.ಹದಿನೆಂಟು
ವರ್ಷಗಳ ಹಿಂದೆ ನಾನು (1999ರಲ್ಲಿ) ಅಣುಬಾಂಬ್, ಅಣ್ವಸ್ತ್ರಗಳು ಹಾಗೂ ಅಣುಶಕ್ತಿ ವಿದ್ಯುತ್ ಸ್ಥಾವರಗಳ ದುರಂತ
ಹಾಗೂ ಅವುಗಳ ಹಿಂದಿರುವ ಭಯಾನಕ ಇತಿಹಾಸ ಕುರಿತು “ಅಣುವೆಂಬ ಸದ್ದಿಲ್ಲದ ಸಾವ ಕುರಿತು” ಎಂಬ ಕೃತಿಯನ್ನು ರಚಿಸಿದ್ದೆ. ವಿಜ್ಞಾನದ ವಿದ್ಯಾರ್ಥಿಯಲ್ಲದ ನಾನು ಈ ಕೃತಿಯನ್ನು ರಚಿಸುವಾಗ,
ಸುಧಾ ವಾರಪತ್ರಿಕೆಯ ಸಂಪಾದಕರಾಗಿದ್ದ ನಾಗೇಶ್ ಹೆಗ್ಡೆಯವರ ಮಾರ್ಗದರ್ಶನವನ್ನು ಪಡೆದಿದ್ದೆ. ನಂತರ ವಿಜಯಕರ್ನಾಟಕ ದಿನಪತ್ರಿಕೆಯ ಮೊದಲ ಸಂಪಾದಕರಾದ ಈಶ್ವರ ದೈತೋಟ ಅವರು ಈ ಕೃತಿಯ ಎಲ್ಲಾ
ಅಧ್ಯಾಯಗಳನ್ನು ತಮ್ಮ ಪತ್ರಿಕೆಯ ಸಂಪಾದಕಿಯ ಪುಟದಲ್ಲಿ ಧಾರವಾಹಿ ರೂಪದಲ್ಲಿ ಪ್ರಕಟಿಸಿದ್ದರು. ಆ ಕೃತಿಯಲ್ಲಿ
“ಯುರೇನಿಯಂ ಅದಿರಿನಲ್ಲಿ ದೂಳಾದವರ ಕಥನ” ಎಂಬ ಒಂದು ಅಧ್ಯಾಯವಿದೆ. ಈಗಿನ ಜಾರ್ಖಂಡ್ ರಾಜ್ಯದಲ್ಲಿರುವ ಪೂರ್ವ ಸಿಂಗಭೂಮಿ ಜಿಲ್ಲೆಯ ಜಾದೂಗಡ ಎಂಬ ಪ್ರದೇಶದಲ್ಲಿ ನಡೆಯುತ್ತಿರುವ ಯುರೇನಿಯಂ ಅದಿರು ಗಣಿಗಾರಿಕೆ ಹಾಗೂ ಇದರಿಂದಾಗಿ ಸಾವಿನ ಮನೆಯ ಕದ ತಟ್ಟುತ್ತಿರುವ ಅಲ್ಲಿನ
ಮುಗ್ಧ ಅದಿವಾಸಿಗಳ ದುರಂತಗಾಥೆಯನ್ನು ದಾಖಲಿಸಿದ್ದೆ. ನೋವಿನ ಸಂಗತಿಯೆಂದರೆ, ಅಲ್ಲಿನ ಪರಿಸ್ಥಿತಿಯು ಎರಡು ದಶಕ ಕಳೆದರೂ ಇನ್ನೂ ಸುಧಾರಿಸಿಲ್ಲ. ಕಳೆದ ತಿಂಗಳು ಅಮೇರಿಕಾದಿಂದ ಬಂದಿದ್ದ ಛಾಯಾಗ್ರಾಹಕನೊಬ್ಬ ಅಲ್ಲಿನ ದುರಂತಗಳನ್ನು ಚಿತ್ರಗಳ ಮೂಲಕ ಸೆರೆ ಹಿಡಿದು ದಾಖಲಿಸಿದಾಗ ಈ ನತದೃಷ್ಟರು ಮತ್ತೇ
ನನಗೆ ನೆನಪಾದರು.
ಭಾರತದಲ್ಲಿ
ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಸಹ, ನಮ್ಮ ಕಣ್ಣಿಗೆ ಕಾಣದ ಅಗೋಚರವಾದ ಹಾಗೂ ನರಳುತ್ತಿರುವ
ನತದೃಷ್ಟ ಭಾರತವೊಂದು ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬುದನ್ನು ನಾವು ಮರೆತಿದ್ದೆವೆ. ಪಕ್ಷ ಅಥವಾ ಜಾತಿ, ಧರ್ಮ ಇಲ್ಲವೆ ಭಾಷೆಯ ಹೆಸರಿನಲ್ಲಿ ಕತ್ತಿ ಹಿಡಿದು ಹಾರಾಡುತ್ತಾ ಪರಸ್ಪರ
ಇರಿದುಕೊಳ್ಳುತ್ತಿದ್ದೇವೆ.
ಆದರೆ, ಹಸಿವಿನಿಂದ ಸಾಯುತ್ತಿರುವ ನತದೃಷ್ಟರು, ತಮಗೆ ಅರಿವಿಲ್ಲದಂತೆ, ಕ್ರಿಮಿನಾಶಕಗಳಿಗೆ ಅಥವಾ ಯುರೇನಿಯಂ ಅದಿರಿನಿಂದ ಹೊರಸೂಸುವ ಅಣುವಿಕಿರಣಗಳಿಗೆ ಬಲಿಯಾಗಿ ಸಾಯುತ್ತಿರುವವರು, ಮಾನಸಿಕ ಅಸ್ವಸ್ಥರು, ಸೂರಿಲ್ಲದವರು, ದಿನನಿತ್ಯ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗುತ್ತಿರುವ ಹೆಣ್ಣುಮಕ್ಕಳು, ಬಿತ್ತಿ ಬೆಳೆದದ್ದನ್ನು ಸೂಕ್ತ ಬೆಲೆಗೆ ಮಾರಾಟ ಮಾಡಲಾದೆ, ಮಾಡಿದ ಕೃಷಿ ಸಾಲವನ್ನು ತೀರಿಸಲಾಗದೆ ಅಸಹಾಯಕ ಸ್ಥಿತಿಗೆ ದೂಡಲ್ಪಟ್ಟು ನೇಣಿನ ಉರುಳಿಗೆ ಕೊರಳೊಡ್ಡುತ್ತಿರುವ ರೈತರು ಹೀಗೆ ಅನೇಕ ಅಸಹಾಯಕರು ಇಂದಿನ ನಮ್ಮ ಕೀಳು ದರ್ಜೆ ಸಂಸ್ಕತಿಯ ಕಾರಣದಿಂದಾಗಿ ನೆನಪಿಗೆ ಬರುತ್ತಿಲ್ಲ. ಹಾಗಾಗಿ ನಾವೀಗ ಬದುಕುತ್ತಿರುವುದು ಪ್ರಗತಿಯತ್ತ
ದಾಪುಗಾಲು ಹಾಕುತ್ತಿರುವ ಭಾರತದಲ್ಲಿಯೋ? ಅಥವಾ ವಿಸ್ಮøತಿಯ ಭಾರತವೋ? ಎಂಬುದಕ್ಕೆ
ಉತ್ತರ ಕಂಡುಕೊಳ್ಳಬೇಕಾಗಿದೆ.
ಸ್ವಾತಂತ್ರ್ಯಾನಂತರ
ಭಾರತದಲ್ಲಿ ಕೇಂದ್ರ ಸರ್ಕಾರವು ಅಣುಶಕ್ತಿ ಆಯೋಗವನ್ನು ಸ್ಥಾಪಿಸಿ, ಅಣು ವಿದ್ಯುತ್ ಉತ್ಪಾದಿಸಲು ನಿರ್ಧರಿಸಿತು. ಅಣು ವಿದ್ಯುತ್ ಉತ್ಪಾದನೆಗೆ ಬೇಕಾದ ಯುರೇನಿಯಂ ಅದಿರನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಬದಲಾಗಿ ಯುರೇನಿಯಂ ಅದಿರಿನ ನಿಕ್ಷೇಪದ ಹುಡುಕಾಟ ಕುರಿತು 1951 ರಲ್ಲಿ ದೇಶಾದ್ಯಂತ ಸಮೀಕ್ಷೆ ನಡೆಸಿದಾಗ ಮೇಘಾಲಯ ರಾಜ್ಯದಲ್ಲಿ ಹಾಗೂ ಈಗಿನ ಜಾರ್ಖಂಡ್ ರಾಜ್ಯದ ಸಿಂಗಭೂಮಿ ಜಿಲ್ಲೆಯ ಭೂಮಿಯ ತಳದಲ್ಲಿ ಯುರೇನಿಯಂ ಇರುವುದು ಪತ್ತೆಯಾಯಿತು. ಜೊತೆಗೆ ಕೇರಳದ ಕಡಲ ತೀರದ ಮರಳಿನಲ್ಲಿ ಯುರೇನಿಯಂ ಹೋಲುವ ಆದರೆ, ಅದರಷ್ಟು ಪ್ರಭಾವಶಾಲಿಯಲ್ಲದ ಥೋರಿಯಂ ಸಹ ಪತ್ತೆಯಾಯಿತು.
1960 ರಲ್ಲಿ ಯುರೇನಿಯಂ
ಅದಿರು ಗಣಿಗಾರಿಕೆಗಾಗಿ “ ಯುರೇನಿಯಂ ಕಾರ್ಪೋರೇಷನ್ ಲಿಮಿಟೆಡ್” ಎಂಬ ಅಂಗ ಸಂಸ್ಥೆಯನ್ನು ಸ್ಥಾಪಿಸಿದ ಕೇಂದ್ರಸರ್ಕಾರವು, ಮೇಘಾಲಯ ಮತ್ತು ಜಾದೂಗಡದಲ್ಲಿ ಗಣಿಕಾರಿಕೆಯನ್ನು ಆರಂಭಿಸಿ, 1967ರಲ್ಲಿ ಹೈದರಾಬಾದಿನಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿತು. ಜಾದೂಗಡ
ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ಸ್ಥಳಿಯ ಸಂತಾಲ್, ಮುಂಡ ಮತ್ತು ಮಹಲಿ ಎಂಬ ಬುಡಕಟ್ಟು ಆದಿವಾಸಿಗಳನ್ನು ದಿನಗೂಲಿಯ ಆಧಾರದ ಮೇಲೆ ನೇಮಿಸಿಕೊಳ್ಳಲಾಯಿತು. ಅಲ್ಲಿಯವರೆಗೆ ಅರಣ್ಯದಲ್ಲಿ ಸ್ವಚ್ಛಂzವಾಗಿ ಪರಿಸರದ ನಡುವೆ ಬದುಕಿದ್ದ ಅರಣ್ಯವಾಸಿಗಳಿಗೆ ಉದ್ಯೋಗ ಸಿಕ್ಕಿದ್ದು ಒಂದು ರೀತಿಯಲ್ಲಿ ಸಂತೋಷವಾಗಿತ್ತು. ಆದರೆ, ಅವರಿಗೆ ಯುರೇನಿಯಂ ಅದಿರು ಹೊರಸೂಸುವ ಅಣುವಿಕಿರಣಗಳ ಅಪಾಯ ಕುರಿತು ಯಾವುದೇ ರೀತಿಯ ಕಲ್ಪನೆ ಇರಲಿಲ್ಲ. ಜೊತೆಗೆ ಅಧಿಕಾರಿಗಳು ಮತ್ತು ಅಣುವಿಜ್ಞಾನಿಗಳು ತಮಗೆ ಗೊತ್ತಿದ್ದ ಸಂಗತಿಯನ್ನು ಹೊÀರಜಗತ್ತಿಗೆ ಬಿಟ್ಟುಕೊಡಲಿಲ್ಲ.
ಕೇವಲ ಒಂದು ದಶಕದ ಅವಧಿಯಲ್ಲಿ ಅಲ್ಲಿನ ಗಿಡಮರ, ಪ್ರಾಣಿ ಪಕ್ಷಿಗಳು ಮತ್ತು ಜಲಮೂಲಗಳು ಅಣುವಿಕರಣದಿಂದ ತಮ್ಮ ಮೂಲಸ್ವರೂಪಗಳನ್ನು ಕಳೆದುಕೊಂಡವು. ಗಣಿಕಾರ್ಮಿಕರಿಗೆ ವಿಚಿತ್ರವಾದ ಚರ್ಮಕಾಯಿಲೆ, ಅಂಗಾಂಗ ವೈಫಲ್ಯ, ಕ್ಯಾನ್ಸರ್ ಕಾಯಿಲೆಗಳು ಕಾಣಿಸಿಕೊಳ್ಳತೊಡಗಿದವು. ಮಹಿಳೆಯರಲ್ಲಿ ಗರ್ಭಪಾತದ ಪ್ರಮಾಣ ಹೆಚ್ಚಾಗುವುದರ ಜೊತೆಗೆ ಅಂಗವಿಕಲ ಮಕ್ಕಳು ಜನಿಸತೊಡಗಿದವು. ಹಸು, ಎಮ್ಮೆ, ಕುರಿ ಮೇಕೆಯಂತಹ ಪ್ರಾಣಿಗಳಲ್ಲಿಯೂ ಸಹ ಇದೇ ಸಮಸ್ಯೆ
ಕಾಡತೊಡಗಿತು. ಜಾದೂಗಡದ ಅರಣ್ಯದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯ ಸುತ್ತಮುತ್ತಲಿನ 30 ಕಿಲೊಮೀಟರ್ ಚದುರ ವ್ಯಾಪ್ತಿಯ ಪ್ರದೇಶದ 23 ಹಳ್ಳಿಗಳ 60 ಸಾವಿರ ಜನಸಂಖ್ಯೆಯಲ್ಲಿ ಅನೇಕ ಜನರು ವಿವಿಧ ಕಾಯಿಲೆಗಳ ನೆಪದಲ್ಲಿ ಸ್ಥಳೀಯ ಜೆಮ್ಷೆಡ್ಪುರದ ಆಸ್ಪತ್ರೆಗೆ ದಾಖಲಾಗತೊಡಗಿದರು. ಈ ಕುರಿತು 1995 ರಲ್ಲಿ
ಸ್ಥಳಿಯ ಪರಿಸರವಾದಿಗಳು ಸಂಘಟನೆಯೊಂದನ್ನು ಸ್ಥಾಪಿಸಿಕೊಂಡು, ಗಣಿ ಪ್ರದೇಶದ ಹತ್ತಿರವಿದ್ದ ಐದು ಹಳ್ಳಿಗಳ ಸುಮಾರು ಎರಡು ಸಾವಿರ ಮನೆಗಳಲ್ಲಿ ವಾಸಿಸುತ್ತಿದ್ದ ಒಂಬತ್ತು ಸಾವಿರ ಆದಿವಾಸಿ ಜನರನ್ನು ತಪಾಸಣೆಗೆ ಒಳಪಡಿಸಿದಾಗ ಅವರೆಲ್ಲರೂ ಅಣುವಿಕರಣಕ್ಕೆ ತುತ್ತಾಗಿದ್ದರು.
ಅಂತರಾಷ್ಟ್ರೀಯ
ಮಾನದಂಡದ ಪ್ರಕಾರ 4 ರೆಮ್ಸ್ ನಷ್ಟು ( ಅಣುವಿಕಿರಣವನ್ನು ಅಳೆಯುವ ಮಾಪಕÀ) ಅಣುವಿಕಿರಣ ಮಾನವರಿಗೆ ಅಪಾಯವಲ್ಲ ಎಂದು ಹೇಳಲಾಗಿತ್ತು.ಆದರೆ, ಜಾದೂಗಡದಲ್ಲಿ ಈ ಪ್ರಮಾಣ 2.93 ರಷ್ಟು
ಮೊದಲ ದಶಕದಲ್ಲಿ ಕಾಣಿಸಿಕೊಂಡು, ಆನಂತರ ಅದಿರನ್ನು ಸಂಸ್ಕರಿಸಿದ ನಂತರ ಹೊರಬಿಟ್ಟ ತ್ಯಾಜ್ಯದ ನೀರು ಸ್ಥಳಿಯ ನದಿ, ಕಾಲುವೆ ಮತ್ತು ಹೊಂಡಗಳನ್ನು ಸೇರಿ ಎಲ್ಲಾ ಜೀವಿಗಳಿಗೆ ಅಪಾಯವನ್ನು ತಂದೊಡ್ಡಿತ್ತು. ಈ ಕುರಿತು ಅಣುಶಕ್ತಿ
ಆಯೋಗವು 1997 ರಲ್ಲಿ ತಜ್ಞರ ತಂಡವನ್ನು ಜಾದೂಗಡಕ್ಕೆ ಕಳುಹಿಸಿ ತನಿಖೆ ಮಾಡಿದಾಗ, ತಜ್ಞರು ಅಲ್ಲಿ ಆಗಿರುವ ಅನಾಹುತವನ್ನು ಒಪ್ಪಿಕೊಂಡರು. ಆನಂತರ ಗಣಿಕಾರ್ಮಿಕರಿಗೆ ಕೈಗವಚ, ರಕ್ಷಣಾ ವಸ್ತ್ರಗಳು, ಹೀಗೆ ಅನೇಕ ಬಗೆಯ ಕ್ರಮಗಳನ್ನು
ಕೈಗೊಳ್ಳಲಾಯಿತು. ಆದರೂ ಸಹ ಅಲ್ಲಿನ ನೈಸರ್ಗಿಕ
ಪರಿಸರ ಸಂಪೂರ್ಣವಾಗಿ ಅಣುವಿಕರಣಕ್ಕೆ ಬಲಿಯಾದ ಕಾರಣ ಅದರ ಪರಿಣಾಮವನ್ನು ಅಲ್ಲಿನ ಜನತೆ ಅನುಭವಿಸಬೇಕಾಗಿದೆ.
ಆರಂಭದಲ್ಲಿ
ದಿನಕ್ಕೆ ಆರನೂರು ಟನ್ ಯುರೇನಿಯಂ ಅದಿರು ಹೊರತೆಗೆಯಲಾಗುತ್ತಿತ್ತು. ಇದೀಗ ಈ ಪ್ರಮಾಣ ಎರಡು
ಸಾವಿರ ಟನ್ ಮೀರಿದೆ. ತೆಗೆದು ಅದಿರನ್ನು ನೀರಿನಲ್ಲಿ ಸಂಸ್ಕರಿಸಿ, ಆನಂತರ ಯುರೇನಿಯಂ-235-236-238
ಎಂಬ ಹೆಸರಿನಲ್ಲಿ ಅದರ ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ನಂತರ ಅದನ್ನು ಲಾರಿಗಳ ಮೂಲಕ ಜೆಮ್ ಷೆಡ್ ಪುರಕ್ಕೆ ಸಾಗಿಸಿ, ಅಲ್ಲಿಂದ ಹೈದರಾಬಾದ್ ನಗರಕ್ಕೆ ಗೂಡ್ಸ್ ರೈಲುಗಳ ಮೂಲಕ ಸಾಗಿಸಲಾಗುತ್ತದೆ. ಹೈದರಾಬಾದ್ ಘಟಕದಲ್ಲಿ ಅಣುವಿದ್ಯುತ್ ಕೇಂದ್ರಗಳಲ್ಲಿ ಅದನ್ನು ಬಳಸುವ ಉದ್ದೇಶದಿಂದ ಸಣ್ಣ ಸಣ್ಣ ಮಿಲ್ಲೆಟ್ ಅಂದರೆ, ಉಂಡೆಗಳು ಅಥವಾ ಬಿಲ್ಲೆಗಳ ರೂಪ ನೀಡಲಾಗುತ್ತದೆ. ಇದು ಒಂದು ರೀತಿಯಲ್ಲಿ ಒಂದು ಟನ್ ಚಿನ್ನದ ಅದಿರಿನಲ್ಲಿ ಮೂರು ಗ್ರಾಂ ಚಿನ್ನ ತೆಗೆಯುವಂತಹ ಪ್ರಕ್ರಿಯೆಯಾಗಿದೆ. ಮಿಲ್ಲೆಟ್ ರೂಪದ ಬಿಲ್ಲೆ ಅಥವಾ ಉಂಡೆಗಳನ್ನು ಸುರಕ್ಷಿತವಾಗಿ
ಅತ್ಯಂತ ದಪ್ಪದಾದ ಉಕ್ಕಿನ ಕವಚ ಹೊಂದಿರುವ ಸಿಲಿಂಡರ್ ರೂಪದ ಡಬ್ಬಿಗಳಲ್ಲಿ ಇಟ್ಟು ಅಣುವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಸಾಗಿಸಲಾಗುತ್ತದೆ. ಅಲ್ಲಿ ಇವುಗಳನ್ನು ಉರಿಸಿದ ನಂತರ ಉಳಿಯುವ
ಅಣುತ್ಯಾಜ್ಯವನ್ನು ಮತ್ತೇ ಉಕ್ಕಿನ ಡ್ರಂ ಗಳಲ್ಲಿ ಇಟ್ಟು ಭೂಮಿಯ
ಆಳದಲ್ಲಿ ಹೂಳಲಾಗುತ್ತದೆ. ಈ ತಾಜ್ಯವು ಸುಮಾರು
ಇನ್ನೂರು ವರ್ಷಗಳ ಅಣುವಿಕರಣವನ್ನು ಸೂಸುವ ಸಾಮಾರ್ಥವನ್ನು ಹೊಂದಿದೆ. ಈ ಕಾರಣಕ್ಕಾಗಿ ಜಗತ್ತಿನ
ಶೇಕಡ ತೊಂಬತ್ತರಷ್ಟು ಅಣುವಿದ್ಯುತ್ ಘಟಕಗಳು ಸಮುದ್ರದ ತಡಿಯಲ್ಲಿ ಸ್ಥಾಪನೆಗೊಂಡಿವೆ. ಅಲ್ಲಿನ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ಭೂಮಿಯೊಳಗೆ ಹೂತಿಟ್ಟ ಅಣು ತ್ಯಾಜ್ಯದ ಪರಿಣಾಮದಿಂದಲೂ ಸಹ ಕಡಲ
ಜೀವಿಗಳು ಅಣುವಿಕರಣಕ್ಕೆ ಒಳಗಾಗುತ್ತಿವೆ. ಆದರೆ, ಈ ವಂಚನೆಯ ಜಗತ್ತು
ಹೊರಜಗತ್ತಿನ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ನಾವು ತಿನ್ನುವ ಮೀನು, ಸೀಗಡಿ ಇತ್ಯಾದಿಗಳಲ್ಲಿ ಅಣುವಿಕರಣವು ಯಾವ
ಪ್ರಮಾಣದಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.
ಅಣುವಿಕರಣಗಳಲ್ಲಿ
ಆರು ಬಗೆಯ ವಿಕಿರಣಗಳಿದ್ದು, ಅವುಗಳಲ್ಲಿ ಮೊದಲನೆಯದು ಟಿಟಾನಿಯಂ ಎಂಬ ವಿಕಿರಣ. ಇದರ ಆಯಸ್ಸು 12 ವರ್ಷವಾಗಿದ್ದು ಇದು ಚರ್ಮ ಸಂಬಂಧಿ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ. ಕಾರ್ಬನ್ 14/ಬೀಟಾ ವಿಕರಣದ ಆಯಸ್ಸು 5730 ವರ್ಷಗಳಾಗಿದ್ದು, ಇದೂ ಸಹ ಕ್ಯಾನ್ಸರ್ ಕಾಯಿಗೆ
ಕಾರಣವಾಗುತ್ತದೆ. ಮೂರನೆಯದು ಸ್ಟ್ರೋಂಶಿಯಂ-131/ಬೀಟಾಕಿರಣ ಇದರ ಆಯಸ್ಸು 28 ವರ್ಷವಾಗಿದ್ದು ಕ್ಯಾನ್ಸರ್ ಗೆ ಮೂಲವಾಗಿದೆ. ನಾಲ್ಕನೆಯದು
ಅಯೋಡಿನ-131/ ಇದು ಬಿಟಾ ಮತ್ತು ಗಾಮ ಕಿರಣವಾಗಿದ್ದು, ಇದರ ಆಯಸ್ಸು ಕೇವಲ 8 ದಿನ ಮಾತ್ರ ಆದರೆ, ಮನುಷ್ಯರ ಥೈರಾಯಡ್ ಸಂಬಂಧಿತ ಕಾಯಿಲೆಗೆ ಇದು ಕಾರಣವಾಗುತ್ತದೆ.
ಐದನೆಯದು, ಸೀಸಿಯಂ-137/ಬೀಟಾ ಮತ್ತು ಗಾಮಕಿರಣ, ಇದರ ಆಯಸ್ಸು 30 ವರ್ಷವಾಗಿದ್ದು ಚರ್ಮ ಮತ್ತು ಮೂಳೆ ಕ್ಯಾನ್ಸರ್ ಗೆ ಕಾರಣವಾಗಬಲ್ಲದು. ಆರನೆಯದು
ಪ್ಲುಟೋನಿಯಂ239/ ಇದು ಆಲ್ಫಾ ಕಿರಣವಾಗಿದ್ದು ಇದರ ಆಯಸ್ಸು ಬರೋಬ್ಬರಿ 24,100 ವರ್ಷವಾಗಿದೆ.ಇದು ಗಂಟಲು ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ಇಂತಹ ಸಾವಿನ
ಕರೆಗಂಟೆಯನ್ನು ತಮ್ಮ ಒಡಲಲಲ್ಲಿ ಇಟ್ಟು ಬದುಕುತ್ತಿರುವ ಅಮಾಯಕ ಮುಗ್ಧ ಜನರ ನಡುವೆ ನಾವು ನಮ್ಮದೇ ಭ್ರಮಾಲೋಕದಲ್ಲಿ ತೇಲಿ, ಮುಳುಗುತ್ತಾ, “ವಾಟ್ ಎ ವಂಡರ್ಪುಲ್
ಲೈಫ್” ಎಂದು ಸಂಭ್ರಮಿಸುತ್ತಿದ್ದೇವೆ
ಆದರೆ, ಸಾವು ಸದ್ದಿಲ್ಲದೆ ನಮ್ಮ ಮನೆಯ ಬಾಗಿಲಿನಾಚೆ ಬಂದು ಕುಳಿತಿದೆ.
(ಕರಾವಳಿ ಮುಂಜಾವು ಪತ್ರಿಕೆಯ “ಜಗದಗಲ” ಅಂಕಣ ಬರಹ)