Saturday, 2 September 2017

ಭಾರತದ ಬೌದ್ಧಿಕ ದಾರಿದ್ರ್ಯ ಮತ್ತು ಬುದ್ಧನೆಂಬ ತಥಾಗತನ ನೆನಪುಗಳು


ಕಳೆದ ಶುಕ್ರವಾರ ಹರ್ಯಾಣದ ಸಿರ್ಸಾ ಎಂಬ ಪಟ್ಟಣದಲ್ಲಿ ನಕಲಿ ದೇವಮಾನವನೊಬ್ಬನ ( ಗುರ್ ಮಿತ್  ರಾಮ್ ರಹೀಮ್)  ನಡುವಳಿಕೆಗೆ ಅಲ್ಲಿನ ಸಿ.ಬಿ.ಐ. ವಿಶೇಷ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿ ಇಪ್ಪತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಈ ಹಿನ್ನಲೆಯಲ್ಲಿ ಢೇರಾ ಸಚ್ಚ ಎಂಬ ಪಂಥದ ಅನುಯಾಯಿಗಳು ಪಂಜಾಬ್,  ಹರ್ಯಾಣ,, ದೆಹಲಿ ನಗರ ಸೇರಿದಂತೆ ಉತ್ತರ ಪ್ರದೇಶದ ಹಲವೆಡೆ ನಡೆಸಿದ ಹಿಂಸಾಚಾರ ಮತ್ತು ಇದರಿಂದಾದ ಸಾರ್ವಜನಿಕ ಆಸ್ತಿಯ ನಷ್ಟ ಇವುಗಳನ್ನು ಅವಲೋಕಿಸಿದರೆ ಭಾರತದ ನಾಗರೀಕ ಸಮಾಜವು ತಲೆ ತಗ್ಗಿಸುವಂತಿದೆ.  
ಆರ್ಥಿಕವಾಗಿ ಬೆಳೆಯುತ್ತಿರುವ ಜಗತ್ತಿನ ಅತಿ ದೊಡ್ಡ ರಾಷ್ಟ್ರ ಎನಿಸಿರುವ ಭಾರತದಲ್ಲಿ ತಾಂಡವಾಡುತ್ತಿರುವ ಭೌತಿಕ ಬಡತನ ಮತ್ತು ಭೌದ್ಧಿಕ ಬಡತನ ಈ ಎರಡೂ ಅಂಶಗಳು ಭಾರತದ ಪಾಲಿಗೆ ಶತೃಗಳಾಗಿವೆ. ನಮ್ಮಲ್ಲಿ ಜನರ ಭೌತಿಕ ಬಡತನವನ್ನು ಹೋಗಲಾಡಿಸಲು, ಹಲವಾರು ಯೋಜನೆಗಳಿವೆ, ಶಿಕ್ಷಣ, ಆರೋಗ್ಯ, ವಸತಿ ಮತ್ತು  ಕೈಗೆಟುಕುವ ದರದಲ್ಲಿ ಪಡಿತರ, ದುಡಿಯುವ ಕೈಗಳಿಗೆ ಉದ್ಯೋಗ ಇತ್ಯಾದಿ ಯೋಜನೆಗಳು  ಹೀಗೆ ಜನರನ್ನು ಬಡತನದ ರೇಖೆಯ ಕೆಳಗಿನಿಂದ ಮೇಲೆತ್ತಲು ಹಲವು ಮಾರ್ಗಗಳಿವೆ. ಆದರೆ, ಧರ್ಮ, ಮೂಡ ನಂಬಿಕೆ ಹಾಗೂ ಕುರುಡು ಆರಾಧನೆ, ಜಾತಿ ಮತ್ತು ಜಾತಿ ಸಂಘಟನೆಗಳ ಪೋಷಣೆಯ ಜೊತೆಗೆ ಭಾರತದ ಆಧ್ಯಾತ್ಮವನ್ನು ಮಾರಾಟದ ಸರಕನ್ನಾಗಿ ಮಾಡಿಕೊಂಡಿರುವ ನಕಲಿ ದೇವಮಾನವರು, ಬೂದಿ ಬಾಬಾಗಳು,  ಮಠಾಧೀಶರು, ಆಶ್ರಮವೆಂಬ ಐಷಾರಾಮಿ ಬಂಗಲೆಗಳಲ್ಲಿ ಹವಾನಿಯಂತ್ರಣ ಕೊಠಡಿಗಳಲ್ಲಿ ಬದುಕುತ್ತಿರುವ ಲಜ್ಜೆಗೆಟ್ಟ ಸ್ವಾಮೀಜಿಗಳು ಹಾಗೂ ಇವರ ಗುಲಾಮರಂತೆ ಬದುಕುತ್ತಿರುವ ಭಕ್ತರೆಂಬ ಮತಿಗೆಟ್ಟ ಮನುಷ್ಯರು ಇಂತಹವರ ಬೌದ್ಧಿಕ ಬಡತನಕ್ಕೆ ಈ ದೇಶದಲ್ಲಿ ಮಾತ್ರವಲ್ಲ, ಈ ಜಗತ್ತಿನಲ್ಲಿ ಯಾವುದೇ ಮದ್ದಿಲ್ಲ ಎಂಬುದನ್ನು ಕಳೆದವಾರದ  ಹಿಂಸಾಚಾರದ ಘಟನೆ ನಮಗೆ ತೋರಿಸಿಕೊಟ್ಟಿದೆ.
ಉತ್ತರ ಮತ್ತು ದಕ್ಷಿಣ ಭಾರತವೆಂಬ ಬೇಧ ಭಾವವಿಲ್ಲದೆ, ಅನೇಕ ಸ್ವಾಮೀಜಿಗಳು. ಮತ್ತು ದೇವಮಾನವರೆಂಬ ಅತ್ಯಾಚಾರಿಗಳು, ಕೊಲೆಗಡುಕರು ಮತ್ತು ಸರ್ಕಾರಿ ಭೂಮಿಯನ್ನು ನುಂಗಿ ನೀರು ಕುಡಿವ ಕ್ರಿಮಿನಲ್‍ಗಳ ಹೀನ ಇತಿಹಾಸ ಒಂದೊಂದಾಗಿ ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ.  ಹರ್ರ್ಯಾಣದ ಗುರ್‍ಮೀತ್ ರಾಮ್‍ರಹಿಮ್ ಸಿಂಣ್ ತಾನು ಸ್ಥಾಪಿಸಿದ ಢೇರಾ ಸಚ್ಛ ಸೌದ ಎಂಬ ಧಾರ್ಮಿಕ ಪಚಿಥದ ಸಂಘಟನೆಯ ಹೆಸರಿನಲ್ಲಿ ಕಳೆದ 25 ವರ್ಷಗಳಿಂದ ಅವನು ನಡೆಸಿರುವ ಸ್ವೇಚ್ಛಾಚಾರದ ಬದುಕು, ಅತ್ಯಾಚಾರ, ಕೊಲೆ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ. ಅವನ ವೇಷ ಭೂಷಣ, ಅವನ ಸಿನಿಮಾ ಹುಚ್ಚು, ನೂರಾರು ವಿದೇಶಿ ಐಷಾರಾಮಿ ಕಾರುಗಳ ಮೋಹ ಇವೆಲ್ಲವನ್ನೂ  ಕಣ್ಣಾರೆ ನೋಡಿಯೂ ಸಹ ಅವನನ್ನು ದೇವರು ಎಂದು ಆರಾಧಿಸುತ್ತಿರುವ ಜನರ ನಂಬಿಕೆಯನ್ನು ಭೌದ್ಧಿಕ ದಾರಿದ್ರ್ಯ ಎಂದು ಕರೆಯದೇ ಇರಲು ಸಾಧ್ಯವಿಲ್ಲ. 
ಈ ದೇಶದ ರಾಜಕಾರಣಿಗಳು ಓಟಿಗಾಗಿ, ಓಲೈಕೆಯ ರಾಜಕಾರಣದಲ್ಲಿ ತೊಡಗಿ ಇಂತಹ ನಕಲಿ ಅವತಾರ ಪುರುಷರ ಕಾಲಿಗೆರೆಗಿ ತಮ್ಮ ತನುಮನುದ ಜೊತೆಗೆ ಪಕ್ಷವನ್ನು ಇಂತಹವರ ಪದತಲದಲ್ಲಿ ಇರಿಸಿದ್ದರ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಅರ್ಧಶತಮಾನದ ಹಿಂದೆ ಈ ದೇಶದ ಸಾಕ್ಷಿ ಪ್ರಜ್ಞೆ ಎಂಬಂತೆ ಇದ್ದ ಡಾ.ರಾಮ ಮನೋಹರ ಲೋಹಿಯಾ ಅವರು, ದೇಶದ ಪ್ರಥಮ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ರವರು ಯಾವುದೋ ಒಬ್ಬ ಸ್ವಾಮೀಜಿಯ ಕಾಲು ತೊಳೆದು ಪಾದ ಪೂಜೆ ಮಾಡಿದ ಸಂದರ್ಭದಲ್ಲಿ ನೇರವಾಗಿ ಛಾಟಿ ಏಟು ಬೀಸಿದ್ದರು. “ ನೀವು ಬಾಬುರಾಜೇಂದ್ರ ಪ್ರಸಾದ್ ಆಗಿ ಧರ್ಮ ಮತ್ತು ನಂಬಿಕೆ ಕುರಿತಾದ ಆಚರಣೆಗಳನ್ನು  ನಿಮ್ಮ ನಿವಾಸದ ನಾಲ್ಕು ಗೊಡೆಯ ಮಧ್ಯಕ್ಕೆ ಸೀಮಿತಗೊಳಿಸಿ, ಒಂದು ಜಾತ್ಯಾತೀತ, ಧರ್ಮಾತೀತ ಪ್ರಜಾಪ್ರಭುತ್ವದ ರಾಷ್ಟ್ರವೊಂದರ ಪ್ರಥಮ ಪ್ರಜೆಯಾಗಿ ನೀವು ಯಾವುದೇ ಸ್ವಾಮೀಜಿಯ ಕಾಲು ಮುಟ್ಟುವುದು ನಾಗರೀಕ ಸಮಾಜಕ್ಕೆ ಮಾಡುವ ಅವಮಾನ” ಎನ್ನುವ ಹಾಗೆ ಎಲ್ಲಾ ರಾಜಕೀಯ ಪಕ್ಷ ಮತ್ತು ನಾಯಕರ ಎದೆಗೆ ತಾಕುವ ಹಾಗೆ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದರು. ಧರ್ಮದಲ್ಲಿ ರಾಜಕಾರಣವನ್ನು ಅಥವಾ ರಾಜಕೀಯದಲ್ಲಿ ಧರ್ಮವನ್ನು ಬೆರಸಬಾರದು ಎಂಬುದು ಗಾಂಧಿ, ಲೋಹಿಯಾ, ಜೆ.ಪಿ. ಮತ್ತು ಅಂಬೇಡ್ಕರ್ ಹೀಗೆ ಅನೇಕ ಮಹನೀಯರ ಆಶಯವಾಗಿತ್ತು.
ರಾಮಮನೋಹರ ಲೋಹಿಯಾ ಅವರ ಎಚ್ಚರಿಕೆಯ ನಡುವೆಯೂ ಸಹ ರಾಜಕಾರಣಿಗಳು ಇಂತಹ ನಕಲಿ ದೇವಮಾನವರ ಸಹವಾಸ ಬೆಳೆಸಿಕೊಂಡು ಬಂದರು. ಅಧಿಕಾರಸ್ತ ರಾಜಕಾರಣಿಗಳ ನೆರವಿನಿಂದ ಎಲ್ಲಾ ಅವತಾರ ಪುರುಷರೆಂಬ ನಕಲಿ ದೇವ ಮಾನವರು ತಮ್ಮ ಸಾಮ್ರಾಜ್ಯದ ಕೋಟೆಯನ್ನು ವಿಸ್ತರಿಸುತ್ತಾ ಬಂದರು. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಧಿರೇಂದ್ರ ಬ್ರಹ್ಮಚಾರಿ, ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಚಂದ್ರಸ್ವಾಮಿಯವರಿಂದ ಹಿಡಿದು ಈಗಿನ ಪ್ರಧಾನಿ ನರೇಂದ್ರಮೋದಿಯವರ ಸಹವಾಸದಲ್ಲಿ ಬಾಬಾ ರಾಮದೇವ್, ಜಗ್ಗಿವಾಸುದೇವ್, ರವಿಶಂಕರ್ ಇವೆರೆಲ್ಲರೂ ಸ್ಟಾರ್ ನಟರಂತೆ ಸಧ್ಯದ ಭಾರತದಲ್ಲಿ ಸ್ಟಾರ್ ದೇವ ಮಾನವರಾಗಿದ್ದಾರೆ. ಇವರಿಗೆ ಅಂಟಿಕೊಡಿರುವ ಕಳಂಕಗಳು ಅಥವಾ ಆರೋಪಗಳು ಒಂದೆರೆಡಲ್ಲ.  ಭಾರತದ ಆಧ್ಯಾತ್ಮವನ್ನು, ಯೋಗವನ್ನು, ಧ್ಯಾನವನ್ನು ಮತ್ತು ಪಾರಂಪರಿಕ ಔಷಧ ಕುರಿತು ಜ್ಞಾನವನ್ನು ಬಂಡವಾಳ ಮಾಡಿಕೊಂಡು, ಬಹುರಾಷ್ಟ್ರೀಯ ಕಂಪನಿಗಳ ಮಾದರಿಯಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಿದ್ದಾರೆ. ಇಂತಹವರ ಕಾಲಿಗೆರೆಗಿ, ಆಶ್ರಮಕ್ಕೆ ಭೇಟಿ ನೀಡಿ ಕುಮ್ಮಕ್ಕು ನೀಡುತ್ತಿರುವ ರಾಜಕಾರಣಿಗಳು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳಬೇಕಿದೆ. ವಚನಕಾರ ಅಲ್ಲಮ ಪ್ರಭು “ ಮಠವೇಕೋ? ಮಂದಿರವೇಕೋ? ಚಿತ್ತ ಸಮಾಧಾನವುಳ್ಳ ಶರಣಂಗೆ” ಎಂದು ಹನ್ನೆರೆಡನೆಯ ಶತಮಾನದಲ್ಲಿ ಪ್ರಶ್ನಿಸಿದ ಮಾತನ್ನು ನಾವು ನೆನಪಿಸಿಕೊಳ್ಳಬೇಕಿದೆ. ಇದೇ ಮಾತನ್ನು ಎರಡೂವರೆ ಸಾವಿರದ ವರ್ಷಗಳ ಹಿಂದೆ ಗೌತಮ ಬುದ್ಧನು “ ನಾವು ಒಳಗಿನಿಂದ ಅಂದರೆ, ನಮ್ಮೊಳಗಿನ ಜ್ಞಾನ ಮತ್ತು ವಿವೇಕದಿಂದ ಆಳಿಸಿಕೊಳ್ಳಬೇಕೇ ಹೊರತು, ಬಾಹ್ಯ ಶಕ್ತಿಗಳಿಂದ ಅಲ್ಲ” ಎಂದಿದ್ದನು. ಬಾಹ್ಯ ಶಕ್ತಿಗಳು ಅಂದರೆ, ಅಪೌರುಷೇಯ ಎನ್ನಲಾದ ವೇದಗಳು ಮತ್ತು  ಅವುಗಳ ಆಚರಣೆಗಳಿಂದ ಅಲ್ಲ ಎನ್ನುವುದರ ಮೂಲಕ ಎಲ್ಲಾ ರೀತಿಯ ಮೌಡ್ಯಗಳನ್ನು ಧಿಕ್ಕರಿಸಿ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಬುದ್ಧನ ವಿವೇಕ ಮತ್ತು ಜ್ಞಾನ ನಮಗೀಗ ಅತ್ಯವಶ್ಯಕವಾಗಿದೆ.

ಈ ದಿನಗಳಲ್ಲಿ  ಸನ್ಯಾಸಿಗಳೆಂಬ ವೇಷ ತೊಟ್ಟವರು ಸನ್ಯಾಸತ್ವ ಎಂದರೆ ಏನು ಎಂಬುದನ್ನು ಗೌತಮ ಬುದ್ಧನನ್ನು ನೋಡಿ ಅಥವಾ ಅವನನ್ನು ಓದಿ ಕಲಿತುಕೊಳ್ಳಬೇಕು. ಬುದ್ಧ ಧರಿಸುತ್ತಿದ್ದ ಕಾಷಾಯ ವಸ್ತ್ರಗಳು, ತಿಪ್ಪೆಯ ಮೇಲೆ ಬಿಸಾಡಿದ ಚಿಂದಿ ಬಟ್ಟೆಗಳು ಮತ್ತು ಶವದ ಮೇಲಿನ ಬಟ್ಟೆಗಳಿಂದ ಹೊಲಿದ ವಸû್ರಗಳಾಗಿರುತ್ತಿದ್ದವು. ಸನ್ಯಾಸಿಯಾದವನು ಮೂರು ಬಗೆಯ ವಸ್ತ್ರಗಳನ್ನು ಧರಿಸಬೇಕಿತ್ತು. ಅವುಗಳೆಂದರೆ, ಅಂತರ ವಸ್ತ್ರ ಎಂಬ ಒಳ ಉಡುಪು, ಉತ್ತರ ಸಂಗ ಎಂಬ ಹೊರ ಉಡುಪು ಮತ್ತು ಸಂಗತಿ ಎನ್ನುವ ಚಳಿಯಿಂದ ರಕ್ಷಿಸುವ ಉಡುಪು. ಇವುಗಳಲ್ಲಿ ಸನ್ಯಾಸಿಯಾದವನ ಜೊತೆ ಇವುಗಳು ಹೊರತು ಪಡಿಸಿದರೆ ಬೇರೇ ಏನೂ ಇರಕೂಡದು. ಭಿಕ್ಷಾ ಪಾತ್ರೆ, ಸೂಜಿ, ಕ್ಷೌರದ ಕತ್ತಿ ಮತ್ತು ಲಂಗೋಟಿ ಹಾಗೂ ಕಮಂಡಲ ಇವುಗಳಲ್ಲದೆ ಬೇರೇನೂ ಇರುವಂತಿರಲಿಲ್ಲ. ಸ್ವತಃ ಬುದ್ಧನು ಅನುಸರಿಸಿದ ಮಾರ್ಗವಿದು. ಪ್ರತಿದಿನ ಬೆಳಿಗ್ಗೆ ಭಿಕ್ಷೆ ಬೇಡಿ ಪೂವಾಹ್ನಕ್ಕೆ ಮುನ್ನ ಅಂದರೆ ಮಧ್ಯಾಹ್ನಕ್ಕೆ ಮುನ್ನ ಒಮ್ಮೆ ಮಾತ್ರ ಊಟ ಮಾಡಬೇಕು. ವಿಹಾರಗಳು ಅಥವಾ ವಿಹಾರಗಳು ಇಲ್ಲದಿದ್ದರೆ, ಮರದ ಕೆಳೆಗೆ ವಾಸಿಸಬೇಕು ಎಂಬ ನಿಯಮವನ್ನು ವಿಧಿಸಿ ಅದನ್ನು ಸ್ವತಃ ಪಾಲಿಸುತ್ತಿದ್ದನು. ಯಾವ ಕಾರಣಕ್ಕೂ ಸನ್ಯಾಸಿಯಾದವನು ಆಸ್ತಿ ಮಾಡದಂತೆ ನಿಯಮ ರೂಪಿಸಿದ್ದನು. ನಂತರ ದಿನಗಳಲ್ಲಿ ಭಿಕ್ಕುಗಳ ಸಂಘಕ್ಕೆ ಉಡುಗೊರೆ ನೀಡಿದರೆ ಮಾತ್ರ ಭೂಮಿ ಮತ್ತು ಸಂಚಾರಿ ಸನ್ಯಾಸಿಗಳ ಆಶ್ರಯಕ್ಕಾಗಿ ನಿರ್ಮಿಸಿದ ವಿಹಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದನು. ಇವೊತ್ತಿನ ಸನ್ಯಾಸಿಗಳೆಂಬ ದೇವಮಾನವರಿಗೂ ಮತ್ತು ಅಂದಿನ ತಥಾಗತ ಬುದ್ಧನಿಗೂ ಹೋಲಿಸಿ ನೋಡಿದಾಗ, ಈಗಿನವರು ಯಾವರೀತಿಯಲ್ಲಿ ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ದಿವಾಳಿ ಎದ್ದು ಹೋಗಿದ್ದಾರೆ ಎಂಬುದು ನಮಗೆ ಮನದಟ್ಟಾಗುತ್ತದೆ.
ಗೌತಮ ಬುದ್ಧನು ಪರಿವ್ರಾಜಕನಾದ ( ಸನ್ಯಾಸಿ) ನಂತರ ತನ್ನ ಅಸಂಖ್ಯಾತ ಭಿಕ್ಕು ಅನುಯಾಯಿಗಳ ಜೊತೆ ತಾನು ಹುಟ್ಟಿ ಬೆಳೆದ ಕಪಿಲವಸ್ತು ನಗರಕ್ಕೆ ಭೇಟಿ ನೀಡಿ ಅಲ್ಲಿನ ಊರಾಚೆಗಿನ ಮಾವಿನ ಮರದ ತೋಟದಲ್ಲಿ ತಂಗಿದ್ದನು. ತನ್ನ ಮಲತಾಯಿ ಪ್ರಜಾಪತಿ ಗೌತಮಿಯು ತನ್ನ ಪುತ್ರ ಗೌತಮ ಬುದ್ಧನಿಗಾಗಿ ಮೂರು ತಿಂಗಳು ಕುಳಿತು ಕೈಯಾರೆ ನೇಯ್ದ ಹತ್ತಿಯ ವಸû್ರಗಳನ್ನು ಮಗನಿಗೆ ಉಡುಗೊರೆಯಾಗಿ ಕೊಡಲು ಹೋದಾಗ, ಅದನ್ನು ನಿರಾಕರಿಸಿದನು. ಕೊನೆಗೆ ತನ್ನ ಅನುಯಾಯಿ ಆನಂದನ ಸಲಹೆ ಮೇರೆಗೆ ತನಗೆ ಬದಲಾಗಿ ಭಿಕ್ಕುಗಳ ಸಂಘಕ್ಕೆ ಉಡುಗೊರೆಯಾಗಿ ಸ್ವೀಕರಿಸಿದನು. ಇಂತಹ ಆತ್ಮಶಕ್ತಿಯನ್ನು ಇಂದಿನ ಭಾರತದ ಅವತಾರ ಪುರುಷರೆಂಬ ನಕಲಿ ದೇವಮಾನವರಲ್ಲಿ ಮತ್ತು ವಿರಕ್ತರೆಂಬ ಹಣೆಪಟ್ಟಿ ಹೊತ್ತ ಮಠಾಧೀಶರಲ್ಲಿ ನಾವು ಹುಡುಕಲು ಸಾಧ್ಯವೆ? ಧರ್ಮ ಮತ್ತು ಆಧ್ಯಾತ್ಮಗಳೆರೆಡೂ ಅಮಲೇರಿಸುವ ಮಾದಕ ವಸ್ತುಗಳಂತೆ ಪರಿವರ್ತನೆ ಹೊಂದಿರುವ ಇಂದಿನ ಭಾರತದಲ್ಲಿ ಎಲ್ಲರೂ ಉನ್ಮಾದದ ಅಲೆಯಲ್ಲಿ ತೇಲತೊಡಗಿದ್ದಾರೆ.
(ಕರಾವಳಿ ಮುಂಜಾವು ಪತ್ರಿಕೆಯ " ಜಗದಗಲ" ಅಂಕಣಬರಹ)


No comments:

Post a Comment