ಈ ದೇಶದಲ್ಲಿ ಏನೇ ಕೊರತೆ ಇದ್ದರೂ, ಚಳುವಳಿ ಮತ್ತು ಬಂದ್ ಗಳಿಗೆ ಮಾತ್ರ ಕೊರತೆಯಿಲ್ಲ. ಬದಲಾಗುತ್ತಿರುವ ಕಾಲಮಾನಕ್ಕೆ
ತಕ್ಕಂತೆ ನಮ್ಮ ಹೋರಾಟಗಳೂ ಬದಲಾಗಬೇಕು ಎಂಬ ಕನಿಷ್ಠ ವಿವೇಕವು ಯಾರಿಗೂ ಇಲ್ಲವಾದ ಕಾರಣ ದಿನ ನಿತ್ಯ
ದುಡಿದು ತಿನ್ನುವ ಬಡವರ ಅನ್ನ ಕಸಿಯುವ ಇಂತಹ ಬಂದ್ ಗಳ
ಕುರಿತಂತೆ ಮರುಚಿಂತನೆ ಈಗ ಅಗತ್ಯವಿದೆ. ತಪ್ಪು ಮಾಡುವ ಸರ್ಕಾರಗಳು ಅಥವಾ ಜನವಿರೋಧಿ ಕಾನೂನು
ಇತ್ಯಾದಿಗಳಿಗೆ ಪ್ರತಿಭಟನೆ ಸೂಚಿಸಲು ಇಲ್ಲವೆ ನಮ್ಮ ಬೇಡಿಕೆ ಪೂರೈಸಿಕೊಳ್ಳಲು ಪರ್ಯಾಯ ಮಾರ್ಗಗಳಿವೆ
ಎಂಬ ಜ್ಞಾನವು ಇಂದು ಎಲ್ಲಾ ರಾಜಕೀಯ ಪಕ್ಷಗಳಿಂದ ಮತ್ತು ಸಂಘ ಸಂಸ್ಥೆಗಳಿಂದ ದೂರವಾಗಿದೆ.
ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡುವುದು, ಸರ್ಕಾರಿ ಬಸ್ ಗಳಿಗೆ ಕಲ್ಲು
ತೂರುವುದು, ಇಲ್ಲವೆ, ಬೆಂಕಿ ಹಚ್ಚಿ ಸುಡುವುದು, ರಸ್ತೆಯಲ್ಲಿ ಹಳೆಯ ಟೈರ್ ಗಳಿಗೆ ಬೆಂಕಿ ಹಚ್ಚಿ ವಿಕೃತ
ಆನಂದ ಪಡುವುದು, ಇವುಗಳು ಇಂದಿನ ಬಂದ್ ಗಳ ಮಾಮೂಲಿ ಲಕ್ಷಣಗಳಾಗಿವೆ. ಇದರಿಂದ ಯಾರಿಗೆ ಉಪಯೋಗವಾಯಿತು?
ಅಥವಾಯಾರಿಗೆ ನಷ್ಟವಾಯಿತು? ಈ ಕುರಿತು ಯೋಚಿಸುವ ವ್ಯವಧಾನ ಯಾರಿಗೂ ಇಲ್ಲವಾಗಿದೆ.
ಪಶ್ಚಿಮ ಬಂಗಾಳದ ಮುಕುಟ ಮಣಿಯಂತಿರುವ ಹಾಗೂ ಜಾಗತಿಕ ಮಟ್ಟದಲ್ಲಿ ಅತ್ಯಂತ
ಶ್ರೇಷ್ಠ ಮಟ್ಟದ ಚಹಾ ಬೆಳೆಯುತ್ತಿರುವ ಡಾರ್ಜಿಲಿಂಗ್ ಗಿರಿಧಾಮದಲ್ಲಿ ಕಳೆದ ಜೂನ್ ತಿಂಗಳಿನಿಂದ ಪೂರಾ
ಎಲ್ಲಾ ಚಟುವಟಿಕೆಗಳು ಸ್ಥಬ್ದವಾಗಿವೆ. ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿದ್ದ ಜನಸಾಮಾನ್ಯರು ಹಾಗೂ
ಇತ್ತೀಚೆಗೆ ತಾನೆ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಂಡಿದ್ದ ಚಹಾ ತೋಟಗಳಲ್ಲಿ ದುಡಿಯುದ್ದ ಲಕ್ಷಾಂತರ
ಕಾರ್ಮಿಕರು ಕಳೆದ ಒಂದು ತಿಂಗಳಿಂದ ದುಡಿಯಲು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ.ಚಹಾ ಕಾರ್ಮಿಕರಲ್ಲಿ
ಶೇಕಡ ಅರವತ್ತರಷ್ಟು ಮಹಿಳಾ ಕಾರ್ಮಿಕರಿದ್ದು ಈ ಕುಟುಂಬಗಳು ಉಪವಾಸದಲ್ಲಿ ನರಳುವಂತಾಗಿವೆ.
ಪಶ್ಚಿಮ ಬಂಗಾಳದ ಉತ್ತರದ ತುದಿಯಲ್ಲಿರುವ ಡಾರ್ಜಿಲಿಂಗ್ ಮತ್ತು ಕಾಲಿಪಾಂಗ್
ಗಿರಿ ಶ್ರೇಣಿಗಳಲ್ಲಿ 1816ರಿಂದ ನೇಪಾಳಿ ಭಾಷೆಯನ್ನು ಮಾತೃಭಾಷೆಯನ್ನಾಗಿ ಆಡುವ ಸುಮಾರು ಇಪ್ಪತ್ತು
ಲಕ್ಷ ಜನರು ನೇಪಾಳ ಮೂಲದ ಗೂರ್ಖಾ ಜನಾಂಗದವರಾಗಿದ್ದಾರೆ. ಭಾರತದಲ್ಲಿ ಎರಡು ಕೋಟಿ ಜನರು ನೇಪಾಳಿ ಮೂಲದ
ಜನರು ವಾಸಿಸುವ ಕಾರಣ, ಕೇಂದ್ರ ಸರ್ಕಾರ ನೇಪಾಳಿ ಭಾಷೆಯನ್ನು ಭಾರತದ ಅಧಿಕೃತ ಪ್ರಾದೇಶಿಕ ಭಾಷೆಗಳಲ್ಲಿ
ಒಂದು ಎಂದು ಮಾನ್ಯತೆ ಮಾಡಿದೆ. ಹಾಗಾಗಿ ಇಲ್ಲಿನ ಜನತೆ ಆಡಳಿತಾತ್ಮಕವಾಗಿ ಪಶ್ಚಿಮ ಬಂಗಾಳಕ್ಕೆ ಸೇರಿದ್ದರೂ
ಸಹ ಬಂಗಾಳಿ ಭಾಷೆ ಮತ್ತು ಸಂಸ್ಕೃತಿಯ ಕುರಿತಂತೆ ಯಾವುದೇ ಪ್ರೀತಿ ಅಥವಾ ಗೌರವ ಭಾವನೆ ಹೊಂದಿಲ್ಲ.
1987 ರಲ್ಲಿ ಪ್ರತೇಖ ಗೂರ್ಖಾ ಲ್ಯಾಂಡ್ ರಾಜ್ಯಕ್ಕಾಗಿ
ಎಂಬ ನಾಯಕ ನೇತೃ್ತ್ವದಲ್ಲಿ ಅಧಿಕೃತವಾಗಿ ಹೋರಾಟ ಆರಂಭವಾಗಿ ಆಗಾಗ್ಗೆ ಮೌನವಾಗಿದ್ದ ಅಗ್ನಿ
ಪರ್ವತ ಸ್ಪೋಟಿಸುವಂತೆ ಭುಗಿಲೇಳುತ್ತಿದೆ.
ಈ ವರ್ಷದ ಶೈಕ್ಷಣಿಕ ಅವಧಿಯಲ್ಲಿ ಪಶ್ಚಿಮ ಬಂಗಾಳ
ಸರ್ಕಾರವು ಪ್ರಾಥಮಿಕ ಶಿಕ್ಷಣದಲ್ಲಿ ಬಂಗಾಳಿ ಭಾಷೆಯನ್ನು ಕಡ್ಡಾಯ ಮಾಡಿರುವುದು ಸ್ಥಳಿಯರನ್ನು ಕೆರಳಿಸಿದೆ.
ಮರೆತು ಹೋಗಿದ್ದ ಗೂರ್ಖಾ ಲ್ಯಾಂಡ್ ಬೇಡಿಕೆಯು ಮತ್ತೇ ಎದ್ದು ನಿಂತಿದೆ. ಇದರ ಜೊತೆಗೆ ರಾಜಕೀಯ ಬೇಳೆ
ಬೇಯಿಸಿಕೊಳ್ಳುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷವು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಬೇಡಿಕೆಗೆ
ತನ್ನ ಬೆಂಬಲವನ್ನು ಸೂಚಿಸಿತ್ತು. ಆದರೆ, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತನ್ನ ಧೋರಣೆಯನ್ನು
ಬದಲಾಯಿಸಿಕೊಂಡು ಮೌನಕ್ಕೆ ಶರಣಾಗಿದೆ.
ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ
ಬಂಗಾಳಿ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯ ಮಾಡಿರುವುದು ಗೂರ್ಖಾ ಲ್ಯಾಂಡ್ ಪ್ರತ್ಯೇಕ ರಾಜ್ಯಕ್ಕೆ
ಮತ್ತ ಬೇಡಿಕೆ ಆರಂಭವಾಗಿದೆ. 1980 ರ ದಶಕದಲ್ಲಿ ಸುಭಾಷ್ ಘೀಸಿಂಗ್ ಎಂಬಾತನ ನಾಯಕತ್ವದಲ್ಲಿ ಆರಂಭವಾದ
ಈ ಹೋರಾಟದಲ್ಲಿ 1980 ರಲ್ಲಿ ನಡೆದ ಭೀಕರ ಹಿಂಸಾಚಾರದಲ್ಲಿ 1200 ಮಂದಿ ಅಸು ನೀಗಿದ್ದರು. ನಂತರ ಪಶ್ಚಿಮ
ಬಂಗಾಳ ಸರ್ಕಾರವು “ ಗೂರ್ಖಾ ಲ್ಯಾಂಡ್ ಗಡಿಪ್ರದೇಶಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರವನ್ನು ರಚನೆ ಮಾಡಿತು.
2007 ರ ಭೀಮಲ್ ಗುರಂಗ್ ಎಂಬಾತನ ನೇತೃತ್ವದಲ್ಲಿ
ಯಾವುದೇ ಕಂದಾಯ, ವಿದ್ಯುತ್ ಬಾಕಿ ಪಾವತಿಸದೆ ಹೋರಾಟ ಮುಂದುವರಿದ್ದು, ಇತ್ತೀಚೆಗೆ ಭುಗಿಲೆದ್ದಿದೆ.
ಡಾರ್ಜಿಲಿಂಗ್ ಪ್ರಾಂತ್ಯದಲ್ಲಿ ಬ್ರಿಟಿಷರ ಕಾಲದಲ್ಲಿ ಆರಂಭವಾದ ನೂರಾರು ಚಹಾ ತೋಟಗಳಿದ್ದು, ಅವುಗಳಲ್ಲಿ
87 ಚಹಾ ತೋಟಗಳು ಸರ್ಕಾರದ ಸ್ವಾಮ್ಯದಲ್ಲಿವೆ. ಚಹಾತೋಟದ ಕಾರ್ಮಿಕರಿಗೆ ವೇತನದ ಜೊತೆಗೆ ವಸತಿ ಮತ್ತು
ವೈದ್ಯಕೀಯ ನೆರವನ್ನು ಕಡ್ಡಾಯ ಮಾಡಲಾಗಿದೆ. ಕಳೆದ ಒಂದು ದಶಕದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ
ಚಹಾ ಬೆಲೆ ಕುಸಿದಿದ್ದ ಕಾರಣ ಏಳೆಂಟು ವರ್ಷದಿಂದ ಚಹಾ ತೋಟಗಳು ಪಾಳು ಬಿದ್ದಿದ್ದವು. ನೂರಾರು ಕಾರ್ಮಿಕರು
ಹಸಿವಿನಿಂದ ಸತ್ತ ವರದಿಗಳು ದಿನ ನಿತ್ಯದ ಘಟನೆ ಎಂಬಂತೆ ಸುದ್ಧಿಯಾಗುತ್ತಿದ್ದವು.
ಕಳೆದ ವರ್ಷದಿಂದ ಚಹಾ ಉದ್ಯಮ ಚೇತರಿಸಿಕೊಂಡ
ಕಾರಣ ಬಹುತೇಕ ಎಲ್ಲಾ ಚಹಾ ತೋಟಗಳಲ್ಲಿ ಕಾರ್ಮಿಕರಿಗೆ ದುಡಿಯಲು ಕೆಲಸ ಸಿಕ್ಕಂತಾಗಿ ನೆಮ್ಮದಿಯ ಉಸಿರು
ಬಿಟ್ಟಿದ್ದರು. ಪ್ರತಿ ವರ್ಷ ಮೇ ತಿಂಗಳಿಂದ ಜೂನ್ ತಿಂಗಳ ಅಂತ್ಯದ ಅವಧಿಯಲ್ಲಿ ಚಹಾ ಗಿಡಗಳಲ್ಲಿ ಅರಳುವ
ಎರಡು ಚಿಗುರು ಎಲೆಗಳು ಮತ್ತು ಗಿಡದ ತೊಟ್ಟು ಇವುಗಳನ್ನು ಕೀಳುವುದು ವಾಡಿಕೆ. ಏಕೆಂದರೆ, ಇವುಗಳಲ್ಲಿ
ಸ್ವಾದಿಷ್ಟಕರವಾದ ಮತ್ತು ಸುವಾಸನೆಯ ಗುಣವಿದೆ. ಈ ಮೊದಲ ಫಸಲು ಸಾಮಾನ್ಯವಾಗಿ ಎಲ್ಲಾ ಚಹಾ ತೋಟಗಳಿಗೆ
ಪ್ರಮುಖ ಾದಾಯದ ಮೂಲವಾಗಿದೆ. ಆದರೆ, ಈ ವರ್ಷ ಡಾರ್ಜಿಲಿಂಗ್ ನ ಮುಷ್ಕರದಿಂದಾಗಿ ಚಹಾ ಉದ್ಯಮ ಮತ್ತು
ಪ್ರವಾಸೋದ್ಯಮ ಎರಡೂ ಕ್ಷೇತ್ರಗಳು ನೆಲ ಕಚ್ಚಿವೆ. ಕಾಲಿಪಾಂಗ್ ಮತ್ತು ಕುರೆಸಾಂಗ್ ಪ್ರಾತ್ಯದಲ್ಲಿ
ಕಳೆದ ವರ್ಷದಿಂದ ಹೋಂ ಸ್ಟೇ ಪ್ರವಾಸೋದ್ಯಮ ತಲೆ ಎತ್ತುತ್ತಿತ್ತು. ಅದಕ್ಕೆ ಈ ವರ್ಷ ಬಲವಾದ ಪೆಟ್ಟು
ಬಿದ್ದಿದೆ. ಭಾರತದ ಪ್ರವಾಸೋದ್ಯಮದಲ್ಲಿ ಐದನೆಯ ಸ್ಥಾನ ಪಡೆದಿದ್ದ ಪಶ್ಚಿಮ ಬಂಗಾಳ ಈ ವರ್ಷ ಎಂಟನೆಯ
ಸ್ಥಾನಕ್ಕೆ ಕುಸಿದಿದೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಮುಷ್ಕರ ಹಾಗೂ ಬಂದ್ ನಿಂದಾಗಿ ಡಾರ್ಜಿಲಿಂಗ್
ನ ಚಹಾ ಉದ್ಯಮಕ್ಕೆ ಒಟ್ಟು ನೂರಾ ಐವತ್ತು ಕೋಟಿ ರೂಪಾಯಿನಷ್ಟು ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಪಶ್ಚಿಮ ಬಂಗಾಳದ ಆಡಳಿತಾತ್ಮಕ ದೃಷ್ಟಿಯಿಂದ
ಈ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವುದು ಒಳಿತು. ಸಧ್ಯದ ಭಾರತದಲ್ಲಿ ರಾಜಸ್ಥಾನ ಮತ್ತು
ಉತ್ತರಪ್ರದೇಶ ರಾಜ್ಯಗಳನ್ನೂ ಸಹ ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸಬೇಕಿದೆ. ರಾಜಕೀಯ ಪಕ್ಷಗಳ ಮತ ಬ್ಯಾಂಕ್
ರಾಜಕಾರಣದಿಂದ ಇಂತಹ ಸಮಸ್ಯೆಗಳು ಸದಾ ಜೀವಂತವಾಗಿವೆ. ಅಂತಿಮವಾಗಿ ಇವುಗಳಿಂದ ನರಳುವವರು ಪ್ರತಿ ದಿನ
ದುಡಿದು ತಿನ್ನುವ ಕೂಲಿಕಾರ್ಮಿಕರು ಮತ್ತು ಬಡವರು ಮಾತ್ರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ