Saturday, 29 March 2014

ಗುಜರಾತ್- ಅಭಿವೃದ್ಧಿಯ ಲೊಳಲೊಟ್ಟೆಗಳು


ನಮ್ಮ ಸಾಮಾಜಿಕ ತಾಣಗಳಲ್ಲಿ ವಿಶೇಷವಾಗಿ ಫೇಸ್ ಬುಕ್ ತಾಣದಲ್ಲಿ ಕೆಲವರು ನಮ್ಮ ನೆರೆಯ ಪಾಕಿಸ್ಥಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 26 ರೂಪಾಯಿ, ಶ್ರೀಲಂಕಾದಲ್ಲಿ 16 ರೂಪಾಯಿ ಹೀಗೆ ಸಿದ್ಧಪಡಿಸಿದ ಕಾರ್ಡ್ ಒಂದನ್ನು ಹಂಚಿಕೊಳ್ಳುವ ಕ್ರಿಯೆ ಇತ್ತೀಚೆಗೆ ಜೋರಾಗಿ ನಡೆದಿದೆ. ಇದರ ಹಿಂದಿರುವ ಹುನ್ನಾರವಿಷ್ಟೆ. ಮೋದಿ ಭಾರತದ ಪ್ರಧಾನಿಯಾದರೆ, ಇದೇ ಬೆಲೆಗೆ ಭಾರತದಲ್ಲಿ ನಮಗೂ ಪೆಟ್ರೋಲ್ ದೊರೆಯಲಿದೆ, ಕಾಂಗ್ರೇಸ್ ಸರ್ಕಾರ ಜನಸಾಮಾನ್ಯರನ್ನು ದೋಚುತ್ತಿದೆ ಎಂಬ ಸಂದೇಶವನ್ನು ಸಾರುವುದು ಇದರ ಹಿಂದಿನ ಉದ್ದೇಶ. ಇದನ್ನು ಬಹಳ ಮಂದಿ ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಹರಡುವ ಮೊದಲು “petrol price in Pakistan  ಅಥವಾ petrol price in Srilanka ಎಂದು ಟೈಪಿಸಿ ಗೂಗ್ಲಿ ಸರ್ಚ್ ಗೆ ಹಾಕಿದ್ದರೆ, ಆಯಾ ದೇಶಗಳ ಪೆಟ್ರೋಲ್ ಬೆಲೆ ದೊರೆಯುತ್ತಿತ್ತು. 16 ರೂಪಾಯಿಗೆ ಒಂದು ಲೀಟರ್ ನೀರು ಸಹ ದೊರೆಯುವುದಿಲ್ಲ ಎಂಬ ಸತ್ಯ ಗೊತ್ತಿಲ್ಲದ ಮೂರ್ಖ ಶಿಖಾಮಣಿಗಳು ಮಾತ್ರ ಮಾಡಬಹುದಾದ ಕೆಲಸ ಇದು. ಇಂತಹದೇ ಕೆಲಸವನ್ನು ಈಗ ಗುಜರಾತ್ ಅಭಿವೃದ್ಧಿಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಕೆಲವರು ಹರಿಯ ಬಿಡುತ್ತಿದ್ದಾರೆ.
ಸ್ವತಃ ನರೇಂದ್ರ ಮೋದಿ ಇಂತಹ ಸುಳ್ಳಿನ ಪಿತಾಮಹಾರಾಗಿದ್ದು, ಅವರು ತಮ್ಮ ಗುಜರಾತ್ ಅಭಿವೃದ್ಧಿ ಕುರಿತು ವೆಬ್ ಸೈಟಿನಲ್ಲಿ ಹೇಳಿಕೊಂಡಿರುವ ಮಾಹಿತಿಗೂ, ವಾಸ್ತವ ರೂಪದಲ್ಲಿ ಇರುವ  ಅಂಕಿ ಅಂಶಗಳಿಗೂ ಅಜಗಜಾಂತರ ವೆತ್ಯಾಸವಿದೆ. ಅವುಗಳನ್ನು ಒಂದೊಂದಾಗಿ ಇಲ್ಲಿ ವಿಶ್ಲೇಷಿಸಲಾಗಿದೆ.
ಗುಜರಾತಿನಲ್ಲಿ ದಿನದ 24 ಗಂಟೆಯೂ ನಿರಂತರ ವಿದ್ಯುತ್ ದೊರೆಯುತ್ತಿದೆ. ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ ನಿಜ. ಮೋದಿಯವರ ಪಾಲಿಗೆ ದಿನಕ್ಕೆ 24 ಗಂಟೆ ಅವಧಿಯಲ್ಲ, 48 ಗಂಟೆ ಇದ್ದರೂ ಸಹ ಅವರು ವಿದ್ಯುತ್ ಪೂರೈಸಬಲ್ಲರು. ಅವರು ಪೂರೈಸುವ ವಿದ್ಯುತ್ ಗುಜರಾತ್ ಸರ್ಕಾರ ಸ್ಥಾಪಿಸಿರುವ ವಿದ್ಯುತ್ ಸ್ಥಾವರಗಳಿಂದ ಉತ್ಪಾದನೆಯಾದ ವಿದ್ಯುತ್ತಾ? ಅಥವಾ ಖಾಸಾಗಿ   ಕಂಪನಿಗಳಿಂದ ಖರೀದಿಸಿದ ವಿದ್ಯುತ್ತಾ? ಎಂದು ಯಾರೂ ಪ್ರಶ್ನಿಸಲಿಲ್ಲ. ಗುಜರಾತಿನಲ್ಲಿ ಮೋದಿ ಆಳ್ವಿಕೆಯ ಹನ್ನೊಂದು ವರ್ಷಗಳ ಅವಧಿಯಲ್ಲಿ ಸರ್ಕಾರ ಎಷ್ಟು ವಿದ್ಯುತ್ ಉತ್ಪಾದನೆ ಮಾಡಿದೆ? ಯಾರ ಬಳಿಯೂ ಉತ್ತರವಿಲ್ಲ. 2001 ರಲ್ಲಿ ಕೇವಲ ಮೂರು ಸಾವಿರ ಕೋಟಿ ಬಂಡವಾಳದೊಂದಿಗೆ ಗುಜರಾತಿನಲ್ಲಿ ವಿದ್ಯುತ್ ಉತ್ಪಾದನೆ ಉಳಿದ ಅದಾನಿ  ಕಂಪನಿ ಈಗ ನಲವತ್ತೇಳು ಸಾವಿರ ಕೋಟಿ ಬಂಡವಾಳದ ಕಂಪನಿಯಾಗಿ ಬೆಳದಿದೆ. ಈ ಕಂಪನಿಯ ಮುಖ್ಯ ಉದ್ಯೋಗ  ವಿದ್ಯುತ್ ಉತ್ಪಾದಿಸಿ ಗುಜರಾತ್ ಸರ್ಕಾರಕ್ಕೆ ಮಾರುವುದಷ್ಟೇ ಕೆಲಸ.

ಇತ್ತೀಚೆಗಿನ   ದಿನಗಳಲ್ಲಿ ವರ್ಷ ವರ್ಷ ಬೇಡಿಕೆ ಹೆಚ್ಚಾಗುತ್ತಿರುವ ವಿದ್ಯುತ್ ಅನ್ನು ಸರ್ಕಾರಗಳು ಉತ್ಪಾದನೆ ಮಾಡುವ ಬದಲು ಖಾಸಾಗಿ ಕಂಪನಿಗಳಿಂದ ಖರೀದಿಸುವುದನ್ನು ಉದ್ಯೋಗ ಮಾಡಿಕೊಂಡಿವೆ. ಇದು ನಮ್ಮನ್ನು ಆಳುವ ಸರ್ಕಾರಗಳಿಗೆ, ಜನಪ್ರತಿನಿಧಿಗಳಿಗೆ, ಮತ್ತು ರಾಜಕೀಯ ಪಕ್ಷಗಳಿಗೆ ಲಾಭ ತಂದುಕೊಡುವ ದಂಧೆಯಾಗಿದೆ. ಪ್ರತಿ ಯೂನಿಟ್ ಗೆ ಯಾವ ದರದಲ್ಲಿ ಖರೀದಿಸಬೇಕೆಂಬ ಯಾವುದೇ ಮಾನದಂಡಗಳಾಗಲಿ, ನಿರ್ಭಂಧಗಳಾಗಲಿ ಇಲ್ಲ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಖರೀದಿಗಾಗಿ ವ್ಯಯ ಮಾಡಿರುವ ವೆಚ್ಚ 21 ಸಾವಿರ ಕೋಟಿ ರೂಪಾಯಿ. ಈ ಹಣದಲ್ಲಿ ಮೂರು ವಿದ್ಯುತ್ ಸ್ಥಾವರಗಳನ್ನು ನಾವು ಸ್ಥಾಪಿಸಬಹುದಿತ್ತು. ಆದರೆ ಇದರ ಬಗ್ಗೆ ಯಾರಿಗೂ ಕಳ ಕಳಿಯಿಲ್ಲ. ಇಂತಹ ದಂಧೆಯನ್ನು ಭಾರತದಲ್ಲಿ ಹುಟ್ಟಿಹಾಕಿದವರು ನರೇಂದ್ರಮೋದಿ.
ಇನ್ನು ಎರಡನೆಯದಾಗಿ ಗುಜರಾತ್ ರಾಜ್ಯ ರಸ್ತೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ. ಇದು ಅರ್ಧ ಸತ್ಯ ಮಾತ್ರ. 2010 ರ ವಿಶ್ವ ಬ್ಯಾಂಕ್ ವರದಿಯಲ್ಲಿ ಗುಜರಾತ್ ರಾಜ್ಯದ ರಸ್ತೆಗಳ ಬಗ್ಗೆ ಶ್ಲಾಘನೆ ಮಾಡಲಾಗಿದೆ. ಜೊತೆಗೆ ಶೇಕಡ 90 ರಷ್ಟು ಜನವಸತಿ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಹ ಹೇಳಲಾಗಿದೆ. ಇದೆಲ್ಲವೂ ಸಂಪೂರ್ಣ ನಿಜ. ಆದರೆ, ಭಾರತದಲ್ಲಿ ರಸ್ತೆ ಸಂಪರ್ಕ ಜೋಡಣೆಯಲ್ಲಿ ಪಂಜಾಬ್ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಕೇಂದ್ರ ಸಾರಿಗೆ ಇಲಾಖೆಯ ಹೆದ್ದಾರಿ ಕುರಿತ ವಾರ್ಷಿಕ ವರದಿಯಲ್ಲಿ ಪ್ರತಿ 100 ಚದುರ ಕಿಲೋಮೀಟರ್ ಗೆ ಗುಜರಾತ್ ರಾಜ್ಯದಲ್ಲಿ 80 ಕಿಲೋಮೀಟರ್ ಮಾತ್ರ ರಸ್ತೆಯಿದ್ದು, ಭಾರತದಲ್ಲಿ ಗುಜರಾತಿನ ಸ್ಥಾನ 19 ನೇಯ ಸ್ಥಾನವಾಗಿದೆ. ( ಭಾರತದ ಸರಾಸರಿ100 ಚದುರ ಕಿ.ಮಿ.  ಪ್ರಧೇಶಕ್ಕೆ ಇರುವ ರಸ್ತೆಯ ಉದ್ದ 143 ಕಿಲೋಮೀಟರ್ ಗಳು) ಇನ್ನು ಒಂದು ಲಕ್ಷ ಚದುರ ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಕೇರಳದಲ್ಲಿ 518 ಕಿಲೋಮೀಟರ್ ರಸ್ತೆಯಿದ್ದರೆ, ಗುಜರಾತಿನಲ್ಲಿ 259 ಕಿಲೊಮೀಟರ್ ರಸ್ತೆಯಿದ್ದು 23 ನೇ ಸ್ಥಾನದಲ್ಲಿ ಗುಜರಾತ್ ನಿಂತಿದೆ. ( ಭಾರತದ ಸರಾಸರಿ 398 ಕಿಲೊಮೀಟರ್)  2009 ರಿಂದ 2011 ರ ವರೆಗೆ ಗುಜರಾತ್ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. 2013 ರ ವರದಿಯ ಪ್ರಕಾರ ಹೆದ್ದಾರಿ ಅಭಿವೃದ್ದಿಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇಯ ಸ್ಥಾನದಲ್ಲಿದೆ, ಗುಜರಾತಿಗೆ ಮೂರನೆಯ ಸ್ಥಾನ ಲಭ್ಯವಾಗಿದೆ.

ಗುಜರಾತ್ ಅಭಿವೃದ್ಧಿಯ ಕುರಿತು ಪುಂಖಾನು ಪುಂಖವಾಗಿ ಮಿಥ್ಯೆ ಹರಡುವ ನರೇಂದ್ರ ಮೋದಿ ಭಜನಾ ಮಂಡಳಿಯ ಭಕ್ತರು, ಒಮ್ಮೆ 2013 ರ ಸೆಪ್ಟಂಬರ್ 12 ರಂದು ಗುಜರಾತ್ ಹೈಕೋರ್ಟ್ ಮೋದಿ ಸರ್ಕಾರಕ್ಕೆ ಯಾವ ರೀತಿ ಚಾಟಿ ಬೀಸಿದೆ ಎಂಬುವುದನ್ನು ಗಮನಿಸುವುದು ಒಳಿತು. ಹತ್ತು ಕಿಲೊಮಿಟರ್ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವುದಕ್ಕೆ ಐದು ಕೋಟಿ ರೂಪಾಯಿ ಹಣ ವ್ಯಯ ಮಾಡಿರುವುದನ್ನು ಪ್ರಶ್ನಿಸಿ, ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮುಖ್ಯನಾಯಮೂರ್ತಿ  ಭಾಸ್ಕರ ಭಟ್ಟಾಚಾರ್ಯ ಮತ್ತು ನ್ಯಾಯಮೂರ್ತಿ  ಪರ್ಡಿವಾಲ ರವರನ್ನು ಒಳಗೊಂಡಿದ್ದ ದ್ವಿಸದಸ್ಯ ಪೀಠ, ಗುಜರಾತ್ ಸರ್ಕಾರದ ಲೋಕೊಪಯೋಗಿ ಇಲಾಖೆಯನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ಹದಗೆಟ್ಟಿರುವ ಅಹಮದಾಬಾದ್ ನಗರದ ರಸ್ತೆಗಳ ಕುರಿತು ತೀವ್ರ ಅತೃಪ್ತಿ ವ್ಯಕ್ತಪಡಿಸಿತು, ಗುಜರಾತಿನ ಅಭಿವೃದ್ಧಿಯೆಂಬುದು ಬರೀ ಲೊಳಲೊಟ್ಟೆ ಎಂಬುದಕ್ಕೆ ಇದಕ್ಕಿಂತ ಬೇರೇನು ಸಾಕ್ಷಿ ಬೇಕು?
ಗುಜರಾತಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಭಾವನಗರ್ ವಿಶ್ವ ವಿದ್ಯಾಲಯದ ಮಾಜಿ ಉಪಕುಲಪತಿಗಳಾದ  ಡಾ. ವಿದ್ಯುತ್ ಜೋಷಿಯವರು ಹೇಳಿದ “ ಮೋದಿ ಅವಧಿಗೆ ಮುನ್ನ ರಾಜ್ಯದ ಜಿ.ಡಿ.ಪಿ. ಬೆಳವಣಿಗೆ ಶೇಕಡ 16% ರಷ್ಟು ಇದ್ದದ್ದು, ಈಗ ಶೋಚನೀಯ ಮಟ್ಟಕ್ಕೆ ಕುಸಿದಿದೆ” ಎಂಬ ಮಾತುಗಳನ್ನು ಆಧಾರವಾಗಿಟ್ಟುಕೊಂಡು ಇತರೆ ರಾಜ್ಯಗಳ ಜಿ.ಡಿ.ಪಿ. ಬೆಳವಣಿಗೆ ಹೋಲಿಸಿದರೆ, ಗುಜರಾತಿನ ಸ್ಥಾನ ಐದನೆಯದಾಗಿದೆ. ಭಾರತದ ರಾಜ್ಯಗಳ ಪೈಕಿ  ಒಟ್ಟು 12 ಲಕ್ಷ 48 ಸಾವಿರ ಕೋಟಿ ಮೌಲ್ಯದ ಉತ್ಪಾದನೆಯಲ್ಲಿ ಮಹಾರಾಷ್ಟ ಪ್ರಥಮ ಸ್ಥಾನದಲ್ಲಿದ್ದು, 6 ಲಕ್ಷ, 84 ಸಾವಿರ ಕೋಟಿ ಮೌಲ್ಯದ ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಎರಡನೇಯ ಸ್ಥಾನದಲ್ಲಿದೆ. ಆನಂತರ ಕ್ರಮವಾಗಿ ಆಂದ್ರಪ್ರದೇಶ ( 6ಲಕ್ಷ 55ಸಾವಿರ ಕೋಟಿ) ತಮಿಳುನಾಡು ( 6ಲಕ್ಷ,39ಸಾವಿರಕೋಟಿ) ಹಾಗೂ ಐದನೆಯ ಸ್ಥಾನದಲ್ಲಿ ಗುಜರಾತ್ ರಾಜ್ಯವಿದೆ,( 6ಲಕ್ಷ 12 ಸಾವಿರ ಕೋಟಿ) ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ( 2007-2012) ವರದಿಯ ಪ್ರಕಾರ ಅಭಿವೃದ್ಧಿಯ ಬೆಳವಣಿಯ ಸೂಚ್ಯಂಕ ಈ ರೀತಿ ಇದೆ. ಬಿಹಾರ (11.4) ಮಹಾರಾಷ್ಟ್ರ (10.8) ತಮಿಳುನಾಡು ( 10.3) ಗುಜರಾತ್ ( 8.3)
ನ್ಯಾಷನಲ್ ಸ್ಯಾಂಪಲ್ ಸರ್ವೆ ಇದರ ವರದಿಯ ಪ್ರಕಾರ ಗುಜರಾತಿನಲ್ಲಿ ಕಾರ್ಮಿಕರ ಕೂಲಿದರ ( ನಗರ ಮತ್ತು ಗ್ರಾಮಗಳ ಒಟ್ಟು ಸರಾಸರಿ ಲೆಕ್ಕದಲ್ಲಿ) 145 ರೂಪಾಯಿ ಇದ್ದರೆ, ಕೇರಳದಲ್ಲಿ 310 ರುಪಾಯಿ ಇದೆ. ರಾಜಸ್ಥಾನದಲ್ಲಿ 174 ರುಪಾಯಿ, ಬಿಹಾರದಲ್ಲಿ 157 ರೂಪಾಯಿ ಇದ್ದು ರಾಷ್ಟ್ರದ ಸರಾಸರಿ ಕೂಲಿ ವೇತನ 170 ರೂಪಾಯಿಗಳಷ್ಟಿದೆ.
ಗುಜರಾತಿನಲ್ಲಿ ಮಲಹೊರುವ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಿದ್ದು ಶೇಕಡ ನೂರರಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದು ಮೋದಿ ತಮ್ಮ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದ್ದರು. ( 2004 ರಲ್ಲಿ) ಆದರೆ 2006 ರಲ್ಲಿ ಮುಂಬೈನ  ಟಾಟಾ ಸಮಾಜ ವಿಜ್ಞಾನಗಳ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ 12 ಸಾವಿರ ಮಂದಿ ಮಲ ಹೊರುವವರು ತಮ್ಮ ಕಾಯಕದಲ್ಲಿ ನಿರತರಾಗಿದ್ದರು. 2011ರ ಭಾರತ ಮಾನವ ಅಭಿವೃದ್ಧಿಯ ವರದಿಯ ಪ್ರಕಾರ ಗುಜರಾತಿನಲ್ಲಿ 52 ಲಕ್ಷ ಕುಟುಮಬಗಳಿಗೆ ಶೌಚಾಲಯಗಳಿಲ್ಲ, 64 ಲಕ್ಷ ಕುಟುಂಬಗಳಿಗೆ ಒಳಚರಂಡಿ ವ್ಯವಸ್ಥೆಯಿಲ್ಲ ಮತ್ತು 18 ಸಾವಿರದ 321 ಅಂಗನವಾಡಿಗಳಿಗೆ ( ಅಂದರೆ, ಗುಜರಾತ್ ಅಂಗನವಾಡಿಗಳ ಸಂಖ್ಯೆಯ ಶೇಕಡ 37% ರಷ್ಟು) ಶೌಚಗೃಹಗಳಿಲ್ಲ. ಈಗಿನ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿರುವ ರಘುರಾಂ ರಾಜನ್ ಸಮಿತಿ ನೀಡಿರುವ ಅಭಿವೃದ್ಧಿಯ ಸೂಚ್ಯಂಕದ ವರದಿಯಲ್ಲಿ ಗುಜರಾತ್ ಸ್ಥಾನಮಾನ ಹನ್ನೆರೆಡನೇಯದು. (2000 ದ ಇಸವಿಯಲ್ಲಿ ಗುಜರಾತ್ ಅಭಿವೃದ್ಧಿಯ ಸೂಚ್ಯಂಕ 0,466 ಇದ್ದದ್ದು 2008 ರ ವೇಳೆಗೆ 0.527 ಸೂಚ್ಯಂಕಕ್ಕೆ ಕುಸಿದು ಹತ್ತರಿಂದ ಹನ್ನೊಂದನೇಯ ಸ್ಥಾನ ಅಲಂಕರಿಸಿತ್ತು.)


ಈ ದಿನ ಅಭಿವೃದ್ದಿ ಕುರಿತಂತೆ ಹಲವು ರೀತಿಯ ಮಾನದಂಡಗಳನ್ನು ಮತ್ತು ವಿಶ್ಲೇಷಣೆಯ ಮಾದರಿಗಳನ್ನು ಬಂಡವಾಳಶಾಹಿ ಜಗತ್ತಿನಿಂದ ಪ್ರೇರಿತವಾದ ಜಾಗತೀಕರಣ ನಮ್ಮ ಮುಂದೆ ಹರಡುತ್ತಿದೆ. ಅಭಿವೃದ್ಧಿ ಕುರಿತ ವಿವೇಚನೆಗೆ ಕೇವಲ ಆರ್ಥಿಕ ದೃಷ್ಟಿಕೋನ ಮಾತ್ರ ಸಾಲದು. ಇದರ ಜೊತೆ ಸಾಮಾಜಿಕ ನ್ಯಾಯದ ಮಾನದಂಡಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಇದನ್ನು ಅಭಿವೃದ್ದಿ ಕುರಿತಂತೆ 20 ನೇ ಶತಮಾನದಲ್ಲಿ ಜಗತ್ತಿಗೆ ಮನವರಿಕೆ ಮಾಡಿಕೊಟ್ಟವರು ನಮ್ಮವರೇ ಆದ ನೊಬಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್. ( ಅವರ ಐಡಿಯ ಆಫ್ ಜಸ್ಟೀಸ್ ಕೃತಿಯನ್ನು ಆಸಕ್ತರು ಗಮನಿಸಬಹುದು)
ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಸಮಗ್ರ ಅಭಿವೃದ್ದಿಗೆ ಸಂಪತ್ತು ಕೆಳಗಿನಿಂದ ಮೇಲ್ಮುಖವಾಗಿ ಚಲಿಸಬೇಕು ಎಂಬುದು ಅಮಾರ್ತ್ಯ ಸೇನರ ವಾದ. ಅಂದರೆ, ಕೈಗಾರಿಕೆ, ರಸ್ತೆ, ಉದ್ಯೋಗ ಸೃಷ್ಟಿ ಇವುಗಳ ಜೊತೆಗೆ ಜನಸಾಮಾನ್ಯರಿಗೆ ವಸತಿ, ಆರೋಗ್ಯ, ಶಿಕ್ಷಣ ಇವೆಲ್ಲವು ಸುಲಭವಾಗಿ ದೊರಕುವಂತಿರಬೇಕು. ಇದರಿಂದಾಗಿ ಅವರ ಜೀವನಮಟ್ಟ ಸುಧಾರಣೆಯಾಗಿ ಅವರಿಗೆ  ಕೊಳ್ಳುವ ಶಕ್ತಿ ಲಭಿಸುತ್ತದೆ. ಈ ಮೂಲಕ ಆರ್ಥಿಕ ಚಟುವಟಿಕೆ ಗರಿಗೆದರುತ್ತದೆ ಎಂಬುದು ಅಮಾರ್ತ್ಯ ಸೇನರ ನಂಬಿಕೆ. ಇದಕ್ಕೆ ವಿರುಧ್ದವಾಗಿ ಬಂಡವಾಳಶಾಹಿ ಜಗತ್ತು ಮತ್ತೊಬ್ಬ ಅರ್ಥಶಾಸ್ತ್ರಜ್ಞ ಹಾಗೂ ಭಾರತದವರೇ ಆದ ಈಗ ಅಮೇರಿಕಾದಲ್ಲಿ ನೆಲೆಸಿರುವ ಜಗದೀಶ್ ಚಂದ್ರ ಭಗವತಿ ಮೂಲಕ ಮತ್ತೊಂದು ವಾದವನ್ನು ನಮ್ಮ ಮುಂದಿಟ್ಟಿದೆ. ಭಗವತಿಯವರ ವಾದದ ಪ್ರಕಾರ, ಸರ್ಕಾರಗಳು, ಉದ್ಯಮಿಗಳಿಗೆ ವಿಶೇಷ ಸವಲತ್ತು ಅಂದರೆ, ರಿಯಾಯತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ನೀಡಿ, ಅವರುಗಳು ಕೈಗಾರಿಕೆ ಸ್ಥಾಪಿಸಲು ಉತ್ತೇಜಿಸಬೇಕು. ಇದರಿಂದ ಉದ್ಯೊಗಗಳು ಸೃಷ್ಟಿಯಾಗುತ್ತವೆ. ಲಾಭ ಪಡೆದ ಕೈಗಾರಿಕೋದ್ಯಮಿಗಳು ಬಂದ ಲಾಭವನ್ನು ಮತ್ತೇ ಉದ್ಯಮದಲ್ಲಿ ತೊಡಗಿಸುತ್ತಾರೆ. ಹೀಗೆ ಸಂಪತ್ತು ಮೇಲಿಂದ ಕೆಳಮುಖವಾಗಿ ಚಲಿಸಿದಾಗ ಅಭಿವೃದ್ಧಿಯಾಗುತ್ತದೆ. ಇದು ಭಗವತಿಯವರ ನಂಬಿಕೆ.


ಜಗದೀಶ್ ಚಂದ್ರ ಭಗವತಿಯವರ ಅಭಿವೃದ್ದಿ ಕುರಿತ ವಾದವನ್ನು ನಾವು ಒಪ್ಪುವುದಾದರೆ, 2008 ರಲ್ಲಿ ನೂರು ಕೋಟಿ ಡಾಲರ್ ( ಡಾಲರ್ ಮೌಲ್ಯವನ್ನು 60 ರುಪಾಯಿ ದರದಲ್ಲಿ ಲೆಕ್ಕ ಹಾಕಿದರೆ, 5 ಸಾವಿರ ಕೋಟಿ ಎಂದುಕೊಳ್ಳೋಣ) ಆಸ್ತಿ ಹೊಂದಿದ್ದ ಭಾರತದ ಶ್ರೀಮಂತರ ಕೇವಲ ನಾಲ್ಕು ಇದ್ದದ್ದು, 2011 ರ ವೇಳೆಗೆ 247 ಕ್ಕೆ ಏರಿಕೆಯಾಗಿದೆ. ಈ ಸಿರಿವಂತರು ತಾವು ಸಂಪಾದಿಸಿದ ಲಾಭವನ್ನು ಬಂಡವಾಳ ರೂಪದಲ್ಲಿ ಎಲ್ಲಿ ತೊಡಗಿಸಿದ್ದಾರೆ.?ತಾವು ಮಂಡಿಸಿರುವ ಅಭಿವೃದ್ಧಿಯ ಸಿದ್ಧಾಂತ ಭಾರತದಲ್ಲಿ ಹೇಗೆ ಮಕಾಡೆ ಮಲಗಿದೆ ಎಂಬುದನ್ನು ಬಗವತಿಯವರು ಒಮ್ಮೆ ಭಾರತಕ್ಕೆ ಬಂದು ನೋಡುವುದು ಒಳಿತು.

1 comment:

  1. ಅರ್ಥ ಮಾಡಿಕೊಳ್ಳುವವರಿಗೆ ಇಷ್ಟು ಸಾಕು ಅನ್ನಿಸುತ್ತಿದೆ. ಪ್ರಜಾಪ್ರಭುತ್ವದ ಅಭಿವೃದ್ಧಿ ಸಾಗುತ್ತಿರುವ ದಿಕ್ಕು ಯಾವುದು ಎನ್ನುವ ಪ್ರಶ್ನೆಗೆ ಎಲ್ಲರೂ ಸೇರಿ ಉತ್ತರ ಕಂಡುಕೊಳ್ಳಬೇಕಾಗಿದೆ

    ReplyDelete