ಶನಿವಾರ, ಮೇ 11, 2024

ನೀಲಿ ಕೃಷಿಯಲ್ಲಿ ಅಪ್ರತಿಮ ಸಾಧನೆಗೈದ ಮಂಡ್ಯ ಮೂಲದ ಮುಸ್ಲಿಂ ಕುಟುಂಬ

 


ಹನ್ನೆರಡನೆಯ ಶತಮಾನದ  ಅಪ್ರತಿಮ  ವಚನಕಾರ  ಅಲ್ಲಮಪ್ರಭು ತನ್ನ ವಚನವೊಂದರಲ್ಲಿ ‘’ ಬೆಟ್ಟದ ನೆಲ್ಲಿಕಾಯಿಗೂ ಮತ್ತು ಸಮುದ್ರದ ಉಪ್ಪಿಗೂ ಎತ್ತಣದ ಸಂಬಂಧವಯ್ಯಾ’’ ಎಂದು ಕೇಳುತ್ತಾನೆ. ಈಗ  ಇದೇ ಪ್ರಶ್ನೆಯನ್ನು ನಾವು ಮಂಡ್ಯದ ಶ್ರೀರಂಗಪಟ್ಟಣದ ಮುಸ್ಲಿಂ ಕುಟುಂಬಕ್ಕೂ, ತಮಿಳುನಾಢಿನ ತಿಂಡಿವಣಂ ಜಿಲ್ಲೆಯ ನೀಲಿ ಅಥವಾ ಇಂಡಿಗೋ  ಕೃಷಿಗೂ ಮತ್ತು  ಸಹಜ ನೀಲಿಯ ಉತ್ಪಾದನೆಗೂ ಎಲ್ಲಿಯ ಸಂಬಂಧವಯ್ಯಾ ಎಂದು ಕೇಳಿಕೊಳ್ಳಬೇಕಾಗಿದೆ. ಇದಕ್ಕೆ ಪೂರಕವಗಿ ಅನಾಮಿಕವಾಗಿ ಉಳಿದುಕೊಂಡಿದ್ದ ಇತಿಹಾಸವೊಂದು ನಮ್ಮೆದುರು ಇರುವುದು ಆಶ್ಚರ್ಯದ ಸಂಗತಿ.

ಇತ್ತೀಚೆಗೆ ಚಂಪಾರಣ್ಯ ಸತ್ಯಾಗ್ರಹ ಕುರಿತು ಕೃತಿಯನ್ನು ರಚಿಸುತ್ತಿರುವ ಸಂದರ್ಭಧಲ್ಲಿ ನೀಲಿ ಬಣ್ಣ ಮತ್ತು ಅದರ ಸಸ್ಯ ಕುರಿತ ಇತಿಹಾಸವನ್ನು ಅಧ್ಯಯನ ಮಾಡುತ್ತಿರುವಾಗ ಈ ಕುತೂಹಲಕಾರಿ ಇತಿಹಾಸ ನನ್ನೆದುರು ತೆರೆದುಕೊಂಡಿತು. ಬಣ್ಣಗಳ ರಾಜ ಎಂದೂ ಕರೆಯಲ್ಪಡುವ ಇಂಡಿಗೋ ಅಥವಾ ನೀಲಿ ಬಣ್ಣವು  ಪ್ರಪಂಚದ ಅತ್ಯಂತ ಪ್ರಾಚೀನ ಬಣ್ಣಗಳಲ್ಲಿ ಒಂದಾಗಿದೆ. ಇದನ್ನು ಈಜಿಪ್ಟ್ ಮತ್ತು ಏಷ್ಯಾದ ಜನರು ನಾಲ್ಕು ಸಾವಿರ ವರ್ಷಗಳಿಂದ  ಬಳಸುತ್ತಿದ್ದಾರೆ. ಪಾಶ್ಚಿಮಾತ್ಯ ಜಗತ್ತಿಗೆ ಅಪರಿಚಿತವಾಗಿದ್ದ ನೀಲಿ ಬಣ್ಣಕುರಿತಾಗಿ ಇದು ಸಹಜ ಕೃಷಿಯಿಂದ ಸಸ್ಯಗಳ ಮೂಲಕ ತಯಾರಾಗುವ ಬಣ್ಣ ಎಂದು ಅವರಿಗೆ ತಿಳಿದಿರಲಿಲ್ಲ.

ಅಂದಿನ ಕಾಲದಲ್ಲಿ ಸಿಲ್ಕ್ ರೂಟ್ ಎಂದು ಕರೆಯಲಾಗುತ್ತಿದ್ದ ರೇಷ್ಮೇ ಮಾರ್ಗದಲ್ಲಿ ಇಂದಿನ ಟರ್ಕಿ ಮಖಾಂತರ ಭಾರತದ ಮಸಾಲೆ ಪದಾರ್ಥಗಳು ಮತ್ತು ನೀಲಿ ಬಣ್ಣವು ಪಾಶ್ಚಿಮಾತ್ಯ ಜಗತ್ತಿಗೆ ತಲುಪುತ್ತಿದ್ದವು. ಅಲ್ಲಿನ ಜನತೆ ನೀಲಿ ಬಣ್ಣವನ್ನು ಭಾರತದಲ್ಲಿ  ಖನಿಜ ಪದಾರ್ಥದಿಂದ ತಯಾರಿಸುತ್ತಾರೆ ಎಂದು ನಂಬಿದ್ದರು. ಹನ್ನೆರೆಡನೇ ಶತಮಾನದ ರೋಮನ್ ಇತಿಹಾಸಕಾರ, ಪ್ಲಿನಿ ದಿ ಎಲ್ಡರ್ ಎಂಬಾತನು "ಭಾರತದ ಉತ್ಪನ್ನವಾದ ಇಂಡಿಗೋ ಅಥವಾ ನೀಲಿಯು  ಕೆಲವು ಸಸ್ಯಗಳ ಮೇಲಿನ ಕಲ್ಮಶಕ್ಕೆ ಅಂಟಿಕೊಳ್ಳುವ ಲೋಳೆಯ ಮೂಲಕ ತಯಾರಿಸಲಾಗುವುದು ಎಂದು ದಾಖಲಿಸಿದ್ದನು. ನಂತರ 1498 ರಲ್ಲಿ ಭಾರತಕ್ಕೆ ಸಮುದ್ರಮಾರ್ಗದ ಮೂಲಕ ಪ್ರವೇಶೀಸಿದ ವಾಸ್ಕೋಡಗಾಮನು  ಭಾರತದ ನೀಲಿ ಸಸ್ಯ ಮತ್ತು ಬೀಜಗಳನ್ನು ಕೊಂಡೊಯ್ದು ಅಲ್ಲಿನ ಜನತೆಗೆ ಪರಿಚಯಿಸಿದನು.

ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಬ್ರಿಟೀಷರು ಅಲ್ಲಿನ ಜವಳಿ ಗಿರಣಿ ಗಳಿಗೆ ಭಾರತದ ಹತ್ತಿ ಮತ್ತು ನೀಲಿ ಹಾಗೂ ಮಸಾಲೆ ಪದಾರ್ಥಗಳನ್ನು ರಫ್ತು ಮಾಡುವುದರಲ್ಲಿ ಹೆಚ್ಚು ಆಸಕ್ತಿ ವಹಿಸಿದರು. ಇಂಗ್ಲೇಂಡ್ ನಲ್ಲಿ ನೀಲಿ ಕೃಷಿಯು ಅಸ್ತಿತ್ವದಲ್ಲಿತ್ತು. ಆದರೆ, ಅಲ್ಲಿನ ತಂಪು ವಾತಾವರಣದಿಂದಾಗಿ ಭಾರತದ  ಉಷ್ಣವಯಲದಲ್ಲಿ ಬೆಳೆಯುವ ನೀಲಿ ಕೃಷ್ಷಿಯಿಂದ ತಯಾರಾದ ನೀಲಿಗೆ ಇರುವ  ದಟ್ಟ ಬಣ್ಣ ಇರುತ್ತಿರಲಿಲ್ಲ. ಹಾಗಾಗಿ ಬ್ರಿಟೀಷರು ಅನೇಕ ಸಂಸ್ಥಾನಗಳ ದೊರೆಯಿಂದ ಭೂಮಿಯನ್ನು ಶಾಶ್ವತ ಗುತ್ತಿಗೆ ಪಡೆದು ನೀಲಿ ಕೃಷಿಗೆ ಮುಂದಾದರು. ಅಂದಿನ ಬಂಗಾಳ ಪ್ರಾಂತ್ಯ ಎಂದು ಕರೆಯಲಾಗುತ್ತಿದ್ದ ಇಂದಿನ ಪಶ್ಚಿಮ ಬಂಗಾಳ, ಬಿಹಾರ ಮತ್ತು ಬಾಂಗ್ಲಾ ದೇಶದಲ್ಲಿ ನೀಲಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿತ್ತು. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೂರ್ ಅವರ ಅಜ್ಜ ದ್ವಾರಕನಾಥ ಟ್ಯಾಗೂರ್ ಬಂಗಾಳದಲ್ಲಿ ಸಾವಿರಾರು ಎಕೆರೆ ಭೂಮಿಯ ಒಡೆಯರಾಗಿದ್ದುಕೊಂಡು ನೀಲಿ ಕೃಷಿ ಮತ್ತು ನೀಲಿ ಉತ್ಪಾದನೆಯಲ್ಲಿ ಬ್ರಿಟೀಷರಿಗೆ ಮಾದರಿಯಾಗಿದ್ದರು.

ನಂತರದ ದಿನಗಳಲ್ಲಿ ಬಿಹಾರದ ಚಂಪಾರಣ್ಯ ಪ್ರದೇಶದಲ್ಲಿ ಬ್ರಿಟೀಷರು ಭೂಮಿ ಖರೀದಿಸಿ ನೀಲಿ ಕೃಷಿಯಲ್ಲಿ ತೊಡಗಿಸಿಕೊಂಡು ಅಲ್ಲಿನ ರೈತರನ್ನು ಶೋಷಿಸಿದ್ದು, ರೈತರ ಪರವಾಗಿ 1917 ರಲ್ಲಿ ಗಾಂಧಿ ಹೋರಾಟ ನಡೆಸಿ ಅವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು ಈಗ ಈತಿಹಾಸವಾಗಿದೆ. ಇಂತಹ ನೀಲಿ ಇತಿಹಾಸದ ಹಿನ್ನೆಲೆಯಲ್ಲಿ ಮಂಡ್ಯದ ನೆಲಕ್ಕೂ, ನೀಲಿ ಕೃಷಿಗೂ ಸಂಭಂಧವಿಲ್ಲದೆ ಇರುವಾಗ ಎರಡು ಶತಮಾನದ ಹಿಂದೆ ಶ್ರೀರಂಗಪಟ್ಟಣದಿಂದ ತಮಿಳುನಾಡಿಗೆ ಹೋದ ಮುಸ್ಲಿಂ ವ್ಯಕ್ತಿಯೊಬ್ಬರು ನೀಲಿ ಕೃಷಿಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಕಥನ ನಿಜಕ್ಕೂ ರೋಚಕವಾಗಿದೆ.


ತಿಂಡಿವಣಂ ಜಿಲ್ಲೆಯ ವಗಂದೂರು ಎಂಬ ಗ್ರಾಮದಲ್ಲಿ ಕಳೆದ ಎರಡು ಶತಮಾನಗಳಿಂದ ನೀಲಿ ಕೃಷಿ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಅಯೂಬ್ ಅವರು ತನ್ನ ಕುಟುಂಬ ಕಥೆಯನ್ನು ಸವಿವರವಾಗಿ ಬಲ್ಲವರಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಆಸ್ಥಾನದಲ್ಲಿ ಅವರ ಮುತ್ತಜ್ಜ ಜನಾಬ್ ಮೊಹಿದೀನ್ ನೌಕರರಾಗಿದ್ದರು.  1799 ರ ಮೇ ತಿಂಗಳಿನಲ್ಲಿ ಬ್ರಿಟೀಷರು ನಾಲ್ಕನೆಯ ಮೈಸೂರು ಯುದ್ಧದಲ್ಲಿ  ಟಿಪ್ಪು ಸುಲ್ತಾನನ್ನು ಸೋಲಿಸಿ, ಹತ್ಯೆ ಮಾಡಿದ ನಂತರ, ಟಿಪ್ಪುಸುಲ್ತಾನ್  ಕುಟುಂಬದ ಮಡದಿಯರು, ಮಕ್ಕಳು ಹಾಗೂ ಐನೂರಕ್ಕೂ ಹೆಚ್ಚು ಮಂದಿ ಆತನ ನಂಬಿಕಸ್ಥ ಸೇವಕರು ಮತ್ತು ಸಿಪಾಯಿಗಳನ್ನು ತಮಿಳುನಾಢಿನ ವೆಲ್ಲೂರು ಕೋಟೆಯಲ್ಲಿ ಗೃಹಬಂಧನದಲ್ಲಿಟ್ಟಿದ್ದರು.

ಎಂಟು ವರ್ಷಗಳ ತರುವಾಯ ಟಿಪ್ಪುವಿನ ತಾಯಿ, ಮಡದಿಯರು ಮರಣ ಹೊಂದಿದ ನಂತರ ಟಿಪ್ಪುವಿನ ಮಕ್ಕಳನ್ನು ಕೊಲ್ಕತ್ತ ನಗರಕ್ಕೆ ಸ್ಥಳಾಂತರಿಸಿ, ಉಳಿದ ಸೇವಕರನ್ನು ಗೃಹಬಂಧನದಿಂದ ಬಿಡುಗಡೆ ಮಾಡಿದರು. ನಂತರ ಶ್ರೀರಂಗಪಟ್ಟಣಕ್ಕೆ ವಾಪಸ್ ಬರಲಾಗದೆ. ಅಲ್ಲಿಯೇ ಕೃಷಿ ಕೂಲಿಕಾರರಾಗಿ ನೆಲೆ ನಿಂತ ಜನಾಬ್ ಮೋಹಿದ್ದೀನ್, ತಿಂಡಿವಣಂ ಜಿಲ್ಲೆಗೆ ಹೋಗಿ ಭೂಮಿಯನ್ನು ಗುತ್ತಿಗೆಗೆ ಪಡೆದು ನೀಲಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾದರು. ಸ್ವಂತ ಭೂಮಿಯ ಜೊತೆಗೆ  ಕಾರ್ಖಾನೆಯನ್ನು ಸ್ಥಾಪಿಸಿದರು.  ರೇಷ್ಮೆ ಗಿಡದ ಮಾದರಿಯಲ್ಲಿ ಮೂರು ತಿಂಗಳ ಅವಧಿಯ ನೀಲಿ ಗಿಡವನ್ನು ಕತ್ತರಿಸಿದ ಮೂರು ಗಂಟೆಯ ಅವಧಿಯೊಳಗೆ    ಸತತ ಹನ್ನೆರೆಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದಾಗ, ಹಸಿರು ಎಲೆಗಳಿಂದ ನೀಲಿಯ ಬಣ್ಣವು ಬಿಡುಗಡೆಯಾಗುತ್ತದೆ. ಈ ನೀರನ್ನು ಆ ಕಾಲದಲ್ಲಿ ದೊಡ್ಡದಾದ ಮಡಕೆಗಳಲ್ಲಿ ಸೀಮಿತವಾದ ಶಾಖದಲ್ಲಿ ಕುದಿಸಿದಾಗ, ಗಟ್ಟಿಯಾದ ನೀಲಿ ದ್ರವವು ಉತ್ಪಾದನೆಯಾಗುತ್ತಿತ್ತು. ಅದನ್ನು ಬಿಸಿಲಿನಲ್ಲಿ ಒಣಗಿಸಿ, ಬೆಲ್ಲದ ಅಚ್ಚಿನ ರೂಪಕ್ಕೆ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿತ್ತು.

ತಿಂಡಿವಣಂ ನಿಂದ ನಲವತ್ತೇರೆಡು ಕಿಲೋಮೀಟರ್ ದೂರವಿರುವ ಪಾಂಡಿಚೇರಿ ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಡಚ್ಚರಿಗೆ ಮತ್ತು ಪ್ರೆಂಚರಿಗೆ ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಚೀನಾದಿಂದ ಬರುತ್ತಿದ್ದ ರೇಷ್ಮೆ ಬಟ್ಟೆಗಳು ಮತ್ತು ಪ್ರಾನ್ಸ್ ನಿಂದ ಭಾರತಕ್ಕೆ  ಆಮದಾಗುತ್ತಿದ್ದ ಸುಗಂಧ ದ್ರವ್ಯಗಳನ್ನು ಅಯೂಬ್ ಅವರ ಮುತ್ತಜ್ಜ ಜನಾಬ್ ಮೊಹಿದ್ದೀನ್ ಕೊಂಡು ತಂದು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರಂತೆ.  ಕಾಲಕ್ರಮೇಣ ನೀಲಿ .ಕೃಷಿ ಮತ್ತು ನೀಲಿ ಉತ್ಪಾತನೆಯು ಅವರ ತಾತ ಮತ್ತು ತಂದೆಯ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯಿತು. ತಿಂಡಿವಣಂ ಜಿಲ್ಲೆಯಲ್ಲಿ  ಕಳೆದ ಎರಡು ಶತಮಾನಗಳಿಂದ ಅಯೂಬ್ ಮತ್ತು ಅನ್ಬಳಗನ್ ಎಂಬುವರ ಕುಟುಂಬವು ಇಂದಿಗೂ ಶ್ರೇಷ್ಠ ಮಟ್ಟದ ಸಹಜ ನೀಲಿ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿವೆ.


ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಜಾಗತಿಕವಾಗಿ ಜೀನ್ಸ್ ಬಟ್ಟೆಗಳು ಹೆಚ್ಚು ಪ್ರಚಾರಕ್ಕೆ ಬಂದ ನಂತರ  ಸಹಜ ನೀಲಿಗೆ  ಅಪಾರ ಬೇಡಿಕೆ ಕುದುರಿತು. 1893 ರಲ್ಲಿ ಜರ್ಮನಿಯ ರಸಾಯನಿಕ ವಿಜ್ಞಾನಿ ಕೃತಕ ನೀಲಿಯನ್ನು ಕಂಡು ಹಿಡಿದ ನಂತರ ಎರಡು ದಶಕಗಳ ಕಾಲ ಸಹಜ ನೀಲಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ, ಸಹಜ ನೀಲಿಯಿಂದ ದೊರೆಯುವ ಕಡುಬಣ್ಣವು,  ಕೃತಕ ನೀಲಿಯಿಂದ ದೊರೆಯದ ಕಾರಣ ಜೀನ್ಸ್ ಬಟ್ಟೆಯ ತಯಾರಕರಿಗೆ ಭಾರತದ ನೀಲಿಯನ್ನು ಆಶ್ರಯಿಸಿದ್ದಾರೆ. ಹಾಗಾಗಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ನೀಲಿ ಬೆಳೆಯನ್ನು ಈಗ ಚಿನ್ನದ ಬೆಳೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ತಮಿಳುನಾಡು, ಆಂಧ್ರ, ರಾಜಸ್ತಾನ ಮತ್ತು ಉತ್ತರಖಾಂಡದಲ್ಲಿ ನೀಲಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ನೆರೆಯ ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿಯೂ ಸಹ ಬೆಳೆಯಲಾಗುತ್ತಿದೆ. ತಮಿಳುನಾಡಿನ ತಿಂಡಿವಣಂ ಮತ್ತು ಉತ್ತರಖಾಂಡದ ಪಿತೋರ್ ಘರ್ ಪ್ರದೇಶಗಳಲ್ಲಿ ಬೆಳೆಯುವ  ಸಹಜ ನೀಲಿಗೆ ಅಪಾರ ಬೇಡಿಕೆಯಿದೆ.

ಮಂಡ್ಯ ಜಿಲ್ಲೆಯೂ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ  ವಾಣಿಜ್ಯ ಬೆಳೆಗಳಾದ ಕಬ್ಬು ಮತ್ತು ರೇಷ್ಮೆಯನ್ನು ಆಶ್ರಯಿಸಿರುವ ರೈತರಿಗೆ  ನಮ್ಮ ಕೃಷಿ ಅಧಿಕಾರಿಗಳು ಮತ್ತು  ಕೃಷಿ ವಿಜ್ಞಾನಿಗಳು ನೀಲಿ ಕೃಷಿಯನ್ನು ಪರಿಚಯಿಸಿದರೆ, ರೈತರ ಬೇಸಾಯದ ಬದುಕಿನಲ್ಲಿ ಒಂದಿಷ್ಟು ಬದಲಾವಣೆಯನ್ನು ನಾವು ಕಾಣಬಹುದಾಗಿದೆ.

ಚಿತ್ರಸೌಜನ್ಯ- ಅಲ್ ಜಜೀರಾ ಟಿ.ವಿ ಮತ್ತು ವಿಕಿಪೀಡಿಯಾ

ಡಾ.ಎನ್.ಜಗದೀಶ್ ಕೊಪ್ಪ

 

 

 

 

..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ