ಶುಕ್ರವಾರ, ನವೆಂಬರ್ 3, 2017

ವೀಣಾ ಧನಮ್ಮಾಳ್ ಎಂಬ ಕರ್ನಾಟಕ ಸಂಗೀತದ ಮೇರು ಶಿಖರ



ಇದು 1904 ರಲ್ಲಿ ನಡೆದ  ನಡೆದ ಒಂದು ಅವಿಷ್ಮರಣೀಯ ಘಟನೆ. ಅಂದಿನ ಮಲಬಾರಿನ ಅಥವಾ ಈಗಿನ ಕೇರಳದ  ಪಾಲಕ್ಕಡ್ ಜಿಲ್ಲೆಯಲ್ಲಿರುವ ಕೊಳ್ಳೆಂಗೋಡ್ ಸಂಸ್ಥಾನದÀ ದೊರೆ  ವಸುದೇವರಾಜ ಎಂಬಾತನು ತನ್ನ ಪುತ್ರಿಯ ವಿವಾಹದ ಸಂದರ್ಭದಲ್ಲಿ   ತನ್ನ ಅರಮನೆಯಲ್ಲಿ ಏಳುದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಕಾಲದ ದಕ್ಷಿಣ ಭಾರತದ ಪ್ರಖ್ಯಾತ ಕಲಾವಿದರಿಂದ ಸಂಗೀತ ಕಛೇರಿಯನ್ನು ಏರ್ಪಡಿಸಿದ್ದನು. ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ಪ್ರಸಿದ್ಧ ಹಿರಿಯ ಕಲಾವಿದರಾಗಿದ್ದ ಅನಂತರಾಮ ಭಾಗವತರ್ ಎಂಬುವರು ವಹಿಸಿಕೊಂಡಿದ್ದರು. ವಿವಾಹದ ಪ್ರಯುಕ್ತ ನಡೆಸಲಾದ ಸಂಗೀತ ಕಛೇರಿಗೆ ಆಹ್ವಾನಿಸಿದ ಕಲಾವಿದರ ಪೈಕಿ ಏಕೈಕ ಮಹಿಳಾ ಕಲಾವಿದೆಯಾಗಿ ವೀಣಾ ಧನಮ್ಮಾಳ್ ಇದ್ದರು. ವೀಣಾ ಧನಮ್ಮಾಳ್ ಅವರ ವೀಣಾ ಕಾರ್ಯಕ್ರಮ ಇದ್ದ ದಿನದಂದು ದೊರೆಯ ಬಳಿ ತೆರಳಿದ ಅನಂತರಾಮ ಭಾಗವತರ್, ಧನಮ್ಮಾಳ್ ಅವರ ಸಂಗೀತ ಕಾರ್ಯಕ್ರಮಕ್ಕೆ ಎಲ್ಲಾ ಕಲಾವಿದರು ತಪ್ಪದೆ ಭಾಗವಹಿಸಬೇಕೆಂದು ತಾವು ಕರೆ ನೀಡಬೇಕೆಂದು ಪ್ರಾರ್ಥಿಸಿಕೊಂಡರು. ಅದರಂತೆ ದಿನ ಸಂಜೆ ರಾಜಕುಂಟುಂಬದ ಪರಿವಾರದ ಸದಸ್ಯರೂ ಸೇರಿದಂತೆ, ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ಕಲಾವಿದರು ಮತ್ತು ವಿದ್ವಾಂಸರು ವೀಣಾ ಧನಮ್ಮಾಳ್ ಅವರ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಶುದ್ಧ ಶಾಸ್ತ್ರೀಯವಾಗಿ, ಮಂದ್ರಗತಿಯ ಶೈಲಿಯಲ್ಲಿ ಅವರು ವೀಣೆಯಲ್ಲಿ ನುಡಿಸಿದ ರಾಗಗಳು, ಕೀರ್ತನೆಗಳು, ಪದಂ ಮತ್ತು ಜಾವಳಿ ಇವುಗಳನ್ನು ಕೇಳಿ ಸಂತೋಷಗೊಂಡ ದೊರೆಯು; ನೆರೆದಿದ್ದ ವಿದ್ವಾಂಸರ ನಡುವೆ ವೀಣಾ ಧನಮ್ಮಾಳ್ ಅವರಿಗೆ ಅಗ್ರ ತಾಂಬೂಲ ಹಾಗೂ ಚಿನ್ನದ ಪದಕ ನೀಡಿ ಗೌರವಿಸಿದನು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಇಂತಹ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಕಲಾವಿದೆಯರಲ್ಲಿ ವೀಣಾ ಧನಮ್ಮಾಳ್ ಅತಿ ಮುಖ್ಯರು.
ದಕ್ಷಿಣ ಭಾರತದಲ್ಲಿ ನೃತ್ಯ ಮತ್ತು ಸಂಗೀತ ಕುರಿತು ಮಾತನಾಡುವಾಗ ಅಥವಾ ಬರೆಯುವಾಗ ವೀಣಾ ಧನಮ್ಮಾಳ್ ಅವರ ಕುಟುಂಬದ ಸುಮಾರು ಏಳು ತಲೆಮಾರಿನ ಸದಸ್ಯರು  ವಂಶ ಪಾರಂಪರ್ಯವಾಗಿ ಕಳೆದ ನಾಲ್ಕು ಶತಮಾನಗಳಿಂದ ಕರ್ನಾಟಕ ಸಂಗೀತ  ಮತ್ತು ನೃತ್ಯಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ವೀಣಾಧನಮ್ಮಾಳ್ ಅವರ ಮುತ್ತಜ್ಜಿ ಪಾಪಮ್ಮಾಳ್ ಎಂಬುವರು ತಂಜಾವೂರಿನ ಮರಾಠ ದೊರೆಗಳ ಆಸ್ಥಾನದಲ್ಲಿ ಸಂಗೀತ ವಿದುಷಿ ಹಾಗೂ ರಾಜ ನರ್ತಕಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಪುತ್ರಿ ಕಾಮಾಕ್ಷಿ ಅಮ್ಮಾಳ್ ಅವರು ಕರ್ನಾಟಕ ಸಂಗೀತದ ತ್ರೀಮೂರ್ತಿ ವಾಗ್ಗೇಯಕಾರರಲ್ಲಿ ಒಬ್ಬರಾದ ಶ್ಯಾಮಾಶಾಸ್ತ್ರಿಗಳ ಶಿಷ್ಯರಲ್ಲಿ ಒಬ್ಬರಾಗಿ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಕಾಮಾಕ್ಷಿ ಅಮ್ಮಾಳ್ ಅವರ ಪುತ್ರಿ ಅಂದರೆ, ಧನಮ್ಮಾಳ್ ಅವರ ತಾಯಿ ಸುಂದರಮ್ಮಾಳ್ ಸಹ ಶ್ಯಾಮಾಶಾಸ್ತ್ರಿಯವರ ಪುತ್ರ ಸುಬ್ಬರಾಯಶಾಸ್ತ್ರಿಯವರ ಶಿಷ್ಯೆಯಾಗಿ ಸಂಗೀತವನ್ನು ಮುಂದುವರಿಸಿ, ತಂಜಾವೂರು ಶೈಲಿಯ ಸಂಗೀತ ಮತ್ತು ನೃತ್ಯವನ್ನು ತಮ್ಮ ಮನೆತನದ ಅಮೂಲ್ಯ ಆಸ್ತಿಯನ್ನಾಗಿ ಮಾಡಿಕೊಂಡಿದ್ದರು. ಇಂತಹ ಪರಿಣಿತ ಕಲಾವಿದರ ಕುಟುಂಬದಲ್ಲಿ 1868 ರಲ್ಲಿ ವೀಣಾಧನಮ್ಮಾಳ್ ಅಂದಿನ ಮದ್ರಾಸ್ ನಗರದ ಜಾರ್ಜ್ಟೌನ್ ಪ್ರದೇಶದಲ್ಲಿ ಜನಿಸಿದರು. ಧನಮ್ಮಾಳ್ ಜನನಕ್ಕೆ ಮುನ್ನವೇ ಅವರ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಪೋಷಕರನ್ನು ಅರಸಿಕೊಂಡು ಮದ್ರಾಸ್ ನಗರಕ್ಕೆ ವಲಸೆ ಬಂದಿದ್ದರು.
ದೇವಾಲಯಗಳಲ್ಲಿ ಹಾಗೂ ರಾಜರ ಆಸ್ಥಾನಗಳಲ್ಲಿ ನೃತ್ಯ ಮತ್ತು ಸಂಗೀತವನ್ನು ವೃತ್ತಿ ಮಾಡಿಕೊಂಡಿದ್ದ ಅನೇಕ ದೇವದಾಸಿ ಕುಟುಂಬಗಳಿಗೆ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಸಾಂಸ್ಕøತಿಕ ಹಾಗೂ ಸಾಮಾಜಿಕ ಪಲ್ಲಟಗಳು ನಗರದತ್ತ ವಲಸೆ ಹೋಗಲು ಪರೋಕ್ಷವಾಗಿ ಕಾರಣವಾದವು. ದೇವಾಲಯಗಳಿಗೆ ದೇವದಾಸಿ ಕುಟುಂಬದ ಹೆಣ್ಣು ಮಕ್ಕಳನ್ನು ದತ್ತು ನೀಡುವುದು ಹಾಗೂ ದೇವಾಲಯಗಳಲ್ಲಿ ಆಚರಣೆಯಲ್ಲಿದ್ದ ದೇವದಾಸಿಯರ ನೃತ್ಯ ಪದ್ಧತಿ ಇವುಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆದವು. ಬ್ರಿಟೀಷರು ಹಾಗೂ ಮಿಷನರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಿಂದ ವಿಚಾರವಂತರಾದ ಜನತೆ ಸಾಮಾಜಿಕ ಸುಧಾರಣೆಯತ್ತ ಗಮನ ಹರಿಸಿದರು. ಇದರ ಜೊತೆಗೆ ಈಸ್ಟ್ ಇಂಡಿಯಾ ಕಂಪನಿಯು ದೇಶದ ಅನೇಕ ಸಂಸ್ಥಾನಗಳನ್ನು ಕೈವಶಮಾಡಿಕೊಂಡು, ರಾಜರುಗಳಿಗೆ ವಾರ್ಷಿಕವಾಗಿ ಪರಿಹಾರ ನೀಡಲು ಆರಂಭಿಸಿದಾಗ, ಸಂಗೀತ ಮತ್ತು ನೃತ್ಯ ಕಲಾವಿದರಿಗೆ ಇದ್ದ ಆಶ್ರಯ ತಪ್ಪಿಹೋಯಿತು. ಇಂತಹ ಅತಂತ್ರ ಸ್ಥಿತಿಯಲ್ಲಿ ಧನಮಾಳ್ ಅವರ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಸೇರಿದಂತೆ, ನೂರಾರು ದೇವದಾಸಿ ಕುಟುಂಬಗಳು ತಂಜಾವೂರು, ಮಧುರೈ, ಆಂಧ್ರಪ್ರದೇಶದ ವಿವಿಧ ಸಂಸ್ಥಾನಗಳಿಂದ ಮದ್ರಾಸ್ ನಗರಕ್ಕೆ ವಲಸೆ ಬಂದವು. ಇಂತಹ ಕಲಾವಿದೆಯರಿಗೆ ನೃತ್ಯ ಮತ್ತು ಸಂಗೀತದ ಶಿಕ್ಷಣ ನೀಡುತ್ತಿದ್ದ ವಿದ್ವಾಂಸರೂ ಸಹ ಕಲಾವಿದರ ಜೊತೆ ನಗರಕ್ಕೆ ಆಗಮಿಸಿದರು. ರಾಜಾಶ್ರಯದಲ್ಲಿ ಬೆಳೆದ ತಂಜಾವೂರು ಶೈಲಿಯ ನೃತ್ಯ ಮತ್ತು ಸಂಗೀತ ಹಾಗೂ ಕರ್ನಾಟಕ ಸಂಗೀತದ  ವಾಗ್ಗೇಯಕಾರರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳ ಸಂಗೀತ ಕೃತಿಗಳಲ್ಲಿ ಪರಿಣಿತರಾಗಿದ್ದ ಧನಮ್ಮಾಳ್ ಅವರ ಕುಟುಂಬಕ್ಕೆ ಮದ್ರಾಸ್ ನಗರದಲ್ಲಿ ವಿಶೇಷ ಗೌರವಿತ್ತು. ಕಾಮಾಕ್ಷಿ ಅಮ್ಮಾಳ್ ಅವರಿಗೆ ರಂಗೂನ್ ಕೃಷ್ಣಸ್ವಾಮಿ ಮೊದಲಿಯಾರ್ ಎಂಬುವರು ಪೋಷಕರಾದರು. ಧನಮ್ಮಾಳ್ ಮತ್ತು ಅವರ ಸಹೋದರಿ ರೂಪವತಿ ಇಬ್ಬರಿಗೂ ತಾಯಿ ಸುಂದರಮ್ಮಾಳ್ ಹಾಗೂ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಅವರು ಮನೆಯಲ್ಲಿಯೇ ಸಂಗೀತದಲ್ಲಿ ಶಿಕ್ಷಣ ಕೊಡಿಸಿದರುಅತಿ ಶೀಘ್ರದಲ್ಲಿ ಧನಮ್ಮಾಳ್ ಅವರ ಧ್ವನಿ ಗಾಯನಕ್ಕೆ ಸೂಕ್ತವಲ್ಲ, ಅದು ವೀಣಾ ವಾದನಕ್ಕೆ ಸೂಕ್ತ ಎಂಬುದನ್ನು ಅರಿತ ಅವರು ವೀಣೆಯ ತರಬೇತಿ ಕೊಡಿಸಿದರು. ಆರಂಭದ ದಿನಗಳಲ್ಲಿ ವೀಣಾ ಗಾಯನ ಕುರಿತಂತೆ ಒಲವು ತೋರಿಸದ ಧನಮ್ಮಾಳ್; ಒಮ್ಮೆ ಕಲ್ಯಾಣ ಕೃಷ್ಣ ಭಾಗವತರ ಕಚೇರಿಯನ್ನು ನೋಡಿ, ವೀಣೆಯತ್ತ ಒಲಿದರು. ನಂತರ ಅವರು ಅಳಗ ಸಿಂಗ್ರಚಾರ್ ಬಳಿ ಅಭ್ಯಾಸ ಮಾಡುವುದರ ಜೊತೆಗೆ ಸಾತ್ತನೂರ್ ಪಂಚನದಯ್ಯರ ಬಳಿ ತಾನವನ್ನು ಕಲಿತರುಅವರ ತಾಯಿ ಮತ್ತು ಅಜ್ಜಿ ಕರ್ನಾಟಕ ಸಂಗೀತದ ರಾಗಗಳು ಮತ್ತು ಅವುಗಳ P್ಪ್ಷಣಗಳು ಹಾಗೂ  ಸಂಗೀತ ಕೃತಿಗಳನ್ನು ಧಾರೆಯೆರೆದರು. ಇದರಿಂದಾಗಿ  ವರ್ಣಗಳಲ್ಲಿ ಧನಮ್ಮಾಳ್ ಅವರು ಅಪ್ರತಿಮ ಸಾಧನೆಗೈದರು. ಜೊತೆಗೆ ಪ್ರಸಿದ್ಧ ವೈಣಿಕರಾಗಿದ್ದ ಬಾಲದಾಸ್ ಮತ್ತು ಪೊನ್ನುಸ್ವಾಮಿಯವರಿಂದ ಪದಂ ಮತ್ತು ಜಾವಳಿ ಹಾಗೂ ನೈನಾಪಿಳ್ಳೆ ಹಾಗೂ ಅರಿಯಕುಡಿ ರಮಾನುಜಾ ಅಯ್ಯಮಗಾರ್ ರವರಿಂದ ಕೆಲವು ಪ್ರಸಿದ್ಧ ಕೃತಿಗಳಲ್ಲಿ ಪರಿಣತಿ ಗಳಿಸಿದರು. ಇಂತಹ ಭವ್ಯವಾದ ಹಿನ್ನಲೆಯಿಂದಾಗಿ ಕಾಲಘÀಟ್ಟದಲ್ಲಿ ಧನಮ್ಮಾಳ್ ಪುರುಷ ಸಾಮ್ರಾಜ್ಯದ ಸ್ವತ್ತಾಗಿದ್ದ ವೀಣೆಯ ವಾದನದಲ್ಲಿ ಎಲ್ಲರಿಗೂ ಸರಿಸಮಾನಾಗಿ ಬೆಳೆದು ನಿಂತರು.
ವೀಣೆಯ ನುಡಿಸಾಣಿಕೆಯಲ್ಲಿ ತಂಜಾವೂರು ಶೈಲಿಯಲ್ಲಿ ಕಾರೈಕುಡಿ ಸಹೋದರರು ( ಸಾಂಬಶಿವ ಮತ್ತು ಸುಬ್ಬರಾಯ ಅಯ್ಯರ್) ವೀಣಾ ಧನಮ್ಮಳ್, ಮೈಸೂರು ಶೈಲಿಯಲ್ಲಿ ವೀಣೆ ಶೇಷಣ್ಣ ಮತ್ತು ಸುಬ್ಬಣ್ಣ ಹಾಗೂ ಆಂಧ್ರಶೈಲಿಯಲ್ಲಿ ನುಡಿಸುತ್ತಿದ್ದ ವೆಂಕಟರಮಣ ದಾಸರು ಇಂತಹ ಶ್ರೇಷ್ಠ  ವೈಣಿಕರ ಹಾಗೆ  ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ವಿವಿಧ ಆಸ್ಥಾನಗಳಲ್ಲಿ ಕಾರ್ಯಕ್ರಮ ನೀಡಿ ಹೆಸರು ವಾಸಿಯಾದರು. ವೀಣೆಯಿಂದ ಹೊರಹೊಮ್ಮುವ ನಾದವು ಮನುಷ್ಯನ ಕಂಠದಿಂದ ಹೊರಹೊಮ್ಮುವ ನಾದಕ್ಕೆ ತಿರಾ ಹತ್ತಿರವಾದುದು ನಿಜ, ಆದರೆಸಂಗೀತದ ಕೃತಿಗಳನ್ನು ಹಲವು ರಾಗಗಳಲ್ಲಿ ಪ್ರಸ್ತುತ ಪಡಿಸುವಾಗ ನೈಪ್ಮಣ್ಯತೆಯ ಜೊತೆಗೆ ಧ್ಯಾನಸ್ಥ ಮನಸ್ಸು ವೈಣಿಕರಿಗೆ ಇರಬೇಕಾಗುತ್ತದೆ. ವಿಷಯದಲ್ಲಿ ಧನಮ್ಮಾಳ್ ಅಗ್ರಗಣ್ಯರಾಗಿದ್ದರು. ಧನಮ್ಮಾಳ್ ವಾಗ್ಗೇಯಕಾರರ ಕೃತಿಗಳನ್ನು ನುಡಿಸುವಾಗ ಕಲ್ಪನಾಸ್ವರಕ್ಕೆ ಅಥವಾ ನೆರವಲ್ ಗೆ ಹೆಚ್ಚಿನ ಆಧ್ಯತೆಯನ್ನು ನಿಡುತ್ತಿರಲಿಲ್ಲ. ರಾಗಾಲಾಪನೆಗಳಲ್ಲಿ ಮಾತ್ರ ಅವರು ತಮ್ಮ ಮನೋಧರ್ಮವನ್ನು ಅಭಿವ್ಯಕ್ತಿಗೊಳಿಸುತ್ತಿದ್ದರು. ಅವರು ಶುದ್ಧ ಶಾಸ್ತ್ರೀಯವಾಗಿ ರಾಗವನ್ನು ನಿರ್ಧಿಷ್ಟ ಮಿತಿಯಲ್ಲಿ ಮಾತ್ರ ವಿಸ್ತರಿಸುತ್ತಿದ್ದರು. ಅವರ ಆಲಾಪನೆಗಳು ಕೃತಿಗೆ ತಕ್ಕಂತೆ ಇರುತ್ತಿದ್ದವು. ಅತ್ಯಂತ ವ್ಯವಸ್ಥಿತವಾಗಿ ವಿಳಂಬ ಕಾಲದಲ್ಲಿ ನುಡಿಸುವುದು ಅವರ ಶೈಲಿಯಾಗಿತ್ತು. ಎಂದಿಗೂ ಅವರು ದ್ರುತಗತಿಯ ಸಂಗೀತ ಪ್ರಸ್ತುತಿಯನ್ನು ಇಷ್ಟ ಪಡುತ್ತಿರಲಿಲ್ಲಅವರು ವೀಣಾ ವಾದನದಲ್ಲಿ ತಂಬೂರಿಯ ಸಣ್ಣನೆಯ ಶೃತಿಯನ್ನು ಹೊರತು ಪಡಿಸಿದರೆ, ಮೃದಂಗವನ್ನು ಪಕ್ಕವಾದ್ಯವಾಗಿ ಬಳಸುವುದಕ್ಕೆ ಇಷ್ಟಪಡುತ್ತಿರಲಿಲ್ಲ. ಮೆಲುದನಿಯಲ್ಲಿ ಗುನುಗುತ್ತಾ ವೀಣೆಯನ್ನು ನುಡಿಸುವುದು ಅವರ ಹವ್ಯಾಸವಾಗಿತ್ತು.
ಪ್ರತಿ ಶುಕ್ರವಾರ ಸಂಜೆ ಅವರ ಮನೆಯಲ್ಲಿ ಸರಸ್ವತಿ ಪೂಜೆಯ ನಂತರ ಬಾಯಿಗೆ ತಾಂಬೂಲ ಹಾಕಿಕೊಂಡು, ಮಲ್ಲಿಗೆ ಮತ್ತು ಅಗರಬತ್ತಿಯ ಸುವಾಸನೆಯ ನಡುವೆ  ಧ್ಯಾನಸ್ಥ ಸ್ಥಿತಿಯಲ್ಲಿ ಅವರು ನುಡಿಸುತ್ತಿದ್ದ ವೀಣಾ ವಾದನವನ್ನು ಕೇಳಲು ಮದ್ರಾಸ್ ನಗರದ ಪ್ರತಿಷ್ಠಿತ ವ್ಯಕ್ತಿಗಳು ಅವರ ಮನೆಯಲ್ಲಿ ನೆರೆಯುತ್ತಿದ್ದರು. ಇಡೀ ಮನೆ ಮತ್ತು ಅಂಗಳ ಮಾತ್ರವಲ್ಲದೆ, ರಸ್ತೆಯಲ್ಲಿಯೂ ಸಹ ನಿಶ್ಯಬ್ದ ಮನೆ ಮಾಡಿರುತ್ತಿತ್ತುಹಿಂದೂ ಪತ್ರಿಕೆಯ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್, ಟಿ.ಟಿ.ಕೃಷ್ಣಮಾಚಾರಿಯಂತಹ ಪ್ರಸಿದ್ಧರು ಸೇರಿದಂತೆ ತಮಿಳುನಾಡಿನ ಸಂಗೀತಲೋಕದ ದಿಗ್ಗಜರು ಅವರ ವೀಣೆಯ ಮಾಧುರ್ಯವನ್ನು ಸವಿಯಲು ಮನೆಯಲ್ಲಿ ನೆರೆಯುತ್ತಿದ್ದರು. ಎಂದಿಗೂ ಹಣಕ್ಕಾಗಿ, ಕೀರ್ತಿಗಾಗಿ ಸಂಗೀತ ಕಾರ್ಯಕ್ರಮ ನೀಡಲು ಒಪ್ಪದ ಧನಮ್ಮಾಳ್ ಸಂಗೀತದ ಶುದ್ಧತೆ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿದ್ದರು. ಹಿಂದೂಸ್ಥಾನಿ ಸಂಗೀತದ ದಿಗ್ಗಜರಲ್ಲಿ ಒಬ್ಬರಾದ ಪಂಡಿತ್ ಅಬ್ದುಲ್ ಕರೀಂ ಖಾನ್ ಹಾಗೂ ಕರ್ನಾಟಕ ಸಂಗೀತದ ಮೈಸೂರಿನ ಟೈಗರ್ ವರದಾಚಾರ್ ಅವರ ಆತ್ಮೀಯ ಬಳಗದ ಸದಸ್ಯರಲ್ಲಿ ಮುಖ್ಯರಾಗಿದ್ದರು. ಇಂತಹ ಕರ್ನಾಟಕದ ಸಂಗೀತದ ಮಹಾನ್ ಮೇರು ಪ್ರತಿಭೆ 1938 ರಲ್ಲಿ ನಿಧನರಾದರು. ವೀಣಾ ಧನಮ್ಮಾಳ್ ತೆರವುಗೊಳಿಸಿದ ಸ್ಥಾನವನ್ನು ಈವರೆಗೆ ಯಾವೊಬ್ಬ ಮಹಿಳಾ ಕಲಾವಿದೆಯು ತುಂಬಲು ಸಾಧ್ಯವಾಗಿಲ್ಲ ಎಂದರೆ, ಇದು  ಅವರ ಅಪ್ರತಿಮ ಪ್ರತಿಭೆ ಮತ್ತು ಸಾಧನೆಗೆ ಸಾಕ್ಷಿ ಎಂದರ್ಥ.

(ವಾರ್ತಾ ಭಾರತಿ ದಿನಪತ್ರಿಕೆಯ “ ಸ್ವರ ಸನ್ನಿಧಿ” ಅಂಕಣ ಬರಹ)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ