ಕಳೆದ ನಾಲ್ಕು ವರ್ಷಗಳಿಂದ ಭಾರತದ ಸಾಮಾಜಿಕ,
ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪಲ್ಲಟಗಳನ್ನು ಕುರಿತಂತೆ ಆಸಕ್ತಿ ತಾಳಿದ ನಾನು, ಕನ್ನಡದ
ಕೃತಿಗಳನ್ನು ಓದಿದ್ದು ತೀರಾ ಕಡಿಮೆ. ಆದರೆ, ಕಳೆದ
ಎರಡು ತಿಂಗಳಿಂದ ಇಂಗ್ಲೀಷ್ ಭಾಷೆಯ ಸಂಶೋಧನೆಯ ಆಕರ ಕೃತಿಗಳನ್ನು ಬದಿಗಿಟ್ಟು, ಕನ್ನಡದ
ಕೃತಿಗಳನ್ನು ಓದಲು ಕೈಗೆತ್ತಿಕೊಂಡಿದ್ದೀನಿ. ಶ್ರೀನಿವಾಸ ವೈದ್ಯರ ಕೃತಿಗಳನ್ನು ಮತ್ತು
ಅನಂತಮೂರ್ತಿಯವರ ಆತ್ಮ ಕಥನ, (ಸುರಗಿ) ಮತ್ತು ನಟರಾಜ್ ಹುಳಿಯಾರ್ ಅವರ “ಇಂತಿ ನಮಸ್ಕಾರಗಳು”
ಹಾಗೂ ಕಲಾವಿದ, ಶ್ರೇಷ್ಠ ಅನುವಾದಕ ರಾಗಿ ಹೊರ ಹೊಮ್ಮಿರುವ ಗೆಳೆಯ ಸೃಜನ್ ಇತ್ತೀಚೆಗೆ
ಅನುವಾದಿಸಿರುವ ರಾಮ್ ಗೋಪಾಲ್ ವರ್ಮ ಕುರಿತ ಎರಡು ಕೃತಿಗಳು,( ನನ್ನಿಷ್ಟ ಮತ್ತು ವೋಡ್ಕಾ ವಿತ್
ವರ್ಮಾ) ಮೈಸೂರಿನ ಹರಿಪ್ರಸಾದ್ ಅವರ ಪ್ರಬಂಧ ಸಂಕಲನ,(ರಾಮಾಂದ್ರ) ಅಲ್ಲಾಗಿರಿರಾಜ ಅವರ “ನೂರುಂದು
ಗಜಲ್” ಸಂಕಲನ ಮತ್ತು ಡಾ. ಬಸು ಬೇವಿನಗಿಡದ ಅವರು ಬೇಂದ್ರೆ ಕಾವ್ಯದಲ್ಲಿ ಪ್ರಕೃತಿ ಕುರಿತು
ರಚಿಸಿದ ಸಂಶೋಧನಾ ಪ್ರಬಂಧ ಇವುಗಳನ್ನು ಓದಿ ಮುಗಿಸಿದೆ. ನನ್ನೊಳಗಿನ ಖಾಲಿತನವೆಲ್ಲಾ ಭರ್ತಿಯಾದಂತೆ ಅನಿಸಿ, ಮನಸ್ಸು ನಿರಾಳವಾಯಿತು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಓದಿದ
ಡಾ.ಎಲ್.ಸಿ. ಸುಮಿತ್ರ ಅವರ “ಓದಿನ ಸುಖ”,
ಪತ್ರಕರ್ತ ಚಕ್ರವರ್ತಿ ಚಂದ್ರಚೂಡರ “ಖಾಲಿಶಿಲುಬೆ” ಎಂಬ ಕವಿತಾ ಸಂಕಲನ ಮತ್ತು ಯುವ ಕವಿ ಗಿರೀಶ್
ಹಂದಲಗೆರೆ ಯವರ “ನೇಗಿಲ ಗೆರೆ” ಕವನ ಸಂಕಲ ಇವುಗಳು ನನ್ನ ಗಮನ ಸೆಳೆದ ಕೃತಿಗಳು.
ಈಗಾಗಲ ಕನ್ನಡ ಸಾಹಿತ್ಯ ಲೋಕದಲ್ಲಿ
ಕಥೆಗಾರ್ತಿಯಾಗಿ, ( ಗುಬ್ಬಿ ಹಳ್ಳದ ಸಾಕ್ಷಿ) ಕವಿಯತ್ರಿಯಾಗಿ, ವಿಮರ್ಶಕಿ ಹಾಗೂ ಶ್ರೇಷ್ಠ
ಅನುವಾದಕರಲ್ಲಿ( ಅಮೃತಾ ಪ್ರೀತಂ ಅವರ ಪಿಂಜಾರ್) ಒಬ್ಬರಾಗಿ ಪ್ರಸಿದ್ಧಿ ಪಡೆದಿರುವ ಕನ್ನಡದ
ಪ್ರಾಧ್ಯಾಪಕರಾದ ಡಾ.ಎಲ್ ಸಿ. ಸುಮಿತ್ರ ಅವರು ಇತ್ತೀಚೆಗೆ ಹೊರತಂದಿರುವ ಓದಿನ ಸುಖ ಕೃತಿ ಮನಕ್ಕೆ ತಾಕುವಂತಿದೆ. ಯಾವುದೇ ಪೂರ್ವಾಗ್ರಹಗಳಿಲ್ಲದೆ,
ಮುಕ್ತ ಮತ್ತು ಪ್ರಾಂಜ್ವಲ ಮನಸ್ಸಿನಿಂದ ಅವರು ಈ ಕೃತಿಯಲ್ಲಿ ವಿಮರ್ಶೆ ಮಾಡಿರುವ ಕನ್ನಡ ಮತ್ತು
ಭಾರತೀಯ ಭಾಷೆಗಳ ಇತರೆ ಲೇಖಕ ಮತ್ತು ಲೇಖಕಿಯರ ಕೃತಿಗಳ ಕುರಿತ ವಾಖ್ಯಾನ ನಿಜಕ್ಕೂ
ಮೆಚ್ಚುವಂತಹದ್ದು. ಭಾರತದ ಬಹುತೇಕ ಭಾಷೆಯ
ಲೇಖಕಿಯರ ಕೃತಿಗಳನ್ನು ಆಳವಾಗಿ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿರುವ ಸುಮಿತ್ರ ಅವರು,
ಮಲೆಯಾಳಂ ನ ಕಮಲಾದಾಸ್, ಪಂಜಾಬಿ ಭಾಷೆಯ ಅಮೃತಾ ಪ್ರೀತಂ, ಅಸ್ಸಾಮಿ ಭಾಷೆಯ ಇಂದಿರಾ
ಗೋಸ್ವಾಮಿ,ಯವರ ವ್ಯಕ್ತಿತ್ವ ಮತ್ತು ಕೃತಿಗಳ ಕುರಿತು ವಿದ್ವತ್ ಪೂರ್ಣವಾಗಿ ತಮ್ಮ
ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಜೊತೆಗೆ ಕನ್ನಡದ ಮಹಿಳಾ ಕಾವ್ಯ ಕುರಿತ ಲೇಖನ, ಕೊಡಗಿ
ಗೌರಮ್ಮನ ವರ ಕಥೆಗಳು, ಕುವೆಂಪು ಕಾವ್ಯ ಒಳಗೊಂಡಂತೆ ವೈದೆಹಿ, ವೀಣಾ ಶಾಂತೇಶ್ವರ ಮತ್ತು
ನಾಗವೇಣಿಯವರ ಕೃತಿಗಳ ಕುರಿತು ತಮ್ಮ ಆಳವಾದ ಒಳನೋಟಗಳನ್ನು ಓದುಗರ ಮುಂದಿರಿಸಿದ್ದಾರೆ.
ಕನ್ನಡದ ವಿಮರ್ಶೆಯ ಲೋಕದಲ್ಲಿ ಭಟ್ಟಂಗಿತನ,
ಎಡಬಿಡಂಗಿತನ ಮತ್ತು ದ್ವೇಷ, ಅಸೂಯೆ ಇವುಗಳು ಹೊಸತೇನಲ್ಲ. ಆದರೆ, ಲಂಕೇಶರ ನಿಷ್ಟುರತನದ ಜೊತೆಗೆ
ಜಿ.ಹೆಚ್. ನಾಯಕರ ಸಹೃದಯತೆಯ ವಿಮರ್ಶೆಯ ಗುಣ,
ಇವುಗಳನ್ನು ಮೈಗೂಡಿಸಿಕೊಂಡಿರುವ ಡಾ.ಎಲ್. ಸಿ. ಸುಮಿತ್ರಾ ಅವರು, ಭಾರತದ ಬಹುತೇಕ ಎಲ್ಲಾ ಭಾಷೆಗಳ
ಕೃತಿಗಳನ್ನು ಗಂಭೀರವಾಗಿ ಓದಿಕೊಂಡಿದ್ದು, ತಾವು ಇಷ್ಟ ಪಟ್ಟ ಕೃತಿಗಳನ್ನು ವಿಮರ್ಶೆಯ
ಮಾನದಂಡದಿಂದ ಹೊರಗಿಟ್ಟು, ಅವುಗಳ ಕುರಿತ ತಮ್ಮ ಅನಿಸಿಕೆಯನ್ನು ಓದುವ ಸುಖ ಕೃತಿಯಲ್ಲಿ ಆಪ್ತವಾಗಿ
ಕಟ್ಟಿಕೊಟ್ಟಿದ್ದಾರೆ. ಈ ತಲೆಮಾರಿನ ಲೇಖಕಿಯರು ಮತ್ತು ಲೇಖಕರು ಓದಲೇ ಬೇಕಾದ ಕೃತಿಗಳಲ್ಲಿ ಇದೂ
ಒಂದು.
ಎರಡನೆಯದಾಗಿ, ಕವಿತೆಗಳಿಂದ ದೂರ ಉಳಿದು ಹಲವು
ವರ್ಷಗಳೇ ಕಳೆದು ಹೋಗಿದ್ದ ನನ್ನ ಪಾಲಿಗೆ ಚಕ್ರವರ್ತಿ ಚಂದ್ರಚೂಡರ “ಖಾಲಿಶಿಲುಬೆ” ಕೃತಿ
ಇತ್ತೀಚೆಗಿನ ದಿನಗಳಲ್ಲಿ ತೀವ್ರವಾಗಿ ಕಾಡಿದ ಕೃತಿಗಳಲ್ಲಿ ಒಂದು. ಕಾವ್ಯಕ್ಕೆ ಇರಬೇಕಾದ ಧ್ಯಾನಸ್ಥ
ಮನಸ್ಸುಗಳು ಇಲ್ಲದಿರುವ ಈ ದಿನಗಳಲ್ಲಿ ತನ್ನೊಡಲ
ನೋವು, ಅಸಹಾಯಕತೆ, ನಿಟ್ಟುಸಿರು ಮತ್ತು
ಕಣ್ಣೀರಿಗೆ ಅಕ್ಷರ ರೂಪ ಕೊಟ್ಟಿರುವ ಚಂದ್ರಚೂಡರ
ಈ ಕೃತಿ ಅವರ ಮೊದಲ ಕವಿತಾ ಸಂಕಲನ ಎಂದು ನಂಬಲು ಸಾಧ್ಯವಾಗದಷ್ಟು ಪ್ರಭುದ್ಧತೆ ಮತ್ತು ಮಾಗಿದ
ಮನಸ್ಸಿನಿಂದ ರಚಿತವಾದಂತಿದೆ. ವೈಯಕ್ತಿಕ ನೋವು ನಿರಾಸೆಗಳು ಕಾವ್ಯದ ನೆಪದಲ್ಲಿ ಘೋಷಣೆ, ಸಿಟ್ಟು
ಅಥವಾ ಬೈಗುಳಗಳಾಗುತ್ತಿರುವ ಈ ದಿನಗಳಲ್ಲಿ ಅವರ ಈ ಒಂದು ಪದ್ಯ ಮಾಗಿದ ಅವರ ಮನಸ್ಸಿಗೆ ಸಾಕ್ಷಿಯಂತಿದೆ.
ಅನಂತದಲಿ ಹಕ್ಕಿಯಾಗಿ
ಹಾರುತ್ತಿದ್ದ ಅವಳ
ರೆಕ್ಕೆಗಳು ನಾನೇ; ನಂಬಿಕೊಂಡಿದ್ದೆ.
ಕೆಳಗೆ ನೆಲಬಗೆದು ಬಿದ್ದು
ಸತ್ತ ಹಕ್ಕಿಗೆ
ನನ್ನ ಹೆಸರಿಟ್ಟು
ಜನ ಸುಟ್ಟು ತಿಂದರು.
ಬದುಕಿನ ಚದುರಂಗದಾಟದಲ್ಲಿ ದಾಳವಾಗಿ,
ಪರಿಸ್ಥಿತಿಯ ಪಾಪದ ಕೂಸಾಗಿ, ಎಲ್ಲಾ ವಿಧವಾದ
ದಟ್ಟ ವಿಷಾಧಗಳನ್ನು, ಕ್ರೌರ್ಯದ ಮುಖವನ್ನು ಮತ್ತು ಅಪಮಾನದ ಭಾವಗಳನ್ನು ತಮ್ಮ ಕಾವ್ಯದ ಮೂಲ
ಸ್ಥಾಯಿ ಭಾವವನ್ನಾಗಿ ಮಾಡಿಕೊಂಡು, ಕರುಳುನ್ನು ಹೊರಗೆ ಕಿತ್ತಿಟ್ಟು ಬಣ್ಣಿಸಿದಂತೆ ಕವಿತೆಗಳನ್ನು
ಬರೆದಿರುವ ಚಂದ್ರಚೂಡ್, ಎಲ್ಲಿಯೂ ಕಾವ್ಯಸಕ್ತರ ಅನುಕಂಪ ಬಯಸದೆ, ನಿರ್ಲಿಪ್ತ ಕವಿಯಂತೆ
ನಮ್ಮೆದುರು ನಿಲ್ಲುತ್ತಾರೆ. ಸೊಗಸಾದ ವಿನ್ಯಾಸ, ಮುದ್ರಣಗಳಿಂದ ಮನಸೆಳೆಯುವ ಈ ಕೃತಿಯಲ್ಲಿ ಪದೇ
ಪದೇ ಓದಬೇಕೆನಿಸುವಂತಹ ಅನೇಕ ಕವಿತೆಗಳಿವೆ. ಬದುಕಿನ ಕಟು ವಾಸ್ತವಗಳಿಗೆ ಸಿದ್ಧ ಮನಸ್ಸಿನಿಂದ
ಎದುರಾಗುವ ಇವರು ಬರೆದಿರುವ
ನಾನೊಂದು
ಗೋರಿ ಎದುರು
ಕುಳಿತಿದ್ದೇನೆ.
ನನಗೆ ಗೊತ್ತಿದೆ
ಇದು ನನ್ನದೆ ಗೋರಿ
ಮತ್ತೂ ಗೊತ್ತಿದೆ;
ಒಳಗೆ ನಾನಿಲ್ಲವೆಂದು.
ಹೀಗೆ ಬ್ರೆಕ್ಟ್ ಮತ್ತು ಬೋದಿಲೇರ್ ಅವರನ್ನು
ಒಟ್ಟಿಗೆ ಆವಾಹಿಸಿಕೊಂಡವರಂತೆ ಕವಿತೆ ಬರೆದಿರುವ ಚಂದ್ರಚೂಡ್, ತಮ್ಮ ಕೊನೆಯ ಪುಟ್ಟ ಕವಿತೆಯೊಂದರಲ್ಲಿ
ಯಾವ ವಿಮರ್ಶಕನ
ಪುತ್ಥಳಿಯನ್ನು
ಯಾವೂರಿನ ಸರ್ಕಲ್ ನಲ್ಲೂ
ಇಡುವುದಿಲ್ಲ
ಎಂಬ ಸಂದೇಶದ ಮೂಲಕ ತಮ್ಮ ತಮ್ಮ ಮೂಗಿನ
ನೇರಕ್ಕೆ ಕಂಡವರ ಬದುಕನ್ನು ವಿಮರ್ಶಿಸುವ ಜನರಿಗೆ
ತಣ್ಣನೆಯ ಚಾಟಿ ಏಟನ್ನೂ ಸಹ ಬೀಸಿದ್ದಾರೆ.
ಇನ್ನೂ ಯುವ ಕವಿ ಗಿರೀಶ್ ಹಂದಲಗೆರೆ ಈ ಚಿಕ್ಕ ವಯಸ್ಸಿನಲ್ಲಿ ತಮ್ಮ ಕವಿತೆಗಳಿಗೆ
ಅನುಭಾವವನ್ನು ಎರಕ ಹೊಯ್ದು ರಚಿಸಿರುವ ವೈಖರಿ ನನಗೆ ನಿಜಕ್ಕೂ ಖುಷಿ ಕೊಟ್ಟಿತು. ನಾನು ಗಿರೀಶ್ ಒಂದೇ ನೆಲದ
ಸಂಸ್ಕೃತಿಯಿಂದ ಬಂದವರು. ಬೇಸಾಯದ ಕುಟುಂಬದ ನೋವು, ನಲಿವುಗಳನ್ನು, ದನಗಳ ಕೊಟ್ಟಿಗೆಯ ಗಂಜಲ ಮತ್ತು ಸಗಣಿ ವಾಸನೆಯನ್ನು
ಹುಟ್ಟಿನಿಂದ ಉಸಿರಾಡಿಕೊಂಡು ಬಂದಂತಹವರು. ನಮ್ಮಿಬ್ಬರ ಊರುಗಳನ್ನು ಬೇರ್ಪಡಿಸಿರುವುದು ಶಿಂಷಾ
ನದಿ ಮಾತ್ರ. ನಾನು ಮಂಡ್ಯ ಜಿಲ್ಲೆಯ ಗಡಿಭಾಗದ ಹಳ್ಳಿಯವನಾದರೆ, ಗಿರೀಶ್, ಶಿಂಷಾ ನದಿಯ ಆಚೆಗಿನ ತುಮಕೂರು ಜಿಲ್ಲೆಯ ಗಡಿಭಾಗದ ಹಳ್ಳಿಯವರು. ಇಬ್ಬರೂ
ಪಾರಂಪರಿಕವಾಗಿ ಘಾಸಿಗೊಂಡ ರೈತ ಸಮುದಾಯದ ಕುಟುಂಬದಿಂದ ಬಂದವರು. ನನ್ನ ತಲೆ ಮಾರಿನ
ವಾರಸುದಾರರಂತೆ ಗಿರೀಶ್ ನನಗೆ ಕಾಣುತ್ತಾರೆ. ಏಕೆಂದರೆ, ಅತ್ತ ಹಳ್ಳಿಯ ಬೇರುಗಳನ್ನು
ಕತ್ತರಿಸಿಕೊಳ್ಳಲಾರದೆ, ಇತ್ತ ನಗರ ಸಂಸ್ಕೃತಿಯೊಳಗೆ ಬೇರು ಬಿಡಲಾರದೆ, ತೊರೆದು ಬಂದ ಊರು ಕೇರಿಯ
ಸ್ಮೃತಿಗಳಲ್ಲಿ ಬದುಕುತ್ತಾ ಅನಾಥ ಪ್ರಜ್ಞೆಯಲ್ಲಿ ನಾವೆಲ್ಲಾ ನರಳಿದವರು. ಅವರ ಸಂಕಲನಕ್ಕೆ “ನೇಗಿಲ ಗೆರೆ”ಎಂಬ ಶಿರ್ಷಿಕೆ ಇಟ್ಟಿದ್ದಾರೆ. ಇಡೀ
ಕೃತಿಯಲ್ಲಿ ಅಪ್ಪ, ಅವ್ವ, ನೇಗಿಲು, ಮೇಟಿ, ಒಡ್ಡು, ಜೀವಜಲ, ನೇಗಿಲ ಪದ, ರೈತರಋಣ, ಹಸಿರು ಮನುಷ್ಯ ಇಂತಹ ಹೆಸರಿನ ಜೀವ ಪರ ನಿಲುವಿನ ಅನೇಕ ಕವಿತೆಗಳು ಕಾಣಿಸಿಕೊಂಡಿವೆ.
ಸೂಫಿ ಕಾವ್ಯವನ್ನು ಮತ್ತು ಝೆನ್ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಗಿರೀಶ್, ಎಲ್ಲಿಯೂ
ತಮ್ಮ ಕವಿತೆಗಳಲ್ಲಿ ಅಬ್ಬರಿಸುವುದಿಲ್ಲ. ಹೇಳಬೇಕಾದ ಕಹಿ ಸಂಗತಿಗಳನ್ನು ತಣ್ಣನೆಯ ಧ್ವನಿಯಲ್ಲಿ
ಹೇಳಿರುವುದು ವಿಶೇಷ.
ಮಣ್ಣಿನ ಘಮಲು ಮೆರವಣಿಗೆ ಹೊರಟಾಗ
ಬೀಜ ಬಿರಿದು ಚಿಗುರುವಾಗ
ಬೇರು ಇಳಿಯುವಾಗ
ಕತ್ತಲೆ ಬೆಳಕು ಕಾಲ ಸರಿಯುವಾಗ
ಕನಸು ನೆನಪುಗಳ ಮಲಕುವಾಗ
ಕಣ್ಣುಗಳು ಬೆಸೆದು ಒಲವರಳುವಾಗ
ಮಂಜು ಕರಗುವಾಗ
ಸಂಬಂಧ ಮುರಿಯುವಾಗ
ಸದ್ದೇ ಆಗುವುದಿಲ್ಲ !
ಮೌನದ್ದೇ .. ಅಬ್ಬರ.
ಇದು ಮೌನ ಕುರಿತಂತೆ ಗಿರೀಶ್ ಹಂದಲಗೆರೆಯವರ ಭಾವನೆಯಷ್ಟೇ ಅಲ್ಲ, ಅವರ ಕಾವ್ಯ
ಮತ್ತು ವ್ಯಕ್ತಿತ್ವದ ವಿಶೇಷ ಗುಣವೂ ಹೌದು ಎಂಬಂತೆ ನನಗೆ ತೋರಿದೆ.