ಶನಿವಾರ, ಜೂನ್ 1, 2013

ಕೊಳಗೇರಿಗಳೆಂಬ ಕೂಪಗಳು

ಜಗತ್ತಿನ  ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಅತಿವೇಗವಾಗಿ ಆರ್ಥಿಕವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಜಗತ್ತಿನ ಶ್ರೀಮಂತ ರಾಷ್ಟ್ರಗಳ ಗುಂಪಿಗೆ ಚೀನಾ ಮತ್ತು ಭಾರತ ರಾಷ್ಟ್ರಗಳು ಶೀಘ್ರದಲ್ಲಿ ಸೇರ್ಪಡೆಯಾಗುವದರಲ್ಲಿ ಯಾವುದೇ ಸಂಶಯವಿಲ್ಲ. ಇವೆಲ್ಲವೂ ಭಾರತದ ಅಭಿವೃದ್ಧಿ ಕುರಿತಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಿದಾಡುತ್ತಿರುವ  ಮಾತುಗಳು. ಇದರಲ್ಲಿ ಅರ್ಧದಷ್ಟು ಮಾತ್ರ ಸತ್ಯ. ಉಳಿದರ್ಧ ಹಸಿ ಸುಳ್ಳು. ಈ ಹಸಿ ಸುಳ್ಳುಗಳೆಂಬ ಕಠೋರ ವಾಸ್ತವ ಸತ್ಯವವನ್ನು ಜಗತ್ತಿಗೆ ಎತ್ತಿ ತೋರಿಸುವ ಶಕ್ತಿ ಅಥವಾ ಹೃದಯ ಭಾರತದ ಯಾವ ಆಡಳಿತಗಾರನಿಗೂ ಇಲ್ಲ. ಏಕೆಂದರೆ, ಭ್ರಮೆಗಳನ್ನು ಸತ್ಯ ಮತ್ತು ವಾಸ್ತವ ಎಂದು ನಂಬಿಸುವ ಈ ಕಾಲದಲ್ಲಿ ಯಾರೂ ವಾಸ್ತವವನ್ನು ನಂಬಲಾರರು. ತಮ್ಮ ಬದುಕಿನಲ್ಲಿ ಎಂದೂ ತಮ್ಮ ಬೆನ್ನ ಹಿಂದಿನ ಕೊಳಕನ್ನು ನೋಡಲಾಗದ ಈ ಜನ ವಾಸ್ತವ ಕುರಿತು ಎಂದೂ ಚಿಂತಿಸಲಾರರು.
ಈ ನೆಲದ ನಿಜವಾದ ಬವಣೆಗಳ ಕುರಿತು ನಿಜವಾದ ಕಾಳಜಿ ಇದ್ದರೆ, ಭಾರತದ ಕೊಳಚೆಗೇರಿಗಳಲ್ಲಿ ವಾಸಿಸುತ್ತಿರುವ ಸುಮಾರು 37 ಕೋಟಿ, 70 ಲಕ್ಷ ಜನರ ಬದುಕು ಇಂತಹ ಧಾರುಣ ಸ್ಥಿತಿಗೆ ತಲುಪುತ್ತಿರಲಿಲ್ಲ.( ನಗರದ ಅಕ್ರಮ ಬಡಾವಣೆಗಳು ಸೇರಿ) ಹಿಂದೆ ನಮ್ಮನ್ನಾಳಿದ  ಈಸ್ಟ್ ಇಂಡಿಯಾ ಕಂಪನಿಗೂ, ಈಗಿನ  ಸರ್ಕಾರಗಳಿಗೂ ಅಂತಹ ಹೇಳಿಕೊಳ್ಳುವ ವೆತ್ಯಾಸವೇನೂ ಕಾಣುವುದಿಲ್ಲ.  ಬ್ರಿಟೀಷರನ್ನು ಬಿಳಿ ಸಾಹೇಬರೆಂದು ನಾವು  ಕರೆದಿದ್ದೆವು. ಈಗಿನವರನ್ನು ಕಂದು ಸಾಹೇಬರೆಂದು ಕರೆಯುತ್ತಿದ್ದೇವೆ  ಅಷ್ಟೇ.  ದೇಶದ ಸರಿಸುಮಾರು 30 ಮುಖ್ಯಮಂತ್ರಿಗಳು, 632 ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಹಾಗೂ 542 ಸಂಸದರನ್ನು (ರಾಜ್ಯ ಸಭಾ ಸದಸ್ಯರು ಸೇರಿ) ಬಿಳಿಯಾನೆಗಳಂತೆ ಸಾಕುತ್ತಿರುವ ಭಾರತದ ಜನತೆಗೆ ಪ್ರಜ್ಙೆ ಅಥವಾ ಬುದ್ಧಿ ಎಂಬುದು ಈ  ಶತಮಾನದಲ್ಲಿಯಾದರೂ ಬರಬಹುದೆಂಬ ನಂಬಿಕೆಯಿಲ್ಲ. ಹಾಗೇ ನೋಡಿದರೆ, ಜಗತ್ತಿನ ಅತಿ ಶ್ರೇಷ್ಟ ಅರ್ಥಶಾಸ್ತ್ರಜ್ಙರಲ್ಲಿ ಒಬ್ಬರಾಗಿರುವ ಡಾ. ಮನಮೋಹನ್ ಸಿಂಗ್ ಮತ್ತು ಅವರ ಆರ್ಥಿಕ ಚಿಂತನೆಯ ಕೂಸುಗಳಲ್ಲಿ ಒಬ್ಬರಾದ ಮೊಂಟೆಕ್ ಸಿಂಗ್ ಕೂಡ ಸಧ್ಯದ ಸ್ಥಿತಿಯಲ್ಲಿ ಈ ದೇಶಕ್ಕೆ, ಮತ್ತು ನೆಲಕ್ಕೆ ಭಾರವಾದ ಜೀವಿಗಳು. ದೆಹಲಿ ನಗರದಲ್ಲಿ 200 ಎಂ.ಎಲ್ ನೀರಿನ ಭಾಟಲಿಗೆ  5 ರೂಪಾಯಿ ತೆರಬೇಕಾದ ಸ್ಥಿತಿ ಮತ್ತು ಅದೇ ದೆಹಲಿಯ ರಸ್ತೆಯ ಬದಿಯ ತಳ್ಳುವ ಗಾಡಿಗಳಲ್ಲಿ ಒಂದು ತರಕಾರಿ ಸಾಲಾಡ್ ಒಳಗೊಂಡಿರುವ ಬನ್ ಗೆ (ಬ್ರೆಡ್ಡು) 25 ರೂಪಾಯಿ ಇರುವಾಗ, ನಗರದಲ್ಲಿ ವಾಸಿಸುವ ವ್ಯಕ್ತಿ ದಿನವೊಂದಕ್ಕೆ 32 ರೂಪಾಯಿ ಸಂಪಾದಿಸಿದರೆ ಸಾಕು,  ಅವರು ಬಡವರಲ್ಲ ಎಂದು ವ್ಯಾಖ್ಯಾನಿಸುವ ಇವರನ್ನು ಹೊಟ್ಟೆಗೆ ಏನು ತಿನ್ನುತ್ತೀರಿ? ಎಂದು ಕೇಳಬೇಕಾಗಿದೆ. ತಮ್ಮ ಕಾಲ ಬಳಿಯ ಕಸವನ್ನು ಗುರುತಿಸಲಾಗದ ಇಂತಹವರಿಂದ ಭಾರತವೇ ಕೊಳಚೆಗುಂಡಿಯಾಗಿದೆ. ಇವರೆನ್ನೆಲ್ಲಾ ಒಮ್ಮೆ ತಮ್ಮ ಹವಾನಿಯಂತ್ರಣದ ಮನೆ ಬಿಟ್ಟು ಒಂದು ದಿನ ನಗರದ ಕೊಳಚೆಗೇರಿಗಳಲ್ಲಿ ವಾಸಿಸಿ ಎಂದು ಧ್ವನಿ ಎತ್ತಿ ಹೇಳಬೇಕಾದ ಕಾಲ ಈಗ ಕೂಡಿ ಬಂದಿದೆ. ಭಾರತದ ಕೊಳಗೇರಿಗಳ ಕುರಿತು ಈ ಕೆಳಗೆ ನೀಡಿರುವ ಅಂಕಿ ಅಂಶ ನಾನು ಸೃಷ್ಟಿ ಮಾಡಿದ್ದಲ್ಲ. ಇದೇ ಭಾರತ ಸರ್ಕಾರದ ನಗರ ವಸತಿ ಯೋಜನೆ ಮತ್ತು ಬಡತನ ನಿವಾರಣೆಯ ಇಲಾಖೆ ಪ್ರಕಟಿಸಿರುವ ಅಂಕಿ ಅಂಶ.
ಜಗತ್ತಿನ ಭೂಮಂಡಲದ ವ್ಯಾಪ್ತಿಯ ಪ್ರದೇಶದಲ್ಲಿ ಕೇವಲ ಶೇಕಡ 2.4 ರಷ್ಟು ಭೂಮಿಯನ್ನು ಹೊಂದಿರುವ ಭಾರತ, ಜಗತ್ತಿನ ಜನಸಂಖ್ಯೆಯ ಶೇಕಡ 16 ರಷ್ಟು ಪಾಲನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆ ಸುಮಾರು ನೂರಿಪ್ಪತ್ತು ಕೋಟಿ ಜನಸಂಖ್ಯೆಯಲ್ಲಿ ಶೇಕಡ 7 ರಷ್ಟು ಮಂದಿ ನಗರವಾಸಿಗಳಾಗಿದ್ದಾರೆ. ನಗರ ವಾಸಿಗಳ ಬದುಕು ನೆಮ್ಮದಿಯಿಂದ ಕೂಡಿದೆಯಾ? ಇಲ್ಲ. ನಗರಗಳೆಂದರೆ ಭಾರತದ ನೆಲದ ಮೇಲಿನ ನರಕ ಎಂದರೆ,ಅತಿಶಯೋಕ್ತಿಯಲ್ಲ. ವಿಶ್ವಸಂಸ್ಥೆ ವ್ಯಾಖ್ಯಾನಿಸುವ ಪ್ರಕಾರ 20 ಸಾವಿರ ಜನಸಂಖ್ಯೆ ಪ್ರದೇಶ ಪಟ್ಟಣವೆಂತಲೂ, ಒಂದು ಲಕ್ಷ ಕ್ಕಿಂತ ಮೇಲ್ಪಟ್ಟು ಜನತೆ ವಾಸಿಸುವ ಪ್ರದೇಶಗಳನ್ನು ನಗರವೆಂದು ಕರೆಯಲಾಗುತ್ತಿದೆ. ಭಾರತದ 4041 ನಗರಗಳಲ್ಲಿ (ಐದು ಮೆಟ್ರೊ ನಗರಗಳು ಸೇರಿ) ಸುಮಾರು ಒಂದು ಲಕ್ಷದ ಮೂರು ಸಾವಿರ ಕೊಳಚೆಗೇರಿಗಳಲ್ಲಿ ,ಮಹಾರಾಷ್ಟ್ರ ರಾಜ್ಯವೊಂದರಲ್ಲೇ 21 ಸಾವಿರ ಕೊಳಚೆಗೇರಿಗಳಿವೆ. ದೇಶದ ಐದು ರಾಜ್ಯಗಳಲ್ಲಿ ನಗರೀಕರಣ ತೀವ್ರ ಗತಿಯಲ್ಲಿ ವ್ಯಾಪಿಸುತ್ತಿದ್ದು, ತಮಿಳುನಾಡು, ಕರ್ನಾಟಕ, ಗುಜರಾತ್, ಪಂಜಾಬ್, ಮಹಾರಾಷ್ಟ್ರ ರಾಜ್ಯಗಳು ಮುಂಚೂಣಿಯಲ್ಲಿವೆ. ಕೈಗಾರಿಕೆ, ರಿಯಲ್ ಎಸ್ಟೇಟ್ ವ್ಯವಹಾರ ಮತ್ತು ಇತರೆ ಸೇವೆಗಳಿಂದಾಗಿ ಕಾರ್ಮಿಕರ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಜೊತೆಗೆ ನೈಸರ್ಗಿಕ ಸಂಪತ್ತಿನ ಲೂಟಿ ಕೂಡ ಮಿತಿ ಮೀರಿದೆ.( ಮರಳು, ಕಲ್ಲು, ಇಟ್ಟಿಗೆ, ನೀರು ಇತ್ಯಾದಿ)

1971 ರ ಜನಸಂಖ್ಯಾ ಗಣತಿಯ ಪ್ರಕಾರ ನಗರವಾಸಿಗಳ ಸಂಖ್ಯೆ ಭಾರತದ ಜನಸಂಖ್ಯೆ ಶೇಕಡ 20 ರಷ್ಟು ಇತ್ತು 2011ರ ಸಮೀಕ್ಷೆಯ ಪ್ರಕಾರ ಶೇಕಡ 28 ಕ್ಕೆ ಏರಿರುವ ನಗರವಾಸಿಗಳ ಪ್ರಮಾಣ 2025 ಕ್ಕೆ ಶೇಕಡ 50 ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ನಗರ ವಾಸಿಗಳ ಜನಸಂಖೆಯಲ್ಲಿ ಪ್ರತಿ ಆರು ಮಂದಿಗೆ ಒಬ್ಬರು ಕೊಳೆಗೇರಿಗಳಲ್ಲಿ ವಾಸ ಮಾಡುತ್ತಿದ್ದಾರೆ. 2011 ರ ಸಮೀಕ್ಷಾ ವರದಿಯ ಪ್ರಕಾರ ಭಾರತದಲ್ಲಿ 1..37 ಕೋಟಿ ಮನೆಗಳಲ್ಲಿ ವಾಸಿಸುವ ಜನ ಕೊಳೆಗೇರಿಗಳಲ್ಲಿದ್ದಾರೆ. ಮುಂಬೈನಗರದ 1.10 ಕೋಟಿ ಜನರಲ್ಲಿ ಶೇಕಡ 55 ರಷ್ಟು ಮಂದಿ ಕೊಳಗೇರಿ ಮತ್ತು ಅಕ್ರಮ ಬಡಾವಣೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಕ್ರಮ ಬಡಾವಣೆಗಳನ್ನು ಹೊರತು ಪಡಿಸಿ, ಕೊಳಚಗೇರಿಗಳಲ್ಲಿ ವಾಸಿಸುವ ಜನರ ಸಂಖ್ಯೆ ಆಯಾ ನಗರಗಳ ಜನಸಂಖ್ಯೆಗೆ ಅನುಗುಣವಾಗಿ, ಮುಂಬೈನಲ್ಲಿ ಶೇ.41.3, ಕೊಲ್ಕತ್ತ ನಗರದಲ್ಲಿ ಶೆ.30, ಚೆನ್ನೈ ನಲ್ಲಿ ಶೇ.28, ಹೈದರಾಬಾದ್ ನಲ್ಲಿ ಶೇ.19 ಇದ್ದು ಬೆಂಗಳೂರಿನಲ್ಲಿ ಈ ಪ್ರಮಾಣ ಶೇ,9 ರಷ್ಟು ಮಾತ್ರ ಇದೆ. ದೇಶದ ಐದು ಮಹಾ ನಗರಗಳಲ್ಲಿ (Metro Citys) ಬೆಂಗಳೂರು ನಗರದ ಸ್ಥಿತಿ ಸಮಾಧಾನ ಪಡುವಂತಿದೆ. 2001 ರಲ್ಲಿ 4ಕೋಟಿ 30 ಲಕ್ಷ ಇದ್ದ ಕೊಳಗೇರಿ ನಿವಾಸಿಗಳ ಸಂಖ್ಯೆ 2011ಕ್ಕೆ 9ಕೋಟಿ 30 ಲಕ್ಷಕ್ಕೆ ಎರಿಕೆಯಾಗುತ್ತಿದ್ದು. ಪ್ರತಿವರ್ಷ ಗ್ರಾಮೀಣ ಭಾಗದಿಂದ ಒಂದೂವರೆ ಕೋಟಿ ಜನ ದೇಶದ 7.742 ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಜಮೆಯಾಗುತ್ತಿದ್ದಾರೆ ಎಂದು ಕೇಂದ್ರ ನಗರ ವಸತಿ ಇಲಾಖೆ ಖಾತೆಯ ಕಾರ್ಯದರ್ಶಿ ಅರುಣ್ ಮಿಶ್ರಾ ತಿಳಿಸಿದ್ದಾರೆ

ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳು ಮತ್ತು ಕೃಷಿ ಹಾಗೂ ಕೈಗಾರಿಕೆಗಳ ಕುರಿತು ನಮ್ಮ ಸರ್ಕಾರಗಳು ತಾಳಿದ ನಿರ್ಲಕ್ಷ್ಯ ಮನೋಭಾವದಿಂದಾಗಿ ಹಳ್ಳಿಗಳು ಸ್ಮಶಾನ ಸದೃಶ್ಯ ರೂಪ ತಾಳಿವೆ. ಇದರಿಂದಾಗಿ ನಗರಗಳತ್ತ ವಲಸೆ ಪ್ರಮಾಣ ಹೆಚ್ಚುತ್ತಿದ್ದು ಎಲ್ಲೆಡೆ ಕೊಳಚೆಗೇರಿಗಳು ಅಡೆತಡೆಯಿಲ್ಲದೆ ಸೃಷ್ಟಿಯಾಗುತ್ತಿವೆ. ಮುಂಬೈ ನಂತಹ ಕೊಳಚೆಗೇರಿಗಳಲ್ಲಿ ಪ್ರತಿ ಎಂಟು ಸಾವಿರ ಮಂದಿಗೆ ಒಂದು ಶೌಚಾಲಯವಿದೆ  ಎಂದರೆ, ಪರಿಸ್ತತಿಯನ್ನು ನೀವೇ ಊಹಿಸಿ. ಇಲ್ಲಿನ ಶೇಕಡ 70 ರಷ್ಟು ಮಂದಿ ಬೀದಿ ಬದಿಯ ಕೊಳಾಯಿ ನೀರನ್ನು ಆಶ್ರಯಿಸಿದ್ದು, ತಮ್ಮ ಬೇಡಿಕೆಯ ಶೇಕಡ 40 ರಷ್ಟು ಮಾತ್ರ ನೀರನ್ನು ಪಡೆಯುತ್ತಿದ್ದಾರೆ. ಇನ್ನೂ ಬೀದಿ ದೀಪ, ಒಳ ಚರಂಡಿ, ಆರೋಗ್ಯ, ಶಿಕ್ಣಣ  ಇಂತಹ ಸ್ಥಳಗಳಲ್ಲಿ ಮರೀಚಿಕೆಯಾಗಿವೆ. ಇಂದು ದೇಶಾದ್ಯಂತ ನೂರಾರು ಸ್ವಯಂ ಸೇವಾ ಸಂಘಟನೆಗಳ ಲಕ್ಷಾಂತರ ಕಾರ್ಯಕರ್ತರ ಸೇವಾ ಮನೋಭಾವದಿಂದ ಕೊಳಚೆಗೇರಿಯ ಮಕ್ಕಳು ಅಕ್ಷರ ಲೋಕದ ಭಾಗಿಲನ್ನು ತಟ್ಟುವಂತಾಗಿದೆ.ಇದೊಂದು ಸಮಾಧಾನಕರ ಸಂಗತಿ.

ಕಳೆದ ಇಪ್ಪತ್ತು ವರ್ಷಗಳಿಂದಲೂ ಪ್ರತಿವರ್ಷ ಕೊಳಚೆಗೇರಿಗಳನ್ನು ಹೊಕ್ಕು ಬರುವುದನ್ನು ವ್ಯಸನ ಮಾಡಿಕೊಂಡಿರುವ ನನಗೆ,  ಪ್ರತಿ ಬೇಟಿಯ ಸಂದರ್ಭದಲ್ಲಿ ಅಲ್ಲಿನ ವಯಸ್ಕ ಹೆಣ್ಣು ಮಕ್ಕಳನ್ನು ನೋಡಿದಾಗ ಎದೆಗೆ  ಚೂರಿ ಇಕ್ಕಿಸಿಕೊಂಡ ಅನುಭವವಾಗುತ್ತದೆ. ಕೇವಲ ಎಂಟು ಅಡಿ ಅಗಲ ಮತ್ತು ಹತ್ತು ಅಡಿ ಉದ್ದ ಪ್ಲಾಸ್ಷಿಕ್ ಮನೆಗಳಲ್ಲಿ ತಂದೆ, ತಾಯಿಗಳ  ಜೊತೆ ವಾಸಿಸುವ ಆ ಮಕ್ಕಳಿಗೆ ಶೌಚಾಲಯ, ಮತ್ತು ಸ್ನಾನಕ್ಕೆ ಏಕಾಂತ ಎಂಬುದು ಇಲ್ಲವಾಗಿದೆ. ತಂದೆ ತಾಯಿಗಳು ದುಡಿಯಲು ಹೊರಗೆ ಹೋದ ಸಂದರ್ಭದಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಈ ಬಾಲೆಯರ ದುಖಃ ದುಮ್ಮಾನಗಳಿಗೆ ಈ ದೇಶದಲ್ಲಿ  ಲೆಕ್ಕವಿಟ್ಟವರಿಲ್ಲ. ಆ ಕುರಿತು ಯೋಚಿಸಲು ನಮಗೆ ಬಿಡುವಿಲ್ಲ. ಏಕೆಂದರೆ,  ಸುರಕ್ಷಿತ ವಲಯದಲ್ಲಿ ಬದುಕುವುದನ್ನು ರೂಢಿಗತ ಮಾಡಿಕೊಂಡಿರುವ ನಮಗೆ ನಮ್ಮದೇ ಆದ ಖಾಸಾಗಿ ಕ್ಷಣಗಳಿವೆ, ನಮ್ಮ ಮನೆಗಳಲ್ಲಿ ಬೆರಳ ತುದಿಗೆ ಜಗತ್ತನ್ನು ತಂದು ಕೂರಿಸುವ ತಂತ್ರಜ್ಙಾನಗಳಿವೆ, ಟಿ.ವಿ.ಸೀರಿಯಲ್ ಗಳಿವೆ, ರಿಯಾಲಿಟಿ ಷೋಗಳಿವೆ, ಕ್ರಿಕೇಟ್ ಮ್ಯಾಚುಗಳಿವೆ, ಮನೆಯಲ್ಲಿ ತುಂಬಿದ ಬಿಯರ್ ಮತ್ತು ವಿಸ್ಕಿ, ಸೋಡಾ  ಬಾಟಲುಗಳಿವೆ .ರೆಪ್ರಿಜಿಯೆಟರ್ ಪ್ರಿಡ್ಜ್ ಗಳಲ್ಲಿ ನಿನ್ನೆ ಹುರಿದ ಕೋಳಿ ಮಾಂಸದ ತುಂಡುಗಳಿವೆ. ಇಷ್ಟೇಲ್ಲಾ ಇದ್ದು  ನಾವು ನೆಮ್ಮದಿಯಿಂದ ಬದುಕುವುದಕ್ಕೆ ಇನ್ನೇನು ಬೇಕು?

1 ಕಾಮೆಂಟ್‌:

  1. ಮಾನ್ಯರೇ, ನೀವು ಒಬ್ಬ ಪತ್ರಕರ್ತರಾಗಿ, " ಜಾಗತೀಕರಣ ಮತ್ತು ಗ್ರಾಮಭಾರತ" ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ ತಾವು ಕೊಳಚೆ ನಿವಾಸಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಲೇಖನ ಬರೆದಿರುವ ತಮಗೆ ಧನ್ಯವಾದಗಳು. ಕೊಳಚೆ ನಿವಾಸಿಗಳ ಪರವಾಗಿ ಕೇಳುವವರು ಯಾರು ಇಲ್ಲ ಎನ್ನುವ ಭಾವನೆ ಅವರಲ್ಲಿದೆ. ಈ ನಿಮ್ಮ ಲೇಖನದಿಂದ ನಮಗಾಗಿ ಸ್ಪಂಧಿಸುವವರು ಒಬ್ಬರಿದ್ದಾರೆಂಬ ಭಾವನೆ ಅವರಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಕೊಳಚೆ ಪ್ರದೇಶದಲ್ಲಿ ವಾಸಮಾಡುವವರು ನೀವು ತಿಳಿಸಿರುವಂತೆ, ಸುಮಾರು ೮೦-೯೦ ವರುಷಗಳಿಂದ, ಅನೇಕ ಕಾರಣಗಳಿಂದ ಹಳ್ಳಿಯನ್ನು ಬಿಟ್ಟು ಇಲ್ಲಿ ಬಂದು ನೆಲಸುತ್ತಾರೆ. ಇವರೆಲ್ಲಾ ಗಂಡಸರು ಬಹುತೇಕ ಕೂಲಿ ಕಾರ್ಮಿಕರು. ಹೆಣ್ಣುಮಕ್ಕಳು ಹಣವಂತರ ಮನೆಯಲ್ಲಿ ಬಟ್ಟೆ ಹೊಗೆಯುವುದು, ಪಾತ್ರೆ ತೊಳೆಯುವುದು, ಮಕ್ಕಳನ್ನು ನೋಡಿಕೊಳ್ಳುವುದು ಮಾಡುತ್ತಾರೆ. ಮಧುವೆ ಛತ್ರಗಳಲ್ಲಿ ಶುಚಿಗೊಳಿಸುವ ಕೆಲಸ ಮಾಡುತ್ತಾರೆ. ಆ ದಿನ ದುಡಿದು ಆ ದಿನ ತಿನ್ನಬೇಕು. ಇದರಿಂದಲೂ ಹಲವಾರು ಶೋಷಣೆಗೆ ಒಳಗಾಗುತ್ತಾರೆ. ಯಾವುದೇ ಸೌಲಭ್ಯ ಕೇಳುವಂತಿಲ್ಲ. ಮಕ್ಕಳು ಎಸ್.ಎಸ್.ಎಲ್.ಸಿ. ಮುಟ್ಟಿದರೆ ಹೆಚ್ಚು ಅವರೂ ಕೂಡ ಕೂಲಿ ಕಾರ್ಮಿಕರೋ, ಆಟೋ, ಟ್ಯಾಕ್ಸಿ ಚಾಲಕರಾಗಿ ಡುಡಿಯುತ್ತಾರೆ. ಕೊನೆಗೆ ಹತಾಶರಾಗಿ ಸಮಾಜಘಾತುಕ ಶಕ್ತಿಗಳಾಗಿ ಮಾರ್ಪಾಡಾಗುತ್ತಾರೆ. ಇದರಿಂದಾಗಿ ಅವರ ಜೀವನವೂ ಹಾಳಾಗುತ್ತದೆ. ಯಾವುದೇ ಅಭಿವೃದ್ದಿ ಆಗುವುದಿಲ್ಲ. ಇರುವ ಮನೆಯಲ್ಲಿಯೇ ವಾಸ. ಇವರ ಅಭಿವೃಡ್ಡಿಗೆಂದೇ ಕೊಳಚೆ ಅಭಿವೃದ್ದಿ ಮಂಡಳಿ ಎಂಬ ಇಲಾಖೆ ಇದ್ದರೂ ಯಾವ ಪ್ರಯೋಜನವೂ ಇಲ್ಲ. ಅವರಿಗೂ ಏನೋ ತಾತ್ಸಾರ, ಸರಕಾರದ ಸಹಾಯ ಹಸ್ತ ನಿವಾಸಿಗಳಿಗೆ ತಲುಪುವುದಿಲ್ಲ. ಇದಕ್ಕೆಲ್ಲಾ ನಿಮ್ಮಂತಹವರು ನಿವಾಸಿಗಳಿಗೆ ನ್ಯಾಯ ಕೊಡಿಸಬೇಕಷ್ಟೆ. ವಂದನೆಗಳು.

    ಪ್ರತ್ಯುತ್ತರಅಳಿಸಿ