ಶತಮಾನದ ಹಿಂದೆ ಗಾಂಧೀಜಿಯವರು
ಬರೆದ ಹಿಂದ್ ಸ್ವರಾಜ್ ಕೃತಿಯನ್ನು ಇವೊತ್ತಿಗೂ ನಮಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲಿನ
ಗ್ರಾಮಸ್ವರಾಜ್ಯದ ಪರಿಕಲ್ಪನೆಗಳು ಮತ್ತು ಜೀವ ಪರಿಸರಕ್ಕೆ ಎರವಾಗದಂತಹ ಅವರ ಕ್ರಾಂತಿಕಾರಿ
ಚಿಂತನೆಗಳು ಕುರಿತಂತೆ ಅವರ ನಿಲುವುಗಳು ಬದುಕಿನುದ್ದಕ್ಕೂ ಬದಲಾಗಲಿಲ್ಲ. ಗಾಂಧಿಯವರ ಚಿಂತನೆಗಳಲ್ಲಿ
ಭಾರತದ ಬಹುಮುಖಿ ಸಂಸ್ಕೃತಿ ಮತ್ತು ಇಲ್ಲಿನ ಜನರ ವಿಶೇಷವಾಗಿ ಪೂರ್ವಿಕರ ಲೋಕವಿದ್ಯೆಯ ಜ್ಙಾನದ
ಬಗ್ಗೆ ಅಪಾರ ನಂಬಿಕೆಗಳಿದ್ದವು. ನಿಸರ್ಗದ ಚಟುವಟಿಕೆಯನ್ನು ಗಹನವಾಗಿ ಅಧ್ಯಯನ ಮಾಡಿದ್ದ
ಗಾಂಧೀಜಿಗೆ ಜಗತ್ತಿನ ಸಕಲೆಂಟು ಜೀವರಾಶಿಗಳಿಗೆ ಎರವಾಗದಂತೆ ಮನುಷ್ಯ ಬದುಕುವುದು
ಮುಖ್ಯವಾಗಿತ್ತು. ಹಾಗಾಗಿ ಅವರು, ಸ್ವದೇಶಿ, ಚರಕ, ಅಹಿಂಸೆ ಮುಂತಾದ ಪರಿಕಲ್ಪನೆಗಳಲ್ಲಿ ತಮ್ಮ
ಚಿಂತನೆಯ ಧಾರೆಗಳನ್ನು ಸಂಲಗ್ನಗೊಳಿಸಿದರು. ಅವರ ಚಿಂತನೆಗಳು ಇವೊತ್ತಿನ ಇಪ್ಪತ್ತೊಂದನೆಯ
ಶತಮಾನದಲ್ಲಿಯೂ ಸಹ ನಮ್ಮನ್ನು ತೀವ್ರಗತಿಯಲ್ಲಿ
ಕಾಡುತ್ತಿವೆ. ಅಭಿವೃದ್ದಿಯ ವಿಕೃತಿಗಳು ಮತ್ತು ಕೊಳ್ಳುಬಾಕು ಸಂಸ್ಕೃಯಿಂದಾಗಿ ನಮ್ಮ
ಕಣ್ಣೆದರುಗಿನ ನೀರು, ನೆಲ, ಬೆಟ್ಟ, ಕಾಡುಗಳು ಕರಗುತ್ತಿರುವಾಗ ಪದೇ ಪದೇ ಗಾಂಧೀಜಿ ನೆನಪಾಗುತ್ತಾರೆ. ಗಾಂಧೀಜಿ ನಮ್ಮೆದುರು
ಇಲ್ಲದಿದ್ದರೂ ಅವರ ಚಿಂತನೆಗಳು ಆಧುನಿಕ ಜಗತ್ತನ್ನು ಇದೀಗ
ಹಲವು ಬಗೆಯಲ್ಲಿ ಪ್ರೆರೇಪಿಸುತ್ತಿವೆ.
ವರ್ತಮಾನದ ಜಗತ್ತಿನ
ಅರ್ಥಶಾಸ್ತ್ರಜ್ಙರ ಪಡೆಯೊಂದು ರೂಪುಗೊಂಡಿದ್ದು, ಅವರೆಲ್ಲರೂ ಜಾಗತೀಕರಣದ ಪ್ರಭಾವದಿಂದ
ದಿಕ್ಕೆಟ್ಟ ಆಧುನಿಕ ಜಗತ್ತಿಗೆ ದಿಕ್ಕು ದೆಸೆ ತೋರಿಸುತ್ತಿದ್ದಾರೆ. ನೋಬಲ್ ಪ್ರಶಸ್ತಿ ವಿಜೇತರಾದ
ಅಮಾರ್ತ್ಯ ಸೇನ್, ಜೋಸೆಫ್ ಸ್ಲಿಗ್ಲಿಟ್ಜ್, ಮಹಮದ್ ಯೂನಸ್, ಡೊಗ್ಲಾಸ್ ಸಿ. ನಾಥ್. ಇವರ
ಚಿಂತನೆಗಳಲ್ಲಿ ಗಾಂದೀಜಿಯವರ ಪ್ರಭಾವಗಳಿವೆ. ಅಷ್ಟೆ ಏಕೆ? ಭಾರತದ ಹಿರಿಯ ಪತ್ರಕರ್ತರಾದ
ಪಿ.ಸಾಯಿನಾಥ್, ಕಲ್ಪನಾ ಶರ್ಮ, ಮತ್ತು ರಜನಿ ಕೊಥಾರಿಯವರ ಕೃತಿ ಮತ್ತು ಬರಹಗಳಲ್ಲಿ ಗಾಂಧೀಜಿಯವರ
ಜೀವಪರ ಚಿಂತನೆಗಳನ್ನು ನಾವು ಕಾಣಬಹುದು.
ಗಾಂಧೀಜಿ ಬದುಕಿದ್ದಾಗಲೇ
ಅವರಿಂದ ಪ್ರಭಾವಿತಗೊಂಡ ಜೆ.ಸಿ. ಕುಮಾರಪ್ಪ ಮತ್ತು ಶೂಮಾಕರ್ ಅರ್ಥಶಾಸ್ತ್ರದ ವಾಖ್ಯಾನಗಳನ್ನು
ಬದಲಾಯಿಸಿದ್ದರು. ಪ್ರಕೃತಿ ತನ್ನ ಎಲ್ಲಾ ಘಟಕಗಳ ಸಹಕಾರವನ್ನು ಬಯಸುತ್ತದೆ. ಪ್ರತಿಯೊಂದು ಘಟಕ
ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ, ಬೇರೆಯ ಘಟಕಗಳು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
ನಡೆದಾಡಬಲ್ಲವನು, ನಡೆಯಲಾರದವನಿಗೆ ನೆರವಾಗುವಂತೆ, ನಿಸರ್ಗದ ಪ್ರತಿಯೊಂದು ಕ್ರಿಯೆಯೂ ಇನ್ನೊಂದರ
ಮೇಲೆ ಅವಲಂಬಿತವಾಗಿರುತ್ತದೆ. ಮನುಷ್ಯನ ಹಸ್ತಕ್ಷೇಪ ಅಥವಾ ಹಿಂಸೆಯ ಮೂಲಕ ಈ ಜೈವಿಕ ಸರಪಳಿಯನ್ನು
ನಾವು ಕತ್ತರಿಸಬಾರದು. ಇದು ಗಾಂಧಿ ತತ್ವದ ಆಧಾರದ ಮೇಲೆ ಕುಮಾರಪ್ಪನವರು ರೂಪಿಸಿದ ಶಾಶ್ವತ
ಅರ್ಥಶಾಸ್ತ್ರದ ನೀತಿಗಳು.
ಇಂಗ್ಲೆಂಡ್ ಮೂಲದ ಶೂಮಾಕರ್
1950 ರಿಂದ 1970 ರವರೆಗೆ ಭಾರತ ಮತ್ತು ಬರ್ಮಾ ದೇಶಗಳಲ್ಲಿ ಬ್ರಿಟೀಷ್ ಸರ್ಕಾರದ ಪರವಾಗಿ
ಸೇವೆಸಲ್ಲಿಸಿದವರು. ಈ ಎರಡು ದೇಶಗಳ ಬಡತನ ಮತ್ತು ಇಲ್ಲಿನ ಜನರ ಅಸಹಾಯಕತೆಯನ್ನು ಕಣ್ಣಾರೆ ಕಂಡು
ತಲ್ಲಣಿಸಿ ಹೋದವರು. 1961 ರಲ್ಲಿ ಭಾರತ ಪ್ರವಾಸ ಕೈಗೊಂಡು, ಇಲ್ಲಿನ ಜನಸಾಮಾನ್ಯರ ದುಃಖ
ದುಮ್ಮಾನಗಳಿಗೆ ಕಣ್ಣು ಕಿವಿಯಾದ ಶೂಮಾಕರ್, ಭಾರತದಲ್ಲಿ ಎರಡು ಭಾರತಗಳಿವೆ. ಒಂದು ಉಳ್ಳವರ ಭಾರತ
ಮತ್ತೊಂದು ಅಗೋಚರವಾದ ಹಸಿದವರ, ಕಂಗೆಟ್ಟವರ ಭಾರತ ಎಂದು ಪ್ರಥಮ ಬಾರಿಗೆ ಘೋಷಿಸಿದರು. ಬಡತನ
ಮತ್ತು ಹಸಿವಿನಿಂದಾಗಿ ಆತ್ಮ ಸ್ಥೈರ್ಯವನ್ನು ಕಳೆದುಕೊಂಡಿರುವ ಭಾರತದ ಬಡ ಜನರ ಸ್ವಾವಲಂಬನೆಗೆ
ಇರುವ ಏಕೈಕ ಮಾರ್ಗವೆಂದರೆ, ದುಡಿಯುವ ಕೈಗಳಿಗೆ ಕೆಲಸಕೊಡುವುದು ಎಂಬುದನ್ನು ಅವರು ಕಂಡುಕೊಂಡರು.
ಇಂತಹ ಸ್ಥಿತಿಯಲ್ಲಿ ಅವರ ಚಿಂತನೆಗಳಿಗೆ ದಾರಿ ದೀಪವಾದದ್ದು ಗಾಂಧೀಜಿಯವರ ಗ್ರಾಮಸ್ವರಾಜ್ಯ
ಪರಿಕಲ್ಪನೆ ಮತ್ತು ಗುಡಿ ಕೈಗಾರಿಕೆಗಳ ಪುನಶ್ಚೇತನ. ಇವುಗಳನ್ನು ಆಧಾರವಾಗಿಟ್ಟುಕೊಂಡು ಅವರು
ರಚಿಸಿದ Smal is bueatifull ( ಸಣ್ಣದು ಸುಂದರ) ಎಂಬ ಕೃತಿ ಜಗತ್ ಪ್ರಸಿದ್ಧಿಯಾಯಿತು. ಆಧುನಿಕ
ವಿಜ್ಙಾನವನ್ನು ಸಂಪೂರ್ಣವಾಗಿ ತಿರಸ್ಕರಿಸದೆ, ಸ್ಥಳಿಯ ಪ್ರದೇಶಗಳಿಗೆ ಮತ್ತು ಪ್ರತಿಭೆಗಳಿಗೆ
ಅನುಕೂಲವಾಗುವಂತೆ ಪರಿಷ್ಕರಿಸಿ ಅವುಗಳನ್ನು ಅಳವಡಿಸಿಕೊಳ್ಳಬೇಕೆಂಬುದು ಅವರ ಧೃಡ ನಿಲುವಾಗಿತ್ತು.
ಇದನ್ನು ಅವರು Inter medeiate technology ಎಂದು ಕರೆದರು. ಮಧ್ಯಂತರ ತಂತ್ರಜ್ಙಾನ ಅಥವಾ
ಸೂಕ್ತ ತಂತ್ರಜ್ಙಾನ ಎಂದು ಕರೆಯಬಹುದಾದ ಈ ಪರಿಕಲ್ಪನೆಯಲ್ಲಿ ಒಂದು ಪ್ರದೇಶದಲ್ಲಿ ಅಭಿವೃದ್ಧಿಯಾದ
ತಂತ್ರಜ್ಙಾನವು, ಭಿನ್ನವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನಲೆಯುಳ್ಳ ಮತ್ತೊಂದು ಪರಿಸರದಲ್ಲಿ ಅನ್ವಯವಾಗಲಾರದು. ಇಂತಹ ಸ್ಥಿತಿಯಲ್ಲಿ ಅಲ್ಲಿನ
ಪರಿಸರಕ್ಕೆ ಅನುಗುಣವಾಗಿ ತಂತ್ರಜ್ಙಾನವನ್ನು ನಾವು ಅವಶ್ಯಕತೆಗೆ ತಕ್ಕಂತೆ ಪರಿಷ್ಕರಿಸಿ ಬಳಸಬೇಕು
ಹಾಗೂ ಎಲ್ಲವೂ ಬೃಹತ್ ಆಗಿರಬೇಕು ಅಥವಾ ಕಡಿಮೆ
ಮಾನವ ಶಕ್ತಿಯನ್ನು ಬಳಸಿ ಅಧಿಕ ಉತ್ಪಾದನೆ ಮಾಡುವ ಬಂಡವಾಳಶಾಹಿ ಜಗತ್ತಿನ ಲಾಭಕೋರ ಆರ್ಥಿಕ
ಚಿಂತನೆಗಳಿಗೆ ಬದಲಾಗಿ ದುಡಿಯುವ ಸಮೂಹದ ಕೈಗಳಿಗೆ
ಕೈ ತುಂಬಾ ಕೆಲಸ ಕೊಡುವ ಗುಡಿ ಕೈಗಾರಿಕೆಗಳು ಮಾತ್ರ ಸಮಾನ ಸ್ಥಿತಿಯಲ್ಲಿ ಸಮಾಜದ ಸ್ವಾಸ್ಥವನ್ನು
ಕಾಪಾಡಬಲ್ಲದು ಎಂದು ಶೂಮಾಕರ್ ಬಲವಾಗಿ ನಂಬಿದ್ದರು. ಇಂದು ಅವರ ಮತ್ತು ಗಾಂಧೀಜಿಯವರ ಚಿಂತನೆಯ
ಫಲಗಳನ್ನು ಮತ್ತು ಅನೇಕ ಫಸಲುಗಳನ್ನು ನಾವೀಗ ಹಲವು ರೂಪದಲ್ಲಿ ಕಾಣುತ್ತಿದ್ದೇವೆ. ಭಾರತದ ನಾಗರೀಕರಿಗೆ
ಮತ್ತು ಹೊರಜಗತ್ತಿಗೆ ಅನಾಮಿಕರಂತೆ ಉಳಿದು ಹೋದ ಇಬ್ಬರು ಮಹನೀಯರೆಂದರೆ, ಒಬ್ಬರು ದಿವಂಗತ
ಮನ್ಸೂರು ಹೊಡ ಮತ್ತು ಈಗ ನಮ್ಮ ನಡುವೆ ಇರುವ ಸುನಿಲ್ ಸಹಸ್ರಬುಧೆ. ಮನ್ಸೂರು ಹೊಡ, ಶೂಮಾಕರ್
ರಿಂದ ಪ್ರಭಾವಿತರಾದರೆ, ಸುನಿಲ್ ಸಹಸ್ರಬುಧೆ ಗಾಂಧೀಜಿ ಚಿಂತನೆಗಳಿಂದ ಪ್ರಭಾವಿತರಾದವರು.( ಇವರು
ಕಾನ್ಪುರದ ಐ.ಐ.ಟಿ. ಸಂಸ್ಥೆಯಲ್ಲಿ ಕನ್ನಡದ ಹಿರಿಯ ರಂಗಕರ್ಮಿ ಪ್ರಸನ್ನ ಅವರ
ಸಹಪಾಠಿಯಾಗಿದ್ದವರು. ಇವರ ಶ್ರೇಷ್ಟ ಕೃತಿಯೊಂದು “ ಆಧುನಿಕ ವಿಜ್ಙಾನಕ್ಕೆ ಗಾಂಧಿಯ ಸವಾಲು” ಎಂಬ
ಹೆಸರಿನಲ್ಲಿ ಕನ್ನಡದಲ್ಲಿ ಪ್ರಕಟವಾಗಿದೆ. ಅನುವಾದಕರು- ಡಾ.ಕೆ.ಪುಟ್ಟಸ್ವಾಮಿ.
ಪ್ರಕಾಶಕರು-ಕನ್ನಡ ಪುಸ್ತಕ ಪ್ರಾಧಿಕಾರ)
1983 ರಲ್ಲಿ ಮತ್ತೆ
ಇಂಗ್ಲೆಂಡ್ ಗೆ ತೆರಳಿ ಲಂಡನ್ ನಗರದಲ್ಲಿ ಗಾಂಧಿ ಪ್ರತಿಷ್ಟಾನವನ್ನು ಸ್ಥಾಪಿಸಿದರು. ಈ ಮೊದಲು ಅವರು
ಆರಂಭಿಸಿದ್ದ ಇಂಡಿಯನ್ ಡೆವಲಪ್ ಮೆಂಟ್ ಗ್ರೂಪ್ ಸಂಸ್ಥೆ ಜೊತೆ ಈಗ ಶೂಮಾಕರ್ ಕುಟುಂಬ ಕೂಡ ಕೈ
ಜೋಡಿಸಿದೆ. ಮನ್ಸೂರ್ ಮತ್ತು ಶೂಮಾಕರ್ ಕುಟುಂಬದ ಸದಸ್ಯರು
ಭಾರತದಲ್ಲಿ ಸ್ಥಾಪಿಸಿರುವ ಜೀವಿಕಾ
ಎನ್ನುವ ಸಂಸ್ಥೆ ಕಳೆದ ಒಂದು ದಶಕದಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಒಂದು ಲಕ್ಷ ಕುಟುಂಬಗಳನ್ನು
ಬಡತನದ ರೇಖೆಯಿಂದ ಮೇಲೆತ್ತಲು ಶ್ರಮಿಸಿದೆ. ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು
ದುಡಿಯುತ್ತಿರುವ ಜೀವಿಕಾ, ಮಹಿಳೆಯರಿಗೆ ಕರ ಕುಶಲ ತರಬೇತಿ, ಅವರ ಆರೋಗ್ಯ,ಸ್ವಸಹಾಯ ಸಂಘಗಳಿಗೆ ಧನ
ಸಹಾಯ ಮಾಡುವುದರ ಮೂಲಕ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದೆ.
ವಾರಣಾಸಿಯಲ್ಲಿ ಮನ್ಸೂರ್ ಹೊಡ ಸ್ಥಾಪಿಸಿದ
ಗಾಂಧಿಯನ್ ಇನ್ಸಿಟ್ಯೂಟ್ ಸಂಸ್ಥೆಯನ್ನು ಈಗ ಇನ್ನೊಬ್ಬ ಗಾಂಧಿವಾದಿ ಸುನಿಲ್ ಸಹಸ್ರಬುಧೆ
ಮುನ್ನಡೆಸುತ್ತಿದ್ದಾರೆ, ಲೋಕವಿದ್ಯಾ ಎಂಬ ಆಂಧೋಲನದ ಮೂಲಕ ಸ್ಥಳಿಯ ಮಾರುಕಟ್ಟೆಯನ್ನು ರೂಪಿಸಿ, ಈ
ಮೂಲಕ ಸ್ಥಳೀಯ ಜನರು ಉತ್ಪಾದಿಸುವ ವಸ್ತುಗಳಿಗೆ ನೆರವಾಗುತ್ತಿದ್ದಾರೆ. ಅಲ್ಲದೆ ಗಾಂಧೀಜಿಯ ಚಿಂತನೆಗಳನ್ನು
ಮುರಿದು ಕಟ್ಟುವುದರ ಮೂಲಕ ಅವುಗಳಿಗೆ ಹೊಸ ವಾಖ್ಯಾನ ನೀಡುತ್ತಿದ್ದಾರೆ.