ಶನಿವಾರ, ಫೆಬ್ರವರಿ 17, 2018

ಕಳ್ಳರ ಪಾಲಿಗೆ ತಿಜೋರಿಗಳಾಗುತ್ತಿರುವ ಭಾರತದ ಬ್ಯಾಂಕುಗಳು

ಅಂತರಾಷ್ಟ್ರೀಯ ಮಟ್ಟದ ಹಗಲು ದರೋಡೆಕೋರರ ಪಾಲಿಗೆ ಇತ್ತೀಚೆಗಿನ ದಿನಗಳಲ್ಲಿ ಭಾರತ ನಿಜವಾದ ಸ್ವರ್ಗ ಎನಿಸಿದೆ. ಉದ್ಯಮಿಗಳ ಮುಖವಾಡ ತೊಟ್ಟು, ಭಾರತದ ಯಾವುದೇ ಪ್ರಮುಖ ರಾಜಕೀಯ ಪಕ್ಷಕ್ಕೆ ದೇಣಿಗೆ ಹೆಸರಿನಲ್ಲಿ ಒಂದಿಷ್ಟು ಎಂಜಲು ಕಾಸನ್ನು ಬಿಸಾಡಿ ರಾಜಕಾರಣಿಗಳ ಸ್ನೇಹ ಸಂಪಾದಿಸಿಕೊಂಡರೆ ಸಾಕು. ದೇಶದಲ್ಲಿ ಮಾಡಬಹುದಾದ ಯಾವುದೇ ರೀತಿಯ ಅನಾಚಾರ, ಅಕ್ರಮ ವ್ಯವಹಾರ ಮತ್ತು ಬ್ಯಾಂಕುಗಳ ಹಗಲು ದರೋಡೆಗೆ ಪರವಾನಗಿ ದೊರೆಯುತ್ತದೆ. ಇಂತಹ ಪರವಾನಗಿ ನಿಮ್ಮ ಬಳಿ ಇದ್ದರೆ, ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳು ಸದಾ ನಿಮ್ಮ ಅಂಗಾಲುಗಳನ್ನು ಕಿಂಚಿತ್ತೂ ಕೊಳೆ ಇಲ್ಲದಂತೆ ನೆಕ್ಕಲು ಸದಾ ಸಿದ್ಧರಿರುತ್ತಾರೆ. ಇತ್ತೀಚೆಗೆ ನೀರವ್ ಮೋದಿ ಎಂಬ ಬೆಲ್ಜಿಂಯಂ ದೇಶದಲ್ಲಿ ಹುಟ್ಟಿ ಬೆಳೆದು ಅಲ್ಲಿನ ಪೌರತ್ವ ಪಡೆದಿರುವ ಗುಜರಾತ್ ಮೂಲದ ವಜ್ರದ ಉದ್ಯಮಿ ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕ್ ಗಳಿಗೆ ಬರೋಬ್ಬರಿ ಹನ್ರ್ನೆಂದು ಸಾವಿರ ಕೋಟಿರೂಪಾಯಿಗಳ ಉಂಡೆ ನಾಮ ತಿಕ್ಕಿರುವ ಪರಿಯನ್ನು ಗಮನಿಸಿದರೆ, ಭಾರತದ ರಾಜಕೀಯ ಹಾಗೂ ಆರ್ಥೀಕ ವ್ಯವಸ್ಥೆಯು ಎಷ್ಟೊಂದು ಸಡಿಲವಾಗಿದೆ ಎಂಬುದು ನಮಗೆ ಅರಿವಾಗಬಲ್ಲದು. ಇದಕ್ಕೆ ಪೂರಕವಾಗಿ ದನಗಳಿರಲಿ, ಕತ್ತೆಗಳನ್ನು ಕಾಯಲು ಅನಾಲಾಯಕ್ಕಾದ ಜನರನ್ನು ನಾವು ಅಧಿಕಾರದ ಸ್ಥಾನದಲ್ಲಿ ಕೂರಿಸಿ, ಅವರನ್ನು ಇಂದ್ರ-ಚಂದ್ರ ಎಂದು  ಗುಣಗಾನ ಮಾಡುತ್ತಾ ನಮ್ಮ ಕಾಲುಗಳ ಮೇಲೆ ನಾವೇ ಕಲ್ಲು ಎತ್ತಿ ಹಾಕಿಕೊಳ್ಳುವ ಬೌದ್ಧಿಕ ದಾರಿದ್ರ್ಯಕ್ಕೆ ತಳ್ಳಲ್ಪಟ್ಟಿದ್ದೇವೆ.
 ಇಂತಹ ಅನಾಹುತದ ಹಾಗೂ ಬೌದ್ಧಿಕ ದಾರಿದ್ರ್ಯದ ದಿನಗಳಲ್ಲಿಯೂ ಸಹ ಭಾರತದ ರಾಜಕೀಯದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಯುದ್ಧೋನ್ಮಾದ ಮತ್ತು ರಾಜಕೀಯ ನಾಯಕರ ರಣೋತ್ಸಾಹ ಎಲ್ಲೆಡೆ ಕಂಡುಬರುತ್ತಿದೆಹಿಂದಿನ ದಿನಗಳಲ್ಲಿ  ದೇಶದ ಯಾವುದೇ ರಾಜ್ಯಗಳ ವಿಧಾನಸಭಾ ಚುನಾವಣೆ ಅಥವಾ ಲೋಕಸಭೆಗೆ ನಡೆಯುತ್ತಿದ್ದ ಸಾರ್ವತ್ರಿಕ ಚುನಾವಣೆಯ ದಿನಾಂಕಗಳು ಪ್ರಕಟವಾದ ನಂತರ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದವು. ರಾಜಕೀಯ ಪಕ್ಷಗಳ ಪ್ರಣಾಳಿಕೆ, ಪ್ರಚಾರ, ಕರಪತ್ರ, ಪೋಸ್ಟರ್ ಅಥವಾ ಬ್ಯಾನರ್ ಇವುಗಳಿಂದ ಹಿಡಿದು, ಪ್ರಾದೇಶಿಕ ಅಥವಾ ಜಿಲ್ಲಾಮಟ್ಟದಲ್ಲಿ ನಡೆಯುತ್ತಿದ್ದ ರಾಜಕೀಯ ಸಮಾರಂಭಗಳಿಗೆ ಪಕ್ಷದ ವತಿಯಿಂದ ಹಣವನ್ನು ಖರ್ಚು ಮಾಡಲಾಗುತ್ತಿತ್ತುಚುನಾವಣೆ ಮುಗಿದ ನಂತರ. ರಾಜಕೀಯ ಪಕ್ಷಗಳು ಸಾರ್ವಜನಿಕವಾಗಿ ಲೆಕ್ಕ ಪತ್ರವನ್ನು ಪ್ರದರ್ಶಿಸಿ, ಪುನಃ ಸಾರ್ವಜನಿಕರಿಂದ ಪಕ್ಷಕ್ಕೆ ದೇಣಿಗೆ ಕೇಳುವ ನೈತಿಕತೆಯ ಸಂಪ್ರದಾಯವಿತ್ತು. ಆದರೆ, ಈಗ ಪ್ರಜಾ ಪ್ರಭುತ್ವ ವ್ಯವಸ್ಥೆಯ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚುನಾವಣೆಯ ಘೋಷಣೆಗೆ ಮುನ್ನವೇ  ಸರ್ಕಾರದ ಸಾರ್ವಜನಿಕ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವ ವೈಖರಿಯನ್ನು ಗಮನಿಸಿದಾಗ ಅಥವಾ ದೇಶ ತಲುಪಿರುವ ಅಧೋಗತಿಯನ್ನು ನೆನೆದಾಗ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಏಕೆಂದರೆ, ಇತ್ತೀಚೆಗಿನ ದಿನಗಳಲ್ಲಿ ಕಾರ್ಪೋರೇಟ್ ಸಂಸ್ಥೆಗಳು, ಬೃಹತ್ ಕೈಗಾರಿಕಾ ಸಂಸ್ಥೆಗಳು ಮತ್ತು ಉದ್ಯಮಿಗಳಿಂದ ರಾಜಕೀಯ ಪಕ್ಷಗಳಿಗೆ ಹರಿದು ಬರುತ್ತಿರುವ ದೇಣಿಗೆಯ ಹಣದ ಪ್ರಮಾಣವನ್ನು ಒಮ್ಮೆ ಗಮನಿಸಿದರೆ, ಭಾರತದ ಭ್ರಷ್ಟಾಚಾರದ ಮೂಲ ಬೇರು ಎಲ್ಲಿದೆ ಎಂಬುದು ನಮಗೆ ಅರಿವಾಗುತ್ತದೆ.
2012 ರಿಂದ 2016 ರವರೆಗೆ ಭಾರತದ ಐದು ಪ್ರಮುಖ ರಾಜಕೀಯ ಪಕ್ಷಗಳು ಒಟ್ಟು 2987 ಕೈಗಾರಿಕೋದ್ಯಮಿಗಳು ಮತ್ತು ವ್ಯಾಪರಸ್ಥರಿಂದ ಪಡೆದಿರುವ ದೇಣಿಗೆಯ ಹಣದಲ್ಲಿ ಭಾರತೀಯ ಜನತಾ ಪಕ್ಷವು 705ಕೋಟಿ 81 ಲಕ್ಷ ರೂಪಾಯಿಗಳು ಸಂದಾಯವಾಗಿದ್ದರೆರಾಷ್ಟ್ರೀಯ ಕಾಂಗ್ರೇಸ್ ಪಕ್ಷಕ್ಕೆ 198 ಕೋಟಿ, 16 ಲಕ್ಷ ರೂಪಾಯಿಗಳ ಹಣ ಸಂದಾಯವಾಗಿದೆ. ಇಷ್ಟು ಮಾತ್ರವಲ್ಲದೆಭಾರತದ ಕಾರ್ಪೋರೇಟ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಒಟ್ಟು 956 ಕೋಟಿ, 77 ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದು ಇದರಲ್ಲಿ ಶೇಕಡ 73.8 ರಷ್ಟು ದೇಣಿಗೆ ಹಣವನ್ನು ಭಾರತೀಯ ಜನತಾ ಪಕ್ಷಕ್ಕೆ ಸಂದಾಯವಾಗಿದೆ ಎಂಬುದು ಅಧಿಕೃತ ಅಂಕಿ ಅಂಶಗಳು ದೃಢಪಡಿಸಿವೆ. ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗವು 20 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ  ದೇಣಿಗೆ ನೀಡುವವರ ಹಾಗೂ ಸಂಘ ಸಂಸ್ಥೆಗಳ ವಿವರಗಳನ್ನು ಅಧಿಕೃತವಾಗಿ ರಾಜಕೀಯ ಪಕ್ಷಗಳು ಘೋಷಿಸಬೇಕು ಎಂದು ನಿಬಂಧನೆಯನ್ನು ಹಾಕಿದ್ದರೂ ಸಹ ಹಲ್ಲು ಕಿತ್ತ ಹಾವಿನಂತಿರುವ ಚುನಾವಣಾ ಆಯೋಗದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇಂತಹ ಅರಾಜಕತೆಯ ದೇಶದಲ್ಲಿ ಹಣದ ಮೂಲಕ ಇಡೀ ವ್ಯವಸ್ಥೆಯನ್ನು ಮಣಿಸುವ ಕಲೆಯನ್ನು ಎಲ್ಲಾ ಉದ್ಯಮ ಸಾಹಿಸಿಗಳು ಮನಗಂಡಿದ್ದಾರೆ. ಬ್ಯಾಂಕುಗಳಿಗೆ, ಸರ್ಕಾರಗಳಿಗೆ ಮತ್ತು ವ್ಯವಸ್ಥೆಗೆ ಮುಂಡಾ ಮೋಚುವುದು ಕೂಡ ಒಂದು ಯಶಸ್ವಿ ಉದ್ಯಮ ಎಂದು ಇವರೆಲ್ಲಾ ಭಾವಿಸಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನಡೆದಿರುವ ಹಗರಣಗಳು ಮತ್ತು ಇಲ್ಲಿಂದ ತಪ್ಪಿಸಿಕೊಂಡು ಹೋಗಿ ವಿದೇಶದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವವರ ಇತಿಹಾಸವನ್ನು ಗಮನಿಸಿದಾಗ  ದೇಶದ ರಾಜಕಾರಣಿಗಳ ಮತ್ತು ಅಧಿಕಾರಿಗಳ ನೈತಿಕತೆ ಮತ್ತು ಪ್ರಾಮಾಣಿಕತೆ ಎಂತಹ ಮಟ್ಟದಲ್ಲಿದೆ ಎಂಬುದು ನಮಗೆ ಅರ್ಥವಾಗುತ್ತದೆಕ್ರಿಕೇಟ್ ಪಂದ್ಯಕ್ಕೆ .ಪಿ.ಎಲ್. ಹೆಸರಿನಲ್ಲಿ ಜೂಜಾಟದ ಸ್ಪರ್ಶ ನೀಡಿ, ಪಂದ್ಯಗಳ ಮೂಲಕ ಹಣದ ಹೊಳೆ ಹರಿಯುವಂತೆ ಮಾಡಿದ ಲಲಿತ್ ಮೋದಿ ಎಂಬ ವಂಚಕನೊಬ್ಬ ಹಣ, ಹೆಂಡ ಮತ್ತು ಮಾನಿನಿಯರ ಮೂಲಕ ದೇಶದ ಬಹುತೇಕ ಕ್ರಿಕೆಟ್ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮತ್ತು ಭಾರತದ ಕ್ರಿಕೇಟ್ ನಿಯಂತ್ರಣ ಮಂಡಳಿಯನ್ನು ಭ್ರಷ್ಟಗೊಳಿಸಿ, ಸಾವಿರಾರು ಕೋಟಿ ರೂಪಾಯಿಗಳ  ಹಗರಣಗಳಿಂದ ತಪ್ಪಿಸಿಕೊಂಡು ಪರಾರಿಯಾದವನು ಇಂದು ಇಂಗ್ಲೇಂಡ್ ಮತ್ತು ದಕ್ಷಿಣ ಆಫ್ರಿಕಾದ ಕಡಲ ತೀರಗಳಲ್ಲಿ ಮಾನಿನಿಯರ ಜೊತೆ ಮೋಜಿನಾಟದಲ್ಲಿ ನಿರತನಾಗಿದ್ದಾನೆ.
ಭಾರತದ ಕಾರ್ಪೋರೇಟ್ ವಲಯದಲ್ಲಿ ಕೌಬಾಯ್ ಎಂದು ಪ್ರಖ್ಯಾತನಾಗಿದ್ದ ವಿಜಯ್ಮಲ್ಯ ಎಂಬ ಉದ್ಯಮಿಯು ಸುಮಾರು 9 ಸಾವಿರ ಕೋಟಿ ರೂಪಾಯಿಗಳ ಸಾಲಕ್ಕೆ ಕೈ ಎತ್ತಿ, ರಾಜಾ ರೋಷವಾಗಿ ಬ್ರಿಟೀಷ್ ಏರ್ವೇಸ್ ವಿಮಾನದಲ್ಲಿ ಲಂಡನ್ ನಗರಕ್ಕೆ ಪ್ರಯಾಣ ಬೆಳಸಿದ   ಸಾಹಿಸಿ ಎಂದು ಹೇಳಬೇಕು. ಈವರೆಗೆ ಈತನನ್ನು ಭಾರತಕ್ಕೆ ಕರೆತಂದು ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ದಕ್ಷಿಣ ಆಫ್ರಿಕಾದಲ್ಲಿರುವ 28 ಸಾವಿರ ಎಕರೆ ಅರಣ್ಯ ಪ್ರದೇಶದ ಮಾಲಿಕತ್ವವನ್ನು ಹೊಂದಿರುವ ವಿಜಯ ಮಲ್ಯ ಇದೀಗ  ಲಂಡನ್ ನಗರದಲ್ಲಿರುವ ವೈಭವೋಪೇತ ಅರಮನೆಯಂತಹ ಬಂಗಲೆಯಲ್ಲಿ ಪತ್ನಿ ಹಾಗೂ ಪುತ್ರ ಸಿದ್ಧಾರ್ಥನೊಂದಿಗೆ ವಾಸವಾಗಿದ್ದಾನೆ. ಜೊತೆಗೆ  ಪ್ರತಿ ವಾರ ಹದಿನಾರು ಲಕ್ಷ ರೂಪಾಯಿ ಖರ್ಚು ಮಾಡಲು ಇಂಗ್ಲೆಂಡ್ ನ್ಯಾಯಾಲಯದಲ್ಲಿ ಅನುಮತಿ ಪಡೆದು ಬದುಕುತ್ತಿದ್ದಾನೆ. ಇದೇ ರೀತಿ ದೀಪಕ್ ತಲ್ವಾರ್ ಮತ್ತು ಸಂಜಯ್ ಭಂಡಾರಿ ಇಬ್ಬರು ವಂಚಕರು ದೇಶ ತೊರೆದು ವಿದೇಶದಲ್ಲಿ ಸುರಕ್ಷಿತವಾಗಿ ವಾಸವಾಗಿದ್ದಾರೆ.

ಇದೀಗ ಬೆಳಕಿಗೆ ಬಂದಿರುವ ನೀರವ್ ಮೋದಿ ಎಂಬ ವಜ್ರದ ವ್ಯಾಪಾರಿಯ ಮೋಸದ ಹಗರಣದ ಇತಿಹಾಸವನ್ನು ಗಮನಿಸಿದಾಗ ಇದು 2011 ರಿಂದ ಅಂದರೆ, ಸತತ ಏಳುವರ್ಷಗಳ ಬ್ಯಾಂಕಿನ ಸಾಲದ ಖಾತರಿ ಪತ್ರವನ್ನು ದುರುಪಯೋಗ ಪಡಿಸಿಕೊಂಡಿರುವುದು ಪತ್ತೆಯಾಗಿದೆ. ಹಗರಣದಲ್ಲಿ ಕಮಿಷನ್ ಆಸೆಗಾಗಿ ಸ್ವತಃ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಒಂದು ಖಾತೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುವಾಗ ಕುರಿತು ಪಂಜಾಂಬ್ ನ್ಯಾಷನಲ್ ಬ್ಯಾಂಕಿನ ಹಿರಿಯ ಅಧಿಕಾರಿಗಳಾಗಲಿ ಅಥವಾ ರಿಸರ್ವ್ ಬ್ಯಾಂಕಿನ ಅಧಿಕಾರಿಗಳು ಕೂಲಂಕುಶವಾಗಿ ಗಮನ ಹರಿಸಿಲ್ಲ ಅಥವಾ ನಿಗಾ ವಹಿಸಿಲ್ಲವೆಂದರೆ. ಭಾರತದ ಅರ್ಥವ್ಯವಸ್ಥೆಯ ಲೋಪ ಎಷ್ಟೊಂದು ಗಂಭಿರವಾಗಿದೆ ಎಂಬುವುದು ಜನ ಸಾಮಾನ್ಯನಿಗೂ ಅರ್ಥವಾಗುತ್ತದೆ. ಉದ್ದಿಮೆದಾರರು ವಿದೇಶದಿಂದ ಆಮದು ಮಾಡಿಕೊಂಡ ವಸ್ತುಗಳಿಗೆ ಬ್ಯಾಂಕುಗಳು ನೀಡುವ ಸಾಲದ ಖಾತರಿ ಪತ್ರದ ಅವಧಿ ಕೇವಲ 100 ದಿನಗಳು ಮಾತ್ರವಾಗಿರುತ್ತದೆ. ಅವಧಿಯಲ್ಲಿ ನಿಗದಿ ಪಡಿಸಿದ ಬಡ್ಡಿಯೊಂದಿಗೆ ಹಣವನ್ನು ಬ್ಯಾಂಕಿಗೆ ಖಾತೆದಾರನು ಸಂದಾಯ ಮಾಡಿರಬೇಕು. ಆದರೆ. ನೀರವ್ ಮೋದಿಯ ಪ್ರಕರಣದಲ್ಲಿ ಆತನ ಖಾತೆಯನ್ನು ಪರಿಶೀಲಿಸದೆ, ನಿರಂತರವಾಗಿ ಹಣವನ್ನು ಸಾಲದ ರೂಪದಲ್ಲಿ ಸಂದಾಯ ಮಾಡಿರುವುದನ್ನು ಗಮನಿಸಿದಾಗ ಈತ ಎಷ್ಟೊಂದು ಪ್ರಭಾವಶಾಲಿ ಎಂಬುದು ಅರಿವಾಗುತ್ತದೆ.
ದೇಶದ ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿಯುನಾನು  ಭಾರತದ ಎಲ್ಲಾ ಪ್ರಜೆಗಳ ಹಿತವನ್ನು ಅವರ ಭಾಷೆ, ಧರ್ಮ, ಜಾತಿ ಮತ್ತು ಪ್ರದೇಶಗಳ ಎಲ್ಲೆಯನ್ನು ಮೀರಿ ಕಾಪಾಡಬೇಕಾದ ನೈತಿಕ ಕರ್ತವ್ಯದಲ್ಲಿದ್ದೀನಿಎಂಬ ಅಂಶವನ್ನು ಮರೆತು ಎಷ್ಟೋ ವರ್ಷಗಳಾದಂತಿದೆ. ಕೇವಲ ಒಂದು ಪಕ್ಷದ ಪ್ರತಿನಿಧಿಯಂತೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದು ಅಥವಾ ಒಂದು ನಗರ ಸಭೆಯ ಅಧ್ಯಕ್ಷನಂತೆ ಚುನಾವಣೆಯನ್ನು ಗೆದ್ದುಕೊಡುವುದು  ಮಾತ್ರ ನನ್ನ ಕರ್ತವ್ಯ ಎಂದು ಭಾವಿಸಿರುವುದು ಭಾರತದ ಪ್ರಜಾ ಪ್ರಭುತ್ವದ ಅತಿ ದೊಡ್ಡ ದುರಂತವೆಂದರೆ ತಪ್ಪಾಗಲಾರದು. 2016 ಜುಲೈ ತಿಂಗಳಿನಲ್ಲಿ ನೀರವ್ ಮೋದಿಯ ಕುರಿತಂತೆ ಪ್ರಧಾನಿ ಕಾರ್ಯಾಲಯಕ್ಕೆ ದೂರು ದಾಖಲಾದರೂ ಸಹ ಅದನ್ನು ಗಂಭೀರವಾಗಿ ಪರಿಗಣಿಸದೆ, ಕಾರ್ಪೋರೇಟ್ ವ್ಯವಹಾರಗಳ ವಿಭಾಗಕ್ಕೆ ಒಂದು ಸಾಮಾನ್ಯ ದೂರಿನಂತೆ ವರ್ಗಾಯಿಸಿರುವುದು ಪ್ರಧಾನಿಯವರ ಬೇಜವಬ್ದಾರಿತನಕ್ಕೆ ಸಾಕ್ಷಿಯಾಗಿದೆಭಾರತದ ಸರ್ಕಾರದ ನಿಯೋಗದ ಜೊತೆ  ಪ್ರತಿನಿಧಿಯಾಗಿ ಹೋಗದಿದ್ದರೂ ಸಹನೀರವ್ ಮೋದಿ ಎಂಬಾತ ದಾವೂಸ್ ನಗರದಲ್ಲಿ ಪ್ರಧಾನಿಯನ್ನು ಭೇಟಿ ಮಾಡಲು ಹೇಗೆ ಸಾಧ್ಯವಾಯಿತು? ಇದೂ ಸಾಲದೆಂಬಂತೆ   ನಿಯೋಗದ ಸದಸ್ಯರ ಜೊತೆ ನಿಂತು  ಪೋಟೊ ತೆಗೆಸಿಕೊಂಡಿದ್ದಾನೆ. ಈ ಬಗ್ಗೆ  ನರೇಂದ್ರ ಮೋದಿಯವರು ಭಾರತದ ಜನತೆಗೆ ಉತ್ತರ ನೀಡಬೇಕಿದೆ.

ವರ್ಷಕ್ಕೆ 55 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂದು ತಮ್ಮ 58 ಇಂಚಿನ ಎದೆಯುಬ್ಬುಸಿ  ಹೇಳಿಕೆ ನೀಡಿದ್ದ ಪ್ರಧಾನಿ  ಈಗ ಪಕೋಡ ಮಾರಾಟ ಮಾಡಿ ಉದ್ಯೋಗ ಸಂಪಾದಿಸಿ ಎಂಬ ಆತ್ಮ ವಂಚನೆಯ ಮಾತುಗಳನ್ನಾಡುತ್ತಿರುವ ಪ್ರಧಾನಿ ಮೋದಿಯವರ   ಹಗರಣ ಕ್ಷಣಕ್ಕೆ ಏನೂ ಅಲ್ಲದಿರಬಹುದು. ಆದರೆ. ಮುಂದಿನ ದಿನಗಳಲ್ಲಿ ಇದು ಎಲ್ಲರನ್ನೂ ಸಾಮೂಹಿಕವಾಗಿ ಆಹುತಿ ತೆಗೆದುಕೊಳ್ಳುವ ಶಕ್ತಿ ಇಂತಹ ಆರ್ಥಿಕ ಹಗರಣಗಳಿಗೆ ಇರುತ್ತವೆ ಎಂಬುದನ್ನು ಅವರು ಮನಗಾಣ ಬೇಕು. ಭಾರತದ ಬ್ಯಾಂಕುಗಳಲ್ಲಿ ಅನುತ್ಪಾದಿತ ಸಾಲದ ಪ್ರಮಾಣ ( ಎನ್.ಪಿ.ಎ,) ಒಟ್ಟು 7.34 ಲಕ್ಷ ಕೋಟಿ ರೂಪಾಯಿನಷ್ಟು ಇದೆ. ಇದರಲ್ಲಿ ಕಾರ್ಪೋರೇಟ್ ಕಂಪನಿಗಳ ಪಾಲು ಅಂದರೆ ವಸೂಲಿಯಾಗಬೇಕಾದ ಸಾಲದ ಪ್ರಮಾಣ ಶೇಕಡ 77 ರಷ್ಟು ಇದೆ. ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ 1.86 ಲಕ್ಷ ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ 57 ಸಾವಿರದ 630 ಕೋಟಿ, ಬ್ಯಾಂಕ್ ಇಂಡಿಯಾದಲ್ಲಿ 49 ಸಾವಿರದ 307 ಕೋಟಿ, ಬ್ಯಾಂಕ್ ಆಫ್ ಬರೋಡದಲ್ಲಿ 46 ಸಾವಿರದ 304 ಕೋಟಿ ಮತ್ತು ಕೆನರಾ ಬ್ಯಾಂಕಿನಲ್ಲಿ 39 ಸಾವಿರದ 164 ಕೋಟಿ ರೂಪಾಯಿ ಇವೆಲ್ಲವೂ ವಸೂಲಿಯಾಗದ ಸಾಲಗಳು.  ಜನರ ಮನರಂಜನೆಗಾಗಿ ವಿಧೂಷಕನಂತೆ ವೇದಿಕೆಯಲ್ಲಿ ಅತಿಯಾಗಿ ಮಾತುನಾಡುವುದು ಹಾಗೂ ಪ್ರವಾಸ ಮಾಡುವುದನ್ನು ತ್ಯೆಜಿಸಿ  ದೇಶದ ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಸಮಸ್ಯೆಗಳ ಕುರಿತು ತಜ್ಞರ ಜೊತೆ ಸಮಾಲೋಚಿಸುವ ಗುಣವನ್ನು ಅತ್ಯಂತ ತುರ್ತಾಗಿ ಪ್ರಧಾನಿ ಮೋದಿಯವರು ಬೆಳಸಿಕೊಳ್ಳಬೇಕಿದೆ.


( ಕರಾವಳಿ ಮುಂಜಾವು ದಿನಪತ್ರಿಕೆಯ “ ಜಗದಗಲ” ಅಂಕಣ ಬರಹ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ