ಗುರುವಾರ, ಡಿಸೆಂಬರ್ 29, 2016

ಸುದ್ದಿ ಮನೆಯ ದಾವಂತದಲ್ಲಿ ಬಸವಳಿಯುತ್ತಿರುವ ಭಾಷೆ



ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ  ಕಾಲಕ್ಕೆ  ತಕ್ಕಂತೆ ಬದಲಾವಣೆಯಾಗುತ್ತಿದ್ದಂತೆ ಸಂವಹನ ಮಾಧ್ಯಮಗಳ ಕಾರ್ಯ ವೈಖರಿಯಿಂದ ಹಿಡಿದು, ಅವುಗಳ ಸಂವಹನ ಭಾಷೆ ಕೂಡ ಬದಲಾಗುತ್ತಿದೆ. ಇದು ಜಗದ ನಿಯಮ ಕೂಡ ಹೌದು. ಆದರೆ, ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ನಾವು ಬಳಸುವ ಸಂಹವನದ ಭಾಷೆಯ ಮೇಲೆ ಎಚ್ಚರಿಕೆ ಮತ್ತು ನಿಗಾ ಇರಬೇಕಾದದ್ದು ಕೂಡ ಅಗತ್ಯವಾಗಿದೆ. ಸುದ್ಧಿ ಮನೆಗಳು ಅಂದರೆ, ಅದು ದೃಶ್ಯ ಮಾಧ್ಯಮವಾಗಿರಲಿ, ಪತ್ರಿಕಾ ಮಾಧ್ಯಮವಾಗಿರಲಿ ಅಥವಾ ಆಕಾಶವಾಣಿ ಕೇಂದ್ರವಾಗಿರಲಿ ಈ ಎಲ್ಲಾ ಮಾಧ್ಯಮಗಳ ಮೇಲೆ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ನೈತಿಕ ಜವಾಬ್ದಾರಿಯಿರುತ್ತದೆ.
ಮಾಹಿತಿ ತಂತ್ರಜ್ಞಾನದಲ್ಲಿ ಉಂಟಾಗುತ್ತಿರುವ  ಕ್ಷಿಪ್ರಕ್ರಾಂತಿಯ ಫಲವಾಗಿ, ಜಗತ್ತಿನ ಮಾಹಿತಿಗಳೆಲ್ಲವೂ ಇಂದು ಮನುಷ್ಯನ ಬೆರಳ ತುದಿಗೆ ಬಂದು ಕೂತಿವೆ. ಇಡೀ ಜಗತ್ತೇ ಕಿರಿದಾಗಿ ಒಂದು ಹಳ್ಳಿ ಎಂಬ ಕಲ್ಪನೆ ಎಲ್ಲರ ಮನದಲ್ಲಿ ಸಾಕಾರಗೊಳ್ಳುತ್ತಿದೆ.  ಅದರಲ್ಲೂ ಇತ್ತೀಚೆಗಿನ ಸಾಮಾಜಿಕ ತಾಣಗಳು ಅಂದರೆ, ವಿಶೇಷವಾಗಿ ಫೇಸ್ ಬುಕ್, ಟ್ವಿಟ್ಟರ್, ವ್ಯಾಟ್ಸ್ ಅಪ್, ಬ್ಲಾಗ್  ಮುಂತಾದ ತಾಣಗಳು ಸುದ್ಧಿಮನೆಗೆ ಪರ್ಯಾಯವಾಗಿ ಅಂದರೆ, ಮಾಧ್ಯಮ ರಂಗಕ್ಕೆ ಪರ್ಯಾಯವಾಗಿ  ಕಾರ್ಯ ನಿರ್ವಹಿಸತೊಡಗಿವೆ. ಇದರಿಂದಾಗಿ ಸುದ್ಧಿಮನೆಗಳ ಮುಖ್ಯಸ್ಥರಿಗೆ  ಓದುಗರಿಗೆ, ,ವೀಕ್ಷರಿಗೆ ಅಥವಾ ಕೇಳುಗರಿಗೆ ಏನನ್ನು ನೀಡಬೇಕು? ಯಾವ ರೀತಿಯಲ್ಲಿ ನೀಡಬೇಕು ಹಾಗೂ ನಾವು ನೀಡುವ ವಿಷಯ ಎಷ್ಟು ಅವಧಿಯನ್ನು ಒಳಗೊಂಡಿರಬೇಕು ಎಂಬುದರಿಂದ ಹಿಡಿದು, ಭಾಷೆ, ವಿಷಯ ಹೀಗೆ ಅನೇಕ  ಸವಾಲುಗಳನ್ನು ಸುದ್ಧಿಮನೆಯ ಮುಖ್ಯಸ್ಥರ ಮುಂದೆ ಇಟ್ಟಿವೆ. ಜೊತೆಗೆ ನಾವು ಬಳಸುವ ಭಾಷೆ ಗುಣಮಟ್ಟ ಕುರಿತಂತೆ ಹಲವು ಜಿಜ್ಞಾಸೆಗಳನ್ನು ತಂದೊಡ್ಡಿವೆ.
ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಡುತ್ತಿದ್ದಂತೆ, ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಅನಿರೀಕ್ಷಿತ ಬದಲಾವಣೆಗಳಾದವು. ಹಿಂದೆ ಸುದ್ಧಿಗಳ ನಡುವೆ ಜಾಹಿರಾತುಗಳು ಇದ್ದ ಕಾಲವಿತ್ತು. ಇದೀಗ ಜಾಹಿರಾತುಗಳ ನಡುವೆ ಸುದ್ಧಿಗಳನ್ನು ಓದುವ, ಕೇಳುವ, ನೋಡುವ ಕಾಲಘಟ್ಟದಲ್ಲಿ ನಾವಿದ್ದೀವಿ.  ಹಾಗಾಗಿ ಎಲ್ಲವೂ ಸಂಕ್ಷಿಪ್ತವಾಗಿರಬೇಕು ಮತ್ತು ಓದುಗರ ಅಥವಾ ಕೇಳುಗರ ಮನಕ್ಕೆ ತಾಕುವಂತೆ ಇರಬೇಕು ಎಂಬ ಮನಸ್ಥಿತಿಯಲ್ಲಿ ಇಂದಿನ ಸುದ್ಧಿ ಮಾಧ್ಯಮ ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಹಾಗಾಗಿ ಪತ್ರಿಕೆ ಅಥವಾ ದೃಶ್ಯ ಮಾಧ್ಯಮದ ಭಾಗವಾದ ಛಾನಲ್ ಗಳಲ್ಲಿ ನಾವು ಬಳಸುವ ಭಾಷೆ ಕುರಿತಂತೆ ತುಂಬಾ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದ ಆಕಾಶವಾಣಿ ಕೇಂದ್ರಗಳು ಯಾವಾಗಲೂ ಭಾಷೆಯ ಬಳಕೆ ಕುರಿತಂತೆ ಹಾಕಿಕೊಂಡಿರುವ ನಿಯಮಾವಳಿಗಳು ಹಾಗೂ ಆಯಾ ಪ್ರಾಧೇಶಿಕ ಭಾಷೆಯಲ್ಲಿ ಪ್ರಸಾರವಾಗುವ ವಾರ್ತೆಗಳು ಅಥವಾ ಇನ್ನಿತರೆ ಕಾರ್ಯಕ್ರಮಗಳು ನಿಜಕ್ಕೂ  ಎಲ್ಲರಿಗೂ ಮಾದರಿಯಾಗಿವೆ.
ಇತ್ತೀಚೆಗಿನ ದಿನಗಳಲ್ಲಿ ಜನ ಸಾಮಾನ್ಯರ ನಡುವೆ ಸ್ಮಾರ್ಟ್ ಫೋನ್ ಗಳು, ಮತ್ತು ಇಂಟರ್ ನೆಟ್ ಹಾಗೂ ಇ-ಮೈಲ್ ಸಂದೇಶಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಪ್ರಾದೇಶಿಕ ಭಾಷೆ ಮತ್ತು ಇಂಗ್ಲೀಷ್ ಭಾಷೆಗಳ ನಡುವೆ ಇದ್ದ ಗಡಿ ರೇಖೆಯು ಹಂತಹಂತವಾಗಿ ಅಳಿಸಿಹೋಗುತ್ತಿದೆ. ಇಂಗ್ಲೀಷ್ ಭಾಷೆಯು ತಂತ್ರಜ್ಞಾನದ ಮುಖ್ಯ ಭಾಷೆಯಾದ ಕಾರಣ ಪ್ರಾದೇಶಿಕ ಭಾಷೆಗಳ ನುಡಿಗಟ್ಟುಗಳ ಜೊತೆಗೆ  ಹೆಚ್ಚು ಹೆಚ್ಚು ಬಳಕೆಯಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರ ಪರೋಕ್ಷ ಪರಿಣಾಮವನ್ನು ದೃಶ್ಯ ಮಾಧ್ಯಮಗಳ ಸುದ್ದಿ ಛಾನಲ್ ಗಳು ಬಿತ್ತರಿಸುವ ಮುಖ್ಯಾಂಶಗಳಿಂದ  ಹಿಡಿದು, ವಾರ್ತೆಗಳ ವಿವರಣೆಯಲ್ಲಿ ನಾವು ಕಾಣಬಹುದು. ವಿಷಾಧದ ಸಂಗತಿಯೆಂದರೆ, ಇಂತಹ ಪ್ರಯೋಗವು  ಭಾಷೆಯೊಂದರ ಬೆಳವಣಿಯ ದೃಷ್ಟಿಯಿಂದ ತೀರಾ ಅಪಾಯಕಾರಿಯಾದುದು.
ಸುದ್ದಿ ಮನೆಗಳಲ್ಲಿ  ಸಂವಹನದ ಮಾಧ್ಯಮವಾಗಿ ಬಳಕೆಯಾಗುವ ಭಾಷೆಯು ಅದು ಸ್ಥಳಿಯ ಪ್ರಾದೇಶಿಕ ಭಾಷೆಯಾಗಿರಬಹುದು ಇಲ್ಲವೆ, ಅದೇ ನೆಲದ ಇನ್ನೊಂದು ಉಪಭಾಷೆಯಾಗಿರಬಹುದು ಅಂದರೆ, ಕೊಡವ, ಕೊಂಕಣ, ತುಳು ಅಥವಾ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಮರಾಠಿ ಮತ್ತು ಉರ್ದು ಭಾಷೆ ಮಿಶ್ರಿತ ಕನ್ನಡ ಭಾಷೆಯಾಗಿರಬಹುದು. ಇವುಗಳನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸುವಾಗ ಸುದ್ದಿ ಮನೆಯ ಮುಖ್ಯಸ್ಥರಿಗೆ ಮತ್ತು ವಾರ್ತಾ ವಾಚಕರಿಗೆ ಹಾಗೂ ಪತ್ರಿಕೆಗಳ ಉಪಸಂಪಾದಕರಿಗೆ ಸಮುದಾಯದ ನಾಡಿ ಮಿಡಿತ ಕುರಿತಂತೆ ಜ್ಞಾನವಿರಬೇಕು. ವಿಶೇಷವಾಗಿ ದೃಶ್ಯ ಮಾಧ್ಯಮ ಮತ್ತು ರೇಡಿಯೋ ಕಾರ್ಯಕ್ರಮಗಳಲ್ಲಿ ಬಳಸುವ ಭಾಷೆಯು ಆದಷ್ಟು ಸರಳವಾಗಿ ಎಲ್ಲರಿಗೂ ನಿಲುಕವಂತಿರಬೇಕು. ಏಕೆಂದರೆ, ದೃಶ್ಯ ಮಾಧ್ಯಮಗಳ ವೀಕ್ಷಕರು ಮತ್ತು ಆಕಾಶವಾಣಿಯ ಕೇಳುಗರು ಇಬ್ಬರೂ ಅಗೋಚರ ವ್ಯೆಕ್ತಿಗಳಾಗಿದ್ದು, ಅವರಲ್ಲಿ ಅನಕ್ಷರಸ್ತರು ಇರುತ್ತಾರೆ ಎಂಬ ಎಚ್ಚರಿಕೆ ಈ ಎರಡು ಮಾಧ್ಯಮಗಳಿಗೆ ಇರಬೇಕಾದ್ದು ಅತ್ಯಾವಶ್ಯಕ. ಏಕೆಂದರೆ, ಪತ್ರಿಕೆಗಳು  ಓದು ಬಲ್ಲ ಅಕ್ಷರಸ್ತರ ಮಾಧ್ಯಮವಾದರೆ, ರೇಡಿಯೋ ಮತ್ತು ದೃಶ್ಯ ಮಾಧ್ಯಮಗಳು ಎಲ್ಲಾ ಬಗೆಯ ಜನರ ಮಾಧ್ಯಮಗಳಾಗಿರುತ್ತವೆ.
ದುರದೃಷ್ಟಕರ ಸಂಗತಿಯೆಂದರೆ, ವರ್ತಮಾನದ ಜಗತ್ತಿನಲ್ಲಿ ಸುದ್ಧಿ ಛಾನಲ್ ಗಳ ಭಾಷೆಯಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚು ಭಾಗವನ್ನು ಇಂಗ್ಲೀಷ್ ಭಾಷೆಯು ಆಕ್ರಮಿಸಿಕೊಂಡಿದೆ. ಉದಾಹರಣೆಗೆ  ಬ್ರೇಕಿಂಗ್ ನ್ಯೂಸ್/ ಟೀಮ್ ಇಂಡಿಯಾ/, ಪೋಲಿಸ್ ಫೈಲ್,/ ಕ್ರೈಮ್ ಸ್ಟೋರಿ/ ಫಿಲ್ಮಿ ಫಾಂಡ/ ಬೌಂಡರಿ ಲೈನ್/ ಮುಂತಾದ ಶೀರ್ಷಿಕೆಗಳು ಕಾರ್ಯಕ್ರಮಗಳಿಗೆ ಇಟ್ಟ ಹೆಸರುಗಳಾದರೆ, ವಾರ್ತೆಗಳ ವಿವರಣೆಯಲ್ಲಿ ಬಳಸುವ ಡಬ್ಬಲ್ ಮರ್ಡರ್, ಡಬ್ಬಲ್ ಬ್ಯಾರಲ್ ಗನ್, ಸಿ.ಎಮ್. ಎಲೆಕ್ಷನ್, ಹೋಂ ಮಿನಿಷ್ಟರ್, ಆಕ್ಸಿಡೆಂಟ್,   ಹೀಗೆ ನೂರಾರು ಇಂಗ್ಲೀಷ್ ಶಬ್ದಗಳು ದಿನ ನಿತ್ಯ ನಮ್ಮ ಕಿವಿಯ ಮೇಲೆ ಬೀಳುತ್ತಿವೆ. ಇಂತಹ ಅವಸರದ ಪ್ರಕ್ರಿಯೆಯು ನಮ್ಮ ಮಾತೃ ಭಾಷೆಯನ್ನು ಕೊಂದು ಹಾಕುವ ಕ್ರಿಯೆಯಾಗಬಲ್ಲದೆ ಹೊರತು. ಹೊಸ ಹೊಸ ಶಬ್ದಗಳನ್ನು ಹುಟ್ಟು ಹಾಕಲು ಸಹಕಾರಿಯಾಗುವುದಿಲ್ಲ.
ದೃಶ್ಯ ಮಾಧ್ಯಮ ಜಗತ್ತು ಕುರಿತಂತೆ  ವಿಶೇಷ ಅಧ್ಯಯನ ಮಾಡಿ ಈ ವಿಷಯದಲ್ಲಿ  ಪಿ.ಹೆಚ್.ಡಿ. ಪದವಿ ಪಡೆದಿರುವ ಹಿರಿಯ ಪತ್ರಕರ್ತ,  ಹಾಗೂ ಹತ್ತು ವರ್ಷಗಳ ಕಾಲ ಉದಯ ಟಿ.ವಿ.ಯಲ್ಲಿ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸಿ, ಇದೀಗ  ತುಮಕೂರು  ಸಿದ್ಧಾರ್ಥ ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿರುವ  ಡಾ. ಬಿ.ಟಿ. ಮುದ್ದೇಶ್. ದೃಶ್ಯ ಮಾಧ್ಯಮಗಳಿಂದಾಗಿ  ಮಾತೃ ಭಾಷೆಯೆಂಬುದು ಹೇಗೆ ಸೆವೆಯುತ್ತಿದೆ ಎಂಬುದನ್ನು ಅವರು ಇಂಗ್ಲೀಷ್ ಶಬ್ದಗಳು ಬಳಕೆಯಾಗುತ್ತಿರುವುದನ್ನು ಪಟ್ಟಿ ಮಾಡಿದ್ದಾರೆ.  ಜೊತೆಗೆ ಕಾರ್ಯಕ್ರಮದ ನಡುವೆ ಇಂಗ್ಲೀಷ್ ಭಾಷೆ ಹೇಗೆ ನಮ್ಮನ್ನು ಆವರಿಸಿಕೊಳ್ಳುತ್ತಿದೆ ಎಂಬುದನ್ನು ಉದಾಹರಣೆ ಸಹಿತ  ಮನಮುಟ್ಟುವಂತೆ ವಿವರಿಸಿದ್ದಾರೆ. ಇವುಗಳ ಜೊತೆ  ಜೊತೆಗೆ ಭಾಷೆಯ ಅನುವಾದ ಮತ್ತು ಉಪಯೋಗ ಕುರಿತು ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
ಭಾಷಾಂತರ ಇಲ್ಲವೇ ಅನುವಾದ ಕ್ರಿಯೆಯು ಯಾವಾಗಲೂ ಸೃಜಲಶೀಲವಾಗಿರಬೇಕು.
ಭಾಷಾಂತರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಭಾಷೆಗಳ ಮೇಲೆ ಪತ್ರಕರ್ತರಿಗೆ ಹಿಡಿತವಿದ್ದರೆ ಭಾಷಾಂತರವು ಸರಳವೂ ಹಾಗೂ ಅರ್ಥಪೂರ್ಣವಾಗಿರುತ್ತದೆ.
ಭಾಷಾಂತರ ಕ್ರಿಯೆಯಲ್ಲಿ ಲೇಖನ ಅಥವಾ ಲೇಖಕನ ಮೂಲ ಆಶಯಕ್ಕೆ ಧಕ್ಕೆ ಬಾರದಂತಿರಬೇಕು.
ಭಾಷಾಂತರ ಮಾಡುವಾಗ ಆಯಾ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ ನುಡಿಗಟ್ಟುಗಳನ್ನು ಭಾಷಾಂತರ ಕ್ರಿಯೆಯಲ್ಲಿ ಬಳಸಬೇಕು.
ಭಾಷಾಂತರವೆನ್ನುವುದು ಒಂದು ಕಲೆಯಾದುದರಿಂದ ಬಹುಭಾಷೆಗಳ ಪರಿಚಯ, ಪ್ರಭುತ್ವ ಅಗತ್ಯವಾದರೂ ಸಹ ಭಾಷಾಂತರ ಕ್ರಿಯೆಯಲ್ಲಿ ಉಪಯೋಗಿಸಲ್ಪಡುವ ಎರಡು ಭಾಷೆಯ ಮೇಲಿನ ಹಿಡಿತ ಅನಿವಾರ್ಯ.
ಭಾಷಾಂತರಕಾರ ಅಥವಾ ಅನುವಾದಕ  ಪರಕಾಯ ಪ್ರವೇಶ ಮಾಡುವ ಸಾಮಾರ್ಥ್ಯವುಳ್ಳವನಾಗಿರಬೇಕು.
ಭಾಷಾಂತರಕಾರ ಕೇವಲ ಶಬ್ಧದ ಕಣಜವಾದರೆ ಸಾಲದು, ಹೊಸ ಪದಪುಂಜಗಳನ್ನು ಸೃಷ್ಟಿಸುವ ಸಾಮರ್ಥ್ಯವುಳ್ಳವನಾಗಿರಬೇಕು.

 ಬಿ.ಟಿ. ಮುದ್ದೇಶ್ ಅವರ ಈ ಮಾತುಗಳಿಗೆ ಪೂರಕವಾಗಿ ಕಳೆದ ಅರ್ಧ ಶತಮಾನದಿಂದ ಕರ್ನಾಟಕದ ಸುದ್ದಿಮನೆಗಳಲ್ಲಿ ಅನೇಕ ಮಹಾನುಭಾವರು ಪತ್ರಿಕೋದ್ಯಮಕ್ಕೆ ಅನೇಕ ನುಡಿಗಟ್ಟುಗಳನ್ನು ರೂಪಿಸಿಕೊಟ್ಟಿರುವುದರ ಜೊತೆಗೆ ಅನೇಕ ಹೊಸ ಹೊಸ ಪದಗಳನ್ನು ಸೃಷ್ಟಿಸಿ ಕೊಡುಗೆಯಾಗಿ ನೀಡಿದ್ದಾರೆ ಇವರುಗಳಲ್ಲಿ   ಪ್ರಜಾವಾಣಿಯ ಟಿ.ಎಸ್.ಆರ್,  ಕನ್ನಡ ಪ್ರಭದ ಖಾದ್ರಿ ಶಾಮಣ್ಣ, ವೈ.ಎನ್.ಕೃಷ್ಣಮೂರ್ತಿ, ಇವರುಗಳನ್ನು ಮುಖ್ಯವಾಗಿ ಹೆಸರಿಸಬಹುದು. ಇವುಗಳ ಜೊತೆಗೆ ಬಹುಮುಖ್ಯವಾಗಿ ಪತ್ರಿಕೋದ್ಯಮದ ಭಾಷೆಯೆಂಬುದು ಒಣ ಭಾಷೆ ಅಥವಾ ನಿರ್ಜೀವ ಭಾಷೆ ಎಂಬ ಕಲ್ಪನೆ ಇದ್ದ ಸಂದರ್ಭದಲ್ಲಿ ಕನ್ನಡದ ಖ್ಯಾತ ಸಾಹಿತಿ ಪಿ.ಲಂಕೇಶರು 1980 ರ ದಶಕದಲ್ಲಿ ಪತ್ರಿಕೋದ್ಯಮದ ಭಾಷೆಗೆ ಸಾಹಿತ್ಯದ ಭಾಷೆಯನ್ನು ಕಸಿ ಮಾಡುವುದರ ಮೂಲಕ ಹೊಸ ಜೀವ ಕಳೆಯನ್ನು ತುಂಬಿದರು. ಇದಕ್ಕೂ ಕನ್ನಡದ ಕಥಾಲೋಕದ ಪಿತಾಮಹಾರೆಂದು ಹೆಸರಾದ ಮಾಸ್ತಿಯವರು  ತಮ್ಮ “ಜೀವನ” ಪತ್ರಿಕೆಯಲ್ಲಿ ಇಂತಹದ್ದೇ ಪ್ರಯೋಗವನ್ನು ಮಾಡಿದ್ದರು. ಪಿ.ಲಂಕೇಶ್ ರವರು ತಮ್ಮ ವಾರಪತ್ರಿಕೆಯಲ್ಲಿ ಬಳಸಿದ ಅತ್ಯಂತ ಸರಳವಾದ ಕನ್ನಡ ಭಾಷೆ ಹಾಗೂ ಹುಟ್ಟು ಹಾಕಿದ ನುಡಿಗಟ್ಟುಗಳು ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟವು. ಜೊತೆಗೆ ನನ್ನ ತಲೆ ಮಾರಿನ ಅನೇಕ ಪತ್ರಕರ್ತರಿಗೆ ಸ್ಪೂರ್ತಿಯನ್ನು ತುಂಬಿದವು.
ಕೇವಲ ಪ್ರಾಸಕ್ಕೆ ಕಟ್ಟು ಬಿದ್ದು, ಹೊಸ ಹೊಸ ತಲೆ ಬರಹಗಳನ್ನು ನೀಡಿ  ತಮ್ಮ ಚಮತ್ಕಾರಕ್ಕೆ ತಾವೇ ಸಂಭ್ರಮಿಸುತ್ತಿರುವ ಪತ್ರಿಕೆಗಳ ಸಂಪಾದಕರ ಮೇಲೆ ಭಾಷೆಯನ್ನು ಉಳಿಸುವ ಮತ್ತು ಬೆಳಸುವ ನೈತಿಕ ಜವಾಬ್ದಾರಿಯೊಂದು  ಸದಾ ಅವರ ಮೇಲಿರುತ್ತದೆ. ಏಕೆಂದರೆ, ಯಾವುದೇ ಪ್ರಾದೇಶಿಕ ಭಾಷೆಯಾಗಿರಲಿ ಅದು  ಸುದ್ದಿ ಮನೆಯ ದಾವಂತದಲ್ಲಿ ಬಸವಳಿಯಬಾರದು ಮತ್ತು ನಶಿಸಿಹೋಗಬಾರದು.
( ಧಾರವಾಡ ಆಕಾಶವಾಣಿಗೆ ನೀಡಿದ ವಿಶೇಷ ಉಪನ್ಯಾಸದ  ಲಿಖಿತ ರೂಪ)
                                                                                                                                                                                                             

                                                

ಸೋಮವಾರ, ಡಿಸೆಂಬರ್ 26, 2016

ನೋಟು ನಿಷೇದವೆಂಬ ಪ್ರಹಸನ


ಸ್ವಾತಂತ್ರ್ಯಾನಂತರದ ಭಾರತದಲ್ಲಿ ಯಾವೊಬ್ಬ ಪ್ರಧಾನಿಯೂ ಇಷ್ಟೊಂದು ಮೂರ್ಖತನ ಮತ್ತು ಅವಿವೇಕತನದಿಂದ ನಡೆದುಕೊಂಡಿರಲಿಲ್ಲ. ನರೇಂದ್ರ ಮೋದಿಯವರ ಹುಚ್ಚಾಟಗಳು ಮತ್ತು ಆವೇಶಗಳಿಗೆ ಭಾರತದ ಆರ್ಥಿಕತೆಯು ಅಧಃಪತನದತ್ತ ಕುಸಿಯುತ್ತಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದ ಭಾರತದ ಪ್ರಧಾನ ಮಂತ್ರಿಯ ಹುದ್ದೆಯ ಘನತೆ ಮತ್ತು ಅದಕ್ಕಿರುವ ಗೌರವ  ಇವೆರೆಡೂ  ನರೇಂದ್ರಮೋದಿಯವರಿಗಾಗಲಿ, ಅಥವಾ ಅವರ ಹುಚ್ಚಾಟಗಳನ್ನು ಬೆಂಬಲಿಸುತ್ತಿರುವ ನಮೋ ಬ್ರಿಗೆಡ್  ಭಕ್ತರೆಂಬ ಅವಿವೇಕಿಗಳಾಗಲಿ ಈವರೆಗೆ ಅರ್ಥವಾಗಿಲ್ಲ.
ಬಹುಮುಖಿಯ ಭಾಷೆ ಮತ್ತು ಸಂಸ್ಕೃತಿಯ ನೆಲವಾದ ಭಾರತಲ್ಲಿ ನಿಜವಾದ ಹೃದಯವಿರುವುದು ಅನಕ್ಷರಸ್ತರು ಮತ್ತು ಅಮಾಯಕ ಕೃಷಿಕರು ಹಾಗೂ ಕೂಲಿಕಾರ್ಮಿಕರು ಅಗಾಧವಾಗಿ ವಾಸವಾಗಿರುವ ಹಳ್ಳಿಗಳಲ್ಲಿ ಎಂಬ ಸೂಕ್ಷ್ಮತೆಯನ್ನು ಅರಿಯಲಾಗದ ಒಬ್ಬ ಜನನಾಯಕ ಅಥವಾ ಪ್ರಧಾನಿ ಈ ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಕುರಿತು ಮಾತನಾಡುವುದು ಅಥವಾ ಕ್ಯಾಶ್ ಲೆಸ್ ಎಕಾನಮಿ ( ನಗದು ರಹಿತ ಆರ್ಥಿಕ ವ್ಯವಸ್ಥೆ) ಬಗ್ಗೆ ಮಾತನಾಡುವುದೆಂದರೆ, ಆತನಿಗೆ ಗ್ರಾಮ ಭಾರತದ ಆರ್ಥಿಕ ವ್ಯವಸ್ಥೆಯಾಗಲಿ, ಅಲ್ಲಿನ ಆರ್ಥಿಕ ಚಟುವಟಿಕೆಗಳ ಕುರಿತಾಗಲಿ ಎಳ್ಳಷ್ಟು ಜ್ಞಾನವಿಲ್ಲ ಎಂದರ್ಥ.  ಒಂದು ರಾಷ್ಟ್ರದ ಪ್ರಧಾನಿಯಾದವನು ಎಲ್ಲಾ ವಿಷಯಗಳಲ್ಲೂ ಪಾರಂಗತನಾಗಿರಬೇಕಿಲ್ಲ ನಿಜ  ಆದರೆ, ತನ್ನ ಬಳಿ ಕನಿಷ್ಟ ಎಲ್ಲಾ ವಲಯಗಳ ವಿಷಯ ತಜ್ಞರನ್ನು ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ಆಡಳಿತವೆಂಬುವುದು ಮಂಗನಾಟ ಇಲ್ಲವೆ ದೊಂಬರಾಟವಾಗುತ್ತದೆ. ನಂವಂಬರ್ 8 ರಂದು ಸಾವಿರ ಮತ್ತು ಐನೂರು ಮುಖಬೆಲೆಯ ಕರೆನ್ಸಿ ನೋಟುಗಳ ಮೇಲೆ ನಿಷೇಧ ಹೇರಿದ ನಂತರ ಈವರೆಗೆ ಕೇಂದ್ರ ಹಣಕಾಸು ಇಲಾಖೆ ಮತ್ತು ಕೇಂದ್ರ ಬ್ಯಾಂಕಾದ ರಿಸರ್ವ್ ಬ್ಯಾಂಕ್ ನಿಂದ ತಿದ್ದುಪಡಿ ಮಾಡಲಾದ ಮತ್ತು ವಾಪಸ್ ಪಡೆಯಲಾದ ಒಟ್ಟು ಸುತ್ತೋಲೆಗಳ ಸಂಖ್ಯೆ 59 ಕ್ಕೆ ಏರಿದೆ. ಇದನ್ನು ಹುಚ್ಚಾಟ ಎಂದು ಕರೆಯದೆ ಬೇರೇನೆಂದು ಕರೆಯಲು ಸಾಧ್ಯ?
ಕೇಂದ್ರಸರ್ಕಾರದ  ಮೇಲುಸ್ತುವಾರಿ ಇದ್ದರೂ ಸಹ ಇಲ್ಲಿಯವರೆಗೆ ಭಾರತದ ಆರ್ಥಿಕತೆಯ ಮೇಲೆ ನಿಗಾ ಇರಿಸಿಕೊಂಡು, ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬಂದಿದ್ದ ರಿಸರ್ವ್ ಬ್ಯಾಂಕ್ ಎಂಬ ಸಂಸ್ಥೆಯ ಗೌರವ ಮಣ್ಣು ಪಾಲಾಗಿದೆ. ಭಾರತದ ಭ್ಯಾಂಕುಗಳ ಮೇಲೆ ನಿಗಾ ಇರಿಸಿ, ಆರ್ಥಿಕ ಅಪರಾಧಗಳು ಸಂಭವಿಸದಂತೆ ತಡೆಯೊಡ್ಡುತ್ತಿದ್ದ ರಿಸರ್ವ್ ಬ್ಯಾಂಕಿನ ಅಧಿಕಾರಿಗಳು ಭ್ರಷ್ಟರಾಗಿ ಜೈಲು ಸೇರುತ್ತಿದ್ದಾರೆ. ಎಂತಹ ವಿಷಮ ಸ್ಥಿತಿಯಲ್ಲಿಯೂ ಸಹ ಕೇಂದ್ರ ಸರ್ಕಾರದೊಂದಿಗೆ ರಾಜಿಯಾಗದೆ, ಭಾರತದ ಆರ್ಥಿಕ ಚಟುವಟಿಕೆಗೆ ರಕ್ಷಕನಂತಿದ್ದ ರಿಸರ್ವ್ ಬ್ಯಾಂಕಿನ ಗೌರ್ನರ್ ಹುದ್ದೆ ಇದೀಗ ಪ್ರಧಾನಿಯೊಬ್ಬನ ಸೇವಕನ ಹುದ್ದೆಯ ಮಟ್ಟಕ್ಕೆ ಕುಸಿದೆ. ಈಗಿನ ಗೌರ್ನರ್ ಊರ್ಜಿತ್ ಪಟೇಲ್ ಒಬ್ಬ ಬೆನ್ನುಮೂಳೆಯಿಲ್ಲದ ಆರ್ಥಿಕ ತಜ್ಞ ಎಂಬುದು ಸಾಬೀತಾಗಿದೆ. ರಘರಾಂ ರಾಜನ್ ಎಂಬ ನೇರ ನಡುವಳಿಕೆಯ ನಿಷ್ಟುರ ವ್ಯೆಕ್ತಿ ಗೌರ್ನರ್ ಸ್ಥಾನದಲ್ಲಿ ಇರುವವರೆಗೂ ಪ್ರಧಾನಿ ಮೋದಿಯ ಈ ಹುಚ್ಚಾಟಕ್ಕೆ ಕಡಿವಾಣವಿತ್ತು. ಅವರು ಸ್ಥಾನ ತ್ಯೆಜಿಸುತ್ತಿದ್ದಂತೆ ನೋಟು ನಿಷೇಧದ ಪ್ರಹಸನದಿಂದಾಗಿ ಭಾರತದ ಆರ್ಥಿಕ ಚಟುವಟಿಕೆಗೆ ದೊಡ್ಡ ಹೊಡೆತ ಬಿದ್ದಿತು. ಜಪಾನ್ ಸಂಸ್ಥೆಯೊಂದರ ಸಮೀಕ್ಷೆಯ ಪ್ರಕಾರ ಭಾರತದ ಆರ್ಥಿಕತೆ ಇಪ್ಪತ್ತು ವರ್ಷದ ಹಿಂದಿನ ಬೆಳವಣಿಗೆಯ ಮಟ್ಟಕ್ಕೆ ಕುಸಿದಿದೆ. ಕೃಷಿ, ಕೈಗಾರಿಕೆ ಮತ್ತು ವಾಹನ ಉದ್ಯಮ, ಪ್ರವಾಸೋದ್ಯಮ ಮತ್ತು ಮನರಂಜನೆ ಹಾಗೂ ಸೇವೆ ಸೇರಿದಂತೆ ಎಲ್ಲಾ ರಂಗಗಳಿಗೂ ಪಾರ್ಶ್ವವಾಯು ಬಡಿದಂತಾಗಿದೆ. ರಫ್ತಿನ ಪ್ರಮಾಣ ಕುಸಿದಿದೆ. ಪ್ರತಿ ನಿತ್ಯ ಈ ದೊಂಬರಟದಿಂದ ಬ್ಯಾಂಕುಗಳಿಗೆ  ಪ್ರತಿ ದಿನ ಮೂರು ಸಾವಿರ ಕೋಟಿ ಖರ್ಚು ವೆಚ್ಚವಾಗುತ್ತಿದೆ. ಶೇಕಡ 86 ರಷ್ಟು ಪಾಲು ಚಲಾವಣೆಯಲ್ಲಿದ್ದ ನೋಟುಗಳನ್ನು ಹಿಂತೆಗೆದುಕೊಂಡ ನಂತರ ಕೇವಲ ಮೂರನೇ ಒಂದರಷ್ಟು ಭಾಗ ಮಾತ್ರ ಹೊಸ ನೋಟುಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ಬಿಡಲು ಸಾಧ್ಯವಾಗಿದೆ.
ನಗದು ರಹಿತ ವ್ಯವಸ್ಥೆ ಎಂಬುದು ಒಂದು ರೀತಿಯಲ್ಲಿ ಭಾರತದ ನಾಗರೀಕನಿಗೆ ಇರುವ ಸಂವಿಧಾನಬದ್ಧ ಖಾಸಾಗಿ ಬದುಕಿನ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ದೀಪಕ್ ಸಿಂಗ್ ಎಂಬ ತಜ್ಞರು ಅರ್ಥಪೂರ್ಣವಾದ ವಾದವನ್ನು ನಮ್ಮ ಮುಂದಿಟ್ಟಿದ್ದಾರೆ. ಎಲ್ಲವೂ ಡೆಬಿಟ್ ಕಾರ್ಡ್ ಅಥವಾ ಕ್ರಡಿಟ್ ಕಾರ್ಡ್ ಮೂಲಕ ನಡೆದರೆ, ವ್ಯಕ್ತಿಯೊಬ್ಬ ಏನನ್ನು ಖರೀದಿಸಿದ, ಏನನ್ನು ಕುಡಿದ, ಏನನ್ನು ತಿಂದ ಎಂಬುವುದರಿಂದ ಹಿಡಿದು, ಆತ ಎಲ್ಲಿ ಹೋಗಿದ್ದ? ಯಾವ ಹೋಟೆಲ್ ನಲ್ಲಿ ಮಲಗಿ ಎದ್ದು ಬಂದ ಎಲ್ಲವೂ ಜಾಹಿರಾಗುವುದರ ಮೂಲಕ ನಾಗರೀಕನಿಗೆ ಖಾಸಾಗಿ ಬದುಕು ಎಂಬುವುದು ಇರುವುದಿಲ್ಲ ಎಂದಿದ್ದಾರೆ. ಈ ಕಾರಣಕ್ಕಾಗಿ ಜರ್ಮನಿ ಸೇರಿದಂತೆ ಅನೇಕ ಮುಂದುವರಿದ ಯುರೋಪ್ ರಾಷ್ಟ್ರಗಳಲ್ಲಿ ನಾಗರೀಕರ ಗೌಪ್ಯತೆಯ ಬದುಕನ್ನು ಕಾಪಾಡುವ ನಿಟ್ಟಿನಲ್ಲಿ ಶೇಕಡ 98 ರಷ್ಟು ವ್ಯವಹಾರವು ನಗದು ರೂಪದಲ್ಲಿ ನಡೆಯುವದನ್ನು ನಮ್ಮ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಮೇರಿಕಾದಲ್ಲಿ ಶೇಕಡ 46 ರಿಂದ 48 ರಷ್ಟು ವ್ಯವಹಾರವು ನಗದು ರೂಪದಲ್ಲಿ ನಡೆಯುತ್ತಿದೆ ಎಂಬುದನ್ನು ದಾಖಲಿಸಿದ್ದಾರೆ. ಭಾರತದಂತಹ ಶೇಕಡ 60 ರಷ್ಟು ಅನಕ್ಷರಸ್ತರು ಇರುವ ದೇಶದಲ್ಲಿ ಮತ್ತು ಶೇಕಡ 98 ರಷ್ಟು ಮಂದಿ ಅಸಂಘಟಿತ ವಲಯದ ಕಾರ್ಮಿಕರು ದುಡಿದು ತಿನ್ನುವುದು ನಗದು ರೂಪಾಯಿಗಳ  ವ್ಯವಹಾರದಲ್ಲಿ ಎಂಬ ಕನಿಷ್ಟ ಜ್ಞಾನ ಈ ದೇಶದ ಪ್ರಧಾನಿಗೆ ಇಲ್ಲ ಎಂದರೆ, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಈ ದೇಶದ ಸುಮಾರು 120 ಕೋಟಿ ಜನಸಂಖ್ಯೆಯಲ್ಲಿ ಈವರೆಗೆ ಬ್ಯಾಂಕುಗಳಲ್ಲಿ ಇರುವ ಖಾತೆಗಳ ಸಂಖ್ಯೆ 47 ಕೋಟಿ ಮಾತ್ರ. ಇವುಗಳಲ್ಲಿ ಒಬ್ಬ ವ್ಯೆಕ್ತಿ ಎರಡು ಮೂರು ಉಳಿತಾಯ ಖಾತೆಗಳನ್ನು ವಿವಿಧ ಬ್ಯಾಂಕುಗಳಲ್ಲಿ ತೆರೆದಿರುವುದುಂಟು. ಅಂದರೆ ಸುಮಾರು 35 ರಿಂದ 40 ಕೋಟಿ ನಾಗರೀಕರು ಖಾತೆ ಹೊಂದಿರಬಹುದು. ಇಂತಹ ವಾತಾವರಣದಲ್ಲಿ ನಗದು ರಹಿರ ವ್ಯವಹಾರವೆಂಬುವುದು ಭಾರತದ ಸಂದರ್ಭದಲ್ಲಿ ಪ್ರಹಸನವಲ್ಲದೆ ಬೇರೇನೂ ಆಗಲಾರದು. ಇಲ್ಲಿನ ಬಡಜನತೆಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಮೂಲಭೂತ ಬೇಡಿಕೆಗಳಾದ ನೀರು, ವಸತಿ, ಶೌಚಾಲಯ, ಆರೋಗ್ಯ ವ್ಯವಸ್ಥೆ ಇವುಗಳಿಗೆ ಒತ್ತು ನೀಡುವುದನ್ನು ಬಿಟ್ಟು, ಕಾಳಧನವನ್ನು ಮಟ್ಟ ಹಾಕುತ್ತೀನಿ, ನಕಲಿ ನೋಟುಗಳ ಹಾವಳಿ ತಡೆಯುತ್ತೀನಿ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಭಾರತಕ್ಕೆ ನೆರೆಯ ಪಾಕಿಸ್ತಾನದ ಉಗ್ರ ಸಂಘಟನೆಗಳ ಮೂಲಕ ನಕಲಿ ನೋಟುಗಳು  ಹರಿದು ಬರುತ್ತಿರುವುದು ನಿಜ. ಇದರ ಬಗ್ಗೆ ಎರಡು ಮಾತಿಲ್ಲ. ನಕಲಿ  ನೋಟುಗಳು ಭಾರತಕ್ಕೆ ನೇಪಾಳದ ಮೂಲಕ ಹರಿದು ಬರುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಏಕೆಂದರೆ, ಭಾರತ ಮತ್ತು ನೇಪಾಳ ಗಡಿಭಾಗದಲ್ಲಿ ವೀಸಾ/ಪಾಸ್ ಪೋರ್ಟ್ ಗಳ ತಪಾಸಣೆಯಿಲ್ಲದೆ, ಭಾರತ ಮತ್ತು ನೇಪಾಳ ನಾಗರೀಕರು ಮುಕ್ತವಾಗಿ ಸಂಚರಿಸಬಹುದು. ಇದನ್ನು ಉಗ್ರಗಾಮಿ ಸಂಘಟನೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಜೊತೆಗೆ ಭಾರತ ಮತ್ತು ಬಂಗ್ಲಾ ಹಾಗು ಭಾರತ ಮತ್ತು ಮ್ಯಾನ್ಮರ್ ಗಡಿಭಾಗಳಲ್ಲಿ ಬಿಗಿಯಾದ ತಪಾಸಣೆ ಇಲ್ಲ. ಈ ದೇಶದ ಪ್ರಧಾನಿಗೆ ನಕಲಿ ನೋಟುಗಳ ಹಾವಳಿ ತಡೆಯುವ ಮನಸ್ಸಿದ್ದರೆ ಈ ಗಡಿ ಭಾಗಗಳನ್ನು ಬಿಗಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

ಯಾವುದೇ ಮುಂದಾಲೋಚನೆಯಿಲ್ಲದೆ, ತಜ್ಞರ ಸಲಹೆ ಪಡೆಯದೆ, ಜಾರಿಗೆ ತಂದ ನೋಟು ನಿಷೇಧ ಪ್ರಕ್ರಿಯೆಯಿಂದಾಗಿ ದೇಶದ ಆರ್ಥಿಕ ಚಟುವಟಿಕೆ ನಲುಗಿ ಹೋಗಿದೆ. ದಿನ ನಿತ್ಯ ದುಡಿದು ತಿನ್ನುವ ಮಂದಿ ಹೈರಾಣಾಗಿದ್ದಾರೆ. ನರೇಂದ್ರಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಲಕ್ಷಾಂತರ ರೇಷ್ಮೆ ಕೈಮಗ್ಗ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಪಂಜಾಬಿನ ಲೂಧಿಯಾನದಲ್ಲಿ ಹಾಗೂ ಕಾಶ್ಮೀರದಲ್ಲಿ ಉಣ್ಣೆ ಉಡುಪು ತಯಾರು ಮಾಡುವ ಗುಡಿ ಕೈಗಾರಿಕೆಗಳು ಮುಚ್ಚಿವೆ. ನಗರಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರಿಗೆ ಕೆಲಸವಿಲ್ಲದೆ ಹಳ್ಳಿಗಳಿಗೆ ಹಿಂತಿರುಗುತ್ತಿದ್ದಾರೆ.  ಡಿಸಂಬರ್ ತಿಂಗಳ 16-31 ರ ಸಂಚಿಕೆ “ ಡೌನ್ ಟು ಅರ್ಥ್” ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯಲ್ಲಿ ಭಾರತದ ಕೃಷಿ, ಸಣ್ಣ ಉದ್ಯಮಗಳು, ಮೀನುಗಾರಿಕೆ, ಹೀಗೆ ಹಲವು ರಂಗಗಳು ನಿಸ್ತೇಜನ ಗೊಂಡಿರುವ ಸಂಗತಿಗಳನ್ನು ಆರ್ಥಿಕ ತಜ್ಞರು ಅಂಕಿ ಅಂಶಗಳ ಸಮೇತ ನಮ್ಮ ಮುಂದಿರಿಸಿದ್ದಾರೆ. ಹೊಸ ನೋಟುಗಳು ಮಾತ್ರ ನೇರವಾಗಿ ಬ್ಯಾಂಕಿನಿಂದ ಉಳ್ಳವರ ಮನೆಯ ತಿಜೋರಿಗಳಿಗೆ ಜಮೆಯಾಗುತ್ತಿವೆ. ಪ್ರತಿ ನಿತ್ಯ ಹೊರ ಬರುತ್ತಿರುವ ಕರ್ಮಕಾಂಡಗಳು ನೋಟು ನಿಷೇಧ ಪ್ರಕ್ರಿಯೆಯ ವಿಫಲತೆಗೆ ನಮಗೆ ಸಾಕ್ಷಿಯನ್ನು ಒದಗಿಸುತ್ತಿವೆ. ಯಾವುದೇ ರಾಷ್ಟ್ರದ ಆರ್ಥಿಕ ಚಟುವಟಿಕೆ ಎನ್ನುವುದು ಒಂದು ಸರಪಳಿಯ ಕ್ರಿಯೆ ಇದ್ದಂತೆ. ಅಕಸ್ಮಾತ್ ಸರಪಳಿಯ ಒಂದು ಕೊಂಡಿ ಕಳಚಿಬಿದ್ದರೆ, ಇಡೀ ವ್ಯವಸ್ಥೆ ಕಳಚಿ ಬೀಳುವ ಸಾಧ್ಯತೆಯಿದೆ. ಭಾರತದ ಆರ್ಥಿಕತೆ ಇದೀಗ ಅಂತಹ ಅಪಾಯದ ಮಟ್ಟವನ್ನು ತಲುಪಿದೆ. ಈ ಕಾರಣಕ್ಕಾಗಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ನುಡಿದಿರುವ “ ನೋಟು ನಿಷೇಧ ವಿಷಯದಲ್ಲಿ  ಯಾರೊಬ್ಬರೂ ಆರ್ಥಿಕ ತಜ್ಞರಾಗುವ ಅವಶ್ಯಕತೆಯಿಲ್ಲ. ಆದರೆ, ಕನಿಷ್ಟ ದೇಶದ ಆರ್ಥಿಕ ಚಟುವಟಿಕೆಗಳ ಕುರಿತು ಪ್ರಾಥಮಿಕ ಜ್ಞಾನವಿರಬೇಕು” ಎಂದು ಹೇಳಿರುವ ಮಾತು ಪ್ರಧಾನಿ ನರೇಂದ್ರಮೋದಿಗೆ ತಾಕುವಂತಿದೆ.
( ಕರಾವಳಿ ಮುಂಜಾವು ದಿನ ಪತ್ರಿಕೆಯ "ಜಗದಗಲ" ಅಂಕಣಕ್ಕಾಗಿ ಬರೆದ ಲೇಖನ)