ಶುಕ್ರವಾರ, ನವೆಂಬರ್ 14, 2014

ಅನುವಾದದ ಸಂಕಟ ಮತ್ತು ಸಂಭ್ರಮಗಳು



ಅನುವಾದ ಕುರಿತಂತೆ ಇದು ನನ್ನ ವೈಯಕ್ತಿಕ ಅನಿಸಿಕೆ ಮಾತ್ರವೇ ಹೊರತು ಇಂದು ಅಂತಿಮ ಸತ್ಯವೇನಲ್ಲ. ಏಕೆಂದರೆ, ಅನುವಾದ ಕುರಿತಂತೆ ಎದ್ದಿರುವ ವಾದ ವಿವಾದಗಳಿಗೆ ಶತಮಾನಗಳ ಇತಿಹಾಸವಿದೆ. ಪ್ರಖ್ಯಾತ ಬರಹಗಾರ ಶೆಲ್ಲಿ ,,,, ಹೇಳಿರುವಂತೆಅನುವಾದವೆಂಬುದು ಒಂದು ಭಾಷೆಯ ಸಾಹಿತ್ಯ ಮತ್ತು ಸಂಸ್ಕತಿ ಮತ್ತೊಂದು ಭಾಷೆ ಮತ್ತು ಸಂಸ್ಕತಿಗೆ ನದಿಯಂತೆ ನಿರಂತರ ಹರಿಯುವ ಪ್ರವಾಹ ಮಾತಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿರುವ ಕವಿ ರಾಬರ್ಟ್ ಪ್ರಾಸ್ಟ್ಕವಿತೆಯೆಂದರೆ, ಅನುವಾದದಲ್ಲಿ ಕಳೆದುಹೋದ ನಂತರ ಸೃಷ್ಟಿಯಾಗುವ ಸಾಹಿತ್ಯಎಂದು ವ್ಯಂಗ್ಯವಾಗಿ ಪ್ರತಿಕ್ರಿಯಸಿದ್ದಾನೆ. ಅನುವಾದ ಕುರಿತಂತೆ ಇರುವ ಇಂತಹ ವೈರುಧ್ಯಗಳನ್ನು ಗಮನಿಸಿರುವ ನಮ್ಮ ನಡುವಿನ ಶ್ರೇಷ್ಠ ಚಿಂತಕ ಹಾಗೂ ಭಾಷಾ ತಜ್ಞ ನೋಂ ಚಾಮ್ಸ್ಕಿಅನುವಾದವೆಂಬುವುದು ವೃತ್ತವನ್ನು ಚೌಕ ಮಾಡುವುದು ಇಲ್ಲವೆ, ಚೌಕವನ್ನು ವೃತ್ತ ಮಾಡುವ ಪ್ರಕ್ರಿಯೆಎಂದು ಅರ್ಥಪೂರ್ಣವಾಗಿ ವಾಖ್ಯಾನಿಸಿದ್ದಾರೆ.
ಹಾಗಾದರೆ ಅನುವಾದ ಎಂದರೆ ಏನು? ಶಬ್ಧಾನುವಾದವೆ? ಭಾವಾನುವಾದವೆ? ಅಥವಾ ಮೂಲ ಭಾಷೆಯಿಂದ ಅನುವಾದ ಮಾಡಿದರೆ ಮಾತ್ರ ಅದು ಶ್ರೇಷ್ಠ ಅನುವಾದವಾಗಬಲ್ಲುದೆ? ಮೂಲ ಭಾಷೆಯಿಂದ ಜಗತ್ತಿನ ಸಂಪರ್ಕ ಮತ್ತು ಸಂವಹನ ಭಾಷೆಯಾಗಿರುವ ಇಂಗ್ಲೀಷ್ ಭಾಷೆಯ ಮೂಲಕ ಅನುವಾದಗೊಂಡಿರುವ ಕೃತಿಗಳನ್ನು ಆಯಾ ಪ್ರದೇಶಗಳ ಮಾತೃ ಭಾಷೆಗೆ ಅನುವಾದ ಮಾಡಿದರೆ, ಮೂಲ ಕೃತಿಯ ಭಾಷೆಯ ಸೊಗಡು ಮತ್ತು ಸಂಸ್ಕøತಿ ಅನುವಾದ ಕ್ರಿಯೆಯಲ್ಲಿ ಸೋರಿ ಹೋಗಬಲ್ಲದೆ? ಇಂತಹ ಪ್ರಶ್ನೆಗಳಿಗೆ ಇಂದಿಗೂ ನಿಖರವಾದ ಉತ್ತರ ದೊರೆತಿಲ್ಲ.

ನನ್ನ ದೃಷ್ಟಿಯಲ್ಲಿ ಅನುವಾದವೆಂಬುವುದು ಆಯಾ ಲೇಖಕನ ಮನೋಧರ್ಮ ಮತ್ತು ಸೃಜನಶೀಲ ಕ್ರಿಯೆಗೆ ಒಳಪಟ್ಟ ಸಂಗತಿ. ತನ್ನಲ್ಲದ ಭಾಷೆಯ ಒಂದು ಶ್ರೇಷ್ಠ ಕೃತಿ, ಅದು ಕವಿತೆಯಾಗಿರಬಹುದು, ಕಥೆಯಾಗಿರಬಹುದು, ಇಲ್ಲವೆ ಕಾದಂಬರಿಯಾಗಿರಬಹುದು ಅವನ ಎದೆ ತಟ್ಟಿ, ಇದನ್ನು ತನ್ನ ಮಾತೃ ಭಾಷೆಯ ಓದುಗರೊಡನೆ ಹಂಚಿಕೊಳ್ಳುವ ಅವನ ಅಭಿಲಾಷೆಗೆ ಪೂರಕವಾಗಿ ನೇರವಾಗಿ ಮೂಲ ಭಾಷೆಯಿಂದ ಅಥವಾ ಇನ್ನೊಂದು ಭಾಷೆಯ ಮೂಲಕ ನೆರವೇರುವ ಕ್ರಿಯೆ. ಅನುವಾದದಲ್ಲಿ ಮೂಲ ಭಾಷೆಯ ಸೊಗಡು ಮತ್ತು ಸಾಮಥ್ರ್ಯ ಅನುವಾದಕನ ಸೃಜನಶೀಲತೆಯ ಮೇಲೆ ಅವಲಂಬಿತವಾಗಿರುತ್ತದೆ. ದೇವನೂರು ಮಹಾದೇವ ಅವರಸಂಬಂಜ ಅನ್ನೋದು ದೊಡ್ದು ಕನಎಂಬ ಕನ್ನಡದ ಪರಿಣಾಮಕಾರಿಯಾದ ಶಬ್ದವನ್ನು ಬೇರೊಂದು ಭಾಷೆಯಲ್ಲಿ ಪರಿಣಾಮಕಾರಿಯಾಗಿ ಹಿಡಿದಿಡಲು ಸಾಧ್ಯವೆ?

ಮೂಲ ಭಾಷೆಯಿಂದ ಅನುವಾದಗೊಂಡ ಕೃತಿಗಳು ಮಾತ್ರ ಶ್ರೇಷ್ಠ್ರ ಅನುವಾದದ ಕೃತಿಯಾಗಬಲ್ಲವು ಎಂಬ ಮಾತು ನನ್ನ ದೃಷ್ಟಿಯಲ್ಲಿ ಒಂದು ಅತಾರ್ಕಿಕ ಚಿಂತನೆ. ಇದನ್ನು ನಂಬಿಕೊಂಡಿದ್ದರೆ ನಮಗೆ ಗ್ರೀಕ್ ದುರಂತ ನಾಟಕಗಳಾಗಲಿ, ಮಹಾ ಕಾವ್ಯಗಳಾಗಲಿಅರಬ್ ಭಾಷೆಯಲ್ಲಿ ಸೃಷ್ಟಿಯಾದ ಸೂಫಿ ಸಂತರ ಕಾವ್ಯ, ಪರ್ಷಿಯನ್ ಭಾಷೆಯಲ್ಲಿ ರಚಿತವಾಗಿದ್ದ ಉಮರಖಯಾನ ರುಬಾಯಿಗಳು, ಮಿರ್ಜಾ ಗಾಲಿಬನ ಘಜಲ್ ಗಳು, ಅಷ್ಟೇ ಏಕೆ? ರಷ್ಯಾದ ಗಾರ್ಕಿ , ಟಾಲ್ಸ್ಟಾಯ್ ನಂತಹ ಮಹಾನುಭಾವರು ಜಗತ್ತಿಗೆ ದಕ್ಕುತ್ತಿರಲಿಲ್ಲ.

ನನ್ನ ಅನುವಾದಕ್ಕೆ ಯಾವತ್ತೂ .ಕೆ. ರಾಮಾನುಜನ್ ಆದರ್ಶವಾಗಿದ್ದಾರೆ. ಅನುವಾದ ಕುರಿತ ಎಲ್ಲಾ ಕಟ್ಟು ಪಾಡುಗಳನ್ನು ಮೀರಿ ಅದು ಇಂಗ್ಲೀಷ್ ಭಾಷೆಯಾಗಿರಲಿ, ಕನ್ನಡವಾಗಿರಲಿ, ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಸರಳವಾಗಿ ಅನುವಾದ ಮಾಡುವುದು ಅವರ ವಿಶಿಷ್ಠ ವಿಧಾನಗಳಲ್ಲಿ ಒಂದು. ಅವರು ದಕ್ಷಿಣ ಭಾರತದ ಜಾನಪದ ಕಥೆಗಳನ್ನು, ಕನ್ನಡದ ವಚನಗಳನ್ನು ಮತ್ತು ದಕ್ಷಿಣ ಏಷ್ಯಾದಲ್ಲಿ ಪ್ರಚಲಿತದಲ್ಲಿರುವ ವಿವಿಧ ಬಗೆಯ ರಾಮಾಯಣಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸುವಾಗ, ವಿಕ್ಟೋರಿಯಾ ಕಾಲದ ಕ್ಲಾಸಿಕ್ ಇಂಗ್ಲೀಷ್ ಭಾಷೆಯನ್ನು ಪ್ರಜ್ಞಾ ಪೂರ್ವಕವಾಗಿ ನಿರಾಕರಿಸಿದರು. ವಚನ ಗಳ ಇಂಗ್ಲೀಷ್ ಅನುವಾದಕ್ಕೆ ಅವರು ಇಟ್ಟಿರುವ ಶೀರ್ಷಿಕೆಸ್ಪೀಕಿಂಗ್ ವಿತ್ ಸಿವ (ಗಮನಿಸಿಶಿವಅಲ್ಲ.) ಕಾರಣಕ್ಕಾಗಿಯೇ ಅವರ ಕನ್ನಡದ ಕವಿತೆಗಳು ತಮ್ಮ ಸರಳತೆಯಿಂದಾಗಿ ಇಂದಿಗೂ ಕಾವ್ಯ ಪ್ರೇಮಿಗಳ ಎದೆಯಲ್ಲಿ ಜೀವಂತವಾಗಿವೆ.
ಭಾರತದ ಸಂದರ್ಭದಲ್ಲಿ ಭಾಷೆ, ಜಾತಿ, ಧರ್ಮ ಎಂಬ ಭೇದ ಭಾವವಿಲ್ಲದೆ ತಮ್ಮ ಕಣ್ಣೆದುರು ಕಂಡ ಮನ ಕಲಕುವ ಸಂಗತಿಗಳನ್ನು ಪರಿಣಾಮಕಾರಿಯಾಗಿ ಅಕ್ಷರದಲ್ಲಿ  ಹಿಡಿದಿಟ್ಟಿರುವ  ಎಲ್ಲಾ ಪ್ರಕಾರದ ಸಾಹಿತ್ಯ ಅನುವಾದಕ್ಕಾಗಿ ನನ್ನನ್ನು ಸದಾ ಉದ್ದೀಪಿಸುತ್ತದೆ. ನನಗೆ ಕವಿ, ಕಥೆಗಾರ ಅಥವಾ ಕಾದಂಬರಿಕಾರ ಯಾವ ಧರ್ಮದವನು, ಯಾವ ಜಾತಿಯವನು, ಅಥವಾ ಯಾವ ಭಾಷೆಯವನು ಎಂಬುದು ಮುಖ್ಯವಲ್ಲ. ಅವನ ಕೃತಿಯಷ್ಟೇ ಮುಖ್ಯ.
( ಕುವೆಂಪು ಭಾಷಾ ಭಾರತಿ( ಅನುವಾದ ಅಕಾಡೆಮಿ) ಪರವಾಗಿ ಡಾ.ಅನುಪಮ ಕೇಳಿದ ಪ್ರತಿಕ್ರಿಯೆಗೆ ನೀಡಿದ ಲಿಖಿತ ಉತ್ತರ)

                                                 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ