ಸೂಫಿಸಂ
ವಿಚಾರಧಾರೆ ಅಂದಿನ ಪರ್ಷಿಯ ದೇಶದಲ್ಲಿ
ತಲೆ ಎತ್ತಿದ ಕಾಲಕ್ಕೆ ಸರಿಸಮನಾಗಿ
ಇತ್ತ ನಮ್ಮ ಕನ್ನಡ ನಾಡಿನಲ್ಲಿ
ಹನ್ನೊಂದು ಮತ್ತು ಹನ್ನೆರೆಡನೆಯ ಶತಮಾನದಲ್ಲಿ
ವಚನ ಚಳವಳಿ ಶರಣರ ಮೂಲಕ
ಆರಂಭವಾದದ್ದು ಕಾಕತಾಳೀಯ ಎನಿಸಿದರೂ ಸಹ ಸೋಜಿಗದ ಸಂಗತಿ.
ತಾವು ಬದುಕಿದ ವರ್ತಮಾನದ ಬದುಕಿನಲ್ಲಿ
ಕಂಡ ತಲ್ಲಣಗಳನ್ನು, ವೈರುಧ್ಯಗಳನ್ನು ಸೂಫಿಗಳು
ಕಾವ್ಯದ ಮೂಲಕ ದಾಖಲಿಸಿರುವುದು, ವಿಶೇಷ
ಮಾತ್ರವಲ್ಲ, ಇವೊತ್ತಿಗೂ ಆ ಕಾವ್ಯಗಳು, ಹಲವು
ಶತಮಾನ ಕಳೆದರೂ, ತಲೆಮಾರಿನಿಂದ ತಲೆಮಾರಿಗೆ,
ಎದೆಯಿಂದ ಎದೆಗೆ ಹರಿದು ಬಂದಿವೆ.
ಜೊತೆಗೆ ಜಗತ್ತಿನೆಲ್ಲೆಡೆ ಎಲ್ಲರ ನಾಲಿಗೆಯ ಮೇಲೆ
ಹರಿದಾಡುತ್ತಿವೆ
ಸೂಫಿ ಕಾವ್ಯ ಜಗತ್ತಿನಲ್ಲಿ ನೂರಾರು
ಸೂಫಿಗಳು ಮತ್ತು ಸೂಫಿ ಕವಿಗಳು
ಕಾವ್ಯ ರಚನೆಮಾಡಿದ್ದು, ಅವರಲ್ಲಿ ಪ್ರಮುಖರಾದ ಸನಾಯಿ,
ಅತ್ತಾರ್, ಹಾಫೀಜ್,ಉಮರ್ ಖಯಾಮ್,
ಜಲಾಲುದ್ದೀನ್ ರೂಮಿ, ಇವರುಗಳ ಕೆಲವು
ಕವಿತೆಗಳನ್ನು ಮಾತ್ರ ಪ್ರಾತಿನಿಧಿಕವಾಗಿ ಇಲ್ಲಿ ಪ್ರಸ್ತಾಪಿಸ ಬಯಸುತ್ತೇನೆ,
ಒಂದು ಸನಾಯಿ- ಸನಾಯಿ
ಈತ ಪರ್ಷಿಯನ್ ಭಾಷೆಯಲ್ಲಿ ಬರೆದ ಆದಿ ಸೂಫಿ
ಕವಿಗಳಲ್ಲಿ ಓಬ್ಬ. ಜಲಾಲುದ್ದೀನ್ ರೂಮಿಯಂತಹ
ಸೂಫಿ ಕವಿ ಕೂಡ ಸನಾಯಿಯನ್ನು
ಮತ್ತು ಅವನ ಕಾವ್ಯವನ್ನು ಹಾಡಿ
ಹೊಗಳಿದ್ದಾನೆ. ಮಸ್ನವಿ ಪ್ರಕಾರದಲ್ಲಿ ಕಾವ್ಯ
ಬರೆದ ಕವಿಗಳಲ್ಲಿ ಈತನದು ಅಗ್ರ ಸ್ಥಾನ.
ಕಾವ್ಯ-1
ಕಿರೀಟ, ಸಿಂಹಾಸನ
ಅರಸೊತ್ತಿಗೆ ಮತ್ತು ಅಧಿಕಾರ
ಧಿಕ್ಕರಿಸಿ ಮುಂದೆ ಹೆಜ್ಜೆ ಇಡು
ಪರದೇಶಿಯಾಗು, ನಾನು
ಏನೂ ಅಲ್ಲವೆಂದು ಭಾವಿಸು.
ಕಾವ್ಯ-2
ಈ ನಶ್ವರ ಲೋಕದಲಿ
ನೀನಿರಲು ಅರ್ಹನಲ್ಲ
ಇಲ್ಲಿಂದ ಹೊರಡು
ಶಾಶ್ವತ ಲೋಕವನ್ನು
ಮುಟ್ಟಲು ಯತ್ನಿಸು.
ಎರಡು- ಫರೀದ್ದೀನ್ ಅತ್ತಾರ್
(ಪರೀದ್ಧೀನ್ ಅತ್ತಾರ್)
ಅತ್ತಾರ್ ಹನ್ನೆರೆಡನೆ ಶತಮಾನದಲ್ಲಿ
ಇರಾನಿನ ನಿಶಾಪುರ್ ನಲ್ಲಿ ಜನಿಸಿದ ಪ್ರತಿಭಾವಂತ
ಸೂಫಿ ಕವಿ, ಪರ್ಷಿಯನ್ ಭಾಷೆಯಲ್ಲಿ ಮಸ್ನವಿ
ಬರೆದ ಪ್ರಮುಖ ಕವಿಗಳಲ್ಲಿ ಅತ್ತಾರ್ನದು ಎರಡನೇಯ ಸ್ಥಾನ,
ಮೂರನೇಯದು ಜಲಾಲುದ್ದೀನ್ ರೂಮಿಯದು. ಅತ್ತಾರ್ 114 ಗ್ರಂಥಗಳನ್ನು ಬರೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈವರೆಗೆ
30 ಕೃತಿಗಳು ಮಾತ್ರ ಲಭ್ಯವಾಗಿವೆ.
ಕಾವ್ಯ-1
ಸಾಧನೆಯ ಪಥದ
ಈ ಕಣಿವೆಯಲ್ಲಿ ಬೆಂಕಿಯಲ್ಲದೆ
ಯಾರೂ ಪ್ರವೇಶಿಸಬಾರದು
ಅಗ್ನಿಯಂತೆ ಉರಿಯದವನಿಗೆ
ಒಲುಮೆ ದಕ್ಕಲಾರದು.
ಕಾವ್ಯ-2
ಲೋಕದ ಪ್ರತಿ ವಸ್ತುವನ್ನು
ಉಚಿತವೆಂದು ಭಾವಿಸುವ
ಓ ಮನುಜನೆ,
ನೀನು ವಸ್ತು ಕುರಿತು
ಏನನ್ನೂ
ಹೇಳಲಾರೆ.
ಕಾವ್ಯ-3
ನೀನು ಪ್ರಾಣ
ಆದರೆ ಮನುಜ ಎಂದು
ತಿಳಿದಿದ್ದೀಯಾ
ನೀನು ನೀರು
ಒಂದು ಗಡಿಗೆ ಎಂದು
ಭಾವಿಸಿದ್ದಿಯಾ.
ಮೂರು- ಉಮರ ಖಯಾಮ್
(ಉಮರ್ ಖಯಾಮ್)
ಸೂಫಿ ಕವಿಗಳಲ್ಲಿ ಅತ್ಯಂತ ವಿಡಂಬನೆಯ ಮತ್ತು
ಆತ್ಮಾವಲೋಕನದ ರುಬಾಯಿಗಳನ್ನು ಬರೆದ ಪ್ರಮುಖರಲ್ಲಿ ಉಮರನೂ
ಒಬ್ಬ. ರುಬಾಯಿಗಳು ಎಂದರೆ, ನಾಲ್ಕು ಸಾಲಿನ
ಕವಿತೆ. ಅವುಗಳಲ್ಲಿ ಒಂದು, ಎರಡು ಮತ್ತು
ನಾಲ್ಕನೇ ಸಾಲಿನಲ್ಲಿ ಪ್ರಾಸಗಳು ಇರುತ್ತವೆ. ಮೂರನೆಯ ಸಾಲಿನಲ್ಲಿ ಪ್ರಾಸಗಳು
ಇರಬೇಕೆಂಬ ನಿಯಮವಿಲ್ಲ.
ಪ್ರಖ್ಯಾತ ಖಗೋಳಶಾಸ್ತ್ರಜ್ಞ ಹಾಗೂ ಗಣಿತ ಶಾಸ್ತ್ರಜ್ಞನಾಗಿದ್ದ
ಉಮರ್ ಖಯಾಮ್ ರೂಪಕದ ಭಾಷೆಯಲ್ಲಿ ಹೇಳಿದ ಕವಿತೆಗಳನ್ನು ಗೆಳೆಯರೂ
ದಾಖಲಿಸಿದರು ಎಂಬ ಮಾತಿದೆ’ ಫಿಟ್ಸ್
ಜೆರಾಲ್ಡ್ ಎಂಬಾತ ಈತನ ಕವಿತೆಗಳನ್ನು
ಇಂಗ್ಲೀಷ್ ಭಾಷೆಗೆ ಅನುವಾದಿಸಿದ ನಂತರ
ಉಮರ್ ಖಯಾಮ್ ಜಗತ್ತಿನ ಎಲ್ಲರ
ನಾಲಿಗೆಯ ಮೇಲೆ ನಲಿದಾಡತೊಡಗಿದ.
ಕಾವ್ಯ-1
ಬೆಳಕರಿದಿದೆ
ಸೂರ್ಯ ರಥವೇರಿದ್ದಾನೆ
ದೂರದ ಮಸೀದಿಯಿಂದ
ಕರೆಯೊಂದು ಕೇಳಿಬರುತ್ತಿದೆ
ಏಳು ಖಯ್ಯಾಮ್ ಎದ್ದೇಳು
ಮದ್ಯ ಕುಡಿ ಎಂದು.
ಕಾವ್ಯ-2
ಈ ಲೋಕದಾಚೆ ಏನಿದೆ
ಎಂದು ತಿಳಿದು ಬರಲು
ನನ್ನಾತ್ಮವನ್ನು ಅಜ್ಞಾತ ಲೋಕಕ್ಕೆ ಅಟ್ಟಿದೆ.
ಹಿಂತಿರುಗಿ ಬಂದ ಆತ್ಮ
ನನ್ನೆದುರು ನಿಂತು ನುಡಿಯಿತು
ಅಜ್ಞಾತ ಲೋಕದಲ್ಲಿರುವ
ನಾಕ-ನರಕ ಬೇರೇನೂ
ಅಲ್ಲ,
ಅದು ನಾನೆ ಎಂದು.
ನಾಲ್ಕು-ಹಾಫೀಜ್
(ಹಾಫೀಜ್)
ಪರ್ಷಿಯನ್ ಸೂಫಿ ಕವಿಗಳಲ್ಲಿ ಹಾಫೀಜ್
ಕೂಡ ಅತ್ಯಂತ ಪ್ರಸಿದ್ಧ ಕವಿ.
ಈತನ ಹೆಸರು ಉಮರ ಖಯಾಮನ ರುಬಾಯಿಗಳು
ಪ್ರಚಾರಕ್ಕೆ ಬಂದ ನಂತರ ಮಸುಕಾಯಿತು.
ಮದಿರೆ ಮತ್ತು ಮಾನಿನಿ ಈ
ಕುರಿತು ಲೌಕಿಕ ಮತ್ತು ಅಲೌಕಿಕ
ಪ್ರಜ್ಞೆಯಲ್ಲಿ ಶಕ್ತಿಯುತ ಕಾವ್ಯ ರಚಿಸಿದ ಕವಿಗಳಲ್ಲಿ
ಹಾಫಿಜ್ ಕೂಡ ಪ್ರಮಖ. ನಾನು
ಸತ್ತರೆ ನನ್ನ ಶವವನ್ನು ಕುಡುಕನ ವೇಷದಲ್ಲಿ ಕೊಂಡೊಯ್ಯಬೇಕು,
ನನ್ನ ಶವಕ್ಕೆ ಮದ್ಯದಿಂದ ಸ್ನಾನ
ಮಾಡಿಸಬೇಕು, ನನ್ನ ಶವಸಂಸ್ಕಾರ ಒಂದು
ಮದ್ಯದಂಗಡಿಯ ಬಳಿ ಜರುಗಿಸಬೇಕು, ಅಲ್ಲಿ
ದ್ರಾಕ್ಷಾರಸ ದೊರಕಲು ಅನಕೂಲವಾಗುವಂತೆ ದ್ರಾಕ್ಷಿಯ
ಬಳ್ಳಿಗಳು ಇರಬೇಕೆಂದು ಆಶಿಸಿದ ಅಪರೂಪದ ಕವಿ
ಹಾಫೀಜ್.
ಕಾವ್ಯ-1
ಮದ್ಯ ಮಾರುವ ಬೀದಿಯಲ್ಲಿ
ಪಾವಿತ್ರ್ಯ
ಎಂಬುದಕ್ಕೆ
ಮಧು ಬಟ್ಟಲಿಗೆ
ಇರುವ ಬೆಲೆ ಇಲ್ಲ
ಬೆಲೆಯೇ
ಬಾಳದ
ಪಾವಿತ್ರ್ಯ
ಅದೆಂತಾ ವಸ್ತು?
ಕಾವ್ಯ-2
ಮದ್ಯದಂಗಡಿಗೆ
ಒಂದೇ ಬಣ್ಣದಲ್ಲಿ
ಅದ್ದಿ ತೆಗೆದವರು ಮಾತ್ರ
ಹೋಗಬೇಕು.
ಅಲ್ಲಿ
ಸ್ವಾರ್ಥಿಗಳಿಗೆ
ಪ್ರವೇಶವಿಲ್ಲ.
ಕಾವ್ಯ-3
ಒಳಿತು-ಕೆಡುಕು
ಪವಿತ್ರ-ಅಪವಿತ್ರ
ಈ ದಾರಿಗಳು ನಿನಗಷ್ಟೇ ಇರಲಿ.
ನನ್ನ ಪಾಲಿಗೆ ಮದ್ಯದಂಗಡಿಯೇ
ಮಸೀದಿ ಮತ್ತು ಮಂದಿರ.
ಕಾವ್ಯ-4
ಕಾಬಕ್ಕೂ-
ಮಧುಶಾಲೆಗೂ
ಯಾವ ವೆತ್ಯಾಸಗಳಿಲ್ಲ
ನಿನ್ನ ಚಿತ್ತ ಎತ್ತ ಹೊದರೂ,
ಅವನು (ದೇವರು) ನಿನ್ನೆದುರಿಗೆ ಬರುವ.
ಐದು-ಜಲಾಲುದ್ದೀನ್ ರೂಮಿ
(ಜಲಾಲುದ್ದೀನ್ ರೂಮಿ)
ಹದಿಮೂರನೆಯ
ಶತಮಾನದಲ್ಲಿ ಬದುಕಿ ಬಾಳಿದ ಅತ್ಯಂತ
ಪ್ರತಿಭಾವಂತ ಸೂಫಿ ದಾರ್ಶನಿಕ ಕವಿ
ಜಲಾಲುದ್ದೀನ್ ರೂಮಿ ಪ್ರಮುಖನು. ಈತನ
ಪ್ರತಿಭೆಯ ಕುರಿತು ಹಿರಿಯ ಕವಿ
ಅತ್ತಾರ್ ರೂಪಕ ಭಾಷೆಯಲ್ಲಿ ಹೇಳಿರುವ
ಈ ಮಾತುಗಳಲ್ಲಿ ಯಾವ
ಅತಿಶಯೋಕ್ತಿಯೂ ಇಲ್ಲ. “ ನದಿಗಳು ಸಮುದ್ರ ಸೇರುವುದು
ಸಹಜ, ಆದರೆ, ಇಲ್ಲಿ ಸಮುದ್ರವೇ
ನದಿಯನ್ನು ಹಿಂಬಾಲಿಸಿದಂತಿದೆ” ರೂಮಿಯ
ಸಮಕಾಲೀನ ಹಿರಿಯ ಕವಿಗಳು ರೂಮಿಯನ್ನು ಆರಾಧಿಸಿ,
ಗೌರವಿಸಿದ್ದಕ್ಕೆ ಈ ಮೇಲಿನ ಮಾತುಗಳು
ಸಾಕ್ಷಿಯಾಗಿವೆ.
ತಾನು ಬದುಕಿದ 72 ವರ್ಷಗಳ ಅವಧಿಯಲ್ಲಿ ಕೇವಲ
38 ನೇ ವಯಸ್ಸಿಗೆ ವೈರಾಗ್ಯ ತಾಳಿದ ದಾರ್ಶನಿಕ
ರೂಮಿ. ಸೂಫಿ ಪರಂಪರೆಯ ಗುರು-ಶಿಷ್ಯ ಪರಂಪರೆಗೆ ಅರ್ಥವನ್ನು
ತಂದುಕೊಟ್ಟ ಮಹಾನ್ ಪ್ರತಿಭಾವಂತ. ತನ್ನ
ಗುರು ಶಂಸ್ ತಬ್ರೀಜ್ ನನ್ನು
ತನ್ನ ಉಸಿರಿನಂತೆ ಪ್ರೀತಿಸಿ ಧ್ಯಾನಿಸಿದವನು. ತನ್ನ ಗುರುವಿನ ಬಗ್ಗೆ
ಬರೆದ “ ದಿವಾನ್ ಶಂಸ್ ತಬ್ರೀಜ್”ೆಂಬ ಕೃತಿ ಹಾಗೂ ಮಸ್ನವಿ
ಪ್ರಕಾರದಲ್ಲಿ ಉತ್ತಮ ಕಾವ್ಯ ರಚನೆ
ಮಾಡಿದ ಸೂಫಿ ಕವಿಗಳಲ್ಲಿ ಜಲಾಲುದ್ದೀನ್ ರೂಮಿ ಅದ್ವಿತೀಯ.
ಈತನ ಪ್ರತಿಭೆಗೆ ಈ ಕಾವ್ಯದ ಸಾಲುಗಳು ಸಾಕ್ಷಿಯಾಗಿವೆ.
ಕಾವ್ಯ-1
ನಾನು ಪ್ರೇಮದ ಮಧುರಸ
ಕುಡಿದು ಉನ್ಮತ್ತನಾಗಿದ್ದೀನಿ.
ಇಹ-ಪರಗಳ ತ್ಯಜಿಸಿದ್ದೇನೆ
ಭಿಕ್ಷೆ ಮತ್ತು ಬಡತನ ಬಿಟ್ಟರೆ,
ನನ್ನ ಬಳಿ ಏನೂ
ಉಳಿದಿಲ್ಲ.
ಕಾವ್ಯ-2
ಓ ಮುಸಲ್ಮಾನರೇ
ನಾನೇನು
ಮಾಡಲಿ?
ನಾನ್ಯಾರೆಂಬುದು
ನನಗೆ ತಿಳಿದಿಲ್ಲ.
ನಾನು ಕ್ರೈಸ್ತನಲ್ಲ, ಯಹೂದಿಯಲ್ಲ,
ಫಾರಸಿಯೂ ಅಲ್ಲ,
ಮುಸಲ್ಮಾನನಂತೂ
ಮೊದಲೇ ಅಲ್ಲ.
ನಾನು ಮೂಡಣದವನಲ್ಲ
ಪಶ್ಚಿಮದವನೂ
ಅಲ್ಲ
ಪ್ರಕೃತಿಯ
ಗಣಿಯಲ್ಲ
ಆಕಾಶದಲ್ಲಿ
ಅಲೆಯುವ
ನಕ್ಷತವೂ
ಅಲ್ಲ.
ನಾನು ಮಣ್ಣಿನಿಂದ
ಅಥವಾ ಗಾಳಿಯಿಂದ
ಜನಿಸಿದವನಲ್ಲ.
ನೀರಿನಿಂದಲೂ
ಅಲ್ಲ
ಬೆಂಕಿಯಿಂದಲೂ
ಅಲ್ಲ
ನೆಲದಿಂದಂತೂ ಮೊದಲೇ
ಇಲ್ಲ.
ನಾನು ಈ ಜಗತ್ತಿನವನೂ ಅಲ್ಲ
ಆಕಾಶದವನೂ
ಅಲ್ಲ
ಸ್ವರ್ಗದ ವಾಸಿಯಲ್ಲ,
ನರಕದ ಜೀವಿಯಲ್ಲ.
ಆಡಂ- ಈವ್ ರೊಂದಿಗೆ
ನನಗೆ ಸಂಬಂಧವಿಲ್ಲ
ನನ್ನದು
ಸ್ಥಾನವಲ್ಲದ ಸ್ಥಾನ
ತಾಣವಲ್ಲದ
ತಾಣ
ನಾನು ಶರೀರವೂ ಅಲ್ಲ
ಪ್ರಾಣವೂ
ಅಲ್ಲ
ಪ್ರಾಣದ
ಪ್ರಾಣ.
(ಮುಂದುವರಿಯುವುದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ