ಸೋಮವಾರ, ಸೆಪ್ಟೆಂಬರ್ 18, 2023

ಬುದ್ಧ,ಬಸವಣ್ಣ ಮತ್ತು ಗಾಂಧಿ ಹಾಗೂ ಕುವೆಂಪು ದೃಷ್ಟಿಕೋನದಲ್ಲಿ ಸನಾತನ ಧರ್ಮ

 

 ಕಳೆದ ಹತ್ತು ದಿನಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯಗಿರಿ ಸ್ಟಾಲಿನ್ ಸನಾತನ ಧರ್ಮ ಎಂದು ಕರೆಸಿಕೊಳ್ಳುತ್ತಿರುವ ಹಿಂದೂ ಧರ್ಮದ ಕುರಿತಾಗಿ ಸಾರ್ವಜನಿಕವಾಗಿ  ಹೇಳಿದ ಮಾತುಗಳು ಇದೀಗ ದೇಶಭಕ್ತರ ಪಾಲಿಗೆ ಹಿಂದೂ ಧರ್ಮವನ್ನು ವಿರೋಧಿಸುವ ಕ್ರಿಯೆ ಎಂಬಂತೆ ಕಾಣುತ್ತಿವೆ. ಈ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆಯಾಗಲಿ, ಅಂತರಾಷ್ಟ್ರೀಯ ಗಮನ ಸೆಳೆದ ಮಣಿಪುರದ ಅಮಾನುಷ ಘಟನೆ ಯಬಗ್ಗೆ ಈವರೆಗೆ ತುಟಿ ಬಿಚ್ಚದ ಪ್ರಧಾನಿ ಎಂಬ ಮಹಾಶಯ ಇದೀಗ ಈ ವಿಷಯದ ಬಗ್ಗೆ ಪುಂಖಾನುಪುಂಖವಾಗಿ ಪುಂಗತೊಡಗಿದ್ದಾನೆ.

ಉದಯಗಿರಿ ಸ್ಟಾಲಿನ್ ಎಂಬ ಯುವ ರಾಜಕಾರಣಿ ಸನಾತನ ಧರ್ಮ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ಪಿಡುಗಿನ ರೂಪದಲ್ಲಿ ಎಲ್ಲೆಡೆ ಹರಡುತ್ತಿದೆ ಎಂದು ವ್ಯಾಖ್ಯಾನಿಸಿದ್ದನು. ವಾಸ್ತವವಾಗಿ ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದು ಏಕೆ ಕರೆಯುತ್ತಾರೆ. ಸನಾತನದ ಧರ್ಮದ ಅರ್ಥವೇನು ಎಂಬುದರ ಬಗ್ಗೆ ಏನೇನೂ ಗೊತ್ತಿಲ್ಲದ ವಾಟ್ಸ್ ಅಪ್ ಯೂನಿರ್ವಸಿಟಿಯ ಪ್ರೊಫೆಸರ್ ಗಳು ಮತ್ತು  ವಿದ್ಯಾರ್ಥಿಗಳಿಂದ ದೇಶಾದ್ಯಂತ ಗಹನವಾದ ಚರ್ಚೆ ಆರಂಭವಾಗಿದೆ. ರಾಜಕೀಯಕ್ಕೆ ಧರ್ಮ ಬೆರೆಸುವುದಾಗಲಿ ಅಥವಾ ಧರ್ಮಕ್ಕೆ ರಾಜಕೀಯ ಬೆರೆಸುವುದು ಈ ಎರಡೂ ಕ್ರಿಯೆಗಳು ಅಮಾನುಷ ಮತ್ತು ಅರ್ಥಹೀನ ಕ್ರಿಯೆ ಎಂಬ ಕನಿಷ್ಠ ಜ್ಞಾನ  ನಮ್ಮಲ್ಲಿ ಇರಬೇಕು. ಈ ಕಾರಣಕ್ಕಾಗಿ ಕುವೆಂಪು ಹಿಂದೂ ಧರ್ಮದ ಬಗ್ಗೆ ಈ ರೀತಿ ಕಟುವಾಗಿ ವ್ಯಾಖ್ಯಾನಿಸಿದ್ದರು.

 ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

 ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

  ಎಂದೊ ಮನು ಬರೆದಿಟ್ಟುದಿಂದೆಮೆಗೆ ಕಟ್ಟೆನು?

ಈ ಜಗತ್ತಿನ ಪ್ರಾಚೀನ ನಾಗರೀಕತೆಗಳಲ್ಲಿ ಗ್ರೀಕ್, ಈಜಿಪ್ತ್ ಹಾಗೂ ಮೆಸಪಟೋಮಿಯಾ ನಾಗರೀಕತೆಗಳ ಜೊತೆಗೆ ಭಾರತದ ಸಿಂಧೂ ನಾಗರೀಕತೆ ಕೂಡಾ ಒಂದಾಗಿದೆ. ಭಾರತದಲ್ಲಿ ಕ್ರಿಸ್ತಪೂರ್ವದ ಅವಧಿಯಲ್ಲಿ ಜಾರಿಗೆ ಬಂದ ಆಚರಣೆಗಳು ಹಾಗೂ ವೇದ ಮತ್ತು ಉಪನಿಷತ್ತುಗಳು ಇವುಗಳನ್ನು ಹಿಂದು ಧರ್ಮ ಎಂದು ಕರೆಯಯಲಾಗುತ್ತದೆ. ಹಾಗೆಂದು ಮಾತ್ರಕ್ಕೆ ಇದು ಜಗತ್ತಿನ ಅತ್ಯಂತ ಪುರಾತನ ಧರ್ಮವೇನಲ್ಲ. ಸತಾನತನ ಎಂದರೆ, ಅತ್ಯಂತ ಪ್ರಾಚೀನ ಎಂಬ  ಅರ್ಥ ಇದೆಯಾದರೂ  ಸನಾತನ ಪದವನ್ನು ಅಳಿಯದ, ಚಿರಂತನವಾದ ಮತ್ತು ನಿರಂತರವಾದ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಒಂದು ಧರ್ಮವು ಚಿರಂತನವಾಗಿ ಅಳಿಯದೆ ಉಳಿಯುವುದಕ್ಕೆ ಅದು ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಪರಿಷ್ಕೃತಗೊಳ್ಳುವ ಗುಣ ಅಥವಾ ಲಕ್ಷಣಗಳನ್ನು ಒಳಗೊಂಡಿರಬೇಕು. ಇಂತಹ ಗುಣ ಹಿಂದೂ ಧರ್ಮಕ್ಕೆ ಇದೆಯಾ? ಇದು ಧರ್ಮದ ಪ್ರತಿಪಾದಕರು ತಮ್ಮ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ.

ವಾಸ್ತವವಾಗಿ ಹಿಂದೂ  ಧರ್ಮವನ್ನು ಸನಾತನ ಧರ್ಮ ಎಂದು ಮಹಾತ್ಮಗಾಂಧಿಜಿಯವರು  ಕರೆಯುವುದರ ಮೂಲಕ 1921 ರಲ್ಲಿ ಈ ಶಬ್ದವನ್ನು ಜನಪ್ರಿಯಗೊಳಿಸಿದರು. ಹಿಂದೂ ಧರ್ಮದಲ್ಲಿ ಅಡಕವಾಗಿದ್ದ ವರ್ಣಾಶ್ರಮ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ ಗಾಂಧೀಜಿಯವರು ಅಸ್ಪೃಶ್ಯತೆಯ ಆಚರಣೆಯನ್ನು ಖಂಡಿಸಿದರು. ಜೊತೆಗೆ ದಲಿತರಿಗೆ ಹರಿಜನ ಅಥವಾ ಶಿವನ ಪುತ್ರರು ಅಥವಾ ಸಂತಾನ ಎಂದು ಕರೆಯುವುದರ ಮೂಲಕ ವೈದಿಕ ಪರಂಪರೆಗೆ ಸವಾಲು ಎಸೆದರು. ಗಾಂಧೀಜಿಯವರ ದೃಷ್ಟಿಕೋನದಲ್ಲಿ ಸನಾತನ ಧರ್ಮ ಎಂದರೆ,ವರ್ಗ,ಜಾತಿ ಮತ್ತು ಪಂಥಗಳ ಗಡಿಯನ್ನು ಮೀರಿದ ಧರ್ಮವೇ ನಿಜವಾದ ಸನಾತನ ಧರ್ಮ ಎಂಬುದಾಗಿತ್ತು. ಜೊತೆಗೆ ಸನಾತನ ಧರ್ಮ ಎನಿಸಿಕೊಳ್ಳಬೇಕಾದರೆ, ಅದು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಅನ್ಯಜೀವಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಗಾಯಗೊಳಿಸದೆ, ಬಾತೃತ್ವ, ಸದ್ಭಾವನೆ, ಪ್ರೀತಿ ಮತ್ತು ಔದಾರ್ಯಗಳನ್ನು ಒಳಗೊಂಡಿರಬೇಕು ಎಂದು ಪ್ರತಿಪಾದಿಸಿದ್ದರು. ಈ ಲಕ್ಷಣಗಳು ಇಂದು ಹಿಂದೂ ಧರ್ಮದಲ್ಲಿ ಈಗ ಆಚರಣೆಯಲ್ಲಿ ಇದ್ದಿದ್ದರೆ, ಅನ್ಯ ಧರ್ಮದ ವಸ್ತ್ರಗಳ ಕುರಿತಾಗಿ ಮತ್ತು ಆಹಾರ ಸಂಸ್ಕೃತಿಯ ಕುರಿತಾಗಿ ದಬ್ಬಾಳಿಕೆ ನಡೆಯುತ್ತಿರಲಿಲ್ಲ.

ಬಹುಷಃ ನನ್ನ ದೃಷ್ಟಿಕೋನದಲ್ಲಿ ಜಗತ್ತಿನ ಧರ್ಮಗಳ ಕುರಿತಾಗಿ ಬಸವಣ್ಣನವರು ನುಡಿದ ‘’ ದಯವೇ ಧರ್ಮದ ಮೂಲವಯ್ಯಾ’’ ಎಂಬ ಮಾತು ಅತ್ಯುನ್ನುತ ಹಾಗೂ ಸರಳವಾದ ವ್ಯಾಖ್ಯಾನ. ಬಸವಣ್ಣನವರ ಮಾತನ್ನು ನಾವು ಆಚರಣೆಗೆ ತಂದಿದ್ದರೆ, ಇಂದು ಧರ್ಮಗಳ ಕುರಿತಾಗಿ ಇಂತಹ ಹೀನ ಸಂಸ್ಕೃತಿಯನ್ನು ನಾವು ಕಾಣಲು ಆಗುತ್ತಿರಲಿಲ್ಲ. ಹನ್ನೆರೆಡನೇ ಶತಮಾನದ ಮತ್ತೊಬ್ಬ ವಚನಜಾರ ಮತ್ತು ಸಂತಮನೋಭಾವದ ಅಲ್ಲಮ ಪ್ರಭು  ಧರ್ಮವನ್ನು ಗುತ್ತಿಗೆ ಹಿಡಿದ ಸರ್ವಾಧಿಕಾರಿಗಳಿಗೆ ಅರ್ಥಪೂರ್ಣವಾಗಿ ಈ ವಚನದ ಮೂಲಕ ಕಿವಿಮಾತು ಹೇಳಿದ್ದಾನೆ.

ನಾನು ಘನ ನಾನು ಘನವೆಂಬ ಹಿರಿಯರುಂಟೆ ಜಗದೊಳಗೆ

ಹಿರಿಯರ ಹಿರಿಯತನ ಹಿಂದೇನಾಯಿತು?

ಹಿರಿಯ ಹಿರಿದೆಂಬ ಶಬ್ದವಡಗಿದೆಡೆ

ಆತನೇ ಶರಣ ಗುಹೇಶ್ವರಾ

ಸ್ವಾಮಿವಿವೇಕಾನಂದರು ಸಹ ಹಿಂದೂ ಧರ್ಮದ ಅನೇಕ ಆಚರಣೆಗಳನ್ನು ಅದರಲ್ಲೂ ವಿಶೇಷವಾಗಿ ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿ ಒಂದು ಧರ್ಮವು ಮನುಷ್ಯ ಧರ್ಮವಾಗಿ ಹೇಗಿರಬೇಕೆಂದು ವ್ಯಾಖ್ಯಾನಿಸಿದ್ದರು. ವಿವೇಕಾನಂದರನ್ನು ಪೂಜಿಸುವ ಧರ್ಮ ಭಕ್ತರಿಗೆ ಅವರ ನಂಬಿಕೆಗಳನ್ನು ಆಚರಣೆಗೆ ತರಲು ಈವರೆಗೆ ಸಾಧ್ಯವಾಗಿಲ್ಲ ಈ ನೆಲಮೂಲ ಸಂಸ್ಕೃತಿಯನ್ನು ಅರಿತುಕೊಳ್ಳಲು ವ್ಯಕ್ತಿಯೊಬ್ಬನಿಗೆ  ಯಾವ ಬ್ರಾಹ್ಮಣ್ಯ ಅಥವಾ ಪಾಂಡಿತ್ಯವೂ ಬೇಕಾಗಿಲ್ಲ. ನಾವು ಉಸಿರಾಡುವ ಗಾಳಿಗೆ, ಹರಿಯುವ ನೀರಿಗೆ ಮತ್ತು ಉರಿಯುವ  ಅಗ್ನಿಗೆ ಜಾತಿ,  ಧರ್ಮದ ಹಂಗಿಲ್ಲ ಎಂಬ ಕನಿಷ್ಠ  ಜ್ಞಾನವಿದ್ದರೆ ಸಾಕು.  ಅಂತಹವನು ಧರ್ಮ ಮಾತ್ರವಲ್ಲದೆ, ಬ್ರಾಹ್ಮಣ, ಲಿಂಗಾಯುತ, ಒಕ್ಕಲಿಗೆ, ಕುರುಬ, ದಲಿತ ಇತ್ಯಾದಿ  ಜಾತಿಗಳನ್ನು ಮೀರಿದ ಅಪ್ಪಟ ಮನುಷ್ಯನಾಗಿ ಬದುಕಲು ಸಾಧ್ಯವಿದೆ. ಅಂತಹ ಬದುಕನ್ನು ಬದುಕಿ ತೋರಿಸಿದ  ಈ ನೆಲದ ಬುದ್ದ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ನಮಗೆ ಇಂದಿಗೂ ಮಾದರಿಯಾಗಿದ್ದಾರೆ.

ನಮ್ಮ ಜನಪದರ ದೃಷ್ಟಿಯಲ್ಲಿ ನ್ಯಾಯವಲ್ಲದ್ದು, ಮತ್ತು ಅಮಾನುಷ ಕ್ರಿಯೆಗಳಿಂದ ಒಳಗೊಂಡಿದ್ದ ಕ್ರಿಯೆಯನ್ನು ಅವರು ‘ ಇದು ಧರ್ಮವಲ್ಲ ಎಂದು ವಿಶ್ಲೇಷಿಸಿದ್ದರು. ಈ ಒಂದೇ ಶಬ್ದದ ಮೂಲಕ  ಇಡೀ ಮನುಕುಲದ ಬದುಕನ್ನು ನಿಜವಾದ ಧರ್ಮದ ಮೂಲಕ ವ್ಯಾಖ್ಯಾನಿಸಿದ್ದರು. ಹಿಂದೂ ಧರ್ಮದ ಬಗ್ಗೆ ಪ್ರಥಮವಾಗಿ ಲೋಕಾಯತನು ವಿಮರ್ಶೆ ಮಾಡಿದ್ದನ್ನು ಹೊರತು ಪಡಿಸಿದರೆ, ತಥಾಗತ ಬುದ್ಧನು ಹಿಂದೂ ಧರ್ಮದ ಅನಿಷ್ಠಗಳಿಂದ ಸಿಡಿದೆದ್ದು ತನ್ನದೇ ಆದ ಬೌದ್ಧ ಧರ್ಮವನ್ನು ಸ್ಥಾಪಿಸಿದನು. ಜೀವನದಲ್ಲಿ ಸಂತೋಷವೇ ಪರಮ ಗುರಿ ಈ ಜಗತ್ತನ್ನು ಹೊರತು ಪಡಿಸಿದರೆ ಸ್ವರ್ಗ ಅಥವಾ ನರಕ ಎಂಬ ಲೋಕಗಳಿಲ್ಲ, ಹುಟ್ಟು ಸಾವುಗಳಿಂದ ಬಿಡುಗಡೆ ಎಂಬುದು ಕೇವಲ ಭ್ರಮೆ, ಮನುಷ್ಯ ಜನ್ಮಕ್ಕೆ ಪುನರ್ಜನ್ಮ ಎನ್ನುವುದು ಹುಚ್ಚು ಪರಿಕಲ್ಪನೆ. ಮನುಷ್ಯ ಜೀವಿ ತಾನು ಬದುಕಿರುವ ಕಾಲಘಟ್ಟದಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ ಸುಖ ಮತ್ತು ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಹೊಂದಿರಬೇಕು. ಈ ಜಗತ್ತು ಯಾವೊಂದು ಅಗೋಚರ ಶಕ್ತಿಯಿಂದ ನಿರ್ಮಾಣವಾಗಿಲ್ಲ. ಇಲ್ಲಿನ ಭೂಮಿ, ಅಗ್ನಿ, ವಾಯು, ಜಲ ಎಲ್ಲವೂ ಪ್ರಕೃತಿಯ ಸೃಷ್ಟಿಯೇ ಹೊರತು ಯಾವ ದೇವರ ಸೃಷ್ಟಿಯಲ್ಲ. ವೇದಗಳು ಮತ್ತು ಯಜ್ಞ ಯಾಗಾದಿಗಳು ಕೆಲವು ಜನರು ಹೊಟ್ಟೆಪಾಡಿಗಾಗಿ ಸೃಷ್ಟಿಸಿದ ಕ್ರಿಯೆಗಳು ಇದು ಬುದ್ಧನ ಅಚಲ ನಂಬಿಕೆಯಾಗಿತ್ತು.

ಬುದ್ಧನ ದೃಷ್ಟಿಕೋನದಲ್ಲಿ  ಅತೀಂದ್ರಿ ಶಕ್ತಿಯನ್ನು ನಂಬುವುದು ಧರ್ಮವಲ್ಲ,  ದೇವರಲ್ಲಿ ನಂಬಿಕೆ ಇಡುವುದು ಧರ್ಮವಲ್ಲ, ಬ್ರಹ್ಮಲೋಕ ಆಧಾರಿತ ಧರ್ಮವು ಸುಳ್ಳು ಧರ್ಮವಾಗಿರುತ್ತದೆ, ಯಜ್ಞಗಳ ನಂಬಿಕೆ ಧರ್ಮವಲ್ಲ, ಧರ್ಮಗ್ರಂಥಗಳನ್ನು ಓದುವುದು ಧರ್ಮವಲ್ಲ, ಊಹೆಯ ಆಧಾರಿತ ನಂಬಿಕೆಯು ಧರ್ವಲ್ಲ ಎಂಬ ವಿಷಯವು ಇಂದಿಗೂ ಮುಖ್ಯವಾದುದು. ಇದೇ ಮಾತನ್ನು ಕುವೆಂಪು ಅವರು ತಮ್ಮ ಮುವತ್ತೊಂದನೇ ವಯಸ್ಸಿನಲ್ಲಿ ಯುವಜನರಿಗೆ ನಿರಂಕಶ ಮತಿಗಳಾಗಿ ಎಂಬ ಉಪನ್ಯಾಸದಲ್ಲಿ ‘’ ಆ ಚತುರ್ಮುಖಿ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು ನಾನೀಗ ನಿಮ್ಮೊಡನೆ ಮಾತನಾಡುತ್ತಿರುವಂತೆ ಋಷಿಗಳಿಗೆ ವೇಧಗಳನ್ನು ಬೋಧಿಸಿದೆನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ. ಯಾವುದೋ ಕಾಲದಲ್ಲಿ ಯಾವುದೋ ಸಮಾಜಕ್ಕಾಗಿ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ನೀವು ನಂಬಿ ತಲೆತೂಗಬೇಡಿ’’ ಎಂದು ಹೇಳಿದ್ದರು.

ಉದಯಗಿರಿ ಸ್ಟಾಲಿನ್ ಮಾತುಗಳಲ್ಲಿ ಬುದ್ಧ, ಗಾಂಧಿ ಮತ್ತು ಕುವೆಂಪು ಅವರ ವಿಚಾರಗಳು ಪುನರಾವರ್ತನೆಯಾಗಿವೆ ಎಂದು ನಾವುಗಳು ಹೆಮ್ಮೆ ಪಡಬೇಕೇ ಹೊರತು ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ ದೇಶಭಕ್ತರ ಹಾಗೂ ಧರ್ಮಭಕ್ತರ ಉನ್ಮಾದದ ಮಾತುಗಳನ್ನು ನಾವುಗಳು ಕಡಎಗಣಿಸುವುದು ಸೂಕ್ತ.

 

 

 

ಬಹುತ್ವದ ಭಾರತದ ಸವಾಲುಗಳು

 



ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಇಲ್ಲಿಗೆ ಎಪ್ಪತ್ತೈದು ವರ್ಷಗಳಾದವು.  ಈ ಸಂದರ್ಭದಲ್ಲಿ ಬಹುಸಂಸ್ಕೃತಿಯ ನೆಲವಾದ ಭಾರತದ ನೆಲದಲ್ಲಿ ಈಗ ತಾಂಡವವಾಡುತ್ತಿರುವ ಕೋಮುವಾದದ ಪರಿಣಾಮದಿಂದಾಗಿ  ಏಕರೂಪಿ  ಚಿಂತನೆಗಳು ಮುನ್ನೆಲೆಗೆ ಬಂದು  ಬಹುತ್ವದ ಭಾರತವು  ನಶಿಸಿ  ಹೋಗುತ್ತಿದೆ. ನಮ್ಮ ದೇಶಿ ಚಿಂತನೆಗಳು ಮಾತ್ರವಲ್ಲದೆ;  ತತ್ವಪದಕಾರರ ಆಶಯಗಳು ಮತ್ತು  ಮನುಕುಲಕ್ಕೆ ಬೆಳಕಾಗಬಲ್ಲ ದಾರ್ಶನಿಕರ ಚಿಂತನೆಗಳು ಇವೆಲ್ಲವೂ ಕಣ್ಣೆದುರು ಅಳಿಸಿಹೋಗುತ್ತಿರುವ ಆತಂಕ ನಮ್ಮೆದುರು  ಸೃಷ್ಟಿಯಾಗಿದೆ.

ಪಾಶ್ಚಿಮಾತ್ಯ ಜಗತ್ತಿನ ಚಿಂತನೆ ಮತ್ತು ವಸಾಹಿತು  ಜಗತ್ತಿನ ಏಕಾಧಿಪತ್ಯ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಮಹಾತ್ಮ ಗಾಂಧೀಜಿ ಮತ್ತು ಅವರ  ಸಮಕಾಲೀನ ಸಹಸ್ರಾರು ಹೋರಾಟಗಾರರು ಕನಸು ಕಂಡಿದ್ದು ಬಹು ಸಂಸ್ಕೃತಿಯ ಭಾರತವನ್ನಲ್ಲದೆ  ಏಕ ಸಂಸ್ಕೃತಿ ಅಥವಾ ಏಕ ಧರ್ಮದ ಭಾರತವನ್ನಲ್ಲ. ಅವರೆಲ್ಲರ ಕನಸಿನ ಭಾರತದಲ್ಲಿ ಹಿಂದೂ ಧರ್ಮದ ವ್ಯಕ್ತಿ ಇದ್ದನು ನಿಜ ಜೊತೆಗೆ ಮುಸಲ್ಮಾನ, ಸಿಖ್, ಪಾರ್ಸಿ, ಕ್ರೈಸ್ತ, ಹೀಗೆ ಎಲ್ಲಾ ಧರ್ಮದ ಜನರಿದ್ದರು. ನೊಂದ ಜನರಿಗೆ ಸಮಾಧಾನ ಹೇಳುವುದರ ಜೊತೆಗೆ ಪರಿಹಾರ ಮತ್ತು  ಹಸಿದ ಜನರಿಗೆ ಅನ್ನ ಹಾಗೂ ಸೂರಿಲ್ಲದವರಿಗೆ ವಸತಿ ಇವುಗಳು ಅವರ ನಿಜ ಭಾರತದ ಕನಸುಗಳಾಗಿದ್ದವು. ಅವರ ಕಲ್ಪನೆಯ ಭಾರತದಲ್ಲಿ ಶ್ರೀ ರಾಮನ ಜೊತೆಗೆ ಶಿವನೂ ಇದ್ದನು. ಹನುಮನ ಜೊತೆಗೆ ಗಣಪನೂ ಇದ್ದನು.  ಇಷ್ಟು ಮಾತ್ರವಲ್ಲದೆ, ನಮ್ಮ ಗ್ರಾಮೀಣ ಸಂಸ್ಕೃತಿಯ ಜನರ ಎದೆಯೊಳಗೆ ಮಾರಮ್ಮನಿಗೆ ಮತ್ತು  ಬೋರಪ್ಪನಿಗೂ ಸ್ಥಾನವಿತ್ತು. ಬಗೆ ಬಗೆಯ ಭಾಷೆಗಳಿದ್ದವು, ಹಾಡುಗಳಿದ್ದವು, ಆಯಾ ಪ್ರಾದೇಶಿಕ ಸಂಸ್ಕೃತಿಗಳು ಜನರ ಜೀವನದ ಅಂಗವಾಗಿದ್ದವು. ಒಂದು ತಟ್ಟೆಯ ಅನ್ನವನ್ನು ಹಾಗೂ ಒಂದು ಬಟ್ಟಲಿನ ನೀರನ್ನು ಹಂಚಿಕೊಂಡು ತಿನ್ನುವ ಮತ್ತು ಕುಡಿಯುವ ಮಾನವೀಯ ಗುಣ ಅವರಲ್ಲಿತ್ತು.

ಭಾರತದ ನೆಲದಲ್ಲಿ ವಿಶೇಷವಾಗಿ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಲವು ತತ್ವ ಸಿದ್ಧಾಂತಗಳ ಸರ್ಕಾರಗಳು ಈ ದೇಶವನ್ನು ಮತ್ತು ಇಲ್ಲಿನ ರಾಜ್ಯಗಳನ್ನು  ಆಳಿವೆ. ಆದರೆ, 2014 ರಿಂದ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ. ಸರ್ಕಾರವು ತನ್ನ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಮುನ್ನೆಲೆ ತರಲಾದ ಧರ್ಮ ಮತ್ತು ಜಾತಿಯ ವಿಚಾರಗಳು ಇತ್ತೀಚೆಗೆ ಭಾರತದ ಬಹುಸಂಸ್ಕೃತಿಯ ಮೂಲವನ್ನು ಅಳಿಸಿ ಹಾಕುತ್ತಿವೆ. ಅಕ್ಷರವಂತರು ವಿಚಾರವಂತರು, ವಿದ್ವಾಂಸರು ಎನಿಸಿಕೊಂಡವರು ಮಾತ್ರವಲ್ಲದೆ ಜಾತಿಯತೆಯನ್ನು ಉಸಿರಾಡುತ್ತಿರುವ  ಪ್ರಸಿದ್ಧ ಕಾದಂಬರಿಕಾರ .ಎಸ್.ಎಲ್,ಭೈರಪ್ಪನಂತಹವರು ಈ ಅಮಾನುಷ ಕ್ರಿಯೆಗಳಿಗೆ ವಕ್ತಾರರಾಗಿ ಶ್ರಮಿಸುತ್ತಿರುವುದು ವರ್ತಮಾನದ ಭಾರತದ ದುರಂತಗಳಲ್ಲಿ ಒಂದು.  ಗುಜರಾತ್ ರಾಜ್ಯದಲ್ಲಿ ಮೂರೂವರೆ ದಶಕಗಳ ಕಾಲ ತತ್ವಶಾಸ್ತ್ರ ಬೋಧಿಸಿದ ಪ್ರಾಧ್ಯಾಪಕ ಮತ್ತು ರಾಷ್ಟ್ರೀಯ ಪ್ರೊಫೆಸರ್  ಎಂಬ ಗೌರವ ಹುದ್ದೆಗೆ ನೇಮಕಗೊಂಡಿರುವ ಪ್ರೊ.ಎಸ್.ಎಲ್. ಭೈರಪ್ಪನವರು ಓದಿರುವ ತತ್ವಶಾಸ್ತ್ರ ಯಾವುದು? ಅದು ಎಂದಾದರೂ ಈ ನೆಲದ  ಮುಸ್ಲಿಂರನ್ನು ದ್ವೇಷಿಸಬೇಕು ಎಂದು ಹೇಳಿರುವ ದಾಖಲೆ ಇದೆಯಾ?

ಅರ್ಧ ಶತಮಾನದ ಅವಧಿಯಲ್ಲಿ ಅನೇಕ ಕಾದಂಬರಿಗಳನ್ನು ಬರೆದು ಜನಪ್ರಿಯ ಕಾದಂಬರಿಕಾರ  ಎಂದು ಕರೆಸಿಕೊಂಡ ಹಾಗೂ ಸುಮಾರು ಎಂಬತ್ತೇಳು ವರ್ಷ ದಾಟಿರುವ ಭೈರಪ್ಪನವರಿಗೆ  ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬಂದಿರುವ ಭಾರತದ ಸಂಸ್ಕೃತಿಯ ಕುರಿತಾಗಿ  ವಯಸ್ಸಿನಲ್ಲಿ ಇಪ್ಪತ್ತೈದು ವರ್ಷ ಚಿಕ್ಕವನಾದ ನನ್ನಂತಹವನು ಪಾಠ ಹೇಳಿಕೊಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ.  ಇಲ್ಲಿನ ಓರ್ವ ಅನಕ್ಷರಸ್ಥ ಬಡವನಿಗೆ ರಾಮನೂ ಒಂದೇ, ರಹಿಮನೂ ಒಂದೇ. ಆಗಿದ್ದಾನೆ. ನಮ್ಮ ಗ್ರಾಮೀಣ ಬದುಕಿನ ಜನಪದರು ಕಣ್ಣಿಗೆ ಬಿದ್ದ ಕಲ್ಲುಗಳನ್ನು ಎತ್ತಿಕೊಂಡು ಬಂದು ಮರದ ಬುಡದಲ್ಲಿಟ್ಟು ಅದಕ್ಕೆ ಅರಿಶಿನ, ಕುಂಕಮ ಹಚ್ಚಿ ದೇವರೆಂದು ಪೂಜಿಸಿದವರು. ಸಕಲೆಂಟು ದೇವರನ್ನು ಅಣ್ಣತಮ್ಮಂದಿರೆಂದು, ದೇವತೆಗಳನ್ನು ಅಕ್ಕತಂಗಿಯರೆಂದು ಕರೆದು ಕೈಯೆತ್ತಿ ಮುಗಿದರು. ನಮ್ಮ ಜನಪದರಿಗೆ ಅಥವಾ ಗ್ರಾಮೀಣ ಭಾಗದ ಹಿರಿಯ ಜೀವಗಳಿಗೆ ಇಲ್ಲದ ವಿವೇಕ ಪ್ರೊಫೆಸರ್ ಎಂದು ಕರೆಸಿಕೊಂಡ  ಇಂದಿನ ಜನರಿಗೆ  ಇಲ್ಲದಿರುವುದು ದುರಂತವಲ್ಲದೆ ಬೇರೇನೂ ಅಲ್ಲ.

ಗೋಮಾತೆಯ ಹೆಸರಿನಲ್ಲಿ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಧಾರ್ಮಿಕ ಚಿಂತಕರೆಂಬ ಅಜ್ಞಾನಿಗಳಿಗೆ ನಮ್ಮ ಗ್ರಾಮೀಣ ಭಾಗದ ರೈತರ ಮನೋಭಾವ ಹೇಗಿತ್ತು ಎಂಬ ಕನಿಷ್ಠ ಜ್ಞಾನವಿಲ್ಲ, ಕರು ಹಾಕಿದ ಹಸು ಅಥವಾ ಎಮ್ಮೆಯ ಕೆಚ್ಚಲಿನಲ್ಲಿ ಇರುವ ನಾಲ್ಕು ತೊಟ್ಟುಗಳಲ್ಲಿ ಒಂದನ್ನು ಕರು ಹಾಲು ಕುಡಿಯುವುದಕ್ಕೆ ಮೀಸಲಾಗಿಟ್ಟು ಉಳಿದ ಮೂರರಲ್ಲಿ ಹಾಲು ಹಿಂಡುವ ಪದ್ಧತಿ  ಇವತ್ತಿಗೂ ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲದೆ.  ನಮ್ಮ ಜನಪದರು  ಇಂದಿನ ಆಧುನಿಕ ಮನೋಭಾವದ ಜನಾಂಗದ ಹಾಗೆ ಹುಟ್ಟಿದ ಗಂಡು ಕರುವನ್ನು ರಸ್ತೆಯಲ್ಲಿ  ಬಿಟ್ಟು ಬಂದು  ಹಸುಗಳಲ್ಲಿ ಹಾಲು ಹಿಂಡುವ  ಅಧರ್ಮಿಗಳಲ್ಲ. ದೇಶಾದ್ಯಂತ ನಗರಗರಳಲ್ಲಿ ತುಂಬಿ ತುಳುಕಾಡುತ್ತಿರುವ ಹಾಗೂ ಆಹಾರ ಮತ್ತು ಕುಡಿಯುವ ನೀರಿಗಾಗಿ ಪರದಾಡುತ್ತಿರುವ  ಬೀಡಾಡಿ ದನ ಕರುಗಳ ಬಗ್ಗೆ .ಸಾಂಸ್ಕೃತಿಕ ಚಿಂತಕರೆಂಬ ಈ ಆಧುನಿಕ ಧಾರ್ಮಿಕ ಭಯೋತ್ಪಾದಕರು ಪ್ರತಿಪಾದಿಸುವ  ಹುಸಿ ಧರ್ಮಕ್ಕಿಂತ ನಮ್ಮ ಜನಪದರು ಶತಮಾನಗಳದ್ದಕ್ಕೂ  ಪ್ರತಿಪಾದಿಸಿಕೊಂಡು ಬಂದಿರುವ ಮನುಷ್ಯ ಧರ್ಮವೇ  ನಿಜವಾದ ಧರ್ಮವಾಗಿದೆ.

ನಮ್ಮ ಜನಪದರ ದೃಷ್ಟಿಯಲ್ಲಿ ನ್ಯಾಯವಲ್ಲದ್ದು, ಮತ್ತು ಅಮಾನುಷ ಕ್ರಿಯೆಗಳಿಂದ ಒಳಗೊಂಡಿದ್ದ ಕ್ರಿಯೆಯನ್ನು ಅವರು ‘ ಇದು ಧರ್ಮವಲ್ಲ’ ಎಂದು ವಿಶ್ಲೇಷಿಸಿದ್ದರು. ಈ ಒಂದೇ ಶಬ್ದದ ಮೂಲಕ  ಇಡೀ ಮನುಕುಲದ ಬದುಕನ್ನು ನಿಜವಾದ ಧರ್ಮದ ಮೂಲಕ ವ್ಯಾಖ್ಯಾನಿಸಿದ್ದರು. ಈ ಕಾರಣದಿಂದಾಗಿ ನಮ್ಮ ಹಿಂದಿಯ ಪ್ರಸಿದ್ಧ ಕವಿ  ಜಾವೆದ್ ಅಕ್ತರ್ ರವರು ಬಹುತ್ವ ಭಾರತದ ಮಹತ್ವವನ್ನು ಪ್ರತಿಪಾದಿಸುತ್ತಾ  ‘ಭಾರತಕ್ಕೆ ಬಹುತ್ವ ಅನಿವಾರ್ಯವಾಗಿದೆ. ಜಗತ್ತಿನ ಮತ್ಯಾವ ದೇಶದಲ್ಲಿಯೂ ಬಹುತ್ವವನ್ನು ಕಾಣಲು ಸಾಧ್ಯವಿಲ್ಲ. ಭಾರತದ ಭೌಗೋಳಿಕ ಲಕ್ಷಣ, ಭಾಷೆ, ಸಾಂಸ್ಕೃತಿಕತೆ, ವಸ್ತ್ರವಿನ್ಯಾಸ ಎಲ್ಲವೂ ಭಿನ್ನವಾಗಿದೆ ನಿಜ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಮಹಾರಾಷ್ಟ್ರದಿಂದ ಮಣಿಪುರದವರೆಗೆ ವೈವಿಧ್ಯತೆ ಇದೆ. ಇವೆಲ್ಲಕ್ಕೂ ನಮ್ಮನ್ನು ಒಡ್ಡಿಕೊಳ್ಳುತ್ತಲೇ, ಬೇರೆ ಇದ್ದೇವೆ ಎಂದು ಭ್ರಮಿಸುತ್ತೇವೆ. ಏನೇ ಪ್ರಯತ್ನ ನಡೆದರೂ ಇದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ’ ಎಂದು ನುಡಿದಿದ್ದಾರೆ.

ಇಂತಹದ್ದೇ ಅರ್ಥಪೂರ್ಣ ಮಾತುಗಳನ್ನು ಭಾರತದ ಪ್ರಸಿದ್ಧ ಇತಿಹಾಸಕಾರರಾದ ಕೆ.ನೀಲಕಂಠಶಾಸ್ತ್ರಿಯವರು 1959 ರಲ್ಲಿ ದಾಖಲಿಸಿದ್ದಾರೆ. ಅವರ ಮಾತುಗಳು ಹೀಗಿವೆ’ ‘ಭಾರತದ ಪ್ರಾಚೀನ ಇತಿಹಾಸವು ಐದು ಸಾವಿರ ವರ್ಷಗಳಿಗಿಂತ ಹಿಂದಿನದು. ಅದು ತನ್ನ ಜೀವನದ ಅಪರಿಮಿತ ಬಹುತ್ವದ ಮೂಲಕ ಸಾಗುವ ಏಕತೆಯ ಬಲವಾದ ಎಳೆಯೊಂದಿಗೆ ಸೂಕ್ಷ್ಮವಾಗಿದೆ.  ಸಂತರು, ತತ್ವಜ್ಞಾನಿಗಳು, ಕವಿಗಳು, ಕಲಾವಿದರು ಹೀಗೆ ಹಲವಾರು ಮಂದಿ ನಾವೀಗ ಸಾಂಸ್ಕೃತಿಕ ಎಂದು  ಕರೆಯುವ ಈ ವ್ಯವಸ್ಥೆಯನ್ನು ತಲೆಮಾರಿನಿಂದ ತಲೆಮಾರಿಗೆಗೆ  ದಾಟಿಸಿದ್ದಾರೆ. ಹೀಗೆ ರವಾನೆಯಾಗುವ ಜೀವನ ಮೌಲ್ಯಗಳು ಮತ್ತು ಸಾಮಾಜಿಕ ರೂಪಗಳ ಒಟ್ಟು ಸಂಗ್ರಹವೇ ಬಹುತ್ವದ ಭಾರತವಾಗಿದೆ.’ ಈ ಸಂಸ್ಕೃತಿಯನ್ನು ನಮ್ಮ ಭಾರತದ ಗ್ರಾಮೀಣ ಕೃಷಿ ಸಮಾಜವು ಒಳಗೊಂಡಿತ್ತು. ಅಲ್ಲಿನ ಜನರ ಸಂತೋಷವು ಮಳೆ, ಬೆಳೆ ಹಾಗೂ ಜಾನುವಾರುಗಳ ಯೋಗಕ್ಷೇಮವನ್ನು ಒಳಗೊಂಡಿತ್ತು. ಈ ಕಾರಣಕ್ಕಾಗಿ ನಾವು ಪಂಚಭೂತಗಳೆಂದು ಕರೆಯುವ ನೆಲ, ಜಲ, ಅಗ್ನಿ, ವಾಯು, ಆಕಾಶಗಳಿಗೆ ಪೂಜಿಸುವುದರೊಂದಿಗೆ ಈ ನೆಲದ ಸರ್ವ ಜೀವಿಗಳ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಿದ್ದರು. ಅವರುಗಳು ಎಂದಿಗೂ ವೇದ, ಉಪನಿಷತ್ತುಗಳನ್ನು ಓದಲಿಲ್ಲ, ಮಂತ್ರಗಳನ್ನು ಪಠಿಸಲಿಲ್ಲ ಆದರೆ, ತಮ್ಮ ಸುತ್ತಮುತ್ತಲಿನ  ಜಗತ್ತಿನ ಸಮಗ್ರ ಬದುಕು ನೆಮ್ಮದಿಯಾಗಿರಬೇಕು ಎಂಬುದು ಅವರ ಬದುಕಿನ ಮೂಲಮಂತ್ರವಾಗಿತ್ತು.

ಹತ್ತೊಂಬತ್ತನೇ ಶತಮಾನದಲ್ಲಿ ತನ್ನ ವಿಶಿಷ್ಠ ಮನುಕುಲದ ಚಿಂತನೆಗಳಿಂದ  ಇಡೀ ಜಗತ್ತನ್ನೇ ಪ್ರಭಾವಿಸಿದ ಚಿಂತಕ ಕಾರ್ಲ್ ಮಾರ್ಕ್ಸ್ ರವರು  ಜೀವನದುದ್ದಕ್ಕೂ ಬಡತನವನ್ನೇ ಹಾಸಿ. ಹೊದ್ದು  ಜೀವನವನ್ನು ಕಳೆದವರು. 1840 ಆಸುಪಾಸಿನ ಸಮಯದಲ್ಲಿ ತಮ್ಮ ಹನ್ನೆರೆಡು ವರ್ಷದ ಪುತ್ರನೊಬ್ಬ ಅನಾರೋಗ್ಯಕ್ಕೆ ತುತ್ತಾದಾಗ  ಆ ಕಾಲದಲ್ಲಿ ಅವರ ಬಳಿ ಔಷಧಕ್ಕಾಗಿ  ಕೇವಲ ಎರಡು ರೂಪಾಯಿನಷ್ಟು ಹಣವಿರಲಿಲ್ಲ. ಇಂತಹ ಧಾರಣ ಸ್ಥಿತಿಯಲ್ಲಿ  ಅವರ ಪುತ್ರ ನಿಧನ ಹೊಂದಿದನು. ರಾತ್ರಿಯಿಡಿ ಪುತ್ರನ ಶವದ ಮುಂದೆ ಕುಳಿತಿದ್ದ ಮಾರ್ಕ್ಸ್ ರವರು ಬೆಳಗಿನ ಜಾಗ ಮೂರು ಗಂಟೆ ಸಮಯದಲ್ಲಿ ತನ್ನ ಜೀವದ ಗೆಳೆಯ ಏಂಜೆಲ್ಸ್ ಗೆ ಕಾಗದ ಬರೆಯುತ್ತಾ ‘ ಪ್ರಿಯ ಮಿತ್ರಾ, ಈ ಕ್ಷಣದಲ್ಲಿ ಬದುಕಬಾರದು ಎನಿಸಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ರಾತ್ರಿಯಿಡೀ ಯೋಚಿಸಿದೆ. ಆದರೆ, ಈ ಜಗತ್ತಿನ ಕಾರ್ಮಿಕರ ಕಣ್ಣುಗಳಲ್ಲಿ ಬೆಳಕು ನೋಡಬೇಕೆಂಬ ಏಕೈಕ ಆಸೆಯು ನನ್ನನ್ನು ಜೀವಂತ ಉಳಿಸಿದೆ.’  ಎಂದು ತಮ್ಮ ಮನದಾಳದ  ಆಸೆಯನ್ನು ದಾಖಲಿಸಿದ್ದಾರೆ. ಕಾರ್ಲ್ ಮಾರ್ಕ್ಸ್ ಕನಸಿದ್ದ ಕಾರ್ಮಿಕರು ಎಂದರೆ, ಅವರು ಕೇವಲ ಕ್ರೈಸ್ತರಾಗಿರಲಿಲ್ಲ ಅಥವಾ ಯಹೂದಿಗಳಾಗಿರಲಿಲ್ಲ, ಅವರಲ್ಲಿ ಹಿಂದೂ, ಮುಸಲ್ಮಾನ, ಬೌದ್ಧ ಧರ್ಮೀಯ, ಹೀಗೆ ಜಗತ್ತಿನ ಶ್ರಮಿಕರೆಲ್ಲರೂ ಇದ್ದರು. ಈ ಕಾರಣಕ್ಕಾಗಿ ಮಾರ್ಕ್ಸ್ ವಾದ ಎಂಬುದು ಮನುವಾದಕ್ಕಿಂತ ಸಾವಿರ ಪಟ್ಟು ಶ್ರೇಷ್ಠ ಹಾಗೂ ಉತ್ಕೃಷ್ಟ ಚಿಂತನೆಯಾಗಿದೆ. ಕೇವಲ ಭೂಮಿ, ಸರಕು ಅಥವಾ ವ್ಯವಹಾರಕ್ಕೆ ವಿನೋಗಿಸುವ ಹಣ ಮಾತ್ರ ಬಂಡವಾಳವಲ್ಲ, ಮನುಷ್ಯನ ಶ್ರಮ ಅರ್ಥಾತ್ ಕಾರ್ಮಿಕರ ಶ್ರಮವೂ ಕೂಡ ಬಂಡವಾಳ ಎಂಬ ಪರಿಕಲ್ಪನೆಯನ್ನು ಮಾರ್ಕ್ಸ್ ಈ ಜಗತ್ತಿಗೆ ನೀಡಿದರು. ಇಂದು ಮಾನವ ಸಂಪನ್ಮೂಲ ಎಂದು ಕರೆಯುವ ಈ ಪರಿಕಲ್ಪನೆಯ ಮೂಲ ಜನಕ  ಕಾರ್ಲ್ ಮಾರ್ಕ್ಸ್ ಅವರನ್ನು ಹೀಗೆಳೆಯುವ ಮನುವಾದಿಗಳು ಒಮ್ಮೆ ಭಾರತದ ಇತಿಹಾಸ ಮಾತ್ರವಲ್ಲ,ಜಗತ್ತಿನ ಇತಿಹಾಸವನ್ನು ಗಂಭೀರವಾಗಿ  ಅಧ್ಯಯನ ಮಾಡುವುದು ಒಳಿತು.

ದೇಶದ ಪ್ರಧಾನಿಯಾಗಿ 2014 ರಲ್ಲಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರು ಮೇ ತಿಂಗಳ 26 ರಂದು ಲೋಕಸಭೆಯನ್ನು ಪ್ರವೇಶಿಸುವಾಗ ಅದರ ಮೆಟ್ಟಿಲುಗಳಿಗೆ ತಲೆ ತಾಗಿಸಿ ನಮಸ್ಕಾರ ಮಾಡಿದ್ದರು. ಅವರ ಈ ನಮಸ್ಕಾರ  ಯಾವ ಉದ್ದೇಶಕ್ಕಾಗಿ ಎಂದು ಈಗ ನಾವುಗಳು ಪ್ರಶ್ನಿಸಬೇಕಿದೆ. ಭಾರತದ ಸಂವಿಧಾನದ ಮೂಲ ಆಶಯಗಳನ್ನು ಓರ್ವ ಪ್ರಧಾನಿಯಾಗಿ ಈ ವ್ಯಕ್ತಿಯು ಅಧ್ಯಯನ ಮಾಡಿದ್ದರೆ, ಏಕ ಧರ್ಮದ ಬಗ್ಗೆ, ಏಕ ದೇವರ ಬಗ್ಗೆ ಮತ್ತು ಏಕ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿರಲಿಲ್ಲ. ಡಾ.ಅಂಬೇಡ್ಕರ್ ಅವರ ಆಳವಾದ ಅಧ್ಯಯನ ಮತ್ತು ಬಹುಸಂಸ್ಕೃತಿಯ ಭಾರತದ ಕುರಿತಾಗಿ ಹಾಗೂ ಇಲ್ಲಿನ ಧರ್ಮಗಳ ಕುರಿತಾಗಿ ಅವರಿಗಿದ್ದ ಆಳವಾದ ಜ್ಞಾನದಿಂದಾಗಿ ಜಗತ್ತಿನ ಸರ್ವ ಶ್ರೇಷ್ಠ ಸಂವಿಧಾನವು ಭಾರತದಲ್ಲಿ ರಚನೆಯಾಗಲು ಕಾರಣವಾಯಿತು.

 ದೇಶದ ಸಂಸತ್ ಸದನದಲ್ಲಿ 1949 ನವಂಬರ್ 25 ರಂದು ಅಂದರೆ, ಭಾರತಕ್ಕೆ ಸಂವಿಧಾನವನ್ನು ಅರ್ಪಿಸುವ ಒಂದು ದಿನ ಮೊದಲು   ಅವರು ಲೋಕಸಭೆಯಲ್ಲಿ  ಮಾತನಾಡುತ್ತಾ, ‘ ಈ ನೆಲಕ್ಕೆ ಬಹುತ್ವವೇ ಭಾರತದ ಮೂಲ ಧರ್ಮವಾಗಿದೆ.  ರಾಷ್ಟ್ರ ನಿರ್ಮಾಣದ ನೆಪದಲ್ಲಿ   ದೇಶಕ್ಕಿಂತ ಜಾತಿ, ಧರ್ಮ ದೊಡ್ಡದು  ಎಂಬ ಮಾತಾಡಿದರೆ ನಮಗೆ  ದಕ್ಕಿರುವ ಈ ಸ್ವಾತಂತ್ರ್ಯ ನಾಶವಾಗಬಹುದು” ಎಂಬ  ಎಚ್ಚರಿಕೆಯನ್ನು ಅವರು ನೀಡಿದ್ದರು. ಅಷ್ಟು ಮಾತ್ರವಲ್ಲದೆ ಈ ಸಂವಿಧಾನವನ್ನು ಯಾವುದೇ ಮಹಾತ್ಮನ ಪಾದದ ಬಳಿ ಇಡಕೂಡದು ಎಂಬ ಕಟುವಾದ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, .ಇಂದು ವರ್ತಮಾನದ ಭಾರತದಲ್ಲಿ ನಾವು ಕಾಣುತ್ತಿರುವ ಸಮಾಜದಲ್ಲಿ ಗಾಂಧೀ- ಅಂಬೇಡ್ಕರ್ ಕನಸಿದ್ದ ಬಹುತ್ವ ಜೀವಂತವಾಗಿದೆಯಾ? ಎಂದು ನಮ್ಮ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.

ಸಂವಿಧಾನ ರಚನೆಯ ಸಂದರ್ಭದಲ್ಲಿ ಭಾರತವನ್ನು ಹಿಂದೂಸ್ತಾನ ಎಂದು ಘೋಷಿಸಬೇಕು, ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯನ್ನಾಗಿ ಜಾರಿ ಮಾಡಬೇಕು ಎಂದು ಸನಾತನವಾದಿಗಳು ಬೇಡಿಕೆ ಇಟ್ಟಾಗಲೂ ಸಹ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನಿರ್ಧಾಕ್ಷಿಣ್ಯವಾಗಿ ತಿರಸ್ಕರಿಸಿದರು. ತಳ ಸಮುದಾಯದ ಅಸ್ಪೃಶ್ಯ ಕುಟುಂಬದಲ್ಲಿ ಜನಿಸಿದ್ದ ಅವರಿಗೆ ಈ ಬಹುಸಂಸ್ಕೃತಿಯ ನೆಲದಲ್ಲಿ ಜನಿಸಿದ ಪ್ರತಿಯೊಂದು ಗಂಡು ಅಥವಾ ಹೆಣ್ಣು ಅಪ್ಪಟ ಭಾರತೀಯ ನಾಗರೀಕರಾಗಿ ಬದುಕಬೇಕೇ ಹೊರತು ಓರ್ವ ಬ್ರಾಹ್ಮಣನಾಗಿ ಓರ್ವ ದಲಿತನಾಗಿ ಶ್ರೇಣೀಕೃತ ಸಮಾಜದಲ್ಲಿ ಬದುಕುವುದು ಬೇಕಿರಲಿಲ್ಲ. ಧರ್ಮಾತೀತವಾಗಿ ಜಾತ್ಯಾತೀತವಾಗಿ ಜೀವಿಸುವುದೇ ನಿಜವಾದ ಮಾನವ ಧರ್ಮ ಎಂಬುದು ಅಂಬೇಡ್ಕರ್ ಆಶಯವಾಗಿತ್ತು. ಇದು ಗಾಂಧೀಜಿಯವರ ಕನಸು ಕೂಡಾ ಆಗಿತ್ತು. ಅವರು 1908 ರಲ್ಲಿ ಬರೆದ ಹಿಂದ್ ಸ್ವರಾಜ್ ಕೃತಿಯಲ್ಲಿ  ಭಾರತವೆಂಬುದು ಹಲವು ಧರ್ಮಗಳೆಂಬ ಹೂ ಗಿಡಗಳ ತೋಟವೇ ಹೊರುತು ಕಾಡು ಮೃಗಗಳ ಅರಣ್ಯವಲ್ಲ ಎಂದು ಪ್ರತಿ ಪಾದಿಸಿದ್ದರು.

ಗೌತಮ ಬುದ್ಧನು  ಒಂದು ಧರ್ಮವು ಸದ್ಧರ್ಮ ಅಥವಾ ಒಳ್ಳೆಯ ಧರ್ಮವಾಗಬೇಕಾದರೆ, ಮನುಷ್ಯನಿಗೆ ಪ್ರಜ್ಞೆಯ ಜೊತೆಗೆ ಶೀಲವೂ ಅಗತ್ಯ ಎಂದು ಪ್ರತಿಪಾಧಿಸಿದ್ದಾನೆ. ಇಂದು ಹಿಂದೂ ಧರ್ಮದ ಬಗ್ಗೆ ಎದೆಯುಬ್ಬಿಸಿ ಮಾತನಾಡುವ ಧಾರ್ಮಿಕ ಭಯೋತ್ಪಾದಕರು ಒಮ್ಮೆ ನಮ್ಮ ಕನ್ನಡದ ಮಹಾನ್  ವಚನಕಾರ ಅಲ್ಲಮಪ್ರಭುವಿನ

ವೇದವೆಂಬುದು ಓದಿನ ಮಾತು

ಶಾಸ್ತ್ರವೆಂಬುದು ಸಂತೆಯ ಸುದ್ದಿ

ಪುರಾಣವೆಂಬುದು ಪುಂಡರ ಗೋಷ್ಟಿ

ತರ್ಕವೆಂಬುದು ತಗರ ಹೊರಟೆ

ಭಕ್ತಿಯೆಂಬುದು ತೋರಿ ಉಂಬ ಲಾಭ

ಗುಹೇಶ್ವರನೆಂಬುದು ಮೀರಿದ ಘನವು.

ಎಂಬ ವಚನವನ್ನು ಓದಿ ಅರ್ಥ ಮಾಡಿಕೊಳ್ಳುವುದು ಒಳಿತು. ಈಗ ನಮ್ಮ ಮುಂದಿರುವ ಕೋಮುವಾದಿಗಳ ಭಾರತವನ್ನು ಮನುವಾದಿಗಳ ಕಪಿ ಮುಷ್ಠಿಯಿಂದ ಬಿಡಿಸುವುದರ ಮೂಲಕ ಅದನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕಿದೆ.iಇಷ್ಟು ಮಾತ್ರವಲ್ಲದೆ  ಬಹುಸಂಸ್ಕೃತಿಯ, ಬಹುತ್ವದ ಭಾರತವನ್ನು ನಿರ್ಮಾಣ ಮಾಡಬೇಕಿದೆ. ಇದು ಭಾರತದ ಎಲ್ಲಾ ವರ್ಗದ,  ಎಲ್ಲಾ ವಯೋಮಾನದ ನಾಗರೀಕರ ನೈತಿಕ ಕರ್ತವ್ಯ ಎಂಬುದನ್ನು ನಾವು ಮರೆಯಲಾಗದು.

 

 

 

 

 

 

ಸೋಮವಾರ, ನವೆಂಬರ್ 21, 2022

ಲೆಸ್ಲಿ ಕೋಲ್ ಮನ್ ಎಂಬ ಕರ್ನಾಟಕದ ಕೃಷಿಲೋಕದ ಅಭಿವೃದ್ಧಿಯ ಹರಿಕಾರ

 






ಮಂಡ್ಯ ನಗರದಲ್ಲಿರುವ ಮೈಶುಗರ್ ಅಥವಾ ಮಂಡ್ಯ ಸಕ್ಕರೆ ಕಾರ್ಖಾನೆಗೆ ಭಾರತದಲ್ಲಿ ಒಂದು ವಿಶಿಷ್ಠ ಸ್ಥಾನ ಹಾಗೂ ಸುಧೀರ್ಘವಾದ ಇತಿಹಾಸವಿದೆ. 1924 ರಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಜಲಾಶಯ ಎಂಬ ಅಣೆಕಟ್ಟು ನಿರ್ಮಾಣವಾದ ನಂತರ ಮಳೆಯಾಶ್ರಿತ ಭೂಮಿಯಾಗಿದ್ದ ಮಂಡ್ಯ ಜಿಲ್ಲೆಯ ಬಹುತೇಕ ಪ್ರದೇಶಗಳು  (ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲ್ಲೂಕುಗಳನ್ನು ಹೊರತು ಪಡಿಸಿ) ನೀರಾವರಿ ಪ್ರದೇಶಗಳಾಗಿ  ಪರಿವರ್ತಗೊಂಡವು.

ಅಲ್ಲಿಯ ವರೆಗೆ  ಮಂಡ್ಯ ದ ರೈತರು ಕೆರೆಯಾಶ್ರಿತ ಭೂಮಿಯಲ್ಲಿ ಮಾತ್ರ ಸೀಮಿತವಾಗಿ ಕಬ್ಬನ್ನು  ಬೆಳೆಯುತ್ತಿದ್ದರು ಮತ್ತು ಆಲೆಮನೆಗಳಲ್ಲಿ ಎತ್ತಿನ ಗಾಣದಿಂದ ಕಬ್ಬಿನ ರಸ ತೆಗೆದು ಬೆಲ್ಲ ತಯಾರಿಸುತ್ತಿದ್ದರು. ಮಂಡ್ಯ ಜಿಲ್ಲೆಯ ಜನತೆಗೆ ಕಬ್ಬಿನ ಬೆಳೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನ್ ಗೆ ಸಲ್ಲುತ್ತದೆ. ತಮಿಳುನಾಡಿನಿಂದ ಕಬ್ಬಿನ ತಳಿಯನ್ನು ತಂದು ಪರಿಚಯಿಸಿದ್ದಲ್ಲದೆ, ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಎಂಬ ಗ್ರಾಮದ ಬಳಿ ಖಂಡಸಾರಿ ಸಕ್ಕರೆ ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದ್ದನು ಸಕ್ಕರೆ ತಯಾರಿಸುವ ತಂತ್ರಜ್ಞಾನವನ್ನು ಟಿಪ್ಪು ಸುಲ್ತಾನ್ ಪ್ರಾನ್ಸ್ ನಿಂದ ಪಡೆದಿದ್ದನು.

1924 ರ ನಂತರ ಮಂಡ್ಯ ಜಿಲ್ಲೆಯ ಕೃಷಿಯಲ್ಲಿ ಅನೇಕ ಬದಲಾವಣೆಗಳಾದವು, ಮಳೆಯಾಶ್ರಿತ ಭೂಮಿಯಲ್ಲಿ ರಾಗಿ, ನವಣೆ, ಆರ್ಕ, ಜೋಳ, ಇತರೆ ದ್ವಿದಳ ದಾನ್ಯಗಳನ್ನು ಬೆಳೆಯುತ್ತಿದ್ದ ರೈತರು ಭತ್ತ ಮತ್ತು ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯಲು ಆರಂಬಿಸಿದರು. ಇದಕ್ಕೆ ಕಾರಣ ಕೆನಡಾ ಮೂಲದ ಕೃಷಿತಜ್ಞ ಲೆಸ್ಲಿ ಕೋಲ್ ಮನ್  ಎಂಬ ಮಹಾತ್ಮ. ಭಾರತದಲ್ಲಿನ ಬ್ರಿಟೀಷ್ ಸರ್ಕಾರದಲ್ಲಿ  ಕೃಷಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆನಡಾ ಮೂಲದ ಆಡಲ್ಪ್ ಲಾವಲಸ್  ಎಂಬುವನು ಭಾರತದಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಬಗ್ಗೆ ಹಾಗೂ ಇಲ್ಲಿನ ಬೆಳೆಗಳು ಹಲವು ರೋಗ ಮತ್ತು ಕೀಟ ಬಾಧೆಯಿಂದ ನಶಿಸುತ್ತಿರುವ ಬಗ್ಗೆ ಅಧ್ಯಯನ ಮಾಡುತ್ತಿದ್ದಾಗ ಆತನ ಆಹ್ವಾನದ ಮೇರೆಗೆ 1910 ಭಾರತಕ್ಕೆ ಬಂದ  ಲೆಸ್ಲಿ ಕೋಲ್ ಮನ್ ರವರು   1913 ರಲ್ಲಿ ಮೈಸೂರು ಸಂಸ್ಥಾನದಲ್ಲಿ ಕೃಷಿ ವಿಜ್ಞಾನಿಯಾಗಿ ಮತ್ತು ಕೀಟ ಶಾಸ್ತ್ರಜ್ಞನಾಗಿ  ಕರ್ನಾಟಕದ ಕೃಷಿ ರಂಗದ ಬೆಳೆವಣಿಯ ಕಾರಣ ಪುರುಷನಾದರು.

ಇವರ ಆಸಕ್ತಿ ಫಲವಾಗಿ ಮಂಡ್ಯ ನಗರದಲ್ಲಿ ದೇಶದಲ್ಲಿ ಪ್ರಥಮ ಎನ್ನಬಹುದಾದ  ಬ್ರಿಟೀಷ್ ಸರ್ಕಾರದ ಶೇರು ಬಂಡವಾಳದೊಂದಿಗೆ  ಮೈಸೂರು  ಸಕ್ಕರೆ ಕಾರ್ಖಾನೆ ಆರಂಭವಾಯಿತು. ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ  1925 ರಲ್ಲಿ ಕಾಫಿ ಬೆಳೆಯ ಸಂಶೋಧನಾ ಕೇಂದ್ರ ಆರಂಭವಾಯಿತು ಮತ್ತು ಬೆಂಗಳೂರಿನ ಹೆಬ್ಬಾಳದಲ್ಲಿ ಸ್ಥಳಿಯವಾಗಿ ಕೃಷಿ ತಜ್ಞರನ್ನು ತಯಾರು ಮಾಡುವ ನಿಟ್ಟಿನಲ್ಲಿ 1946 ರಲ್ಲಿ ಕೋಲ್ ಮನ್ ಆರಂಭಿಸಿದ ಕೃಷಿ ತರಬೇತಿ ಕೇಂದ್ರವು  1964 ರಲ್ಲಿ ಕೃಷಿ ವಿಶ್ವ ವಿದ್ಯಾನಿಲಯವಾಗಿ ಪರಿವರ್ತನೆ ಹೊಂದಿತು. ಕನ್ನಡದ ನೆಲವನ್ನು ಹುಟ್ಟಿ ಬೆಳೆದ ನೆಲದಂತೆ ಪ್ರೀತಿಸಿದ, ಇಲ್ಲಿನ ರೈತರ ಏಳಿಗೆಗೆ ಶ್ರಮಿಸಿದ ಕೋಲ್ ಮನ್ ಬದುಕು ಮತ್ತು ಅವರ ಸೇವೆಯ ಮಹತ್ವವನ್ನು  ಇಂದಿನ ತಲೆಮಾರಿಗೆ ತಲುಪಿಸುವಲ್ಲಿ ನಾವು ವಿಫಲರಾಗಿದ್ದೀವಿ. ಎಂಬತ್ತರ ದಶಕದಲ್ಲಿ ಮಂಡ್ಯದ ಸಕ್ಕರೆ ಕಾರ್ಖಾನೆಯ ಅತಿಥಿ ಗೃಹದಲ್ಲಿ ಮತ್ತು ಮೈಷುಗರ್ ಹೈಸ್ಕೂಲಿನಲ್ಲಿ ಹಾಗೂ ಹೆಬ್ಬಾಳದ ಕೃಷಿ ವಿಶ್ವ ವಿದ್ಯಾನಿಲಯದ ಉಪಕುಲತಿಗಳ ಕಛೇರಿಯಲ್ಲಿ ಲೆಸ್ಲಿ ಕೋಲ್ ಮನ್ ಭಾವಚಿತ್ರಗಳನ್ನು ನಾನು ನೋಡಿದ್ದೆ. ಇದನ್ನು ಹೊರತು ಪಡಿಸಿದರೆ ಈ ಮಹಾತ್ಮನ ಹೆಸರಿನಲ್ಲಿ ಯಾವುದೇ ಸ್ಮಾರಕಗಳಿಲ್ಲ. ಕನಿಷ್ಠ ಆತನ ಹೆಸರಿನಲ್ಲಿ ಒಂದು ಕೃಷಿ ಸಂಶೋಧನಾ ಕೇಂದ್ರವಿಲ್ಲ. ಇದು ನಮ್ಮ ಮಿದುಳು ಮತ್ತು ನೆನಪಿನ ಶಕ್ತಿಗೆ ಗೆದ್ದಲು ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ.

ಕೆನಡಾದ ಟೊರೊಂಟೊ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನದ ವಿಷಯದಲ್ಲಿ 1904 ರಲ್ಲಿ ಪದವಿ ಪಡೆದು ಅಲ್ಲಿನ ಕಡಲ ತೀರಗಳ ಜೀವಕೋಶಗಳ ಕುರಿತು ಅಧ್ಯಯನ ಮಾಡುತ್ತಾ ಕೀಟ ಶಾಸ್ತ್ರಜ್ಞನಾಗಿ ಪರಿಣಿತಿ ಹೊಂದಿದ್ದ ಕೋಲ್ ಮನ್ ಕರ್ನಾಟಕಕ್ಕೆ ಬಂದ ನಂತರ  ಇಲ್ಲಿ ಟಿಪ್ಪು ಸುಲ್ತಾನ್ ಪರಿಚಯಿಸಿದ್ದ ರೇಷ್ಮೆ ಮತ್ತು ಕಬ್ಬಿನ ತಳಿಗಳ ಕುರಿತು ಗಂಭೀರವಾದ ಅಧ್ಯಯನಲ್ಲಿ ತೊಡಗಿಸಿಕೊಂಡಿದ್ದರು.  ಚಿಕ್ಕಮಗಳೂರು ಪ್ರದೇಶದಲ್ಲಿ ಕಾಫಿ ಗಿಡಗಳ ಕೊಳೆರೋಗದ ಬಗ್ಗೆ ಅಧ್ಯಯನ ಮಾಡಿ   ಮೈಲುತುತ್ತ ಎಂದು ಕರೆಯಲಾಗುವ ಕಾಪರ್ ಸಲ್ಪೈಟ್ ಹಾಗೂ ಸುಣ್ಣವನ್ನು ನಿಗದಿತ ಪ್ರಮಾಣದಲ್ಲಿ ನೀರಿನಲ್ಲಿ ಕಲೆಸಿದ ಈ ದ್ರಾವಣವನ್ನು  ಕಾಫಿ ಗಿಡಗಳ ಕಾಂಡಕ್ಕೆ ಸಿಂಪಡಿಸುವುದರ ಮೂಲಕ ರೋಗವನ್ನು ಹತೋಟಿಗೆ ಯಶಸ್ವಿಯಾದರು. ಸ್ಥಳಿಯರು ಬೋಡೊ ದ್ರಾವಣ ಎಂಬ ಹೆಸರಿನಿಂದ  ಇದನ್ನು ಕರೆಯುತ್ತಿದ್ದರು.   1970 ಮತ್ತು 80 ರ ದಶಕದಲ್ಲಿ ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ಬೆಳೆಯುತ್ತಿದ್ದ ಕಪ್ಪು ದ್ರಾಕ್ಷಿ ಬೆಳೆಗೆ ರೈತರು ಈ ದ್ರಾವಣವನ್ನು ಸಿಂಪಡಿಸುತ್ತಿದ್ದರು. ಕೋಲ್ ಮನ್  ಬಾಳೆ ಹೊನ್ನೂರಿನಲ್ಲಿ  ಕಾಫಿ ಸಂಶೊಧನಾ ಕೇಂದ್ರವನ್ನು ತೆರೆದು ಸಹಾಯಕ ವಿಜ್ಞಾನಿಗಳನ್ನು ಅಲ್ಲಿ ನೇಮಕ ಮಾಡಿದ್ದರು.  ಹೆಚ್ಚು ಸಕ್ಕರೆಯ ಪ್ರಮಾಣವಿರುವ ಕಬ್ಬಿನ ತಳಿಯ ಬಗ್ಗೆ ಅಧ್ಯಯನ ಮಾಡಿ ಜಾವಾ ದ್ವೀಪದಿಂದ ಕಬ್ಬಿನ ತಳಿಯನ್ನು ತರಿಸಿ ಅದನ್ನು ಮಂಡ್ಯ ಜಿಲ್ಲೆಯ ರೈತರಿಗೆ ವಿತರಿಸಿದ ಕೀರ್ತಿ ಲೆಸ್ಲಿ ಕೋಲ್ ಮನ್ ಗೆ ಸಲ್ಲುತ್ತದೆ.

ಮಂಡ್ಯ ನಗರದಲ್ಲಿ 1933 ರಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಯೋಜನೆ ರೂಪಿಸಿದರು. ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ  ಜಿಲ್ಲೆಯ ರೈತರು ಸಹಾಕಾರಿ ತತ್ವದಲ್ಲಿ ಶೇರು ಬಂಡವಾಳ ಹೂಡುವುದು ಅದಕ್ಕೆ ಬ್ರಿಟೀಷ್ ಸರ್ಕಾರವು ಹೆಚ್ಚು ಪ್ರಮಾಣದಲ್ಲಿ ಬಂಡವಾಳ ತೊಡಗಿಸುವುದು ಎಂದು ನಿರ್ಧಾರವಾಗಿತ್ತು. ಬ್ರಿಟೀಷ್ ಸರ್ಕಾರವು ತಾನು ಬಂಡವಾಳ ಹೂಡುವುದಕ್ಕೆ ಮುನ್ನ ರೈತರಿಂದಲೂ ಸಹ ನಿರ್ಧಿಷ್ಟ ಪ್ರಮಾಣದಲ್ಲಿ ಬಂಡವಾಳ ಇರಬೇಕೆಂದು ಷರತ್ತು ವಿಧಿಸಿತು. ಈ ಸಂದರ್ಭದಲ್ಲಿ ಬಡ ರೈತರಿಂದ ಶೇರು ಬಂಡವಾಳ ಸಂಗ್ರಹಿಸಲು ತೊಂದರೆಯಾದಾಗ ಕೋಲ್ ಮನ್ ರವರು  ತಮ್ಮ ಇನ್ಸೂರೆನ್ಸ್ ಬಾಂಡ್ ಮತ್ತು ಬ್ಯಾಂಕಿನ ಠೇವಣಿ ಪತ್ರಗಳನ್ನು ರೈತರ ಪರವಾಗಿ ಬ್ರಿಟೀಷ್ ಸರ್ಕಾರಕ್ಕೆ ಖಾತರಿಯಾಗಿ ನೀಡಡುವುದರ ಮೂಲಕ ಸಕ್ಕರೆ ಕಾರ್ಖಾನೆಯು 1934 ರ ಜನವರಿ 14 ರಂದು ಸಂಕ್ರಾಂತಿಯ ದಿನದಂದು ಪ್ರಾರಂಭವಾಗಲು ಕಾರಣನಾದರು.  ಇಷ್ಟು ಮಾತ್ರವಲ್ಲದೆ ರೈತರ ಜೊತೆ ಒಪ್ಪಂಧ ಮಾಡಿಕೊಂಡು ಅವರಿಗೆ ಸರ್ಕಾರದಿಂದ ಸಾಲವನ್ನು ನೀಡುವುದು ಇದಕ್ಕೆ ಪರ್ಯಾಯವಾಗಿ ರೈತರು  ಕಬ್ಬು ಬೆಳೆದು ಕಾರ್ಖಾನೆಗೆ ಪೂರೈಸುವುದು, ವ್ಯವಸ್ಥೆಯನ್ನು ಜಾರಿಗೆ ತಂದರು.  ಕಬ್ಬಿನ ಬೇಸಾಯಕ್ಕೆ ನೀಡಿದ ಹಣದಲ್ಲಿ ಪ್ರತಿ ವರ್ಷ ಶೇಕಡ 25 ರಿಂದ 30 ರಷ್ಟು ಪಾಲನ್ನು ಸಾಲದ ಹಣಕ್ಕೆ ಜಮಾ ಮಾಡಿಕೊಳ್ಳುವ ವ್ಯವಸ್ಥೆ ಮಾಡಿದ್ದರು ಜೊತೆಗೆ ರೈತರಿಂದ ಶೇರುಗಳನ್ನು ಸಂಗ್ರಹಿಸಿದರು.

ರೈತರು ಎತ್ತಿನ ಗಾಡಿಯಲ್ಲಿ ಕಾರ್ಖಾನೆಗೆ ಕಬ್ಬು ತಂದಾಗ ಸರತಿ ಸಾಲಿನಲ್ಲಿ ಕಾಯುವುದು ಬೇಡ  ಎಂದು ನಿರ್ಧರಿಸಿದ ಕೋಲ್ ಮನ್ ಮಂಡ್ಯ ಸುತ್ತ ಮುತ್ತಾ ಎಂಟತ್ತು ಕಿಲೊಮೀಟರ್ ದೂರದಲ್ಲಿ ವೈ ಬ್ರಿಡ್ಜ್ ಎಂಬ ತೂಕದ ಯಂತ್ರಗಳನ್ನು ಸ್ಥಾಪಿಸಿ  ರೈತರು ಅಲ್ಲಿ ತೂಕ ಮಾಡಿಸಿದ ಕಬ್ಬನ್ನು ನೇರವಾಗಿ ಕಾರ್ಖಾನೆ ಸರಬರಾಜು ಮಾಡುವ ವ್ಯವಸ್ಥೆ ಮಾಡಿಸಿದ್ದರು. ವೈ ಬ್ರಿಡ್ಜ್ ಕೇಂದ್ರದ ಬಳಿ ರೈತರು ಕಬ್ಬಿನ ಗಾಡಿಗಳನ್ನು ನಿಲ್ಲಸಿ ತಂಗುವುದಕ್ಕೆ ವಿಶಾಲವಾದ ಉದ್ದನೆಯ  ಸಭಾಂಗಣ, ಹಾಗೂ ದನಗಳಿಗೆ ಶ್ರಾಂತಿ ಪಡೆಯಲು ಚಪ್ಪರ ಮತ್ತು ಕುಡಿಯಲು ನೀರಿನ ವ್ಯವಸ್ಥೆ ಮಾಡಿಸಿದ್ದಲೆಸ್ಲಿ ಕೋಲ್ ಮಾನ್ ಹುಟ್ಟಿನಿಂದ ವಿದೇಶಿಯನಾಗಿದ್ದರೂಸಹ ಬದುಕಿನಲ್ಲಿ ಈ ನೆಲದ ಅಪ್ಪಟ ಮಣ್ಣಿನ ಮಗನಾಗಿದ್ದರು. ಮಂಡ್ಯದಿಂದ ಆರು ಕಿಲೊಮೀಟರ್ ದೂರವಿರುವ ಶಿವಳ್ಳಿ ಎಂಬ ಗ್ರಾಮದ ಬಳಿ ಕಬ್ಬು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿದ್ದರು. ಈಗ ಈ ಕೇಂದ್ರವು ಬೆಂಗಳೂರು ಕೃಷಿ ವಿ.ವಿ.ಯ ಅಧೀನದಲ್ಲಿದ್ದು ರಾಗಿ ಮತ್ತು ಭತ್ತದ ತಳಿಗಳ ಅಧ್ಯಯನ ನಡೆಯುತ್ತಿದೆ. ರಾಗಿ ಲಕ್ಷ್ಮಣಯ್ಯ ಎಂಬ ಮಹಾತ್ಮ ಇದೇ ಕೇಂದ್ರದಲ್ಲಿ ಇಂಡಾಪ್ ರಾಗಿ ತಳಿಗಳ ಕುರಿತು ಅಧ್ಯಯನ ಮಾಡಿ ಅವುಗಳನ್ನು ಕರ್ನಾಟಕಕ್ಕೆ ಪರಿಚಯಿಸಿದರು.

1925 ರಲ್ಲಿ ಅನಾರೋಗ್ಯದ ನಿಮಿತ್ತ ಕೆನಡಾಕ್ಕೆ ಹೋಗಿ ಅಲ್ಲಿನ ಟೊರೊಂಟೊ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಕೋಲ್ ಮನ್ ಮತ್ತೇ 1928 ರಲ್ಲಿ ಕರ್ನಾಟಕಕ್ಕೆ ವಾಪಸ್ ಬಂದರು. 1918 ರ ಮೇ ತಿಂಗಳಲ್ಲಿ ಅವರ ಪತ್ನಿ ಮೇರಿ ಮ್ಯಾಕ್ ಡೊನಾಲ್ಡ್ ಮಧುಮೇಹ ಕಾಯಿಲೆಯಿಂದ ತೀರಿ ಹೋದಾಗ ಆ ಸಂದರ್ಭದಲ್ಲಿ  ಬಿಳಿಗಿರಿ ರಂಗನ ಬೆಟ್ಟದಲ್ಲಿ ತಂಗಿದ್ದ ಅವರು ಪತ್ನಿಯನ್ನು ಅಲ್ಲಿಯೇ ಮಣ್ಣು ಮಾಡಿದರು. ಈಗ ಖಾಸಾಗಿ ವ್ಯಕ್ತಿಯೊಬ್ಬರ ಕಾಫಿ ತೋಟದಲ್ಲಿ ಅವರ ಸಮಾಧಿಯನ್ನು ನಾವು ಕಾಣಬಹುದು. ನಿವೃತ್ತಿಯ ನಂತರ ಕೆನಡಾ ದೇಶಕ್ಕೆ ಮರಳಿದ ಅವರು 1953 ರಲ್ಲಿ ಮತ್ತೇ ತಾವು ಸೇವೆ ಸಲ್ಲಿಸಿದ ಕರ್ನಾಟಕವನ್ನು ನೋಡಲು ಬಂದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ಕೋಲ್ ಮನ್ ಅವರನ್ನು ಸರ್ಕಾರದ ಗಣ್ಯ ಅತಿಥಿ ಎಂದು ಪರಿಗಣಿಸಿ ಇಡೀ ಕರ್ನಾಟಕವನ್ನು ಸುತ್ತಾಡಲು ವ್ಯವಸ್ಥೆ ಮಾಡಿದ್ದರು. 1954 ರಲ್ಲಿ ಅವರು ಕೆನಡಾದ ರಾಜಧಾನಿ ಟೊರೊಂಟಾ ನಗರದಲ್ಲಿ ನಡೆದ ಕಾರು ಅಪಘಾತದಲ್ಲಿ ಅವರು ನಿಧನರಾದರು.

ಕೋಲ್ ಮನ್ ನಿಧನಾನಂತರವೂ ಅವರ ಕರ್ನಾಟಕದ ಸಂಬಂಧ ಮುಗಿದಿರಲಿಲ್ಲ. 2013 ರಲ್ಲಿ 70 ವರ್ಷದ ಅವರ ಪುತ್ರಿ ಭೇಟಿ ನೀಡಿ ತಂದೆಯ ಸೇವೆಯಿಂದ ಕರ್ನಾಟಕದ ಕೃಷಿಯಲ್ಲಿ ಆಗಿರುವ ಬೆಳವಣಿಗೆಯನ್ನು ನೋಡಿ ಭಾವುಕರಾದರು. ಮಂಡ್ಯ ಸಕ್ಕರೆ ಕಾರ್ಖಾನೆ ಮತ್ತು ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿದ್ದ ಅವರು ಹಿಂದೂ ಇಂಗ್ಲೀಷ್ ದಿನಪತ್ರಿಕೆಗೆ ಸಂದರ್ಶನ ನೀಡಿದ್ದರು. ಭೂಮಿಕಾ ಎಂಬುವರು ಮಾಡಿದ್ದ ಸಂದರ್ಶನದಲ್ಲಿ ಅವರ ತಂದೆ ಕೋಲ್ ಮನ್ ಗೆ ಕರ್ನಾಟಕದ ಜನತೆಯ ಬಗ್ಗೆ ಇದ್ದ ಭಾವನಾತ್ಮಕ ಸಂಬಂಧದ ಬಗ್ಗೆ ಹೇಳಿಕೊಂಡಿದ್ದರು.

ಯಾರೋ ರಾಜಕಾರಣಿಗಳನ್ನು ಮಹಾತ್ಮರೆಂದು ಬಣ್ಣಿಸಿ ಅವರ ಹೆಸರಿನಲ್ಲಿ ಭವನ, ಪ್ರತಿಮೆ ಸ್ಥಾಪಿಸುವ ಇಂದಿನ ಸಮಾಜಕ್ಕೆ ಇಂತಹ ಮಹನೀಯರನ್ನು ಮರು ಪರಿಚಯಿಸುವ ಅಗತ್ಯವಿದೆ.

ಡಾ.ಎನ್.ಜಗದೀಶ್ ಕೊಪ್ಪ

ನಂ313, ಹೆಚ್.ಐ.ಜಿ. ಇ.ಬ್ಲಾಕ್.

ಮೂರನೇ ಹಂತ, ವಿಜಯನಗರ

ಮೈಸೂರು-570039

 

ಚಿತ್ರ- ಒಂದು ಲೆಸ್ಲಿ ಕೋಲ್ ಮನ್

ಚಿತ್ರ- ಎರಡು ಪತ್ನಿಯ ಸಮಾಧಿ

ಚಿತ್ರ -ಮೂರು-  1928 ರಲ್ಲಿ ಮೈಸೂರು ಸಂಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೃಷಿ ವಿಜ್ಞಾನಿಗಳು. ನಿಂತಿರುವವರ ಸಾಲಿನಲ್ಲಿ ಹ್ಯಾಟ್ ಧರಿಸಿರುವವರು ಲೆಸ್ಲಿ ಕೋಲ್ ಮನ್

ಯುದ್ಧವೆಂಬ ಮನುಕುಲದ ಕ್ರೌರ್ಯ ಮತ್ತು ಜಾಗತಿಕ ಸಂಘಟನೆಗಳ ನಿಷ್ಕಿçಯತೆ

 



ಯುದ್ಧ ಅಥವಾ ಹಿಂಸೆ ಎನ್ನುವುದು ಮನುಕುಲಕ್ಕೆ ತಟ್ಟಿದ ಶಾಪ ಮತ್ತು ಕ್ರೌರ್ಯ ಎಂದು ಎರಡು ಸಾವಿರ ವರ್ಷಗಳ ಹಿಂದೆಯೇ ಗೌತಮ ಬುದ್ಧ. ಈಜಗತ್ತಿಗೆ ಸಾರಿದವನು. ಶಾಖ್ಯ ಬುಡಕಟ್ಟು ಜನಾಂಗದ ಯುವ ರಾಜಕುಮಾರÀನಾಗಿದ್ದ ಸಿದ್ಧಾರ್ಥ ತನ್ನ ಸಮುದಾಯದ ಪದ್ಧತಿಯ ಅನುಸಾರ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಶಾಖ್ಯ ಬುಡಕಟ್ಟು ಸಂಘದ ಸದಸ್ಯನಾಗಿದ್ದನು. ರೋಹಿಣಿ ನದಿ ನೀರಿನ ಬಳಕೆಯ ವಿಚಾರದಲ್ಲಿ ನೆರೆಯ ಮತ್ತೊಂದು ಬುಡಕಟ್ಟು ಕೋಲಿಯರು ಮತ್ತು ಶಾಖ್ಯರ  ನಡುವಿನ ಸಂಘರ್ಷ ತಾರಕ್ಕೇರಿತು  ವಿಷಯಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಶಾಖ್ಯ ಬುಡಕಟ್ಟಿನ ಮುಖಂಡರು ಸಂಘದ ಸಭೆ ಕರೆದು ಕೋಲಿಯರ  ಮೇಲೆ ಯುದ್ಧ ಮಾಡಲು ನಿಧ್ರಿಸಿದರು.

ಸಿದ್ಧಾರ್ಥನ ತಂದೆ  ಶುದ್ದೋಧನ ಶಾಖ್ಯರ ಬುಡಕಟ್ಟು ಜನಾಂಗದಲ್ಲಿ ಆಚರಣೆಯಲ್ಲಿದ್ದ ಸರದಿಯ ನಿಯಮಾನುಸಾರ ದೊರೆಯಾಗಿದ್ದನು ಕಾರಣದಿಂದಾಗಿ ಸಿದ್ಧಾರ್ಥನು ಯುವರಾಜನ ಗೌರವ ಮತ್ತು ಸ್ಥಾನಮಾನ ಹೊಂದಿದ್ದನು. ಕೇವಲ ಕುಡಿಯುವ ನೀರಿಗಾಗಿ ನಮ್ಮ ಸಹೋದರರಂತೆ ಇರುವ ಕೋಲಿಯರ ಜೊತೆ ಯುದ್ಧ ಮಾಡುವುದು ಬೇಡ ಎಂಬುದು ಸಿದ್ಧಾರ್ಥನ ನಿರ್ಧಾರಗಿತ್ತು.  ಕುರಿತು ಸಮಘದ ಸರ್ವ ಸದಸ್ಯರ ಸಭೆ ಕರೆದು ವಿಷಯವನ್ನು ಚರ್ಚೆಗೆ ಒಳಪಡಿಸಿದಾಗ ಸಿದ್ಧಾರ್ಥನನ್ನು ಹೊರತು ಪಡಿಸಿ ಉಳಿದವರೆಲ್ಲರೂ ಯುದ್ಧಕ್ಕೆ ಸಮ್ಮತಿ ಸೂಚಿಸಿದರು. ಸಂಘದ ನಿಯಮದ ಪ್ರಕಾರ  ಬಹುಮತ ಇರುವ ವಿಷಯಕ್ಕೆ ವಿರೊಧ ವ್ಯಕ್ತಪಡಿಸಿದ ಸದಸ್ಯ ಮರಣದಂಡನೆ ಅಥವಾ ಗಡಿಪಾರು ಶಿಕ್ಷೆಗೆ ಒಳಗಾಗಬೇಕು ಇಲ್ಲವೆ ನಿಯಮವನ್ನು ಕಡ್ಡಾಯವಾಗಿ ಒಪ್ಪಿಕೊಳ್ಳಬೇಕಿತ್ತು. ಯುದ್ಧವನ್ನು ಸ್ಪಷ್ಟವಾಗಿ ನಿರಾಕರಿಸಿದ ಸಿದ್ಧಾರ್ಥನು ಮರಣದಂಡನೆಯ ಬದಲಾಗಿ ಗಡಿಪಾರು ಶಿಕ್ಷೆಯನ್ನು ಆಯ್ಕೆ ಮಾಡಿಕೊಂಡನು.  ಸಂಘದ ಸಭೆಯಿಂದ ತನ್ನ ಅರಮನೆಗೆ ಹಿಂತಿರುಗಿ ಬಂದು ತಂದೆ ತಾಯಿಗಳಿಗೆ ತನ್ನ ನಿರ್ಧಾರವನ್ನು ತಿಳಿಸಿದನು. ನಂತರ ಪತ್ನಿ ಯಶೋಧರೆಯ ಒಪ್ಪಿಗೆ ಪಡೆದು  ಬ್ರಾಹ್ಮಣ ಗುರು ಭಾರದ್ವಾಜ ಎಂಬಾತನಿA  ಸನ್ಯಾಸಿಯ ದೀಕ್ಷೆ ಪಡೆದು ತನ್ನ ಯುವರಾಜನ ಉಡುಪು ಕಳಚಿ ತಲೆ ಬೋಳಿಸಿಕೊಂಡು ಖಾವಿ ವಸ್ತçತೊಟ್ಟು ಭಿಕ್ಷಾಪಾತ್ರೆಯನ್ನು ಹಿಡಿದು ಕಪಿಲ ವಸ್ತು ನಗರವನ್ನು ತ್ಯೆಜಿಸಿದನು. ಕಾಲ್ನಡಿಗೆಯಲ್ಲಿ ಸಾಗುತ್ತಾ ಗಂಗಾನದಿಯನ್ನು ದಾಟಿ ಸುಮಾರು ಆರನೂರು ಕಿಲೊಮೀಟರ್ ದೂರವಿರುವ ಬಿಹಾರದ  ರಾಜಗೃಹ ( ಈಗಿನ ರಾಜಗೀರ್ ಪಟ್ಟಣ. ಬುದ್ಧ ಗಯಾ ದಿಂದ ೪೫ ಕಿ.ಮಿ ದೂರದಲ್ಲಿದೆ) ಪಟ್ಟಣಕ್ಕೆ ಬಂದು ಸ್ಥಳಿಯ ಗುಡ್ಡವೊಂದರ ಗುಹೆಯಲ್ಲಿ ವಾಸಿಸಯೊಡಗಿದನು.  ಸನ್ಯಾಸಿಯಾಗಿ ಬದುಕುತ್ತಾ ತಾನು ಬದುಕಿದ್ದ ಕಾಲಘಟ್ಟದ ಧರ್ಮಗಳು ಮತ್ತು ನಂಬಿಕೆಗಳನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ ಧ್ಯಾನಸ್ಥನಾಗಿ ಜ್ಞಾನ ಸಂಪಾದಸಿದ ಸಿದ್ಧಾರ್ಥನು ಬುದ್ಧನಾಗಿ ಪರಿವರ್ತನೆ ಹೊಂದಿದನು. ಇಷ್ಟು ಮಾತ್ರವಲ್ಲದೆ ತಾನು ಕಂಡುಕೊA ಸತ್ಯಗಳನ್ನು ಆಧರಿಸಿ ಬೌದ್ಧ ಧರ್ಮದ ಉದಯಕ್ಕೆ ಕಾರಣನಾದ ತಥಾಗತನು ತನ್ನ ಜೀವಿತಾವಧಿಯಲ್ಲಿ ಎಂದಿಗೂ ಯುದ್ಧದ ಬಗ್ಗೆಯಾಗಿ ಹಿಂಸೆಯ ಕುರಿತಾಗಲಿ ಮಾತನಾಡಲಿಲ್ಲ ಮತ್ತು ಪ್ರೋತ್ಸಾಹಿಸಲಿಲ್ಲ. ಇದು ಡಾ. ಬಿ.ಆರ್. ಅಂಬೇಡ್ಕರ್ ರವರು ನಮಗೆ ನೀಡಿದ ಬುದ್ಧನ ನೈಜ ಚರಿತ್ರೆ.

ಬುದ್ಧನಿಂದ ಯುದ್ಧ ಕುರಿತಾಗಿ ಎರಡು ಸಾವಿರ ವರ್ಷಗಳ ಹಿಂದೆ ಹೊರಬಿದ್ದ ಸಂದೇ± ನಂತರದ ಶತಮಾನಗಳಲ್ಲಿ ಹಲವು ರೂಪಗಳಲ್ಲಿ ಬಸವಣ್ಣ ಮತ್ತು ಗಾಂಧೀಜಿ ಮುಂತಾದವರವರ ಮೂಲಕ ಜಗತ್ತಿನ ಎಲ್ಲೆಡೆ ಪ್ರಸರಿಸಿತು. ಆದರೆ  ಅಧಿಕಾರದ ಗದ್ದುಗೆ ಏರುವುದರ ಮೂಲಕ  ಆಡಳಿತದ ಚುಕ್ಕಾಣಿ ಹಿಡಿದ ನಾಯಕರೆಂಬ ಶಿಖಾಮಣಿಗಳ ಎದೆಗೆ ಮನುಕುಲದ ಉದಾತ್ತ ಸಂದೇಶ ತಟ್ಟಲಿಲ್ಲ. ಇದರ ಫಲಿತಾಂಶವೆಂಬಂತೆ ಒಂದನೇ ಮಹಾಯುದ್ಧ ಮತ್ತು ಎರಡನೆಯ ಮಹಾಯುದ್ಧಕ್ಕೆ ಬಲಿಯಾದ ಜಗತ್ತು ಮೌನದಿಂದ ನರಳಿತು. ತಮ್ಮದಲ್ಲದ ತಪ್ಪಿಗೆ  ಯುದ್ಧದ ನೆಪದಲ್ಲಿ ಅಮಾಯಕ ಜನತೆ ಬಲಿಪಶುಗಳಾದರು.   ಜಗತ್ತಿನ ಮನುಷ್ಯ ದೇಹದ ಬೆವರು ಮತ್ತು ನೆತ್ತರಿಗೆ ಬೇರೆ ಬೇರೆ ಬಣ್ಣಗಳಿಲ್ಲ ಮತ್ತು  ರುಚಿಗಳಿಲ್ಲ. ಆದರೆ ಜಗತ್ತಿನ ನಾಯಕರ ಸ್ವಾರ್ಥಕ್ಕೆ ಸೃಷ್ಟಿಯಾದ ಯುದ್ಧಗಳಿಂದ ನರಳಿದ ತಾಯಂದಿರು ಮತ್ತು ಹಸುಗೂಸಗಳ ಲೆಕ್ಕವಿಟ್ಟವರಿಲ್ಲ. ಕ್ರೌರ್ಯದ ಪರಂಪರೆ  ಇಪ್ಪತ್ತೊಂದನೆಯ ಶತಮಾನದ ಆಧುನಿಕ ಜಗತ್ತಿನಲ್ಲಿ ಇಂದಿಗೂ ಜರುಗುತ್ತಿದೆ. ಜಗತ್ತಿನಾದ್ಯಂತ ಮುಗ್ಧ ಜನತೆ ನೆಲೆ ಕಳೆದುಕೊಂಡು ಅತಂತ್ರರಾಗುತ್ತಿದ್ದಾರೆ. ಸಿರಿಯಾ ಯುಧ್ಧ, ಇರಾಕ್ ಮೇಲಿನ ಯುದ್ಧ, ಇಸ್ರೇಲ್- ಪ್ಯಾಲೆಸ್ತೇನ್ ನಡುವಿನ ಸಂಘರ್ಷ,  ಆಫ್ಘಾನಿಸ್ತಾನದ ಮೇಲಿನ ತಾಲಿಬಾನ್ ದಾಳಿ ಹೀಗೆ ಸಾಲು ಸಾಲು ದುರಂತಗಳು ಯುದ್ಧದ ಹೆಸರಿನಲ್ಲಿ ಸಂಭವಿಸುತ್ತಿವೆ. ಈಗ ಕಳೆದ ಪೆಬ್ರವರಿ ತಿಂಗಳಿನಿಂದ ರಷ್ಯಾ-ಉಕ್ರೇನ್ ರಾಷ್ಟçಗಳನಡುವೆ  ನಡೆಯುತ್ತಿರುವ ಯುದ್ಧ ಇಡೀ ಜಗತ್ತಿನ ನಾಗರೀಕ ಸಮಾಜದ ಪ್ರಜ್ಞಾವಂತರ ನಿದ್ದೆಗೆಡಿಸಿದೆ.

ಒಂದು ಕಾಲದಲ್ಲಿ ಸೋವಿಯತ್ ರಷ್ಯ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ರಾಷ್ಟç ಮೇಲೆ ಈಗಿನ ರಷ್ಯಾ ಅಧ್ಯಕ್ಷ ಹಾಗೂ ಜರ್ಮನಿಯ  ಸರ್ವಾಧಿಕಾರಿ ಹಿಟ್ಲರ್ ಉತ್ತಾಧಿಕಾರಿಯಂತೆ ಕಾಣುವ  ವ್ಲಾದಿಮೀರ್ ಪುಟಿನ್  ಎಂಬ ದುರಂಕಾರಿ ಯಾವುದೇ ನಿಖರವಾದ ಮಾಹಿತಿ ಅಥವಾ ಕಾರಣ ನೀಡದೆ ಯುದ್ಧ ಘೋಷಿಸಿರುವುದು ಆಧುನಿಕ ಜಗತ್ತು ಸಾಗುತ್ತಿರುವ ಅಧಃಪತನದ ಮಾರ್ಗಕ್ಕೆ ಸೂಚನೆ ಎಂಬAತಿದೆ. ೨0೧೪ ರಲ್ಲಿ ಉಕ್ರೇನಿನ ಒಂದು ಭಾವನ್ನು ಆಕ್ರಮಿಸಿಕೊಂಡು ಯುದ್ಧಕ್ಕೆ ಸನ್ನದ್ಧನಾಗಿ ನಿಂತಾಗ ವಿಶ್ವಸಂಸ್ಥೆ ಸೇರಿದಂತೆ ಇಡೀ ಜಗತ್ತು ಮೌನವಾಗಿತ್ತು. ಈಗ ಜಗತ್ತಿನ  ಅತ್ಯಂತ ಪ್ರಬಲ ಶಕ್ತಿ ರಾಷ್ಟçಗಳಾದ ಅಮೇರಿಕಾ ಮತ್ತು ರಷ್ಯಾ ರಾಷ್ಟçಗಳ ವೈಯಕ್ತಿಕ ಪ್ರತಿಷ್ಟೆ ಇಂದಿನ ಬಹುತೇಕ ಜಾಗತಿಕ ಮಟ್ಟದ ಯುದ್ಧಗಳಿಗೆ ಕಾರಣವಾಗಿದೆ. ಐರೋಪ್ಯ ಒಕ್ಕೂಟವನ್ನು ತನ್ನ ಮಡಿಲಿಗೆ ಕಟ್ಟಿಕೊಂಡು ತಾನು ಜಗತ್ತಿನ ಶಕ್ತಿ ರಾಷ್ಟç ಎಂದು ಅಮೇರಿಕಾ ಪರೋಕ್ಷವಾಗಿ ಘೋಷಣೆ ಮಾಡಿಕೊಂಡಿದೆ. ಇಲ್ಲಿ ಉಕ್ರೇನ್ ಐರೋಪ್ಯ ರಾಷಟ್ರಗಳ ಒಕ್ಕೂಟಕ್ಕೆ ಸೇರಲು ಇಚ್ಚಿಸಿದ್ದು ಪುಟ್ಟ ರಾಷ್ಟçಕ್ಕೆ ಅಮೇರಿಕಾ ಮತ್ತು ಇಂಗ್ಲೇAಡ್ ಬೆಂಬಲವಾಗಿ ನಿಂತಿರುವುದು ರಷ್ಯಾವನ್ನು ಕೆರಳಿಸಿದೆ. ಜಾಗತಿಕ ನಾಯಕರ ವೈಯಕ್ತಿಕ ಪ್ರತಿಷ್ಟೆಗೆ ಉಕ್ರೇನ್ ರಾಷ್ಟç ಅಮಾಯಕ ಜನತೆ ಬಲಿಯಾಗುತ್ತಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಯುದ್ದದಿಂದ ಬಸವಳಿದ ಉಕ್ರೇನ್ ಚೇತರಿಸಿಕೊಳ್ಳಲು ಕನಿಷ್ಟ ಐವತ್ತು ವರ್ಷಗಳು ಬೇಕು. ಹಾಗಾದರೆ ಯುದ್ಧದಿಂದ ಜಗತ್ತು ಸಾಧಿಸುತ್ತಿರುವುದಾದರು ಏನು?

ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಬೇಕೆಂಬ ದೃಷ್ಟಿಕೋನದಿಂದ ೧೯೪೨ ಲ್ಲಿ ಅಮೇರಿಕಾ. ರಷ್ಯಾ. ಇಂಗ್ಲೇAಡ್ ಮತ್ತು ಪ್ರಾನ್ಸ್ ಹಾಗೂ ಚೀನಾ ರಾಷ್ಟçಗಳು ಒಪ್ಪಂಧಕ್ಕೆ  ಬಂದ ಫಲವಾಗಿ ರಾಷ್ಟçಗಳ ನಡುವಿನ ಕಲಹ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ೧೯೪೩ ಡಿಸಂಬರ್ ತಿಂಗಳಿನಲ್ಲಿ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಮತ್ತು ಅಮೇರಿಕಾ ಅಧ್ಯಕ್ಷ ಪ್ರಾಂಕ್ಲಿನ್ ರೂಸ್ ವೆಲ್ಟ್ ಇರಾನಿನ ರಾಜಧಾನಿ ಟೆಹರಾನ್ ನಗರದಲ್ಲಿ ಪರಸ್ಪರ ಭೇಟಿಯಾಗಿ ಸಹಿ ಹಾಕಿದರು. ಇದರ ಫಲವೆಂಬAತೆ ೧೯೪೫ರ ಅಕ್ಟೋಬರ್ ತಿಂಗಳಿನಲ್ಲಿ ಐವತ್ತು ರಾಷ್ಟçಗಳ ಸದಸ್ಯತ್ವದೊಂದಿಗೆ ಅಮೇರಿಕಾದಲ್ಲಿ ವಿಶ್ವಸಂಸ್ಥೆ ಆರಂಭಗೊAಡಿತು. ಸಹಜವಾಗಿ ಭದ್ರತಾಮಂಡಳಿಯ ಸದಸ್ಯ ರಾಷ್ಟçಗಳಾಗಿ ಐದು ಶಕ್ತಿ ರಾಷ್ಟçಗಳಾದ ಅಮೇರಿಕಾ, ರಷ್ಯಾ, ಇಂಗ್ಲೇAಡ್, ಪ್ರಾನ್ಸ್ ಮತ್ತು ಚೀನಾ ಆಯ್ಕೆಯಾದವು. ಈಗ ವಿಶ್ವಸಂಸ್ಥೆಯಲ್ಲಿ ೧೯೩ ಸದಸ್ಯರಾಷ್ಟçಗಳಿದ್ದರೂ ಸಹ ಎಲ್ಲಾ ಅಂತಿಮ ತೀರ್ಮಾನ ಐದು ರಾಷ್ಟçಗಳ ನಿರ್ಧಾರವನ್ನು ಅವಲಂಬಿಸಿದೆ. ವಿಶ್ವಸಂಸ್ಥಾಪನೆಯ ಉದ್ದೇಶಗಳಿಗೂ ಅದರ ಕಾರ್ಯಾಚರಣೆಗೂ ಯಾವುದೇ ಸಂಬAಧವಿಲ್ಲ.  ಇಡೀ ಜಗತ್ತಿನಲ್ಲಿ ಯುದ್ಧ ಶಸ್ತಾçಸ್ರಗಳನ್ನು ಐದು ರಾಷ್ಟçಗಳು ಉತ್ಪಾದಿಸುತ್ತಿದ್ದು. ಇತರೆ ದೇಶಗಳಿಗೆ ಮಾರಾಟ ಮಾಡುವುದು ಇವುಗಳ ಮುಖ್ಯ ಗುರಿಯಾಗಿದೆ. ಹಾಗಾಗಿ ಯಾವ ರಾಷ್ಟçಗಳು ನೆಮ್ಮದಿಯಿಂದ ಇರುವುದು ಅಥವಾ ಜನತೆಯ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ರಾಷ್ಟçಗಳಿಗೆ ಬೇಕಾಗಿಲ್ಲ. ಕಾರಣದಿಂದಾಗಿ ಇವುಗಳ ಕನಸಿನ ಕೂಸುಗಳಾದ ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಸೇರಿದಂತೆ ಬಹುತೇಕ ಜಾಗತಿಕ ಸಂಸ್ಥೆಗಳು ಅಮೇರಿಕಾ ಸೇರಿದಂತೆ ಪ್ರಬಲ ರಾಷ್ಟçಗಳ ಕಣ್ಣಳತೆಯಲ್ಲಿ ಕಾರ್ಯ ನಿರ್ವಹಿಸುವ ಗುಲಾಮಗಿರಿ ಸಂಸ್ಥೆಗಳಾಗಿವೆ.

ಇದೀಗ ಉಕ್ರೇನ್ ಮೇಲೆ ಮುಗಿ ಬಿದ್ದಿರುವ ರಷ್ಯಾ ನಿರ್ಧಾರವನ್ನು ಅಮೇರಿಕಾ, ಇಂಗ್ಲೇಂಡ್ ಪ್ರಬಲವಾಗಿ ಖಂಡಿಸಿದ್ದರೂ ಸಹ, ಏಷ್ಯಾದ ಅತಿದೊಡ್ಡ ರಾಷ್ಟçಗಳು ಎನಿಸಿರುವ ಚೀನಾ ಮತ್ತು ಭಾರತ ಎರಡೂ ರಾಷ್ಟçಗಳು ರಷ್ಯಾದ ಪರವಾಗಿ ನಿಂತಿರುವುದು ನಾಚಿಕೆಗೇಡಿನ ಸಂಗತಿ. ವಿಶ್ವಸಂಸ್ಥೆಯು ಸರ್ವಾಂಗಳನ್ನು ಕಳೆದುಕೊಂಡ ಅಂಗವಿಕಲ ಕೂಸಿನಂತಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಯುದ್ಧ ನಡೆಯಲಿ ಅದರ ಪರಿಣಾಮವನ್ನು ಇಡೀ ಜಗತ್ತಿನ ಬಡರಾಷ್ಟಗಳು ಮತ್ತು ಅಬಿವೃದ್ಧಿಶೀಲ ರಾಷ್ಟçಗಳು ಅನುಭವಿಸಬೇಕಿದೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಮತ್ತು ಏಷ್ಯಾ ರಾಷ್ಟçಗಳಲ್ಲಿ ಅಡುಗೆ ಎಣ್ಣೆಯ ಕೊರತೆಯುಂಟಾಗಿದೆ. ಈಗಾಗಲೇ ಸತತರ ಎರಡು ವರ್ಷಗಳ ಕೋವಿಡ್ ಅಲೆಯಿಂದ ನರಳಿರುವ ವಿಶ್ವಕ್ಕೆ ಇಂತಹ ಯುದ್ಧಗಳು ಬೇಕಾಗಿರಲಿಲ್ಲ.

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಮತ್ತು ಜನಾಂಗ ದ್ವೇಷ:- ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಬಡತನ ಹಾಗೂ ಹಸಿವಿನಿಂದ ನರಳುತ್ತಿರುವ ರಾಷ್ಟçಗಳಿಗೆ ಎಲ್ಲಾ ರೀತಿಯಲ್ಲಿ ನೆರವಾಗುವುದು ವಿಶ್ವಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸು ನಿಧಿ ಹಾಗೂ ಮುಂದುವರೆದ ಶ್ರೀಮಂತ ರಾಷ್ಟçಗಳ ನೈತಿಕ ಕರ್ತವ್ಯ. ವರ್ತಮಾನ ಜಗತ್ತಿನಲ್ಲಿ  ಶ್ರೀಲಂಕಾ, ಮ್ಯಾನ್ಮರ್, ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನ ರಾಷ್ಟçಗಳು ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಸುಸ್ಥಿರ ಸರ್ಕಾರಗಳ ಕೊರತೆ ಹಾಗೂ ಸರ್ವಾಧಿಕಾರದ ಆಡಳಿತದಿಂದ ನರಳುತ್ತಿವೆ. ಇವೆಲ್ಲವುಗಳ ಒಟ್ಟು ಪರಿಣಾಮದಿಂದ ಸಾಮಾನ್ಯ ಜನತೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುತ್ತಿದ್ದರೆ, ಮಕ್ಕಳು ಹಾಗೂ ಮಹಿಳೆಯರು ಅಪೌಷ್ಟಿಕತೆ ಮತ್ತು ಅನಾರೋಗ್ಯದಿಂದ ವಂಚಿvರಾಗಿ ಸಾವನ್ನಪ್ಪುತ್ತಿದ್ದಾರೆ. ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸಬೇಕಾಗಿದ್ದ ಜಾಗತಿಕ ಸಂಸ್ಥೆಗಳು ನಿಷ್ಕಿçಯವಾಗಿವೆ.

ಭಾರತದ ದಕ್ಷಿಣ ಭಾಗದ ಹಿಂದು ಮಹಾಸಾಗರದಲ್ಲಿರುವ ದ್ವೀಪರಾಷ್ಟç ತನ್ನ ಇತಿಹಾಸದಲ್ಲಿ ಕಂಡರಿಯದ ದುರಂತದಲ್ಲಿ ಮುಳುಗಿಹೋಗಿದೆ. ಸತತ ಮೂರು ದಶಕಗಳ ಕಾಲ ನಡೆದ ಅಂತರ್ಯುದ್ಧದಲ್ಲಿ ತಮಿಳು ಎಲ್.ಟಿ. ಟಿ. ಉಗ್ರರ ಜೊತೆ ಸೆಣೆಸಿ ಹೈರಾಣಾಗಿದ್ದ ಶ್ರೀಲಂಕಾ ಸರ್ಕಾರ ೨೦೦೯ ವೇಳೆಗೆ ಉಗ್ರ ಸಂಘಟನೆಗಳನ್ನು ಸದೆಬಡಿದು ಚೇತರಿಸಿಕೊಂಡಿತ್ತು. ಆಶ್ಚರ್ಯಕರ ರೀತಿಯಲ್ಲಿ ಪ್ರವಾಸೋದ್ಯಮವನ್ನು ಮುನ್ನಲೆಗೆ ತರುವುದರ ಜೊತೆಗೆ ಅಲ್ಲಿನ ಪ್ರಮುಖ ಕೃಷಿಯಾದ ಚಹಾ ಮತ್ತು ಮಸಾಲೆ ಪದಾರ್ಥಗಳ ಬೆಳೆಗೆ ಉತ್ತೇಜನ ನೀಡಿ ಬೆಳವಣಿಗೆಯತ್ತ ಸಾಗಿತ್ತು. ಆದರೆ, ಅಲ್ಲಿನ ಸಿಂಹಳಿಯರು ಬೋಡು ಬಾಲಾ ಸೇನಾ ಎಂಬ ಬೌದ್ಧ ಧರ್ಮದ ಕೋಮುವಾದಿ ಸಂಘಟನೆಯನ್ನು ಹುಟ್ಟುಹಾಕುವುದರ ಜೊತೆಗೆ  ಮುಸ್ಲಿಮರು ಹಾಗೂ ಕ್ರೆöÊಸ್ತರ ಮೇಲೆ ಜನಾಂಗ ದ್ವೇಷವನ್ನು ಸಾಧಿಸತೊಡಗಿದರು. ಇಷ್ಟು ಮಾತ್ರವಲ್ಲದೆ ಮಹಿಂದ ರಾಜಪಾಕ್ಷ ಮತ್ತು ಗೋಟುಬಯಾ ರಾಜಪಾಕ್ಷ ಎಂಬ ಸಹೋದರರನ್ನು ಪ್ರಧಾನಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವುದರ ಜೊತೆಗೆ ಅವರ ಕುಟುಂಬದ ಎಂಟು ಮಂದಿ ಸದಸ್ಯರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿತು.

ಶ್ರೀಲಂಕಾದಲ್ಲಿ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ ಸರ್ಕಾರವಿದ್ದರೂ ಸಹ ಇಡೀ ಅಧಿಕಾರ ಮಹಿಂದ ಮತ್ತು ಗೊಟುಬಯಾ ರಾಜಪಾಕ್ಷ ರವರ ಕುಟುಂಬದ ಕೈಯಲ್ಲಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನೆಪದಲ್ಲಿ ಚೀನಾದಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ತಂದು ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ಅಲ್ಲಿನ ಸರ್ಕಾರ ಮುಳುಗಿತು. ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ ಅರ್ಧದಷ್ಟು ಭಾಗ ಕೊಡುಗೆ ನೀಡುತ್ತಿದ್ದ ಕೃಷಿಯನ್ನು ಸಾವಯವ ಪದ್ಧತಿಗೆ ಪರಿವರ್ತಿಸುವ ನಿಟ್ಟಿನಲ್ಲಿ ರಸಾಯನಿಕ ಗೊಬ್ಬರ ಬಳಕೆಗೆ ನಿಷೇದ ಹೇರಿದ ಪರಿಣಾಮ ಚಹಾ, ಭತ್ತ, ಮಸಾಲೆ ಪದಾರ್ಥಗಳ ಉತ್ಪಾದನೆ ನೆಲ ಕಚ್ಚಿತು. ಇದರ ಜೊತೆಗೆ ೨೦೧೮ ರಲ್ಲಿ ಈಸ್ಟರ್ ಹಬ್ಬದ ದಿನಾಚರಣೆಯ ಸಂದರ್ಭದಲ್ಲಿ ಆತ್ಮಾಹುತಿ ದಳದ ಬಾಂಬ್ ಸ್ಪೋಟಗೊಂಡು ಪ್ರವಾಸಿಗರು ಸೇರಿದಂತೆ ಒಟ್ಟು ೨೫೦ ಮಂದಿ ಮರಣ ಹೊಂದಿದರು. ಕೂಡಲೇ ಅಮೇರಿಕಾ, ಇಂಗ್ಲೇಂಡ್, ಆಸ್ಟ್ರೇಲಿಯಾ ಸೇರಿದಂತೆ ಬಹುತೇಕ ರಾಷ್ಟçಗಳು ತಮ್ಮ ನಾಗರೀಕರಿಗೆ ಶ್ರೀಲಂಕಾ ಪ್ರವಾಸ ಹೋಗದಂತೆ ಕಟ್ಟೆಚ್ಚರಿಕೆ ನೀಡಿದವು. ಇದರ ಜೊತೆಗೆ ೨೦೧೯ ರಲ್ಲಿ ಜಗತ್ತಿನಾದ್ಯಂತ ಹರಡಿದ ಕೋವಿಡ್ ಸಾಂಕ್ರಾಮಿಕ ರೋಗದಿಂದ ಶ್ರೀಲಂಕಾ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತು.

ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದ್ದ ಶ್ರೀಲಂಕಾ ಸರ್ಕಾರವು ಚೀನಾ ರಾಷ್ಟçವು ನೀಡಿದ ಸಾಲಕ್ಕೆ ಋಣಿಯಾಗುವ ನಿಟ್ಟಿನಲ್ಲಿ ಚಿನಾದಿಂದ ಆಮದು ಮಾಡಿಕೊಂಡ ವಸ್ತುಗಳಿಗೆ ತೆರಿಗೆ ವಿನಾಯಿತಿ ಘೋಷಿಸಿತು. ಒಂದು ಕಡೆ ಕೃಷಿ ಮತ್ತು ಪ್ರವಾಸೋದ್ಯಮದ ಹೊಡೆತ ಮತ್ತೊಂದು ಕಡೆ ತೆರಿಗೆ ವಿನಾಯಿತಿ ಇಂತಹ ಅವಿವೇಕತನದ ನಿರ್ಧಾರಗಳಿಂದಾಗಿ ಶ್ರೀಲಂಕಾ ಸರ್ಕಾರದ ಬಳಿ ವಿದೇಶಗಳಿಂದ ಆಹಾರ, ಔಷಧ, ತೈಲ  ಮುಂತಾದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ವಿದೇಸಿ ವಿನಿಮಯದ ಹಣದ ಕೊರತೆಯುಂಟಾಗಿ ದಿವಾಳಿಯೆದ್ದಿತು. ಸಂಗ್ರಹವಾಗುತ್ತಿದ್ದ ತೆರಿಗೆ ಹಣ ಅಂತರಾಷ್ಟಿçà ಸಾಲಗಳಿಗೆ ಬಡ್ಡಿಕಟ್ಟುವುದಕ್ಕೆ ವಿನಿಯೋಗವಾಯಿತು. ಈಗ ಅಲ್ಲಿನ ಜನತೆ ದಿನಸಿ ವಸ್ತುಗಳು, ಅಡುಗೆ ಅನಿಲ, ವಾಹನಗಳ ಇಂಧನ, ವಿದ್ಯುತ್ ಹಾಗೂ ಔಷಧಿ ಕೊರತೆಯಿಂದ ಬಳಲುತ್ತಿದ್ದಾರೆ. ಆನಾಂಗೀಯ ದ್ವೇಷವನ್ನು ಉದ್ದೇಪಿಸುವ ಕೋಮುವಾದಿ ಸಂಘಟನೆಗೆ ಬೆಂಬಲ ನೀಡಿದುದಕ್ಕೆ ಶಿಕ್ಷೆ ಎಂಬಂತೆ ಅಲ್ಲಿನ ಜನತೆ ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ಸರ್ಕಾರ ನೀಡಿದ ಹನ್ನೊಂದು ಸಾವಿರ ಮೆಟ್ರಿಕ್ ಟನ್ ಅಕ್ಕಿ ಮತ್ತು ಔಷಧಗಳು ಸ್ವಲ್ಪ ಮಟ್ಟಿಗೆ ನೆರವಾಗಿದೆ. ತಮಿಳು ಸರ್ಕಾರ ಕೂಡ ಆಹಾರ ಮತ್ತು ಔಷಧ ಸರಬರಾಜು ಮಾಡಲು ಮುಂದಾಗಿದೆ.

ಅಂತರಾಷ್ಟ್ರೀಯ ಸಂಸ್ಥೆಗಳಿಗೆ ನೀಡಬೇಕಾದ ಐದು ಸಾವಿರದ ನೂರು ಕೋಟಿ ಸಾಲವನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಘೋಷಿಸಿದೆ. ಆಡಳಿತಾರೂಢ ಸರ್ಕಾರಗಳ ತಪ್ಪು ನಿರ್ಧಾರ ಮತ್ತು ಕೋಮುವಾದಿ ಸಂಘಟನೆಗಳನ್ನು ಉತ್ತೇಜಿಸಿದರೆ ಜನತೆ ಎಂತಹ ಶಿಕ್ಷೆಯನ್ನು ಅನುಭವಿಸಬಹುದು ಎಂಬುದಕ್ಕೆ ಶ್ರೀಲಂಕಾ ನಮ್ಮೆದುರು ಸಾಕ್ಷಿಯಾಗಿದೆ. ಭಾರತಕ್ಕೆ ಇಂತಹ ದಿನಗಳು ದೂರವಿಲ್ಲ ಎಂದರೆ ಅದು ಅತಿಶಯದ ಮಾತಲ್ಲ. ನಮ್ಮ ಮತ್ತೊಂದು ನೆರೆಯ ರಾಷ್ಟç ಮ್ಯಾನ್ಮರ್ ನಲ್ಲಿ ಕಳೆದ ವರ್ಷ ಅಲ್ಲಿನ ಸೇನಾಡಳಿತ ಅಧಿಕಾರವನ್ನು ಕೈಗೆತ್ತಿಗೊಂಡ ನಂತರ ಮುವತ್ತು ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಜನತೆ ಒಂದು ಹೊತ್ತಿನ ಊಟದಲ್ಲಿ ಬದುಕುತ್ತಿದ್ದಾರೆ. ಅಲ್ಲಿನ ಜನರು ಸಹ ರೋಹಿಂಗ್ಯಾ ಮುಸ್ಲಿಮರ ಮೇಲೆ ದಾಳಿ ನಡೆಸಿ ಲಕ್ಷಾಂತರ ಮಂದಿ ದೇಶ ತೊರೆಯುವಂತೆ ಮಾಡಿದರು. ಶ್ರೀಲಂಕಾ ಮತ್ತು ಮ್ಯಾನ್ಮಾರ್ ದೇಶದಲ್ಲಿ ಆಚರಣೆಯಲ್ಲಿರುವುದು ಬುದ್ಧನ ಅನುಯಾಯಿಗಳು  ಸ್ಥಾಪಿಸಿದ ಬೌದ್ಧ ಧರ್ಮವೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತವೆ.

ಜತ್ತಿನ ಅನೇಕ ರಾಷ್ಟçಗಳಲ್ಲಿ ಅಲ್ಲಿನ ನಾಗರೀಕರು ಶೋಚನೀಯವಾಗಿ ಬದುಕುತ್ತಿರಬೇಕಾದರೆ, ಶ್ರೀಮಂತ ರಾಷ್ಟçಗಳು ಯುದ್ಧಕ್ಕೆ ಪರೋಕ್ಷ ಬೆಂಬಲ ನೀಡಿ ತಮ್ಮ ಶಸ್ತ್ರಾಸ್ರಗಳ ಮಾರಟದಲ್ಲಿ ನಿರತರಾಗಿವೆ. ಭಾರತ ಸರ್ಕಾರ ಪ್ರತಿವರ್ಷ ಐದು ಲಕ್ಷ ಕೋಟಿ ಹಣವನ್ನು ಮಿಲಿಟರಿ ವೆಚ್ಚವಾಗಿ ವಿನಿಯೋಗಿಸುತ್ತಿದೆ ಎಂದರೆ ಜಗತ್ತು ಯಾವ ಮಾರ್ಗದಲ್ಲಿ ಹೆಜ್ಜೆ ಇಡುತ್ತಿದೆ ಎಂಬುದನ್ನು ನಾವು ಸುಲಭವಾಗಿ ಊಹಿಸಬಹುದು.

ಜಗದೀಶ್ ಕೊಪ್ಪ

( 2022 ರ ಮೇ ತಿಂಗಳ ಹೊಸತು ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)