ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಠ
ಚಿಂತನೆಗಳ ಮೂಲಕ ಮುಂಚೂಣಿಯಲ್ಲಿರುವ ನಮ್ಮ ನಡುವಿನ ಚಿಂತಕ ಡಾ.ಎಸ್.ನಟರಾಜ ಬೂದಾಳರು ಕನ್ನಡದ ದೇಶಿ
ಜ್ಞಾನ ಪರಂಪರೆಯ ವಕ್ತಾರರಂತೆ ತಮ್ಮನ್ನು ತಾವು ತೊಡಗಿಸಿಕೊಂಡು ನೆಲಮೂಲ ಸಂಸ್ಕೃತಿಯ ಹುಡುಕಾಟದಲ್ಲಿ
ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ. ಈಗಾಗಲೇ ಬೌದ್ಧ ಧರ್ಮದ ತಾತ್ವಿಕ ನೆಲೆಗಳನ್ನು ನಿಖರವಾಗಿ ಗುರುತಿಸುವುದರೊಂದಿಗೆ
“ ನಾಗಾರ್ಜುನ ಮೂಲ ಮಧ್ಯಮಕಾರಿಕಾ ಮತ್ತು ಸರಹಪಾದ”
ನಾಗಾರ್ಜುನ-ಅಲ್ಲಮ ಪ್ರಭು ಒಂದು ತೌಲನಿಕ ಅಧ್ಯಯನ, ಮತ್ತು ಕನ್ನಡ ಕಾವ್ಯ ಮೀಮಾಂಸೆ ಎಂಬ ವಿದ್ವತ್
ಪೂರ್ಣವಾದ ಕೃತಿಗಳನ್ನು ನಮ್ಮ ಮುಂದಿರಿಸಿದ್ದಾರೆ. ನಟರಾಜ ಬೂದಾಳರ ಚಿಂತನೆಯ ವೈಶಿಷ್ಟವೆಂದರೆ, ಈವರೆಗೆ
ನಮ್ಮಗಳ ಮುಂದಿದ್ದ ಸಿದ್ಧ ಮಾದರಿಗಳನ್ನು ಅವರು ತಿರಸ್ಕರಿಸುವುದರ ಮೂಲಕ ಹೊಸದಾದ ಹಾಗೂ ಗಟ್ಟೆ ನೆಲೆಯ
ದೇಶಿ ಚಿಂತನಾ ಮಾದರಿಗಳನ್ನು ಹುಟ್ಟು ಹಾಕುವುದರ ಮೂಲಕ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಭದ್ರ ಬುನಾದಿ
ಹಾಕಿದ್ದಾರೆ. ಇಷ್ಟು ಮಾತ್ರವಲ್ಲದೆ;ನಟರಾಜ ಬೂದಾಳರು
ನಾವು ಈವರೆಗೆ ನಂಬಿಕೊಂಡು ಬಂದಿದ್ದ ಭಾರತೀಯ ಕಾವ್ಯ ಮೀಮಾಂಸೆಗೆ ಪರ್ಯಾಯವಾಗಿ ನಮ್ಮೆದುರು ತೆರೆದಿಟ್ಟಿರುವ
ಕನ್ನಡದ ತತ್ವಪದಕಾರರ ಹಾಡುಗಳು, ಅಲ್ಲಮನ ವಚನಗಳು ಬೆರಗು ಮೂಡಿಸುತ್ತವೆ. ಯಾವುದೇ ಬೌದ್ಧಿಕ ಅಹಂ ಇಲ್ಲದೆ, ಆದರೆ, ಆಧಾರ ಸಹಿತವಾಗಿ ಅವರು ನಮ್ಮ ಮುಂದಿಡುವ
ದಾಖಲೆಗಳು ನಾವು ಕಳೆದುಕೊಂಡಿರುವ ನಮ್ಮ ಪೂರ್ವಿಕರ ಜ್ಞಾನ ಶಿಸ್ತುವಿಗೆ ಕೈ ದೀವಿಗೆಯಂತೆ ಗೋಚರವಾಗುತ್ತವೆ.
ಏಕೆಂದರೆ, ನಾವುಗಳು ಇದುವರೆಗೆ ನಮ್ಮ ಚಿಂತನಾ ಮಾದರಿಗಳನ್ನು ಉತ್ತರದ ಭಾರತದ ಮೂಲಕ ಕಟ್ಟಿಕೊಳ್ಳುತ್ತಾ, ನಾವು ನಿಂತು ನಡೆದಾಡಿದ ಜ್ಞಾನ
ಶಿಸ್ತುಗಳನ್ನು ಶೋಧಿಸಲಾರದ ವಿಸ್ಮೃತಿಗೆ ದೂಡಲ್ಪಟ್ಟಿದ್ದೆವು. ಹಾಗಾಗಿ ಬೂದಾಳರು ಪ್ರತಿಯೊಂದು ಕೃತಿಯೂ
ನಾವು ನಡೆಯಬೇಕಾಗಿರುವ ಹೊಡ ಹಾದಿಗೆ ಮಾರ್ಗ ಸೂಚಿಯಂತೆ ಕಾಣುತ್ತದೆ. ಇತ್ತೀಚೆಗೆ ಪ್ರಕಟವಾದ ಅವರ “ ಪ್ರತ್ಯೇಕಕ ಬುದ್ಧ ಅಲ್ಲಮ
ಪ್ರಭು “ ಎಂಬ ಕೃತಿಯುನಮಗೆ ಹನ್ನೆರಡನೇ ಶತಮಾನದ ಪ್ರಖರ ಪ್ರತಿಭೆಯ ವಚನಕಾರ ಹಾಗೂ ಚಿಂತಕನಾದ ಅಲ್ಲಮನ
ವಿಶ್ವರೂಪವನ್ನು ಅನಾವರಣಗೊಳಿಸುವ ಅಮೂಲ್ಯ ಕೃತಿಯಾಗಿದೆ.
ಕನ್ನಡದ ಸಾಹಿತ್ಯ ಲೋಕಕ್ಕೆ ಬಸವಯುಗದ ವಚನಕಾರರು ಮತ್ತು ವಚನಕಾರ್ತಿಯರು ಹೊಸಬರೇನಲ್ಲ.
ಅವರುಗಳ ವಚನಗಳ ವಾಖ್ಯಾನ , ಮರುವ್ಯಾಖ್ಯಾನ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಅದರಲ್ಲೂ ವಿಶೇಷವಾಗಿ
ಕನ್ನಡದ ಪ್ರಜ್ಞಾವಂತ ಓದುಗರು, ಬರಹಗಾರರು, ಕವಿಗಳಿಗೆ ಅಲ್ಲಮ ಪ್ರಭುವಿನ ವಚನಗಳು, ಆತನ ಶಬ್ದ ಸಂಪತ್ತು,
ಇವುಗಳ ಕುರಿತು ವಿಶೇಷ ಆಸಕ್ತಿ. ಏಕೆಂದರೆ, ಅವನು ಬರಹಗಾರರ ಪಾಲಿಗೆ ಅಗೆದಷ್ಟು ಸಿಗುತ್ತಲೇ ಇರುವ
ನಿಧಿಯಂತಾಗಿದ್ದಾನೆ. ಈ ಕಾರಣದಿಂದಾಗಿ ಚಿಕಿತ್ಸಾ ಮನೋಧರ್ಮದ ಅಲ್ಲಮನ ಕುರಿತು ನಿರಂತರವಾಗಿ ಅಧ್ಯಯನಗಳು
ನಡೆಯುತ್ತಲೇ ಬಂದಿವೆ. ಚಾಮರಸನ ಪ್ರಭುಲಿಂಗೆ ಕೃತಿಯಿಂದ ಹಿಡಿದು ಆನಂತರ ಸೃಷ್ಟಿಯಾದ ನಾಲ್ಕು ಶೂನ್ಯ
ಸಂಪಾದನೆಯ ಕೃತಿಗಳೊಂದಿಗೆ ಅಧ್ಯಯನ ಪರಂಪರೆ ಆರಂಭಗೊಂಡು, 1970 ರಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್
ತಾಲ್ಲೂಕಿನ ಹಳೆಯೂರು ಗ್ರಾಮದ ವಿಜಯಕುಮಾರ್ ಎಂಬುವವರ ಅಧ್ಯಯನ ಹಾಗೂ ಡಾ.ಎಲ್.ವೃಷಭೇಂದ್ರ ಸ್ವಾಮಿಯವರ
ಪಿ.ಹೆಚ್.ಡಿ. ಅಧ್ಯಯನದವರೆಗೆ ಮುಂದುವರಿಯಿತು.
ಆನಂತರದ ದಿನಗಳಲ್ಲಿ ಮುಂಡರಗಿಯ ಅನ್ನದಾನೇಶ್ವರ ಮಠದಲ್ಲಿ
ನಡೆದ ಮೂರು ದಿನಗಳ ಚರ್ಚಾಗೋಷ್ಟಿಯಲ್ಲಿ ಮಂಡಿತವಾದ ಪ್ರಬಂಧಗಳು, , ಬಿಜಾಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ
ಸ್ವಾಮಿಗಳು, ಡಾ.ಎಲ್. ಬಸವರಾಜು ಸೇರಿದಂತೆ ಅನೇಕ ವಿದ್ವಾಂಸರಿಂದ ವ್ಯಾಖ್ಯಾನಗೊಂಡಿತು. ಇವುಗಳ ಜೊತೆಗೆ
ನಾಡಿನ ಪ್ರಮುಖ ಸಾಂಸ್ಕತಿಕ ಚಿಂತಕರಲ್ಲಿ ಒಬ್ಬರಾಗಿದ್ದ ಡಾ.ಡಿ.ಆರ್. ನಾಗರಾಜ್ ಅವರ " ಅಲ್ಲಮ
ಪ್ರಭು ಮತ್ತು ಶೈವ ಪ್ರತಿಭೆ" ಕೃತಿಯ ಮೂಲಕ ಅಲ್ಲಮನ ಇನ್ನೊಂದು ಜಗತ್ತು ಕನ್ನಡದ ಸಾಂಸ್ಕøತಿಕ
ಲೋಕದೆದುರು ಅನಾವರಣಗೊಂಡರೂ ಸಹ ಅಲ್ಲಮ ಇನ್ನೂ ಪೂರ್ತಿಯಾಗಿ ಯಾರಿಗೂ ದಕ್ಕಿಲ್ಲ ಎಂಬ ಅತೃಪ್ತಿ ಪ್ರಜ್ಞಾವಂತರನ್ನು
ಕಾಡುತ್ತಲೇ ಇತ್ತು. ಇದೀಗ ಬೂದಾಳ ಈ ಕೃತಿಯು ಡಿ.ಆರ್. ನಾಗರಾಜು ಅವರ ಕೃತಿಯ ಮುಂದುವರಿದ ಅಧ್ಯಯನ
ಎಂಬಂತೆ ಕಾಣುತ್ತದೆ. ಏಕೆಂದರೆ, ನಾಗರಾಜ್ ಅವರು ಅಲ್ಲಮನ್ನು ಕಾಶ್ಮೀರದ ಶೈವ ಪಂvಥದೊಂದಿಗೆ ಸಮೀಕರಿಸಿ
ಅಧ್ಯಯನ ಮಾಡಿದ್ದರು. ಆದರೆ, ಈ ಕೃತಿಯಲ್ಲಿ ಬೂದಾಳರು ಅದಕ್ಕೂ ಹಿಂದೆ ಹೋಗಿ ಬೌದ್ಧರ ತಾತ್ವಿಕ ನೆಲೆಗಳೊಂದಿಗೆ
ಮತ್ತು ದೇಶದ ಇತರೆ ಅನುಭಾವಿ ಪರಂಪರೆಗಳೊಂದಿಗೆ ಅಲ್ಲಮನ ಚಿಂತನೆಗಳನ್ನು ಇಟ್ಟು ಚರ್ಚೆ ಮಾಡುವುದರ
ಮೂಲಕ ಕನ್ನಡದ ಚಿಂತನಾ ಜಗತ್ತನ್ನು ವಿಸ್ತರಿಸಿದ್ದಾರೆ.
ಅಲ್ಲಮಪ್ರಮ
ಪ್ರಭು ಭಾರತೀಯ ಶ್ರಮಣಧಾರೆಗಳಲ್ಲಿ ಎದ್ದು ಕಾಣುವ ವ್ಯಕ್ತಿತ್ವ. ಏಕೆಂದರೆ ಅವನು ಕನ್ನಡದ ನೆಲದಲ್ಲಿ
ಹುಟ್ಟಿ ಉತ್ತರದ ನೆಲದಲ್ಲಿ ನಡೆದಾಡುತ್ತಾ ಎಲ್ಲಾ
ಅನುಭವಗಳನ್ನು ದಕ್ಕಿಸಿಕೊಂಡವನು. ಅಲ್ಲಿನ ಜೈನ, ಬೌದ್ಧ, ಕಾಳಾಮುಖ. ಸಿದ್ಧ, ನಾಥ,ಚಾರ್ವಾಕ ಪರಂಪರೆಯ
ಜೊತೆ ಒಡನಾಡಿ ಅವೆಲ್ಲವುಗಳನ್ನು ಒರೆಗಲ್ಲಿಗೆ ಹಚ್ಚಿದವನು. ಹಾಗಾಗಿ ಕನ್ನಡದಲ್ಲಿ ನಡೆದಿರಬಹುದಾದ
ಬಹುತೇಕ ಅನುಸಂಧಾನಗಳು ಅಲ್ಲಮನ ಬೆಳಕಿನಲ್ಲಿ ನಡೆದಿವೆ ಎನ್ನುವ ಲೇಖಕರ ಮಾತುಗಳನ್ನು ಆಧಾರವಾಗಿ ಇಟ್ಟುಕೊಂಡು ಬುದ್ಧನ ಮಧ್ಯಮ
ಮಾರ್ಗ, ಅಲ್ಲಮನ ನಿರಸನ ಮಾರ್ಗ, ಝೆನ್ ಮತ್ತು ಸೂಫಿ ಪರಂಪರೆ, ಕೊಡೆಕಲ್ಲು ಹಾಗೂ ಮಂಟೆಸ್ವಾಮಿ ಪರಂಪರೆಗಳನ್ನು
ಅವಲೋಕಿಸಿದಾಗ ಇವೆಲ್ಲವೂ ಆಯಾ ಧರ್ಮಗಳ ವಿರುದ್ಧ ನಡೆದ
ಆಂತರೀಕ ಬಂಡಾಯ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬಹುದು. ಈ ಕೃತಿಯಲ್ಲಿ ಹನ್ನೆರೆಡು ಅಧ್ಯಾಯಗಳಿದ್ದು
ಇವುಗಳಲ್ಲಿ ಅಲ್ಲಮನು ಕೇಂದ್ರ ವ್ಯಕ್ತಿಯಾಗಿದ್ದಾನೆ. ಅಲ್ಲಮ ಮತ್ತು ಝೆನ್, ವಿಮಲಕೀರ್ತಿ ಮತ್ತು ಅಲ್ಲಮಪರಂಪರೆ,
ಸರಹಪಾದ ಮತ್ತು ಅಲ್ಲಮ ಪ್ರಭು, ಅಲ್ಲಮ ಪ್ರಭು ಮತ್ತು ಅಶ್ವಘೋಷ, ಅಲ್ಲಮಪ್ರಭು ಮತ್ತು ಅನುಭಾವಿಕನೆಲೆಗಳು, ಬೌದ್ಧಧರ್ಮ ಮತ್ತು
ಅಲ್ಲಮಪ್ರಭು, ಕನ್ನಡ ಕಾವ್ಯಮೀಮಾಂಸೆ ಮತ್ತು ಅಲ್ಲಮ, ಅಲ್ಲಮಪ್ರಭು ಮತ್ತು ಪ್ರಸ್ತುತತೆ ಹೀಗೆ ಹಲವು
ಆಯಾಮಗಳಲ್ಲಿ ಅಲ್ಲಮನ ತಾತ್ವಿಕತೆಯನ್ನು ಚರ್ಚಿಸಿರುವುದು ಲೇಖಕರ ಆಳವಾದ ಹಾಗೂ ಶ್ರದ್ಧೆಯಿಂದ ಕೂಡಿದ
ಅಧ್ಯಯನ ಓದುಗರಿಗೆ ಮನದಟ್ಟಾಗುತ್ತದೆ. ಈ ಕೃತಿಯಲ್ಲಿನ ವಿಮಲಕೀರ್ತಿ ಮತ್ತು ಅಲ್ಲಮ ಎಂಬ ಅಧ್ಯಾಯದಲ್ಲಿನ
ವಿಷಯ ಅತ್ಯಂತ ಕುತೂಹಲಕಾರಿಯಾಗಿದೆ. ಏಕೆಂದರೆ, ಕ್ರಿಸ್ತಪೂರ್ವದ ಬುದ್ಧನ ಕಾಲದಲ್ಲಿ ಬದುಕಿದ್ದವನು ಎಂದು ಹೇಳಲಾಗುವ ವಿಮಲಕೀರ್ತಿ ಮತ್ತು ಅಲ್ಲಮನ ವಚನಗಳ ನಡುವೆ
ಇರುವ ಸಾಮ್ಯತೆಯನ್ನು ಲೇಖಕರು ಇಲ್ಲಿ ಎತ್ತಿ ತೋರಿಸಿದ್ದಾರೆ. ಲೇಖಕರೇ ಹೇಳುವ ಹಾಗೆ "ಅಲ್ಲಮನ
ಮಾರ್ಗವೆಂದರೆ ಮತ್ತೇನೊ ಒಂದನ್ನು ಪಡೆಯುವುದಲ್ಲ, ಬದಲಿಗೆ ಇರುವ ಕೇಡನ್ನು ದೂರವಾಗಿಸಿಕೊಳ್ಳುವ ಪ್ರಯತ್ನ.
ಕನ್ನಡದ ನಿಜದನಿಯನ್ನು ಹಾಗೂ ಕನ್ನಡದ ಮೀಮಾಂಸೆಯನ್ನು ಕಂಡುಕೊಳ್ಳಲು ಇರುವ ಮಾರ್ಗ' ಈ ಕೃತಿಯನ್ನು
ಓದಿದಾಗ ಈ ಮಾತು ಸತ್ಯವೆಂಬುದು ನಮ್ಮ ಅರಿವಿಗೆ ಬರುತ್ತದೆ.
ಏಕೆಂದರೆ, ಅಲ್ಲಮನೆಂಬುದು ಪರಂಜ್ಯೋತಿ ಮತ್ತು ಜಂಗಮಪ್ರಜ್ಞೆ.
ಎಲ್ಲಿಯೂ ನಿಲ್ಲದೆ ನಿರಂತರವಾಗಿ ದಾಟಬೇಕಾದ ಸ್ಥಿತಿ. ಅಲ್ಲಮನನ್ನು ಕೇವಲ ಒಬ್ಬ ಶರಣನಾಗಿ, ವಚನಕಾರನಾಗಿ,
ಅನುಭಾವಿ ಪಂಥದ ಪಥಿಕನಾಗಿ ನೋಡುವ ಬದಲು ಈ ಕೃತಿಯಲ್ಲಿ ಲೇಖಕರು ಅಲ್ಲಮನನ್ನು ನಾಥ ಪಂಥದವರ ಅಲ್ಲಮನಾಥನಾಗಿ,
ವಚನಕಾರರ ಶೂನ್ಯ ಸಿಂಹಾಸನದ ಪೀಠಾಧಿಪತಿಯಾಗಿ, ಸೂಫಿಗಳ ಪಾಲಿನ ಆಲಂಪ್ರಭುವಾಗಿ, ತತ್ವಪದಕಾರರ ಪಾಲಿನ
ಶಿವನಾಗಿ, ಜನಪದರ ಮಂಟೆಸ್ವಾಮಿಯಾಗಿ ನೋಡುತ್ತಾ ಹಲವು
ತಾತ್ವಿಕ ನೆಲೆಗಳಲ್ಲಿ ಚರ್ಚಿಸುವುದರ ಮೂಲಕ ಕನ್ನಡಕ್ಕೆ ಹೊಸ ಜ್ಞಾನಪರಂಪರೆಯೊಂದನ್ನು ಜೋಡಿಸಿದ್ದಾರೆ.
ವರ್ತಮಾನದ
ಜಗತ್ತಿನಲ್ಲಿ ಜಾತಿ, ಧರ್ಮಗಳು ದ್ರುವೀಕರಣಗೊಳ್ಳುತ್ತಿರುವ ಮೂಲಕ ಅಜ್ಞಾನ ತಾಂಡವಾಡುತ್ತಿರುವ ಈ ಹೊತ್ತಿನಲ್ಲಿ
ಇಂತಹ ಕೃತಿಗಳು ನಮ್ಮಗೆ ಬೆಳಕಿನ ದಾರಿಯಾಗಬಲ್ಲವು.
( ಹೊಸತು ಮಾಸ ಪತ್ರಿಕೆಯಲ್ಲಿ
ಪ್ರಕಟವಾದ ಲೇಖನ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ