ಭಾನುವಾರ, ಏಪ್ರಿಲ್ 6, 2014

ಮೋದಿ ಮತ್ತು ಮುಸ್ಲಿಂ ಜಗತ್ತು


ಲೋಕ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷದಿಂದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ನರೇಂದ್ರಮೋದಿಯವರ ಪರ-ವಿರೋಧ ಕುರಿತಂತೆ   ಚರ್ಚೆಗಳು ಎಲ್ಲೆಡೆ ತಾರಕಕ್ಕೇರಿವೆ. ಕಳೆದ ಒಂದು ವರ್ಷದಿಂದ ನರೇಂದ್ರಮೋದಿಯವರು ಭಾರತದ ಸುದ್ಧಿ ಮಾಧ್ಯಮ ಜಗತ್ತಿಗೆ ಜಾಹಿರಾತು ರೂಪದಲ್ಲಿ ಹರಿಸಿರುವ ಸುಮಾರು ಒಂದು ಸಾವಿರದ ಮುನ್ನೂರು ಕೋಟಿ ರೂಪಾಯಿಗಳ ಜಾಹಿರಾತು ಹಣ ನಮ್ಮ ಸುದ್ಧಿ ಮಾಧ್ಯಮದ ಜಗತ್ತನ್ನು ಕಟ್ಟಿ ಹಾಕಿದೆ. ಆದರೆ. ಇದರ ಹಂಗಿಲ್ಲದ ವಿದೇಶಿ ಮಾಧ್ಯಮಗಳು ಮಾತ್ರ ತಮ್ಮ ತಲಸ್ಪರ್ಶಿ ಅಧ್ಯಯನ ಮತ್ತು ವಿಶ್ಲೇಷಣೆಗಳ ಮೂಲಕ ನರೇಂದ್ರಮೋದಿಯವರ ನಿದ್ದೆಗೆಡಿಸಿವೆ. ಈ ವಾರ ಎಕಾನಾಮಿಸ್ಟ್ ಪತ್ರಿಕೆ ತನ್ನ ಮುಖಪುಟ ವರದಿಯಲ್ಲಿ  "ಯಾರಾದರೂ ನರೇಂದ್ರಮೋದಿಯನ್ನು ತಡೆಯಬಲ್ಲರೆ?” ಎಂಬ ಶಿರೋನಾಮೆಯ ಲೇಖನದಲ್ಲಿ ನರೇಂದ್ರಮೋದಿ ಬಹುಮುಖಿ ಸಮಾಜ ಮತ್ತು ಸಂಸ್ಕೃತಿಯ ಭಾರತಕ್ಕೆ ಪ್ರಧಾನಿಯಾಗಲು ಏಕೆ ಅನರ್ಹ ಎಂಬುದರ ಕುರಿತು ವಿಶ್ಲೇಷಣೆ ಮಾಡಿದೆ. ಗೋಧ್ರಾ ನರಮೇಧ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ಅವರು ಭಾರತದ ಜನತೆಗೆ ಸ್ಪೃಷ್ಟ ಪಡಿಸುವ ಅಗತ್ಯವಿದೆ ಎಂದು ಪತ್ರಿಕೆ ಪ್ರತಿಪಾದಿಸಿದೆ. ಎಕಾನಾಮಿಸ್ಟ್ ಪತ್ರಿಕೆ ಕಾಂಗ್ರೇಸ್ ಪಕ್ಷದ ರಾಹುಲ್ ಗಾಂಧಿ ಕುರಿತು ಪ್ರಸ್ತಾಪಿಸಿ,  ಯು.ಪಿ.ಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ, ತನ್ನ ಅಪ್ರಬುದ್ಧತೆಯ ನಡುವೆ ಕಡಿಮೆ ಅಪಾಯಕಾರಿ ಮನುಷ್ಯ ಎಂದಿದೆ. ಇಡೀ ಭಾರತ ದೇಶದ ಯುವ ಜನತೆಯ ಮನಸ್ಸನ್ನು ವಿಶ್ಲೇಷಿಸಿರುವ ಪತ್ರಿಕೆ ಈಗ ಭಾರತಕ್ಕೆ ಬೇಕಾಗಿರುವುದು, ಪ್ರಮಾಣಿಕ, ನ್ಯಾಯಯುತವಾದ ಹಾಗೂ ಆಧುನಿಕ ಮನೋಭಾವದ ವ್ಯಕ್ತಿಗಳು ಎಂದು ಅಭಿಪ್ರಾಯ ಪಟ್ಟಿದೆ.
ಇದೇ ಪತ್ರಿಕೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮೊದಿಯವರ ಬಣ್ಣವನ್ನು ಬಯಲು ಮಾಡಿತ್ತು. ಗುಜರಾತಿನ ಮುಸ್ಲಿಂರು ನನ್ನ ಪರವಾಗಿ ಇದ್ದಾರೆ ಎಂಬ ನರೇಂದ್ರ ಮೋದಿಯ ಹೇಳಿಕೆಯನ್ನು ಅಲ್ಲಗೆಳೆದು, ಕೇವಲ ನಾಲ್ಕು ಮಂದಿ ಮುಸ್ಲಿಂ ಉದ್ಯಮಿಗಳನ್ನು ಮುಂದಿಟ್ಟುಕೊಂಡು ಮೋದಿ ಮಾತನಾಡಿದ್ದನ್ನು ಅನಾವರಣ ಮಾಡುವುದರ ಜೊತೆಗೆ ಬಂಡವಾಳ ಶಾಹಿ ಜಗತ್ತಿಗೆ ಲಾಭಕೋರತನ ಮುಖ್ಯವಾಗಿರುವಾಗ ಅಲ್ಲಿ ಹಿಂದೂ- ಮುಸ್ಲಿಂ ಪ್ರಶ್ನೆ ಉದ್ಭವಿಸುದಿಲ್ಲ ಎಂದು ಪತ್ರಿಕೆ ಪ್ರತಿಪಾದಿಸಿತ್ತು.

ಇದಕ್ಕೆ ಪೂರಕವಾಗಿ ಕಳೆದ ನವಂಬರ್ ತಿಂಗಳಿನಲ್ಲಿ  ಅಂದರೆ 2013 ರ ನವಂಬರ್ 26 ರಂದು ಸಂಪಾದಕೀಯ ಬರೆದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಗುಜರಾತ್ ಅಭಿವೃದ್ದಿಯ ಬಗ್ಗೆ ಸುಳ್ಳು ಹೇಳುವ ಮೋದಿ ಭಾರತದ ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂದಿತ್ತು. ಈ ಅಭಿಪ್ರಾಯಗಳು ನಮೋ ಬ್ರಿಗೇಡ್ ಗೆ ನುಂಗಲಾರದ ತುತ್ತಾಗಿವೆ. ಹಾಗಾಗಿ ಮೋದಿ ಭಜನಾ ಮಂಡಳಿಯ ಭಕ್ತರು ವಿದೇಶಿ ಮಾಧ್ಯಮಗಳ ಮೇಲೆ ಕಿಡಿ ಕಾರುತ್ತಿದ್ದಾರೆ. ಇಂದು ಭಾರತದ ಬಹುತೇಖ ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್ ಜಗತ್ತಿಗೆ ಇಲ್ಲವೆ ರಾಜಕೀಯ ನಾಯಕರ ಕೈ ವಶವಾಗಿರುವುದರಿಂದ ಜನಸಾಮಾನ್ಯರ ವಿಶ್ವಾಸಾರ್ಹತೆಗೆ ಅನರ್ಹಗೊಂಡಿವೆ. ತಮ್ಮ ತಮ್ಮ ಮೂಗಿನ ನೇರಕ್ಕೆ ಒಳಪಡುವ ವಿಶ್ಲೇಷಣೆಗಳು, ಮಾಧ್ಯಮಗಳಲ್ಲಿ  ತೌಡು ಕುಟ್ಟುವ ಪ್ರಸಂಗಗಳಾಗಿ ಪರಿವರ್ತನೆ ಹೊಂದಿವೆ.
ಭಾರತದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಎರಡು ಅತಿ ಘೋರ ದುರಂತಗಳು ಎಂದು ಬಣ್ಣಿಸುಲಾಗುವ 1948 ಜನವರಿ 30 ರಂದು ನಡೆದ ಮಹಾತ್ಮ ಗಾಂಧಿಯವರ ಹತ್ಯೆ ಮತ್ತು 1992 ರ ಡಿಸಂಬರ್ 6 ರಂದು ಅಯೋದ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣ ಇವುಗಳನ್ನು ನಿಷ್ಪಕ್ಷಪಾತವಾಗಿ ಮತ್ತು ನಿಷ್ಟುರವಾಗಿ ಜಗತ್ತಿಗೆ ಬಿತ್ತರಿಸಿದ್ದು ವಿದೇಶಿ ಮಾಧ್ಯಮಗಳು. ಈ ಸಂಗತಿ ಬಿ.ಜೆ.ಪಿ. ಯ ಭಕ್ತರಿಗೆ ನೆನಪಿಲ್ಲ. 1948 ರ ಜನವರಿ 30 ರಂದು ಸುಮಾರು ಸಂಜೆ 4-40 ರ ವೇಳೆಗೆ ಗಾಂಧೀಜಿ ಹತ್ಯೆ ನಡೆಯಿತು. ದೆಹಲಿಯಲ್ಲಿದ್ದ ಗೌರ್ನರ್ ಜನರಲ್ ಮೌಂಟ್ ಬ್ಯಾಟನ್ ಅವರಿಗೆ 10 ನಿಮಿಷಗಳ ತರುವಾಯ ಸುದ್ಧಿಮುಟ್ಟಿತು. ಅವರು ಕೂಡಲೇ ತುರ್ತು ಸಭೆ ನಡೆಸಿ , ಗಾಂಧೀಜಿ ಕೊಲೆ ಸುದ್ಧಿಯನ್ನು ಆಕಾಶವಾಣಿಯಲ್ಲಿ ಹೇಗೆ ಪ್ರಸಾರ ಮಾಡಬೇಕು ಎಂಬುದನ್ನು ಸಿದ್ಧಪಡಿಸಲು 15 ನಿಮಿಷ ಸಮಯ ವ್ಯರ್ಥವಾಯಿತು. ಅಂತಿಮ ವಾಗಿ ಸಂಜೆ 5-15 ಕ್ಕೆ ದೆಹಲಿಯ ಆಕಾಶವಾಣಿಯಲ್ಲಿ  “ ಹಿಂದೂ ಬ್ರಾಹ್ಮಣ ಯುವಕನೊಬ್ಬನಿಂದ ಮಹಾತ್ಮ ಗಾಂಧೀಜಿ ಹತ್ಯೆಯಾಗಿದರು” ಎಂಬ ಸುದ್ಧಿ ಪ್ರಸಾರವಾಯಿತು. ಅದರೆ ಈ ವೇಳೆಗಾಗಲೇ ಲಂಡನ್ನಿನ ಬಿ.ಬಿ.ಸಿ. ರೇಡಿಯೋ ತನ್ನ ಸಂಜೆ 5 ಗಂಟೆ ಸುದ್ದಿ ಸಮಯದಲ್ಲಿ ಅಂದರೆ ಐದು ಗಂಟೆ ಮೂರು ನಿಮಿಷಕ್ಕೆ ಸರಿಯಾಗಿ ಗಾಂಧಿಜಿ ಹತ್ಯೆಯ ಸುದ್ಧಿಯನ್ನು ಜಗತ್ತಿಗೆ ತಲುಪಿಸಿತ್ತು.

ಕಳೆದ ಎರಡು ಮೂರು ದಿನಗಳಿಂದ ಕೋಬ್ರಾ ಪೋಸ್ಟ್ ಎಂಬ ಸಂಸ್ಥೆಯ ಕುಟುಕು ಕಾರ್ಯಾಚರಣೆಯ ಮೂಲಕ ಬಹಿರಂಗಡಿಸಿರುವ ವಿಷಯ, ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದರು ಎಂಬುದು ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಆದರೆ, ಈ ಪ್ರಕರಣ ನಡೆದಾಗ ನನ್ನ ತಲೆಮಾರಿನ ಬಹುತೇಕ ಪತ್ರಕರ್ತರಿಗೆ,ಅಂದಿನ  ಕಾಂಗ್ರೇಸ್ ಸರ್ಕಾರದ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಂದ ಹಿಡಿದು ಬಿ.ಜೆ.ಪಿ. ನಾಯಕರಾದ ಎಲ್.ಕೆ.ಅಧ್ವಾನಿ. ಉಮಾಭಾರತಿ. ಮುರಳಿ ಮನೋಹರ ಜೋಷಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಇವರುಗಳ ನೇರ ಪಾತ್ರವಿತ್ತು ಎಂಬುದು ಗೊತ್ತಿರುವ ಸಂಗತಿ.. ಅತ್ಯಂತ ವ್ಯವಸ್ಥಿತವಾಗಿ ನಡೆದ ಮಸೀದಿ ಧ್ವಂಸ ಕಾರ್ಯಾಚರಣೆಯಲ್ಲಿ ನರಂಸಿಂಹರಾವ್ ತಮ್ಮ ಧೀರ್ಘ ಮೌನಕ್ಕೆ ಶರಣಾಗಿದ್ದರು. 1992 ಡಿಸಂಬರ್ 6 ರ ಸಂಜೆ ಸುಮಾರು ಐದು ಗಂಟೆಗೆ ಆರಂಭವಾದ ಮಸೀದಿ ದ್ವಂಸದ ದೃಶ್ಯಗಳನ್ನು ಕೇಂದ್ರ ಸರ್ಕಾರ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆಹಿಡಿದಿತ್ತು. ಆದರೆ ಆದಿನ ಬಿ,ಬಿ,ಸಿ, ಛಾನಲ್ ಸ್ಥಳದಿಂದ ಸಂಜೆ 6 ಗಂಟೆಗೆ ನೇರ ಪ್ರಸಾರ ಮಾಡಿ ಜಗತ್ತಿನ ಎದುರು ಭಾರತದ ಒಂದು ಸಮುದಾಯ ನಡೆಸಿದ  ಪೈಶಾಚಿಕ ಕೃತ್ಯವನ್ನು ಅನಾವರಣಗೊಳಿಸಿತ್ತು.

ಆ ದಿನದ ಕಹಿ ಘಟನೆ ನನಗೆ ಇನ್ನೂ ನೆನಪಿದೆ.  ಆ ದಿನ ಸಂಜೆ ನನ್ನೂರಿನ ಮನೆಯ ಮೆಟ್ಟಲಿನ ಮೇಲೆ ನನ್ನ  ಎರಡೂವರೆ ವರ್ಷದ ಮಗನನ್ನು ಆಟವಾಡಿಸುತ್ತಾ ಕುಳಿತಿದ್ದೆ. ನನ್ನ ಮನೆಯಲ್ಲಿ 3.400 ರೂಪಾಯಿ ಕೊಟ್ಟು ಖರೀದಿಸಿದ್ದ ಪಿಲಿಪ್ಸ್ ಕಂಪನಿಯ  14 ಇಂಚಿನ ಕಪ್ಪು ಬಿಳುಪು ಟಿ.ವಿ ಯಿತ್ತು. ಬಾಬರಿ ಮಸೀದಿಯನ್ನು ಕೆಡುವುತ್ತಿರುವ ದೃಶ್ಯಗಳನ್ನು ನೋಡಿ ಮೌನಕ್ಕೆ ಶರಣಾಗಿದ್ದೆ. ನಂತರ ನಡೆಯ ಬಹುದಾದ ಕೋಮು ಗಲಭೆಗಳನ್ನು ನೆನದು ರಾತ್ರಿ 9 ಗಂಟೆಯವರೆಗೆ ಮನೆಯ ಮೆಟ್ಟಿಲ ಮೇಲೆ ಗರ ಬಡಿದವನಂತೆ ಕುಳಿತಿದ್ದೆ, ಕಣ್ಣಿನಿಂದ ಹರಿದ ನೀರು ತೊಡೆಯ ಮೇಲೆ ಕುಳಿತ್ತಿದ್ದ ನನ್ನ ಮಗನ (ಅನನ್ಯ) ನೆತ್ತಿಯನ್ನು ತೋಯಿಸಿತ್ತು.
ಇತಿಹಾಸದ ಪುಟಗಳನ್ನು ತಿರುವಿ ಹಾಕುವಾಗ, ನನಗನಿಸುವ ಭಾವನೆಯಿದು. ಜೀವ ಪರ ತುಡಿತವುಳ್ಳ ಮನುಷ್ಯನೊಬ್ಬ ಹೇಗೆ ಈ ನರೇಂದ್ರ ಮೋದಿಯನ್ನಾಗಲಿ ಅಥವಾ ಸಂಘ ಪರಿವಾರವನ್ನಾಗಲಿ ಸಮರ್ಥಿಸಲು ಸಾಧ್ಯ.?

ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ನರಮೇಧಗಳೆಂದು ಬಣ್ಣಿಸಲಾಗುವ ಘಟನೆಗಳೆಂದರೆ, 1947 ರ ಸ್ವಾತಂತ್ರ್ಯ ಸಂದರ್ಭದಲ್ಲಿ ನಡೆದ ವಿಭಜನೆಯ ವೇಳೆ ನಡೆದ ಕೋಮು ಗಲಭೆ, ಹಾಗೂ 1984 ರ ಅಕ್ಟೋಬರ್ 30 ರಂದು ಇಂದಿರಾ ಗಾಂಧಿ ಕೊಲೆಯಾದ ನಂತರ ದೆಹಲಿಯಲ್ಲಿ ನಡೆದ ಸಿಖ್ಕರ ಮಾರಣ ಹೋಮ ಮತ್ತು 2002 ರಲ್ಲಿ ಗೋಧ್ರಾ ದಲ್ಲಿ ನಡೆದ ದುರಂತಕ್ಕೆ ಪ್ರತಿಯಾಗಿ ಗುಜರಾತ್ ರಾಜ್ಯಾದ್ಯಂತ ನಡೆದ ಮುಸ್ಲಿಂರ ಮಾರಣ ಹೋಮ. ಈ ಘಟನೆಯಲ್ಲಿ ತನ್ನದೇನು ಪಾತ್ರವಿಲ್ಲ ಎಂದು ಹೇಳಿಕೊಳ್ಳುವ ನರೇಂದ್ರಮೋದಿಗೆ, “ಈ ಘಟನೆ ಸಂಭವಿಸಿದಾಗ ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದೆ, ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳು ಈ ಪ್ರಕರಣದಲ್ಲಿ 28 ವರ್ಷಗಳ ಜೀವಾವಧಿ ಶಿಕ್ಷೆಗೆ ( ಡಾ.ಮಾಯ ಕೊಂಡೇನಿ) ಗುರಿಯಾಗಿದ್ದಾರೆ. ಸರ್ಕಾರದ ಮುಖ್ಯಸ್ಥನಾಗಿ ನನಗೆ ನೈತಿಕವಾದ ಜವಾಬ್ದಾರಿ ಇತ್ತು . ಗೋಧ್ರಾ ಘಟನೆಯಿಂದ ತಪ್ಪಾಗಿದೆ ವಿಷಾಧಿಸುತ್ತೇನೆ” ಎಂಬ ಮಾತು ಈ ವರೆಗೆ ಮೋದಿಯ ಹೃದಯದಿಂದ ಹೊರಬಿದ್ದಿಲ್ಲ. ಕಳೆದ ವರ್ಷ ಹಿಂದೂ- ಮುಸ್ಲಿಂ ಜನಾಂಗಗಳ ಮೈತ್ರಿಗಾಗಿ ಸದ್ಭಾವನಾ ಎಂಬ ಹೆಸರಿನಲ್ಲಿ ಮೋದಿ ಒಂದು ದಿನ ಉಪವಾಸ ಮಾಡಿದರು. ಆದರೆ ಪಶ್ಚಾತಾಪದ ಉಪವಾಸ ಮಾಡಿದ್ದರೆ, ಮೋದಿಯವರ ನಡೆ ಮತ್ತು ನುಡಿಗೆ ಅರ್ಥವಿರುತ್ತಿತ್ತು. ಇಂತಹ ವ್ಯಕ್ತಿ ಭಾರತಕ್ಕೆ ಪ್ರಧಾನಿಯಾಗಲು ಯಾವ ಅರ್ಹತೆ ಮತ್ತು ನೈತಿಕತೆ ಇದೆ? ಇದು ಜಾಗತಿಕ ಮಾಧ್ಯಮಗಳು ನಾಗರೀಕ ಜಗತ್ತಿನ  ಮುಂದಿಟ್ಟಿರುವ ಪ್ರಶ್ನೆಗಳಾಗಿವೆ. ಕೆಲವು ಮೋದಿಯ ಭಕ್ತರು ಮಾಧ್ಯಮಗಳಲ್ಲಿ 2002 ರ ನಂತರ ಗುಜರಾತಿನಲ್ಲಿ ಯಾವುದೇ ಕೋಮು ಗಲಭೆಯಾಗಿಲ್ಲ ಇದನ್ನು ನೀವು ಏಕೆ ಪ್ರಸ್ತಾಪಿಸುತ್ತಿಲ್ಲ ಎಂಬ ಪ್ರಶ್ನೆ ಎತ್ತಿದ್ದಾರೆ.ಇವರ ವಾದದ ವೈಖರಿ ಹೇಗಿದೆಯೆಂದರೆ, ಒಬ್ಬ ವ್ಯಕ್ತಿ ಕೊಲೆ ಮಾಡಿದ ನಂತರ ಆತ ಮತ್ತೇ ಕೊಲೆ ಮಾಡಿಲ್ಲ ಹಾಗಾಗಿ ಆತನನ್ನು ನಾವು ಸಭ್ಯ ನಾಗರೀಕ ಎಂದು ಪರಿಗಣಿಸಬೇಕು ಎಂಬಂತಿದೆ. ಮಂದಿರವಾಯಿತು, ಇಟ್ಟಿಗೆಯಾಯಿತು, ಹಿಂದೂ ರಾಷ್ಟ್ರವಾಯಿತು, ಈಗ ಅಭಿವೃದ್ಧಿಯ ಜಪ ಮಾಡುವ ಮಂದಿಗೆ ತಮ್ಮ ಚಿಂತನೆ, ಗುರಿಗಳಲ್ಲಿ ಯಾವುದೇ ಸ್ಥಿರತೆ ಇದ್ದಂತಿಲ್ಲ.




ನಿಮಗೆ ನೆನಪಿರಬಹುದು, 2005 ರಲ್ಲಿ ಬಿ.ಜೆ.ಪಿ. ಅಧ್ಯಕ್ಷರಾಗಿದ್ದ ಎಲ್.ಕೆ. ಅಧ್ವಾನಿಯವರು , ಪಾಕಿಸ್ಥಾನದ ಕರಾಚಿ ಬಳಿಯ ತಮ್ಮ ಹುಟ್ಟೂರಿಗೆ ಬೇಟಿ ನೀಡಿದ್ದರು. ಆ ಸಂದರ್ಭದಲ್ಲಿ  ಅವರು ಮಹಮ್ಮದ್ ಆಲಿ ಜಿನ್ನಾ ಅವರನ್ನು ಜಾತ್ಯಾತೀತ ಮನೋಭಾವದ ವ್ಯಕ್ತಿ ಎಂದು ಬಣ್ಣಿಸಿದ್ದರು. ಅವರ ಹೇಳಿಕೆಗೆ ಭಾರತದಲ್ಲಿ ಅವರದೇ ಪಕ್ಷವೂ ಸೇರಿದಂತೆ, ಸಂಘಪರಿವಾದಿಂದ ತೀವ್ರ ಆಕ್ಷೇಪಕ್ಕೆ ಗುರಿಯಾಗಿ, ಅಧ್ವಾನಿಯವರು ತಮ್ಮ ಅಧ್ಯಕ್ಷ ಸ್ಥಾನ ತ್ಯೆಜಿಸಬೇಕಾಯಿತು. ಆದರೆ ಅವರು ಯಾವ ಕಾರಣಕ್ಕೂ ಅವರ ಹೇಳಿಕೆಯನ್ನು ಬದಲಾಯಿಸದೆ, ಅದಕ್ಕೆ ಬದ್ಧರಾಗಿದ್ದರು. ಇವೊತ್ತಿಗೂ ಪಾಕಿಸ್ಥಾನದ ಹುಟ್ಟಿಗೆ ಕಾರಣರಾದರು ಎಂಬ ಏಕೈಕ ಕಾರಣಕ್ಕಾಗಿ ಜಿನ್ನಾ ಅವರ ಮೇಲೆ ಭಾರತೀಯರಿಗೆ ಆಕ್ರೋಶವಿದೆ. ಆದರೆ. ಜಿನ್ನಾ ಅವರ ವ್ಯಕ್ತಿತ್ವವನ್ನು ಗಮನಿಸಿದರೆ, ಅವರಿಗೆ ಪಾಕಿಸ್ಥಾನದ ಅಧ್ಯಕ್ಷಗಿರಿಗೆ ಏರಬೇಕು ಎಂಬ ಮಹತ್ವಾಂಕ್ಷೆಯನ್ನು ಹೊರತು ಪಡಿಸಿದರೆ, ಅವರು ಧರ್ಮಾತೀತ ಮತ್ತು ಜಾತ್ಯಾತೀತ ವ್ಯಕ್ತಿಯಾಗಿದ್ದರು ಎಂಬುದಕ್ಕೆ ಹಲವಾರು ದಾಖಲೆಗಳಿವೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ( ಇಂಗ್ಲೆಂಡ್) ಪಡೆದ ಶಿಕ್ಷಣ ಅವರನ್ನು ಮುಸ್ಲಿಂ ಜಗತ್ತಿನ ಎಲ್ಲಾ ಕಟ್ಟುಪಾಡುಗಳನ್ನು ಮೀರುವಂತೆ ಮಾಡಿದ್ದವು. ಅವರ ಸಮಕಾಲೀನರು, ಗೆಳೆಯರೂ ಹಾಗೂ ಇಂಗ್ಲೆಂಡಿನಲ್ಲಿ ಶಿಕ್ಷಣ ಪಡೆದ ನಮ್ಮ ಮುಂಬೈ ಮೂಲದ ಹೆಸರಾಂತ ರಾಜತಾಂತ್ರಿಕ ಡಾ. ರಫಿಕ್ ಝಕಾರಿಯ ಅವರು ಬರೆದಿರುವ ಎರಡು ಕೃತಿಗಳು Price of the partiation ಮತ್ತು The Man Who divided India ಈ ಎರಡೂ ಕೃತಿಗಳು ನಮಗೆ ಜಿನ್ನಾ ಬಗ್ಗೆ ಅಪೂರ್ವ ಒಳನೋಟಗಳನ್ನು ನೀಡಬಲ್ಲವು. ರಫಿಕ್ ಝಕಾರಿಯವರು ತಮ್ಮ  ಕೃತಿಯಾದ ಪ್ರೈಸ್ ಆಫ್ ದ ಪಾರ್ಟೇಷನ್ ಕೃತಿಯಲ್ಲಿ ಜಿನ್ನಾ ವ್ಯಕ್ತಿತ್ವವನ್ನು ಹೀಗೆ ಕಟ್ಟಿಕೊಡುತ್ತಾರೆ.
ಭಾರತ ಪಾಕಿಸ್ಥಾನ ವಿಭಜನೆಯಾಗುವುದು ನಿರ್ಧಾರವಾದ ಮೇಲೆ ಒಂದು ರಾತ್ರಿ ಜಿನ್ನಾ ರೈಲಿನ ಮೊದಲನೆ ಬೋಗಿಯಲ್ಲಿ ಸಂಚರಿಸುತ್ತಾ ಇರುತ್ತಾರೆ. ಜಿನ್ನಾ ಪ್ರಯಾಣದ ಸುದ್ಧಿ ತಿಳಿದ ಒಂದಿಷ್ಟು ಮುಸ್ಲಿಂರು ಬೆಳಗಿನ ಜಾವ ಮೂರು ಗಂಟೆಯಲ್ಲಿ ಮಾರ್ಗ ಮಧ್ಯದ ರೈಲ್ವೆ ನಿಲ್ದಾಣವೊಂದರಲ್ಲಿ ರೈಲಿಗೆ ಅಡ್ಡ ಹಾಕಿ ಜಿನ್ನಾ ಅವರಿಗೆ ಜಯಕಾರ ಹಾಕುತ್ತಾ ಜಿನ್ನಾ ಇದ್ದ ಬೋಗಿ ಬಳಿ ಬರುತ್ತಾರೆ. ನಿದ್ರೆಯಿಂದ ತಮ್ಮನ್ನು ಎಬ್ಬಿಸಿದ ಸಿಟ್ಟಿಗೆ ಜಿನ್ನಾ ರವರು ಅವರಿಂದ ಹೂವಿನ ಹಾರ ಸ್ವೀಕರಿಸುವ ಬದಲು , ಇಡೀ ಪ್ಲಾಟ್ ಫಾರಂ ತುಂಬೆಲ್ಲಾ ಅಭಿಮಾನಿಗಳನ್ನು ಅಟ್ಟಾಡಿಸಿ ಓಡಿಸುತ್ತಾರೆ. ಇದು ಜಿನ್ನಾ ವ್ಯಕ್ತಿತ್ವಕ್ಕೆ ಒಂದು ಉದಾಹರಣೆ ಮಾತ್ರ.



ವರ್ತಮಾನದ ಭಾರತದಲ್ಲಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗುವುದು ಹಲವರ ಆತಂಕಕ್ಕೆ ಕಾರಣವಾಗಿದೆ. ಇದೊಂದು ಅರ್ಥವಿಲ್ಲದ ಭಾವನೆಗಳು ಮಾತ್ರ. ಏಕೆಂದರೆ, ಬಹುಮುಖಿ ಸಂಸ್ಕೃತಿಯ ಭಾರತೀಯ ನೆಲಕ್ಕೆ ಎಲ್ಲವನ್ನೂ, ಎಲ್ಲರನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿದೆ. ಭಾರತೀಯ ನೆಲ ತನ್ನ ಇತಿಹಾಸದುದ್ದಕ್ಕೂ ಕಂಡಿರುವ ಹಿಂಸೆ, ರಕ್ತಪಾತ, ಅರಾಜಕತೆ, ಮತ್ತು  ಅಳಿದವರ ಕ್ರೌರ್ಯ ಇವೆಲ್ಲವೂ  ಅಗಣಿತವಾದವುಗಳು. 1975 ರ ಇಂದಿರಾಗಾಂಧಿಯ ಸರ್ವಾಧಿಕಾರವನ್ನು ಸಹಿಸಿಕೊಂಡ ಈ ನೆಲ ಅದೇ ಹೆಣ್ಣುಮಗಳ ದುರಂತ ಸಾವಿಗೂ ಸಾಕ್ಷಿಯಾಗಿದೆ. ಯಾವುದೇ ಒಬ್ಬ ಅಪಾಯಕಾರಿ ವ್ಯಕ್ತಿ ಅಥವಾ ವ್ಯವಸ್ಥೆ ಎನ್ನುವುದು ನಮ್ಮ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ  ನಮ್ಮ ಪಾಲಿಗೆ ಬಂದು ಅಪ್ಪಳಿಸಿ ಹೋಗುವ ಚಂಡಮಾರುತವಿದ್ದಂತೆ. ಸ್ವಾತಂತ್ರ್ಯಾನಂತರ  ಹಲವು ವ್ಯಕ್ತಿಗಳ ಸರ್ಕಾರವನ್ನು ಭಾರತದ ಮತದಾರ ನೋಡಿದ್ದಾನೆ. ಅವನಿಗೆ ವ್ಯಕ್ತಿಯನ್ನು ಅಧಿಕಾರದಲ್ಲಿ ಕೂರಿಸುವದೂ ಗೊತ್ತು. ಕಿತ್ತು ಬಿಸಾಡುವುದು ಗೊತ್ತು. ಅವನ ತೋರುಬೆರಳಿಗೆ ಅಗಾಧವಾದ  ಈ ಶಕ್ತಿಯನ್ನು ಭಾರತೀಯ ಪ್ರಜಾಪ್ರಭುತ್ವ ದಯಪಾಲಿಸಿದೆ.
ಇವುಗಳಿಗಿಂತ ಹೆಚ್ಚಾಗಿ ನನ್ನ ಜೊತೆ ವಾಸಿಸುವ ಜೀವ ನನ್ನ ಹಾಗೆ ನೋವಾದರೆ ಅತ್ತು, ನಲಿವಾದಾಗ ನಕ್ಕು, , ಹಸಿವಾದರೆ ಒದ್ದಾಡಬಲ್ಲದು, ಎಂಬ ಮಾನವೀಯ ನೆಲೆಯುಳ್ಳ ಗ್ರಹಿಕೆಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು. ಧರ್ಮ ಮತ್ತು ಜಾತಿಯ ಪರೀಧಿಯ ಆಚೆ ಬದುಕುವಂತಹ ಜ್ನಾನವನ್ನು ಭಾರತೀಯ ಸಂಸ್ಕೃತಿ ಜನಸಾಮಾನ್ಯರಿಗೆ ಧಾರೆಯೆರೆದಿದೆ. ಈ ಕಾರಣದಿಂದಲೇ ಇವೊತ್ತಿಗೂ ಅಹಮದಾಬಾದಿನ ರಿಪ್ಲಿಕಾ ರಸ್ತೆಯ ರಾಮ ಮಂದಿರದ ಬಳಿ ಕುಳಿತು, ದೇಗುಲಕ್ಕೆ ಬರುವ ಭಕ್ತರಿಗೆ ಮಣ್ಣಿನ ಹಣತೆಯಲ್ಲಿ ಎಣ್ಣೆ ಬತ್ತಿ ಇಟ್ಟು ಮಾರುವ ಕಾಯಕವನ್ನು ಕಳೆದ 40 ವರ್ಷಗಳಿಂದ ಮುಸ್ಲಿಂ ಕುಟುಂಬ ಪಾಲಿಸಿಕೊಂಡು ಬಂದಿದೆ. ಶಿವಮೊಗ್ಗ ನಗರದ ಆಂಜನೇಯ ದೇವಸ್ಥಾನಕ್ಕೆ ಕಳೆದ 70 ವರ್ಷಗಳಿಂದ ಹೂವಿನ ಹಾರ ವನ್ನು ಬೆಳಗಿನ ಪ್ರಥಮ ಪೂಜೆಗೆ ಕಟ್ಟಿಕೊಡುವ ಕಾಯವನ್ನು ಮುಸ್ಲಿಂ ಕುಟುಂಬವೊಂದು ವ್ರತವೆಂಬತೆ ನಡೆಸಿಕೊಂಡು ಬಂದಿದೆ. ಅಷ್ಟೆ ಏಕೆ? ನಮ್ಮ ಉಡುಪಿಯ ಅಷ್ಟ ಮಠಗಳ ರಥೋತ್ಸವ ಮತ್ತು ಇತರೆ ಧಾರ್ಮಿಕ ಕಾರ್ಯಗಳಿಗೆ ಛತ್ರಿ, ಛಾಮರ, ಇವುಗಳನ್ನು ಸಿದ್ಧ ಪಡಿಸುವುದರಿಂದ ಹಿಡಿದು, ರಥಗಳ ಅಲಂಕಾರ ಇವುಗಳ ಕಾರ್ಯವನ್ನು 200 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಮುಸ್ಲಿಂ ಕುಟುಂಬಗಳು ನಡೆಸಿಕೊಂಡು ಬಂದಿವೆ. ಇವರುಗಳಿಗೆ ಧರ್ಮ, ರಾಷ್ಟ್ರಪ್ರೇಮ, ಜಾತಿ ಇತ್ಯಾದಿಗಳಿಗಿಂತ ತಾವು ನಂಬಿದ ಕಾಯಕವನ್ನು ಘನತೆಯಿಂದ ಮುಂದುವರಿಸಿಕೊಂಡು ಹೋಗುವುದು ಮಾತ್ರ ಮುಖ್ಯವಾಗಿದೆ. ಇವರಿಗೆ ಬಸವಣ್ಣ ಗೊತ್ತಿಲ್ಲ, ಬುದ್ಧ ಗೊತ್ತಿಲ್ಲ, ಗಾಂಧಿಯಂತೂ ಮೊದಲೇ ಗೊತ್ತಿಲ್ಲ . ಈ ಜನರಿಗೆ ಗೊತ್ತಿರುವುದು ಒಂದೇ ಧರ್ಮ ಅದೇನೆಂದರೆ,  ಇತರೆ ಜೀವಕ್ಕೆ ಎರವಾಗದಂತೆ ಬದುಕುವ ಮಾನವ ಧರ್ಮ.. ಇದನ್ನೆ ಖಲೀಲ್ ಗಿಬ್ರಾನ್ “ ನನ್ನ ಅಮ್ಮ ಕವಿಯಾಗಿರಲಿಲ್ಲ, ಆದರೆ ಕವಿಯಂತೆ ಬದುಕಿದಳು” ಎಂದು ಅರ್ಥಪೂರ್ಣವಾಗಿ ನುಡಿದಿದ್ದ.


3 ಕಾಮೆಂಟ್‌ಗಳು: