ಕಳೆದ ಪೆಬ್ರವರಿ 22 ರಂದು ಧಾರವಾಡ ದಿಂದ
ಮೈಸೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ, ಚನ್ನರಾಯಪಟ್ಟಣ ದಾಟಿ ಕಿಕ್ಕೇರಿಗೆ ಬಸ್
ಬರುತ್ತಿದ್ದಂತೆ ನನ್ನ ನೆಚ್ಚಿನ ಕವಿ ಕೆ.ಎಸ್. ನರಸಿಂಹಸ್ವಾಮಿ ನೆನಪಾದರು. ಅವರು ಹುಟ್ಟಿ ಬೆಳೆದ
ಮನೆಯ ಹಾಗೂ ಬ್ರಾಹ್ಮಣರ ಬೀದಿಯನ್ನೊಮ್ಮೆ ಬಸ್ ನ ಕಿಟಿಕಿಯಲ್ಲಿ ನೋಡುತ್ತಾ, ಕೆ.ಆರ್.
ಪೇಟೆಯವರೆಗೆ ಅವರ ಬಗ್ಗೆ ಯೋಚಿಸುತ್ತಾ ಬಂದಿದ್ದೆ. ಅದೇ ದಿನ ಮಧ್ಯಾಹ್ನ ಮಂಡ್ಯ ನಗರದಲ್ಲಿ
ಬೇಟಿಯಾದ ಕಿರಿಯ ಮಿತ್ರ ರಾಜೇಂದ್ರ ಪ್ರಸಾದ್
ನನಗೆ ಕೆ.ಎಸ್. ನ. ಕವಿತೆಗಳ ಕುರಿತು ಯುವ ಮನಸ್ಸುಗಳ ಬರೆದಿರುವ ಲೇಖನಗಳನ್ನು ಒಳಗೊಂಡ “ಹೂಬುಟ್ಟಿ”
ಹಾಗೂ ತನ್ನ ನಾಲ್ಕನೆಯ ಕವನ ಸಂಕಲನ “ ಕೋವಿ ಮತ್ತು ಕೊಳಲನ್ನು” ಉಡುಗೊರೆಯಾಗಿ ನೀಡಿದ್ದು
ಕಾಕತಾಳಿಯವಾಯಿತು. ವಾಸ್ತವವಾಗಿ ನನ್ನ ಮತ್ತು ರಾಜೇಂದ್ರಪ್ರಸಾದ್ ನಡುವೆ ಅದು ಮೊದಲ ಮುಖಾ ಮುಖಿ
ಬೇಟಿಯಾಗಿತ್ತು. ಕಳೆದ ಐದು ವರ್ಷಗಳಿಂದ ಫೇಸ್ ಬುಕ್ ಮೂಲಕ ಪರಿಚಯಾಗಿ ಮಂಡ್ಯ ನಗರದಲ್ಲಿದ್ದರೂ,
ಸಹ ಇಬ್ಬರೂ ಬೇಟಿಯಾಗಿರಲಿಲ್ಲ. ನಾನು ರಾಜೇಂದ್ರಪ್ರಸಾದ್ 34 ಅಥವಾ 35 ವರ್ಷದ ಯುವ ಲೇಖಕ
ಭಾವಿಸಿದ್ದೆ. ರಾಜೇಂದ್ರನ ವಯಸ್ಸು ಆಜು ಬಾಜು ನನ್ನ ಮಗನ ವಯಸ್ಸು. ಅಂದರೆ ಕೇವಲ 28 ವರ್ಷ
ವಯಸ್ಸು. ಇಷ್ಟು ಚಿಕ್ಕ ವಯಸ್ಸಿಗೆ ರಾಜೇಂದ್ರ
ಪ್ರಸಾದ್, ಕಾವ್ಯ, ಸಂಗೀತ, ಇತಿಹಾಸ, ತತ್ವ ಜ್ಞಾನ, ಸೂಫಿ ಕಾವ್ಯ, ಜಾನಪದ ಸಂಗೀತ ಇವುಗಳ ಕುರಿತ ಆಸಕ್ತಿ
ಬೆಳಸಿಕೊಂಡಿರಿವ ಸಂಗತಿಗಳು ನನ್ನನ್ನುವಿಸ್ಮಯಕ್ಕೆ ದೂಡಿವೆ. ಮಾತು ಮತ್ತು ಕೃತಿಯಲ್ಲಿ ಕೃತಿಮತೆಯಿಲ್ಲದ ರಾಜೇಂದ್ರ ಪ್ರಸಾದ್,
ಕನ್ನಡ ಕಾವ್ಯ ಕ್ಷೇತ್ರದಲ್ಲಿ ಗಂಭಿರವಾಗಿ ತೊಡಗಿಸಿಕೊಂಡಿರುವ ಪರಿಗೆ ಕೆ.ಎಸ್.ನ. ಶತಮಾನೋತ್ಸವದ
ನೆನಪಿಗೆ ತನ್ನ ಸಂಪಾದಕೀಯದಲ್ಲಿ ಹೊರ ತಂದಿರುವ “ ಹೂ ಬುಟ್ಟಿ” ಕೃತಿ ಸಾಕ್ಷಿಯಾಗಿದೆ. ಸುಮಾರು
ಮುವತ್ತು ಮಂದಿ ಯುವ ಲೇಖಕ-ಲೇಖಕಿಯರು ಕೆ.ಎಸ್. ನ. ಅವರ ಕವಿತೆಗಳನ್ನು ಹೊಸ ಬಗೆಯಲ್ಲಿ
ವಿಶ್ಲೇಷಿಸಿದ್ದಾರೆ. ಜೊತೆಗೆ ನನ್ನ ಗೆಳೆಯ ರವಿಬೆಳೆಗೆರೆ ಮತ್ತು ಜೋಗಿ ಒಳಗೊಂಡಂತೆ ಹಲವರ ಮೌಲಿಕ
ಬರಹಗಳು ಈ ಕೃತಿಯಲ್ಲಿ ಅಡಕವಾಗುವುದರ ಮೂಲಕ ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ.
1970 ರ ದಶಕದಲ್ಲಿ ಕನ್ನಡದ ನವ್ಯ ಕಾವ್ಯ
ಮತ್ತು ಸಾಹಿತ್ಯ ಈ ಎರಡೂ ಉತ್ತುಂಗದಲ್ಲಿ ಇದ್ದ
ಸಂದರ್ಭದಲ್ಲಿ ಪಾಶ್ಚಿಮಾತ್ಯ ಕಾವ್ಯದಿಂದ ಎರವಲು ಪಡೆದ
ಅಸಂಗತ ಕಾವ್ಯ ಗಳ ಪರಿಕಲ್ಪನೆಯಲ್ಲಿ
ಕನ್ನಡದಲ್ಲಿಯೂ ಸಹ ಒಂದಿಷ್ಟು ಕಾವ್ಯ
ರಚನೆಯಾಗಿತ್ತು. ಕನ್ನಡ ನವೋದಯ ಕಾವ್ಯವವನ್ನು ಸಾರಾಸಗಟಾಗಿ ತಿರಸ್ಕರಿಸುವ ಭರದಲ್ಲಿ ಕೆಲವು
ಕವಿತೆಗಳು ಸಹ ಸೃಷ್ಟಿಯಾಗಿದ್ದವು. ಚಂದ್ರಕಾಂತ ಕುಸುನೂರು ಬರೆದ
ಕತ್ತಲೆಯಲ್ಲಿ ಬೆತ್ತಲೆ
ತಿರುಗುವ
ನಮ್ಮ ಕಾವ್ಯ
ಕನ್ನಿಕೆಗೊಂದು
ಬೆಳಕಿನ ಸೀರೆ
ತರುವುದಿದೆ
ಬರುವಿರಾ?
ಎಂಬ ಕವಿತೆಯೂ ಈ ಸಂದರ್ಭದಲ್ಲಿ ಮುಖ್ಯವಾಗಿತ್ತು. ಆದರೆ, ನವ್ಯದ ಹಂಗಿಲ್ಲದೆ, ಬದುಕಿ,
ಕಾವ್ಯ ಬರೆಯುತ್ತಲೇ ಹೋದ ನಮ್ಮ ಕೆ.ಎಸ್. ನರಸಿಂಹ ಸ್ವಾಮಿ, ಚನ್ನವೀರ ಕಣವಿ,
ಪು.ತಿ.ನ. ಕೆ.ಎಸ್. ನಿಸಾರ್ ಅಹಮ್ಮದ್, ಜಿ.ಎಸ್.ಶಿವರುದ್ರಪ್ಪ, ಸು.ರಂ. ಯಕ್ಕುಂಡಿ ಮುಂತಾದವರು ಕನ್ನಡ ಕಾವ್ಯ ಕನ್ನಿಕೆಗೆ ಸದಾ ಬೆಳಕಿನ
ಸೀರೆ ಉಡಿಸುತ್ತಾ ಆಕೆಯನ್ನು
ಜೀವಂತವಿಟ್ಟಿದ್ದರು.
ಕನ್ನಡ ಕಾವ್ಯ ಲೋಕದಲ್ಲಿ ಕಾವ್ಯ
ಪ್ರೇಮಿಗಳಷ್ಟೇ ಅಲ್ಲದೆ, ಜನಸಾಮಾನ್ಯರ ಎದೆಯಲ್ಲೂ ಸಹ ಬೇಂದ್ರೆ ಮತ್ತು ಕೆ.ಎಸ್.ನ. ಕವಿತೆಗಳು
ಸದಾ ಹಸಿರಾಗಿವೆ. ಜೊತೆಗೆ ಈ ಇಬ್ಬರೂ ಕವಿಗಳು ಕಾವ್ಯಕ್ಕೆ ವಸ್ತುವಾಗುವ ವಿಷಯವಲ್ಲ ಎಂದು ಕನ್ನಡ
ಕಾವ್ಯ ಜಗತ್ತು ತಿರಸ್ಕರಿಸಿದ ಸಾಮಾನ್ಯ ಸಣ್ಣ ಸಂಗತಿಗಳನ್ನು ಇಟ್ಟುಕೊಂಡು ಕಾವ್ಯ ರಚನೆ
ಮಾಡಿದವರು. ಅಲ್ಲದೆ ಇತರೆ ಕನ್ನಡದ ಕವಿಗಳಿಗಿಂತ ಹೆಚ್ಚಾಗಿ ತಮ್ಮನ್ನು ತಾವು ಹೆಣ್ಣಾಗಿ
ಪರಿಭಾವಿಸಿಕೊಂಡು ಅತ್ಯುತ್ತಮ ಕವಿತೆಗಳನ್ನು ರಚಿಸಿದವರು.
ನವ್ಯದ ಕಾಲಘಟ್ಟದಲ್ಲಿ ಇತರೆ ಕವಿಗಳಿಗಿಂತ
ಅತ್ಯಂತ ಹೆಚ್ಚು ಲೇವಡಿಗೆ ಒಳಗಾದವರು ಕೆ.ಎಸ್.ನ. ಇದನ್ನು ಮೀರಲೆಂಬಂತೆ ಅವರು ತೆರೆದ ಬಾಗಿಲು
ಮತ್ತು ಶಿಲಾಲತೆ ಎಂಬ ಎರಡು ಸಂಕಲನಗಳನ್ನು ಹೊರ ತರುವುದರ ಮೂಲಕ ನವ್ಯರ ಬಾಯಿಯನ್ನು
ಮುಚ್ಚಿಸಿದ್ದರು. ದಾಂಪತ್ಯವನ್ನು , ಮಧ್ಯಮ ವರ್ಗದ ಭಾವನೆಗಳನ್ನು ಅವರಷ್ಟೂ ಪರಿಣಾಮಕಾರಿಯಾಗಿ
ಕಾವ್ಯದಲ್ಲಿ ತಂದವರು ಮತ್ತೊಬ್ಬರಿಲ್ಲ ಎಂದರೆ, ಉತ್ಪೇಕ್ಷೆಯಾಗಲಾರದು. ಅವರನ್ನು ಕನ್ನಡದ ಕಾವ್ಯ ಜಗತ್ತು
“ಮಲ್ಲಿಗೆಯ ಕವಿ” ಎಂದು ಹಾಡಿ ಹೊಗಳಿದೆ. ಅದೇ ರೀತಿ ನವ್ಯ ಸಾಹಿತ್ಯ “ ಪುಷ್ಪ ಕವಿಯ ಪರಾಕು”
ಎಂದು ಸಹ ಗೇಲಿ ಮಾಡಿದೆ. ಮಲ್ಲಿಗೆ
ಮೊಗ್ಗುಗಳನ್ನು ಹೂಮಾಲೆಯಾಗಿ ಕಟ್ಟುವ ಹೂವಾಡಿಗನಿಗೆ ಮಾತ್ರ ಗೊತ್ತು ಅದರ ನಿಜವಾದ ಕಷ್ಟ. ಇತರೆ
ಹೂಗಳಂತೆ ಮಲ್ಲಿಗೆ ಮಾಲೆಯನ್ನು ಸರಾಗವಾಗಿ ಕಟ್ಟಲಾಗದು. ಈ ಕಾರಣಕ್ಕೆ ಅವರ ಹೃದಯಾಂತರಾಳದಿಂದ ‘ ಹಿಂಡ ಬಾರದು
ದುಂಡು ಮಲ್ಲಿಗೆಯನು; ಒಣಗಬಾರದು ಒಡಲ ಚಿಲುಮೆ” ಎಂಬ ಕಾವ್ಯದ ಸಾಲುಗಳು ಸೃಷ್ಟಿಯಾಗಲು
ಸಾಧ್ಯವಾಯಿತು. ನನ್ನ ಗೆಳೆಯ ರವಿ ಬೆಳೆಗೆರೆ
ಕೆ.ಎಸ್. ನ. ಕುರಿತಂತೆ ನೆನಪಿನಲ್ಲಿಡುವ
ಮಾತುಗಳನ್ನು ಪರಿಣಾಮಕಾರಿಯಾಗಿ ಹೀಗೆ ದಾಖಲಿಸಿದ್ದಾನೆ.
“ಹೊರಗೆ ಇದೆಲ್ಲಾ ಗಲಿಬಿಲಿ ನಡೆಯುತ್ತಿದ್ದರೂ
ಒಳಗೆ ತೂಗೂಯ್ಯಾಲೆಯ ಮೇಲೆ ಕುಳಿತು ತಮ್ಮ ಪಾಡಿಗೆ ತಾವು “ ಮನೆಯ ಹಾಡುಗಳನ್ನು ಕೆ.ಎಸ್.
ನರಸಿಂಹಸ್ವಾಮಿ ಬರೆಯುತ್ತಲೇ ಹೋದರು. ಹೆಣ್ಣು, ಅವಳ ಕಣ್ಣು, ಅವಳ ಮನಸ್ಸು, ಜೋಯಿಸರ ಕರು,
ಹೆಂಡತಿಯ ಮುಟ್ಟು, ದಿಂಬಿನ ಚಿತ್ತಾರ, ಒಳಮನೆಯ ಬಡತನ, ಅದನ್ನು ಮರೆಸುವ ಪ್ರೀತಿ, ಎರಡೇ ಎರಡು
ಹಲ್ಲು ಬಂದ ಹನುಮಂತನಂಥ ಮುದ್ದು ಮಗು, ಅವಳ ಮೂಗೂತಿಯ ತಿರುಪು, ಅಕ್ಕಿ ನುಚ್ಚಿನ ನಡುವೆ
ಸರಿದಾಡುವ ಬಲಗೈ, ಇವುಗಳ ಸುತ್ತುತ್ತಲೇ ಅಲೆಯಿತು ನರಸಿಂಹಸ್ವಾಮಿಯವರ ಕಾವ್ಯ. ಪ್ರತಿ ಸಲವೂ
ಮನುಷ್ಯನಿಗೆ ಮನೆಯ ನೆನಪು ಮಾಡಿಕೊಟ್ಟಿತು ಮಲ್ಲಿಗೆಯ ಕಾವ್ಯ.
ನಮಗೆ ಕ್ರಾಂತಿ ಗೀತೆ ಬರೆದು ಕೊಟ್ಟವರು
ಬೇಕಾದಷ್ಟು ಇದ್ದಾರೆ. ಅರ್ಥವಾಗದ ಹಾಗೆ ಕವಿತೆ ಬರೆದಿಟ್ಟು, ಅದಕ್ಕೆ ಅರ್ಥ ಬರೆಸಿ ಓದಲು
ಬಿಟ್ಟವರೂ ಇದ್ದಾರೆ. ಮಹಾನ್ ಕ್ರಾಂತಿಕಾರಿಗಳು ವಿಧಾನಸೌಧದ ಕಟಾಂಜನದ ಮುಂದೆ ಬೋರಲು
ಮಲಗಿದ್ದನ್ನು ನಾವು ನೋಡಿದ್ದೇವೆ. ಜ್ಞಾನಪೀಠಿಗಳ ಭಾಷಣಗಳು ಇವತ್ತಿಗೂ, ನಾಳೆಗೂ ಉಲ್ಟಾ
ಹೊಡೆದದ್ದನ್ನು ನೊಡಿದ್ದೀವಿ. ಸಾಕು ನಮ್ಮ ಮಿದುಳು ತುಂಬಿದೆ. ನಮಗೆ ಬೇಕಾದ್ದು ಹೆಂಡತಿಯೊಂದಿಗೆ
ಕೂತು ಹಾಡಿಕೊಂಡು ಹಗುರಾಗಬಲ್ಲ ಒಂದು ನಿತ್ಯಗೀತೆ. ಅದನ್ನು ಬದುಕಿನುದ್ದಕ್ಕೂ ಬರೆದುಕೊಟ್ಟವರು
ನರಸಿಂಹಸ್ವಾಮಿ. ಅವರಿಗೆ ನಾವು ಋಣಿ.
ಕಳೆದ ವಾರ ಮೈಸೂರು ನಗರದಲ್ಲಿದ್ದೆ. ಮೈಸೂರು
ಮುಕ್ತ ವಿ.ವಿ. ಸಹಯೋಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ದಲಿತ ಹಾಗೂ ಹಿಂದುಳಿದ ಯುವ
ಲೇಖಕರಿಗೆ ಮೂರು ದಿನಗಳ ಕಮ್ಮಟವನ್ನು ಹಮ್ಮಿಕೊಂಡಿತ್ತು. ಕೊನೆಯ ನನ್ನ ಮಿತ್ರರಾದ ಕನ್ನಡ
ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್ ಹನುಮಂತಯ್ಯನವರ ಸಮಾರೋಪ ಭಾಷಣವಿತ್ತು. ಹಾಗಾಗಿ ಕಾರ್ಯಕ್ರಮದಲ್ಲಿ
ನಾನೂ ಪಾಲ್ಗೊಂಡಿದ್ದೆ. ಹನುಮಂತಯ್ಯನವರು ಮಾತನಾಡುತ್ತಾ, ಇತ್ತೀಚೆಗೆ ಪ್ರಕಟವಾಗುವ ನಾಲ್ಕೈದು
ಸಾವಿರ ಕನ್ನಡ ಕೃತಿಗಳಲ್ಲಿ ಶೇಕಡ 75 ರಷ್ಟು ಜೊಳ್ಳು ಸಾಹಿತ್ಯ. ಅದನ್ನು ಗ್ರಂಥಾಲಯಕ್ಕೆ ತುಂಬುವ
ಕೆಲಸ ನಡೆಯುತ್ತಿದೆ ಎಂದರು. ಇದಕ್ಕಿಂತ ಮುಖ್ಯವಾಗಿ ಕಳೆದ ಎರಡು ದಶಕಗಳಿಂದ ಕನ್ನಡ ಸಾಹಿತ್ಯ ವಿಮರ್ಶೆ ಎಂಬುದು ನಿಂತ ನೀರಾಗಿದೆ
ಎಂದು ಅಭಿಪ್ರಾಯ ಪಟ್ಟರು. ಕಳೆದ ಒಂದು ವರ್ಷದಿಂದ ನಾನು ಯೋಚಿತ್ತಿದ್ದ ವಿಷಯವನ್ನು ಅವರು
ಬಹಿರಂಗಗೊಳಿಸಿದ್ದು ನನಗೆ ಅಚ್ಚರಿಯಾಯಿತು. ಕಾವ್ಯಕ್ಕೆ ಸೀಮಿತವಾಗಿರಿಸಿಕೊಂಡು, ಈ ಮಾತನ್ನು
ನಾನು ಗಂಭೀರವಾಗಿ ಆಲೋಚಿಸುತ್ತಿದ್ದೇನೆ.
( ರಾಜೇಂದ್ರ ಪ್ರಸಾದ್)
ನನ್ನ ಕಾಲೇಜು ದಿನಗಳಲ್ಲಿ “ ಹೌದು ಕಣೇ ಉಷಾ
ನಾವು ಹುಡುಗಿಯರೇ ಹೀಗೆ” ಕವಿತೆ ಬರೆದು ಬೆಚ್ಚಿ ಬೀಳಿಸಿದ ಪ್ರತಿಭಾ ನಂದ ಕುಮಾರ್, ದ್ರೌಪತಿಯ
ಸ್ವಗತ ಕವಿತೆ ಬರೆದ ಸರಸ್ವತಿ ಗೌಡ ಇವರನ್ನು ಒಳಗೊಂಡಂತೆ, ಲಲಿತಾ ಸಿದ್ದಬಸವಯ್ಯ, ಹೆಚ್.ಎನ್.ಆರತಿ,
ಹೆಚ್.ಎಲ್. ಪುಷ್ಪ, ರೂಪಾ ಹಾಸನ, ನಮ್ಮನ್ನಗಲಿದ ವಿಭಾ, ಎಂ.ಆರ್.ಕಮಲ, ಸುಬ್ಬು ಹೊಲೆಯಾರ್, ವಿಕ್ರಂ ವಿಸಾಜಿ, ಪೀರ್ ಬಾಷಾ,
ಚಂದ್ರು ತುರುವಿಹಾಳ್, ಬಿ.ಶ್ರೀನಿವಾಸ, ವಿಜಯಕಾಂತಪಾಟೀಲ, ಅರುಣ್ ಜೋಳದ ಕೂಡ್ಲಿಗಿ, ವೀರಣ್ಣ
ಮಡಿವಾಳರ, ದೊಡ್ಡ ಆಲೂರು ನಿಂಗಪ್ಪ, ಬಿ.ರಾಜಣ್ಣ, ಹೀಗೆ ಅನೇಕ ಕವಿ ಮತ್ತು ಕವಿಯತ್ರಿಯರಿಗೆ
ಮತ್ತು ಅವರ ಕವಿತೆಗಳಿಗೆ ಕನ್ನಡ ವಿಮರ್ಶಾ
ಲೋಕದಲ್ಲಿ ಸೂಕ್ತವಾದ ನ್ಯಾಯ ದೊರಕಿಲ್ಲ ಎಂಬುದು ನನ್ನ ಧೃಡ ನಂಬಿಕೆ.
ಹೌದು, ಒಬ್ಬ ನಿಜವಾದ ಸಶಕ್ತನಾದ ಕವಿಗೆ ವಿಮರ್ಶೆ ಅಥವಾ ಪ್ರಶಸ್ತಿ, ಬಿರುದು
ಬಾವಲಿಗಳೆಂಬ ಯಾವ ಉಪಾಧಿಗಳು ಬೇಕಿಲ್ಲ. ಇದನ್ನು ನಂಬಿ ಬದುಕಿದವರು ಕವಿ.
ಕೆ.ಎಸ್.ನರಸಿಂಹಸ್ವಾಮಿಯವರು. ಅವರು ಎಷ್ಟೋ ಬಾರಿ ನಮ್ಮ ಸಿಟ್ಟು, ಆಕ್ರೋಶಗಳಿಗೆ ತಂಗಾಳಿಯಾಗುತ್ತಾರೆ.
ನರಸಿಂಹಸ್ವಾಮಿಯವರು ಒಮ್ಮೆ ಹೇಳಿಕೊಂಡಿದ್ದ ಈ ಅನುಭವವನ್ನು ನಾನು ಮರೆತಿಲ್ಲ. ಅವರು ಒಮ್ಮೆ
ಮೈಸೂರು ನಗರದಲ್ಲಿ ನಗರ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಕುರುಡ ಬಿಕ್ಷುಕನೊಬ್ಬ ‘
ಬಳೆಗಾರ ಚನ್ನಯ್ಯನ ಗೀತೆ ಹಾಡಿಕೊಂಡು ಅವರ ಬಳಿ ಬಂದ. ಆತನ ಕೈಗೆ ಎಂಟಾಣೆಯನ್ನು ಕೊಟ್ಟ
ನರಸಿಂಹಸ್ವಾಮಿಯವರು, ಆತನನ್ನು “ ಈ ಹಾಡು ಯಾರದಪ್ಪ? ಎಂದು ಕೇಳಿದರು. ಅದಕ್ಕೆ ಕುರುಡ ನೀಡಿದ
ಉತ್ತರ ಹೀಗಿತ್ತು. “ ಗೊತ್ತಿಲ್ಲ ಸ್ವಾಮಿ, ಈ ಹಾಡು ಹಾಡಿದರೆ ನನ್ನ ಅಂಗೈಗೆ ನಾಲ್ಕು ಕಾಸು
ಹೆಚ್ಚಿಗೆ ಬೀಳ್ತದೆ”
ತನ್ನ ಒಂದು ಕವಿತೆಯೊಂದು ಅನಾಥ ಜೀವಕ್ಕೆ ಅನ್ನ
ದೊರಕಿಸಿಕೊಡುವುದನ್ನು ಹಾಗೂ ಕುರುಡ ಬಿಕ್ಷುಕುನ ಮಾತನ್ನು ಸದಾ ಸ್ಮರಿಸಿಕೊಳ್ಳುತ್ತಿದ್ದ ನರಸಿಂಹಸ್ವಾಮಿಯವರು,
ನನಗೆ ಮತ್ತು ನನ್ನ ಕವಿತೆಗಳಿಗೆ ಇದಕ್ಕಿಂತ ಬೇರೆ
ಭಾಗ್ಯ ಬೇಡ ಎನ್ನುತ್ತಿದ್ದರು. ವರ್ತಮಾನದ ಕನ್ನಡ ಸಾಹಿತ್ಯ ಲೋಕದಲ್ಲಿ 65 ಅಥವಾ 75 ವರ್ಷ ತುಂಬುತ್ತಿಂದ್ದಂತೆ, ಪಂಪ, ನೃಪತುಂಗ,
ಬಸವ, ನಾಡೋಜ ಮತ್ತು ಜ್ಞಾನ ಪೀಠ ಪ್ರಶಸ್ತಿಯ ಕನಸು ಮತ್ತು ಕನವರಿಕೆಗಳಲ್ಲಿ ಜ್ವರ ಪೀಡಿತರಾಗುವ ಸಾಹಿತಿಗಳ ಜೊತೆ ನರಸಿಂಹ ಸ್ವಾಮಿ ಮತ್ತು ಇನ್ನೂ ಪಂಪ
ಪ್ರಶಸ್ತಿ ಪಡೆಯಲಾರದ , ಸಂಕೋಚ ಪ್ರವೃತ್ತಿಯ ನಿಸಾರ್ ಅಹಮದ್ ಅವರನ್ನು ಹೋಲಿಕೆ ಮಾಡಲು ನನಗೆ
ಮನಸ್ಸು ಬರುತ್ತಿಲ್ಲ.
ನರಸಿಂಹ ಸ್ವಾಮಿಯವರ ಆಯ್ದ 31 ಕವಿತೆಗಳನ್ನು ಇಟ್ಟುಕೊಂಡು ಹೂಬುಟ್ಟಿ ಕೃತಿಯಲ್ಲಿ
ಕನ್ನಡದ ಆಧುನಿಕ ಮನಸ್ಸುಗಳು ವಿವೇಚಿಸಿರುವ ಬಗೆಯನ್ನು ನೊಡಿದರೆ, ಇವರು ಕನ್ನಡ ವಿಮರ್ಶೆಗೆ ಹೊಸ
ಭಾಷ್ಯವೊಂದನ್ನು ಬರೆದಿದ್ದಾರೆ ಎಂದು ಅನಿಸುತ್ತದೆ.
ಡಿ.ಎಂ. ಪ್ರಶಾಂತ್ ಕುರ್ಕೆ, ಅವಿರತ ಮಾವಿನ
ಕುಳಿ, ಕುಸುಮಾ ಆಯರಹಳ್ಳಿ, ಕಾವ್ಯ ಸಂತೋಷ್, ಭವಾನಿ ಲೋಕೇಶ್, ವಿಕಾಸ ನೇಗಿಲೋಣಿ, ಎಂ.ಎಸ್.
ರುದ್ರಸ್ವಾಮಿ, ಸಂಯುಕ್ತ ಪುಲಿಗಲ್, ಸುಧಾ ಚಿದಾನಂದಗೌಡ, ವಿದ್ಯಾಶಂಕರ ಹರಪನಳ್ಳಿ, ಸಂತೋಷ
ಕುಮಾರ್ ಎಂ.ಎಲ್ ಹೀಗೆ ಬಹುತೇಕ ಎಲ್ಲರ ಒಳ ನೋಟಗಳಲ್ಲಿ ಹೊಸತನವಿದೆ. ಅದೇ ರೀತಿ ಪ್ರತಿಭಾ ನಂದಕುಮಾರ್,
ಶ್ರೀದೇವಿ ಕೆರೆಮನೆ, ಅಕ್ಷತಾ. ಶ್ರೀಧರ್ ತಾಳ್, ರಾಜೇಂದ್ರ ಪ್ರಸಾದ್, ಚಿದಂಬರ ನರೇಂದ್ರ,
ಉಷಾಕಟ್ಟೆ ಇವರ ವಿವೇಚನೆಗಳಲ್ಲಿ ಪ್ರಬುದ್ಧತೆ ಎದ್ದು ಕಾಣುತ್ತದೆ.
ಒಟ್ಟಾರೆ ಕೆ.ಎಸ್.ನ. ಕವಿತೆಗಳ ನೆಪದಲ್ಲಿ
ಹೂಬುಟ್ಟಿ ಕೃತಿಯ ಮೂಲಕ ಕನ್ನಡ ವಿಮರ್ಶೆಗೆ ಹೊಸ ಸಾಧ್ಯತೆಯನ್ನು ತೋರಿದ ಸಂಪಾದಕ ರಾಜೇಂದ್ರ
ಪ್ರಸಾದ್ ಮತ್ತು ಈ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲಾ ಯುವ ಮನಸ್ಸುಗಳು ನಿಜಕ್ಕೂ ಅಭಿನಂದನೆ ಅರ್ಹರಾಗಿದ್ದಾರೆ.
ಇನ್ನು, ರಾಜೇಂದ್ರ ಪ್ರಸಾದ್ ಹೊರ ತಂದಿರುವ
ನಾಲ್ಕನೆಯ ಸಂಕಲನ “ ಕೋವಿ ಮತ್ತು ಕೊಳಲು” ಕೃತಿಯ ಕವಿತೆಗಳನ್ನು ಓದಿದಾಗ, ಕಾವ್ಯದ ಭಾಷೆ ಮತ್ತು
ಲಯಗಾರಿಕೆ ಇವುಗಳಲ್ಲಿ ತೋರಿರುವ ಪ್ರಬುದ್ಧತೆ ಮೆಚ್ಚುವಂತಹದ್ದು. ಕಾವ್ಯವನ್ನು ಅಪಾರವಾಗಿ
ಪ್ರೀತಿಸುವ ಮತ್ತು ಓದುವ ನನಗೆ ಈವರೆಗೆ ರಾಜೇಂದ್ರನ ಕವಿತೆಗಳೇಕೆ ಕಣ್ಣಿಗೆ ಬೀಳಲಿಲ್ಲ ಎಂದು
ಆಶ್ಚರ್ಯವಾಯಿತು. ಪತ್ರಿಕೆಗಳಿಗಿಂತ ಹೆಚ್ಚಾಗಿ ಸಾಮಾಜಿಕ ತಾಣಗಳಲ್ಲಿ ರಾಜೇಂದ್ರ ಕಾವ್ಯ
ಕೃಷಿಯಲ್ಲಿ ತೊಡಗಿಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು. “ ಇವತ್ತು ಕವಿತೆ ಕಟ್ಟ
ಬೇಕಿರುವುದು, ಕುಣಿಯುವುದಕ್ಕಲ್ಲ; ಎದೆಯಲ್ಲಿ ಮನುಷ್ಯನನ್ನು ಮನುಷ್ಯನಾಗಿ ಉಳಿಸಿಕೊಳ್ಳಲು” ಎಂಬ
ಅಪ್ಪಟ ಮನುಷ್ಯನೊಬ್ಬ ಮಾತ್ರ ಚಿಂತಿಸಬಹುದಾದ ಮಾತುಗಳನ್ನು ಬರೆದಿರುವ ರಾಜೇಂದ್ರಪ್ರಸಾದ್ ಭವಿಷ್ಯದ
ಕನ್ನಡ ಕಾವ್ಯ ಜಗತ್ತಿನಲ್ಲಿ ಗಮನಿಸಲೇ ಬೇಕಾದ ಗಂಭೀರ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಹಿರಿಯ
ಕವಿಯತ್ರಿ ಪ್ರತಿಭಾ ನಂದಕುಮಾರ್ ಮತ್ತು ಟಿನಾ ಶಶಿಕಾಂತ್
ತುಂಬಾ ಮೌಲಿಕವಾದ ಮಾತುಗಳನ್ನು ಈ ಸಂಕಲನಕ್ಕೆ ಬರೆದಿದ್ದಾರೆ. ಉರಿನಾಲಿಗೆ, ಮೌನ
ಹೊದ್ದ ಒಂದು ನಿಟ್ಟುಸಿರು, ತೆವರು ತಿಟ್ಟಿನ
ಹಾದಿ, ಅಡ್ಡ ಪಲ್ಲಕ್ಕಿಯ ಜಂಗಮ, ಒಂದು ರಸ್ತೆ ಮತ್ತು ಹತ್ಯೆ ಯಂತಹ ಕವಿತೆಗಳು ಗಮನ
ಸೆಳೆಯುತ್ತವೆ. ರಾಜೇಂದ್ರನ ಕವಿತೆಗಳಲ್ಲಿ ಅಲ್ಲಮನ ಭಾಷೆಯ ಪ್ರಭಾವ ಎದ್ದು ಕಾಣುತ್ತದೆ. ಒಮ್ಮೊಮ್ಮೆ
ಕಾವ್ಯದ ಭಾಷೆಯೊಳಗೆ ಅನಪೇಕ್ಷಿತವಾಗಿ ನುಗ್ಗಿ ಬಂದಿರು ಇಂಗ್ಲೀಷ್ ಪದಗಳು, ಕಾವ್ಯದ ಭಾಷೆಗೆ
ಮತ್ತು ಅದರ ಶಿಲ್ಪ ಹಾಗೂ ಬಂಧಕ್ಕೆ ಧಕ್ಕೆಯನ್ನುಂಟು ಮಾಡಿವೆ, ಇದನ್ನು ರಾಜೇಂದ್ರ ಪ್ರಸಾದ್
ಕಾವ್ಯದಲ್ಲಿ ಪ್ರತಿಭಾ ನಂದಕುಮಾರ್ ಗುರುತಿಸಿದ್ದಾರೆ. ರಾಜೇಂದ್ರ ಪ್ರಸಾದ್ ಈ ಲೋಪವನ್ನು
ತಿದ್ದುಕೊಳ್ಳುವುದರ ಮೂಲಕ ತನ್ನ ಕಾವ್ಯ ಕ್ಷೇತ್ರವನ್ನು; ಸಾಮಾಜಿಕ ತಾಣಗಳ ಪರಿಧಿಯಿಂದ
ಪತ್ರಿಕೆಗಳವರೆಗೂ ವಿಸ್ತರಿಸಿಕೊಳ್ಳುವ
ಅಗತ್ಯವಿದೆ.,
olleya pustakakke sikka gourava. Thank you sir! :)
ಪ್ರತ್ಯುತ್ತರಅಳಿಸಿRecently I have completed translating "tereda bagilu' into konkani. Hope it will open up a new door to the poets of Konkani.
ಪ್ರತ್ಯುತ್ತರಅಳಿಸಿ