ಭಾರತೀಯ
ಮಹಿಳೆಯ ಸಮಸ್ಯೆ ಕುರಿತು ಮಾತನಾಡುವುದು
ಅಥವಾ ಬರೆಯುವೆದೆಂದರೆ, ಅದು ಎಂದೆಂದಿಗೂ ಮುಗಿಯದ
ಕಥನವೆಂದೇ ಹೇಳಬೇಕಿದೆ. ದೇಶದ ಇತಿಹಾಸದ ಉದ್ದಕ್ಕೂ
ಅವಳು ನಡೆದು ಬಂದ ಕಲ್ಲು
ಮುಳ್ಳಿನ ಹಾದಿಯನ್ನು ಒಮ್ಮೆ ಅವಲೋಕಿಸಿದರೆ, ಶೋಷಣೆಯೆಂಬುದು
ಅವಳ ಬದುಕಿನ ಒಂದು ಅವಿಭಾಜ್ಯ
ಅಂಗವಾದಂತಿದೆ.
ಇದು
ಈ ದೇಶದ ಹೀನ
ಚರಿತ್ರೆ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ನಡೆದು
ಬಂದಿರುವ ಮಹಿಳಾ ಲೋಕದ ಕಪ್ಪು
ಚರಿತ್ರೆ ಕೂಡ ಹೌದು. ನಾಗರೀಕತೆಯು
ಉಗಮವಾದ ಕಾಲದಿಂದಲೂ ಪ್ರಾಬಲ್ಯ ಸಾಧಿಸಿಕೊಂಡು ಬಂದಿರುವ ಪುರುಷ ಜಗತ್ತು
ಅವಳನ್ನು ಬಣ್ಣ ಬಣ್ಣದ ಮಾತುಗಳಿಂದ
ಬಣ್ಣಿಸಿ ಪಳಗಿಸುವುದರ ಮೂಲಕ ನಾಲ್ಕು ಗೋಡೆಯ
ನಡುವೆ ಬಂಧಿಸಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.
ನಮ್ಮ
ಪೂರ್ವಿಕರು ಈ ಜಗತ್ತಿನ ಬಹುತೇಕ
ಕೊಡುಗೆಗಳನ್ನು ಹೆಣ್ಣಿಗೆ ಹೋಲಿಸಿ ಅವಳಿಗೆ ಪೂಜ್ಯ
ಸ್ಥಾನವನ್ನು ನೀಡಿ ಗೌರವಿಸಿದ್ದರು. ಉದಾಹರಣೆಗೆ
ಭೂಮಿಯನ್ನು ಭೂಮಿತಾಯಿ ಎಂದು ಕರೆದರು. ನಿಸರ್ಗವನ್ನು
ಪಕೃತಿ ಮಾತೆ ಎಂದು ಕರೆದರು.
ಹರಿಯುವ ನೀರಿಗೆ ಗಂಗೆ ಎಂದು
ಕರೆದು ಕೈ ಮುಗಿದರು. ಆರ್ಯರು
ಭಾರತಕ್ಕೆ ಬರುವ ಮುನ್ನ ಇಲ್ಲಿ
ಅಸ್ತಿತ್ವದಲ್ಲಿದ್ದ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಕೂಡ
ಹೆಣ್ಣನ್ನು ಅಗ್ರ ಸ್ಥಾನದಲ್ಲಿ ಇಟ್ಟು
ಗೌರವಿಸುತ್ತಿತ್ತು.
ಇವುಗಳ
ಜೊತೆಗೆ ವೇದ ಮತ್ತು ಉಪನಿಷತ್ತಿನ
ಕಾಲದಲ್ಲಿ ಹೆಣ್ಣಿನ
ಕುರಿತಾಗಿ ಅಸ್ತಿತ್ವದಲ್ಲಿದ್ದ ಅನೇಕ ಶ್ಲೋಕಗಳು ಇಂದಿಗೂ
ನಮಗೆ ದೊರೆಯುತ್ತವೆ. ಅವುಗಳಲ್ಲಿ ಹೆಣ್ಣಿನ ಸಮಾನತೆ ಮತ್ತು
ಅವಳ ವೈವಾಹಿಕ ವಯಸ್ಸಿನ ಅರ್ಹತೆ
ಕುರಿತಂತೆ ಬಣ್ಣನೆಗಳಿವೆ. ಕ್ರಿಸ್ತ ಪೂರ್ವ ನಾಲ್ಕನೆಯ
ಶತಮಾನದ “ ಅಪಸ್ತಂಭ ಸೂತ್ರ” ಎಂಬ ಕೃತಿಯಲ್ಲಿ ಹೆಣ್ಣಿನ
ಬಗೆಯ ಸ್ಥಾನ ಮಾನಗಳ ಕುರಿತು
ಇರುವ ಚಿತ್ರಣವನ್ನು 18 ನೇಯ ಶತಮಾನದಲ್ಲಿ ತಮಿಳುನಾಡಿನ
ತಂಜಾವೂರು ಮರಾಠ ದೊರೆಗಳ ಸಂಸ್ಥಾನದಲ್ಲಿ
ಆಸ್ಥಾನ ಕವಿಯಾಗಿದ್ದ ತ್ರಯಂಭಕ ಯುಜವನ್ ಎಂಬಾತ
ದಾಖಲಿಸಿದ್ದಾನೆ.
ಭಾರತದ
ನೆಲದಲ್ಲಿ ಪ್ರಪಥಭಾರಿಗೆ ಹೆಣ್ಣಿನ ಸ್ಥಾನ ಮಾನಗಳು
ಪಲ್ಲಟಗೊಳ್ಳಲು ಆರಂಭಗೊಂಡಿದ್ದು ಕ್ರಿಸ್ತಪೂರ್ವ 500 ರಲ್ಲಿ ಎಂದು ಇತಿಹಾಸಕಾರರು
ಗುರುತಿಸಿದ್ದಾರೆ. ಅಲ್ಲಿಂದ ಆರಂಭಗೊಂಡ ಅವಳ
ಅವನತಿಯ ಕಥನ ಈ ವರ್ತಮಾನದ
ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಸಹ ಮುಗಿದಿಲ್ಲ ಎಂಬುವುದು
ನೋವಿನ ಸಂಗತಿ. ಅವಳ ಶೋಷಣೆಯ
ಕುರಿತಾಗಿ ಕೇವಲ ಮಾನದಂಡಗಳಷ್ಟೇ ಅಲ್ಲ,
ಅಯುಧಗಳು ಕೂಡ ಬದಲಾಗಿವೆ. ಜೊತೆಗೆ
ನಾವು ನೋಡುವ ದೃಷ್ಟಿಕೋನಕ್ಕೆ ಮತ್ತು
ಗ್ರಹಿಕೆಯ ನೆಲೆಗಳಿಗೂ ಒಂದು ಸೀಮಿತ ಚೌಕಟ್ಟನ್ನು
ಹಾಕಲಾಗಿದೆ. ಹಾಗಾಗಿ ಅವಳನ್ನು ಕುರಿತಾಗಿ
ಸೃಷ್ಟಿಯಾಗಿರುವ ಕಾವ್ಯ, ಸಾಹಿತ್ಯ ಅಥವಾ
ಚರಿತ್ರೆ ಇವುಗಳೆಲ್ಲಾ ಒಂದು ಮಗ್ಗುಲಿನ ಚರಿತ್ರೆ
ಎಂದು ನಿಸ್ಸಂಕೋಚವಾಗಿ ಹೇಳಬಹುದು. ಈ ಕಾರಣಕ್ಕಾಗಿಯೇ ಜಗತ್ತಿನ
ಅತ್ಯಂತ ಕ್ರೂರ ಪ್ರಾಣಿ ಯಾವುದು
ಎಂದು ಕೇಳಿದರೆ, ನನ್ನ ಉತ್ತರ ಮನುಷ್ಯ
ಎಂಬುದಾಗಿರುತ್ತದೆ. ಈ ನೆಲದ ನಿಸರ್ಗದ
ನಡುವೆ ಅಂದರೆ ಶಿಲಾಯುಗದ ಕಾಲದ
ಮಾನವ ಬದುಕುತ್ತಿದ್ದಾಗ, ಅವನ ಕೈಗೆ ಕಬ್ಬಿಣ
ಆಯುಧವಾಗಿ ಸಿಕ್ಕ ನಂತರ ಅವನ
ಬದುಕಿನ ಚಿತ್ರಣವೇ ಬದಲಾಗಿ ಹೋಯಿತು. ನೆಲದ
ಮೇಲಿರುವ ಅತ್ಯಂತ ಬಲಿಷ್ಟ ಹಾಗೂ
ದೈತ್ಯ ಪ್ರಾಣಿ ಆನೆಯಿಂದ ಹಿಡಿದು,
ಕುದುರೆ ಹಾಗೂ ದನ,
ಹಸು, ಕುರಿ, ಮೇಕೆ, ಕೋಳಿ
ಮುಂತಾದ ಜಾನುವಾರು ಪ್ರಾಣಿಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ
ಪಳಗಿಸಿ ಬಳಸಿಕೊಂಡಿದ್ದು ಅವನ ಬುದ್ದಿವಂತಿಕೆ ಮಾತ್ರವಲ್ಲ,
ಇದರಲ್ಲಿ ಅವನ ಸ್ವಾರ್ಥ ಕೂಡ
ಅಡಗಿತ್ತು. ಇವುಗಳ ಜೊತೆಗೆ ಅವನು
ತನ್ನಂತೆ ಉಸಿರಾಡುವ, ನೋವಾದಾಗ ಅಳುವ, ಸಂತೋóಷವಾದಾಗ ನಗುವ ಭಾವನೆಗಳಿದ್ದ ಹೆಣ್ಣನ್ನು ಒಂದು
ಸಹೃದಯಿ ಜೀವ ಎಂದು ಭಾವಿಸುವ
ಬದಲು ತನ್ನ ತನ್ನೆಲ್ಲಾ ಮೂಲಭೂತ
ಬೇಡಿಕೆಗಳನ್ನು ( ಕಾಮ, ಹಸಿವು) ಪೂರೈಸುವ
ಪ್ರಾಣಿ ಎಂದು ಭಾವಿಸಿದ. ಅವಳನ್ನು
ತನ್ನ ಅಡಿಯಾಳಾಗಿ ಇರಿಸಿಕೊಂಡ. ಪುರುಷ ಜಗತ್ತಿನ ಈ
ಸ್ವಾರ್ಥದ ಪ್ರಥಮ ನಡೆಯಿಂದಾಗಿ ಅವಳ
ಅವನತಿಯ ಕಾಲ ಆರಂಭಗೊಂಡಿತು ಎಂದು
ಹೇಳಬಹುದು.
ಭಾರತಕ್ಕೆ
ಮುಸ್ಲಿಂರು ದಂಡೆತ್ತಿ ಬಂದ ನಂತರ ಹಾಗೂ
ಬಾಬರ್ ನ ಮೊಗಲ್ ಸಾಮ್ರಾಜ್ಯದ
ಆಳ್ವಿಕೆಯ ನಂತರ ಭಾರತದಲ್ಲಿನ ಹೆಣ್ಣು
ಮಕ್ಕಳ ಸ್ಥಾನವು ಮತ್ತಷ್ಟು ಅವನತಿಗೆ
ದೂಡಲ್ಪಟ್ಟಿತು. ತಮ್ಮ ಭೋಗದ ವಸ್ತುವಾಗಿರುವ
ಹೆಣ್ಣು ಎಂಬ ಜೀವ ಯಾವ
ಕಾರಣಕ್ಕೂ ಇನ್ನೊಬ್ಬರ ಸ್ವತ್ತಾಗಬಾರದು ಎಂಬ ದೃಷ್ಟಿಕೋನದಿಂದ ಅವಳನ್ನು
ನಾಲ್ಕು ಗೋಡೆಯ ನಡುವಿನ ಬದುಕಿಗೆ
ಸೀಮಿತವಾಗಿರಿಸಿ, ಅವಳ ಸೌಂದರ್ಯ ಇನ್ನೊಬ್ಬರಿಗೆ
ಬೀಳಬಾರದು ಅಥವಾ ತಾಕಬಾರದು ಎಂಬ
ದೃಷ್ಟಿಕೋನದಿಂದ ಅವಳ ಮುಖದ ಮೇಲೆ
ಪರದೆ ಅಥವಾ ಸೆರಗನ್ನು ಎಳೆಯಲಾಯಿತು.
ಜೊತೆಗೆ ಯುದ್ಧದ ಸಂದರ್ಭಗಳಲ್ಲಿ ಮಡಿದ
ರಾಜ ಅಥವಾ ಸೈನಿಕರ ಮಡದಿಯರು
ಇನ್ನೊಬ್ಬರ ತೊತ್ತಾಗಬಾರದು ಎಂಬ ಕಾರಣಕ್ಕಾಗಿ ಸತಿ
ಸಹಗಮನ ಎಂಬ ಅಮಾನುಷ ಹಾಗೂ
ಕ್ರೌರ್ಯದಿಂದ ಕೂಡಿದ ಪದ್ಧತಿಯನ್ನು ಜಾರಿಗೆ
ತಂದು ಅದಕ್ಕೆ ಪಾವಿತ್ರ್ಯದ ಲೇಪನ
ಬಳಿಯಲಾಯಿತು.
ಮಧ್ಯಕಾಲೀನ
ಭಾರತದ ಚರಿತ್ರೆ ಎಂದರೆ ರಾಜ
ಮಹಾರಾಜರ ಏಳು ಬೀಳಿನ ಕಥನವೆಂದು
ಇತಿಹಾಸದುದ್ದಕ್ಕೂ ಬಣ್ಣಿಸಿಕೊಂಡು ಬರಲಾಗಿದೆ. ಆದರೆ, ಈ ಕಾಲಘಟ್ಟದಲ್ಲಿ
ಬಹುಪತ್ನಿತ್ವ ಪದ್ಧತಿ ಜಾರಿಗೆ ಬಂದ
ಫಲವಾಗಿ ಹೆಣ್ಣು ಮಕ್ಕಳು ಅನೇಕ
ರಾಜ ಮಹಾರಾಜರ ಅಸಂಖ್ಯಾತ ಮಡದಿಯರಲ್ಲಿ
ಒಬ್ಬರಾಗಿ ಅರಮನೆಯೆಂಬ ಸೆರೆಮನೆಯೊಳಗೆ ಬಂಧಿಯಾದರು. ಉತ್ತರ ಭಾರತ ಮತ್ತು
ಮಧ್ಯ ಭಾರತದಲ್ಲಿ ಪ್ರತಿಯೊಬ್ಬ ದೊರೆಯೂ ಕನಿಷ್ಟ ಹತ್ತರಿಂದ
ಇನ್ನೂರು ಸಂಖ್ಯೆಯವರೆಗೆ ಮಡದಿಯರನ್ನು ಹೊಂದಿದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.
ಜೊತೆಗೆ ಹೆಣ್ಣಿಗಾಗಿ ಅನೇಕ ಯುದ್ಧಗಳು ಜರುಗಿಹೋಗಿವೆ.
ಯುದ್ಧಗಳ ಕುರಿತಾಗಿ ಬಣ್ಣಿಸಿರುವ ಅಥವಾ ಸೃಷ್ಟಿಯಾಗಿರುವ ಬಹುತೇಕ
ಚರಿತ್ರೆಗಳು ಕೇವಲ ಅರ್ಧ ಸತ್ಯದಿಂದ
ಮಾತ್ರ ಕೂಡಿವೆ. ಉಳಿದರ್ಧ ಚರಿತ್ರೆಯು
ಹೆಣ್ಣುಗಳ ಮೌನ ರೋಧನದಿಂದ ಕೂಡಿದ್ದು
ಅದು ಎಂದಿಗೂ ಅಕ್ಷರ ರೂಪವನ್ನು
ತಾಳಲಿಲ್ಲ.
ಯುದ್ಧಗಳಲ್ಲಿ
ಸೋತ ಸಾಮ್ರಾಜ್ಯದ ಹೆಣ್ಣುಮಕ್ಕಳು ವಯಸ್ಸಿನ ಬೇಧವಿಲ್ಲದೆ, ಗೆದ್ದ
ಸೈನಿಕರ ಕಾಮದ ತೃಷೆಗಾಗಾಗಿ ಯುದ್ಧಭೂಮಿಯ
ಗುಡಾರಗಳಲ್ಲಿ ಅಮಾನುಷವಾಗಿ ಬಳಕೆ ಮಾಡಲ್ಪಟ್ಟಿರುವ ಹೀನ
ಚರಿತ್ರೆಯೊಂದು ಭಾರತದ ಇತಿಹಾಸದ ಪುಟಗಳಲ್ಲಿ
ದಾಖಲಾಗದೆ ಅಲಿಖಿತ ಪಠ್ಯವಾಗಿಯೇ ಉಳಿದು
ಹೋಯಿತು. ಭಾರತದ ಇತಿಹಾಸದಲ್ಲಿ ಮೊಗಲರು
ಮತ್ತು ರಜಪೂತರ ನಡುವೆ ನಡೆದ
ಅನೇಕ ಯುದ್ಧಗಳು ಹೆಣ್ಣಿಗಾಗಿ ನಡೆದಿವೆ ಎಂಬುದು ಸುಳ್ಳಲ್ಲ.
ಮೊಗಲ್ ಚಕ್ರವರ್ತಿ ಅಕ್ಬರ್, ರಜಪೂತ ಹೆಣ್ಣು
ಮಗಳು ಪದ್ಮಿನಿಯನ್ನು ವಿವಾಹವಾಗಿ ಹಿಂದೂ- ಇಸ್ಲಾಂ ಧರ್ಮದ
ನಡುವೆ ಮೈತ್ರಿ ಬೆಸೆದ ಎಂಬುದಾಗಿ
ಇತಿಹಾಸದ ಪುಟಗಳು ಹೇಳುತ್ತವೆ. ಆದರೆ,
ಆಕೆಗಾಗಿ ಅಕ್ಬರ್ ರಜಪೂತರ
ಮೇಲೆ ಹದಿಮೂರು ಬಾರಿ ದಂಡೆತ್ತಿ
ಹೋದ ವಿಷಯ ಎಲ್ಲಿಯೂ ದಾಖಲಾಗುವುದಿಲ್ಲ.
ಈಗಿನ ರಾಜಸ್ಥಾನದ ಜೋಧಪುರ, ಉದಯಪುರ, ಜೈಸಲ್ಮೇರ್,
ಚಿತ್ತೋರ್, ಜೈಪುರ್ ನಗರಗಳಲ್ಲಿ ಸುಂದರವಾದ ಅರಮನೆಗಳು ಮತ್ತು ಅದಕ್ಕೆ ಹೊಂದಿಕೊಂಡಂತೆ
ಇರುವ ಉದ್ಯಾನವನ ಹಾಗೂ ಸರೋವರಗಳು, ತೆರದ
ಬಾವಿಗಳು ಇಂದಿಗೂ ಅಸ್ತಿತ್ವದಲ್ಲಿವೆ. ಇವುಗಳು
ಅಲ್ಲಿನ ಮಳೆಯ ಅಭಾವದಿಂದ ಮಳೆ
ನೀರು ಶೇಖರಿಸಲು ಮಾಡಿಕೊಂಡಿದ್ದ ಸೌಲಭ್ಯಗಳು ಅಥವಾ ಅರಮನೆಯ ಸುತ್ತ
ಮುತ್ತ ತಂಪು ಹವೆ ಇರುವಂತೆ ರಾಜರು
ಮಾಡಿಕೊಂಡ ವ್ಯವಸ್ಥೆ ಎಂದು ಬಣ್ಣಿಸಿಕೊಂಡು ಬರಲಾಗಿದೆ.
ಆದರೆ, ಇದು ಯುದ್ಧಭೂಮಿಯಲ್ಲಿ ಸಂಸ್ಥಾನದ
ದೊರೆ ಮಡಿದಾಗÀ ತಕ್ಷಣವೆ ಅವನ
ರಾಣಿಯರು ಮತ್ತು ಅವರ ಸೇವಕ,ಸೇವಕಿಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು
ನಿರ್ಮಿಸಿಕೊಂಡಿದ್ದ ವ್ಯವಸ್ಥೆ ಎಂಬುದರ ಬಗ್ಗೆ ಇತಿಹಾಸ
ಮಾತ್ರ ಮೌನದತ್ತ ಜಾರಿದೆ. ಭಾರತದ
ಚರಿತ್ರೆಯ ಪುಟಗಳಲ್ಲಿ ಅತ್ಯಂತ ಹೆಚ್ಚು ಸಾಮೂಹಿಕ
ಆತ್ಯಹತ್ಯೆಗಳು ನಡೆದಿರುವುದು ರಾಜಸ್ಥಾನದಲ್ಲಿ ಎಂಬುದು ಗಮನಾರ್ಹ. ಜೊತೆಗೆ
ಸತಿಸಹಗಮನ ಪದ್ಧತಿ ಮಧ್ಯಕಾಲೀನ ಯುಗದಿಂದ
ಆರಂಭವಾಗಿ; 20 ನೇ ಶತಮಾನದ ವರೆಗೆ
ಅಂದರೆ ಇಪ್ಪತ್ತು ವರ್ಷಗಳ
ಹಿಂದೆ ನಡೆದ
ರಾಜಸ್ಥಾನದ ರೂಪಕೌರ್ ಎಂಬ ಮಹಿಳೆ
ತನ್ನ ಪತಿಯ ಚಿತೆ ಹಾರಿದ
ಕ್ಷಣದವರೆಗೂ ಹೆಣ್ಣು ಕುಲದ ಕಪ್ಪುÀ
ಚರಿತ್ರೆಯೊಂದು ಅಕ್ಷರ ರೂಪದಲ್ಲಿ ದಾಖಲಾಗದೆ
ಅಲಿಖಿತ ಪಠ್ಯವಾಗಿ ಉಳಿದು ಹೋಗಿದೆ.
16 ಮತ್ತು
17ನೇಯ ಶತಮಾನದಲ್ಲಿ ಭಾರತಕ್ಕೆ ಬಂದ ಬ್ರಿಟೀಷರು, ಇಲ್ಲಿನ ಹೆಣ್ಣುಗಳ ಕುರಿತಾದ
ಬಾಲ್ಯ ವಿವಾಹ, ಸತಿ ಸಹಗಮನ,
ಬಹು ಪತ್ನಿತ್ವದಂತಹ ಅಮಾನುಷ ಆಚರಣೆಗಳನ್ನು ರದ್ದುಗೊಳಿಸುವ
ನಿಟ್ಟಿನಲ್ಲಿ ಅನೇಕ ಕಾನೂನುಗಳನ್ನು ಜಾರಿಗೆ
ತಂದರು. ಆದರೆ, ಬಹುಮುಖಿ ಸಂಸ್ಕøತಿಯ ಭಾರತದಲ್ಲಿ ಕಾನೂನುಗಳನ್ನು
ರೂಪಿಸುವ ಸಂದರ್ಭಗಳಲ್ಲಿ ಸ್ಥಳಿಯ ಧರ್ಮ ಮತ್ತು
ಸಂಸ್ಸ್ಕøತಿಯ ನಿಯಾಮಾವಳಿಗಳನ್ನು ಆಧಾರವಾಗಿ
ಇಟ್ಟುಕೊಂಡು ಕಾನೂನುಗಳನ್ನು ರೂಪಿಸಿದ್ದರ ಫಲವಾಗಿ ಅನೇಕ ಆಚರಣೆಗಳು
ಸಂಸ್ಕøತಿಯ ನೆಪದಲ್ಲಿ ಮರು
ಹುಟ್ಟು ಪಡೆದವು. ಇದರಿಂದಾಗಿ, ಬಂಗಾಳ
ಸೇರಿದಂತೆ ಉತ್ತರ ಭಾರತದಲ್ಲಿ ಮೇಲ್ವರ್ಗದ
ಜನರಲ್ಲಿ ಬಹುಪತ್ನಿತ್ವ ಪದ್ಧತಿಯನ್ನು ಜಾರಿಯಲ್ಲಿ ಉಳಿಸಿಕೊಂಡರು. ಇತ್ತ ದಕ್ಷಿಣದ ಕೇರಳದಲ್ಲಿ
ನಂಬೂದರಿ ಎಂಬ ಮೇಲ್ವರ್ಗದ ಬ್ರಾಹಣರ
ಕಪಿಮುಷ್ಟಿಯಲ್ಲಿದ್ದ ತಳ ಸಮುದಾಯದ ಹೆಣ್ಣು
ಮಕ್ಕಳು ಸೊಂಟದ ಮೇಲ್ಭಾಗಕ್ಕೆ ಬಟ್ಟೆ
ಧರಿಸದೆ, ತೆರೆದ ಎದೆಯಲ್ಲಿ ಓಡಾಡಬೇಕಾದ
ಪರಿಸ್ಥಿತಿಯೂ ಜಾರಿಯಲ್ಲಿತ್ತು. ಜೊತೆಗೆ ಬ್ರಿಟೀಷರು ವಿಧವಾ
ವಿವಾಹಕ್ಕೆ ಅನುಕೂಲವಾಗುವಂತೆ ಕಾನೂನು ರೂಪಿಸಿದ್ದರೂ ಸಹ
ಭಾರತದ ಬಹುತೇಕ ಮೇಲ್ವರ್ಗದ ಸಮುದಾಯಗಳು
ಇದಕ್ಕೆ ಪ್ರೋತ್ಸಾಹ ನೀಡದೆ ತಮ್ಮ ವಿಧವಾ
ಹೆಣ್ಣುಮಕ್ಕಳನ್ನು ಸಂಸ್ಕøತಿಯ ನೆಪದಲ್ಲಿ
ಅವರ ತಲೆ ಬೋಳಿಸಿ, ಅವರನ್ನು
ವಿರೂಪಗೊಳಿಸುವುದರ ಜೊತೆಗೆ ಕತ್ತಲೆಯ ಕೋಣೆಯಲ್ಲಿ
ಜೀವಮಾನವಿಡಿ ಕೊಳೆಹಾಕಿ ಹೊಸಕಿ ಹಾಕಿದವು.
ಈಸ್ಟ್
ಇಂಡಿಯಾ ಕಂಪನಿಯಲ್ಲಿ ಸೇವೆ ಸಲ್ಲಿಸಿದ ಅನೇಕ
ಗೌರ್ನರ್ ಜನರಲ್ ಗಳು ( ವಿಶೇಷವಾಗಿ
ವಾರನ್ ಹೇಸ್ಟಿಂಗ್ ಮತ್ತು ಡಾಲ್ ಹೌಸಿ)
ಮತ್ತು ಹಿರಿಯ ಅಧಿಕಾರಿಗಳ ಮಾನವೀಯತೆ
ಮತ್ತು ಅಂತಃಕರಣದ ಹೃದಯದಿಂದಾಗಿ ಕೆಲವು ಅನಿಷ್ಟ ಆಚರಣೆಗಳು
ಸ್ಥಗಿತಗೊಂಡಿದ್ದನ್ನು ನಾವು ಇತಿಹಾಸದಲ್ಲಿ
ಕಾಣ ಬಹುದು.
1792 ರಲ್ಲಿ ಕರ್ನಾಟಕ
ಪ್ರವಾಸ ಮಾಡಿದ್ದ ಪ್ರಾನ್ಸಿನ ಅಬುದುಬಾಯಿ
ಎಂಬ ಪ್ರವಾಸಿಗ ತಾನು ಕಣ್ಣಾರೆ ಕಂಡ
ಸತಿ ಸಹಗಮನ ಪದ್ಧತಿಯನ್ನು ಕಣ್ಣಿಗೆ
ಕಟ್ಟುವಂತೆ ರೂಪಿಸಿದ್ದಾನೆ. ಇದರ ಜೊತೆಗೆ ಮತ್ತೊಂದು
ಮಹತ್ವದ ಸಂಗತಿಯೆಂದರೆ, 17 ನೇ ಶತಮಾನದ ಕೊನೆಯ
ಭಾಗದಲ್ಲಿ ಕಲ್ಲತ್ತ ನಗರದಲ್ಲಿದ್ದ ಈಸ್ಟ್
ಇಂಡಿಯಾ ಕಂಪನಿಯ ಅಧಿಕಾರಿ ಜಾಬ್
ಚಾರ್ನಾಕ್ ಎಂಬಾತ (ಈತ ಕಲ್ಲತ್ತ
ನಗರದ ವಿಲಿಯಂ ಕೋಟೆಯನ್ನು ನಿರ್ಮಿಸಿದವನು)
ಬೆಳಗಿನ ವೇಳೆ ವಾಯುವಿಹಾರಕ್ಕೆ ತೆರಳಿದ
ಸಂದರ್ಭದಲ್ಲಿ ಮೃತನಾದ ಪತಿಯ ಚಿತೆಯೊಳಕ್ಕೆ
ಬಾಲ ವಿಧವೆಯನ್ನು ಬಲವಾಗಿ ತಳ್ಳುತ್ತಿರುವುದನ್ನು ತಡೆದು,
ಆಕೆಯನ್ನು ಸೈನಿಕರ ಮೂಲಕ ತನ್ನ
ನಿವಾಸಕ್ಕೆ ಕರೆದೊಯ್ದು ರಕ್ಷಿಸುತ್ತಾನೆ. ನಂತರದ ದಿನಗಳಲ್ಲಿ ಅಕೆಯನ್ನು
ಮೆಚ್ಚಿ ವಿವಾಹವಾಗಿ ಅವಳಿಂದ ಮಕ್ಕಳನ್ನು ಪಡೆದ
ಕಥನವೊಂದು ಈಗಲೂ ಇತಿಹಾಸದಲ್ಲಿ
ಕಾಣಬಹುದಾಗಿದೆ.
ಭಾರತದ
ಸಾಮಾಜಿಕ ಸುಧಾರಣೆಗಳಲ್ಲಿ ಪಶ್ಚಿಮ ಬಂಗಾಳದ ಪಾತ್ರ
ಬಹು ಮುಖ್ಯವಾದುದು. ಭಾರತದಲ್ಲಿ ಪ್ರಪಥಮವಾಗಿ ಈಸ್ಟ್ ಇಂಡಿಯ ಕಂಪನಿಯ
ಬ್ರಿಟೀಷರ ಮೂಲಕ ಇಂಗ್ಲೀಷ್ ಭಾಷೆಗೆ
ಅಲ್ಲಿನ ಮೇಲ್ವರ್ಗದ ಜನ ತೆರದುಕೊಂಡುದರ ಫಲವಾಗಿ
ಭಾರತದ ಸಾಮಾಜಿಕ ರಂಗದಲ್ಲಿ ಅನೇಕ ಮಹತ್ವದ ಬದಲಾವಣೆಗಳಾದವು.
19 ನೆಯ ಶತಮಾನದ ಪ್ರಸಿದ್ಧ ಸಮಾಜ
ಸುಧಾರಕ ರಾಜಾರಾಂ ಮೋಹನ್ ರಾಯ್
ಸೇರಿದಂತೆ ಅನೇಕ ಮಹನೀಯರ ಹೋರಾಟದ
ಫಲವಾಗಿ ಬಾಲ್ಯವಿವಾಹಕ್ಕೆ ಕಡಿವಾಣ ಬಿತ್ತು ಜೊತೆಗೆ
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು
ನೀಡಲಾಯಿತು.
16 ನೇಯ
ಶತಮಾನದಿಂದ ಭಾರತದ ಬಹುತೇಕ ಸಂಸ್ಶಾನಗಳು
ಮತ್ತು ಅಲ್ಲಿನ ದೇವಲಾಯಗಳಲ್ಲಿ ಆಚರಣೆಯಲ್ಲಿದ್ದ
ದೇವದಾಸಿ ಪದ್ಧತಿ ಕುರಿತಂತೆ ಹಲವಾರು
ವಿದ್ಯಾವಂತ ಮಹಿಳೆಯರಲ್ಲಿ ಜಾಗೃತಿ
ಮೂಡಿತು. 1927 ರಲ್ಲಿ ಸ್ವತಃ ಪುದುಕೋಟೈ
ಸಂಸ್ಥಾನದ ಓರ್ವ
ದೇವದಾಸಿ ಕುಟುಂಬದಿಂದ ಬಂದಿದ್ದ ತಮಿಳುನಾಡಿನ ಪ್ರಪಥಮ
ವೈದ್ಯಕೀಯ ಪದವೀಧರೆ ಡಾ. ಮುತ್ತುಲಕ್ಷ್ಮಿ
ರೆಡ್ಡಿ ಎಂಬ ಹೆಣ್ಣು ಮಗಳು
ಮದ್ರಾಸ್ ಪ್ರಾಂತ್ಯದ ವಿಧಾನಸಭೆಯ ಸದಸ್ಯಳಾಗಿದ್ದ ಸಂದರ್ಭದಲ್ಲಿ ಇದರ ಬಗ್ಗೆ ಧ್ವನಿ
ಎತ್ತಿದ್ದರು. ಆನಂತರ 1947 ರಲ್ಲಿ ಭಾರತದಾತ್ಯಂತ ದೇವದಾಸಿ
ಪದ್ಧತಿಯ ಮೇಲೆ ನಿಷೇಧ ಹೇರಲಾಯಿತು.
ಸೋಜಿಗ ಸಂಗತಿಯೆಂದರೆ. ಮೈಸೂರು ಸಂಸ್ಥಾನದ ದೊರೆ
ಹತ್ತನೆಯ ಚಾಮರಾಜ ಒಡೆಯರ್ 1892 ರಲ್ಲಿ
ನಂಜನಗೂಡಿನ ಭೋಗ ನಂದೀಶ್ವರ ದೇವಾಲಯದಲ್ಲಿದ್ದ
ದೇವದಾಸಿಯರ ನೃತ್ಯ ಪದ್ಧತಿಯನ್ನು ರದ್ದುಗೊಳಿಸಿದ್ದರು.
ಆನಂತರ ಅಧಿಕಾರಕ್ಕೆ ಬಂದ ಅವರ ಪುತ್ರ
ನಾಲ್ವಡಿ ಕೃಷ್ಣ ರಾಜ ಒಡೆಯರ್
ಸಹ 1909 ರಲ್ಲಿ ಇಡೀ ಮೈಸೂರು
ಸಂಸ್ಥಾನದಲ್ಲಿ ದೇವದಾಸಿ ಪದ್ಧತಿಯನ್ನು ನಿಷೇಧಗೊಳಿಸಿದ್ದÀರು. ಜೊತೆಗೆ ಬಾಲ್ಯವಿವಾಹಕ್ಕೆ
ಕಡಿವಾಣ ಹಾಕಿ, ಹೆಣ್ಣು ಮಕ್ಕಳ
ಶಿಕ್ಷಣಕ್ಕೆ ಒತ್ತು ನೀಡಿದ್ದಲ್ಲದೆ,
ವಿಧವಾ ವಿವಾಹಕ್ಕೂ ಪ್ರೋತ್ಸಾಹ ನೀಡಿದ್ದರು.
ಇಪ್ಪತ್ತನೆಯ
ಶತಮಾನದ ಆರಂಭ ಮತ್ತು ನಂತರದ
ದಿನಗಳಲ್ಲಿ ಭಾರತದಲ್ಲಿ ಆರಂಭಗೊಂಡ ಸ್ವಾತಂತ್ರ್ಯ ಚಳುವಳಿಯ ಫಲವಾಗಿ ಅನೇಕ
ಪ್ರತಿಷ್ಟಿತ ಕುಟುಂಬದ ಹೆಣ್ಣುಮಕ್ಕಳು ಸಮಾಜದ
ಮುಖ್ಯವಾಹಿನಿಗೆ ಬರುವುದರ ಮೂಲಕ ಇತರೆ
ಹೆಣ್ಣು ಮಕ್ಕಳಿಗೆ ಮಾದರಿಯಾದರು. ಇವರಲ್ಲಿ ಗಾಂಧೀಜಿಯವರ ಪತ್ನಿ
ಕಸ್ತೂರಬಾ, ಸರೋಜಿನಿ ನಾಯ್ಡು, ವಿಜಯಲಕ್ಷ್ಮಿ
ಪಂಡಿತ್, ರಮಾಬಾಯಿ, ರುಕ್ಮಿಣಿ ಅರುಂಡಾಳ್, ಡಾ. ಮುತ್ತುಲಕ್ಷ್ಮಿರೆಡ್ಡಿ, ಆಂಧ್ರದ
ವಿಜಯಮ್ಮ, ಸಾವಿತ್ರಿಬಾಯಿಪುಲೆ,
ಕ್ರೋನಾಲಿಯಸೋರಾಬ್ಜಿ ಮುಂತಾದವರು ಮುಖ್ಯರಾಗಿದ್ದಾರೆ.
ಸ್ವಾತಂತ್ಯ್ರಾ
ನಂತರದ ಭಾರತದಲ್ಲಿ ಮಹಿಳೆಯರಿಗೆ ದೊರೆತ ಶಿಕ್ಷಣದ ಫಲವಾಗಿ
ಮಹಿಳಾ ಸಮುದಾಯದಲ್ಲಿ ಜಾಗೃತಿ, ಆತ್ಮವಿಶ್ವಾಸ ಹಾಗೂ
ಪುರುಷ ಸಮಾನ ಭಾವನೆ ಮೂಡುವುದರ
ಜೊತೆಗೆ ಬಾಲ್ಯ ವಿವಾಹಗಳ ವಿರುದ್ಧ
ಪ್ರತಿಭಟಿಸುವ ಪ್ರಜ್ಞೆಯನ್ನು ಬೆಳಸಿಕೊಂಡಳು. ಭಾರತೀಯ ಮಹಿಳಾ ಸಮುದಾಯ
ಎಚ್ಚೆತ್ತುಕೊಂಡ ಹಿನ್ನಲೆಯಲ್ಲಿ ಮಹಿಳೆಯರನ್ನು ಆವರಗೆÀ ನೋಡುತ್ತಿದ್ದ ಪುರುಷ
ಜಗತ್ತಿನ ಮನೋಭಾವ ಕೂಡ ಬದಲಾಯಿತು.
ಆದರೆ ಮಹಿಳಾ ಲೋಕದ ಬವಣೆಗಳು
ಮಾತ್ರ ಬದಲಾಗಲಿಲ್ಲ.
ವರ್ತಮಾನದ
ಜಗತ್ತು ಅಧುನಿಕ ತಂತ್ರಜ್ಞಾನದ 21 ನೇಯ
ಶತಮಾನಕ್ಕೆ ಕಾಲಿಟ್ಟಿದ್ದರೂ ಸಹ ಮಹಿಳೆ ಮೇಲಿನ
ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ
ಮತ್ತು ಹೆಣ್ನು ಬ್ರೂಣ ಹತ್ಯೆಗಳು
ಯಥಾ ಸ್ಥಿತಿಯಲ್ಲಿ ಮುಂದುವರಿದಿವೆ. ಭಾರತದಲ್ಲಿ ಪ್ರತಿ ಹತ್ತು ನಿಮಿಷಕ್ಕೆ
ಒಂದು ಲೈಂಗಿಕ ಕಿರುಕುಳ, ಪ್ರತಿ
20 ನಿಮಿಷಕ್ಕೆ ಒಂದು ಅತ್ಯಾಚಾರ ಹಾಗೂ
ಪ್ರತಿ 150 ನಿಮಿಷಕ್ಕೆ ಮಹಿಳೆಯರ ಕೊಲೆ ಜರುಗುತ್ತಿದೆ. ಭಾರತದಲ್ಲಿ
ವರ್ಷವೊಂದಕ್ಕೆ 40 ಲಕ್ಷ ಹೆಣ್ಣು ಬ್ರೂಣ
ಹತ್ಯೆಗಳು ಜರುಗುತ್ತಿವೆ. ನಗರ ಪ್ರದೇಶದ ಮಹಿಳೆಯರಲ್ಲಿ
ಶೇಕಡ 65 ರಷ್ಟು ಮತ್ತು ಗ್ರಾಮೀಣ
ಭಾಗದ ಮಹಿಳೆಯರಲ್ಲಿ ಶೇಕಡ 46 ರಷ್ಟು ಅಕ್ಷರಸ್ತ
ಮಹಿಳೆಯರಿದ್ದರೂ ಸಹ ಬದಲಾಗದ ಪುರುಷ
ಜಗತ್ತಿನ ಮನೋಭಾವದಿಂದ ಅಧಿಕಗೊಂಡಿರುವ
ಅತ್ಯಾಚಾರಗಳ ನಡುವೆ ನಲುಗಿ ಹೋಗಿದ್ದಾರೆ.
ಇನ್ನು
ಗ್ರಾಂಮೀಣ ಭಾಗದ ಮಹಿಳೆಯರ ಬದುಕು
ಅಕ್ಷರ ಮತ್ತು ಮಾತಿಗೆ ನಿಲುಕುವಂತಹದ್ದಲ್ಲ.
ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಹಿಡಿದು, ಗೃಹಕೃತ್ಯ, ನೀರು
ತರುವುದು, ಉರವಲು ಕಟ್ಟಿಗೆ ಸಂಗ್ರಹಿಸುವುದು,
ಮಕ್ಕಳ ಪಾಲನೆ ಪೋಷಣೆ ಇವುಗಳ
ನಡುವೆ ಅವಳು ಕಳೆದು ಹೋಗಿದ್ದಾಳೆ.
ಹಸಿವಿನ ನೇರ ಪರಿಣಾಮಕ್ಕೆ ಮೊದಲ
ಬಲಿ ಮಹಿಳೆ ಎಂಬ ಪ್ರಜ್ಞೆ
ಇಂದಿಗೂ ನಮ್ಮನ್ನು ಕಾಡುವುದಿಲ್ಲ. ಬಡತನದ ಬದುಕಿನ ನಡುವೆ
ಕಟ್ಟಿಕೊಂಡ ಪತಿಗೆ ಮತ್ತು ಹುಟ್ಟಿದ
ಮಕ್ಕಳಿಗೆ ತಾನು ಉಣಬಡಿಸಿ, ಆಹಾರ
ಉಳಿದಿದ್ದರೆ, ತಿಂದು, ಇಲ್ಲವೆ ನೀರು
ಕುಡಿದು ಮಲಗುವುದು ಮಹಿಳೆಯರ ಜಾಯಮಾನವಾಗಿದೆ.
ಭಾರತದ
ಮಹಿಳೆಯ ಹೆಜ್ಜೆಯ ಗುರುತುಗಳಲ್ಲಿ ವ್ಯಾಖ್ಯಾನಕ್ಕೆ
ನಿಲುಕದ ಅನೇಕ ನೋವಿನ ಅದ್ಯಾಯಗಳಿದ್ದರೂ
ಸಹ ಅವುಗಳನ್ನು ಮೀರಿ ಪುರುಷ ಜಗತ್ತಿನೆದುರು
ಸಮಾನಾಗಿ ತಲೆ
ಎತ್ತಿ ನಿಲ್ಲುವ, ಮಾತನಾಡುವ ಎತ್ತರಕ್ಕೆ ಇಂದು ಬೆಳೆದು ನಿಂತಿದ್ದಾಳೆ.
ಅವಳಿಗೆ ಸಿಕ್ಕ ಶಿಕ್ಷಣ, ಅಭಿವ್ಯಕ್ತಿ
ಸ್ವಾತಂತ್ರ್ಯ, ಆಸ್ತಿಯಲ್ಲಿ ಸಮ ಪಾಲು ಪಡೆಯುವ
ಹಕ್ಕು ಮತ್ತು
ಬದಲಾದ ಜಾಗತಿಕ ವಿದ್ಯಾಮಾನದ ನಡುವೆ
ಮಾಹಿತಿ ತಂತ್ರಜ್ಞಾನದ ಕ್ಷಿಪ್ರ ಕ್ರಾಂತಿಯ ಬದಲಾವಣೆ
ಇವೆಲ್ಲವೂ ಅವಳಿಗೆ ಪರೋಕ್ಷವಾಗಿ ನೆರವಾಗಿವೆ.
ನಿಜ ಆದರೆ, ಲಿಂಗ ತಾರತಮ್ಯ,
ಉದ್ಯೋಗ ಮೀಸಲಾತಿಯಲ್ಲಿ ಕಡಗಣನೆ ಹಾಗೂ ರಾಜಕೀಯದಲ್ಲಿ
ಶೇಕಡ 33 ರ ಮೀಸಲಾತಿಯ ಪಾಲು
ನೀಡಲು ನಿರಾಕರಿಸುತ್ತಿರುವ ಪುರುಷ ರಾಜಕಾರಣಿಗಳ ಕುಯುಕ್ತಿ
ಇವುಗಳ ಬಲೆಯಿಂದ ಆಕೆಗೆ ಇನ್ನೂ
ಬಿಡುಗಡೆ ಸಿಕ್ಕಿಲ್ಲ. ರಾಷ್ಟಪತಿ, ಪ್ರಧಾನಿ ಮತ್ತು ಲೋಕಸಭೆಯ
ಸ್ಪೀಕರ್ ಸ್ಥಾನಗಳನ್ನು ಮಹಿಳೆಯರು ಪಡೆದ ಮಾತ್ರಕ್ಕೆ ಅದನ್ನು
ಭಾರತದ ಪ್ರಜಾಪ್ರಭುತ್ವದ ಹೆಗ್ಗಳಿಕೆ ಎಂದು ಪ್ರತಿಬಿಂಬಿಸುವ ಗಾವಿಲರು
ಅರಿಯಬೇಕಾದ ಇನ್ನೊಂದು ಮಗ್ಗುಲಿನ ಸತ್ಯವಿದೆ.
14 ನೇ
ಲೋಕಸಭೆಯಲ್ಲಿ 39 ಮಹಿಳಾ ಸದಸ್ಯರಿದ್ದುದು; 15 ನೇ
ಲೋಕಸಭೆಯಲ್ಲಿ 59 ಕ್ಕೆ ಏರಿಕೆಯಾಗಿ, ಈಗಿನ
16 ನೇ ಲೋಕ ಸಬೆಯಲ್ಲಿ 61 ಸ್ಥಾನಗಳಿಗೆ
ಮುಟ್ಟಿದೆ. ಇಲ್ಲಿನ ಶೇಕಡ 75 ಕ್ಕೂ
ಹೆಚ್ಚು ಮಹಿಳೆಯರು ಸ್ವಸಾಮಥ್ರ್ಯದಿಂದ ರಾಜಕೀಯಕ್ಕೆ ಬಂದವರಲ್ಲ ಅಥವಾ ಚುನಾವಣೆಯಲ್ಲಿ ನಿಂತು
ಗೆದ್ದವರಲ್ಲ. ಈ ಪಟ್ಟಿಯನ್ನು ಗಮನಿಸುತ್ತಾ
ಹೋದರೆ, ರಾಜಕೀಯ ಕುಟುಂಬದ ಹಿನ್ನಲೆಯಿಂದ
ಬಂದ ಮಹಿಳಾ ರಾಜಕಾರಣಿಗಳ ಹೆಸರು
ಕಣ್ಣಿಗೆ ರಾಚುತ್ತವೆ. ಪ್ರತಿಭಾ ಪಾಟಿಲ್, ಇಂದಿರಾ
ಗಾಂಧಿ, ಸೋನಿಯಾ ಗಾಂದಿ, ಮನೇಕಗಾಂಧಿ,
ಮೀರಾ ಕುಮಾರ್,(ಜಗಜೀವನ್ ರಾಂ
ಪುತ್ರಿ) ಸುಪ್ರಿಯ ಕಾಳೆ (ಶರದ್
ಪವಾರ್ ಪುತ್ರಿ,) ಕೊಜಿಮಣಿ ( ಕರುಣಾ ನಿಧಿ ಪುತ್ರಿ)
ಇವರಲ್ಲದೆ, ಪಿ.ಎ. ಸಂಗ್ಮಾ
ಪುತ್ರಿ, ತೆಲಂಗಾಣದ ಟಿ.ಅರ್. ಚಂದ್ರಶೇಖರ್
ಅವರ ಪುತ್ರಿಯಾದ ವೀಣಾ ಇವರಲ್ಲದೆ ಚಲನ
ಚಿತ್ರರಂಗದ ಹಿನ್ನಲೆಯಿಂದ ಬಂದ ಹೇಮಾ ಮಲಿನಿ,
ಪ್ರಿಯಾ ದತ್, ಶೃತಿ ಇರಾನಿ,
ಜಯಾ ಬಚ್ಚನ್ ಹಾಗೂ ವಿಜಯಶಾಂತಿ,
ಜಯಲಿತಾ, ಜಯಸುಧಾ ಇವರ
ಆಯ್ಕೆಯ ಹಿಂದೆ ರಾಜಕೀಯ ಕುಟುಂಬಗಳ
ಒತ್ತಾಸೆ ಮತ್ತು ಚಲನಚಿತ್ರ ನಟಿಯಯರ ಜನಪ್ರಿಯತೆಯನ್ನು
ರಾಜಕೀಯ ಬಂಡವಾಳ ಮಾಡಿಕೊಂಡ ರಾಜಕೀಯ
ಪಕ್ಷಗಳ ಸ್ವ ಹಿತಾಸಕ್ತಿ ಅಡಗಿದೆಯೇ
ಹೊರತು, ಮಹಿಳೆಯರಿಗೆ ನ್ಯಾಯಯುತವಾಗಿ
ನೀಡಿದ ಸ್ಥಾನ ಮಾನಗಳಲ್ಲ. ಇಂದಿನ
ದಿನಮಾನಗಳಲ್ಲಿ ಸ್ತ್ರೀವಾದಿ ಚಿಂತನೆಯೆಂಬುದು, ವಾಸ್ತವಕ್ಕೆ ಮುಖಾಮುಖಿಯಾಗದೆ, ಸ್ತ್ರೀ ಸಂವೇದನೆಯೆಂಬ ಪ್ರಜ್ಞೆಯ
ಸುತ್ತ ಮುತ್ತ ಗಿರಕಿ ಹೊಡೆಯುತ್ತಾ ಬೌದ್ಧಿಕ
ಚರ್ಚೆಗಷ್ಟೇ ಸೀಮಿತಗೊಂಡಿದೆ. ನಗರ ಕೇಂದ್ರಿತ ಪ್ರಜ್ಞೆಯಭಾಗವಾಗಿರುವ
ಈ ಚಿಂತನೆಯು ಸಾಹಿತ್ಯದಾಚೆಗೆ
ತನ್ನ ವ್ಯಾಪ್ತಿಯನ್ನು ವಿಸ್ತರಿಕೊಂಡು ಗ್ರಾಮೀಣ ಮಹಿಳೆಯರ ಬವಣೆಗಳು
ಮತ್ತು ನಗರ
ಕೊಳಚೆಗೇರಿಯಲ್ಲಿ ನರಕ ಸದೃಶ್ಯ ಬದುಕನ್ನು
ಬದುಕುತ್ತಿರುವ ಹೆಣ್ಣು
ಮಕ್ಕಳ ಬವಣೆಗಳÀತ್ತ ತನ್ನ ಗಮನಹರಿಸಬೇಕಾಗಿದೆ.
ತನ್ನ
ಮಕ್ಕಳ ಹಸಿವು ನೀಗಿಸಲು ಒಂದು
ಲೋಟ ಹಾಲಿಗಾಗಿ ಅಥವಾ ಒಂದು ತುತ್ತು
ಅನ್ನಕ್ಕಾಗಿ ದೇಹ ಮಾರಿದ ಅಮಾಯಕ
ಹಾಗೂ ಅಸಹಾಯಕ ಹೆಣ್ಣು ಮಕ್ಕಳನ್ನು
ನೇರವಾಗಿ ವೈಶ್ಯೆಯರೆಂದು ಈ ಸಮಾಜ ವ್ಯಾಖ್ಯಾನಿಸುತ್ತಿದೆ.
ಆದರೆ, ಈಗಿನ ವಿದ್ಯಾವಂತ ಹೆಣ್ಣುಮಕ್ಕಳು
ತಮ್ಮ ದೇಹ ಸಿರಿ ಇರುವುದು
ಮಾರಾಟಕ್ಕೆ ಎಂಬ ವಾದವನ್ನು ಮುಂದಿಡುತ್ತಾ,
ಹೊಸವರ್ಷದ ಪಾರ್ಟಿಗಳಲ್ಲಿ ಹಣಕ್ಕಾಗಿ ಅರೆಬೆತ್ತಲೆಯಲ್ಲಿ ಕುಣಿಯುತ್ತಾರೆ. ಕ್ರೀಡಾಂಗಣದಲ್ಲಿ ಒಳ ಉಡುಪು ಕಾಣುವಂತೆ
ತುಂಡು ಲಂಗ ಧರಿಸಿ ತಮ್ಮ
ಅಂಗಾಂಗಗಳನ್ನು ಯಾವುದೇ ಮುಜಗರವಿಲ್ಲದೆ ಪ್ರದರ್ಶನಕ್ಕೆ
ಇಡುತ್ತಾರೆ. ಪುರುಷರು ಬಳಸುವ ಒಳ
ಉಡುಪು, ಶೇವಿಂಗ್ ಕ್ರೀಮ್, ಮೋಟಾರ್
ಬೈಕ್ ಮುಂತಾದ ವಸ್ತುಗಳಿಗೆ ತಮ್ಮೆಲ್ಲಾ
ಆತ್ಮಸಾಕ್ಷಿಯ ಪ್ರಜ್ಞೆಯನ್ನು ಒತ್ತೆಯಿಟ್ಟು ಜಾಹಿರಾತುಗಳಲ್ಲಿ ರೂಪದರ್ಶಿಯರಾಗಿ ಪಾಲ್ಗೊಳ್ಳುತ್ತಾರೆ.
ಇತ್ತೀಚೆಗಿನ ದಿನಗಳಲ್ಲಿ ಹೆಣ್ಣಿನ ದೇಹ ಸಿರಿಯನ್ನು
ಸವಿಯಲು ರೂಪಿಸಿರುವ ಫ್ಯಾಷನ್
óಷೋ ಗಳೆಂಬ ಪ್ರದರ್ಶನಗಳು ಪಂಚತಾರ
ಹೊಟೆಲ್ಗಳಲ್ಲಿ ಉಳ್ಳವರ ತೆವಲಿಗಾಗಿ
ನಿರಂತರವಾಗಿ ಜರುಗುತ್ತಿವೆ. ಇಡೀ ಮಹಿಳಾ ಸಮುದಾಯ
ತಲೆ ತಗ್ಗಿಸುವಂತಹ ಇಂತಹ ವಿದ್ಯಾಮಾನಗಳ ಬಗ್ಗೆ
ಪ್ರಜ್ಞಾವಂತ ಮಹಿಳೆಯರು ಮೌನ ವಹಿಸಿರುವುದು ನಿಜಕ್ಕೂ
ವಿಷಾಧದ ಸಂಗತಿ. ಶತ ಶತಮಾನಗಳ
ಹಿಂದೆ ಭೋಗದ ವಸ್ತುವಾಗಿದ್ದ ಹೆಣ್ಣು
ಈಗಿನ ಲೋಲುಪತೆಯ ಜಗತ್ತಿನಲ್ಲಿ ಮಾರಾಟದ ಸರಕಾಗಿ ಬದಲಾಗಿದ್ದಾಳೆ.
ಅವಳ ಕುರಿತಾಗಿ ಇತಿಹಾಸದುದ್ದಕ್ಕೂ ನಡೆದ ಚಿಂತನೆಗಳು, ಹೋರಾಟಗಳು
ನಿಷ್ಕ್ರಿಯಗೊಂಡು ಅವಳೆದರು
ಮಕಾಡೆ ಮಲಗಿಬಿಟ್ಟಿವೆ.
(ಕುವೆಂಪು ವಿಶ್ವ ವಿದ್ಯಾಲಯ, ಶಿವಮೊಗ್ಗ
ಮತ್ತು ಗದಗ ಜಿಲ್ಲೆ ಮುಂಡರಗಿಯ
ಸ್ನಾತಕೋತ್ತರ ಕೇಂದ್ರದಲ್ಲಿ ನೀಡಿದ ವಿಶೇಷ ಉಪನ್ಯಾಸ
ಹಾಗೂ ನವಂಬರ್ ತಿಂಗಳ ಸಂವಾದ ಮಾಸಪತ್ರಿಕೆಯಲ್ಲಿ
ಪ್ರಕಟವಾದ ಬರಹ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ