ಸೋಮವಾರ, ಜೂನ್ 17, 2013

ಅಪ್ಪಿಕೊ (ಚಿಪ್ಕೊ) ಚಳವಳಿಯ ಕಥನ- ಮೂರು

ಹಿಮಾಲಯದ ಪರಿಸರದಲ್ಲಿ  ನಡೆಯುತ್ತಿದ್ದ ಮರಗಳ ಮಾರಣಹೋಮದ ಬಗ್ಗೆ ಅಲ್ಲಿನ ಜನರಲ್ಲಿ ನಿಜವಾದ ಕಿಚ್ಚು ಮೂಡತೊಡಗಿದ್ದು, 1972 ರಲ್ಲಿ. ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆ ಬಹುರಾಷ್ಟ್ರೀಯ ಕಂಪನಿಯಾದ ಸೈಮಂಡ್ ಎಂಬ ಕಂಪನಿಗೆ ಘರ್ ವಾಲ್, ಚಮೋಲಿ, ತೆಹ್ರಿ  ಮತ್ತು ಉತ್ತರ ಕಾಶಿ ಹೀಗೆ ಹಿಮಾಲಯದ ತಪ್ಪಲಿನ ಅರಣ್ಯದಲ್ಲಿ ಎಂಟು ಸಾವಿರ ಮರಗಳನ್ನು ಕಡಿಯಲು ಅನುಮತಿ ನೀಡಿತು. ಕ್ರಿಕೇಟ್ ಬ್ಯಾಟ್, ಟೆನ್ನಿಸ್ ರಾಕೇಟ್ ನಂತಹ ಹಲವಾರು ಕ್ರೀಡಾ ಸಾಮಾಗ್ರಿಗಳನ್ನು ತಯಾರಿಸುತ್ತಿದ್ದ ಈ ಕಂಪನಿ , ಸರ್ಕಾರದ ಲೆಕ್ಕದಲ್ಲಿ, ಎಂಟು ಸಾವಿರ ಮರಗಳು ಹಾಗೂ ಅಧಿಕಾರಿಗಳ ಜೊತೆಗಿ ಒಳ ಒಪ್ಪಂಧದಲ್ಲಿ ಅದರ ನಾಲ್ಕು ಪಟ್ಟು ಮರಗಳನ್ನು ಕಡಿಯಲು ಹವಣಿಸಿತ್ತು. ಇದು ಸಹಜವಾಗಿ ಅಲ್ಲಿನ ಜನರ ನಂಬಿಕೆ ಮತ್ತು ಅಸ್ತಿತ್ವವನ್ನು ಅಲುಗಾಡಿಸಿತ್ತು. ಏಕೆಂದರೆ, ಹಿಮಾಲಯದ ಪ್ರದೇಶದಲ್ಲಿ ವಯಸ್ಸಾದ ವೃದ್ಧ ದಂಪತಿಗಳು ತಾವು ಸಾಯುವ ಮುನ್ನ ಹಲವು ಸಸಿಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ, ನಂತರ ಸಾಯುವುದು ಸಂಪ್ರದಾಯ. ಇಂತಹ ಅತ್ಯಮೂಲ್ಯ ಸಂಪ್ರದಾಯದ ಮೂಲಕ ಹಿರಿಯರು ಬೆಳಸಿದ ವೃಕ್ಷಗಳು ಅಲ್ಲಿನ ಜನತೆಯ ಪಾಲಿಗೆ ಅತ್ಯಮೂಲ್ಯ ಆಸ್ತಿಯಾಗಿದ್ದವು. ಇಂತಹ ನಂಬಿಕೆಗಳನ್ನು ಅಲುಗಾಡಿಸಿದ ಸರ್ಕಾರದ ವ್ಯವಸ್ಥೆ ಮತ್ತು ಸೈಮಂಡ್ ಕಂಪನಿಯ ವಿರುದ್ಧ ಜನತೆ, ತಮ್ಮ ಜೀವನ್ಮರಣದ ಪ್ರಶ್ನೆಯೆಂಬಂತೆ ಪರಿಗಣಿಸಿ ಪ್ರತಿಭಟಿಸತೊಡಗಿದರು. ವಿಶೇಷವಾಗಿ  ಮಹಿಳೆಯರು ತಿರುಗಿ ಬಿದ್ದರು.
ಅರಣ್ಯ ಇಲಾಖೆ ಮತ್ತು ಕಂಪನಿಯ ಈ ಅಪವಿತ್ರ ಮೈತ್ರಿಯಿಂದಾಗಿ ಮರಗಳು ಉರುಳುವುದು ಖಚಿತವಾದಂತೆ, ಚಾಂಡಿಪ್ರಸಾದ್ ಭಟ್ ಹಳ್ಳಿ. ಹಳ್ಳಿಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಿದರು. ಇಂತಹ ಸಮಯದಲ್ಲಿ ಅವರಿಗೆ ದೊರಕಿದ ವೀರ ಮಹಿಳೆಯೆಂದರೆ,  ಹಳ್ಳಿಯೊಂದರ ಮಧ್ಯವಯಸ್ಕಿನ ಹೆಣ್ಣು ಮಗಳು ಗೌರಾದೇವಿ.  ಈಕೆಯದು ಸಾಹಸಮಯ ಬದುಕಿನ ಜೊತೆ ದುರಂತಮಯ ಬದುಕು ಕೂಡ ಹೌದು. ಹಿಮಾಲಯಯದ ಗಿರಿಶಿಖರಗಳ ನಡುವಿನ  ಒಂದು ಹಳ್ಳಿಯಲ್ಲಿ ಅಶಿಕ್ಷಿತ ಹೆಣ್ಣುಮಗಳಾಗಿ ಜನಿಸಿದ ಗೌರಾದೇವಿ, ಅಲ್ಲಿನ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳುವುದು ಹೇಗೆ? ಎಂಬುದನ್ನು ಕಲಿಸುತ್ತಾ, ಎಲ್ಲಾ ಅಸಮಾನತೆ ಮತ್ತು ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧ ತಿರುಗಿ ಬಿದ್ದು, ಮಹಿಳೆಯರ ಸಾಮರ್ಥ್ಯ ಏನು ಎಂಬುದನ್ನು ಜಗತ್ತಿಗೆ ತೋರಿಸಿ, ತನ್ನ 61 ನೇ ವಯಸ್ಸಿನಲ್ಲಿ ಅನಾಮಿಕಳಾಗಿ ತೀರಿ ಹೋದಳು. ಈಕೆಯ ಜೀವನ ಕುರಿತು ದೇಶದ ಯಾವುದೇ ರಾಜ್ಯದ ಇತಿಹಾಸದ ಪಠ್ಯದಲ್ಲಾಗಲಿ, ಅಥವಾ ಪರಿಸರ ಕುರಿತ ಚರಿತ್ರೆಯಲ್ಲಾಗಲಿ, ಸಾಹಸಿ ಜೀವನ ದಾಖಲಾದಂತೆ ಕಾಣುವುದಿಲ್ಲ.
ಹಿಮಾಲಯದ ನೀಟಿ   ಕಣಿವೆಯ ಲಟ್ಟ ಎಂಬ ಹಳ್ಳಿಯಲ್ಲಿ , ಉಣ್ಣೆಯ ಕಂಬಳಿ ಮತ್ತು ಶಾಲು ನೇಯುವ ಮರ್ಚಾ ಎಂಬ ಸಮುದಾಯದ ಕುಟುಂಬದಲ್ಲಿ 1925 ರಲ್ಲಿ  ಜನಿಸಿದ ಗೌರಾದೇವಿ, ಎಂದೂ ಶಾಲೆಯ ಮುಖ ನೋಡಿದವಳಲ್ಲ. ತನ್ನ ಕುಟುಂಬದ ಕಸುಬನ್ನು ವೃತ್ತಿಯಾಗಿಸಿಕೊಂಡು, ಮನೆಯಲ್ಲಿ ಕಂಬಳಿ ನೇಯುತ್ತಿದ್ದಳು. ತನ್ನ 17 ನೇ ವಯಸ್ಸಿನಲ್ಲಿ ನೆರೆಯ ರೇಣಿ ಎಂಬ ಗ್ರಾಮಕ್ಕೆ ವಿವಾಹವಾಗಿ ಬಂದು, ಅಲ್ಲಿಯೂ ಸಹ ತನ್ನ ಪತಿಯ ಜೊತೆ ತನ್ನ ವೃತ್ತಿಯನ್ನು ಮುಂದುವರಿಸಿದ್ದಳು. ಅವಳ ದುರಾದೃಷ್ಟಕ್ಕೆ ವಿವಾಹವಾದ ಐದನೇ ವರ್ಷಕ್ಕೆ ಆಕೆಯ ಪತಿ, ಎರಡೂವರೆ ವರ್ಷದ  ಗಂಡು ಮಗುವನ್ನು ಬಳುವಳಿಯಾಗಿ ನೀಡಿ ಅಕಾಲ ಮೃತ್ಯು ಗೆ ಬಲಿಯಾದನು.  ಗೌರಾದೇವಿ ಕೇವಲ 22 ನೇ ವಯಸ್ಸಿಗೆ ವಿಧವೆಯಾದಳು. ತನ್ನ ಬದುಕಿಗೆ ಬರಸಿಡಿಲಿನಂತೆ ಎರಗಿದ ದುರಂತಕ್ಕೆ ಎದೆಗುಂದದ ಈಕೆ., ತನ್ನ ಹಸುಗೂಸನ್ನು ಬೆನ್ನಿಗೆ ಕಟ್ಟಿಕೊಂಡು, ಕಂಬಳಿ, ಶಾಲು ನೇಯುತ್ತಾ ಬದುಕತೊಡಗಿದಳು. ತನ್ನ ಈ  ಹೋರಾಟದ ಸಾಹಸಮಯ ಬದುಕಿನ ಜೊತೆ ತಾನು ಹುಟ್ಟಿ ಬೆಳೆದ ಪರಿಸರದಲ್ಲಿನ ಪುರುಷರ ದುಶ್ಚಟಗಳ ಬಗ್ಗೆ ಅವಳಿಗೆ ವಿಪರೀತ ಅಸಹನೆಯಿತ್ತು. ಅಲ್ಲಿನ ಬಹುತೇಕ ಪುರುಷರು, ಚಳಿ ತಡೆಯಲಾರದೆ, ತಂಬಾಕು ಮತ್ತು ಸ್ಥಳಿಯವಾಗಿ ತಯಾರಿಸುತ್ತಿದ್ದ ದಾರು ಎಂದು ಕರೆಯಲ್ಪಡುವ ಕಳ್ಳಭಟ್ಟಿ ಸಾರಾಯಿಗೆ ದಾಸರಾಗಿದ್ದರು. ಇಂತಹ ದುಶ್ಚಟಗಳಿಂದ ಅಲ್ಲಿನ ಬಹುತೇಕ ಪುರುಷರಿಗೆ ಮುವತ್ತಕ್ಕೆ ಮುಪ್ಪು ಆವರಿಸಿ, ನಂತರ ನಲವತ್ತಕ್ಕೆ ಚಟ್ಟ ಏರುತ್ತಿದ್ದರು. ಇಂತಹ ವ್ಯವಸ್ಥೆಯ ವಿರುದ್ಧ ಸಿಡಿಯಬೇಕು ಎಂದು ಕುದಿಯುತ್ತಿದ್ದ ಗೌರಾದೇವಿಗೆ 1965 ರ ಲ್ಲಿ ಗಾಂಧಿವಾದಿ ಸುಂದರಲಾಲ್ ಬಹುಗುಣ ಆರಂಭಿಸಿದ ಮಧ್ಯಪಾನ ವಿರೋಧ ಚಳುವಳಿ  ವೇದಿಕೆ ಒದಗಿಸಿಕೊಟ್ಟಿತು.
ಹಿಮಾಲಯದ ಪರಿಸರಕ್ಕೆ ಅಧ್ಯಾತ್ಮಿಕ ಮತ್ತು ತಾತ್ವಿಕ ನೆಲೆಗಟ್ಟನ್ನು ಅಲ್ಲಿನ ಜನಜೀವನದೊಂದಿಗೆ ಮಿಳಿತಗೊಳಿಸುವುದರಲ್ಲಿ ಗಾಂಧಿ ಅನುಯಾಯಿಗಳಾದ ಮೀರಾಬೆಹನ್ ಮತ್ತು ಬಹುಗಣ ಅವರ ಪಾತ್ರ ಬಹುದೊಡ್ಡದು. ಇವರಿಬ್ಬರಿಂದ ಪ್ರೇರಿತಗೊಂಡ ಸರಳಾ ಬೆಹನ್ ಮತ್ತು ವಿಮಲಾ ಬಹುಗುಣ ಅವರುಗಳೂ ಸಹ. ಇಂತಹ ಆದರ್ಶನೀಯ ಚಿಂತನೆಗಳನ್ನು ಗುಡ್ಡಗಾಡಿನ ಅಶಿಕ್ಷಿತ ಮಹಿಳೆಯರಿಗೆ ತಲುಪಿಸುವುದರಲ್ಲಿ ಯಶಸ್ವಿಯಾಗಿದ್ದರು. ಈ ಕಾರಣದಿಂದಾಗಿ 1965 ರಿಂದ 70 ರವರೆಗೆ ಮಹಿಳೆಯರು ಮಧ್ಯಪಾನ ವಿರುದ್ಧ ಉತ್ತರಕಾಶಿ, ಚಮೋಲಿ. ಘರ್ ವಾಲ್, ಪಿತೋರ್ ಘರ್ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿ ಐದು ಜಿಲ್ಲೆಗಳಲ್ಲಿ ಮಧ್ಯಪಾನ ನಿಷೇಧ ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಇಂತಹ ಚಳವಳಿಯಲ್ಲಿ ಪಾಲ್ಗೊಂಡಿದ್ದ ಗೌರಾದೇವಿ, ವಯಸ್ಸಿಗೆ ಬಂದ ತನ್ನ ಮಗನಿಗೆ ಕುಟುಂಬದ ಜವಾಬ್ದಾರಿ ವಹಿಸಿ, ತನ್ನ ಇಡೀ ಬದುಕನ್ನು ಹಿಮಾಲಯದ  ಸ್ವಸ್ಥ ಪರಿಸರ ಮತ್ತು ಸ್ವಸ್ಥ ಸಮಾಜಕ್ಕೆ ಮುಡಿಪಾಗಿಟ್ಟಳು. ಆಕೆಯ ಹೋರಾಟದ ಗುಣ ಮತ್ತು ಬದ್ಧತೆಯನ್ನು ಅನುಭವದಿಂದ ಅರಿತಿದ್ದ ಅಲ್ಲಿನ ಮಹಿಳೆಯರು “ ಮಹಿಳಾ ಮಂಗಲ್ ದೇಶ್ “ ಎಂಬ ಸಂಘಟನೆಯನ್ನು ಸ್ಥಾಪಿಸಿ. ಗೌರಾದೇವಿಯನ್ನು ನಾಯಕಿಯನ್ನಾಗಿ ಮಾಡಿಕೊಂಡಿದ್ದರು.
ಚಾಂಡಿ ಪ್ರಸಾದ್ ಭಟ್ ಆರಂಭಿಸಿದ ಚಿಪ್ಕೊ ಆಂದೋಲನಕ್ಕೆ ಗೌರಾ ದೇವಿ ಕೈಜೋಡಿಸಿದ ನಂತರ ಹೋರಾಟದ ಸ್ವರೂಪವೇ ಬದಲಾಯಿತು. ಮರ ಕಡಿಯಲು ಬಂದ ಸೈಮಂಡ್ ಕಂಪನಿಯ ನೌಕರರನ್ನು , ಗೌರಾದೇವಿ ನೇತೃತ್ವದಲ್ಲಿ ಮಹಿಳೆಯರು, ಪೊರಕೆ ಮತ್ತು ಬಡಿಗೆ ತೆಗೆದುಕೊಂಡು ಎರಡು ಕಿಲೋಮೀಟರ್ ದೂರ ಓಡಿಸಿಕೊಂಡು ಹೋಗಿ, ಅಟ್ಟಾಡಿಸಿ ಹೊಡೆದಿದ್ದರು. ನಂತರ ಪೊಲೀಸರ ರಕ್ಷಣೆಯಲ್ಲಿ ನೌಕರರು ಮತ್ತೆ  ಬಂದಾಗ, ಪೊಲೀಸರಿಗೂ ಅಂಜದೆ, ಮರಗಳನ್ನು ಅಪ್ಪಿ ಮರಕಟುಕರಿಗೆ ಸವಾಲು ಎಸೆದಿದ್ದರು.ಹೋರಾಟ, ಪ್ರತಿಭಟನೆ, ಜಾಥಾಗಳ ಮೂಲಕ ಸಾಗುತ್ತಿದ್ದ ಚಿಪ್ಕೊ ಚಳುವಳಿಗೆ ಗಾಂಧಿ ಚಿಂತನೆಯ ಅಹಿಂಸಾ ಮಾದರಿಯ ಹೋರಾಟವನ್ನು ಕಸಿಮಾಡಿದ ಕೀರ್ತಿ ಸುಂದರ ಲಾಲ್ ಬಹುಗುಣ ರವರಿಗೆ ಸಲ್ಲುತ್ತದೆ.
1927 ರ ಜನವರಿ 9 ರಂದು ತೆಹ್ರಿ ಪ್ರಾಂತ್ಯದ ಮರೊಡ ಎಂಬ ಗ್ರಾಮದಲ್ಲಿ ಜನಿಸಿದ ಸುಂದರ ಲಾಲ್ ಬಹುಗುಣ ತಮ್ಮ ಹದಿಮೂರನೇ ವಯಸ್ಸಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಸ್ವಾತಂತ್ರ ಸಂಗ್ರಾಮ ಚಳವಳಿಯಲ್ಲಿ ಭಾಗವಹಿಸಿ, ಬ್ರಿಟೀಷರ ವಸಾಹತುಸಾಹಿ ಧೋರಣೆಗಳನ್ನು ವಿರೋಧಿಸುತ್ತಾ, ಗಾಂಧೀಜಿಯ ಪಕ್ಕಾ ಅನುಯಾಯಿಯಾಗಿದ್ದರು. ಸ್ವಾತಂತ್ರಾ ನಂತರವೂ ಕಾಂಗ್ರೆಸ್ ಪಕ್ಷದಲ್ಲಿದ್ದ ಬಹುಗುಣರನ್ನು ಪರಿಸರದತ್ತ ತಿರುಗಿಸುವಲ್ಲಿ ಅವರ ಪತ್ನಿ ವಿಮಲಾರವರ ಪಾತ್ರ ಅತಿ ಮಹತ್ವದ್ದು. ಮೀರಾ ಬೆಹನ್ ರಿಂದ ಪ್ರೇರಣೆಗೊಂಡು , ಸರಳಾ ಬೆಹನ್ ಎಂಬುವರು ಕೌಶಾಲಿಯಲ್ಲಿ ಆಶ್ರಮ ಮಾಡಿಕೊಂಡು ಗುಡ್ಡ ಗಾಡಿನ ಮಹಿಳೆಯರು ಮತ್ತು ಪರಿಸರದ ಅಭಿವೃದ್ಧಿಗೆ ದುಡಿಯುತ್ತಿದ್ದ ಸಂದರ್ಭದಲ್ಲಿ ಅವರ ಜೊತೆ ವಿಮಲಾ ಕೈ ಜೋಡಿಸಿದ್ದವರು ಒಮ್ಮೆ ಬಹುಗುಣ, ವಿಮಲಾರವರನ್ನು ಬೇಟಿಯಾಗಿ ಅವರ ಮುಂದೆ ವಿವಾಹದ ಪ್ರಸ್ತಾಪವನ್ನು ಮುಂದಿಟ್ಟಾಗ, ರಾಜಕೀಯ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಬಂದು ಹಿಮಾಲಯದಲ್ಲಿ ವಾಸ ಮಾಡಿದರೆ, ವಿವಾಹವಾಗುವುದಾಗಿ ಷರತ್ತು ವಿಧಿಸಿದರು. ಅದರಂತೆ ಬಹುಗುಣ ಕಾಂಗ್ರೆಸ್ ತೊರೆದು, ಹಿಮಾಲಯದ ತಮ್ಮ ತೆಹ್ರಿ ಪ್ರಾಂತ್ಯಕ್ಕೆ ಬಂದು ವಾಸಿಸತೊಡಗಿದ 12 ವರ್ಷಗಳ ನಂತರ ಅವರನ್ನು ವಿಮಲಾ ವಿವಾಹವಾದರು. ನಂತರದ ದಿನಗಳಲ್ಲಿ ಸುಂದರಲಾಲ್ ಬಹುಗುಣ ಅವರ ಅಹಿಂಸಾ ಮಾದರಿಯ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತರು.

ಆಳುವ ಸರ್ಕಾರದ ಅರಣ್ಯ ನೀತಿಯಿಂದ ಬೇಸತ್ತಿದ್ದ ಸುಂದರಲಾಲ್ ಬಹುಗುಣ ಚಿಪ್ಕೊ ಚಳವಳಿಯನ್ನು ಇಡೀ ಹಿಮಾಲಯದ ರಾಜ್ಯಗಳಿಗೆ ವಿಸ್ತರಿಸುವ ದೃಷ್ಟಿಯಿಂದ “ ಕಾಶ್ಮೀರ ದಿಂದ ಕೊಹಿಮಾವರೆಗೆ “ ಎಂಬ ಐದು ಸಾವಿರ ಕಿಲೋಮೀಟರ್ ಉದ್ದದ ಜಾಥಾ ಕೈಗೊಳ್ಳುವುದರ ಮೂಲಕ, ಚಿಪ್ಕೊ ಹೋರಾಟವನ್ನು ಹೊಸ ಮಜಲಿಗೆ ಕೊಂಡೊಯ್ದರು. ಅಂತಿಮವಾಗಿ ಹೋರಾಟಕ್ಕೆ ಮಣಿದ, ಇಂಧಿರಾ ಗಾಂಧಿ ನೇತೃತ್ವದ  ಕೇಂದ್ರ ಸರ್ಕಾರ 1980 ರಲ್ಲಿ ಹದಿನೈದು ವರ್ಷಗಳ ಅವಧಿಯವರೆಗೆ ಹಿಮಾಲಯ ಪ್ರಾಂತ್ಯದಲ್ಲಿ  ಮರಗಳನ್ನು ಕಡಿಯುವುದಕ್ಕೆ ನಿಷೇಧ ಹೇರಿತು. ನಂತರ ಅಲ್ಲಿನ ಜನತೆ ಚಾಂಡಿ ಪ್ರಸಾದ್ ಮತ್ತು ಬಹುಗುಣ , ಹಾಗೂ ಗೌರಾದೇವಿ ನೇತೃತ್ವದಲ್ಲಿ ಹತ್ತು ಲಕ್ಷ ಸಸಿಗಳನ್ನು ನೆಟ್ಟು ಮರಗಳನ್ನು ಬೆಳಸುವುದರ ಮೂಲಕ ಹಿಮಾಲಯದ ಪರಿಸರದ ಸಮತೋಲನವನ್ನು ಕಾಪಾಡಲು ಮುಂದಾದರು..
ಹಿಮಾಲಯದ ಪರಿಸರ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಲ್ಲಿನ ಪ್ರತಿ ಕುಟುಂಬಕ್ಕೂ ಅರಣ್ಯದ ಎರಡು ಸಾವಿರ ಮರಗಳ ಜವಬ್ದಾರಿಯನ್ನು ವಹಿಸಬೇಕು ಎಂದು ಬಹುಗುಣ ಆಗ್ರಹಿಸಿದ್ದರು. ಇದರಿಂದಾಗಿ ಪ್ರತಿ ಕುಟುಂಬಕ್ಕೆ ಅವಶ್ಯಕತೆ ಇರುವ ಉರವಲು ಸೌದೆ, ಜಾನುವಾರುಗಳಿಗೆ ಮೇವು ಸಿಕ್ಕಂತಾಗಿ, ಸ್ಥಳಿಯರ ರಕ್ಷಣೆಯಲ್ಲಿ ಅರಣ್ಯ ಸುರಕ್ಷಿತವಾಗಿರುತ್ತದೆ ಎಂಬುದು ಅವರ ನಿಲುವಾಗಿತ್ತು. ಇದೀಗ ಚಿಪ್ಕೊ ಚಳವಳಿಯ ಮುಂದುವರಿದ ಭಾಗದಂತೆ ತೋರುವ ತೆಹ್ರಿ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರ ಭಾಗಿರಥಿ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿಗೆ  ವಿರೋಧ ವ್ಯಕ್ತ ಪಡಿಸಿರುವ ಬಹುಗುಣ, ಉಪವಾಸ ಸತ್ಯಾಗ್ರಹದ ಮೂಲಕ ಪ್ರತಿರೋಧ ಒಡ್ಡಿದ್ದಾರೆ.

ಹಿಮಾಲಯ ಗುಡ್ಡಗಳ ನಡುವೆ ಅಶಿಕ್ಷಿತ ಜನಸಾಮಾನ್ಯರ ಪರಿಸರ ಕುರಿತ ಕಾಳಜಿಯಿಂದಾಗಿ ಹುಟ್ಟಿಕೊಂಡ ಚಿಪ್ಕೊ ಚಳವಳಿಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವುದರ ಮೂಲಕ ದೇಶ, ವಿದೇಶಗಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವಲ್ಲಿ ಈ ಮಹಾನುಭಾವರು ಹಾಗೂ ಹಿಮಾಲಯದ ಗುಡ್ಡಗಾಡಿನ  ಮಹಿಳೆಯರು ನಡೆಸಿದ ಸ್ವಾರ್ಥವಿಲ್ಲದ, ನಿಷ್ಕಳಂಕ ಹೋರಾಟ ಜಾಗತಿಕ ಪರಿಸರ ಹೋರಾಟದ ಇತಿಹಾಸದಲ್ಲಿ ಅತಿ ಮುಖ್ಯ ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಈ ಕಾರಣಕ್ಕಾಗಿ ಚಾಂಡಿ ಪ್ರಸಾದ್ ಭಟ್ ರವರಿಗೆ  1982 ರಲ್ಲಿ ರಾಮನ್ ಮ್ಯಾಗ್ಸಸೆ ಅಂತರಾಷ್ಟ್ರೀಯ ಪ್ರಶಸ್ತಿ, 1987 ರಲ್ಲಿ ವಿಶ್ವಸಂಸ್ಥೆಯ ಪರಿಸರ ಪ್ರಶಸ್ತಿ, 1986ರಲ್ಲಿ ಭಾರತ ಕೇಂದ್ರ ಸರ್ಕಾರದ ಪದ್ಮಶ್ರಿ, ಹಾಗೂ 2005 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಮತ್ತು ಕುಮಾವನ್, ವಿ.ವಿ. ಹಾಗೂ ಉತ್ತರ ಕಾಂಡದ ಗೋವಿಂದ ವಲ್ಲಭ ವಿ.ವಿ.ಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು  ದೊರಕಿದ್ದರೆ,  ಸುಂದರ ಲಾಲ್ ಬಹುಗುಣರವರಿಗೆ, 1981 ರಲ್ಲಿ ಪದ್ಮಶ್ರಿ, 1986 ರಲ್ಲಿ ಜಮ್ನಲಾಲ್ ಬಜಾಜ್ ಪ್ರಶಸ್ತಿ, 1987 ರಲ್ಲಿ ರೈಟ್ ಲಿವ್ಲಿ ಹುಡ್ ಅಂತರಾಷ್ಟ್ರೀಯ ಪ್ರಶಸ್ತಿ, 2009 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಹಾಗೂ ರೂರ್ಕಿ ಐ.ಐ.ಟಿ. ಸಂಸ್ಥೆಯಿಂದ ಗೌರವ ಡಾಕ್ಷರೇಟ್ ಪ್ರಶಸ್ತಿ ಲಭ್ಯವಾಗಿವೆ.
 ಇವರಲ್ಲಿ ಪ್ರಶಸ್ತಿ ವಂಚಿತ ದುರಾದೃಷ್ಟಠ ಮಹಿಳೆಯೆಂದರೆ, ಗೌರಾ ದೇವಿ. ಕೀನ್ಯಾದ ನೈರೋಭಿಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಈಕೆ ಪಾಲ್ಗೊಂಡಿದ್ದು ಬಿಟ್ಟರೆ, ಉಳಿದ ಪ್ರಶಸ್ತಿಗಳು ಲಭ್ಯವಾಗುವ ಮುನ್ನವೇ ಅಕಾಲಿಕ ಸಾವಿಗೀಡಾದ ನತದೃಷ್ಟೆ ಈಕೆ.  ಗೌರಾದೇವಿಯದು   ಭಾರತದ ಮಹಿಳಾಲೋಕದ ಇತಿಹಾಸದಲ್ಲಿ, ಅದರಲ್ಲೂ ಪರಿಸರ ಕುರಿತ ಇತಿಹಾಸದಲ್ಲಿ  ಒಂದು ನೋವಿನ ಅಧ್ಯಾಯವೆಂದರೆ, ತಪ್ಪಾಗಲಾರದು.

                                              (ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ