Saturday, 31 January 2015

ಡಾ.ವೃಷಭೇಂದ್ರಸ್ವಾಮಿ- ಕಳಚಿದ ಕುವೆಂಪು ಶಿಷ್ಯ ಪರಂಪರೆಯ ಕೊಂಡಿ.ಮೊನ್ನೆ  ಬುಧವಾರ ಧಾರವಾಡದಲ್ಲಿ ಹಿರಿಯ ಜೀವ ಡಾ.ವೃಷಭೇಂದ್ರಸ್ವಾಮಿಯವರು ನಿಧನರಾದರೆಂಬ ಸುದ್ಧಿಯನ್ನು ಬೆಳಿಗ್ಗೆ 8-45 ಕ್ಕೆ  ಸರಿಯಾಗಿ ಕಿರಿಯ ಮಿತ್ರ ಬೇಂದ್ರೆ ಭವನದ ಪ್ರಕಾಶ್ ಬಾಳೆಕಾಯಿ ಸಂದೇಶದ ಮೂಲಕ ನನಗೆ ತಿಳಿಸಿದ ವೇಳೆಯಲ್ಲಿ  ನಾನು ತಮಿಳುನಾಡಿನ ಕನ್ಯಾಕುಮಾರಿಯಿಂದ  ಕೇರಳದ ತಿರುವನಂತಪುರಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಧಾರವಾಡ ನಗರದಲ್ಲಿ ನಾನು ಅಪಾರವಾಗಿ ಪ್ರೀತಿಸುತ್ತಿದ್ದ ಮತ್ತು ಗೌರವಿಸುತ್ತಿದ್ದ ವೃಷಭೇಂದ್ರ ಸ್ವಾಮಿಯವರ ಸಾವಿನ ಸುದ್ಧಿ ತಿಳಿದು ಮನಸ್ಸಿಗೆ ತೀವ್ರ ಬೇಸರವಾಯಿತು.  ಅವರ ಅಂತಿಮ ದರ್ಶನ ಪಡೆಯುವ ಭಾಗ್ಯವೂ ನನಗಿರಲಿಲ್ಲ. ಕಳೆದ ಹದಿನೈದು ದಿನಗಳ ಹಿಂದೆ ಧಾರವಾಡದಲ್ಲಿ ನಿರಂತರವಾಗಿ ಐದು ದಿನಗಳ ಕಾಲ ನಡೆದ ಧಾರವಾಡ ಸಾಹಿತ್ಯ ಸಂಭ್ರಮ ಮತ್ತು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಈ ಎರಡು ಕಾರ್ಯಕ್ರಮಗಳಿಗೆ  ನಾನು ಹಾಜರಾಗಿದ್ದರೆ, ಅವರ ಜೊತೆ  ಮಾತನಾಡುವ ಮತ್ತು ಕಾಲ ಕಳೆಯುವ ಅವಕಾಶ ಸಿಗುತ್ತಿತ್ತು. ಅದನ್ನು ಕಳೆದುಕೊಂಡೆ ಎಂಬ ನೋವು ಮನದ ಮೂಲೆಯಲ್ಲಿ  ಶಾಶ್ವತವಾಗಿ ಉಳಿದು ಹೋಯಿತು. ಈ ವರ್ಷ ಪ್ರಜ್ಞಾಪೂರ್ವಕವಾಗಿ ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಕ್ಕೆ ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಹಾಗಾಗಿ  ಸಂಭ್ರಮ ಮತ್ತು ಸಮ್ಮೇಳನ ಗಳಿಂದ ದೂರ ಉಳಿದು ಅಂತರ ಕಾಯ್ದುಕೊಂಡೆ
ಇತ್ತೀಚೆಗಿನ ದಿನಗಳಲ್ಲಿ ವಿಶೇಷವಾಗಿ  ಹಿರಿಯ ಸಾಹಿತಿಗಳಿಗೆ ವೃದ್ಧಾಪ್ಯದ ದಿನಗಳಲ್ಲಿ ತಮಗೆ ಅರಿವಿಲ್ಲದಂತೆ ಆವರಿಸಿಕೊಳ್ಳುವ ಹಿರಿಯತನದ ಪ್ರಜ್ಞೆ ಮತ್ತು ಶ್ರೇಷ್ಠತೆಯ ವ್ಯಸನ ಇವುಗಳಿಂದ ಮುಕ್ತರಾಗಿ ಇರಲು ಸಾಧ್ಯವಾಗುತ್ತಿಲ್ಲ. ಆದರೆ ಇಂತಹ ಯಾವುದೇ ಬಿಗುಮಾನಗಳಿಲ್ಲದೆ; ಹಿರಿಯರು, ಕಿರಿಯರು ಎಂಬ ಬೇಧ ಭಾವವಿಲ್ಲದೆ ಬೆರೆಯುತ್ತಿದ್ದ ಡಾ. ವೃಷಭೇಂದ್ರಸ್ವಾಮಿಯವರ ಗಂಟಲಿನ ಧ್ವನಿ ಎಷ್ಟು ದೊಡ್ಡದಿತ್ತೋ, ಅವರ ಹೃದಯ ವೈಶಾಲ್ಯತೆ ಕೂಡ ಅಷ್ಟೇ ದೊಡ್ಡದಿತ್ತು. ಧಾರವಾಡದಲ್ಲಿ ಯಾವುದೇ ಸಂಗೀತ ಅಥವಾ ಸಾಹಿತ್ಯದ ಕಾರ್ಯಕ್ರಮವಿರಲಿ ಅಲ್ಲಿಗೆ ಅವರು ತಮ್ಮ ಪುಟ್ಟ ಟೇಪ್ ರೆಕಾರ್ಡರ್ ನೊಂದಿಗೆ ಹಾಜರಾಗುತ್ತಿದ್ದರು. ತಾವು ಕೇಳುವ ಸಂಗೀತವಾಗಲಿ, ಇಲ್ಲವೆ ಸಾಹಿತ್ಯ ಕುರಿತ ಉಪನ್ಯಾಸವಾಗಲಿ ಅವುಗಳಿಗೆ   ಆ ಕ್ಷಣದಲ್ಲಿ  ಅವರು ನೀಡುತ್ತಿದ್ದ ಪ್ರತಿಕ್ರಿಯೆ ಇವುಗಳನ್ನು ಗಮನಿಸುವಾಗ, ನನಗೆ ಒಂದು ಹಿರಿಯ  ಜೀವ ಹೀಗೂ ಅರ್ಥಪೂರ್ಣವಾಗಿ ಬದುಕಲು ಸಾಧ್ಯವಾ? ಎಂದು ಆಶ್ಚರ್ಯವಾಗುತ್ತಿತ್ತು. ಏಕೆಂದರೆ,  ಧಾರವಾಡದ ಮಣ್ಣಿನ ಸಂಸ್ಕೃತಿಯೇ  ಅಂತಹದ್ದು. ಇಲ್ಲಿನ ಬಹುತೇಕ ಹಿರಿಯ ಜೀವಗಳಾದ ಚನ್ನವೀರ ಕಣವಿ, ಜಿ.ಎಸ್.ಅಮೂರ್, ಎಂ.ಎಂ. ಕಲ್ಬುರ್ಗಿ, ಸಿದ್ದಲಿಂಗಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜು ಚಂಪಾ ಹೀಗೆ ಅನೇಕರು ಪ್ರತಿಯೊಂದು ಕಾರ್ಯಕ್ರಮದಲ್ಲಿ ಹಾಜರಾಗಿ, ಧಾರವಾಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸದಾ ಜೀವಂತವಾಗಿಟ್ಟಿದ್ದಾರೆಬೇಂದ್ರೆಯವರ ಸ್ಮೃತಿಮಯವಾಗಿರುವ ಧಾರವಾಡದಲ್ಲಿ ಕುವೆಂಪುರವರನ್ನು ಸಹ ಸದಾ  ಜೀವಂತವಾಗಿಟ್ಟವರು ವೃಷಭೇಂದ್ರಸ್ವಾಮಿ. ಏಕೆಂದರೆ, ಕುವೆಂಪು ರವರ ಪರಮ ಪ್ರೀತಿಯ ಶಿಷ್ಯರಲ್ಲಿ ಅವರು ಒಬ್ಬರಾಗಿದ್ದರು. (ಇನ್ನಿಬ್ಬರೆಂದರೆ ಡಾ.ಜಿ.ಎಸ್.ಶಿವರುದ್ರಪ್ಪ ಮತ್ತು ಡಾ. ಪ್ರಭುಶಂಕರ್.) ಕುವೆಂಪು ಶಿಷ್ಯರಲ್ಲಿ ನಾವು ಎರಡು ಬಗೆಯ ಶಿಷ್ಯರನ್ನು ಕಾಣಬಹುದು. ಕುವೆಂಪುರವರನ್ನು ತಲೆಯ ಮೇಲಿಟ್ಟುಕೊಂಡು ಪೂಜಿಸುತ್ತಾ, ಅವರ ವಿಚಾರಧಾರೆಗೆ ತಿಲಾಂಜಲಿಯೊಂದಿಗೆ ತರ್ಪಣ ಬಿಟ್ಟು, ಜಾತಿಯತೆ ಮತ್ತು  ಭ್ರಷ್ಟಾಚಾರವನ್ನು ಪೋಷಿಸುತ್ತಾ, ಕುವೆಂಪುರವರ ವಿಶ್ವ ಮಾನವ ಪರಿಕಲ್ಪನೆಗೆ ಮಸಿ ಬಳಿದವರು. ಇಂತಹವರಲ್ಲಿ ಮೈಸೂರಿನಲ್ಲಿ ಇನ್ನೂ ಅನೇಕ ಮಂದಿ ಜೀವಂತವಾಗಿದ್ದಾರೆ. ಮತ್ತೊಂದು ಗುಂಪೆಂದರೆ, ಅರ್ಧಶತಮಾನ ಕಳೆದರೂ  ಸಹ ತಮ್ಮ ಗುರುವಿನ ಸ್ಮರಣೆಯಿಂದ ಹೊರಬರದೆ, ಸದಾ ಕುವೆಂಪುರವರನ್ನು ತಮ್ಮ ಎದೆಯಲ್ಲಿಟ್ಟುಕೊಂಡು ಆರಾಧಿಸುತ್ತಾ, ಅವರ ವಿಚಾರಧಾರೆಗಳಿಗೆ ಕಿಂಚಿತ್ತೂ ಮುಕ್ಕಾದಂತೆ ಬದುಕಿ ಬಾಳಿದವರು. ಇವರಲ್ಲಿ ಶಿವರುದ್ರಪ್ಪ, ಪ್ರಭಶಂಕರ್ ಮತ್ತು ವೃಷಭೇಂದ್ರಸ್ವಾಮಿ ಪ್ರಮುಖರು.
ಈ ಮಹನೀಯರನ್ನ, ಇವರುಗಳ ನಡೆ, ನುಡಿಯನ್ನು ಗಮನಿಸುವಾಗ ಒಬ್ಬ ವಿದ್ಯಾರ್ಥಿಗೆ ಒಳ್ಳೆಯ ಗುರು ದಕ್ಕುವುದು ಎಷ್ಟರ ಮಟ್ಟಿಗೆ ಪುಣ್ಯವೋ, ಒಬ್ಬ ಗುರುವಿಗೆ ಒಳ್ಳೆಯ ಶಿಷ್ಯರು ಸಿಗುವುದಕ್ಕೆ ಅದೃಷ್ಟವಿರಬೇಕು. ಈ ವಿಷಯದಲ್ಲಿ ಕುವೆಂಪುರವರು ನಿಜಕ್ಕೂ ಅದೃಷ್ಟವಂತರು. ಆ ಕಾಲದ ಗುರು ಶಿಷ್ಯ ಪರಂಪರೆಯು  ಘನತೆ ಮತ್ತು ನೈತಿಕತೆಯಿಂದ ಕೂಡಿತ್ತು. ನಿಜವಾದ ಪ್ರತಿಭೆ ಕುರಿತು ಮತ್ಸರಗಳಿರಲಿಲ್ಲ. ಹಿರಿಯ-ಕಿರಿಯ ಎಂಬ ಬೇಧಗಳಿರಲಿಲ್ಲ. ಕುವೆಂಪುರವರ  ಗುರುಗಳಾದ ಆಚಾರ್ಯ ಬಿ.ಎಂ. ಶ್ರೀ ಯವರು 1920 ದಶಕದಲ್ಲಿ ಅಂದರೆ ನನಗೆ ನೆನಪಿರುವಂತೆ 1926 ರಲ್ಲಿ  ಹೊರತಂದ ನವೋದಯ ಕಾವ್ಯಕ್ಕೆ ಸ್ಪೂರ್ತಿಯಾದ “ ಇಂಗ್ಲೀಷ್ ಗೀತೆಗಳು” ಕೃತಿಗೆ ತಮ್ಮ ಶಿಷ್ಯ ಕುವೆಂಪು ರವರ ಕೈಲಿ ಮುನ್ನುಡಿ ಬರೆಸಿರುವ ಪ್ರಸಂಗವನ್ನು ನಾವು ಇಂದಿನ ಗುರು ಶಿಷ್ಯ ಪರಂಪರೆಯಲ್ಲಿ ಊಹಿಸಲು ಸಾಧ್ಯವೆ?
ಮೂಲತಃ ಬಳ್ಳಾರಿ ಜಿಲ್ಲೆಯಿಂದ ಬಂದ ವೃಷಭೇಂದ್ರ ಸ್ವಾಮಿಯವರು ಆ ಕಾಲದಲ್ಲಿ ದೂರದ ಮೈಸೂರಿಗೆ ಕನ್ನಡ ಎಂ.ಎ. ಕಲಿಯಲು ಹೋದ ಸಂಗತಿ ಕುವೆಂಪು ಪಾಲಿಗೆ ಅಭಿಮಾನದ ವಿಷಯವಾಗಿತ್ತು. ಹಾಗಾಗಿ ವೃಷಭೇಂದ್ರಸ್ವಾಮಿಯವರ ಬಗ್ಗೆ  ಕುವೆಂಪುರವರು ವಿಶೇಷ ಆಸಕ್ತಿ ತಾಳಿದ್ದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಂಜೆಯ ವೇಳೆ ಕುವೆಂಪುರವರು ವಾಕ್ ಮಾಡುತ್ತಿದ್ದ ವೇಳೆ ವೃಷಭೇಂದ್ರಸ್ವಾಮಿಯವರ ಹೆಗಲ ಮೇಲೆ ಕೈ ಇಟ್ಟು ನಡೆಯುತ್ತಿದ್ದ ಪ್ರಸಂಗವನ್ನು, ಸ್ವತಃ ವೃಷಭೇಂದ್ರಸ್ವಾಮಿಯವರು ಭಾವಪೂರ್ಣವಾಗಿ ವರ್ಣಿಸುತ್ತಿದ್ದರು. ಅವರಿಗೆ ತಮ್ಮ ಗುರುವಿನ ಕುರಿತು ಮಾತನಾಡುವೆಂದರೆ ಇನ್ನಿಲ್ಲದ ಉತ್ಸಾಹ. ತಮ್ಮ ಗುರುವಿನ ಕುರಿತು ಅವರು ಬರೆದಿರುವ “ ತರಗತಿಗಳಲ್ಲಿ ಕುವೆಂಪು” ಎಂಬ ಕೃತಿ ತುಂಬಾ ಆಸಕ್ತಿದಾಯಕವಾಗಿದೆ.


ಕನ್ನಡ ಸಾಹಿತ್ಯ ಲೋಕ ಕಂಡ ಕೆಲವೇ ಕೆಲವು ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾದ ಡಾ.ವೃಷಭೇಂದ್ರಸ್ವಾಮಿಯವರ ಬಾಯಲ್ಲಿ, ಪಂಪ ಮಹಾಭಾರತ, ಜನ್ನನ ಯಶೋಧರ ಚರಿತೆ, ರತ್ನಾಕರ ವರ್ಣಿಯ “ ಭರತೇಶ ವೈಭವ, ಇಂತಹ ಹಳೆಗನ್ನಡ ಮಹಾ ಕಾವ್ಯಗಳನ್ನು ಕೇಳುವುದರಿಂದ ಆಗುತ್ತಿದ್ದ ಸಂತೋಷ ಅವರ್ಣೀಯವಾದುದು.  1984 ರಲ್ಲಿ ಮಂಗಳೂರು ನಗರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ನಡೆದ  ಕನ್ನಡ ಕಾವ್ಯ ಕಮ್ಮಟದಲ್ಲಿ  ವೃಷಭೇಂದ್ರ ಸ್ವಾಮಿಯವರು  ಮಾಡಿದ ಪಂಪನ “ ನೀಲಾಂಜನೆಯ ನೃತ್ಯ” ಎಂಬ ಕಾವ್ಯದ ಒಂದು ಪಾಠ ಇನ್ನೂ ನನ್ನ ಸ್ಮೃತಿಯಲ್ಲಿ ಹಸಿರಾಗಿದೆ. ಅದೇ ರೀತಿ ಕಲ್ಬುರ್ಗಿಯವರ ರನ್ನನ ಗಧಾ ಯುದ್ಧ, ರಾಘವಾಂಕನ ಹರಿಶ್ಚಂದ್ರಕಾವ್ಯ, ಹರಿಹರನ ರಗಳೆ ಇವುಗಳನ್ನು ಕೇಳುವುದು ಕೂಡ  ಆನಂದದಾಯಕ ಸಂಗತಿ.
ಸದಾ ಮಾತು ಮತ್ತು ಎದೆ ತುಂಬಾ ಉತ್ಕಟ ಪ್ರೀತಿಯನ್ನು ತುಂಬಿಕೊಂಡಿದ್ದ ವೃಷಭೇಂದ್ರಸ್ವಾಮಿಯವರದು, ಮರಗಳು ಮತ್ತು ಕಲ್ಲುಗಳನ್ನೂ ಸಹ ಮಾತಿಗೆಳೆಯುವ ಪ್ರವೃತ್ತಿ. ಸಂಜೆಯ ವೇಳೆ ಎಡಗೈಲಿ ಪುಟ್ಟ ರೇಡಿಯೋ ಹಿಡಿದುಕೊಂಡು ವಾಕ್ ಮಾಡುತ್ತಾ, ರಸ್ತೆಯಲ್ಲಿ ಎದುರಾಗುವ ಪುಟ್ಟ ಮಕ್ಕಳನ್ನು ಮಾತನಾಡಿಸುತ್ತಾ, ಬಲಗೈಯನ್ನು ಪ್ಯಾಂಟಿನ ಜೋಬಿನೊಳಗೆ ತೂರಿಸಿ ಚಾಕಲೇಟ್ ನೀಡುತ್ತಾ ಹೋಗುವುದು ಅವರ ದಿನ ನಿತ್ಯದ ಕಾಯಕವಾಗಿತ್ತು. ಹಾಗಾಗಿ ಅವರು ಧಾರವಾಡದ ಕಲ್ಯಾಣಗರ ಬಡಾವಣೆಯ ಮಕ್ಖಳ ಪಾಲಿಗೆ ಚಾಕಲೇಟ್ ತಾತ, ರೇಡಿಯೋ ಅಜ್ಜ ಎಲ್ಲಾ ಆಗಿದ್ದರು.

ಒಂದು ಕಾಲದಲ್ಲಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಡಾ.ವೃಷಭೇಂದ್ರಸ್ವಾಮಿಯವರ ಶಿಷ್ಯರಾಗಿದ್ದು, ನಂತರ  ಸಹೋದ್ಯೋಗಿಯಾಗಿದ್ದ ಡಾ. ಗುರುಲಿಂಗ ಕಾಪಸೆಯವರು “ ತಮ್ಮ ಗುರುಗಳನ್ನು ಯಾವಾಗಲೂ ಪ್ರೀತಿಯಿಂದ ನೆನೆಯುತ್ತಿದ್ದರು. ಆರ್.ಸಿ. ಹಿರೇಮಠ, ಕಲ್ಬುರ್ಗಿ ಮುಂತಾದ ಗುರುಗಳು ವಿದ್ಯಾರ್ಥಿಗಳಿಂದ ಒಂದು ಅಂತರ ಕಾಯ್ದುಕೊಂಡು, ಗಂಭೀರ ಪ್ರೊಫೆಸರ್ ಗಳಾಗಿದ್ದರೆ, ಇವರಿಗಿಂತ ಭಿನ್ನವಾಗಿ ಸದಾ ಹಾಸ್ಯ ಚಟಾಕಿ ಹಾರಿಸುತ್ತಾ ವೃಷಭೇಂದ್ರಸ್ವಾಮಿಯವರು  ವಿದ್ಯಾರ್ಥಿಗಳ ಜೊತೆ ಇರುತ್ತಿದ್ದರು. ಎಂಬ ಮಾತು ನಿಜಾ ಕೂಡ ಹೌದು. ತಮ್ಮ ಇಳಿ ವಯಸ್ಸಿನಲ್ಲಿಯೂ ಸಹ ಅವರು ಭಾಗವಹಿಸುತ್ತಿದ್ದ ಸಭೆ ಸಮಾರಂಭಗಳು ಅವರ ಹಾಸ್ಯ ಪ್ರವತ್ತಿಯಿಂದ ಕಳೆಗಟ್ಟುತ್ತಿದ್ದವು. ಈಗ ಅಂತಹ ಕ್ರೀಯಾಶೀಲ  ಹಾಗೂ ಉತ್ಸಾಹ ಭರಿತ, ಧೀಮಂತ ಹಿರಿಯ ಜೀವವನ್ನು ಧಾರವಾಡದ ಸಾಂಸ್ಕೃತಿಕ ಜಗತ್ತು ಕಳೆದುಕೊಂಡಿದೆ.

No comments:

Post a Comment