ಶುಕ್ರವಾರ, ಆಗಸ್ಟ್ 7, 2015

ಮೂಕ ಪ್ರಾಣಿಯ ಆತ್ಮಕಥೆ





ನಮ್ಮ ನಡುವಿನ ವಿಶಿಷ್ಟ ಚಿಂತನೆಯ ಬರಹಗಾರ ಹಾಗೂ ನೆಲಮೂಲ ಸಂಸ್ಕೃತಿಯ ಅಪ್ಪಟ ವಾರಸುದಾರರಂತೆ ಬದುಕುತ್ತಿರುವ ಮಿತ್ರ ಶಿವಾನಂದ ಕಳವೆ ಯವರ  ಅಪರೂಪದ ಕೃತಿ “ ಗೌರಿ ಜಿಂಕೆಯ ಆತ್ಮಕಥೆ” ಎಂಬ ವನ್ಯಲೋಕದ ವಿಸ್ಮಯ ಕುರಿತಾದ ಪುಟ್ಟ ಕೃತಿಯೊಂದು ಈ ದಿನ ಶಿರಸಿ ಪಟ್ಟಣದಲ್ಲಿ ಬಿಡುಗಡೆಯಾಗುತ್ತಿದೆ.
ಆಧುನಿಕ ಬದುಕಿನ ವಿಕಾರಗಳ ನಡುವೆ ನಾವೇ ಸ್ವತಃ ಸೃಷ್ಟಿಕೊಂಡಿರುವ ಭ್ರಮಾತ್ಮಕ ಜಗತ್ತಿನಲ್ಲಿ ಮುಳುಗಿ ಏಳುತ್ತಿರುವ ನಮ್ಮಂತಹವರಿಗೆ, ಇವುಗಳಾಚೆಯೂ ನಾವು ಬದುಕಬಹುದಾದ ಅಥವಾ ಯೋಚಿಸಬಹುದಾದ ಇನ್ನೊಂದು ಜಗತ್ತಿದೆ ಎಂಬುದನ್ನು ಶಿವಾನಂದ್ ಈ ಕೃತಿಯ ಮೂಲಕ  ನಮಗೆ ತೋರಿಸಿಕೊಟ್ಟಿದ್ದಾರೆ.
ಅವರು ಈ ಕೃತಿಯ ಆರಂಭದಲ್ಲಿ ದಾಖಲಿಸಿರುವ “ ನನ್ನ ಬರೆಣೆಗೆಯ ಆರಂಭದ ದಿನಗಳಿಂದಲೂ ಪರಿಸರ ಕತೆಗಳಿಂದ ಸುತ್ತಲಿನ ನಿಸರ್ಗ ವಿಸ್ಮಯ ನೋಡಲು ಕಲಿಸಿದವರು ಹಾಗೂ ಊರಲ್ಲಿ ಬೇರೂರಲು ಪ್ರೇರಣೆ ನೀಡಿದ ಆತ್ಮೀಯ ಕೆ.ಪಿ.ಪೂರ್ಣಚಂದ್ರತೇಜಸ್ವಿಯವರ ಒಡನಾಟದ ಸವಿನೆನಪಿಗೆ ಈ ಕೃತಿ ಅರ್ಪಣೆ” ಎನ್ನುವ ಮಾತುಗಳು ಕ್ಷಣ ಕಾಲ ನನ್ನನ್ನು ಹಿಡಿದು ನಿಲ್ಲಿಸಿಬಿಟ್ಟವು.
ಬಹುತೇಕ ನನ್ನ ತಲೆ ಮಾರು, ಕುವೆಂಪು, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಪ್ರೊ.ನಂಜುಂಡಸ್ವಾಮಿ, ಕೆ.ರಾಮದಾಸ್ ಇಂತಹವರಿಂದ ವೈಚಾರಿಕತೆಯ ಕಿಚ್ಚನ್ನು ಹತ್ತಿಸಿಕೊಂಡು ಬೆಳೆದವರು. ಆದರೆ, ನಾವು ಪಡೆದ ಆ ವೈಚಾರಿಕತೆಯ ಬೆಳಕನ್ನು ಎಷ್ಟು ಮಂದಿಗೆ ಹಂಚಿದ್ದೀವಿ?  ಅಥವಾ ಅಳವಡಿಸಿಕೊಂಡಿದ್ದೀವಿ? ಎಂಬ ಪ್ರಶ್ನೆಯನ್ನು ಆತ್ಮಕ್ಕೆ ಹಾಕಿಕೊಂಡಾಗ ನಾಚಿಕೆಯಾಗುತ್ತದೆ.  ಸುಲಭವಾಗಿ ಲೋಕವನ್ನು ವಂಚಿಸುವ ಹಾಗೆ ನಾವು ನಮ್ಮ ನಮ್ಮ ಆತ್ಮಗಳನ್ನು ವಂಚಿಸಲಾರೆವು.  ಚಿಂತಕರು ಹಾಗೂ ಪ್ರಗತಿ ಪರರೆಂದು ಕರೆಸಿಕೊಂಡು, ಆತ್ಮಗಳೇ ಇಲ್ಲದ ಸರ್ಕಾರದ ಒಡ್ಡೋಲಗದಲ್ಲಿ ಉರುಳು ಸೇವೆ ಸಲ್ಲಿಸುತ್ತಾ, ಬರಹಗಾರರು ಮತ್ತು ಪತ್ರಕರ್ತರು ಎಂಬ ಸೋಗಿನಲ್ಲಿ ವರ್ತಮಾನದ ಜಗತ್ತಿಗೆ ಹುಸಿ ಸಂತರ ಹಾಗೆ ಹೇಳಿಕೆ ನೀಡುವ ನನ್ನಂತಹ ಹಲಾಲುಕೋರರಿಗೆ ಕಳವೆಯವರ ಬದುಕು ಮತ್ತು ಬರೆವಣಿಗೆ ಕಣ್ಣು ತೆರಸುವಂತಿದೆ.
ಒಂದು ಮೂಕ ಪ್ರಾಣಿಯ ಬದುಕನ್ನು ಅದರ ಜೊತೆಗಿನ ಹದಿನೈದು ವರ್ಷಗಳ ಒಡನಾಟವನ್ನು  ಗೌರಿ ಎಂಬ ಹೆಣ್ಣು ಜಿಂಕೆಯೊಳಕ್ಕೆ   ಪರಕಾಯ ಪ್ರವೇಶ ಮಾಡಿದಂತೆ ಕಾಣುವ ಕಳವೆಯವರು ತಮ್ಮ ಒಳಗಣ್ಣಿನಿಂದ ನಿಸರ್ಗವನ್ನು ನೋಡಿ, ಧ್ಯಾನಿಸಿ ಬರೆದಿರುವ ಈ ಕೃತಿಯು, ನಿಸರ್ಗದೊಂದಿಗೆ ನಾವು ಕಳೆದುಕೊಂಡಿರುವ ಕಳ್ಳು ಬಳ್ಳಿಯ ಸಂಬಂಧವನ್ನು ಮತ್ತೆ ಬೆಸುಗೆ ಹಾಕುವಂತಿಗೆ.



ಬೀದಿ ನಾಯಿಗಳ ದಾಳಿಗೆ ಸಿಲುಕಿ ಗಾಯಗೊಂಡು, ಕಳವೆಯಯವರ ಮನೆಗೆ ಸೇರುವ ಪುಟ್ಟ ಹೆಣ್ಣು ಜಿಂಕೆಯೊಂದು ಗೌರಿ ಎಂಬ ಹೆಸರಿನಲ್ಲಿ ಬೆಳೆದು, ಶಿವಾನಂದರ ಮನೆ ಮಾತ್ರವಲ್ಲ, ಇಡೀ ಊರಿನ ಮನೆಯ ಮಗಳಂತೆ ಎಲ್ಲರ ಮನಗೆದ್ದು. ಬದುಕಿರುವ ಪರಿ ಹಾಗೂ ತನ್ನ ಸಹಜ ಪ್ರವತ್ತಿಯಿಂದಾಗ ಕಾಡು ಮತ್ತು ನಾಡುಗಳ ನಡುವೆ ಬೆಸೆದ ಮೈತ್ರಿಯ ಕ್ಷಣಗಳು ಈ ಕೃತಿಯಲ್ಲಿ ಪರಿಣಾಮಕಾರಿಯಾಗಿ ದಾಖಲಾಗಿವೆ. ಗೌರಿಗೆ ಚುಕ್ಕಿ ಎಂಬ ಮಗಳು ಜನಿಸಿದ ಸಂಭ್ರಮ, ಇವುಗಳ ಬಗ್ಗೆ ಹೇಳುತ್ತಲೇ, ನಿಸರ್ಗದ ನಿಯಮ ಮತ್ತು ಮಾನವ ಕುಲಕ್ಕೆ ಇರಬೇಕಾದ ನೀತಿ ಸಂಹಿತೆ ಇವುಗಳನ್ನು ಪ್ರಜ್ಞಾಪೂರ್ವಕವಾಗಿ ಮೂಕ ಪ್ರಾಣಿಯ ಮೂಲಕ ದಾಖಲಿಸಿರುವ ಪರಿ ನಿಜಕ್ಕೂ ಅನನ್ಯವಾದುದು.
ಲವಲವಿಕೆಯ ಭಾಷೆಯಿಂದ ಗಮನ ಸೆಳೆಯುವ ಈ ಕೃತಿಯು ನಮ್ಮ ಮಕ್ಕಳ  ಶಾಲಾ ಪಠ್ಯವಾಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಇಂತಹ ಕೃತಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ಪಠ್ಯವಾದಾಗ ಮಾತ್ರ  ಈ ಕೃತಿಗೆ  ಹಾಗೂ ಲೇಖಕನಿಗೆ ನಿಜವಾದ ಗೌರವ ಸಲ್ಲುತ್ತದೆ. ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತೆ ಬದುಕುತ್ತಿರುವ, ಬರೆಯುತ್ತಿರುವ ಶಿವಾನಂದ ಕಳವೆಯವರಿಗೆ ಈ ಕೃತಿಯ ಮೂಲಕ ವಿಭಿನ್ನ ಚಿಂತನೆಯ ಲೋಚನೆಗಳನ್ನು  ತೆರೆದಿಟ್ಟ ಕಾರಣಕ್ಕಾಗಿ ಅಭಿನಂದನೆಗಳು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ