ಜಗತ್ತಿನ ಜೀವರಾಶಿಗಳಿಗೆ
ಒಳಿತನ್ನು ಬಯಸುವ ಚಿಂತನೆಗಳಿಗೆ ಸಾವಿಲ್ಲವೆಂಬುದಕ್ಕೆ ಭಾರತದ ಅಪ್ಪಿಕೊ ಚಳವಳಿಯ ಇತಿಹಾಸ
ಸಾಕ್ಷಿಯಂತಿದೆ. ಮುನ್ನೂರು ವರ್ಷಗಳ ಹಿಂದೆ ರಾಜಸ್ಥಾನದ ಈಗಿನ ಜೋಧಪುರ ಜಿಲ್ಲಾ ಕೇಂದ್ರದಿಂದ
ಕೇವಲ 26 ಕಿಲೋಮೀಟರ್ ದೂರವಿರುವ ಖೇಜ್ರಾಲಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿಕೊಂಡ, ಮರಗಳನ್ನು
ಉಳಿಸಿ ಕಾಪಾಡುವ ಒಂದು ಸಾಮುದಾಯಿಕ ಪ್ರಜ್ಙೆ ಮೂರು ಶತಮಾನಗಳ ನಂತರವೂ, ಆಯಾ ಕಾಲಘಟ್ಟಕ್ಕೆ
ಅನುಗುಣವಾಗಿ ಹಲವು ರೂಪ ತಾಳುತ್ತಾ ಮೈದಾಳುತ್ತಾ ಬಂದಿದೆ.ಜಗತ್ತಿನ ದಾರ್ಶನಿಕರು ನಮ್ಮ ನಡುವೆ
ಇಲ್ಲದಿದ್ದರೂ ಅವರ ಚಿಂತನೆಗಳ ಮೂಲಕ ಜೀವಂತವಿದ್ದಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್
ಮುಂತಾದವರು ಇನ್ನೂ ನಮ್ಮಗಳ ಎದೆಯಲ್ಲಿ ಹಸಿಯಾಗಿರುವುದು ಮತ್ತು ಜೀವಂತವಾಗಿರುವುದು ಇಂತಹ ಜೀವಪರ
ಚಂತನೆಗಳ ಕಾರಣಕ್ಕಾಗಿ ಎಂದರೆ. ಅತಿಶಯವಾಗಲಾರದು.
ಎಲ್ಲಿಯ ರಾಜಸ್ಥಾನ? ಎಲ್ಲಿಯ
ಹಿಮಾಲಯದ ಪರ್ವತದ ಕಣಿವೆ? ಎಲ್ಲಿಯ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ? ಗಡಿ, ಭಾಷೆ, ಮತ್ತು ಸಂಸ್ಕೃತಿಗಳನ್ನು
ಮೀರಿ ಬೆಳೆದ ಅಪ್ಪಿಕೊ ಚಳವಳಿಯ ವೈಶಾಲ್ಯತೆಯನ್ನು ಗಮನಿಸಿದರೆ, ಅಚ್ಚರಿಯಾಗುತ್ತದೆ. ಮೂರು
ಶತಮಾನಗಳ ಕಾಲ ಗುಪ್ತ ಗಾಮಿನಿ ನದಿಯಂತೆ ಜನಮಾನಸದಲ್ಲಿ ಹರಿದು ಬಂದ ಈ ಪರಿಸರ ಪ್ರಜ್ಙೆ ನಿಜಕ್ಕೂ
ಒಂದು ರೀತಿ ಸೋಜಿಗದ ಸಂಗತಿಯೆ ಸರಿ.
ಜೋಧಪುರ ಸಂಸ್ಥಾನದ ಮಹಾರಾಜ ಅಭಯಸಿಂಗ್ ಎಂಬಾತ,ತನ್ನ ಕೈ
ಕೆಳಗಿನ ಮಾಂಡಲೀಕ ಖರ್ದ ಸಂಸ್ಥಾನದ ಥಾಕೂರ್ ಸೂರತ್ ಸಿಂಗ್ ಎಂಬಾತನಿಗೆ 1726 ರಲ್ಲಿ ಖೇಜ್ರಾಲಿ
ಗ್ರಾಮವನ್ನು ಬಳುವಳಿಯಾಗಿ ನೀಡಿದ್ದ. ಈ ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಷ್ಣೋಯ್
ಎಂದು ಕರೆಸಿಕೊಳ್ಳುವ ವೈಷ್ನವ ಪಂಥದ ಅನುಯಾಯಿಗಳು ವಾಸವಾಗಿದ್ದರು. ಗುರು ಜಂಬುಕೇಶ್ವರ್ ಎಂಬ
ಸಂತನ ಪರಮ ಅನುಯಾಯಿಗಳಾಗಿದ್ದ ಇವರೆಲ್ಲಾ ಅಹಿಂಸೆ ಕುರಿತಾದ 29 ಸೂತ್ರಗಳನ್ನು ಕಟ್ಟುನಿಟ್ಟಾಗಿ
ಪಾಲಿಸುತ್ತಿದ್ದರು. ಅವುಗಳಲ್ಲಿ ಮರಗಳ ಕಡಿಯುವಿಕೆಯ ನಿಷೇಧ ಮತ್ತು ಪ್ರಾಣಿಗಳ ಬೇಟೆಯ ನಿಷೇಧಗಳು
ಸೇರಿದ್ದವು.
1730 ರ ಸೆಪ್ಟಂಬರ ತಿಂಗಳಿನ
ಒಂದು ಮಂಗಳವಾರ ಬೆಳಿಗ್ಗೆ ಮಾಡಲೀಕ ಥಾಕೂರ್ ಸಿಂಗ್
ತಾನು ನಿರ್ಮಿಸುತ್ತಿದ್ದ ಅರಮನೆಗಾಗಿ ಹುಲುಸಾಗಿ ಬೆಳದಿದ್ದ ಮರಗಳನ್ನು ಕಡಿಯಲು
ಖೇಜ್ರಾಲಿ ಗ್ರಾಮಕ್ಕೆ ತನ್ನ ಸೇವಕರನ್ನು ಕಳುಹಿಸಿದ. ಸುದ್ದಿ ತಿಳಿದ ಗ್ರಾಮದ ಅಮೃತಾದೇವಿ ಎಂಬ ಗೃಹಣಿ, ತನ್ನ ಮೂವರು ಹೆಣ್ಣು
ಮಕ್ಕಳಾದ, ರತ್ನಿ,ಅಸು ಮತ್ತು ಬಾಗು ಇವರ ಜೊತೆಗೂಡಿ ಸ್ಥಳಕ್ಕೆ ದಾವಿಸಿಬಂದು ಮರಗಳನ್ನು
ಕಡಿಯದಂತೆ, ಅವುಗಳನ್ನು ಅಪ್ಪಿಕೊಂಡು ಅಡ್ಡಿಪಡಿಸಿದರು. ಸುದ್ಧಿ ತಿಳಿದ ಮಾಂಡಲೀಕ ಥಾಕೂರ್ ಸುರತ್
ಸಿಂಗ್ ಅವರ ತಲೆ ಕಡಿದು ಮರಗಳನ್ನು ಉರುಳಿಸುವಂತೆ ಸೇವಕರಿಗೆ ಆಜ್ಙಾಪಿಸಿದ. ಸೇವಕರು ಅಮೃತಾದೇವಿ
ಸೇರಿದಂತೆ ಮೂವರು ಮಕ್ಕಳ ತಲೆ ಕಡಿದು, ಮರಗಳನ್ನು ಉರುಳಿಸಿದರು. ಈ ವಿಷಯ ಸುತ್ತಮುತ್ತಲಿನ
ಗ್ರಾಮಗಳಿಗೆ ಹರಡುತ್ತಿದ್ದಂತೆ, ನೂರಾರು ಮಹಿಳೆಯರು ಮುಂದೆ ಬಂದು ತಮ್ಮ ಜೀವವನ್ನು ಬಲಿಕೊಟ್ಟು
ಮರಗಳನ್ನು ಸಂರಕ್ಷಿಸಲು ಮುಂದಾದರು. ಮರಗಳ ರಕ್ಷಣೆಗಾಗಿ ನಡೆದ ಮಾರಣ ಹೋಮದಲ್ಲಿ ಒಟ್ಟು 363 ಮಂದಿ
ಮಹಿಳೆಯರು ಬಲಿಯಾಗಿದ್ದರು.
ವಿಷಯ ರಾಜಸ್ಥಾನದೆಲ್ಲೆಡೆ
ಹರಡುತ್ತಿದ್ದಂತೆ, ಖೇಜ್ರಾಲಿ ಗ್ರಾಮಕ್ಕೆ ಸ್ವತಃ ಆಗಮಿಸಿದ ಜೋಧಪುರದ ಮಹಾರಾಜ ಅಭಯ್ ಸಿಂಗ್
ಜನತೆಯಲ್ಲಿ ನಡೆದ ಘಟನೆಗೆ ಕ್ಷಮೆ ಯಾಚಿಸಿದ. ಜೊತೆಗೆ ಖೇಜ್ರಾಲಿ ಗ್ರಾಮವೂ ಸೇರಿದಂತೆ,ಸುತ್ತ
ಮುತ್ತಲಿನ ಗ್ರಾಮಗಳ ಪರಿಸರದಲ್ಲಿ ಮರಗಳನ್ನು ಕಡಿಯುವುದಕ್ಕೆ ನಿಷೇಧ ಹೇರಿದ.ಜೊತೆಗೆ, ಪ್ರಾಣಿಗಳ
ಬೇಟೆಯನ್ನು ಸಹ ನಿಷೇಧಿಸಿದ. ಸ್ವತಃ ಮಾಂಸಹಾರಿಯಾಗಿದ್ದ ಮಹಾರಾಜ ಅಭಯ್ ಸಿಂಗ್ ತನ್ನ ವಂಶಸ್ಥರು
ಸಹ ಎಂದಿಗೂ ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಶಿಕಾರಿ ಮಾಡುವುದಿಲ್ಲ ಎಂದು ಪ್ರತಿಜ್ಙೆಗೈದ. ಈ
ಪದ್ದತಿಯನ್ನು ಅವನ ವಂಶಸ್ಥರು ಇಂದಿಗೂ ಸಹ ಜಾರಿಯಲ್ಲಿಟ್ಟಿದ್ದಾರೆ.
ಖೇಜ್ರಾಲ್ ಹಳ್ಳಿಯಲ್ಲಿ ಮರಗಳ
ರಕ್ಷಣೆಗಾಗಿ ಅಮೃತಾದೇವಿ ಸೇರಿದಂತೆ 363 ಹುತಾತ್ಮ ಮಹಿಳೆಯರಿಗಾಗಿ ಸ್ಮಾರಕವೊಂದನ್ನು
ನಿರ್ಮಿಸಲಾಗಿದೆ. ಪ್ರತಿ ವರ್ಷ ಸೆಪ್ಟಂಬರ್ ತಿಂಗಳ ಮೊದಲ ಮಂಗಳವಾರ ಅಮೃತಾದೇವಿ ಮತ್ತು ಸಂಗಡಿಗರ
ನೆನಪಿಗಾಗಿ ಜಾತ್ರೆ ನಡೆಯುತ್ತದೆ. ಆ ಮಹಿಳೆಯರು ತಮ್ಮ ಜೀವಗಳ ಬಲಿದಾನದ ಮೂಲಕ ಉಳಿಸಿದ ಮರಗಳು
ಇಂದಿಗೂ ಖೇಜ್ರಾಲಿ ಗ್ರಾಮದಲ್ಲಿ ಜೀವಂತವಾಗಿವೆ.
ಹೀಗೆ ಮರಗಳ ಸಂರಕ್ಷಣೆಗಾಗಿ 1730 ರಲ್ಲಿ
ಹುಟ್ಟಿಕೊಂಡ ಅಪ್ಪಿಕೊ ಚಳವಳಿ, 1970 ರಲ್ಲಿ ಹಿಮಾಲಯದ ಗೋಪೇಶ್ವರ, ತೆಹ್ರಿ, ಘರ್ ವಾಲ್, ಚಮೋಲಿ
ಜಿಲ್ಲೆಗಳಲ್ಲಿ ಮತ್ತೆ ಜನ್ಮತಾಳಿತು. ನಂತರ 1980 ರಲ್ಲಿ ಸ್ಥಗಿತಗೊಂಡ ಈ ಹೋರಾಟ, ಅಚ್ಚರಿ
ಎಂಬಂತೆ 1983 ರ ಸೆಪ್ಟಂಬರ್ ಎಂಟರಂದು ದಕ್ಷಿಣ ಭಾರತದ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಜನ್ಮ ತಾಳಿತು. ಇದರ ರೂವಾರಿ ಉತ್ತರ
ಕನ್ನಡ ಜಿಲ್ಲೆಯ ಪಾಂಡು ರಂಗ ಹೆಗ್ಡೆ.
1956 ರಲ್ಲಿ ಉತ್ತರ ಕನ್ನಡ
ಜಿಲ್ಲೆಯ ಶಿರಸಿ ಸಮೀಪದ ಅರಣ್ಯದ ನಡುವಿನ ಒಂಬತ್ತು ಮನೆಗಳ ಪುಟ್ಟ ಗ್ರಾಮವೊಂದರಲ್ಲಿ ಜನಿಸಿದ
ಪಾಂಡುರಂಗ ಹೆಗ್ಡೆಯವರು ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡವರು. ಆನಂತರ ಉದ್ಯೋಗಿಯಾಗಿದ್ದ
ಅಣ್ಣನ ಆಶ್ರಯದಲ್ಲಿ ಮುಂಬೈ ಮತ್ತು ನಾಗಪುರ ನಗರಗಳಲ್ಲಿ ಬೆಳೆದವರು. ಬಿ,ಕಾಂ. ಪದವಿಯ ನಂತರ 1979
ರಲ್ಲಿ ದೆಹಲಿಗೆ ತೆರಳಿದ ಹೆಗ್ಡೆಯವರು ಛಾರ್ಟಡ್ ಅಕೌಂಟೆಡ್ ಆಗಿ ವೃತ್ತಿ ಆರಂಭಿಸಿದ್ದರು. ಆದರೆ,
ಹಾಳೆಗಳ ಮೇಲಿನ ಲೆಕ್ಕ, ಅವರಿಗೆ ಕೂಡಿ ಬರಲಿಲ್ಲ. ನಂತರ ವೃತ್ತಿ ತ್ಯೆಜಿಸಿ, ದೆಹಲಿಯ ಸ್ಕೂಲ್
ಆಫ್ ಸೋಷಿಯಲ್ ವರ್ಕ್ ಸಂಸ್ಥೆಗೆ ದಾಖಲಾದರು. ಮರುವರ್ಷ ಸ್ವಯಂ ಸೇವಾ ಸಂಘಟನೆಯೊಂದರ
ಕಾರ್ಯಕರ್ತರಾಗಿ ಮಧ್ಯಪ್ರದೇಶಲ್ಲಿ ಕಾರ್ಯ ನಿರ್ವಹಿಸಿದರು. ಈ ವೇಳೆಗೆ ಹಿಮಾಲಯದ ಕಣಿವೆಯಲ್ಲಿ
ಆರಂಭಗೊಂಡಿದ್ದ ಚಿಪ್ಕೊ ಚಳವಳಿಗೆ ಸಾಕ್ಷಿಯಾಗಿದ್ದ ಅವರು, ತನ್ನ ಹುಟ್ಟುನೆಲದಲ್ಲಿನ ಮರಗಳ
ಸಂರಕ್ಷಣೆಗಾಗಿ ಇಂತಹ ಆಂಧೋಲನವನ್ನು ಆರಂಭಿಸಬೇಕೆಂದು
ನಿರ್ಧರಿಸಿ ಮತ್ತೆ ಕರ್ನಾಟಕಕ್ಕೆ ವಾಪಸ್ಸಾದರು.
1983 ರ ಸೆಪ್ಟಂಬರ್ 8 ರಂದು
ಉತ್ತರ ಕನ್ನಡ ಜಿಲ್ಲೆಯ ಕಳಸೆ ಅರಣ್ಯದ ಸಾಲ್ಕುಣಿ ಎಂಬ ಪ್ರದೇಶದಲ್ಲಿ
ಉಳಿಸು, ಬೆಳಸು, ಬಳಸು,
“ಎಂಬ ಪರಿಕಲ್ಪನೆಯೊಂದಿಗೆ ಅಪ್ಪಿಕೊ ಚಳವಳಿಗೆ ಪಾಂಡುರಂಗ ಹೆಗ್ಡೆ ಚಾಲನೆ ನೀಡಿದರು. 1950 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ
ಶೇಕಡ 81 ರಷ್ಟು ಭಾಗ ಅರಣ್ಯವಿದ್ದದು, ದಾಂಡೇಲಿಯಲ್ಲಿ ಆರಂಭವಾದ ಪ್ಲೈವುಡ್ ಕಾರ್ಖಾನೆ ಮತ್ತು
ಕಾಳಿ ನದಿಯ ಅಣೆಕಟ್ಟು ಯೋಜನೆಗಳಿಂದಾಗಿ ಶೇಕಡ 66 ರಷ್ಟು ಭಾಗಕ್ಕೆ ಕುಸಿದಿತ್ತು. ಕೇರಳ ರಾಜ್ಯ
ಪಶ್ಚಿಮಗಟ್ಟದ ವಿಸ್ತೀರ್ಣದ ಶೇಕಡ 42 ರಷ್ಟು ಭಾಗವನ್ನು ಹೊಂದಿದ್ದು, ಶೇಕಡ 44 ರಷ್ಟು ಇದ್ದ
ಅರಣ್ಯ ಪ್ರದೇಶ ಕೇವಲ ಮೂರು ದಶಕಗಳ ಅವಧಿಯಲ್ಲಿ ಶೇಕಡ 9 ರಷ್ಟು ಭಾಗಕ್ಕೆ ಕುಸಿದಿತ್ತು. ದಕ್ಷಿಣ
ಭಾರತದಲ್ಲಿ ಅರಣ್ಯದ ಅವಸಾನವಾಗುತ್ತಿರುವ ಕುರಿತು ಅರಿವಿದ್ದ ಪಾಂಡು ರಂಗ ಹೆಗ್ಡೆಯವರಿಗೆ ಮರಗಳ
ಮಾರಣ ಹೋಮ ತಪ್ಪಿಸುವ ಬಗ್ಗೆ ಚಿಂತೆಯೊಂದು ಅವರನ್ನು ಸದಾ \ಕಾಡುತ್ತಿತ್ತು. ಅವರ ಈ ಚಿಂತನೆಯ
ಫಲವಾಗಿ ಕಡಿಮೆ ಉರವಲು ಬೇಡುವ ಅತ್ಯಾಧುನಿಕ ಒಲೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಳಕೆಗೆ ಬಂದವು. ತಾವೇ ಸ್ವತಃ ನಿಂತು ಹೋಟೇಲುಗಳಿಗೆ,
ಚಹಾ ಅಂಗಡಿಗಳಿಗೆ, ಮನೆಗಳಿಗೆ ಹೀಗೆ ಎರಡು ಸಾವಿರ ಒಲೆಗಳನ್ನು ವಿತರಿಸಿದರ. ಮಕ್ಕಳಲ್ಲಿ,
ಗ್ರಾಮಸ್ಥರಲ್ಲಿ ಜಾಗೃತಿಯನ್ನುಂಟು ಮಾಡಿ, ಸಸಿಗಳನ್ನು ಬೆಳಸಿ, ನೆಡುವಂತೆ ಪ್ರೋತ್ಸಾಹಿಸಿದರು. ಅಲ್ಲದೆ ಚಿಪ್ಕೊ ಚಳವಳಿಯ ನೇತಾರ ಸುಂದರ ಲಾಲ್ ಬಹುಗುಣರನ್ನು ಕರ್ನಾಟಕಕ್ಕೆ ಕರೆತಂದು ಪರಿಸರದ ಪ್ರಜ್ಙೆ ಮೂಡಿಸಿ
ದರು. ಕೇವಲ ಮೂರು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಲಕ್ಷ ಸಸಿಗಳನ್ನು ನೆಡಲು
ಕಾರಣಕರ್ತರಾದರು. ಪಾಂಡುರಂಗ ಹೆಗ್ಡೆಯವರ ಈ ಪರಿಸರ ಆಂದೋಲನ ನೆರೆಯ ಕೇರಳ, ತಮಿಳುನಾಡು ಮತ್ತು
ಗೋವಾ ರಾಜ್ಯಗಳಿಗೆ ವಿಸ್ತರಿಸಲು ಪ್ರೇರಣೆಯಾಯಿತು. ಅಲ್ಲದೆ, 1984 ರ ವೇಳೆಗೆ ವಿಶ್ವಬ್ಯಾಂಕ್
ನೆರವಿನಿಂದ ಕರ್ನಾಟಕದಲ್ಲಿ ಜಾರಿಗೆ ಬಂದ ಸಾಮಾಜಿಕ ಅರಣ್ಯಯೋಜನೆ ಕಾರ್ಯಕ್ರಮದಲ್ಲಿ ಕೇವಲ
ನೀಲಗಿರಿ ಮತ್ತು ಅಕೇಶಿಯಾ ಗಿಡಗಳನ್ನು ನೆಡುತ್ತಿದ್ದುದನ್ನು ಸಾರ್ವಜನಿಕರು ಪ್ರತಿಭಟಿಸಲು
ಕಾರಣವಾಯಿತು. ಆನಂತರ ಅರಣ್ಯ ಇಲಾಖೆ ಇತರೆ ಗಿಡಗಳನ್ನು ಬೆಳಸಿ, ನೆಡಲು ಆರಂಭಿಸಿತು.
ಹೀಗೆ ಸತತ ಮೂರು ಶತಮಾನಗಳ
ಕಾಲದ ಇತಿಹಾಸವಿರುವ ಅಪ್ಪಿಕೊ ಚಳವಳಿ ಆಯಾ ಕಾಲಕ್ಕೆ ತಕ್ಕಂತೆ ವಿವಿಧ ರೂಪಗಳಲ್ಲಿ ಜನ್ಮ
ತಾಳುತ್ತಲೇ ಇದೆ. ಇದಕ್ಕೆ ಇತ್ತೀಚೆಗಿನ ಉದಾಹರಣೆಯೆಂದರೆ, ಐದು ವರ್ಷದ ಹಿಂದೆ ಗೋಕರ್ಣ ಸಮೀಪದ
ತದಡಿ ಬಂದರು ಪ್ರದೇಶದಲ್ಲಿ ಕಲ್ಲದ್ದಲು ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆಗೆ ಕರ್ನಾಟಕ
ಸರ್ಕಾರ ( ನಾಲ್ಕು ಸಾವಿರ ಮೆಗಾವ್ಯಾಟ್)
ಮುಂದಾದಾಗ 25 ಸಾವಿರ ಮಂದಿ ಪರಿಸರ ವಾದಿಗಳ ಪ್ರತಿಭಟನೆಯಿಂದ ಅದು ಸ್ಥಗಿತಗೊಂಡಿತು.
ಭಾರತದ ಸಂದರ್ಭದಲ್ಲಿ ಅಪ್ಪಿಕೊ
ಚಳವಳಿ ಕೊಟ್ಟ ಅತಿ ದೊಡ್ಡ ಕೊಡುಗೆಯೆಂದರೆ, ಒಂದನೇಯದಾಗಿ ಜನಸಾಮಾನ್ಯರಲ್ಲಿ ಪರಿಸರ ಕುರಿತಂತೆ ಜಾಗೃತಿ
ಮೂಡಿಸಿದ್ದು. ಎರಡನೇಯದಾಗಿ ಈ ದೇಶಕ್ಕೆ ಅತಿ ಮುಖ್ಯ ಹಾಗೂ ಪ್ರತಿಭಾವಂತ ಪರಿಸರ ತಜ್ಙರನ್ನು ಈ
ಆಂಧೋಲನ ನೀಡಿದೆ.ಈ ದಿನ ನಮ್ಮ ನಡುವೆ ಇರುವ ಡಾ.ವಂದನಾ ಶಿವ( ಭೌತ ವಿಜ್ಙಾನಿಯಾಗಬೇಕಿದ್ದವರು)
ಮತ್ತು ದೆಹಲಿಯ ಸೆಂಟರ್ ಪಾರ್ ಸೈನ್ಸ್ ಅಂಡ್ ಎನ್ವಿರಾನ್ ಮೆಂಟ್ ಸಂಸ್ಥೆಯ ಸ್ಥಾಪಕ ದಿವಂಗತ
ಅನಿಲ್ ಅಗರ್ ವಾಲ್ ಹಾಗೂ ನಮ್ಮ ಕನ್ನಡಿಗರಾದ ನಾಗೇಶ್ ಹೆಗ್ಡೆ ( ಇವರಿಬ್ಬರೂ ಕಾನ್ಪರ್ ಮತ್ತು
ಖರಗ್ ಪುರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪದವೀಧರರು, ಲಕ್ಷಾಂತರ ರೂಪಾಯಿ ಸಂಬಳ
ತರುವ ಪ್ರಾಧ್ಯಾಪಕ ಹುದ್ದೆ ತ್ಯೆಜಿಸಿ ಪರಿಸರ ರಕ್ಷಣೆಗೆ ಜೀವ ಮುಡಿಪಾಗಿಟ್ಟವರು) ಹಾಗೂ ಪಾಂಡು ರಂಗ ಹೆಗ್ಡೆ, ಸುನೀತಾ ನಾರಾಯಣ್ ( ಡೌನ್ ಟು
ಅರ್ಥ್ ಪತ್ರಿಕೆ ಸಂಪಾದಕಿ) ಹೀಗೆ ಹೆಸರಿಸಲು ಸಾದ್ಯವಾಗದಷ್ಟು ಮಹನೀಯರನ್ನು ಅಪ್ಪಿಕೊ ಚಳವಳಿ ಕೊಡುಗೆ
ನೀಡಿದ್ದು, ಈ ಸಂತತಿ ದೇಶದೆಲ್ಲೆಡೆ ಬೆಳೆಯುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
(ಮುಗಿಯಿತು)