ಬುಧವಾರ, ಆಗಸ್ಟ್ 12, 2015

ಕರ್ನಾಟಕ ಸಂಗೀತದ ದೇವತೆ ಬೆಂಗಳೂರು ನಾಗರತ್ನಮ್ಮನವರ ದುರಂತದ ನೆನಪುಗಳು



ಕರ್ನಾಟಕ ಸಂಗೀತ ಮತ್ತು ನೃತ್ಯ ಕುರಿತ ನಾಲ್ಕು ಸಂಪುಟಗಳ ಮಾಲಿಕೆಯಲ್ಲಿ ಮೊದಲಿಗೆ ದೇವದಾಸಿ ಸಮುದಾಯದಿಂದ ಬಂದು ದೇವತೆಗಳ ಸ್ಥಾನಕ್ಕೇರಿದ  ಕನ್ನಡತಿ ಬೆಂಗಳೂರು ನಾಗರತ್ನಮ್ಮ ಮತ್ತು ಎಂ.ಎಸ್. ಸುಬ್ಬುಲಕ್ಷ್ಮಿ ಈ ಎರಡು ಕೃತಿಗಳನ್ನು ಕಳೆದ ಮೇ ತಿಂಗಳಿನಲ್ಲಿ ಬರೆದು ಮುಗಿಸಿದೆ. ಜೂನ್ ತಿಂಗಳಿನಲ್ಲಿ  ಈ ಕೃತಿಗಳು ಬಿಡುಗಡೆಯಾಗ ಬೇಕಿತ್ತು. ಪ್ರಕಟಣೆಗೆ ಮುಂದಾಗಿದ್ದ ಡಾ. ಆರ್ .ಪೂರ್ಣಿಮಾ ಮೇಡಂ ಅನಿರೀಕ್ಷಿತವಾಗಿ ಮೂರು ತಿಂಗಳ ಕಾಲ ಅಮೇರಿಕಾಕ್ಕೆ ಹೋದುದರಿಂದ ಬಿಡುಗಡೆ ಸೆಪ್ಟಂಬರ್ ತಿಂಗಳಿಗೆ ಮುಂದೂಡಿತು.
ನಾಗರತ್ನಮ್ಮನವರ ಕೃತಿಯ ಮೊದಲ ಅಧ್ಯಾಯದಲ್ಲಿ ಕೆಲವು ಕಟು ವಾಸ್ತವ ಸಂಗತಿಗಳನ್ನು ದಾಖಲಿಸಿದ್ದೆ. ಏಕೆಂದರೆ, 1920 ರ ದಶಕದಲ್ಲಿ ತನ್ನ ಸಂಪಾದನೆಯಾದ 26 ಲಕ್ಷ ರೂಪಾಯಿಗಳನ್ನು ವಿನಿಯೋಗಿಸಿ, ಅನಾಥವಾಗಿದ್ದ ತ್ಯಾಗರಾಜ ಸಮಾಧಿಗೆ ದೇಗುಲ ಕಟ್ಟಿಸಿ, 20 ಎಕರೆ ಭೂಮಿಯನ್ನು ಧಾನ ಮಾಡಿ, ಕರ್ನಾಟಕ ಸಂಗೀತದಲ್ಲಿ ಅತಿ ದೊಡ್ಡ ಸಂಗೀತ ಉತ್ಸವವಾದ “ ತ್ಯಾಗರಾಜರ ಸಂಗೀತ ಆರಾಧನೆಗೆ ಸಾಂಸ್ಥಿಕ ರೂಪ ಕೊಟ್ಟ ಕನ್ನಡತಿ ಬೆಂಗಳೂರು ನಾಗರತ್ನಮ್ಮನವರ ದುಸ್ಥಿತಿಯನ್ನು ಈ ಕೆಳಗಿನ ಮಾತುಗಳಲ್ಲಿ ಈ ರೀತಿ ದಾಖಲಿಸಿದ್ದೆ.
“ದುರಂತವೆಂದರೆ, ಇಡೀ ತಿರುವಯ್ಯೂರು  ತ್ಯಾಗರಾಜಮಯವಾಗಿರುವ ದಿನಗಳಲ್ಲಿ ಯಾರಿಗೂ ಬೆಂಗಳೂರು  ನಾಗರತ್ನಮ್ಮನವರ ನೆನಪು ಬೇಡವಾಗಿದೆ.ತ್ಯಾಗರಾಜರ ಸಮಾಧಿ ಇರುವ ದೇಗುಲದಲ್ಲಿ ನಾಗರತ್ನಮ್ಮನವರ ಒಂದು ಚಿತ್ರ ಮತ್ತು ನಾಗರತ್ನಮ್ಮಾಳ್ ಟ್ರಸ್ಟ್ ಎಂಬ ಫಲಕ ಬಿಟ್ಟರೆ, ಬೇರೇನೂ ಮಾಹಿತಿಯಿಲ್ಲ. ನಾಯಿ ಗೂಡಿನಂತಿರುವ ನಾಗರತ್ನಮ್ಮನವರ ಪುಟ್ಟ ಗುಡಿಗೆ ಬೀಗ ಹಾಕಿ ಜಡಿಯಲಾಗಿದೆ. ಅವರ ಮೂರ್ತಿಗೆ ಉಡಿಸಿದ ಸೀರೆಗೆ ದೂಳು ಆವರಿಸಿಕೊಂಡಿದೆ. ಪ್ರತಿ ಎರಡು ಮೂರು ಗಂಟೆಗೆ ತ್ಯಾಗರಾಜರ ಮೂರ್ತಿಯ ಮೇಲಿನ ವಸ್ತ್ರವನ್ನು, ರುದ್ರಾಕ್ಷಿ ಹಾರವನ್ನು ತೆಗೆದು, ಗಂದ, ವಿಭೂತಿ ಹಚ್ಚಿ, ಹೊಸ ವಸ್ತ್ರ ತೊಡಿಸುವ ಮಂದಿಗೆ ನಾಗರತ್ನಮ್ಮ ನೆನಪಾಗುವುದಿಲ್ಲ. ಅಂದು ನಾಗರತ್ನಮ್ಮ ಮನಸ್ಸು ಮಾಡದಿದ್ದರೆ, ಇಂದು ತಿರುವಯ್ಯೂರಿನಲ್ಲಿ ತ್ಯಾಗರಾಜರೂ ಇರುತ್ತಿರಲಿಲ್ಲ, ತಿರುಪತಿ ತಿಮ್ಮಪ್ಪನೂ ಇರುತ್ತಿರಲಿಲ್ಲ. ವಾಸ್ತವವನ್ನು ಮರೆತಿರುವ ಇಂದಿನ ಜನಕ್ಕೆ ತ್ಯಾಗರಾಜರ ಆರಾಧನೆ ಒಬ್ಬ ದೇವದಾಸಿ ಹೆಣ್ಣು ಮಗಳಿಂದ ಆರಂಭವಾದ ಆರಾಧನೆ ಎಂದು ಹೇಳಿಕೊಳ್ಳುವುದು ಮುಜುಗರದ ಸಂಗತಿಯಾಗಿದೆ.”
                         (ನಾಗರತ್ನಮ್ಮನವರ ಸಮಾಧಿಯ ಮೇಲೆ ಕಟ್ಟಿಸಲಾಗಿರುವ ಪುಟ್ಟ ದೇಗುಲ)
                                         (ನಾಗರತ್ನಮ್ಮನವರ ದೇಗುಲಕ್ಕೆ ಹಾಕಿರುವ ಬೀಗಗಳು)

                                    (ಗುಡಿಯೊಳಗೆ ಅನಾಥವಾಗಿರುವ ನಾಗರತ್ನಮ್ಮನವರ ಮೂರ್ತಿ)

ಕಳೆದ ವಾರ ತಂಜಾವೂರು, ತಿರುವರೂರು ಹಾಗೂ ಕುಂಬಕೋಣಂ ಸುತ್ತ ಮುತ್ತಲಿನ 27 ದೇವಾಲಯಗಳಲ್ಲಿ ಆಚರಣೆಯಲ್ಲಿದ್ದ ಹಾಗೂ ಆಗಮ ಶಾಸ್ತ್ರದ ಹಿನ್ನಲೆಯಲ್ಲಿ ರೂಪುಗೊಂಡಿದ್ದ ಸಂಗೀತ, ನೃತ್ಯ ಮತ್ತು ಪೂಜೆಯ ವಿವರಗಳನ್ನು ದಾಖಲಿಸಿತ್ತಾ ಓಡಾಡುತ್ತಿದ್ದೆ. ಈ ವೇಳೆ ಮತ್ತೇ ತಿರುವಯ್ಯಾರಿಗೆ ಬೇಟಿ ನೀಡಿ, ನಾಗರತ್ನಮ್ಮನವರ ಸಮಾಧಿ ಅಥವಾ ಪುಟ್ಟ ಗುಡಿ, ಅದಕ್ಕೆ ಹಾಕಲಾಗಿರುವ ಬೀಗ, ದೂಳು ಹಿಡಿದ ಪ್ರತಿಮೆ ಇವುಗಳನ್ನು ಚಿತ್ರಿಸಿಕೊಂಡು ಬಂದೆ.
ನಾಗರತ್ನಮನ್ನವರ ಸಮಾಧಿಯ ಮುಂದೆ 


(ನಾಗರತ್ನಮ್ಮನವರು  ತಿರುವಯ್ನಿಯಾರಿನ ಕಾವೇರಿ ನದಿ ತೀರದಲ್ಲಿ ನಿರ್ಮಿಸಿದ ತ್ಯಾಗರಾಜರ ದೇವಸ್ಥಾನ)


ಕೊನೆಯ ಮಾತು- ನಾಗರತ್ನಮ್ಮನವರಿಗೆ ರೇಷ್ಮೆ ಸೀರೆ ಉಡಿಸಿ ಪೂಜೆ ಮಾಡಿರುವ ಚಿತ್ರ ಮೂರು ವರ್ಷದ ಹಿಂದಿನದು. ಈಗಲೂ ದೂಳು ಹಿಡಿದ ಸೀರೆ ಅವರ ಮೂರ್ತಿಯ ಮೇಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ