ಶನಿವಾರ, ಜನವರಿ 18, 2025

ಬೂದಿ ಲೇಪಿತ ಮಹಿಳಾ ನಾಗ ಸಾಧುಗಳ ಕಥನ

 

ಮಹಾ ಕುಂಭದಲ್ಲಿ ಬೂದಿ ಲೇಪಿತ ದೇಹ, ಭಯಾನಕ ಕೂದಲು ಮತ್ತು ಕೇಸರಿ ವಸ್ತ್ರ ಹೊಂದಿರುವ ಮಹಿಳಾ ನಾಗ ಸಾಧುಗಳು  ಈ ಬಾರಿಯ ಮಹಾ ಕುಂಭಮೇಳದಲ್ಲಿ ಗಮನ ಸೆಳೆಯುತ್ತಿದ್ದಾರೆ. ಮಹಿಳಾ ನಾಗಾ ಸಾಧುವಿನ ಪ್ರಯಾಣವು ಸರಳ ಭಕ್ತಿಯದ್ದಲ್ಲ, ಅವರ ಈ ರೂಪಾಂತರವು ಕಠಿಣ ಆಧ್ಯಾತ್ಮಿಕ ಪ್ರಯೋಗಗಳನ್ನು ಒಳಗೊಂಡಿರುತ್ತದೆ ಜೊತೆಗೆ ಆಳವಾದ ಪರಿವರ್ತನೆಯದ್ದು ಹಾಗೂ ಲೌಕಿಕ  ಪ್ರಪಂಚ ಮತ್ತು ಅದರ ಕುರಿತಾದ ಆಲೋಚನೆಯನ್ನು ತ್ಯಜಿಸುವುದು ಕಠಿಣ ಹಾದಿಯ ಜೊತೆಗೆ ಮುಖ್ಯವಾಗಿರುತ್ತದೆ.     ಸನ್ಯಾಸಿಯಾಗುವ ಮೊದಲು, ಆಕೆ ಮಹಿಳೆ, ಹೆಂಡತಿ, ತಾಯಿ, ಮಗಳಾಗಿರುತ್ತಾಳೆ.  ನಂತರ  ಮನೆ , ಭೂಮಿಯ , ಕುಟುಂಬ  ಮತ್ತು ಸಂತೋಷವನ್ನು ಬಿಟ್ಟು ಶಿವನಿಗೆ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಳ್ಳುತ್ತಾಳೆ.

 


ಮಹಿಳಾ ನಾಗಾ ಸಾಧುಗಳಿಗೆ ದೀಕ್ಷಾ ಪ್ರಕ್ರಿಯೆಯು ಪುರುಷ ಸಹವರ್ತಿಗಳಿಗೆ ಇರುವಂತೆಯೇ ಕಠಿಣವಾಗಿರುತ್ತದೆ.  ನಾಗ ಸಾಧ್ವಿಣಿಯ ಹೆಸರಿನಲ್ಲಿ ಸನ್ಯಾಸತ್ವ ಸ್ವೀಕರಿಸುವ ಮೊದಲು ಅವರು ತಮ್ಮ ಗುರುಗಳಿಗೆ ಅಚಲವಾದ ಸಮರ್ಪಣೆಯನ್ನು ಪ್ರದರ್ಶಿಸಬೇಕು ಮತ್ತು ತೀವ್ರವಾದ ಆಧ್ಯಾತ್ಮಿಕ ಪ್ರಯೋಗಗಳು ಮತ್ತು ತರಬೇತಿಯನ್ನು ಸಹಿಸಿಕೊಳ್ಳಬೇಕು. ಹಾದಿಯಲ್ಲಿ ಮೊದಲ ಹೆಜ್ಜೆ ಸ್ವಯಂ ತ್ಯಜಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ . ಅಹಂ, ಆಸೆಗಳು ಮತ್ತು ತಮ್ಮ ಗುರುತನ್ನು ಅಳಿಸು ಹಾಕುವುದರ ಜೊತೆಗೆ ಮರೆಯಬೇಕಾಗುತ್ತದೆ.

 ಮಹಿಳಾ ನಾಗಾ ಸಾಧುಗಳು ದೀಕ್ಷೆ ಪಡೆಯುವ ಮೊದಲು ಆರರಿಂದ ಹನ್ನೆರಡು ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯಕ್ಕೆ ಒಳಗಾಗುತ್ತಾರೆ ಮತ್ತು ಅವರಲ್ಲಿ ಅನೇಕರು ದೂರದ ಗುಹೆಗಳು, ಕಾಡುಗಳು ಅಥವಾ ಪರ್ವತಗಳನ್ನು ಆಶ್ರಯಿಸುತ್ತಾರೆ. ಕಟ್ಟುನಿಟ್ಟಾದ ಆಚರಣೆಗಳನ್ನು ಅನುಸರಿಸುತ್ತಾರೆ.  ಪುರುಷಸಾಧುಗಳಿಗಿಂತ ಭಿನ್ನವಾಗಿ  "ಗಂಟಿ" ಎಂಬ ಹೊಲಿಯದ ಕೇಸರಿ ಬಟ್ಟೆಯನ್ನು ಧರಿಸುತ್ತಾರೆ ಮತ್ತು ಅವರ ಹಣೆಯ ಮೇಲೆ ತಿಲಕ ಧರಿಸುತ್ತಾರೆ. ತಮ್ಮ ತ್ಯಾಗದ ಭಾಗವಾಗಿ, ಅವರು ತಮ್ಮದೇ ಆದ 'ಪಿಂಡ ದಾನ'ವನ್ನು ಮಾಡುತ್ತಾರೆ - ಇದು ಅವರ ಹಳೆಯ ಜೀವನದ ಮರಣ ಮತ್ತು ಸನ್ಯಾಸಿಗಳಾಗಿ ಪುನರ್ಜನ್ಮವನ್ನು ಸಂಕೇತಿಸುವ ಆಚರಣೆಯಾಗಿದೆ.  ನಾಗ ಸಾಧುಗಳು ಬೇರುಗಳು, ಹಣ್ಣುಗಳು, ಗಿಡಮೂಲಿಕೆಗಳು, ಹಣ್ಣುಗಳು ಮತ್ತು ಹಲವು ರೀತಿಯ ಎಲೆಗಳನ್ನು ತಿನ್ನುತ್ತಾರೆ. ಅದೇ ರೀತಿ, ಮಹಿಳಾ ನಾಗ ಸಾಧ್ವಿಣಿಯರು  ಸಹ ಅದನ್ನೇ ತಿನ್ನಬೇಕು. ಕುಂಭ ಮೇಳದ ಅಖಾಡಗಳಲ್ಲಿ ಮಹಿಳಾ ತಪಸ್ವಿಗಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ.  ಪುರುಷ ನಾಗ ಸಾಧುವಿನ ನಂತರ ಮಹಿಳಾ ನಾಗ ಸಾಧುಗಳು ಸ್ನಾನ ಮಾಡಲು ಹೋಗುತ್ತಾರೆ.  ಅಖಾಡದಲ್ಲಿ, ನಾಗ ಸಾಧ್ವಿಗಳನ್ನು ಮಾಯಿ, ಅವಧೂತನಿ ಅಥವಾ ನಾಗಿಣಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

 ಒಂದು ಅಂದಾಜಿನ ಪ್ರಕಾರ  ವಾರ್ಷಿಕವಾಗಿ ಹತ್ತರಿಂದ ಹನ್ನೆರೆಡು ಸಾವಿರ ಮಂದಿ ಪುರುಷ ಮಹಿಳೆಯರು ( ಇದರಲ್ಲಿ ವಿದೇಶಿಯರು ಸೇರಿ) ನಾಗ ಸಾಧು ಮತ್ತು ಸಾಧ್ವಿಯಾಗಿ ಪರಿವರ್ತನೆ ಹೊಂದುತ್ತಿದ್ದಾರೆ.  ಜುನಾ ಅಖಾಡದ ಅಂತರರಾಷ್ಟ್ರೀಯ ವಕ್ತಾರ ಶ್ರೀಮಹಾಂತ್ ನಾರಾಯಣ್ ಗಿರಿ, ಜುನಾ ಅಖಾಡದಲ್ಲಿ ಸುಮಾರು ಐದು ಸಾವಿರ ಹೊಸ ನಾಗ ಸನ್ಯಾಸಿಗಳನ್ನು ತಯಾರಿಸಲಾಗುವುದು ಎಂದು ಹೇಳಿದ್ದಾರೆ. ನಿರಂಜನಿ ಅಖಾಡದಲ್ಲಿ ಸುಮಾರು ನಾಲ್ಕೂವರೆ ಸಾವಿರ ಹೊಸ ನಾಗ ಸನ್ಯಾಸಿಗಳನ್ನು  ಮಾಡುವ ಯೋಹನೆ ಜಾರಿಯಲ್ಲಿದೆ. ಅದೇ ರೀತಿ  ಆವಾಹನ್ ಅಖಾಡದಲ್ಲಿ ಒಂದು ಸಾವಿರ, ಮಹಾನಿರ್ವಾಣಿ ಅಖಾಡದಲ್ಲಿ ಮುನ್ನೂರು, ಆನಂದ್ ಅಖಾಡದಲ್ಲಿ ನಾನೂರು ಮತ್ತು ಅಟಲ್ ಅಖಾಡದಲ್ಲಿ ಇನ್ನೂರು ಜನರನ್ನು ನಾಗ ಸಾಧುಗಳನ್ನಾಗಿ ಮಾಡಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾ  ವರದಿ ಮಾಡಿದೆ.

ನಾಗ ಸಾಧುಗಳು ವರ್ಷವಿಡೀ ತಮ್ಮ ಯೋಗ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಮುಳುಗಿರುತ್ತಾರೆ ಮತ್ತು ಕುಂಭದ ಸಮಯದಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.  ಅವರು ನಾಲ್ಕು ಕೇಂದ್ರಗಳಾದ ಪ್ರಯಾಗ್ರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ಗಳಲ್ಲಿ ನಡೆಯುವ ಎಲ್ಲಾ ಕುಂಭಗಳಲ್ಲಿ ಭಾಗವಹಿಸುತ್ತಾರೆ. ಶಾಹಿ ಸ್ನಾನದ ಸಮಯದಲ್ಲಿಯೂ ಸಹ ಅವರು ಅಪಾರ ಉತ್ಸಾಹದಿಂದ ತ್ರಿವೇಣಿ ಸಂಗಮದ ಹಿಮಾವೃತ ನೀರನ್ನು ಪ್ರವೇಶಿಸುವಾಗ, ಅತೀಂದ್ರಿಯ ಆನಂದದಲ್ಲಿ ಪರಸ್ಪರ ನೀರನ್ನು ಸಿಂಪಡಿಸುವಾಗ ಅವರ ವಿಶಿಷ್ಟ ಶೈಲಿ ಎದ್ದು ಕಾಣುತ್ತದೆ. ಪುರುಷ ಸಾಧುಗಳಂತೆಯೇ, ಮಹಿಳಾ ನಾಗಾ ಸಾಧುಗಳು ಸಹ ಅಚಲ ನಂಬಿಕೆ, ಭಕ್ತಿ ಮತ್ತು ಸಮರ್ಪಣೆಯನ್ನು ಪ್ರತಿನಿಧಿಸುತ್ತಾರೆ. ಅವರ ಪಾಲಿಗೆ  ಕುಂಭಮೇಳದ ಸ್ನಾನವು ಮರ್ತ್ಯ ಮತ್ತು ದೈವಿಕತೆಯ ವಿಲೀನ ಮತ್ತು ಅಜ್ಞಾತ ಲೋಕಕ್ಕೆ  ಪ್ರಯಾಣವಾಗಿರುತ್ತದೆ

 

ಮಾಹಿತಿ ಹಾಗೂ ಚಿತ್ರಗಳು- ಇಂಡಿಯಾ ಟುಡೆ.

ಕನ್ನಡಕ್ಕೆ- ಎನ್.ಜಗದೀಶ್ ಕೊಪ್ಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ