ಭಾನುವಾರ, ಮಾರ್ಚ್ 8, 2015

ಕೆ.ಎಸ್. ನ. ಅವರ ಕವಿತೆಗಳಗುಚ್ಚ " ಹೂಬುಟ್ಟಿ" ಯ ನೆಪದಲ್ಲಿ ಕನ್ನಡ ಕಾವ್ಯ ಕುರಿತು ಒಂದಿಷ್ಟು ನೆನಪುಗಳು.



ಕಳೆದ ಪೆಬ್ರವರಿ 22 ರಂದು ಧಾರವಾಡ ದಿಂದ ಮೈಸೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ,   ಚನ್ನರಾಯಪಟ್ಟಣ ದಾಟಿ ಕಿಕ್ಕೇರಿಗೆ ಬಸ್ ಬರುತ್ತಿದ್ದಂತೆ ನನ್ನ ನೆಚ್ಚಿನ ಕವಿ ಕೆ.ಎಸ್. ನರಸಿಂಹಸ್ವಾಮಿ ನೆನಪಾದರು. ಅವರು ಹುಟ್ಟಿ ಬೆಳೆದ ಮನೆಯ ಹಾಗೂ ಬ್ರಾಹ್ಮಣರ ಬೀದಿಯನ್ನೊಮ್ಮೆ ಬಸ್ ನ ಕಿಟಿಕಿಯಲ್ಲಿ ನೋಡುತ್ತಾ, ಕೆ.ಆರ್. ಪೇಟೆಯವರೆಗೆ ಅವರ ಬಗ್ಗೆ ಯೋಚಿಸುತ್ತಾ ಬಂದಿದ್ದೆ. ಅದೇ ದಿನ ಮಧ್ಯಾಹ್ನ ಮಂಡ್ಯ ನಗರದಲ್ಲಿ ಬೇಟಿಯಾದ  ಕಿರಿಯ ಮಿತ್ರ ರಾಜೇಂದ್ರ ಪ್ರಸಾದ್ ನನಗೆ ಕೆ.ಎಸ್. ನ. ಕವಿತೆಗಳ ಕುರಿತು ಯುವ ಮನಸ್ಸುಗಳ ಬರೆದಿರುವ ಲೇಖನಗಳನ್ನು ಒಳಗೊಂಡ “ಹೂಬುಟ್ಟಿ” ಹಾಗೂ ತನ್ನ ನಾಲ್ಕನೆಯ ಕವನ ಸಂಕಲನ “ ಕೋವಿ ಮತ್ತು ಕೊಳಲನ್ನು” ಉಡುಗೊರೆಯಾಗಿ ನೀಡಿದ್ದು ಕಾಕತಾಳಿಯವಾಯಿತು. ವಾಸ್ತವವಾಗಿ ನನ್ನ ಮತ್ತು ರಾಜೇಂದ್ರಪ್ರಸಾದ್ ನಡುವೆ ಅದು ಮೊದಲ ಮುಖಾ ಮುಖಿ ಬೇಟಿಯಾಗಿತ್ತು. ಕಳೆದ ಐದು ವರ್ಷಗಳಿಂದ ಫೇಸ್ ಬುಕ್ ಮೂಲಕ ಪರಿಚಯಾಗಿ ಮಂಡ್ಯ ನಗರದಲ್ಲಿದ್ದರೂ, ಸಹ ಇಬ್ಬರೂ ಬೇಟಿಯಾಗಿರಲಿಲ್ಲ. ನಾನು ರಾಜೇಂದ್ರಪ್ರಸಾದ್ 34 ಅಥವಾ 35 ವರ್ಷದ ಯುವ ಲೇಖಕ ಭಾವಿಸಿದ್ದೆ. ರಾಜೇಂದ್ರನ ವಯಸ್ಸು ಆಜು ಬಾಜು ನನ್ನ ಮಗನ ವಯಸ್ಸು. ಅಂದರೆ ಕೇವಲ 28 ವರ್ಷ ವಯಸ್ಸು. ಇಷ್ಟು  ಚಿಕ್ಕ ವಯಸ್ಸಿಗೆ ರಾಜೇಂದ್ರ ಪ್ರಸಾದ್, ಕಾವ್ಯ, ಸಂಗೀತ, ಇತಿಹಾಸ, ತತ್ವ ಜ್ಞಾನ, ಸೂಫಿ ಕಾವ್ಯ, ಜಾನಪದ ಸಂಗೀತ ಇವುಗಳ  ಕುರಿತ  ಆಸಕ್ತಿ ಬೆಳಸಿಕೊಂಡಿರಿವ ಸಂಗತಿಗಳು ನನ್ನನ್ನುವಿಸ್ಮಯಕ್ಕೆ ದೂಡಿವೆ. ಮಾತು ಮತ್ತು  ಕೃತಿಯಲ್ಲಿ ಕೃತಿಮತೆಯಿಲ್ಲದ ರಾಜೇಂದ್ರ ಪ್ರಸಾದ್, ಕನ್ನಡ ಕಾವ್ಯ ಕ್ಷೇತ್ರದಲ್ಲಿ ಗಂಭಿರವಾಗಿ ತೊಡಗಿಸಿಕೊಂಡಿರುವ ಪರಿಗೆ ಕೆ.ಎಸ್.ನ. ಶತಮಾನೋತ್ಸವದ ನೆನಪಿಗೆ ತನ್ನ ಸಂಪಾದಕೀಯದಲ್ಲಿ ಹೊರ ತಂದಿರುವ “ ಹೂ ಬುಟ್ಟಿ” ಕೃತಿ ಸಾಕ್ಷಿಯಾಗಿದೆ. ಸುಮಾರು ಮುವತ್ತು ಮಂದಿ ಯುವ ಲೇಖಕ-ಲೇಖಕಿಯರು ಕೆ.ಎಸ್. ನ. ಅವರ ಕವಿತೆಗಳನ್ನು ಹೊಸ ಬಗೆಯಲ್ಲಿ ವಿಶ್ಲೇಷಿಸಿದ್ದಾರೆ. ಜೊತೆಗೆ ನನ್ನ ಗೆಳೆಯ ರವಿಬೆಳೆಗೆರೆ ಮತ್ತು ಜೋಗಿ ಒಳಗೊಂಡಂತೆ ಹಲವರ ಮೌಲಿಕ ಬರಹಗಳು ಈ ಕೃತಿಯಲ್ಲಿ ಅಡಕವಾಗುವುದರ ಮೂಲಕ ಕೃತಿಯ ಮೌಲ್ಯವನ್ನು  ಮತ್ತಷ್ಟು ಹೆಚ್ಚಿಸಿವೆ.


1970 ರ ದಶಕದಲ್ಲಿ ಕನ್ನಡದ ನವ್ಯ ಕಾವ್ಯ ಮತ್ತು ಸಾಹಿತ್ಯ  ಈ ಎರಡೂ ಉತ್ತುಂಗದಲ್ಲಿ ಇದ್ದ ಸಂದರ್ಭದಲ್ಲಿ ಪಾಶ್ಚಿಮಾತ್ಯ ಕಾವ್ಯದಿಂದ ಎರವಲು ಪಡೆದ  ಅಸಂಗತ  ಕಾವ್ಯ ಗಳ ಪರಿಕಲ್ಪನೆಯಲ್ಲಿ ಕನ್ನಡದಲ್ಲಿಯೂ ಸಹ  ಒಂದಿಷ್ಟು ಕಾವ್ಯ ರಚನೆಯಾಗಿತ್ತು. ಕನ್ನಡ ನವೋದಯ ಕಾವ್ಯವವನ್ನು ಸಾರಾಸಗಟಾಗಿ ತಿರಸ್ಕರಿಸುವ ಭರದಲ್ಲಿ ಕೆಲವು ಕವಿತೆಗಳು ಸಹ ಸೃಷ್ಟಿಯಾಗಿದ್ದವು. ಚಂದ್ರಕಾಂತ ಕುಸುನೂರು ಬರೆದ
                           ಕತ್ತಲೆಯಲ್ಲಿ ಬೆತ್ತಲೆ ತಿರುಗುವ
                           ನಮ್ಮ ಕಾವ್ಯ ಕನ್ನಿಕೆಗೊಂದು
                           ಬೆಳಕಿನ ಸೀರೆ ತರುವುದಿದೆ
                           ಬರುವಿರಾ?
ಎಂಬ ಕವಿತೆಯೂ ಈ ಸಂದರ್ಭದಲ್ಲಿ  ಮುಖ್ಯವಾಗಿತ್ತು. ಆದರೆ, ನವ್ಯದ ಹಂಗಿಲ್ಲದೆ, ಬದುಕಿ, ಕಾವ್ಯ ಬರೆಯುತ್ತಲೇ ಹೋದ   ನಮ್ಮ ಕೆ.ಎಸ್. ನರಸಿಂಹ ಸ್ವಾಮಿ, ಚನ್ನವೀರ ಕಣವಿ, ಪು.ತಿ.ನ. ಕೆ.ಎಸ್. ನಿಸಾರ್ ಅಹಮ್ಮದ್, ಜಿ.ಎಸ್.ಶಿವರುದ್ರಪ್ಪ, ಸು.ರಂ. ಯಕ್ಕುಂಡಿ  ಮುಂತಾದವರು ಕನ್ನಡ ಕಾವ್ಯ ಕನ್ನಿಕೆಗೆ ಸದಾ ಬೆಳಕಿನ ಸೀರೆ ಉಡಿಸುತ್ತಾ  ಆಕೆಯನ್ನು ಜೀವಂತವಿಟ್ಟಿದ್ದರು.
ಕನ್ನಡ ಕಾವ್ಯ ಲೋಕದಲ್ಲಿ ಕಾವ್ಯ ಪ್ರೇಮಿಗಳಷ್ಟೇ ಅಲ್ಲದೆ, ಜನಸಾಮಾನ್ಯರ ಎದೆಯಲ್ಲೂ ಸಹ ಬೇಂದ್ರೆ ಮತ್ತು ಕೆ.ಎಸ್.ನ. ಕವಿತೆಗಳು ಸದಾ ಹಸಿರಾಗಿವೆ. ಜೊತೆಗೆ ಈ ಇಬ್ಬರೂ ಕವಿಗಳು ಕಾವ್ಯಕ್ಕೆ ವಸ್ತುವಾಗುವ ವಿಷಯವಲ್ಲ ಎಂದು ಕನ್ನಡ ಕಾವ್ಯ ಜಗತ್ತು ತಿರಸ್ಕರಿಸಿದ ಸಾಮಾನ್ಯ ಸಣ್ಣ ಸಂಗತಿಗಳನ್ನು ಇಟ್ಟುಕೊಂಡು ಕಾವ್ಯ ರಚನೆ ಮಾಡಿದವರು. ಅಲ್ಲದೆ ಇತರೆ ಕನ್ನಡದ ಕವಿಗಳಿಗಿಂತ ಹೆಚ್ಚಾಗಿ ತಮ್ಮನ್ನು ತಾವು ಹೆಣ್ಣಾಗಿ ಪರಿಭಾವಿಸಿಕೊಂಡು ಅತ್ಯುತ್ತಮ ಕವಿತೆಗಳನ್ನು ರಚಿಸಿದವರು.
ನವ್ಯದ ಕಾಲಘಟ್ಟದಲ್ಲಿ ಇತರೆ ಕವಿಗಳಿಗಿಂತ ಅತ್ಯಂತ ಹೆಚ್ಚು ಲೇವಡಿಗೆ ಒಳಗಾದವರು ಕೆ.ಎಸ್.ನ. ಇದನ್ನು ಮೀರಲೆಂಬಂತೆ ಅವರು ತೆರೆದ ಬಾಗಿಲು ಮತ್ತು ಶಿಲಾಲತೆ ಎಂಬ ಎರಡು ಸಂಕಲನಗಳನ್ನು ಹೊರ ತರುವುದರ ಮೂಲಕ ನವ್ಯರ ಬಾಯಿಯನ್ನು ಮುಚ್ಚಿಸಿದ್ದರು. ದಾಂಪತ್ಯವನ್ನು , ಮಧ್ಯಮ ವರ್ಗದ ಭಾವನೆಗಳನ್ನು ಅವರಷ್ಟೂ ಪರಿಣಾಮಕಾರಿಯಾಗಿ ಕಾವ್ಯದಲ್ಲಿ ತಂದವರು ಮತ್ತೊಬ್ಬರಿಲ್ಲ ಎಂದರೆ, ಉತ್ಪೇಕ್ಷೆಯಾಗಲಾರದು. ಅವರನ್ನು ಕನ್ನಡದ ಕಾವ್ಯ ಜಗತ್ತು “ಮಲ್ಲಿಗೆಯ ಕವಿ” ಎಂದು ಹಾಡಿ ಹೊಗಳಿದೆ. ಅದೇ ರೀತಿ ನವ್ಯ ಸಾಹಿತ್ಯ “ ಪುಷ್ಪ ಕವಿಯ ಪರಾಕು” ಎಂದು ಸಹ ಗೇಲಿ ಮಾಡಿದೆ.  ಮಲ್ಲಿಗೆ ಮೊಗ್ಗುಗಳನ್ನು ಹೂಮಾಲೆಯಾಗಿ ಕಟ್ಟುವ ಹೂವಾಡಿಗನಿಗೆ ಮಾತ್ರ ಗೊತ್ತು ಅದರ ನಿಜವಾದ ಕಷ್ಟ. ಇತರೆ ಹೂಗಳಂತೆ ಮಲ್ಲಿಗೆ ಮಾಲೆಯನ್ನು ಸರಾಗವಾಗಿ ಕಟ್ಟಲಾಗದು.  ಈ ಕಾರಣಕ್ಕೆ ಅವರ ಹೃದಯಾಂತರಾಳದಿಂದ ‘ ಹಿಂಡ ಬಾರದು ದುಂಡು ಮಲ್ಲಿಗೆಯನು; ಒಣಗಬಾರದು ಒಡಲ ಚಿಲುಮೆ” ಎಂಬ ಕಾವ್ಯದ ಸಾಲುಗಳು ಸೃಷ್ಟಿಯಾಗಲು ಸಾಧ್ಯವಾಯಿತು. ನನ್ನ ಗೆಳೆಯ ರವಿ ಬೆಳೆಗೆರೆ  ಕೆ.ಎಸ್. ನ. ಕುರಿತಂತೆ  ನೆನಪಿನಲ್ಲಿಡುವ ಮಾತುಗಳನ್ನು   ಪರಿಣಾಮಕಾರಿಯಾಗಿ  ಹೀಗೆ ದಾಖಲಿಸಿದ್ದಾನೆ.



“ಹೊರಗೆ ಇದೆಲ್ಲಾ ಗಲಿಬಿಲಿ ನಡೆಯುತ್ತಿದ್ದರೂ ಒಳಗೆ ತೂಗೂಯ್ಯಾಲೆಯ ಮೇಲೆ ಕುಳಿತು ತಮ್ಮ ಪಾಡಿಗೆ ತಾವು “ ಮನೆಯ ಹಾಡುಗಳನ್ನು ಕೆ.ಎಸ್. ನರಸಿಂಹಸ್ವಾಮಿ ಬರೆಯುತ್ತಲೇ ಹೋದರು. ಹೆಣ್ಣು, ಅವಳ ಕಣ್ಣು, ಅವಳ ಮನಸ್ಸು, ಜೋಯಿಸರ ಕರು, ಹೆಂಡತಿಯ ಮುಟ್ಟು, ದಿಂಬಿನ ಚಿತ್ತಾರ, ಒಳಮನೆಯ ಬಡತನ, ಅದನ್ನು ಮರೆಸುವ ಪ್ರೀತಿ, ಎರಡೇ ಎರಡು ಹಲ್ಲು ಬಂದ ಹನುಮಂತನಂಥ ಮುದ್ದು ಮಗು, ಅವಳ ಮೂಗೂತಿಯ ತಿರುಪು, ಅಕ್ಕಿ ನುಚ್ಚಿನ ನಡುವೆ ಸರಿದಾಡುವ ಬಲಗೈ, ಇವುಗಳ ಸುತ್ತುತ್ತಲೇ ಅಲೆಯಿತು ನರಸಿಂಹಸ್ವಾಮಿಯವರ ಕಾವ್ಯ. ಪ್ರತಿ ಸಲವೂ ಮನುಷ್ಯನಿಗೆ ಮನೆಯ ನೆನಪು ಮಾಡಿಕೊಟ್ಟಿತು ಮಲ್ಲಿಗೆಯ ಕಾವ್ಯ.
ನಮಗೆ ಕ್ರಾಂತಿ ಗೀತೆ ಬರೆದು ಕೊಟ್ಟವರು ಬೇಕಾದಷ್ಟು ಇದ್ದಾರೆ. ಅರ್ಥವಾಗದ ಹಾಗೆ ಕವಿತೆ ಬರೆದಿಟ್ಟು, ಅದಕ್ಕೆ ಅರ್ಥ ಬರೆಸಿ ಓದಲು ಬಿಟ್ಟವರೂ ಇದ್ದಾರೆ. ಮಹಾನ್ ಕ್ರಾಂತಿಕಾರಿಗಳು ವಿಧಾನಸೌಧದ ಕಟಾಂಜನದ ಮುಂದೆ ಬೋರಲು ಮಲಗಿದ್ದನ್ನು ನಾವು ನೋಡಿದ್ದೇವೆ. ಜ್ಞಾನಪೀಠಿಗಳ ಭಾಷಣಗಳು ಇವತ್ತಿಗೂ, ನಾಳೆಗೂ ಉಲ್ಟಾ ಹೊಡೆದದ್ದನ್ನು ನೊಡಿದ್ದೀವಿ. ಸಾಕು ನಮ್ಮ ಮಿದುಳು ತುಂಬಿದೆ. ನಮಗೆ ಬೇಕಾದ್ದು ಹೆಂಡತಿಯೊಂದಿಗೆ ಕೂತು ಹಾಡಿಕೊಂಡು ಹಗುರಾಗಬಲ್ಲ ಒಂದು ನಿತ್ಯಗೀತೆ. ಅದನ್ನು ಬದುಕಿನುದ್ದಕ್ಕೂ ಬರೆದುಕೊಟ್ಟವರು ನರಸಿಂಹಸ್ವಾಮಿ. ಅವರಿಗೆ ನಾವು ಋಣಿ.
ಕಳೆದ ವಾರ ಮೈಸೂರು ನಗರದಲ್ಲಿದ್ದೆ. ಮೈಸೂರು ಮುಕ್ತ ವಿ.ವಿ. ಸಹಯೋಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ದಲಿತ ಹಾಗೂ ಹಿಂದುಳಿದ ಯುವ ಲೇಖಕರಿಗೆ ಮೂರು ದಿನಗಳ ಕಮ್ಮಟವನ್ನು ಹಮ್ಮಿಕೊಂಡಿತ್ತು. ಕೊನೆಯ ನನ್ನ ಮಿತ್ರರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್ ಹನುಮಂತಯ್ಯನವರ ಸಮಾರೋಪ ಭಾಷಣವಿತ್ತು. ಹಾಗಾಗಿ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೆ. ಹನುಮಂತಯ್ಯನವರು ಮಾತನಾಡುತ್ತಾ, ಇತ್ತೀಚೆಗೆ ಪ್ರಕಟವಾಗುವ ನಾಲ್ಕೈದು ಸಾವಿರ ಕನ್ನಡ ಕೃತಿಗಳಲ್ಲಿ ಶೇಕಡ 75 ರಷ್ಟು ಜೊಳ್ಳು ಸಾಹಿತ್ಯ. ಅದನ್ನು ಗ್ರಂಥಾಲಯಕ್ಕೆ ತುಂಬುವ ಕೆಲಸ ನಡೆಯುತ್ತಿದೆ ಎಂದರು. ಇದಕ್ಕಿಂತ ಮುಖ್ಯವಾಗಿ ಕಳೆದ ಎರಡು ದಶಕಗಳಿಂದ  ಕನ್ನಡ ಸಾಹಿತ್ಯ ವಿಮರ್ಶೆ ಎಂಬುದು ನಿಂತ ನೀರಾಗಿದೆ ಎಂದು ಅಭಿಪ್ರಾಯ ಪಟ್ಟರು. ಕಳೆದ ಒಂದು ವರ್ಷದಿಂದ ನಾನು ಯೋಚಿತ್ತಿದ್ದ ವಿಷಯವನ್ನು ಅವರು ಬಹಿರಂಗಗೊಳಿಸಿದ್ದು ನನಗೆ ಅಚ್ಚರಿಯಾಯಿತು. ಕಾವ್ಯಕ್ಕೆ ಸೀಮಿತವಾಗಿರಿಸಿಕೊಂಡು, ಈ ಮಾತನ್ನು ನಾನು ಗಂಭೀರವಾಗಿ ಆಲೋಚಿಸುತ್ತಿದ್ದೇನೆ.

                                                ( ರಾಜೇಂದ್ರ ಪ್ರಸಾದ್)

ನನ್ನ ಕಾಲೇಜು ದಿನಗಳಲ್ಲಿ “ ಹೌದು ಕಣೇ ಉಷಾ ನಾವು ಹುಡುಗಿಯರೇ ಹೀಗೆ” ಕವಿತೆ ಬರೆದು ಬೆಚ್ಚಿ ಬೀಳಿಸಿದ ಪ್ರತಿಭಾ ನಂದ ಕುಮಾರ್, ದ್ರೌಪತಿಯ ಸ್ವಗತ ಕವಿತೆ ಬರೆದ ಸರಸ್ವತಿ ಗೌಡ ಇವರನ್ನು ಒಳಗೊಂಡಂತೆ, ಲಲಿತಾ ಸಿದ್ದಬಸವಯ್ಯ, ಹೆಚ್.ಎನ್.ಆರತಿ, ಹೆಚ್.ಎಲ್. ಪುಷ್ಪ, ರೂಪಾ ಹಾಸನ, ನಮ್ಮನ್ನಗಲಿದ ವಿಭಾ, ಎಂ.ಆರ್.ಕಮಲ,  ಸುಬ್ಬು ಹೊಲೆಯಾರ್, ವಿಕ್ರಂ ವಿಸಾಜಿ, ಪೀರ್ ಬಾಷಾ, ಚಂದ್ರು ತುರುವಿಹಾಳ್, ಬಿ.ಶ್ರೀನಿವಾಸ, ವಿಜಯಕಾಂತಪಾಟೀಲ, ಅರುಣ್ ಜೋಳದ ಕೂಡ್ಲಿಗಿ, ವೀರಣ್ಣ ಮಡಿವಾಳರ, ದೊಡ್ಡ ಆಲೂರು ನಿಂಗಪ್ಪ, ಬಿ.ರಾಜಣ್ಣ, ಹೀಗೆ ಅನೇಕ ಕವಿ ಮತ್ತು ಕವಿಯತ್ರಿಯರಿಗೆ ಮತ್ತು ಅವರ ಕವಿತೆಗಳಿಗೆ  ಕನ್ನಡ ವಿಮರ್ಶಾ ಲೋಕದಲ್ಲಿ ಸೂಕ್ತವಾದ ನ್ಯಾಯ ದೊರಕಿಲ್ಲ ಎಂಬುದು ನನ್ನ ಧೃಡ ನಂಬಿಕೆ.
ಹೌದು, ಒಬ್ಬ ನಿಜವಾದ ಸಶಕ್ತನಾದ  ಕವಿಗೆ ವಿಮರ್ಶೆ ಅಥವಾ ಪ್ರಶಸ್ತಿ, ಬಿರುದು ಬಾವಲಿಗಳೆಂಬ ಯಾವ ಉಪಾಧಿಗಳು ಬೇಕಿಲ್ಲ. ಇದನ್ನು ನಂಬಿ ಬದುಕಿದವರು ಕವಿ. ಕೆ.ಎಸ್.ನರಸಿಂಹಸ್ವಾಮಿಯವರು. ಅವರು ಎಷ್ಟೋ ಬಾರಿ ನಮ್ಮ ಸಿಟ್ಟು, ಆಕ್ರೋಶಗಳಿಗೆ ತಂಗಾಳಿಯಾಗುತ್ತಾರೆ. ನರಸಿಂಹಸ್ವಾಮಿಯವರು ಒಮ್ಮೆ ಹೇಳಿಕೊಂಡಿದ್ದ ಈ ಅನುಭವವನ್ನು ನಾನು ಮರೆತಿಲ್ಲ. ಅವರು ಒಮ್ಮೆ ಮೈಸೂರು ನಗರದಲ್ಲಿ ನಗರ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಕುರುಡ ಬಿಕ್ಷುಕನೊಬ್ಬ ‘ ಬಳೆಗಾರ ಚನ್ನಯ್ಯನ ಗೀತೆ ಹಾಡಿಕೊಂಡು ಅವರ ಬಳಿ ಬಂದ. ಆತನ ಕೈಗೆ ಎಂಟಾಣೆಯನ್ನು ಕೊಟ್ಟ ನರಸಿಂಹಸ್ವಾಮಿಯವರು, ಆತನನ್ನು “ ಈ ಹಾಡು ಯಾರದಪ್ಪ? ಎಂದು ಕೇಳಿದರು. ಅದಕ್ಕೆ ಕುರುಡ ನೀಡಿದ ಉತ್ತರ ಹೀಗಿತ್ತು. “ ಗೊತ್ತಿಲ್ಲ ಸ್ವಾಮಿ, ಈ ಹಾಡು ಹಾಡಿದರೆ ನನ್ನ ಅಂಗೈಗೆ ನಾಲ್ಕು ಕಾಸು ಹೆಚ್ಚಿಗೆ ಬೀಳ್ತದೆ”
ತನ್ನ ಒಂದು ಕವಿತೆಯೊಂದು ಅನಾಥ ಜೀವಕ್ಕೆ ಅನ್ನ ದೊರಕಿಸಿಕೊಡುವುದನ್ನು ಹಾಗೂ ಕುರುಡ ಬಿಕ್ಷುಕುನ  ಮಾತನ್ನು ಸದಾ ಸ್ಮರಿಸಿಕೊಳ್ಳುತ್ತಿದ್ದ ನರಸಿಂಹಸ್ವಾಮಿಯವರು, ನನಗೆ  ಮತ್ತು ನನ್ನ ಕವಿತೆಗಳಿಗೆ ಇದಕ್ಕಿಂತ ಬೇರೆ ಭಾಗ್ಯ ಬೇಡ ಎನ್ನುತ್ತಿದ್ದರು. ವರ್ತಮಾನದ ಕನ್ನಡ ಸಾಹಿತ್ಯ ಲೋಕದಲ್ಲಿ  65 ಅಥವಾ 75 ವರ್ಷ ತುಂಬುತ್ತಿಂದ್ದಂತೆ, ಪಂಪ, ನೃಪತುಂಗ, ಬಸವ, ನಾಡೋಜ ಮತ್ತು ಜ್ಞಾನ ಪೀಠ ಪ್ರಶಸ್ತಿಯ ಕನಸು ಮತ್ತು ಕನವರಿಕೆಗಳಲ್ಲಿ ಜ್ವರ ಪೀಡಿತರಾಗುವ  ಸಾಹಿತಿಗಳ ಜೊತೆ ನರಸಿಂಹ ಸ್ವಾಮಿ ಮತ್ತು ಇನ್ನೂ ಪಂಪ ಪ್ರಶಸ್ತಿ ಪಡೆಯಲಾರದ , ಸಂಕೋಚ ಪ್ರವೃತ್ತಿಯ ನಿಸಾರ್ ಅಹಮದ್ ಅವರನ್ನು ಹೋಲಿಕೆ ಮಾಡಲು ನನಗೆ ಮನಸ್ಸು ಬರುತ್ತಿಲ್ಲ.
ನರಸಿಂಹ ಸ್ವಾಮಿಯವರ ಆಯ್ದ 31  ಕವಿತೆಗಳನ್ನು ಇಟ್ಟುಕೊಂಡು ಹೂಬುಟ್ಟಿ ಕೃತಿಯಲ್ಲಿ ಕನ್ನಡದ ಆಧುನಿಕ ಮನಸ್ಸುಗಳು ವಿವೇಚಿಸಿರುವ ಬಗೆಯನ್ನು ನೊಡಿದರೆ, ಇವರು ಕನ್ನಡ ವಿಮರ್ಶೆಗೆ ಹೊಸ ಭಾಷ್ಯವೊಂದನ್ನು ಬರೆದಿದ್ದಾರೆ ಎಂದು ಅನಿಸುತ್ತದೆ.
ಡಿ.ಎಂ. ಪ್ರಶಾಂತ್ ಕುರ್ಕೆ, ಅವಿರತ ಮಾವಿನ ಕುಳಿ, ಕುಸುಮಾ ಆಯರಹಳ್ಳಿ, ಕಾವ್ಯ ಸಂತೋಷ್, ಭವಾನಿ ಲೋಕೇಶ್, ವಿಕಾಸ ನೇಗಿಲೋಣಿ, ಎಂ.ಎಸ್. ರುದ್ರಸ್ವಾಮಿ, ಸಂಯುಕ್ತ ಪುಲಿಗಲ್, ಸುಧಾ ಚಿದಾನಂದಗೌಡ, ವಿದ್ಯಾಶಂಕರ ಹರಪನಳ್ಳಿ, ಸಂತೋಷ ಕುಮಾರ್ ಎಂ.ಎಲ್ ಹೀಗೆ ಬಹುತೇಕ ಎಲ್ಲರ ಒಳ ನೋಟಗಳಲ್ಲಿ ಹೊಸತನವಿದೆ. ಅದೇ ರೀತಿ ಪ್ರತಿಭಾ ನಂದಕುಮಾರ್, ಶ್ರೀದೇವಿ ಕೆರೆಮನೆ, ಅಕ್ಷತಾ. ಶ್ರೀಧರ್ ತಾಳ್, ರಾಜೇಂದ್ರ ಪ್ರಸಾದ್, ಚಿದಂಬರ ನರೇಂದ್ರ, ಉಷಾಕಟ್ಟೆ ಇವರ ವಿವೇಚನೆಗಳಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತದೆ.
ಒಟ್ಟಾರೆ ಕೆ.ಎಸ್.ನ. ಕವಿತೆಗಳ ನೆಪದಲ್ಲಿ ಹೂಬುಟ್ಟಿ ಕೃತಿಯ ಮೂಲಕ ಕನ್ನಡ ವಿಮರ್ಶೆಗೆ ಹೊಸ ಸಾಧ್ಯತೆಯನ್ನು ತೋರಿದ ಸಂಪಾದಕ ರಾಜೇಂದ್ರ ಪ್ರಸಾದ್ ಮತ್ತು ಈ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲಾ ಯುವ ಮನಸ್ಸುಗಳು  ನಿಜಕ್ಕೂ ಅಭಿನಂದನೆ ಅರ್ಹರಾಗಿದ್ದಾರೆ.


ಇನ್ನು, ರಾಜೇಂದ್ರ ಪ್ರಸಾದ್ ಹೊರ ತಂದಿರುವ ನಾಲ್ಕನೆಯ ಸಂಕಲನ “ ಕೋವಿ ಮತ್ತು ಕೊಳಲು” ಕೃತಿಯ ಕವಿತೆಗಳನ್ನು ಓದಿದಾಗ, ಕಾವ್ಯದ ಭಾಷೆ ಮತ್ತು ಲಯಗಾರಿಕೆ ಇವುಗಳಲ್ಲಿ ತೋರಿರುವ ಪ್ರಬುದ್ಧತೆ ಮೆಚ್ಚುವಂತಹದ್ದು. ಕಾವ್ಯವನ್ನು ಅಪಾರವಾಗಿ ಪ್ರೀತಿಸುವ ಮತ್ತು ಓದುವ ನನಗೆ ಈವರೆಗೆ ರಾಜೇಂದ್ರನ ಕವಿತೆಗಳೇಕೆ ಕಣ್ಣಿಗೆ ಬೀಳಲಿಲ್ಲ ಎಂದು ಆಶ್ಚರ್ಯವಾಯಿತು. ಪತ್ರಿಕೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ತಾಣಗಳಲ್ಲಿ ರಾಜೇಂದ್ರ ಕಾವ್ಯ ಕೃಷಿಯಲ್ಲಿ ತೊಡಗಿಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು. “ ಇವತ್ತು ಕವಿತೆ ಕಟ್ಟ ಬೇಕಿರುವುದು, ಕುಣಿಯುವುದಕ್ಕಲ್ಲ; ಎದೆಯಲ್ಲಿ ಮನುಷ್ಯನನ್ನು ಮನುಷ್ಯನಾಗಿ ಉಳಿಸಿಕೊಳ್ಳಲು” ಎಂಬ ಅಪ್ಪಟ ಮನುಷ್ಯನೊಬ್ಬ ಮಾತ್ರ ಚಿಂತಿಸಬಹುದಾದ ಮಾತುಗಳನ್ನು ಬರೆದಿರುವ ರಾಜೇಂದ್ರಪ್ರಸಾದ್ ಭವಿಷ್ಯದ ಕನ್ನಡ ಕಾವ್ಯ ಜಗತ್ತಿನಲ್ಲಿ ಗಮನಿಸಲೇ ಬೇಕಾದ ಗಂಭೀರ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಹಿರಿಯ ಕವಿಯತ್ರಿ ಪ್ರತಿಭಾ ನಂದಕುಮಾರ್ ಮತ್ತು ಟಿನಾ ಶಶಿಕಾಂತ್  ತುಂಬಾ ಮೌಲಿಕವಾದ ಮಾತುಗಳನ್ನು ಈ ಸಂಕಲನಕ್ಕೆ ಬರೆದಿದ್ದಾರೆ. ಉರಿನಾಲಿಗೆ, ಮೌನ ಹೊದ್ದ  ಒಂದು ನಿಟ್ಟುಸಿರು, ತೆವರು ತಿಟ್ಟಿನ ಹಾದಿ, ಅಡ್ಡ ಪಲ್ಲಕ್ಕಿಯ ಜಂಗಮ, ಒಂದು ರಸ್ತೆ ಮತ್ತು ಹತ್ಯೆ ಯಂತಹ ಕವಿತೆಗಳು ಗಮನ ಸೆಳೆಯುತ್ತವೆ. ರಾಜೇಂದ್ರನ ಕವಿತೆಗಳಲ್ಲಿ ಅಲ್ಲಮನ ಭಾಷೆಯ ಪ್ರಭಾವ ಎದ್ದು ಕಾಣುತ್ತದೆ. ಒಮ್ಮೊಮ್ಮೆ ಕಾವ್ಯದ ಭಾಷೆಯೊಳಗೆ ಅನಪೇಕ್ಷಿತವಾಗಿ ನುಗ್ಗಿ ಬಂದಿರು ಇಂಗ್ಲೀಷ್ ಪದಗಳು, ಕಾವ್ಯದ ಭಾಷೆಗೆ ಮತ್ತು ಅದರ ಶಿಲ್ಪ ಹಾಗೂ ಬಂಧಕ್ಕೆ ಧಕ್ಕೆಯನ್ನುಂಟು ಮಾಡಿವೆ, ಇದನ್ನು ರಾಜೇಂದ್ರ ಪ್ರಸಾದ್ ಕಾವ್ಯದಲ್ಲಿ ಪ್ರತಿಭಾ ನಂದಕುಮಾರ್ ಗುರುತಿಸಿದ್ದಾರೆ. ರಾಜೇಂದ್ರ ಪ್ರಸಾದ್ ಈ ಲೋಪವನ್ನು ತಿದ್ದುಕೊಳ್ಳುವುದರ ಮೂಲಕ ತನ್ನ ಕಾವ್ಯ ಕ್ಷೇತ್ರವನ್ನು; ಸಾಮಾಜಿಕ ತಾಣಗಳ ಪರಿಧಿಯಿಂದ ಪತ್ರಿಕೆಗಳವರೆಗೂ  ವಿಸ್ತರಿಸಿಕೊಳ್ಳುವ ಅಗತ್ಯವಿದೆ.,

                        


ಮಂಗಳವಾರ, ಫೆಬ್ರವರಿ 17, 2015

ಭಗವದ್ಗೀತೆ ಮತ್ತು ಮತೀಯವಾದದ ವಿಕೃತಿಗಳು


ಹಿಂದೂ ಧರ್ಮದ ಅಲ್ಪ ಸಂಖ್ಯಾತ ಹಾಗೂ ಮೇಲ್ವರ್ಗದ ಸಮುದಾಯದ ಪಾಲಿಗೆ ಪವಿತ್ರ ಗ್ರಂಥವಾಗಿರುವ ಭಗವದ್ಗೀತೆ ಕೃತಿಯು ಕೇಂದ್ರದಲ್ಲಿ ಸಂಘಪರಿವಾರದ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವು ರೀತಿಯ ವಿವಾದಗಳಿಗೆ ಕೇಂದ್ರ ಬಿಂದುವಾಗಿದೆ. ಮೋದಿ ಸರ್ಕಾರದಲ್ಲಿ ವಿದೇಶಾಂಗ ಖಾತೆಯ ಸಚವೆಯಾಗಿರುವ ಸುಷ್ಮಸ್ವರಾಜ್ ಭಗವದ್ಗೀತೆ ಕೃತಿಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ರೂಪಿಸಲು ಬಿ.ಜೆ.ಪಿ. ಸರ್ಕಾರ ಸನದ್ಧವಾಗಿರುವ ವಿಷಯವನ್ನು ಬಹಿರಂಗಗೊಳಿಸಿದ ಮೇಲೆ ಭಗವದ್ಗೀತೆ ಮೇಲಿನ ಚರ್ಚೆ ಇದೀಗ ಮುಂಚೂಣಿಗೆ ಬಂದಿದೆ,
ಇಲ್ಲಿ ಭಗವದ್ಗೀತೆ ಗ್ರಂಥ ಮೇಲಿನ ಆರೋಪ, ಅನುಮಾನಗಳನ್ನು ಒಂದು ಬದಿಗೆ ಸರಿಸಿ; ನಾವು ಮುಖ್ಯವಾಗಿ ಹಾಕಿಕೊಳ್ಳಬೇಕಾದ ಪ್ರಶ್ನೆಯೊಂದಿದೆ. ಬಹು ಸಂಸ್ಕøತಿಯ ರಾಷ್ಟ್ರವಾದ ಭಾರತದಲ್ಲಿಬಾರತೀಯ ಸಂವಿಧಾನಎಂಬ ಗ್ರಂಥವೊಂದಿದ್ದು, ಅದು ಎಲ್ಲಾ ಭಾಷಿಕರಿಗೆ, ಎಲ್ಲಾ ಧರ್ಮೀಯರಿಗೆ ಮತ್ತು ಧರ್ಮ ಅಥವಾ ಜಾತಿಯ ಕಟ್ಟುಪಾಡುಗಳಿಲ್ಲದೆ ಸಮುದಾಯದ ಗುಂಪುಗಳಾಗಿ ಅರಣ್ಯಗಳಲ್ಲಿ ಬದುಕುತ್ತಿರುವ ಬುಡಕಟ್ಟು ಜನಾಂಗಗಳಿಗೆ ತಮಗೆ ಇಷ್ಟವಾದಂತೆ ಬದುಕಲು ¸ಂವಿಧಾನ ಬದ್ಧ  ಸಮಾನ ಅವಕಾಶವನ್ನು ನೀಡಿದೆ. ಅಲ್ಪ ಸಂಖ್ಯಾತ ಸಮುದಾಯವೊಂದರ ಆಶೋತ್ತರಗಳಿಗೆ ಅನುಗುಣವಾಗಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿಸುವ ಪ್ರಕ್ರಿಯೆಯು ಸಂವಿಧಾನ ವಿರೋಧಿಯಲ್ಲವೆ? ಒಂದು ಧರ್ಮದ ಕೃತಿಯನ್ನು ಅನ್ಯ ಧರ್ಮಿಯರ ಮೇಲೆ ಹೇರಲು ಹೊರಟಿರುವ ಪ್ರಕ್ರಿಯೆ ಧಾರ್ಮಿಕ ಭಯೋತ್ಪಾದನೆ ಅಥವಾ ಮೂಲಭೂತವಾದಿತನವೇ  ಹೊರತು ಬೇರೇನಲ್ಲ.
 ಜಾತಿ ಮತ್ತು ಧರ್ಮದ  ನೆಲೆಗಳ ಆಚೆ ನಿಂತು ಬದುಕಿದ, ವಿಶ್ವ ಮಾನವ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಚಿಂತಿಸಿದ ಅನೇಕ ಚಿಂತಕರು ಮತ್ತು ಸಾಹಿತಿಗಳು ಭಗವದ್ಗೀತೆಯನ್ನು ಪ್ರಶ್ನಿಸಿದ ಕಾರಣಕ್ಕಾಗಿ ಮತೀಯ ಭಾವನೆಗಳನ್ನು ಉದ್ದೀಪಿಸುವ ಕಾಯಕವನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ನಮ್ಮ  ಕೆಲವು ದೃಶ್ಯ ಮಾಧ್ಯಮಗಳು ಮತ್ತು ಮುದ್ರಣ ಮಾಧ್ಯಮಗಳ ಅವಹೇಳನಕ್ಕೆ ಗುರಿಯಾಗುತ್ತಿದ್ದಾರೆ. ಭಾರತದಲ್ಲೀಗ ಬಡತನ, ಹಸಿವು, ಅಜ್ಞಾನ ಮತ್ತು ಅನಕ್ಷರತೆಗಿಂತ  ಬೃಹದಾಕಾರವಾಗಿ ಬೆಳೆಯುತ್ತಿರುವ ಧಾರ್ಮಿಕ ಅಸಹನೆಯ ಭಾವನೆ ಹಾಗೂ ಮತೀಯವಾz ಇವುಗಳುÀ ಅತಿ ದೊಡ್ಡ ಸವಾಲಾಗಿವೆ. ಡಾ. ಅಂಬೇಡ್ಕರ್ ಇಲ್ಲದ ಭಾರತ ಮತ್ತು ಪಿ.ಲಂಕೇಶ್, ಪ್ರೊ. ನಂಜುಂಡಸ್ವಾಮಿ ಹಾಗೂ ಪ್ರೊ.ಕೆ. ರಾಮದಾಸ್ರಿಲ್ಲದ ಕರ್ನಾಟಕ ಇವುಗಳು ಧರ್ಮದ ಹೆಸರಿನಲ್ಲಿ ಬೆಂಕಿಯುಗುಳುವ ಮತ್ತು ಅಕ್ಷರದ ಹೆಸರಿನಲ್ಲಿ ವಿಷ ಕಕ್ಕುವ ಧಾರ್ಮಿಕ ಮೂಲಭೂತವಾದಿಗಳಿಗೆ ವೇದಿಕೆಗಳಾಗಿ ಪರಿವರ್ತನೆ ಹೊಂದಿವೆ.

ಸಾವಿರಾರು ಭಾಷೆ ಮತ್ತು ನೂರಾರು ಸಂಸ್ಕತಿ ಹಾಗೂ ಹಲವು ಧರ್ಮಗಳ ನೆಲವಾದ ಭಾರತದಲ್ಲಿ ವ್ಯಾಸ ಮುನಿ ಬರೆದ ಮಹಾಭಾರತವೊಂದೇ  ಅಂತಿಮ ಕೃತಿಯಲ್ಲ. ಅಲ್ಲದೆ, ವಾಲ್ಮೀಕಿ ಬರೆದ ರಾಮಾಯಾಣವೊಂದೇ ಪರಮ ಹಾಗೂ ಶ್ರೇಷ್ಠ ಕೃತಿಯಲ್ಲ. ಒಂದೊಂದು ಭಾಷೆಗೂ , ಒಂದೊಂದು ಸಂಸ್ಕತಿಗೂ   ಅವರದೇ ಆದ ಮಹಾಭಾರತಗಳಿವೆ. ರಾಮಾಯಣಗಳಿವೆ. ಕಾರಣಕ್ಕಾಗಿ ನಮ್ಮ ಕನ್ನಡ  ಸಾಹಿತ್ಯ ಮತ್ತು ಚಿಂತನೆಯ ಸಾಕ್ಷಿ ಪ್ರಜ್ಞೆಯಂತಿರುವ ಕುವೆಂಪು ರವರು ತಮ್ಮಕರಿಸಿದ್ಧಎಂಬ ಕಥನ ಕಾವ್ಯದಲ್ಲಿ ಹೀಗೆ ದಾಖಲಿಸಿದ್ದಾರೆ.
ಜಗಕೆಲ್ಲ ಒಂದೆ ರಾಮಾಯಣವು ಎಂಬುದದು
 ಹೆದ್ದಪ್ಪು. ಇಳೆಗೆಲ್ಲ ವಾಲ್ಮೀಕಿಯೊಬ್ಬನೇ
   ಕವಿ ಎಂಬುದು ತಪ್ಪು. ತಿರೆಗೆಲ್ಲ ಶ್ರೀರಾಮ
ನೊಬ್ಬನೇ ಎಂಬುವರು ಬೆಪ್ಪುಗಳೇ. ಹನುಮಂತ
  ರೆನಿತಿಹರು ಮಲೆಯ ಕಾಡುಗಳಲ್ಲಿ! ಒಂದೊಂದು
ಹಳ್ಳಿಯಲಿ ಒಬ್ಬೊಬ್ಬ ಜಸವಂತನಾಗದಿಹ
ವಾಲ್ಮೀಕಿ ನೆಲಸಿಹನು. ರಾಮಾಯಣಗಳಂತೂ
ಲೆಕ್ಕಕ್ಕೆ ಮಿತಿಯಿಲ್ಲ. ಕಣ್ದೆರೆದು ನೋಡಿದರೆ
ತೋರಿ ಬರುವುದು ನಿಜವು. ಒಬ್ಬೊಬ್ಬ ಗಂಡಿನಲಿ
ಶ್ರೀರಾಮನಡಗಿಹನು; ಒಬ್ಬೊಬ್ಬ ಹೆಂಡತಿಯ
ಎದೆಯೊಳಿರುವಳು ಸೀತೆ, ಇಂತಿರಲು ವಾಲ್ಮೀಕಿ
ಬರೆದಿರುವ ರಾಮಾಯಣವು ಕೋಟಿ ಕಾವ್ಯಗಳ
ಲೊಂದೆನ್ನಲತಿಶಯವೆ?
ನಮ್ಮ ಭಾರತದ ಪುರಾಣ ಕಾವ್ಯಗಳ ವಸ್ತು ಸ್ಥಿತಿ ಹೀಗಿರುವಾಗ, ನಮ್ಮ ನಡುವೆ ಬದುಕಿದ್ದ ಜಗತ್ತಿನ ಶ್ರೇಷ್ಠ ಜಾನಪದ ತಜ್ಞರಲ್ಲಿ ಒಬ್ಬರಾಗಿದ್ದ .ಕೆ. ರಾಮಾನುಜಂ ರವರು ಸಂಪಾದಿಸಿದ ದಕ್ಷಿಣ ಏಷ್ಯಾ ರಾಷ್ಟ್ರಗಳ ರಾಮಾಯಣ ಕಥನಗಳ ಕೃತಿಮುನ್ನೂರು ರಾಮಾಯಣಗಳುಎಂಬ ಕೃತಿಯು ದೆಹಲಿ ವಿಶ್ವ ವಿದ್ಯಾನಿಲಯದ ಪದವಿಗೆ ಪಠ್ಯವಾದ ಸಂದರ್ಭದಲ್ಲಿ ಪ್ರತಿಭಟಿಸಿ, ಕೃತಿಯನ್ನು ಹೊರಗಿಟ್ಟ ಧಾರ್ಮಿಕ ಮೂಲಭೂತವಾದಿ ಮನಸ್ಸುಗಳು ಇದೀಗ ಭಗವದ್ಗೀತೆ ಕುರಿತು ಮಾತನಾಡುತ್ತಿರುವುದು ವರ್ತಮಾನದ ವ್ಯಂಗ್ಯವಲ್ಲದೆ ಬೇರೇನೂ ಅಲ್ಲ.
ವ್ಯಾಸ ಮುನಿ ಬರೆದದ್ದೇ  “ಮಹಾಭಾರತಕೃತಿ ಎಂದು ನಂಬಿಕೊಂಡಿರುವ ಹಾಗೂ ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ಬೃಹಸ್ಪತಿಗಳು ನಮ್ಮ ಜನಪದರ ನಡುವೆಯೂ ಮಹಾಭಾರತ ಎಂಬ ಮೌಖಿಕ ಪಠ್ಯವೊಂದು ಅನೇಕ ಶತಮಾನಗಳ ಕಾಲ ಎದೆಯಿಂದ ಎದೆಗೆ ಹರಿದು ಬಂದಿರುವ ಸಂಗತಿಯನ್ನು ಅರಿಯಬೇಕಿದೆ. ಜಾನಪದ ತಜ್ಞ ಹಾಗೂ ಸುಶ್ರಾವ್ಯ ಕಂಠದ ನನ್ನ ಹಿರಿಯ ಮಿತ್ರರಾದ ಮೈಸೂರಿನ ಡಾ.ಪಿ.ಕೆ. ರಾಜಶೇಖರ್ ಅವರು . ನಾಲ್ಕು ಡೆಮ್ಮಿ ಆಕಾರದ ಹಾಳೆಯಲ್ಲಿ 640 ಪುಟಗಳ ಅಂದರೆ ನಾವು ಓದುವ ಪುಸ್ತಕಗಳ ಹಾಳೆ ಸೈಜಿನಲ್ಲಿ 1280 ಪುಟಗಳಲ್ಲಿ ದಾಖಲಿಸಿರುವಜನಪದ ಮಹಾಭಾರತಎಂಬ ಕೃತಿ ನಮ್ಮಲ್ಲಿ ವಿಸ್ಮಯವನ್ನುಂಟು ಮಾಡುತ್ತದೆ. ಅಪರೂಪದ ಅಲಿಖಿತ ಕೃತಿ ಅಥವಾ ಮೌಖಿಕ ಪಠ್ಯವು ಚಾಮರಾಜನಗರ ಜಿಲ್ಲೆಯ ಸಿದ್ದ ಸೆಟ್ಟಿ ಎಂಬ ಗಾಣಿಗ ಜನಾಂಗಕ್ಕೆ ಸೇರಿದ ಅನಕ್ಷರಸ್ಥನೊಬ್ಬನ ಎದೆಯಲ್ಲಿ ಅಡಗಿ ಕುಳಿತಿತ್ತು. ಹಾಗಾಗಿ ನನ್ನ ಪಾಲಿಗೆ ಸಿದ್ದ ಶೆಟ್ಟಿ ಎಂಬ ಅನಕ್ಷರಸ್ತ ವಾಲ್ಮೀಕಿ, ವ್ಯಾಸರಿಗಿಂತ ದೊಡ್ಡವನು. ಇಂತಹ ಅನೇಕ ಪಠ್ಯಗಳು ನಮ್ಮ ಭಾರತದ ಅನೇಕ ಗ್ರಾಮಗಳಲ್ಲಿ ಮತ್ತು ಅರಣ್ಯಗಳಲ್ಲಿ ವಾಸಿಸುತ್ತಿರುವ ಜನಪದರ ಎದೆಯೊಳಗೆ ಅನಾಮಿಕವಾಗಿ ಅಡಗಿ ಕುಳಿತಿವೆ.


ಹಾಡಿನ ರೂಪದಲ್ಲಿರುವ ಜನಪದ ಮಹಾಭಾರತ ಕೃತಿಯಲ್ಲಿ ಗಧಾ ಯುದ್ಧ ಪರ್ವ ಭಾಗವು, ಶ್ರೀ ಕೃಷ್ಣನ ಪ್ರಾರ್ಥನೆಯೊಂದಿಗೆ ಹೀಗೆ ಆರಂಭವಾಗುತ್ತದೆ.
   ಜಯತು ಜಯ ಜಯತು ಜಯ ಜಯತು ಜಯತೋ
   ಶ್ರೀ ಕ್ರಿಷ್ಣ ( ಕೃಷ್ಣ ಅಲ್ಲ) ಪರಮಾತ್ಮ ಜಯತು ಜಯತೋ ( ಸೊಲ್ಲು)
ಕುರುಕ್ಷೇತ್ರ ಯುದ್ಧದಲ್ಲಿ ತನ್ನವರನ್ನು ಕಳೆದುಕೊಂಡು ಏಕಾಂಗಿಯಾದ ದುರ್ಯೋಧನ  ಬಾಣಗಳ ಮೇಲೆ ಮಲಗಿರುವ ಭೀಷ್ಮರ ಬಳಿ ಬಂದು ಸಲಹೆ ಕೇಳುವ ಭಾಗವು ಇಂತಿದೆ.
ಸರಳ ಮಂಚದ ಮೇಲೆ/ ಭೀಷ್ಮರು ಮನುಗಿರಲು/ ಗುರುವಾದ ದ್ರೋಣರು/ ಸೋರುಗ್ರಸ್ತರಾದರು/ ಶಲ್ಯ ಶಕುನಿ ಕರ್ಣ/ ಸೈಂಧುವ ದುಸ್ವಾಸ/ ಗಾಂಧಾರಿ ತಾಯಿಯ/ ತೊಂಬತ್ತೊಂಬತ್ತು ಮಕ್ಕಳು/ ಪರಲೋಕ ಸೇರಿದರು/ ಉಳಿದೋನೊ ಒಬ್ಬನೆ/ ಕೌರವರಾಯನು/ ಮುಂದ್ಯಾರು ನನಗೆ/ ಗತಿಯೆಂದು ಚಿಂತಿಸಿ/ವ್ಯೆತೆಗಳ ಮಾಡುತಾನೆ.ಪಾಂಡವಕುಮಾರರಲ್ಲಿ/ ಪರಮವೈರಿ ರುಕೋದ(ಭೀಮ)/ ಅವನನ್ನು ಮುಗಿಸದೆ/ನಾನು ಸಾಯುವಂತಿಲ್ಲ/ಅಲ್ಲಿಗೆ ನನ್ನ ಬದುಕು/ ಸಫಲವು ಸಾರ್ಥಕವು/ಹೀಗೆಂದು ಕೌರವನು/ ಮನದೊಳಗೆ ಯೋಚಿಸಿ/ಚಿಂತೆಗಳ ಮಾಡುತಾನೆ.
ಹೆತ್ತಯ್ಯ ಭೀಷರು/ ಸರಳು ಮಂಚದ ಮೇಲೆ/ವೆಥೆಗಳ ಪಡುವಾಗ/ ಕೌರವೇಶ್ವರನಾದ/ ದುಯೋದ ಅಲ್ಲಿಗೆ/ ಬಂದು ಹೆತ್ತಯ್ಯನ/ಪಾದಗಳ ತಬ್ಬುಕೊಂಡ/ ಹೆತ್ತಯ್ಯ ಹೆತ್ತಯ್ಯ/ನನ್ನ ಹಟಸಾದ್ನೆಯಿಂದ/ನಿಮ್ಮ ಮಾತ ಕೇಳದೆ/ಪಾಡವ ಕುಮಾರರಲ್ಲಿ/ ಹಗೆತನವ ಮಾಡಿದೆನು/ಘನವಂತರಾದ ನೀವು/ ಇಂತೆ ಪಾಡು ಪಡುವುದಕ್ಕೆ/ನಾನೇ ಕಾರ್ಣನಾದೆನು/ ಎಲ್ಲಾರು ನನ್ನೊಬ್ಬನ/ಕೈಬಿಟ್ಟು ಹೋದರು/ ಇನ್ಯಾಗೆ ನಾನೊಬ್ನೆ/ ಪಾಂಡುವರ ಜಯಿಸಲಜ್ಜ?.
  ಸಂದರ್ಭದಲ್ಲಿ ಭೀಷ್ಮ ಹೇಳುವ ಮಾತುಗಳಿವು- ಕಂದ ವೀರ ದುರ್ಯೋದ/ ಪಾಡವಕುಮಾರರಿಗೆ/ ಪರಮಾತ್ನ ಸಾಹ್ಯವುಂಟು/ಆದರೂನಿನ್ನಮನಸ/ನಾನುಕೆಡಿಸೋನಲ್ಲ/ಗೋವುಕೊಂದಪಾಪಾನ/ಕಳುಕೊಳ್ಳಬೇಕೂಂತ/ಬಲರಾಮದೇವರು/ತೀರ್ಥಯಾತ್ರೆಗಂತ/ಹೋಗಿರುವಂತಹದ್ದು/ನಿನಗೆ ಗೊತ್ತು ತಾನೆ?/ ಬಲರಾಮನಿಗೆ ಕಂದ/ನೀನಂದ್ರೆ ಪಮಚಪ್ರಾಣ/ಅವನಿಂದ ನಿನಗೇನಾದ್ರೂ/ ಸಾಹ್ಯವು ಆಗಬವುದು/ ಅವನು ಬರೀನ್ಗಂಟ/ ನೀನು ತಲೆಮರೆಸಿಕೊಂಡಿರಬೇಕು.
ಇದಕ್ಕೆ ದುಯೋಧನ ಹೀಗೆ ಆಕ್ಷೇಪವೆತ್ತುತ್ತಾನೆ
ಹೆತ್ತಯ್ಯ ನಾನು ವೀರ/ ಹೇಡಿಯಂತೆ ತಲೆ ಮರೆಸಿ/ಕೊಳ್ಳುವುದು ಯಾವ ನ್ಯಾಯ?
ದುರ್ಯೋಧನನ ಪ್ರಶ್ನೆಗೆ ಭೀಷ್ಮರು ನೀಡುವ ಉತ್ತರ ಹೀಗೆ ಮಾರ್ಮಿಕವಾಗಿದೆ.
ಕಾಲವೆಂಬ ಆನೆಯ/ ಹೊಟ್ಟೇಲಿ ನಾವುಗಳು/ ಬ್ಯಾಲದ ಹಣ್ಣುಗಳು/ ಆನೆಯ ಹೊಟ್ಟೇಗೆ/ ಹೋಗಬಾರದನ್ನೋದಾದ್ರೆ/ ತಪ್ಪಿಸಿಕೊಳ್ಳಬೇಕು/ ಒಳ್ಳೆಯ ದಿನಗಳಿಗಾಗಿ/ ಕಾದು ಕೂರಬೇಕು ಕಂದಾ?
ಜನಪದ ಮಹಾಭಾರತ ಕೃತಿಯ ಪದ್ಯದ ಸಾಲುಗಳು ಭಗವದ್ಗೀತೆಯ ಶ್ಲೋಕಗಳಿಗಿಂತ ಕಡಿಮೆ ಮೌಲ್ವವನ್ನು ಹೊಂದಿವೆ ಎಂದು ನನಗನಿಸುವುದಿಲ್ಲ. ಸ್ಥಳೀಯ ಭಾಷೆಯ ನುಡಿಗಟ್ಟನ್ನು (ಕಾಲವೆಂಬ ಆನೆಯ ಹೊಟ್ಟೆಲಿ ನಾವುಗಳು ಬ್ಯಾಲದ ಹಣ್ಣುಗಳು) ರೂಪಕ ಭಾಷೆಯಾಗಿ ಬಳಸಿರುವ ನಮ್ಮ ಜನಪದರು ಪಂಪ, ರನ್ನ, ಜನ್ನರಿಗಿಂತ ಕಡಿಮೆಯಾದ ಕವಿಗಳೆ? ಕಥನವನ್ನು ಕೇಳಿದ ನಾಡೋಜ ಹಂಪನಾ ರವರು ಸಿದ್ದಶೆಟ್ಟಿಗೆ ಮತ್ತು ಪಿ.ಕೆ. ರಾಜಶೇಖರ್ ರವನ್ನು   ಅಭಿನವ ವ್ಯಾಸನಿಗೆ, ಅಭಿನವ ಗಣಪನಿಗೆ ಉಘೇ ಉಘೇಎಂದು ಕೊಂಡಾಡಿರುವುದು ಅರ್ಥಪೂರ್ಣವಾಗಿದೆ.

ಭಗವದ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿ ಜಾಗತಿಕ ಮನ್ನಣೆ ಪಡೆದಿದೆ ನಿಜ. ಇದರ ಬಗ್ಗೆ ಎರಡು ಮಾತಿಲ್ಲ. ಭಾರತದ ಖ್ಯಾತ ತತ್ವಶಾಸ್ತ್ರಜ್ಞರಾದ ಡಾ.ಎಸ್ ರಾಧಾಕೃಷ್ಣನ್ ಮತ್ತು ಪ್ರೊ. ಹಿರಿಯಣ್ಣನವರ ಪಾಲಿಗೆ ಅದು ನೀತಿ ಗ್ರಂಥವಾಗಿ ಕಂಡರೆ, ಮಹಾತ್ಮ ಗಾಂಧಿಗೆ ಭಗವದ್ಗೀತೆ  ಮಾನವನ ಒಳಿತು ಕೆಡುಕುಗಳ ನೀತಿ ಶಾಸ್ತ್ರವಾಗಿ ಕಂಡಿದೆ. ಇವರು  ಅಥವಾ ಪಾಶ್ಚಿಮಾತ್ಯ ಜಗತ್ತಿನ ಪಂಡಿತರು ಒಪ್ಪಿಕೊಂಡರು ಎಂದ ಮಾತ್ರಕ್ಕೆ ಭಾರತದ ಎಲ್ಲಾ ನಾಗರೀಕರು ಒಪ್ಪಿಕೊಳ್ಳಬೇಕೆ ಎಂಬ ಹಠವೇಕೆ? ತಿರುಪತಿ ತಿಮ್ಮಪ್ಪನಿಗೆ ಒಪ್ಪಿಗೆಯಾದ ವಿಷಯಗಳನ್ನು ತಿಟ್ಟಮಾರನಹಳ್ಳಿ ತಿಮ್ಮೆಗೌಡ ಒಪ್ಪಿಕೊಳಬೇಕು ಎನ್ನುವುದಾದರೆ ಅದು ಸರ್ವಾಧಿಕಾರದ ಧೋರಣೆ ಮಾತ್ರ ಆದೀತು. ಭಗವದ್ಗೀತೆಯ ಅಸ್ಮಿತೆ ಕುರಿತಂತೆ ಮತ್ತು ಅದು  ರಚಿತವಾದ ಕಾಲಘಟ್ಟ ಕುರಿತಂತೆ ಹಾಗೂ  ಅದರಲ್ಲಿರುವ ಶ್ಲೋಕಗಳ ಸಂಖ್ಯೆ ಮತ್ತು ಅವುಗಳಲ್ಲಿ ಎದ್ದು ಕಾಣುವ ವೈರುಧ್ಯಗಳ ಬಗ್ಗೆ  ಕಳೆದ ಅರ್ಧ ಶತಮಾನದಿಮದ ಭಾರತದಲ್ಲಿ ಅನೇಕ ಪ್ರಶ್ನೆ ಮತ್ತು ತಕರಾರುಗಳಿವೆ. ಇವುಗಳ ಕುರಿತಂತೆ ಖಚಿತ ವಾಖ್ಯಾನಗಳಿಲ್ಲದ ದಿನಮಾನಗಳಲ್ಲಿ ಭಗವದ್ಗೀತೆಯನ್ನು ಮುಂಚೂಣಿಗೆ ತರಲು ಹೊರಟಿರುವುದು ಸಂಘಪರಿವಾರ ನೇತೃತ್ವದ ಕೇಂದ್ರಸರ್ಕಾರದ ಮರೆಮಾಚಿದ ಗುರಿಗಳಲ್ಲಿ ಅಂದರೆ ಹಿಡನ್ ಅಜೆಂಡಾಗಳಲ್ಲಿ ಒಂದು ಎಂದು ಕರೆಯಬೇಕಾಗುತ್ತದೆ.

ಭಗವದ್ಗೀತೆಯನ್ನು ಕ್ರಿಸ್ತಪೂರ್ವಕ್ಕಿಂತಲೂ ಸಾವಿರಾರು ವರ್ಷಗಳ ಹಿಂದಿನದು ಎಂದು ವಾದಿಸುತ್ತಾರೆ. ಆದರೆ, ಖ್ಯಾತ ಇತಿಹಾಸಕಾರರಾದ ಕೋಸಾಂಬಿಯವರು ಭಗವದ್ಗೀತೆಯು ಬುದ್ಧನ ಕಾಲದ ನಂತರ ಸೃಷ್ಟಿಯಾದ ಗ್ರಂಥವೆಂದು ಪುರಾವೆಗಳ ಸಹಿತ ವಾದ ಮಾಡಿದ್ದಾರೆ. ಅಂದರೆ ಕ್ರಿಶ್ತ ಪೂರ್ವ 300 ರಿಂದ 150 ವರ್ಷಗಳ ನಡುವಿನದು ಎಂದಿದ್ದಾರೆಭಗವದ್ಗೀತೆಯ ಕೃತಿಯಲ್ಲಿ ಬ್ರಹ್ಮ ಸೂತ್ರದ ಪ್ರಸ್ತಾವನೆಯಿದೆ. ( 13.4 ಬ್ರಹ್ಮಸೂತ್ರ ಪದೈಶ್ಚೇವ ಹೇತುಮದ್ಬಿಃ ವಿನಿಶ್ಚಿತೈಃ) ಬ್ರಹ್ಮ ಸೂತ್ರ ಗ್ರಂಥವು ಬುದ್ಧನ ದರ್ಶನಗಳ ವಿಚಾರಗಳನ್ನು ಒಳಗೊಂಡಿರುವುದು ಮುಖ್ಯವಾದ ಸಂಗತಿ. ಅದೇ ರೀತಿ ಭಗದ್ಗೀತೆಯ ಶ್ಲೋಕಗಳ ನಿಖರವಾದ ಸಂಖ್ಯೆಗಳು ಎಷ್ಟು. ವಿಷಯಕ್ಕೆ ಸಂಬಂಧಿಸಿದಂತೆ ಯಾರಲ್ಲೂ ಸಹಮತವಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ಭಗವದ್ಗೀತೆಯ ಶ್ಲೋಕಗಳಲ್ಲಿರುವ ವೈರುಧ್ಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ಎತ್ತಿದ ಮೌಲಿಕ ಪ್ರಶ್ನೆಗಳಿಗೆ ಈವರೆಗೆ ಯಾರೂ ಉತ್ತರಿಸುವ ಗೋಜಿಗೆ ಹೋಗಿಲ್ಲ.


ಡಾ. ಅಂಬೇಡ್ಕರ್ ಭಗವದ್ಗೀತೆಯ ವೈರುಧ್ಯಗಳನ್ನು ರೀತಿ ಗುರುತಿಸಿದ್ದಾರೆ.
ಗೀತೆಯ ನಾಲ್ಕನೆಯ ಅಧ್ಯಾಯದಲ್ಲಿ 4.29 ಜ್ಞಾನಂ ಲಬ್ದ್ವಾ ಪರಾಂ ಶಾಂತಿ ಅಚಿರೇಣಾಧಿಗಚ್ಛತಿ ಅಂದರೆ, ಜ್ಞಾನವು ಭಕ್ತಿಗಿಂತಲೂ ದೊಡ್ಡದು. ಅದರ ಮೂಲಕ ವ್ಯಕ್ತಿಗೆ ಉನ್ನತ ಸ್ಥಾನ ಅಥವಾ ಸ್ತರ ಪ್ರಾಪ್ತಿಯಾಗುವುದೆಂದು ಹೇಳಲಾಗಿದೆ. ಆದರೆ ಅದೇ ಗೀತೆಯ ಹನ್ನೆರೆಡನೆಯ ಅಧ್ಯಾಯದಲ್ಲಿ 12.12 ಶ್ರೇಯೋ ಹಿ ಜ್ಞಾನಮುಭ್ಯಾಸಾತ್ ಜ್ಞಾನಾತ್ ಧ್ಯಾನಂ ವಿಶಿಷ್ಯತೇ ಧ್ಯಾನಾತ್ ಕರ್ಮಫಲತ್ಯಾಗಃ ತ್ಯಾಗಾತ್ ಶಾಂತಿರನಂತರಂ ಎಂದು ಹೇಳಲಾಗಿದೆ. ಅಂದರೆ ಜ್ಞಾನಕ್ಕಿಂತಲೂ ಧ್ಯಾನ ಶ್ರೇಷ್ಠವಾದುದು ಎನ್ನಲಾಗಿದೆ.
ಅಧ್ಯಾಯ 9 ರಲ್ಲಿ 9.29 ಸಮೋಹಂ ಸರ್ವಭೂತೇಷು ಮೇ ದ್ವೇಷ್ಯೋಸ್ತಿ ಪ್ರಿಯಂ ಅಂದರೆ ತನಗೆ ಯಾರೂ ಪ್ರಿಯರೂ ಅಲ್ಲ, ಅಪ್ರಿಯರೂ ಅಲ್ಲ ಎಂದು ಕೃಷ್ಣ ಹೇಳುತ್ತಾನೆ. ಮತ್ತೇ 12 ನೇ ಅಧ್ಯಾಯದಲ್ಲಿ 12.20 ರಲ್ಲಿ ಶ್ರದ್ದಧಾನಾ ಮತ್ವರಮಾ ಭಕ್ತಾಸ್ತೇ ಅತೀವ ಮೇ ಪ್ರಿಯಃ ಅಂದರೆ ಭಕ್ತರು ತನಗೆ ಪ್ರಿಯರೆಂದು ಹೇಳುತ್ತಾನೆ.
ಇಂತಹ ವೈರುಧ್ಯಗಳ ಗೂಡಾದ ಭಗವದ್ಗೀತೆಯನ್ನು ಒಪ್ಪಿಕೊಂಡವರಿಗೆ ಮತ್ತು ಅಪ್ಪಿಕೊಂಡವರನ್ನು ಹೇಗೆ  ಅರ್ಥೈಸಿಕೊಳ್ಳುವುದು?
ಇದು ಹಿಂದೂ ಧರ್ಮದ ಪವಿತ್ರ ಗಂಥಗಳಲ್ಲಿ ಒಂದಾದ ಭಗವದ್ಗೀತೆಯ ಸಮಸ್ಯೆ ಮಾತ್ರವಲ್ಲ, ಕ್ರಿಶ್ಚಿಯನ್ ರ್ಮದ ಬೈಬಲ್ ನಲ್ಲಿ ಮತ್ತು ಇಸ್ಲಾಂ ಧರ್ಮದ ಕುರಾನ್ ಗ್ರಂಥಗಳಲ್ಲಿಯು ಸಹ ಇಂತಹ  ಕುರುಡು ಆಚರಣೆಯ ಸಂಗತಿಗಳು ಸೇರಿದಂತೆ ಅನೇಕ ವೈರುಧ್ಯಗಳಿವೆ. ಸಾವಿರಾರು ವರ್ಷಗಳ ಹಿಂದೆ  ಕೆಲವು ವ್ಯಕ್ತಿಗಳು ತಾವು ದಕ್ಕಿಸಿಕೊಂಡ ತಮ್ಮ ತಮ್ಮ ಸೀಮಿತ ಜ್ಞಾನದ ಪರೀಧಿಯೊಳಗೆ ರಚಿತವಾದ ಗ್ರಂಥಗಳನ್ನು ಪರಾಮರ್ಶಿಸದೆ ಒಪ್ಪಿಕೊಳ್ಳುವುದಾದರೂ ಹೇಗೆ? ಸೂರ್ಯ ಮತ್ತು ಚಂದ್ರರನ್ನು ದೇವರೆಂದು ಕರೆದು ವ್ಯಾಖ್ಯಾನಿಸಿದ ಗ್ರಂಥಗಳನ್ನು 21 ನೇ ಶತಮಾನದಲ್ಲಿ ಸೂರ್ಯ ಮತ್ತು ಚಂದ್ರ ಎರಡೂ ಗ್ರಹಗಳು ನಾನು ಬದುಕುತ್ತಿರುವ ಭೂಮಿಯಂತಹ  ಗ್ರಹಗಳು ಎಂದು ನಂಬಿಕೊಂಡಿರುವ ವೈಜ್ಞಾನಿಕ ಮನೋಭಾವದ ವ್ಯಕ್ತಿಯ ಮೇಲೆ ಹೇರಲು ಸಾದ್ಯವೆ?
ಕೊನೆಯ ಮಾತು- ನನ್ನ ಆತ್ಮಿಯ ಮಿತ್ರರೂ ಹಾಗೂ ಕನ್ನಡ ನಾಡು ಕಂಡ ಸಂಸ್ಕತಿ ಚಿಂತಕರೂ ಆದ ಡಾ. ರಹಮತ್ ತರೀಕೆರೆಯವರು ಕಳೆದ ವಾರದ ಧಾರವಾಡದಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ಧರ್ಮಗಳು ಎಲ್ಲರನ್ನು, ಎಲ್ಲವನ್ನೂ ತಮ್ಮ ಚೌಕಟ್ಟಿನಲ್ಲಿ ಹಿಡಿದಿಡಲು ಪ್ರಯತ್ನಿಸುತ್ತಿವೆ. ಪಾಕಿಸ್ಥಾನದ ಪೇಷಾವರದಲ್ಲಿ ಮಕ್ಕಳ ಶಾಲೆಯ ಮೇಲೆ ನಡೆದ ಕೃತ್ಯ ಇದರಲ್ಲಿ ಒಂದು ಭಾಗ ಎಂದು ವಿಶ್ಲೇಷಿಸಿದರು. ಮುಸ್ಲಿಂ ಮೂಲಭೂತವಾದಿಗಳಿಗೆ ತರೀಕೆರೆಯವರ ಮಾತುಗಳು ಧರ್ಮ ವಿರೋಧಿ ಚಟುವಟಿಕೆಯ ಹಾಗೆ ಕಂಡರೆ, ನನ್ನ ಪಾಲಿಗೆ ಧರ್ಮ ಮತ್ತು ಜಾತಿಯ ನೆಲೆಗಳಾಚೆ ನಿಂತು ಮನುಷ್ಯತ್ವ ಮತ್ತು ಮಾನವೀಯತೆಗಾಗಿ ತುಡಿಯುವ  ಸಹೃದಯಿ ಜೀವವೊಂದರ ಹಾಗೂ ಮನುಕುಲಕ್ಕೆ ಮಾದರಿಯಾಗುವ ಮಾತುಗಳಂತೆ ತೋರಿದವು.
ಧರ್ಮ ಮತ್ತು ಗ್ರಂಥಗಳ ವಿಚಾರವಾಗಿ ನಾವು ಮುಕ್ತ ಮನಸ್ಸು ಹೊಂದಲಾಗದೆ ದ್ವೀಪ ಸದೃಶ್ಯವಾಗಿ ಬದುಕುತ್ತಾ, ನಮ್ಮ ನಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾ ಸಾಗಿದರೆ, ನಾವು ಬದುಕುತ್ತಿರುವ ವರ್ತಮಾನದ ಜಗತ್ತು  ನಮ್ಮ ಪಾಲಿಗೆ ನೆಲದ ಮೇಲಿನ ನರಕವಾಗುವುದರಲ್ಲಿ ಸಂಶಯವಿಲ್ಲ. ಸಂದರ್ಭದಲ್ಲಿ ಕುವೆಂಪು ಅವರ ಸಾಲುಗಳು ನೆನಪಾಗುತ್ತಿವೆ,
        ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
        ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
       ಎಂದೊ ಮನು ಬರೆದಿಟ್ಟುದಿಂದೆಮೆಗೆ ಕಟ್ಟೆನು?

(ಮಾಹಿತಿ ಸೌಜನ್ಯ- ಗುರು ಸಮಾನರಾದ ಡಾ.ಜಿ. ರಾಮಕೃಷ್ಣ ರವರ ಲೇಖನ-ಭಗವದ್ಗೀತೆಯ ಮರು ವಾಖ್ಯಾನದತ್ತ ಲೇಖನಡಾ. ವಿಜಯಾ ಸಂಪಾದಕತ್ವದಪಠ್ಯಾನುಸಂಧಾನಕೃತಿ)