Saturday, 31 January 2015

ವ್ಯಂಗ್ಯಲೋಕದ ಚಕ್ರವರ್ತಿ- ಆರ್.ಕೆ.ಲಕ್ಷ್ಮಣ್


ಆರ್.ಕೆ. ಲಕ್ಷ್ಮಣ್ ಎಂಬ ಹೆಸರು ಭಾರತೀಯ ಪತ್ರಿಕೋದ್ಯಮz ಇತಿಹಾಸದÀಲ್ಲಿ ಒಂದು ಚಿರಸ್ಥಾಯಿಯಾದ ಹೆಸರು. ಒಂದು ಪತ್ರಿಕೆ ಅಥವಾ ಒಂದು ಸಂಪಾದಕೀಯ ಲೇಖನ ಹೇಳಬಹುದಾದ ವಿಷಯಗಳನ್ನು ನಾಲ್ಕು ಅಂಕು ಡೊಂಕುಗೆರೆಗಳ ಮೂಲಕ ಹೇಳುತ್ತಾ, ನಿರಂತರ ಅರವತ್ತು ವರ್ಷಗಳ ಕಾಲ ಭಾರತೀಯ ಶ್ರೀ ಸಾಮಾನ್ಯನ ಮುಖದ ಮೇಲೆ ಮಾಸದ ಮುಗುಳು ನಗೆಯೊಂದನ್ನು ಸೃಷ್ಟಿಸಿದ ವ್ಯಂಗ್ಯಚಿತ್ರಗಳ ಬ್ರಹ್ಮ ಆರ್.ಕೆ. ಲಕ್ಷ್ಮಣ್ ಎಂಬ  ಮಾತು ಅತಿಶಯೋಕ್ತಿಯಾಗಲಾರದು.
ಮೈಸೂರು ಮೂಲದ ತಮಿಳು ಅಯ್ಯಂಗಾರ್ ಕುಟುಂಬದ ಶಿಕ್ಷಕರ ಮಗನಾಗಿ ಜನಿಸಿದ .ರ್.ಕೆ. ಲಕ್ಷಣ್ (1921) ಆರು ಜನ ಗಂಡು ಮಕ್ಕಳಲ್ಲಿ ಕಿರಿಯವರು. ಲಕ್ಷ್ಮಣ್ ಹಾಗೂ ಅವರ ಹಿರಿಯ ಸಹೋದರ ಆರ್.ಕೆ. ನಾರಾಯಣ್ ಇಬ್ಬರೂ ಜಗತ್ ಪ್ರಸಿದ್ಧಿ ಪಡೆದ ಪ್ರತಿಭಾವಂತರು. ಅಣ್ಣ ಆರ್.ಕೆ. ನಾರಾಯಣ್ ಅಕ್ಷರಗಳ ಮೂಲಕ ಇಂಗ್ಲೀಷ್ ಕಾದಂಬರಿಕಾರರಾಗಿ ( ಮಾಲ್ಗುಡಿ ಡೇಸ್, ಗೈಡ್, ಬ್ಯಾಚುಲರ್ ಆಫ್ಆಟ್ರ್ಸ್ ಮತ್ತು ಮಿ.ಸಂಪತ್) ಹೆಸರುವಾಸಿಯಾದರೆ, ತಮ್ಮ ಲಕ್ಷ್ಮಣ್ರವರು ತಮ್ಮ ಅಂಕು ಡೊಂಕಾದ ಸರಳ ರೇಖೆಗಳ ಮೂಲಕ ಭಾರತದ ಸಾಮಾಜಿಕ ಹಾಗೂ ರಾಜಕೀಯ ಬದುಕಿನ ಕಟು ವಾಸ್ತವವನ್ನು ಪ್ರತಿಬಿಂಬಿಸುತ್ತಾ ಭಾರತದ ಜನಮಾನಸದಲ್ಲಿ ಅಜರಾಮರಾಗಿ ಉಳಿದು ಹೋದರು.
ಇವರು ಸೃಷ್ಟಿಸಿದಶ್ರೀ ಸಾಮಾನ್ಯದೇಶದುದ್ದಗಲಕ್ಕೂ ಚಿರಪರಿಚಿತ ವ್ಯಕ್ತಿ. ಬತ್ತಿದ ಕಣ್ಣುಗಳು, ಸೋಡಾ ಗ್ಲಾಸಿನ ಕನ್ನಡಕ, ಚಿಂದಿ ಚಿಂದಿಯಾದ ಮತ್ತು ತೇಪೆ ಹಾಕಿದ ಕೋಟು, ಕಚ್ಚೆ ಮತ್ತು ಕೈಯಲ್ಲಿ ಒಂದು ಮುರುಕಲು ಕೊಡೆ ಇವುಗಳು ಲಕ್ಷ್ಮಣ್ ಸೃಷ್ಟಿದ ಶ್ರೀ ಸಾಮಾನ್ಯನ ಚಹರೆಗಳು. 1960 ಮತ್ತು 70 ದಶಕದಲ್ಲಿ ಭಾರತದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಿಂದ ಹೃರಾಣದ ಹಾಗೂ ಘಾಸಿಗೊಂಡ ಎಲ್ಲಾ ಬಡವರ ಮತ್ತು ಮಧ್ಯಮ ವರ್ಗದ ಪ್ರತಿನಿಂಧಿಯಂತೆ ಇದ್ದ ಶ್ರೀ ಸಾಮಾನ್ಯನ ಕಣ್ಣಲ್ಲಿ ಭಾರತವನ್ನು ಅವಲೋಕಿಸಿದ  ಆರ್.ಕೆ. ಲಕ್ಷ್ಮಣ್ ರವರು ರಾಜಕೀಯ ಲೋಕದ ದ್ವಂದ್ವಗಳನ್ನು ಪರಿಣಾಮಕಾರಿಯಾಗಿ ತಮ್ಮ ವ್ಯಂಗ್ಯ ಚಿತ್ರಗಳಲ್ಲಿ ಅನಾವರಣಗೊಳಿಸಿದರು.
ವಿದ್ಯಾರ್ಥಿ ಜೀವನದಲ್ಲಿದ್ದಾಗಲೆ  ಚಿತ್ರ ಬರೆಯುವ ಪ್ರವೃತ್ತಿಯನ್ನು ರೂಡಿಸಿಕೊಂಡಿದ್ದ ಲಕ್ಷ್ಮಣ್ ರವರು   ರಾ.ಶಿ.ಯವರ (ಡಾ.ಎಂ.ಶಿವರಾಂ) ಕೊರವಂಜಿ ಎಂಬ ಕನ್ನಡದ ಹಾಸ್ಯ ಪತ್ರಿಕೆಗೆ  ಚಿತ್ರ ಬರೆಯುತ್ತಿದ್ದರು. ತಮ್ಮ ಅಣ್ಣ ನಾರಾಯಣ್ ರವರು ಹಿಂದೂ ದಿನಪತ್ರಿಕೆ ಬರೆಯುತ್ತಿದ್ದ ಲೇಖನ ಮತ್ತು ಕೃತಿಗಳಿಗೆ ಚಿತ್ರವನ್ನೂ ಸಹ ರಚಿಸುತ್ತಿದ್ದರು. ಆನಂತರ ದೆಹಲಿಗೆ ವಿದ್ಯಾಭ್ಯಾಸಕ್ಕೆ ತೆರಳಿದ ಸಂದರ್ಭದಲ್ಲಿ  ಚಿತ್ರಕಲೆಯನ್ನು ಗಂಭೀರವಾಗಿ ಪರಿಗಣಿಸಿದ ಅವರು, ಅದನ್ನು ಒಂದು ವೃತ್ತಿಯನ್ನಾಗಿ ಸ್ವೀಕರಿಸಿದರು. ದೆಹಲಿಯಿಂದ ಮುಂಬೈ ನಗರಕ್ಕೆ ಬಂದು ನೆಲೆಸಿದ ಇವರು ಆರಂಭದ ದಿನಗಳಲ್ಲಿ ಪ್ರೀ ಪ್ರೆಸ್ ಜರ್ನಲ್ ಮತ್ತು ಕಾರಂಜೀಯ ಸಂಪಾದಕತ್ವದ ಬ್ಲಿಟ್ಜ್ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಶಿವಸೇನೆಯ ಸಂಸ್ಥಾಪಕ ಬಾಳ್ ಥಾಕರೆ ಲಕ್ಷಣ್ ರವರ ಸಹೋದ್ಯೋಗಿ  ಕೆಲಸ ಮಾಡಿದ್ದರು. ನಂತರ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆ ಸೇರಿದ ಆರ್.ಕೆ.ಲಕ್ಷ್ಮಣ್, ತಮ್ಮ ವಿಶಿಷ್ಟ ವ್ಯಂಗ್ಯ ಚಿತ್ರಗಳ ಮೂಲಕ ಪತ್ರಿಕೆಗೆ ವಿಶೇಷ ಸ್ಥಾನ ಮಾನ ಕಲ್ಪಿಸಿಕೊಟ್ಟರು. ಭಾರತೀಯ ಪತ್ರಿಕೋದ್ಯಮದ ಇತಿಹಾಸದಲ್ಲಿ ಒಬ್ಬ ಸಂಪಾದಕನಿಗೆ ಇರಬಹುದಾದ ಸ್ಥಾನಮಾನ, ಗೌರವ ಮತ್ತು ವೇತನವನ್ನು ಪಡೆದ ಮೊಟ್ಟ ಮೊದಲ ಕಲಾವಿದ ಎಂಬ ಕೀರ್ತಿ  ಆರ್.ಕೆ. ಲಕ್ಷ್ಣಣ್ರವರದು. ಜೊತೆಗೆ ಏಷ್ಯಾದ ನೋಬೆಲ್ ಎಂದು ಪರಿಗಣಿಸಲ್ಪಟ್ಟಿರುವ ಮ್ಯಾಗ್ಸಸೆ ಪ್ರಶಸ್ತಿಯನ್ನೂ ಒಳಗೊಂಡಂತೆ ಭಾರತದ ಎರಡನೆಯ ಅತಿ ದೊಡ್ಡ ಪ್ರಶಸ್ತಿ ಪದ್ಮವಿಭೂಷಣಕ್ಕೂ ಅವರು ಭಾಜನರಾಗಿದ್ದರು.
ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆಯ ಅವಿಭಾಜ್ಯ ಅಂಗವೆಂಬಂತೆ ಇದ್ದ ಅವರನ್ನು ಪತ್ರಿಕೆಯ ಆಡಳಿತ ಮಂಡಳಿಯು ಒಬ್ಬ ಸಂಪಾದಕನಂತೆ ನಡೆಸಿಕೊಂಡಿತು. ತಮ್ಮ ಸುಧಿರ್ಘ ಐದು ದಶಕಗಳ ಸೇವೆಯ ನಂತರವೂಅವರಿಂದ ಪತ್ರಿಕೆಗೆ ಚಿತ್ರಗಳನ್ನು ಬರೆಸುವುದರ ಮೂಲಕ  ಅವರ ಬದುಕಿನುದ್ದಕ್ಕೂ ಪತ್ರಿಕೆಯ ಬಾಂಧ್ಯವ್ಯವನ್ನು ಜೀವಂತವಾಗಿಟ್ಟುಕೊಂಡಿತ್ತು. ಮುಂಬೈ ನಗರದಲ್ಲಿ ಅತಿ ಹೆಚ್ಚು ಪ್ರಸಾರ ಹೊಂದಿದ್ದ ಟೈಮ್ಸ್ ಆಫ್ ಇಂಡಿಯಾ ಮತ್ತು ಅದರ ಸಮೂಹದ  ಪತ್ರಿಕೆಗಳಾದ ಮಹಾರಾಷ್ಟ್ರ ಟೈಮ್ಸ್, ಗುಜರಾತ್ ಟೈಮ್ಸ್ ದಿನಪತ್ರಿಕೆಗಳಿಗೆ ಆರ್. ಕೆ. ಲಕ್ಮಣ್ ರವರ ವ್ಯಂಗ್ಯ ಚಿತ್ರಗಳು ಜೀವನಾಡಿಯಾಗಿದ್ದವು.

ಅವಸರ ಮತ್ತು ಧಾವಂತದ ದುಸ್ತರ ಬದುಕಿಗೆ ಹೆಸರಾದ ಮುಂಬೈನಗರದ ಜನತೆಯ ಬದುಕಿನ ಬಹುತೇಕ ಭಾಗವು ಲೋಕಲ್ ಟ್ರೈನ್ ಮತ್ತು ನಗರ ಸಾರಿಗೆ ಬಸ್ಸುಗಳ ಪ್ರಯಾಣದಲ್ಲಿ ಕಳೆದು ಹೋಗುತ್ತದೆ. ಆದರೆ ನಗರದ ಯಾಂತ್ರಿಕ ಬದುಕು ಮತ್ತು  ಕೆಲಸದ ಒತ್ತಡಗಳ ನಡುವೆ ಅವರ ಮುಖದಲ್ಲಿ ನಗು ಅರಳುವುದು ದಿನಕ್ಕೆ ಒಮ್ಮೆ ಮಾತ್ರ. ಪ್ರತಿದಿನ ಮುಂಜಾನ್ ಮನೆಬಾಗಿಲಿಗೆ ಬಂದು ಬೀಳುತ್ತಿದ್ದ ಹಾಲಿನ ಪಾಕೇಟ್ ಜೊತೆಗಿನ ದಿನಪತ್ರಿಕೆಗಳಲ್ಲಿ ಇರುತ್ತಿದ್ದ ಲಕ್ಷ್ಮಣ್ ರವರ ವ್ಯಂಗ್ಯ ಚಿತ್ರ ಅವರಲ್ಲಿ ಮುಗುಳು ನಗೆಯೊಂದನ್ನು ಉಕ್ಕಿಸುತ್ತಿತ್ತು. ಹಾಗಾಗಿ ಅವರು ಸೃಷ್ಟಿಸಿದ ಶ್ರೀ ಸಾಮಾನ್ಯ ಮಹಾರಾಷ್ಟ್ರದ ಜನತೆಯ ಪಾಲಿಗೆ ಹೀರೋ ಆಗಿ ಪರಿಣಮಿಸಿದ್ದ. ಅವನ ಕುರಿತು ಟಿ.ವಿ.ಛಾನಲ್ ಗಳಲ್ಲಿ ಧಾರವಾಹಿ ಪ್ರಸಾರವಾಗುವುದರಿಂದ ಹಿಡಿದು ಮುಂಬೈ ನಗರದ ಹಲವೆಡೆ ಶ್ರೀ ಸಾಮಾನ್ಯನ ಪ್ರತಿಮೆಗಳು ಎದ್ದು ನಿಂತಿವೆ. ಸ್ವತಃ ತಾನೇ ಸೃಷ್ಟಿಸಿದ ಶ್ರೀ ಸಾಮಾನ್ಯನ ಜೊತೆ ಲಕ್ಷ್ಮಣ್ ಗುರುತಿಸಿಕೊಳ್ಳುವಂತೆ ಚಿತ್ರ ಹೆಸರು ಮಾಡಿತು. ಒಬ್ಬ ವ್ಯಂಗ್ಯ ಚಿತ್ರಕಾರನಿಗೆ ಇದಕ್ಕಿಂತ ಹೆಚ್ಚಿನ ಗೌರವ, ಮನ್ನಣೆ ಇನ್ನೇನು ಬೇಕು?ಸುಮಾರು ಐದೂವರೆ ಅಡಿ ಎತ್ತರ, ಉಬ್ಬಿದ ಹಣೆ, ಸದಾ ಕೊರಳಿಗೆ ತೂಗುಬಿಟ್ಟಿರುವ ದಪ್ಪ ಗಾಜಿನ ಕನ್ನಡಕ ಹಾಗೂ ಮೇಲುನೋಟಕ್ಕೆ ತೀರಾ ಗಂಭೀರ ಸ್ವಭಾವದ ವ್ಯಕ್ತಿಯಂತೆ ಕಾಣುತ್ತಿದ್ದ ಲಕ್ಷ್ಮಣ್ ಅರವರ ಹೃದಯದಲ್ಲಿ ಹಾಸ್ಯ ಪ್ರವತ್ತಿ ಸಹ ಮನೆ ಮಾಡಿತ್ತು. ಅವರ ಹಾಸ್ಯ ಎಂದಿಗೂ ಕೀಳು ಮನೋಭಾವದಿಂದ ಕೂಡಿರಲಿಲ್ಲ. ಅವರು ಸೃಷ್ಟಿಸುತ್ತಿದ್ದ ವ್ಯಂಗ್ಯಚಿತ್ರಗಳಲ್ಲಿ ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶಗಳಾಗಲಿ ಅಥವಾ  ಒಂದು ಸಮುದಾಯವನ್ನು ಕೀಳಾಗಿ ಕಾಣುವ ಮನೋಭಾವ ಇರುತ್ತಿರಲಿಲ್ಲ. ಅವರ ವ್ಯಂಗ್ಯ ಚಿತ್ರಗಳ ಮೂಲಕ ಹಾಸ್ಯಕ್ಕೆ ಗುರಿಯಾದ ನೆಹರೂ, ಇಂದಿರಾಗಾಂಧಿಯವರಿಂದ ಹಿಡಿದು ದೇಶದ ಬಹುತೇಕ ನಾಯಕರು ಅವರ ಚಿತ್ರಗಳಿಗೆ ಮನಸಾರೆ ನಕ್ಕು ಮೆಚ್ಚಿಗೆ ಸೂಚಿಸುತ್ತಿದ್ದರು. ಲಕ್ಷ್ಮಣ್ ಚಿತ್ರಕ್ಕೆ ವಸ್ತುವಾಗುವುದು ತಮ್ಮ ಭಾಗ್ಯ ಎಂದು ಭಾವಿಸುತ್ತಿದ್ದರು. ವ್ಯಂಗ್ಯ ಚಿತ್ರಗಳ ಮೂಲಕ ಮತ್ತೊಬ್ಬರ ಮನಸ್ಸನ್ನು ಘಾಸಿಗೊಳಿಸಬಾರದು ಎಂಬುದು ಲಕ್ಷ್ಮಣ್ರವರ ಧೃಡ ನಂಬಿಕೆಯಾಗಿತ್ತು.
ಮುಂಬೈ ನಗರದ ಪುರಾತನ ಐತಿಹಾಸಿಕ ಕಟ್ಟಡವಾದ ವಿಕ್ಟೋರಿಯಾ ಟರ್ಮಿನಲ್ ಎಂಬ ರೈಲ್ವೆ ನಿಲ್ದಾಣದ ಎದುರಿಗೆ ಅದರಷ್ಟೇ  ಅತ್ಯಂತ ಹಳೆಯದಾದ ಕಲ್ಲು ಕಟ್ಟಡವಿದೆ. ಕಟ್ಟಡದಲ್ಲಿ  ಟೈಮ್ಸ್ ಅಫ್ ಇಂಡಿಯಾ ದಿನಪತ್ರಿಕೆಯ ಪ್ರಧಾನ ಕಛೇರಿಯಿದ್ದುಎರಡನೆಯ ಮಹಡಿಯ ಹದಿಮೂರನೆ ನಂಬರಿನ ತಮ್ಮ ಕೊಠಡಿಗೆ ಬೆಳಿಗ್ಗೆ ಒಂಬತ್ತು ಗಂಟೆಗೆ ಹಾಜರಾಗುತ್ತಿದ್ದ ಆರ್.ಕೆ.ಲಕ್ಷ್ಮಣ್ರವರು ಹನ್ನೊಂದು ಗಂಟೆಯವರೆಗೆ ದಿನಪತ್ರಿಕೆಗಳನ್ನು ತಿರುವು ಹಾಕುತ್ತಿದ್ದರು. ದಿನದ ಚಿತ್ರ ರಚಿಸಲು ಏನೂ ಹೊಳೆಯದಿದ್ದರೆ, ಚಹಾ ಕುಡಿದು, ತಮ್ಮ ಪ್ರೀಮಿಯರ್ ಪದ್ಮಿನಿ ಕಾರಿನಲ್ಲಿ ಮುಂಬೈ ನಗರವನ್ನು ಒಂದು ಸುತ್ತು ಹಾಕುತ್ತಿದ್ದರು. ಅವರ ತಿರುಗಾಟದಲ್ಲಿ ರಸ್ತೆಯ ಬದಿಯಲ್ಲಿ, ಅಥವಾ ಸಿಗ್ನಲ್ ವೃತ್ತಗಳಲ್ಲಿ ಕಾಣುತ್ತಿದ್ದ ವರ್ತಮಾನದ ಬದುಕಿನ ಬವಣೆಗಳು ಪತ್ರಿಕೆಯ ಪಾಕೆಟ್ ಕಾರ್ಟೂನ್ ರೂಪದಲ್ಲಿ ಸೃಷ್ಟಿಯಾಗುತ್ತಿದ್ದವು.
ಆರ್.ಕೆ. ಲಕ್ಷ್ಮಣ್ ಕೇವಲ ವ್ಯಂಗ್ಯ ಚಿತ್ರಕಾರರು ಮಾತ್ರವಲ್ಲ, ಅವರಿಗೆ ನಾವು ಕಾಣದ ಇತರೆ ಅಭಿರುಚಿಗಳಿದ್ದವು. ವರ್ಷಕ್ಕೆ ಎರಡು ಮೂರು ಬಾರಿ ಪ್ರವಾಸ ಹೋಗುತ್ತಿದ್ದ ಅವರು, ತಾವು ಬೇಟಿ ನೀಡಿದ ಪ್ರದೇಶಗಳ ಸಂಸ್ಕøತಿ, ಅಭಿರುಚಿ, ಉಡುಪು, ಇವುಗಳನ್ನು ದಾಖಲಿಸಿಕೊಂಡು ಅವುಗಳ ವರ್ಣಚಿತ್ರಗಳನ್ನು ರಚಿಸುತ್ತಿದ್ದರು. ಜೊತೆಗೆ ಪ್ರವಾಸ ಕಥನಗಳನ್ನು ಬರೆಯುತ್ತಿದ್ದರು. ಹಾಗಾಗಿ  ಅವರ ಕುಂಚದಲ್ಲಿ ರಾಜಸ್ಥಾನ ಮತ್ತು ಗುಜರಾತಿನ ಸಂಸ್ಕøತಿ ಪರಿಣಾಮಕಾರಿಯಾಗಿ ಅನಾವರಣಗೊಂಡಿವೆ. ಜೊತೆಗೆ ಜಗತ್ತು ಕುರೂಪಿ ಪಕ್ಷಿಯೆಂದು ತಿರಸ್ಕರಿಸಿರುವ ಕಾಗೆ ಅವರ ಅತ್ಯಂತ ಮೆಚ್ಚಿನ ಪಕ್ಷಿಯಾಗಿತ್ತು. ಕಾಗೆಗಳ ಕುರಿತಾಗಿ ಪೆನ್ಸಿಲ್ ನಲ್ಲಿ ಅವರು ನೂರಾರು ಚಿತ್ರಗಳನ್ನು ರಚಿಸಿದ್ದರು. ಲಕ್ಷ್ಣಣ್ ರವರು ತಮ್ಮ ವ್ಯಂಗ್ಯ ಚಿತ್ರಗಳ ಪ್ರದರ್ಶನಕ್ಕಿಂತ ಕಾಗೆಗಳ ಚಿತ್ರಗಳ ಪ್ರದರ್ಶನದಲ್ಲಿ ಹೆಚ್ಚು ಉತ್ಸಾಹ ತೋರುತ್ತಿದ್ದರು.
ನಿವೃತ್ತಿಯ ಜೀವನವನ್ನು ಪುಣೆ ನಗರದಲ್ಲಿ ತಮ್ಮ ಮಕ್ಕಳ ಜೊತೆ ಕಳೆಯುತ್ತಿದ್ದ ಕಳೆಯುತ್ತಿದ್ದ ಆರ್.ಕೆ. ಲಕ್ಷ್ಮಣ್ ರವರು 2003 ರಲ್ಲಿ ಪಾಶ್ರ್ವವಾಯು ಕಾಯಿಲೆಗೆ ತುತ್ತಾಗಿದ್ದರು. ತಮ್ಮ ದೇಹದ ಎಡಭಾಗ ಸಂಪೂರ್ಣ ನಿಷ್ಟ್ರಿಯಗೊಂಡ ಹಿನ್ನಲೆಯಲ್ಲಿ ಇತ್ತೀಚೆಗೆ ಅವರು ಗಾಲಿಕುರ್ಚಿಯನ್ನು ಅವಲಂಬಿಸಿದ್ದರು. ತಮ್ಮ ತೊಂಬತ್ತು ನಾಲ್ಕು ವರ್ಷದ ತುಂಬು ಜೀವನದಲ್ಲಿ ಸಾರ್ಥಕ ಬದುಕನ್ನು ಬದುಕಿದ ಆರ್.ಕೆ. ಲಕ್ಷ್ಮಣ್ ಇಂದು ನಮ್ಮಿಂದ ದೂರವಾದರೂ ಸಹ ಅವರು ಸೃಷ್ಟಿಸಿದ ಶ್ರೀ ಸಾಮಾನ್ಯನ ಮೂಲಕ ಪ್ರತಿಯೊಬ್ಬ ಭಾರತೀಯ ಓದುಗನ ಎದೆಯಲ್ಲಿ ಸದಾ ಹಸಿರಾಗಿರುತ್ತಾರೆ.


No comments:

Post a Comment