ದಶಕದ
ಹಿಂದೆ ವಿಶ್ವ ಸಂಸ್ಥೆಯ ಪ್ರಧಾನ
ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಅವರು
ಜಾಗತೀಕರಣ ವ್ಯವಸ್ಥೆಯಲ್ಲಿನ ವ್ಯಾಪಾರ ಒಪ್ಪಂಧಗಳ ಕುರಿತಂತೆ
ಆಡಿದ ಕಟು ಮಾತುಗಳಿವು. “ ಶ್ರೀಮಂತ
ರಾಷ್ಟ್ರಗಳು ಮುಕ್ತ ಮಾರುಕಟ್ಟೆಯ ಬಗ್ಗೆ
ಗುಣಗಾನ ಮಾಡುವುದು ಅಥವಾ ಆ ಕುರಿತು
ಬಡರಾಷ್ಟ್ರಗಳಿಗೆ ಬೋಧನೆ ಮಾಡುವುದು ಕಪಟ
ಆಚರಣೆಯಾಗಿದೆ. ಸ್ವತಃ ಶ್ರೀಮಂತ ರಾಷ್ಟ್ರಗಳು
ಬಡರಾಷ್ಟ್ರಗಳಿಗೆ ತಮ್ಮ ಮಾರುಕಟ್ಟೆಯನ್ನು ತೆರದಿಡದಿದ್ದರೆ
ಅಥವಾ ತೃತೀಯ ಜಗತ್ತಿನ ರಾಷ್ಟ್ರಗಳ
ಮಾರುಕಟ್ಟೆಗೆ ತಮ್ಮ ಭಾರಿ ರಿಯಾಯ್ತಿ
ಹೊಂದಿದ ತಮ್ಮ ಸರಕು, ಸೇವೆ,
ಸಾಮಾಗ್ರಿ, ಆಹಾರ ಪದಾರ್ಥಗಳನ್ನು ತಂದು
ರಾಶಿ ಹಾಕಿದರೆ ಬಡರಾಷ್ಟ್ರಗಳು ಬದುಕುವುದು
ಕಷ್ಟ. ಶ್ರೀಮಂತ ರಾಷ್ಟ್ರಗಳು ತಮ್ಮ
ಉತ್ಪಾದನೆ ಮತ್ತು ಉಪಭೋಗದ ವಿಧಾನಗಳನ್ನು
ಬದಲಾಯಿಸದೆ, ಜಾಗತಿಕ ಪರಿಸರವನ್ನು ರಕ್ಷಿಸಲು
ಬಡರಾಷ್ಟ್ರಗಳಿಗೆ ಒತ್ತಾಯ ಮಾಡಿದರೆ ಅವುಗಳು
ಕೇಳುವ ಸ್ಥಿತಿಯಲ್ಲಿ ಇಲ್ಲ” ವರ್ತಮಾನದ ನೋವಿನ ಸಂಗತಿಯೆಂದರೆ, ಎರಡು
ದಶಕ ಕಳೆದರೂ ಜಾಗತಿಕ ಅಸಮಾನತೆ
ಮತ್ತು ವ್ಯಾಪಾರ ಮತ್ತು ವ್ಯವಹಾರ
ಕುರಿತಂತೆ ಬಡರಾಷ್ಟ್ರಗಳು ಮತ್ತು ಶ್ರೀಮಂತ ರಾಷ್ಟ್ರಗಳ
ನಡುವಿನ ಕಂದಕ ಕಿರಿದಾಗುವ ಬದಲು
ಹಿರಿದಾಗುತ್ತಿದೆ. ಅದಕ್ಕೆ ಉದಾಹರಣೆ ಇತ್ತೀಚೆಗೆ
ಜಿನಿವಾ ನಗರದಲ್ಲಿ ನಡೆದ “ ವ್ಯಾಪಾರ ಸುಗುಮಗೊಳಿಸುವ
ನಿಟ್ಟಿನಲ್ಲಿ ಒಪ್ಪಂದದ
ಚರ್ಚೆಯವಿದ್ಯಾಮಾನ ವಿವಾದಕ್ಕೀಡಾದ ಸಂಗತಿ ನಮ್ಮ ಮುಂದಿದೆ.
ಇದೇ
ಜುಲೈ 26 ರಂದು ಜಿನಿವಾ ನಗರದ
ವಿಶ್ವವ್ಯಾಪಾರ ಸಂಘಟನೆಯ ಕೇಂದ್ರ ಕಛೇರಿಯಲ್ಲಿ
ನಡೆದ 160 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ
ಭಾರತ ಮತ್ತೊಮ್ಮೆ ಆಹಾರ ಸಬ್ಸಿಡಿ ಕುರಿತ
ಕೃಷಿ ಒಪ್ಪಂಧಕ್ಕೆ ಸಹಿ ಹಾಕಲು ನಿರಾಕರಿಸುವುದರ
ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ಕಳೆದ ವರ್ಷ ಇಂಡೊನೇಷಿಯಾದ ಬಾಲಿಯಲ್ಲಿ
ನಡೆದ ಸದಸ್ಯ ರಾಷ್ರಗಳ ವಾಣಿಜ್ಯ
ಸಚಿವರ ಸಭೆಯಲ್ಲಿ ಹಿಂದಿನ ಯು.ಪಿ.ಎ. ಸರ್ಕಾರದಲ್ಲಿ ಕೇಂದ್ರ
ವಾಣಿಜ್ಯ ಖಾತೆ ಸಚಿವರಾಗಿದ್ದ ಆನಂದ
ಶರ್ಮರವರು ಕೃಷಿ ಕುರಿತ ಹಲವು
ಒಪ್ಪಂಧಗಳ ಪುನರ್ ಪರಿಶೀಲನೆಗೆ ಒತ್ತಾಯಿಸಿದ್ದರು.
ಈ ತಿಂಗಳ ಅಂತ್ಯದೊಳಗೆ
ಎಲ್ಲಾ ರಾಷ್ಟ್ರಗಳ ಸಹಿ ಪಡೆದು ಡಿಸಂಬರ್
ಅಂತ್ಯಕ್ಕೆ ಕಾರ್ಯಸೂಚಿ ಮಾರ್ಗಸೂತ್ರಗಳನ್ನು ಸಿದ್ಧಪಡಿಸಿ ಮುಂದಿನ ಜನವರಿಯಿಂದ ಜಾರಿಗೆ
ತರಲು ಹೊರಟಿದ್ದ ಅಮೇರಿಕಾ ಮತ್ತು ಮಿತ್ರ
ಶ್ರೀಮಂತ ರಾಷ್ಟ್ರಗಳಿಗೆ ಕಳೆದ ಹದಿಮೂರು ವರ್ಷಗಳಿಂದ
ಭಾರತ ತೋರುತ್ತಿರುವ ಪ್ರತಿರೋಧ ಮತ್ತು ಇದಕ್ಕೆ ವ್ಯಕ್ತವಾಗುತ್ತಿರುವ
ತೃತೀಯ ಮತ್ತು ಅಭಿವೃದ್ಧಿ ಶೀಲ
ರಾಷ್ಟ್ರಗಳ ಬೆಂಬಲ ನುಂಗಲಾರದ ಬಿಸಿತುಪ್ಪವಾಗಿದೆ.
ನಮ್ಮ
ನಡುವಿನ ಹಿರಿಯ ಲೇಖಕ ಪ್ರೊ.
ಬರಗೂರು ರಾಮಚಂದ್ರಪ್ಪ ಜಾಗತೀಕರಣ ವ್ಯವಸ್ಥೆಯನ್ನು “ ಶಬ್ದವಿಲ್ಲದ ನಿಶ್ಯಬ್ದ ಯುದ್ಧ” ಎಂದು ದಶಕದ ಹಿಂದೆ
ವಿಶ್ಲೇಷಿಸಿದ್ದರು. ಇವೊತ್ತಿಗೂ ವಿಶ್ವ ವ್ಯಾಪಾರ ಸಂಘಟನೆಯ
ಜಾಗತೀಕರಣದ ಪ್ರಕ್ರಿಯೆಗಳು ಕಿಂಚಿತ್ತೂ ಬದಲಾಗಿಲ್ಲ. ಕಳೆದ ಶುಕ್ರವಾರ (ಜುಲೈ
25 ರಂದು) ನಡೆದ ಟ್ರೇಡ್ ಫೆಸಿಲಿಟೇಷನ್
ಅಗ್ರಿಮೆಂಟ್ ಅಂದರೆ ವಾಣಿಜ್ಯ ವ್ಯವಹಾರವನ್ನು
ಸುಗುಮಗೊಳಿಸುವ ಒಪ್ಪಂಧಕ್ಕೆ ಭಾರತ ಸಹಿ ಹಾಕಲು
ಸ್ಪøಷ್ಟವಾಗಿ ನಿರಾಕರಿಸಿದೆ. ದೇಶದ
ಆಹಾರ ಭದ್ರತೆ, ಮತ್ತು ಕೃಷಿ
ಚಟುವಟಿಕೆಗಳಿಗೆ ರೈತರಿಗೆ ನೀಡುತ್ತಿರುವ ಸಹಾಯಧನ
ಹಾಗೂ ಕೃಷಿ ಉತ್ಪನ್ನಗಳಿಗೆ ನೀಡುತ್ತಿರುವ
ಬೆಂಬಲ ಬೆಲೆಯನ್ನೂ ಒಳಗೊಂಡಂತೆ ಬಡವರಿಗೆ ಸಬ್ಸಿಡಿ ದರದಲ್ಲಿ
ನ್ಯಾಯ ಬೆಲೆ ಅಂಗಡಿಗಳ ಮೂಲಕ
ನೀಡುತ್ತಿರುವ ಆಹಾರ ಧಾನ್ಯಗಳಿಗೆ ಈ
ಒಪ್ಪಂಧ ಮುಳುವಾಗಲಿದೆ ಎಂಬುದು ಭಾರತದ ನಿಲುವು.
ಇದು ಅಕ್ಷರಶಃ ಸತ್ಯ ಕೂಡ
ಹೌದು.
ವಿಶ್ವ
ವ್ಯಾಪಾರೀಕರಣ ಸಂಘಟನೆ ಸಿದ್ಧಪಡಿಸಿರುವ ಕರಡು
ಒಪ್ಪಂಧದಲ್ಲಿ ಯಾವ ಕಾರಣಕ್ಕೂ ಸದಸ್ಯ
ರಾಷ್ಟ್ರಗಳ ಒಟ್ಟು ಕೃಷಿ ಉತ್ಪಾದನೆಯ
ಶೇಕಡ ಹತ್ತಕ್ಕಿಂತ ಹೆಚ್ಚು ಸಬ್ಸಿಡಿ ಮೊತ್ತ
ಇರಬಾರದು ಎಂದು ಸೂಚಿಸಲಾಗಿದೆ. ಆದರೆ,
ಅಮೇರಿಕಾ ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಮತ್ತು
ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ರೈತರಿಗೆ
ಕೃಷಿ ಸಬ್ಸಿಡಿ ನೀಡುವ ಬದಲು,
ರಫ್ತು ಪ್ರೋತ್ಸಾಹ ಧನ ಎಂದು ನೀಡುವುದರ
ಮೂಲಕ ಕೃಷಿ ಸಬ್ಸಿಯ ಒಪ್ಪಂಧದ
ಮೂಲ ರೂಪು ರೇಷೆಗಳನ್ನು ಉಲ್ಲಂಘಿಸಲಾಗಿದೆ.
ಶ್ರಿಮಂತ ರಾಷ್ಟ್ರಗಳಲ್ಲಿ ಹಸು ಸಾಕಾಣಿಕೆಗೆ ನೀಡುತ್ತಿರುವ
ಪ್ರೊತ್ಸಾಹ ಧನ ಮತ್ತು ಕೃಷಿ
ಜಮೀನನ್ನು ಪಾಳು ಬಿಟ್ಟಿದ್ದಕ್ಕೆ ನೀಡುವ
ಪರಿಹಾರ ಧನ ಇವೆಲ್ಲವನ್ನೂ ಒಪ್ಪಂಧದ
ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ತಮ್ಮಲ್ಲಿರುವ
ಆಧುನಿಕ ಕೃಷಿ ತಂತ್ರಜ್ಞಾನ ಮತ್ತು
ಕುಲಾಂತರಿ ಬೆಳೆಗಳ ಮೂಲಕ ಅಪಾರ
ಪ್ರಮಾಣದಲ್ಲಿ ಹತ್ತಿ, ಗೋಧಿ ಮತ್ತು
ಮೆಕ್ಕೆಜೋಳ ಇವುಗಳನ್ನು ಬೆಳೆಯುತ್ತಿರುವ ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ , ಇಂಗ್ಲೇಂಡ್
ಮುಂತಾದ ಶ್ರೀಮಂತ ರಾಷ್ಟ್ರಗಳಿಗೆ ತಮ್ಮ
ಆಹಾರ ದಾಸ್ತಾನನ್ನು ತುರ್ತು ವಿಲೇವಾರಿ ಮಾಡಲು
ಕಂಡುಕೊಂಡ ರಹದಾರಿಯೇ ಈ ಟಿ.ಎಫ್.ಎ. ಅಥವಾ ವಾಣಿಜ್ಯ
ಸುಗಮಗೊಳಿಸುವ ಒಪ್ಪಂಧ. ವಿಶ್ವ ವ್ಯಾಪಾರ
ಸಂಘಟನೆಯ ಕೃಷಿ ಒಪ್ಪಂಧ ಕುರಿತ
ಭಾರತದ ಪ್ರತಿಭಟನೆಗೆ ಸುದೀರ್ಘ ಇತಿಹಾಸವಿದೆ. 2001 ರಲ್ಲಿ
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ
ಕೇಂದ್ರ ವಾಣಿಜ್ಯ ಸಚಿವರಾಗಿದ್ದ ದಿ.
ಮುರಸೋಳಿ ಮಾರನ್ ಹಾರಿಸಿದ ಪ್ರತಿಭಟನೆಯ
ಭಾವುಟವನ್ನು ಸರ್ಕಾರ ಅಥವಾ ಪಕ್ಷಗಳ
ಭೇದ ಭಾವವಿಲ್ಲದೆ, ನಿರಂತರವಾಗಿ ಅರುಣ್
ಜೇಟ್ಲಿ ( ಎನ್.ಡಿ.ಎ.
ಸರ್ಕಾರ) ಮತ್ತು ಡಾ. ಮನಮೋಹನ್
ನೃತೃತ್ವದ ಯು.ಪಿ.ಎ ಸರ್ಕಾರದಲ್ಲಿ
ಕಮಲ್ ನಾಥ್ ಮತ್ತು ಆನಂದ್
ಶರ್ಮ ಇವರು ವಾಣಿಜ್ಯ ಸಚಿವರಾಗಿ ಎತ್ತಿ
ಹಿಡಿದಿದ್ದಾರೆ. ಇದೀಗ ನರೇಂದ್ರ ಮೋದಿ
ನೇತೃತ್ವದ ಎನ.ಡಿ.ಎ.
ಸರ್ಕಾರದಲ್ಲಿ ವಾಣಿಜ್ಯ ಖಾತೆಯ ರಾಜ್ಯ
ಸಚಿವೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್
ಕೂಡ ಅಷ್ಟೇ ಪ್ರಭಾವಶಾಲಿಯಾಗಿ ಭಾರತದ
ಹಿತಾಸಕ್ತಿಯನ್ನು ಕಾಪಾಡುತ್ತಿದ್ದಾರೆ. ಅರ್ಥಶಾಸ್ತ್ರದ ಸ್ನಾತಕೋತ್ತರ ಪದವೀಧರೆಯಾಗಿ ಹಾಗೂ ಭಾರತ ಮತ್ತು
ಐರೋಪ್ಯ ರಾಷ್ಟ್ರಗಳ ನಡುವಿನ ಜವಳಿ ವ್ಯಾಪಾರ
ಮತ್ತು ಒಪ್ಪಂಧ ( ಜಾಗತೀರಣದ ಒಪ್ಪಂಧದಡಿ) ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪದವಿ
ಪಡೆದಿರವ ನಿರ್ಮಾಲಾ ಸೀತಾರಾಮನ್ ಅವರಿಗೆ ವಿಶ್ವ ವ್ಯಾಪಾರ
ಸಂಘಟನೆಯ ವ್ಯವಹಾರಗಳು ಅಥವಾ ಹುನ್ನಾರಗಳು ಹೊಸದೇನಲ್ಲ.
ವಿಶ್ವವ್ಯಾಪಾರ
ಸಂಘಟನೆಯ ನಿಯಾಮಾವಳಿ ಸಂಖ್ಯೆ ಒಂಬತ್ತನೆಯ ನಿಯಮದ
ಪ್ರಕಾರ ಒಂದು ಸದಸ್ಯ ರಾಷ್ಟ್ರಕ್ಕೆ
ಒಂದೇ ಮತ ಎಂಬ ನಿಯಮ
ಜಾರಿಯಲ್ಲಿದೆ. ಆದರೆ, ಅಮೇರಿಕಾ ನೇತೃತ್ವದ
ಶ್ರೀಮಂತ ರಾಷ್ಟ್ರಗಳ ಒಕ್ಕೂಟ ತಾನು ರೂಪಿಸುವ
ನಿಯಮಗಳಿಗೆ ಸದಸ್ಯ ರಾಷ್ಟ್ರಗಳ ಅಭಿಪ್ರಾಯಗಳನ್ನು
ಕೇಳಬೇಕೆಂಬ ಕನಿಷ್ಠ ವಿವೇಚನೆಯನ್ನು ಇಟ್ಟುಕೊಳ್ಳದೆ,
ತಾನು ಸೃಷ್ಟಿಸಿಕೊಂಡಿರುವ ಸರ್ವ ಸಮ್ಮತಿ ಸೂತ್ರವನ್ನು
ಸದಾ ಬಳಕೆ ಮಾಡಿಕೊಂಡು ಜಾರಿಗೆ
ತರಲು ಪ್ರಯತ್ನಿಸುತ್ತಿದೆ. ಶ್ರೀಮಂತ ರಾಷ್ಟ್ರಗಳ ಮೈತ್ರಿ
ಒಕ್ಕೂಟ ತೆಗೆದುಕೊಳ್ಳುವ ತೀರ್ಮಾನವೇ ವಿಶ್ವ ವ್ಯಾಪಾರ ಅಥವಾ
ವಾಣಿಜ್ಯ ಸಂಘಟನೆಯ ತೀರ್ಮಾನವಾಗುತ್ತದೆ. ಸರ್ವ
ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ ಯಾವುದೇ ಒಂದು ವಿಷಯದ
ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ
ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ
ಇರುವ ಅವಕಾಶ ಕೇವಲ ಭಾಷಣ
ಮಾಡುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನಿಜವಾದ
ತೀರ್ಮಾನಗಳು ಮೊದಲೇ ಅನೌಪಚಾರಿಕವಾಗಿ ವಿದ್ಯುಕ್ತವಲ್ಲದ
ರೀತಿಯಲ್ಲಿ ತೀರ್ಮಾನವಾಗಿರುತ್ತದೆ. ಈ ತೀರ್ಮಾನಗಳನ್ನು ಒಪ್ಪಿಕೊಳ್ಳುವಂತೆ
ಪ್ರತಿನಿಧಿಗಳ ಮೇಲೆ ಒತ್ತಡ ಕಾರ್ಯತಂತ್ರವನ್ನು
ಹೇರಲಾಗುತ್ತದೆ.
ಈ
ಕಾರಣಕ್ಕಾಗಿ 1996 ರಲ್ಲಿ ನಡೆದ “ ಸಿಂಗಾಪುರ್
ವಿಷಯಗಳು”
ಕುರಿತ ಚರ್ಚೆ, 1999 ರಲ್ಲಿ ಸಿಯಾಟಲ್ ನಗರದಲ್ಲಿ
ನಡೆದ ಬಂಡವಾಳ ಹೂಡಿಕೆ ಕುರಿತಾದ
ಚರ್ಚೆಗಳು ಹಲವು ರೀತಿಯ ವಿರೋಧ,
ಪ್ರತಿಭಟನೆಗೆ ಕಾರಣವಾಗಿ ನೆನಗುದಿಗೆ ಬಿದ್ದವು.
2001 ರಲ್ಲಿ ಕತಾರ್
ನ ದೋಹಾ ನಗರದಲ್ಲಿ
ನಡೆದ ಶೃಂಗ ಸಭೆಯಲ್ಲಿ ತಮ್ಮ
ಅನುಕೂಲಕ್ಕೆ ತಕ್ಕಂತೆ ರೂಪಿಸಿದ್ದ ಅನೇಕ
ವಾಣಿಜ್ಯ ಒಪ್ಪಂಧಗಳಿಗೆ ಭಾರತ ಪ್ರಥಮ ಬಾರಿಗೆ
ಪ್ರತಿಭಟನೆ ಸೂಚಿಸಿತು. ಆಶ್ಚರ್ಯವೆಂದರೆ, ಒಪ್ಪಂಧ ಕುರಿತಾದ ಸಭೆಯಲ್ಲಿ
ಮೂಡಿದ ಅಭಿಪ್ರಾಯ ಅಥವಾ ವಿರೋಧ ಇವುಗಳನ್ನು
ಸಭೆಯ ನಡಾವಳಿ ದಾಖಲೆ ಪುಸ್ತಕದಲ್ಲಿ
ದಾಖಲಿಸಲಿಲ್ಲ. 2001ರ ನವಂಬರ್ ತಿಂಗಳಿನಲ್ಲಿ
ನಡೆದ ಈ ಸಭೆಯ ಸಂದರ್ಭದಲ್ಲಿ
ನವಂಬರ್ 13 ರ ಮಧ್ಯ ರಾತ್ರಿ
ಅಂದಿನ ಪ್ರಧಾನಿ ಅಟಲ್ ಬಿಹಾರಿ
ವಾಜಪೆಯಿ ಅವರಿಗೆ ದೂರವಾಣಿ ಕರೆ
ಮಾಡಿದ ಬ್ರಿಟನ್ ಪ್ರಧಾನಿ ಟೋನಿ
ಬ್ಲೇರ್, ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ
ಕೇಂದ್ರ ವಾಣಿಜ್ಯ ಸಚಿವ ಮುರಸೊಳಿ
ಮಾರನ್ ಅವರಿಗೆ ಒತ್ತಡ ಹೇರಿ ಅವರ
ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು. ಇಂತಹದ್ದೇ ಒತ್ತಡ ತಂತ್ರವನ್ನು ವಿಶ್ವ
ವ್ಯಾಪಾರ ಸಂಘಟನೆಯಲ್ಲಿ ಶ್ರೀಮಂತ ರಾಷ್ಟ್ರಗಳು ಗುಪ್ತವಾಗಿ
ಜಾರಿಯಲ್ಲಿಟ್ಟಿವೆ.
ಕೃಷಿ
ಒಪ್ಪಂಧ ಕುರಿತ ಕರಡು ಮಸೂದೆಯು
ವಿಶ್ವ ವ್ಯಾಪಾರ ಸಂಗಟನೆಯಲ್ಲಿ ಕೃಷಿ
ಸಮಿತಿಯ ಅಧ್ಯಕ್ಷರಾಗಿದ್ದ ಸ್ಟುವರ್ಟ್ ಹಾರ್ಬಿನೇಷನ್ ಎಂಬುವರಿಂದ ರಚಿತವಾಗಿದೆ. ಇದು ವ್ಯಾಪಾರ
ಸುಗುಮ ಗೊಳಿಸುವ ಒಪ್ಪಂಧಕ್ಕೆ ಸಹಿ
ಮಾಡುವ ಪ್ರಕ್ರಿಯೆಯಲ್ಲಿ ಶ್ರೀಮಂತ ಮತ್ತು ಬಡರಾಷ್ಟ್ರಗಳ
ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈಗಿನ ಕರಡು ಪ್ರತಿಯಲ್ಲಿ
ಈ ಹಿಂದೆ ಉರುಗ್ವೆಯಲ್ಲಿ
ನಡೆದ ಮಾತುಕತೆಯ ಸಂದರ್ಭದಲ್ಲಿ ಬಡ
ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿಭಟನೆಯ ಕಾರಣದಿಂದ ಚರ್ಚೆಯಿಂದ ಹೊರಗಿಡಲಾಗಿದ್ದ ಸುಂಕ, ಆಂತರೀಕ ಪ್ರೋತ್ಸಾಹ,
ರಫ್ತು ಸಬ್ಸಿಡಿ ಮುಂತಾದ ವಿಷಯಗಳಿಗೆ
ಪ್ರಾಧಾನ್ಯತೆ ನೀಡಲಾಗಿದೆ. ನಿಜವಾಗಿ ಪ್ರಾಧಾನ್ಯತೆ ನೀಡಬೇಕಾಗಿದ್ದ
ಆಹಾರ ಭದ್ರತೆ, ಗ್ರಾಮೀಣಾಭಿವೃದ್ಧಿ ವಿಷಯಗಳ
ಕುರಿತ ರಿಯಾಯಿತಿ ಹಾಗೂ ಬಡ ಮತ್ತು
ಸಣ್ಣ ಕೃಷಿ ಕುಟುಂಬಗಳ ರಕ್ಷಣೆ
ಕುರಿತು ವಿವರವಾದ ಮಾಹಿತಿಗಳಿಲ್ಲ. ಬಡರಾಷ್ಟ್ರಗಳನ್ನು
ಕೃಷಿ ಸಬ್ಸಿಡಿಯಿಂದ ರಕ್ಷಿಸುವ ಬದಲು , ಶ್ರೀಮಂತರಾಷ್ಟ್ರಗಳು ನೀಡುತ್ತಿರುವ
ವಿವಿಧ ಬಗೆಯ ಅಪಾರ ಪ್ರಮಾಣದ
ಕೃಷಿ ಸಬ್ಸಿಡಿ ಪ್ರಮಾಣವನ್ನು ರಕ್ಷಿಸುವ
ಅಂಶಗಳು ಎದ್ದು ಕಾಣುತ್ತಿವೆ. ಶ್ರೀಮಂತ
ರಾಷ್ಟ್ರಗಳು ಕೃಷಿಕರಿಗೆ ಒದಗಿಸುತ್ತಿರುವ ವಿಶೇಷ ತರಬೇತಿ, ಪರಿಸರ
ಮತ್ತು ಮಣ್ಣಿನ ರಕ್ಷಣೆ, ಭೂಮಿಯನ್ನು
ಕೃಷಿ ಚಟುವಟಿಕೆಗೆ ಒಳಪಡಿಸದಿದ್ದರೆ ಅದಕ್ಕಾಗಿ ನೀಡುವ ವಿಶೇಷ ಪರಿಹಾರವನ್ನು
ಈಗಿನ ಕೃಷಿ ಒಪ್ಪಂಧದಲ್ಲಿ ಸಬ್ಸಿಡಿ
ಎಂದು ಪರಿಗಣಿಸಿಲ್ಲ. ಇದಕ್ಕೆ ಬದಲಾಗಿ ಅಂತರಾಷ್ಟ್ರೀಯ
ವ್ಯಾಪಾರವು ಯಾವ ಕಾರಣಕ್ಕೂ ವಿಕೃತಿಗೊಳ್ಳುವುದಿಲ್ಲ
ಎಂಬ ಪೊಳ್ಳು ಆಶ್ವಾಸನೆಯನ್ನು ಒಪ್ಪಂಧದ
ವರದಿಯಲ್ಲಿ ನೀಡಲಾಗಿದೆ. ಸಧ್ಯ ಭಾರತ ದೇಶವು
ಕೃಷಿ ಸಬ್ಸಿಡಿ ಮತ್ತು ಆಹಾರ
ಧಾನ್ಯಗಳ ವಿತರಣೆ ಮತ್ತು ಬೆಂಬಲ
ಬೆಲೆಗಾಗಿ ವಾರ್ಷಿಕವಾಗಿ ಸುಮಾರು ಒಂದೂವರೆ ಲಕ್ಷ
ಕೋಟಿ ರೂಪಾಯಿಗಳನ್ನು ವ್ಯಯಮಾಡುತ್ತಿದೆ. ಈಗಿನ ಒಪ್ಪಂಧಕ್ಕೆ ಸಹಿ
ಹಾಕಿದರೆ, ಭಾರತದ ಕೃಷಿ ಮತ್ತು
ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯ
ಮೊತ್ತ ಹನ್ನೆರಡು ಸಾವಿರ ಕೋಟಿಯನ್ನು ದಾಟುವುದು
ಕಷ್ಟವಾಗುತ್ತದೆ. ಈ ಕಾರಣಕ್ಕಾಗಿ ಭಾರತ
ಸೇರಿದಂತೆ, ತೃತೀಯ ಜಗತ್ತಿನ ಬಡರಾಷ್ಟ್ರಗಳು,
ಚೀನಾ ಮತ್ತು ಬ್ರೆಜಿಲ್ ರಾಷ್ಟ್ರಗಳು
ಅಸಮಾನತೆ ಮತ್ತು ಗೊಂದಲದ ಗೂಡಾಗಿರುವ
ಕೃಷಿ ಒಪ್ಪಂಧಕ್ಕೆ ಸಂಬಂಧಪಟ್ಟ ವ್ಯಾಪಾರ ಸುಗಮಗೊಳಿಸುವ ಒಪ್ಪಂಧಕ್ಕೆ
ಸಹಿ ಹಾಕಲು ನಿರಾಕರಿಸಿವೆ. ಪ್ರಸಿದ್ಧ
ಅರ್ಥಶಾಸ್ತ್ರಜ್ಞ ಬೋರಿಸ್ ಕಗ್ಲಿಲಿಸ್ಟ್ಕಿ
ಎಂಬುವರು ಯಾವುದೇ ಒಂದು ರಾಷ್ಟ್ರದ
ಅಥವಾ ಸರ್ಕಾರದ ಅಬಿವೃದ್ಧಿ ಪರವಾದ
ಸಿದ್ಧಂತಗಳಲ್ಲಿ ಮೂರನೇ ಶಕ್ತಿಯ ಹಸ್ತಕ್ಷೇಪವಿರಬಾರದು
ಎಂದಿದ್ದರು. ಆದರೆ, ವರ್ತಮಾನದ ಜಗತ್ತಿನಲ್ಲಿ
ಜಾಗತೀಕರಣದ ನೆಪದಲ್ಲಿ ಏಕಮುಖ ನೀತಿ ಮತ್ತು
ಸರ್ವಾಧಿಕಾರದ ಚಕ್ರಾಧಿಪತ್ಯವೊಂದು ಹಲವು ಬಗೆಗಳಲ್ಲಿ, ಹಲವು
ರೂಪಗಳಲ್ಲಿ ಬಡ ಹಾಗೂ ಅಭಿವೃಧ್ಧಿಶೀಲ
ರಾಷ್ಟ್ರಗಳನ್ನು ಶೋಷಣೆ ಮಾಡುತ್ತಿದೆ.
ಆತ್ಮೀಯ ಜಗದೀಶರವರೆ,
ಪ್ರತ್ಯುತ್ತರಅಳಿಸಿತಮ್ಮ ಲೇಖನ ಚನ್ನಾಗಿದೆ. ಕೃಷಿ ಒಪ್ಪಂಧ ಕರಡು ಮಸೂದೆಯ ವಿವರಗಳನ್ನು ಒಂದು ಪ್ರತ್ಯೇಕ ಲೇಖನವಾಗಿ ಬರೆದರೆ (ಅಥವಾ ತಾವು ಮೊದಲೆ ಬರೆದಿದ್ದರೆ, ಯಾರಾದರೂ ಬರೆದಿದ್ದರೆ ಅದರ ಕೊಂಡಿ ಕೊಡುವುದು) ಬಹಳ ಅನುಕೂಲವಾಗುತ್ತದೆ.
ಇಂತಿ
ಅರವಿಂದ
ಪ್ರಿಯ ಅರವಿಂದ್, 2004 ರಲ್ಲಿ ನಾನು ಹಂಪಿ ಕನ್ನಡ ವಿ.ವಿ.ಗೆ ಡಾಕ್ಟರೇಟ್ ಪದವಿಗಾಗಿ ನಡೆಸಿದ ಸಂಶೋಧನಾ ಪ್ರಬಂಧದಲ್ಲಿ ಈ ಕುರಿತು ಮಾಹಿತಿ ಇದೆ. "ಜಾಗತೀಕರಣ ಮತ್ತು ಗ್ರಾಮಭಾರತ" ಹೆಸರಿನಲ್ಲಿ ಕೃತಿ ಪ್ರಕಟವಾಗಿದ್ದು, ಈ ವರೆಗೆ ಎಂಟು ಸಾವಿರ ಪ್ರತಿಗಳು ಮಾರಾಟವಾಗಿವೆ. ಸಪ್ನ ಬುಕ್ ಹೌಸ್ ನಲ್ಲಿ ಈ ಕೃತಿ ದೊರೆಯುತ್ತದೆ. ದೊರೆಯದಿದ್ದರೆ, ನೀವು ಪ್ರಕಾಶಕರಾದ ಹಾವೇರಿಯ ಜಿ.ಎಮ್. ಕುಲಕರ್ಣಿಯವರನ್ನು ಸಂಪರ್ಕಿಸಬಹುದು. ಅವರ ನಂಬರ್-9448941294.
ಪ್ರತ್ಯುತ್ತರಅಳಿಸಿಧನ್ಯವಾದಗಳು....
ಪ್ರತ್ಯುತ್ತರಅಳಿಸಿ