ಗುರುವಾರ, ಮೇ 31, 2018

ರೈತರ ಪ್ರಗತಿಗೆ ಸಾಲ ಮನ್ನಾ ಯೋಜನೆ ಪರ್ಯಾಯವಲ್ಲ



ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಹಾಗೂ ಆನಂತರ ನಡೆದ ರಾಜಕೀಯ ಬೆಳವಣಿಗೆಗಳು ಅನೇಕ ಅನಿರೀಕ್ಷಿತ ತಿರುವು ಪಡೆದುಕೊಂಡಿವೆ. ಇಷ್ಟು ಮಾತ್ರವಲ್ಲದೆ, ಚುನಾವಣಾ ಪ್ರಚಾರದ ಸಂದರ್ಭದಲ್ಲಿಪಕ್ಷ ಬೇಧವಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳು ಯಾವುದೇ ವಿವೇಚನೆ ಮತ್ತು ದೂರದೃಷ್ಟಿಯಿಲ್ಲದೆ  ಹೊರಡಿಸಿದ ಪ್ರಣಾಳಿಕೆಗಳು ಈಗ ರಾಜಕೀಯ ನಾಯಕರಿಗೆ ತಿರುಗುಬಾಣವಾಗಿವೆ.
ಇಡೀ ಭಾರತದುದ್ದಕ್ಕೂ ನೆಲದ ಅನ್ನದಾತ ಎನಿಸಿಕೊಂಡ ರೈತ ರಾಜಕಾರಣಿಗಳಮತ್ತು ಅವರು ಪ್ರತಿನಿಧಿಸುವ ರಾಜಕೀ ಪಕ್ಷಗಳ ಚದುರಂಗದ ದಾಳವಾಗಿ  ಬಳಕೆಯಾಗುತ್ತಿದ್ದಾನೆ. ಕಳೆದ ಕಾಲು ಇಪ್ಪತ್ತೇಳು ವರ್ಷಗಳಿಂದ ಅಂದರೆ, 1991 ರಲ್ಲಿ  ದೇಶವು ಜಾಗತೀಕರಣಕ್ಕೆ ತನ್ನ ಹೆಬ್ಬಾಗಿಲು ತೆರದ ನಂತರ ಭಾರತದ ಕೃಷಿ ರಂಗವು  ಅವನತಿಯ ಹಾದಿ ಹಿಡಿದು ಅವಸಾನದ ಅಂಚಿಗೆ ದೂಡಲ್ಪಟ್ಟಿತು.  ಕೃಷಿ ಕ್ಷೇತ್ರವನ್ನು ಹಾಗೂ ಅದನ್ನು ನಂಬಿ ಬಂದುಕಿರುವ ದೇಶದ ಜನಸಂಖ್ಯೆಯ ಶೇಕಡ ಅರವತ್ತರಷ್ಟು  ಪಾಲಿನ ರೈತರು ಮತ್ತು ಕೃಷಿ ಕಾರ್ಮಿಕರು  ಅತಂತ್ರರಾಗಿದ್ದಾರೆ. ದೇಶದುದ್ದಕ್ಕೂ ರೈತರು ಮತ್ತು ಕಾರ್ಮಿಕರು ಕೃಷಿ ಉದ್ಯೋಗವನ್ನು ತ್ಯೆಜಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.
ನೆಲಕಚ್ಚುತ್ತಿರುವ ಕೃಷಿ ರಂಗವನ್ನು ಅಭಿವೃದ್ಧಿ ಪಡಿಸಿ, ಅನ್ನದಾತನಲ್ಲಿ ಆತ್ಮ ವಿಶ್ವಾಸ ತುಂಬ ಬೇಕಾದ ನಮ್ಮನ್ನಾಳುವ  ಸರ್ಕಾರಗಳು ಆತನ ಕೃಷಿ ಸಾಲವನ್ನು ಮನ್ನಾ ಮಾಡುವುದರ ಮೂಲಕ ಉದ್ಧಾರ ಮಾಡಬಹುದು ಎಂಬ ವಿವೇಚನಾ ರಹಿತ ಸೂತ್ರವನ್ನು ನಂಬಿಕೊಂಡು ಆಡಳಿತ ನಡೆಸುತ್ತಿವೆ. ಒಬ್ಬ ಬಡ ರೈತನ ಮಗನಾಗಿ ಹಾಗೂ ಓರ್ವ ಅರ್ಥಶಾಸ್ತ್ರದ ಸಮಶೋಧನಾ ವಿದ್ಯಾರ್ಥಿಯಾಗಿ ಹೇಳಲೇ ಬೇಕಾದ ಸತ್ಯವೆಂದರೆ, ಇಂತಹ ಸಾಲಮನ್ನಾ ಯೋಜನೆಗಳು ರೈತರ ಪಾಲಿಗೆ ನೋವಿನಿಂದ ನರಳುತ್ತಿರುವ ರೋಗಿಗೆ ತಾತ್ಕಾಲಿಕವಾಗಿ ನೀಡುವ ನೋವು ನಿವಾರಕ ಮದ್ದಾಗಬಲ್ಲವೆ ಹೊರತು,  ರೋಗ ಶಾಸ್ವತವಾಗಿ ವಾಸಿಯಾಗುವುದಿಲ್ಲ. ಯಾವುದೇ ಒಂದು ಸರ್ಕಾರ ಅದು ರಾಜ್ಯ ಸರ್ಕಾರವಿರಲಿ ಅಥವಾ ಕೇಂದ್ರ ಸರ್ಕಾರವಿರಲಿ ವಿವಿಧ ಸಂಪನ್ಮೂಲಗಳಿಂದ ಬರುವ ಆದಾಯ ಮತ್ತು ತಾನು ವ್ಯಯಿಸಬೇಕಾದ ಒಟ್ಟು ವಾರ್ಷಿಕ ವೆಚ್ಚಗಳ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಬೇಕಾಗಿರುವುದು  ಸರ್ಕಾರದ ಮತ್ತು ಪ್ರಜೆಗಳ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವಾಗಬಲ್ಲದು.
ವಾಸ್ತವಿಕ ದುರಂತವೆಂದರೆ,  ಆಡಳಿತ ಚುಕ್ಕಾಣಿ ಹಿಡಿಯುವ  ಆಸೆಯಿಂದ ರೈತರಿಗೆ  ಭರವಸೆ ನೀಡುವ ಅವಸರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಎಡವುತ್ತಿವೆ. ಕರ್ನಾಟಕದಲ್ಲಿ  ಅಧಿಕಾರಕ್ಕೆ ಬಂದ ಇಪ್ಪತ್ತು ನಾಲ್ಕು ಗಂಟೆಯ ಅವಧಿಯಲ್ಲಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಎಂದು ಘೋಷಿಸಿಕೊಂಡಿದ್ದ ಜಾತ್ಯಾತೀತ ಜನತಾ ದಳ ಪಕ್ಷವು ಇದೀಗ ಇಕ್ಕಟಿಗೆ ಸಿಲುಕಿದೆ. ಒಟ್ಟು ಕರ್ನಾಟಕದ ಒಟ್ಟು ವಾರ್ಷಿಕ ಆಯ-ವ್ಯಯದ ಬಜೆಟ್ ಕಳೆದ ವರ್ಷ ಅಂದರೆ 2017-18 ರಲ್ಲಿ ಒಟ್ಟು ಒಂದು ಲಕ್ಷ ಅರವತ್ಮೂರು ಸಾವಿರ ಕೋಟಿಯಷ್ಟಿದೆ. ಕರ್ನಾಟಕದ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮತ್ತು ರಾಷ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಒಟ್ಟು ಸಾಲದ ಮೊತ್ತವು ಅಂದಾಜು ಐವತ್ತಮೂರು ಸಾವಿರ ಕೋಟಿಯಷ್ಟಿದ್ದು ಇದು ರಾಜ್ಯ ಸರ್ಕಾರದ ಬಜೆಟ್ ಮೂರನೇ ಒಂದು ಭಾಗದಷ್ಟಿದೆ. ಇದರ ಜೊತೆಗೆ ಸಿದ್ಧರಾಮಯ್ಯನವರ ನೇತೃತ್ವದ ಹಿಂದಿನ ಕಾಂಗ್ರೇಸ್ ಸರ್ಕಾರವು ಕಳೆದ ಬಜೆಟ್ ನಲ್ಲಿ ಸರ್ಕಾರಿ ನೌಕರರ ವೇತನವನ್ನು ಶೇಕಡ 30 ರಷ್ಟು ಹೆಚ್ಚಿಗೆ ಮಾಡಿದ್ದು ವರ್ಷದ ಏಪ್ರಿಲ್ ನಿಂದ ರಾಜ್ಯದ ಒಟ್ಟು 5ಲಕ್ಷದ 2 ಸಾವಿರ ನೌಕರರು ಮತ್ತು 5 ಲಕ್ಷದ 73 ಸಾವಿರ ನಿವೃತ್ತ ನೌಕರರಿಗೆ ವಾರ್ಷಿಕವಾಗಿ 10 ಸಾವಿರದ 600 ಕೋಟಿ ರೂಪಾಯಿಗಳನ್ನು ವ್ಯಯ ಮಾಡಬೇಕಿದೆ. ಇದಲ್ಲದೆ ಪ್ರತಿವರ್ಷ ಸರಾಸರಿ ಹತ್ತರಿಂದ ಇಪ್ಪತ್ತರ ವರೆಗೆ ವೆಚ್ಚದ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ.
ನಮ್ಮ ಕಣ್ಣಮುಂದಿನ ಇಂತಹ ಕಟು ಸತ್ಯಗಳನ್ನು ಇಟ್ಟುಕೊಂಡು, ಅನಕ್ಷರಸ್ತ  ಹಾಗೂ ಅಮಾಯಕ ರೈತ ಸಮುದಾಯದ ಮೂಗಿನ ನೇರಕ್ಕೆ  ಕೆಂಪು ಮೂಲಂಗಿ  ಕಟ್ಟುವ ಕೆಟ್ಟ ಪರಂಪರೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಶಾಶ್ವತವಾಗಿ ತ್ಯೆಜಿಸಬೇಕಿದೆ. ಏಕೆಂದರೆ, ದೇಶದ ರೈತರ ನಿಜವಾದ ಬೇಡಿಕೆಗಳು ಸಾಲಮನ್ನಾದಂತಹ ಅಗ್ಗದ ಯೋಜನೆಗಳಲ್ಲ, ಅವರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಸರಬರಾಜು ಮಾಡುವುದು, ನೀರಾವರಿ ಯೋಜನೆಗಳು ಮತ್ತು ಕೆರೆಗಳ ಅಭಿವೃದ್ಧಿ, ಕೃಷಿ ಹೊಂಡಕ್ಕೆ ಪ್ರೋತ್ಸಾಹ ನೀಡುವುದು, ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಮತ್ತು ಮಾರುಕಟ್ಟೆಯ ವ್ಯವಸ್ಥೆಗಳು ರೈತರ ಬೇಡಿಕೆಗಳಾಗಿವೆ. ಇತ್ತೀಚೆಗಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಬೀಳುವ ಮಳೆಯಿಂದ ರೈತರ ಫಸಲು ಹಾಳಾಗುತ್ತಿದ್ದು ಅಂತಹ ರೈತರಿಗೆ ಕ್ಷಿಪ್ರ ಗತಿಯಲ್ಲಿ ಪರಿಹಾರ ಒದಗಿಸುವುದು ಮತ್ತು ರೈತರ ಬೆಳೆಯುವ ಬೆಳೆಗಳನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಿ ಸರ್ಕಾರವು ವಿಮಾಕಂಪನಿಗಳಿಗೆ ಪ್ರೀಮಿಯಂ ತುಂಬುವುವಂತಹ ಕೆಲಸ ಜರೂರಾಗಿ  ಆಗಬೇಕಿದೆ.
 ಕರ್ನಾಟಕದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯ ಭರಾಟೆಯಲ್ಲಿ ಮುಳುಗಿರುವಾಗ ಉತ್ತರ ಹಾಗೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ಈರುಳ್ಳಿ ಕೃಷಿ ಮಾರುಕಟ್ಟೆಯಲ್ಲಿ  ಕ್ವಿಂಟಾಲ್ಗೆ  250 ರೂಪಾಯಿಗೆ ಮಾರಾಟ ಮಾಡಿ ಕಣ್ಣೀರಿರು ಹಾಕಿದರು. ರೈತರಿಂದ 250 ರೂಪಾಯಿಗೆ ಖರೀದಿಸಿದ ವರ್ತಕರು ಮತ್ತು ದಳ್ಳಾಳಿಗಳು ಅದೇ ಈರುಳಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ ಸಾವಿರ ರೂಪಾಯಿ ಅಂದರೆ, ಕೆ.ಜಿ. ಒಂದಕ್ಕೆ ಹತ್ತು ರೂಪಾಯಿನಂತೆ ಮಾರಾಟ ಮಾಡಿದರು. ಒಂದು ಕ್ವಿಂಟಾಲ್ ಈರುಳ್ಳಿ ಬೆಳೆಯಲು ರೈತರು ಸರಾಸರಿ 400 ರೂಪಾಯಿನಿಂದ 500  ರೂಪಾಯಿ ಖರ್ಚು ಮಾಡಿ, 250ಕ್ಕೆ ಮಾರಾಟ ಮಾಡಿ ಕಣ್ಣೀರು ಸುರಿಸುತ್ತಿದ್ದರೆ, ಅತ್ತ ದಳ್ಳಾಳಿ ಅಥವಾ ವರ್ತಕರು ಯಾವುದೇ ಶ್ರಮವಿಲ್ಲದೆ ಕೇವಲ 250 ರೂಪಾಯಿ ಬಂಡವಾಳ ಹಾಕಿ ಶೇಕಡ ಮುನ್ನೂರಷ್ಟು ಅಂದರೆ, 750 ರೂಪಾಯಿಗಳ ಲಾಭವನ್ನು ತನ್ನ ಜೇಬಿಗೆ ಇಳಿಸುತ್ತಿದ್ದರು.. ಇದೀಗ ಕೋಲಾರ, ಧಾರವಾಡ ಜಿಲ್ಲೆಗಳ ಮಾವು ಬೆಳೆಗಾರರು ಇಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ.  1993 ಅಕ್ಷೋಬರ್ ತಿಂಗಳಿನಲ್ಲಿ ಆಲೂಗೆಡ್ಡೆಯನ್ನು ಬೆಳೆದ ಹಾಸನ ಜಿಲ್ಲೆಯ ರೈತನೊಬ್ಬ ಟ್ರಾಕ್ಟರ್ ನಲ್ಲಿ ತಂದು ಹಾಸನದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದಾಗ ಆತನಿಗೆ ಟ್ರಾಕ್ಟರ್ ಬಾಡಿಗೆ ಕೂಡ ದಕ್ಕಲಿಲ್ಲ. ಬಾಡಿಗೆ ನೀಡಲಾಗದ ಅಪಮಾನಕ್ಕೆ ರೈತನು ಮಾರುಕಟ್ಟೆಯ ಸಮೀಪದ ತಣ್ಣೀರು ಹಳ್ಳ ಎಂಬ ಪ್ರದೇಶದಲ್ಲಿ ಅದೇ ಹಣದಲ್ಲಿ ಕ್ರಿಮಿನಾಶಕ ಔಷಧಿ ಕೊಂಡು ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ನೆಲದ ರೈತನ ಸಂಕಷ್ಟದ ಸ್ಥಿತಿಗೆ ಸಾಕ್ಷಿಯಂತಿದೆ. ಆದರೆ, ಇಂದಿಗೂ ಕೂಡ ರೈತನ ನಸೀಬು ಬದಲಾಗಲಿಲ್ಲ.

ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕನಿಷ್ಠ  ಬೆಂಬಲ ದರ ಹಾಗೂ ವರ್ತಕರು ಗ್ರಾಹಕರಿಗೆ  ಮಾರಾಟ ಮಾಡುವ ಚಿಲ್ಲರೆ ದರ ಇವುಗಳ ಮೇಲೆ ನಿಗಾ ವಹಿಸಿದರೆ  ಏಕಕಾಲಕ್ಕೆ ಉತ್ಪಾದಕ ಮತ್ತು ಗ್ರಾಹಕ ಇಬ್ಬರನ್ನೂ ಸರ್ಕರಗಳು ರಕ್ಷಣೆ ಮಾಡಬಹುದಾಗಿದೆ. ಇಂತಹ ಆಲೋಚನೆಗಳಿಗೆ ದೃಢ ಮನಸ್ಸು ಮಾಡದ ಸರ್ಕಾರಗಳು ಅಗ್ಗದ ಯೋಜನೆಗಳಿಗೆ ಬಲಿ ಬೀಳುತ್ತಿವೆ. ಇಂತಹ ಅಪಕ್ವ ಯೋಜನೆಗಳಿಗೆ ನಾಂದಿ ಹಾಡಿದ ಕೆಟ್ಟ ಇತಿಹಾಸವು ಕರ್ನಾಟಕಕ್ಕೆ ಸೇರಿದೆ. ಕರ್ನಾಟಕದಲ್ಲಿ 2002 ರಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೇಸ್ ಸರ್ಕಾರವು ಸಹಕಾರಿ ಬ್ಯಾಂಕುಗಳು ಮತ್ತು ಸಂಘಗಳಿಂದ ಮಾಡಿದ್ದ ರೈತರ ಸಾಲವನ್ನು ಮನ್ನಾ ಮಾಡಲಾಯಿತು. 2007 ರಲ್ಲಿ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ. ನೇತೃತ್ವದ ಸಮ್ಮಿಶ್ರ ಸರ್ಕಾರದಲಲ್ಲಿ 25 ಸಾವಿರದವರೆಗಿನ ಮೊತ್ತದ ಸಾಲವನ್ನು ಮನ್ನಾ ಮಾಡಲಾಗಿತ್ತು. 2012 ರಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಸಹ 25 ಸಾವಿರ ಮೊತ್ತದ ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದ್ದರು. ಕಳೆದ ವರ್ಷ ಅಂದರೆ, 2017 ರಲ್ಲಿ ಕಾಂಗ್ರೇಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯನವರೂ ಸಹ  50 ಸಾವಿರ ರೂಪಾಯಿ ಮೊತ್ತದ ಸಹಾಕಾರಿ ಸಾಲವನ್ನು ಮನ್ನಾ ಮಾಡಿದ್ದರು. ಕರ್ನಾಟಕದಲ್ಲಿ ಹುಟ್ಟಿಕೊಂಡ ಸಾಲಮನ್ನಾ ಯೋಜನೆಯು ದೂರದ ಉತ್ತರ ಪ್ರದೇಶಕ್ಕೂ ಹಬ್ಬಿತು. ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿಯವರು ರೈತರ 36 ಸಾವಿರ 359 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿ ಮೊದಲ ಹಂತದಲ್ಲಿ 7 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಸಹ ರೈತರ ಪಾಲಿನ 34 ಸಾವಿರ ಕೋಟಿ ಮತ್ತು ಜಾಬ್ ರಾಜ್ಯವು 15 ಸಾವಿರ ಕೋಟಿ ಸಾಲವನ್ನು ಘೊಷಿಸಿವೆ.
ಒಂದು ಕಡೆ ಉದ್ಯಮಿಗಳಿಂದ ವಸೂಲಿಯಾಗದ  ಒಂದು ಲಕ್ಷ ಕೋಟಿಗಿಂತಲೂ ಹೆಚ್ಚಿನ ಮೊತ್ತದ ಸಾಲವು ಅನುತ್ಪಾದಕ ಆಸ್ತಿಯಾಗಿ ಬೆಳೆಯುತ್ತಾ ಹೋಗುತ್ತಿದೆ. ಮತ್ತೋಂದೆಡೆ ರೈತರ ಸಾಲ ಮನ್ನಾ ಯೋಜನೆಯಡಿ ಹಣ ಕರಗುತ್ತಿದೆ. ತಾವು ಅಧಿಕಾರದಲ್ಲಿದ್ದಾಗ ಯಶಸ್ವಿಯಾಗಿ ನಡೆದರೆ ಸಾಕು, ಬರುವ ಸಂಕಷ್ಟಗಳಿಗೆ ಮುಂದಿನ ಸರ್ಕಾರಗಳು ಹೊಣೆ ಹೊರಲಿ ಎಂಬ ಮನೋಭಾವ ಹಾಗೂ ಉತ್ತರದಾಯತ್ವದಿಂದ ನುಣುಚಿಕೊಳ್ಳುವ ಬೇಜವಾಬ್ದರಿತನದಿಂದಾಗಿ ದೇಶದ ಎರಡು ಕಣ್ಣುಗಳಿಂತಿರುವ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳು ಕಂಟಕವನ್ನು ಎದುರಿಸುತ್ತಿವೆ. ಇದರ ಅಂತಿಮ ಪರಿಣಾಮವಾದ ದುರಂತವನ್ನು ದೇಶದ ಜನಸಾಮಾನ್ಯ ತೆರಿಗೆ ಮೂಲಕ ಭರಿಸುವುದು ಅನಿವಾರ್ಯವಾಗುತ್ತದೆ. ಒಂದು ಒಳ್ಳೆಯ ಸರ್ಕಾರದ ಲಕ್ಷಣವೆಂದರೆ, ಇಂತಹ ಅಗ್ಗದ ಯೋಜನೆಗಳನ್ನು ಪ್ರಕಟಿಸುವದಲ್ಲ, ಬದಲಾಗಿ ಆರ್ಥಿಕ ಶಿಸ್ತಿನಿಂದ ಕೂಡಿದ, ಜನಸಾಮಾನ್ಯರಿಗೆ ಹೊರೆಯಾಗದ ಪಾರದರ್ಶಕವಾದ ಆಡಳಿತವನ್ನು ನೀಡಿ, ಭ್ರಷ್ಟಾಚಾರ ಮತ್ತು ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು  ಪ್ರತಿಯೊಂದ ಸರ್ಕಾರದ ಕರ್ತವ್ಯವಾಗಿರುತ್ತದೆ.
ಮುಂಗಾರು ಮಳೆ ಬಿದ್ದ ನೆಲವನ್ನು ಉತ್ತು ಹಸನುಮಾಡಿ, ಹದವಾದ ಭೂಮಿಗೆ ಬೀಜವನ್ನು ಚೆಲ್ಲುವ ರೈತನು ಎಂದಿಗೂ  ತಾನು ಬಿತ್ತುವ ಬೀಜದಲ್ಲಿ ಎಷ್ಟು ಕಾಳುಗಳು ಮೊಳಕೆಯೊಡೆಯಬಹುದು ಎಂದು ಲೆಕ್ಕ ಹಾಕುವುದಿಲ್ಲ. ಇಂತಹ ಉದಾತ್ತ ಪರಂಪರೆಯಿಂದ ಬಂದಿರುವ ರೈತನಿಗೆ ತಾನು ಬೆಳೆದ ಫಸಲಿಗೆ ನ್ಯಾಯಯುತವಾದ ಬೆಲೆ ದೊರೆತರೆ ಸಾಕು ತನ್ನ ನೆತ್ತರನ್ನು  ಬೆವರಿನ ಮೂಲಕ ಹರಿಸಿದ ಅವನು ತೃಪ್ತಿ ಪಡುತ್ತಾನೆ. ಅದರಾಚೆಗಿನ ಯಾವ ಮೋಹದ ಲೋಕ ಮತ್ತು ಆಮೀಷ ಅವನಿಗೆ ಬೇಕಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ