ಶನಿವಾರ, ಜೂನ್ 15, 2013

ಅಪ್ಪಿಕೊ ( ಚಿಪ್ಕೊ) ಚಳವಳಿಯ ಕಥನ-ಎರಡು

1950 ರ ದಶಕದ ನಂತರ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ನಿರ್ಮಾಣಗೊಂಡ ರಸ್ತೆಗಳು ಮತ್ತೆ  1962 ರ ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧ ದ ನಂತರ ಇನ್ನಷ್ಟು ವಿಸ್ತಾರಗೊಂಡವು. ಅಲ್ಲದೆ, ಭಾರತ ಸೇನಾ ಪಡೆಯು ಗಡಿ ಭಾಗದಲ್ಲಿ ಮತ್ತಷ್ಟು ಸೇನೆಯನ್ನು ಜಮಾವಣೆ ಮಾಡಿತು. ನಂತರ ಘರ್ ವಾಲ್ ಮತ್ತು ತೆಹ್ರಿ ಹಾಗೂ ಚಮೋಲಿ ಪ್ರದೇಶಗಳಲ್ಲಿ ಸೈನಿಕರ ಮತ್ತು ಅಧಿಕಾರಿಗಳ  ವಸತಿ ಬಡಾವಣೆಗಳು, ಹುಟ್ಟಿಕೊಂಡವು. ಇದರಿಂದಾಗಿ ಹಿಮಾಲಯದ ತಣ್ಣನೆಯ ಗಿರಿಶಿಖರಗಳಂತೆ , ನಿರುದ್ಯೋಗ ಮತ್ತು ಕೃಷಿ ಜಮೀನುಗಳ ಕೊರತೆಯ ನಡುವೆಯೂ ತಣ್ಣಗೆ ಬದುಕಿದ್ದ ಅಲ್ಲಿನ ಜನರ ಸಾಮಾಜಿಕ ಬದುಕಿನಲ್ಲಿ ಪಲ್ಲಟವೊಂದು ಆರಂಭಗೊಂಡಿತು. ರಸ್ತೆ ನಿರ್ಮಾಣ ಮತ್ತು ಸೇನಾ ಪಡೆಯ ಕಛೇರಿ, ವಸತಿ ನಿರ್ಮಾಣ ಕಾರ್ಯಗಳಲ್ಲಿ ದುಡಿಯಲು ಕೆಲಸ ಸಿಗತೊಡಗಿತು. ಆದರೆ, ನೀಡುತ್ತಿದ್ದ ಕೂಲಿದರದಲ್ಲಿ ಮಾತ್ರ ತಾರತಮ್ಯ ಎದ್ದು ಕಾಣುತ್ತಿತ್ತು. ಈ ಪ್ರಾಂತ್ಯದ ಜನರ ಮುಗ್ಧತನವನ್ನು ಮತ್ತು ಅನಕ್ಷರತೆಯನ್ನು ಬಂಡವಾಳ ಮಾಡಿಕೊಂಡ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರು ಕಡಿಮೆ ಕೂಲಿ ಹಣವನ್ನು ಪಾವತಿಸಿ, ಉಳಿದ ಹಣವನ್ನು ತಮ್ಮ ಜೇಬಿಗಿಳಿಸುತ್ತಿದ್ದರು. ಇಂತಹ ಸಮಯದಲ್ಲಿ ಮುಗ್ಧ ಜನರ ಪಾಲಿಗೆ ಆಧಾರವಾಗಿ ಬಂದವರು ಚಾಂಡಿಪ್ರಸಾದ್ ಭಟ್. 
ಇವರು 1956 ರಲ್ಲಿ ಈ ಪ್ರದೇಶಕ್ಕೆ ಬೇಟಿ ನೀಡಿದ್ದ ಜಯಪ್ರಕಾಶ್ ನಾರಾಯಣರ ಚಿಂತನೆಗಳಿಂದ ಪ್ರೇರಿತರಾಗಿದ್ದವರು. ಗಾಂಧೀಜಿ  ಕನಸಿದ್ದ ಗ್ರಾಮಸ್ವರಾಜ್ಯದ ಮಾದರಿಯಲ್ಲಿ ಹಳ್ಳಿಗಳನ್ನು ರೂಪಿಸಬೇಕೆಂಬ ಕನಸು ಹೊತ್ತಿದ್ದ ಜಯಪ್ರಕಾಶ ನಾರಾಯಣರು, ಹಿಮಾಲಯದ ತಪ್ಪಲಿನ ಜನರ ಬವಣೆಗಳನ್ನು ಅರಿತುಕೊಳ್ಳಲು ಈ ಪ್ರದೇಶದಲ್ಲಿ ಒಂದು ತಿಂಗಳ ಕಾಲ ಪ್ರವಾಸ ಮಾಡಿದ್ದರು. ಈ ಸಮಯದಲ್ಲಿ, ಗೋಪೇಶ್ವರ್ ಎಂಬ ಹಳ್ಳಿಯಲ್ಲಿ ಜನಸಿದ್ದ ಯುವಕ ಚಾಂಡಿ ಪ್ರಸಾದ್ ಭಟ್ ಜೀವನ ನಿರ್ವಹಣೆಗೆ ಋಷಿಕೇಶದಲ್ಲಿ ಪ್ರವಾಸಿಗರ ಬಸ್ಸುಗಳಿಗೆ ಏಜೆಂಟ್ ಆಗಿ,ಹಾಗೂ ಅಲ್ಲಿನ ಕಚೇರಿಯೊಂದರಲ್ಲಿ ಮುಂಗಡ ಟಿಕೇಟ್ ವಿತರಿಸುವ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೆ.ಪಿ. ಯವರ ಸಂಪರ್ಕಕ್ಕೆ ಬಂದ ನಂತರ, ಉದ್ಯೋಗಕ್ಕೆ ರಾಜಿನಾಮೆ ನೀಡಿ, ಗಾಂಧಿ ಪರಿಕಲ್ಪನೆಯ ಹಳ್ಳಿಗಳನ್ನು ರೂಪಿಸಲು ಪ್ರಯತ್ನಿಸುತ್ತಿದ್ದರು.
ಗ್ರಾಮಸ್ವರಾಜ್ಯದ ಮೊದಲ ಪ್ರಯತ್ನವಾಗಿ ಅಲ್ಲಿನ ಜನತೆಗೆ ಸಮಾನ ವೇತನ, ಹಾಗೂ ಎಲ್ಲರಿಗೂ ಉದ್ಯೋಗ ದೊರಕಿಸಿಕೊಡಲು, “ ದಶೋಲಿ ಗ್ರಾಮ ಸ್ವರಾಜ್ಯ ಸಂಘ” ಎಂಬ ಸಹಕಾರ ಸಂಘವನ್ನು ಸ್ಥಾಪಿಸಿದರು. ಆರಂಭದಲ್ಲಿ 30 ಮಂದಿ ಸದಸ್ಯರು ಮತ್ತು 700 ಮಂದಿ ಸದಸ್ಯರಲ್ಲದ ಅರೆ ಕೂಲಿ ಕಾರ್ಮಿಕರು ಸಂಘದ ಅಡಿಯಲ್ಲಿ ದುಡಿಯತೊಡಗಿದರು. ಸಂಘ ಸ್ಥಾಪನೆಯಾದ ನಂತರ ಸಿಗುತ್ತಿದ್ದ ಕೂಲಿದರದಲ್ಲಿ ಹೆಚ್ಚಳವಾಯಿತು. ಅಲ್ಲದೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕೈ ಮತ್ತು ಬಾಯಿಗಳು ಬಂದ್ ಆದವು. ಇದರಿಂದ ಸ್ಪೂರ್ತಿಗೊಂಡ ಚಾಂಡಿ ಪ್ರಸಾದ್ ಭಟ್ , ಕೂಲಿ ಕೆಲಸಕ್ಕೆ ಬದಲಾಗಿ ಸೇನಾಪಡೆಯಿಂದ ಮತ್ತು ಆಗಿನ ಉತ್ತರ ಪ್ರದೇಶದ  ಸರ್ಕಾರದ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಮತ್ತು ಮನೆಗಳು, ಸೇತುವೆಗಳ ನಿರ್ಮಾಣದ ಗುತ್ತಿಗೆ ಕೆಲಸವನ್ನು ಸಂಘದ ಪರವಾಗಿ ಪಡೆದು ನಿರ್ವಹಿಸತೊಡಗಿದರು. ಈ ಪ್ರಯತ್ನದ ಫಲವಾಗಿ ಸಂಘದ ಆದಾಯ ಕೇವಲ ಮೂರು ವರ್ಷಗಳಲ್ಲಿ ದ್ವಿಗುಣಗೊಂಡಿತು. ಆನಂತರ ಸಹಕಾರಿ ಸಂಘದ ನೇತೃತ್ವದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾದ ಸಲಕರಣೆಗಳು ಮತ್ತು ಮನೆ ಬಳಕೆಗೆ ಬೇಕಾದ ಮರದ ಉಪಕರಣಗಳನ್ನು ತಯಾರಿಸಲು ಮುಂದಾದರು. ದಶೋಲಿ ಗ್ರಾಮ ಸ್ವರಾಜ್ಯದ ಸಂಘದ ಚಟುವಟಿಕೆಗಳನ್ನು ಇಡೀ ಪ್ರಾಂತ್ಯಕ್ಕೆ ವಿಸ್ತರಿಸಿ, ಎಂಟು ಶಾಖಾ ಕಛೇರಿಗಳನ್ನು ತೆರೆದರು.
ಕೃಷಿ ಚಟುವಟಿಕೆಗೆ ಬೇಕಾದ ಮರಗಳನ್ನು ಪಡೆಯಲು ಸರ್ಕಾರದ ಅರಣ್ಯ ಇಲಾಖೆಯ ಬಳಿ ಹೋದಾಗ, ಅಲ್ಲಿಯವರೆಗೆ ಗುಪ್ತವಾಗಿ ನಡೆಯುತ್ತಿದ್ದ ಮರಗಳ ಮಾರಣ ಹೋಮದ ಅವ್ಯವಹಾರ ಬೆಳಕಿಗೆ ಬಂದು ಘರ್ ವಾಲ್ ನ ಜನತೆ ಎಚ್ಚೆತ್ತುಕೊಳ್ಳುವಂತೆ ಮಾಡಿತು. ಸಾಮಾನ್ಯವಾಗಿ ಭೂಸವೆತದಿಂದಾಗಿ ನೆಲಕ್ಕೆ ಉರುಳಬಹುದಾದ ಮರಗಳನ್ನು ಮಾತ್ರ ಕಡಿಯಲು ಗುತ್ತಿಗೆದಾರರಿಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ, ಅರಣ್ಯಾಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಭೂಮಿಗೆ ಬೇರು ಬಿಟ್ಟು ಭದ್ರವಾಗಿರುವ ಮರಗಳನ್ನು ಸಹ ಧರೆಗೆ ಉಳರುಳುವ ಮರಗಳು ಎಂದು ಗುರುತು ಹಾಕುವುದರ ಮೂಲಕ  ಕಡಿಯಲು ಅನುಮತಿ ನೀಡುತ್ತಿದ್ದರು.
ಇದೇ ವೇಳೆಗೆ 1970ರಲ್ಲಿ ಹಿಮಾಲಯದ ತಪ್ಪಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವೊಂದು ಅಲ್ಲಿನ ಜನರಿಗೆ ಪರಿಸರ ರಕ್ಷಣೆ ಕುರಿತು ಪರೋಕ್ಷವಾಗಿ ಪಾಠ ಕಲಿಸಿತ್ತು. ಅಲ್ಲಿನ ಜನ ತಮ್ಮ ಜೀವಮಾನದಲ್ಲಿ ಎಂದೂ ಕಂಡಿರದ ದುರಂತ ಘಟನೆಗೆ ಸಾಕ್ಷಿಯಾದರು. ಸಾಮಾನ್ಯವಾಗಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ಅಲಕಾನಂದ ನದಿ 1970 ರಲ್ಲಿ ಪ್ರವಾಹದ ರೂಪದಲ್ಲಿ ತನ್ನ ರೌದ್ರ ರೂಪವನ್ನು ಪ್ರದರ್ಶಿಸಿತು. ಸುಮಾರು 60 ಅಡಿ ಎತ್ತರದಷ್ಟು ಉಕ್ಕಿ ಹರಿದ ಅಲಕಾನಂದ ನದಿಯ ನೀರು ಒಂದು ಗ್ರಾಮವನ್ನು ಸಂಪೂರ್ಣವಾಗಿ ಕಬಳಿಸಿತು. ನೂರಾರು ಮನೆಗಳು ಕೊಚ್ಚಿ ಹೋದವು. 30 ಪ್ರಯಾಣಿಕರಿದ್ದ (ಯಾತ್ರಾರ್ಥಿಗಳು) ಬಸ್ ಹಾಗೂ 5 ಸೇತುವೆಗಳು ಗುರುತು ಸಿಗದ ರೀತಿಯಲ್ಲಿ ನದಿಯಲ್ಲಿ ಕೊಚ್ಚಿ ಹೋದವು. ಒಟ್ಟು 200 ಮಂದಿ ಪ್ರಾಣ ಕಳೆದುಕೊಳ್ಳಬೇಕಾಯಿತು. ನದಿಯ ಪ್ರವಾಹ ಇಳಿದ ನಂತರ, ಇಡೀ ಪರಿಸ್ಥಿಯನ್ನು ಅವಲೋಕಿಸಿದಾಗ ಮಾನವನ ಸ್ವಾರ್ಥ ಮತ್ತು ಹಸ್ತಕ್ಷೇಪ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿದ್ದವು. ಪ್ರವಾಹಕ್ಕೆ ಮುನ್ನ ಒಂದು ದಶಕದ ಅವಧಿಯಲ್ಲಿ ನದಿಯ ಪಾತ್ರದ ಹಿಮಾಲಯದ ಪರ್ವತ ಪ್ರದೇಶದಲ್ಲಿ ಲಕ್ಷಾಂತರ ಮರಗಳನ್ನು ಕಡಿದು ಹಾಕಲಾಗಿತ್ತು. ಮರಗಳ ವಿರಳತೆ ಮತ್ತು ಮಣ್ಣಿನ ಸೆವೆತದಿಂದಾಗಿ, ಭೂಮಿಗೆ ಬಿದ್ದ ಮಳೆ ನೀರು, ನೆಲದಲ್ಲಿ ಇಂಗುವ ಬದಲು ಪರ್ವತಗಳ ಇಳಿಜಾರಿನ ಮೂಲಕ ಅಲಕಾನಂದಾ ನದಿಯ ಒಡಲು ಸೇರಿತ್ತು.ಈ ಘಟನೆ ಅಲ್ಲಿನ ಜನಕ್ಕೆ ಮರಗಳ ಮಹತ್ವದ ಬಗ್ಗೆ ಅರಿವು ಮೂಡಿಸಿತ್ತು.
ಸರ್ಕಾರದ ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು,  ಮತ್ತು ಕಡಿಯುವ ಮರಗಳ ಸಂಖ್ಯೆ ತಿಳಿಯಲು ನಿರ್ಧರಿಸಿದ ಸಂಘದ ಸದಸ್ಯರು, ತಾವೂ ಕೂಡ ಮರಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸತೊಡಗಿದರು. ಅಲ್ಲಿಯವರೆಗೆ ಬಿಸಾಕುವ ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಮರಗಳ ಬೆಲೆ ದಿಡೀರನೆ ಏರತೊಡಗಿತು. ಜೊತೆಗೆ ಹರಾಜಿನಲ್ಲಿ ಭಾಗವಹಿಸಿದೆ ಇದ್ದರೆ ದಶೋಲಿ ಗ್ರಾಮಸ್ವರಾಜ್ಯ ಸಂಘಕ್ಕೆ ಪುಕ್ಕಟೆಯಾಗಿ ಮರಗಳನ್ನು ಕೊಡುವುದಾಗಿ ಆಮೀಷ ತೋರಿಸಲಾಯಿತು. ಇಂತಹ ಆಸೆಗಳಿಗೆ ಮಣಿಯದ ಚಾಂಡಿ ಪ್ರಸಾದ್ ಭಟ್ ಮರಗಳ ಮಾರಣ ಹೋಮದ ಬಗ್ಗೆ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಸಂಧರ್ಭದಲ್ಲಿ ಅವರು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಆಶ್ರಯಿಸಿದ್ದರು.
ಇವೊತ್ತಿಗೂ ಹಿಮಾಲಯದ ತಪ್ಪಲಿನ ಪ್ರದೇಶದ ಹಳ್ಳಿಗಳಲ್ಲಿ ನಿಸರ್ಗದ ಜೊತೆ, ಮಹಿಳೆಯರಿಗೆ  ಪುರುಷರಿಗಿಂತ  ಹೆಚ್ಚು  ನಿಕಟವಾದ ಒಡನಾಟವಿದೆ. ಉರುವಲು ಸೌದೆ, ಮತ್ತು  ತಮ್ಮ  ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಅರಣ್ಯದ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿರುವವರು ಮಹಿಳೆಯರು.  ಅರಣ್ಯ ಮತ್ತು ಮರಗಳ ಬಗ್ಗೆ ಪವಿತ್ರವಾದ ಭಾವನೆ ಹೊಂದಿದ್ದಾರೆ.ಜೊತೆಗೆ ಅಲ್ಲಿನ ಪ್ರದೇಶಗಳಲ್ಲಿ ಮರಗಳ ಕುರಿತು ಜಾನಪದ ಪರಿಕಲ್ಪನೆಯೊಂದು ಆ ಜನರ ಎದೆಯಲ್ಲಿ ಜೀವಂತವಾಗಿದೆ. ಅದೇನೆಂದರೆ, “ ನಾನು ಈ ಮರದಿಂದ ಪಡೆಯುತ್ತಿರುವ ನೆರಳು, ತಿನ್ನತ್ತಿರುವ ಹಣ್ಣು, ಪಡೆಯುತ್ತಿರುವ ಉರುವಲು ಕಟ್ಟಿಗೆ ಅಥವಾ  ಜಾನುವಾರುಗಳಿಗೆ ಆಹಾರವಾಗಿ ಬಳಸುತ್ತಿರುವ ಸೊಪ್ಪು ಇವೆಲ್ಲವೂ ನನಗೆ ಮಾತ್ರ ಸೀಮಿತವಲ್ಲ. ಇವುಗಳು ನನ್ನ ಮುಂದಿನ ತಲೆಮಾರುಗಳಿಗೂ ಸಲ್ಲುತ್ತವೆ” ಇಂತಹ ಸುಂದರ  ಪರಿಕಲ್ಪನೆಯೊಂದು ಜೀವಂತ  ಇರುವ ಕಾರಣಕ್ಕಾಗಿ  ಮರಗಳನ್ನು ಕಡಿಯುವ ಗುತ್ತಿಗಾರರ ರಕ್ಷಣೆಗೆ ಬಂದ ಪೊಲೀಸರ ಬಂದೂಕಿನ ಕೊಳವೆಗೆ , ರೇಣಿ ಎಂಬ ಗ್ರಾಮದ ಅನಕ್ಷರಸ್ತ ಹೆಣ್ಣು ಮಗಳಾದ ಗೌರದೇವಿ ಎಂಬಾಕೆ ತನ್ನ ಎದೆಯ ಮೇಲಿನ ಸೆರಗು ಬಿಸಾಕಿ ಎದೆ ಕೊಟ್ಟು ನಿಲ್ಲಲು ಸಾಧ್ಯವಾಯಿತು. ಆಕೆ, ಗುತ್ತಿಗೆ ದಾರರ  ರಕ್ಸಣೆಗೆ ಬಂದ ಪೊಲೀಸರಿಗೆ ಹೇಳಿದ ಮಾತುಗಳಿವು.” ಮೊದಲು ನನ್ನನ್ನು ಉರುಳಿಸಿ ನಂತರ ಮರಗಳನ್ನು ಉರುಳಿಸಿ.”

iಇಂತಹ ಪರಿಕಲ್ಪನೆಗಳ ಸ್ಪೃಷ್ಟ ಅರಿವಿದ್ದ ಚಾಂಡಿ ಪ್ರಸಾದ್ ಭಟ್  1970 ರಿಂದ 1773 ರ ವರೆಗೆ ಹಿಮಾಲಯದ ಹಳ್ಳಿ, ಹಳ್ಳಿಗಳನ್ನು ತಿರುಗಿ ಜನತೆಯನ್ನು ಮರಗಳ ರಕ್ಷಣೆಗಾಗಿ ಸಂಘಟಿಸಿದರು, ಅವರು ಸತತ ಮೂರು ವರ್ಷಗಳ ಕಾಲ ಘರ್ ವಾಲ್, ತೆಹ್ರಿ ಪ್ರಾಂತ್ಯದಲ್ಲಿ ಸಂಚರಿಸಿ  ಬಹಿರಂಗ ಸಭೆ, ಭಾಷಣ ಮತ್ತು ಜಾಥ ನಡೆಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಸಂಧರ್ಭದಲ್ಲಿ ಅವರಿಗೆ ಮಧ್ಯ ವಯಸ್ಕಿನ ಧೀರ ಮಹಿಳೆ ಗೌರದೇವಿ ದೊರಕಿದಳು.
                                             ( ಮುಂದುವರಿಯುವುದು)


ಬುಧವಾರ, ಜೂನ್ 12, 2013

ಅಪ್ಪಿಕೊ ( ಚಿಪ್ಕೊ) ಚಳವಳಿಯ ಕಥನ-ಒಂದು

ಭಾರತದ ಚಿಪ್ಕೊ ಚಳವಳಿ  ಎಂದು  ಕರೆಯಲಾಗುವ ಅಪ್ಪಿಕೊ ಚಳವಳಿಗೆ ಹಲವಾರು ಆಯಾಮಗಳಿವೆ. ಹಿಮಾಲಯದ ತಪ್ಪಲಿನ ಅರಣ್ಯ ಮತ್ತು ಅಲ್ಲಿನ ಪರಿಸರ ಉಳಿಸಲು ಸ್ಥಳಿಯರು 1970 ರ ದಶಕದಲ್ಲಿ ಆರಂಭಿಸಿದ ಅಪ್ಪಿಕೊ ಚಳವಳಿ ವಿಶ್ವವ್ಯಾಪಿ ಗಮನ ಸೆಳದಿತ್ತು. ಜೊತೆಗೆ ಭಾರತದಲ್ಲಿ ಪರಿಸರ ಪ್ರಜ್ಙೆಗೆ ಅದು ಭದ್ರ ಬುನಾದಿ ಹಾಕಿಕೊಟ್ಟಿತು. ಆದರೆ, ಈ ಚಳುವಳಿಯ ಇತಿಹಾಸ ಕುರಿತಂತೆ ಹಲವರು ಹಲವು ಬಗೆಯ ಇತಿಹಾಸವನ್ನು ವ್ಯಾಖ್ಯಾನಿಸುತ್ತಾ, ನಮ್ಮ ಮುಂದಿಡುತ್ತಾ, ಚಳವಳಿಯ ನಿಜವಾದ ಬೇರುಗಳನ್ನು ಮರೆ ಮಾಚುತ್ತಿದ್ದಾರೆ ಎನಿಸುತ್ತದೆ.
ಅಪ್ಪಿಕೊ ಚಳುವಳಿಯಲ್ಲಿ ಚಾಂಡಿ ಪ್ರಸಾದ್ ಭಟ್, ಸುಂದರ್ ಲಾಲ್ ಬಹುಗುಣ, ಧೂಮ್ ಸಿಂಗ್ ನೇಗಿ, ಘನಶ್ಯಾಮ್ ಶೈಲಾನಿ ಮುಖ್ಯ ಪಾತ್ರ ವಹಿಸಿದ್ದರು. ಇಡೀ ಹಿಮಾಲಯದ ತೆಹ್ರಿ ಮತ್ತು ಘರ್ ವಾಲ್  ಪ್ರಾಂತ್ಯದ ಸುಮಾರು ಹತ್ತು ಜಿಲ್ಲೆಗಳಲ್ಲಿ ನಡೆದ ಈ ಚಳವಳಿಗೆ ಬೇರೆ ಬೇರೆ ನಾಯಕರು ನೇತೃತ್ವ ವಹಿಸಿದ್ದರು. ಜಯಪ್ರಕಾಶ ನಾರಾಯಣ ರಿಂದ ಪ್ರೇರಿತರಾಗಿದ್ದ, ಚಾಂಡಿ ಪ್ರಸಾದ್ ಭಟ್, ಹಾಗೂ ಗಾಂಧಿ ಅನುಯಾಯಿಯಾಗಿದ್ದ ಸುಂದರ ಲಾಲ್ ಬಹುಗುಣ ಇವರ ನಡುವೆ ನಿಸರ್ಗದ ಕಾಳಜಿ ಕುರಿತಂತೆ ಭಿನ್ನ ಆಲೋಚನೆಗಳಿದ್ದರೂ  ಸಹ ಗುರಿ ಮಾತ್ರ ಒಂದೇ  ಆಗಿತ್ತು.
ಅಪ್ಪಿಕೊ ಚಳವಳಿಯ ನೇತಾರರು ಪುರುಷರೇ ಆದರೂ ಕೂಡ ಇಡೀ ಚಳವಳಿಗೆ ಭದ್ರ ಬುನಾದಿಯಾದವರು  ಹಿಮಾಲಯ ತಪ್ಪಲಿನ ತಾಯಂದಿರು ಎಂಬುದುನ್ನು ಮರೆಯಲಾಗದು. ಮುಷ್ಕರಕ್ಕೆ ಓಗೊಟ್ಟು ಮರಗಳನ್ನು ತಬ್ಬಿ ಹಿಡಿದು, ಕೊಡಲಿಗೆ, ಗರಗಸಕ್ಕೆ ತಮ್ಮ ದೇಹವನ್ನು ಒಡ್ಡಿದವರು ಮಹಿಳೆಯರು ಎಂಬುದನ್ನ  ಇತಿಹಾಸದ ಮುನ್ನೆಲೆಗೆ ತರುವಲ್ಲಿ ವಿಫಲವಾದ ಕಾರಣವನ್ನು ಹುಡುಕುತ್ತಾ ಹೋದರೆ ಕಾಣದ ಕೈಗಳ ಕೈವಾಡವಿರಬಹುದೆ? ಎಂಬ ಸಂಶಯ ಮೂಡುತ್ತದೆ..
ಭಾರತಕ್ಕೆ ಈ ಮಾದರಿಯ ಅಪ್ಪಿಕೊ ಚಳವಳಿ ಹೊಸತೇನಲ್ಲ. ಇದರ ಬೇರುಗಳು ನಮ್ಮನ್ನು ಮುನ್ನೂರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತವೆ. 17 ನೇ ಶತಮಾನದಲ್ಲಿ ರಾಜಸ್ಥಾನದ ಬಿಷ್ನೋಯ್ ಪಂಗಡಕ್ಕೆ ಸೇರಿದ ಜನಾಂಗವೊಂದು ಖೇಜರಿ ಮರಗಳನ್ನು ಉಳಿಸುವುದರ ಸಲುವಾಗಿ ಅಮೃತಾ ದೇವಿ ಎಂಬ ಮಹಿಳೆಯ ನೇತೃತ್ವದಲ್ಲಿ ಮುನ್ನೂರು ಮಹಿಳೆಯರು  ಮರಗಳನ್ನು ಅಪ್ಪಿಕೊಂಡು ಕೊಡಲಿಗೆ ಬಲಿಯಾದ ಘಟನೆ ಇತಿಹಾಸದಲ್ಲಿ ಧಾಖಲಾಗಿದೆ.
ಪರಿಸರ ಕುರಿತು ಮಾತನಾಡುವ, ಬರೆಯುವ ಮತ್ತು  ಓದುವ ನಾವೆಲ್ಲಾ ಗಮನಿಸಬೇಕಾದ ಬಹು ಮುಖ್ಯವಾದ ಸಂಗತಿಯೊಂದಿದೆ. ಅದೇನೆಂದರೆ, ಈ ದಿನ ಭೂಮಂಡಲದಲ್ಲಿ ನೀರು, ಗಾಳಿ, ಭೂಮಿ, ಮರ ಗಿಡ, ಜೀವ ಪ್ರಭೇಧಗಳು ಇನ್ನೂ ಜೀವಂತವಾಗಿದ್ದರೆ, ಅಥವಾ ಸುಸ್ಥಿತಿಯಲ್ಲಿ ಇದ್ದರೆ, ಅದರ ಹಿಂದೆ ಹೆಣ್ಣು ಸಂಕುಲದ ತಾಯ್ತನದ ಪ್ರೀತಿಯೊಂದು ಅಡಗಿದೆ ಎಂಬುದು. ಭೂಮಿಯನ್ನು ಹೆಣ್ಣಿಗೆ ಹೋಲಿಸಿ ಬಣ್ಣಿಸುವ ನಾವು, ಈ ನೆಲದ ಹೆಣ್ಣು ಮಕ್ಕಳು  ಭೂಮಿತಾಯಿಯ ವಾರಸುದಾರರು ಎಂಬುದನ್ನು ಮರೆತ್ತಿದ್ದೇವೆ. ನಾವು ಸೆವೆಸಿದ ಹೆಜ್ಜೆಯ ಗುರುತುಗಳನ್ನು ಒಮ್ಮೆ ಅವಲೋಕಿಸಿದರೆ, ಶತಮಾನಗಳುದ್ದಕ್ಕೂ ನೈಸರ್ಗಿಕ ಸಮತೋಲನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಣ್ಣು ಸಂಕುಲ  ನಿರ್ವಹಿಸಿರುವ ಪಾತ್ರ ನಮ್ಮ ಅರಿವಿಗೆ ಬರುತ್ತದೆ. ಈ ಕಾರಣಕ್ಕಾಗಿ ನಮ್ಮ ಪೂರ್ವಿಕರು ಭೂಮಿಯನ್ನು, ನೀರನ್ನು ಮತ್ತು ಪಕೃತಿಯನ್ನು ಸ್ತ್ರೀಗೆ ಹೋಲಿಸಿದ್ದರು. ನಮ್ಮ ಪ್ರಾಚೀನ ಕೃಷಿ ಜಗತ್ತು ಹೆಣ್ಣಿನ ಮುಖಂಡತ್ವದಲ್ಲಿ ಸುರಕ್ಷಿತವಾಗಿತ್ತು. ಹಾಗಾಗಿ ಪರಿಸರದ ಸರಪಳಿಯ ಕೊಂಡಿಗಳು ಎನಿಸಿಕೊಂಡ ಎಲ್ಲಾ ವಿಧವಾದ ಬೀಜ ಸಂಪತ್ತು, ಸಸ್ಯ ಸಂಪತ್ತು, ಪಕ್ಷಿ ಮತ್ತು ಪ್ರಾಣಿಗಳ ಸಂಕುಲ ಅವಳ ಕೈಲಿ ಸುರಕ್ಷಿತವಾಗಿದ್ದವು.
ತೃತೀಯ ಜಗತ್ತಿನ ಅಂದರೆ, ನಮ್ಮ  ಪೂರ್ವ ಜಗತ್ತಿನ ರಾಷ್ಟ್ರಗಳ ಮಹಿಳೆಯರ ಇತಿಹಾಸವನ್ನು ಗಮನಿಸುವಾಗ ಒಂದು ಅಂಶ ನಮಗೆ ಮನದಟ್ಟಾಗುತ್ತದೆ. ಪಶ್ಚಿಮ ಜಗತ್ತು ಅವಿಷ್ಕರಿಸಿದ ವಿಜ್ಙಾನವಾಗಲಿ ಅಥವಾ ಅಭಿವೃದ್ಧಿ ಕುರಿತ ಚಿಂತನೆಗಳಾಗಲಿ ಸಮಗ್ರ ಮನುಕುಲದ ಒಳಿತನ್ನು ಒಳಗೊಂಡಿಲ್ಲ. ಅವು ಮಹಿಳೆಯರನ್ನು ಹೊರಗಿಟ್ಟು ರೂಪಿತವಾಗಿರುವ , ಚಾರಿತ್ರಿಕವಾದ ಮತ್ತು ಸೈದ್ಧಾಂತಿಕವಾದ ಪುರುಷ ನಿರ್ಮಿತ ಯೋಜನೆ ಮತ್ತು ಪರಿಕಲ್ಪನೆಗಳು ಮಾತ್ರ. ಆದರೆ,ಅವುಗಳು ಎಲ್ಲರನ್ನೂ ಒಳಗೊಂಡಿದೆ ಎಂದು ನಮ್ಮನ್ನು ನಂಬುವಂತೆ ಮಾಡಿವೆ ಅಷ್ಟೇ. ಇವುಗಳ ಹಿಂದೆ ಪರಿಸರದ ನಾಶ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಹುನ್ನಾರಗಳು ಅಡಗಿವೆ. 15 ಮತ್ತು 16 ನೇ ಶತಮಾನದಲ್ಲಿ ಯೋರೋಪಿನಲ್ಲಿ ತಲೆ ಎತ್ತಿದ ಪಿತೃ ಪ್ರಧಾನ ವ್ಯವಸ್ಥೆ ಮತ್ತು ಆಧುನಿಕ ವಿಜ್ಙಾನ, ಮತ್ತು ಇವುಗಳ ಜೊತೆ ಕೈಜೋಡಿಸಿದ ಕೈಗಾರಿಕಾ ಕ್ರಾಂತಿ ಇವೆಲ್ಲವೂ ಮಹಿಳೆಯನ್ನು ಪ್ರಕೃತಿಯಿಂದ ದೂರಮಾಡಿ ನಾಲ್ಕು ಗೋಡೆಯ ನಡುವೆ ಬಂಧಿಯನ್ನಾಗಿಸಿದವು.
ಇದರ ಪರಿಣಾಮವಾಗಿ ಇವೊತ್ತಿಗೂ ಏಷ್ಯಾದ ರಾಷ್ಟ್ರಗಳಲ್ಲಿ ಹೆಣ್ಣಿಗೆ ಕೋಳಿ ಮಾಂಸ, ಮೊಟ್ಟೆ, ಸಮುದ್ರದ ಸೀಗಡಿ, ಮೀನು ಮುಂತಾದ  ಪೌಷ್ಟಿಕ ಆಹಾರಗಳನ್ನು ಉಷ್ಣ ಪದಾರ್ಥಗಳು ಎಂಬ ನೆಪವೊಡ್ಡಿ ನಿರಾಕರಿಸಲಾಗುತ್ತಿದೆ. ಅತಿ ಹೆಚ್ಚು ಹಾಲು ಸೇವನೆಯಿಂದ ಬಂಜೆತನ ಬರುತ್ತದೆ ಎಂಬ ಕಾರಣಕ್ಕಾಗಿ ಹೆಣ್ಣು ಮಕ್ಕಳಿಗೆ ಹಾಲನ್ನು ನಿರಾಕರಿಸುವ ಸಮುದಾಯಗಳು ಇಂದಿಗೂ ಈ ಪೂರ್ವ ಜಗತ್ತಿನ ರಾಷ್ಟ್ರಗಳಲ್ಲಿ ಜೀವಂತವಾಗಿವೆ.
ಹಿಮಾಲಯದ ಚಿಪ್ಕೊ ಅಥವಾ ಅಪ್ಪಿಕೊ ಚಳವಳಿಗೆ ಮೂಲ ಪ್ರೇರಣೆ ಒದಗಿದ್ದು ಬಂದದ್ದು, ಸ್ತ್ರೀ ಸಮುದಾಯದಿಂದ ಎಂಬುದು ಗಮನಾರ್ಹ ಸಂಗತಿ. ಆದರೆ, ಆದರೆ, ಭಾರತದ ಪುರುಷ ಪ್ರಧಾನ ಸಮಾಜದಲ್ಲಿ ಅಪ್ಪಿಕೊ ಚಳವಳಿಯ ಇತಿಹಾಸದಲ್ಲಿ  ಮೂಲ ಕ್ರಾಂತಿಕಾರಿಗಳಾದ ಮಹಿಳೆಯರನ್ನು ನೈಪಥ್ಯಕ್ಕೆ ಸರಿಸಲಾಗಿದೆ ಎನಿಸುತ್ತದೆ.
1892 ರಲ್ಲಿ ಬ್ರಿಟೀಷ್ ಸೇನೆಯ ನೌಕಾಧಿಕಾರಿಯ ಮಗಳಾಗಿ ಬ್ರಿಟನ್ ನಲ್ಲಿ  ಜನಿಸಿದ ಮೆಡಲಿನ್ ಸ್ಲೇಡ್ ಎಂಬ ಹೆಣ್ಣು ಮಗಳು ಗಾಂಧಿ ಚಿಂತನೆಯಿಂದ ಪ್ರಭಾವಗೊಂಡು, ಭಾರತಕ್ಕೆ ಬಂದು ಮೀರಾ ಬೆಹನ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡು, ಗಾಂಧೀಜಿಯವರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಮೀರಾ ಬೆಹನ್ 1947 ರ ಭಾರತ ಸ್ವಾತಂತ್ರ್ಯಾ ನಂತರ ಋಷಿಕೇಶ ಮತ್ತು ಹರಿದ್ವಾರದ ನಡುವೆ ಪಶುಲೋಕ್ ಎಂಬ ಆಶ್ರಮವನ್ನು ತೆರೆದು ಗೋವುಗಳನ್ನು ಸಾಕುತ್ತಾ ಬದುಕುವುದಕ್ಕೆ ಆರಂಭಿಸಿದ್ದರು. ಗಾಂಧಿ ತಾವು ಸಾಯುವ ಹದಿನೈದು ದಿನಕ್ಕೆ ಮುನ್ನ ಅಂದರೆ, 1948 ರ ಜನವರಿ ಎರಡನೇ ವಾರದಲ್ಲಿ ಮೀರಾ ಬೆಹನ್ ಗೆ ಪತ್ರ ಬರೆದು ಆಶ್ರಮದ ನೆಪದಲ್ಲಿ ನಿನ್ನ ಬದುಕನ್ನು ಕಟ್ಟಿ ಹಾಕಿಕೊಳ್ಳಬೇಡ, ಭಾರತದ ಮಹಿಳೆಯರ ಸ್ಥಿತಿ ಗತಿಯ ಸುಧಾರಣೆ ಮತ್ತು ನೈಸರ್ಗಿಕ ರಕ್ಷಣೆಯಲ್ಲಿ ನೀನು ವಹಿಸಬೇಕಾದ ಪಾತ್ರ ಬಹಳಷ್ಟಿದೆ ಎಂದು ತಿಳಿಸಿದ್ದರು. ನಂತರ ಆಶ್ರಮ  ತೊರೆದು ಹಿಮಾಲಯದ ತಪ್ಪಲಿನ ಘರ್ ವಾಲ್ ಪ್ರದೇಶಕ್ಕೆ ಬಂದ ಮೀರಾ ಬೆಹನ್ ಅಲ್ಲಿನ ಮಹಿಳೆಯರ ಮತ್ತು ಪರಿಸರ ಕುರಿತು ಅಧ್ಯಯನದಲ್ಲಿ ತೊಡಗಿಕೊಂಡರು.
ಮೊದಲಿಗೆ ಮೀರಾಬೆಹನ್ ಅಲ್ಲಿನ ಜನಪದ ಕಥೆಗಳು ಮತ್ತು ಹಾಡುಗಳತ್ತ ಗಮನ ಹರಿಸಿದರು. ಅಲ್ಲಿನ ಕಥೆಗಳಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಖಾರೀಕ್ ಮತ್ತು ಬಂಜ್ ಎಂಬ ಮರಗಳು ಅಲ್ಲಿನ ಪ್ರದೇಶದಲ್ಲಿ ಕಾಣಸಿಗುತ್ತಿರಲಿಲ್ಲ, ಕೇವಲ ಓಕ್ ಮರಗಳು ಮಾತ್ರ ಇದ್ದವು. ಜೊತೆಗೆ ಸಮೃದ್ಧ ಗೋವುಗಳ ಸಂಪತ್ತಾಗಲಿ, ಹಾಲು ಅಥವಾ ಮೊಸರಾಗಲಿ ಇರಲಿಲ್ಲ. ಹಿರಿಯ ಮಹಿಳೆಯರು ಹಾಡುತ್ತಿದ್ದ ಜಾನಪದ ಗೀತೆಯಲ್ಲಿನ ಪೂರ್ವ ಹಿಮಾಲಯದ ಇತಿಹಾಸಕ್ಕೂ , ವರ್ತಮಾನದ ಇತಿಹಾಸಕ್ಕೂ ಪಕೃತಿಯಲ್ಲಿ ಅಜಗಜಾಂತರ ವೆತ್ಯಾಸವಿತ್ತು. ಬ್ರಿಟೀಷರ ವಸಾಹತು ಶಾಹಿ ಆಳ್ವಿಕೆಯಲ್ಲಿ ಅಲ್ಲಿನ ಮರಗಳ ಸಂಪತ್ತು ಲೂಟಿಯಾಗಿತ್ತು. ಹಿಮಾಲಯದ ಶಿಖರಗಳು ಮರಗಳಿಲ್ಲದೆ ಬರಡಾಗಿದ್ದವು. ಈ ಅಂಶಗಳು ಮೀರಾಬೆಹನ್ ಮನದಟ್ಟಾಗುತ್ತಿದ್ದಂತೆ ಅಲ್ಲಿನ ಪರಿಸರ ರಕ್ಷಣೆಗೆ ಮಹಿಳೆಯರನ್ನು ಒಂದುಗೂಡಿಸಿ ಪ್ರಜ್ಙೆ ಮೂಡಿಸತೊಡಗಿದರು.
ಇದೇ ವೇಳೆಗೆ ಸ್ವಾತಂತ್ರ್ಯ ನಂತರ ಭಾರತ- ಚೀನಾ ಗಡಿ ಭಾಗಕ್ಕೆ ಭಾರತದ ಸೇನೆ ನೀಯೋಜಿತ ಗೊಂಡಿದ್ದರಿಂದ ಸೇನೆಯ ಚಲನ ವಲನಕ್ಕೆ  ಅನೂಕೂಲವಾಗುವಂತೆ 1950ರ ದಶಕದಲ್ಲಿ ಹಿಮಾಲಯದ  ಘರ್ ವಾಲ್ ಮತ್ತು ತೆಹ್ರಿ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ರಸ್ತೆಗಳು ಅಭಿವೃದ್ಧಿಗೊಂಡವು. ರಸ್ತೆ ಅಭಿವೃದ್ಧಿಯಾಗುತ್ತಿದ್ದಂತೆ ಭ್ರಷ್ಟ ಅರಣ್ಯಾಧಿಕಾರಿಗಳ ಜೊತೆ ಶಾಮೀಲಾದ ಮರಗಳ ಗುತ್ತಿಗೆದಾರರು ಈ ಪ್ರದೇಶಕ್ಕೆ  ಕಾಲಿಟ್ಟರು. ಅಲ್ಲಿಂದ ಮರಗಳ ಮಾರಣ ಹೋಮ ಅರಂಭವಾಗಿ ಅಪ್ಪಿಕೊ ಚಳವಳಿಗೆ ನಾಂದಿಯಾಡಿತು.
                                                                              (ಮುಂದುವರಿಯುವುದು)




ಸೋಮವಾರ, ಜೂನ್ 10, 2013

ಕಾಡ್ಗಿಚ್ಚಿನ ಕರಾಳ ಕಥೆ

ಇತ್ತೀಚೆಗಿನ ದಿನಗಳಲ್ಲಿ ಅರಣ್ಯದಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚು ದಿನ ನಿತ್ಯದ ಸಂಗತಿಯೇನೊ ಎಂಬಂತಾಗಿ ಈ ಸಂಗತಿ ಯಾರ ಎದೆಗೂ ತಾಕದ ಮೋಕ ಜೀವಿಗಳ ಮೌನ ರೋದನವಾಗಿ,  ಒಂದರ್ಥದಲ್ಲಿ ನಿಜವಾದ ಅರಣ್ಯ ರೋದನವಾಗಿದೆ. ಹತ್ತಿ ಉರಿಯುವ ಅರಣ್ಯದ ಅಗ್ನಿಜ್ವಾಲೆಯಲ್ಲಿ ಯಾವೊಂದು ಪ್ರತಿರೋಧವಿಲ್ಲದೆ ಬೆಂದುಹೋಗುವ ಹಕ್ಕಿಗಳಗೂಡು, ಅವುಗಳಲ್ಲಿ ಆಗ ತಾನೆ ಕಣ್ಣುಬಿಡುತ್ತಿರುವ ಹಕ್ಕಿಮರಿಗಳು, ನೆಲದ ಮೇಲಿನ ಚಿಟ್ಟೆ, ಪತಂಗ, ಹಾವು, ಕಪ್ಪೆ, ಹುಳ ಉಪ್ಪಟೆಗಳು, ಇರುವೆ ಗೂಡು, ಮರದಮೇಲಿನ ಮಂಗಗಳ ಚೀರಾಟ, ದಿಕ್ಕುತಪ್ಪಿ ಅಲೆಯುವ ಹರಿಣಿ, ಆನೆ, ಹುಲಿ, ಚಿರತೆಗಳ ಗಳ ಹಿಂಡು ಹೀಗೆ ಇವುಗಳ ಆರ್ತನದಕ್ಕೆ ಕಣ್ಣಾಗುವವರು, ಕಿವಿಯಾಗುವವರು ಯಾರೂ ಜಗತ್ತಿನಲ್ಲಿ ಇಲ್ಲವೆನೋ ಎಂದೆನಿಸುತ್ತದೆ. ಅರಣ್ಯ ಹತ್ತಿ ಉರಿಯುವಾಗ ಇಂತಹ ದುರ್ಘಟನೆಗಳಿಗೆ ಹಲವಾರು  ಬಾರಿ ಸಾಕ್ಷಿಯಾಗಿರುವ  ನನ್ನಂತಹವನಿಗೆ ಇವೆಲ್ಲವೂ ಜೀವ ಹಿಂಡುವ ಸಂಗತಿಗಳು.
ಅರಣ್ಯದಲ್ಲಿ ಅಗ್ನಿ ಆಕಸ್ಮಿಕ ಎನ್ನುವುದು ಅರಣ್ಯದ ಇತಿಹಾಸದಷ್ಟು ಹಳೆಯ ಸಂಗತಿ. ಆದರೆ, ಹಿಂದಿನ ದಿನಗಳಲ್ಲಿ  ಅರಣ್ಯದಲ್ಲಿ ನೈಸರ್ಗಿಕವಾಗಿ ಅಗ್ನಿ ಆಕಸ್ಮಿಕ ಸಂಭವಿಸುತ್ತಿದ್ದುದು ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ. ಒಂದನೇಯದಾಗಿ, ಮರಗಳಿಗೆ ಸಿಡಿಲು ಬಡಿದಾಗ, ಎರಡನೇಯದು ಬಿದಿರು ಬೆಳೆಯುವ ಪ್ರದೇಶದಲ್ಲಿ, ಜೋರಾಗಿ ಗಾಳಿ ಬೀಸಿದ ಸಂದರ್ಭದಲ್ಲಿ  ಬಿದಿರು ಬೊಂಬುಗಳ ತಿಕ್ಕಾಟದಿಂದ ಉಂಟಾಗುತ್ತಿದ್ದ ಬೆಂಕಿಯ ಕಿಡಿಯಿಂದಾಗಿ ಮಾತ್ರ.ಈ ಎರಡು ಆಕಸ್ಮಿಕ ಅನಾಹುತಗಳಿಗೆ ಪರಿಹಾರವೂ ಕೂಡ ಆ ಕಾಲದಲ್ಲಿ ಇತ್ತು. ಸಿಡಿಲು ಬಡಿದಾಗ ಸೃಷ್ಟಿಯಾಗುತ್ತಿದ್ದ ಕಾಡ್ಗಿಚ್ಚಿಗೆ ಸುರಿಯುತ್ತಿದ್ದ ಮಳೆ ನೈಸರ್ಗಿಕವಾಗಿ ಬೆಂಕಿಯನ್ನು ನಂದಿಸುತ್ತಿತ್ತು. ಬಿದಿರು ಮರಗಳು ಇರುವ ಅರಣ್ಯ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಸುತ್ತಲೂ ಕಂದಕವನ್ನು ತೋಡುವುದರ ಮೂಲಕ  ಬೆಂಕಿ ಇತರೆ ಪ್ರದೇಶಗಳಿಗೆ ಹರಡದಂತೆ ತಡೆಯುವ ಕ್ರಮ ಜಾರಿಯಲ್ಲಿತ್ತು. ಈ ಪದ್ಧತಿಯನ್ನು 1870 ರಲ್ಲಿ ಬ್ರಿಟೀಷರು Forest Fire Line ಎಂಬ ಯೋಜನೆಯಡಿ ಜಾರಿಗೆ ತಂದಿದ್ದರು. ಈ ನಿಯಮ ಇಂದಿಗೂ ಭಾರತದ ಎಲ್ಲಾ ಅರಣ್ಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದೆ. ಜೊತೆಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಅರಣ್ಯಪ್ರದೇಶಗಳಲ್ಲಿ ರಸ್ತೆಯ ಇಕ್ಕೆಲಗಳಿಗೂ  ಇದನ್ನು ವಿಸ್ತರಿಸಲಾಗಿದೆ
     ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳ ನಡುವೆಯೂ ಅರಣ್ಯ ಪ್ರದೇಶಗಳಲ್ಲಿ  ಹೆಚ್ಚಿದ ಮಾನವನ ಚಟುವಟಿಕೆ ಮತ್ತು ಅನಗತ್ಯ ಹಸ್ತಕ್ಷೇಪದಿಂದಾಗಿ ಭಾರತದಲ್ಲಿ ಪ್ರತಿವರ್ಷ ಸರಾಸರಿ 33 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ. ಅರಣ್ಯಗಳ ಪ್ರದೇಶಗಳಲ್ಲಿ ಇರುವ ಗಿರಿಶಿಖರ, ಜಲಪಾತ ಇಲ್ಲವೇ ಇತ್ತೀಚೆಗೆ ನಾಯಿಕೊಡೆ ಅಣಬೆಗಳಂತೆ ಎಲ್ಲೆಡೆ ತಲೆ ಎತ್ತುತ್ತಿರುವ ರಿಸಾರ್ಟ್ ಗಳ ಪ್ರಭಾವದಿಂದಾಗಿ ಇಂತಹ ಜಾಗಗಳಿಗೆ ಪ್ರವಾಸಿಗರು ಹೆಚ್ಚಾಗಿ ಬೇಟಿ ನೀಡುತ್ತಿದ್ದಾರೆ. ಅವರು ಸೇದಿ ಬಿಸಾಡಿದ ಬೀಡಿ ಅಥವಾ ಸಿಗರೇಟಿನ ತುಂಡು ಬಹುತೇಕ ಅಗ್ನಿ ಅವಘಡಗಳಿಗೆ ಕಾರಣವಾಗುತ್ತಿದೆ. ಇವರ ಜೊತೆಗೆ ಅರಣ್ಯದಲ್ಲಿ ಪ್ರಾಣಿಗಳ ಬೇಟಿಗಾಗಿ ಸಂಚರಿಸುವ ಅಕ್ರಮ ಬೇಟೆಗಾರರು, ಮತ್ತು ಮರಗಳ ಕಳ್ಳಸಾಗಾಣಿಕೆದಾರರಿಗೆ  ದಟ್ಟವಾದ ಅರಣ್ಯದಲ್ಲಿ ಬೆಳೆದು ನಿಂತಿರುವ ಪೊದೆಗಳು ಅವರ ಸಂಚಾರಕ್ಕೆ ಅಡ್ಡಿಯುಂಟು ಮಾಡುವ ಹಿನ್ನಲೆಯಲ್ಲಿ ಬೆಂಕಿ ಹಾಕಿರುವ ನಿರ್ದೇಶನಗಳು ಸಾಕಷ್ಟಿವೆ. ಕಳೆದ ಒಂದು ದಶಕದಿಂದ ಭಾರತದಲ್ಲಿ ಸಂಭವಿಸುತ್ತಿರುವ ಬಹುತೇಕ ಅರಣ್ಯದ ಕಾಡ್ಗಿಚ್ಚು ಮಾನವ ನಿರ್ಮಿತ ಅನಾಹುತಗಳಾಗಿರುವುದು ವಿಶೇಷ.
ಭಾರತದ ಹಿಮಾಲಯದ ತಪ್ಪಲು ಮತ್ತು ಭಾರತ ಮತ್ತು ಬರ್ಮಾ ಗಡಿಭಾಗದಲ್ಲಿರುವ ಈಶಾನ್ಯ ರಾಜ್ಯಗಳ ಅರಣ್ಯ ಪ್ರದೇಶ ಹಾಗೂ ಪಶ್ಚಿಮಘಟ್ಟದ ಶ್ರೇಣಿಯಲ್ಲಿರುವ ಅರಣ್ಯಗಳಲ್ಲಿ ಅತಿ ಹೆಚ್ಚು ಅಗ್ನಿ ಅನಾಹುತಗಳು ಸಂಭವಿಸುತ್ತಿವೆ, ಭಾರತದಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಸಂಭವಿಸಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಒರಿಸ್ಸಾ ರಾಜ್ಯ ಎರಡನೆಯ ಸ್ಥಾನದಲ್ಲಿದ್ದು,ಕರ್ನಾಟಕ ರಾಜ್ಯ ಮೂರನಯ ಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಸವಿರುವ ದಂಡಕಾರಣ್ಯ ಎಂದು ಕರೆಯಲಾಗುವ ಮಧ್ಯಪ್ರದೇಶ ಮತ್ತು ಛತ್ತೀಸ್ಘಡ ಅರಣ್ಯ ಪ್ರದೇಶಗಳಲ್ಲಿ ನಕ್ಸಲರು ಬೀಡು ಬಿಟ್ಟಿರುವ ಕಾರಣ ಕಾಡ್ಗಿಚ್ಚು ಇಲ್ಲವೆನೋ ಎಂಬಂತೆ ಭಾಸವಾಗುತ್ತಿದೆ. ನಕ್ಸಲರ ಭಯದಿಂದ ಇಲ್ಲಿ ಮರಗಳ್ಳರು, ಬೇಟೆಗಾರರು ಕಾಲಿಡಲು ಸಾಧ್ಯವಾಗಿಲ್ಲ. ಕಳೆದ ವರ್ಷ ಮಧ್ಯ ಪ್ರದೇಶದಲ್ಲಿ ಅಗ್ನಿಗೆ ಕೇವಲ 35 ಹೆಕ್ಟೇರ್ ಅರಣ್ಯ ಪ್ರದೇಶ ಆಹುತಿಯಾಗಿದೆ.  ಭಾರತದಲ್ಲಿ ಸಾಮಾನ್ಯವಾಗಿ ಅರಣ್ಯದ ಕಾಡ್ಗಿಚ್ಚು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೇಸಿಗೆಯ ಅವಧಿಯಲ್ಲಿ ಸಂಭವಿಸುತ್ತಿದೆ. ಆ ದಿನಗಳಲ್ಲಿ ಒಣಗಿದ ಗಿಡಗೆಂಟೆಗಳು, ಹುಲ್ಲುಗಾವಲು  ಮತ್ತು ಮರದ ತರಗೆಲೆಗಳು ಕಾಡ್ಗಿಚ್ಚು  ಹಬ್ಬಲು ಕಾರಣವಾಗುತ್ತಿವೆ.
2012 ರ ಲ್ಲಿ ಒರಿಸ್ಸಾ ರಾಜ್ಯದಲ್ಲಿ ಒಟ್ಟು 2700 ಹೆಕ್ಟೇರ್ ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಗಿದೆ. ಕೋರಾಪೆಟ್ ಜಿಲ್ಲೆಯಲ್ಲಿ 500 ಮತ್ತು ಗಂಜಾಂ ಜಿಲ್ಲೆಯಲ್ಲಿ 287 ಘಟನೆಗಳು ಜರುಗಿವೆ. ಮಹಾರಾಷ್ಟ್ರದಲ್ಲಿ 2011 ರಲ್ಲಿ ಒಟ್ಟು 72 ಸಾವಿರ ಹೆಕ್ಟೇರ್ ಪ್ರದೇಶ ಮತ್ತು 2012 ರಲ್ಲಿ 24 ಸಾವಿರ ಹೆಕ್ಟೇರ್ ಪ್ರದೇಶ ಕಾಡ್ಗಿಚ್ಚಿನಿಂದಾಗ ಹಾನಿಗೊಳಗಾಗಿದೆ. ಮಹಾರಾಷ್ಟ್ರದಲ್ಲಿ  ಹಾನಿಯಾಗಿರುವ ಬಹುತೇಕ ಅರಣ್ಯಪ್ರದೇಶ ಮುಂಬೈ- ಪೂನಾ ನಡುವಿನ ಕಣಿವೆ ಪ್ರದೇಶಗಳಲ್ಲಿ. ( ಇಲ್ಲಿ ಮಹಾಬಲೇಶ್ವರ, ಲೊಕಂಡವಾಲ ಗಿರಿಧಾಮಗಳಿದ್ದು ಸಾವಿರಕ್ಕೂ ಅಧಿಕ ರೆಸಾರ್ಟ್ ಗಳಿವೆ)
ಕರ್ನಾಟಕದ ಅರಣ್ಯದ ಸ್ಥಿತಿ ಗತಿ ಕೂಡ  ಮಹಾರಾಷ್ಟ್ರಕ್ಕಿಂತ ಭಿನ್ನವಾಗಿಲ್ಲ. ನಾಗರಹೊಳೆ ಅಭಯಾರಣ್ಯದಲ್ಲಿ 1999 ರಲ್ಲಿ 9008 ಹೆಕ್ಟೇರ್ ಅರಣ್ಯ ಮತ್ತು 2004ರಲ್ಲಿ 9505 ಹೆಕ್ಟೇರ್ ಹಾಗೂ 2012 ರಲ್ಲಿ 3912 ಹೆಕ್ಟೇರ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾಗಿದೆ. ಬಂಡಿಪುರ ಅರಣ್ಯದಲ್ಲಿ 2004ರಲ್ಲಿ ಸಂಭವಿಸಿದ ದುರಂತದಲ್ಲಿ 22 ಸಾವಿರ ದ 657 ಹೆಕ್ಟೇರ್ ಹಾಗೂ 2012 ರಲ್ಲಿ 2267 ಹೆಕ್ಟೇರ್ ಅರಣ್ಯ ಸುಟ್ಟು ಕರಕಲಾಯಿತು. ಭದ್ರಾ ಅಭಯಾರಣ್ಯದಲ್ಲಿ 1999 ರಲ್ಲಿ 2.500 ಹೆಕ್ಟೇರ್ ಮತ್ತು 2012ರಲ್ಲಿ 446 ಹೆಕ್ಟೇರ್ ಅರಣ್ಯ ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಆಹುತಿಯಾಗಿದೆ.( ಒಂದು ಹೆಕ್ಟೇರ್= 2.5 ಎಕರೆ ಪ್ರದೇಶ) ಕರ್ನಾಟಕ ರಾಜ್ಯವೊಂದರಲ್ಲಿ ಅಗ್ನಿ ಅನಾಹುತದಿಂದ ಪ್ರತಿವರ್ಷ 55 ಕೋಟಿ ರೂಪಾಯಿ ಮೌಲ್ಯದ ಸಾಗುವಾನಿ(ತೇಗ) ನಂದಿ, ಹೊನ್ನೆ, ಸಿಲ್ವರ್ ಓಕ್ ಮುಂತಾದ ಮರಗಳ ಸಂಪತ್ತು ನಾಸವಾಗುತ್ತಿದೆ ಎಂದು ತಜ್ಙರು ಅಂದಾಜಿಸಿದ್ದಾರೆ. ಜೊತೆಗೆ  ಜಗತ್ತಿನ ಪರಿಸರ ತಜ್ಙರು Hot Spot  ಎಂದು ಕರೆಯಲಾಗುವ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ತಾಣಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚಾಗುತ್ತಿರುವುದು ಮತ್ತು ಪಶ್ಚಿಮಘಟ್ಟಗಳಲ್ಲಿ ಶೇಕಡ 60 ರಷ್ಟು ಅಮೂಲ್ಯವಾದ ತೇಗ, ಹೊನ್ನೆ, ಮರಗಳು ಕಡಿಮೆಯಾಗಿರುವುದನ್ನು ಏಷ್ಯಾ ನೇಚರ್ ಕನ್ಸರ್ ವೇಶನ್ ಪೌಂಡೇಶನ್ ಸಂಸ್ಥೆಯ ನರೇಂದ್ರ ಕೋದಂಡ ಪಾಣಿ ಎಂಬ ತಜ್ಙರು ಗುರುತಿಸಿದ್ದಾರೆ.
ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ನೆಪದಲ್ಲಿ ಆಧುನಿಕತೆಯ ಕರಾಳ ಹಸ್ತ ಕ್ಷೇಪ ಹೀಗೆಯೇ ಅರಣ್ಯಪ್ರದೇಶದಲ್ಲಿ ಮುಂದುವರಿದರೆ, ನಮ್ಮ ಮುಂದಿನ ತಲೆಮಾರು ಅರಣ್ಯ, ಹಸಿರು ಮತ್ತು, ಪಕ್ಷಿ, ಪ್ರಾಣಿಗಳನ್ನು ಭೂಪಟದಲ್ಲಿ, ಚಿತ್ರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ನೋಡುವ ದಿನಗಳು  ದೂರವಿಲ್ಲ ಎನಿಸುತ್ತಿದೆ.
ಇತ್ತೀಚೆಗೆ ಉಪಗ್ರಹದ ಮೂಲಕ ಸಂಗ್ರಹಿಸುವ  ಛಾಯಾಚಿತ್ರಗಳು ಹಾಗೂ ಅರಣ್ಯ ಪ್ರದೇಶದಲ್ಲಿ ನಿರಂತ ಗಸ್ತು ತಿರುಗುವ ಕಾವಲು ಪಡೆಗಳ ಮೂಲಕ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ಅರಣ್ಯ ರಕ್ಷಣೆಗಾಗಿ ನೂರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಆದರೆ, ಈ ಹಣ ಮತ್ತು ಯೋಜನೆ ನಮ್ಮ ಅರಣ್ಯಾಧಿಕಾರಿಗಳ ಪಾಲಿಗೆ ಚಿನ್ನದ ತತ್ತಿ ಇಡುವ ಕೋಳಿಯಂತಾಗಿದೆ.


ಶನಿವಾರ, ಜೂನ್ 8, 2013

ಧಾರಾವಿ ಎಂಬ (ಕೊಳಗೆರಿ) ವಿಸ್ಮಯ- ಭಾಗ-2


ಮುಂಬೈನ ಧಾರವಿ ಕೊಳಗೇರಿಯ ವಿಶಿಷ್ಟವೆಂದರೆ, ಬಹುಸಂಸ್ಕೃತಿಯ ಗೂಡಾದ ಈ ವಸತಿ ಪ್ರದೇಶದಲ್ಲಿ ಕಳೆದ ಅರ್ಧ ಶತಮಾನದ ಇತಿಹಾಸದಲ್ಲಿ ಯಾವುದೇ ಕೋಮುಗಲಭೆ ಏರ್ಪಟ್ಟಿಲ್ಲ. ಬಡವರಿಗೆ ಮತ್ತು ದುಡಿದು ತಿನ್ನುವ ಶ್ರಮಜೀವಿಗಳಿಗೆ ಧರ್ಮ ಮತ್ತು ಜಾತಿಗಿಂತ ಆಯಾ ದಿನದ ಬದುಕು ದೂಡುವುದು ಮುಖ್ಯವಾಗಿರುತ್ತದೆ. ತಾವು ಬದುಕುತ್ತಿರುವ ಎಂಟು- ಹತ್ತು ಅಡಿಯ ಸೂರಿನ ಎಡ ಬಲ ಯಾರು ವಾಸಿಸುತ್ತಿದ್ದಾರೆ? ಅವರ ಜಾತಿ ಅಥವಾ ಧರ್ಮ ಯಾವುದು? ಎಂಬ ಪ್ರಶ್ನೆಗಳಿಂತ ಅವರೂ ಸಹ ನಮ್ಮಂತೆ ಈ ಸಮಾಜದಿಂದ ತಿರಸ್ಕೃತಗೊಂಡವರು ಎಂಬ ಭಾವನೆ ಮತ್ತು ಪ್ರಜ್ಙೆ  ಕೊಳಗೇರಿಯ ವಾಸಿಗಳ ಎದೆಯಲ್ಲಿ ಸದಾ ಜೀವಂತವಾಗಿರುತ್ತದೆ.
1993 ರಲ್ಲಿ ಮುಂಬೈ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಪ್ರತಿಯಾಗಿ ಮುಂಬೈ ನಗರ ಹತ್ತಿ ಉರಿದಾಗ, ಧಾರಾವಿ ಮಾತ್ರ ತಣ್ಣಗೆ ಇತ್ತು. ಇಲ್ಲಿನ ಜನಗಳು ಪ್ರತಿ ಪ್ರದೇಶದಲ್ಲಿ ಸ್ವತಃ ಕಾವಲು ನಿಂತು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು. ಇತ್ತೀಚೆಗಿನ ದಿನಗಳಲ್ಲಿ ಆಯಾ ಸಮುದಾಯದ ಜನತೆ ಒಟ್ಟಿಗೆ ವಾಸಿಸುವುದು ಕಂಡು ಬಂದರೂ ಸಹ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮೀಯರು ಪರಸ್ಪರ ಗೌರವ ಇಟ್ಟುಕೊಂಡು ಬಾಳುವುದು ಇಲ್ಲಿನ ವೈಶಿಷ್ಟವಾಗಿದೆ.
ಈ ಮೊದಲು ಧಾರಾವಿಯಲ್ಲಿದ್ದ ಚರ್ಮ ಹದಮಾಡುವ ಕೈಗಾರಿಕೆಗಳು ಇದೀಗ ಪಕ್ಕದ ಡಿಯನೊರ್ ಪ್ರದೇಶಕ್ಕೆ ವರ್ಗಾವಣೆಯಾಗಿದೆ. ಅಲ್ಲಿನ ಘಟಕಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಮುಸ್ಲಿಂರು, ತಮಿಳುನಾಡಿನ ಹರಿಜನರು ಹಾಗೂ ಮಹಾರಾಷ್ಟ್ರದ ದಲಿತರು ಪ್ರತ್ಯೇಕವಾಗಿ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಮುಸ್ಲಿಂರು ನಡೆಸುತ್ತಿರುವ ಘಟಕಗಳಲ್ಲಿ ಬಿಹಾರದ ಮುಸ್ಲಿಂರು ಜೊತೆಗೂಡಿದ್ದರೆ. ಹಿಂದುಗಳು ನಡೆಸುತ್ತಿರುವ ಚರ್ಮದ ಕೈಗಾರಿಕೆಗಳಲ್ಲಿ ತಮಿಳುನಾಡಿನ ಜನರು ಮಾತ್ರ ದುಡಿಯುತ್ತಿದ್ದಾರೆ. ಮಹಾರಾಷ್ಟ್ರದ ದಲಿತರು ಬೌದ್ಧ ಧರ್ಮಕ್ಕೆ ಮತಾಂತರ ಗೊಂಡ ಹಿನ್ನಲೆಯಲ್ಲಿ ಅವರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ.

ಧಾರಾವಿಯಲ್ಲಿ ದಕ್ಷಿಣ ಭಾರತದಿಂದ ವಿಶೇಷವಾಗಿ ಕರ್ನಾಟಕದ ಗುಲ್ಬರ್ಗಾ, ಬಿಜಾಪುರ ಹಾಗೂ ತಮಿಳುನಾಡು ಮತ್ತು ಕೇರಳದ ಮಂದಿ  ಅತಿ ಹೆಚ್ಚುಮಂದಿ ವಾಸವಾಗಿದ್ದು, ಶಿಕ್ಷಣ, ಉದ್ಯೋಗದಲ್ಲಿ ಪ್ರಗತಿ ಸಾಧಿಸಿದ್ದಾರೆ. ತಮಿಳುನಾಡಿನ ಮತ್ತು ಕೇರಳದ ಹಲವಾರು ಯುವ ಪ್ರತಿಭಾವಂತರು ಇಂಜಿನಿಯರ್ ಗಳಾಗಿ, ಛಾರ್ಟಡ್ ಅಕೌಟೆಂಟ್ ಗಳಾಗಿ , ಪೋಲಿಸ್ ಅಧಿಕಾರಿಗಳಾಗಿ ಹೊರಹೊಮ್ಮಿದ್ದಾರೆ. ತಮ್ಮ ಕುಟುಂಬವನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ. ಅದೇ ರೀತಿ ಕರ್ನಾಟಕದ ಬಹುತೇಕ ಮಂದಿ ಮಹಾರಾಷ್ಟ್ದದ ಸಚಿವಾಲಯದಲ್ಲಿ. ಶಾಸಕರ ಭವನದಲ್ಲಿ, ರೈಲ್ವೆ ಇಲಾಖೆಯಲ್ಲಿ ನಾಲ್ಕನೆ ದರ್ಜೆಯ ನೌಕರರಾಗಿ ದುಡಿಯುತ್ತಿದ್ದಾರೆ,ಜೊತೆಗೆ  ಒಂದಿಷ್ಟು ಮಂದಿ ಮುಂಬೈ ಮಹಾನಗರ ಪಾಲಿಕೆಯ ಇಂಜಿನಿಯರ್ ಗಳಾಗಿ, ನೌಕರರಾಗಿ, ಪೊಲೀಸ್ ಕಾನ್ಸ್ ಟೇಬಲ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬೈ ನಗರದ ಬಹತೇಕ ಖಾಸಾಗಿ ಕಂಪನಿಗಳಲ್ಲಿ ಮಲೆಯಾಳಿಗಳು ನೌಕರರಾಗಿ ದುಡಿಯುತ್ತಿರುವುದು ವಿಶೇಷ. ಇನ್ನೂ ಬಿಹಾರಿಗಳು, ಟ್ಯಾಕ್ಸಿ ಚಾಲಕರಾಗಿ ಮುಂಬೈ ನಗರದ ಜೀವಾಳವಾಗಿದ್ದಾರೆ. ಮುವತ್ತು ವರ್ಷಗಳ ಹಿಂದೆ ಎಲ್ಲಾ ದಕ್ಷಿಣ ಭಾರತೀಯರನ್ನು ಮದ್ರಾಸಿಗಳು ಎಂದು ಕರೆಯುತ್ತಿದ್ದ ಸಂಪ್ರದಾಯ ಈಗ ಅಳಿಸಿಹೋಗಿದೆ.
ಮರಾಠಿ ಭಾಷೆ ಮತ್ತು ಸಂಸ್ಕೃತಿಯ ನೆಪದಲ್ಲಿ ಜನತೆಯನ್ನು ಎತ್ತಿಕಟ್ಟುವ ಶಿವಸೇನೆ ಕೂಡ ಧಾರಾವಿಯಲ್ಲಿ ದಕ್ಷಿಣ ಭಾರತೀಯರನ್ನೇ ನಂಬಿಕೊಂಡಿದೆ. ಶಿವಸೇನೆಯ ಪ್ರಮುಖ ಸ್ಥಾನಗಳಲ್ಲಿ ತಮಿಳುನಾಡಿನ ತೆವರ್ ಜನಾಂಗ ಮತ್ತು ಕರ್ನಾಟಕದ ಬಂಟ ಸಮುದಾಯದ ನಾಯಕರಿದ್ದಾರೆ. ಮುಂಬೈ ನಗರದ ಸಸ್ಯಹಾರಿ ಹೋಟೆಲ್ ಗಳು ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಅಧಿಪತ್ಯ ಸ್ಥಾಪಿಸಿರುವ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬಂಟರು ಕಳೆದ ಎರಡು ದಶಕಗಳಿಂದ  ಮಹಾರಾಷ್ಟ್ದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ.
ಮುಂಬೈ ನಗರ ಮತ್ತು ಧಾರಾವಿಯ ಇಂತಹ ವರ್ಣಮಯ ಮತ್ತು ವೈವಿಧ್ಯಮಯ ಬದುಕಿನಿಂದಾಗಿ ಚಿತ್ರರಂಗದ ಗಮನ ಸೆಳೆದಿವೆ. ಧಾರಾವಿಯ ಕೊಳಚೆಗೇರಿಯ ಬಡತನದ ಬದುಕು,ಮತ್ತು ಇಲ್ಲಿನ ಅಪರಾಧಗಳು, ಸಾಹಸಿ ವ್ಯಕ್ತಿಗಳ ಜೀವನವನ್ನು ಆಧಾರವಾಗಿಟ್ಟುಕೊಂಡು ಹಿಂದಿ. ತಮಿಳು, ಇಂಗ್ಲೀಷ್ ಭಾಷೆಯಲ್ಲಿ ಹಲವಾರು ಚಿತ್ರಗಳು ನಿರ್ಮಾಣವಾಗಿವೆ. 1980ರ ದಶಕದಲ್ಲಿ ಮನ್ ಮೋಹನ್ ದೇಸಾಯಿ “ದಿವಾರ್ ನಿರ್ಮಿಸಿದ್ದರು. ನಂತರ  ವಿದು ವಿನೋದ್ ಚೋಪ್ರ ಅವರ ‘ಫರಿಂದಾ”, ಮೀರಾ ನಾಯರ್ ಅವರ “ಸಲಾಂ ಬಾಂಬೆ” ಮಣಿರತ್ನಂ ಅವರ “ನಾಯಗನ್,” ರಾಂಗೋಪಾಲ್ ವರ್ಮ ಅವರ ಗ್ಯಾಂಗ್ ಸ್ಟರ್, ಮಧುಬಂಡಾರ್ಕರ್ ಅವರ ಟ್ರಾಫಿಕ್ ಸಿಗ್ನಲ್, ಬ್ಲಾಕ್ ಫ್ರೈಡೆ,ಚಿತ್ರಗಳನ್ನು ಹೆಸರಿಸಬಹುದು. ಮತ್ತು ಆಸ್ಕರ್ ಪ್ರಶಸ್ತಿಗೆ ಪಾತ್ರವಾದ “ಸ್ಲಂ ಡಾಗ್ ಮಿಲಿನಿಯರ್” ಇಂಗ್ಲೀಷ್ ಚಿತ್ರದದಲ್ಲಿ ಧಾರವಿಯ ಮಕ್ಕಳು ನಟಿಸಿರುವುದು ವಿಶೇಷ.
ಇಂದು ಭಾರತದ ಸಾಹಸಿ ಉದ್ಯಮಿಗಳು ಎಂದರೆ, ಮುಕೇಶ್ ಅಂಬಾನಿ, ಇನ್ಫೋಸಿಸ್ ನ ನಾರಾಯಣ ಮೂರ್ತಿ, ವಿಫ್ರೊ ಸಂಸ್ಥೆಯ ಅಜೀಜ್ ಪ್ರೇಮ್ ಜೀ ಇವರುಎಂದು ಕಳೆದ ಒಂದು ದಶಕದಿಂದ ಡಂಗೂರ ಸಾರುತ್ತಾ, , ತುತ್ತೂರಿ ಊದುವ ನಮ್ಮ ದೇಶದ ಮಾಧ್ಯಮರಂಗದ ಬೃಹಸ್ಪತಿಗಳು ಒಮ್ಮೆ ಧಾರಾವಿಯ ಕೊಳಗೇರಿಯತ್ತ ಕಣ್ಣು ಹಾಯಿಸಿ, ತಮ್ಮ ಬುದ್ಧಿಮತ್ತೆಯನ್ನು ದುರಸ್ತಿ ಮಾಡಿಕೊಳ್ಳುವ ಅವಶ್ಯಕತೆ ಇದೆ. 
ಹಿಂದೂಸ್ಥಾನ್ ಲಿವರ್ ಲಿಮಿಟೆಡ್ ಕಂಪನಿಯಲ್ಲಿ ರಿನ್ ಡಿಟೆರ್ಜೆಂಟ್ ಬಾರ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ಇಂದು ಧಾರಾವಿಯಲ್ಲಿ ದಿನವೊಂದಕ್ಕೆ ಎರಡು ಟನ್ ಸಾಬೂನು ಉತ್ಪಾದಿಸುತ್ತಿದ್ದಾನೆ, 150 ಮಂದಿ ಕಾರ್ಮಿಕರು ಈತನ ಬಳಿ ದುಡಿಯುತ್ತಿದ್ದಾರೆ. ಹಿಂದೆ ಧಾರಾವಿಯಲ್ಲಿ ತಮಿಳುನಾಡಿನ ವರದನಾಯ್ಕರ್ ಬಳಿ ಕಳ್ಳಬಟ್ಟಿ ಸಾರಾಯಿ ಸಾಗಾಣೆ ಮಾಡುತ್ತಿದ್ದ ತಮಿಳು ಯುವಕರೆಲ್ಲಾ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಜಿ ಮಸ್ತಾನ್ ಎಂಬ ಕುಖ್ಯಾತ ಕಳ್ಳಸಾಗಾಣಿಕೆದಾರನ ಬಳಿ ಇದ್ದ ಮುಸ್ಲಿಂಮರು ಚರ್ಮದ ವಸ್ತುಗಳ ತಯಾರಿಕೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪಾದನೆಗಳಿಗೆ ಪೈಪೋಟಿ ನೀಡಿದ್ದಾರೆ. ತಾವು ಬೆಳೆಯವ ಜೊತೆಗೆ ತಮ್ಮವರನ್ನು ಬೆಳಸುವ ಉಧಾರ ಮನೋಭಾವ ಧಾರಾವಿಯ ಈ ಅನಾಮಿಕ ಉದ್ಯಮಿಗಳಲ್ಲಿದೆ.
ಕಳೆದ ಇಪ್ಪಟೆಂಟು ವರ್ಷಗಳಿಂದ ನನಗೆ ಪರಿಚಿತನಾಗಿರುವ ತಮಿಳುನಾಡಿನ ತಿರುನ್ವಾನೇಲಿ ಜಿಲ್ಲೆಯ ರಾಜು ಎಂಬಾತ ಇಂದು ಮುಂಬೈನಗರದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳ ಬಹುತೇಕ ಪತ್ರಿಕೆಗಳ ವಿತರಕನಾಗಿದ್ದಾನೆ.  ಮಾತುಂಗ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಗಣಪತಿ ದೇವಸ್ಥಾನದ ಹಿಂದೆ ಇರುವ ಈತನ ಮನೆಯಲ್ಲಿ ಸುಮಾರು 45 ಮಂದಿ ತಮಿಳು ಯುವಕರು ವಾಸವಾಗಿದ್ದಾರೆ.ಇವರಲ್ಲಿ ಐದು ಮಂದಿ ಷಣ್ಮುಗಾ ಹಾಲ್ ಗೆ ಹೊಂದಿಕೊಂಡಿರುವ ಪತ್ರಿಕೆಯ ಅಂಗಡಿಯಲ್ಲಿ ದುಡಿಯಿತ್ತಿದ್ದಾರೆ. ಹತ್ತು ಮಂದಿ ಪ್ರತಿದಿನ ಬೆಳಿಗ್ಗೆ ಎದ್ದು ರೈಲ್ವೆ ಅಥವಾ ಲಾರಿ ಪಾರ್ಸಲ್ ಕಛೇರಿಗೆ ಹೋಗಿ ಪತ್ರಿಕೆಗಳ ಬಂಡಲ್ ಗಳನ್ನು ತರುತ್ತಾರೆ. ಇಪ್ಪತ್ತು ಮಂದಿ ಪತ್ರಿಕೆಗಳನ್ನು ವಿತರಿಸಲು ಮುಂಬೈ ನಗರದ ವಿವಿಧ ಪ್ರದೇಶಕ್ಕೆ ತೆರಳುತ್ತಾರೆ. ಉಳಿದವರು ಲೆಕ್ಕ ಪತ್ರ ಗಮನಿಸುವುದು, ಮಾರಾಟವಾಗದೆ ಉಳಿದ ಪತ್ರಿಕೆಗಳನ್ನು ಮರಳಿ ಪತ್ರಿಕೆ ಕಛೇರಿಗಳಿಗೆ ಕಳಿಸುವ ಕೆಲಸ ಮಾಡುತ್ತಾರೆ. ಅಕ್ಷರ ಜ್ಙಾನವಿಲ್ಲದ ರಾಜುವಿನ ಪ್ರತಿದಿನದ ವ್ಯವಹಾರ ಒಂದೂವರೆ ಲಕ್ಷರೂಪಾಯಿಗಳು. ಎಲ್ಲವನ್ನೂ ಹುಡುಗರು ನಿಭಾಯಿಸುತ್ತಾರೆ. ಎಂಟತ್ತು ವರ್ಷ ರಾಜು ಬಳಿ ದುಡಿದ ಹುಡುಗರು ಇದೀಗ ಮುಂಬೈ ನಗರಗಳಲ್ಲಿ ತಮ್ಮದೆ ಸ್ವಂತ ಅಂಗಡಿ, ಚಹಾ ಹೋಟೇಲ್ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ಇವೊತ್ತಿಗೂ ರಾಜು ತಂದೆ, ತಾಯಿ,  ಎಲ್ಲವೂ ಆಗಿದ್ದಾನೆ. ಪ್ರತಿವರ್ಷ ಊರಿಗೆ ಹೋದಾಗಲೆಲ್ಲಾ ಐದಾರು ಮಂದಿಯನ್ನು ಮುಂಬೈಗೆ ತನ್ನ ಜೊತೆಯಲ್ಲಿ ಕರೆದು ಕೊಂಡು ಬರುವುದು ರಾಜುವಿನ ವಾಡಿಕೆ.





ಐವತ್ತು ವರ್ಷ ಹಿಂದೆ ತನ್ನ ಒಂಬತ್ತನೆ ವಯಸ್ಸಿನಲ್ಲಿ ರೈಲು ಹತ್ತಿ ಮಾತುಂಗ ನಿಲ್ದಾಣಕ್ಕೆ ಬಂದು ಬಿದ್ದ ಯಾವ ಭಾಷೆಯನ್ನೂ ಅರಿಯದ ತಮಿಳು ಬಾಲಕನಿಗೆ ಅಲ್ಲಿನ ರೈಲ್ವೆ ಕೂಲಿಗಳು ಊಟ ನೀಡಿ ಸಾಕಿದ್ದರು. ನಂತರದ ದಿನಗಳಲ್ಲಿ ನಿಧಾನವಾಗಿ ಚಹಾ ಮಾರುತ್ತಾ, ಪತ್ರಿಕೆಗಳನ್ನು ಮಾರುತ್ತಾ ಜೀವನ ನಡೆಸಿ ಬೆಳದ ಬಾಲಕ ರಾಜು ಈದಿನ ಮಾತುಂಗದಲ್ಲಿ ಪ್ರಮುಖ ತಮಿಳು ಉದ್ಯಮಿಗಳಲ್ಲಿ ಒಬ್ಬ. ಇವೊತ್ತಿಗೂ ತನಗೆ ಆ ದಿನಗಳಲ್ಲಿ ಚಹಾ ಮತ್ತು ಬನ್ ಕೊಟ್ಟ ರೈಲ್ವೆ ಕೂಲಿಗಾರರನ್ನು ಮರೆತಿಲ್ಲ. ಅದೇರೀತಿ ಚಹಾ ಮತ್ತು ಪತ್ರಿಕೆ ಮಾರಲು ಅವಕಾಶ ನೀಡಿದ ರೈಲ್ವೆ ಪ್ಲಾಟ್ ಪಾರ್ಮಿನ ಚಹಾ ಅಂಗಡಿ ಮಾಲಿಕರನ್ನು ಸಹ ಮರೆತಿಲ್ಲ. ಅವರ ಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ನೀಡಿ ಋಣ ತೀರಿಸುತ್ತಿದ್ದಾನೆ. ನಾನು ಬೇಟಿಯಾದಾಗಲೆಲ್ಲಾ ಮಾತುಂಗದ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು  ತಾನು ಮಲಗುತ್ತಿದ್ದ ಜಾಗ,, ಊಟ  ಕೊಟ್ಟು ಬೆಳಸಿದ ವೃದ್ದರಾದ ಕೂಲಿಗಳನ್ನು ತೋರಿಸಿ ಕಣ್ಣಿರು ಹಾಕುತ್ತಾನೆ.
ಬಡತನ ಮತ್ತು ಹಸಿವು ಮನುಕುಲಕ್ಕೆ ಶಾಪ ನಿಜ. ಆದರೆ ಇವುಗಳು ಮನುಷ್ಯನಿಗೆ ಮಾನವೀಯತೆಯನ್ನು ಮತ್ತು ಅಂತಃಕರಣವನ್ನು ತಂದುಕೊಡುವುದರ ಮೂಲಕ ಬದುಕಿಗೆ ಘನತೆಯನ್ನು ಹೆಚ್ಚಿಸುತ್ತಿವೆ ಎಂಬುದನ್ನು ಮರೆಯಲಾಗದು.ಈ ಕಾರಣಕ್ಕಾಗಿ   ಕೊಳಗೆರಿಗಳಲ್ಲಿ ವಾಸಿಸುವವರ ಕುರಿತಂತೆ ನಮ್ಮ ಮನೋಭಾವ ಬದಲಾಗಬೇಕಿದೆ. ಅಲ್ಲಿ ನಾವು ಕಾಣಲಾಗದ ಇನ್ನೊಂದು ಜಗತ್ತು ಕೂಡ ಇದೆ ಎಂಬುದನ್ನು ಸಹ ನಾವು ಅರಿಯ ಬೇಕಿದೆ.
                                           ( ಮುಗಿಯಿತು)
(ಕಳೆದ ಲೇಖನದಲ್ಲಿ ಮುಂಬೈನ ಜನತಾ ಕಾಲೋನಿಯ 70 ಸಾವಿರ ಬಡವರನ್ನು ಒಕ್ಕಲೆಬ್ಬಸಿದ್ದ ಎ.ಕೆ ಆಂಟನಿ ಎಂದು ಬರೆಯಲಾಗಿತ್ತು. ಅದು ಅಂತುಳೆ ಎಂದಾಗಬೇಕಿತ್ತು. ಆ ವೇಳೆಯಲ್ಲಿ ಅವರು ಮಹಾರಾಷ್ಟ್ದ ಗೃಹ ಸಚಿವರಾಗಿದ್ದರು)

ಮಂಗಳವಾರ, ಜೂನ್ 4, 2013

ಧಾರಾವಿ ( ಮುಂಬೈ ಕೊಳಗೇರಿ) ಎಂಬ ವಿಸ್ಮಯ- ಭಾಗ-1

ಏಷ್ಯಾದ ಅತಿದೊಡ್ಡ  ಕೊಳಚೇಗೇರಿಗಳಲ್ಲಿ ಎರಡನೆ ಸ್ಥಾನ ಪಡೆದಿರುವ ಮುಂಬೈನ ಧಾರಾವಿ ಎಂಬ ಕೊಳಗೇರಿ ಇವೊತ್ತಿಗೂ ಜಗತ್ತಿನ ಸಮಾಜ ವಿಜ್ಙಾನಿಗಳ ಪಾಲಿಗೆ ವಿಸ್ಮಯದ ಪ್ರಪಂಚವಾಗಿದೆ. ದೇಶವಿದೇಶಗಳಿಂದ ಬರುವ ಅರ್ಥಶಾಸ್ತ್ರಜ್ಙರಿಗೆ ಮತ್ತು ಸಮಾಜ ಶಾಸ್ತ್ರಜ್ಙರಿಗೆ ಧಾರಾವಿ ಅಧ್ಯಯನ ಕೇಂದ್ರವಾಗಿದೆ. ಹಾಗಾಗಿ ಈವರೆಗೆ  ಧಾರಾವಿ ಕುರಿತು ಐವತ್ತಕ್ಕೂ ಹೆಚ್ಚು ಸಾಕ್ಷ್ಯ ಚಿತ್ರಗಳು ( ಬಿ.ಬಿ.ಸಿ., ಡಿಸ್ಕವರಿ ಛಾನಲ್ ಮತ್ತು ನ್ಯಾಷನಲ್ ಜಿಯಾಗ್ರಪಿಕ್ ಛಾನಲ್ ಗಳು ಸೇರಿ) ನಿರ್ಮಾಣಗೊಂಡಿವೆ. ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್, ಆಕ್ಷ್ ಪರ್ಡ್ ವಿ.ವಿ. ಮತ್ತು ಕೇಂಬ್ರಿಡ್ಜ್ ವಿ.ವಿ.ಗಳಿಂದ ಇಪ್ಪತ್ತಕ್ಕೂ ಹೆಚ್ಚು ಅಧ್ಯಯನ ಪ್ರಬಂಧಗಳು ಪ್ರಕಟವಾಗಿವೆ. ನಮ್ಮವರೇ ಆದ ಹಿಂದೂ ಇಂಗ್ಲೀಷ್ ದಿನಪತ್ರಿಕೆಯ ಮುಂಬೈನ ಸಂಪಾಕಿಯಾಗಿದ್ದ ಹಿರಿಯ ಪತ್ರಕರ್ತೆ ಕಲ್ಪನಾ ಶರ್ಮ ಅವರ “ ರಿ ಡಿಸ್ಕವರಿಂಗ್ ಧಾರಾವಿ “ ಎಂಬ ಕೃತಿ ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ವಿವಿಧ ಭಾಗದ ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ವಾಸಿಸುವ ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಬಡತನ ಮತ್ತು ಹಸಿವುಗಳ ಜೊತೆ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಅಲ್ಲಿನ ಜನತೆ ಕಟ್ಟಿಕೊಂಡಿರುವ ಘನತೆಯುಳ್ಳ ಸೃಜನಶೀಲತೆಯ ಬದುಕು ಆಶ್ಚರ್ಯ ಮೂಡಿಸುತ್ತದೆ.
ಧಾರಾವಿ ಇತಿಹಾಸ ನಿನ್ನೆ ಮೊನ್ನೆಯದಲ್ಲ. ಅದು ಮುಂಬೈನಗರದ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿದೆ. ಇಂದಿನ ಮುಂಬೈನಗರದ ಸಿಯಾನ್, ಬಾಂದ್ರ, ಕುರ್ಲಾ, ಕಲಿನಾ ಎಂಬ ಪ್ರತಿಷ್ಟಿತ ಪ್ರದೇಶಗಳ ನಡುವೆ 175 ಹೆಕ್ಟೇರ್ ಪ್ರದೇಶದಲ್ಲಿ ಎದ್ದು ನಿಂತಿರುವ ಧಾರಾವಿಯಲ್ಲಿ ಸುಮಾರು 27 ಸಾವಿರ ಕುಟುಂಬಗಳು ವಾಸಿಸುತ್ತಿದ್ದು, 11 ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ.
1534 ರಲ್ಲಿ ಪೋರ್ಚುಗೀಸರ ವಸಾಹತುಸಾಹಿ ಬಂದರು ಪಟ್ಟಣವಾಗಿದ್ದ ಮುಂಬೈನಗರದ ಮೂಲ ಹೆಸರು ಬೊಂಬಾಯಿ ಎಂದಾಗಿತ್ತು. ಅಲ್ಲಿನ ಸುಂದರ ಕಡಲ ತೀರ ಪ್ರದೇಶವನ್ನು ನೋಡಿದ ಪೋರ್ಚುಗೀಸರು ಇದಕ್ಕೆ ಬೊಂಬಾಯಿ ಎಂದು ಹೆಸರಿಟ್ಟರು . (ಪೋರ್ಚುಗಲ್ ಭಾಷೆಯಲ್ಲಿ ಬೊಂಬ್ ಎಂದರೆ ಸುಂದರ ಮತ್ತು ಬಾಹಿಯ ಎಂದರೆ   ಕಡಲತೀರ ಎಂದರ್ಥ) ಮುಂದೆ ಈ ಹಸರು ಬೊಂಬಾಯಿ. ನಂತರ ಬಾಂಬೆಯಾಗಿ ಆನಂತರ ಅಪ್ಪಟ ಮರಾಠಿ ಭಾಷೆಯಲ್ಲಿ ಮುಂಬೈ ಎಂದು ನಾಮಕರಣಗೊಂಡಿತು.

ಮುಂಬೈನ ಮೂಲನಿವಾಸಿಗಳು ಕೋಳಿಜನಾಂಗ ಅಂದರೆ, ಮೀನುಗಾರರು.  ಅಲ್ಲಿನ ಮಿಥಿ ನದಿಯ ಕಡಲ ತೀರದಲ್ಲಿ ಕೋಳಿ ಜನಾಂಗ ವಾಸವಾಗಿದ್ದ ಪ್ರದೇಶವನ್ನು ಕೋಳಿವಾಡ ಎಂದು ಕರೆಯಲಾಗುತ್ತಿತ್ತು. 1727 ರಲ್ಲಿ ಬೊಂಬಾಯಿ ಮತ್ತು ಮಹೀಂ ಎಂಬ ಎರಡು ಅವಳಿ ನಗರಗಳಿದ್ದವು. ಈ ಎರಡು ನಗರಗಳಿಗೆ ಹೊಂದಿಕೊಂಡಂತೆ ಎಂಟು ಹಳ್ಳಿಗಳು ಇದ್ದುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಅವುಗಳಲ್ಲಿ ಮಜಗಾಂ, ವರ್ಲಿ, ಪರೇಲ್, ವಡಾಲ, ನೈಗಮ್, ಮಾತುಂಗ, ಧಾರಾವಿ, ಕೊಲಬಾ ಹೆಸರಿನ ಗ್ರಾಮಗಳು ಈಗ ಮುಂಬೈ ಮಹಾನಗರದೊಳಗೆ ಲೀನವಾಗಿವೆ.
1668 ರಲ್ಲಿ ಇಂಗ್ಲೆಂಡಿನ ದೊರೆ ಎರಡನ ಕಿಂಗ್ ಜಾರ್ಜ್ ಪೋರ್ಚುಗಲ್ಲಿನ ರಾಜಕುಮಾರಿಯನ್ನು ವಿವಾಹವಾದಾಗ, ಪೋರ್ಚುಗಲ್ ದೊರೆ, ತನ್ನ ಅಳಿಯನಾದ ಬ್ರಿಟೀಷ್ ರಾಜಕುಮಾರನಿಗೆ  ಮುಂಬೈ ಬಂದರು ಪಟ್ಟಣವನ್ನು  ಬಳುವಳಿಯಾಗಿ ನೀಡಿದ. ಆನಂತರ ಈ ಬಂದರು ಪಟ್ಟಣ ಬ್ರಿಟೀಷರ ಈಸ್ಟ್ ಇಂಡಿಯ ಕಂಪನಿ ಮೂಲಕ ಅಭಿವೃದ್ಧಿ ಹೊಂದಿತು. 1854 ರವರೆಗೆ ಅಲ್ಲಿನ ಮೂಲ ನಿವಾಸಿಗಳಾದ ಕೋಲಿಜನಾಂಗ ( ಮೀನುಗಾರರು) ಮತ್ತು ಪಾರ್ಸಿ ಜನಾಂಗದ ವ್ಯಾಪರಸ್ಥರಿಂದ ಕೂಡಿದ್ದ ಮುಂಬೈ ನಗರಕ್ಕೆ 1854 ರಲ್ಲಿ ಆರಂಭವಾದ ಜವಳಿ ಮಿಲ್ ನಿಂದಾಗಿ , ಕಾರ್ಮಿಕರಾಗಿ ದುಡಿಯಲು ಹೊರಗಿನಿಂದ ಜನ ಬರತೊಡಗಿದರು. ಮುಂಬೈ ನಗರ ಬೆಳೆಯ ತೊಡಗಿತು. 1870 ರಲ್ಲಿ ಈಸ್ಟ್ ಇಂಡಿಯ ಕಂಪನಿಯು ಈ ನಗರವನ್ನು ಪ್ರಮುಖ ಬಂದರು ಹಾಗೂ ವಾಣಿಜ್ಯ ನಗರವನ್ನಾಗಿ  ಘೋಷಿಸಿತು.
 ನಗರಕ್ಕೆ ಪ್ರಪಥಮವಾಗಿ ಸೌರಾಷ್ಟ್ರ ( ಗುಜರಾತ್)ದಿಂದ ಬಡವರು 1877 ರಲ್ಲಿ ವಲಸೆ ಬಂದರು. ಬೀಕರ ಕ್ಷಾಮದಿಂದ ತತ್ತರಿಸಿದ ಸೌರಾಷ್ಟ್ರದ ಕುಂಬಾರರು ಮುಂಬೈ ನಗರಕ್ಕೆ ವಲಸೆ ಬಂದ ಮೊದಲ ಹಿಂದುಳಿದ ಜನಾಂಗದವಾಗಿದ್ದಾರೆ. ನಂತರ ತಮಿಳುನಾಡಿನ ಶಾಶ್ವತ ಬರಪೀಡಿತ ಜಿಲ್ಲೆಯಾದ ತಿರುನಾಲ್ವೇಲಿ ಜಿಲ್ಲೆಯಿಂದ ಆದಿದ್ರಾವಿಡರು ( ಹರಿಜನರು) ಹಾಗೂ ಉತ್ತರ ಪ್ರದೇಶದಿಂದ ಮುಸ್ಲಿಂರು, ಮುಂಬೈ ನಗರಕ್ಕೆ ಬಂದು ಚರ್ಮ ಹದಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡರು. ನಂತರ ಬಿಹಾರ, ಒರಿಸ್ಸಾ, ಕರ್ನಾಟಕ ರಾಜ್ಯಗಳ ಹಿಂದುಳಿದ ಜನಾಂಗ ಆಗಮಿಸಿ, ಸಫಾಯಿ ಕರ್ಮಾಚಾರಿಗಳಾಗಿ, ಪೌರಕಾರ್ಮಿಕರಾಗಿ ದುಡಿಯುತ್ತಾ ಮುಂಬೈ ನಗರಕ್ಕೆ ಜಮೆಯಾದರು. 1950 ರ ದಶಕದ ವರೆಗೆ ಪ್ರಶಾಂತವಾಗಿದ್ದ ಮುಂಬೈ ನಗರಕ್ಕೆ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಕ್ರಮ ಬಡಾವಣೆಗಳು ಮತ್ತು ಕೊಳೆಗೇರಿಗಳು ತಲೆ ಎತ್ತತೊಡಗಿದವು.
ಮಾತುಂಗಾ,  ಕಲಿನಾ, ಸಿಯಾನ್ , ಕುರ್ಲಾ ಪ್ರದೇಶಗಳಲ್ಲಿ ಇದ್ದ ವಲಸಿಗರನ್ನು ಮುಂಬೈ ನಗರ  ಸಭೆ ಒಕ್ಕಲೆಬ್ಬಿಸಿದ ಪರಿಣಾಮ ಎಲ್ಲರೂ ಕೋಳಿವಾಡಕ್ಕೆ ಬಂದು ವಾಸತೊಡಗಿದರು. ನಂತರ 1976 ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಎ.ಕೆ.ಆಂಟನಿ ನೃತೃತ್ವದ ಸರ್ಕಾರ, ಮೇ 17 ರಂದು ಬಾಂಬೆ ಅಣು ರಿಯಾಕ್ಟರ್ ಸಂಸ್ಥೆಯ ಪ್ರದೇಶದ ಜನತಾ ಕಾಲೋನಿಯಲ್ಲಿ ವಾಸವಾಗಿದ್ದ 70 ಸಾವಿರ ಬಡಜನರನ್ನು 12 ಸಾವಿರ ಪೊಲೀಸರ ನೆರವಿನಿಂದ ತೆರವುಗೊಳಿಸ ಲಾಯಿತು. ಈ ನತದೃಷ್ಟರು ಸಹ ಅಂತಿಮವಾಗಿ ದಾರಿ ಕಾಣದೆ  ಧಾರಾವಿಯಲ್ಲಿ ನೆಲೆ  ನಿಂತರು. ಹೀಗೆ ಧರ್ಮ, ಜಾತಿಗಳ ಬೇಧ ಭಾವವಿಲ್ಲದೆ, ಎಲ್ಲರ ಸಂಕಟಗಳು ಒಂದೇ ಆದ ಪರಿಣಾಮ, ಅಲ್ಲಿನ ಜನತೆ ವಿವಿಧ ವೃತ್ತಿಯಲ್ಲಿ ತೊಡಗಿಕೊಂಡು ತಮ್ಮ ಪಾಲಿಗೆ ಇರುವ ಎಂಟು ಮತ್ತು ಹತ್ತು ಅಡಿ ಜಾಗದ ನಿವೇಶನವನ್ನು  ಸ್ವರ್ಗವನ್ನಾಗಿ ಮಾಡಿಕೊಂಡರು.

2001 ರ ಸಮೀಕ್ಷೆಯಂತೆ ಧಾರಾವಿ ಕೊಳಚೆ ಪ್ರದೇಶದಲ್ಲಿ 142 ಸಾರ್ವಜನಿಕ ಕೊಳಾಯಿ ಮತ್ತು 842 ಸಾರ್ವಜನಿಕ ಶೌಚಾಲಯಗಳಿದ್ದವು. 27 ಹಿಂದೂ ದೇವಾಲಯಗಳು, 11 ಮಸೀದಿಗಳು, 6 ಚರ್ಚುಗಳು ಧಾರಾವಿ ಕೊಳಗೇರಿಯಲ್ಲಿ ಇವೆ. 1913 ರಲ್ಲಿ ತಮಿಳರು ವಾರಾಣಾಸಿಯಿಂದ ತಂದು ಸ್ಥಾಪಿಸಿದ ಗಣೇಶನ ಮೂರ್ತಿ ಧಾರಾವಿಯ ಪ್ರಾಚೀನ ಮೂರ್ತಿಯಾಗಿದೆ. 1939 ರಲ್ಲಿ ಗಣಪತಿ ಮೂರ್ತಿಗೆ  ದೇವಾಲಯವನ್ನು ಸಹ ನಿರ್ಮಾಣ ಮಾಡಲಾಯಿತು. ನಂತರ ತಮಿಳರು ಆರಂಭಿಸಿದ ತಮಿಳು ಭಾಷೆಯ ಶಾಲೆ ಈಗ ಧಾರಾವಿಯಲ್ಲಿ ಅತಿದೊಡ್ಡ ಶಿಕ್ಷಣ ಸಂಸ್ಥೆಯಾಗಿ ಬೆಳದಿದೆ. ಈ ಶಿಕ್ಷಣ ಸಮಸ೵ಥೆಯಲ್ಲಿ ಪದವಿ ವರೆಗೆ ತಮಿಳು ಭಾಷೆಯಲ್ಲಿ ಶಿಕ್ಷಣ ದೊರೆಯುತ್ತಿದೆ. 1980ರ ದಶಕದಲ್ಲಿ ಈ ಪ್ರದೇಶದ ದಲಿತರು ಆರಂಭಿಸಿದ  ಅಂಬೇಡ್ಕರ್ ಇಂಗ್ಲೀಷ್ ಶಾಲೆ ಕೂಡ ದಲಿತ ಹಾಗೂ ಹಿಂದುಳಿತ ಜಾತಿಯ ಮಕ್ಕಳಿಗೆ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣವನ್ನು ಧಾರೆಯೆರೆಯುತ್ತಾ ಧಾರಾವಿಯ ಪ್ರತಿಷ್ಟಿತ ಸಂಸ್ಥೆಯಾಗಿ ತಲೆ ಎತ್ತಿ ನಿಂತಿದೆ.

ಧಾರಾವಿ ಕೊಳಗೇರಿ, ಜಗತ್ತಿನ ಎಲ್ಲಾ ಕೊಳಗೇರಿಗಳಿಗಿಂತ ಭಿನ್ನವಾಗಿ, ಕೇವಲ ಬಡವರ ವಾಸಸ್ಥಾನವಾಗದೆ ಗುಡಿ ಕೈಗಾರಿಕೆಯ ಕೇಂದ್ರ ಬಿಂದುವಾಗಿದೆ. ಈ ಪ್ರದೇಶದಲ್ಲಿ 80 ಕ್ಕೂ ಹೆಚ್ಚು ಚರ್ಮ ಹದ ಮಾಡುವ ಕೈಗಾರಿಕೆಗಳು,  ಚಿಪ್ಸ್, ಕಡ್ಲೆ ಮಿಠಾಯಿ, ಹಪ್ಪಳ, ಹುರಿದ ಕಾಳುಗಳು ಸೇರಿದಂತೆ 150 ವಿವಿಧ ಬಗೆಯ ತಿಂಡಿ ಪದಾರ್ಥಗಳನ್ನು ತಯಾರಿಸುವ 800 ಗುಡಿ ಕೈಗಾರಿಕೆಗಳು , 65 ಬೇಕರಿಗಳು, 9 ಸಾಬೂನು ತಯಾರಿಕಾ ಘಟಕಗಳು, 30 ಬನಿಯನ್, ಕಾಲುಚೀಲ ತಯಾರಿಸುವ ಘಟಕ, 110 ಸೂಟ್ ಕೇಸ್, ಪರ್ಸ್, ಮತ್ತು ಬೆಲ್ಟ್ ತಯಾರಿಸುವ ಕಂಪನಿಗಳು, 280 ವಿವಿಧ  ಮಡಕೆ ಮತ್ತು ಹೂಜಿಗಳನ್ನು  ತಯಾರಿಸುವ ಘಟಕಗಳು,  600 ಕ್ಕೂ ಹೆಚ್ಚು ಕಬ್ಬಿಣ, ಅಲ್ಯೂಮಿನಿಯಂ,ಪ್ಲಾಸ್ಟಿಕ್ ಮರುಬಳಕೆಯ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 13 ಸಾವಿರ ಕಾರ್ಮಿಕರು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇಲ್ಲಿನ ಬಹುತೇಕ ಘಟಕಗಳು ಕೇವಲ ಒಂದೇ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ. ಧಾರಾವಿ ಯ ವಾರ್ಷಿಕ ವಾಣಿಜ್ಯ ವಹಿವಾಟು ಮೂರು ಸಾವಿರ ಕೋಟಿ ರೂಪಾಯಿಗಳನ್ನು ದಾಟಿದ್ದು, ಇಲ್ಲಿ ತಯಾರಾಗುವ ವಸ್ತುಗಳು ದುಬೈ, ಸೌದಿ ಅರೇಬಿಯಾ, ಇಂಗ್ಲೆಂಡ್, ಜರ್ಮನಿ, ಪ್ರಾನ್ಸ್, ಅಮೇರಿಕಾ ಸೇರಿದಂತೆ 38 ರಾಷ್ಟ್ರಗಳಿಗೆ ರಫ್ತಾಗುತ್ತಿವೆ ( ಹೆಚ್ಚಿನವು ಚರ್ಮದಿಂದ ತಯಾರಿಸಿದ ವಸ್ತುಗಳು)


ಧಾರಾವಿ ಕೊಳಚೆಗೇರಿಯನ್ನು ಹಾಂಗ್ ಕಾಂಗ್ ನಲ್ಲಿದ್ದ ತಾಯ್ ಕಾಂಗ್ ಎಂಬ ಕೊಳಗೇರಿಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಅಂದರೆ, ನಿವಾಸಿಗಳು ಬಹುಮಡಿ ಕಟ್ಟಡಿಗಳಲ್ಲಿ ವಾಸಿಸುವಂತೆ ಮಾಡಲು ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಧಾರಾವಿ ಪುನರ್ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡಿತು. ಆದರೆ ಯೊಜನೆಯ ವಿನ್ಯಾಸ ಕುರಿತಂತೆ ಅಪಸ್ವರಗಳು ಕೇಳಿಬಂದ ಹಿನ್ನಲೆಯಲ್ಲಿ 2010 ರಲ್ಲಿ ಪ್ರಖ್ಯಾತ ವಾಸ್ತುಶಿಲ್ಪಿ ಹಾಗು  ಅಮೇರಿಕಾದಲ್ಲಿ ಶಿಕ್ಷಣ ಪಡೆದ ಮುಕೇಶ್ ಮೆಹತಾ ಎಂಬ ತಜ್ಙರ ನೇತೃತ್ವದಲ್ಲಿ ಪ್ರತಿಯೊಬ್ಬರಿಗೂ ಸುಮಾರು 13 ಅಡಿ ಅಗಲ ಮತ್ತು 20 ಅಡಿ ಉದ್ದ ಇರುವ ಮನೆಗಳ ಬಹು ಮಹಡಿ ಕಟ್ಟಡಕ್ಕೆ ನಿರ್ಮಾಣಕ್ಕೆ ಅಲ್ಲಿನ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಶಾಲೆ, ಉದ್ಯಾನವನ, ಹೀಗೆ ಹಲವಾರು ಸಾರ್ವಜನಿಕ ಉಪಯೋಗಕ್ಕಾಗಿ ಜಾಗವನ್ನು ಮೀಸಲಾಗಿಟ್ಟರುವ, ಸುಮಾರು 15 ಸಾವಿರ ಕೋಟಿ ರೂಪಾಯಿಗಳ ಈ ಯೋಜನೆಗೆ ಅಮೇರಿಕಾದ ಲೆಹ್ ಮನ್ ಬ್ರದರ್ಸ್, ಮತ್ತು ಸಿಂಗಾಪುರ ಹಾಗೂ ದುಬೈ ಖಾಸಾಗಿ ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ.  ತಾವು ಹೂಡುವ ಬಂಡವಾಳಕ್ಕೆ ಪ್ರತಿಯಾಗಿ ತಮಗೆ ಇಂತಿಷ್ಟು ಜಾಗವನ್ನು ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಉಚಿತವಾಗಿ ನೀಡಬೇಕೆಂದು ಈ ಕಂಪನಿಗಳು ಬೇಡಿಕೆ ಇಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. 

                       ( ಮುಂದುವರಿಯುವುದು)

ಶನಿವಾರ, ಜೂನ್ 1, 2013

ಕೊಳಗೇರಿಗಳೆಂಬ ಕೂಪಗಳು

ಜಗತ್ತಿನ  ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಅತಿವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಜಗತ್ತಿನ ಶ್ರೀಮಂತ ರಾಷ್ಟ್ರಗಳ ಗುಂಪಿಗೆ ಚೀನಾ ಮತ್ತು ಭಾರತ ರಾಷ್ಟ್ರಗಳು ಶೀಘ್ರದಲ್ಲಿ ಸೇರ್ಪಡೆಯಾಗುವದರಲ್ಲಿ ಯಾವುದೇ ಸಂಶಯವಿಲ್ಲ. ಇವೆಲ್ಲವೂ ಭಾರತದ ಅಭಿವೃದ್ಧಿ ಕುರಿತಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಿದಾಡುತ್ತಿರುವ  ಮಾತುಗಳು. ಇದರಲ್ಲಿ ಅರ್ಧದಷ್ಟು ಮಾತ್ರ ಸತ್ಯ. ಉಳಿದರ್ಧ ಹಸಿ ಸುಳ್ಳು. ಈ ಹಸಿ ಸುಳ್ಳುಗಳೆಂಬ ಕಠೋರ ವಾಸ್ತವ ಸತ್ಯವವನ್ನು ಜಗತ್ತಿಗೆ ಎತ್ತಿ ತೋರಿಸುವ ಶಕ್ತಿ ಅಥವಾ ಹೃದಯ ಭಾರತದ ಯಾವ ಆಡಳಿತಗಾರನಿಗೂ ಇಲ್ಲ. ಏಕೆಂದರೆ, ಭ್ರಮೆಗಳನ್ನು ಸತ್ಯ ಮತ್ತು ವಾಸ್ತವ ಎಂದು ನಂಬಿಸುವ ಈ ಕಾಲದಲ್ಲಿ ಯಾರೂ ವಾಸ್ತವವನ್ನು ನಂಬಲಾರರು. ತಮ್ಮ ಬದುಕಿನಲ್ಲಿ ಎಂದೂ ತಮ್ಮ ಬೆನ್ನ ಹಿಂದಿನ ಕೊಳಕನ್ನು ನೋಡಲಾಗದ ಈ ಜನ ವಾಸ್ತವ ಕುರಿತು ಎಂದೂ ಚಿಂತಿಸಲಾರರು.
ಈ ನೆಲದ ನಿಜವಾದ ಬವಣೆಗಳ ಕುರಿತು ನಿಜವಾದ ಕಾಳಜಿ ಇದ್ದರೆ, ಭಾರತದ ಕೊಳಚೆಗೇರಿಗಳಲ್ಲಿ ವಾಸಿಸುತ್ತಿರುವ ಸುಮಾರು 37 ಕೋಟಿ, 70 ಲಕ್ಷ ಜನರ ಬದುಕು ಇಂತಹ ಧಾರುಣ ಸ್ಥಿತಿಗೆ ತಲುಪುತ್ತಿರಲಿಲ್ಲ.( ನಗರದ ಅಕ್ರಮ ಬಡಾವಣೆಗಳು ಸೇರಿ) ಹಿಂದೆ ನಮ್ಮನ್ನಾಳಿದ  ಈಸ್ಟ್ ಇಂಡಿಯಾ ಕಂಪನಿಗೂ, ಈಗಿನ  ಸರ್ಕಾರಗಳಿಗೂ ಅಂತಹ ಹೇಳಿಕೊಳ್ಳುವ ವೆತ್ಯಾಸವೇನೂ ಕಾಣುವುದಿಲ್ಲ.  ಬ್ರಿಟೀಷರನ್ನು ಬಿಳಿ ಸಾಹೇಬರೆಂದು ನಾವು  ಕರೆದಿದ್ದೆವು. ಈಗಿನವರನ್ನು ಕಂದು ಸಾಹೇಬರೆಂದು ಕರೆಯುತ್ತಿದ್ದೇವೆ  ಅಷ್ಟೇ.  ದೇಶದ ಸರಿಸುಮಾರು 30 ಮುಖ್ಯಮಂತ್ರಿಗಳು, 632 ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಹಾಗೂ 542 ಸಂಸದರನ್ನು (ರಾಜ್ಯ ಸಭಾ ಸದಸ್ಯರು ಸೇರಿ) ಬಿಳಿಯಾನೆಗಳಂತೆ ಸಾಕುತ್ತಿರುವ ಭಾರತದ ಜನತೆಗೆ ಪ್ರಜ್ಙೆ ಅಥವಾ ಬುದ್ಧಿ ಎಂಬುದು ಈ  ಶತಮಾನದಲ್ಲಿಯಾದರೂ ಬರಬಹುದೆಂಬ ನಂಬಿಕೆಯಿಲ್ಲ. ಹಾಗೇ ನೋಡಿದರೆ, ಜಗತ್ತಿನ ಅತಿ ಶ್ರೇಷ್ಟ ಅರ್ಥಶಾಸ್ತ್ರಜ್ಙರಲ್ಲಿ ಒಬ್ಬರಾಗಿರುವ ಡಾ. ಮನಮೋಹನ್ ಸಿಂಗ್ ಮತ್ತು ಅವರ ಆರ್ಥಿಕ ಚಿಂತನೆಯ ಕೂಸುಗಳಲ್ಲಿ ಒಬ್ಬರಾದ ಮೊಂಟೆಕ್ ಸಿಂಗ್ ಕೂಡ ಸಧ್ಯದ ಸ್ಥಿತಿಯಲ್ಲಿ ಈ ದೇಶಕ್ಕೆ, ಮತ್ತು ನೆಲಕ್ಕೆ ಭಾರವಾದ ಜೀವಿಗಳು. ದೆಹಲಿ ನಗರದಲ್ಲಿ 200 ಎಂ.ಎಲ್ ನೀರಿನ ಭಾಟಲಿಗೆ  5 ರೂಪಾಯಿ ತೆರಬೇಕಾದ ಸ್ಥಿತಿ ಮತ್ತು ಅದೇ ದೆಹಲಿಯ ರಸ್ತೆಯ ಬದಿಯ ತಳ್ಳುವ ಗಾಡಿಗಳಲ್ಲಿ ಒಂದು ತರಕಾರಿ ಸಾಲಾಡ್ ಒಳಗೊಂಡಿರುವ ಬನ್ ಗೆ (ಬ್ರೆಡ್ಡು) 25 ರೂಪಾಯಿ ಇರುವಾಗ, ನಗರದಲ್ಲಿ ವಾಸಿಸುವ ವ್ಯಕ್ತಿ ದಿನವೊಂದಕ್ಕೆ 32 ರೂಪಾಯಿ ಸಂಪಾದಿಸಿದರೆ ಸಾಕು,  ಅವರು ಬಡವರಲ್ಲ ಎಂದು ವ್ಯಾಖ್ಯಾನಿಸುವ ಇವರನ್ನು ಹೊಟ್ಟೆಗೆ ಏನು ತಿನ್ನುತ್ತೀರಿ? ಎಂದು ಕೇಳಬೇಕಾಗಿದೆ. ತಮ್ಮ ಕಾಲ ಬಳಿಯ ಕಸವನ್ನು ಗುರುತಿಸಲಾಗದ ಇಂತಹವರಿಂದ ಭಾರತವೇ ಕೊಳಚೆಗುಂಡಿಯಾಗಿದೆ. ಇವರೆನ್ನೆಲ್ಲಾ ಒಮ್ಮೆ ತಮ್ಮ ಹವಾನಿಯಂತ್ರಣದ ಮನೆ ಬಿಟ್ಟು ಒಂದು ದಿನ ನಗರದ ಕೊಳಚೆಗೇರಿಗಳಲ್ಲಿ ವಾಸಿಸಿ ಎಂದು ಧ್ವನಿ ಎತ್ತಿ ಹೇಳಬೇಕಾದ ಕಾಲ ಈಗ ಕೂಡಿ ಬಂದಿದೆ. ಭಾರತದ ಕೊಳಗೇರಿಗಳ ಕುರಿತು ಈ ಕೆಳಗೆ ನೀಡಿರುವ ಅಂಕಿ ಅಂಶ ನಾನು ಸೃಷ್ಟಿ ಮಾಡಿದ್ದಲ್ಲ. ಇದೇ ಭಾರತ ಸರ್ಕಾರದ ನಗರ ವಸತಿ ಯೋಜನೆ ಮತ್ತು ಬಡತನ ನಿವಾರಣೆಯ ಇಲಾಖೆ ಪ್ರಕಟಿಸಿರುವ ಅಂಕಿ ಅಂಶ.
ಜಗತ್ತಿನ ಭೂಮಂಡಲದ ವ್ಯಾಪ್ತಿಯ ಪ್ರದೇಶದಲ್ಲಿ ಕೇವಲ ಶೇಕಡ 2.4 ರಷ್ಟು ಭೂಮಿಯನ್ನು ಹೊಂದಿರುವ ಭಾರತ, ಜಗತ್ತಿನ ಜನಸಂಖ್ಯೆಯ ಶೇಕಡ 16 ರಷ್ಟು ಪಾಲನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆ ಸುಮಾರು ನೂರಿಪ್ಪತ್ತು ಕೋಟಿ ಜನಸಂಖ್ಯೆಯಲ್ಲಿ ಶೇಕಡ 7 ರಷ್ಟು ಮಂದಿ ನಗರವಾಸಿಗಳಾಗಿದ್ದಾರೆ. ನಗರ ವಾಸಿಗಳ ಬದುಕು ನೆಮ್ಮದಿಯಿಂದ ಕೂಡಿದೆಯಾ? ಇಲ್ಲ. ನಗರಗಳೆಂದರೆ ಭಾರತದ ನೆಲದ ಮೇಲಿನ ನರಕ ಎಂದರೆ,ಅತಿಶಯೋಕ್ತಿಯಲ್ಲ. ವಿಶ್ವಸಂಸ್ಥೆ ವ್ಯಾಖ್ಯಾನಿಸುವ ಪ್ರಕಾರ 20 ಸಾವಿರ ಜನಸಂಖ್ಯೆ ಪ್ರದೇಶ ಪಟ್ಟಣವೆಂತಲೂ, ಒಂದು ಲಕ್ಷ ಕ್ಕಿಂತ ಮೇಲ್ಪಟ್ಟು ಜನತೆ ವಾಸಿಸುವ ಪ್ರದೇಶಗಳನ್ನು ನಗರವೆಂದು ಕರೆಯಲಾಗುತ್ತಿದೆ. ಭಾರತದ 4041 ನಗರಗಳಲ್ಲಿ (ಐದು ಮೆಟ್ರೊ ನಗರಗಳು ಸೇರಿ) ಸುಮಾರು ಒಂದು ಲಕ್ಷದ ಮೂರು ಸಾವಿರ ಕೊಳಚೆಗೇರಿಗಳಲ್ಲಿ ,ಮಹಾರಾಷ್ಟ್ರ ರಾಜ್ಯವೊಂದರಲ್ಲೇ 21 ಸಾವಿರ ಕೊಳಚೆಗೇರಿಗಳಿವೆ. ದೇಶದ ಐದು ರಾಜ್ಯಗಳಲ್ಲಿ ನಗರೀಕರಣ ತೀವ್ರ ಗತಿಯಲ್ಲಿ ವ್ಯಾಪಿಸುತ್ತಿದ್ದು, ತಮಿಳುನಾಡು, ಕರ್ನಾಟಕ, ಗುಜರಾತ್, ಪಂಜಾಬ್, ಮಹಾರಾಷ್ಟ್ರ ರಾಜ್ಯಗಳು ಮುಂಚೂಣಿಯಲ್ಲಿವೆ. ಕೈಗಾರಿಕೆ, ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಇತರೆ ಸೇವೆಗಳಿಂದಾಗಿ ಕಾರ್ಮಿಕರ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಜೊತೆಗೆ ನೈಸರ್ಗಿಕ ಸಂಪತ್ತಿನ ಲೂಟಿ ಕೂಡ ಮಿತಿ ಮೀರಿದೆ.( ಮರಳು, ಕಲ್ಲು, ಇಟ್ಟಿಗೆ, ನೀರು ಇತ್ಯಾದಿ)

1971 ರ ಜನಸಂಖ್ಯಾ ಗಣತಿಯ ಪ್ರಕಾರ ನಗರವಾಸಿಗಳ ಸಂಖ್ಯೆ ಭಾರತದ ಜನಸಂಖ್ಯೆ ಶೇಕಡ 20 ರಷ್ಟು ಇತ್ತು 2011ರ ಸಮೀಕ್ಷೆಯ ಪ್ರಕಾರ ಶೇಕಡ 28 ಕ್ಕೆ ಏರಿರುವ ನಗರವಾಸಿಗಳ ಪ್ರಮಾಣ 2025 ಕ್ಕೆ ಶೇಕಡ 50 ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ನಗರ ವಾಸಿಗಳ ಜನಸಂಖೆಯಲ್ಲಿ ಪ್ರತಿ ಆರು ಮಂದಿಗೆ ಒಬ್ಬರು ಕೊಳೆಗೇರಿಗಳಲ್ಲಿ ವಾಸ ಮಾಡುತ್ತಿದ್ದಾರೆ. 2011 ರ ಸಮೀಕ್ಷಾ ವರದಿಯ ಪ್ರಕಾರ ಭಾರತದಲ್ಲಿ 1..37 ಕೋಟಿ ಮನೆಗಳಲ್ಲಿ ವಾಸಿಸುವ ಜನ ಕೊಳೆಗೇರಿಗಳಲ್ಲಿದ್ದಾರೆ. ಮುಂಬೈನಗರದ 1.10 ಕೋಟಿ ಜನರಲ್ಲಿ ಶೇಕಡ 55 ರಷ್ಟು ಮಂದಿ ಕೊಳಗೇರಿ ಮತ್ತು ಅಕ್ರಮ ಬಡಾವಣೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಕ್ರಮ ಬಡಾವಣೆಗಳನ್ನು ಹೊರತು ಪಡಿಸಿ, ಕೊಳಚಗೇರಿಗಳಲ್ಲಿ ವಾಸಿಸುವ ಜನರ ಸಂಖ್ಯೆ ಆಯಾ ನಗರಗಳ ಜನಸಂಖ್ಯೆಗೆ ಅನುಗುಣವಾಗಿ, ಮುಂಬೈನಲ್ಲಿ ಶೇ.41.3, ಕೊಲ್ಕತ್ತ ನಗರದಲ್ಲಿ ಶೆ.30, ಚೆನ್ನೈ ನಲ್ಲಿ ಶೇ.28, ಹೈದರಾಬಾದ್ ನಲ್ಲಿ ಶೇ.19 ಇದ್ದು ಬೆಂಗಳೂರಿನಲ್ಲಿ ಈ ಪ್ರಮಾಣ ಶೇ,9 ರಷ್ಟು ಮಾತ್ರ ಇದೆ. ದೇಶದ ಐದು ಮಹಾ ನಗರಗಳಲ್ಲಿ (Metro Citys) ಬೆಂಗಳೂರು ನಗರದ ಸ್ಥಿತಿ ಸಮಾಧಾನ ಪಡುವಂತಿದೆ. 2001 ರಲ್ಲಿ 4ಕೋಟಿ 30 ಲಕ್ಷ ಇದ್ದ ಕೊಳಗೇರಿ ನಿವಾಸಿಗಳ ಸಂಖ್ಯೆ 2011ಕ್ಕೆ 9ಕೋಟಿ 30 ಲಕ್ಷಕ್ಕೆ ಎರಿಕೆಯಾಗುತ್ತಿದ್ದು. ಪ್ರತಿವರ್ಷ ಗ್ರಾಮೀಣ ಭಾಗದಿಂದ ಒಂದೂವರೆ ಕೋಟಿ ಜನ ದೇಶದ 7.742 ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಜಮೆಯಾಗುತ್ತಿದ್ದಾರೆ ಎಂದು ಕೇಂದ್ರ ನಗರ ವಸತಿ ಇಲಾಖೆ ಖಾತೆಯ ಕಾರ್ಯದರ್ಶಿ ಅರುಣ್ ಮಿಶ್ರಾ ತಿಳಿಸಿದ್ದಾರೆ

ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳು ಮತ್ತು ಕೃಷಿ ಹಾಗೂ ಕೈಗಾರಿಕೆಗಳ ಕುರಿತು ನಮ್ಮ ಸರ್ಕಾರಗಳು ತಾಳಿದ ನಿರ್ಲಕ್ಷ್ಯ ಮನೋಭಾವದಿಂದಾಗಿ ಹಳ್ಳಿಗಳು ಸ್ಮಶಾನ ಸದೃಶ್ಯ ರೂಪ ತಾಳಿವೆ. ಇದರಿಂದಾಗಿ ನಗರಗಳತ್ತ ವಲಸೆ ಪ್ರಮಾಣ ಹೆಚ್ಚುತ್ತಿದ್ದು ಎಲ್ಲೆಡೆ ಕೊಳಚೆಗೇರಿಗಳು ಅಡೆತಡೆಯಿಲ್ಲದೆ ಸೃಷ್ಟಿಯಾಗುತ್ತಿವೆ. ಮುಂಬೈ ನಂತಹ ಕೊಳಚೆಗೇರಿಗಳಲ್ಲಿ ಪ್ರತಿ ಎಂಟು ಸಾವಿರ ಮಂದಿಗೆ ಒಂದು ಶೌಚಾಲಯವಿದೆ  ಎಂದರೆ, ಪರಿಸ್ತತಿಯನ್ನು ನೀವೇ ಊಹಿಸಿ. ಇಲ್ಲಿನ ಶೇಕಡ 70 ರಷ್ಟು ಮಂದಿ ಬೀದಿ ಬದಿಯ ಕೊಳಾಯಿ ನೀರನ್ನು ಆಶ್ರಯಿಸಿದ್ದು, ತಮ್ಮ ಬೇಡಿಕೆಯ ಶೇಕಡ 40 ರಷ್ಟು ಮಾತ್ರ ನೀರನ್ನು ಪಡೆಯುತ್ತಿದ್ದಾರೆ. ಇನ್ನೂ ಬೀದಿ ದೀಪ, ಒಳ ಚರಂಡಿ, ಆರೋಗ್ಯ, ಶಿಕ್ಣಣ  ಇಂತಹ ಸ್ಥಳಗಳಲ್ಲಿ ಮರೀಚಿಕೆಯಾಗಿವೆ. ಇಂದು ದೇಶಾದ್ಯಂತ ನೂರಾರು ಸ್ವಯಂ ಸೇವಾ ಸಂಘಟನೆಗಳ ಲಕ್ಷಾಂತರ ಕಾರ್ಯಕರ್ತರ ಸೇವಾ ಮನೋಭಾವದಿಂದ ಕೊಳಚೆಗೇರಿಯ ಮಕ್ಕಳು ಅಕ್ಷರ ಲೋಕದ ಭಾಗಿಲನ್ನು ತಟ್ಟುವಂತಾಗಿದೆ.ಇದೊಂದು ಸಮಾಧಾನಕರ ಸಂಗತಿ.

ಕಳೆದ ಇಪ್ಪತ್ತು ವರ್ಷಗಳಿಂದಲೂ ಪ್ರತಿವರ್ಷ ಕೊಳಚೆಗೇರಿಗಳನ್ನು ಹೊಕ್ಕು ಬರುವುದನ್ನು ವ್ಯಸನ ಮಾಡಿಕೊಂಡಿರುವ ನನಗೆ,  ಪ್ರತಿ ಬೇಟಿಯ ಸಂದರ್ಭದಲ್ಲಿ ಅಲ್ಲಿನ ವಯಸ್ಕ ಹೆಣ್ಣು ಮಕ್ಕಳನ್ನು ನೋಡಿದಾಗ ಎದೆಗೆ  ಚೂರಿ ಇಕ್ಕಿಸಿಕೊಂಡ ಅನುಭವವಾಗುತ್ತದೆ. ಕೇವಲ ಎಂಟು ಅಡಿ ಅಗಲ ಮತ್ತು ಹತ್ತು ಅಡಿ ಉದ್ದ ಪ್ಲಾಸ್ಷಿಕ್ ಮನೆಗಳಲ್ಲಿ ತಂದೆ, ತಾಯಿಗಳ  ಜೊತೆ ವಾಸಿಸುವ ಆ ಮಕ್ಕಳಿಗೆ ಶೌಚಾಲಯ, ಮತ್ತು ಸ್ನಾನಕ್ಕೆ ಏಕಾಂತ ಎಂಬುದು ಇಲ್ಲವಾಗಿದೆ. ತಂದೆ ತಾಯಿಗಳು ದುಡಿಯಲು ಹೊರಗೆ ಹೋದ ಸಂದರ್ಭದಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಈ ಬಾಲೆಯರ ದುಖಃ ದುಮ್ಮಾನಗಳಿಗೆ ಈ ದೇಶದಲ್ಲಿ  ಲೆಕ್ಕವಿಟ್ಟವರಿಲ್ಲ. ಆ ಕುರಿತು ಯೋಚಿಸಲು ನಮಗೆ ಬಿಡುವಿಲ್ಲ. ಏಕೆಂದರೆ,  ಸುರಕ್ಷಿತ ವಲಯದಲ್ಲಿ ಬದುಕುವುದನ್ನು ರೂಢಿಗತ ಮಾಡಿಕೊಂಡಿರುವ ನಮಗೆ ನಮ್ಮದೇ ಆದ ಖಾಸಾಗಿ ಕ್ಷಣಗಳಿವೆ, ನಮ್ಮ ಮನೆಗಳಲ್ಲಿ ಬೆರಳ ತುದಿಗೆ ಜಗತ್ತನ್ನು ತಂದು ಕೂರಿಸುವ ತಂತ್ರಜ್ಙಾನಗಳಿವೆ, ಟಿ.ವಿ.ಸೀರಿಯಲ್ ಗಳಿವೆ, ರಿಯಾಲಿಟಿ ಷೋಗಳಿವೆ, ಕ್ರಿಕೇಟ್ ಮ್ಯಾಚುಗಳಿವೆ, ಮನೆಯಲ್ಲಿ ತುಂಬಿದ ಬಿಯರ್ ಮತ್ತು ವಿಸ್ಕಿ, ಸೋಡಾ  ಬಾಟಲುಗಳಿವೆ .ರೆಪ್ರಿಜಿಯೆಟರ್ ಪ್ರಿಡ್ಜ್ ಗಳಲ್ಲಿ ನಿನ್ನೆ ಹುರಿದ ಕೋಳಿ ಮಾಂಸದ ತುಂಡುಗಳಿವೆ. ಇಷ್ಟೇಲ್ಲಾ ಇದ್ದು  ನಾವು ನೆಮ್ಮದಿಯಿಂದ ಬದುಕುವುದಕ್ಕೆ ಇನ್ನೇನು ಬೇಕು?

ಬುಧವಾರ, ಮೇ 29, 2013

ಮಹಾನಗರಗಳೆಂಬ ನರಕಗಳು

ಇದು ಈ ದೇಶದ ಮಹಾನಗರಗಳ ಅವಸಾನದ ಕಥೆ ಮಾತ್ರವಲ್ಲ, ಜಗತ್ತಿನ ಎಲ್ಲಾ ಮಹಾ ನಗರಗಳ ಅವಸಾನದ ಕಥನವೂ ಹೌದು. ಜಗತ್ತಿನ ಅಭಿವೃದ್ಧಿಗೆ ನಗರೀಕರಣವೊಂದೇ ಮದ್ದು ಎಂಬ ಚಿಂತನೆಯ ಕಸವನ್ನು ಜಾಗತೀಕರಣದ ರೂವಾರಿಗಳು ನಮ್ಮ ತಲೆಗೆ ತುಂಬಿದ ಫಲವಾಗಿ ನಗರಗಳು ಇಂದು ನರಕಗಳಾಗಿವೆ.ಪಶ್ಚಿಮದ ಜಗತ್ತು ಮತ್ತು ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳು ರಾಶಿ, ರಾಶಿ, ಉತ್ಪಾದನೆ ಮಾಡಿ ಗುಡ್ಡೆಹಾಕುತ್ತಿರುವ ವಸ್ತುಗಳಿಗೆ ಹಾಗೂ ಆಹಾರೊತ್ಪನ್ನಗಳಿಗೆ ತೃತೀಯ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳು ಪ್ರಮುಖ ಮಾರುಕಟ್ಟೆಯಾಗಿವೆ. ಅವರ ಸರಕುಗಳು ಬಿಕರಿಯಾಗಬೇಕಾದರೆ,ವರ್ತಮಾನದ  ಜಗತ್ತಿನಲ್ಲಿ ನಗರಗಳು ಸೃಷ್ಟಿಯಾಗಬೇಕು ಮತ್ತು ನಗರಗಳ ಮೂಲಕವಾಗಿ ಗ್ರಾಹಕ ಮಿಕಗಳು ಸಹ ಬೆಳೆಯುತ್ತಿರಬೇಕು. ಏಕೆಂದರೆ, ಹಳ್ಳಿಗಳಲ್ಲಿ ವಾಸಿಸುತ್ತಾ, ಚಡ್ಡಿ ತೊಟ್ಟು ಮುದ್ದೆ ತಿನ್ನುವ ಅಥವಾ ಪಂಚೆ, ಕಚ್ಚೆತೊಟ್ಟು ರೊಟ್ಟಿ ತಿನ್ನುವ ವ್ಯಕ್ತಿಗಳು ಅವರ ಪಾಲಿಗೆ ಗ್ರಾಹಕಲಾಗರಾರು. ಅವರಿಗೆ ಬರ್ಮುಡ ಚಡ್ಡಿ, ಟೀ ಶರ್ಟ್, ಬನಿಯನ್ ತೊಟ್ಟು ಬೆಳಿಗ್ಗೆ ತಿಂಡಿಗೆ ನ್ಯೂಡಲ್ಸ್ ಅಥವಾ ಕಾರ್ನ್ ಪ್ಲೆಕ್ಸ್ ತಿಂದು, ಮಧ್ಯಾಹ್ನ ಊಟಕ್ಕೆ ಪಿಜ್ಜಾ ಬರ್ಗರ್ ತಿಂದು, ಕೊಕಾಕೋಲಾ, ಪೆಪ್ಸಿ ಕುಡಿಯುವ, ರಾತ್ರಿ ಕೆಂಟಕಿ ಚಿಕನ್ ತಿಂದು ವಿದೇಶಿ ವಿಸ್ಕಿ ಹೀರುವ ಗಿರಾಕಿಗಳು ಬೇಕು. ಇದಲ್ಲದೆ, ಪ್ರತಿ ಆರುತಿಂಗಳಿಗೆ ಮೊಬೈಲ್, ಪ್ರತಿವರ್ಷಕ್ಕೆ ಕಾರು, ಬೈಕ್, ಲ್ಯಾಪ್ ಟಾಪ್ ಬದಲಿಸುತ್ತಿರುವ ಗ್ರಾಹಕರು ಬೇಕು. ಇಂತಹವರು ಸೃಷ್ಟಿಯಾಗುವುದು ನಗರಗಳಲ್ಲಿ ಮಾತ್ರ. ಹಾಗಾಗಿ ಜಗತ್ತಿನ ಗ್ರಾಮೀಣ ಜನತೆ ಜಾಗತೀಕರಣದ ವಕ್ತಾರರ ಪಾಲಿಗೆ ಅನುತ್ಪಾದಕ ಜೀವಿಗಳು. ( ಇತ್ತೀಚೆಗೆ ಗ್ರಾಮಗಳಿಗೂ ಸಹ ಎಲ್ಲಾ ಸಂಸ್ಕೃತಿ  ಹರಡುತ್ತಿದೆ.ಪ್ರತಿ ಹಳ್ಳಿಯ ಅಂಗಡಿಗಳಲ್ಲಿ, ಉಪ್ಪು ಬೇಳೆ ಇಲ್ಲದಿದ್ದರೂ, ಕೊಕಾಕೋಲಾ ಮತ್ತು ಮೊಬೈಲ್ ಗಳು ದೊರೆಯುತ್ತವೆ)
ನಾವು ಆಧುನಿಕ ಜಗತ್ತಿನ, ವಿಶೇಷವಾಗಿ ಪಾಶ್ಚಿಮಾತ್ಯ ಜಗತ್ತಿನ ಹುನ್ನಾರಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ನಮ್ಮ ಭವಿಷ್ಯ ಖಂಡಿತಾ ಉಜ್ವಲವಾಗಿರುವುದಿಲ್ಲ ಎಂಬುದನ್ನು ಮೊದಲು ಮನಗಾಣಬೇಕಾಗುತ್ತದೆ.
ಭಾರತವನ್ನು ಸರಿ ಸುಮಾರು ಎರಡು ಶತಮಾನಗಳ ಕಾಲ ಆಳಿದ  ಬ್ರಿಟೀಷರು, ಪೋರ್ಚುಗೀಸರು, ಡಚ್ಚರ ಕುರಿತಂತ ನಮ್ಮ ಅಸಮಾಧಾನಗಳು ಏನೇ ಇರಲಿ, ಕಟ್ಟಡ ನಿರ್ಮಾಣ, ನಗರಗಳ ನಿರ್ಮಾಣ ಕುರಿತಂತೆ ಅವರಿಗೆ ಇದ್ದ ಅಭಿರುಚಿಗೆ ನಾವು ತಲೆ ಬಾಗಲೇಬೇಕು. ಪೋರ್ಚುಗೀಸರು ನಿರ್ಮಿಸಿದ ಪಾಂಡಿಚೇರಿ, ಡಚ್ಚರು ನಿರ್ಮಿಸಿದ ನಾಗಪಟ್ಟಣಂ  ಹಾಗೂ ಬ್ರಿಟೀಷರು ರೂಪಿಸಿದ ಕೊಲ್ಕತ್ತ, ಮುಂಬೈ, ದೆಹಲಿ, ಹಾಗೂ ಬೆಂಗಳೂರು ( ಕಂಟೊನ್ಮೆಂಟ್) ಚೆನ್ನೈ ನಗರದ ಕೆಲವು ಪ್ರದೇಶಗಳು ಇವೊತ್ತಿಗೂ ನಮ್ಮೆದುರು ಸಾಕ್ಷಿಯಾಗಿವೆ.
ಚೆನ್ನೈ ನಗರದ ಮದ್ರಾಸ್ ಹೈಕೋರ್ಟ್ ಕಟ್ಟಡ, ಬೆಂಗಳೂರಿನ ಸೆಂಟ್ರಿಲ್ ಕಾಲೇಜ್ ಮತ್ತು ಹೈಕೋರ್ಟ್ ಕಟ್ಟಡಗಳು, ಕೊಲ್ಕತ್ತನಗರದ ರೈಟರ್ಸ್ ಬಿಲ್ಟಿಂಗ್, ಮುಂಬೈನ ವಿಕ್ಟೋರಿಯ ಟರ್ಮಿನಲ್ ರೈಲ್ವೆ ನಿಲ್ದಾಣ, ದೆಹಲಿಯ ಕನಾಟ್ ಪ್ಲೆಸ್ ಮತ್ತು ಲೋಧಿ ಮಾರ್ಗದಲ್ಲಿರುವ ಕಟ್ಟಡಗಳು ಹಾಗೂ ರಾಷ್ಟ್ರಪತಿ ಭವನದ ಕಟ್ಟಡ ಮತ್ತು ಅವುಗಳ ವಾಸ್ತು ಶಿಲ್ಪ ಇವೊತ್ತಿಗೂ ನಮಗೆ ಮಾದರಿಯಾಗಿವೆ. ಅವರು ನಿರ್ಮಿಸಿದ ಬಹುತೇಕ ಕಟ್ಟಡಗಳ ವಿಶೇಷತೆ ಎಂದರೆ, ನೆಲದಿಂದ ಹನ್ನರೆಡು ಅಡಿ ಯಿಂದ ಹದಿನಾಲ್ಕು ಅಡಿ ಎತ್ತರಕ್ಕೆ ನಿರ್ಮಿಸಿದ ಮಾಳಿಗೆ ಮತ್ತು ಹತ್ತು ಅಡಿ ಎತ್ತರದ ಬಾಗಿಲುಗಳು, ಎಂಟು ಎತ್ತರ ಹಾಗೂ ನಾಲ್ಕು ಅಡಿ ಅಗಲದ ಕಮಾನುಗಳು ಇಲ್ಲವೆ, ಕಿಟಕಿಗಳು ಇವೆಲ್ಲವೂ, ಅವರು ಭಾರತದ ಹವಾಮಾನ ಮತ್ತು ಪ್ರಾದೇಶಿಕತೆ ತಕ್ಕಂತೆ ಭಿನ್ನವಾಗಿ ಇರುವ ಪ್ರಾಕೃತಿಕ ಲಕ್ಷಣಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಿದ ವಾಸ್ತು ಶಿಲ್ಪದ ಪರಿಕಲ್ಪನೆಗಳಾಗಿವೆ.
1857 ರ ಸಿಪಾಯಿ ದಂಗೆ ಘಟನೆ ನಂತರ ಬ್ರಿಟೀಷರು, 1858ರಲ್ಲಿ ದೆಹಲಿ ನಗರವನ್ನು ಪುನರ್ ರೂಪಿಸಿದ ಬಗೆಯನ್ನು ಖ್ಯಾತ ಉರ್ದು ಹಾಗೂ ಪರ್ಶಿಯನ್ ಕವಿ ಮಿರ್ಜಾ ಗಾಲಿಬ್ ನ ಜೀವನ ಚರಿತ್ರೆ ಬರೆದಿರುವ, ಲೇಖಕ ಮತ್ತು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಪವನ್ ಕುಮಾರ್ ವರ್ಮ ತಮ್ಮ ಕೃತಿಯಲ್ಲಿ ಸವಿವರವಾಗಿ ದಾಖಲಿಸಿದ್ದಾರೆ.
ಭಾರತದ ಸ್ವಾತಂತ್ರ್ಯಾನಂತರ ದೇಶದ ನಗರಗಳನ್ನು ಅಭಿವೃದ್ಧಿ ಪಡಿಸಲು , 1964 ಮತ್ತು 65 ರಲ್ಲಿ ಪ್ರಯತ್ನಿಸಲಾಯಿತು. ದೇಶದ ಬಹುತೇಕ ನಗರಗಳಲ್ಲಿ ಯೋಜನಾಬದ್ಧವಾದ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿ ನಾಗರೀಕರಿಗೆ ನೀಡಲಾಯಿತು. ನಂತರದ ದಿನಗಳಲ್ಲಿ ಆಳುವ ಸರ್ಕಾರಗಳ ನಿರ್ಲಕ್ಷ್ಯತನ ಮತ್ತು ಜನಪ್ರತಿನಿಧಿಗಳ ಅಯೋಗ್ಯತನದಿಂದಾಗಿ ಇಂತಹ ಯೋಜನೆಗಳು ಸರ್ಕಾರಗಳ ಕೈಯಿಂದ ಜಾರಿ ಭೂಮಾಫಿಯ ಜಗತ್ತಿನ ಅಂಗಳಕ್ಕೆ ಬಿದ್ದಿವೆ. ಸರ್ಕಾರಗಳು ಸಮರ್ಪಕವಾಗಿ ನಿರ್ವಹಿಸಲಾಗದ ಕ್ರೇತ್ರಗಳನ್ನು ಖಾಸಾಗಿಕರಣಗೊಳಿತ್ತಾ ನಡೆದಿವೆ. ಹಾಗಾಗಿ ಇಂದು ಶಿಕ್ಷಣ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳು ಲೂಟಿಕೋರರ ಮತ್ತು ಲಫಂಗರ ಕೈಯಲ್ಲಿವೆ.
ನಗರಗಳ ಅಭಿವೃದ್ಧಿಯ ಕುರಿತಂತೆ  ವ್ಯಾಖ್ಯಾನಗಳು ಬದಲಾಗಿವೆ. ಮಾಲ್ ಗಳು, ಮಲ್ಟಿಪ್ಲಕ್ಷ್, ಚಿತ್ರಮಂದಿರಗಳು, ಪಂಚತಾರ ಹೋಟೆಲ್ ಗಳು, ಬೃಹತ್ ಕ್ರಿಕೇಟ್ ಸ್ಟಡಿಯಂಗಳಷ್ಟೇ ನಗರವಲ್ಲ, ಇದಕ್ಕಿಂತ ಮುಖ್ಯವಾಗಿ ಕುಡಿಯುವ ಸ್ವಚ್ಛನೀರು, ಒತ್ತಡವಿಲ್ಲದ ನಗರಸಾರಿಗೆ, ವಸತಿ ನಿವಾಸಗಳು, ಒಳಚರಂಡಿ ವ್ಯವಸ್ಥೆ, ಸಮರ್ಪಕ ಕಸವಿಲೆವಾರಿ, ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆ ಇವೆಲ್ಲವೂ ಒದು ನಗರ ಹೊಂದಿರಬೇಕಾದ ಅವಶ್ಯಕವಾದ ಲಕ್ಷಣಗಳು. ಆದರೆ  ಈ ಲಕ್ಷಣಗಳನ್ನು ಹೊರತಪಡಿಸಿ ಉಳಿದೆಲ್ಲಾ ಲಕ್ಷಣಗಳನ್ನು ಮಹಾನಗರಗಳು ಒಳಗೊಂಡಿವೆ.
10 ಲಕ್ಷ ಜನತೆ ವಾಸಿಸುವ ನಗರಕ್ಕೆ ದಿನವೊಂದಕ್ಕೆ 6 ಲಕ್ಷ, 25ಸಾವಿರ ಟನ್ ನೀರು, 2ಸಾವಿರ ಟನ್ ಆಹಾರ ಧಾನ್ಯಗಳು, 9.500 ಟನ್ ಇಂಧನ, ಬೇಕಾಗುತ್ತದೆ ಎಂದು ಅಂದಾಜಿಸಿರುವ ತಜ್ಙರು, ಇದರಿಂದಾಗಿ ದಿನವೊಂದಕ್ಕೆ 5 ಲಕ್ಷ ಟನ್ ಕೊಳಚೆ ನೀರು, 2 ಸಾವಿರ ಟನ್ ಕಸ ಮತ್ತು 950 ಟನ್ ವಾಯು ಮಾಲಿನ್ಯ ಹೊರಬೀಳುತ್ತದೆ ಎಂದಿದ್ದಾರೆ.
ಭಾರತದ ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಗೆ ದಿವೊಂದಕ್ಕೆ  ಸರಾಸರಿ 175 ರಿಂದ 204 ಲೀಟರ್ ಬೇಕಾಗಿದೆಯೆಂದು ಜಕಾರಿಯ ನೇತೃತ್ವದ ಸಮಿತಿ ಹೇಳಿದೆ. ಕೊಲ್ಕತ್ತ ನಗರದಲ್ಲಿ 274 ಲೀಟರ್, ಮುಂಬೈನಲ್ಲಿ 194 ಲೀಟರ್, ದೆಹಲಿಯಲ್ಲಿ 90 ಲೀಟರ್ ಬಳಕೆಯಾಗುತ್ತಿದೆ. ( ಅಮೇರಿಕಾದ ಚಿಕಾಗೊ ನಗರದಲ್ಲಿ ಪ್ರತಿ ಪ್ರಜೆ 1058 ಲೀಟರ್ ಮತ್ತು ಲಾಸ್ ಏಸಂಜಲಿಸ್ ನಗರದಲ್ಲಿ 1260 ಲೀಟರ್ ನೀರು ಬಳಕೆಯಾಗುತ್ತಿದೆ.)

ಇನ್ನು ಸಾರ್ವಜನಿಕ ಸಾರಿಗೆ ವ್ಯವ್ಸಸ್ಥೆಯಂತೂ ನಗರಗಳಲ್ಲಿ ಹೇಳ ತೀರದಾಗಿದೆ. ಪ್ರತಿ ಹತ್ತು ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ 1284 ಚದುರ ಕಿಲೋ ಮೀಟರ್ ವ್ಯಾಪ್ತಿಯ ರಸ್ತೆಯ ಪ್ರದೇಶಗಳಿರಬೇಕು ಎಂದು ನಗರಾಭಿವೃದ್ಧಿ ತಜ್ಙರು ಅಭಿಪ್ರಾಯಪಟ್ಟಿದ್ದಾರೆ. ಆದರೆ, 1970ರ ದಶಕದಲ್ಲಿ ಅಭಿವೃದ್ಧಿಪಡಿಸಿದ ಚಂಡಿಘರ್ ನಗರ 1260 ಚದುರ ಕಿ.ಮಿ. ಹೊಂದಿದ್ದರೆ, ಅಹಮ್ಮದಾಬಾದ್ 680, ಮುಂಬೈ 380 ಹೀಗೆ ಅರ್ಧದಷ್ಟು ರಸ್ತೆಯ ಪ್ರದೇಶಗಳನ್ನು ಭಾರತದ ನಗರಗಳು ಹೊಂದಿವೆ. ದಶಕದ ಹಿಂದೆ ಒಂದು ಗಂಟೆ ಅವಧಿಯಲ್ಲಿ ಒಂದು ಗಂಟೆಗೆ 6 ಸಾವಿರ ಎಲ್ಲಾ ವಿಧವಾದ ವಾಹನಗಳು ಸಂಚರಿಸುತ್ತಿದ್ದವು. ಇದೀಗ ಭಾರತದ ನಗರಗಳಲ್ಲಿ ಪ್ರತಿ ಗಂಟೆಗೆ 14 ಸಾವಿರ ವಾಹನಗಳು ಚಲಿಸುತ್ತವೆ. 2004ರಲ್ಲಿ ಬೆಂಗಳೂರಿನಲ್ಲಿ ಪ್ರತಿದಿನ 1215 ಹೊಸ ವಾಹನಗಳು ರಸ್ತೆಗಳಿಯುತ್ತಿದ್ದವು . ಬಹುಷಃ ಈ ಪ್ರಮಾಣ ಈಗ ಮೂರುಪಟ್ಟು ಹೆಚ್ಚಾಗಿರಬಹುದು. ನಗರಗಳಲ್ಲಿ ವಾಹನಗಳ ದಟ್ಟಣೆಯಿಂದಾಗಿ ವಾಯುಮಾಲಿನ್ಯದ ಜೊತೆಗೆ ಶಬ್ಧ ಮಾಲಿನ್ಯ ಕೂಡ ಹೆಚ್ಚುತ್ತಿದೆ. ಕನಿಷ್ಟ 70 ಡಿ.ಬಿ. ಇರಬೇಕಾದ ಶಬ್ಧ ಮಾಲಿನ್ಯನದ ಪ್ರಮಾಣ ಚೆನ್ನೈ ನಗರದಲ್ಲಿ 89, ಮುಂಬೈನಲ್ಲಿ 85. ದೆಹಲಿ 89 ಕೊಲ್ಕತ್ತ 87, ಬೆಂಗಳೂರು 83 , ಕೊಚ್ಚಿನ್ 80, ಕಾನ್ಪುರ ಮತ್ತು ಮಧುರೈ ನಗರಗಳಲ್ಲಿ 79 ಹಾಗೂ ತಿರುವನಂತಪುರದಲ್ಲಿ 70ರಷ್ಟಿದೆ.. 2011ರಲ್ಲಿ ನಡೆಸಲಾದ ಅಧ್ಯಯನದಲ್ಲಿ ಜಗತ್ತಿನ ಅತಿ ಹೆಚ್ಚು  ನಲವತ್ತೊಂದು ವಾಯುಮಾಲಿನ್ಯ ನಗರಗಳಲ್ಲಿ ದೆಹಲಿ ನಾಲ್ಕನೆಯ ಸ್ಥಾನ, ಕೊಲ್ಕತ್ತ ಆರನೇಯ ಸ್ಥಾನ ಮತ್ತು ಚೆನ್ನೈ ನಗರ ಹದಿನಾಲ್ಕನೇ ಸ್ಥಾನ ಪಡೆದಿವೆ. (ಇತ್ತೀಚೆಗಿನ ಅಧ್ಯಯನದಲ್ಲಿ ಬೆಂಗಳೂರು ನಗರ ಸ್ಥಾನ ಪಡೆದಿದ್ದರೆ, ಆಶ್ಚರ್ಯವಿಲ್ಲ.)
ಮಹಾನಗರಗಳ ಬಹುದೊಡ್ಡ ಸಮಸ್ಯೆಗಳಲ್ಲಿ ಪ್ರಮುಖವಾದವುಗಳೆಂದರೆ,, ವಸತಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳು ಮುಖ್ಯವಾದವು. ಪ್ರತಿ ವರ್ಷ ದೇಶದ ಮಹಾನಗರಗಳಲ್ಲಿ 17 ಲಕ್ಷ ಮನೆಗಳ ಬೇಡಿಕೆಯಿದ್ದು, ಬೇಡಿಕೆಗೆ ತಕ್ಕಂತೆ ಮನೆಗಳನ್ನು ಪೂರೈಸಲು ಸರ್ಕಾರಗಳು ಸೋತಿವೆ. ಹಾಗಾಗಿ ದೇಶದೆಲ್ಲೆಡೆ  ವಸತಿ ಕ್ರೇತ್ರದಲ್ಲಿ ಭೂಮಾಫಿಯ ತಲೆ ಎತ್ತಿದೆ. ಬಣ್ಣ ಬಣ್ಣದ ಕರಪತ್ರಗಳಲ್ಲಿ ತಾವು ನಿರ್ಮಿಸುವ ಅಪಾರ್ಟ್ ಮೆಂಟ್ ಗಳ ಬಗ್ಗೆ, ಅಥವಾ ಮನೆಗಳ ಬಗ್ಗೆ ನೂರಾರು ಆಮೀಷವೊಡ್ಡುವ ಬಿಲ್ಡರ್ ಗಳು ನಂತರದ ಸಮಸ್ಯೆಗಳನ್ನು ಗ್ರಾಹಕರ ತಲೆಗೆ ವರ್ಗಾಯಿಸುತ್ತಿದ್ದಾರೆ. 40 ರಿಂದ 60 ಲಕ್ಷರೂಪಾಯಿ ನೀಡಿ ಅಪಾರ್ಟ್ ಮೆಂಟ್ ಗಳಲ್ಲಿ ಮನೆಗಳನ್ನು ಖರೀದಿಸುವ ಗ್ರಾಹಕರು, ನಂತರ ನಿರ್ವಹಣಾ ವೆಚ್ಚವಾಗಿ ಎಂಟು ಸಾವಿರದಿಂದ ಹತ್ತು ಸಾವಿರ ರೂಪಾಯಿ ಹಾಗೂ ನೀರಿನ ಸಮಸ್ಯೆಯಿಂದಾಗಿ ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ರೂ.( ಬೆಂಗಳೂರಿನಲ್ಲಿ ನಾಲ್ಕು ಸಾವಿರ ಲೀಟರ್ ನೀರಿಗೆ 900ರೂಪಾಯಿ) ವಿದ್ಯುತ್ ಬಿಲ್ ಎರಡರಿಂದ ಮೂರು ಸಾವಿರ ಹೀಗೆ ಸ್ವಂತ ಮನೆ ಹೊಂದಿದ್ದರೂ ಕೂಡ ತಿಂಗಳಿಗೆ ಹನ್ನೆರಡರಿಂದ ಹದಿನೈದು ಸಾವಿರ ವೆಚ್ಚ ಮಾಡಬೇಕಾದ ಸ್ಥಿತಿ.


ಈ ದಿನಗಳಲ್ಲಿ ನಗರದ ಹೃದಯ ಭಾಗ ಅಥವಾ ಹತ್ತಿರದಲ್ಲಿ ಇರುವ ಬಢಾವಣೆಗಳಲ್ಲಿ ತಲೆ ಎತ್ತುತ್ತಿರುವ ವಸತಿ ಸಂಕೀರ್ಣಗಳಲ್ಲಿ ಎಲ್ಲರೂ ಮನೆ ಪಡೆಯಲು ಆಶಿಸುತ್ತಾರೆ. ಆದರೆ, ನಲವತ್ತು ವರ್ಷಗಳ ಹಿಂದೆ ಕೇವಲ ಒಂದು ಸಾವಿರ ಮನೆಗಳಿಗೆ ಅಥವಾ ಅದರಲ್ಲಿ ವಾಸಿಸಬಹುದಾದ ಐದು ಸಾವಿರ ಜನತೆಗಾಗಿ, ಕುಡಿಯುವ ನೀರಿನ ಕೊಳವೆ, ಓಳಚರಂಡಿ ಚರಂಡಿ ಗಳನ್ನು ನಿರ್ಮಿಸಲಾಗಿರುತ್ತದೆ. ಈಗ ಐದು ಮಂದಿ ವಾಸಿಸುತ್ತಿದ್ದ ಮನೆಯನ್ನು ತೆಗೆದು, ನಲವತ್ತು ಕುಟುಂಬಗಳು ವಾಸಿಸುವ ಅಪಾರ್ಟ್ ಮೆಂಟ್ ನಿರ್ಮಾಣವಾದರೆ, ಐದು ಮಂದಿಗೆ ಇದ್ದ ನೀರು, ವಿದ್ಯುತ್  ಪೂರೈಕೆ, ಅಥವಾ ಒಳ ಚರಂಡಿ ವ್ಯವಸ್ಥೆ ಇನ್ನೂರು ಐವತ್ತು ಮಂದಿಗೆ ಸಾಧ್ಯವೆ? ಹಾಗಾಗಿ ಇಂದು 25 ಸಾವಿರ ಮಂದಿ ವಾಸಿಸ ಬಹುದಾದ ಬಡಾವಣೆಗಳಲ್ಲಿ 2.5 ಲಕ್ಷ ವಾಸಿಸುವ ಹಾಗೆ ವಸತಿ ಸಂಕೀರ್ಣಗಳನ್ನು ನಿರ್ಮಿಸಿ , ಬಿಲ್ಡರ್ ಗಳು ಮುಂದೆ ಬರುಬಹುದಾದ ಎಲ್ಲಾ ಸಮಸ್ಯೆಗಳನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸುತ್ತಿದ್ದಾರೆ. ನಗರಗಳ ಅಭಿವೃದ್ಧಿ ಕುರಿತು ಕ್ರಮಬದ್ಧ ಯೋಜನೆಗಳ ಬಗ್ಗೆ ಸರ್ಕಾರಗಳಿಗೆ ಯಾವುದೇ ದೂರದೃಷ್ಟಿಯ ಆಲೋಚನೆಗಳು ಇಲ್ಲದಿರುವ ಕಾರಣ ನಗರಗಳು ನರಕಗಳಾಗಿ ಅಲ್ಲಿ ವಾಸಿಸುವ ಜನ ಒತ್ತಡದ ಬದುಕಿನಲ್ಲಿ ಮುಳುಗಿ ಏಳುವಂತಾಗಿದೆ. ನಗರಗಳಲ್ಲಿ ಪ್ರತಿ ಐವತ್ತು ಅಡಿಯಿಂದ ನೂರು ಅಡಿ ಅಂತರದಲ್ಲಿ ಕೊಳವೆ ಬಾವಿಗಳಿದ್ದು ಅಂತರ್ಜಲ ಸಾವಿರಾರು ಅಡಿಗಳ ಆಳಕ್ಕೆ ಇಳಿದಿದೆ. ಅಂತರ್ಜಲ ಹೆಚ್ಚಿಸುತ್ತಿದ್ದ ಕೆರೆಗಳೆಲ್ಲಾ ಬಡಾವಣೆಗಳಾಗಿವೆ. ಒಂದು ಕಾಲದಲ್ಲಿ ಎಂಬತ್ತು ಕೆರೆಗಳಿದ್ದ ಬೆಂಗಳೂರಿನಲ್ಲಿ ಈಗ ಹುಡುಕಿದರೆ, ಎಂಟರಿಂದ ಹತ್ತು ಕೆರೆಗಳು ಸಿಗಬಹುದು. ಹೋಗಲಿ ಮಳೆ ನೀರು ಇಂಗಲು ಭೂಮಿಯಾದರೂ ಇದೆಯಾ? ಉದ್ಯಾನವನಗಳನ್ನು ಹೊರತು ಪಡಿಸದರೆ, ಉಳಿದೆಲ್ಲಾ ಭೂ ಭಾಗವನ್ನು ರಸ್ತೆ, ಪುಟ್ ಬಾತ್, ಮತ್ತು ವಸತಿ ನಿರ್ಮಾಣದ ನೆಪದಲ್ಲಿ ಕಾಂಕ್ರಿಟ್ ಮತ್ತು ಟಾರ್ ನಿಂದ ಮುಚ್ಚಲಾಗಿದೆ. ನಮ್ಮ ಮನಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ನಾವು ವಾಸಿಸುವ ಮನೆಗಳ ಸುತ್ತ ಬಿಡಲಾಗಿರುವ ಖಾಲಿ ಜಾಗವನ್ನು ಸಹ ಕಲ್ಲುಚಪ್ಪಡಿ ಇಲ್ಲವೆ ಸಮೆಂಟ್ ಸ್ಲಾಬ್ ಗಳಿಂದ ಮುಚ್ಚಲು ಹೊರಟಿದ್ದಿವೆ. ನಮ್ಮ ಪಾದಗಳಿಗೆ ಮಣ್ಣು ತಾಗುವುದು ಅಸಹ್ಯ ಎಂಬ ಪ್ರಜ್ಙೆ ನಮ್ಮೊಳಗೆ ಬೆಳೆದು ನಿಂತಿದೆ.
ಇವುಗಳ ಜೊತೆಗೆ ಕಸವಿಲೆವಾರಿ ಸಮಸ್ಯೆ ಇತ್ತೀಚೆಗಿನ ದಿನಗಳಲ್ಲಿ ಮಹಾನಗರಗಳ ಅತಿ ದೊಡ್ಡ ಸವಾಲಾಗಿದೆ. ಬದಲಾದ ನಮ್ಮ ಅನುಭೋಗದ ವೈಖರಿ, ಪ್ಲಾಸ್ಟಿಕ್ ಬಳಕೆಯ ವ್ಯಾಮೋಹ. ಪದೇ ಪದೇ ಬಲಾಯಿಸುವ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಮಮತೆ ಇವೆಲ್ಲಾ ಪರೋಕ್ಷವಾಗಿ ಕಸವಿಲೆವಾರಿಗೆ ತೊಡಕಾಗಿವೆ. ಭಾರತದ ಪ್ರಮುಖ 40 ನಗರಗಳಲ್ಲಿ ಪ್ರತಿ ನಿತ್ಯ 55 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ 4.500 ಟನ್, ದೆಹಲಿಯಲ್ಲಿ 6000 ಟನ್, ಕೊಲ್ಕತ್ತದಲ್ಲಿ 5.500 ಟನ್ ಮುಂಬೈನಲ್ಲಿ 4.800 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕೇವಲ ಶೇಕಡ ಎಪ್ಪತ್ತರಷ್ಟು ಮಾತ್ರ ವಿಲೆವಾರಿಯಾಗುತ್ತಿದೆ. ಉಳಿದ ಕಸ ಅಲ್ಲಿಯೇ ಕೊಳೆತು ನಾರುತ್ತಿದೆ.
ಇಂದಿನ ಆತುರದ ದಿನಗಳಲ್ಲಿ ಯಾರಿಗೂ ನಗರಗಳ ಕುರಿತು ಯೋಚಿಸುವ ವ್ಯವಧಾನವಿಲ್ಲ. ಇನ್ನೂ ಸದಾ ಓಡುತ್ತಿರಬೇಕಾದ ದಾವಂತದ ಬದುಕಿನಲ್ಲಿ ಸಿಲುಕಿರುವ ನಗರದ ಜನತೆ ತಾವು ಇಟ್ಟ ಹೆಜ್ಜೆಯನ್ನು ಹಿಂತಿರುಗಿ ನೋಡಲಾರದಷ್ಟು ಅಸಹಾಯಕರಾಗಿದ್ದಾರೆ. ಇನ್ನು ನಗರಗಳ ಭವಿಷ್ಯಗಳ ಯಾರು ಚಿಂತಿಸಿ ಫಲವೇನು? ಅಭಿವೃದ್ಧಿಯ ವಿಕಾರಗಳ ಕುರಿತು ಬರೆಯುವುದು ಅಥವಾ ಮಾತನಾಡುವುದು ಸಿನಿಕತನ ಎಂಬಂತಾಗಿರುವ ಈ ವರ್ತಮಾನದ ದಿನಗಳು ನಿಜಕ್ಕೂ ದಿಗಿಲು ಹುಟ್ಟಿಸುವಂತಿವೆ.