ಗುರುವಾರ, ಆಗಸ್ಟ್ 25, 2022

ಮಂಡ್ಯ ನೆಲದ ಸ್ವಾತಂತ್ರ್ಯ ಹೋರಾಟದ ಒಂದು ನೆನಪು; ಶಿವಪುರ ಧ್ವಜ ಸತ್ಯಾಗ್ರಹ

 


ದೇಶದೆಲ್ಡೆಡೆ  ಎಪ್ಪತ್ತೈದನೆಯ ಸ್ವಾತಂತ್ರ್ಯದ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ತಮ್ಮ ಜೀವಮಾನದಲ್ಲಿ  ಎಂದಿಗೂ ತ್ರಿವರ್ಣ ಧ್ವಜ ಕುರಿತು ಒಂದಿಷ್ಟು ಗೌರವ ಮತ್ತು ಘನತೆಯ ಮಾತನಾಡದ ಜನ ಈಗ ಮನೆ ಮನೆಗೂ ತಿರಂಗ ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ. ಇಂತಹ ಹುಸಿ ದೇಶಪ್ರೇಮಕ್ಕಾಗಿ ರಾಷ್ಟ್ರ ಧ್ವಜ ಕುರಿತಾಗಿ ಇದ್ದ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಷ್ಟ್ರ ಧ್ವಜವನ್ನು ರಾಜಕೀಯ ಪಕ್ಷಗಳ ಧ್ವಜದ ಸಾಲಿಗೆ ತಂದು ನಿಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಹಾರಿಸುವುದು ಕಾನೂನು ಬಾಹಿರ ಎಂಬ ನಿಯಮವಿದ್ದ ಕಾಲಘಟ್ಟದಲ್ಲಿ ನನ್ನ ಜಿಲ್ಲೆ ಮತ್ತು ನನ್ನ ತಾಲೂಕಿನ ನೆಲವಾದ ಮದ್ದೂರು ಸಮೀಪದ ಶಿವಪುರದಲ್ಲಿ 1938 ರ ಏಪ್ರಿಲ್ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ಟಿ.ಸಿದ್ಧಲಿಂಗಯ್ಯನವರ ನೇತೃತ್ವದಲ್ಲಿ ಹತ್ತು ಸಾವಿರ ಮಂದಿ ರಾಷ್ಟ್ರ ಧ್ವಜ ಹಾರಿಸಿ ಬಂಧಿಯಾದ ಕಥನ  ಈ ಸಂದರ್ಭದಲ್ಲಿ ಯಾವ ಮಾಧ್ಯಮಗಳಿಗೂ ನೆನಪಾಗಲಿಲ್ಲ.

ಕರ್ನಾಟಕದ ಇತಿಹಾಸದಲ್ಲಿ  ಸ್ವಾತಂತ್ರ್ಯ ಚಳುವಳಿಗೆ ಬಾಂಬೆ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಅಪಾರವಾದುದು. ದಕ್ಷಿಣ ಕರ್ನಾಟಕದಲ್ಲಿ ಜಲಿಯನ್ ವಾಲಾಬಾಗ್ ಘಟನೆಯನ್ನು ನೆನಪಿಸುವ ಗೌರಿಬಿದನೂರು ಸಮೀಪದ ವಿಧುರಾಶ್ವತದ ಗೋಲಿಬಾರ್ ದುರಂತ ಮತ್ತು ಶಿವಪುರದ ಧ್ವಜ ಸತ್ಯಾಗ್ರಹ ಘಟನೆ ಕರ್ನಾಟಕದ ಇತಿಹಾಸದಲ್ಲಿ  ಅವಿಸ್ಮರಣೀಯವಾಗಿ ಉಳಿದು ಹೋಗಿವೆ. ಬೆಂಗಳೂರು ವಿ.ವಿ.ಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದುಕೊಂಡು ನನಗೆ ಪದವಿ ತರಗತಿಗಳಲ್ಲಿ ಕನ್ನಡ ಬೋಧಿಸಿದ ಗುರುಗಳಾದ  ಪ್ರೊ.ಡಿ.ಲಿಂಗಯ್ಯನವರು 1979 ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಕುರಿತಂತೆ ಬರೆದಿರುವ ಅಮೂಲ್ಯಕೃತಿ ಇಂದಿಗೂ ಸಾತಂತ್ರ್ಯ ಚಳುವಳಿ ಕುರಿತಾದ ಕೃತಿಗಳಿಗೆ ಮಾದರಿಯಾಗಿದೆ.

ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನವರಾದ ಡಿ.ಲಿಂಗಯ್ಯನವರು 1978 ರಲ್ಲಿ ಕ್ಷೇತ್ರಕಾರ್ಯ ಮಾಡಿ, ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಪಾಲ್ಗೊಡು ಉಳಿದಿದ್ದ ಮಹಾನೀಯರನ್ನು ಸಂದರ್ಶಿಸಿ, ಅಧಿಕೃತ ದಾಖಲೆಗಳ ಮೂಲಕ ಕಟ್ಟಿಕೊಟ್ಟಿರುವ ಪರಿ ನಿಜಕ್ಕೂ ಅದ್ಭುತವಾದುದು. ಈ ಕಾರ್ಯಕ್ಕಾಗಿ ಒಮ್ಮೆ ನನ್ನನ್ನೂ ಕರೆದು ಕರೆದುಕೊಂಡು, ನನ್ನೂರು ಕೊಪ್ಪ ದ ಕೆ.ಜೋಗಿಗೌಡರು, ಬ್ರಾಹ್ಮಣ ಮುಖಂಡರಾಗಿದ್ದ ಗುಂಡಪ್ಪ ನವರ ಮನೆಗೆ ಭೇಟಿ ನೀಡುವುದರ ಜೊತೆಗೆ ನನ್ನೂರು ಸಮೀಪದ ಬಿದರಕೋಟೆ, ಬೆಸಗರಳ್ಳಿ, ವಳೇಗೇರಹಳ್ಳಿ ಹೀಗೆ ಹಲವು ಊರುಗಳನ್ನು ಸುತ್ತಿದ್ದರು. 1979 ರಲ್ಲಿ ಪುಸ್ತಕ ಬಿಡುಗಡೆಯಾದಾಗ ಅವರು ನೀಡಿದ್ದ ಒಂದು ಕೃತಿ ಈಗಲೂ ನನ್ನ ಪಾಲಿಗೆ ಅಮೂಲ್ಯ  ಆಸ್ತಿಯಾಗಿ ಉಳಿದಿದೆ.


ಶಿವಪುರ ಧ್ವಜ ಸತ್ಯಾಗ್ರಹಕ್ಕೆ ಒಂದು ಇತಿಹಾಸವಿದೆ. ವಾಸ್ತವವಾಗಿ  ತಮ್ಮ  ಅರಸೊತ್ತಿಗೆಯನ್ನು ಬ್ರಿಟೀಷರಿಗೆ ಒಪ್ಪಿಸಿ ಅವರು ನೀಡುತ್ತಿದ್ದ ವಾರ್ಷಿಕ ಅನುದಾನದಲ್ಲಿ ಮೈಸೂರು ದೊರೆಗಳು ಸಂಸ್ಥಾನವನ್ನು ನಡೆಸುತ್ತಿದ್ದರು. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಮುತ್ಸದಿ ಮತ್ತು ಮಾನವೀಯ ಗುಣಗಳುಳ್ಳ ದೊರೆಯಿಂದಾಗಿ ಮೈಸೂರು ಸಂಸ್ಥಾನವು  ಇಡೀ ಭಾರತಕ್ಕೆ ಮಾದರಿಯಾಗಿತ್ತು. ಶಿಕ್ಷಣ, ಆರೋಗ್ಯ, ಕೃಷಿ, ನೀರಾವರಿ ಯೋಜನೆಗಳಿಂದ ಹಿಡಿದು, ದಲಿತರಿಗೆ ಮೀಸಲಾತಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಜೊತೆಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಪ್ರಜಾ ಪ್ರತಿನಿಧಿಗಳ ಸಭೆ ಹೀಗೆ ಎಲ್ಲಾ ಆಡಳಿತ ವಿಭಾಗಗಳ ಕಾರ್ಯವೈಖರಿಗಳು  ದೇಶಕ್ಕೆ ಮಾದರಿಯಾಗಿದ್ದವು. ಹಾಗಾಗಿ ಮೈಸೂರು ಸಂಸ್ಥಾನದ ಜನತೆ ಸ್ವಾತಂತ್ಯ ಚಳುವಳಿ ಕುರಿತಾಗಿ ಗಂಭೀರವಾಗಿ ಯೋಚಿಸಿರಲಿಲ್ಲ. ಆದರೆ, 1934 ರಲ್ಲಿ ಪ್ರಥಮ ಬಾರಿಗೆ ಮಹಾತ್ಮ ಗಾಂಧಿಯವರು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದಾಗ  ಇಲ್ಲಿನ ನಾಯಕರಾದ ಹೆಚ್.ಕೆ.ವೀರಣ್ಣಗೌಡ, ಸಾಹುಕಾರ್ ಚೆನ್ನಯ್ಯ, ಎಂ.ಎನ್.ಜೋಯಿಸ್, ಸಿ.ಬಂದೀಗೌಡ, ಹೆಚ್.ಸಿ. ದಾಸಪ್ಪ ಹೀಗೆ ಅನೇಕ ನಾಯಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಒಡಲೊಳಗೆ ಮೊದಲ ಬಾರಿಗೆ ಸಿಡಿಯಿತು.

ಮೈಸೂರಿನಲ್ಲಿ ಕಾಂಗ್ರೇಸ್ ಅಧಿವೇಶನ ಮಾಡುವುದರ ಜೊತೆಗೆ ರಾಷ್ಟ್ರ ಧ್ವಜವನ್ನು ಹಾರಿಸಬೇಕೆಂದು ನಿರ್ಧಸಲಾಯಿತು. ಆದರೆ, ಬ್ರಿಟೀಷ್ ಸರ್ಕಾರದ ವಿರುದ್ಧ ಯಾವುದೇ ಸಭೆ ನಡೆಸಲು ಮತ್ತು ಧ್ವಜ ಹಾರಿಸಲು ಬ್ರಿಟೀಷ್ ಅಧಿಕಾರಿಗಳು ಮತ್ತು ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅನುಮತಿ ನಿರಾಕರಿಸಿದರು. ಇದಕ್ಕೆ ವಿರೋಧಿಸಿದ ನಾಯಕರು ಆಗ  ಮೈಸೂರು ಜಿಲ್ಲೆಯ ಭಾಗವಾಗಿದ್ದ ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಕಾಂಗ್ರೆಸ್ ಅಧಿವೇಶನ ಮತ್ತು ಧ್ವಜ ಸತ್ಯಾಗ್ರಹ ಮಾಡಲು ನಿರ್ಧರಿಸಲಾಯಿತು. ( 1939 ರಲ್ಲಿ  ಮಂಡ್ಯ ಜಿಲ್ಲೆ ಪ್ರತ್ಯೇಕ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು)  ಇದಕ್ಕಾಗಿ ಶಿವಪುರ ರಾಷ್ಟ್ರಕೂಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಮೈಸೂರು-ಬೆಂಗಳೂರು ರಸ್ತೆಯ ಪಕ್ಕದಲ್ಲಿದ್ದ ಈಡಿಗ ಸಮುದಾಯದ ತಿರುಮಲೇಗೌಡರ ಜಮೀನನಲ್ಲಿ ಅಧಿವೇಶನ ನಡೆಸಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮಕ್ಕೆ ತಿರುಮಲೇ ಗೌಡರು ಶಿವಪುರದಲ್ಲಿ ಕೊಪ್ಪ ರಸ್ತೆಯಲ್ಲಿದ್ದ ತಮ್ಮ ಮನೆಯನ್ನು ಕಚೇರಿಯನ್ನಾಗಿ ಬಳಸಿಕೊಳ್ಲಲು ಅವಕಾಶ ನಿಡಿದರು.

ಟಿ.ಸಿದ್ಧಲಿಂಗಯ್ಯನವರು ಅಧ್ಯಕ್ಷರು, ಸಾಹುಕಾರ್ ಚೆನ್ನಯ್ಯ ಉಪಾಧ್ಯಕ್ಷರು, ಕೊಪ್ಪದ ಜೋಗಿಗೌಡ ಕಾರ್ಯದರ್ಶಿ ಹಾಗೂ ಸಿ.ಬಂದೀಗೌಡ, ಎಂ.ಎನ್.ಜೋಯಿಸ್, ಇಂಡವಾಳು ಹೊನ್ನಯ್ಯ, ಹೆಚ್.ಕೆ.ವೀರಣ್ಣಗೌಡ, ವೆಂಕಟಗಿರಿಗೌಡ, ಪಿ.ಲಿಂಗೇಗೌಡ, ಪಿ.ತಮ್ಮಯ್ಯ, ಶ್ರೀನಿವಾಸ ಅಯ್ಯಂಗಾರ್, ಹೆಚ್.ಸಿ.ದಾಸಪ್ಪ, ಯಶೋಧರಮ್ಮ ದಾಸಪ್ಪ ಮುಂತಾದವರು ಸದಸ್ಯರಾಗಿದ್ದ ರಾಷ್ಟ್ರಕೂಟ ಸಮಿತಿಗೆ ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯ ನಾಯಕರು ಮಾರ್ಗದರ್ಶಕರಾಗಿ ದುಡಿದರು. ಇದಕ್ಕಾಗಿ  ಹದಿನೈದು ದಿನ ಮುಂಚಿತವಾಗಿ ಎಲ್ಲರೂ ಶಿವಪುರಕ್ಕೆ ಆಗಮಿಸಿದ್ದರು.

ಜೋಗೀಗೌಡರ ನೇತೃತ್ವದಲ್ಲಿ ಮದ್ದೂರು ಮತ್ತು ಮಂಡ್ಯ ತಾಲ್ಲೂಕಿನ ಪ್ರತಿ ಹಳ್ಳಿಗಳ ಮನೆ ಮನೆಗಳಿಂದ ಅಕ್ಕಿ, ಬೇಳೆ, ಬೆಲ್ಲ, ಬಾಳೆಹಣ್ಣು, ಬಾಳೆ ಎಲೆ, ಅಡಿಕೆ ಹಾಳೆ, ತೆಂಗಿನ ಕಾಯಿ, ಹಾಲು, ಮೊಸರು, ಬೆಣ್ಣೆ ಹೀಗೆ ಹತ್ತು ಸಾವಿರ ಮಂದಿಗೆ ಮೂರು ದಿನಗಳ ಅಧಿವೇಶನಕ್ಕೆ ಧವಸ ಧಾನ್ಯ ಮತ್ತು ಹಣವನ್ನು ಕಲೆ ಹಾಕಲಾಯಿತು. ಇದಕ್ಕಾಗಿ ಐದು ಜೊತೆ ಎತ್ತಿನ ಬಂಡಿಗಳನ್ನು ಹಳ್ಳಿಗಳಿಗೆ ಕಳಿಸಲಾಗುತ್ತಿತ್ತು. ಶಿವಪುರ ಧ್ವಜ ಸತ್ಯಾಗ್ರಹದ ಮತ್ತೊಂದು ಮಹತ್ವದ ಸಾಧನೆಯೆಂದರೆ, ರಾಜ್ಯಾದ್ಯಂತ ಬಂದಿದ್ದ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಜಾತಿ, ಧರ್ಮವನ್ನು ಮರೆತು ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು. ಅಲ್ಲಿ  ಊಟ ಮಾಡಿದ ಯಾರೊಬ್ಬರೂ ಅಕ್ಕಿ, ಯಾರ ಮನೆಯದ್ದು? ಬೇಳೆ ಯಾರ ಮನೆಯದ್ದು ಎಂದು ಕೇಳಲಿಲ್ಲ. ಅವರುಗಳ ಈ ಜಾತ್ಯಾತೀತ ಮನೋಭಾವ ಮಂಡ್ಯ ಜಿಲ್ಲೆಯ ಜನತೆಯ ಮೇಲೆ ತೀವ್ರ ಪ್ರಭಾವ ಬೀರಿತು. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ದಾರಿ ದೀಪವಾಯಿತು. ಮಳ್ಳವಳ್ಳಿ ತಾಲ್ಲೂಕು ಕೇಂದ್ರದಲ್ಲಿ ಈಗ ಸರ್ಕಾರಿ ಬಸ್ ನಿಲ್ದಾಣವಾಗಿರುವ ಪ್ರದೇಶದಲ್ಲಿ ಕುನ್ನೀರು ಕಟ್ಟೆ ಎಂಬ ನೀರಿನ ಸರೋವರವಿತ್ತು. ಮಳ್ಳವಳ್ಳಿಯ ವಿರೇಗೌಡರು ಹರಿಜರನ್ನು ಕರೆದುಕೊಂಡು ಹೋಗಿ ಅಲ್ಲಿ ಹರಿಜನರು ನೀರು ಕುಡಿಯಲು ಅವಕಾಶ ಮಾಡಿಕೊಡುವುದರ ಮೂಲಕ ಮಂಡ್ಯ ನೆಲದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಮಂಡ್ಯ-ಕೊಪ್ಪ ರಸ್ತೆಯಲ್ಲಿ ಹುಲಿವಾನ ಬಳಿಯ ಹೊನಗಾನಹಳ್ಳಿ ಎಂಬ ಊರಿನ ಪುಟ್ಟಣ್ಣಯ್ಯ ಎಂಬುವರು ಊರಿನ ಕೆರೆ ನೀರು ಕುಡಿಯಲು ಹರಿಜನರಿಗೆ ಪ್ರೋತ್ಸಾಹಿಸಿ ನೀರು ಕುಡಿಸಿದರು. ಇದರಿಂದ ಸಿಟ್ಟಿಗೆದ್ದ ಊರಿನ ಜನತೆ  ಪುಟ್ಟಣ್ಣಯ್ಯನವರನ್ನು ಹುಣಸೆ ಕಟ್ಟಿಗೆಯಿಂದ ಮನಸ್ಸೋ ಇಚ್ಚೆ ಧಳಿಸಿದರು. ಇದರಿಂದ ನೊಂದ ಅವರು ಮನುಷ್ಯರು ಇಲ್ಲದ ಊರಿನಲ್ಲಿ  ನಾನು ಬದುಕುವುದಿಲ್ಲ ಎಂದು ತೀರ್ಮಾನಿಸಿ, ಹುಟ್ಟಿದ ಊರನ್ನು ತ್ಯೆಜಿಸಿ ಕೆ.ಆರ್. ತಾಲ್ಲೂಕಿನ ಹೇಮಗಿರಿ ಬೆಟ್ಟದಲ್ಲಿ ನೆಲೆ ನಿಂತು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಜೀವನದ ಕೊನೆಯವರೆಗೂ ಅಲ್ಲಿಯೇ ಉಳಿದರು.  ಇವರ ಕುರಿತಾಗಿ ಹದಿನೈದು ವರ್ಷದ ಹಿಂದೆ ಆಂಧೋಲನ ಪತ್ರಿಕೆಯಲ್ಲಿ ನಾನು ಲೇಖನ ಬರೆದಾಗ, ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ ಹೊನಗಾನಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಸ್ಥಾಪಿಸಿ ಅದಕ್ಕೆ ಪುಟ್ಟಣ್ಣಯ್ಯನವರ ಹೆಸರನ್ನು ನಾಮಕರಣ ಮಾಡಿದರು.

1938 ರ ಏಪ್ರಿಲ್ ತಿಂಗಳಿನಲ್ಲಿ ನಡೆದ ಶಿವಪುರದ ಅಧಿವೇಶನಲ್ಲಿ ಧ್ವಜ ಸತ್ಯಾಗ್ರಹ ಚಳುವಳಿಯನ್ನು ಅಹಿಂಸಾತ್ಮಕವಾಗಿ ನಡೆಸಲು ತೀರ್ಮಾನಿಸಲಾಯಿತು. ಏಪ್ರಿಲ್ 9 ರಂದು ಪ್ರಥಮ ಬಾರಿಗೆ ಟಿ.ಸಿದ್ಧಲಿಂಗಯ್ಯನವರು ಧ್ವಜಾರೋಹಣ ಮಾಡಿ ಬಂದಿತರಾದರು. ನಂತರ ಯಶೋಧರ ಧಾಸಪ್ಪ ಧ್ವಜಾ ರೋಹಣ ಮಾಡಿದರು. ಹೀಗೆ ಸಾಲು ಸಾಲಾಗಿ ಮೂರು ದಿನಗಳ ಕಾಲ ಧ್ವಜಾ ರೋಹಣ ಮಾಡಿ ದೇಶ ಪ್ರೇಮವನ್ನು ಮೆರೆದ ಅನೇಕ  ನಾಯಕರು ಬಂಧಿತರಾದರು. ಎಲ್ಲಿಯೂ ಹಿಂಸೆಯ ಘಟನೆ ಅಥವಾ ಪ್ರಚೋಧಿತ ಭಾಷಣ, ಮತ್ತು ಹೇಳಿಕೆಗಳು ಬರಲಿಲ್ಲ. ಗಾಂಧೀಜಿಯವರು ಕನಸಿದ್ದ ಅಹಿಂಸಾತ್ಮಕ ರೂಪದ ಸ್ವಾತಂತ್ರ್ಯ ಚಳುವಳಿಗೆ ಶಿವಪುರ ಧ್ವಜ ಸತ್ಯಾಗ್ರಹ ಮಾದರಿಯಾಯಿತು. ಜೊತೆಗೆ ಮಂಡ್ಯ ನೆಲದ ಜನರನ್ನು ವೈಚಾರಿಕತೆಯ ಹಾದಿಗೆ ದೂಡಿತು.

ಧ್ವಜ ಸತ್ಯಾಗ್ರಹ ಸ್ಥಳದಲ್ಲಿ ಭವನ ನಿರ್ಮಾಣ ಮಾಡಬೇಕೆಂಬುದು ಕೆಂಗಲ್ ಹನುಮಂತಯ್ಯನವರ  ಕನಸಾಗಿತ್ತು. ತಾವು ಪಾಲ್ಗೊಳ್ಳುತ್ತಿದ್ದ ಸಭೆ ಸಮಾರಂಭಗಳಲ್ಲಿ ಹಾಕುತ್ತಿದ್ದ ಹೂವಿನ ಹಾರವನ್ನು ಅಲ್ಲಿಯೇ ಹರಾಜು ಹಾಕಿ ಅದರಿಂದ ಬರುತ್ತಿದ್ದ  ಹಣವನ್ನು ಶೇಖರಿಸಿ ಅಂತಿಮವಾಗಿ ಐದು ಲಕ್ಷ ರೂಪಾಯಿ ಹಣವನ್ನು ದಾನ ನೀಡಿದರು. ದೇವರಾಜ ಅರಸು ಅಧಿಕಾರದಲ್ಲಿದ್ದ ಸಮಯದಲ್ಲಿ ಒಟ್ಟು ಹದಿಮೂರುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಶಿವಪುರ ಸತ್ಯಾಗ್ರಹ ಭವನ ನಿರ್ಮಾಣವಾಯಿತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಅನುದಾನ ನೀಡಿ ಇಡೀ ಪ್ರದೇಶ ಮತ್ತು ಭವನವನ್ನು ಅಭಿವೃದ್ಧಿ ಪಡಿಸಲಾಯಿತು. ಬೆಂಗಳೂರು- ಮೈಸೂರು ನಡುವೆ ಓಡಾಡುವ ಜನರ ಕಣ್ಮನವನ್ನು ಇಂದಿಗೂ ಸಹ ಈ ಭವನ ಸೆಳೆಯುತ್ತಿರುವುದು ವಿಶೇಷ.

ಎನ್.ಜಗದೀಶ್ ಕೊಪ್ಪ.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ