲ 16 ಸಾವಿರ ರೂಪಾಯಿ ಸಾಲವನ್ನು ನಿಗದಿ ಮಾಡಿವೆ. ಬಿ.ಟಿ. ಹತ್ತಿ ಬೆಳೆಗೆ ನಲವತ್ತು ಸಾವಿರ ಖರ್ಚು ಬರುವ ಕಾರಣಕ್ಕಾಗಿ ರೈತರು, ಒಂದು ಸಾವಿರ ರೂಪಾಯಿಗೆ ವಾರ್ಷಿಕ 36 ರಿಂದ 48 ಪರ್ಸೆಂಟ್ ಬಡ್ಡಿದರದಲ್ಲಿ ಸ್ಥಳೀಯ ಲೇವಾದೇವಿಗಾರರಿಂದ ಹಣ ತಂದು ಭೂಮಿಗೆ ಚೆಲ್ಲಿ ಬರಿಗೈ ದಾಸರಾಗುತ್ತಿದ್ದಾರೆ. 2006 ರಲ್ಲಿ ಒಂದು ಕ್ವಿಂಟಾಲ್ ಹತ್ತಿಗೆ ಏಳು ಸಾವಿರ ರೂಪಾಯಿ ಬೆಲೆ ಇತ್ತು. ಇದೀಗ  ಮೂರು ಸಾವಿರಕ್ಕೆ ಕುಸಿದಿದೆ. ಆದರೆ ಬೇಸಾಯದ ಖರ್ಚು ಮಾತ್ರ ಏರುತ್ತಲೇ ಇದೆ. ಒಂದು ಎಕರೆಗೆ 300 ಕ್ವಿಂಟಾಲ್ ಹತ್ತಿ ಬೆಳೆಯುತ್ತಿದ್ದ ರೈತ ಇಂದು ಭೂಮಿಗೆ ರಸಾಯನಿಕÀ ವಿಷವನ್ನು ಉಣಿಸಿದ ಫಲವಾಗಿ 150 ರಿಂದ 200 ಕ್ವಿಂಟಾಲ್ ಹತ್ತಿ ಬೆಳೆಯುತ್ತಿದ್ದಾನೆ, ಪ್ರಾಂತ್ಯಗಳ ರೈತರ ಕೃಷಿಯ ಬದುಕು ಮಳೆಯೊಂದಿಗಿನ ಜೂಜಾಟದಂತಿದೆ. ಮಳೆ ಕೈ ಕೊಟ್ಟರೆ, ಮಾಡಿದ ಸಾಲ, ಏರುವ ಬಡ್ಡಿ ಇವುಗಳಿಂದ  ತತ್ತರಿಸುವ ರೈತರ ಪಾಲಿಗೆ ಇರುವ ಬಿಡುಗಡೆಯೆಂದರೆ ಸಾವು ಮಾತ್ರ.2006 ರಲ್ಲಿ ಮಹಾರಾಷ್ಟ್ರದಲ್ಲಿ ಅಧ್ಯಯನ ನಡೆಸಿದ ಮುಂಬೈ ಮೂಲದ ಇಂದಿರಾ ಗಾಂಧಿ ಇನ್ಸಿಟ್ಯೂಟ್ ಆಫ್ ಡೆವಲಪ್ ಮೆಂಟ್ ರೀಸರ್ಚ್ ಎಂಬ ಸಂಸ್ಥೆಯು ರೈತರು ಪಾರಂಪರಿಕ ಬೆಳೆಗಳಿಂದ ವಿಮುಖರಾಗಿ ವಾಣಿಜ್ಯ ಬೆಳೆಗಳಿಗೆ ಅಂಟಿಕೊಳ್ಳುತ್ತಿರುವುದರ ಬಗ್ಗೆ ಎಚ್ಚರಿಕೆ ನೀಡಿತ್ತು. ಇಂತಹ ಸಲಹೆಯನ್ನು ನಿರ್ಲಕ್ಷ್ಯ ಮಾಡಿದ ಮಹಾರಾಷ್ಟ್ರ ಸರ್ಕಾರ ಇದೀಗ ರೈತರ ಆತ್ಮಹತ್ಯೆ ತಡೆಗೆ ನಮ್ಮಲ್ಲಿ ಯಾವುದೇ ಮಂತ್ರ ದಂಡ ಅಥವಾ ಮಾರ್ಗೋಪಾಯವಿಲ್ಲ  ಎಂಬ ಬೇಜಾವಬ್ದಾರಿ ಹೇಳಿಕೆಯನ್ನು ನೀಡುವುದರ ಮೂಲಕ ಕೈ ತೊಳೆದು ಕೊಂಡಿದೆ.
ಕರ್ನಾಟಕದ ರೈತರ ಪರಿಸ್ಥಿತಿ ಮಹಾರಾಷ್ಟ್ರಕ್ಕಿಂತ ಭಿನ್ನವಾಗಿಲ್ಲ, ಅಲ್ಲಿನ ರೈತರು ಹತ್ತಿ ಬೆಳೆಯ ಸುಳಿಗೆ ಸಿಲುಕಿದರೆ, ಕರ್ನಾಟಕದ ರೈತರು ಕಬ್ಬಿನ ಬೆಳೆಯ ಜ್ವಾಲೆಯಲ್ಲಿ ಬೇಯುತ್ತಿದ್ದಾರೆ. ಭತ್ತ, ರಾಗಿ, ಜೋಳ, ಉದ್ದು, ಕಡಲೆ, ಶೇಂಗಾ ಮುಂತಾದ ಬೆಳೆಗಳಿಂದ ಸಂತೃಪ್ತ ಹಾಗೂ ನೆಮ್ಮದಿಯ ಜೀವನ ಕಂಡುಕೊಂಡಿದ್ದ ರೈತನನ್ನು ನಾಡಿನ ಉದ್ದಗಲಕ್ಕೂ ನಾಯಿಕೊಡೆ ಅಣಬೆಯಂತೆ ತಲೆ ಎತ್ತಿದ ಸಕ್ಕರೆ ಕಾರ್ಖಾನೆಗಳು ದಿಕ್ಕು ತಪ್ಪಿಸಿದವು. ಒಂದು ಕಡೆ ನಿಗದಿತ ಕಬ್ಬಿನ ಬೆಲೆಯನ್ನು ಕಾರ್ಖಾನೆಗಳಿಂದ ಕೊಡಿಸಲಾಗದ ಸರ್ಕಾರ, ಮತ್ತೊಂದೆಡೆ, ಹೊಸದಾಗಿ ಪ್ರತಿ ಹದಿನೈದು ಕಿಲೋಮಿಟರ್ ಅಂತರದಲ್ಲಿ  ಸಕ್ಕರೆ ಕಾರ್ಖಾನೆ ಸ್ಥಾಪಿಸಲು ನಲವತ್ತು ಪರವಾನಗಿಗಳು ವಿತರಿಸುತ್ತಿದೆ. ಕೃಷಿ ಎಂದರೆ, ಕೇವಲ ಕಬ್ಬು ಅಥವಾ ಹತ್ತಿ ಮಾತ್ರವಲ್ಲ ಎಂಬ ವಿವೇಚನೆಯಾಗಲಿ, ವಿವೇಕವಾಗಲಿ ನಮ್ಮ ಸರ್ಕಾರಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ.
ಕೇವಲ ಅರ್ಧ ಎಕರೆ, ಒಂದು ಎಕರೆ ಭೂಮಿಯಲ್ಲಿ ಸಾವಯವ ಕೃಷಿಯ ಮೂಲಕ ಹಣ್ಣು, ಹೂ, ತರಕಾರಿ ಬೆಳೆದು  ಬದುಕು ಕಟ್ಟಿಕೊಂಡ ರೈತರ ಯಶೋಗಾಥೆ, ಹಸು, ಎಮ್ಮೆ, ಕೋಳಿ, ಕುರಿ, ಮೊಲ ಇವುಗಳ ಸಾಕಾಣಿಕೆ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿರುವ ಭೂರಹಿತ ಕೃಷಿ ಕಾರ್ಮಿಕರ ಸಾಧನೆಗಳು ಪ್ರತಿವಾರ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಸಹ ಇಂತಹ ಸಂಗತಿಗಳು ಜನಪ್ರತಿನಿಧಿ ಹಾಗೂ ರೈತ ನಾಯಕರು ಎನಿಸಿಕೊಂಡವರ ಎದೆಯ ಕದ ತಟ್ಟದಿರುವುದು ಸೋಜಿಗದ ಸಂಗತಿ. ರೈತರ ಬವಣೆಗಳನ್ನು ಬಂಡವಾಳ ಮಾಡಿಕೊಂಡು, ಸತ್ಯಾಗ್ರಹ ಮತ್ತು ಚಳುವಳಿಗಳನ್ನು ವೃತ್ತಿ ಮತ್ತು ದಂಧೆಯನ್ನಾಗಿಸಿಕೊಂಡಿರುವ ರೈತ ಸಂಘಟನೆಗಳ ನಾಯಕರು ಮಾಧ್ಯಮಗಳ ಮುಂದೆ ಮಾತನಾಡುವುದನ್ನು ನಿಲ್ಲಿಸಿ, ರೈತ ಸಮುದಾಯಕ್ಕೆ ಅಮಲಿನಂತೆ ಅಂಟಿಕೊಂಡಿರುವ ವಾಣಿಜ್ಯ ಬೆಳೆಗಳ ವ್ಯೆಸನದಿಂದ ಬಿಡುಗಡೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕಿದೆರೈತ ಸಮುದಾಯವನ್ನು ಹೆಚ್ಚು ಖರ್ಚಿಲ್ಲದ ಸಾಂಪ್ರದಾಯಿಕ ಕೃಷಿಯತ್ತ ಒಲಿಯುವಂತೆ ಮಾಡುವ ಅಗತ್ಯವಿದೆ. ಒಂದು ಕಡೆ ಕೃಷಿ ಭೂಮಿಯ ವಿಸ್ತಾರವು ಅಭಿವೃದ್ಧಿ ಮತ್ತು ವಾಣಿಜ್ಯ ಚಟುವಟಿಕೆಯ ನೆಪದಲ್ಲಿ ಕ್ಷೀಣಿಸುತ್ತಿದ್ದು, ಹೆಚ್ಚು ಆಹಾರ ಉತ್ಪಾದನೆಯ ನೆಪದಲ್ಲಿ ಕೃಷಿ ವಲಯದ ಮೇಲೆ ಒತ್ತಡ ಹೆಚ್ಚುತ್ತಿದೆರೈತರನ್ನು ಹೈಬ್ರಿಡ್ ಮತ್ತು ಕುಲಾಂತರಿ ತಳಿಗಳ ಚಕ್ರವ್ಯೂಹಕ್ಕೆ ದೂಡುತ್ತಿರುವ ಅಭಿವೃದ್ಧಿಯ ವಿಕಾರದ ಮತ್ತೊಂದು ಮುಖವನ್ನು ನಾವು ಅರ್ಥೈಸಿಕೊಳ್ಳದಿದ್ದರೆ, ಕರ್ನಾಟಕವೂ ಸೇರಿದಂತೆ ಇಡೀ ಭಾರತ ರೈತರ ಮಸಣದ ಮನೆಯಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ದಿನಾಂಕ 5-7-2015 ರ ವಿಜಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾದ  ಲೇಖನ)

No comments:

Post a Comment