ಮಂಡ್ಯ ನಗರದಲ್ಲಿರುವ ಮೈಶುಗರ್ ಅಥವಾ ಮಂಡ್ಯ ಸಕ್ಕರೆ ಕಾರ್ಖಾನೆಗೆ ಭಾರತದಲ್ಲಿ ಒಂದು ವಿಶಿಷ್ಠ ಸ್ಥಾನ ಹಾಗೂ ಸುಧೀರ್ಘವಾದ ಇತಿಹಾಸವಿದೆ. 1924 ರಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಜಲಾಶಯ ಎಂಬ ಅಣೆಕಟ್ಟು ನಿರ್ಮಾಣವಾದ ನಂತರ ಮಳೆಯಾಶ್ರಿತ ಭೂಮಿಯಾಗಿದ್ದ ಮಂಡ್ಯ ಜಿಲ್ಲೆಯ ಬಹುತೇಕ ಪ್ರದೇಶಗಳು (ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲ್ಲೂಕುಗಳನ್ನು ಹೊರತು ಪಡಿಸಿ) ನೀರಾವರಿ ಪ್ರದೇಶಗಳಾಗಿ ಪರಿವರ್ತಗೊಂಡವು.
ಅಲ್ಲಿಯ ವರೆಗೆ ಮಂಡ್ಯ ದ ರೈತರು ಕೆರೆಯಾಶ್ರಿತ ಭೂಮಿಯಲ್ಲಿ ಮಾತ್ರ ಸೀಮಿತವಾಗಿ
ಕಬ್ಬನ್ನು ಬೆಳೆಯುತ್ತಿದ್ದರು ಮತ್ತು ಆಲೆಮನೆಗಳಲ್ಲಿ
ಎತ್ತಿನ ಗಾಣದಿಂದ ಕಬ್ಬಿನ ರಸ ತೆಗೆದು ಬೆಲ್ಲ ತಯಾರಿಸುತ್ತಿದ್ದರು. ಮಂಡ್ಯ ಜಿಲ್ಲೆಯ ಜನತೆಗೆ ಕಬ್ಬಿನ
ಬೆಳೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನ್ ಗೆ ಸಲ್ಲುತ್ತದೆ. ತಮಿಳುನಾಡಿನಿಂದ ಕಬ್ಬಿನ ತಳಿಯನ್ನು
ತಂದು ಪರಿಚಯಿಸಿದ್ದಲ್ಲದೆ, ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಎಂಬ ಗ್ರಾಮದ ಬಳಿ ಖಂಡಸಾರಿ ಸಕ್ಕರೆ
ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದ್ದನು ಸಕ್ಕರೆ ತಯಾರಿಸುವ ತಂತ್ರಜ್ಞಾನವನ್ನು ಟಿಪ್ಪು ಸುಲ್ತಾನ್
ಪ್ರಾನ್ಸ್ ನಿಂದ ಪಡೆದಿದ್ದನು.
1924 ರ ನಂತರ
ಮಂಡ್ಯ ಜಿಲ್ಲೆಯ ಕೃಷಿಯಲ್ಲಿ ಅನೇಕ ಬದಲಾವಣೆಗಳಾದವು, ಮಳೆಯಾಶ್ರಿತ ಭೂಮಿಯಲ್ಲಿ ರಾಗಿ, ನವಣೆ, ಆರ್ಕ,
ಜೋಳ, ಇತರೆ ದ್ವಿದಳ ದಾನ್ಯಗಳನ್ನು ಬೆಳೆಯುತ್ತಿದ್ದ ರೈತರು ಭತ್ತ ಮತ್ತು ವಾಣಿಜ್ಯ ಬೆಳೆಯಾದ ಕಬ್ಬು
ಬೆಳೆಯಲು ಆರಂಬಿಸಿದರು. ಇದಕ್ಕೆ ಕಾರಣ ಕೆನಡಾ ಮೂಲದ ಕೃಷಿತಜ್ಞ ಲೆಸ್ಲಿ ಕೋಲ್ ಮನ್ ಎಂಬ ಮಹಾತ್ಮ. ಭಾರತದಲ್ಲಿನ ಬ್ರಿಟೀಷ್ ಸರ್ಕಾರದಲ್ಲಿ ಕೃಷಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆನಡಾ ಮೂಲದ ಆಡಲ್ಪ್ ಲಾವಲಸ್
ಎಂಬುವನು ಭಾರತದಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಬಗ್ಗೆ ಹಾಗೂ ಇಲ್ಲಿನ ಬೆಳೆಗಳು
ಹಲವು ರೋಗ ಮತ್ತು ಕೀಟ ಬಾಧೆಯಿಂದ ನಶಿಸುತ್ತಿರುವ ಬಗ್ಗೆ ಅಧ್ಯಯನ ಮಾಡುತ್ತಿದ್ದಾಗ ಆತನ ಆಹ್ವಾನದ
ಮೇರೆಗೆ 1910 ಭಾರತಕ್ಕೆ ಬಂದ ಲೆಸ್ಲಿ ಕೋಲ್ ಮನ್
ರವರು 1913 ರಲ್ಲಿ ಮೈಸೂರು ಸಂಸ್ಥಾನದಲ್ಲಿ ಕೃಷಿ ವಿಜ್ಞಾನಿಯಾಗಿ
ಮತ್ತು ಕೀಟ ಶಾಸ್ತ್ರಜ್ಞನಾಗಿ ಕರ್ನಾಟಕದ ಕೃಷಿ ರಂಗದ
ಬೆಳೆವಣಿಯ ಕಾರಣ ಪುರುಷನಾದರು.
ಇವರ ಆಸಕ್ತಿ ಫಲವಾಗಿ
ಮಂಡ್ಯ ನಗರದಲ್ಲಿ ದೇಶದಲ್ಲಿ ಪ್ರಥಮ ಎನ್ನಬಹುದಾದ ಬ್ರಿಟೀಷ್ ಸರ್ಕಾರದ ಶೇರು ಬಂಡವಾಳದೊಂದಿಗೆ ಮೈಸೂರು ಸಕ್ಕರೆ ಕಾರ್ಖಾನೆ ಆರಂಭವಾಯಿತು. ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ
1925 ರಲ್ಲಿ ಕಾಫಿ ಬೆಳೆಯ ಸಂಶೋಧನಾ ಕೇಂದ್ರ ಆರಂಭವಾಯಿತು
ಮತ್ತು ಬೆಂಗಳೂರಿನ ಹೆಬ್ಬಾಳದಲ್ಲಿ ಸ್ಥಳಿಯವಾಗಿ ಕೃಷಿ ತಜ್ಞರನ್ನು ತಯಾರು ಮಾಡುವ ನಿಟ್ಟಿನಲ್ಲಿ 1946
ರಲ್ಲಿ ಕೋಲ್ ಮನ್ ಆರಂಭಿಸಿದ ಕೃಷಿ ತರಬೇತಿ ಕೇಂದ್ರವು
1964 ರಲ್ಲಿ ಕೃಷಿ ವಿಶ್ವ ವಿದ್ಯಾನಿಲಯವಾಗಿ ಪರಿವರ್ತನೆ ಹೊಂದಿತು. ಕನ್ನಡದ ನೆಲವನ್ನು ಹುಟ್ಟಿ
ಬೆಳೆದ ನೆಲದಂತೆ ಪ್ರೀತಿಸಿದ, ಇಲ್ಲಿನ ರೈತರ ಏಳಿಗೆಗೆ ಶ್ರಮಿಸಿದ ಕೋಲ್ ಮನ್ ರ
ಬದುಕು ಮತ್ತು ಅವರ ಸೇವೆಯ ಮಹತ್ವವನ್ನು ಇಂದಿನ ತಲೆಮಾರಿಗೆ ತಲುಪಿಸುವಲ್ಲಿ ನಾವು ವಿಫಲರಾಗಿದ್ದೀವಿ.
ಎಂಬತ್ತರ ದಶಕದಲ್ಲಿ ಮಂಡ್ಯದ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ಮತ್ತು ಮೈಷುಗರ್ ಹೈಸ್ಕೂಲಿನಲ್ಲಿ
ಹಾಗೂ ಹೆಬ್ಬಾಳದ ಕೃಷಿ ವಿಶ್ವ ವಿದ್ಯಾನಿಲಯದ ಉಪಕುಲತಿಗಳ ಕಛೇರಿಯಲ್ಲಿ ಲೆಸ್ಲಿ ಕೋಲ್ ಮನ್ ಭಾವಚಿತ್ರಗಳನ್ನು
ನಾನು ನೋಡಿದ್ದೆ. ಇದನ್ನು ಹೊರತು ಪಡಿಸಿದರೆ ಈ ಮಹಾತ್ಮನ ಹೆಸರಿನಲ್ಲಿ ಯಾವುದೇ ಸ್ಮಾರಕಗಳಿಲ್ಲ. ಕನಿಷ್ಠ
ಆತನ ಹೆಸರಿನಲ್ಲಿ ಒಂದು ಕೃಷಿ ಸಂಶೋಧನಾ ಕೇಂದ್ರವಿಲ್ಲ. ಇದು ನಮ್ಮ ಮಿದುಳು ಮತ್ತು ನೆನಪಿನ ಶಕ್ತಿಗೆ
ಗೆದ್ದಲು ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ.
ಕೆನಡಾದ ಟೊರೊಂಟೊ
ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನದ ವಿಷಯದಲ್ಲಿ 1904 ರಲ್ಲಿ ಪದವಿ ಪಡೆದು ಅಲ್ಲಿನ ಕಡಲ ತೀರಗಳ ಜೀವಕೋಶಗಳ
ಕುರಿತು ಅಧ್ಯಯನ ಮಾಡುತ್ತಾ ಕೀಟ ಶಾಸ್ತ್ರಜ್ಞನಾಗಿ ಪರಿಣಿತಿ ಹೊಂದಿದ್ದ ಕೋಲ್ ಮನ್ ಕರ್ನಾಟಕಕ್ಕೆ
ಬಂದ ನಂತರ ಇಲ್ಲಿ ಟಿಪ್ಪು ಸುಲ್ತಾನ್ ಪರಿಚಯಿಸಿದ್ದ
ರೇಷ್ಮೆ ಮತ್ತು ಕಬ್ಬಿನ ತಳಿಗಳ ಕುರಿತು ಗಂಭೀರವಾದ ಅಧ್ಯಯನಲ್ಲಿ ತೊಡಗಿಸಿಕೊಂಡಿದ್ದರು. ಚಿಕ್ಕಮಗಳೂರು ಪ್ರದೇಶದಲ್ಲಿ ಕಾಫಿ ಗಿಡಗಳ ಕೊಳೆರೋಗದ ಬಗ್ಗೆ
ಅಧ್ಯಯನ ಮಾಡಿ ಮೈಲುತುತ್ತ ಎಂದು ಕರೆಯಲಾಗುವ ಕಾಪರ್ ಸಲ್ಪೈಟ್ ಹಾಗೂ ಸುಣ್ಣವನ್ನು ನಿಗದಿತ ಪ್ರಮಾಣದಲ್ಲಿ ನೀರಿನಲ್ಲಿ
ಕಲೆಸಿದ ಈ ದ್ರಾವಣವನ್ನು ಕಾಫಿ ಗಿಡಗಳ ಕಾಂಡಕ್ಕೆ
ಸಿಂಪಡಿಸುವುದರ ಮೂಲಕ ರೋಗವನ್ನು ಹತೋಟಿಗೆ ಯಶಸ್ವಿಯಾದರು. ಸ್ಥಳಿಯರು ಬೋಡೊ ದ್ರಾವಣ ಎಂಬ ಹೆಸರಿನಿಂದ ಇದನ್ನು
ಕರೆಯುತ್ತಿದ್ದರು. 1970 ಮತ್ತು 80 ರ ದಶಕದಲ್ಲಿ ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ
ಪ್ರದೇಶದಲ್ಲಿ ಬೆಳೆಯುತ್ತಿದ್ದ ಕಪ್ಪು ದ್ರಾಕ್ಷಿ ಬೆಳೆಗೆ ರೈತರು ಈ ದ್ರಾವಣವನ್ನು ಸಿಂಪಡಿಸುತ್ತಿದ್ದರು.
ಕೋಲ್ ಮನ್ ಬಾಳೆ ಹೊನ್ನೂರಿನಲ್ಲಿ ಕಾಫಿ ಸಂಶೊಧನಾ ಕೇಂದ್ರವನ್ನು ತೆರೆದು ಸಹಾಯಕ ವಿಜ್ಞಾನಿಗಳನ್ನು
ಅಲ್ಲಿ ನೇಮಕ ಮಾಡಿದ್ದರು. ಹೆಚ್ಚು ಸಕ್ಕರೆಯ ಪ್ರಮಾಣವಿರುವ
ಕಬ್ಬಿನ ತಳಿಯ ಬಗ್ಗೆ ಅಧ್ಯಯನ ಮಾಡಿ ಜಾವಾ ದ್ವೀಪದಿಂದ ಕಬ್ಬಿನ ತಳಿಯನ್ನು ತರಿಸಿ ಅದನ್ನು ಮಂಡ್ಯ
ಜಿಲ್ಲೆಯ ರೈತರಿಗೆ ವಿತರಿಸಿದ ಕೀರ್ತಿ ಲೆಸ್ಲಿ ಕೋಲ್ ಮನ್ ಗೆ ಸಲ್ಲುತ್ತದೆ.
ಮಂಡ್ಯ ನಗರದಲ್ಲಿ
1933 ರಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಯೋಜನೆ ರೂಪಿಸಿದರು. ಮೈಸೂರು ಸಂಸ್ಥಾನದ ದೊರೆ ನಾಲ್ವಡಿ
ಕೃಷ್ಣ ರಾಜ ಒಡೆಯರ್ ಹಾಗೂ ಜಿಲ್ಲೆಯ ರೈತರು ಸಹಾಕಾರಿ
ತತ್ವದಲ್ಲಿ ಶೇರು ಬಂಡವಾಳ ಹೂಡುವುದು ಅದಕ್ಕೆ ಬ್ರಿಟೀಷ್ ಸರ್ಕಾರವು ಹೆಚ್ಚು ಪ್ರಮಾಣದಲ್ಲಿ ಬಂಡವಾಳ
ತೊಡಗಿಸುವುದು ಎಂದು ನಿರ್ಧಾರವಾಗಿತ್ತು. ಬ್ರಿಟೀಷ್ ಸರ್ಕಾರವು ತಾನು ಬಂಡವಾಳ ಹೂಡುವುದಕ್ಕೆ ಮುನ್ನ
ರೈತರಿಂದಲೂ ಸಹ ನಿರ್ಧಿಷ್ಟ ಪ್ರಮಾಣದಲ್ಲಿ ಬಂಡವಾಳ ಇರಬೇಕೆಂದು ಷರತ್ತು ವಿಧಿಸಿತು. ಈ ಸಂದರ್ಭದಲ್ಲಿ
ಬಡ ರೈತರಿಂದ ಶೇರು ಬಂಡವಾಳ ಸಂಗ್ರಹಿಸಲು ತೊಂದರೆಯಾದಾಗ ಕೋಲ್ ಮನ್ ರವರು ತಮ್ಮ ಇನ್ಸೂರೆನ್ಸ್ ಬಾಂಡ್ ಮತ್ತು ಬ್ಯಾಂಕಿನ ಠೇವಣಿ ಪತ್ರಗಳನ್ನು
ರೈತರ ಪರವಾಗಿ ಬ್ರಿಟೀಷ್ ಸರ್ಕಾರಕ್ಕೆ ಖಾತರಿಯಾಗಿ ನೀಡಡುವುದರ ಮೂಲಕ ಸಕ್ಕರೆ ಕಾರ್ಖಾನೆಯು 1934
ರ ಜನವರಿ 14 ರಂದು ಸಂಕ್ರಾಂತಿಯ ದಿನದಂದು ಪ್ರಾರಂಭವಾಗಲು ಕಾರಣನಾದರು. ಇಷ್ಟು ಮಾತ್ರವಲ್ಲದೆ ರೈತರ ಜೊತೆ ಒಪ್ಪಂಧ ಮಾಡಿಕೊಂಡು ಅವರಿಗೆ
ಸರ್ಕಾರದಿಂದ ಸಾಲವನ್ನು ನೀಡುವುದು ಇದಕ್ಕೆ ಪರ್ಯಾಯವಾಗಿ ರೈತರು ಕಬ್ಬು ಬೆಳೆದು ಕಾರ್ಖಾನೆಗೆ ಪೂರೈಸುವುದು, ವ್ಯವಸ್ಥೆಯನ್ನು
ಜಾರಿಗೆ ತಂದರು. ಕಬ್ಬಿನ ಬೇಸಾಯಕ್ಕೆ ನೀಡಿದ ಹಣದಲ್ಲಿ
ಪ್ರತಿ ವರ್ಷ ಶೇಕಡ 25 ರಿಂದ 30 ರಷ್ಟು ಪಾಲನ್ನು ಸಾಲದ ಹಣಕ್ಕೆ ಜಮಾ ಮಾಡಿಕೊಳ್ಳುವ ವ್ಯವಸ್ಥೆ ಮಾಡಿದ್ದರು
ಜೊತೆಗೆ ರೈತರಿಂದ ಶೇರುಗಳನ್ನು ಸಂಗ್ರಹಿಸಿದರು.
ರೈತರು ಎತ್ತಿನ
ಗಾಡಿಯಲ್ಲಿ ಕಾರ್ಖಾನೆಗೆ ಕಬ್ಬು ತಂದಾಗ ಸರತಿ ಸಾಲಿನಲ್ಲಿ ಕಾಯುವುದು ಬೇಡ ಎಂದು ನಿರ್ಧರಿಸಿದ ಕೋಲ್ ಮನ್ ಮಂಡ್ಯ ಸುತ್ತ ಮುತ್ತಾ ಎಂಟತ್ತು
ಕಿಲೊಮೀಟರ್ ದೂರದಲ್ಲಿ ವೈ ಬ್ರಿಡ್ಜ್ ಎಂಬ ತೂಕದ ಯಂತ್ರಗಳನ್ನು ಸ್ಥಾಪಿಸಿ ರೈತರು ಅಲ್ಲಿ ತೂಕ ಮಾಡಿಸಿದ ಕಬ್ಬನ್ನು ನೇರವಾಗಿ ಕಾರ್ಖಾನೆ
ಸರಬರಾಜು ಮಾಡುವ ವ್ಯವಸ್ಥೆ ಮಾಡಿಸಿದ್ದರು. ವೈ ಬ್ರಿಡ್ಜ್ ಕೇಂದ್ರದ ಬಳಿ ರೈತರು ಕಬ್ಬಿನ ಗಾಡಿಗಳನ್ನು
ನಿಲ್ಲಸಿ ತಂಗುವುದಕ್ಕೆ ವಿಶಾಲವಾದ ಉದ್ದನೆಯ ಸಭಾಂಗಣ,
ಹಾಗೂ ದನಗಳಿಗೆ ಶ್ರಾಂತಿ ಪಡೆಯಲು ಚಪ್ಪರ ಮತ್ತು ಕುಡಿಯಲು ನೀರಿನ ವ್ಯವಸ್ಥೆ ಮಾಡಿಸಿದ್ದಲೆಸ್ಲಿ ಕೋಲ್
ಮಾನ್ ಹುಟ್ಟಿನಿಂದ ವಿದೇಶಿಯನಾಗಿದ್ದರೂಸಹ ಬದುಕಿನಲ್ಲಿ ಈ ನೆಲದ ಅಪ್ಪಟ ಮಣ್ಣಿನ ಮಗನಾಗಿದ್ದರು. ಮಂಡ್ಯದಿಂದ
ಆರು ಕಿಲೊಮೀಟರ್ ದೂರವಿರುವ ಶಿವಳ್ಳಿ ಎಂಬ ಗ್ರಾಮದ ಬಳಿ ಕಬ್ಬು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿದ್ದರು.
ಈಗ ಈ ಕೇಂದ್ರವು ಬೆಂಗಳೂರು ಕೃಷಿ ವಿ.ವಿ.ಯ ಅಧೀನದಲ್ಲಿದ್ದು ರಾಗಿ ಮತ್ತು ಭತ್ತದ ತಳಿಗಳ ಅಧ್ಯಯನ
ನಡೆಯುತ್ತಿದೆ. ರಾಗಿ ಲಕ್ಷ್ಮಣಯ್ಯ ಎಂಬ ಮಹಾತ್ಮ ಇದೇ ಕೇಂದ್ರದಲ್ಲಿ ಇಂಡಾಪ್ ರಾಗಿ ತಳಿಗಳ ಕುರಿತು
ಅಧ್ಯಯನ ಮಾಡಿ ಅವುಗಳನ್ನು ಕರ್ನಾಟಕಕ್ಕೆ ಪರಿಚಯಿಸಿದರು.
1925 ರಲ್ಲಿ ಅನಾರೋಗ್ಯದ
ನಿಮಿತ್ತ ಕೆನಡಾಕ್ಕೆ ಹೋಗಿ ಅಲ್ಲಿನ ಟೊರೊಂಟೊ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಕೋಲ್
ಮನ್ ಮತ್ತೇ 1928 ರಲ್ಲಿ ಕರ್ನಾಟಕಕ್ಕೆ ವಾಪಸ್ ಬಂದರು. 1918 ರ ಮೇ ತಿಂಗಳಲ್ಲಿ ಅವರ ಪತ್ನಿ ಮೇರಿ
ಮ್ಯಾಕ್ ಡೊನಾಲ್ಡ್ ಮಧುಮೇಹ ಕಾಯಿಲೆಯಿಂದ ತೀರಿ ಹೋದಾಗ ಆ ಸಂದರ್ಭದಲ್ಲಿ ಬಿಳಿಗಿರಿ ರಂಗನ ಬೆಟ್ಟದಲ್ಲಿ ತಂಗಿದ್ದ ಅವರು ಪತ್ನಿಯನ್ನು
ಅಲ್ಲಿಯೇ ಮಣ್ಣು ಮಾಡಿದರು. ಈಗ ಖಾಸಾಗಿ ವ್ಯಕ್ತಿಯೊಬ್ಬರ ಕಾಫಿ ತೋಟದಲ್ಲಿ ಅವರ ಸಮಾಧಿಯನ್ನು ನಾವು
ಕಾಣಬಹುದು. ನಿವೃತ್ತಿಯ ನಂತರ ಕೆನಡಾ ದೇಶಕ್ಕೆ ಮರಳಿದ ಅವರು 1953 ರಲ್ಲಿ ಮತ್ತೇ ತಾವು ಸೇವೆ ಸಲ್ಲಿಸಿದ
ಕರ್ನಾಟಕವನ್ನು ನೋಡಲು ಬಂದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು
ಕೋಲ್ ಮನ್ ಅವರನ್ನು ಸರ್ಕಾರದ ಗಣ್ಯ ಅತಿಥಿ ಎಂದು ಪರಿಗಣಿಸಿ ಇಡೀ ಕರ್ನಾಟಕವನ್ನು ಸುತ್ತಾಡಲು ವ್ಯವಸ್ಥೆ
ಮಾಡಿದ್ದರು. 1954 ರಲ್ಲಿ ಅವರು ಕೆನಡಾದ ರಾಜಧಾನಿ ಟೊರೊಂಟಾ ನಗರದಲ್ಲಿ ನಡೆದ ಕಾರು ಅಪಘಾತದಲ್ಲಿ
ಅವರು ನಿಧನರಾದರು.
ಕೋಲ್ ಮನ್ ನಿಧನಾನಂತರವೂ
ಅವರ ಕರ್ನಾಟಕದ ಸಂಬಂಧ ಮುಗಿದಿರಲಿಲ್ಲ. 2013 ರಲ್ಲಿ 70 ವರ್ಷದ ಅವರ ಪುತ್ರಿ ಭೇಟಿ ನೀಡಿ ತಂದೆಯ
ಸೇವೆಯಿಂದ ಕರ್ನಾಟಕದ ಕೃಷಿಯಲ್ಲಿ ಆಗಿರುವ ಬೆಳವಣಿಗೆಯನ್ನು ನೋಡಿ ಭಾವುಕರಾದರು. ಮಂಡ್ಯ ಸಕ್ಕರೆ ಕಾರ್ಖಾನೆ
ಮತ್ತು ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿದ್ದ ಅವರು ಹಿಂದೂ ಇಂಗ್ಲೀಷ್ ದಿನಪತ್ರಿಕೆಗೆ ಸಂದರ್ಶನ
ನೀಡಿದ್ದರು. ಭೂಮಿಕಾ ಎಂಬುವರು ಮಾಡಿದ್ದ ಸಂದರ್ಶನದಲ್ಲಿ ಅವರ ತಂದೆ ಕೋಲ್ ಮನ್ ಗೆ ಕರ್ನಾಟಕದ ಜನತೆಯ
ಬಗ್ಗೆ ಇದ್ದ ಭಾವನಾತ್ಮಕ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು.
ಯಾರೋ ರಾಜಕಾರಣಿಗಳನ್ನು
ಮಹಾತ್ಮರೆಂದು ಬಣ್ಣಿಸಿ ಅವರ ಹೆಸರಿನಲ್ಲಿ ಭವನ, ಪ್ರತಿಮೆ ಸ್ಥಾಪಿಸುವ ಇಂದಿನ ಸಮಾಜಕ್ಕೆ ಇಂತಹ ಮಹನೀಯರನ್ನು
ಮರು ಪರಿಚಯಿಸುವ ಅಗತ್ಯವಿದೆ.
ಡಾ.ಎನ್.ಜಗದೀಶ್ ಕೊಪ್ಪ
ನಂ313, ಹೆಚ್.ಐ.ಜಿ. ಇ.ಬ್ಲಾಕ್.
ಮೂರನೇ ಹಂತ, ವಿಜಯನಗರ
ಮೈಸೂರು-570039
ಚಿತ್ರ- ಒಂದು ಲೆಸ್ಲಿ
ಕೋಲ್ ಮನ್
ಚಿತ್ರ- ಎರಡು ಪತ್ನಿಯ
ಸಮಾಧಿ
ಚಿತ್ರ -ಮೂರು- 1928 ರಲ್ಲಿ ಮೈಸೂರು ಸಂಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ
ಕೃಷಿ ವಿಜ್ಞಾನಿಗಳು. ನಿಂತಿರುವವರ ಸಾಲಿನಲ್ಲಿ ಹ್ಯಾಟ್ ಧರಿಸಿರುವವರು ಲೆಸ್ಲಿ ಕೋಲ್ ಮನ್