Thursday, 27 February 2014

ದೃಶ್ಯ ಬ್ರಹ್ಮನ ಅಗಲಿಕೆಯ ನೋವುಕಳೆದ ಪೆಬ್ರವರಿ ಹದಿನೆಂಟರೆಂದು ನಮ್ಮನ್ನು ಅಗಲಿದ ಪ್ರಖ್ಯಾತ ಛಾಯಾಚಿತ್ರಗ್ರಾಹಕ, ಮತ್ತು ಕನ್ನಡಿಗ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದ ಟಿ.ಎಸ್. ನಾಗರಾಜನ್ ಅವರ ಸಾವಿನ ಸುದ್ಧಿ, ರಾಹುಲ್ ಮತ್ತು ನರೇಂದ್ರಮೋದಿಯವರ ಚುನಾವಣಾ ಪ್ರಚಾರದ ನಡುವೆ ಪ್ರಮುಖ ಸುದ್ಧಿಯಾಗಲಿಲ್ಲ. ಇಂದಿನ ತಲೆಮಾರಿನ ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮಕ್ಕೆ ಅಪರಿಚಿತರಾಗಿ ಉಳಿದ ಟಿ.ಎಸ್.ಸತ್ಯನ್ ಮತ್ತು ಟಿ.ಎಸ್.ನಾಗರಾಜನ್ ಎಂಬ ಇಬ್ಬರು ಮೈಸೂರು ಮೂಲದ ಛಾಯಾಗ್ರಾಹಕ ಸಹೋದರರು ತಮ್ಮ ಕಪ್ಪು ಬಿಳುಪಿನ ಚಿತ್ರಗಳ ಮೂಲಕ ಕೇವಲ ಭಾರತ ಮಾತ್ರವಲ್ಲ ಜಗತ್ತಿನ ಪತ್ರಿಕೋದ್ಯಮದಲ್ಲಿ ತಮ್ಮ ಪ್ರತಿಭೆಯ ಛಾಪು ಮೂಡಿಸಿದವರು.
ಛಾಯಾಚಿತ್ರ ಕಲೆಯನ್ನು ಒಂದು ತಪಸ್ಸಿನಂತೆ ಧ್ಯಾನಿಸಿದ ಟಿ.ಎಸ್. ನಾಗರಾಜನ್ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಕೇರಳದ ಅಪರೂಪದ ಮನೆಗಳನ್ನು ಸೆರೆಹಿಡಿದು ಭಾರತದ ಸಂಸ್ಕೃತಿಯನ್ನು ತಮ್ಮ ಚಿತ್ರಗಳ ಮೂಲಕ ದಾಖಲಿಸಿದ ಅಪರೂಪದ ಮಹಾನ್  ಕಲಾವಿದ.

ಮೈಸೂರು ನಗರದಲ್ಲಿ 1932 ರಲ್ಲಿ ಜನಿಸಿದ ನಾಗರಾಜನ್ ತಮ್ಮ ಬಾಲ್ಯದ ವಿದ್ಯಾಭ್ಯಾಸ ಮತ್ತು ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿ, ನಂತರ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಚಿತ್ರಗ್ರಾಹಕರಾಗಿ ವೃತ್ತಿ ಆರಂಭಿಸಿದರು. ಕೇಂದ್ರ ವಾರ್ತಾ ಇಲಾಖೆಯು ಪ್ರಕಟಿಸುವ “ ಯೋಜನಾ” ಎಂಬ ಪತ್ರಿಕೆಗೆ ಮುಖ್ಯ ಛಾಯಾಗ್ರಾಹಕರಾಗಿ ನೇಮಕಗೊಂಡ ನಾಗರಾಜನ್ ತಮ್ಮ ನಿಕಾನ್ ಕ್ಯಾಮರಾವನ್ನು ಹೆಗಲಿಗೇರಿಸಿ ಇಡೀ ದೇಶವನ್ನು ಸುತ್ತಿದವರು.
ಭಾರತದ ದೇಗುಲಗಳು, ವಾಸ ಸ್ಥಳವಾದ ಮನೆಗಳು, ಅಲ್ಲಿನ ವಿಶಿಷ್ಟ ಸಂಸ್ಕೃತಿ, ಜನರು ಮತ್ತು ಅವರ ಉಡುಪು ಇವುಗಳನ್ನು ಮುಖ್ಯಗುರಿಯಾಗಿರಿಸಿಕೊಂಡು ತೆಗೆದ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಗರಾಜನ್ ಅವರಿಗೆ ಹೆಸರು ತಂದುಕೊಟ್ಟವು

ಮೈಸೂರಿನಲ್ಲಿ ಪಿ.ಯು.ಸಿ. ಓದುತ್ತಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ ಟಿ.ಎಸ್ ನಾಗರಾಜನ್ ಅವರ ಭವಿಷ್ಯದ ದಿಕ್ಕನ್ನು ಬದಲಿಸಿತು ಅಂದಿನ ಮೈಸೂರು ಮಹಾರಾಜರ ಪ್ರೀತಿಯ ಪಟ್ಟದ ಆನೆ ವೃದ್ಧಾಪ್ಯದಿಂದ ಮೃತಪಟ್ಟಾಗ ಇಡೀ ಮೈಸೂರಿನ ಜನತೆ ಅರಮನೆಯ ಪರಿವಾರದೊಂದಿಗೆ ಶೋಕಸಾಗರದಲ್ಲಿ ಮುಳುಗಿತು. ಈ ಸಂದರ್ಭದಲ್ಲಿ ಸ್ಥಳೀಯ ಸ್ಟುಡಿಯೊ ಛಾಯಾಗ್ರಾಹಕ ತೆಗೆದಿದ್ದ ಆನೆಯ ಚಿತ್ರವನ್ನು ಸಂಗ್ರಹಿಸಿದ ನಾಗರಾಜನ್, ಆನೆಯ ಸಾವಿನ ಸುದ್ಧಿ ಮತ್ತು ಪಟ್ಟದಾನೆಯ ಜೊತೆಗೆ ಮೈಸೂರಿನ ಜನತೆಗೆ ಇದ್ದ ಭಾವನಾತ್ಮಕ ಸಂಬಂಧ ಇವುಗಳನ್ನು ಆಧರಿಸಿ, “ A Mysore Gentlemen Passes Away” ಎಂಬ ಲೇಖನವನ್ನು ಬರೆದರು. ಅದನ್ನು ಅಂದಿನ ಬಾಂಬೆಯಿಂದ ಪ್ರಕಟವಾಗುತ್ತಿದ್ದ ಇಂಗ್ಲೀಷ್ ಪತ್ರಿಕೆಗೆ ಕಲಿಸಿಕೊಟ್ಟರು. ಒಂದು ತಿಂಗಳು ಕಳೆದ ನಂತರ ನಾಗರಾಜನ್ ಅವರ ಸರಸ್ವತಿ ಪುರಂ ಮನೆಯ ವಿಳಾಸಕ್ಕೆ ಲೇಖನ ಪ್ರಕಟವಾದ ಪತ್ರಿಕೆ, ಸಂಪಾದಕರ ಪತ್ರವನ್ನು ಒಳಗೊಂಡ ಹಣದ ಚೆಕ್ ಇವೆಲ್ಲವೂ ತಲುಪಿದವು.  ಇಂಗ್ಲೀಷ್ ಮೂಲದ ಸಂಪಾದಕ ನಾಗರಾಜನ್ ಅವರ ಲೇಖನ ಶೈಲಿಯನ್ನು ಮೆಚ್ಚುವುದರ ಜೊತೆಗೆ ಒಳ್ಳೆಯ ಕ್ಯಾಮರಾ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದ. ಸಂಭಾವನೆಯಾಗಿ ಬಂದ ಹಣದಲ್ಲಿ ಕ್ಯಾಮರಾ ಖರೀದಿಸಿದ ನಾಗರಾಜನ್ ರವರ ಬದುಕಿನ ದಿಶೆಯನ್ನು ಒಂದು ಲೇಖನ ಅನಿರೀಕ್ಷಿತವಾಗಿ ರೂಪಿಸಿತ್ತು,
1978 ರಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ಛಾಯಾಗ್ರಹಣ ಕಲೆಗೆ ತಮ್ಮನ್ನು ಅರ್ಪಿಸಿಕೊಂಡ ನಾಗರಾಜನ್ ತಮ್ಮ ಹಿರಿಯಣ್ಣ ಟಿ.ಎಸ್. ಸತ್ಯನ್ ಅವರಂತೆ ಕಪ್ಪು ಬಿಳುಪು ಚಿತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು. ಇವರು ತೆಗೆದ ಭಾರತದ ಖ್ಯಾತ ನಾಮರ ಚಿತ್ರಗಳು, ಇಂದಿಗೂ ಅಪರೂಪದ ಚಿತ್ರಗಳೆಂದು ಪ್ರಸಿದ್ಧಿಯಾಗಿವೆ, ಇವುಗಳಲ್ಲಿ ಖ್ಯಾತ ಸಂಗೀತ ಕಲಾವಿದೆ ಎಂ.ಎಸ್. ಸುಬ್ಬುಲಕ್ಷ್ಮಿಯವರು ತಮ್ಮ ಮನೆಯ ಮುಂದೆ ಕುಳಿತು ರಂಗೋಲಿ ಬಿಡಿಸುತ್ತಿರುವ ಚಿತ್ರ ಏಕಕಾಲದಲ್ಲಿ ಸುಬ್ಬುಲಕ್ಷ್ಮಿ ಮತ್ತು ನಾಗರಾಜನ್ ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತು.

ಮನುಷ್ಯರು ಕ್ಯಾಮರಾ ಮುಂದೆ ಅಭಿನಯಿಸಬಾರದು, ಅವರ ನಡುವಳಿಕೆ ಸಹಜವಾಗಿರಬೇಕು ಎಂಬ ವಿಷಯದಲ್ಲಿ ಧೃಡನಂಬಿಕೆಯಿಟ್ಟಿದ್ದ ನಾಗರಾಜನ್ ಅವರು, ಈ ನಿಟ್ಟಿನಲ್ಲಿ ತೆಗೆದ  ಸಹಜ ಚಿತ್ರಗಳು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡು  ಅವರಿಗೆ ಹೆಸರು ತಂದುಕೊಟ್ಟಿವೆ.

ಕಳೆದ ವರ್ಷ ತಮ್ಮ ಜೀವಮಾನದ ಸಾಧನೆಗೆ ಕೇಂದ್ರ ಸರ್ಕಾರದಿಂದ ಗೌರವಿಸಲ್ಪಟ್ಟ ಟಿ.ಎಸ್. ನಾಗರಾಜನ್ “ ಮದ್ರಾಸ್ ನಗರ ಸಂಸ್ಥೆಯೊಂದರ ಸಹಯೋಗದಲ್ಲಿ ಹೊರ ತಂದಿರುವ “ ವ್ಯಾನಿಶಿಂಗ್ ಹೋಮ್ಸ್ ಆಫ್ ಇಂಡಿಯ” ಎಂಬ ಚಿತ್ರ ಸಂಪುಟ ಅವರ ಸೃಜನಶೀಲತೆಯ ಪ್ರತಿಬಿಂಭವಾಗಿದೆ.


ಚಿತ್ರಗಳ ಜೊತೆ ತಮ್ಮ ನೆನಪುಗಳನ್ನು ಸಹ ಅವರು ದಾಖಲಿಸಿರುವುದು ವಿಶೇಷ. ಇಂದಿರಾಗಾಂಧಿ, ಎಂ.ಎಸ್. ಸುಬ್ಬುಲಕ್ಷ್ಮಿ ಮುಂತಾದವರ ಜೊತೆಗಿನ ತಮ್ಮ ನೆನಪುಗಳನ್ನು ತಾವು ಬರೆಯುತ್ತಿದ್ದ ಆತ್ಮಕಥನದಲ್ಲಿ ದಾಖಲಿಸಿದ್ದಾರೆ. ಆತ್ಮ ಕಥನದ ಹೆಸರು” ಎ ಪರ್ಲ್ ಆಫ್ ವಾಟರ್ ಆನ್ ಎ ಲೋಟಸ್ ಲೀಫ್” ಆದರೆ ಆ ಕೃತಿ ಹೊರಬಂದ ಬಗ್ಗೆ ನನಗೆ ಮಾಹಿತಿ ಇಲ್ಲ.

ಟಿ.ಎಸ್. ನಾಗರಾಜನ್ ಅವರು ಸೆರೆ ಹಿಡಿದ ಕೆಲವು ಚಿತ್ರಗಳು ಇಲ್ಲಿವೆ.
No comments:

Post a Comment