ಭಾರತದ ರಾಜಕೀಯ ರಂಗದಲ್ಲಿ ಇಂದು ಹಗಲು ದರೋಡೆಗಾರರು, ಸುಳ್ಳುಕೋರರು,
ಕೋಮುವಾದಿಗಳು ತುಂಬಿ ತುಳುಕುತ್ತಿರುವಾಗ ವಿವಿಧ ರಂಗಗಳ ತಜ್ಞರಿಗೆ ಇದು ಸೂಕ್ತ ಕ್ಷೇತ್ರವಲ್ಲ ಎಂಬ
ನಂಬಿಕೆ ಬಲವಾಗಿ ಬೇರೂರುತ್ತಿದೆ. ಇಂತಹ ನಿರಾಸೆಯ ವಾತಾವರಣದ ನಡುವೆ ನೆರೆಯ ತಮಿಳುನಾಡಿನ ಡಿ.ಎಂ.ಕೆ.
ಸರ್ಕಾರದಲ್ಲಿ ಅರ್ಥಸಚಿವರಾಗಿ ಕಾರ್ಯ ನಿರ್ವಹಿಸುತ್ತಾ, ಹಲವಾರು ಜನಪರ ಯೋಜನೆಗಳ ಮೂಲಕ ಅಲ್ಲಿನ ಮುಖ್ಯಮಂತ್ರಿ
ಸ್ಟಾಲಿನ್ ಗೆ ಮಾರ್ಗದರ್ಶನ ಮಾಡುತ್ತಿರುವ ಮುಧುರೈ
ಮೂಲದ ಪಳನಿವೇಲು ತ್ಯಾಗರಾಜನ್ ತಮ್ಮ ನಡೆ ನುಡಿಯ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಪಳನಿವೇಲು ತ್ಯಾಗರಾಜನ್ ಇಂಜಿನಿಯರಿಂಗ್ ವಿಭಾಗದ ಎರಡು ವಿಷಯಗಳಲ್ಲಿ
ಮಾಸ್ಟರ್ ಡಿಗ್ರಿ ಪಡೆದವರು ಜೊತೆಗೆ ಎಂ.ಬಿ.ಎ. ಪದವೀಧರರು ಮತ್ತು ಪಿಹೆಚ್.ಡಿ. ಪಡೆದು ಅಮೇರಿಕಾದಲ್ಲಿ
ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಯಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2016 ರಲ್ಲಿ
ತಮ್ಮ ಕುಟುಂಬದ ಪದ್ಧತಿಗೆ ಅನುಗುಣವಾಗಿ ಮಧುರೈನ ಮೀನಾಕ್ಷಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಪ್ರಥಮ
ಪೂಜೆ ಸಲ್ಲಿಸುವ ಕಾರಣಕ್ಕಾಗಿ ಹುದ್ದೆ ತೊರೆದು ಬಂದು ತಮ್ಮ ಕುಟುಂಭದ ರಾಜಕಾರಣದ ಸೇವೆ ಮತ್ತು ಸಾಮಾಜಿಕ
ಸೇವೆಯನ್ನು ಮುಂದುವರಿಸಿದ್ದಾರೆ.
ತ್ಯಾಗರಾಜನ್ ಅವರ ತಾತ ಪಿ.ಕೆ.ಟಿ. ರಾಜನ್ ಎಂಬುವರು 1936 ರಲ್ಲಿ ಮದ್ರಾಸ್
ಪರೆಸಿಡೆನ್ಸಿ ಪ್ರಾತ್ಯದ ಮುಖ್ಯ ಮಂತ್ರಿಯಾಗಿದ್ದವರು. 1918ರಲ್ಲಿ ಅವರು ಇಂಗ್ಲೇಂಡಿನ ಆಕ್ಸ್ ಪರ್ಡ್
ನಲ್ಲಿ ಶಿಕ್ಷಣ ಪಡೆದು ಬಂದವರಾಗಿದ್ದರು. 1916 ರಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರ ಪ್ರಾಬಲ್ಯ ವಿರೋಧಿಸಿ
ಆರಂಭವಾದ ಜಸ್ಟೀಸ್ ಪಾರ್ಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಹದಿಮೂರು ವರ್ಷಗಳ ಕಾಲ ಶಾಸನ
ಸಭೆಯಲ್ಲಿ ಆಡಳಿತ ನಡೆಸಿದ ಜಸ್ಟೀಸ್ ಪಾರ್ಟಿಯ ಮುಖಾಂತರ ದಲಿತರಿಗೆ ಮೀಸಲಾತಿ ನಿಯಮಗಳನ್ನು ಜಾರಿಗೆ
ತರುವುದಲ್ಲಿ ಶ್ರಮಿಸುವುದರ ಜೊತೆಗೆ ಆ ಕಾಲದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಇದ್ದ ಏಕೈಕ ವಿಶ್ವವಿದ್ಯಾನಿಯ
ಮದ್ರಾಸ್ ಯೂನಿರ್ವಸಿಟಿಗೆ ಪರ್ಯಾಯವಾಗಿ ಅಣ್ಣಾಮಲೈ ವಿಶ್ವ ವಿದ್ಯಾನಿಲಯ, ಆಂಧ್ರ ವಿ.ವಿ ಸ್ಥಾಪಿಸುವಲ್ಲಿ
ಇತರೆ ನಾಯಕರೊಂದಿಗೆ ಶ್ರಮಿಸಿದವರು. ಜಸ್ಟೀಸ್ ಪಾರ್ಟಿಯು 1944 ರಲ್ಲಿ ಪೆರಿಯಾರ್ ರಾಮಸ್ವಾಮಿ ನೇತೃತ್ವದಲ್ಲಿ
ದ್ರಾವಿಡ ಕಳಗಂ ಪಕ್ಷವಾಗಿ ಪರಿವರ್ತನೆಗೊಂಡು ದ್ರಾವಿಡ ಸಂಸ್ಕೃತಿಯ ಭಾಷೆ ಮತ್ತು ಇತರೆ ಕಲೆಗಳನ್ನು
ಉಳಿಸುವತ್ತ ಮುನ್ನಡೆಯಿತು. ತ್ಯಾಗರಾಜನ್ ಅವರ ತಂದೆಯವರೂ ಸಹ ಕರುಣಾನಿಧಿ ಯವರ ಡಿ.ಎಂ.ಕೆ. ಸರ್ಕಾರದಲ್ಲಿ
ಶಾಸಕರಾಗಿ ಸಚಿವರಾಗಿ ಕಾರ್ಯ ನಿರ್ವಹಸುತ್ತಿದ್ದರು.
ತಂದೆಯ ನಿಧನಾನಂತರ ಸ್ಥಳಿಯ ಜನತೆಯ ಮನವಿಗೆ ಓಗೊಟ್ಟು ತಮ್ಮ ಅಮೇರಿಕನ್
ಪತ್ನಿ ಮಾರ್ಗರೇಟ್ ಹಾಗೂ ಇಬ್ಬರು ಪುತ್ರರೊಂದಿಗೆ ಭಾರತಕ್ಕೆ ವಾಪಸ್ ಬಂದ ತ್ಯಾಗರಾಜನ್ 2016 ರಲ್ಲಿ
ಡಿ.ಎಂ.ಕೆ. ಪಕ್ಷದಿಂದ ಶಾಸಕರಾದರು. ಆಡಳಿತಾರೂಢ ಜಯಲಲಿತಾರವರ ಅಣ್ಣಾ ಡಿ.ಎಂ.ಕೆ. ಪಕ್ಷಕ್ಕೆ ಸರ್ಕಾರದ ಹಲವಾರು ಜನಪ್ರಿಯ ಯೋಜನೆಗಳಿಗೆ ತ್ಯಾಗರಾಹನ್ ಸಲಹೆ
ನೀಡುವುದರ ಮೂಲಕ ಜಾರಿಗೆ ತರುವಲ್ಲಿ ಶ್ರಮಿಸಿದರು. ಇವುಗಳಲ್ಲಿ ಪ್ರಮುಖವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ
ಆದ್ಯತೆ ನೀಡಿದರು. ಉಚಿತ ಶಿಕ್ಷಣದ ಜೊತೆಗೆ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಉಚಿತ ಸೈಕಲ್, ಪಿ.ಯು.ಸಿ
ಮತ್ತು ಡಿಗ್ರಿ ಓದುವ ಹೆಣ್ಣು ಮಕ್ಕಳಿಗೆ ಲ್ಯಾಪ್ ಟಾಪ್,
ವಿವಾಹಕ್ಕೆ ತಾಳಿ ಮತ್ತು ಧನ ಸಹಾಯ, ಹಾಗೂ ಉಚಿತ ಹೆರಿಗೆ ಸೌಲಭ್ಯ , ಆರ್ಥಿಕ ಸಹಾಯ ಇವೆಲ್ಲವುಗಳಿಗೆ
ತ್ಯಾಗರಾಜನ್ ಸ್ಪೂರ್ತಿಯಾಗಿದ್ದರು.
ಸ್ಟಾಲಿನ್ ನೇತೃತ್ವದಲ್ಲಿ ಡಿ.ಎಂ.ಕೆ. ಸರ್ಕಾರ ಅಸ್ತಿತ್ವಕ್ಕೆ ಬಂದಾಗ
ಎರಡನೆಯ ಬಾರಿ ಶಾಸಕರಾಗಿದ್ದ ತ್ಯಾಗರಾಜನ್ ಸಹಜವಾಗಿ ಅವರ ವಿದ್ವತ್ ಗೆ ಅನುಗುಣವಾಗಿ ಅರ್ಥಸಚಿವರಾದರು.
ಜಯಲಿಇತಾ ಸರ್ಕಾರದ ಬಹುತೇಕ ಜನಪ್ರಿಯ ಜೋಜನೆಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ಸಲಹೆ ನೀಡಿದರು.
ನಾಡಿನ ಜನತೆಗೆ ಸೇವೆ ಸಲ್ಲಿಸುವ ವಿಚಾರದಲ್ಲಿ ರಾಜಕೀಯ ತಾರತಮ್ಯವಿರಬಾರದು ಎಂಬುದು ಅವರ ನಂಬಿಕೆ.
ಇಂದು ಸ್ಟಾಲಿನ್ ಸರ್ಕಾರ ಕುರಿತಾಗಿ ಒಳ್ಳೆಯ ಅಭಿಪ್ರಾಯಗಳಿದ್ದರೆ ಅದಕ್ಕೆ ಮೂಲಕಾರಣ ತ್ಯಾಗರಾಜನ್.
ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ನಾನ್ ಮೊದಲವನ್ ( ನಾನು ಮೊದಲಿಗ) ಎಂಬ ಹೆಸರಿನಲ್ಲಿ ಪ್ರತಿಯೊಂದು ವೃತ್ತಿ ಅಥವಾ ಕಸಬಿಗೆ ಕೌಶಲ್ಯ ತುಂಬುವ ನಿಟ್ಟಿನಲ್ಲಿ
ಕಟ್ಟಣ ನಿರ್ಮಾಣ, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಮೋಟಾರು ಪಂಪ್ ರಿಪೇರಿ, ವಾಹನ ದುರಸ್ತಿ, ಹೀಗೆ
ಹಲವಾರು ವೃತ್ತಿಗಳ ಕೋರ್ಸ್ ಗಳಲ್ಲಿ ಅರೆ ಶಿಕ್ಷಿತ ಹಾಗೂ ಬಡ ಯುವಕರನ್ನು ತಯಾರು ಮಾಡಲಾಗುತ್ತಿದೆ.
ಭಾರತದಲ್ಲಿ ಪ್ರಥಮ ಬಾರಿ
ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ. ನಂತರ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಯಾವ ಶಿಕ್ಷಣ ಮುಂದುವರಿಸಬಹುದು.
ಅವುಗಳಿಗೆ ಸರ್ಕಾರದ ಮೂಲಕ ಇರುವ ಸಹಾಯಧನ ಮತ್ತು ಉದ್ಯೋಗದ
ಅವಕಾಶಗಳು ಈ ಕುರಿತು ಸಮಗ್ರ ಮಾಹಿತಿ ಇರುವ ಕಿರು ಪುಸ್ತಕವನ್ನು ಇಡೀ ತಮಿಳುನಾಡಿನಾದ್ಯಂತ ಶಾಲೆ ಕಾಲೇಜುಗಳಿಗೆ
ವಿತರಿಸಿದ್ದಾರೆ. ಜೊತೆಗೆ ತಾವು ಭೇಟಿ ನೀಡುವ ಪ್ರತಿ ಜಿಲ್ಲೆ ಅಥವಾ ತಾಲ್ಲೂಕುಗಳ ಶಾಲಾ ಕಾಲೇಜುಗಳಿಗೆ ಹೋಗಿ ಮಕ್ಕಳಿಗೆ ಶುದ್ಧ ತಮಿಳು ಭಾಷೆಯಲ್ಲಿ ಈ ಕುರಿತು ಪಾಠ
ಮಾಡಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಇತರೆ ರಾಜಕಾರಣಿಗಳಂತೆ ತಮ್ಮ ಹಿಂದೆ ಪುಡಿ ಗಿರಾಕಿಗಳು ಓಡಾಡುವುದಕ್ಕೆ
ತ್ಯಾಗರಾಜನ್ ಅವಕಾಶ ನೀಡಿಲ್ಲ. ಅವರ ಕುರಿತಾಗಿ ತಮಿಳುನಾಡಿನ ಮಾಧ್ಯಮಗಳು ಮಾತ್ರವಲ್ಲದೆ ಇಡೀ ದೇಶದ
ಇಂಗ್ಲೀಷ್ ಮಾಧ್ಯಮಗಳು ಗೌರವ ಭಾವನೆ ಹೊಂದಿವೆ.
ಇಡೀ ಭಾರತದಲ್ಲಿ ಪ್ರಧಾನಿ ಮೋದಿಯಿಂದ ಹಿಡಿದು ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ವರೆಗೆ ತ್ಯಾಗರಾಜನ್ ಎಂದರೆ ಬೆಚ್ಚಿ ಬೀಳುತ್ತಾರೆ. ಜಿ.ಎಸ್.ಟಿ. ತೆರಿಗೆಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ಕೇಳಲಾಗದೆ ಕೈ ಕಟ್ಟಿಕೊಂಡು, ಬಾಯಿ ಮುಚ್ಚಿ ಕುಳಿತುಕೊಳ್ಳುವ ಬಸವರಾಜ ಬೊಮ್ಮಾಯಿ ಯಂತಹ ಮುಖ್ಯಂತ್ರಿಗಳ ನಡುವೆ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ತ್ಯಾಗರಾಜನ್ ಎಳೆ ಎಳೆಯಾಗಿ ಬಿಡಿಸಿ ವಿವರಿಸುವಾಗ ನಿರ್ಮಾಲಾ ಸೀತರಾಮನ್ ಅವರಿಂದ ಉತ್ತರವಿರುವುದಿಲ್ಲ. ಏಕೆಂದರೆ, ತ್ಯಾಗರಾಜನ್ ಬಳಿ ಕೇವಲ ತಮಿಳುನಾಡಿನ ಅಂಕಿ ಅಂಶಗಳು ಮಾತ್ರವಲ್ಲದೆ, ಇಡೀ ರಾಷ್ಟ್ರದ ಅಂಕಿ ಅಂಶಗಳಿರುತ್ತವೆ. ಬಿ.ಜೆ.ಪಿ. ಸರ್ಕಾರ ಇರುವ ರಾಜ್ಯಗಳಿಗೆ ನೀಡಿರುವ ಅನುದಾನ ಮತ್ತು ಬಿ.ಜೆ.ಪಿ. ಯೇತರ ರಾಜ್ಯಗಳಿಗೆ ನೀಡಿರುವ ಅನುದಾನವನ್ನು ಕ್ಷಣಾರ್ಧದಲ್ಲಿ ಬಿಚ್ಚಿಡಬ್ಲರು. ತಮಿಳುನಾಡಿನಲ್ಲಿ ಒಂದು ಸಾವಿರ ಜನಸಂಖ್ಯೆಗೆ ನಾಲ್ವರು ವೈದ್ಯರು ಇದ್ದರು ಇದ್ದರೆ ಗುಜರಾತಿನಲ್ಲಿ ಸಾವಿರ ಸಂಖ್ಯೆಗೆ ಕೇವಲ ಒಬ್ಬ ವೈದ್ಯನಿರುವುದನ್ನು ಹೇಳುವಾಗ ಎಲ್ಲರೂ ಮೌನಕ್ಕೆ ಶರಣಆಗುತ್ತಾರೆ.
ಇಂತಹ ವಿವಿಧ ವಲಯಗಳ ತಜ್ಞರು ರಾಜಕೀಯ ಬಂದಾಗ ಮಾತ್ರ ಈ ದೇಶ ಅಥವಾ ರಾಜ್ಯಗಳು ಸುಧಾರಿಸಬಹುದು. ಪ್ರತಿಯೊಂದು ರಾಜ್ಯದಲ್ಲಿ
ಇಂತಹವರು ನಾಲ್ಕು ಮಂದಿ ಇದ್ದರೆ, ಸಾಕು. ಖಂಡಿತಾ ಭವಿಷ್ಯವನ್ನು ಬದಲಾಯಿಸಬಹುದು. ಕರ್ನಾಟಕದ ಕಾಂಗ್ರೇಸ್
ನಾಯಕರು ತ್ಯಾಗರಾಜನ್ ಅವರನ್ನು ಕರ್ನಾಟಕ್ಕೆ ಕರೆಯಿಸಿ ತಮ್ಮ ಪದಾಧಿಕಾರಿಗಳಿಗೆ ಮತ್ತು ಜಿಲ್ಲಾ ಮಟ್ಟದ
ಕಾರ್ಯಕರ್ತರಿಗೆ ಉಪನ್ಯಾಸ ಕೊಡಿಸಿದರೆ ಗೆದ್ದಲು ಹಿಡಿದಿರುವ ಮಿದುಳಿಗೆ ಒಂದಿಷ್ಟು ಹೊಸ ಆಲೋಚನೆಗಳು
ಬರಬಹುದು.
ಜಗದೀಶ್ ಕೊಪ್ಪ