ಶನಿವಾರ, ಮಾರ್ಚ್ 30, 2024

ಕೊಲ್ಕತ್ತ ನಗರದ ಪುಸ್ತಕ ಲೋಕ

 


ಭಾರತದ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ಕೊಲ್ಕತ್ತಾ ನಗರವು ಸಹ ಒಂದು ಕಾಲದಲ್ಲಿ ಅತ್ಯಂತ ಜನಸಂದಣಿಯ ನಗರವೆಂದು ಹೆಸರುವಾಸಿಯಾಗಿತ್ತು. ಭಾರತವು ಜಾಗತೀರಣಕ್ಕೆ  ತೆರೆದುಕೊಂಡ ನಂತರ ಮಾಹಿತಿ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದಾಗಿ ದೆಹಲಿ, ಬೆಂಗಳೂರು, ಪುಣೆ ನಗರಗಳು ಜನಸಂಖ್ಯೆಯ ಬೆಳವಣಿಗೆ ದರದಲ್ಲಿ ಕೊಲ್ಕತ್ತವನ್ನು ಹಿಂದಿಕ್ಕಿ ನೆಲದ ಮೇಲಿನ ನರಕದಂತಹ ನಗರಗಳು ಎಂಬ ಕುಖ್ಯಾತಿಯನ್ನು ಪಡೆದವು. ಕೊಲ್ಕತ್ತ ನಗರವು ಜನಸಂದಣಿಯ ನಗರವಾಗಿದ್ದರೂ ಸಹ ತನ್ನ ಒಡಲಲ್ಲಿ ಅನೇಕ ಇತಿಹಾಸದ ಕುರುಹುಗಳನ್ನು ಹುದುಗಿಸಿಕೊಂಡು ಇಂದಿಗೂ ಸಹ ಸಾಂಸ್ಕೃತಿಕವಾಗಿ ಜೀವಂತವಾಗಿದೆ. ಸಂಗೀತ, ನೃತ್ಯ, ಕಲೆ, ಸಿನಿಮಾ, ನಾಟಕ, ವಿಜ್ಞಾನ ಕ್ಷೇತ್ರಗಳಲ್ಲಿ ಭಾರತಕ್ಕೆ ಕೊಲ್ಕತ್ತ ನಗರವು ನೀಡಿರುವ ಕೊಡುಗೆ ಅಪಾರವಾದುದು.

ಭಾರತಕ್ಕೆ ಕಾಲಿಟ್ಟ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯು 1912 ರವರೆಗೆ ತನ್ನ ಕೇಂದ್ರ ಕಚೇರಿಯನ್ನು ದೆಹಲಿಗೆ ವರ್ಗಾಯಿಸುವರೆಗೂ ಕೊಲ್ಕತ್ತ ನಗರವು ಬ್ರಿಟೀಷರ ರಾಜಧಾನಿಯಾಗಿತ್ತು. ಕಾರಣದಿಂದಾಗಿ ಪಶ್ಚಿಮ ಬಂಗಾಳದ ಜನತೆ ಹಾಗೂ ಕೊಲ್ಲತ್ತ ನಗರದ ಸುಸಂಸ್ಕೃತರು ಭಾರತದಲ್ಲಿ ಪ್ರಥಮ ಬಾರಿಗೆ ಪಾಶ್ಚಿಮಾತ್ಯ ಜಗತ್ತಿನ ಚಿಂತನೆಗಳಿಗೆ ಮತ್ತು ಇಂಗ್ಲೀಷ್ ಭಾಷೆಗೆ ತೆರೆದುಕೊಳ್ಳಲು ಸಾಧ್ಯವಾಯಿತು. ರಾಜಾರಾಂ ಮೋಹನರಾಯ್ ಅವರಿಂದ ಹಿಡಿದು ಸುಭಾಷ್ ಚಂದ್ರಬೋಸ್, ರವೀಂದ್ರನಾಥ ಟ್ಯಾಗೂರ್, ವಿಜ್ಞಾನಿ ಜಗದೀಶ್ ಚಂದ್ರಬೋಸ್, ಸತ್ಯಜಿತ್ ರಾಯ್, ಅಮಾರ್ಥ್ಯ ಸೇನ್ ಹೀಗೆ ಹಲವಾರು ಪ್ರತಿಭಾವಂತ ಮಹನೀಯರು ಹೊಸ ಆಧುನಿಕ ಜಗತ್ತಿನ ಚಿಂತನೆಗಳಿಗೆ, ಕಲೆ, ಸಾಹಿತ್ಯ ಮತ್ತು ವಿಜ್ಞಾನದ ಕ್ಷೇತ್ರಗಳಿಗೆ ಮಹತ್ವ ಕೊಡುಗೆಗಳನ್ನು ನೀಡಲು ಸಾಧ್ಯವಾಯಿತು.

ಕೊಲ್ಕತ್ತ ನಗರದಲ್ಲಿ ನಾವು ನೋಡಬಹುದಾದ ಅನೇಕ ಪ್ರಮುಖ ಸ್ಥಳಗಳಿವೆ.  ರಾಮಕೃಷ್ಣ ಆಶ್ರಮ, ಸ್ವಾಮಿ ವಿವೇಕಾನಂದರು ಜನಿಸಿದ ನಿವಾಸ,  ಕಾಳಿಘಾಟ್ ಬಳಿ ಇರುವ ಕಾಳಿ ದೇವಾಲಯ,  ಅದರ ಪಕ್ಕದಲ್ಲಿರುವ ಮದರ್ ಥೆರೆಸಾ ಅವರ ಅನಾಥರ ಆಶ್ರಮವಾದ ಕಾಳಿಘಾಟ್ ನಿರಾಶ್ರಿತರ ತಾಣ, ಮೈಸೂರು ಗಾರ್ಡನ್ ( 1894ರಲ್ಲಿ ಕೊಲ್ಕತ್ತ ನಗರದಲ್ಲಿ ನಿಧನ ಹೊಂದಿದ ಮೈಸೂರಿನ ದೊರೆ ಹತ್ತನೇ ಚಾಮರಾಜ ಒಡೆಯರ್ ಅವರ ಸಮಾಧಿ ಸ್ಥಳ) ಟಿಪ್ಪು ಮಸೀದಿ, ವಿಲಿಯಂ ಪೋರ್ಟ್, ವಿಕ್ಟೋರಿಯಾ ಸ್ಮಾರಕ ಭವನ, ಏಷ್ಯಾಟಿಕ್ ಸೊಸೈಟಿಯ ಲೈಬ್ರರಿ  ಹೀಗೆ ಅನೇಕ ಸ್ಥಳಗಳನ್ನು ಹೆಸರಿಸಬಹುದು. ಇವುಗಳ ಜೊತೆಗೆ ಪುಸ್ತಕ ಪ್ರೇಮಿಗಳ ಪಾಲಿಗೆ ಪುಣ್ಯ ಕ್ಷೇತ್ರವಾಗಿರುವ ಹಾಗೂ ಸ್ಥಳಿಯ ಭಾಷೆಯಲ್ಲಿ ಬೊಯಿ ಪಾರ ಅಂದರೆ, ಪುಸ್ತಕಗಳ ನಗರ ಅಥವಾ ಕಾಲೋನಿ ಎಂದು ಕರೆಸಿಕೊಳ್ಳುವ  ಕಾಲೇಜ್ ಸ್ಟಿçÃಟ್ ಎನ್ನುವ ಪ್ರದೇಶಕ್ಕೆ ಎರಡು ಶತಮಾನಗಳ ಭವ್ಯ ಇತಿಹಾಸವಿದೆ.  ಪ್ರೆಸಿಡೆನ್ಸಿ  ಕಾಲೇಜ್ ಕೊಲ್ಕತ್ತ ಮೆಡಿಕಲ್ ಕಾಲೇಜ್, ಕೊಲ್ಕತ್ತ ವಿಶ್ವವಿದ್ಯಾನಿಲಯಕ್ಕೆ  ಹೊಂದಿಕೊಂಡಮತೆ ಇರುವ ಪುಸ್ತಕ ಅಂಗಡಿಗಳ ರಸ್ತೆಯು  ಇಡೀ ಏಷ್ಯಾ ಖಂಡದ ಅತ್ಯಂತ ದೊಡ್ಡ ಪುಸ್ತಕಗಳ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.   ಕಾಲೇಜ್ ರಸ್ತೆಯಲ್ಲಿನ ಅಂಗಡಿಗಳಲ್ಲಿ ನಾವು ಜಗತ್ತಿನಲ್ಲಿ ಪ್ರಕಟವಾಗಿರುವ ಬಹುತೇಕ ಇಂಗ್ಲೀಷ್ ಕೃತಿಗಳನ್ನು ಮತ್ತು ಬಂಗಾಳಿ ಭಾಷೆಯ ಎಲ್ಲಾ ಪ್ರಕಾರದ ಕೃತಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.


ಎಡಗೈಯಲ್ಲಿ ಉರಿಯುತ್ತಿರುವ ಸಿಗರೇಟ್, ಬಲಗೈಯಲ್ಲಿ ಮಣ್ಣಿನ ಬಟ್ಟಲಲ್ಲಿ ಹಾಕಿಕೊಟ್ಟ ಖಡಕ್ ಚಹಾವನ್ನು ಹೀರುತ್ತಾ ಗಂಭೀರವಾಗಿ ಸಾಹಿತ್ಯದ ಚರ್ಚೆಯಲ್ಲಿ ತೊಡಗಿಸಿಕೊಂಡು ನಿಂತಿರುವ ಅಥವಾ ಕುಳಿತಿರುವ  ಲೇಖಕರು, ಕಲಾವಿದರನ್ನು ನಾವು ನೋಡಬಹುದಾಗಿದೆ. ಇವರ  ನಡುವೆ  ಐಸ್ ಕ್ರೀಮ್ ತಿನ್ನುತ್ತಾ ಇಲ್ಲವೆ, ಹಣ್ಣಿನ ರಸ ಹೀರುತ್ತಾ ತಮಗೆ ಬೇಕಾದ ವಿಜ್ಞಾನ, ಕಲೆ ಅಥವಾ ಸಾಹಿತ್ಯದ ಕೃತಿಗಳನ್ನು ಅರೆಸುತ್ತಾ ಓಡಾಡುವ ವಿದ್ಯಾರ್ಥಿಗಳನ್ನು ಸಹ ಕಾಣಬಹುದು. ಸದಾ ತುಂಬಿ ತುಳುಕುವ ಕಾಲೇಜ್ ರಸ್ತೆಯಲ್ಲಿ ಬಹುತೇಕ ಕೃತಿಗಳು ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತವೆ. ಸೆಕೆಂಡ್ ಹ್ಯಾಂಡ್ ಬುಕ್ಸ್ ಶಾಪ್  ಎಂದು ಕರೆಸಿಕೊಳ್ಳುವ ಅಂಗಡಿಗಳಿಗೆ  ಓದುಗರು ತಾವು ಓದಿ ಮುಗಿಸಿದ ಪುಸ್ತಕಗಳನ್ನು ಮರು ಮಾರಾಟ ಮಾಡಿರುವ ಪುಸ್ತಕಗಳು ದೇಶದ ಇತರೆ ಪ್ರದೇಶಗಳಿಂದ ಇಲ್ಲಿಗೆ ತಲುಪುವ ಕಾರಣ ಬಹುತೇಕ ಮಳಿಗೆಗಳಲ್ಲಿ ಪುಸ್ತಕಗಳು ಅರ್ಧ ಬೆಲೆಗೆ ದೊರೆಯುತ್ತವೆ. ಇಲ್ಲಿನ ಪುಸ್ತಕ ಅಂಗಡಿಗಳ ವಿಶೇಷವೆಂದರೆ, ಒಬ್ಬ ಮಾರಾಟಗಾರ ಎಲ್ಲಾ ರೀತಿಯ ಪುಸ್ತಕಗಳನ್ನು ತನ್ನ ಮಳಿಗೆಯಲ್ಲಿ ಮಾರಾಟ ಮಾಡುವುದಿಲ್ಲ. ಒಂದೊಂದು ಅಂಗಡಿಯೂ ಒಂದೊಂದು ಬಗೆಯ ಪುಸ್ತಕ ಮಾರಾಟಕ್ಕೆ ಪ್ರಸಿದ್ಧವಾಗಿದೆ. ಬಂಗಾಳಿ ಭಾಷೆಯ  ಕಾದಂಬರಿ, ಕಥೆ, ಕಾವ್ಯ ಮತ್ತು ವೈಚಾರಿಕಕೆ ಮತ್ತು  ವಿಜ್ಞಾನ, ತಂತ್ರಜ್ಞಾನ ಹಾಗೂ  ಇತಿಹಾಸಕ್ಕೆ ಪ್ರತ್ಯೇಕ ಅಂಗಡಿಗಳು ಇರುವ ಹಾಗೆ ಇಂಗ್ಲೀಷ್ ಸಾಹಿತ್ಯದ ಷೇಕ್ಸ್ ಪಿಯರ್ ಕೃತಿಗಳಿಗೆ ಪ್ರತ್ಯೇಕ ಅಂಗಡಿಗಳಿವೆ. ಅದೇ ರೀತಿ ಬರ್ನಾಡ್ ಷಾ, ಎಲಿಯಟ್, ವಡ್ಸ್ ವರ್ತ್, ಬ್ರೆಕ್ಟ್ ಇವರುಗಳ ಕೃತಿಗಳಿಗೂ ಸಹ ಪ್ರತ್ಯೇಕ ಮಳಿಗೆಗಳಿವೆ.

ಕಾಲೇಜ್ ಸ್ಟೀಟ್ ಎಂದು ಕರೆಸಿಕೊಳ್ಳುವ ಪುಸ್ತಕ ಅಂಗಡಿಗಳ ರಸ್ತೆಗೆ ಎರಡು ಶತಮಾನಗಳ ಇತಿಹಾಸವಿದೆ. 1817 ಜನವರಿ ತಿಂಗಳಿನಲ್ಲಿ ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಕೊಲ್ಕತ್ತದ ಅಧಿಕಾರಿ ಡೆವಿಡ್ ಹೇರ್ ಎಂಬಾತನು ಸ್ಥಳೀಯ ಹಿಂದೂಗಳಿಗೆ ಇಂಗ್ಲೀಷ್ ಭಾಷೆಯ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಹಿಂದೂ ಕಾಲೇಜ್ ಅನ್ನು ಸ್ಥಾಪಿಸಿದನು. ನಂತರ ಸಂಸ್ಥೆ ಪ್ರೆಸಿಡೆನ್ಸಿ ಕಾಲೇಜ್ ಆಗಿ ಈಗ ವಿಶ್ವ ವಿದ್ಯಾನಿಲಯವಾಗಿ ಪರಿವರ್ತನೆಗೊಂಡಿದೆ.  ಕೊಲ್ಕತ್ತ ನಗರದಲ್ಲಿದ್ದ  ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರ ಮತ್ತು ಲೆಕ್ಕ ಪತ್ರಗಳನ್ನು ನೋಡಿಕೊಳ್ಳಲು ಸ್ಥಳಿಯವಾಗಿ ಇಂಗ್ಲೀಷ್ ಬಲ್ಲ ವ್ಯಕ್ತಿಗಳು ಇಲ್ಲದಿರುವ ಕಾರಣದಿಂದಾಗಿ  ಇಂಗ್ಲೇಂಡಿನಿಂದ ಗುಮಾಸ್ತರನ್ನು  ಭಾರತಕ್ಕೆ ಕರೆ ತರಲಾಗುತ್ತಿತ್ತು. ಅವರ ಆಡಳಿತ ಕಚೇರಿ ಮತ್ತು ವಸತಿ ನಿಲಯದ ಸಂಕೀರ್ಣವನ್ನು ಕಾಲದಲ್ಲಿ ರೈರ‍್ಸ್ ಬಿಲ್ಡಿಂಗ್ ಎಂದು ಕರೆಯಲಾಗುತ್ತಿತ್ತು. ಈಗ ಐತಿಹಾಸಿಕ ಭವನವು ಪಶ್ಚಿಮ ಬಂಗಾಳದ ವಿಧಾನಸಭೆಯ ಮುಖ್ಯ ಕಚೇರಿಯಾಗಿದ್ದು ಅದೇ ಹೆಸರಿನಿಂದ ಕರೆಯಲ್ಪಡುತ್ತಿದೆ. ಸ್ಥಳಿಯ ಭಾಷೆ, ಸಂಸ್ಕೃತಿ ಮತ್ತು ಕಾನೂನು ಅರಿತುಕೊಳ್ಳಲು  ಬ್ರಿಟೀಷರಿಗೆ ದುಭಾಷಿಗಳ ಕೊರತೆ ಕಾಡುತ್ತಿತ್ತು. ಕೊಲ್ಕತ್ತ ಮತ್ತು ಮದ್ರಾಸ್ ನಗರದಲ್ಲಿ ಇದ್ದ ಬೆರಳಿಕೆಯಷ್ಟು ಬ್ರಾಹ್ಮಣ ವಿದ್ಯಾವಂತರನ್ನು ಬ್ರಿಟೀಷರು ಆಶ್ರಯಿಸಿದ್ದರು. ದುಭಾಷಿಗಳ ಕೊರತೆಯನ್ನು ನೀಗಿಸಲು ಅವರು ಸ್ಥಳಿಯರಿಗೆ ಇಂಗ್ಲೀಷನಲ್ಲಿ ಶಿಕ್ಷಣ ನೀಡಲು ನಿರ್ಧರಿಸಿ ಇಪ್ಪತ್ತು ಮಂದಿ ವಿದ್ವಾಂಸರ ನೇತೃತ್ವದಲ್ಲಿ ಹಿಂದೂ ಕಾಲೇಜ್ ಹೆಸರಿನಲ್ಲಿ ಪ್ರಥಮ ಬಾರಿಗೆ ಆರಂಬಿಸಿದರು. ನಂತರ ಅಂದಿನ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯು ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟ ವೈದ್ಯಕೀಯ ಕಾಲೇಜು, ಪ್ರೆಸಿಡೆನ್ಸಿ ಕಾಲೇಜುಗಳುಗಳಿಗೆ ಹೊಂದಿಕೊಳ್ಳುವAತೆ ಕಾಲೇಜ್ ರಸ್ತೆಯನ್ನು ನಿರ್ಮಾಣ ಮಾಡಿದನು. ಅದಕ್ಕೂ ಮೊದಲು ಗ್ರೇಟ್ ಅರ್ಟಿರಿಯಲ್ ರೋಡ್ ಎಂದು ಕರೆಸಿಕೊಳ್ಳುತ್ತಿದ್ದ ರಸ್ತೆಯು ವಿಸ್ತೀರ್ಣಗೊಂಡ ನಂತರ ಕಾಲೇಜ್ ಸ್ಟಿçÃಟ್ ಎಂದು ಹೆಸರಾಯಿತು.

 ಕೊಲ್ಕತ್ತ ನಗರದ ಕಾಲೇಜ್ ಸ್ಟಿçÃಟ್ ನಲ್ಲಿ ಇರುವ ಕಾಫಿ ಹೌಸ್ ಗೂ ಸಹ ಭವ್ಯವಾದ ಇತಿಹಾಸವಿದೆ. ಇದು ೧೮೭೬ ರಿಂದ ಇಂದಿನವರೆಗೂ ಸಾಹಿತಿಗಳು ಮತ್ತು ಕಲಾವಿದರ ಅಡ್ಡೆಯಾಗಿದೆ. ಮೊದಲ ಮಹಡಿಯಲ್ಲಿ ಇರುವ ವಿಶಾಲವಾದ ಹಾಲ್ ನಲ್ಲಿ ಕಾಫಿಯ ಜೊತೆಗೆ ಹೊಸದಾಗಿ ಬಿಡುಗಡೆಯಾದ ಕೃತಿಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದರೆ, ಎರಡನೇ ಮಹಡಿಯಲ್ಲಿ ಕಿಟಕಿಯ ಬಳಿ ಕೂತು ಸಂಗೀತ ಮತ್ತು ಇತರೆ ವಿಷಯಗಳ ಕುರಿತು ಗಂಭೀರ ಚರ್ಚೆಯಲ್ಲಿ ತೊಡಗಿರುವ ಕಲಾವಿದರು, ಸಿನಿಮಾ ಮತ್ತು ನಾಟಕಗಳ ನಿರ್ದೇಶಕರನ್ನು ನಾವು ನೋಡಬಹುದಾಗಿದೆ. ಕಾರಣದಿಂದಾಗಿ  ಕಾಲೇಜ್ ರಸ್ತೆ ಮತ್ತು ಕಾಫಿ ಹೌಸ್ ಕಟ್ಟಡ ಕೊಲ್ಕತ್ತ ನಗರದ ಹೆಗ್ಗುರುತುಗಳಾಗಿವೆ. 1876 ರಲ್ಲಿ ಬ್ರಿಟೀಷರಿಂದ ಆಲ್ಬರ್ಟ್ ಹಾಲ್ ಎಂದು ಕರೆಸಿಕೊಳ್ಳುತ್ತಿದ್ದ ಕಟ್ಟಡದಲ್ಲಿ  1942 ರಲ್ಲಿ ಇಂಡಿಯನ್ ಕಾಫಿ ಬೋರ್ಡ್ ಸ್ಥಾಪನೆಯಾದ ನಂತರ ಕಾಫಿ ಹೌಸ್ ಎಂದು  ಬದಲಾಯಿತು. 1958 ರಲ್ಲಿ ಅಲ್ಪ ಕಾಲ ಸ್ಥಗಿತಗೊಂಡಿದ್ದ ಕಟ್ಟಡದಲ್ಲಿ ತಮ್ಮಗಳ ವಿಚಾರಮಂಥನಕ್ಕೆ ಅನುಕೂಲವಾಗಲೆಂದು ಪ್ರೆಸಿಡೆನ್ಸಿ ಕಾಲೇಜು ಮತ್ತು ಮೆಡಿಕಲ್ ಕಾಲೇಜು ಮತ್ತು ಕೊಲ್ಕತ್ತ ವಿ.ವಿ.  ಪ್ರೊಫೆಸರ್ ಗಳು ಮತ್ತೇ ಕಾಫಿ ಹೌಸ್ ಚಾಲನೆಯಾಗುವಂತೆ ಒತ್ತು ನೀಡಿದರು. ಇದು ಖ್ಯಾತ ಸಿನಿಮಾ ನಿದೇಶಕರಾದ ಸತ್ಯಜಿತ್ ರಾಯ್, ಋತ್ವಿಕ್ ಘಟಕ್, ನಟಿ ಅರ್ಪಣಾ ಸೇನ್, ಗಾಯಕ ಮನ್ನಾಡೆ ಮುಂತಾದವರ ಚರ್ಚೆಯ ತಾಣವಾಗಿತ್ತು. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತçಜ್ಞರಾದ ಅಮಾರ್ಥ್ಯ ಸೇನ್ ಅವರು ತಮ್ಮ ಆತ್ಮಕಥೆಯಲ್ಲಿ ಕಾಫಿ ಹೌಸ್ ಕಟ್ಟಡವನ್ನು ಅತ್ಯಂತ ಪ್ರೀತಿಯಿಂದ ಸ್ಮರಿಸಿಕೊಂಡಿದ್ದಾರೆ.



ಅಮಾರ್ಥ್ಯ ಸೇನ್ ಅವರು 1950 ದಶಕದಲ್ಲಿ ಅಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಗ ಕಾಫಿ ಹೌಸ್ ಅಮಾರ್ಥ್ಯ ಸೇನ್ ಮತ್ತು ಅವರ ಸಹಪಾಠಿಗಳ ಪಾಲಿಗೆ ನೆಚ್ಚಿನ ಅಡ್ಡೆಯಾಗಿತ್ತು. ಇದೇ ಕಾಲೇಜಿನ ಪದವಿ ತರಗತಿಗೆ ಬರುತ್ತಿದ್ದ ನವನೀತಾದೇವಿ ಎಂಬ ಬಂಗಾಳಿ ಸುಂದರಿಗೆ ಕಾಫಿ ಹೌಸ್ ಕಿಟಕಿ ಬಳಿ ಕುಳಿತು ಕಣ್ಣು ಮಿಟುಕಿಸಿ ನಗುತ್ತಾ ಅವರನ್ನು ಪ್ರೇಮದ ಬಲೆಗೆ ಹಾಕಿಕೊಂಡಿದ್ದರು. 1958 ರಲ್ಲಿ ವಿವಾಹವಾದ ಅಮಾರ್ಥ್ಯಸೇನ್ ಮತ್ತು ನವನೀತಾ ದೇವಿ ಅವರು  ಸುಮಾರು ಹದಿನೆಂಟು ವರ್ಷಗಳ ಕಾಲ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ. ಕ್ಯಾಂಪಸ್ ನಲ್ಲಿ ವಾಸವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನೂ ಸಹ ಪಡೆದಿದ್ದರು. ವೇಳೆಗೆ ಬಂಗಾಳಿ ಭಾಷೆಯ ಪ್ರಸಿದ್ಧ ಕವಿಯತ್ರಿ ಮತ್ತು ಕಾಂದAಬರಿಗಾರ್ತಿಯಾಗಿ ಹೊರಹೊಮ್ಮಿದ್ದ ನವನೀತಾದೇವಿಯವರು ಮಾತೃಭಾಷೆಯ ಮೇಲಿನ ಮೋಹವನ್ನು ತೊರೆಯಲಾಗದೆ ದಾಂಪತ್ಯ ಜೀವನಕ್ಕೆ ವಿದಾಯ ಹೇಳುವುದರ ಮೂಲಕ ಮರಳಿ ಕೊಲ್ಕತ್ತ ನಗರಕ್ಕೆ ಬಂದು ಸಾಹಿತ್ಯ ಕ್ಷೇತ್ರದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾಗಿದ್ದ ಅವರು 2019   ನವಂಬರ್ ತಿಂಗಳಿನಲ್ಲಿ ನಿಧನರಾದರು.

ಭಾರತದ ಶಿಕ್ಷಣ ಕ್ಷೇತ್ರದ ಇತಿಹಾಸದಲ್ಲಿ ದೆಹಲಿಯ ಜವಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯ ಮತ್ತು ಈಗ ವಿಶ್ವ ವಿದ್ಯಾನಿಲಯವಾಗಿ ಪರಿವರ್ತನೆಗೊಂಡಿರುವ ಕೊಲ್ಕತ್ತದ  ಪ್ರೆಸಿಡೆನ್ಸಿ ಕಾಲೇಜು ಎರಡು ಶಿಕ್ಷಣ ಸಂಸ್ಥೆಗಳು ವಿವಿಧ ಕ್ಷೇತ್ರಗಳಿಗೆ ಶ್ರೇಷ್ಠ ತಜ್ಞರನ್ನು ನೀಡಿದ ಕೀರ್ತಿಗೆ ಪಾತ್ರವಾಗಿವೆ.  ಎರಡೂ ಸಂಸ್ಥೆಗಳು ಎಡಪಂಥೀಯ ಚಿಂತನೆಗಳ ತೊಟ್ಟಿಲಾಗಿರುವುದು ವಿಶೇಷ. 2011 ರಲ್ಲಿ ನಾನು ಭಾರತದ ನಕ್ಸಲ್ ಇತಿಹಾಸ ಕುರಿತು ಅಧ್ಯಯನ ಮಾಡುತ್ತಿದ್ದಾಗ ನನಗೆ ಕೊಲ್ಕತ್ತ ನಗರದಲ್ಲಿ  ನನ್ನದೇ ವಯಸ್ಸಿನ ಐದು ಮಂದಿ ಎಂ.ಎಸ್ಸಿ ಸ್ನಾತಕೋತ್ತರ ಪದವೀಧರರು ಇದೇ ಪ್ರೆಸಿಡೆನ್ಸಿ ಕಾಲೇಜಿನ ಪದವೀಧರರಾಗಿದ್ದರು. ಅವರೆಲ್ಲರೂ ನಕ್ಸಲ್ ಚಳುವಳಿಯ ಪಿತಾಮಹಾ ಎಂದು ಕರೆಯಬಹುದಾದ ಚಾರು ಮುಂಜುಂದಾರ್ ಅವರ ಶಿಷ್ಯರಾಗಿದ್ದರು. ನನ್ನನ್ನು ಪ್ರೆಸಿಡೆನ್ಸಿ ಕಾಲೇಜಿನ ಒಳಗಡೆ ಸುತ್ತಾಡಿಸಿ, ಅಲ್ಲಿನ ತರಗತಿಗಳ ಕೊಠಡಿಗಳು, ಗ್ರಂಥಾಲಯವನ್ನು ತೋರಿಸಿ ಪ್ರಾಂಶುಪಾಲರಿಗೆ ಪರಿಚಯಿಸಿದ್ದರು. ನಂತರ ಕಾಫಿಹೌಸ್ ಗೆ ಕರೆದೊಯ್ದು ಅಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ವಿವರಿಸಿದ್ದರು.

ಮಂಡ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಓರ್ವ ಬಡ ರೈತನ ಮಗನಾಗಿ ಜನಿಸಿದ ನನಗೆ ಬಾಲ್ಯದಿಂದಲೂ  ದೈಹಿಕ ಹಸಿವಿಗಿಂತ ಹೆಚ್ಚಾಗಿ ಜ್ಞಾನದ ಹಸಿವು ತುಂಬಾ ಕಾಡಿತು. ಹಸಿವು ಇನ್ನೂ ಸಹ ನೀಗಿಲ್ಲ. ಕಳೆದ ನಲವತ್ತು ವರ್ಷಗಳಿಂದ  ಹೈದರಾಬಾದ್ ನಗರದ ಅಬೀದ್ ರಸ್ತೆ,   ಮುಂಬೈ ನಗರದ ವಿಕ್ಟೋರಿಯಾ ಟರ್ಮಿನಲ್ ಸ್ಟೇಷನ್ ನಿಂದ ಪೌಂಟೆನ್ ಸರ್ಕಲ್ ವರೆಗಿನ ದಾದಾಬಾಯಿ ನವರೋಜಿ ರಸ್ತೆ, ಹಾಗೂ ದೆಹಲಿಯ ಕನ್ನಾಟ್ ಪ್ಲೇಸ್ ಹಾಗೂ ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಕ್ರಾಸ್ನಲ್ಲಿರುವ ರಾವ್ ಎಂಬುವವರ ಹಳೆಯ ಅಂಗಡಿಯಲ್ಲಿ ಕೊಂಡು ತಂದ ಪುಸ್ತಕಗಳು ನನ್ನ ಪಾಲಿನ ಅಮೂಲ್ಯ ಆಸ್ತಿಯಾಗಿವೆ. 

ಇಂದಿಗೂ ಸಹ ಭಾರತದ ಈಶಾನ್ಯ ರಾಜ್ಯಗಳು ಅಥವಾ ಡಾರ್ಜಿಲಿಂಗ್ನತ್ತ  ಪ್ರವಾಸ ಹೋದಾಗ,  ರೈಲು ಪ್ರಯಾಣದಲ್ಲಿ ಒಂದು ದಿನ ಬಿಡುವು ತೆಗೆದುಕೊಂಡು ಕೊಲ್ಕತ್ತದ ಕಾಲೇಜ್ ರಸ್ತೆಗೆ ತೆರಳಿ ಒಂದೆರೆಡು ಕೃತಿಗಳನ್ನು ಕೊಂಡು, ಕಾಫಿ ಹೌಸ್ ನಲ್ಲಿ ಕಾಫಿ ಕುಡಿಯುತ್ತಾ ಅವುಗಳನ್ನು ತಿರುವು ಹಾಕಿದಾಗ ತಿರ್ಥಯಾತ್ರಿಯೊಬ್ಬನಿಗೆ ದೇವರ ದರ್ಶನವಾದಂತೆ ನನಗೆ ಜ್ಞಾನದ ದರ್ಶನವಾಗುತ್ತದೆ, ಬಡತನವನ್ನು ಮೀರಿ ನಿಲ್ಲುವ ಶಕ್ತಿಯನ್ನು ಪುಸ್ತಕಗಳು ನನಗೆ ನೀಡಿವೆ. ಹಾಗಾಗಿ ಪುಸ್ತಕಗಳೆಂದರೆ ನನ್ನ ಪಾಲಿಗೆ ಯಾರೂ ಕದಿಯಲಾಗದ ಜ್ಞಾನ ಮತ್ತು ಆಸ್ತಿಯಾಗಿವೆ.

( ಏಪ್ರಿಲ್ ತಿಂಗಳ ಹೊಸತು ಮಾತ್ರಿಕೆಯಲ್ಲಿ ಪ್ರಕಟವಾದ ಬಹುಸಂಸ್ಕೃತಿ ಅಂಕಣ ಬರಹ)

ಜಗದೀಶ್ ಕೊಪ್ಪ

ಶನಿವಾರ, ನವೆಂಬರ್ 18, 2023

ವನ್ಯಜೀವಿಗಳ ಮರಣ ಮೃದಂಗ

 



ಮೂರು ವರ್ಷಗಳ ಹಿಂದೆ 2020 ಜೂನ್ ತಿಂಗಳಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆಹಾರವನ್ನು ಅರಸಿಕೊಂಡು ಕೃಷಿ ಭೂಮಿಗೆ ಬಂದಿದ್ದ ಗರ್ಭ ಧರಿಸಿದ್ದ ಹೆಣ್ಣಾನೆಯೊಂದು ಕೃಷಿ ಭೂಮಿಯಲ್ಲಿ ಕಾಡು ಹಂದಿಗಳಿಗಾಗಿ ಇರಿಸಿದ್ದ ಸ್ಪೋಟಕ ತುಂಬಿದ್ದ ಅನಾನಸ್ ಹಣ್ಣನ್ನು ತಿನ್ನಲು ಹೋಗಿ  ಆನೆಯ ಬಾಯಿಯು ಸ್ಟೋಟದಿಂದ ಛಿದ್ರಗೊಂಡಿತು. ನೋವನ್ನು ತಾಳಲಾರದ ಮೂಕಪ್ರಾಣಿಯು ಸಮೀಪದ ನದಿಯೊಂದರಲ್ಲಿ ನಾಲ್ಕು ದಿನಗಳ ಕಾಲ ಹಗಲು ರಾತ್ರಿ ನಿಂತು ಅಂತಿಮವಾಗಿ ಪ್ರಾಣಬಿಟ್ಟಿತು. ಆ ಮೂಕ ಪ್ರಾಣಿಯ ದಾರುಣ ಸಾವು   ನೆಲದ ಪ್ರತಿಯೊಬ್ಬ ಪ್ರಜ್ಞಾವಂತನ್ನು ಕೇವಲ ಕ್ಷಣ ಮಾತ್ರವಲ್ಲದೆ ಹಲವು ದಿನಗಳ ಕಾಲ ಕಾಡಿದ್ದು ನಿಜ. ವನ್ಯ ಜೀವಿಗಳನ್ನು ನಾಡಿನಿಂದ ಕಾಡಿಗೆ  ಓಡಿಸಲು ನಾಗರೀಕ ಸಮಾಜ ಅನುಸರಿಸುತ್ತಿರುವ  "ಅನಾಗರಿಕ ಮತ್ತು ಕ್ರೂರ ಮಾರ್ಗಗಳ" ನಡುವಳಿಯನ್ನು ನಿಷೇಧಿಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದು  ಇದೀಗ  ದೇಶದ  ಸರ್ವೋಚ್ಛ ನ್ಯಾಯಾಲಯವನ್ನು ತಲುಪಿದೆ. 2019 ರಲ್ಲಿ ತಮಿಳುನಾಡಿನ ನೀಲಗಿರಿಯ ಬಳಿ ಚಹಾ ತೋಟವೊಂದರಲ್ಲಿ  ನಾಲ್ಕು ವರ್ಷದ ಗಂಡಾನೆಯೊಂದನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು.
 ಭಾರತದಲ್ಲಿ ಶತಮಾನಗಳದುದ್ದಕ್ಕೂ  ಮಾನವನೊಂದಿಗೆ ವಿಶೇಷ ಸಂಬಂಧವನ್ನು ಹಂಚಿಕೊಳ್ಳುತ್ತಾ  ಬಂದಿರುವ ಆನೆಯಂಬ ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮ ಜೀವಿಯನ್ನು .ಆಧುನಿಕ ಜಗತ್ತು ಅತ್ಯಂತ ಲಘುವಾಗಿ ಪರಿಗಣಿಸಿದೆ.   ಜಗತ್ತಿನ ಇತಿಹಾಸದಲ್ಲಿ  ನಡೆದಿರುವ ಕದನಗಳಲ್ಲಿ  ಸೈನಿಕರೆಂಬ ಮನುಷ್ಯರಷ್ಟೇ ಹತರಾಗಿಲ್ಲ. ಅವರುಗಳ ಅರ್ಧದಷ್ಟು ಸಂಖ್ಯೆಯ ಆನೆಗಳು ಮತ್ತು ಕುದುರೆಗಳು ಸಹ ಮೃತಪಟ್ಟಿವೆ. ಆದರೆ, ಮೂಕ ಪ್ರಾಣಿಗಳ ಸಾವಿನ ಸಂಖ್ಯೆಯನ್ನೂ ಯಾವ ಇತಿಹಾಸಕಾರನೂ ಅಧಿಕೃತವಾಗಿ ದಾಖಲಿಸಿಲ್ಲ.  ಅಸಂಖ್ಯಾತ ವನ್ಯಮೃಗಗಳ ತೊಟ್ಟಿಲು ಎನಿಸಿಕೊಂಡ ಭಾರತದಲ್ಲಿ   ಆನೆಗಳು ಮಾತ್ರವಲ್ಲದೆ ವನ್ಯ ಲೋಕದ ಸಕಲೆಂಟು ಜೀವಗಳಿಗೆ ಮತ್ತು ಪಕ್ಷಿಲೋಕಕ್ಕೆ  ತೀರಾ ಅಗತ್ಯವೆನಿಸಿದ ಗಂಭೀರವಾದ ಸಂರಕ್ಷಣೆ ಮತ್ತು ನಿರ್ವಹಣೆಯ ಗಮನವನ್ನುಅರಣ್ಯ ಇಲಾಖೆ  ಇನ್ನೂ ನೀಡಲಾಗಿಲ್ಲ. ಘಟನೆ ಕುರಿತಂತೆ   ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವರು ‘’ ಆನೆಯನ್ನು ಅಂತಹ ಕ್ರೂರ ರೀತಿಯಲ್ಲಿ ಕೊಲ್ಲುವುದು ಖಂಡಿತವಾಗಿಯೂಭಾರತೀಯ ಸಂಸ್ಕೃತಿಯಲ್ಲಿಲ್ಲ. ಎಂದು ಹೇಳಿರುವ ಮಾತು ಲೋಕಸಭೆಯಲ್ಲಿ ಪ್ರಸ್ತಾಪವಾದರೂ ಸಹ  ವನ್ಯಜೀವಿಗಳು ಮತ್ತು ಜನರ ನಡುವಿನ ಇಂತಹ ಸಂಘರ್ಷಗಳು ಏಕೆ  ಉಲ್ಬಣಗೊಳ್ಳುತ್ತವೆ? ಎಂಬುದರ ಬಗ್ಗೆ ಈವರೆಗೆ ನಮ್ಮನ್ನಾಳುವ ಜನಪ್ರತಿನಿಧಿಗಳು ಇನ್ನೂ ಗಂಭೀರವಾಗಿ ಆಲೋಚಿಸಿಲ್ಲ.


ಆಧುನಿಕ ಭಾರತದಲ್ಲಿ ವನ್ಯಜೀವಿ ಮತ್ತು ಮನುಷ್ಯರ ನಡುವಿನ ಸಂಘರ್ಷವು ದಿನನಿತ್ಯದ ಕ್ರಿಯೆ ಎಂಬಂತಾಗಿದೆ. ಋತುಮಾನಗಳಿಗೆ  ಅನುಸಾರವಾಗಿ  ನೀರು ಮತ್ತು  ಆಹಾರವನ್ನು  ಅರಸಿಕೊಂಡು ಕಾಡಿನಿಂದ ಕಾಡಿಗೆ ಅಥವಾ ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದ ಹುಲಿ, ಚಿರತೆ ಮತ್ತು ಆನೆಗಳು ಇತ್ತೀಚೆಗೆ ನಾಡಿನತ್ತ ಮುಖಮಾಡಿವೆ. ನಾಡಿನಲ್ಲಿ ಇರಬೇಕಾದ ಮನುಷ್ಯ ಕಾಡಿಗೆ ಲಗ್ಗೆ ಇಟ್ಟಿದ್ದಾನೆ. ರೆಸಾರ್ಟ್, ಸಪಾರಿ, ಅರಣ್ಯ ವೀಕ್ಷಣೆ ಮುಂತಾದವುಗಳ ನೆಪದಲ್ಲಿ ಅವುಗಳ ಆವಾಸಸ್ಥಾನದಲ್ಲಿ ಬೀಡುಬಿಟ್ಟು ವನ್ಯ ಜೀವಿಗಳ ಸಹಜ ಬದುಕಿಗೆ ಧಕ್ಕೆ ತಂದಿದ್ದಾನೆ. ಇಪ್ಪತ್ತೊಂದನೆಯ ಶತಮಾನದ ಆಧುನಿಕ ಜಗತ್ತು ಮತ್ತು ತಂತ್ರಜ್ಞಾನದ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ಮನುಷ್ಯನ ಶ್ರೇಯೋಭಿವೃದ್ಧಿಗೆ ಇರುವ ಏಕೈಕ ಸೂತ್ರ ಎಂಬ ಸ್ವಾರ್ಥದ ಪರಿಕಲ್ಪನೆ ಮುನ್ನೆಲೆಗೆ ಬಂದಿದೆ.

ಇಂದು ದೇಶಾದ್ಯಂತ ವಿಸ್ತರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳು ವನ್ಯಜೀವಿಗಳ ಪಾಲಿಗೆ ಸಾವಿನ ಕೂಪಗಳಾಗಿ ಪರಿಣಮಿಸಿವೆ. ಅವುಗಳ ಸಹಜ ಕಿರುದಾರಿ ಎಂದು ಕರೆಯುವ ಆನೆಗಳ ಕಾರಿಡಾರ್ ಮಾರ್ಗವು  ಹೆದ್ದಾರಿಯಿಂದ ಮುಚ್ಚಿಹೋಗುತ್ತಿದೆ. ಇತ್ತೀಚೆಗೆ ಮೈಸೂರು ಮತ್ತು ಬೆಂಗಳೂರು ನಡುವೆ ನಿರ್ಮಿಸಲಾದ ಹೊಸ ರಾಷ್ಟ್ರೀಯ ಹೆದ್ದಾರಿಯಿಂದ ರಾಮನಗರದ  ಬಳಿ ಗುಡ್ಡಗಳಲ್ಲಿ ವಾಸಿಸುತ್ತಿದ್ದ  ಕರಡಿ, ನರಿ, ಮೊಲ, ಮುಂತಾದ ಪ್ರಾಣಿಗಳು ಆಹಾರಕ್ಕಾಗಿ ರಸ್ತೆ ದಾಠಲಾಗದೆ ಹಸಿವು ಮತ್ತು ನೀರಡಿಕೆಯಿಂದ ಅಸು ನೀಗುತ್ತಿವೆ.  ಹುಬ್ಬಳ್ಳಿ ಮತ್ತು ಗೋವಾ ನಡುವಿನ ರೈಲ್ವೆ ಮಾರ್ಗದಲ್ಲಿ ದಾಂಡೇಲಿ ಅಭಯಾರಣ್ಯದ ಕಾಡುಕೋಣಗಳ ಸ್ಥಿತಿ ಕೂಡಾ ಇದೇ ಆಗಿದೆ. ಕನಿಷ್ಠ ತಿಂಗಳಿಗೆ ಒಂದು ಅಥವಾ ಎರಡು ಪ್ರಾಣಿಗಳು ರೈಲಿಗೆ ಸಿಲುಕಿ ಸಾಯುತ್ತಿವೆ.

ಇಂದು ಕರ್ನಾಟಕ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಆನೆ, ಹುಲಿ ಮತ್ತು ಚಿರತೆಗಳ ದಾಳಿಯಿಂದ ವರ್ಷವೊಂದಕ್ಕೆ ಕನಿಷ್ಠ ಐನೂರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಾಣಿಗಳಿಗೆ ರಾಗಿಮುದ್ದೆ ಹಾಗೂ ಮಾಂಸ ಮತ್ತು  ಇತರೆ ಆಹಾರಗಳಲ್ಲಿ ವಿಷ ಬೆರಸುವುದು, ಕೃಷಿ ಭೂಮಿಗೆ ಹಾಕಲಾದ ತಂತಿಗಳಿಗೆ ವಿದ್ಯುತ್ ಹಾಯಿಸುವುದು, ಹೆದ್ದಾರಿ ಮತ್ತು ರೈಲ್ವೆ ಮಾರ್ಗದಲ್ಲಿ  ನಡೆಯುವ ಅಪಘಾತ ಇವುಗಳ ಮೂಲಕ ವರ್ಷವೊಂದಕ್ಕೆ ಕನಿಷ್ಠ ಹನ್ನೆರೆಡು ಸಾವಿರ ವನ್ಯಜೀವಿಗಳು ಸಾವನ್ನಪ್ಪುತ್ತಿವೆ.  ಭಾರತದಲ್ಲಿ ಪ್ರತಿವರ್ಷ ಅಸ್ವಾಭಾವಿಕಕವಾಗಿ  ಐವತ್ತರಿಂದ ಅರವತ್ತು ಆನೆಗಳು ಅಸುನೀಗಿದರೆ,  2017-18 ಮತ್ತು 2020-21 ನಡುವೆ  ನಾಲ್ಕು ಸಿಂಹ ಹಾಗೂ  ಎಪ್ಪತ್ಮೂರು ಆನೆಗಳು ಸೇರಿದಂತೆ  ಒಟ್ಟು 63,345 ವನ್ಯ ಜೀವಿಗಳ ಸಾವಿನ ಪ್ರಕರಣಗಳು ಸಂಭವಿಸಿವೆ ಎಂದು ಕಂಟ್ರೋಲರ್ ಆಫ್ ಆಡಿಟರ್ ಜನರಲ್ ಸಂಸ್ಥೆ (ಸಿಎಜಿ)  ತನ್ನ ವರದಿಯಲ್ಲಿ  ದಾಖಲಿಸಿದೆ.

ಹುಲಿಗಳ  ಜೀವಶಾಸ್ತ್ರಜ್ಞರಾದ ಉಲ್ಲಾಸ್ ಕಾರಂತರು ವನ್ಯ ಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷವನ್ನು ಕುರಿತು  2019 ರ ಜನವರಿಯ ‘’ ದ ಜರ್ನಲ್ ಆಫ್ ಗೌವರ್ನೆನ್ಸ್’’ ಪತ್ರಿಕೆಯಲ್ಲಿ ಹೀಗೆ ದಾಖಲಿಸಿದ್ದರು ‘’ಇಲ್ಲಿಯವರೆಗಿನ  ಅರಣ್ಯ ಇಲಾಖೆಯ ಕ್ರಮಗಳು ಬಹುಮಟ್ಟಿಗೆ ಪ್ರತಿಕ್ರಿಯಾತ್ಮಕವಾಗಿವೆ ಆದರೆ, ವನ್ಯಜೀವಿ ಸಂರಕ್ಷಣೆ ಮತ್ತು ಸಂಘರ್ಷ ತಡೆಗಟ್ಟುವಲ್ಲಿ ಮತ್ತು   ಸ್ಪಷ್ಟವಾದ ಗುರಿ ಸಾಧಿಸುವಲ್ಲಿ ಅವುಗಳು  ನಿಖರವಾದ ಯೋಜನೆಗಳನ್ನು ಹೊಂದಿಲ್ಲ. ಇದರ  ಪರಿಣಾಮವಾಗಿ   ಘರ್ಷಣೆಗಳು ಸಹಿಷ್ಣುತೆಯ ಮಟ್ಟವನ್ನು ಮೀರಿ  ಉಲ್ಬಣಗೊಳ್ಳುತ್ತಿವೆ.  ಈವರೆಗೆ  ವನ್ಯಜೀವಿ-ಮಾನವ ಸಂಘರ್ಷಗಳನ್ನು ಎದುರಿಸಲು ನಿರ್ವಹಣಾ ಆಯ್ಕೆಗಳ ಮಾದರಿಯನ್ನು   ತರ್ಕಬದ್ಧವಾಗಿ ಚರ್ಚಿಸಲಾಗಿಲ್ಲ, ಪ್ರಾಣಿಗಳ ಜೀವಶಾಸ್ತ್ರದ ಬಗ್ಗೆ ವಿಜ್ಞಾನವು ನಮಗೆ ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿ, ನಿಯಮಿತವಾಗಿ ಸಂಘರ್ಷಗಳನ್ನು ಎದುರಿಸಬೇಕಾದ ವನ್ಯಜೀವಿ ವ್ಯವಸ್ಥಾಪಕರ  ಅಗತ್ಯತೆಗಳು  ಮತ್ತು ಮಧ್ಯಸ್ಥಗಾರರ ಅಭಿಪ್ರಾಯಗಳನ್ನು  (ಸಾಮಾನ್ಯವಾಗಿ ರೈತರು, ಬುಡಕಟ್ಟು ಜನರು ಮತ್ತು ಇತರ ಗ್ರಾಮೀಣ ಜನರು)  ಸಂಗ್ರಹಿಸುವ ಅಗತ್ಯವಿದೆ ಜೊತೆಗೆ ಪ್ರತಿಯೊಂದು ವನ್ಯಜೀವಿ ಪ್ರಭೇದಗಳ ರಕ್ಷಣೆಯು ಸಾಂಸ್ಕೃತಿಕ ಮಹತ್ವ ಪಡೆಯಬೇಕಿದೆ’’

ದುರಂತದ ಸಂಗತಿಯೆಂದರೆ, ಈ ದೇಶದಲ್ಲಿ ವನ್ಯಜೀವಿ ಸಂರಕ್ಷಣಾ ಕಾರ್ಯಸೂಚಿಯು ಇಂದಿಗೂ ಸಹ ದೆಹಲಿಯ ಹವಾನಿಯಂತ್ರಿತ ಕೊಠಡಿಗಳಲ್ಲಿ  ಉತ್ಕೃಷ್ಟ ಮನಸ್ಥಿತಿಯಿಂದ ರೂಪಿಸಲ್ಪಡುತ್ತದೆ, ಅರಣ್ಯ ಪ್ರದೇಶಗಳ ಹೊರಗಿನ ಕೃಷಿ ಪ್ರದೇಶದಲ್ಲಿ  ಕಾಡು ಹಂದಿಗಳ ಸಂತತಿಯನ್ನು ವನ್ಯಜೀವಿ ಅಧಿಕಾರಿಗಳು ಕಾನೂನುಬದ್ಧವಾಗಿ ನಿಯಂತ್ರಣದಲ್ಲಿಟ್ಟುಕೊಂಡಿದ್ದರೆ,  ಹೆಚ್ಚು ಸಂವೇದನಾಶೀಲ ಆನೆಯಂತಹ ಜೀವಿಗಳಿಗೆ ಹಾನಿಯನ್ನುಂಟುಮಾಡುವ ಸ್ಫೋಟಕ ತುಂಬಿದ ತೆಂಗಿನಕಾಯಿ ಅಥವಾ ಅನಾನಸ್ ಮತ್ತು ಹಲಸಿನ ಹಣ್ಣುಗಳ ಬಳಕೆಯನ್ನು ರೈತರು ಆಶ್ರಯಿಸುವ ಅಗತ್ಯ ಇರುತ್ತಿರಲಿಲ್ಲ. ಒಂದು ಸಮಸ್ಯೆಯನ್ನು ವಿವಿಧ ಆಯಾಮಗಳಲ್ಲಿ ಗುರುತಿಸುವ ಹಾಗೂ ಅದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳುವ   ಅಗತ್ಯವಿದೆ.



ಇತ್ತೀಚಿನ ದಿನಗಳಲ್ಲಿ ಆನೆಗಳನ್ನು ರೈಲ್ವೆ ಕಂಬಿಗಳನ್ನು ಅರಣ್ಯದ ಸುತ್ತ ಹಾಕುವುದರ ಮೂಲಕ ನಿಯಂತ್ರಿಸುವ ಪ್ರಯತ್ನ ನಡೆದಿದೆ. ಇತ್ತೀಚೆಗಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಹುಲಿ ಮತ್ತು ಆನೆಗಳ ಸಂತತಿ ವೃದ್ಧಿಸಿದೆ. ಕೇವಲ ಅಂಕಿ ಅಂಶವನ್ನು ಪ್ರಕಟಿಸಿ ಹೆಮ್ಮೆ ಪಟ್ಟುಕೊಳ್ಳುವುದಕ್ಕಿಂತ ಅವುಗಳಿಗೆ ಬದಲಾದ  ಹವಾಮಾನದಲ್ಲಿ ಅರಣ್ಯದಲ್ಲಿ ಯಥೇಚ್ಚವಾದ ಆಹಾರ ಮತ್ತು ನೀರು ಇದೆಯಾ? ಎಂದು ಅರಣ್ಯಾಧಿಕಾರಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಬಿಳಿಗಿರಿರಂಗನ ಬೆಟ್ಟ, ಮಹಾದೇಶ್ವರಬೆಟ್ಟ ಮತ್ತು ಬಂಡಿಪುರ ಅಭಯಾರಣ್ಯಗಳಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಲಂಟಾನ ಗಿಡದಿಂದಾಗಿ ಅರಣ್ಯದಲ್ಲಿ ಇತರೆ ಗಿಡಮರಗಳು ಇರಲಿ, ಹಸಿರು ಹುಲ್ಲು ಕೂಡಾ ಬೆಳೆಯುತ್ತಿಲ್ಲ.ಪ್ರತಿಬೇಸಿಗೆಯಲ್ಲಿ ಕಾಡ್ಗಿಚ್ಚು ಸಾಮಾನ್ಯ ಸಂಗತಿಯಾಗಿದೆ.

ಈ ವರ್ಷ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ವರದಿಯಲ್ಲಿ  ಭಾರತದ ಹದಿನೈದು ರಾಜ್ಯಗಳಲ್ಲಿ ಆನೆಗಳು ಇರುವ  ಪ್ರದೇಶದಲ್ಲಿ  ಆನೆ ಕಾರಿಡಾರ್ಗಳಲ್ಲಿ ಶೇಕಡಾ ನಲವತ್ತರಷ್ಟು   ಹೆಚ್ಚಳವನ್ನು ತೋರಿಸಿದೆ.  2010 ರಲ್ಲಿ  ಇದ್ದ ಎಂಬತ್ತೆಂಟು ಆನೆ ಕಾರಿಡಾರ್ಗಳ ಸಂಖ್ಯೆಯನ್ನು ನೂರೈವತ್ತಕ್ಕೆ  ಏರಿಕೆ ಮಾಡಲಾಗಿದೆ ದೇಶದಲ್ಲಿ ಆನೆಗಳ ಸಂಖ್ಯೆ ಮುವತ್ತು ಸಾವಿರಕ್ಕಿಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.  ಕರ್ನಾಟಕ ರಾಜ್ಯದಲ್ಲಿ ಒಂಬತ್ತು ಹೊಸ ಆನೆ ಕಾರಿಡಾರ್ಗಳನ್ನು ಗುರುತಿಸಲಾಗಿದ್ದು  ಅವುಗಳು ಹೀಗಿವೆ. ಕರಡಿಕಲ್-ಮಾದೇಶ್ವರ ( ಇದನ್ನು ರಾಗಿಹಳ್ಳಿ ಕಾರಿಡಾರ್ ಎಂದೂ ಸಹ ಕರೆಯುತ್ತಾರೆ), ತಾಳಿ-ಬಿಳಿಕ್ಕನ್ (ತಮಿಳುನಾಡು ಮತ್ತು ಕರ್ನಾಟಕ), ಬಿಳಿಕಲ್-ಜವಳಗಿರಿ (ತಮಿಳುನಾಡು ಮತ್ತು ಕರ್ನಾಟಕ), ಎಡಯಹಳ್ಳಿ-ಗುತ್ತಿಯಾಲತ್ತೂರು (ತಮಿಳುನಾಡು-ಕರ್ನಾಟಕ), ಎಡೆಯಹಳ್ಳಿ-ದೊಡ್ಡಸಮಳ್ಳಿ- , ಚಾಮರಾಜನಗರ-ತಲಮಲೈ ಪುಂಜೂರು (ಕರ್ನಾಟಕ ಮತ್ತು ತಮಿಳುನಾಡು), ಚಾಮರಾಜನಗರ-ತಲಮಲೈ ಮುದ್ದಹಳ್ಳಿಯಲ್ಲಿ (ತಮಿಳುನಾಡು ಮತ್ತು ಕರ್ನಾಟಕ), ಕಣಿಯನಪುರ-ಮೊಯಾರ್ (ಕರ್ನಾಟಕ) ಮತ್ತು ಬೇಗೂರು-ಬ್ರಮ್ಮನಗಿರಿ (ಕರ್ನಾಟಕ ಮತ್ತು ಕೇರಳ) ಹೊಸ ಕಾರಿಡಾರ್ ಗಳ ಜೊತೆಗೆ ಪ್ರಾಣಿಗಳ ಚಲನ ವಲನದ ಬಗ್ಗೆ ಅರಣ್ಯ ಇಲಾಖೆ  ತೀವ್ರ ನಿಗಾ ವಹಿಸುವ ಅಗತ್ಯವಿದೆ.

ಕೇರಳದ ತ್ರಿಸ್ಸೂರು ಜಿಲ್ಲೆಯಲ್ಲಿರುವ  ಅರಣ್ಯ ಸಂಶೋಧನಾ ಕೇಂದ್ರದ ಇ.ಎ. ಜಯ್ಸನ್ ಎಂಬುವರು 2018 ರಲ್ಲಿ ಮಲ್ಲಪುರಂ ಜಿಲ್ಲೆಯಲ್ಲಿ ನಡೆಸಿದ ಸಂಶೋಧನೆಯ ಫಲವಾಗಿ ವಾರ್ಷಿಕವಾಗಿ ರೈತರು ಪ್ರತಿ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹದಿನೈದು ಸಾವಿರ ಮೌಲ್ಯದ ಫಸಲನ್ನು  ವನ್ಯ ಜೀವಿಗಳ ಹಾವಳಿಯಿಂದ ಕಳೆದುಕೊಳ್ಳುತ್ತಿದ್ದಾರೆ ಎಂಬುದು ದೃಢಪಟ್ಟಿದೆ. ಕರ್ನಾಟಕದ ಚಿಕ್ಕಮಗಳೂರು, ಸಕಲೇಶಪುರ ಮತ್ತು ಆಲ್ದೂರು, ಕೊಡಗಿನ ವಿರಾಜಪೇಟೆ ಮತ್ತು ನಾಗರಹೊಳೆಯ ಸುತ್ತಮುತ್ತಲಿನ ಗ್ರಾಮಗಳ ರೈತರು ಕಾಫಿ, ಬಾಳೆ ಹಾಗೂ ವಿವಿಧ ತರಕಾರಿಗಳ ನಷ್ಟವನ್ನು ನಿರಂತರವಾಗಿ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ತಂತಿ ಬೇಲಿಗೆ ವಿದ್ಯುತ್ ಹಾಯಿಸುವುದರ ಮೂಲಕ, ಆನೆ, ಚಿರತೆ, ಮಂಗ, ಜಿಂಕೆಗಳ ಸಾವಿಗೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.



ಕಳೆದ ಅಕ್ಟೋಬರ್ ಹನ್ನೆರೆಡರಂದು ಕರ್ನಾಟಕ ಸರ್ಕಾರದ ಅರಣ್ಯ ಸಚಿವರು ‘’ಅಭಯಾರಣ್ಯಗಳ ವ್ಯಾಪ್ತಿ ಪ್ರದೇಶದ ಒಂದು ಕಿಲೊಮೀಟರ್ ದೂರದಲ್ಲಿ ರೆಸಾರ್ಟ್, ಫಾರಂ ಹೌಸ್, ಹಾಗೂ  ಕ್ಲಬ್ ಗಳಿಗೆ ಅನುಮತಿ ನೀಡಲಾಗುವುದು ಹಾಗೂ ನಾಗರಹೊಳೆಯ ಆರು ವಲಯಗಳ ವ್ಯಾಪ್ತಿಯಲ್ಲಿ ನೀಡುವ ಕುರಿತು ಪರಿಶೀಲಿಸಲಾಗುವುದು’’ ಎಂದು ಹೇಳಿರುವ ಮಾತು ವನ್ಯಜೀವಿಗಳ ಮಾರಣಹೋಮಕ್ಕೆ ಬರೆಯಲಾದ ಮುನ್ನುಡಿ ಎಂಬಂತಿದೆ. ಅರಣ್ಯ ರಕ್ಷಣೆ ಎಂದರೆ ವಿದೇಶಿ ತಳೀಗಳ ಕೃತಕ ಮರಗಳನ್ನು ಬೆಳೆಸಿ ಹಸಿರನ್ನು ಪ್ರತಿಬಿಂಬಿಸುವ ಕ್ರಿಯೆಯಲ್ಲ. ಅರಣ್ಯವೆಂಬುದು ಇರುವೆಯಿಂದ ಹಿಡಿದು, ಅಳಿಲು, ಮಂಗಗಳು, ಸರಿಸೃಪಗಳು , ಪಕ್ಷಿ ಸಂಕುಲ ಸೇರಿದಂತೆ ನೂರಾರು ಜೀವಿಗಳ ಅವಾಸಸ್ಥಾನ. ಅವುಗಳಿಗೆ ಬೇಕಾದ ಹಣ್ಣಿನ ಮರಗಳು, ಆನೆಗಳ ಮುಖ್ಯ ಆಹಾರವಾದ ಬಿದಿರು ಬೆಳೆಸುವುದರ ಜೊತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹೊಂಡಗಳ ನಿರ್ಮಾಣ ಇವೆಲ್ಲವೂ ತುರ್ತಾಗಿ  ಆಗಬೇಕಿದೆ.

ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗ್ರಾಮವಾಸಿಗಳನ್ನು ಹೊರತು ಪಡಿಸಿ, ಕನಿಷ್ಠ ಹತ್ತು  ಕಿಲೊಮೀಟರ್ ದೂರದವರೆಗೆ ಯಾವುದೇ ರೀತಿಯ ಮಾನವರ ಅನ್ಯ ಚಟುವಟಿಕೆಗೆ ಅವಕಾಶವನ್ನು ನಿಷೇಧಿಸಬೇಕಿದೆ. ಇಲ್ಲದಿದ್ದರೆ, ನಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಚಿತ್ರಗಳ ಮೂಲಕ ವನ್ಯಪ್ರಾಣಿಗಳಣ್ನು ನೋಡುವ  ದಿನಗಳು ದೂರವಿಲ್ಲ,. ಇದು ಸಧ್ಯದ ವರ್ತಮಾನದ ನೋವಿನ ಹಾಗೂ ದುರಂತದ  ಸಂಗತಿ.

( ಪ್ರಜಾವಾಣಿ ಭಾನುವಾರದ ಸಾಪ್ತಾಹಿಕ ಪುರಣಿಗೆಯಲ್ಲಿ ಪ್ರಕಟವಾದ ಲೇಖನ.  650 ಶಬ್ದಗಳಿಗೆ ಲೇಖನವನ್ನು ಸೀಮಿತಗೊಳಿಸಿದ್ದೆ. 950 ಶಬ್ದಗಳಲ್ಲಿ ಸಿದ್ಧಪಡಿಸಲಾಗಿದ್ದ ಸಂಪೂರ್ಣ ಲೇಖನ ಇದು)

ಎನ್.ಜಗದೀಶ್ ಕೊಪ್ಪ