ಅಕ್ಟೋಬರ್
ಎರಡರ ಗಾಂಧಿ ಜಯಂತಿ ಬಂತೆಂದರೆ
ಸಾಕು ಗಾಂಧಿ ನೆನಪಾಗಿ ನಮ್ಮ ಆತ್ಮಸಾಕ್ಷಿಯನ್ನು ಕಲಕುತ್ತಾರೆ. ಇಪ್ಪತ್ತು
ಮತ್ತು ಇಪ್ಪತ್ತೊಂದನೆಯ ಶತಮಾನದ ಜಗತ್ತಿನ ಮನುಕುಲವನ್ನು
ಇನ್ನಿಲ್ಲದಂತೆ ಪ್ರಭಾವಿಸಿದ ಹಾಗೂ ಪ್ರಭಾವಿಸುತ್ತಿರುವ
ದಾರ್ಶನಿಕರಲ್ಲಿ ಮಹಾತ್ಮ ಗಾಂಧಿ ಕೂಡ ಒಬ್ಬರು.
ನನ್ನ ತಲೆಮಾರಿನ ಬಹುತೇಕ ಮಂದಿ ಪಿ.ಲಂಕೇಶ್ ರವರಿಗೆ ಋಣಿಯಾಗಿರಬೇಕು.
ಏಕೆಂದರೆ, ಮೂರು ದಶಕಗಳ ಹಿಂದೆ
ತಮ್ಮ ಪತ್ರಿಕೆಯಲ್ಲಿ ಮಹಾತ್ಮನ ಕುರಿತು ತಮ್ಮ
ಟೀಕೆ ಟಿಪ್ಪಣಿಗಳಲ್ಲಿ ದಾಖಲಿಸುತ್ತಾ ಹೇಗೆ ಗಾಂಧಿ ಚಿಂತನೆಗಳನ್ನು ಗ್ರಹಿಸಬೇಕೆಂದು
ಕಲಿಸಿಕೊಟ್ಟರು. ಜೊತೆಗೆ ಬೆಂಗಳೂರು ವಿ.ವಿ.ಯ ಪತ್ರಿಕೋದ್ಯಮ
ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಬಿ.ಎ.
ಶ್ರೀಧರ ಅವರ ಮೂಲಕ ಗಾಂಧಿ
ಚಿಂತನೆಗಳ ಕುರಿತು ಸರಣಿ ಲೇಖನಗಳನ್ನು
ಬರೆಸಿ ನಮ್ಮೆಲ್ಲರನ್ನು ಗಾಂಧೀಯ ಚಿಂತನೆಗೆ ಒಳಪಡಿಸಿದರು.
“ಬಾಪು ಚಿಂತನೆ” ಎಂಬ ಹೆಸರಿನಲ್ಲಿ
ಪ್ರಕಟವಾಗಿರುವ ಆ ಕೃತಿಯು ಇಂದಿಗೂ
ಸಹ ಕನ್ನಡದಲ್ಲಿ ಗಾಂಧೀಜಿ ಕುರಿತಂತೆ ಬಂದಿರುವ
ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ. ಹಾಗಾಗಿ ವರ್ತಮಾನದ ಬಿಕ್ಕಟ್ಟಿನ
ಈ ದಿನಗಳಲ್ಲಿ ಹೆಜ್ಜೆ
ಹೆಜ್ಜೆಗೂ ಗಾಂಧೀಜಿ ಮತ್ತು ಅವರ
ಚಿಂತನೆಗಳು ನಮಗೆ ಕಾಡತೊಡಗಿವೆ.
ದುರಾದೃಷ್ಟದ
ಸಂಗತಿಯೆಂದರೆ, ಈ ದೇಶದಲ್ಲಿ ಗಾಂಧೀಜಿಯಷ್ಟು
ಟೀಕೆಗೆ, ಅವಹೇಳನಕ್ಕೆ ಒಳಗಾದವರು ಮತ್ತೊಬ್ಬರಿಲ್ಲ. ಹಲವು ಮಂದಿಗೆ ಗಾಂಧೀಜಿಯವರನ್ನು
ಟೀಕಿಸುವುದು ಒಂದು ವ್ಯಸನವಾಗಿದೆ. ಮಹಾತ್ಮನನ್ನು
ವಿಮರ್ಶೆಯ ಒರೆಗಲ್ಲಿಗೆ ಹಚ್ಚುವುದರ ಬದಲಾಗಿ; ಮನಸ್ಸಿಗೆ ತೋಚಿದಂತೆ
ಮಾತನಾಡುತ್ತಿರುವವರು ತಮ್ಮೊಳಗಿನ ಖಾಲಿತನವನ್ನು ಅನಾವರಣಗೊಳಿಸುತ್ತಿದ್ದಾರೆ. ಅಂಬೇಡ್ಕರ್ವಾದಿಯಾಗಬೇಕೆಂದರೆ, ಗಾಂಧೀಜಿಯನ್ನು ವಿರೋಧಿಸಬೇಕೆಂಬ ಅಪಕ್ವ ಪರಿಕಲ್ಪನೆಯೊಂದು ಇಂದಿಗೂ
ಈ ದೇಶದಲ್ಲಿ ಜಾರಿಯಲ್ಲಿದೆ.
ಇದರ ಜೊತೆಗೆ ಗಾಂಧಿಯನ್ನು ಕೊಂದ
ಪಾತಕಿ ನಾಥೂರಾಂ ಗೂಡ್ಸೆಯನ್ನು ಹುತಾತ್ಮನ
ಪಟ್ಟಕ್ಕೇರಿಸಿ, ಅವನ ಹೆಸರಿನಲ್ಲಿ ದೇಗುಲ
ನಿರ್ಮಾಣ ಮಾಡಲು ಹೊರಟ ಅವಿವೇಕಿಗಳ
ಸಂಖ್ಯೆ ಕೂಡ ಅಪಾರವಾಗಿದೆ. ಇಂತಹ
ನೋವಿನ ಸಂದರ್ಭದಲ್ಲಿಯೂ ಕೂಡ ಪಾಶ್ಚಿಮಾತ್ಯ ಜಗತ್ತು
ಮಹಾತ್ಮನನ್ನು ಗ್ರಹಿಸಿದ ಪರಿ ಮತ್ತು ಅವರ
ಚಿಂತನೆಗಳನ್ನು ವ್ಯಾಖ್ಯಾನಿಸುತ್ತಿರುವ ರೀತಿ ನಿಜಕ್ಕೂ ಬೆರಗು
ಮೂಡಿಸುತ್ತಿದೆ.
ಆಸ್ಟ್ರೇಲಿಯಾದ
ಸಮಾಜ ವಿಜ್ಞಾನಿ ಹಾಗೂ ಅಲ್ಲಿನ ಲ
ಟ್ರೋಬ್ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರಾಗಿರುವ
ಥಾಮಸ್ ವೆಬರ್ ಎಂಬುವವರು ಕಳೆದ
ನಲವತ್ತು ವರ್ಷಗಳಿಂದ ಗಾಂಧೀಜಿಯವರ ಬದುಕು, ಹೋರಾಟ ಮತ್ತು
ಚಿಂತನೆಗಳಿಗೆ ತಮ್ಮ ಬದುಕನ್ನು ಮೀಸಲಾಗಿಟ್ಟು,
ಈವರೆಗೆ ಎಂಟು ಕೃತಿಗಳನ್ನು ರಚಿಸಿದ್ದಾರೆ.
ಅವುಗಳಲ್ಲಿ ಉಪ್ಪಿನ ಸತ್ಯಾಗ್ರಹ ಕುರಿತಂತೆ
ರಚಿಸಿರುವ “ The Shanthi sena; Phiosophy, History and Action; on Salt March ” ಮತ್ತು
“ Gandhi As Discple
and Mentor” ಹಾಗೂ “ Gandhi
At First
Sight” ಇವುಗಳು ಮಹತ್ವದ
ಕೃತಿಗಳಾಗಿವೆ. ಇವುಗಳ ಜೊತೆಗೆ ಅಮೇರಿಕಾದ
ಪತ್ರಕರ್ತ ಲೂಯಿ ಫಿಶರ್ ಬರೆದ
“ಮಹಾತ್ಮ ಗಾಂಧಿಯವರ ಆತ್ಮ ಕಥನ, ಹಾಗೂ
ಇಂಗ್ಲೇಂಡ್ ಮೂಲದ ಕವಿ, ನಾಟಕಕಾರ
ರೋನಾಲ್ಡ್ ಡಂಕನ್ ಸಂಗ್ರಹಿಸಿದ “ಸೆಲೆಕ್ಟಡ್
ರೈಟಿಂಗ್ಸ್ ಆಫ್ ಮಹಾತ್ಮ” ಎಂಬ
ಈ ಎರಡು ಕೃತಿಗಳು
ಮಹಾತ್ಮನ ಬದ್ಧತೆ, ಪ್ರಾಮಾಣಿಕತೆ, ಸಂತನಂತಹ
ವ್ಯಕ್ತಿತ್ವ ಹಾಗೂ ಅವರ ಚಿಂತನೆಗಳನ್ನು
ಇವೊತ್ತಿಗೂ ಜಗತ್ತಿಗೆ ಹರಡುತ್ತಿವೆ. ಇನ್ನು, ಇಂಗ್ಲೆಂಡಿನ ಸಿನಿಮಾ
ನಿರ್ದೇಶಕ ರಿಚರ್ಡ್ ಅಟನ್ ಬರೊ
ಇವರು ಸತತ ಹದಿನೇಳು ವರ್ಷಗಳ
ಕಾಲ ಧ್ಯಾನಿಸಿ, ಲೂಯಿ ಫಿಶರ್ ಬರೆದ
ಆತ್ಮ ಕಥೆಯನ್ನಾಧರಿಸಿದ “ಗಾಂಧಿ” ಎಂಬ ಸಿನಿಮಾ
ಇಂದಿಗೂ ಸಹ ಸಿನಿಮಾ ಜಗತ್ತಿನ
ಅತ್ಯುತ್ತಮ ದೃಶ್ಯ ಕಾವ್ಯವಾಗಿದೆ.
ಈ
ಲೋಕ ಕಂಡ ಅಪರೂಪದ, ಪಾರದರ್ಶಕ
ವ್ಯಕ್ತಿತ್ವದ ಮಹಾತ್ಮನನ್ನು ಪಾಶ್ಚಿಮಾತ್ಯ
ಜಗತ್ತು ಅರ್ಥಪೂರ್ಣವಾಗಿ ವ್ಯಾಖ್ಯಾನಿಸುತ್ತಾ ಈ ಜಗತ್ತಿಗೆ ಪರಿಚಯಿಸುತ್ತಿರುವಾಗ,
ನಾವಿನ್ನೂ ಗಾಂಧಿ ವ್ಯಕ್ತಿತ್ವ ಕುರಿತು
ಕೂದಲು ಸೀಳುವ ಕ್ರಿಯೆಯಲ್ಲಿ ತೊಡಗಿಕೊಂಡಿದ್ದೇವೆ.
ಜಾಗತಿಕ ಮಟ್ಟದ ವಿದ್ವಾಂಸರು, ಚಿಂತಕರಿರಲಿ,
ಭಾರತದ ಕೊನೆಯ ಗೌರ್ನರ್ ಜನರಲ್
ಲಾರ್ಡ್ ಮೌಂಟ್ ಬ್ಯಾಟನ್ ಅವರ
ಆಪ್ತ ಸಹಾಯಕ ಹಾಗೂ ಅಡುಗೆ
ಭಟ್ಟ ಸ್ಮಿತ್ ಚಾಲ್ರ್ಸ್ ಬರೆದಿರುವ
“ ಫಿಪ್ಟಿ ಇಯರ್ಸ್ ವಿತ್ ಮೌಂಟ್ಬ್ಯಾಟನ್; ಯೂನಿಕ್ ಮೆಮೋರಿಸ್” ಎಂಬ
ಕೃತಿಯಲ್ಲಿ ಗಾಂಧೀಜಿ ಕುರಿತಂತೆ ಬರೆದಿರುವ
ಒಂದು ಘಟನೆ ನಮ್ಮೆಲ್ಲರ ಕಣ್ಣು
ತೆರೆಸುವಂತಿದೆ.
ಸ್ಮಿತ್
ಚಾಲ್ರ್ಸ್ ತನ್ನ ಕೃತಿಯಲ್ಲಿ ದಾಖಲಿಸಿರುವ
ಮಾತುಗಳಿವು. “ ನಮ್ಮ ಇಂಗ್ಲೆಂಡಿನ ಪ್ರಧಾನಿ
ಚರ್ಚಿಲ್ ಅವರಿಂದ “ತುಂಡು ಉಡುಗೆಯ
ಫಕೀರ” ಎಂದು ಬಣ್ಣಿಸಲ್ಪಟ್ಟ ಭಾರತದ
ನಾಯಕ ಮಹಾತ್ಮ ಗಾಂಧೀಯವರು ದೆಹಲಿಯಲ್ಲಿದ್ದ
ನಮ್ಮ ಗೌರ್ನರ್ ಜನರಲ್ ಲಾರ್ಡ್
ಮೌಂಟ್ ಬ್ಯಾಟನ್ ಅವರ ಅಧಿಕೃತ
ನಿವಾಸಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು.
ಆ ದಿನ ಬೆಳಿಗ್ಗೆಯಿಂದಲೇ
ಗೌರ್ನರ್ ನಿವಾಸದಲ್ಲಿ ಸಡಗರದ ವಾತಾವರಣ ಸೃಷ್ಟಿಯಾಯಿತು.
ನಿವಾಸದಲ್ಲಿದ್ದ ಭಾರತೀಯ ಸೇವಕರಿಗೆ ಎಚ್ಚರಿಸಿ,
ಮಹಾತ್ಮನನ್ನು ಹೇಗೆ ಸ್ವಾಗತಿಸಬೇಕು ಮತ್ತು
ಹೇಗೆ ಸತ್ಕರಿಸಬೇಕು ಎಂಬುದರ ಕುರಿತು ಮಾಹಿತಿ
ನೀಡಿದೆ. ಮಹಾತ್ಮನಿಗಾಗಿ ವಿಶೇಷವಾದ ಕೇಕ್ ಹಾಗೂ ಸ್ಯಾಂಡ್
ವಿಚ್ ಗಳನ್ನು ಹಾಗೂ ಅತ್ಯತ್ತಮ
ರುಚಿಯುಳ್ಳ ಚಹಾ ಇವೆಲ್ಲವನ್ನೂ ನಾನೇ
ಖುದ್ದು ನಿಂತು ತಯಾರಿಸಿದೆ. ಮೌಂಟ್
ಬ್ಯಾಟನ್ ದಂಪತಿಗಳು ಮತ್ತು ಮಹಾತ್ಮ ಗಾಂಧೀಜಿಯವರ
ಭೇಟಿಗಾಗಿ ನಿವಾಸದ ಮುಂದಿನ ಹುಲ್ಲುಗಾವಲಿನಲ್ಲಿ
ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಆಗಮಿಸಿದ ಗಾಂಧೀಜಿಯವರು
ಸುಮಾರು ಎರಡು ತಾಸುಗಳು ವಿವಿಧ
ವಿಷಯಗಳ ಕುರಿತು ಮಾತನಾಡಿದರು. ನಂತರ
ಅವರಿಗೆ ಕೇಕ್, ಸ್ಯಾಂಡ್ ವಿಚ್
ಹಾಗೂ ಚಹಾ ನೀಡಲಾಯಿತು. ಆದರೆ,
ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ ಅವರು, ತಮ್ಮೊಡನೆ ತಂದಿದ್ದ
ಮೇಕೆ ಹಾಲಿನ ಮೊಸರನ್ನು ಸೇವಿಸಿದರು.
ಜೊತೆಗೆ ಮೊಸರಿನ ರುಚಿ ನೋಡುವಂತೆ
ಮೌಂಟ್ ಬ್ಯಾಟನ್ ಅವರಿಗೂ ನೀಡಿದರು.
ಗೌರ್ನರ್ ಜನರಲ್ರವರು ಗಾಂಧೀಜಿ ನೀಡಿದ ಮೊಸರು
ಸೇವಿಸಿದಾಗ ನಮಗೆಲ್ಲಾ ಆಶ್ಚರ್ಯವಾಯಿತು. ಏಕೆಂದರೆ, ತಮ್ಮ ಅಧಿಕೃತ ನಿವಾಸದಲ್ಲಿ
ತಯಾರಿಸಿದ ಆಹಾರವನ್ನು ಹೊರತು ಪಡಿಸಿ, ಅವರು
ನೇರವಾಗಿ ಆಹಾರ ಸ್ವೀಕರಿಸುವಂತಿರಲಿಲ್ಲ. ಅದನ್ನು ಪರೀಕ್ಷಗೆ
ಒಳಪಡಿಸುವ ನಿಯಮ ಜಾರಿಯಲ್ಲಿತ್ತು.
ಗಾಂಧೀಜಿಯವರನ್ನು
ಬೀಳ್ಕೊಟ್ಟ ನಂತರ ನಿವಾಸದ
ಕೊಠಡಿಗೆ ಸಾಹೇಬರು, ನಮ್ಮೆಲ್ಲರ ಆಶ್ಚರ್ಯವನ್ನು ತಣಿಸುವಂತೆ ನನ್ನನ್ನು ಉದ್ದೇಶಿಸಿ, “ ಚಾಲ್ರ್ಸ್; ನಿನಗೆ ಆಶ್ಚರ್ಯವಾಗಿರಬೇಕು, ಈ
ಮನುಷ್ಯ ನನ್ನ ಜೀವನದಲ್ಲಿ ನಾನು
ನೋಡಿದ ಮತ್ತು ಭೇಟಿ ಮಾಡಿದ
ವ್ಯಕ್ತಿಗಳಲ್ಲಿ ಅತ್ಯಂತ ವಿಶೇಷವಾದ ಗುಣ
ಹಾಗೂ ವ್ಯಕ್ತಿತ್ವವುಳ್ಳ
ವ್ಯಕ್ತಿಯಾಗಿದ್ದಾರೆ. ಜಗತ್ತಿನಲ್ಲಿ ಈ ಮಹಾತ್ಮನೊಂದಿಗೆ ಇನ್ನೊಬ್ಬ
ವ್ಯಕ್ತಿಯನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ”
ಎಂದು ನುಡಿದರು. ಒಬ್ಬ ಬ್ರಿಟೀಷ್ ಸೇವಕ
ದಾಖಲಿಸಿರುವ ಈ ಘಟನೆಯು ಗಾಂಧೀಜಿಯವರ
ಮಾನವೀಯ ಮುಖಗಳ ವಿವಿಧ ನೆಲೆಗಳನ್ನು
ನಮ್ಮೆದುರು ಅನಾವರಣಗೊಳಿಸುತ್ತದೆ. ಬ್ರಿಟೀಷ್
ಸಾಮ್ರಾಜ್ಯದ ವಿರುದ್ಧ ಹೋರಾಡುತ್ತಲೇ, ಬ್ರಿಟೀಷ್ ಸರ್ಕಾರದ
ಪೋಲಿಸ್ ಅಧಿಕಾರಿಗಳು, ನ್ಯಾಯಾಧೀಶರು, ಗೌರ್ನರ್ ಜನರಲ್ ಗಳು
ಇಂತಹವರಿಂದ ತಮ್ಮ ನೈತಿಕತೆ ಮತ್ತು
ಪಾರದರ್ಶಕ ಗುಣಗಳಿಂದ ಗೌರವಕ್ಕೆ ಅರ್ಹರಾದ ಮಹಾತ್ಮ ಗಾಂಧೀಜಿ
ಎಂದಿಗೂ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು
ವೈರತ್ವಕ್ಕೆ ಮಾರ್ಪಡಿಸಿದವರಲ್ಲ. ಮಹಾತ್ಮನನ್ನು ಇದಕ್ಕಿಂತ ಭಿನ್ನವಾಗಿ ಹೇಗೆ ಅರ್ಥೈಸಲು ಸಾಧ್ಯ?
ಕೇವಲ ಐದು ದಿನಗಳ ಕಾಲ ಸೇವಾಶ್ರಮದಲ್ಲಿ
ಕಾಲ ಕಳೆದ ಪತ್ರಕರ್ತ ಲೂಯಿ ಫಿಶರ್, ಅಲ್ಲಿನ ಸಹ ಪಂಕ್ತಿ ಭೋಜನ ಮತ್ತು ಭೋಜನಕ್ಕೆ ಮುನ್ನ ನಡೆಸುವ
ಪ್ರಾರ್ಥನೆಯನ್ನು ಗಮನಿಸಿ “ ಅನ್ನಕ್ಕೆ ಆಧ್ಯಾತ್ಮವನ್ನು ಬೆಸೆದು ಹಸಿವಿನ ಅರ್ಥವನ್ನು ಜಗತ್ತಿಗೆ
ಬೋಧಿಸಿದ ಮಹಾನುಭಾವ” ಎಂದು ಬಣ್ಣಿಸಿದ್ದನು. ಇಂತಹ ಒಳನೋಟಗಳು ನಮಗೇಕೆ ಸಾಧ್ಯವಾಗಿಲ್ಲ? ಒಮ್ಮೆ ನಮ್ಮ
ನಮ್ಮ ಅಂತರಂಗವನ್ನು ನಾವು ಪ್ರಶ್ನಿಸಿಕೊಳ್ಳಬೇಕು.
ಬ್ರಿಟನ್
ಮೂಲದ ಕವಿ ಮತ್ತು ನಾಟಕಕಾರ
ರೋನಾಲ್ಡ್ ಡಂಕನ್ ರವರು ತಾವು
ಸಂಪಾದಿಸಿರುವ “ ಸೆಲೆಕ್ಟಡ್ ವಕ್ರ್ಸ್ ಆಫ್ ಮಹಾತ್ಮ”
ಕೃತಿಗೆ ಬರೆದಿರುವ ಪ್ರಸ್ತಾವನೆಯ ಲೇಖನ ಗಾಂಧೀಜಿ ಕುರಿತಂತೆ
ಬರೆದಿರುವ ಶ್ರೇಷ್ಠ ವ್ಯಕ್ತಿ ಚಿತ್ರಣಗಳಲ್ಲಿ
ಒಂದಾಗಿದೆ. ಗಾಂಧೀಜಿಯವರ ಬಗ್ಗೆ ಕುತೂಹಲ ಗೊಂಡ
ರೋನಾಲ್ಡ್ ಡಂಕನ್ ಅವರಿಗೊಂದು
ಪತ್ರ ಬರೆದಾಗ, ಗಾಂಧೀಜಿ ಯವರು
ಅವರಿಗೆ ಪ್ರತ್ಯುತ್ತರ ಬರೆದು ಭಾರತಕ್ಕೆ ಆಹ್ವಾನಿಸುತ್ತಾರೆ.
ಅದರಂತೆ 1936 ರಲ್ಲಿ ಸೇವಾಗ್ರಾಮಕ್ಕೆ ಆಗಮಿಸಿದ
ಅವರು, ಗಾಂಧೀಜಿಯವರ ಜೊತೆ ಒಂದು ವಾರ
ಕಳೆದ ಅನುಭವ ಹಾಗೂ ನಡೆಸಿದ
ಸಂವಾದವನ್ನು ಮನ ಮುಟ್ಟುವಂತೆ ವಿವರಿಸಿದ್ದಾರೆ.
“ಒಂದು ದಿನ ಸಂಜೆ ನಾನು
ಮತ್ತು ಮಹಾತ್ಮ ಇಬ್ಬರೂ ವಾಕಿಂಗ್
ಮಾಡುತ್ತಾ ಸೇವಾಗ್ರಾಮದಿಂದ ಮತ್ತೊಂದು ಗ್ರಾಮದತ್ತ ತೆರಳಿದ್ದೆವು. ಅದೇ ಸಮಯಕ್ಕೆ ಮೂರ್ನಾಲ್ಕು
ಮಂದಿ ರಸ್ತೆ ಬದಿಯಲ್ಲಿ ಕುಳಿತು
ಮಲ ವಿಸರ್ಜನೆ ಕ್ರಿಯೆಯಲ್ಲಿ ತೊಡಗಿದ್ದರು. ಗಾಂಧೀಜಿಯವರು ಭಾರತದ ಸ್ವಾತಂತ್ರ್ಯದ ಹೋರಾಟದ
ಜೊತೆಗೆ; ಅಲ್ಲಿನ ಬಡತನ, ಅನಕ್ಷರತೆ,
ಮೌಡ್ಯ, ಆರೋಗ್ಯ, ಶುಚಿತ್ವ ಇವುಗಳ
ಕುರಿತು ಜನರಲ್ಲಿ ಜಾಗೃತಿ ಮೂಡಿಸುವ
ಸವಾಲುಗಳನ್ನು ನನಗೆ ವಿವರಿಸುತ್ತಿದ್ದರು.
ನಾನು ಮಲವಿಸರ್ಜನೆ ಮಾಡುತ್ತಿದ್ದ ಜನರನ್ನು ಕುತೂಹಲದಿಂದ ಗಮನಿಸುತ್ತಿದ್ದೆ.
ನಂತರ ಮಹಾತ್ಮರು ಅದನ್ನು ನೋಡಿ ಮೌನದಿಂದ
ತಲೆ ತಗ್ಗಿಸಿದರು. ವ್ಯಕ್ತಿಗಳು
ಅಲ್ಲಿಂದ ಎದ್ದು
ಹೋದ ನಂತರ, ರಸ್ತೆಯಲ್ಲಿದ್ದ ಮಣ್ಣನ್ನು
ತಮ್ಮ ಬೊಗಸೆಯಲ್ಲಿ ತೆಗೆದುಕೊಂಡು ಹೋಗಿ ಮಲವನ್ನು ಮುಚ್ಚಿದರು.
ಆ ಕ್ಷಣದಲ್ಲಿ ನನಗೆ
“ ಈ ಮಹಾತ್ಮನ ನಡೆಯಲ್ಲಾಗಲಿ, ನುಡಿಯಲ್ಲಾಗಲಿ
ಒಂದಿನಿತು ವೆತ್ಯಾಸವಿಲ್ಲ ಎನಿಸಿತು.
ನನಗೆ
ಸಿಗರೇಟ್ ಸೇದುವ ಚಟವಿತ್ತು. ಸೇವಾಗ್ರಾಮದ
ಪಕ್ಕದಲ್ಲಿದ್ದ ಕಬ್ಬಿನ ಗದ್ದೆಗಳಿಗೆ ಹೋಗಿ
ಮರೆಯಲ್ಲಿ ಕುಳಿತು ಸೇವನೆ ಮಾಡಿ
ಬರುತ್ತಿದ್ದೆ. ನನ್ನ ಈ ವ್ಯಸನ
ಅವರಿಗೆ ತಿಳಿದ ನಂತರ ಕಿರಿಯನಾದ
ನನ್ನ ಹೆಗಲ ಮೇಲೆ ಗೆಳೆಯನಂತೆ
ಕೈ ಹಾಕಿ ಸಿಗರೇಟ್ ತ್ಯೆಜಿಸುವಂತೆ
ಸಲಹೆ ನೀಡಿದರು. ಸೇದಬೇಕು ಎನಿಸಿದಾಗ ಬಾಯಿಗೆ
ಕಲ್ಲು ಸಕ್ಕರೆ ತುಂಡನ್ನು ಹಾಕಿಕೊಂಡು
ಚಪ್ಪರಿಸಿದರೆ, ಸಿಗರೇಟ್ ಸೇದಲು ಮನಸ್ಸಾಗುವುದಿಲ್ಲ
ಎಂಬ ನೀಡಿದರು. ನನ್ನ ಒಂದು ವಾರದ
ಭಾರತದ ಪ್ರವಾಸ ಮುಗಿಸಿ, ಸೇವಾ
ಗ್ರಾಮದಿಂದ ಬಾಂಬೆ ನಗರಕ್ಕೆ ತೆರಳಿ;
ಅಲ್ಲಿಂದ ಹಡಗಿನಲ್ಲಿ ಲಂಡನ್ ನಗರಕ್ಕೆ ಪ್ರಯಾಣಿಸಲು
ಹಡಗು ಕಟ್ಟೆಯಲ್ಲಿ ನಿಂತಿದ್ದಾಗ, ಕಾಂಗ್ರೇಸ್ ಕಾರ್ಯಕರ್ತನೊಬ್ಬ ನನ್ನನ್ನು ಹುಡುಕಿಕೊಂಡು ಬಂದು ನನ್ನ ಕೈಗೆ
ಪೊಟ್ಟಣವನ್ನು ನೀಡಿದನು. ಅದನ್ನು ತೆರೆದು ನೋಡಿದಾಗ,
ಮಹಾತ್ಮರು ನನಗಾಗಿ ಕಲ್ಲು ಸಕ್ಕರೆಯಿದ್ದ
ಡಬ್ಬಿಯನ್ನು ಕಳಿಸಿದ್ದರು. ಜೊತೆ ಒಂದು ಕಾಗದವಿತ್ತು.
“ ಪ್ರಿಯ ಮಿತ್ರಾ, ಹಡಗಿನ ನಿನ್ನ
ಸುಧೀರ್ಘ ಪ್ರಯಾಣದಲ್ಲಿ ಸಿಗರೇಟ್ಗೆ ಪರ್ಯಾಯವಾಗಿ
ಇದನ್ನು ಕಳಿಸಿಕೊಟ್ಟಿದ್ದೀನಿ ಸ್ವೀಕರಿಸು” ಎಂದು ಪತ್ರದಲ್ಲಿ ಬರೆದಿದ್ದರು.
ಭಾರತದ ಅಸಂಖ್ಯಾತ ಜನರನ್ನು ಕಟ್ಟಿಕೊಂಡು, ನೂರಾರು
ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡುತ್ತಿದ್ದ ಒಬ್ಬ ಜನನಾಯಕ ನನ್ನಂತಹ
ಒಬ್ಬ ಸಾಮಾನ್ಯ ವಿದೆಶಿ ಪ್ರಜೆಗೆ
ತೋರಿದ ಕಾಳಜಿಯನ್ನು ನೋಡಿ; ನಾನು ಮೂಕವಿಸ್ಮಿತನಾದೆ.
ಅಂದಿನಿಂದ ನಾನು ಸಿಗರೇಟ್ ತ್ಯೆಜಿಸುವುದರ
ಜೊತೆಗೆ ಮಹಾತ್ಮನ ಅನುನಾಯಿಯಾದೆ”
ಈ
ಮೇಲಿನ ಎರಡು ಘಟನೆಗಳು ನಮ್ಮೊಳಗಿನ
ಗಾಂಧಿ ಮತ್ತು ಅವರೊಳಗಿನ ಗಾಂಧಿ
ಕುರಿತ ವ್ಯತ್ಯಾಸವನ್ನು ನಮಗೆ ಮನದಟ್ಟು ಮಾಡಿಕೊಡುತ್ತವೆ.