ಭಾರತಕ್ಕೆ
ಸೂಪಿಗಳು ಆಗಮಿಸಿದ ಕುರಿತಂತೆ ಚರಿತ್ರೆಯ
ಪುಟಗಳಲ್ಲಿ ಹಾಗೂ ಯಾರು ಸೂಫಿಗಳು
ಎಂಬ ವಾಖ್ಯಾನಗಳಲ್ಲಿ ಹಲವಾರು
ಗೊಂದಲಗಳಿವೆ. ಎಂಟನೆಯ ಶತಮಾನದಲ್ಲಿ
ಕಡಲ ಮೇಲೆ ಭಾರತದ ಕರಾವಳಿ
ಪ್ರದೇಶಕ್ಕೆ ವಿಶೇಷವಾಗಿ ಕೇರಳಕ್ಕೆ (ಸುಲೇಮನ್ ಆಳ್ವಿಕೆ ಅವಧಿಯಲ್ಲಿ)
ಬಂದ ಹಲವು ಸಂತರನ್ನು ಸೂಫಿಗಳು
ಎಂದು ಭಾರತದ ಕಟ್ಟಾ ಸಂಪ್ರದಾಯ
ಮನಸ್ಸಿನ ಮುಸ್ಲಿಂ ಇತಿಹಾಸಕಾರರು ವಾದಿಸುವುದುಂಟು.
ವಾಸ್ತವವಾಗಿ ಅರಬ್ ನಿಂದ ಬಂದ
ಧರ್ಮಪ್ರಚಾರಕರಲ್ಲ್ಲಿ ಯಾವ ಸೂಫಿ ಲಕ್ಷಣಗಳು
ಕಂಡುಬರುವುದಿಲ್ಲ.
ಸೂಫಿಸಂ
ವಿಚಾರಧಾರೆಯ ಅಂತಃಸತ್ವ ಎಂದು ನಾವು ಕರೆಯಬಹುದಾದ
ತಸ್ವುಪ್ ಅಂದರೆ, ಅನುಭಾವ
ಅಂಶವನ್ನು ಆಧಾರವಾಗಿಟ್ಟುಕೊಂಡು ಗಮನಿಸಿದರೆ ಇವರುಗಳನ್ನು ಸೂಫಿ ಸಂತರು ಎಂದು
ಕರೆಯಲು ಮನಸ್ಸು ಒಪ್ಪುವುದಿಲ್ಲ. ಕಡಲಮೇಲೆ
ಭಾರತಕ್ಕೆ ಬಂದ ಸೂಫಿಗಳು ಎಂದು
ಕರೆಯುವವರೆಲ್ಲಾ ಕ್ರೈಸ್ತ ಮಿಷನರಿಗಳಂತೆ ಧರ್ಮಪ್ರಚಾರ
ಮಾಡಿದವರು, ಪ್ರಾರ್ಥನಾ ಮಂದಿರ ನಿಮಿಸಿದವರು ಮತ್ತು
ಸ್ಥಳೀಯ ಜನರನ್ನು ಮತಾಂತರಗೊಳಿಸಿದವರು. ಇವೊತ್ತಿನ
ಕೇರಳ, ಕಾಸರಗೂಡು ಮತ್ತು ದಕ್ಷಿಣ ಕನ್ನಡ
ಜಿಲ್ಲೆಯ ಬಹಳಷ್ಟು ಮುಸ್ಲಿಂರು ಇವರಿಂದ ಮತಾಂತಗೊಂಡವರು.
ಅಧಿಕೃತವಾಗಿ
ಪರ್ಷಿಯಾದಿಂದ ಕಾಲ್ನಡಿಗೆಯಲ್ಲಿ ಮತ್ತು ಭಾರತಕ್ಕೆ ಲಗ್ಗೆ
ಇಟ್ಟ ಇಸ್ಲಾಂ ದೊರೆಗಳ ಜೊತೆ
ಬಂದ ಸೂಫಿಗಳು ನಿಜವಾದ ಸೂಪಿ
ಸಂತರು. ಇವರ ಆಗಮನವನ್ನು ನಮ್ಮ
ನಡುವಿನ ಸಾಂಸ್ಕತಿಕ ಚಿಂತಕ ಡಾ. ರಹಮತ್
ತರೀಕೆರೆ “ ಭಾರತಕ್ಕೆ ಕುದುರೆ ಗೊರಸುಗಳ( ಹೆಜ್ಜೆ
ಶಬ್ಧ) ಜೊತೆಗೆ ಕಂಬಳಿ ಮತ್ತು
ಭಿಕ್ಷಾಪಾತ್ರೆಗಳು ಸಹ ಬಂದವು” ಎಂದು ಅರ್ಥಪೂರ್ಣವಾಗಿ
ವಿಶ್ಲೇಷಿಸಿದ್ದಾರೆ.
ಭಾರತಕ್ಕೆ
ಆಗಮಮಿಸಿದ ಸೂಫಿಗಳಲ್ಲಿ ಹಲವರು ರಾಜಾಶ್ರಯದಲ್ಲಿ ಬದುಕಿದರು,
ಮತ್ತೇ ಹಲವರು
ದರ್ವೆಶಿಗಳಂತೆ, ಫಕೀರರಂತೆ ರಾಜಾಶ್ರಯ ಮತ್ತು ಪ್ರಭತ್ವವನ್ನು ಧಿಕ್ಕರಿಸಿ
ಜನರ ನಡುವೆ ಭಾವಕ್ಯತೆಯ ಸಂಗಮದಂತೆ
ಬದುಕಿದರು. ಈ ಕಾರಣಕ್ಕಾಗಿ ಇವರೆಲ್ಲರೂ ಭಾರತದ ಜನ ಮಾನಸದಲ್ಲಿ
ಧರ್ಮ ಮತ್ತು ಜಾತಿಯ ಗಡಿಗಳನ್ನೂ
ಮೀರಿ ಜೀವಂತವಾಗಿದ್ದಾರೆ. ಜೊತೆಗೆ
ಭಾರತದ ನಾಥರು, ಸಿದ್ದರು, ಬೌದ್ದರು
ಇವರುಗಳ ಜೊತೆ ಅನುಸಂಧಾನ ನಡೆಸಿ,
ಭಾರತದ ಸಂಸ್ಕತಿಯ ಬಹು
ಮುಖ್ಯ ಕೊಡುಗೆಗಳಾದ ಧ್ಯಾನ, ಯೋಗ, ಭಕ್ತಿಯ
ಪರಾಕಾಷ್ಟೆ, ಸಿದ್ಧ ಔಷದ ಇವುಗಳನ್ನು
ತಮ್ಮ ಸೂಫಿ ವಿಚಾರಧಾರೆ ಒಳಪಡಿಸಿಕೊಂಡರು.
ಬಂದೆಲ್ ಶಾ
ಭಾರತದಲ್ಲಿ
ಸೂಫಿಸಂ ವಿಚಾರ ಧಾರೆಯ ಅತಿ
ಮುಖ್ಯ ಕೊಡುಗೆಯೆಂದರೆ, ಇಸ್ಲಾಂ ಧರ್ಮ ಎಂದರೆ,
ಖಡ್ಗ, ಹಿಂಸೆ ಮತ್ತು ಆಕ್ರಮಣ ಎಂಬ ನಂಬಿಕೆಯನ್ನು
ಹೋಗಲಾಡಿಸಿ, ಜನರ ಮಧ್ಯೆ ಭಾವಕ್ಯತೆಯ
ಸೇತುವೆಯನ್ನು ನಿರ್ಮಾಣ ಮಾಡಿದ್ದು. ದೆಹಲಿಯಲ್ಲಿ
ಮೊಗಲ್ ದೊರೆಗಳು ಮತ್ತು ಸಿಖ್ಖರ
ನಡುವೆ ಯುದ್ಧಗಳು ನಡೆಯುತ್ತಿದ್ದಾಗ, ಪಂಜಾಬಿನಲ್ಲಿ ಅನೇಕ ಸೂಫಿ ಸಂತರು
ಮಾನವೀಯತೆಯ ಬೀಜ ಬಿತ್ತಿದರು. ಈ
ದಿಶೆಯಲ್ಲಿ ಪಂಜಾಬಿನ ಬಂದೆಲ್ ಶ
ಅತಿದೊಡ್ಡ ಸೂಫಿ ಸಂತ. 1680 ರಲ್ಲಿ
ಇಂದಿನ ಲಾಹೋರ್ ಪ್ರಾಂತ್ಯದ ಕೌಸೂರ್
ಜಿಲ್ಲೆಯ ಪಂಡಕಿ ಎಂಬಲ್ಲಿ ಜನಿಸಿದ
ಈ ಸಂತನ ಕುರಿತಂತೆ
ಹಾಡುವ ಖವ್ವಾಲಿಗಳಲ್ಲಿ ಈತನ ಜೀವನ ಸಾಧನೆಯ
ಅಂಶಗಳಿವೆ, ಬುಲ್ಲೆ
ಶಾ ಪಂಜಾಬಿ ಭಾಷೆಯಲ್ಲಿ ಬರೆದ
ಅನೇಕ ಸೂಫಿ ಕಾವ್ಯಗಳು ಇವೊತ್ತಿಗೂ
ಜನಪ್ರಿಯವಾಗಿವೆ. ಸಿಖ್ಖರ ಪರಮಗುರು ಗುರುನಾನಕ್
ಕೂಡ ಸೂಫಿ ವಿಚಾರಧಾರೆಯಿಂದ ಪ್ರಭಾವಿತರಾಗಿ
ಸೂಫಿ ಸಂತರಂತೆ ತಮ್ಮ ಉಡುಪು
ಧರಿಸುತ್ತಿದ್ದರು. ಮೊಗಲ್ ದೊರೆ ಹಾಗೂ
ಔರಂಗಜೇಬನ ಸಹೋದರ ದಾರಾಶಿಕೊ(1615-1659) ತನ್ನ
ಸಹೋದರನಿಂದ ಕೊಲೆಯಾಗುವ ಮುನ್ನ, ಅಮೃತಸರದ ಸ್ವರ್ಣದೇಗುಲಕ್ಕೆ
ಅಸ್ತಿಭಾರ ಹಾಕಿದ್ದನು. ಸಿಖ್ಖರ
ಗುರುವಾಣಿಯಲ್ಲಿ ಸೂಫಿ ಕಾವ್ಯದ ಲಕ್ಷಣಗಳನ್ನು
ಮತ್ತು ಚಹರೆಗಳನ್ನು ನಾವು ಕಾಣಬಹುದು,
ಭಾರತದ
ಸೂಫಿ ಗುರುಗಳು ಅಥವಾ ಸಂತರಲ್ಲಿ
ಅತಿ ಮುಖ್ಯರಾದವರೆಂದರೆ,, ಖ್ವಾಜಾ ಮೊಹಿದ್ದೀನ್ ಚಿಸ್ತಿ,
ಕುತ್ಬುದ್ದೀನ್, ನಿಜಾಮುದ್ದೀನ್ ಹಾಗೂ ಫರೀದ್ದೀನ್
ಪ್ರಮುಖರು. ಇವರೆಲ್ಲರೂ ಆಫ್ಘಾನಿಸ್ಥಾನದ ಮೂಲದವರು. ಖ್ವಾಜಾ ಮೊಹಿದ್ದೀನ್, 1142 ರಲ್ಲಿ
ಶಹಿಬುದ್ದೀನ್ ಘೋರಿ ಎಂಬ ಮುಸ್ಲಿಂ
ದೊರೆಯ ಜೊತೆ ಭಾರತಕ್ಕೆ ಬಂದು
ಅಂತಿಮವಾಗಿ 1192ರಲ್ಲಿ ಅಜ್ಮೀರ್
ನಲ್ಲಿ ನೆಲೆ ನಿಂತು ಅಲ್ಲಿಯೆ
ಮರಣಹೊಂದಿದರು. ಮೊಗಲ್ ದೊರೆ ಅಕ್ಬರ್
ಈ ಸಂತನ ಪರಮ
ಅನುಯಾಯಿಯಾಗಿದ್ದ. ಕುತ್ಬುದ್ದೀನ್ 1265 ರಲ್ಲಿ ಭಾರತಕ್ಕೆ ಬಂದರೆ,
1335 ರಲ್ಲಿ ನಿಜಾಮುದ್ದಿನ್ (ಹಜರತ್ ನಿಜಾಮುದ್ದಿನ್ ಔಲಿಯ)
ಭಾರತಕ್ಕೆ ಬಂದರು. ಈ ಇಬ್ಬರು
ಸಂತರು ಹಿಂದೂ-ಮುಸ್ಲಿಂ ಭಾವ್ಯಕತೆಗೆ
ಶ್ರಮಿಸುತ್ತಾ ದೆಹಲಿಯಲ್ಲಿ ನೆಲೆ ನಿಂತರು.
ದೆಹಲಿಯ ನಿಜಾಮುದ್ದೀನ್ ದರ್ಗಾ
ಅಜ್ಮೀರ್ ದರ್ಗಾ
ಫರೀದ್ದೀನ್
ಈಗಿನ ಪಾಕಿಸ್ಥಾನಕ್ಕೆ ಸೇರಿದ ಪಠಾನ್ ನಲ್ಲಿ
ನೆಲೆ ನಿಂತರು. ಇವರೆಲ್ಲರೂ ಸೂಫಿ
ವಿಚಾರಧಾರೆಯ ಶಾಖೆಗಳಾದ ಚಿಸ್ತಿಯಾ ಗುಂಪಿಗೆ ಸೇರಿರುವುದು ವಿಶೇಷ,
( ಇತರೆ ಗುಂಪುಗಳೆಂದರೆ, ನಶ್ಕ್ ಬಂದಿಯಾ, ಸುಹಾರ್
ವಾರ್ಡಿ ಮತ್ತು ಖ್ವಾದ್ರಿಯ) ಆದರೆ
ಭಾರತದಲ್ಲಿ ಬಲವಾಗಿ ಬೇರುಬಿಟ್ಟಿದ್ದು ಚಿಸ್ತಿಯಾ
ಗುಂಪಿನ ಸೂಫಿಗಳು ಮಾತ್ರ. ಭಾರತದ
ಭಕ್ತಿ ಪರಂಪರೆಯನ್ನು ಅಳವಡಿಸಿಕೊಂಡು, ಎಲ್ಲೆಡೆ ಇವರು ಪ್ರಸಿದ್ಧರಾದರು.
ದೆಹಲಿಯ ದೊರೆ ಮಹಮ್ಮದ್ ಬಿನ್
ತೊಘಲಕ್ ದೆಹಲಿಯಿಂದ ದೇವಗಿರಿಗೆ ( ಇಂದಿನ ಮಹಾರಾಷ್ಟ್ರದ ಔರಂಗಾಬಾದ್)
ರಾಜಧಾನಿಯನ್ನು ವರ್ಗಾಯಿಸಿದಾಗ ಅವನ ಜೊತೆ ದಕ್ಷಿಣ
ಭಾರತಕ್ಕೆ ಆಗಮಿಸಿದ ಬಂದೇ ನವಾಜ್
ಎಂಬ ಸಂತ ( ಈತ ದೆಹಲಿಯ
ಹಜರತ್ ನಿಜಾಮುದ್ದೀನ್ ಅವರ ಶಿಷ್ಯ) ಕರ್ನಾಟಕದ
ಗುಲ್ಬರ್ಗಾದಲ್ಲಿ ನೆಲೆಸಿದನು. ಹೀಗೆ ಭಾರತದ ಭಕ್ತಿ
ಪರಂಪರೆ ಹಾಗೂ ಸ್ಥಳಿಯ ಸಂಸ್ಕತಿಯನ್ನು
ಒಳಗೊಳ್ಳುತ್ತಾ ಬೇರೂರಿದ ಸೂಫಿ ಪರಂಪರೆ
ಇಂದು ಇಡೀ ಭಾರತದ ನೆಲದಲ್ಲಿ
ಇಲ್ಲಿನ ಜನರ ಬದುಕಿನಲ್ಲಿ ಧರ್ಮ,
ಭಾಷೆ, ಜಾತಿಗಳನ್ನು ಮೀರಿ ಮಿಳಿತಗೊಂಡಿದೆ ಇದಕ್ಕೆ
ಉದಾಹರಣೆಯಾಗಿ ಅನೇಕ ಸೂಫಿ ಸಂತರ
ಗೋರಿಗಳಿಗೆ ( ದರ್ಗಾ) ನಮ್ಮ ಹಿಂದುಗಳು
ಭಕ್ತಿಯಿಂದ ನಡೆದುಕೊಳ್ಳುವುದನ್ನು ನಾವು ಗಮನಿಸಬಹುದು.
ಭಾರತದ
ಸೂಫಿ ಪರಂಪರೆಯ ನೆಲೆಯಲ್ಲಿ ಸುಂದರ
ಸೂಫಿ ಕಾವ್ಯ ರಚಿಸಿದ ಕವಿಗಳಲ್ಲಿ
ಅಮೀರ್ ಖುಷ್ರು ಮತ್ತು ಮಹಾತ್ಮ
ಕಭೀರ್ ಅತಿ ಮುಖ್ಯರಾದವರು.
ಅಮೀರ್ ಖುಷ್ರೂ
14 ನೆ
ಶತಮಾನದಲ್ಲಿ ಬದುಕಿದ್ದ ಅಮೀರ್ ಖುಷ್ರು ಭಾರತದ
ಅತಿ ದೊಡ್ಡ ಸೂಪಿ ಕವಿ
ಮತ್ತು ಸಂಗೀತಗಾರ. (1253-1325) ಟರ್ಕ್ ಮೂಲದ ಯೋಧ
ಮತ್ತು ಭಾರತದ ರಜಪೂತ ಮಹಿಳೆ
ದಂಪತಿಗಳಿಗೆ ಜನಿಸಿದ ಅಮೀರ್ ಖುಷ್ಟು
ತನ್ನ ಜೀವಿತಾವಧಿಯಲ್ಲಿ ಮೂರು ರಾಜಮನೆತಗಳಲ್ಲಿ ಅಸ್ಥಾನದ
ಕವಿಯಾಗಿ, ಸಂಗೀತಗಾರನಾಗಿ ಸೇವೆ ಸಲ್ಲಿಸಿದವನು. ದೆಹಲಿಯ
ಹಜರತ್ ನಿಜಾಮುದ್ದೀನ್ ಅವರ ಪರಮ ಆರಾಧಕ
ಮತ್ತು ಶಿಷ್ಯನಾಗಿದ್ದ ಅಮೀರ್ಖುಷ್ರು ತಾನು
ನಿಧನಾನಂತರ ನಿಜಾಮುದ್ದೀನ್ ಸಮಾಧಿ ಬಳಿ ಮಣ್ಣು
ಮಾಡಬೇಕೆಂದು ವಿನಂತಿಸಿಕೊಂಡಿದ್ದ. ಅದರಂತೆ ಅವರ ಕಾಲು
ಬಳಿ ಖುಷ್ರು ಸಮಾಧಿಯನ್ನು ನಿರ್ಮಿಸಲಾಗಿದೆ.
ದೆಹಲಿಯ
ನಿಜಾಮುದ್ದೀನ್ ದರ್ಗಾದ ಬಳಿ ಅವನ
ಸೂಫಿ ಪ್ರೇಮ ಕಾವ್ಯಗಳನ್ನು ಇಂದಿಗೂ
ಹಾಡಲಾಗುತ್ತಿದೆ.
ಈ
ಧರೆಯ ಮೇಲೆ
ಸ್ವರ್ಗವೆನ್ನುವುದು
ಇರುವುದಾದರೆ,
ಅದು
ಇಲ್ಲೆ, ಇಲ್ಲೆ, ಇಲ್ಲೆ,
ಹಾಗೂ
ಖುಷ್ರು,
ಪ್ರೇಮ ನದಿಯ
ಹರಿವು
ತಿರುವು-ಮುರುವಾಗಿದೆ
ಇದರೊಳೆಗೆ
ಇಳಿದವನು
ಮುಳುಗುತ್ತಾನೆ,
ಆದರೆ
ಮುಳುಗಿದವನು
ಭವಸಾಗರವ
ದಾಟುತ್ತಾನೆ.
ಇವುಗಳು ಅಮೀರ್ ಖುಷ್ರು ವಿನ
ಕಾವ್ಯದ ತುಣುಕುಗಳು.
ಮಹಾತ್ಮ ಕಭೀರ್
ಇನ್ನೂ
ಮಹಾತ್ಮ ಕಭೀರನದು ಈತ ಸೃಷ್ಟಿಸಿದ ಭಕ್ತಿ
ಮತ್ತು ಸೂಫಿ ಕಾವ್ಯಗಳು ಹಿಂದು-ಇಸ್ಲಾಂ ಧರ್ಮಗಳ ಭಾವಕ್ಯತೆ
ಕೊಂಡಿಯ ಪ್ರತೀಕಗಳಾಗಿವೆ. ವಾರಾಣಿಸಿಯಲ್ಲಿ ಹಿಂದೂ ಬ್ರಾಹ್ಮಣ ವಿಧವೆಗೆ
ಜನಿಸಿದ ಕಭಿರ್ ನನ್ನು ಅವನ
ತಾಯಿ ಗಂಗಾ ನದಿಯ ತಟದಲ್ಲಿ
ಮಲಗಿ ಹೋದಾಗ ನೇಯ್ಗೆ
ಕಸುಬಿನ ಮುಸ್ಲಿಂ ಕುಟುಂಬವೊಂದು ಈತನನ್ನು
ಸಾಕಿ ಸಲುಹಿತು. ಹಾಗಾಗಿ ಕಭೀರ್ ಎರಡು
ಧರ್ಮಗಳ ಸಂಗಮದಂತೆ ಬದುಕಿ ಬಾಳಿದ.( 1440-1518) ಅವನ
ಭಕ್ತಿ ಪರವಶತೆಯ ಕಾವ್ಯ ಮತ್ತು
ಪರಧರ್ಮ ಸಹಿಷ್ಟುತೆಯ ಕಾವ್ಯ ಇವುಗಳು
ದೋಹಾ ಎಂಬ
ಹೆಸರಿನಲ್ಲಿ ಉತ್ತರ ಭಾರತದಲ್ಲಿ ಇಂದಿಗೂ
ಜನಪ್ರಿಯವಾಗಿವೆ.
ಹೂ
ಅರಸುತ್ತಾ
ಉದ್ಯಾನವನಕ್ಕೆ
ತೆರಳಬೇಡ
ನಿನ್ನ
ಶರಿರವೇ
ಹೂ
ಗಿಡವಾಗಿರುವಾಗ
ಹೂವನೇತೆಕೆ
ಅರಸುವೆ?
ಬಾ
ಇಲ್ಲಿ ಕುಳಿತಿಕೊ
ನಿನ್ನ
ದೇಹದಲ್ಲಿ ಸಾವಿರ
ಕಮಲಗಳು
ಅರಳುವುದ
ನೀನು
ಗಮನಿಸು.
ಆದಿಲ್ ಶಾ
ಭಾರತದಲ್ಲಿ
ಸೂಫಿ ವಿಚಾರಧಾರೆ ಯಾವ ಯಾವ ರೂಪಗಳಲ್ಲಿ ನಮ್ಮ ಸಂಸ್ಕತಿಯಲ್ಲಿ ಮಿಳಿತವಾಗಿದೆ.
ಎಂಬುದನ್ನು ಗುರುತಿಸುವುದು ನಿಜಕ್ಕೂ ಕಷ್ಟದ ಕೆಲಸ.
ಬಿಜಾಪುರದ ಎರಡನೇಯ ಇಬ್ರಾಹಿಂ ಕಿತಾಬ್
ಎ ನವರಸ್ ಕೃತಿ
ರಚಿಸಿ, ಅದರಲ್ಲಿ ಸರಸ್ವತಿ ದೇವರರನ್ನು
ಸ್ತುತಿಸಿದ್ದಾನೆ. ಇವನ ಭಾವಕ್ಯಕದ ಬೇರುಗಳನ್ನು
ಹುಡುಕುತ್ತಾ ಹೊರಟರೆ, ಈತನ ಅಜ್ಜ
ಬಿಜಾಪುರದ
ಆದಿಲ್ ಶಾಹಿ ಮೂಲತಃ ಪಷಿಯಾ
ದೇಶದಿಂದ ಬಂದವನು. ಅಲ್ಲಿನ ದೊರೆ
ಮುರಾದ್ ನ ಎರಡನೇ ಪುತ್ರನಾಗಿ
ಜನಿಸಿದ್ದ್ದ ಆದಿಲ್ ಶಾಹಿ, ತಂದೆಯಿಂದ
ರೂಪಿತವಾಗಿದ್ದ ಕೊಲೆಯ ಸಂಚನ್ನು ತಾಯಿಯಿಂದ
ತಿಳಿದು, ಅರಮನೆಯಿಂದ ತಪ್ಪಿಸಿಕೊಂಡು ವ್ಯಾಪಾರಸ್ಥರೊಡನೆ ಭಾರತಕ್ಕೆ ಬಂದವನು, ನಂತರ ಗುಲ್ಬರ್ಗಾದ
ಬಹುಮನಿ ಸುಲ್ತಾನನ ಬಳಿ ಸಿಪಾಯಿಯಾಗಿ ನೇಮಕಗೊಂಡವನು.
ಅವನ ಸೇವೆಯನ್ನು ಮೆಚ್ಚಿ ಬಹಮನಿ ಸುಲ್ತಾನರು
ಆದಿಲ್ ಶಾಹಿಯನ್ನು ತಮ್ಮ ಅಧೀನದಲ್ಲಿದ್ದ ಬಿಜಾಪುರದ
ಮಾಂಡಲೀಕನನ್ನಾಗಿ ಮಾಡಿದರು. ವಿಜಯನಗರ ಅರಸರ ಜೊತೆ
ನಡೆದ ಯುದ್ದದಲ್ಲಿ ಬಹುಮನಿ ಸುಲ್ತಾನರ ಅಡಳಿತ
ಪತನಗೊಂಡಾಗ ಆದಿಲ್ ಶಾಹಿ ಬಿಜಾಪುರದ
ಸ್ವತಂತ್ರ ದೊರೆಯಾಗಿ ರೂಪುಗೊಂಡ, ತಾನು ಬಿಜಾಪುರದ ದೊರೆಯಾದರೂ ತಾನು ಹುಟ್ಟಿ ಬೆಳೆದ
ನಾಡಾದ ಪಷಿಯಾ ದೇಶದ ಸೂಫಿ
ಸಂಸ್ಕøತಿಯ ಅಂತಃಸತ್ವವಾದ ಭಾವಕ್ಯತೆಯನ್ನು
ತನ್ನ ಆಡಳಿತಕ್ಕೆ ರೂಢಿಸಿಕೊಳ್ಳುವುದರ ಜೊತೆಗೆ ತನ್ನ ಮಗ
ಎರಡನೇ ಆದಿಲ್ ಶಾಹಿ ಹಾಗೂ
ಮೊಮ್ಮಗ ಇಬ್ರಾಹಿಂಗೂ ಇದನ್ನು
ಧಾರೆಯೆರೆದ. ಹಾಗಾಗಿ ಬಿಜಾಪುರದಲ್ಲಿ ಆದಿಲ್
ಶಾಹಿ ಆಳ್ವಿಕೆಯಲ್ಲಿ ನೂರಾರು ಸೂಫಿ ಸಂತರು
ಬಂದು ನೆಲೆ ನಿಂತರು.
ಎರಡನೇ ಇಬ್ರಾಹಿಂ
ಈಗಲೂ
ಸಹ ಬಿಜಾಪುರ ನಗರವೊಂದರಲ್ಲಿ ಮುವತ್ತಕ್ಕೂ
ಹೆಚ್ಚು ಸೂಫಿ ಸಂತರ ಗೋರಿಗಳಿವೆ.
ಈ ಕಾರಣದಿಂದಾಗಿ ಬಿಜಾಪುರ
ಮತ್ತು ಗುಲ್ಬರ್ಗ ದಲ್ಲಿ ತೀಕ್ಷ್ಣವಾಗಿ
ಪ್ರಭಾವ ಬೀರಿದ ಸೂಫಿ ವಿಚಾರಧಾರೆ
ಹೈದರಾಬಾದ್ ಕರ್ನಾಟಕ
ಮತ್ತು ಉತ್ತರ ಕರ್ನಾಟಕದ ಹಲವು
ತತ್ವ ಪದಕಾರರಮೇಲೆ ದಟ್ಟ ಪ್ರಭಾವ ಬೀರಿದೆ,
ಇವರಲ್ಲಿ ಶಿಶುನಾಳ ಷರೀಪ, ಸಾವಳಗಿ
ಶಿವಲಿಂಗ, ತಿಂತಿಣಿ ಮೋನಪ್ಪ, ಶಿರಹಟ್ಟಿ
ಫಕೀರೇಶ್ವರ, ಕೊಡೇಕಲ್ ಬಸವಣ್ಣ ಮುಖ್ಯರಾದವರು.
ಗೆಳೆಯರೇ
ಖಲೀಲ್
ಗಿಬ್ರಾನ್ ನ ಒಂದು ಪ್ರಸಿದ್ಧ
ಮಾತಿದೆ. “ನನ್ನಮ್ಮ ಕವಿಯಾಗಿರಲಿಲ್ಲ, ಆದರೆ
ಕವಿತೆಯಾಗಿ ಬದುಕಿದಳು” ಅಂತಾ, ಬಹು
ಮುಖಿ ಸಂಸ್ಕøತಿಯ ನೆಲವಾದ
ಭಾರತದಲ್ಲಿ ಎಲ್ಲರೂ ಸೂಫಿ ಸಂತರಂತೆ
ಅಥವಾ ಕವಿಗಳಂತೆ ಬದುಕದಿದ್ದರೂ ಈ ನೆಲದ ಹಲವರ
ಮಾತುಗಳಲ್ಲಿ ಸೂಫಿ ಸಂತರ ಗುಣವಿದೆ.
ಎರಡು ದಶಕಗಳ ಹಿಂದೆ ಲಂಕೇಶರು
ಹೇಳಿದ “ ಇಟ್ಟಿಗೆ ಪವಿತ್ರವಲ್ಲ, ಜೀವ
ಪವಿತ್ರ “ ಎಂಬ ಮಾತಾಗಲಿ ಅಥವಾ ಭಾರತ
ವಿಭಜನೆಯ ಸಂದರ್ಭದಲ್ಲಿ ನಮ್ಮ ಪಂಡಿತ ರಾಜಗುರುಗಳಿಗೆ
( ಹಿಂದೂಸ್ಥಾನಿ ಗಾಯಕ) ಗುರುವಾಗಿದ್ದ ಬಡೆ
ಮಿಯಾ ಖಾನ್ ಅವರು ಹೇಳಿದ “ ಇಲ್ಲಿನ ಜನಕ್ಕೆ
ಸಂಗೀತ ಅರ್ಥವಾಗಿದ್ದರೆ, ಭಾರತ ವಿಭಜನೆಯಾಗುತ್ತಿರಲಿಲ್ಲ ಎಂಬ ಮಾತು
ಮತ್ತು ಶಹನಾಯ್ ವಾದಕ ಬಿಸ್ಮಿಲ್ಲಾ
ಖಾನರನ್ನು ಅಮೇರಿಕಾದಲ್ಲಿ ವಾಸ ಮಾಡಲು ಆಹ್ವಾನಿಸಿದಾಗ,
“ ನನ್ನ ಜೊತೆ ಗಂಗಾ ನದಿಯನ್ನು
ಮತ್ತು ಕಾಶಿ ವಿಶ್ವನಾಥನನ್ನು ತಂದು
ಕೊಟ್ಟರೆ ನಾನು ಅಮೇರಿಕಾಕ್ಕೆ ಬರಲು
ಸಿದ್ಧ” ಎಂದು ಹೇಳಿದ ಮಾತುಗಳು
ಇವೆಲ್ಲವೂ ನನಗೆ ಸೂಫಿ ಸಂತರ
ಮಾತಿನಂತೆ ತೋರಿವೆ,
ನಾವು
ಬದುಕುತ್ತಿರುವ ವರ್ತಮಾನದ ಬದುಕಿನಲ್ಲಿ ಹಲವು ರೂಪಗಳಲ್ಲಿ ನಮ್ಮನ್ನು
ಆವರಿಸಿಕೊಂಡಿರುವ ಸೂಫಿ ತತ್ವ ಇವೊತ್ತಿನ
ಸಮಾಜದ ಎಲ್ಲಾ ವಿಕಾರಗಳಿಗೆ ಮತ್ತು
ಮನುಷ್ಯನ ವಿಕೃತಿಗಳಿಗೆ ಮದ್ದಾಗಬಲ್ಲದು ಎಂಬುದು ನನ್ನ ಧೃಢವಾದ
ನಂಬಿಕೆ.
(ಮೈಸೂರು
ರಂಗಾಯಣದ ವಿಚಾರ ಸಂಕಿರಣದಲ್ಲಿ ಮಂಡಿಸಿದ
ಪ್ರಭಂಧ)
ಮುಗಿಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ