ಗೆಳೆಯರೇ, ಈ ಬಾರಿ ಅಂದರೆ 2015 ರ ಸಾಲಿನ
ಇಂಡುವಾಳು ಹೊನ್ನಯ್ಯ ರಾಜ್ಯ ಮಟ್ಟದ ಪ್ರಶಸ್ತಿಗೆ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತಿರುವ
ಪರಿಸರವಾದಿ ಹಾಗೂ ಸಾಮಾಜಿಕ ಹಿರಿಯ ಹೋರಾಟಗಾರ ಶೃಂಗೇರಿಯ ಕಲ್ಕುಳಿ ವಿಠಲ ಹೆಗ್ಗಡೆಯವರು ಆಯ್ಕೆಯಾಗಿದ್ದಾರೆ.
ಅದೇ ರೀತಿ ಇನ್ನೊಂದು ಸಮಾಜ ಸೇವಾ ಪ್ರಶಸ್ತಿಯಾದ ದೇವಮ್ಮ ಹೊನ್ನಯ್ಯ ಪ್ರಶಸ್ತಿಗೆ ಕೊಪ್ಪಳ
ಜಿಲ್ಲೆಯ ಅಕ್ಷರ ದಾಸೋಹಿ ಶ್ರೀಮತಿ ಹುಚ್ಚಮ್ಮ ಚೌದ್ರಿ ಎಂಬ ಮಾತೆ ಆಯ್ಕೆಯಾಗಿದ್ದಾರೆ, ಮಂಡ್ಯ
ಜಿಲ್ಲೆಯಲ್ಲಿ ಈಗಿನ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಬಿ. ಜಯಪ್ರಕಾಶ್ ಗೌಡ ನೇತೃತ್ವದಲ್ಲಿ ಸಮಾನ
ಮನಸ್ಕ ಗೆಳೆಯರು ಇಪ್ಪತ್ತು ವರ್ಷಗಳ ಹಿಂದೆ ಆರಂಭಿಸಿದ ಜನದನಿ ಸಾಂಸ್ಕೃತಿಕ ಟ್ರಸ್ಟ್ ಸಂಸ್ಥೆಯು ಎಲೆ
ಮರೆಯ ಕಾಯಿಯಂತೆ ಬದುಕುತ್ತಿರುವ ಹಾಗೂ ಸಮಾಜದ ಮುಖ್ಯವಾಹಿನಿಗೆ ಬಾರದಿರುವ ವ್ಯಕ್ತಿಗಳನ್ನು
ಹುಡುಕಿ ಈ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿದೆ. ಇವರಲ್ಲಿ ಪ್ರಪಥಮವಾಗಿ ಪ್ರಶಸ್ತಿ ಪಡೆದ ಸಾಲುಮರದ ತಿಮ್ಮಕ್ಕ, ಉತ್ತರ ಕನ್ನಡ
ಜಿಲ್ಲೆಯಲ್ಲಿ ಗಿಡ ಮರಗಳನ್ನು ಪೋಷಿಸುತ್ತಿರುವ ವನದೇವತೆ ಹಾಗೂ ಹಾಲಕ್ಕಿ ಹೆಣ್ಣು ಮಗಳು, ತುಳಸಿ,
ಬೆಂಗಳೂರಿನಲ್ಲಿ ಅನಾಥ ಹೆಣಗಳನ್ನು ಸಾಗಿಸುವ ತ್ರಿವಿಕ್ರಮ ಮಹಾದೇವ, ಬಿಕ್ಷುಕರನ್ನು ಹಾರೈಕೆ ಮಾಡುವ
ಬೆಂಗಳೂರಿನ ಆಟೋ ರಾಜು, ಜೈಲಿನಲ್ಲಿರುವ ಖೈದಿಗಳ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ನೀಡುತ್ತಿರುವ
ರಿಸರ್ವ್ ಬ್ಯಾಂಕಿನ ಮಾಜಿ ಅಧಿಕಾರಿ ವೈದ್ಯನಾಥನ್ ಹಾಗೂ ಹೆದ್ದಾರಿಗಳಲ್ಲಿ ಅಪಘಾತವಾದರೆ ರಕ್ಷಣೆಗೆ ತಂಡ
ಕಟ್ಟಿಕೊಂಡು ಓಡೋಡಿ ಬರುವ ದಾವಣಗೆರೆಯ ಸನಾವುಲ್ಲಾ ಮತ್ತು ಮಾನಸಿಕ ಅಸ್ವಸ್ಥರಿಗೆ ಆಶ್ರಮ
ಸ್ಥಾಪಿಸಿ ಪೋಷಿಸುತ್ತಿರುವ ಬೆಳ್ತಂಗಡಿಯ ಕ್ರೈಸ್ತ ಪಾದ್ರಿ ಹೀಗೆ ಹಲವರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಪ್ರಶಸ್ತಿ
ಪಡೆದ ಬಹುತೇಕ ಮಂದಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು ವಿಶೇಷ. ಎರಡನೆಯ ವರ್ಷದ
ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಬಂದಿದ್ದ ಆಗಿನ ಕನ್ನಡ ಸಂಸ್ಕೃತಿಯ ಇಲಾಖೆಯ ಕಾರ್ಯದರ್ಶಿ
ವೈ.ಕೆ. ಮುದ್ದುಕೃಷ್ಣ ರವರು ನಮ್ಮ ಇಲಾಖೆಯು ನಿಮ್ಮ ಪ್ರಶಸ್ತಿ ವಿಜೇತರನ್ನು ಗಂಭೀರವಾಗಿ
ಗಮನಿಸುತ್ತಿದೆ ಎಂದು ನುಡಿದಿದ್ದರು.
ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾದ ಸಮಾಜ
ಸೇವೆಗೆ ಮೀಸಲಾದ ಈ ಪ್ರಶಸ್ತಿಗೆ ಈ ಬಾರಿ ಕಲ್ಕುಳಿ ವಿಠಲ ಹೆಗ್ಗಡೆಯವರನ್ನು ಆಯ್ಕೆಯಾಗಿದ್ದಾರೆ.
ಈ ತಲೆಮಾರಿನ ಯುವಜನತೆಗೆ ಕಲ್ಕುಳಿಯವರ ಹೊರಾಟದ ಪರಿಚಯವಿಲ್ಲದೆ ಇರಬಹುದು. ಆದರೆ, ನನ್ನ
ತಲೆಮಾರಿಗೆ ತಮ್ಮ ಸಾಮಾಜಿಕ ಬದ್ಧತೆ ಮತ್ತು ಪರಿಸರ ಕುರಿತ ಹೋರಾಟಗಳಿಂದ ಅವರು ಮಾದರಿಯಾದವರು. 1980
ರ ದಶಕದಲ್ಲಿ ನಮಗೆ ತಮ್ಮ ಅಪರೂಪದ ಚಿಂತನೆ ಹಾಗೂ ಪರಿಸರ
ಲೇಖನಗಳ ಮೂಲಕ ಹಿರಿಯ ಪತ್ರಕರ್ತ ನಾಗೇಶ್
ಹೆಗ್ಡೆಯವರು ನಮ್ಮಂತಹವರಲ್ಲಿ ಪರಿಸರ ಪ್ರಜ್ಞೆಯನ್ನು
ಮೂಡಿಸಿದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ
ಪಾಂಡುರಂಗ ಹೆಗ್ಡೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಲ್ಕುಳಿ ವಿಠಲ ಹೆಗ್ಗೆಡೆಯವರು
ಪರಿಸರ ಹೋರಾಟಕ್ಕೆ ಸಾಂಸ್ಥಿಕ ರೂಪ ಕೊಟ್ಟವರು.
ತುಂಗಾ ಮೂಲ ಉಳಿಸಿ ಮತ್ತು ಕುದುರೆ ಮುಖ
ಗಣಿಗಾರಿಕೆಯಿಂದಾದ ಪರಿಸರ ನಾಶ ಹಾಗೂ ಅರಣ್ಯಗಳಿಂದ ಅರಣ್ಯವಾಸಿಗಳ ಒಕ್ಕಲೆಬ್ಬಿಸುವಿಕೆ ವಿರುದ್ಧ
ನಿರಂತರ ಮೂರೂವರೆ ದಶಕಗಳ ಕಾಲ ಹೋರಾಡುತ್ತಾ ಬಂದ ಕಲ್ಕುಳಿ ವಿಠಲ ಹೆಗ್ಗಡೆಯವರು ತಮ್ಮ
ಬದುಕಿನಲ್ಲಿ ಪಡೆದುದಕ್ಕಿಂತ ಕಳೆದು ಕೊಂಡಿದ್ದೆ ಹೆಚ್ಚು.
ಇವರು ಆರಂಭಿಸಿದ ಹೋರಾಟಕ್ಕೆ ನಾಡಿನ ಮೂಲೆ
ಮೂಲೆಯಿಂದ ಅನೇಕ ಪ್ರಗತಿ ಪರರು ಕೈ ಜೋಡಿಸಿದ್ದುಂಟು. ಅವರಲ್ಲಿ ಮೈಸೂರಿನ ಸಾಕೇತ್ ರಾಜನ್ ಮತ್ತು
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ವಾರಪತ್ರಿಕೆಯೊಂದನ್ನು ಹುಟ್ಟು ಹಾಕಿ ಪ್ರಗತಿ ಪರ
ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಸಿರಿಮನೆ ನಾಗರಾಜ್ ಹಾಗೂ ಜನಾಂಧಲನದ ಬಂಜಗೆರೆ ಜಯಪ್ರಕಾಶ್
ಹೀಗೆ ಅನೇಕರು ಕುದುರೆ ಮುಖ ಗಣಿಗಾರಿಕೆಯಿಂದ ಆಗುತ್ತಿದ್ದ
ಪರಿಸರ ಅಸಮತೋಲನಕ್ಕೆ ಆ ಕಾಲಘಟ್ಟದಲ್ಲಿ ದೊಡ್ಡ
ಮಟ್ಟದಲ್ಲಿ ಧ್ವನಿ ಎತ್ತಿದ್ದರು.
ಕಲ್ಕುಳಿ ವಿಠಲ ಹೆಗ್ಗೆಡೆಯವರು ತಮ್ಮ
ಹೋರಾಟವನ್ನು ಕೇವಲ ಪರಿಸರ ಕುರಿತಾದ ಚಳುವಳಿಗೆ ಮೀಸಲಾಗಿರಿಸದೆ, ತಮ್ಮ ಸುತ್ತ ಮುತ್ತಲಿನ ಕರ್ಮಠ
ಮಠ ಮಾನ್ಯಗಳ ಅಸಮಾನತೆಯ ಧೋರಣೆಗಳಿಗೆ ಮತ್ತು
ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಊಳಿಗಮಾನ್ಯ ಪದ್ಧತಿಯನ್ನು ಜೀವಂತವಿಟ್ಟ್ವ ವ್ಯವಸ್ಥೆಯ ವಿರುದ್ಧ
ಹೋರಾಡುತ್ತಲೇ ಸಮಾಜದಲ್ಲಿ ಸಮಾನತೆಯ ಕನಸು ಕಾಣುತ್ತಾ ಬದುಕಿದ್ದವರು. ರೈತ ಹೋರಾಟ, ದಲಿತರ
ಪರವಾಗಿನ ಕಳ ಕಳಿ ಇವೆಲ್ಲವೂ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಒಬ್ಬ ಅಸಮಾನ್ಯ ನಾಯಕನನ್ನಾಗಿ ರೂಪಿಸಿದ್ದವು.
2007 ರ ಜುಲೈ ತಿಂಗಳಿನಲ್ಲಿ ಕುದುರೆ ಮುಖ ಅಭಯಾರಣ್ಯದ ಆದಿವಾಸಿಗಳು ತಮ್ಮನ್ನು
ಒಕ್ಕಲೆಬ್ಬಿಸುತ್ತಿರುವುದರ ವಿರುದ್ಧ ನಡೆಸಿದ ಹೋರಾಟವು ಹಿಂಸಾ ರೂಪಕ್ಕೆ ತಿರುಗಿದಾಗ, ಪೊಲೀಸರು
ನಡೆಸಿದ ಗೋಲಿಬಾರ್ ನಲ್ಲಿ ನಾಲ್ವರು ಆದಿವಾಸಿಗಳು ಮೃತಪಟ್ಟರು. ಈ ಸಂದರ್ಭದಲ್ಲಿ ವಿಠಲ
ಹೆಗ್ಗಡೆಯವರು ಸ್ಥಳದಲ್ಲಿ ಇಲ್ಲದಿದ್ದರೂ ಸಹ ಹಿಂಸೆಗೆ ಪ್ರಚೋದನೆ ನೀಡಿದರು ಮತ್ತು ಸಾರ್ವಜನಿಕ
ಹಾಗೂ ಸರ್ಕಾರಿ ಆಸ್ತಿಗೆ ನಷ್ಟ ಉಂಟು ಮಾಡಿದರು ಎಂಬ ಆರೋಪದಡಿಯಲ್ಲಿ ಸರ್ಕಾರವು ಅವರ ವಿರುದ್ಧ ಮೊಕದ್ದಮೆ ದಾಖಲಿಸಿತು. ಅಲ್ಲಿಂದ ಅವರ
ನೋವಿನ ಅಧ್ಯಾಯ ಸಹ ಆರಂಭವಾಯಿತು.
ಆರಂಭದಲ್ಲಿ ಕುದುರೆ ಮುಖ ಗಣಿಗಾರಿಕೆ
ವಿರುದ್ಧದ ಆಂದೋಲನಕ್ಕೆ ಕೈ ಜೋಡಿಸಿದ್ದ ಮೈಸೂರಿನ ಸಾಕೇತ್ ರಾಜನ್ ಆಂಧ್ರಕ್ಕೆ ತೆರಳಿ ನಕ್ಸಲ್
ಹೋರಾಟವನ್ನು ಕರ್ನಾಟಕದಲ್ಲಿ ವಿಸ್ತರಿಸಬೇಕೆಂದು ಕನಸು ಕಾಣುತ್ತಾ, ಕೆಲವು ಸದಸ್ಯರ ಜೊತೆ
ಕರ್ನಾಟಕಕ್ಕೆ ಬಂದು ಚಿಕ್ಕಮಗಳೂರಿನ ಆರಣ್ಯದಲ್ಲಿ
ನೆಲೆಯೂರಿದರು. ಅಲ್ಲಿನ ಗಿರಿಜನ ರಕ್ಷಣೆ ಅವರ ಮುಖ್ಯ ಧ್ಯೇಯವಾಗಿತ್ತು. ಹೀಗೆ ಕರ್ನಾಟಕದಲ್ಲಿ
ನಕ್ಸಲ್ ಚಳುವಳಿ ಆರಂಭವಾಗುತ್ತಿದ್ದಂತೆ, ಕಲ್ಕುಳಿಯವರ ವಿರುದ್ಧ ಕತ್ತಿ ಮಸೆಯುತ್ತಿದ್ದ ಪಟ್ಟ
ಭದ್ರ ಹಿತಾಸಕ್ತಿಗಳು ಈ ಅವಕಾಶಗಳನ್ನು ಬಳಸಿಕೊಂಡು, ಅವರನ್ನು ನಕ್ಸಲ್ ಸಂಘಟನೆಯ ಬೆಂಬಲಿಗ ಹಾಗೂ
ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬಂತೆ ಪ್ರತಿಬಿಂಬಿಸತೊಡಗಿದವು. ಬಲಪಂಥೀಯರ
ಕರಪತ್ರದಂತಿರುವ ಕೆಲವು ದಿನ ಪತ್ರಿಕೆಗಳು ಸಹ ಇದಕ್ಕೆ ಕೈ ಜೋಡಿಸಿದವು. ಇದರ ಪರಿಣಾಮವಾಗಿ ಕಲ್ಕುಳಿ
ವಿಠಲ ಹೆಗ್ಗಡೆಯವರನ್ನು ಆಂಧ್ರದ ಪ್ರಜಾ ಸಮರಂ (ಪೀಪಲ್ಸ್ ವಾರ್ ಗ್ರೂಪ್ ) ನ ಸಂಸ್ಥಾಪಕ
ಕೊಂಡಪಲ್ಲಿ ಸೀತಾರಾಮಯನವರಿಗೆ ಹೋಲಿಸಿ, ಸರ್ಕಾರಗಳು ಮತ್ತು ಬಲಪಮಥೀಯ ಸಂಘಟನೆಗಳು ಅವರನ್ನು
ನೋಡತೊಡಗಿದವು. ಎಂದಿಗೂ ಹಿಂಸೆಯನ್ನು ಆರಾಧಿಸದ ಅಥವಾ ಪ್ರಚೋದಿಸದ ಕಲ್ಕುಳಿಯವರ ಮೇಲೆ ಒಂದಲ್ಲ,
ಎರಡಲ್ಲ, ಬರೋಬ್ಬರಿ ಒಂದು ಡಜನ್ ಕೇಸ್ ಗಳು
ದಾಖಲಾದವು. ಇದರ ಜೊತೆಗೆ ಸ್ವತಃ ಅವರು
ದಲಿತರಲ್ಲದಿದ್ದರೂ ಸಹ ಒಂದು ದಶಕದ ಕಾಲ ದಲಿತ ಸಂಘಟನೆಯ ಪರವಾಗಿ ಹೋರಾಡಿದುದಕ್ಕೆ ಪ್ರತಿ ಫಲ
ವೆಂಬಂತೆ ಅವರ ಮೇಲೆ ದಲಿತರ ಮೂಲಕ ಮೂರು ಜಾತಿ ನಿಂದನೆ ಮೊಕೊದ್ದಮೆಗಳು ದಾಖಲಾದವು.
ಕೃಷಿಯ ಜೊತೆ ಬದುಕು ಕಟ್ಟಿಕೊಂಡು, ಸಾಮಾಜಿಕ
ಚಳುವಳಿಯಲ್ಲಿ ಗುರುತಿಸಿಕೊಂಡು ತಮ್ಮ ನಿವೃತ್ತಿಯ
ದಿನಗಳಲ್ಲಿ ನೆಮ್ಮದಿಯಿಂದ ಬದುಕಬೇಕಿದ್ದ ಕಲ್ಕುಳಿಯವರು ಈಗ ಪತ್ರಿ ವಾರ ಚಿಕ್ಕಮಗಳೂರು ಹಾಗೂ ಬೆಂಗಳೂರು ಇಲ್ಲಿನ ನ್ಯಾಯಾಲಯಗಳ ಮೆಟ್ಟಿಲು ಹತ್ತಿ ಇಳಿಯುತ್ತಿದ್ದಾರೆ.
ಒಬ್ಬ ಸಾಮಾಜಿಕ ಹೋರಾಟಗಾರನಿಗೆ ಈ ಸಮಾಜ ಮತ್ತು ಸರ್ಕಾರ ನೀಡಿರುವ ಬಳುವಳಿ ಇದು. ಶಿವಮೊಗ್ಗ
ಜಿಲ್ಲೆಯ ಪೊಲಿಸ್ ವರಿಷ್ಠಾಧಿಕಾರಿಯಾಗಿದ್ದ ಮುರುಗುನ್ ಎಂಬ ಐ.ಪಿ.ಎಸ್. ಅಧಿಕಾರಿ ಇಲ್ಲಿನ
ಆರಣ್ಯದ ಸಾಗುವಾನಿ ಮರಗಳನ್ನು ಕದ್ದು ಸಾಗಿಸಿ, ತಮಿಳುನಾಡಿನ ಮಧುರೈ ಜಿಲ್ಲೆಯ ತನ್ನೂರಿನಲ್ಲಿ
ಭವ್ಯ ಮನೆ ನಿರ್ಮಿಸಿಕೊಂಡ. ಜೊತೆಗೆ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು
ಶಿವಮೊಗ್ಗ ನಗರದ ತನ್ನ ನಿವಾಸದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು ಅರಣ್ಯ ಇಲಾಖೆಗೆ
ಸಿಕ್ಕಿಬಿದ್ದ. ಇಂತಹ ಸರ್ಕಾರಿ ಕಾಡುಗಳ್ಳನಿಗೆ ನಮ್ಮ ಸರ್ಕಾರ ಭಡ್ತಿ ನೀಡಿ ಉನ್ನತ ಹುದ್ದೆಗೆ
ಏರಿಸುತ್ತದೆ. ಆದರೆ, ಅರಣ್ಯ ರಕ್ಷಣೆಗೆ ಹೋರಾಡುವ ಕಲ್ಕುಳಿ ವಿಠಲ ಹೆಗ್ಗಡೆಯಂತಹರ ಮೇಲೆ ನಿರಂತರವಾಗಿ ಕೇಸ್ ಜಡಿಯುತ್ತದೆ. ಇದು ವರ್ತಮಾನದ
ವ್ಯಂಗ್ಯವೂ ಹೌದು. ದುರಂತವೂ ಹೌದು.
ಈ ಕಾರಣಕ್ಕಾಗಿ ಘಾಸಿಗೊಂಡ ಯೋಧನಂತೆ ಎಲ್ಲಾ ಹೋರಾಟಗಳಿಂದ ದೂರ ಉಳಿದು ನೈಪಥ್ಯಕ್ಕೆ ಸರಿದಿರುವ
ಕಲ್ಲುಳಿ ವಿಠಲ ಹೆಗ್ಗಡೆಯವರನ್ನು ಈ ಸಾಮಾಜಿಕ ಸೇವಾ ಪ್ರಶಸ್ತಿಯನ್ನು ಒಪ್ಪಿಕೊಳ್ಳುವಂತೆ ಮಾಡಲು
ನಾನು ಅವರ ಜೊತೆ ಸುಧೀರ್ಘವಾಗಿ ಚರ್ಚಿಸಬೇಕಾಯಿತು. ಕಲ್ಕುಳಿಯವರದು ಎಲ್ಲಾ ಪ್ರಶಸ್ತಿಗಳನ್ನು
ಮೀರಿ ಬೆಳೆದ ವ್ಯಕ್ತಿತ್ವ ನಿಜ. ಆದರೆ, ನಮ್ಮ ಪಾಲಿಗೆ ಅವರ ಹೋರಾಟದ ಜೀವನವನ್ನು ಮತ್ತು ಸಾಮಾಜಿಕ
ಹಾಗೂ ಸಾಂಸ್ಕತಿಕ ಬದ್ಧತೆಯನ್ನು ಗುರುತಿಸಿ ಗೌರವಿಸುದೆಂದರೆ, ಸಮಕಾಲೀನ ಸಂದರ್ಭದ ಸಾರ್ವಜನಿಕ
ಬಿಕ್ಕಟ್ಟುಗಳಿಗೆ ಮುಖಾ ಮುಖಿಯಾಗುವ ಕ್ರಿಯಾಶೀಲ ಚೇತನವನ್ನು ಗೌರವಿಸುವುದೇ ಆಗಿದೆ.
ಪ್ರಶಸ್ತಿಯನ್ನು ಒಪ್ಪಿಕೊಳ್ಳುವುದರ ಮೂಲಕ ಇಂಡುವಾಳು ಹೊನ್ನಯ್ಯ ಪ್ರಶಸ್ತಿಗೆ ಮೌಲ್ಯ ಹಾಗೂ
ಗೌರವ ತಂದು ಕೊಟ್ಟ ಹಿರಿಯಣ್ಣ ಹಾಗೂ
ಮಾರ್ಗದರ್ಶಕರಂತಿರುವ ಕಲ್ಕುಳಿ ವಿಠಲ ಹೆಗ್ಗಡೆಯವರಿಗೆ ಅಭಿನಂದನೆಗಳು.
ಇನ್ನು ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಣಿಕೇರಿ
ಎಂಬ ಗ್ರಾಮದ ಹುಚ್ಚಮ್ಮ ಚೌದ್ರಿ ಎಂಬ ಮಹಾತಾಯಿ ನಮ್ಮ ಪಾಲಿಗೆ ಅತ್ತಿಮಬ್ಬೆ ದಾನ ಚಿಂತಾಮಣಿಯಂತೆ
ಕಾಣುತ್ತಾರೆ. ಮಕ್ಕಳಿಲ್ಲದ ಈ ವಿಧವೆ ತನ್ನ
ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರಿ ಶಾಲೆಗೆ ದಾನ ಮಾಡಿ, ಅದೇ ಶಾಲೆಯಲ್ಲಿ ಬಿಸಿಯೂಟದ ಕೆಲಸದಲ್ಲಿ
ಸಹಾಯಾಕಿ ದುಡಿಯುತ್ತಾ ಜಗದ ಮಕ್ಕಳನ್ನು ತನ್ನ ಮಕ್ಕಳಂತೆ
ಪರಿಭಾವಿಸಿ ಬದುಕಿರುವ ಪರಿ ನಿಜಕ್ಕೂ ಮಾದರಿಯಾಗುವಂತಹದ್ದು. ಇವರಿಗೂ ಸಹ ಮಂಡ್ಯ ದ ಜನದನಿ ಟ್ರಸ್ಟ್ ನಿಂದ ದೇವಮ್ಮ ಹೊನ್ನಯ್ಯ ಸಾಮಾಜಿಕ
ಸೇವಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇವರಿಗೂ ಸಹ ನನ್ನ ಅಭಿನಂದನೆಗಳು.