ಶನಿವಾರ, ಜನವರಿ 31, 2015

ವ್ಯಂಗ್ಯಲೋಕದ ಚಕ್ರವರ್ತಿ- ಆರ್.ಕೆ.ಲಕ್ಷ್ಮಣ್


ಆರ್.ಕೆ. ಲಕ್ಷ್ಮಣ್ ಎಂಬ ಹೆಸರು ಭಾರತೀಯ ಪತ್ರಿಕೋದ್ಯಮz ಇತಿಹಾಸದÀಲ್ಲಿ ಒಂದು ಚಿರಸ್ಥಾಯಿಯಾದ ಹೆಸರು. ಒಂದು ಪತ್ರಿಕೆ ಅಥವಾ ಒಂದು ಸಂಪಾದಕೀಯ ಲೇಖನ ಹೇಳಬಹುದಾದ ವಿಷಯಗಳನ್ನು ನಾಲ್ಕು ಅಂಕು ಡೊಂಕುಗೆರೆಗಳ ಮೂಲಕ ಹೇಳುತ್ತಾ, ನಿರಂತರ ಅರವತ್ತು ವರ್ಷಗಳ ಕಾಲ ಭಾರತೀಯ ಶ್ರೀ ಸಾಮಾನ್ಯನ ಮುಖದ ಮೇಲೆ ಮಾಸದ ಮುಗುಳು ನಗೆಯೊಂದನ್ನು ಸೃಷ್ಟಿಸಿದ ವ್ಯಂಗ್ಯಚಿತ್ರಗಳ ಬ್ರಹ್ಮ ಆರ್.ಕೆ. ಲಕ್ಷ್ಮಣ್ ಎಂಬ  ಮಾತು ಅತಿಶಯೋಕ್ತಿಯಾಗಲಾರದು.
ಮೈಸೂರು ಮೂಲದ ತಮಿಳು ಅಯ್ಯಂಗಾರ್ ಕುಟುಂಬದ ಶಿಕ್ಷಕರ ಮಗನಾಗಿ ಜನಿಸಿದ .ರ್.ಕೆ. ಲಕ್ಷಣ್ (1921) ಆರು ಜನ ಗಂಡು ಮಕ್ಕಳಲ್ಲಿ ಕಿರಿಯವರು. ಲಕ್ಷ್ಮಣ್ ಹಾಗೂ ಅವರ ಹಿರಿಯ ಸಹೋದರ ಆರ್.ಕೆ. ನಾರಾಯಣ್ ಇಬ್ಬರೂ ಜಗತ್ ಪ್ರಸಿದ್ಧಿ ಪಡೆದ ಪ್ರತಿಭಾವಂತರು. ಅಣ್ಣ ಆರ್.ಕೆ. ನಾರಾಯಣ್ ಅಕ್ಷರಗಳ ಮೂಲಕ ಇಂಗ್ಲೀಷ್ ಕಾದಂಬರಿಕಾರರಾಗಿ ( ಮಾಲ್ಗುಡಿ ಡೇಸ್, ಗೈಡ್, ಬ್ಯಾಚುಲರ್ ಆಫ್ಆಟ್ರ್ಸ್ ಮತ್ತು ಮಿ.ಸಂಪತ್) ಹೆಸರುವಾಸಿಯಾದರೆ, ತಮ್ಮ ಲಕ್ಷ್ಮಣ್ರವರು ತಮ್ಮ ಅಂಕು ಡೊಂಕಾದ ಸರಳ ರೇಖೆಗಳ ಮೂಲಕ ಭಾರತದ ಸಾಮಾಜಿಕ ಹಾಗೂ ರಾಜಕೀಯ ಬದುಕಿನ ಕಟು ವಾಸ್ತವವನ್ನು ಪ್ರತಿಬಿಂಬಿಸುತ್ತಾ ಭಾರತದ ಜನಮಾನಸದಲ್ಲಿ ಅಜರಾಮರಾಗಿ ಉಳಿದು ಹೋದರು.
ಇವರು ಸೃಷ್ಟಿಸಿದಶ್ರೀ ಸಾಮಾನ್ಯದೇಶದುದ್ದಗಲಕ್ಕೂ ಚಿರಪರಿಚಿತ ವ್ಯಕ್ತಿ. ಬತ್ತಿದ ಕಣ್ಣುಗಳು, ಸೋಡಾ ಗ್ಲಾಸಿನ ಕನ್ನಡಕ, ಚಿಂದಿ ಚಿಂದಿಯಾದ ಮತ್ತು ತೇಪೆ ಹಾಕಿದ ಕೋಟು, ಕಚ್ಚೆ ಮತ್ತು ಕೈಯಲ್ಲಿ ಒಂದು ಮುರುಕಲು ಕೊಡೆ ಇವುಗಳು ಲಕ್ಷ್ಮಣ್ ಸೃಷ್ಟಿದ ಶ್ರೀ ಸಾಮಾನ್ಯನ ಚಹರೆಗಳು. 1960 ಮತ್ತು 70 ದಶಕದಲ್ಲಿ ಭಾರತದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಿಂದ ಹೃರಾಣದ ಹಾಗೂ ಘಾಸಿಗೊಂಡ ಎಲ್ಲಾ ಬಡವರ ಮತ್ತು ಮಧ್ಯಮ ವರ್ಗದ ಪ್ರತಿನಿಂಧಿಯಂತೆ ಇದ್ದ ಶ್ರೀ ಸಾಮಾನ್ಯನ ಕಣ್ಣಲ್ಲಿ ಭಾರತವನ್ನು ಅವಲೋಕಿಸಿದ  ಆರ್.ಕೆ. ಲಕ್ಷ್ಮಣ್ ರವರು ರಾಜಕೀಯ ಲೋಕದ ದ್ವಂದ್ವಗಳನ್ನು ಪರಿಣಾಮಕಾರಿಯಾಗಿ ತಮ್ಮ ವ್ಯಂಗ್ಯ ಚಿತ್ರಗಳಲ್ಲಿ ಅನಾವರಣಗೊಳಿಸಿದರು.
ವಿದ್ಯಾರ್ಥಿ ಜೀವನದಲ್ಲಿದ್ದಾಗಲೆ  ಚಿತ್ರ ಬರೆಯುವ ಪ್ರವೃತ್ತಿಯನ್ನು ರೂಡಿಸಿಕೊಂಡಿದ್ದ ಲಕ್ಷ್ಮಣ್ ರವರು   ರಾ.ಶಿ.ಯವರ (ಡಾ.ಎಂ.ಶಿವರಾಂ) ಕೊರವಂಜಿ ಎಂಬ ಕನ್ನಡದ ಹಾಸ್ಯ ಪತ್ರಿಕೆಗೆ  ಚಿತ್ರ ಬರೆಯುತ್ತಿದ್ದರು. ತಮ್ಮ ಅಣ್ಣ ನಾರಾಯಣ್ ರವರು ಹಿಂದೂ ದಿನಪತ್ರಿಕೆ ಬರೆಯುತ್ತಿದ್ದ ಲೇಖನ ಮತ್ತು ಕೃತಿಗಳಿಗೆ ಚಿತ್ರವನ್ನೂ ಸಹ ರಚಿಸುತ್ತಿದ್ದರು. ಆನಂತರ ದೆಹಲಿಗೆ ವಿದ್ಯಾಭ್ಯಾಸಕ್ಕೆ ತೆರಳಿದ ಸಂದರ್ಭದಲ್ಲಿ  ಚಿತ್ರಕಲೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು, ಅದನ್ನು ಒಂದು ವೃತ್ತಿಯನ್ನಾಗಿ ಸ್ವೀಕರಿಸಿದರು. ದೆಹಲಿಯಿಂದ ಮುಂಬೈ ನಗರಕ್ಕೆ ಬಂದು ನೆಲೆಸಿದ ಇವರು ಆರಂಭದ ದಿನಗಳಲ್ಲಿ ಪ್ರೀ ಪ್ರೆಸ್ ಜರ್ನಲ್ ಮತ್ತು ಕಾರಂಜೀಯ ಸಂಪಾದಕತ್ವದ ಬ್ಲಿಟ್ಜ್ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಶಿವಸೇನೆಯ ಸಂಸ್ಥಾಪಕ ಬಾಳ್ ಥಾಕರೆ ಲಕ್ಷಣ್ ರವರ ಸಹೋದ್ಯೋಗಿ  ಕೆಲಸ ಮಾಡಿದ್ದರು. ನಂತರ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆ ಸೇರಿದ ಆರ್.ಕೆ.ಲಕ್ಷ್ಮಣ್, ತಮ್ಮ ವಿಶಿಷ್ಟ ವ್ಯಂಗ್ಯ ಚಿತ್ರಗಳ ಮೂಲಕ ಪತ್ರಿಕೆಗೆ ವಿಶೇಷ ಸ್ಥಾನ ಮಾನ ಕಲ್ಪಿಸಿಕೊಟ್ಟರು. ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿ ಒಬ್ಬ ಸಂಪಾದಕನಿಗೆ ಇರಬಹುದಾದ ಸ್ಥಾನಮಾನ, ಗೌರವ ಮತ್ತು ವೇತನವನ್ನು ಪಡೆದ ಮೊಟ್ಟ ಮೊದಲ ಕಲಾವಿದ ಎಂಬ ಕೀರ್ತಿ  ಆರ್.ಕೆ. ಲಕ್ಷ್ಣಣ್ರವರದು. ಜೊತೆಗೆ ಏಷ್ಯಾದ ನೋಬೆಲ್ ಎಂದು ಪರಿಗಣಿಸಲ್ಪಟ್ಟಿರುವ ಮ್ಯಾಗ್ಸಸೆ ಪ್ರಶಸ್ತಿಯನ್ನೂ ಒಳಗೊಂಡಂತೆ ಭಾರತದ ಎರಡನೆಯ ಅತಿ ದೊಡ್ಡ ಪ್ರಶಸ್ತಿ ಪದ್ಮವಿಭೂಷಣಕ್ಕೂ ಅವರು ಭಾಜನರಾಗಿದ್ದರು.
ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆಯ ಅವಿಭಾಜ್ಯ ಅಂಗವೆಂಬಂತೆ ಇದ್ದ ಅವರನ್ನು ಪತ್ರಿಕೆಯ ಆಡಳಿತ ಮಂಡಳಿಯು ಒಬ್ಬ ಸಂಪಾದಕನಂತೆ ನಡೆಸಿಕೊಂಡಿತು. ತಮ್ಮ ಸುಧಿರ್ಘ ಐದು ದಶಕಗಳ ಸೇವೆಯ ನಂತರವೂಅವರಿಂದ ಪತ್ರಿಕೆಗೆ ಚಿತ್ರಗಳನ್ನು ಬರೆಸುವುದರ ಮೂಲಕ  ಅವರ ಬದುಕಿನುದ್ದಕ್ಕೂ ಪತ್ರಿಕೆಯ ಬಾಂಧ್ಯವ್ಯವನ್ನು ಜೀವಂತವಾಗಿಟ್ಟುಕೊಂಡಿತ್ತು. ಮುಂಬೈ ನಗರದಲ್ಲಿ ಅತಿ ಹೆಚ್ಚು ಪ್ರಸಾರ ಹೊಂದಿದ್ದ ಟೈಮ್ಸ್ ಆಫ್ ಇಂಡಿಯಾ ಮತ್ತು ಅದರ ಸಮೂಹದ  ಪತ್ರಿಕೆಗಳಾದ ಮಹಾರಾಷ್ಟ್ರ ಟೈಮ್ಸ್, ಗುಜರಾತ್ ಟೈಮ್ಸ್ ದಿನಪತ್ರಿಕೆಗಳಿಗೆ ಆರ್. ಕೆ. ಲಕ್ಮಣ್ ರವರ ವ್ಯಂಗ್ಯ ಚಿತ್ರಗಳು ಜೀವನಾಡಿಯಾಗಿದ್ದವು.

ಅವಸರ ಮತ್ತು ಧಾವಂತದ ದುಸ್ತರ ಬದುಕಿಗೆ ಹೆಸರಾದ ಮುಂಬೈನಗರದ ಜನತೆಯ ಬದುಕಿನ ಬಹುತೇಕ ಭಾಗವು ಲೋಕಲ್ ಟ್ರೈನ್ ಮತ್ತು ನಗರ ಸಾರಿಗೆ ಬಸ್ಸುಗಳ ಪ್ರಯಾಣದಲ್ಲಿ ಕಳೆದು ಹೋಗುತ್ತದೆ. ಆದರೆ ನಗರದ ಯಾಂತ್ರಿಕ ಬದುಕು ಮತ್ತು  ಕೆಲಸದ ಒತ್ತಡಗಳ ನಡುವೆ ಅವರ ಮುಖದಲ್ಲಿ ನಗು ಅರಳುವುದು ದಿನಕ್ಕೆ ಒಮ್ಮೆ ಮಾತ್ರ. ಪ್ರತಿದಿನ ಮುಂಜಾನ್ ಮನೆಬಾಗಿಲಿಗೆ ಬಂದು ಬೀಳುತ್ತಿದ್ದ ಹಾಲಿನ ಪಾಕೇಟ್ ಜೊತೆಗಿನ ದಿನಪತ್ರಿಕೆಗಳಲ್ಲಿ ಇರುತ್ತಿದ್ದ ಲಕ್ಷ್ಮಣ್ ರವರ ವ್ಯಂಗ್ಯ ಚಿತ್ರ ಅವರಲ್ಲಿ ಮುಗುಳು ನಗೆಯೊಂದನ್ನು ಉಕ್ಕಿಸುತ್ತಿತ್ತು. ಹಾಗಾಗಿ ಅವರು ಸೃಷ್ಟಿಸಿದ ಶ್ರೀ ಸಾಮಾನ್ಯ ಮಹಾರಾಷ್ಟ್ರದ ಜನತೆಯ ಪಾಲಿಗೆ ಹೀರೋ ಆಗಿ ಪರಿಣಮಿಸಿದ್ದ. ಅವನ ಕುರಿತು ಟಿ.ವಿ.ಛಾನಲ್ ಗಳಲ್ಲಿ ಧಾರವಾಹಿ ಪ್ರಸಾರವಾಗುವುದರಿಂದ ಹಿಡಿದು ಮುಂಬೈ ನಗರದ ಹಲವೆಡೆ ಶ್ರೀ ಸಾಮಾನ್ಯನ ಪ್ರತಿಮೆಗಳು ಎದ್ದು ನಿಂತಿವೆ. ಸ್ವತಃ ತಾನೇ ಸೃಷ್ಟಿಸಿದ ಶ್ರೀ ಸಾಮಾನ್ಯನ ಜೊತೆ ಲಕ್ಷ್ಮಣ್ ಗುರುತಿಸಿಕೊಳ್ಳುವಂತೆ ಚಿತ್ರ ಹೆಸರು ಮಾಡಿತು. ಒಬ್ಬ ವ್ಯಂಗ್ಯ ಚಿತ್ರಕಾರನಿಗೆ ಇದಕ್ಕಿಂತ ಹೆಚ್ಚಿನ ಗೌರವ, ಮನ್ನಣೆ ಇನ್ನೇನು ಬೇಕು?



ಸುಮಾರು ಐದೂವರೆ ಅಡಿ ಎತ್ತರ, ಉಬ್ಬಿದ ಹಣೆ, ಸದಾ ಕೊರಳಿಗೆ ತೂಗುಬಿಟ್ಟಿರುವ ದಪ್ಪ ಗಾಜಿನ ಕನ್ನಡಕ ಹಾಗೂ ಮೇಲುನೋಟಕ್ಕೆ ತೀರಾ ಗಂಭೀರ ಸ್ವಭಾವದ ವ್ಯಕ್ತಿಯಂತೆ ಕಾಣುತ್ತಿದ್ದ ಲಕ್ಷ್ಮಣ್ ಅರವರ ಹೃದಯದಲ್ಲಿ ಹಾಸ್ಯ ಪ್ರವತ್ತಿ ಸಹ ಮನೆ ಮಾಡಿತ್ತು. ಅವರ ಹಾಸ್ಯ ಎಂದಿಗೂ ಕೀಳು ಮನೋಭಾವದಿಂದ ಕೂಡಿರಲಿಲ್ಲ. ಅವರು ಸೃಷ್ಟಿಸುತ್ತಿದ್ದ ವ್ಯಂಗ್ಯಚಿತ್ರಗಳಲ್ಲಿ ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶಗಳಾಗಲಿ ಅಥವಾ  ಒಂದು ಸಮುದಾಯವನ್ನು ಕೀಳಾಗಿ ಕಾಣುವ ಮನೋಭಾವ ಇರುತ್ತಿರಲಿಲ್ಲ. ಅವರ ವ್ಯಂಗ್ಯ ಚಿತ್ರಗಳ ಮೂಲಕ ಹಾಸ್ಯಕ್ಕೆ ಗುರಿಯಾದ ನೆಹರೂ, ಇಂದಿರಾಗಾಂಧಿಯವರಿಂದ ಹಿಡಿದು ದೇಶದ ಬಹುತೇಕ ನಾಯಕರು ಅವರ ಚಿತ್ರಗಳಿಗೆ ಮನಸಾರೆ ನಕ್ಕು ಮೆಚ್ಚಿಗೆ ಸೂಚಿಸುತ್ತಿದ್ದರು. ಲಕ್ಷ್ಮಣ್ ಚಿತ್ರಕ್ಕೆ ವಸ್ತುವಾಗುವುದು ತಮ್ಮ ಭಾಗ್ಯ ಎಂದು ಭಾವಿಸುತ್ತಿದ್ದರು. ವ್ಯಂಗ್ಯ ಚಿತ್ರಗಳ ಮೂಲಕ ಮತ್ತೊಬ್ಬರ ಮನಸ್ಸನ್ನು ಘಾಸಿಗೊಳಿಸಬಾರದು ಎಂಬುದು ಲಕ್ಷ್ಮಣ್ರವರ ಧೃಡ ನಂಬಿಕೆಯಾಗಿತ್ತು.
ಮುಂಬೈ ನಗರದ ಪುರಾತನ ಐತಿಹಾಸಿಕ ಕಟ್ಟಡವಾದ ವಿಕ್ಟೋರಿಯಾ ಟರ್ಮಿನಲ್ ಎಂಬ ರೈಲ್ವೆ ನಿಲ್ದಾಣದ ಎದುರಿಗೆ ಅದರಷ್ಟೇ  ಅತ್ಯಂತ ಹಳೆಯದಾದ ಕಲ್ಲು ಕಟ್ಟಡವಿದೆ. ಕಟ್ಟಡದಲ್ಲಿ  ಟೈಮ್ಸ್ ಅಫ್ ಇಂಡಿಯಾ ದಿನಪತ್ರಿಕೆಯ ಪ್ರಧಾನ ಕಛೇರಿಯಿದ್ದುಎರಡನೆಯ ಮಹಡಿಯ ಹದಿಮೂರನೆ ನಂಬರಿನ ತಮ್ಮ ಕೊಠಡಿಗೆ ಬೆಳಿಗ್ಗೆ ಒಂಬತ್ತು ಗಂಟೆಗೆ ಹಾಜರಾಗುತ್ತಿದ್ದ ಆರ್.ಕೆ.ಲಕ್ಷ್ಮಣ್ರವರು ಹನ್ನೊಂದು ಗಂಟೆಯವರೆಗೆ ದಿನಪತ್ರಿಕೆಗಳನ್ನು ತಿರುವು ಹಾಕುತ್ತಿದ್ದರು. ದಿನದ ಚಿತ್ರ ರಚಿಸಲು ಏನೂ ಹೊಳೆಯದಿದ್ದರೆ, ಚಹಾ ಕುಡಿದು, ತಮ್ಮ ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿ ಮುಂಬೈ ನಗರವನ್ನು ಒಂದು ಸುತ್ತು ಹಾಕುತ್ತಿದ್ದರು. ಅವರ ತಿರುಗಾಟದಲ್ಲಿ ರಸ್ತೆಯ ಬದಿಯಲ್ಲಿ, ಅಥವಾ ಸಿಗ್ನಲ್ ವೃತ್ತಗಳಲ್ಲಿ ಕಾಣುತ್ತಿದ್ದ ವರ್ತಮಾನದ ಬದುಕಿನ ಬವಣೆಗಳು ಪತ್ರಿಕೆಯ ಪಾಕೆಟ್ ಕಾರ್ಟೂನ್ ರೂಪದಲ್ಲಿ ಸೃಷ್ಟಿಯಾಗುತ್ತಿದ್ದವು.
ಆರ್.ಕೆ. ಲಕ್ಷ್ಮಣ್ ಕೇವಲ ವ್ಯಂಗ್ಯ ಚಿತ್ರಕಾರರು ಮಾತ್ರವಲ್ಲ, ಅವರಿಗೆ ನಾವು ಕಾಣದ ಇತರೆ ಅಭಿರುಚಿಗಳಿದ್ದವು. ವರ್ಷಕ್ಕೆ ಎರಡು ಮೂರು ಬಾರಿ ಪ್ರವಾಸ ಹೋಗುತ್ತಿದ್ದ ಅವರು, ತಾವು ಬೇಟಿ ನೀಡಿದ ಪ್ರದೇಶಗಳ ಸಂಸ್ಕøತಿ, ಅಭಿರುಚಿ, ಉಡುಪು, ಇವುಗಳನ್ನು ದಾಖಲಿಸಿಕೊಂಡು ಅವುಗಳ ವರ್ಣಚಿತ್ರಗಳನ್ನು ರಚಿಸುತ್ತಿದ್ದರು. ಜೊತೆಗೆ ಪ್ರವಾಸ ಕಥನಗಳನ್ನು ಬರೆಯುತ್ತಿದ್ದರು. ಹಾಗಾಗಿ  ಅವರ ಕುಂಚದಲ್ಲಿ ರಾಜಸ್ಥಾನ ಮತ್ತು ಗುಜರಾತಿನ ಸಂಸ್ಕøತಿ ಪರಿಣಾಮಕಾರಿಯಾಗಿ ಅನಾವರಣಗೊಂಡಿವೆ. ಜೊತೆಗೆ ಜಗತ್ತು ಕುರೂಪಿ ಪಕ್ಷಿಯೆಂದು ತಿರಸ್ಕರಿಸಿರುವ ಕಾಗೆ ಅವರ ಅತ್ಯಂತ ಮೆಚ್ಚಿನ ಪಕ್ಷಿಯಾಗಿತ್ತು. ಕಾಗೆಗಳ ಕುರಿತಾಗಿ ಪೆನ್ಸಿಲ್ ನಲ್ಲಿ ಅವರು ನೂರಾರು ಚಿತ್ರಗಳನ್ನು ರಚಿಸಿದ್ದರು. ಲಕ್ಷ್ಣಣ್ ರವರು ತಮ್ಮ ವ್ಯಂಗ್ಯ ಚಿತ್ರಗಳ ಪ್ರದರ್ಶನಕ್ಕಿಂತ ಕಾಗೆಗಳ ಚಿತ್ರಗಳ ಪ್ರದರ್ಶನದಲ್ಲಿ ಹೆಚ್ಚು ಉತ್ಸಾಹ ತೋರುತ್ತಿದ್ದರು.
ನಿವೃತ್ತಿಯ ಜೀವನವನ್ನು ಪುಣೆ ನಗರದಲ್ಲಿ ತಮ್ಮ ಮಕ್ಕಳ ಜೊತೆ ಕಳೆಯುತ್ತಿದ್ದ ಕಳೆಯುತ್ತಿದ್ದ ಆರ್.ಕೆ. ಲಕ್ಷ್ಮಣ್ ರವರು 2003 ರಲ್ಲಿ ಪಾಶ್ರ್ವವಾಯು ಕಾಯಿಲೆಗೆ ತುತ್ತಾಗಿದ್ದರು. ತಮ್ಮ ದೇಹದ ಎಡಭಾಗ ಸಂಪೂರ್ಣ ನಿಷ್ಟ್ರಿಯಗೊಂಡ ಹಿನ್ನಲೆಯಲ್ಲಿ ಇತ್ತೀಚೆಗೆ ಅವರು ಗಾಲಿಕುರ್ಚಿಯನ್ನು ಅವಲಂಬಿಸಿದ್ದರು. ತಮ್ಮ ತೊಂಬತ್ತು ನಾಲ್ಕು ವರ್ಷದ ತುಂಬು ಜೀವನದಲ್ಲಿ ಸಾರ್ಥಕ ಬದುಕನ್ನು ಬದುಕಿದ ಆರ್.ಕೆ. ಲಕ್ಷ್ಮಣ್ ಇಂದು ನಮ್ಮಿಂದ ದೂರವಾದರೂ ಸಹ ಅವರು ಸೃಷ್ಟಿಸಿದ ಶ್ರೀ ಸಾಮಾನ್ಯನ ಮೂಲಕ ಪ್ರತಿಯೊಬ್ಬ ಭಾರತೀಯ ಓದುಗನ ಎದೆಯಲ್ಲಿ ಸದಾ ಹಸಿರಾಗಿರುತ್ತಾರೆ.


ಡಾ.ವೃಷಭೇಂದ್ರಸ್ವಾಮಿ- ಕಳಚಿದ ಕುವೆಂಪು ಶಿಷ್ಯ ಪರಂಪರೆಯ ಕೊಂಡಿ.



ಮೊನ್ನೆ  ಬುಧವಾರ ಧಾರವಾಡದಲ್ಲಿ ಹಿರಿಯ ಜೀವ ಡಾ.ವೃಷಭೇಂದ್ರಸ್ವಾಮಿಯವರು ನಿಧನರಾದರೆಂಬ ಸುದ್ಧಿಯನ್ನು ಬೆಳಿಗ್ಗೆ 8-45 ಕ್ಕೆ  ಸರಿಯಾಗಿ ಕಿರಿಯ ಮಿತ್ರ ಬೇಂದ್ರೆ ಭವನದ ಪ್ರಕಾಶ್ ಬಾಳೆಕಾಯಿ ಸಂದೇಶದ ಮೂಲಕ ನನಗೆ ತಿಳಿಸಿದ ವೇಳೆಯಲ್ಲಿ  ನಾನು ತಮಿಳುನಾಡಿನ ಕನ್ಯಾಕುಮಾರಿಯಿಂದ  ಕೇರಳದ ತಿರುವನಂತಪುರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಧಾರವಾಡ ನಗರದಲ್ಲಿ ನಾನು ಅಪಾರವಾಗಿ ಪ್ರೀತಿಸುತ್ತಿದ್ದ ಮತ್ತು ಗೌರವಿಸುತ್ತಿದ್ದ ವೃಷಭೇಂದ್ರ ಸ್ವಾಮಿಯವರ ಸಾವಿನ ಸುದ್ಧಿ ತಿಳಿದು ಮನಸ್ಸಿಗೆ ತೀವ್ರ ಬೇಸರವಾಯಿತು.  ಅವರ ಅಂತಿಮ ದರ್ಶನ ಪಡೆಯುವ ಭಾಗ್ಯವೂ ನನಗಿರಲಿಲ್ಲ. ಕಳೆದ ಹದಿನೈದು ದಿನಗಳ ಹಿಂದೆ ಧಾರವಾಡದಲ್ಲಿ ನಿರಂತರವಾಗಿ ಐದು ದಿನಗಳ ಕಾಲ ನಡೆದ ಧಾರವಾಡ ಸಾಹಿತ್ಯ ಸಂಭ್ರಮ ಮತ್ತು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಈ ಎರಡು ಕಾರ್ಯಕ್ರಮಗಳಿಗೆ  ನಾನು ಹಾಜರಾಗಿದ್ದರೆ, ಅವರ ಜೊತೆ  ಮಾತನಾಡುವ ಮತ್ತು ಕಾಲ ಕಳೆಯುವ ಅವಕಾಶ ಸಿಗುತ್ತಿತ್ತು. ಅದನ್ನು ಕಳೆದುಕೊಂಡೆ ಎಂಬ ನೋವು ಮನದ ಮೂಲೆಯಲ್ಲಿ  ಶಾಶ್ವತವಾಗಿ ಉಳಿದು ಹೋಯಿತು. ಈ ವರ್ಷ ಪ್ರಜ್ಞಾಪೂರ್ವಕವಾಗಿ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಹಾಗಾಗಿ  ಸಂಭ್ರಮ ಮತ್ತು ಸಮ್ಮೇಳನ ಗಳಿಂದ ದೂರ ಉಳಿದು ಅಂತರ ಕಾಯ್ದುಕೊಂಡೆ
ಇತ್ತೀಚೆಗಿನ ದಿನಗಳಲ್ಲಿ ವಿಶೇಷವಾಗಿ  ಹಿರಿಯ ಸಾಹಿತಿಗಳಿಗೆ ವೃದ್ಧಾಪ್ಯದ ದಿನಗಳಲ್ಲಿ ತಮಗೆ ಅರಿವಿಲ್ಲದಂತೆ ಆವರಿಸಿಕೊಳ್ಳುವ ಹಿರಿಯತನದ ಪ್ರಜ್ಞೆ ಮತ್ತು ಶ್ರೇಷ್ಠತೆಯ ವ್ಯಸನ ಇವುಗಳಿಂದ ಮುಕ್ತರಾಗಿ ಇರಲು ಸಾಧ್ಯವಾಗುತ್ತಿಲ್ಲ. ಆದರೆ ಇಂತಹ ಯಾವುದೇ ಬಿಗುಮಾನಗಳಿಲ್ಲದೆ; ಹಿರಿಯರು, ಕಿರಿಯರು ಎಂಬ ಬೇಧ ಭಾವವಿಲ್ಲದೆ ಬೆರೆಯುತ್ತಿದ್ದ ಡಾ. ವೃಷಭೇಂದ್ರಸ್ವಾಮಿಯವರ ಗಂಟಲಿನ ಧ್ವನಿ ಎಷ್ಟು ದೊಡ್ಡದಿತ್ತೋ, ಅವರ ಹೃದಯ ವೈಶಾಲ್ಯತೆ ಕೂಡ ಅಷ್ಟೇ ದೊಡ್ಡದಿತ್ತು. ಧಾರವಾಡದಲ್ಲಿ ಯಾವುದೇ ಸಂಗೀತ ಅಥವಾ ಸಾಹಿತ್ಯದ ಕಾರ್ಯಕ್ರಮವಿರಲಿ ಅಲ್ಲಿಗೆ ಅವರು ತಮ್ಮ ಪುಟ್ಟ ಟೇಪ್ ರೆಕಾರ್ಡರ್ ನೊಂದಿಗೆ ಹಾಜರಾಗುತ್ತಿದ್ದರು. ತಾವು ಕೇಳುವ ಸಂಗೀತವಾಗಲಿ, ಇಲ್ಲವೆ ಸಾಹಿತ್ಯ ಕುರಿತ ಉಪನ್ಯಾಸವಾಗಲಿ ಅವುಗಳಿಗೆ   ಆ ಕ್ಷಣದಲ್ಲಿ  ಅವರು ನೀಡುತ್ತಿದ್ದ ಪ್ರತಿಕ್ರಿಯೆ ಇವುಗಳನ್ನು ಗಮನಿಸುವಾಗ, ನನಗೆ ಒಂದು ಹಿರಿಯ  ಜೀವ ಹೀಗೂ ಅರ್ಥಪೂರ್ಣವಾಗಿ ಬದುಕಲು ಸಾಧ್ಯವಾ? ಎಂದು ಆಶ್ಚರ್ಯವಾಗುತ್ತಿತ್ತು. ಏಕೆಂದರೆ,  ಧಾರವಾಡದ ಮಣ್ಣಿನ ಸಂಸ್ಕೃತಿಯೇ  ಅಂತಹದ್ದು. ಇಲ್ಲಿನ ಬಹುತೇಕ ಹಿರಿಯ ಜೀವಗಳಾದ ಚನ್ನವೀರ ಕಣವಿ, ಜಿ.ಎಸ್.ಅಮೂರ್, ಎಂ.ಎಂ. ಕಲ್ಬುರ್ಗಿ, ಸಿದ್ದಲಿಂಗಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜು ಚಂಪಾ ಹೀಗೆ ಅನೇಕರು ಪ್ರತಿಯೊಂದು ಕಾರ್ಯಕ್ರಮದಲ್ಲಿ ಹಾಜರಾಗಿ, ಧಾರವಾಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸದಾ ಜೀವಂತವಾಗಿಟ್ಟಿದ್ದಾರೆ



ಬೇಂದ್ರೆಯವರ ಸ್ಮೃತಿಮಯವಾಗಿರುವ ಧಾರವಾಡದಲ್ಲಿ ಕುವೆಂಪುರವರನ್ನು ಸಹ ಸದಾ  ಜೀವಂತವಾಗಿಟ್ಟವರು ವೃಷಭೇಂದ್ರಸ್ವಾಮಿ. ಏಕೆಂದರೆ, ಕುವೆಂಪು ರವರ ಪರಮ ಪ್ರೀತಿಯ ಶಿಷ್ಯರಲ್ಲಿ ಅವರು ಒಬ್ಬರಾಗಿದ್ದರು. (ಇನ್ನಿಬ್ಬರೆಂದರೆ ಡಾ.ಜಿ.ಎಸ್.ಶಿವರುದ್ರಪ್ಪ ಮತ್ತು ಡಾ. ಪ್ರಭುಶಂಕರ್.) ಕುವೆಂಪು ಶಿಷ್ಯರಲ್ಲಿ ನಾವು ಎರಡು ಬಗೆಯ ಶಿಷ್ಯರನ್ನು ಕಾಣಬಹುದು. ಕುವೆಂಪುರವರನ್ನು ತಲೆಯ ಮೇಲಿಟ್ಟುಕೊಂಡು ಪೂಜಿಸುತ್ತಾ, ಅವರ ವಿಚಾರಧಾರೆಗೆ ತಿಲಾಂಜಲಿಯೊಂದಿಗೆ ತರ್ಪಣ ಬಿಟ್ಟು, ಜಾತಿಯತೆ ಮತ್ತು  ಭ್ರಷ್ಟಾಚಾರವನ್ನು ಪೋಷಿಸುತ್ತಾ, ಕುವೆಂಪುರವರ ವಿಶ್ವ ಮಾನವ ಪರಿಕಲ್ಪನೆಗೆ ಮಸಿ ಬಳಿದವರು. ಇಂತಹವರಲ್ಲಿ ಮೈಸೂರಿನಲ್ಲಿ ಇನ್ನೂ ಅನೇಕ ಮಂದಿ ಜೀವಂತವಾಗಿದ್ದಾರೆ. ಮತ್ತೊಂದು ಗುಂಪೆಂದರೆ, ಅರ್ಧಶತಮಾನ ಕಳೆದರೂ  ಸಹ ತಮ್ಮ ಗುರುವಿನ ಸ್ಮರಣೆಯಿಂದ ಹೊರಬರದೆ, ಸದಾ ಕುವೆಂಪುರವರನ್ನು ತಮ್ಮ ಎದೆಯಲ್ಲಿಟ್ಟುಕೊಂಡು ಆರಾಧಿಸುತ್ತಾ, ಅವರ ವಿಚಾರಧಾರೆಗಳಿಗೆ ಕಿಂಚಿತ್ತೂ ಮುಕ್ಕಾದಂತೆ ಬದುಕಿ ಬಾಳಿದವರು. ಇವರಲ್ಲಿ ಶಿವರುದ್ರಪ್ಪ, ಪ್ರಭಶಂಕರ್ ಮತ್ತು ವೃಷಭೇಂದ್ರಸ್ವಾಮಿ ಪ್ರಮುಖರು.
ಈ ಮಹನೀಯರನ್ನ, ಇವರುಗಳ ನಡೆ, ನುಡಿಯನ್ನು ಗಮನಿಸುವಾಗ ಒಬ್ಬ ವಿದ್ಯಾರ್ಥಿಗೆ ಒಳ್ಳೆಯ ಗುರು ದಕ್ಕುವುದು ಎಷ್ಟರ ಮಟ್ಟಿಗೆ ಪುಣ್ಯವೋ, ಒಬ್ಬ ಗುರುವಿಗೆ ಒಳ್ಳೆಯ ಶಿಷ್ಯರು ಸಿಗುವುದಕ್ಕೆ ಅದೃಷ್ಟವಿರಬೇಕು. ಈ ವಿಷಯದಲ್ಲಿ ಕುವೆಂಪುರವರು ನಿಜಕ್ಕೂ ಅದೃಷ್ಟವಂತರು. ಆ ಕಾಲದ ಗುರು ಶಿಷ್ಯ ಪರಂಪರೆಯು  ಘನತೆ ಮತ್ತು ನೈತಿಕತೆಯಿಂದ ಕೂಡಿತ್ತು. ನಿಜವಾದ ಪ್ರತಿಭೆ ಕುರಿತು ಮತ್ಸರಗಳಿರಲಿಲ್ಲ. ಹಿರಿಯ-ಕಿರಿಯ ಎಂಬ ಬೇಧಗಳಿರಲಿಲ್ಲ. ಕುವೆಂಪುರವರ  ಗುರುಗಳಾದ ಆಚಾರ್ಯ ಬಿ.ಎಂ. ಶ್ರೀ ಯವರು 1920 ದಶಕದಲ್ಲಿ ಅಂದರೆ ನನಗೆ ನೆನಪಿರುವಂತೆ 1926 ರಲ್ಲಿ  ಹೊರತಂದ ನವೋದಯ ಕಾವ್ಯಕ್ಕೆ ಸ್ಪೂರ್ತಿಯಾದ “ ಇಂಗ್ಲೀಷ್ ಗೀತೆಗಳು” ಕೃತಿಗೆ ತಮ್ಮ ಶಿಷ್ಯ ಕುವೆಂಪು ರವರ ಕೈಲಿ ಮುನ್ನುಡಿ ಬರೆಸಿರುವ ಪ್ರಸಂಗವನ್ನು ನಾವು ಇಂದಿನ ಗುರು ಶಿಷ್ಯ ಪರಂಪರೆಯಲ್ಲಿ ಊಹಿಸಲು ಸಾಧ್ಯವೆ?
ಮೂಲತಃ ಬಳ್ಳಾರಿ ಜಿಲ್ಲೆಯಿಂದ ಬಂದ ವೃಷಭೇಂದ್ರ ಸ್ವಾಮಿಯವರು ಆ ಕಾಲದಲ್ಲಿ ದೂರದ ಮೈಸೂರಿಗೆ ಕನ್ನಡ ಎಂ.ಎ. ಕಲಿಯಲು ಹೋದ ಸಂಗತಿ ಕುವೆಂಪು ಪಾಲಿಗೆ ಅಭಿಮಾನದ ವಿಷಯವಾಗಿತ್ತು. ಹಾಗಾಗಿ ವೃಷಭೇಂದ್ರಸ್ವಾಮಿಯವರ ಬಗ್ಗೆ  ಕುವೆಂಪುರವರು ವಿಶೇಷ ಆಸಕ್ತಿ ತಾಳಿದ್ದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಜೆಯ ವೇಳೆ ಕುವೆಂಪುರವರು ವಾಕ್ ಮಾಡುತ್ತಿದ್ದ ವೇಳೆ ವೃಷಭೇಂದ್ರಸ್ವಾಮಿಯವರ ಹೆಗಲ ಮೇಲೆ ಕೈ ಇಟ್ಟು ನಡೆಯುತ್ತಿದ್ದ ಪ್ರಸಂಗವನ್ನು, ಸ್ವತಃ ವೃಷಭೇಂದ್ರಸ್ವಾಮಿಯವರು ಭಾವಪೂರ್ಣವಾಗಿ ವರ್ಣಿಸುತ್ತಿದ್ದರು. ಅವರಿಗೆ ತಮ್ಮ ಗುರುವಿನ ಕುರಿತು ಮಾತನಾಡುವೆಂದರೆ ಇನ್ನಿಲ್ಲದ ಉತ್ಸಾಹ. ತಮ್ಮ ಗುರುವಿನ ಕುರಿತು ಅವರು ಬರೆದಿರುವ “ ತರಗತಿಗಳಲ್ಲಿ ಕುವೆಂಪು” ಎಂಬ ಕೃತಿ ತುಂಬಾ ಆಸಕ್ತಿದಾಯಕವಾಗಿದೆ.


ಕನ್ನಡ ಸಾಹಿತ್ಯ ಲೋಕ ಕಂಡ ಕೆಲವೇ ಕೆಲವು ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾದ ಡಾ.ವೃಷಭೇಂದ್ರಸ್ವಾಮಿಯವರ ಬಾಯಲ್ಲಿ, ಪಂಪ ಮಹಾಭಾರತ, ಜನ್ನನ ಯಶೋಧರ ಚರಿತೆ, ರತ್ನಾಕರ ವರ್ಣಿಯ “ ಭರತೇಶ ವೈಭವ, ಇಂತಹ ಹಳೆಗನ್ನಡ ಮಹಾ ಕಾವ್ಯಗಳನ್ನು ಕೇಳುವುದರಿಂದ ಆಗುತ್ತಿದ್ದ ಸಂತೋಷ ಅವರ್ಣೀಯವಾದುದು.  1984 ರಲ್ಲಿ ಮಂಗಳೂರು ನಗರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ನಡೆದ  ಕನ್ನಡ ಕಾವ್ಯ ಕಮ್ಮಟದಲ್ಲಿ  ವೃಷಭೇಂದ್ರ ಸ್ವಾಮಿಯವರು  ಮಾಡಿದ ಪಂಪನ “ ನೀಲಾಂಜನೆಯ ನೃತ್ಯ” ಎಂಬ ಕಾವ್ಯದ ಒಂದು ಪಾಠ ಇನ್ನೂ ನನ್ನ ಸ್ಮೃತಿಯಲ್ಲಿ ಹಸಿರಾಗಿದೆ. ಅದೇ ರೀತಿ ಕಲ್ಬುರ್ಗಿಯವರ ರನ್ನನ ಗಧಾ ಯುದ್ಧ, ರಾಘವಾಂಕನ ಹರಿಶ್ಚಂದ್ರಕಾವ್ಯ, ಹರಿಹರನ ರಗಳೆ ಇವುಗಳನ್ನು ಕೇಳುವುದು ಕೂಡ  ಆನಂದದಾಯಕ ಸಂಗತಿ.
ಸದಾ ಮಾತು ಮತ್ತು ಎದೆ ತುಂಬಾ ಉತ್ಕಟ ಪ್ರೀತಿಯನ್ನು ತುಂಬಿಕೊಂಡಿದ್ದ ವೃಷಭೇಂದ್ರಸ್ವಾಮಿಯವರದು, ಮರಗಳು ಮತ್ತು ಕಲ್ಲುಗಳನ್ನೂ ಸಹ ಮಾತಿಗೆಳೆಯುವ ಪ್ರವೃತ್ತಿ. ಸಂಜೆಯ ವೇಳೆ ಎಡಗೈಲಿ ಪುಟ್ಟ ರೇಡಿಯೋ ಹಿಡಿದುಕೊಂಡು ವಾಕ್ ಮಾಡುತ್ತಾ, ರಸ್ತೆಯಲ್ಲಿ ಎದುರಾಗುವ ಪುಟ್ಟ ಮಕ್ಕಳನ್ನು ಮಾತನಾಡಿಸುತ್ತಾ, ಬಲಗೈಯನ್ನು ಪ್ಯಾಂಟಿನ ಜೋಬಿನೊಳಗೆ ತೂರಿಸಿ ಚಾಕಲೇಟ್ ನೀಡುತ್ತಾ ಹೋಗುವುದು ಅವರ ದಿನ ನಿತ್ಯದ ಕಾಯಕವಾಗಿತ್ತು. ಹಾಗಾಗಿ ಅವರು ಧಾರವಾಡದ ಕಲ್ಯಾಣಗರ ಬಡಾವಣೆಯ ಮಕ್ಖಳ ಪಾಲಿಗೆ ಚಾಕಲೇಟ್ ತಾತ, ರೇಡಿಯೋ ಅಜ್ಜ ಎಲ್ಲಾ ಆಗಿದ್ದರು.

ಒಂದು ಕಾಲದಲ್ಲಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಡಾ.ವೃಷಭೇಂದ್ರಸ್ವಾಮಿಯವರ ಶಿಷ್ಯರಾಗಿದ್ದು, ನಂತರ  ಸಹೋದ್ಯೋಗಿಯಾಗಿದ್ದ ಡಾ. ಗುರುಲಿಂಗ ಕಾಪಸೆಯವರು “ ತಮ್ಮ ಗುರುಗಳನ್ನು ಯಾವಾಗಲೂ ಪ್ರೀತಿಯಿಂದ ನೆನೆಯುತ್ತಿದ್ದರು. ಆರ್.ಸಿ. ಹಿರೇಮಠ, ಕಲ್ಬುರ್ಗಿ ಮುಂತಾದ ಗುರುಗಳು ವಿದ್ಯಾರ್ಥಿಗಳಿಂದ ಒಂದು ಅಂತರ ಕಾಯ್ದುಕೊಂಡು, ಗಂಭೀರ ಪ್ರೊಫೆಸರ್ ಗಳಾಗಿದ್ದರೆ, ಇವರಿಗಿಂತ ಭಿನ್ನವಾಗಿ ಸದಾ ಹಾಸ್ಯ ಚಟಾಕಿ ಹಾರಿಸುತ್ತಾ ವೃಷಭೇಂದ್ರಸ್ವಾಮಿಯವರು  ವಿದ್ಯಾರ್ಥಿಗಳ ಜೊತೆ ಇರುತ್ತಿದ್ದರು. ಎಂಬ ಮಾತು ನಿಜಾ ಕೂಡ ಹೌದು. ತಮ್ಮ ಇಳಿ ವಯಸ್ಸಿನಲ್ಲಿಯೂ ಸಹ ಅವರು ಭಾಗವಹಿಸುತ್ತಿದ್ದ ಸಭೆ ಸಮಾರಂಭಗಳು ಅವರ ಹಾಸ್ಯ ಪ್ರವತ್ತಿಯಿಂದ ಕಳೆಗಟ್ಟುತ್ತಿದ್ದವು. ಈಗ ಅಂತಹ ಕ್ರೀಯಾಶೀಲ  ಹಾಗೂ ಉತ್ಸಾಹ ಭರಿತ, ಧೀಮಂತ ಹಿರಿಯ ಜೀವವನ್ನು ಧಾರವಾಡದ ಸಾಂಸ್ಕೃತಿಕ ಜಗತ್ತು ಕಳೆದುಕೊಂಡಿದೆ.

ಸೋಮವಾರ, ಜನವರಿ 19, 2015

ಬುಡಕಟ್ಟು ಜನಾಂಗದ ಬವಣೆಗಳು ಮತ್ತು ಅಭಿವೃದ್ಧಿಯ ತೊಡುಕುಗಳು



 ನಾವು ಬದುಕುತ್ತಿರುವ ವರ್ತಮಾನದ ಜಗತ್ತು ಇಪ್ಪತ್ತನೆಯ ಶತಮಾನದ ಹೊಸ್ತಿಲನ್ನು ದಾಟಿ, ಇಪ್ಪತ್ತೊಂದನೆಯ ಶತಮಾನ ಅಂಗಳಕ್ಕೆ ಕಾಲಿಡುತ್ತಿದ್ದಂತೆ, ನಾವು ಈವರೆಗೆ ನಿರ್ವಚಿಸಿಕೊಂಡು ಬಂದಿದ್ದ ಅಭಿವೃದ್ಧಿಯ ವಾಖ್ಯಾನಗಳು ಬದಲಾಗಿ ಹೋದವು. ತೀವ್ರ ಪೈಪೋಟಿಯಿಂದ ಕೂಡಿದ ಮಾರುಕಟ್ಟೆ ಆಧಾರಿತ  ಜಗತ್ತಿನಲ್ಲಿ ಕಲ್ಯಾಣ ರಾಷ್ಟ್ರ ಎಂಬ ಪರಿಕಲ್ಪನೆ ಪಲ್ಲಟಗೊಳ್ಳುವುದರ ಜೊತೆಗೆ, ಮಾನವೀಯತೆಗಿಂತ ಮುಖ್ಯವಾಗಿ ಲಾಭಕೋರತನ ಮುಖ್ಯವಾಯಿತು. ಜಾಗತೀಕರಣ ವ್ಯವಸ್ಥೆಯು ಎಲ್ಲಾ ದೇಶಗಳ ಭಾಷೆ ಮತ್ತು ಗಡಿಗಳನ್ನು ಮೀರಿ ಎಲ್ಲರ ಬದುಕಿನಲ್ಲಿ ಆವರಿಸಿಕೊಳ್ಳುತ್ತಿದ್ದಂತೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುವ ಸರ್ಕಾರಗಳನ್ನು ಮತ್ತು ನಮ್ಮ ಬದುಕನ್ನು  ಅದು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.
ಇವೆಲ್ಲವುಗಳ ಒಟ್ಟು ಪರಿಣಾಮ ಎಂಬಂತೆ ನಗರ ಮತ್ತು ಹಳ್ಳಿಗಳ ಚಹರೆ ಬದಲಾಗುತ್ತಾ ಹೋದಂತೆ ಹಳ್ಳಿಗಳು ಸ್ಮಶಾನ ಸದೃಶ್ಯವಾದವು. ನಗರಗಳ ಅಭಿವೃದ್ಧಿಗೆ ಆದ್ಯತೆ ಹೆಚ್ಚಾದಂತೆ ಜೊತೆ ಜೊತೆಯಲ್ಲಿ ಸಮಸ್ಯೆಗಳು ಸೃಷ್ಟಿಯಾದವು. ಪಂಚತಂತ್ರ ಕಥೆಗಳಲ್ಲಿ ಬರುವ ವಿಕ್ರಮನ ಹೆಗಲಿಗೆ ಜೋತು ಬಿದ್ದ ಬೇತಾಳದಂತೆ ಭಾರತದ ಹೆಗಲಿಗೆ ಜೋತು ಬಿದ್ದಿರುವ ಸಮಸ್ಯೆಗಳಲ್ಲಿ ಭಾರತದ ಬುಡಕಟ್ಟು ಜನಾಂಗದ ಅಭಿವೃದ್ಧಿಯೂ ಸಹ ಒಂದು. ಭಾರತದ ಬುಡಕಟ್ಟು ಜನಾಂಗದ ಸಮಸ್ಯೆ ಇಂದಿಗೂ ಸಹ ಜೀವಂತ ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ಜೊತೆಗೆ ನಕ್ಸಲ್ ಹೋರಾಟಕ್ಕೆ ಮೂಲ ಕಾರಣವಾಗಿದೆ.
ಈಗಾಗಲೆ ಅರ್ಧಶತಮಾನದಷ್ಟು ಕಾಲ ಹೋರಾಟದ ಮೂಲಕ ಹಾದು ಬಂದಿರುವ ಭಾರತದ ನಕ್ಸಲ್ ಹೋರಾಟವನ್ನು  2015 ಹೊಸ್ತಿಲಲ್ಲಿ ನಿಂತು ಪರಾಮರ್ಶಿಸಿದಾಗ ಸಂಭ್ರಮ ಪಡುವ ವಿಷಯಕ್ಕಿಂತ ಸಂಕಟ ಪಡುವ ಸಂಗತಿಗಳೇ ಹೆಚ್ಚಾಗಿವೆ.
1930 ದಶಕದಲ್ಲಿ ಆಂಧ್ರ ಪ್ರದೇಶದ ಉತ್ತರ ಭಾಗದ ಗೋದಾವರಿ ನದಿಯಾಚೆ ಕೃಷಿ ಕಾರ್ಮಿಕರು ಮತ್ತು ಗೇಣಿದಾರ ರೈತರ ಹೋರಾಟವಾಗಿ ಮತ್ತು ಇದೇ ವೇಳೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಪ್ರಾಂತ್ಯದ ಡಾರ್ಜಿಲಿಂಗ್ ಗಿರಿಧಾಮದ ಸುತ್ತ ಮುತ್ತ ಇದ್ದ ಬ್ರಿಟೀಷರ ಒಡೆತನಲ್ಲಿ ಇದ್ದ ಚಹಾ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಬುಡುಕಡ್ಡು ಜನಾಂಗದ ಕೂಲಿ ಹೆಚ್ಚಳಕ್ಕಾಗಿ ಎಡಪಂಥೀಯ ಸಂಘಟನೆಗಳಿಂದ ಆರಂಭವಾದ ನಕ್ಸಲ್ ಹೋರಾಟ, ನಂತರದ ದಿನಗಳಲ್ಲಿ ಹಲವು ಮಜಲುಗಳನ್ನು ತಲುಪಿ ನಂತರ ನಕ್ಸಲ್ ಚಳುವಳಿಯಾಗಿ ರೂಪುಗೊಂಡಿತುಸೈದ್ಧಾಂತಿಕ ಹಿನ್ನಲೆಯಲ್ಲಿ ಆರಂಭಗೊಂಡ ಹೋರಾಟಕ್ಕೆ ಚಾರು ಮುಜುಂದಾರ್, ಕನುಸನ್ಯಾಲ್, ಕನಾಯ್ ಚಟರ್ಜಿ, ಜಗಲ್ ಸಂತಾಲ್, ಸುಬತ್ರಾದತ್, ನಾಗಭೂಷಣ್ ಪಟ್ನಾಯಕ್, ಎನ್.ಪ್ರಸಾದ್ ವಿನೋದ್ ಮಿಶ್ರಾ ಮತ್ತು  ಆಂಧ್ರದ ನಾಗಿರೆಡ್ಡಿ, ವೆಂಪಟಾಪು ಸತ್ಯನಾರಾಯಣ, ಕೃಷ್ಣಮೂರ್ತಿ, ಕೊಂಡಪಲ್ಲಿ ಸೀತಾರಾಮಯ್ಯ ಹೀಗೆ ಅನೇಕ ನಾಯಕರು ತಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ನಕ್ಸಲ್ ಹೋರಾಟಕ್ಕೆ ಭದ್ರ ಬುನಾದಿ ಹಾಕಿದ್ದರು. 1980 ದಶಕದಲ್ಲಿ ಹೋರಾಟ ಸರ್ಕಾರ ಮತ್ತು ನಕ್ಸಲ್ ಸಂಘಟನೆಗಳ ನಡುವಿನ ಯುದ್ಧವಾಗಿ ಮಾರ್ಪಟ್ಟು ಹಿಂಸೆಯ ಹಾದಿಯನ್ನು ತುಳಿಯಿತು. ಹೋರಾಟದ ನಡುವೆ ಸಿಲುಕಿದ ಭಾರತದ ಅಮಾಯಕ ಸಮುದಾಯವಾದ ಬುಡಕಟ್ಟು ಜನಾಂಗ ಎಲ್ಲಾ ಅಭಿವೃದ್ಧಿಯಿಂದ ವಂಚಿತವಾಗಬೇಕಾಯಿತು.
ಒಂದು ನೆಮ್ಮದಿಯ ಸಂಗತಿಯೆಂದರೆ, ಇಡೀ ರಾಷ್ಟ್ರಾದ್ಯಂತ ನಕ್ಸಲರು ಮತ್ತು ಸರ್ಕಾರಗಳ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಹಿಂಸೆಯ ಪ್ರಮಾಣ ಕ್ರಮೇಣ ಇಳಿಮುಖವಾಗುತ್ತಿದೆ. (2012 ಸಮೀಕ್ಷೆಯ ವರದಿ) ಜಾರ್ಖಂಡ್ ಮತ್ತು ಛತ್ತೀಸ್ಗಡ್ ರಾಜ್ಯಗಳನ್ನು ಹೊರತುಪಡಿಸಿದರೆ, ಉಳಿದ ರಾಜ್ಯಗಳಲ್ಲಿ ಆಶಾಭಾವನೆ ಮೂಡುವಂತಿದೆ. ನಕ್ಸಲ್ ಚಳವಳಿಯನ್ನು ಹುಟ್ಟುಹಾಕಿದ ಆಂಧ್ರಪ್ರದೇಶದಲ್ಲಿ ಕೇವಲ 13 ಸಾವುಗಳು ಸಂಭವಿಸಿವೆ. ಜಾರ್ಖಂಡ್ನಲ್ಲಿ 160 ಸಾವು ( 2011 ರಲ್ಲಿ 182 ) ಛತ್ತೀಸ್ಗಡದಲ್ಲಿ 107 ( 2011 ರಲ್ಲಿ 204 ) ಬಿಹಾರದಲ್ಲಿ 43ಸಾವು  (2011 ರಲ್ಲಿ 63) ಪಶ್ಚಿಮ ಬಂಗಾಳದಲ್ಲಿ 6 ಸಾವು( 2011 ರಲ್ಲಿ 45) ಹೀಗೆ ಭಾರತದಲ್ಲಿ 2011ರಲ್ಲಿ 1760 ಪ್ರಕರಣಗಳು ನಡೆದು, 611 ನಾಗರೀಕರು ಮತ್ತು 99 ನಕ್ಸಲರು ಮೃತಪಟ್ಟಿದ್ದರೆ, 2012 ಅವಧಿಯಲ್ಲಿ 1365 ಪ್ರಕರಣಗಳು ದಾಖಲಾಗಿ 409 ನಾಗರೀಕರು ಮತ್ತು 74 ನಕ್ಸಲರು ಮೃತಪಟ್ಟಿದ್ದಾರೆ. ಒಟ್ಟಾರೆ ಸರ್ಕಾರ ಮತ್ತು ನಕ್ಸಲ್ ಸಂಘಟನೆಗಳಿಗೆ ಸಂಘÀರ್ಷ ಮತ್ತು ಹಿಂಸೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಮೂಡತೊಡಗಿದೆ.




ಭಾರತದ ನಕ್ಸಲ್ ಇತಿಹಾಸದಲ್ಲಿ ಪೊಲೀಸರತ್ತ, ಅಥವಾ ಸರ್ಕಾರಗಳತ್ತ ಇಲ್ಲವೆ, ನಕ್ಸಲ್ ಸಂಘಟನೆಗಳತ್ತ ಬೆರಳು ತೋರಿಸಿ ಆರೋಪ ಹೊರಿಸುವ ಮುನ್ನ ಉಭಯ ಬಣಗಳು ಎಲ್ಲಿ ಎಡವಿದವು ಎಂಬುದರತ್ತ ಗಮನಹರಿಸಿ ಹಿಂಸೆ ಮತ್ತು ಹೋರಾಟವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ  ಸಾಂಘಿಕ ಪ್ರಯತ್ನ ನಡೆಯಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಮುಕ್ತ ಮನಸ್ಸಿನಿಂದ ಕೈ ಜೋಡಿಸಬೇಕಿದೆ. ಇತಿಹಾಸದ ಘಟನೆಗಳನ್ನು ಕೆದಕುತ್ತಾ ಪರಸ್ಪರ ಆರೋಪ ಮಾಡಿ ಕಾಲ ಕಳೆಯುವ ಬದಲು, ಹಿಂಸೆಯಿಂದ ಮುಕ್ತವಾದ ಜಗತ್ತಿನತ್ತ ನಾವು ಹೆಜ್ಜೆ ಹಾಕಬೇಕಿದೆ. ನಾವು ಸೃಷ್ಟಿಸಬೇಕಾದ ಸಮಾಜದಲ್ಲಿ ಹಿಂಸೆ, ಬಡತನ, ಅಪಮಾನ, ಶೋóಷಣೆಗಳಿಲ್ಲದೆ ದಲಿತರು, ಬುಡಕಟ್ಟು ಜನಾಂಗದ ಆದಿವಾಸಿಗಳು, ಮತ್ತು ಅಲ್ಪಸಂಖ್ಯಾತರು ಇವರೆಲ್ಲಾ ಭಯಮುಕ್ತರಾಗಿ ಸಮಾನ ಗೌರವದಿಂದ ಬದುಕುವಂತಹ ವಾತಾವರಣವನ್ನು  ನಿರ್ಮಾಣ ಮಾಡುವ ನೈತಿಕ ಹೊಣೆ  ಅಕ್ಷರ  ಬಲ್ಲ ನಮ್ಮೆಲ್ಲರ ಮೇಲಿದೆವೈದ್ಯನೊಬ್ಬ ಖಾಯಿಲೆಯ ಮೂಲಕ್ಕೆ ಕೈ ಹಾಕುವಂತೆ ನಾವುಗಳು ಕೂಡ ಸಮಸ್ಯೆಗಳ ಬುಡಕ್ಕೆ ಕೈ ಹಾಕಬೇಕಿದೆ. ಸಮಾಜದಲ್ಲಿ ಅನೇಕ ರೂಪದಲ್ಲಿ ತಾಂಡವಾಡುತ್ತಿರುವ  ಹಿಂಸೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ಭಾರತದ ನಕ್ಸಲ್ ಹೋರಾಟದ ಇತಿಹಾಸ ಅಥವಾ ಅದು ಹಿಡಿದ ಹಿಂಸೆಯ ಮಾರ್ಗ ಕುರಿತಂತೆ ನಮ್ಮಗಳ ಅಸಮಾಧಾನ ಏನೇ ಇರಲಿ, ಅವರುಗಳ ಹೋರಾಟದಲ್ಲಿ ಎಲ್ಲಿಯೂ ಸ್ವಾರ್ಥವೆಂಬುದು ಇರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇಂದಿಗೂ ಮೂಕ ಪ್ರಾಣಿಗಳಂತೆ ಬದುಕುತ್ತಿರುವ ಆದಿವಾಸಿಗಳು ಮತ್ತು ಹಿಂದುಳಿದ ಬುಡಕಟ್ಟು ಜನಾಂಗಗಳ ನೆಮ್ಮದಿಯ ಬದುಕಿಗಾಗಿ ನಕ್ಸಲಿಸಂ ಹೆಸರಿನಲ್ಲಿ ಸಾವಿರಾರು ವಿದ್ಯಾವಂತ ಯುವಕರು ಪ್ರಾಣತೆತ್ತಿದ್ದಾರೆ. ಇವರ ಹೋರಾಟದ ಹಿಂದಿನ ಕಾಳಜಿಯನ್ನು ನಮ್ಮನ್ನಾಳುವ ಸರ್ಕಾರಗಳು ಅರಿಯುವ ಮನಸ್ಸು ಮಾಡಿದ್ದರೆ, ನಕ್ಸಲ್ ಸಂಘಟನೆಗಳು ಮತ್ತು ಸರ್ಕಾರಗಳ ನಡುವಿನ ಸಂಘರ್ಷಕ್ಕೆ ರಕ್ತದ ಕಲೆಗಳು ಅಂಟಿಕೊಳ್ಳುತ್ತಿರಲಿಲ್ಲಸಂಘರ್ಷಕ್ಕೆ ಮೂಲ ಕಾರಣರಾದ ಭಾರತದ ಅರಣ್ಯವಾಸಿ ಆದಿವಾಸಿಗಳ ಬದುಕು ಭಾರತ ಸ್ವಾತಂತ್ರ್ಯಾನಂತರದ 67 ವರ್ಷಗಳಲ್ಲಿ ಹಸನಾಗಿದೆಯಾ? ಅದೂ ಇಲ್ಲ.



ನಮ್ಮ ನಡುವಿನ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರಗುಹಾ  2011 ರಲ್ಲಿ ಆಗಸ್ಟ್ ಹದಿನೈದರೆಂದು ದೆಹಲಿಯ ಹಿಂದೂಸ್ತಾನ್ ಟೈಮ್ಸ್ ದಿನ ಪತ್ರಿಕೆಗೆಟ್ರೈಬಲ್ ಟ್ರ್ಯಾಜಿಡಿಸ್ ( ಬುಡಕಟ್ಟು ಜನಾಂಗಗಳ ದುರಂತ) ಎಂಬ ವಿಶೇಷ ಲೇಖನವನ್ನು ಬರೆದಿದ್ದರು. ಭಾರತದ ಆದಿವಾಸಿಗಳ ಸಮಸ್ಯೆಯನ್ನು ನಿಖರವಾಗಿ ಗುರುತಿಸಿರುವ ಗುಹಾ ಅವರು, ನಮ್ಮ ಜನಪ್ರತಿನಿಧಿಗಳ ಕಪಟ ನಾಟಕವನ್ನೂ ಸಹ ಲೇಖನದಲ್ಲಿ ನಿಷ್ಟುರವಾಗಿ ಅನಾವರಣಗೊಳಿಸಿದ್ದಾರೆ.
2010 ಆಗಸ್ಟ್ ತಿಂಗಳಿನಲ್ಲಿ ಒರಿಸ್ಸಾದಲ್ಲಿ ಆದಿವಾಸಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದ ರಾಹುಲ್ ಗಾಂಧಿ ಇನ್ನು ಮುಂದೆ ದೆಹಲಿಯಲ್ಲಿ ನಿಮ್ಮ ಪರವಾಗಿ ಸೈನಿಕನಂತೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ ಮರೆತು ಹೋದ ಪ್ರಸಂಗವನ್ನು ಪ್ರಸ್ತಾಪಿಸುತ್ತಾ ಭಾರತದ ಬುಡಕಟ್ಟು ಅಥವಾ ಆದಿವಾಸಿಗಳ ಸಮಸ್ಯೆಯನ್ನು ಏಳು ಬಗೆಯಲ್ಲಿ  ರಾಮಚಂದ್ರ ಗುಹಾ ಗುರುತಿಸಿದ್ದಾರೆ. ಅವುಗಳು ಕೆಳಗಿನಂತಿವೆ.
ಒಂದು -:  ದಟ್ಟವಾದ ಅರಣ್ಯದಲ್ಲಿ ತಮ್ಮದೇ ಆದ ಸಂಸ್ಕøತಿಯ ನೆರಳಿನಲ್ಲಿ ಮತ್ತು ಸಮೃದ್ಧ ಖನಿಜ ಸಂಪತ್ತಿರುವ ಗುಡ್ಡಗಾಡು ಪ್ರದೇಶದಲ್ಲಿ ಬದುಕಿರುವ ಆದಿವಾಸಿಗಳು ಇಂದು ಅಭಿವೃದ್ಧಿಯ ನೆಪದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ, ಅಣೆಕಟ್ಟುಗಳ ನಿರ್ಮಾಣ, ಅರಣ್ಯದಲ್ಲಿ ನಿರಂತವಾಗಿ ನಡೆದಿರುವ ಮರಗಳ ಮಾರಣಹೋಮ ಇವೆಲ್ಲವೂ ಅವರನ್ನು ಆದುನಿಕ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅತಂತ್ರರನ್ನಾಗಿ ಮಾಡಿವೆ.

ಎರಡು -:  ಭಾರತದಲ್ಲಿ ದಲಿತರಿಗೆ ದಿಕ್ಕುದೆಸೆಯಾಗಿ ಡಾ. ಬಿ.ಆರ್.ಅಂಬೇಡ್ಕರ್ ಜನ್ಮತಾಳಿದ ಹಾಗೆ ಬುಡಕಟ್ಟು ಜನಾಂಗದ ಸಮುದಾಯಕ್ಕೆ ಒಬ್ಬ ಅಂಬೇಡ್ಕರ್ ದೊರೆಯದಿರುವುದು ಅವರ ಅವರ ಶೋಚನೀಯ ಬದುಕಿಗೆ ಕಾರಣವಾಗಿದೆ.

ಮೂರು -: ಭಾರತಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಹರಿದು ಹಂಚಿಹೋಗಿರುವ ಬುಡಕಟ್ಟು ಜನಾಂಗ ಇಲ್ಲಿಯವರೆಗೆÀ ಯಾವುದೇ ರಾಜಕೀಯ ಪಕ್ಷಗಳಿಗೆ ದಲಿತರು ಅಥವಾ ಅಲ್ಪಸಂಖ್ಯಾತರ ಹಾಗೆ ಮತಬ್ಯಾಂಕ್ಗಳಾಗಿ ಗೋಚರಿಸಲಿಲ್ಲ.

ನಾಲ್ಕು -: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನಾಂಗಕ್ಕಾಗಿ ಮೀಸಲಿಟ್ಟ ಉದ್ಯೋಗಗಳು ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ವಿದ್ಯಾವಂತರ ಪಾಲಾದವು.

ಐದು -:  ಇವರುಗಳ ಆಶೋತ್ತರಗಳನ್ನು ಈಡೇರಿಸಲು ಉನ್ನತ ಹುದ್ದೆಯಲ್ಲಿ ಬುಡಕಟ್ಟು ಜನಾಂಗದಿಂದ ಬಂದ ಮೇಲ್ಮಟ್ಟದ ಅಧಿಕಾರಿಯಾಗಲಿ, ಅಥವಾ ಒಬ್ಬ ಜನಪ್ರತಿನಿಧಿಯಾಗಲಿ ಇಲ್ಲದಿರುವುದರಿಂದ ಆದಿವಾಸಿಗಳ ಸಮಸ್ಯೆಗಳು ಈವರೆಗೆ ಸರ್ಕಾರಗಳ ಕಣ್ಣಿಗೆ ಗೋಚರವಾಗಿಲ್ಲ.

ಆರು -: ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಗಳ ಬದುಕು ಪರಿಸರಕ್ಕೆ ಮಾರಕವಾಗದಂತೆ, ದೇಶಿ ಜ್ಞಾನಪರಂಪರೆಯಿಂದ ಕೂಡಿದ್ದು ಅವರುಗಳು ಕಾಪಾಡಿಕೊಂಡು ಬಂದಿರುವ ಜ್ಞಾನ ಶಿಸ್ತುಗಳನ್ನು ಸುಲಭವಾಗಿ ಆಧುನಿಕ ಬದುಕಿಗಾಗಲಿ ಅಥವಾ ತಂತ್ರಜ್ಞಾನಕ್ಕಾಗಲಿ ಅಳವಡಿಸಲು ಸಾಧ್ಯವಾಗಿಲ್ಲ.

ಏಳು-: ಪಶ್ಚಿಮ ಬಂಗಾಳದ ಸಂತಾಲ್ ಭಾಷೆಯೊಂದನ್ನು ಹೊರತು ಪಡಿಸಿದರೆ ಸಮುದಾಯಗಳ ಉಳಿದ ಮಾತೃಭಾಷೆಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಕಾರಣದಿಂದಾಗಿ ಬುಡಕಟ್ಟು ಜನಾಂಗದ ಮಕ್ಕಳು ಮಾತೃ ಭಾಷೆಯ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಸ್ವಾತಂತ್ರ್ಯ ಲಭಿಸಿ  ಆರೂವರೆ ದಶಕಗಳ ನಂತರವೂ ಯಾವ ಪಕ್ಷಗಳಾಗಲಿ, ಸರ್ಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಅಥವಾ ಯೋಜನೆಗಳನ್ನು ರೂಪಿಸಿದ್ದನ್ನು ನಾವುಗಳು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದೆ ಹೋಗಿದ್ದರೆ, ನತದೃಷ್ಟರು ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗಿ ಹೋಗುತ್ತಿದ್ದರು ಎಂಬುದು ನಾವು ಅರಗಿಸಿಕೊಳ್ಳಲೇ ಬೇಕಾಗಿರುವ ಸತ್ಯ.
ಸಮಾಧಾನದ ಸಂಗತಿಯೆಂದರೆ, ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾದಂತಿದೆಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.
2003 ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರ್ಕಾರ, ನಕ್ಸಲರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ಧಿಯಲ್ಲಿನ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು  ಕೇಂದ್ರ ಸರ್ಕಾರ ಗ್ರಹಿಸಿದೆ. ಇದರಿಂದಾಗಿ  ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. 2007 ರಲ್ಲಿ ಹತ್ತು ರಾಜ್ಯಗಳ 180 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿತ್ತು. 2012 ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ 2012 ವೇಳೆಗೆ ದೇಶಾದ್ಯಂತ 60 ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ. ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ  ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ..ಎಸ್. ಅಧಿಕಾರಿ ಶರ್ಮ ಮಧ್ಯಸ್ತಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.

ಉದ್ಭವಿಸುವ ಸಮಸ್ಯೆಗಳಿಗೆ ಬಂದೂಕು ಮಾತ್ರ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರ್ಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ  ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವ ಸಂಭವ ತೀರಾ ಕಡಿಮೆ. ನಕ್ಸಲ್ ಚಳವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳದಂತೆ ತಡೆಯಬೇಕುಇದಕ್ಕಿರುವ ಏಕೈಕ ಪರಿಹಾರವೆಂದರೆ, ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದಜಲ್, ಜಂಗಲ್, ಜಮೀನ್ಎಂಬ ಬೇಡಿಕೆಗಳನ್ನು ಈಡೇರಿಸುವುದು.


ಅರಣ್ಯದಲ್ಲ್ರಿ ಅತಂತ್ರರಾಗಿರುವ ಆದಿವಾಸಿ ಜನಾಂಗಗಳ ನಿಸರ್ಗಮಯ ಸಹಜ ಬದುಕಿಗೆ ಅಡ್ಡಿಯಾಗದಂತೆ ಸರ್ಕಾರಗಳು ಕಾಳಜಿ ವಹಿಸಬೇಕು. ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಹಿಸಬೇಕು. (ಈಗಾಗಲೇ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಕುರಿತು ಸ್ಪಷ್ಟ ನಿರ್ದೇಶನ ನೀಡಿದೆ) ದಲ್ಲಾಳಿಗಳು ಮತ್ತು ಏಜೆಂಟರಿಂದ ಆದಿವಾಸಿಗಳು ಮೋಸಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಮೂಲಕ ಅರಣ್ಯ ಕಿರು ಉತ್ಪನ್ನಗಳಾದ ತೆಂಡು ಎಲೆ, ಜೇನುತುಪ್ಪ, ಗಿಡಮೂಲಿಕೆ ಔಷಧಿಯ ಬೇರು ಮತ್ತು ಕಾಂಡಗಳು, ಬಿದರಿನ ಬೊಂಬು, ಸಂಗ್ರಹಿಸಿದ ಹಣ್ಣು ಹಂಪಲು, ಮಸಾಲೆ ಪದಾರ್ಥಗಳು ಇವುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು.
ಆರೋಗ್ಯ ಮತ್ತು ಶಿಕ್ಷಣದಿಂದ ವಂಚಿತವಾಗಿರುವ ಆದಿವಾಸಿಗಳ ಹಳ್ಳಿಗಳಿಗಲ್ಲಿ ಶಾಲೆ, ಆಸ್ಪತ್ರೆ ಇವುಗಳನ್ನು ತೆರೆಯುವುದರ ಮೂಲಕ ಎಲ್ಲಾ ಮಕ್ಕಳಿಗೆ ಸೌಲಭ್ಯ ದೊರೆಯುವಂತಾಗಬೇಕು. ಆದಿವಾಸಿ ಹಳ್ಳಿಗಳಲ್ಲಿ ಕುಡಿಯುವ ಶುದ್ಧ ನೀರು ದೊರಕುವಂತಾಗಬೇಕು. ಯುವಕರಿಗೆ ವೃತ್ತಿ ಕೋರ್ಸುಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಆರಣ್ಯದಲ್ಲಿ ಆದಿವಾಸಿಗಳು ಬೇಸಾಯ ಮಾಡುತ್ತಿರುವ ಜಮೀನಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಮರು ಮಾರಾಟ ಅಥವಾ ಭೋಗ್ಯಕ್ಕೆ ಅವಕಾಶ ಇಲ್ಲದಂತೆ ನಿಬಂಧನೆಗಳನ್ನು ಹೇರಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೊದಲು ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು.
ಇಂತಹ ಮಾನವೀಯ ಮುಖವುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಸರ್ಕಾರಗಳಿಗೆ ನಕ್ಸಲ್ ಚಟುವಟಿಕೆಯನ್ನು ಹತ್ತಿಕ್ಕಲು ಸಾಧ್ಯನಕ್ಸಲ್ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆಲದ ಬುದ್ಧಿಜೀವಿಗಳು ವಿಶೇಷವಾಗಿ ಎಡಪಂಥೀಯ ಪಕ್ಷಗಳ ಚಿಂತಕರ ಹೊಣೆಗಾರಿಕೆ ಪ್ರಮುಖ ಪಾತ್ರ ವಹಿಸಲಿದೆ. ಹಿಂದೆ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರೂ, ಭಾರತದ ಬಡವರು, ಬಡತನ, ಇಲ್ಲಿನ ವ್ಯವಸ್ಥೆಗಳ ವೈರುಧ್ಯ, ಚಳವಳಿ ಮತ್ತು ಕಾರ್ಮಿಕರ ಬವಣೆ ಇವುಗಳ ಬಗ್ಗೆ ಅಪಾರ ಕಾಳಜಿ ಮತ್ತು ಒಳನೋಟಗಳನ್ನು ಹೊಂದಿದ್ದ ನಂಬೂದರಿಪಾಡ್, ಸುರ್ಜಿತ್ಸಿಂಗ್, ಸುಂದರಯ್ಯ, ಜ್ಯೋತಿಬಸು, ಸೋಮನಾಥಚಟರ್ಜಿ ಇಂತಹ ನಾಯಕರು ಮತ್ತು ಅವರ ಚಿಂತನೆಯ ಮಾದರಿಗಳು ಬೇಕಾಗಿವೆ. ಕಮ್ಯೂನಿಷ್ಟ್ ಪಕ್ಷದ ವೈಫಲ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬುದ್ಧದೇವ್ ಭಟ್ಟಾಚಾರ್ಯ ನಡೆಸಿದ ಆಡಳಿತ ಮಾದರಿ ನಮ್ಮೆದುರು ಸಾಕ್ಷಿಯಾಗಿದೆ. ರೈತರು, ಕಾರ್ಮಿಕರ ಏಳಿಗೆಯ ಮಂತ್ರ ಜಪಿಸುತ್ತಾ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸಿಕೊಡಲು ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ರೈತರಮೇಲೆ ನಡೆಸಿದ ದೌರ್ಜನ್ಯಗಳು ನಮ್ಮ ಕಣ್ಣೆದುರು ಜೀವಂತವಾಗಿವೆ. ಈಗಿನ ಕಮ್ಯೂನಿಷ್ಟ್ ಪಾಲಿಟ್ ಬ್ಯೂರೊದಲ್ಲಿ ಪ್ರಕಾಶ್ ಕಾರಟ್, ಸೀತಾರಾಮ್ ಯಚೂರಿ, ಬೃಂದಾಕಾರಟ್, ರಾಜಾ, ದಾಸ್ಗುಪ್ತಾ ಮುಂತಾದ ಬದ್ಧತೆಯುಳ್ಳ ಪ್ರಜ್ಞಾವಂತ ನಾಯಕರಿದ್ದರೂ ಸಹ ಕಮ್ಯೂನಿಷ್ಟ್ ಕೇಂದ್ರ ಸಮಿತಿಯ ಸದಸ್ಯರು ಎಲೈಟ್ ಸಂಸ್ಕøತಿಯ ಜನರಂತೆ ಚಿಂತಿಸುತ್ತಿರುವುದು ವರ್ತಮಾನದ ದುರಂತ. ಉಳ್ಳವರ ಭಾರತದಲ್ಲಿ ನರಳುವವರ ಭಾರತವೂ ಕೂಡ ಇದೆ ಎಂಬುದನ್ನು ಇವರು ಮನಗಾಣಬೇಕಿದೆ.

ಒಂದು ಸಮಸ್ಯೆಯ ಪರಿಹಾರಕ್ಕೆ ಉಭಯ ಬಣಗಳ ನಡುವೆ ಸೌಹಾರ್ದಯುತ ಮಾತುಕತೆಗೆ ಸಿದ್ದಗೊಳ್ಳುವ ಉಧಾರ ಮನಸ್ಸುಗಳು ಬೇಕಾಗಿವೆಸಮಸ್ಯೆಗಳನ್ನು ಬಗೆಹರಿಸಲು ಉಭಯಬಣಗಳ ನಡುವೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ನಿವೃತ್ತ ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖಸ್ಥರು ಮತ್ತು ಸಮಾಜದ ವಿವಿಧ ವಲಯದ ಗಣ್ಯರು ನಮ್ಮ ನಡುವೆ ಇದ್ದಾರೆ. ಇಲ್ಲಿ ತುರ್ತಾಗಿ ಆಗಬೇಕಾಗಿರುವುದು ಎರಡೂ ಕಡೆಯಿಂದ ಶಾಂತಿ ಮತ್ತು ನೆಮ್ಮದಿಗಾಗಿ ತುಡಿಯುವ ಮುಕ್ತ ಮನಸ್ಸುಗಳು ಮಾತ್ರಹಿಂಸಾತ್ಮಕ ನಕ್ಸಲ್ ಹೋರಾಟದ ಜ್ವಲಂತ ಸಮಸ್ಯೆಯನ್ನು ಹೀಗೆ ಬೆಳೆಯಲು ಬಿಟ್ಟರೆ ಈಗಾಗಲೆ ಅರ್ಧ ಶತಮಾನ ಕಳೆದಿರುವ ರಕ್ತ ಇತಿಹಾಸ ಕಥನ ಎಂದೆಂದೂ ಮುಗಿಯದ ಯುದ್ಧವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಇಂತಹ ನೋವಿನ ಗಳಿಗೆಯಲ್ಲಿ ನಾವುಗಳು ಮೌನ ಸಾಕ್ಷಿಯಾಗಬೇಕಾಗುತ್ತದೆ. ಮಾನವೀಯತೆಗಾಗಿ ಹಂಬಲಿಸುವ  ಮನಸ್ಸುಗಳ ಪಾಲಿಗೆ ಹಿಂಸಾತ್ಮಕವಾದ ಮತ್ತು ನರಕ ಸದೃಶ್ಯವಾದ ಅಂತಹ ಜಗತ್ತು ಎಂದೂ  ಬಾರದಿರಲಿ. ನೆಲದ ಮೆಲೆ ಪ್ರತಿ ಜೀವಿಗೂ ನೆಮ್ಮದಿಯಿಂದ ಬದುಕುವ ಹಕ್ಕಿದೆ ಎಂಬುದನ್ನು ಸಾಭೀತು ಪಡಿಸುವ ದೃಷ್ಟಿಯಲ್ಲಾದರೂ ಯುದ್ಧ ಕೊನೆಗಾಣಬೇಕಾಗಿದೆ.

(ಕೇಂದ್ರ ಸರ್ಕಾರದ ಯೋಜನಾ ಆಯೋಗದ “ ಯೋಜನಾ” ಪತ್ರಿಕೆಯಲ್ಲಿ ಪ್ರಕಟವಾದ ಆಹ್ವಾನಿತ ಲೇಖನ)