ಭಾನುವಾರ, ಜೂನ್ 30, 2024

ಸಾವಿನ ಕುದುರೆಯೇರಿ ಹೊರಟವರ ಕಥನ

 



 ಜೂನ್ ತಿಂಗಳ ಮೊದಲ ವಾರದಲ್ಲಿ ಉತ್ತರಖಂಡದ ಗರ್ವಾಲ್ ಎಂಬ ಪ್ರದೇಶದಲ್ಲಿ ಸಹಸ್ರ ತಾಲ್ ಎಂಬ ಸರೋವರದ ಬಳಿ ಟ್ರಕ್ಕಿಂಗ್ ಎಂಬ ಹೆಸರಿನ ಚಾರಣಕ್ಕೆ  ಹೋಗಿದ್ದ ಕರ್ನಾಟಕದ ಇಪ್ಪತ್ತೆರೆಡು ಮಂದಿ ಸದಸ್ಯರಲ್ಲಿ ಒಂಬತ್ತು ಜನರು  ಹಿಮಕುಸಿತ ಮತ್ತು ಹಿಮಗಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡರು. ಹವಾಮಾನ ವೈಪರಿತ್ಯವೆಂಬುದು ಕಳೆದ ಒಂದು ದಶಕದಿಂದ ಭಾರತದಲ್ಲಿ ಸಾಮಾನ್ಯ ಅಂಶವಾಗಿರುವ ಸಂದರ್ಭದಲ್ಲಿ ಚಂಡಮಾರುತ,  ಅನಿರೀಕ್ಷಿತ ಮಳೆ, ನದಿಗಳ ದಿಡೀರ್ ಪ್ರವಾಹ, ಭೀಕರ ಬರಗಾಲ ಇವುಗಳೆಲ್ಲವೂ ಇಂದಿನ ದಿನಮಾನಗಳಲ್ಲಿ ಭಾರತದ ಭೌಗೂಳಿಕ ಮತ್ತು ಪರಿಸರದ ಲಕ್ಷಣಗಳಾಗಿವೆ. ಇವುಗಳ ಕುರಿತಾಗಿ ಇಂತಹ ಕನಿಷ್ಠ ಜ್ಞಾನವು ಇತ್ತೀಚೆಗೆ ಚಾರಣ ಎಂಬ ಸಾಹಸಕ್ಕೆ ಹೊರಡುವ ಪ್ರವಾಸಿಗರಿಗೆ ಇರಬೇಜಾದ್ದು ಅತ್ಯಾವಶ್ಯಕವಾಗಿದೆ. 

ಇಂತಹ ಪ್ರಾಕೃತಿಕ ದುರಂತಗಳಿಗೆ ಸಿಲುಕುತ್ತಿರುವ ಬಹುತೇಕ ಮಂದಿ ವಿಜ್ಞಾನ ಓದಿಕೊಂಡವರು ಮೇಲಾಗಿ ಟೆಕ್ಕಿಗಳು ಎಂದು ಆಧುನಿಕ ಪರಿಭಾಷೆಯಲ್ಲಿ ಕರೆಸಿಕೊಳ್ಳುವ  ಸಾಪ್ಟ್ ವೇರ್ ಇಂಜಿಯರ್ಗಳಾಗಿರುವುದು ವಿಪರ್ಯಾಸದ ಸಂಗತಿ. ಕಳೆದ ವರ್ಷ ಇದೇ ಪ್ರದೇಶದಲ್ಲಿ ನೆಹರೂ ಟ್ರೆಕ್ಕಿಂಗ್ ಸಂಸ್ಥೆ ನಡೆಸಿದ ಚಾರಣದಲ್ಲಿ ಇಪ್ಪತ್ತೆರೆಡು ಮಂದಿ ಪ್ರಾಣ ಕಳೆದುಕೊಂಡಿದ್ದರು.  ಯಾವುದೇ ಸಂವಹನ ವ್ಯವಸ್ಥೆ ಇಲ್ಲದ ಇಂತಹ ಪ್ರದೇಶದಲ್ಲಿ ಅಪಘಾತಕ್ಕೆ ಸಿಲುಕಿದವರ ಸಹಾಯಕ್ಕೆ ಬರಲು ಯಾವುದೇ ರಸ್ತೆ ಸಂಪರ್ಕಗಳು ಇರುವುದಿಲ್ಲ.  ಹೆಲಿಕಾಪ್ಟ ರ್ ಗಳನ್ನು ಹೊರತು ಪಡಿಸಿ, ಯಾವುದೇ ವಾಹನಗಳು ಅಥವಾ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪುವುದು ಅಸಾಧ್ಯವಾದ  ಪರಿಸ್ಥಿತಿ.

ಕಳೆದ ಎರಡೂವರೆ ದಶಕಗಳ ಹಿಂದೆ ಜಗತ್ತಿನಾದ್ಯಂತ ತಂತ್ರಜ್ಞಾನದ ಬದಲಾವಣೆಯ ಬಿರುಗಾಳಿ ಎದ್ದ ಪರಿಣಾಮವಾಗಿ ಆಧುನಿಕ ತಲೆಮಾರು ಜೀವಿಸುವ ಪರಿ ಮತ್ತು ಯೋಚಿಸುವ ವಿಧಾನವನ್ನು ಬದಲಾಯಿಸಿದೆ. ಬೆರಳ ತುದಿಗೆ ಇಡೀ ಜಗತ್ತು ಬಂದು ಕುಳಿತಿರುವಾಗ ಇಡೀ ಜಗತ್ತು ಅವರ ಪಾಲಿಗೆ ಹಳ್ಳಿಯಾಗಿದೆ. ಕೈ ತುಂಬಾ ಲಕ್ಷಗಟ್ಟಲೆ ಸಂಬಳ ಪಡೆಯುವ ಅವರಿಗೆ ಜಗತ್ತಿನ ಪ್ರತಿಯೊಂದು ಅನುಭವವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಹಪಾಹಪಿ ಅವರ ಮಿದುಳನ್ನು ಆಕ್ರಮಿಸಿಕೊಂಡಿದೆ. ಕಾರಣದಿಂದ ಈಜು ಬಾರದಿದ್ದರೂ ಅಪರಿಚಿತ ನದಿ ಮತ್ತು ಸಮುದ್ರಗಳಲ್ಲಿ ಈಜಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿರುವವರಲ್ಲಿ ಸಾಪ್ಟ್ ವೇರ್ ಇಂಜಿನಿಯರ್ಗಳು, ವೈದ್ಯರು ಹಾಗೂ  ಅಂತಿಮ ಹಂತದ ವೈದ್ಯಕೀಯ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

 ಇವುಗಳ ಜೊತೆಗೆ  ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಐರೋಪ್ಯ ರಾಷ್ಟçಗಳಿಗೆ ತಯಾರಾದ ನಾಲ್ಕರಿಂದ ಐದು ಲಕ್ಷ ರೂಪಾಯಿ ಬೆಲೆ ಬಾಳುವ ಮತ್ತು ನೂರೈವತ್ತು ಕಿಲೊಮೀಟರ್ ವೇಗದ ಸಾಮರ್ಥ್ಯವಿರುವ ಮೋಟಾರ್ ಬೈಕ್ ಗಳು ಭಾರತಕ್ಕೆ ಲಗ್ಗೆ ಇಟ್ಟಿವೆ. ಅತ್ಯಂತ ಜನಸಂದಣಿಯ ನಗರಗಳು ಮತ್ತು ಹದಗೆಟ್ಟ ರಸ್ತೆಗಳ ದೇಶದಲ್ಲಿ ಇಂತಹ ದ್ವಿಚಕ್ರಗಳನ್ನು ಓಡಿಸುವುದು ಅಸಾಧ್ಯ ಮತ್ತು ಅಪಾಯಕಾರಿ ಎಂಬ ಜ್ಞಾನವಿದ್ದರೂ ಸಹ ಇಂದು ದೇಶದ ಬಹುತೇಕ ಮೆಟ್ರೋ ನಗರಗಳಲ್ಲಿ ವಾಹನವು ಟೆಕ್ಕಿಗಳ ಅಚ್ಚುಮೆಚ್ಚಿನ ವಾಹನವಾಗಿದೆ.

ತಮ್ಮನ್ನು ಹೆತ್ತು ಸಲುಹಿದ ಅಪ್ಪ ಅಮ್ಮಂದಿರ ಕಣ್ಗಾವಲಿನಿಂದ ದೂರವಿರುವ ಗಂಡು-ಹೆಣ್ಣುಗಳೆಂಬ  ಈಗಿನ ಯುವ ತಲೆಮಾರಿಗೆ ಮಾಹಿತಿ ತಂತ್ರಜ್ಞಾನದ ಕುಲುಮೆಯಲ್ಲಿ ಬೇಯುತ್ತಿರುವ ಪರಿಣಾಮವಾಗಿ ತಮ್ಮ ದುಡಿಮೆಯ ದೈಹಿಕ ಹಾಗೂ ಮಾನಸಿಕ ದಣಿವನ್ನು ನೀಗಿಸಿಕೊಳ್ಳಲು ಬಿಯರ್ ಅಥವಾ ಮಾದಕ ವಸ್ತಗಳ ಮೊರೆ ಹೋಗಿದ್ದಾರೆ. ಇವರ ಪಾಲಿಗೆ ಹಣವೆಂಬುದು ತೃಣ ಎಂಬAತಾಗಿದೆ. ವಾರಾಂತ್ಯದ ದಿನಗಳಲ್ಲಿ ನಗರಗಳ ಹೊರವಲಯದ ತೋಟಗಳಲ್ಲಿ ಇಡೀ ರಾತ್ರಿ ನಡೆಯುವ ಮೋಜು ಮಸ್ತಿಗೆ ಲೆಕ್ಕವಿಲ್ಲ. ಅದೇ ರೀತಿ ದ್ವಿಚಕ್ರ ವಾಹನ ಓಡಿಸಿ ನಡುರಾತ್ರಿಯಲ್ಲಿ ಸಾವಿನ ಕುದುರೆಯೇರಿ ಹೊರಟವರ ಕುರಿತಾಗಿ ಲೆಕ್ಕವಿಟ್ಟವರಿಲ್ಲ.

ಬೆಂಗಳೂರು, ಪುಣೆ, ಹೈದರಾಬಾದ್ ಮತ್ತು ಚೆನ್ನೆöÊ ನಗರಗಳ ರಸ್ತೆ ಅಫಘಾತಗಳಲ್ಲಿ ಮೃತಪಟ್ಟವರ ಹಿನ್ನಲೆಯನ್ನು ಸೂಕ್ಷö್ಮವಾಗಿ ಗಮನಿಸಿದಾಗ ಇಂದಿನ ಯುವತಲೆಮಾರು ಹಿಡಿದಿರುವ ಸಾವಿನಹಾದಿಯ ವಿವರ ನಮಗೆ ಮನವರಿಕೆಯಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಇಂತಹ ಸಾವಿನ ಸಂಖ್ಯೆಯು ಶೇಕಡಾ 14 ರಷ್ಟು ಹೆಚ್ಚಾಗಿದ್ದು, ಇವುಗಳಲ್ಲಿ ಶೇಕಡಾ 34 ರಷ್ಟು ಮಂದಿ ಅತಿವೇಗದ ಚಾಲನೆಯಿಂದ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಂಕಿ ಅಂಶಗಳು ಹೇಳುತ್ತವೆ.

ಕಳೆದ ಎರಡು ದಶಕಗಳಲ್ಲಿ ಇಂತಹ ಅನಿರೀಕ್ಷಿತ ಅಪಘಾತಗಳಿಗೆ ಸಾವನ್ನಪ್ಪುತ್ತಿರುವ ಬಹುತೇಕ ಯುವಕ/ಯುವತಿಯರು ಶ್ರೀಮಂತ ಅಥವಾ ದೊಡ್ಡ ದೊಡ್ಡ ಅಧಿಕಾರಿಗಳ ಕುಟುಂಬದಿA ಬಂದವರಲ್ಲ. ಶೇಕಡಾ ೭೫ ರಷ್ಟು ಮಂದಿಯ ಕೌಟುಂಬಿಕ ಹಿನ್ನಲೆಯು ಮಧ್ಯಮ ವರ್ಗ ಅಥವಾ ಬಡಕುಟುಂಬದಿA ಬಂದ ಇತಿಹಾಸ ನಮ್ಮ ಕಣ್ಣೆದೆರು ತರದ ಪುಸ್ತಕದಂತೆ ಇದೆ. ಇವರ ಪೋಷಕರಲ್ಲಿ ಬಹುತೇಕ ಮಂದಿ ಶಾಲಾ ಶಿಕ್ಷಕರು, ಸರ್ಕಾರಿ ಕಚೇರಿಯ ಗುಮಾಸ್ತರು, ರೈತರು, ಕೃಷಿ ಮತ್ತು ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಹಾಗೂ  ಆಟೋ ಚಾಲಕರು, ರಸ್ತೆ ಬದಿ ಹಣ್ಣು, ತರಕಾರಿ ಮಾರಾಟ ಮಾಡಿದ ಬಡವರಿದ್ದಾರೆ. ಇಂತಹ ಪೋಷಕರ ಕನಸುಗಳಲ್ಲಿ ತಾವು ಸಂಪತ್ತನ್ನು ಗಳಿಸಬೇಕು ಅಥವಾ ಸಾಮ್ರಾಜ್ಯವನ್ನು ವಿಸ್ತರಿಸಬೇಕು ಎಂಬ ಯಾವುದೇ ಕನಸುಗಳಿರುವುದಿಲ್ಲ. ನಮ್ಮಂತೆ ನಮ್ಮ ಮಕ್ಕಳು ಬದುಕಬಾರದು, ಕಷ್ಠ ಪಡಪಾರದು ಎಂಬ ಏಕೈಕ ಕಾರಣಕ್ಕಾಗಿ ತಾವು ಸಂಪಾದಿಸಿದ ಹಣವನ್ನು ಕೂಡಿಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿರುತ್ತಾರೆ. ತಾವು ಒಂದು ಹೊತ್ತಿನ ಊಟ ಮಾಡಿ ತಮ್ಮ ಮಕ್ಕಳಿಗೆ ಎರಡು ಹೊತ್ತಿನ ಊಟ ಮತ್ತು ಒಂದು ತಿಂಡಿಗಾಗಿ ತಮ್ಮ ಮೈ ಬೆವರನ್ನು ನೆತ್ತರಾಗಿ ಬಸಿದಿದ್ದಾರೆ.

ಇಂದಿನ ಯುವ ಮನಸ್ಸುಗಳಿಗೆ ಇವುಗಳ ಕುರಿತು ಕನಿಷ್ಠ ಕಾಳಜಿ ಬೇಕು. ತಾವು ತಿನ್ನುವ ಆಹಾರದ ಜೊತೆ, ಕುಡಿಯುವ ನೀರಿನ ಜೊತೆ ಹಾಗೂ ಧರಿಸುವ ಆಧುನಿಕ ಥರಾವರಿ ವಸ್ತçಗಳ ಜೊತೆ ತಮ್ಮ ತಂದೆ, ತಾಯಿ ಮತ್ತು ತಮ್ಮನ್ನು ನಂಬಿರುವ ಅಕ್ಕ ತಂಗಿ ಹಾಗೂ ಅಣ್ಣ ತಮ್ಮಂದಿರ ನೆನಪು ಬಂದರೆ ಸಾಕು ಇಂತಹ ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವುದಿಲ್ಲ. ಯಾವೊಬ್ಬ ತಂದೆ ತಾಯಿಯೂ,  ನಮ್ಮಂತೆ  ಮದ್ದೆ ಊಟ ಮಾಡಬೇಕು ಅಥವಾ ರೊಟ್ಟಿ ಊಟ ಮಾಡಬೇಕು ಎಂದು ಬಯಸುವುದಿಲ್ಲ. ಮಕ್ಕಳು ಪಿಜ್ಜಾ, ಬರ್ಗರ್ ಇವುಗಳನ್ನೇ ತಿನ್ನಲಿ ಅಥವಾ ನೀರಿನ ಬದಲು ಪೆಪ್ಸಿ ಕೋಲಾ ಪಾನೀಯಗಳನ್ನು ಕುಡಿಯಲಿಅಭ್ಯಂತವಿಲ್ಲ. ಆದರೆ, ತಮ್ಮ ಮಕ್ಕಳ  ಭವಿಷ್ಯಕ್ಕಾಗಿ ದುಡಿದು ತಮ್ಮ ಯವ್ವನವನ್ನು ತ್ಯಾಗ ಮಾಡಿದ ಇವರ ಕುಟುಂಬದ ಸದಸ್ಯರು ನಿವೃತ್ತಿಯ ಜೀವನದಲ್ಲಿ ನೆಮ್ಮದಿಯಾಗಿ ಊಟ ಮಾಡಿ, ತಮ್ಮದೇ ನಿವಾಸದಲ್ಲಿ ಸುಖವಾಗಿ ನಿದ್ರೆ ಮಾಡುವ ಹಾಗೆ ಅವರ ಜೀವನ ರೂಪಿಸುವುದು ಇಂದಿನ ಮಕ್ಕಳ ನೈತಿಕ ಜವಾಬ್ದಾರಿಯಾಗಿದೆ.

ಇಂದಿನ ಯುವ ಮನಸ್ಸುಗಳಿಗೆ  ಪರ್ವತಗಳನ್ನು ಹತ್ತಿ ಇಳಿಯುವುದಕ್ಕೆ ಹಿಮಾಲಯದ ಪರ್ವತಗಳೇ ಬೇಕಾಗಿಲ್ಲ. ನಮ್ಮ ಕರ್ನಾಟದಲ್ಲಿ ಕೆಮ್ಮಣ್ಣು ಗುಂಡಿಯಿದೆ, ಕುಮಾರ ಪರ್ವತವಿದೆ, ಚಾಮುಂಡಿ ಮತ್ತು ನಂದಿ ಬೆಟ್ಟಗಳಿವೆ. ನೆರೆಯ ತಮಿಳುನಾಡಿನ ಊಟಿ ಬಳಿ ನೀಲಿಗಿರ ಪರ್ವತವು ಆನೆ ಮಲೈ ಎಂದು ಹೆಸರಾಗಿದೆ. ಬೆಂಗಳೂರಿಗೆ 130 ಕಿಲೊಮೀಟರ್ ದೂರದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಬಳಿ ಹಾರ್ಸ್ಲಿ ಹಿಲ್ ಹೆಸರಿನ ಗಿರಿಧಾಮವಿದೆ. ಇವರೆಲ್ಲಾ ಬಹುತೇಕ ಮಂದಿ ವಿಜ್ಞಾನದ ವಿದ್ಯಾರ್ಥಿಗಳು ಇವರಿಗೆ ಭಾರತದಲ್ಲಿ ಅತ್ಯಂತ ಅಪಾಯಕಾರಿ ಭೂಕಂಪ ಪ್ರದೇಶಗಳು ಯಾವುವು ಎಂಬುದರ ಬಗ್ಗೆ ಕನಿಷ್ಠ ಜ್ಞಾನವಿರಬೇಕು. ಭಾರತದಲ್ಲಿ ಪ್ರಥಮ ಸ್ಥಾನದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಗಳು ಇದ್ದರೆ, ಎರಡನೇ ಸ್ಥಾನದಲ್ಲಿ ಹಿಮಾಲಯ ಪರ್ವತದ ತೆಹ್ರಿ, ಗರ್ವಾಲ್ ಪ್ರದೇಶ ಸೇರಿದಂತೆ ನೆರೆಯ ನೇಪಾಳ ದೇಶ ಇದೆ.  ಅಂಡಮಾನ್ ನಲ್ಲಿ ಸಂಭವಿಸುವ  ಭೂಕಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ ಐದರಿಂದ ಏಳರಷ್ಟು ಇದ್ದರೆ, ಹಿಮಾಲಯದ ಪರ್ವತ ಪ್ರದೇಶದಲ್ಲಿ ನಾಲ್ಕರಿಂದ ಆರರಷ್ಟು ಇದೆ. ರಿಕ್ಟರ್ ಮಾಪಕದಲ್ಲಿ ನಾಲ್ಕನ್ನು ದಾಟಿದರೆ, ಅಪಾಯ ಕಟ್ಟಿಟ್ಟ ಬುತ್ತಿ ಎಂದು ಇವರುಗಳಿಗೆ ವಿವರಿಸಬೇಕಾಗಿಲ್ಲ. ಆಫ್ಘನಿಸ್ಥಾನವು ಕೂಡಾ ಇದೇ ಅಪಾಯದ ಅಂಚಿನಲ್ಲಿದೆ.

ಗ್ರಾಮೀಣ ಹಿನ್ನಲೆಯಿಂದ ಬಂದ ನನ್ನನ್ನೂ ಒಳಗೊಂಡAತೆ ನನ್ನ ತಲೆಮಾರಿನ ಬಹುತೇಕ ಮಂದಿ ಬಾಲ್ಯದಲ್ಲಿ ನಮ್ಮೂರಿನ ಕೆರೆ, ಕಾಲುವೆ, ನದಿಗಳಲ್ಲಿ ಈಜುತ್ತಾ ಬೆಳೆದವರು. ಬೇಸಿಗೆಯ ದಿನಗಳಲ್ಲಿ ನಮ್ಮ ಹಗಲಿನ ಬಹುತೇಕ ಸಮಯವು ಕೆರೆ ಮತ್ತು ಕಾಲುವೆ ಹಾಗೂ ಊರಿನ ಸಮೀಪವಿರುವ ನದಿಗಳಲ್ಲಿ ಕಳೆದು ಹೋಗುತ್ತಿತ್ತು. ಆದರೆ, ನಾವೆಂದೂ ಅಪರಿಚಿತ ಸ್ಥಳಗಳಲ್ಲಿ ಕೆರೆ ಅಥವಾ ನದಿಗಳಿಗೆ ಇಳಿದು ಈಜುವುದಕ್ಕೆ ಈಗಲೂ ಸಂಹ ಅಂಜುತ್ತೇವೆ. ಏಕೆಂದರೆ, ಅಪರಿಚಿತ ಕೆರೆಗಳ ಆಳ ಮತ್ತು ಹರಿಯುವ ನದಿಗಳಲ್ಲಿ ಇರುವ ಸುಳಿಗಳು ನಮಗೆ ಗೊತ್ತಿರುವುದಿಲ್ಲ. ಇದು ನಾವು ದಕ್ಕಿಸಿಕೊಂಡ ಜ್ಞಾನವಲ್ಲ, ನಮ್ಮ ಅಪ್ಪಂದಿರು ಮತ್ತು ತಾತಂದಿರು ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ ಜ್ಞಾನಪರಂಪರೆ ಇದಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಙಾನದ ಜೊತೆಗೆ ದೇಶಿ ಜ್ಞಾನಪರಂಪರೆಯನ್ನೂ ಯುವ ತಲೆಮಾರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು  ತೀರಾ ಅಗತ್ಯವಾಗಿದೆ.

( ಜುಲೈ ತಿಂಗಳ ಸಮಾಜಮುಖಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಡಾ.ಎನ್.ಜಗದೀಶ್ ಕೊಪ್ಪ

 

ಶುಕ್ರವಾರ, ಮೇ 31, 2024

ಮರೆಯಲಾಗದ ಮುಸ್ಲಿಂ ಸಮುದಾಯದ ಮಹಾನುಭವರು

 


ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಜೊತೆಗೆ  ಬಹುಸಂಸ್ಕೃತಿಯ ರಾಷ್ಟ್ರವೂ ಕೂಡಾ ಹೌದು. ಭಾರತದ ಸಂವಿಧಾನವು ಈ ನೆಲದ ಪ್ರತಿಯೊಬ್ಬ ನಾಗರೀಕನಿಗೂ ಮತದಾನ ಮಾಡುವ ಹಕ್ಕಿನ ಜೊತೆಗೆ ಚುನಾವಣೆಗೆ ಸ್ಪರ್ಧಿಸಿ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ  ಹಕ್ಕನ್ನುದಯಪಾಲಿಸಿದೆ.  ಚುನಾವಣೆಗೆ ಸ್ಪರ್ಧಿಸಲು ನಾಗರೀಕರಿಗೆ ಯಾವುದೇ ಕನಿಷ್ಠ ಅರ್ಹತೆಯನ್ನು ನಿಗದಿ ಪಡಿಸಿಲ್ಲ ಇದಕ್ಕೆ ಪ್ರಮುಖ ಆ ಸಂದರ್ಭದಲ್ಲಿ ಭಾರತದಲ್ಲಿ ಸಾಕ್ಷರತೆಯ ಕೊರತೆಯಿಂದಾಗಿ ಅನಕ್ಷರತೆ ತಾಂಡವಾಡುತ್ತಿದ್ದಾಗ ಅಕ್ಷರ ಲೋಕದಿಂದ ವಂಚಿತರಾದವರು ತಮ್ಮ ಸಾರ್ವಭೌಮ ಹಕ್ಕುಗಳಿಂದ ವಂಚಿತರಾಗಬಾರದು ಎಂಬ ದೂರದೃಷ್ಟಿಯ ಆಲೋಚನೆಯು ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಎಲ್ಲಾ ರಾಜಕೀಯ ನಾಯಕರಿಗಿತ್ತು.

ವರ್ತಮಾನದ ದುರಂತವೆಂದರೆ, ದೇಶದ ಅತ್ಯನ್ನುತ ಸ್ಥಾನವಾದ ಪ್ರಧಾನ ಮಂತ್ರಿ ಹುದ್ದೆಯಲ್ಲಿರುವ ನರೇಂದ್ರಮೋದಿ ಎಂಬ ವ್ಯಕ್ತಿಗೆ ಇಂದು ದಿನಬೆಳಗಾದರೆ, ಭಾರತದ ಮುಸ್ಲಿಂ ಸಮುದಾಯವನ್ನು ಹಿಯಾಳಿಸುವುದರ ಜೊತೆಗೆ  ಆ ಸಮುದಾಯದ ಜನತೆಯ ಬಗ್ಗೆ ಸುಳ್ಳುಗಳನ್ನು ಪುನರುಚ್ಚರಿಸುತ್ತಿದ್ದಾರೆ. ಜನತಂತ್ರ ವ್ಯೆವಸ್ಥೆಯ ದೇಶದಲ್ಲಿ ಇಂತಹ ಹುಸಿ ಮಾತುಗಳ ಮೂಲಕ ಬಿತ್ತುತ್ತಿರುವ ಕೋಮುಭಾವನೆಯು ಭವಿಷ್ಯದ ಭಾರತವನ್ನು ಬಲಿ ತೆಗೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.  ಭಾರತದ ವಿಶ್ವ ವಿದ್ಯಾನಿಲಯಗಳಲ್ಲಿ ಅಸ್ತಿತ್ವದಲ್ಲಿ ಇಲ್ಲದಿರುವ ಎಂಟೈರ್ ಪೊಲಟಿಕಲ್ ಸೈನ್ಸ್ ( ಸಂಪೂರ್ಣ ರಾಜ್ಯ ಶಾಸ್ತ್ರ) ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಹೇಳಿಕೊಳ್ಳುವ  ಪ್ರಧಾನಿ  ಈ ವಿಷಯದ ಜೊತೆಗೆ ಕನಿಷ್ಠ ಭಾರತದ ಇತಿಹಾಸವನ್ನ  ಓದಬೇಕಾಗಿತ್ತು.  ಪ್ರಧಾನಿ ಹುದ್ದೆಗೆ ಏರಿದ ನಂತರ ತನ್ನ ಕಾರ್ಯವೈಖರಿ ಮತ್ತು ಭಾಷೆ ಹಾಗೂ ಭಾವನೆ ಹೇಗಿರಬೇಕು ಎಂಬ ಕನಿಷ್ಠ ಪ್ರಜ್ಞೆಯಾದರೂ ನರೇಂದ್ರಮೋದಿಯವರಿಗೆ  ಇರಬೇಕಿತ್ತು. ವ್ಯಕ್ತಿಗೆ ಘನತೆ ಇಲ್ಲದಿರಬಹುದು, ಆದರೆ, ಪ್ರಧಾನಿ ಹುದ್ದೆಗೆ ಸಂವಿಧಾನದ ಮೌಲ್ಯಗಳನ್ನು ಒಳಗೊಂಡ ಒಂದು ಘನತೆಯಿದೆ.

ಪ್ರಧಾನಿಯವರ ಕಾರ್ಯವೈಖರಿಯನ್ನು ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ  ಪ್ರಶಾಂತ್ ಭೂಷಣ್ ಅತ್ಯಂತ ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ.  ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಾ, ಪ್ರಸಕ್ತ ಭಾರತದ ಪರಿಸ್ಥಿತಿಯನ್ನು ವ್ಯಾಖ್ಯಾನಿಸುತ್ತಾ ಪ್ರಶಾಂತ್ ಭೂಷಣ್ ಅವರು ‘’ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಈ ದೇಶದ ಬಡವರು,ಹಿಂದುಳಿದ  ಜಾತಿ ಮತ್ತು ವರ್ಗವನ್ನೊಳಗೊಂಡಂತೆ  ದೇಶದ ಪ್ರಜಾಪ್ರಭುತ್ವ ವ್ಯೆವಸ್ಥೆ, ಕಾನೂನು ಹಾಗೂ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸ್ಥಾಪಿತವಾದ ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಯುದ್ಧವನ್ನು ಘೋಷಿಸಿದ್ದಾರೆ’’ ಎಂದು ತುಂಬಾ ಅರ್ಥಗರ್ಭಿತವಾದ ಮಾತುಗಳಲ್ಲಿ ಮೋದಿಯವರ ವ್ಯಕ್ತಿತ್ವನ್ನು ವಿಶ್ಲೇಷಿಸಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಾವು ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಮಾಡಿರುವ ಸಾಧನೆಗಳು ಅಥವಾ ಅಭಿವೃದ್ಧಿ ಕುರಿತು ಮಾತನಾಡಲಾಗದ ಮೋದಿಯವರು ನಿರಂತರವಾಗಿ ದೇಶದುದ್ದಕ್ಕೂ ಮುಸ್ಲಿಂ ಸಮುದಾಯದ ಬಗ್ಗೆ ವಿಷ ಕಾರುತ್ತಾ ಬಂದರು.  ಭಾರತದ ನೆಲದಲ್ಲಿ ಹಿಂದೂ ಸಮುದಾಯದ  ರೀತಿಯಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಸಮುದಾಯದ ಜನರು ಸಹ ಎಲ್ಲಾ ನಾಗರೀಕ ಹಕ್ಕುಗಳನ್ನು ಹೊಂದಿದ್ದಾರೆ.  ನಮ್ಮ ಹಾಗೆ ಅವರು ತಾವು ಹುಟ್ಟಿದ ಧರ್ಮದ ಹೊರತಾಗಿಯೂ ಭಾರತದ ಸಂಸ್ಕೃತಿಗೆ ವಿಶೇಷವಾಗಿ ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ, ಕ್ರೀಡೆ, ಶಿಕ್ಷಣ, ಆರೋಗ್ಯ  ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಹತ್ತರ ಕೊಡುಗೆಯನ್ನು  ನೀಡಿದ್ದಾರೆ.  ಈ ಅಂಶಗಳನ್ನು  ಮರೆತು ಓರ್ವ ಅಪಕ್ವ ರಾಜಕಾರಣಿಯಂತೆ ಮಾತನಾಡುವುದು  ಮೋದಿ ಅವರ ವ್ಯಕ್ತಿತ್ವಕ್ಕೆ ಮತ್ತು ಪ್ರಧಾನಿ ಹುದ್ದೆಗೆ ಶೋಭೆ ತರುವ ವಿಷಯವಲ್ಲ.

ಪ್ರಧಾನಿಯವರ  ದ್ವೇಷ ಮತ್ತು ಅಸೂಯೆಯ ಈ ಮಾತುಗಳು ದೇಶದ ಅತ್ಯುನ್ನುತ ಪ್ರಶಸ್ತಿಯಾದ  ಭಾರತ ರತ್ನ ಪ್ರಶಸ್ತಿಗೆ ಪಾತ್ರರಾದ ಡಾ.ಅಬ್ದುಲ್ ಕಲಾಂ ಹಾಗೂ ಸಂಗೀತಲೋಕದ ಸಂತ ಪಂಡಿತ್ ಬಿಸ್ಮಿಲ್ಲಾಖಾನ್ ಮತ್ತು ಡಾ.ಜಾಕೀರ್ ಹುಸೇನ್  ರಂತಹ ಅಸಾಮಾನ್ಯ ವ್ಯಕ್ತಿತ್ವಗಳಿಗೆ  ಮಸಿ ಬಳಿಯುತ್ತಿರುವ ಘಟನೆ ಎಂದು ಹೇಳಬಹುದಾಗಿದೆ.  1947 ರ ಆಗಸ್ಟ್  15 ರಂದು ಸ್ವತಂತ್ರ ಭಾರತ ಉದಯವಾದಾಗ ಶುಭ ನುಡಿಯುವ ಹಕ್ಕಿಯ ಹಾಗೆ ಪ್ರಥಮಬಾರಿಗೆ ಸ್ವಾತಂತ್ರ್ಯದ ಕಹಳೆಯನ್ನು ಬಿಸ್ಮಿಲ್ಲಾಖಾನ್ ತಮ್ಮ ಶಹನಾಯ್ ವಾದ್ಯದ ಮೂಲಕ ನುಡಿಸಿದ್ದನ್ನು ಈ ರಾಷ್ಟ್ರದ ಪ್ರಧಾನಿಗೆ ನಾವು ನೆನಪು ಮಾಡಿಕೊಡಬೇಕಾಗಿದೆ. ಇತ್ತೀಚೆಗಿನ  ವರ್ಷಗಳ ವರೆಗೆ ಭಾರತದ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಸ್ವಾತಂತ್ರ್ಯದ ದಿದಂದು ಆ ಧ್ವನಿಯು ಪ್ರಸಾರವಾಗುತ್ತಿತ್ತು.

ಇಂದು ದೇಶಾದ್ಯಂತ  ಇಂತಹ ನೂರಾರು  ಮಹನೀಯರನ್ನು ನಾವು ಗುರುತಿಸಬಹುದು. ಸಧ್ಯಕ್ಕೆ ಇಲ್ಲಿ  ಅನಾಮಿಕರಾಗಿ ಇತಿಹಾಸದಲ್ಲಿ ಉಳಿದುಹೋದ ಇಬ್ಬರು ಮಹಾನುಭವರನ್ನು ಮಾತ್ರ ಉಲ್ಲೇಖಿಸಬಯಸುತ್ತೇನೆ. ಮೊದಲನೆಯವರು ನಮ್ಮ ಕನ್ನಡ ನೆಲದಲ್ಲಿ ಜನಿಸಿದ ಜಗಳೂರಿನ  ಇಮಾಂ ಸಾಹೇಬರು ಮತ್ತು ಎರಡನೆಯವರು  ಬಿಹಾರದ ಪಾಟ್ನಾ ನಗರದ  ಮೌಲಾನ ಮುಜರಲ್ ಹಕ್. ಈ ಇಬ್ಬರು ಮಹನೀಯರ  ಸಾರ್ವಜನಿಕ ಬದುಕು ಮತ್ತು ಬದ್ಧತೆಗಳು  ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಜನಪ್ರತಿನಿಧಿಗಳಿಗೆ, ಹೋರಾಟಗಾರರಿಗೆ ಮತ್ತು ಆಗರ್ಭ ಶ್ರೀಮಂತರಿಗೆ ಮಾದರಿಯಾಗಿತ್ತು. ಈ ನಾಯಕರು ಬದುಕಿನುದ್ದಕ್ಕೂ  ಪ್ರದರ್ಶನ ಮತ್ತು ಪ್ರಚಾರಗಳಿಂದ ದೂರವಿದ್ದರು. ಈ ನೆಲದ ಮೇಲೆ ಬದುಕುವ ಮನುಷ್ಯ ಜೀವಿಗಳು ನಮ್ಮಂತೆ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಪಡೆದಿದ್ದಾರೆ ಎಂದು ನಂಬಿ ಬದುಕಿದರು. ತಾವು ಪ್ರತಿಪಾದಿಸಿಕೊಂಡ ಬಂದ ಮೌಲ್ಯಗಳ ಮೂಲಕ  ಉಳಿದವರಿಗೆ ಮಾದರಿಯಾದರು.

ಇಮಾಂ ಸಾಹೇಬರು ಅಂದಿನ ಚಿತ್ರದುರ್ಗ ಜಿಲ್ಲೆಯ ಜಗಳೂರಿನ ಶ್ರೀಮಂತ  ಜಮೀನ್ದಾರರ ಕುಟುಂಬದಲ್ಲಿ ಜನಿಸಿದವರು. 1923 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯನ್ನು ಪಡೆದು ಬಂದ ಅವರು ತಮ್ಮ ತಂದೆಯವರಾದ ಬಡಸಾಹೇಬ್ ನಂತರ ಅಂದಿನ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ 1933 ರಲ್ಲಿ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ನಾಲ್ವಡಿ ಕೃಷ್ಣರಾಜರಾಜ ಒಡೆಯರ್ ಅವರ ಆತ್ಮೀಯ ಬಳಗದಲ್ಲಿ ಒಬ್ಬರಾಗಿದ್ದ ಇಮಾಂ ಸಾಹೇಬರು ಅಭಿವೃದ್ಧಿ ವಿಷಯದಲ್ಲಿ ಅವರ ಆಪ್ತ ಸಲಹೆಗಾರರಾಗಿದ್ದರು. ಹಂಗಾಮಿ ದಿವಾನರಾಗಿಯೂ ಕಾರ್ಯ ನಿರ್ವಹಿಸಿದ ಇಮಾಂ ಸಾಹೇಬರು  1942 ರಲ್ಲಿ ಹಲವಾರು ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಾ ಅತ್ಯಂತ ಜನಾನುರಾಗಿದ್ದರು. ನಂತರ 1952 ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ಕೆಂಗಲ್ ಹನುಮಂತಯ್ಯನವರ ಬೆನ್ನೆಲುಬಾಗಿ ನಿಂತ ಇಮಾಂ ಸಾಹೇಬರು ಕರ್ನಾಟಕ ಏಕೀಕರಣದಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ನಿರ್ಮಾಣ ಮಾಡುವಾಗ ಕಟ್ಟಡದ ಹೆಬ್ಬಾಲಿಗೆ ‘’ ಸರ್ಕಾರರದ ಕೆಲದ ದೇವರ ಕೆಲಸ’’ ಎಂಬ ಸೂಕ್ತಿಯನ್ನು ಬರೆಸಲು ಸಲಹೆ ನೀಡಿದ ಮಹಾನುಭವರು ಇವರು.

ಚಿತ್ರದುರ್ಗದಿಂದ ಪ್ರಜಾಸೋಷಲಿಷ್ಟ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಇಮಾಂಸಾಹೇಬರು ಸದಾ ಬದುಕಿನುದ್ದಕ್ಕೂ ಹಿಂದೂ-ಮುಸ್ಲಿಂ ಬಾಂಧವ್ಯದ ಹರಿಕಾರರಂತೆ ಬದುಕಿದರು. ಏಕೆಂದರೆ, ಈ ಗುಣ ಅವರ ಕುಟುಂಬದ ಪರಂಪರೆಯಾಗಿತ್ತು. ಅವರ ಅಜ್ಜ, ಅಪ್ಪ ಇವರೆಲ್ಲರೂ ನೂರಾರು ಎಕರೆ ಭೂಮಿಯ ಒಡೆಯರಾಗಿದ್ದುಕೊಂಡು ನೊಂದವರಿಗೆ ಮತ್ತು ಹಸಿದವರಿಗೆ ಆಸರೆಯಾಗಿ ಬದುಕಿದವರು. ಸಿರಿಗೆರೆ ಮಠದ ಅಭಿವೃದ್ಧಿಗೆ ಮತ್ತು ಮಠದ ಸಾಂಸ್ಕೃತಿಕ ಚಟುವಟಿಕೆಯಲ್ಲಿ  ಇಡೀ ಅವರ ಕುಟುಂಬ ಭಾಗಿಯಾಗಿರುವುದನ್ನು ಇಂದಿಗೂ ಸಹ ಅಲ್ಲಿನ ಮಠಾಧೀಶರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಈ ಜಗತ್ತಿನಲ್ಲಿ ಒಬ್ಬ ಅಪ್ಪಟ ಮನುಷ್ಯನಂತೆ ಬದುಕಲು ಜಾತಿ ಮತ್ತು ಧರ್ಮದ ಅವಶ್ಯಕತೆಯಿಲ್ಲ ಎಂದು ಈ ನಾಡಿಗೆ ತೋರಿಸಿಕೊಟ್ಟ ಇಮಾಂ ಸಾಹೇಬರ ಕುಟುಂಬ ಇಂದಿಗೂ ಸಹ ಮಾದರಿಯಾಗಿದೆ. ಕನ್ನಡದ ಹಿರಿಯ ವಿಜ್ಞಾನ ಲೇಖಕರಾದ ಜೆ.ಆರ್. ಲಕ್ಷ್ಮಣರಾವ್ ಬಾಲ್ಯದಿಂದಲೂ ಜಗಳೂರಿನಲ್ಲಿ ಇಮಾಂ ಸಾಹೇಬರನ್ನು ಹತ್ತಿರದಿಂದ ನೋಡಿಕೊಂಡು ಬೆಳೆದವರು. ಅವರು ತಮ್ಮ ನೆನಪಿನಲ್ಲಿ ಒಂದು ಹೃದಯ ಸ್ಪರ್ಶಿ ಘಟನೆಯನ್ನು ದಾಖಲಿಸಿದ್ದಾರೆ.

ಮೈಸೂರು ನಗರದಲ್ಲಿ ಜೆ.ಆರ್. ಲಕ್ಷ್ಮಣರಾವ್  ಓದುತ್ತಿದ್ದಾಗ, ಅವರ ಸಹಪಾಠಿಯೊಬ್ಬ ವಾರ್ಷಿಕ ಶುಲ್ಕ ಪಾವತಿಸಲಾಗದೆ, ಪರೀಕ್ಷೆಗೆ ಕೂರಲು ಅವಕಾಶದಿಂದ ವಂಚಿತನಾದನು. , ಆ ಬಡ ಬ್ರಾಹ್ಮಣ ಹುಡುಗನನ್ನು ಇಮಾಂ ಸಾಹೇಬರ ಹತ್ತಿರ ಕರೆದೊಯ್ದ ಲಕ್ಷ್ಮಣರಾವ್ ಅವರು ‘’ ಇವನು ವಾರನ್ನದಲ್ಲಿ ( ದಿನಕ್ಕೆ ಒಬ್ಬರ ಮನೆಯ ಊಟ) ಬದುಕುತ್ತಿರುವ ನನ್ನ ಮಿತ್ರ. ಪರೀಕ್ಷೆಗೆ ಶುಲ್ಕ ಕಟ್ಟಲು ಸಾಧ್ಯವಾಗಿಲ್ಲ. ನಿಧಾನವಾಗಿ ಪಾವತಿಸುತ್ತಾನೆ. ದಯಮಾಡಿ ಶಾಲೆಯ ಮುಖ್ಯಸ್ಥರಿಗೆ ಹೇಳಿ’’ ಎಂದು ವಿನಂತಿಸಿಕೊಂಡಾಗ, ಆ ಸಂದರ್ಭದಲ್ಲಿ .ಸಚಿವರಾಗಿದ್ದ ಇಮಾಂಸಾಹೇಬರು ‘’ ಮಗು, ಇಂತಹ ಸಂಗತಿಯನ್ನು ನಾನು ನಿಮ್ಮ ಶಿಕ್ಷಕರೊಂದಿಗೆ ಮಾತನಾಡನಾರದು ಎಂದು ಹೇಳಿದರು. ಜೊತೆಗೆ ಆ ಬಡ ವಿದ್ಯಾರ್ಥಿಗೆ ಪರೀಕ್ಷೆ ಶುಲ್ಕವನ್ನು  ನೀಡುವುದರ ಜೊತೆಗೆ ವಾರನ್ನದ ಬದಲಾಗಿ ಹೊಟೇಲ್ ಒಂದರಲ್ಲಿ ವರ್ಷಪೂರ್ತಿ ಊಟ ಮಾಡುವುದಕ್ಕೆ ವ್ಯೆವಸ್ಥೆ ಮಾಡಿ, ತಿಂಗಳಿಗೆ ಹದಿನೈದು ರೂಪಾಯಿನಂತೆ ಹನ್ನೆರೆಡು ತಿಂಗಳಿಗೆ 180 ರೂಪಾಯಿ ಅನ್ನು ಮುಂಗಡವಾಗಿ ಪಾವತಿಸಲು ಹಣ ನೀಡಿದರು. ಲಕ್ಷ್ಮಣರಾವ್ ಅವರತ್ತ ತಿರುಗಿ, ನಿನ್ನ ಗೆಳೆಯನ ಊಟ ಮತ್ತು ಶಿಕ್ಷಣದ ಜವಾಬ್ದಾರಿ ಇನ್ನು ಮುಂದೆ ನನ್ನದು ಎಂದು ಹೇಳಿ ಹಾರೈಸಿ ಕಳಿಸಿದ ಕಥೆಯನ್ನು ಓದುತ್ತಿದ್ದರೆ, ಇಂದಿನ ಧರ್ಮಾಧಾರಿತ ರಾಜಕೀಯದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ಇಂತಹ ಮಹನೀಯರ ಕಥನಗಳು ನಮ್ಮ ಮಕ್ಕಳ ಶಾಲಾ ಪಠ್ಯದಲ್ಲಿ ಇರಬೇಕಾಗಿದೆ. ಇಮಾಂ ಸಾಹೇಬರು ಜಗಳೂರಿನ ತಮ್ಮ ವಾಸದ ಬಂಗಲೆಯನ್ನು ಸರ್ಕಾರಿ ಕಾಲೇಜು ಸ್ಥಾನೆಗಾಗಿ ಉದಾರವಾಗಿ ದಾನ ಮಾಡಿ, ಸಣ್ಣ ಕಟ್ಟಡವೊಂದರಲ್ಲಿ ನಿವೃತ್ತಿಯ ಜೀವನ ನಡೆಸಿ 1983 ರಲ್ಲಿ ನಿಧನರಾದರು.

ಬಿಹಾರದ  ಮೌಲನಾ ಮಜರುಲ್ ಹಕ್ ಅವರದೂ ಸಹ ಇಂತಹದ್ದೇ ಧೀನಂತ ವ್ಯಕ್ತಿತ್ವ.  ಪಾಟ್ನಾ ಸಮೀಪದ ಬಹುಪುರದಲ್ಲಿ ಶ್ರೀಮಂತ ಜಮೀನ್ದಾರರ ಕುಟುಂಬದಲ್ಲಿ  1866 ರಲ್ಲಿ ಜನಿಸಿದ ಇವರು ಗಾಂಧಿಜಿಯವರಿಗಿಂತ ಮೂರು ವರ್ಷ ಹಿರಿಯವರು. ಲಂಡನ್ ನಗರದಲ್ಲಿ ಗಾಂಧಿಜಿಯವರ ಜೊತೆ ಬ್ಯಾರಿಸ್ಟರ್ ಪದವಿಯನ್ನು ಮುಗಿಸಿ, ಪಾಟ್ನಾ ನಗರಕ್ಕೆ ಹಿಂತಿರುಗಿ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. 1917 ರ  ಏಪ್ರಿಲ್ ತಿಂಗಳಿನಲ್ಲಿ ಚಂಪಾರಣ್ಯ ರೈತರ ಸ್ಥಿತಿಗತಿಯನ್ನು ಅರಿಯುವ ಉದ್ದೇಶದಿಂದ ಗಾಂಧೀಜಿಯವರು ಪಾಟ್ನಾ ನಗರದಲ್ಲಿ ಅಂದಿನ ಯುವ ವಕೀಲರಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದರು. ಆದರೆ,  ಅವರು ಒರಿಸ್ಸಾದ ಪುರಿ ಪಟ್ಟಣಕ್ಕೆ ಹೋಗಿದ್ದರು. ರಾಜೇಂದ್ರಪ್ರಸಾದ್ ಮನೆಯ ಸೇವಕನು  ಗಾಂದಿಯವರನ್ನು ಯಾರೋ ಒಬ್ಬ ಕಕ್ಷಿದಾರ ಎಂದು ಭಾವಿಸಿ, ಮನೆಯೊಳಕ್ಕೆ ಪ್ರವೇಶ ನೀಡಲಿಲ್ಲ ಜೊತೆಗೆ ಶೌಚಾಲಯದ ಬಳಕೆಗೂ ಅವಕಾಶ ನೀಡಿರಲಿಲ್ಲ.  ಆ ವೇಳೆಗೆ  ಗಾಂಧೀಝಿ ಆಗಮನದ ಸುದ್ದಿ ತಿಳಿದು ಓಡೋಡಿ ಬಂದ ಮಜರುಲ್ ಹಕ್ ಗಾಂಧೀಜಿಯವರನ್ನು ತಮ್ಮ  ಸಿಕಂದರ್ ಮಂಜಿಲ್ ಎಂಬ ಬಂಗಲೆಗೆ ಕರೆದೊಯ್ದು ಸತ್ಕಾರ ನೀಡಿದರು.  ಮಜರುಲ್ ಹುಕ್ ಅವರು ಪಾಟ್ನಾ ನಗರದಲ್ಲಿರುವುದು ಗಾಂಧೀಜಿಯವರಿಗೆ ಗೊತ್ತಿರಲಿಲ್ಲ.

ಪಾಟ್ನಾ ನಗರದಿಂದ ಸಂಜೆಯ ರೈಲಿನಲ್ಲಿ ಮುಜಾಫರ್ ಪುರದಲ್ಲಿದ್ದ ಜೆ.ಬಿ.ಕೃಪಾಲನಿ ಅವ ಬಳಿಗೆ ಕಳಿಸಿ ಕಳಿಸಿಕೊಟ್ಟ ಮುಜರುಲ್ ಹುಕ್ ನಂತರದ ದಿನಗಳಲ್ಲಿ ವಕೀಲಿ ವೃತ್ತಿಗೆ ವಿರಾಮ ಹೇಳಿ ಚಂಪಾರಣ್ಯ ಸತ್ಯಾಗ್ರಹಕ್ಕೆ ಗಾಂಧಿಜಿಯವರ ಜೊತೆ ಕೈ ಜೋಡಿಸಿದರು. ಇದಕ್ಕೂ ಮುನ್ನ ಅವರು 1910 ರಿಂದ ಎರಡು ವರ್ಷಗಳ ಕಾಲ  ಬಿಹಾರ ಪ್ರಜಾ ಪ್ರತಿನಿಧಿಗಳ ಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಜೊತೆಗೆ 1916 ರಿಂದ ಬಿಹಾರದ  ರಾಷ್ಟ್ರೀಯ ಕಾಂಗ್ರೇಸ್ ಸಮಿತಿಯಲ್ಲಿ ಸಕ್ರಿಯರಾಗಿದ್ದರು.  ಚಂಪಾರಣ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಗಾಂಧಿ ಮತ್ತು ಅವರ ಸಹಚರರ ಎಲ್ಲಾ ಖರ್ಚು ವೆಚ್ಚಗಳಿಗೆ ಸಹಾಯ ಹಸ್ತ ನೀಡಿದರು. ಗಾಂಧಿಜಿ ಆಗಮನದ ನಂತರ ಚಂಪಾರಣ್ಯದಲ್ಲಿ ನಿಷೇಧಾಜ್ಞೆ ಹೇರಿ, ಅವರನ್ನು ತಕ್ಷಣ ಚಂಪಾರಣ್ಯ ಬಿಟ್ಟು ಹೊರಹೋಗುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿದಾಗ, ಗಾಂಧಿಜಿವರು ಅದನ್ನು ಧಿಕ್ಕರಿಸಿ ಹಳ್ಳಿಗಳಲ್ಲಿ ಪ್ರವಾಸ ಮಾಡಿದರು. ಒಂದು ವೇಳೆ ಬ್ರಿಟೀಷ್ ಸರ್ಕಾರವು ನನ್ನನ್ನು ಬಂಧಿಸಿದರೆ, ಇಡೀ ಹೋರಾಟವನ್ನು ಮಜರುಲ್ ಹಕ್ ಮತ್ತು ಪಂಡಿತ್ ಮದನ ಮೋಹನ ಮಾಳವೀಯ ಮುಂದುವರಿಸುತ್ತಾರೆ ಎಂದು ತಮ್ಮ ಸಹಚರರಿಗೆ ಮತ್ತು ಚಂಪಾರಣ್ಯ ರೈತರಿಗೆ ಗಾಂಧೀಜಿ ಭರವಸೆಯನ್ನು ತುಂಬಿದ್ದರು.


1916 ರಲ್ಲಿ ಅನ್ನಿಬೆಸೆಂಟ್ ಸ್ಥಾಪಿಸಿದ ಹೋಂ ರೂಲ್ ಚಳುವಳಿ, 1919 ರ ಖಿಲಾಫತ್ ಚಳುವಳಿ, 1920 ರಲ್ಲಿ ಗಾಂಧೀಜಿಯವರು ಕರೆ ನೀಡಿದ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಗಾಂಧೀಜಿಯವರಿಂದ ಪ್ರಭಾವಿತರಾಗಿ ಪಾಟ್ನಾ ನಗರದಲ್ಲಿ ಒಂಬತ್ತು ಎಕರೆ ವಿಸ್ತೀರ್ಣವಾದ ಪ್ರದೇಶದಲ್ಲಿ  ಸದಾಕತ್ ಆಶ್ರಮ (ಸತ್ಯದ ನಿವಾಸ) ಎಂಬ ಹೆಸರಿನಲ್ಲಿ ಆಶ್ರಮವನ್ನು ಸ್ಥಾಪಿಸಿ, ಮದರ್ ಲ್ಯಾಂಡ್ ಎಂಬ ವಾರ ಪತ್ರಿಕೆಯನ್ನು ಾರಂಭಿಸಿದ್ದರು. 1926 ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿಕೊಂಡರೂ ಸಹ ಗಾಂಧೀಜಿ ಮತ್ತು ಮೌಲಾನಾ ಅಜಾದ್ ಮತ್ತು ನೆಹರೂ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. 1930 ರಲ್ಲಿ ತಮ್ಮ 64 ನೇ ವಯಸ್ಸಿಗೆ ನಿಧನರಾದರು. ಬದುಕಿನುದ್ದಕ್ಕೂ ಹಿಂದೂ-ಮುಸ್ಲಿಂ ಬಾಂಧವ್ಯದ ಪ್ರತಿಪಾದಕರಾಗಿದ್ದ ಮಜರುಲ್ ಹಕ್  ಅವರು ಈ ದೇಶದ ಹಿಂದೂ ಹಾಗೂ ಮುಸ್ಲಿಂರು ಒಂದೇ ದೋಣಿಯ ಪಯಣಿಗರು. ಜಯಸಿದರೆ, ಒಟ್ಟಿಗೆ ಜಯಶೀಲರಾಗುತ್ತೇವೆ, ಮುಳುಗಿದರೆ ಒಟ್ಟಿಗೆ ಮುಳುಗುತ್ತೇವೆ ಎಂದು ಹೇಳುತ್ತಿದ್ದರು. ಇಂತಹ ಮಹಾನ್ ದೇಶಭಕ್ತರಿಂದ ಪ್ರಭಾವಿತರಾಗಿದ್ದ ಮಾಜಿ ರಾಷ್ಟ್ರಪತಿ ಡಾ.ಬಾಬುರಾಜೇಂದ್ರಪ್ರಸಾದ್ ತಮ್ಮ ನಿವೃತ್ತಿಯ ದಿನಗಳನ್ನು ಪಾಟ್ನಾ ನಗರಕ್ಕೆ ಆಗಮಿಸಿ ಸದಾಕತ್ ಆಶ್ರಮದಲ್ಲಿ ಕಳೆದರು. ಅವರು ಬರೆದ ಡಿವೈಡೈಡ್ ಇಂಡಿಯಾ ಕೃತಿಯನ್ನು ಮೌಲನಾ ಮಜರುಲ್ ಹಕ್ ಅವರಿಗೆ ಸಮರ್ಪಿಸಿದ್ದಾರೆ. ಇಂದು ಪಾಟ್ನಾ ನಗರದಲ್ಲಿ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ವಿಶ್ವ ವಿದ್ಯಾನಿಲಯವೊಂದು ಸ್ಥಾಪಿತವಾಗಿದೆ. ಗಾಂಧಿಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಕೈ ಜೋಡಿಸಿದ   ಖಾನ್ ಅಬ್ದುಲ್ ಗಪಾರ್ ಖಾನ್, ಮೌಲಾನ ಅಬ್ದುಲ್ ಕಲಾಂ ಅಜಾದ್ ಮತ್ತು ಡಾ,ಜಾಕೀರ್ ಹುಸೈನ್  ರಂತಹ ನೂರಾರು ಗಣ್ಯರನ್ನು ಮರೆಯಲು ಸಾಧ್ಯವೆ?

( ಜೂನ್ ತಿಂಗಳ ಹೊಸತು ಮಾಸಪತ್ರಿಕೆಯಲ್ಲಿ ಪ್ರಕಟವಾದ ಬಹುಸಂಸ್ಕೃತಿ ಅಂಕಣ ಬರಹ)

ಜಗದೀಶ್ ಕೊಪ್ಪ

 

 

 

 

ಶನಿವಾರ, ಮೇ 11, 2024

ನೀಲಿ ಕೃಷಿಯಲ್ಲಿ ಅಪ್ರತಿಮ ಸಾಧನೆಗೈದ ಮಂಡ್ಯ ಮೂಲದ ಮುಸ್ಲಿಂ ಕುಟುಂಬ

 


ಹನ್ನೆರಡನೆಯ ಶತಮಾನದ  ಅಪ್ರತಿಮ  ವಚನಕಾರ  ಅಲ್ಲಮಪ್ರಭು ತನ್ನ ವಚನವೊಂದರಲ್ಲಿ ‘’ ಬೆಟ್ಟದ ನೆಲ್ಲಿಕಾಯಿಗೂ ಮತ್ತು ಸಮುದ್ರದ ಉಪ್ಪಿಗೂ ಎತ್ತಣದ ಸಂಬಂಧವಯ್ಯಾ’’ ಎಂದು ಕೇಳುತ್ತಾನೆ. ಈಗ  ಇದೇ ಪ್ರಶ್ನೆಯನ್ನು ನಾವು ಮಂಡ್ಯದ ಶ್ರೀರಂಗಪಟ್ಟಣದ ಮುಸ್ಲಿಂ ಕುಟುಂಬಕ್ಕೂ, ತಮಿಳುನಾಢಿನ ತಿಂಡಿವಣಂ ಜಿಲ್ಲೆಯ ನೀಲಿ ಅಥವಾ ಇಂಡಿಗೋ  ಕೃಷಿಗೂ ಮತ್ತು  ಸಹಜ ನೀಲಿಯ ಉತ್ಪಾದನೆಗೂ ಎಲ್ಲಿಯ ಸಂಬಂಧವಯ್ಯಾ ಎಂದು ಕೇಳಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಗಿ ಅನಾಮಿಕವಾಗಿ ಉಳಿದುಕೊಂಡಿದ್ದ ಇತಿಹಾಸವೊಂದು ನಮ್ಮೆದುರು ಇರುವುದು ಆಶ್ಚರ್ಯದ ಸಂಗತಿ.

ಇತ್ತೀಚೆಗೆ ಚಂಪಾರಣ್ಯ ಸತ್ಯಾಗ್ರಹ ಕುರಿತು ಕೃತಿಯನ್ನು ರಚಿಸುತ್ತಿರುವ ಸಂದರ್ಭಧಲ್ಲಿ ನೀಲಿ ಬಣ್ಣ ಮತ್ತು ಅದರ ಸಸ್ಯ ಕುರಿತ ಇತಿಹಾಸವನ್ನು ಅಧ್ಯಯನ ಮಾಡುತ್ತಿರುವಾಗ ಈ ಕುತೂಹಲಕಾರಿ ಇತಿಹಾಸ ನನ್ನೆದುರು ತೆರೆದುಕೊಂಡಿತು. ಬಣ್ಣಗಳ ರಾಜ ಎಂದೂ ಕರೆಯಲ್ಪಡುವ ಇಂಡಿಗೋ ಅಥವಾ ನೀಲಿ ಬಣ್ಣವು  ಪ್ರಪಂಚದ ಅತ್ಯಂತ ಪ್ರಾಚೀನ ಬಣ್ಣಗಳಲ್ಲಿ ಒಂದಾಗಿದೆ. ಇದನ್ನು ಈಜಿಪ್ಟ್ ಮತ್ತು ಏಷ್ಯಾದ ಜನರು ನಾಲ್ಕು ಸಾವಿರ ವರ್ಷಗಳಿಂದ  ಬಳಸುತ್ತಿದ್ದಾರೆ. ಪಾಶ್ಚಿಮಾತ್ಯ ಜಗತ್ತಿಗೆ ಅಪರಿಚಿತವಾಗಿದ್ದ ನೀಲಿ ಬಣ್ಣಕುರಿತಾಗಿ ಇದು ಸಹಜ ಕೃಷಿಯಿಂದ ಸಸ್ಯಗಳ ಮೂಲಕ ತಯಾರಾಗುವ ಬಣ್ಣ ಎಂದು ಅವರಿಗೆ ತಿಳಿದಿರಲಿಲ್ಲ.

ಅಂದಿನ ಕಾಲದಲ್ಲಿ ಸಿಲ್ಕ್ ರೂಟ್ ಎಂದು ಕರೆಯಲಾಗುತ್ತಿದ್ದ ರೇಷ್ಮೇ ಮಾರ್ಗದಲ್ಲಿ ಇಂದಿನ ಟರ್ಕಿ ಮಖಾಂತರ ಭಾರತದ ಮಸಾಲೆ ಪದಾರ್ಥಗಳು ಮತ್ತು ನೀಲಿ ಬಣ್ಣವು ಪಾಶ್ಚಿಮಾತ್ಯ ಜಗತ್ತಿಗೆ ತಲುಪುತ್ತಿದ್ದವು. ಅಲ್ಲಿನ ಜನತೆ ನೀಲಿ ಬಣ್ಣವನ್ನು ಭಾರತದಲ್ಲಿ  ಖನಿಜ ಪದಾರ್ಥದಿಂದ ತಯಾರಿಸುತ್ತಾರೆ ಎಂದು ನಂಬಿದ್ದರು. ಹನ್ನೆರೆಡನೇ ಶತಮಾನದ ರೋಮನ್ ಇತಿಹಾಸಕಾರ, ಪ್ಲಿನಿ ದಿ ಎಲ್ಡರ್ ಎಂಬಾತನು "ಭಾರತದ ಉತ್ಪನ್ನವಾದ ಇಂಡಿಗೋ ಅಥವಾ ನೀಲಿಯು  ಕೆಲವು ಸಸ್ಯಗಳ ಮೇಲಿನ ಕಲ್ಮಶಕ್ಕೆ ಅಂಟಿಕೊಳ್ಳುವ ಲೋಳೆಯ ಮೂಲಕ ತಯಾರಿಸಲಾಗುವುದು ಎಂದು ದಾಖಲಿಸಿದ್ದನು. ನಂತರ 1498 ರಲ್ಲಿ ಭಾರತಕ್ಕೆ ಸಮುದ್ರಮಾರ್ಗದ ಮೂಲಕ ಪ್ರವೇಶೀಸಿದ ವಾಸ್ಕೋಡಗಾಮನು  ಭಾರತದ ನೀಲಿ ಸಸ್ಯ ಮತ್ತು ಬೀಜಗಳನ್ನು ಕೊಂಡೊಯ್ದು ಅಲ್ಲಿನ ಜನತೆಗೆ ಪರಿಚಯಿಸಿದನು.

ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಬ್ರಿಟೀಷರು ಅಲ್ಲಿನ ಜವಳಿ ಗಿರಣಿ ಗಳಿಗೆ ಭಾರತದ ಹತ್ತಿ ಮತ್ತು ನೀಲಿ ಹಾಗೂ ಮಸಾಲೆ ಪದಾರ್ಥಗಳನ್ನು ರಫ್ತು ಮಾಡುವುದರಲ್ಲಿ ಹೆಚ್ಚು ಆಸಕ್ತಿ ವಹಿಸಿದರು. ಇಂಗ್ಲೇಂಡ್ ನಲ್ಲಿ ನೀಲಿ ಕೃಷಿಯು ಅಸ್ತಿತ್ವದಲ್ಲಿತ್ತು. ಆದರೆ, ಅಲ್ಲಿನ ತಂಪು ವಾತಾವರಣದಿಂದಾಗಿ ಭಾರತದ  ಉಷ್ಣವಯಲದಲ್ಲಿ ಬೆಳೆಯುವ ನೀಲಿ ಕೃಷ್ಷಿಯಿಂದ ತಯಾರಾದ ನೀಲಿಗೆ ಇರುವ  ದಟ್ಟ ಬಣ್ಣ ಇರುತ್ತಿರಲಿಲ್ಲ. ಹಾಗಾಗಿ ಬ್ರಿಟೀಷರು ಅನೇಕ ಸಂಸ್ಥಾನಗಳ ದೊರೆಯಿಂದ ಭೂಮಿಯನ್ನು ಶಾಶ್ವತ ಗುತ್ತಿಗೆ ಪಡೆದು ನೀಲಿ ಕೃಷಿಗೆ ಮುಂದಾದರು. ಅಂದಿನ ಬಂಗಾಳ ಪ್ರಾಂತ್ಯ ಎಂದು ಕರೆಯಲಾಗುತ್ತಿದ್ದ ಇಂದಿನ ಪಶ್ಚಿಮ ಬಂಗಾಳ, ಬಿಹಾರ ಮತ್ತು ಬಾಂಗ್ಲಾ ದೇಶದಲ್ಲಿ ನೀಲಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ್ ಅವರ ಅಜ್ಜ ದ್ವಾರಕನಾಥ ಟ್ಯಾಗೂರ್ ಬಂಗಾಳದಲ್ಲಿ ಸಾವಿರಾರು ಎಕೆರೆ ಭೂಮಿಯ ಒಡೆಯರಾಗಿದ್ದುಕೊಂಡು ನೀಲಿ ಕೃಷಿ ಮತ್ತು ನೀಲಿ ಉತ್ಪಾದನೆಯಲ್ಲಿ ಬ್ರಿಟೀಷರಿಗೆ ಮಾದರಿಯಾಗಿದ್ದರು.

ನಂತರದ ದಿನಗಳಲ್ಲಿ ಬಿಹಾರದ ಚಂಪಾರಣ್ಯ ಪ್ರದೇಶದಲ್ಲಿ ಬ್ರಿಟೀಷರು ಭೂಮಿ ಖರೀದಿಸಿ ನೀಲಿ ಕೃಷಿಯಲ್ಲಿ ತೊಡಗಿಸಿಕೊಂಡು ಅಲ್ಲಿನ ರೈತರನ್ನು ಶೋಷಿಸಿದ್ದು, ರೈತರ ಪರವಾಗಿ 1917 ರಲ್ಲಿ ಗಾಂಧಿ ಹೋರಾಟ ನಡೆಸಿ ಅವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ಈಗ ಈತಿಹಾಸವಾಗಿದೆ. ಇಂತಹ ನೀಲಿ ಇತಿಹಾಸದ ಹಿನ್ನೆಲೆಯಲ್ಲಿ ಮಂಡ್ಯದ ನೆಲಕ್ಕೂ, ನೀಲಿ ಕೃಷಿಗೂ ಸಂಭಂಧವಿಲ್ಲದೆ ಇರುವಾಗ ಎರಡು ಶತಮಾನದ ಹಿಂದೆ ಶ್ರೀರಂಗಪಟ್ಟಣದಿಂದ ತಮಿಳುನಾಡಿಗೆ ಹೋದ ಮುಸ್ಲಿಂ ವ್ಯಕ್ತಿಯೊಬ್ಬರು ನೀಲಿ ಕೃಷಿಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಕಥನ ನಿಜಕ್ಕೂ ರೋಚಕವಾಗಿದೆ.


ತಿಂಡಿವಣಂ ಜಿಲ್ಲೆಯ ವಗಂದೂರು ಎಂಬ ಗ್ರಾಮದಲ್ಲಿ ಕಳೆದ ಎರಡು ಶತಮಾನಗಳಿಂದ ನೀಲಿ ಕೃಷಿ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಅಯೂಬ್ ಅವರು ತನ್ನ ಕುಟುಂಬ ಕಥೆಯನ್ನು ಸವಿವರವಾಗಿ ಬಲ್ಲವರಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಆಸ್ಥಾನದಲ್ಲಿ ಅವರ ಮುತ್ತಜ್ಜ ಜನಾಬ್ ಮೊಹಿದೀನ್ ನೌಕರರಾಗಿದ್ದರು.  1799 ರ ಮೇ ತಿಂಗಳಿನಲ್ಲಿ ಬ್ರಿಟೀಷರು ನಾಲ್ಕನೆಯ ಮೈಸೂರು ಯುದ್ಧದಲ್ಲಿ  ಟಿಪ್ಪು ಸುಲ್ತಾನನ್ನು ಸೋಲಿಸಿ, ಹತ್ಯೆ ಮಾಡಿದ ನಂತರ, ಟಿಪ್ಪುಸುಲ್ತಾನ್  ಕುಟುಂಬದ ಮಡದಿಯರು, ಮಕ್ಕಳು ಹಾಗೂ ಐನೂರಕ್ಕೂ ಹೆಚ್ಚು ಮಂದಿ ಆತನ ನಂಬಿಕಸ್ಥ ಸೇವಕರು ಮತ್ತು ಸಿಪಾಯಿಗಳನ್ನು ತಮಿಳುನಾಢಿನ ವೆಲ್ಲೂರು ಕೋಟೆಯಲ್ಲಿ ಗೃಹಬಂಧನದಲ್ಲಿಟ್ಟಿದ್ದರು.

ಎಂಟು ವರ್ಷಗಳ ತರುವಾಯ ಟಿಪ್ಪುವಿನ ತಾಯಿ, ಮಡದಿಯರು ಮರಣ ಹೊಂದಿದ ನಂತರ ಟಿಪ್ಪುವಿನ ಮಕ್ಕಳನ್ನು ಕೊಲ್ಕತ್ತ ನಗರಕ್ಕೆ ಸ್ಥಳಾಂತರಿಸಿ, ಉಳಿದ ಸೇವಕರನ್ನು ಗೃಹಬಂಧನದಿಂದ ಬಿಡುಗಡೆ ಮಾಡಿದರು. ನಂತರ ಶ್ರೀರಂಗಪಟ್ಟಣಕ್ಕೆ ವಾಪಸ್ ಬರಲಾಗದೆ. ಅಲ್ಲಿಯೇ ಕೃಷಿ ಕೂಲಿಕಾರರಾಗಿ ನೆಲೆ ನಿಂತ ಜನಾಬ್ ಮೋಹಿದ್ದೀನ್, ತಿಂಡಿವಣಂ ಜಿಲ್ಲೆಗೆ ಹೋಗಿ ಭೂಮಿಯನ್ನು ಗುತ್ತಿಗೆಗೆ ಪಡೆದು ನೀಲಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾದರು. ಸ್ವಂತ ಭೂಮಿಯ ಜೊತೆಗೆ  ಕಾರ್ಖಾನೆಯನ್ನು ಸ್ಥಾಪಿಸಿದರು.  ರೇಷ್ಮೆ ಗಿಡದ ಮಾದರಿಯಲ್ಲಿ ಮೂರು ತಿಂಗಳ ಅವಧಿಯ ನೀಲಿ ಗಿಡವನ್ನು ಕತ್ತರಿಸಿದ ಮೂರು ಗಂಟೆಯ ಅವಧಿಯೊಳಗೆ    ಸತತ ಹನ್ನೆರೆಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದಾಗ, ಹಸಿರು ಎಲೆಗಳಿಂದ ನೀಲಿಯ ಬಣ್ಣವು ಬಿಡುಗಡೆಯಾಗುತ್ತದೆ. ಈ ನೀರನ್ನು ಆ ಕಾಲದಲ್ಲಿ ದೊಡ್ಡದಾದ ಮಡಕೆಗಳಲ್ಲಿ ಸೀಮಿತವಾದ ಶಾಖದಲ್ಲಿ ಕುದಿಸಿದಾಗ, ಗಟ್ಟಿಯಾದ ನೀಲಿ ದ್ರವವು ಉತ್ಪಾದನೆಯಾಗುತ್ತಿತ್ತು. ಅದನ್ನು ಬಿಸಿಲಿನಲ್ಲಿ ಒಣಗಿಸಿ, ಬೆಲ್ಲದ ಅಚ್ಚಿನ ರೂಪಕ್ಕೆ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿತ್ತು.

ತಿಂಡಿವಣಂ ನಿಂದ ನಲವತ್ತೇರೆಡು ಕಿಲೋಮೀಟರ್ ದೂರವಿರುವ ಪಾಂಡಿಚೇರಿ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಡಚ್ಚರಿಗೆ ಮತ್ತು ಪ್ರೆಂಚರಿಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಚೀನಾದಿಂದ ಬರುತ್ತಿದ್ದ ರೇಷ್ಮೆ ಬಟ್ಟೆಗಳು ಮತ್ತು ಪ್ರಾನ್ಸ್ ನಿಂದ ಭಾರತಕ್ಕೆ  ಆಮದಾಗುತ್ತಿದ್ದ ಸುಗಂಧ ದ್ರವ್ಯಗಳನ್ನು ಅಯೂಬ್ ಅವರ ಮುತ್ತಜ್ಜ ಜನಾಬ್ ಮೊಹಿದ್ದೀನ್ ಕೊಂಡು ತಂದು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರಂತೆ.  ಕಾಲಕ್ರಮೇಣ ನೀಲಿ .ಕೃಷಿ ಮತ್ತು ನೀಲಿ ಉತ್ಪಾತನೆಯು ಅವರ ತಾತ ಮತ್ತು ತಂದೆಯ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಿತು. ತಿಂಡಿವಣಂ ಜಿಲ್ಲೆಯಲ್ಲಿ  ಕಳೆದ ಎರಡು ಶತಮಾನಗಳಿಂದ ಅಯೂಬ್ ಮತ್ತು ಅನ್ಬಳಗನ್ ಎಂಬುವರ ಕುಟುಂಬವು ಇಂದಿಗೂ ಶ್ರೇಷ್ಠ ಮಟ್ಟದ ಸಹಜ ನೀಲಿ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿವೆ.


ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಜಾಗತಿಕವಾಗಿ ಜೀನ್ಸ್ ಬಟ್ಟೆಗಳು ಹೆಚ್ಚು ಪ್ರಚಾರಕ್ಕೆ ಬಂದ ನಂತರ  ಸಹಜ ನೀಲಿಗೆ  ಅಪಾರ ಬೇಡಿಕೆ ಕುದುರಿತು. 1893 ರಲ್ಲಿ ಜರ್ಮನಿಯ ರಸಾಯನಿಕ ವಿಜ್ಞಾನಿ ಕೃತಕ ನೀಲಿಯನ್ನು ಕಂಡು ಹಿಡಿದ ನಂತರ ಎರಡು ದಶಕಗಳ ಕಾಲ ಸಹಜ ನೀಲಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ, ಸಹಜ ನೀಲಿಯಿಂದ ದೊರೆಯುವ ಕಡುಬಣ್ಣವು,  ಕೃತಕ ನೀಲಿಯಿಂದ ದೊರೆಯದ ಕಾರಣ ಜೀನ್ಸ್ ಬಟ್ಟೆಯ ತಯಾರಕರಿಗೆ ಭಾರತದ ನೀಲಿಯನ್ನು ಆಶ್ರಯಿಸಿದ್ದಾರೆ. ಹಾಗಾಗಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ನೀಲಿ ಬೆಳೆಯನ್ನು ಈಗ ಚಿನ್ನದ ಬೆಳೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ತಮಿಳುನಾಡು, ಆಂಧ್ರ, ರಾಜಸ್ತಾನ ಮತ್ತು ಉತ್ತರಖಾಂಡದಲ್ಲಿ ನೀಲಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ನೆರೆಯ ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿಯೂ ಸಹ ಬೆಳೆಯಲಾಗುತ್ತಿದೆ. ತಮಿಳುನಾಡಿನ ತಿಂಡಿವಣಂ ಮತ್ತು ಉತ್ತರಖಾಂಡದ ಪಿತೋರ್ ಘರ್ ಪ್ರದೇಶಗಳಲ್ಲಿ ಬೆಳೆಯುವ  ಸಹಜ ನೀಲಿಗೆ ಅಪಾರ ಬೇಡಿಕೆಯಿದೆ.

ಮಂಡ್ಯ ಜಿಲ್ಲೆಯೂ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ  ವಾಣಿಜ್ಯ ಬೆಳೆಗಳಾದ ಕಬ್ಬು ಮತ್ತು ರೇಷ್ಮೆಯನ್ನು ಆಶ್ರಯಿಸಿರುವ ರೈತರಿಗೆ  ನಮ್ಮ ಕೃಷಿ ಅಧಿಕಾರಿಗಳು ಮತ್ತು  ಕೃಷಿ ವಿಜ್ಞಾನಿಗಳು ನೀಲಿ ಕೃಷಿಯನ್ನು ಪರಿಚಯಿಸಿದರೆ, ರೈತರ ಬೇಸಾಯದ ಬದುಕಿನಲ್ಲಿ ಒಂದಿಷ್ಟು ಬದಲಾವಣೆಯನ್ನು ನಾವು ಕಾಣಬಹುದಾಗಿದೆ.

ಚಿತ್ರಸೌಜನ್ಯ- ಅಲ್ ಜಜೀರಾ ಟಿ.ವಿ ಮತ್ತು ವಿಕಿಪೀಡಿಯಾ

ಡಾ.ಎನ್.ಜಗದೀಶ್ ಕೊಪ್ಪ

 

 

 

 

..

ಸೋಮವಾರ, ಮೇ 6, 2024

ಅಂತರ್ಜಾತಿ ಮತ್ತು ಧರ್ಮದ ವಿವಾಹಗಳಿಗೆ ಸರ್ಕಾರದ ರಕ್ಷಣೆ ಅತ್ಯಗತ್ಯ.

 


ಇತ್ತೀಚೆಗೆ ಹುಬ್ಬಳ್ಳಿ ನಗರದಲ್ಲಿ ನಡೆದ ನೇಹಾ ಎಂಬ ಯುವತಿಯ ಹತ್ಯೆ ಅತ್ಯಂತ ಅಮಾನವೀಯವಾದುದು. ಫಯಾಜ್ ಎಂಬ ಯುವಕ ಹೆಣ್ಣು ಮಗಳನ್ನು ಕಾಲೇಜು ಆವರಣದಲ್ಲಿ ಇರಿದು ಕೊಂದಿರುವುದು ಇಂದಿನ ಯುವ ತಲೆಮಾರು ಪ್ರೀತಿ ಪ್ರೇಮದ ಹೆಸರಿನಲ್ಲಿ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಘಟನೆಯು ನಮ್ಮೆಲ್ಲರ ಆತ್ಮ ಸಾಕ್ಷಿಗೆ ಹಲವು ಪ್ರಶ್ನೆಗಳನ್ನು ಒಡ್ಡಿದೆ.

ಪ್ರೀತಿ ಅಥವಾ ಪ್ರೇಮ ಎನ್ನುವುದು ಗಂಡು-ಹೆಣ್ಣು ಎಂಬ ಜೀವಗಳ ನಡುವೆ ಹೊಸ ವಿಚಾರ ಅಥವಾ ಸಂಗತಿಯೇನಲ್ಲ. ಅದು ಇತಿಹಾಸ ಮತ್ತು ಪುರಾಣವನ್ನು ಮೀರಿ ಜಗತ್ತಿನಾದ್ಯಂತ ಮಾನವ ಜೀವಿಗಳನ್ನು ಆವರಿಸಿದೆ. ಆದರೆ, ಇಪ್ಪತ್ತೊಂದನೆಯ ಶತಮಾನದ ಅವಧಿಯಲ್ಲಿ ವಿಶೇಷವಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರೇಮ ವೈಫಲ್ಯ ಮತ್ತು ಅಂತರ್ಜಾತಿಯ ಹಾಗೂ ಭಿನ್ನ ಧರ್ಮೀಯರ ಗಂಡು - ಹೆಣ್ಣುಗಳ ನಡುವಿನ ಪ್ರೀತಿ ಅಥವಾ ವಿವಾಹಗಳು ಇಂದು  ಮೈ ನೆತ್ತರನ್ನು ಬಸಿದು ಕುಡಿಯುವ ಹಂತಕ್ಕೆ ತಲುಪಿರುವುದು ಇಂದಿನ ಸಮಾಜದ ಅಥವಾ ನಾಗರೀಕ ಜಗತ್ತಿನ ಕ್ರೌರ್ಯಕ್ಕೆ ಸಾಕ್ಷಿ ಎನಿಸಿದೆ. ಈಕಾರಣದಿಂದಾಗಿ ಗಾಂಧೀಜಿಯವರು ಜಾತಿವಿನಾಶಕ್ಕೆ ಅಂತರ್ಜಾತಿ ವಿವಾಹ ಮದ್ದು ನಂಬಿದ್ದರು. ಅದರಂತೆ ಅವರು ಸ್ವಜಾತಿಯ ವಿವಾಹಗಳಿಗೆ ಬದುಕಿರುವವರಿಗೂ ಭಾಗವಹಿಸಲಿಲ್ಲ.

ಇಂತಹ ವಿವಾಹಗಳು ಭಾರತಕ್ಕೆ ಹೊಸತಲ್ಲ. 1942 ಮಾರ್ಚ್ 26 ರಂದು ಮಾಜಿ ಪ್ರಧಾನಿ ಇಂಧಿರಾಗಾAಧಿ ಅವರು ಕಾಶ್ಮೀರಿ ಪಂಡಿತ ಸಮುದಾಯದಿಂದ ಬಂದ ಹೆಣ್ಣು ಮಗಳಾಗಿದ್ದರೂ ಸಹ, ಪಾರ್ಸಿ ಸಮುದಾಯದ ಫಿರೋಜ್ ಗಾಂಧಿ ಅವರನ್ನು ಪ್ರೀತಿಸಿ ವಿವಾಹವಾದರು. ಸಂದರ್ಭದಲ್ಲಿ ಅವರ ತಂದೆ ಜವಹರಲಾಲ್ ನೆಹರೂ ಅವರು ತಮ್ಮ ಏಕೈಕ ಪುತ್ರಿಗೆ  ‘’ಇನ್ನೊಮ್ಮೆ ಆಲೋಚಿಸು ಎಂದರಲ್ಲದೆ, ಹಿಂದೂ ಯುವಕರ ಬಗ್ಗೆ ಗಮನ ನೀಡು’’ ಎಂಬ ಸಲಹೆಯನ್ನು ನೀಡಿದರು.  ನನ್ನ ನಿರ್ಧಾರ ಅಂತಿಮ ಎಂದು ಇಂದಿರಾ ಅವರು ನುಡಿದಾಗ, ನೆಹರೂ ಅವರು ಮೌನಕ್ಕೆ ಜಾರಿದರು. ಇಂದಿರಾ ಮತ್ತು ಫಿರೋಜ್ ಗಾಂಧಿ ಅವರ ವಿವಾಹವನ್ನು ವಿರೋಧಿಸಿ ಹಿಂದೂ ಹಾಗೂ ಪಾರ್ಸಿ ಸಮುದಾಯದ ಸಂಘಟನೆಗಳು ಅಲಹಬಾದಿನ ನೆಹರೂ ಅವರ ನಿವಾಸ ಆನಂದ ಭವನದ ಮುಂದೆ ಪ್ರತಿಭಟನೆ ನಡೆಸಿದಾಗ, ಮಧ್ಯ ಪ್ರವೇಶಿಸಿದ ಗಾಂಧೀಜಿಯವರು ‘’ಇದು ಎರಡು ಆತ್ಮಗಳ ಮಿಲನದ ಕ್ರಿಯೆ ಇದನ್ನು ಅಡ್ಡಿ ಪಡಿಸುವ ನೈತಿಕ ಹಕ್ಕು ನಮಗಿಲ್ಲ’’ ಎಂದು ನುಡಿದಾಗ  ಇಡೀ ಸಮಾಜದ ಧ್ವನಿ ಅಡಗಿ ಹೋಯಿತು.

ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಬಂಗಾಳದಿA ಪ್ರಾಧ್ಯಾಪಕರಾಗಿ ಹೈದರಾಬಾದಿಗೆ ಆಗಮಿಸಿದ್ದ ಅಘೋರೆನಾಥ ಚಟ್ಟೋಪದ್ಯಾಯ  ಅವರ ಪುತ್ರಿ ಸರೋಜಿನಿ ಅವರು 1898 ರಲ್ಲಿ  ತಮ್ಮ ಸಹಪಾಠಿ  ಮುತ್ಯಾಲಯ್ಯ ಗೋವಿಂದರಾಜುಲು ನಾಯ್ಡು ಅವರನ್ನು ವಿವಾಹವಾದಾಗ ಯಾವುದೇ ಪ್ರತಿಭಟನೆ ಎದುರಾಗಲಿಲ್ಲ. ನಂತರ ಅವರು ಸರೋಜಿನಿ ನಾಯ್ಡು ಆದರು. ಅದೇ ರೀತಿಯಲ್ಲಿ ತಮಿಳುನಾಡಿನಲ್ಲಿ   ಸ್ವತಃ ದೇವದಾಸಿ ಸಮುದಾಯದಲ್ಲಿ ಜನಿಸಿ, ದಕ್ಷಿಣ ಭಾರತದ ಪ್ರಥಮ ವೈದ್ಯೆ ಎಂಬ ಕೀರ್ತಿಗೆ ಪಾತ್ರರಾಗಿ  ದೇವದಾಸಿಯರ ವೃತ್ತಿಯ ಬಗ್ಗೆ ಹೋರಾಡುತ್ತಿದ್ದ ಮುತ್ತುಲಕ್ಷ್ಮಿಎಂಬುವರು 1914 ರಲ್ಲಿ ಸುಂದರ ರೆಡ್ಡಿ ಎಂಬ ತನ್ನ ಸಹಪಾಠಿಯನ್ನು ವಿವಾಹವಾಗಿ ಮುತ್ತುಲಕ್ಷ್ಮಿರೆಡ್ಡಿ ಎಂದು ಪರಿವರ್ತನೆಯಾದಾಗ ಯಾವ ಸಮಾಜವೂ ಧ್ವನಿ ಎತ್ತಲಿಲ್ಲ. ಪ್ರಸಿದ್ಧ ಭರತ ನಾಟ್ಯ ಕಲಾವಿದೆ ಬ್ರಾಹ್ಮಣ ಸಮುದಾಯದ ರುಕ್ಮಿಣಿ ಅವರು ಅರುಂಡೆಲ್ ಎಂಬ ಕ್ರೈಸ್ತ ಸಮಾಜ ಸೇವಕನನ್ನು 1920 ದಶಕದಲ್ಲಿ ವಿವಾಹವಾಗಿದ್ದರು.  ಅಷ್ಟೇ ಏಕೆ 1960 ದಶಕದಲ್ಲಿ ಹಿರಿಯ .ಪಿ.ಎಸ್. ಪೊಲೀಸ್ ಅಧಿಕಾರಿ ಹಾಗೂ 1980 ರ ವೇಳೆಯಲ್ಲಿ  ಬೆಂಗಳೂರು ನಗರದ  ಪೊಲೀಸ್ ಕಮೀಷನರ್ ಆಗಿದ್ದ ನಿಜಾಮುದ್ದೀನ್ ಅವರನ್ನು ಹಿಂದೂ ಹೆಣ್ಣು ಮಗಳಾದ ಲಕ್ಷ್ಮಿ ಎಂಬುವರು ವಿವಾಹವಾಗಿ ಲಕ್ಷ್ಮಿ ನಿಜಾಮುದ್ದೀನ್ ಎಂದು ಸಮಾಜದಲ್ಲಿ ಗುರುತಿಸಿಕೊಂಡಾಗ ಯಾರೊಬ್ಬರ ಮನಸ್ಸಿನಲ್ಲಿಯೂ ಕಹಿ ಭಾವನೆ ಉದ್ಭವವಾಗಲಿಲ್ಲ. ಇಂತಹ ಒಂದು ಆರೋಗ್ಯ ಪೂರ್ಣ ಸಮಾಜವು ಇಂದು ನಮ್ಮೆದುರು ಮರ್ಯಾದಾ ಹತ್ಯೆ ಮತ್ತು ಸೇಡಿನ ಹತ್ಯೆಯ ಹಂತಕ್ಕೆ ತಲುಪಿದೆ ಎಂದರೆ ಒಂದು ಧರ್ಮ ಅಥವಾ ಜಾತಿಯ ಕಡೆ ಕೈ ತೋರಿಸುವ ಬದಲು, ನಾವುಗಳು  ನಮ್ಮ ನಮ್ಮ ಎದೆಗೆ ಕೈ ತೋರಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಕೇವಲ ಮೂರು ಅಥವಾ ನಾಲ್ಕು ದಶಕಗಳ ಹಿಂದೆ ತಮ್ಮ ಮನೆಯ ಪುತ್ರಿ ಪೋಷಕರಿಗೆ ತಿಳಿಸದೆ ಅಂತರ್ಜಾತಿಯ ವಿವಾಹವಾದರೆ, ನಮ್ಮ ಮಗಳು ನಮ್ಮ ಪಾಲಿಗೆ ಸತ್ತು ಹೋದಳು ಎಂಬ ನಿರ್ಧಾರಕ್ಕೆ ಬರುತ್ತಿದ್ದ ಪೋಷಕರು, ಎಂದಿಗೂ ಪ್ರೇಮಿಗಳನ್ನು ಬೆನ್ನತ್ತಿ ಹೋಗಿ ಕೊಲ್ಲುತ್ತಿರಲಿಲ್ಲ ಮತ್ತು ವಿವಾಹವಾದ ತಮ್ಮ ಪುತ್ರಿಯನ್ನು ಹತ್ಯೆ ಮಾಡುತ್ತಿರಲಿಲ್ಲ. ಪ್ರೀತಿಸಿದ ಹುಡುಗಿ ಕೈ ಕೊಟ್ಟರೆ, ಅಥವಾ ಮನೆಯವರ ಒತ್ತಾಯಕ್ಕೆ ಮಣಿದು ಆಕೆ  ಬೇರೊಂದು ವಿವಾಹವಾದರೆ, ಭಗ್ನಗೊಂಡ ಪ್ರೇಮಿ ಗಡ್ಡ ಬಿಟ್ಟುಕೊಂಡು ಮೂರು ನಾಲ್ಕು ತಿಂಗಳು ಕಾಲ ಮೌನವಾಗಿ ಒಳಗೊಳಗೆ ಅತ್ತು ಕಣ್ನೀರಿನ ಮೂಲಕ  ಎದೆಯ ಗಾಯವನ್ನು ವಾಸಿಮಾಡಿಕೊಳ್ಳುತ್ತಿದ್ದನು.  ಕತ್ತಿ ಹಿಡಿದು ಹೋಗಿ ಪ್ರೇಮಿಸಿದಾಕೆಯನ್ನು ಕೊಲ್ಲುತ್ತಿರಲಿಲ್ಲ. ನಮ್ಮ ಸಮಾಹದಲ್ಲಿ ಇತ್ತೀಚೆಗೆ ಕೇಂದ್ರೀಕತವಾಗುತ್ತಿರುವ ಜಾತಿ ಮತ್ತು ದರ್ವ್ಮಗಳು ಹಾಗೂ ಇವುಗಳಿಗೆ ನೀರೆರೆದು ಪೋಷಿಸುತ್ತಿರುವ ರಾಜಕೀಯ ಪಕ್ಷಗಳು ಮತ್ತು ನೇತಾರರು ಇಂತಹ ಅನಿಷ್ಠ ಕ್ರಿಯೆಗಳಿಗೆ ನೇರ ಹೊಣೆಗಾರರು ಎಂಬುದನ್ನು ನಾವು ಮರೆಯಬಾರದು.

ಒಬ್ಬ ಅಪ್ಪಟ ಪ್ರಜ್ಷಾವಂತ ಇಂದು ಜಾತಿ, ಧರ್ಮವನ್ನು ಮತ್ತು ಪಕ್ಷ ಹಾಗೂ ಸಂಘಟನೆಗಳನ್ನು ಮೀರಿ ಕುವೆಂಪು ಪ್ರತಿಪಾದಿಸಿದ ವಿಶ್ವ ಮಾನವ ಪ್ರಜ್ಞೆಯ ನೆಲೆಯಲ್ಲಿ ಬದುಕುವುದು ಅತ್ಯಗತ್ಯವಾಗಿದೆ. ಕಾರಣಕ್ಕಾಗಿ 1980 ದಶಕದಲ್ಲಿ ಪಿ.ಲಂಕೇಶ್ ಹಾಗೂ ತೇಜಸ್ವಿ ಅವರ ಒಡನಾಡಿಯಾಗಿದ್ದ ವಿಚಾರವಾದಿ ಪ್ರೊ. ಕೆ.ರಾಮದಾಸ್ ಅವರು ಮಾನವಮಂಟಪ ಎಂಬ ವೇದಿಕೆ ನಿರ್ಮಿಸಿಕೊಂಡು ಅಂತರ್ಜಾತಿ ವಿವಾಹವಾಗುವ ಯುವಕ-ಯುವತಿಯರಿಗೆ ರಕ್ಷಣೆ ನೀಡಿ ಸ್ವಂತ ಖರ್ಚಿನಲ್ಲಿ ವಿವಾಹ ನೆರವೇರಿಸುತ್ತಿದ್ದರು. ಇಂದಿಗೂ ಸಹ ಅವರ ಶಿಷ್ಯರಾದ ಪ್ರೊ.ಕಾಳಿಚನ್ನೇಗೌಡ, ಉಗ್ರನರಸಿಂಹಗೌಡ ಮತ್ತು ಧನಂಜಯ ಎಂಬುವರು    ಕೆಲಸವನ್ನು ಮುಂದುವರಿಸುತ್ತಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚು ಚಾಲ್ತಿಯಲ್ಲಿವೆ. ಕಳೆದ ವರ್ಷ ಕೋಲಾರ ಜಿಲ್ಲೆಯಲ್ಲಿ ದಲಿತ ಸಮುದಾಯದ ಎಡಗೈ ಮತ್ತು ಬಲಗೈ ಪಂಗಡದ ಯುವಕ-ಯುವತಿ ಮಾತನಾಡುತ್ತಿದ್ದರು  ಎಂಬ ಕಾರಣಕ್ಕೆ ಯುವಕನೊಬ್ಬ ಹತ್ಯೆಯಾದನು. ಘಟನೆಗಳು ನಮ್ಮನ್ನು ಮತ್ತು ಸಮಾಜವನ್ನು ಎಲ್ಲಿಗೆ ಕೊಂಡೊಯ್ಯಬಲ್ಲದು? ಎಂಬುದನ್ನು  ನೆನೆದರೆ ಆತಂಕವಾಗುತ್ತದೆ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಇಡೀ ಮಾಹಿತಿಯು ಬೆರಳ ತುದಿಗೆ ಬಂದು ಕುಳಿತಿರುವಾಗ ನಿಜವಾದ ಪ್ರೇಮಿಗಳನ್ನು ಅಗಲಿಸಲು ಸಾಧ್ಯವಿಲ್ಲ. ಅಂತಹ ಯುವಕ-ಯುವತಿಯರಲ್ಲಿ ಒಟ್ಟಾಗಿ ಬದುಕುವ ಬದ್ಧತೆ ಇದ್ದರೆ, ಅವರುಗಳಿಗೆ ಸಮಾಜ ಮತ್ತು ಸರ್ಕಾರ ರಕ್ಷಣೆ ನೀಡುವುದರ ಜೊತೆಗೆ ಕನಿಷ್ಠ ಎರಡು ವರ್ಷಗಳ ಕಾಲ ಅವರ ಉದ್ಯೋಗಕ್ಕೆ  ಮತ್ತು ಜೀವನ ಭದ್ರತೆಗೆ  ನೆರವಾಗಬೇಕಿದೆ. ಕೊಲೆ ಮತ್ತು ಮರ್ಯಾದಾ ಹತ್ಯೆಯಂತಹ ಅಮಾನುಷ ಕ್ರಿಯೆಗಳು ಯಾವುದೇ ಸಮಾಜಕ್ಕೆ ಒಳಿತಲ್ಲ.

ಜಗದೀಶ್ ಕೊಪ್ಪ