ಶುಕ್ರವಾರ, ಫೆಬ್ರವರಿ 2, 2018

ದೃಶ್ಯ ಮಾಧ್ಯಮಗಳಿಗೆ ಹಿಡಿದ ಗ್ರಹಣ ಬಿಡಿಸುವವರು ಯಾರು?


ಕನ್ನಡ ಭಾಷೆಯಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಛಾನಲ್ಗಳಲ್ಲಿ ಒಂದೆರೆಡನ್ನು ಹೊರತು ಪಡಿಸಿದರೆ, ಇವುಗಳು ಕನ್ನಡ ಪತ್ರಿಕೋದ್ಯಮದ ಭಾಗ ಎಂದು ಹೇಳಿಕೊಳ್ಳಲು ಮತ್ತು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಪತ್ರಕರ್ತರು ಎಂದು ಕರೆಯಲು ಅಂಜಿಕೆಯಾಗುತ್ತಿದೆ.
ಖಗೋಳ ಶಾಸ್ತ್ರದ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ಹಾಗೂ ಬಾಹ್ಯಾಕಾಶದಲ್ಲಿ ಸಂಭವಿಸುವ ಸೂರ್ಯಗ್ರಹಣ, ಚಂದ್ರಗ್ರಹಣ ಇವೆಲ್ಲವೂ ಸಹಜವಾಗಿ ಘಟಿಸುವ ಕ್ರಿಯೆಗಳು ಎಂಬ ಜ್ಞಾನವನ್ನು ದೃಶ್ಯ ಮಾಧ್ಯಮಗಳು ಕಡೆಗಣಿಸಲು ತೀರ್ಮಾನಿಸಿದಂತೆ ಕಾಣುತ್ತಿದೆ. ಹಾಗಾಗಿ ಸೂರ್ಯಗ್ರಣ, ಚಂದ್ರಗ್ರಹಣ ಮುಂತಾದ ನಿಸರ್ಗದ ಸಹಜ ಕ್ರಿಯೆಗಳನ್ನು ಜೋತಿಷಿಗಳ ನೆರವಿನಿಂದ ವಿಶ್ಲೇಷಿಸುವ  ವೈಖರಿ ಹಾಗೂ ಇದರಿಂದಾಗುವ ಅನಾಹುತಗಳ ಕುರಿತು  ಭವಿಷ್ಯ ಹೇಳುತ್ತಾಜನರು ಮಾಡಬೇಕಾದ ಜಪ.ತಪ, ಉಪವಾಸ, ಸ್ನಾನ ಇತ್ಯಾದಿಗಳ ಬಗ್ಗೆ ಹೇಳುತ್ತಿರುವ ರೀತಿಯನ್ನು ಗಮನಿಸಿದಾಗ, ಇವೆಲ್ಲವೂ ಅವರೊಳಗಿನ ಬೌದ್ಧಿಕ ದಾರಿದ್ರ್ಯವನ್ನು ಎತ್ತಿ ತೋರಿಸುತ್ತವೆ. ಶತಮಾನಗಳ ಹಿಂದೆಯೇ ಗೆಲಿಯೋನಂತಹ ಖಗೋಳ ವಿಜ್ಞಾನಿ ಮತ್ತು  ಐಸಾಕ್ ನ್ಯೂಟನ್ Àಂತಹ ಭೌವಿಜ್ಞಾನಿಗಳು ಸೂರ್ಯ ಹಾಗೂ ಭೂಮಿಯೂ ಸೇರಿದಂತೆ ಇತರೆ ಗ್ರಹಗಳ  ಪಥ ಚಲನ ಮತ್ತು ಗುರುತ್ವಾಕರ್ಷಣ ಶಕ್ತಿ ಕುರಿತು ವಿವರವಾಗಿ ವಿಶ್ಲೇಷಿರುವುದನ್ನು ಅವಿವೀಕೆಗಳಿಗೆ ಗೊತ್ತಿಲ್ಲವೆಂದರೆ, ಇವರಿಗೆ ಪತ್ರಿಕೋದ್ಯಮ ಪಾಠ ಹೇಳಿದವರು ಮತ್ತು ಪದವಿ ನೀಡಿದ ವಿಶ್ವ ವಿದ್ಯಾಲಯಗಳ ಬಗ್ಗೆ ಅನುಕಂಪ ಮೂಡುತ್ತದೆತನ್ನ ಕಣ್ಣ ಮುಂದಿನ ಘಟನೆಗಳನ್ನು ಸತ್ಯದ ಮತ್ತು ವಿಶ್ಲೇಷಣೆಯ ಒರೆಗಲ್ಲಿಗೆ ಹಚ್ಚುವ ಬದಲು, ಅದಕ್ಕೆ ಕಂದಾಚಾರ, ಮೌಡ್ಯದ ಬಣ್ಣ ಬಳಿದು ವಿಶ್ಲೇಷಿಸುತ್ತಿರುವ ಛಾನಲ್ ಗಳು ದೇಶವನ್ನು ಮತ್ತೇ ಹತ್ತೊಂಬತ್ತನೆಯ ಶತಮಾನಕ್ಕೆ ಎಳೆದೊಯ್ಯಲು ಶಪಥ ತೊಟ್ಟಂತೆ ಕಾಣುತ್ತವೆ.
ಕನ್ನಡದ ಸಂದರ್ಭಕ್ಕೆ ಹೋಲಿಸಿ ಹೇಳುವುದಾದರೆ, ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕøತಿಕ ಜಗತ್ತಿನಲ್ಲಿ ವೈಚಾರಿಕತೆ ಇಲ್ಲಿಯವರೆಗೂ ಪ್ರಧಾನ ಧಾರೆಯಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದೆ. ಚಾರ್ವಾಕ, ಗೌತಮ ಬುದ್ಧ, ಅಲ್ಲಮಪ್ರಭುವಿನ ಮಹಾನ್ ದಾರ್ಶನೀಕರ ಚಿಂತನೆಗಳು, ಶಿವ ಶರಣರ ವಚನಗಳು, ಕುವೆಂಪು, ಕಾರಂತ, ನಿರಂಜನರ ಕೃತಿಗಳು ಹಾಗೂ ರಾಮಮನೋಹರ ಲೋಹಿಯಾ ಅವರ ಅನುವಾದಿತ ಕೃತಿಗಳು ಇವೆಲ್ಲವೂ ಕನ್ನಡದ ಹಲವು ತಲೆಮಾರುಗಳನ್ನು ಪ್ರಭಾವಿಸಿದ್ದನ್ನು ನಿರಾಕರಿಸುವಂತಿಲ್ಲ.
ಕಳೆದ ಬುಧವಾರ ಸಂಜೆ ಸಂಭವಿಸಿದ ಚಂದ್ರ ಗ್ರಹಣ ಕುರಿತು ಒಂದು ವಾರದಿಂದ ಮುಂಚಿತವಾಗಿ ಸುದ್ದಿ ಛಾನಲ್ಗಳಲ್ಲಿ ಪ್ರಸಾರವಾದ ಅನೇಕ ರೀತಿಯ ಅಂತೆಕಂತೆಗಳ ಪುರಾಣಗಳು, ಜ್ಯೋತಿಷಿಗಳ ಕುರುಡು ವ್ಯಾಖ್ಯಾನಗಳು ಮತ್ತು ಇವುಗಳ ಮೂಲಕ  ಇಲ್ಲಿನ ಮುಗ್ದ ಜನರಿಗೆ ಬಿತ್ತಿದ ಮೌಡ್ಯವನ್ನು ಗಮನಿಸಿದಾಗ ಮನಸ್ಸಿಗೆ ಜಿಗುಪ್ಸೆ ಉಂಟಾಯಿತು. ಕನ್ನಡದ ಸುದ್ದಿ ಛಾನಲ್ಗಳ ಮುಖ್ಯಸ್ಥರಿಂದ ಹಿಡಿದು, ಇಲ್ಲಿನ ಬೂದಿ ಬಾಬಾಗಳು, ಜ್ಯೋತಿಷಿಗಳು, ಇವರೆಲ್ಲರನ್ನು ಬೆಂಗಳೂರಿನ ನಿಮಾನ್ಸ್ ಗೆ (ಹುಚ್ಚಾಸ್ಪತ್ರೆಗೆ) ಸೇರಿಸಿ, ತಕ್ಷಣ ಶಾಕ್ ಟ್ರೀಟ್ಮೆಂಟ್ ಕೊಡಿಸುವುದರ ಮೂಲಕ ಇವರ ಮಿದುಳಿಗೆ ಆವರಿಸಿಕೊಂಡಿರುವ ಗ್ರಹಣವನ್ನು ಬಿಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ರೊಚ್ಚಿಗೆಳುವ ಕನ್ನಡಿಗರು ಇವರೆಲ್ಲರನ್ನೂ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಚಿತ್ರದುರ್ಗದ ಕೋಟೆಯಲ್ಲಿರುವ ಮದ್ದು ಅರೆಯುತ್ತಿದ್ದ ಬೃಹತ್ ಒಳಕಲ್ಲಿಗೆ ಹಾಕಿ ಚಟ್ನಿ ರುಬ್ಬಿದಂತೆ ರುಬ್ಬವ ದಿನಗಳು ದೂರವಿಲ್ಲ ಎನಿಸುತ್ತಿದೆ. ಗ್ರಹಣ ಮುಗಿದ ನಂತರವೂ ಸಹ  ಯಾವ ಜನ್ಮ ರಾಶಿಯವರಿಗೆ ಗ್ರಹಣ ಏನು ಪರಿಣಾಮ ಬೀರಿದೆ, ಇದಕ್ಕೆ ಪರಿಹಾರ ಏನು ಎಂಬುದರ ಕುರಿತು ಸೂಚನೆ ನೀಡುತ್ತಿರುವ   ಮಂದಿಗೆ  ನೀವು ಪತ್ರಿಕೋದ್ಯಮವನ್ನು ಎಲ್ಲಿ ಕಲಿತಿರಿಎಂದು ಕೇಳಬೇಕಿದೆ. ಏಕೆಂದರೆ, ನಲವತ್ತು ವರ್ಷಗಳ ಹಿಂದೆ ಇದೇ ಕರ್ನಾಟಕz ನೆಲದÀಲ್ಲಿ ಕೈ ಯಿಂದ ಬೂದಿ ಉದುರಿಸುತ್ತಿದ್ದ ಪುಟ್ಟಪರ್ತಿ ಸಾಯಿಬಾಬಾನ ಲಂಗೋಟಿಯನ್ನು ಕಳಚಿಹಾಕುವುದರ ಮೂಲಕ ಪವಾಡ ಪುರುಷನ ಬಣ್ಣವನ್ನು ಬಯಲು ಮಾಡಿದ ವಿಚಾರವಂತರು ಹಾಗೂ ಅವರಿಂದ ಪ್ರೇರಿತರಾಗಿ ಬೆಳೆದವರು ಇಂದಿಗೂ ಕರ್ನಾಟಕದಲ್ಲಿ ಜೀವಂತವಾಗಿದ್ದಾರೆ ಎಂಬುದನ್ನು ಯಾರೂ ಮರೆಯುವಂತಿಲ್ಲ.

ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಸಾಮ್ರಾಜ್ಯದ ವಿಸ್ತÀ್ತರಣೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ದೃಶ್ಯ ಮಾಧ್ಯಮಗಳು  ಪತ್ರಿಕೋದ್ಯಮದ ಮುಖವಾಡ ತೊಟ್ಟು, ತಮ್ಮೊಳಗೆ ಇರಬೇಕಾದ  ನೈತಿಕತೆ, ಬದ್ಧತೆ ಎಲ್ಲವನ್ನು ಮರೆತು ಮಾಧ್ಯಮಗಳಲ್ಲಿ ಮೌಡ್ಯವನ್ನು ಬಿತ್ತತ್ತಿರುವ ಬಗೆಯನ್ನು ಗಮನಿಸಿದರೆ ಭವಿಷ್ಯದ ಕರ್ನಾಟಕದ ಬಗ್ಗೆ ಭಯವಾಗುತ್ತಿದೆ. ಅರ್ಧಗಂಟೆಯ ಜಾಹಿರಾತಿನ ಕಾರ್ಯಕ್ರಮಕ್ಕೆ ಹತ್ತರಿಂದ ಇಪ್ಪತ್ತು ಸಾವಿರ ಹಣ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಬೌದ್ಧಿಕವಾಗಿ ದಿವಾಳಿ ಎದ್ದವರ ಬಾಯಲಿ ಭವಿಷ್ಯವನ್ನು ಹೇಳುವುದರಿಂದ ಹಿಡಿದುಹೋಮ, ವಾಸ್ತುಶಾಸ್ತ್ರ, ಸಕಲ ರೋಗಗಳಿಗೆ ಸ್ವರ್ಶದ ಮೂಲಕ ಚಿಕಿತ್ಸೆ, ಹಾಗೂ ಗರ್ಭದಿಂದ ಸಾವಿನ ನಂತರವೂ ಆತ್ಮದೊಂದಿಗೆ ಮಾತುಕತೆ ಎಂಬ ಪ್ರಹಸನಗಳು ದಿನ ನಿತ್ಯ ಪ್ರಸಾರವಾಗುತ್ತಿವೆಇಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ರೂವಾರಿಗಳು ಯಾರು ಎಂಬುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಮಕ್ರ್ಯೂರಿಬಾಬ, ಶನಿಮಹಾತ್ಮನ ಪೂಜಾರಿ ಮತ್ತು ಪ್ರತ್ಯೇಂಗಿರಾ ದೇವಿಯ ಆರಾಧಕ ಇಂತಹ ಹೆಸರಿನ ಡೊಂಗಿಗಳ ಜೊತೆಗೆ  ಮುಖದ ಮೇಲೆ ಇನ್ನೂ ಗಡ್ಡವಾಗಲಿ, ಮೀಸೆಯಾಗಲಿ ಮೂಡದ  ಇಪ್ಪತ್ತೆರೆಡು ವಯಸ್ಸಿನ ಗುರೂಜಿ ಎಂಬ ಯುವಕನೂ ಇದ್ದಾನೆ. ಇಂತಹ ಮೂರ್ಖಶಿಖಾಮಣಿಗಳಿಂದ ಮೌಡ್ಯದ ವಿಷವನ್ನು ಬಿತ್ತುತ್ತಿರುವ ದೃಶ್ಯ ಮಾಧ್ಯಮಗಳಿಗೆ ಕನ್ನಡದ ಜನತೆ ತುರ್ತಾಗಿ ಗ್ರಹಣವನ್ನು ಬಿಡಿಸಬೇಕಿದೆ.
ಬೆಂಗಳೂರಿನ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ನಾನು ಕಂಡ ಇಬ್ಬರು ಶ್ರೇಷ್ಠ ಪ್ರಾಧ್ಯಾಪಕರೆಂದರೆ, ನನ್ನ ಆತ್ಮೀಯ ಮಿತ್ರರಾದ ಪ್ರೊ. ಎನ್.ಎಸ್. ಅಶೋಕ್ ಕುಮಾರ್ ಮತ್ತು ಪ್ರೊ.ಬಿ.ವಿ.ಶ್ರೀಧರ. ಇವರಲ್ಲಿ ನನ್ನ ಜಿಲ್ಲೆಯರು ಮತ್ತು ಹಿರಿಯವರಾಗಿದ್ದ  ಬಿ.ವಿ. ಶ್ರೀಧರ  ಈಗಿಲ್ಲ. ಅವರು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕೇವಲ ಪತ್ರಿಕೋದ್ಯವನ್ನು ಪಾಠ ಮಾಡದೆ, ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಸಹ ಬೆಳಸುತ್ತಿದ್ದರು. ಅವರು ಬರೆದ ಬಾಪೂ ಚಿಂತನೆ ಮತ್ತು ಇಳೆಯ ಬೆಳಗು ಎಂಬ ಎರಡು ಕೃತಿಗಳು ಇಂದಿಗೂ ಸಹ ಪತ್ರಕರ್ತರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳ  ಪಾಲಿಗೆ ಬೈಬಲ್ ಎಂದು ಹೇಳಬಹುದು. ಅವರು ತಮ್ಮ ಇಳೆಯ ಬೆಳಗು ಕೃತಿಯಲ್ಲಿ ಜಗತ್ತಿನ ವೈಜ್ಞಾನಿಕ ಅನ್ವೇಷಕರ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ.
ಅವರು ಗೆಲಿಲಿಯೊ ಕುರಿತು ಬರೆದ ಲೇಖನದ ಸಾಲುಗಳಿವುಚಂದ್ರನ ಮೇಲೆ ಪರ್ವತಗಳಿವೆ. ಪ್ರಿಯಾಡಿಸ್ನಲ್ಲಿ ನಕ್ಷತ್ರಗಳಿವೆ, ವೀನಸ್ ಗ್ರಹದ ಅರ್ಧ ಚಂದ್ರಾಕೃತಿ, ಶನಿಗ್ರಹದ ಉಂಗುರಗಳು, ಸೂರ್ಯನ ಮೇಲಿರುವ ಚುಕ್ಕೆಗಳು, ಹೀಗೆ ಹಲವಾರು ವಿಷಯಗಳನ್ನು ಕಂಡು ಹಿಡಿದು ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಗೆಲಿಲಿಯೊ ಹಲವು ಹತ್ತು ಬವಣೆಗಳಿಗೆ ಬಲಿಯಾದನು. ಆದರೂ ಸಹ ಸೂರ್ಯ, ಚಂದ್ರ, ನಕ್ಷತ್ರಗಳು ಇರುವವರೆಗೆ ಅವನು ಖಗೋಳ ಶಾಸ್ತ್ರದ ಮೂಲಕರ್ತನೆಂದು ಮಿನುಗುತ್ತಲೇ ಇರುತ್ತಾನೆ
ಇದೇ ರೀತಿ ನ್ಯೂಟನ್ ಬಗ್ಗೆ ಬರೆಯುತ್ತಾತಮ್ಮ ಕಕ್ಷೆಯಲ್ಲಿ ಸುತ್ತಲ ಗ್ರಹಗಳಿಗೆ ಸತತ ಒತ್ತಡ ಬೇಕಾಗುತ್ತದೆ ಎಂಬುದು ಹಿಮದಿನ ಎಲ್ಲಾ ಚಿಂತನಕಾರರ ಅಭಿಪ್ರಾಯವಾಗಿತ್ತು. ಆದರೆ, ನ್ಯೂಟನ್ ತನ್ನಪ್ರಿನ್ಸಿಪಿಯಾದಲ್ಲಿ ಇದನ್ನು ಅಲ್ಲಗೆಳೆದನು. ಯಾವುದೇ ವಸ್ತು ಬಲವಾಗಿ ಅಡ್ಡ ಬರುವವರೆಗೂ ಅದು ಚಲಿಸುತ್ತಲೇ ಇರುತ್ತದೆ. ಸೂರ್ಯನ ಗುರುತ್ವಾಕರ್ಷಣೆ ಮತ್ತು ಗ್ರಹಗಳ ಚಲನೆಯ ಕೇಂದ್ರಾಪಗಾಮಿ ಬಲ ಒಂದೇ ಆಗಿರುವುದರಿಂದ ಅವುಗಳು ಚಕ್ರಕಾರದಲ್ಲಿ ಸುತ್ತಲು ಹೆಚ್ಚಿನ ಒತ್ತಡವನ್ನು ಹಾಕಬೇಕಾಗಿಲ್ಲ ಎಂದು ನ್ಯೂಟನ್ ಬರೆದನುಎಂದು ಪ್ರೊ.ಬಿ.ವಿ.ಶ್ರೀಧರ ದಾಖಲಿಸಿದ್ದಾರೆ.
ಇಂತಹ ವೈಜ್ಞಾನಿಕ ತಿಳುವಳಿಕೆಯನ್ನು ನಾವೀಗ  ನಮ್ಮ ದೃಶ್ಯ ಮಾಧ್ಯಮದ ಬೃಹಸ್ವತಿಗಳಿಗೆ ನೀಡಬೇಕಾಗಿರುವುದು ಕರ್ನಾಟಕದ ಪ್ರಜ್ಞಾವಂತರ ಕರ್ತವ್ಯವಾಗಿದೆ. ಚರ್ಚೆಯ ಹೆಸರಿನಲ್ಲಿ ತೌಡು ಕುಟ್ಟುವ ಕಾರ್ಯಕ್ರಮಕ್ಕೆ  ಛಾನಲ್ ಗಳಿಂದ ಆಹ್ವಾನ ಬಂದ ಕೂಡಲೇ ಕಂಕುಳಲ್ಲಿ ಒನಕೆ ಇಟ್ಟುಕೊಂಡು ಕಛೇರಿಯತ್ತ ದೌಡಾಯಿಸುವ ಚಿಂತಕರು, ಪ್ರಗತಿಪರರು, ಬುದ್ದಿಜೀವಿಗಳುನಾವು ಎಂತಹ ಮಾಧ್ಯಮಗಳ ಜೊತೆ ಗುರುತಿಸಿಕೊಳ್ಳುತ್ತಿದ್ದೇವೆಎಂಬುದರ ಕುರಿತು ಒಮ್ಮೆ  ತಮ್ಮ ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ.

( ಕರಾವಳಿ ಮುಂಜಾವು ದಿನಪತ್ರಿಕೆಯಜಗದಗಲಅಂಕಣ ಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ