ಮೊನ್ನೆ ಎಂ.ಎಸ್. ಸುಬ್ಬುಲಕ್ಷ್ಮಿಯವರ ಕಥನದ ಕೊನೆಯ ಅಧ್ಯಾಯವನ್ನು ಬರೆಯುವಾಗ ಆ ಮಹಾತಾಯಿಯ ಸಾರ್ಥಕದ ಬದುಕು, ಸಂಗೀತವನ್ನು ಬದುಕಿನುದ್ದಕ್ಕೂ ಉಸಿರಾಡಿದ ಪರಿ, ಹಾಗೂ ತಮ್ಮ ಪತಿ ಟಿ.ಸದಾಶಿವಂ ಅವರು ಮರಣ ಹೊಂದಿದ ನಂತರ ತಮ್ಮ ಸಾರ್ವಜನಿಕ ಸಂಗೀತ ಕಛೇರಿಗೆ ತಿಲಾಂಜಲಿ ನೀಡಿದ ನಂತರವೂ ತಮ್ಮ ಎಂಬತ್ತರ ಇಳಿವಯಸ್ಸಿನಲ್ಲೂ ಕರ್ನಾಟಕ ಸಂಗೀತದ ಕೀರ್ತನೆಗಳು, ರಾಗಗಳು ಮರೆತು ಹೋಗಬಾರದು ಎಂಬ ದೃಷ್ಟಿಯಿಂದ ತಮ್ಮ ನಿವಾಸದ ದೇವರ ಕೋಣೆಯಲ್ಲಿ ಕುಳಿತು ಗಂಟಗಟ್ಟಲೆ ತಮ್ಮಷ್ಟಕ್ಕೆ ಹಾಡಿಕೊಳ್ಳುತ್ತಿದ್ದ ವೈಖರಿ ಇವುಗಳನ್ನು ದಾಖಲಿಸುವಾಗ ಮನಸ್ಸು ಮೂಕವಾಗಿ ಕಣ್ಣು ಮತ್ತು ಹೃದಯ ಒದ್ದೆಯಾಗುತ್ತಿದ್ದವು. ತಾವು ಸಾಯುವ ಮುನ್ನ ಕೊನೆಯ ದಿನಗಳಲ್ಲಿ ಅಂದರೆ 2004 ರಲ್ಲಿ ತಮ್ಮ 87 ತುಂಬಿ 88 ರ ಹುಟ್ಟು ಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ನಿಮ್ಮ ಕೊನೆಯ ಆಸೆ ಏನು ಪ್ರಶ್ನಿಸಿದಾಗ, “ ನನ್ನ ಕೊನೆಯ ಉಸಿರು ಇರುವ ತನಕ ನನ್ನ ಕಿವಿಯ ಮೇಲೆ ಸಂಗೀತ ಶಬ್ಧ ಬೀಳುತ್ತಿರಬೇಕು” ಎಂದಿದ್ದರು. ಇವುಗಳನ್ನು ದಾಖಲಿಸುವಾಗ ಸುಬ್ಬುಲಕ್ಷ್ಮಿಯವರನ್ನು ಕಥನದ ಮೊದಲ ಅಧ್ಯಾಯದಲ್ಲಿ “ ನಾದದ ನದಿ’ ಎಂದು ಕರೆದಿದ್ದ ನಾನು ಇವರನ್ನು ಭಾರತದಲ್ಲಿ ಯಾರಿಗೆ ಹೋಲಿಸಬಹುದು ಎಂದು ಪ್ರಶ್ನೆ ಹಾಕಿಕೊಂಡಾಗ ನನಗೆ ತಟ್ಟನೆ ನೆನಪಾದವರು ನಮ್ಮವರೇ ಆದ ಗಾನಗಂಗೆ ಗಂಗೂಭಾಯಿ ಹಾನಗಲ್. ಇದೇ ಜುಲೈ 21 ಕ್ಕೆ ಗಂಗೂಬಾಯಿ ಹಾನಗಲ್ ನಮ್ಮನ್ನು ಅಗಲಿ ಐದು ವರ್ಷವಾಗಲಿದೆ. ಈ ಇಬ್ಬರೂ ಭಾರತೀಯ ಸಂಗೀತ ಲೋಕದ ಸಾಧಕಿಯರು ಎರಡು ಮೇರು ಶಿಖರಗಳು ಎಂದರೆ ತಪ್ಪಾಗಲಾರದು.
ಸುಬ್ಬುಲಕ್ಷ್ಮಿಯವರು ಕರ್ನಾಟಕ ಸಂಗೀತ ಕ್ರೇತ್ರದಲ್ಲಿ ಸಾಧನೆ ಮಾಡಿದರೆ, ಗಂಗೂಬಾಯಿ ಹಾನಗಲ್ ರವರು ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದರು. ಪುರುಷ ಪ್ರಧಾನವಾಗಿದ್ದ ಭಾರತದ ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆ ಹಾಗೂ ಸಂಗೀತಕ್ಕಾಗಿ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟ ರೀತಿ ನಿಜಕ್ಕೂ ವಿಸ್ಮಯಕಾರಿಯಾದುದು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರೂ ತಳಸಮುದಾಯದಲ್ಲಿ ಹುಟ್ಟಿದವರು ಬ್ರಾಹ್ಮಣ ಪುರುಷರನ್ನು ಕೈ ಹಿಡಿದು, ತಮ್ಮ ಅಗಾಧ ಸಾಧನೆಯಿಂದ ಸಂಗೀತ ಲೋಕದ ಸರಸ್ವತಿಯರಂತೆ ಮಿಂಚಿ, ಅಂತಿಮವಾಗಿ ಜಾತಿ, ಧರ್ಮ, ಭಾಷೆಯ ಗಡಿಯನ್ನು ದಾಟಿ, ಭಾರತದ ಎಲ್ಲರೆದಯಲ್ಲಿ ದೇವತೆಯರಂತೆ ಸ್ಥಾಪಿತಗೊಂಡವರು. ಭಾರತೀಯ ಸಂಗೀತದ ಎರಡು ಪ್ರಕಾರಗಳಾದ ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಸಾಧನೆಗೈದ ಈ ಇಬ್ಬರ ನಡುವೆ ಇರುವ ಸಾಮ್ಯ ನಿಜಕ್ಕೂ ಅಚ್ಚರಿ ಪಡುವಂತಹದ್ದು.ಇದನ್ನು ಸುಬ್ಬುಲಕ್ಷ್ಮಿಯವರ ಕೊನೆಯ ಅಧ್ಯಾಯದಲ್ಲಿ ದಾಖಲಿಸಿದ್ದೇನೆ.
ನನಗಿನ್ನೂ ನೆನಪಿದೆ. 2001 ರ ಆಗಸ್ಟ್ ತಿಂಗಳಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವ ಉದಯ ಟಿ.ವಿ ಸಂಸ್ಥೆಯು ಉತ್ತರ ಕರ್ನಾಟಕ ಪ್ರಾದೇಶಿಕ ಕಛೇರಿಯನ್ನು ಆರಂಭಿಸಿದಾಗ ಮುಖ್ಯಸ್ಥನಾಗಿ ಹುಬ್ಬಳ್ಳಿ ನಗರಕ್ಕೆ ಬಂದೆ. 2002 ರ ಜನವರಿ ತಿಂಗಳಿನಲ್ಲಿ ಗಂಗೂಬಾಯಿ ಹಾನಗಲ್ ಅವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿತು. ಪ್ರಶಸ್ತಿ ಘೋಷಣೆ ಮಾಡುವ ಸಮಯದಲ್ಲಿ ಅವರ ಒಪ್ಪಿಗೆ ಪಡೆಯುವಂತೆ ಕೇಂದ್ರ ಸರ್ಕಾರವು ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ ಕಪಿಲ್ ಮೋಹನ್ ಅವರಿಗೆ ಸೂಚಿಸಿತ್ತು. ಈ ವೇಳೆಯಲ್ಲಿ ಗಂಗೂಬಾಯಿ ಹಾನಗಲ್ ಕೊಲ್ಕತ್ತ ನಗರದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಪಾಲ್ಗೊಂಡು, ಅಲ್ಲಿಂದ ಪೂನಾ ನಗರಕ್ಕೆ ಬಂದು ಖ್ಯಾತ ಹಿಂದೂಸ್ಥಾನಿ ಗಾಯಕಿ ಕಿಶೋರಿ ಅಮೋಣ್ಕರ್ ರವರು ತಮ್ಮ ತಾಯಿಯವರ ಪುಣ್ಯ ತಿಥಿಯ ಅಂಗವಾಗಿ ಏರ್ಪಡಿಸಲಾಗಿದ್ದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿಯವರು ದೂರವಾಣಿಯ ಮೂಲಕ ಸಂಪರ್ಕಿಸಿದಾಗ, ಸತತ ಎಂಟುಗಂಟೆಗಳ ಕಾಲ ಒಪ್ಪಿಗೆ ನೀಡಲು ಗಂಗೂಬಾಯಿ ಹಾನಗಲ್ ಸತಾಯಿಸಿದ್ದರು. ನಂತರ ಒಪ್ಪಿಗೆ ಸೂಚಿಸಿದ್ದರು. ಮಾರನೆಯ ದಿನ ಹುಬ್ಬಳ್ಳಿ ನಗರಕ್ಕೆ ಅವರು ಬಂದ ನಂತರ ಅವರ ಮೊಮ್ಮಗ ಹಾಗು ವಕೀಲರಾದ ಮನೋಜ್ ಹಾನಗಲ್ ಜೊತೆ ಮಾತನಾಡಿ ಉದಯ ಟಿ.ವಿ. ಗಾಗಿ ಹದಿನೈದು ನಿಮಿಷಗಳ ಕಾಲದ ಸಂದರ್ಶನ ಕ್ಕೆ ಅನುಮತಿ ಪಡೆದಿದ್ದೆ. ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಅವರ ಮನೆಯ ಹಾಲ್ ನಲ್ಲಿ ಅವರಿಗೆ ಬಂದಿರುವ ಪ್ರಶಸ್ತಿ ಫಲಕ ಗಳ ನಡುವೆ ಸಂದರ್ಶನಕ್ಕಾಗಿ ಸ್ಥಳ ನಿಗದಿ ಪಡಿಸಿ ಮನೋಜ್ ನಿಗದಿಪಡಿಸಿ, ಯಾವುದೇ ಗದ್ದಲ ಬಾರದಂತೆ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅವರಿಗೆ ನಮಸ್ಕರಿಸಿ,”ಅಮ್ಮಾ ಏಕೆ ಒಪ್ಪಿಗೆ ನೀಡಲು ತಡಮಾಡಿದಿರಿ? ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ಬಾಯ್ತುಂಬಾ ನಕ್ಕು “ ತಮ್ಮಾ ಅದೊಂದು ದೊಡ್ಡ ಕಥಿ’ ಎಂದರು. ಈ ಮೊದಲು ಅವರಿಗೆ ಭಾರತ ಸರ್ಕಾರವು 1971 ರಲ್ಲಿ ಅವರಿಗೆ ಪದ್ಮಭೂಷಣ ನೀಡಲಾಗಿತ್ತು. ಮತ್ತೆ ಯಾಕ ಪ್ರಶಸ್ತಿ ಕೊಡ್ಲಿಕ್ ಹತ್ತಾರಾ ಅಂತ ಗದ್ದಲಾಗಿತ್ತು ಆನಂತರ ತಿಳಿತು ನೋಡಪ್ಪಾ, ಪದ್ಮಭೂಷಣದ ಪ್ರಶಸ್ತಿ ಮೇಲೆ ಇನ್ನೊಂದು ಪದ್ಮವಿಭೂಷಣ ಪ್ರಶಸ್ತಿ ಐತಿ ಅಂತಾ” ಎಂದು ಹೇಳುತ್ತಾ ಅವರು ಮನಸ್ಸು ಬಿಚ್ಚಿ ಬಾಯ್ತುಂಬಾ ನಕ್ಕಾಗ ನನಗೂ ನಗು ತಡೆಯಲಿಕ್ಕೆ ಆಗಲಿಲ್ಲ. ಆ ಸಂದರ್ಭದಲ್ಲಿ ನನಗೆ ಓರ್ವ ಅಂತರಾಷ್ಟ್ರೀಯ ಮಟ್ಟದ ಗಾಯಕಿಯ ಜೊತೆ ಕುಳಿತು ಮಾತನಾಡುತ್ತಿದ್ದೀನಿ ಎನ್ನುವುದಕ್ಕಿಂತ ಹೆಚ್ಚಾಗಿ ನನ್ನ ನೆರಮನೆಯ ದೊಡ್ಡಮ್ಮನೊ, ಅಜ್ಜಿಯೊ ಅಥವಾ ನನ್ನ ಹೆತ್ತವ್ವನ ಜೊತೆ ಕುಳಿತು ಮಾತನಾಡುತ್ತೀನಿ ಎಂಬ ಅನುಭವವಾಗತೊಡಗಿತು.
ತಮಗೆ ಭಾರತ ರತ್ನ ಪ್ರಶಸ್ತಿಯ ನಂತರ ದೇಶದ ಎರಡನೆಯ ಅತ್ಯುನ್ನುತ ಪದ್ಮವಿಭೂಷಣ ಗೌರವ ದೊರೆತ ಬಗ್ಗೆ ಸಂತಸ ವ್ಯಕ್ತಪಡಿಸಿ ತಮ್ಮ ಭಾವನೆಗಳನ್ನು ಹಂಚಿಕೊಂಡ ಅವರು ತಮ್ಮ ಸಮಕಾಲೀನ ಸಂಗೀತಗಾರರಾದ ಭೀಮಸೇನ್ ಜೋಷಿ, ಮಲ್ಲಿಕಾರ್ಜುನ್ ಮನ್ಸೂರ್, ಬಸವರಾಜ ರಾಜಗುರು, ಕುಮಾರ ಗಂಧರ್ವ ಇವರನ್ನು ಸ್ಮರಿಸಿ ಅವರ ಸಾಧನೆಯನ್ನು ಹೃದಯ ತುಂಬಿ ಹೊಗಳಿದರು. ಅವರು ಮಾತನಾಡುತ್ತಿದ್ದರೆ, ಆ ಮಹಾನ್ ಗಾಯಕರ ಜೊತೆ ರಕ್ತ ಹಂಚಿಕೊಂಡು ಹುಟ್ಟಿದ ಸಹೋದರಿಯೊಬ್ಬಳು ಮನದುಂಬಿ ಮಾತನಾಡುತ್ತಿದ್ದಾಳೆ ಎಂದು ಅನಿಸುತ್ತಿತ್ತು. ಅವರ ಬಾಯಲ್ಲಿ ಭೀಮಸೇನಜೋಷಿ ಭೀಮು ಆಗಿದ್ದರು, ಮಲ್ಲಿಕಾರ್ಜುನ ಮನ್ಸೂರ್ ಮಲ್ಲಣ್ಣ ಆಗಿದ್ದರು. ಬಸವರಾಜ ರಾಜಗುರು ಬಸು ಆಗಿದ್ದರೆ, ಕುಮಾರ ಗಂಧರ್ವ ಕುಮಾರ ಆಗಿದ್ದರು. ಎದೆಯಲ್ಲಿ ಒಂದಿಷ್ಟು ಕಲ್ಮಶ ಮತ್ತು ದ್ವೇಷವಿಲ್ಲದೆ ತಮ್ಮ ಸಮಕಾಲಿನ ಗಾಯಕರನ್ನು ಹಾಡಿಹೊಗಳುವುದು ಮತ್ತು ನನಗೆ ಬಂದ ಈ ಪ್ರಶಸ್ತಿಯಲ್ಲಿ ಅವರದೂ ಒಂದು ಪಾಲಿದೆ ಎಂದು ಹೇಳಿಕೊಳ್ಳುವುದನ್ನು ಕೇಳುತ್ತಿದ್ದ ನನ್ನ ಪಾಲಿಗೆ ಗಂಗೂಬಾಯಿ ಹಾನಗಲ್ ಓರ್ವ ದೇವತೆಯಂತೆ ಕಂಡು ಬಂದರು. ಇಂತಹದ್ದೇ ವಿಷಯದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿಯವರು ಸಹ ಗಂಗೂಬಾಯಿ ಹಾನಗಲ್ ಅವರನ್ನು ಹೋಲುತ್ತಾರೆ. 1968 ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಂಸ್ಥೆಯು ಕರ್ನಾಟಕ ಸಂಗೀತದ ಅತ್ಯುನ್ನತ ಪ್ರಶಸ್ತಿಯನ್ನು ಎಂ.ಎಸ್.ಸುಬ್ಬುಲಕ್ಷ್ಮಿಯವರಿಗೆ ಘೋಷಿಸಿ, ಮದ್ರಾಸ್ ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಿದಾಗ, ಸಮಾರಂಭದಲ್ಲಿ ಹಾಜರಿದ್ದ ತಮ್ಮ ಸಮಕಾಲೀನ ಖ್ಯಾತ ಕರ್ನಾಟಕ ಸಂಗೀತ ಗಾಯಕಿಯರಾದ ಡಿ.ಕೆ.ಪಟ್ಟಮ್ಮಾಳ್ ಮತ್ತು ಎಂ.ಎಲ್. ವಸಂತಕುಮಾರಿ ಅವರನ್ನು ವೇದಿಕೆಗೆ ಕರೆಸಿಕೊಂಡು, ಅವರನ್ನು ತಮ್ಮ ಎಡ ಬಲ ನಿಲ್ಲಿಸಿಕೊಂಡು ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ನಂತರ ಮಾತನಾಡಿ ಈ ಪ್ರಶಸ್ತಿ ಕರ್ನಾಟಕ ಸಂಗೀತ ಕ್ಷೇತ್ರದ ಸ್ತ್ರಿ ಸಮುದಾಯಕ್ಕೆ ಸಂದ ಗೌರವ ಎಂದು ಹೇಳುವುದರ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದರು. ಏಕೆಂದರೆ, ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸುಬ್ಬುಲಕ್ಷ್ಮಿಯವರಿಗೆ “ ಸಂಗೀತ ಕಲಾನಿಧಿ” ಪ್ರಶಸ್ತಿಯ ಗೌರವ ದೊರಕಿತ್ತು
ಇಬ್ಬರೂ ಕೂಡ ತಮ್ಮ ಸುಧೀರ್ಘ ಅರ್ಧಶತಮಾನಗಳ ಕಾಲ ತಮ್ಮ ಪುತ್ರಿಯರೊಂದಿಗೆ ಸಂಗೀತ ಕಛೇರಿ ನಡೆಸಿಕೊಟ್ಟರು. ಗಂಗೂಬಾಯಿ ಹಾನಗಲ್ ತಮ್ಮ ಪುತ್ರಿ ಕೃಷ್ಣ ಹಾನಗಲ್ ಜೊತೆ ಹಿಂದೂಸ್ಥಾನಿ ಸಂಗೀತ ಕಛೇರಿ ನಡೆಸಿಕೊಟ್ಟರೆ, ಸುಬ್ಬುಲಕ್ಷ್ಮಿಯವರು ತಮ್ಮ ಪುತ್ರಿ ಎಂ.ಎಸ್ ರಾಧಾ ಜೊತೆ ಕರ್ನಾಟಕ ಸಂಗೀತದ ಕಛೇರಿ ನಡೆಸಿಕೊಟ್ಟರು. ಇಬ್ಬರಿಗೂ ತಮ್ಮ ತಮ್ಮ ಸಂಗೀತದ ಬಗ್ಗೆ ಅಪಾರ ಹೆಮ್ಮೆ, ವಿಶ್ವಾಸ, ನಂಬಿಕೆ ಇತ್ತು. ಸಂದರ್ಶನದ ವೇಳೆ ಗಂಗೂಬಾಯಿ ಗಾನಗಲ್ ಅವರನ್ನು ಕೇಳಿದ್ದೆ. “ಅಮ್ಮಾ ಆಧುನಿಕ ಬದುಕಿನ ಅಬ್ಬರದ ಸಂಗೀತದ ನಡುವೆ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಭವಿಷ್ಯ ಇದೆ ಅನಿಸುತ್ತಾ?” ನನ್ನ ಪ್ರಶ್ನೆಗೆ ಅವರು ರೂಪಕದ ಭಾಷೆಯಲ್ಲಿ ಉತ್ತರ ಕೊಟ್ಟಾಗ ನಾನು ದಂಗು ಬಡಿದು ಮೂಕನಾಗಿದ್ದೆ. ಅವರು ಕೊಟ್ಟ ಉತ್ತರ ಹೀಗಿತ್ತು.” ತಮ್ಮಾ, ತುಂಬಿದ ಮನಿಯೊಳಗ ತೂಗವ ತೊಟ್ಟಿಲು ಇರ್ತದ , ತೊಟ್ಟಿಲೊಳಗ ಕೂಸು ಮಲಗಿರ್ತದ ತೊಟ್ಟಲು ತೂಗುವುದನ್ನು ನಿಲ್ಲಿಸುವ ವೇಳ್ಯಾಗ ಇನ್ಯಾರೊ ಬಂದು ಅದಕ್ಕೆ ಕೈ ಹಚ್ತಾರ. ಹಂಗಾನ ಈ ಸಂಗೀತ . ಕೂಸು ಮಲಗಿರುವ ತೊಟ್ಟಿಲು ಹ್ಯಾಂಗ ತೂಗುವುದನ್ನು ನಿಲ್ಲಿಸುವುದಿಲ್ಲವೊ, ಹಾಂಗಾನ ಈ ಸಂಗೀತ ನಿಲ್ಲೊದಿಲ್ಲಾ ಏನಂತಿ? “ ಗಂಗೂಬಾಯಿಯವರ ವ್ಯಕ್ತಿತ್ವದ ವಿಶಿಷ್ಟತೆ ಎಂದರೆ ಅವರು ನಮ್ಮ ಜೊತೆ ಮಾತನಾಡುವಾಗ ಪ್ರಶ್ನೆ ಎಸೆದು ನಗುತ್ತಿದ್ದರು ಮತ್ತು ಪ್ರತಿಕ್ರಯೆಗೆ ಎದುರು ನೋಡುತ್ತಿದ್ದರು. ಅವರ ಜೊತೆ ಎಂಟು ವರ್ಷಗಳ ಒಡನಾಡಿದ ಹಾಗೂ ಉದಯ ಟಿ.ವಿ. ಗಾಗಿ ಕನಿಷ್ಟ ಒಂದು ಡಜನ್ ಕಾರ್ಯಕ್ರಮ, ಸಂದರ್ಶನ ಮಾಡಿದ ನನಗೆ ಒಮ್ಮೆಯೂ ಅವರ ಬಾಯಿಂದ ಸಂಗೀತ ಕೇಳುವ ಭಾಗ್ಯ ದೊರೆತಿರಲಿಲ್ಲ ಅದೊಂದು ಕೊರಗು ಮಾತ್ರ ಸದಾ ನನ್ನನ್ನು ಕಾಡುತ್ತಿತ್ತು. 2007 ರ ಮೇ ತಿಂಗಳಿನಲ್ಲಿ ಅವರ ಗುರುಗಳಾದ ಸವಾಯ್ ಗಂಧರ್ವ ರ ಪುಣ್ಯ ತಿಥಿಯ ಸಂದರ್ಭದಲ್ಲಿ ಅವರು ಅನಿರೀಕ್ಷಿತವಾಗಿ ಹಾಡಿದಾಗ, ಅದನ್ನು ಕೇಳುವ ಭಾಗ್ಯವೂ ನನ್ನದಾಯಿತು
(2007 ರಲ್ಲಿ ಕುಂದಗೋಳದಲ್ಲಿ ಕೊನೆಯ ಬಾರಿ ಹಾಡಿದ ಚಿತ್ರ)
ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಾಡಗೀರ್ ವಾಡೆಯಲ್ಲಿ ( ಇದು ಸವಾಯ್ ಗಂಧರ್ವರ ಹುಟ್ಟೂರು) ಪ್ರತಿ ವರ್ಷ ಸವಾಯ್ ಗಂಧರ್ವ ರ ಪುಣ್ಯ ತಿಥಿಯನ್ನು ಆಚರಿಸುತ್ತಾ ಅಹೋರಾತ್ರಿ ಸಂಗೀತ ಕಛೇರಿಯನ್ನು ನಡೆಸಿಕೊಂಡು ಬರಲಾಗುತ್ತಿದೆ., ಸವಾಯ್ ಗಂಧರ್ವರ ಶಿಷ್ಯರಾದ ಪಂಡಿತ್ ಭೀಮಸೇನ್ ಜೋಷಿ ಮತ್ತು ಗಂಗೂಬಾಯಿ ಹಾನಗಲ್.ನೇತೃತ್ವದಲ್ಲಿ ನಡೆಯುತ್ತಿದ್ದ ಇಲ್ಲಿನ ಸಂಗೀತ ಕಛೇರಿಯಲ್ಲಿ ಹಾಡುವುದು ಪ್ರತಿಯೊಬ್ಬ ಹಿಂದೂಸ್ಥಾನಿ ಗಾಯಕ ಗಾಯಕಿಯರ ಕನಸಾಗಿತ್ತು. ಭೀಮಸೇನ ಜೋಷಿಯವರು ತಾವು ವಾಸಿಸುತ್ತಿದ್ದ ಪೂನಾ ನಗರದಲ್ಲಿ ತಮ್ಮ ಗುರುಗಳ ಸ್ಮರಣಾರ್ಥ ಸಂಗೀತ ಉತ್ಸವವನ್ನು ಆರಂಭಿಸಿದ ಮೇಲೆ ಗಂಗೂಬಾಯಿ ಮಾತ್ರ ತಪ್ಪದೆ ಕುಂದಗೋಳದ ಸವಾಯ್ ಗಂಧರ್ವರ ಪುಣ್ಯ ತಿಥಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. 2007 ರ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ, ವೇದಿಕೆಯ ಎಡ ಭಾಗದಲ್ಲಿ ಕುಳಿತಿದ್ದ ಗಂಗೂಬಾಯಿಯವರು ಇದ್ದಕ್ಕಿದ್ದಂತೆ ಸ್ಪೂರ್ತಿಗೊಂಡವರಂತೆ ಜೈಜವಂತಿ ರಾಗದಲ್ಲಿ ಹಾಡತೊಡಗಿದರು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಹಾಡಿದ ಆ ಅಪೂರ್ವ ದೃಶ್ಯವನ್ನು ನಾನು ನಮ್ಮ ಕ್ಯಾಮರಾಮನ್ ಮೂಲಕ ದಾಖಲಿಸಿದ್ದೆ. ಆ ಕ್ಯಾಸೆಟ್ ನನ್ನ ಪಾಲಿಗೆ ಅಮೂಲ್ಯ ಆಸ್ತಿಯಾಗಿತ್ತು. 2009 ಜುಲೈ 21 ರಂದು ಅವರು ಹುಬ್ಬಳ್ಳಿ ನಗರದಲ್ಲಿ ನಿಧನ ಹೊಂದಿದಾಗ ನಾನು ಸಿದ್ಧ ಪಡಿಸಿದ ನುಡಿ ನಮನ ದೊಂದಿಗೆ ಗಂಗೂಬಾಯಿ ಹಾನಗಲ್ ಅವರ ಹಿಂದೂಸ್ಥಾನಿ ಹಾಡುಗಾರಿಕೆ ನಮ್ಮ ಉದಯ ವಾರ್ತೆಯಲ್ಲಿ ದಿನವಿಡಿ ಪ್ರಸಾರವಾಯಿತು.
ತಮ್ಮ ಕೊನೆಯ ಉಸಿರು ಇರುವ ತನಕ ಸಂಗೀತಕ್ಕಾಗಿ ತುಡಿಯುತ್ತಿದ್ದ ಗಂಗೂಬಾಯಿಯವರು ಧಾರವಾಡ ನಗರದಲ್ಲಿ ನಡೆಯುತ್ತಿದ್ದ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸಂಗೀತ ಪ್ರಶಸ್ತಿ ಪ್ರಧಾನ , ಪಂಡಿತ್ ಬಸವರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಿಗೆ ಗಾಲಿ ಕುರ್ಚಿಯಲ್ಲಿ ಕುಳಿತು ಬಂದು ಪಾಲ್ಗೊಂಡು, ಆ ನಂತರ ಪ್ರಶಸ್ತಿ ಪುರಸ್ಕೃತರ ಸಂಗೀತವನ್ನು ಆಲಿಸುತ್ತಿದ್ದರು.ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಬಹುದೊಡ್ಡ ಕಲಾವಿದರು ತಮ್ಮ ಕಾರ್ಯಕ್ರಮಕ್ಕೆ ಮುನ್ನ ಗಂಗೂಬಾಯಿಯವರ ಮುಂದೆ ಹಾಡಲು ಅವಕಾಶ ಸಿಕ್ಕಿರುವುದು ತಮ್ಮ ಪುಣ್ಯ ಎಂದು ಸ್ಮರಿಸುತ್ತಿದ್ದರು. ಮದ್ರಾಸ್ ನಗರಕ್ಕೆ ಹೋದ ಕಲಾವಿದರು ಎಂ.ಎಸ್.ಸುಬ್ಬಲಕ್ಷ್ಮಿಯವರನ್ನು ಬೇಟಿ ಮಾಡಿ ಆರ್ಶಿವಾದ ಪಡೆಯುತ್ತಿದ್ದ ಹಾಗೆ, ಹುಬ್ಬಳ್ಳಿ- ಧಾರವಾಡ ನಗರಕ್ಕೆ ಆಗಮಿಸುತ್ತಿದ್ದ ಕಲಾವಿದರು ತಪ್ಪದೆ ಗಂಗೂಬಾಯಿಯವರ ನಿವಾಸಕ್ಕೆ ತೆರಳಿ ಆರ್ಶಿವಾದ ಪಡೆಯುತ್ತಿದ್ದರು.
ತಮ್ಮ ಕೊನೆಯ ದಿನಗಳಲ್ಲಿ ಎಂದು ಮನೆಯಲ್ಲಿ ಕೂರಲಿಚ್ಛಿಸಿದ ಗಂಗೂಬಾಯಿಯವರು ತಮ್ಮ ಇಳಿವಯಸ್ಸಿನ ಅನಾರೋಗ್ಯದ ನಡುವೆ ಪ್ರತಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು. ತಾವು ನಿಧನರಾಗುವ ಮೂರು ನಾಲ್ಕು ತಿಂಗಳ ಮುಂದೆ ಹುಬ್ಬಳ್ಳಿಯಲ್ಲಿ ತರುಣ್ ಭಾರತ್ ಎಂಬ ಮರಾಠಿ ಪತ್ರಿಕೆಗೆ ವರದಿಗಾರನಾಗಿದ್ದ ಅಬ್ಬಾಸ್ ಮುಲ್ಲಾ ಎಂಬ ಯುವಕನ ವಿವಾಹಕ್ಕೆ ಹಾಜರಾಗಿದ್ದರು. ಕಲ್ಯಾಣ ಮಂಟಪ ಮೊದಲ ಮಹಡಿಯಲ್ಲಿ ಇದ್ದ ಕಾರಣ ಗಾಲಿ ಕುರ್ಚಿಯಲ್ಲಿ ಮೇಲೆ ಬರಲು ಸಾಧ್ಯವಾಗಲಿಲ್ಲ ಆನಂತರ ಪ್ಲಾಸ್ಟಿಕ್ ಕುರ್ಚಿಯಲ್ಲಿ ಅವರನ್ನು ಕೂರಿಸಿ ಎತ್ತಿಕೊಂಡು ಬರಲಾಯಿತು. ಅವರನ್ನು ಎದುರಾದ ನಾನು ಅವರಿಗೆ ನಮಸ್ಕರಿಸಿ “ ಅಮ್ಮಾ ಈ ಸ್ಥಿತಿಯಲ್ಲಿ ಏಕೆ ಬಂದಿರಿ? ಎಂದು ಪ್ರಶ್ನಿಸಿದೆ. ಮನ್ಯಾಗ ಕುಂತು ಏನ್ ಮಾಡ್ಲಿ? ನೋಡು ಇಲ್ಲಿ ಎಷ್ಟು ಚೆಂದದ? ಎಷ್ಟು ಮಂದಿ ಇದ್ದಾರಾ? ಶಹನಾಯಿ ವಾದನ ಕೇಳ್ತಾ ಇದ್ದರ ಮನಸು ಹಗುರಾಗ್ತದ” ಎಂದು ನಗುತ್ತಾ ಅವರು ಉತ್ತರಿಸುವಾಗ ನನ್ನ ಕಣ್ಣುಗಳು ಒದ್ದೆಯಾದವು. ಸಂಗೀತವನ್ನು ತಮ್ಮ ಉಸಿರಿನಂತೆ ಪ್ರೀತಿಸಿದ, ಧ್ಯಾನಿಸಿದ, ಆರಾಧಿಸಿದ ಈ ಮಹಾನ್ ತಾಯಂದಿರ ವ್ಯಕ್ತಿತ್ವದ ಗುಣವೇ ಇಂತಹದ್ದು ಎಂದು ಕೊಂಡೆ.
ಎಂ.ಎಸ್. ಸುಬ್ಬುಲಕ್ಷ್ಮಿ, ಗಂಗೂಬಾಯಿ ಗಾನಗಲ್ ಅವರ ಕಾಲಘಟ್ಟದಲ್ಲಿ ನಾನೂ ಬದುಕಿದ್ದೆ, ಅವರ ಸಂಗೀತವನ್ನು ಕೇಳಿದ್ದೆ. ಅವರೊಡನೆ ಮಾತನಾಡಿದ್ದೆ ಎಂಬುದೇ ನನ್ನ ಬದುಕಿನ ಅಮೂಲ್ಯ ಕ್ಷಣಗಳು ಎಂದು ನಾನು ಭಾವಿಸಿದ್ದೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ