ಶನಿವಾರ, ಸೆಪ್ಟೆಂಬರ್ 3, 2022

ಲೋಕಾಯುತ ದರ್ಶನದಲ್ಲಿ ಅವೈದಿಕ ಪರಂಪರೆಯ ಬೇರುಗಳು

 

ಭಾರತದ ತತ್ವಶಾಸ್ತç ಇತಿಹಾಸದಲ್ಲಿ ವೈದಿಕ ಪರಂಪರೆಯ ವಿರುದ್ಧ ಸಿಡಿದೆದ್ದ ಚಾರ್ವಾಕನ ಸಿದ್ಧಾಂತಗಳು ನಮಗಿಂದು ಲೋಕಾಯುತ ದರ್ಶನ ಎಂಬ ಹೆಸರಿನಲ್ಲಿ ಚಿರಪರಿಚಿತವಾಗಿವೆ. ಕ್ರಿಸ್ತಪೂರ್ವ ಐದು ಅಥವಾ ನಾಲ್ಕನೆಯ ಶತಮಾನದಲ್ಲಿ ರಚನೆಯಾದವು ಎಂದು ಹೇಳಲಾಗುವ ವೈದಿಕ ಪರಂಪರೆಯ ಮೂಲ ಗ್ರಂಥಗಳಾದ ಋಗ್ವೇದ. ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ ಇವುಗಳಿಗೆ ಪರ್ಯಾಯವಾಗಿ ಬೃಹಸ್ಪತಿ ಆಚಾರ್ಯ ಎಂಬ ವ್ಯಕ್ತಿಯು ಪ್ರತಿಪಾದಿಸಿದ ಭೌತವಾದದ ಸಿದ್ಧಾಂತವು ನಂತರದ ದಿನಗಳಲ್ಲಿ ಆತನ ಶಿಷ್ಯನಾದ ಚಾರ್ವಾಕನಿಂದ ವ್ಯಾಖ್ಯಾನಿಸಲ್ಪಟ್ಟು ಚಾರ್ವಾಕ ದರ್ಶನ ಅಥವಾ ಲೋಕಾಯುತ ದರ್ಶನ ಎಂಬ ಹೆಸರಿನಲ್ಲಿ ಪ್ರಸಿದ್ಧಿಯಾಯಿತು. ಇದನ್ನು  ವಸ್ತುನಿಷ್ಠ ಆಲೋಚನೆಯ ಫಲವಾಗಿ ಮೂಡಿಬಂದ ಮನುಕುಲದ ಶ್ರೇಷ್ಠ ಪರಿಕಲ್ಪನೆ ಅಥವಾ ಚಿಂತನೆ ಎಂದು ಹೇಳಬಹುದು. ಅಲ್ಲಿಯವರೆಗೆ ಪ್ರಚಲಿತದಲ್ಲಿದ್ದ ಬ್ರಾಹ್ಮಣ್ಯದ ಭಾವನಾವಾದವನ್ನು ಚಾರ್ವಾಕನು ತಿರಸ್ಕರಿಸುವುದರ ಮೂಲಕ  ದೇವರು, ಸೃಷ್ಟಿ, ಪುನರ್ಜನ್ಮ ಮುಂತಾದ ವಿಷಯಗಳ ಕುರಿತಂತೆ ಇದ್ದ ಪರಿಕಲ್ಪನೆಗಳಿಗೆ ಪೆಟ್ಟು ನೀಡಿದನು.  ಹಿಂದೂ ಧರ್ಮಕ್ಕೆ ಪರ್ಯಾಯವಾಗಿ ಬೌದ್ಧ ಧರ್ಮ, ಜೈನ ಧರ್ಮಗಳ ಸ್ಥಾಪನೆಗೆ ಹಾಗೂ ಅನೇಕ ಅವೈದಿಕ ಪರಂಪರೆಯ ಹುಟ್ಟಿಗೆ  ಪರೋಕ್ಷವಾಗಿ ಕಾರಣನಾದನು. ಇಂದು ನಮ್ಮೊಡನೆ ಅಸ್ತಿತ್ವದಲ್ಲಿರುವ ನಾಥ, ಸಾಂಖ್ಯ, ಸಿದ್ಧ, ಕಾಪಾಲಿಕ, ಅಜೀವಿಕ, ಶಾಕ್ತ ಹೀಗೆ ಅನೇಕ ಅವೈದಿಕ ಪರಂಪರೆಗಳು ಹಿಂದೂಧರ್ಮವು ಪ್ರತಿಪಾದಿಸುತ್ತಾ ಬಂದಿದ್ದ ಅಗ್ನಿ ಪೂಜೆಯನ್ನು  ತಿರಸ್ಕರಿಸುವುದರ ಮೂಲಕ  ಯಜ್ಞ ಯಾಗಾದಿಗಳನ್ನು ಬಹಿಷ್ಕರಿಸಿ ಹೊಸ ಚಿಂತನೆಗೆ ನಾದಿ ಹಾಡಿದವು.

ನಮಗೆ ಈವರೆಗೂ ಚಾರ್ವಾಕನ ಲೋಕಾಯುತ ದರ್ಶನದ ಪೂರ್ಣ ವಿವರಗಳು ಲಭ್ಯವಾಗಿಲ್ಲ ಆತನ ನಿಲುವುಗಳನ್ನು ಖಂಡಿಸುವ ಉದ್ದೇಶದಿಂದ ಆತನು ಎತ್ತಿದ್ದ ಪ್ರಶ್ನೆಗಳನ್ನು ಪ್ರಸ್ತಾಪಿಸಿರುವ ಬ್ರಾಹ್ಮಣ ಪಂಡಿತರು ಕ್ರಿಸ್ತಪೂರ್ವದಲ್ಲಿ ಸಂಸ್ಕೃತ ಭಾಷೆಯಲ್ಲಿ ಬರೆದ ಟಿಪ್ಪಣಿಗಳಿಂದ ಚಾರ್ವಾಕ ದರ್ಶನದ ವಿವರಗಳು ಲಭ್ಯವಾಗಿವೆ. ಬುದ್ಧನ ಮೇಲೆ ಅಪಾರ ಪ್ರಭಾವ ಬೀರಿರುವ ಲೋಕಾಯುತದ ದರ್ಶನದ ಅನೇಕ ಚಿಂತನೆಗಳನ್ನು ಬುದ್ಧನು ತನ್ನ ಧರ್ಮಕ್ಕೆ ಅಳವಡಿಸಿಕೊಂಡಿರುವ ಕಾರಣ ಪಾಲಿ ಮತ್ತು ಟಿಬೇಟ್ ಭಾಷೆಯಲ್ಲಿ ಅನೇಕ ಮಹತ್ವದ ವಿಚಾರಗಳು ಲಭ್ಯವಾಗಿವೆ. ನಮ್ಮ ಪುರಾಣ ಕೃತಿಗಳಾದ ರಾಮಾಯಣ, ಮಹಾಭಾರತ, ಬೃಹದಾರಣ್ಯಕ ಉಪನಿಷತ್ತುಗಳಲ್ಲಿ ಇದರ ಕುರಿತಾಗಿ ಪ್ರಸ್ತಾಪ ಇರುವುದರಿಂದ ಚಾರ್ವಾಕ ದರ್ಶನವನ್ನು ಭಾರತದ ಪ್ರಾಚೀನ ಗ್ರಂಥ ಎಂದು ಪರಿಗಣಿಸಲಾಗಿದೆ.  ಇದನ್ನು ಹೊರತು ಪಡಿಸಿದರೆ ಕೌಟಿಲ್ಯನ ಅರ್ಥಶಾಸ್ತçದಲ್ಲಿ ಮಾತ್ರ ಚಾರ್ವಾಕನ ಪ್ರಸ್ತಾವನೆಗಳಿರುವುದನ್ನು ನಾವು ಗಮನಿಸಬಹುದು.

ಮಗಧ ಸಾಮ್ರಾಜ್ಯದಲ್ಲಿ ಮಹಾಮಂತ್ರಿಯಾಗಿದ್ದ ಕೌಟಿಲ್ಯನು ಅರ್ಥಶಾಸ್ತç ಕೃತಿಯನ್ನು ವಾಸ್ತವವಾಗಿ ರಾಜಕುಮಾರರ ಶಿಕ್ಷಣಕ್ಕಾಗಿ ರಚನೆ ಮಾಡಿದ್ದನು. ಸಿಂಹಾಸನಕ್ಕೆ ಏರುವ ಮುನ್ನ ರಾಜಕುಮಾರರು ಕಲಿಯಲೇ ಬೇಕಾದ ನಾಲ್ಕು ವಿದ್ಯೆಗಳಲ್ಲಿ ಲೋಕಾಯುತ ದರ್ಶನದ ಕೆಲವು ಅಂಶಗಳನ್ನು ವಿಮರ್ಶಾತ್ಮಕ ವಿಚಾರಣೆ ಅಥವಾ ಶೋಧನೆ ಎಂಬ ಹೆಸರಿನಲ್ಲಿ ಅಡಕಗೊಳಿಸಿದ್ದನು. ಉಳಿದಂತೆ ವ್ಯಾಪಾರ, ವ್ಯವಹಾರವನ್ನು ತ್ರಾಯಿ ಹೆಸರಿನಲ್ಲಿ, ಕೃಷಿ ಮತ್ತು ಬೌತಿಕ ಸಂಪಾದನೆಯನ್ನು ವಿಜ್ಞಾನದ ವಾರ್ತಾ ಹೆಸರಿನಲ್ಲಿ ಹಾಗೂ ರಾಜಾಡಳಿತದ ವಿಷಂಗಳನ್ನು  ದಂಡನೀತಿ ಹೆಸರಿನಲ್ಲಿ ರೂಪಿಸಿದ್ದನು. ಜೊತೆಗೆ ನ್ಯಾಯ ಮತ್ತು ಮೀಮಾಂಸೆಯ ಅಂಶಗಳನ್ನು ಸಹ ಅಡಕಗೊಳಿಸಿದ್ದನು. ಕೌಟಿಲ್ಯನ ದೃಷ್ಟಿಕೋನದಲ್ಲಿ ಲೋಕಾಯುತ ದರ್ಶನವೆಂಬುದು ಕೇವಲ ಒಂದು ಜ್ಞಾನಶಾಖೆಯಾಗಿರಲಿಲ್ಲ ಅದು ಹಲವು ಆಯಾಮಗಳ ಚಿಂತನೆಗಳಿಗೆ ಸಾಧನೆಯ ಮಾರ್ಗವಾಗಿತ್ತು ಜೊತೆಗೆ ಬಹುತೇಕ ಬ್ರಾಹಣ ಪಂಡಿತರು ಲೋಕಾಯುತ ವಿಚಾರಗಳನ್ನು ಅನ್ವೀಕ್ಷಿಕಿ ಹೆಸರಿನಲ್ಲಿ ಚರ್ಚೆ ಮಾಡಿದ್ದರು. ಕಾರಣದಿಂದಲೇ ಕೌಟಿಲ್ಯನು ಎಲ್ಲಾ ಶಾಖೆಗಳ ಅಧ್ಯಯನಗಳಿಗೆ ವಿಚಾರಣೆಯು ( ಲೋಕಾಯುತ ದರ್ಶನ) ಕೈದೀವಿಗೆ ಎಂದು ಅಭಿಪ್ರಾಯಪಟ್ಟಿದ್ದಾನೆ. ಇದರ ಜೊತೆ ಸಾಂಖ್ಯಾ ಯೋಗ ವಿಷಯಗಳನ್ನು ಸಹ ಅವನು ಪ್ರಸ್ತಾಪಿಸಿದ್ದಾನೆ.

ಹದಿನಾಲ್ಕನೆಯ ಶತಮಾನದಲ್ಲಿ ಸರ್ವ ದರ್ಶನ ಸಂಗ್ರಹ ಎಂಬ ಹೆಸರಿನಲ್ಲಿ ಶೃಂಗೇರಿ ಮಠದ ಮುಖ್ಯಸ್ಥರಾದ ವಿದ್ಯಾರಣ್ಯ ಸ್ವಾಮಿ ಎಂಬುವರು ಮಾಧವಾಚಾರ್ಯ ಹೆಸರಿನಲ್ಲಿ ಲೋಕಾಯುತ ದರ್ಶನ ಕುರಿತಂತೆ ಪ್ರಸ್ತಾವನೆ  ಮಾಡಿದ ಫಲವಾಗಿ ಚಾರ್ವಾಕನ ವಿಚಾರಧಾರೆಗಳು ಎಲ್ಲೆಡೆ ಪ್ರಸಾರವಾದವು. ಭಾರತದ ಪ್ರಾಚೀನ ಚಿಂತನೆಗಳನ್ನು ಧರ್ಮಾತೀತ ನಿಲುವಿನಲ್ಲಿ ಮಂಡಿಸುವುದು ಅಥವಾ ವೈಚಾರಿಕವಾಗಿ ಮರು ರೂಪಿಸುವ ಬಗೆಯನ್ನು ಅವರು ಕೃತಿಯಲ್ಲಿ  ತೋರಿಸಿಕೊಟ್ಟಿದ್ದರು.ಲೋಕಾಯುತ ದರ್ಶನದ ಜೊತೆಗೆ ನ್ಯಾಯ, ವೈಶೇಷಿಕ, ಯೋಗ, ಸಾಂಖ್ಯ, ವೇದಾಂತ, ಮೀಮಾಂಸೆ ಒಳಗೊಂಡAತೆ ಹದಿನಾರು ದರ್ಶನಗಳನ್ನ ಬಗ್ಗೆಯೂ ಸಹ ವಿದ್ಯಾರಣ್ಯ ಸ್ವಾಮಿ ದಾಖಲಿಸಿದ್ದರು.

ದೇವಿಪ್ರಸಾದ್ ಚಟ್ಟೋಪಾದ್ಯಾಯ ಅವರು 1959 ರಲ್ಲಿ ರಚಿಸಿದಲೋಕಾಯುತ ಸ್ಟಡಿ ಇನ್ ಆನ್ಸಿಂಟ್ ಇಂಡಿಯನ್ ಮೆಟೀರಿಯಲಿಸಂಎಂಬ ಕೃತಿ ನಮಗೆ ಲೋಕಾಯುತ ದರ್ಶನದ ಸಮಗ್ರ ಮಾಹಿತಿ ನೀಡುವ ಆಧುನಿಕ ಕೃತಿಯಾಗಿದೆ. ಇದನ್ನು ಡಾ.ಜಿ.ಆರ್. ರಾಮಕೃಷ್ಣರವರು ಕನ್ನಡಕ್ಕೆ ಅನುವಾದಿಸಿದ್ದಾರೆ.  1960 ದಶಕದಲ್ಲಿ ಗೌರೀಶ ಕಾಯ್ಕಿಣಿ ಬರೆದ ಕೃತಿಯು ಬಹುಶಃ ಕನ್ನಡದ ಪ್ರಥಮ ಲೋಕಾಯುತ ದರ್ಶನದ  ಕೃತಿ ಎನ್ನಬಹುದು.

ತತ್ವಜ್ಞಾನ ಅಥವಾ ತತ್ವಶಾಸ್ತç ಭಾರತೀಯ ದರ್ಶನಗಳು ಎಂಬ ಹೆಸರಿನಲ್ಲಿ ವೈದಿಕ ಮತ್ತು ಅವೈದಿಕ ಜ್ಞಾನಪರಂಪರೆಗಳು ಇತಿಹಾಸದುದ್ದಕ್ಕೂ ಚರ್ಚೆಯಾಗುತ್ತಾ ಬಂದಿವೆ. ವೈದಿಕ ಮತ್ತು ಅವೈದಿಕ ಪರಂಪರೆಯ ದರ್ಶನಗಳ ಮುಖ್ಯ ತಾತ್ವಿಕ ಚರ್ಚೆಯ ನೆಲಗೆಟ್ಟು ವಿಶ್ವದ ಸೃಷ್ಟಿಯ ಕುರಿತಾಗಿರುವುದು ವಿಶೇಷ.  ಕಾರಣದಿಂದಾಗಿ ವೈದಿಕ ದರ್ಶನಗಳನ್ನು ಭಾವನಾವಾದಿ ಚಿಂತನೆಗಳೆAದು ಕರೆಯಲಾಗಿದೆ ಇವರ ದೃಷ್ಟಿಯಲ್ಲಿ ವಿಶ್ವವು ಸೃಷ್ಟಿಯಾಗಿರುವುದು ಒಂದು ಅಗೋಚರ ಶಕ್ತಿಯಿಂದ ಎಂಬ ನಂಬಿಕೆ ಇವರದಾಗಿದೆ.  ಇದನ್ನು ನಿರಾಕರಿಸುವ ಅವೈದಿಕ ಪರಂಪರೆಯು ವಾತಾವರಣದಲ್ಲಿರುವ ಸೂಕ್ಷö್ಮ  ವಸ್ತುವಿಂದ ವಿಶ್ವ ಮತ್ತು ಸಕಲೆಂಟು ಜೀವಿಗಳು ಸೃಷ್ಟಿಯಾಗಿವೆ ಅವುಗಳು ಜಗತ್ತಿನಲ್ಲಿ  ಶಾಶ್ವತವಲ್ಲ ಎಂದು ಹೇಳುವುದರ ಮೂಲಕ ವೈದಿಕ ಪರಂಪರೆಯ ಬ್ರಹ್ಮಾಂಡ, ಬ್ರಹ್ಮೋಪದೇಶ ಮುಂತಾದ ಪರಿಕಲ್ಪನೆಗಳನ್ನು ತಿರಸ್ಕರಿಸಿತು. ಹಾಗಾಗಿ ಚಿಂತನೆಯು ಬೌತವಾದಿ ಚಿಂತನೆ ಎಂದು ಪ್ರಸಿದ್ಧಿಯಾಗಿದೆ. ವಾಸ್ತವಾಗಿ ಕ್ರಿಸ್ತಪೂರ್ವದಲ್ಲಿ ಹಿಂದೂ ಧರ್ಮದಿಂದ ಸಿಡಿದೆದ್ದ ಶೈವಪರಂಪರೆ, ವೈಷ್ಣವಪರಂಪರೆ, ಬುದ್ಧ ಹಾಗೂ ಜೈನ ಪರಂಪರೆಗಳಿಗೆ ಅವುಗಳ ಹೆಸರಿನ ಹಿಂದೆ ಪೂರ್ವ ಎಂಬ ಶಬ್ದವನ್ನು ಬಳಕೆ ಮಾಡಲಾಗುತ್ತಿತ್ತು. ( ಪೂರ್ವ ಜೈನ, ಪೂರ್ವ ವೈಷ್ಣವ ಇತ್ಯಾದಿ) ನಂತರದ ದಿನಗಳಲ್ಲಿ ಅನೇಕ ಪರಂಪರೆಗಳಾಗಿ ಕವಲೊಡೆದ ಅವೈದಿಕ ಪರಂಪರೆಯು ಇಂದಿನ ದಿನಗಳಲ್ಲಿ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿದೆ. ಭಾರತೀಯ ತತ್ವಶಾಸ್ತç ಕುರಿತ ಅಧ್ಯಯನ ಎಂದರೆ ಗೊಂದಲಮಯ ತಾತ್ವಿಕ ಪ್ರಾಚೀನ ದರ್ಶನಗಳ  ಕುರಿತಾದ ಅಧ್ಯಯನ ಎಂಬಂತಾಗಿದೆ.

ಈಗಾಗಲೇ ಪ್ರಚಲಿತದಲ್ಲಿರುವಂತೆ ಚಾರ್ವಾಕ, ಬೌದ್ಧ, ಜೈನ, ರಾಮಾನುಜಾ ಸಿದ್ಧಾಂತ, ಪೂರ್ಣ ಪ್ರಜ್ಞ, ನಕಲೀಶ, ಪಾಶುಪತ, ಶೈವ, ಪ್ರತ್ಯಭಿಜ್ಞಾನ, ರಸೇಶ್ವರ, ವೈಶೇಷಿಕ, ನ್ಯಾಯ, ಜೈಮಿನೀಯ, ಪಾಣಿನೀಯ, ಸಾಂಖ್ಯ, ಪತಾಂಜಲಿ ಅಥವಾ ಯೋಗ, ಶಂಕರಚಾರ್ಯರ ಸಿದ್ಧಾಂತ ( ವೇದಾಂತ) ಇವುಗಳನ್ನು ವಿದ್ಯಾರಣ್ಯ ಸ್ವಾಮೀಜಿ ತಮ್ಮ ಸರ್ವ ದರ್ಶನ ಸಂಗ್ರಹ ಕೃತಿಯಲ್ಲಿ ಪ್ರಸ್ತಾಪಿಸಿ ಇವುಗಳಲ್ಲಿ ಲೋಕಾಯುತ ದರ್ಶನವು ಅತ್ಯಂತ ಹೀನಾಯವಾದುದು ಎಂದು ಟೀಕಿಸಿದ್ದಾರೆ. ಲೋಕಾಯುತ ದರ್ಶನವನ್ನು ನಿರಾಕರಿಸುವ ಉದ್ದೇಶದಿಂದ ಅದರಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಬ್ರಾಹ್ಮಣ ಪಂಡಿತರು ಉಲ್ಲೇಖಿಸಿದ ಕಾರಣಕ್ಕಾಗಿ ಇಂದು ನಮಗೆ ಚಾರ್ವಾಕನ ಸಿದ್ಧಾಂತಗಳು ಲಭ್ಯವಾಗಿವೆ. ಸರ್ವದರ್ಶನ ಸಂಗ್ರಹದಲ್ಲಿ ಪ್ರಸ್ತಾಪವಾಗಿರುವ ಮೂಲ ಅಂಶಗಳು ಈರೀತಿ ಇವೆ.

ಜೀವನದಲ್ಲಿ ಸಂತೋಷವೇ ಪರಮ ಗುರಿ ಜಗತ್ತನ್ನು ಹೊರತು ಪಡಿಸಿದರೆ ಸ್ವರ್ಗ ಅಥವಾ ನರಕ ಎಂಬ ಲೋಕಗಳಿಲ್ಲ, ಹುಟ್ಟು ಸಾವುಗಳಿಂದ ಬಿಡುಗಡೆ ಎಂಬುದು ಕೇವಲ ಭ್ರಮೆ, ಮನುಷ್ಯ ಜನ್ಮಕ್ಕೆ ಪುನರ್ಜನ್ಮ ಎನ್ನುವುದು ಹುಚ್ಚು ಪರಿಕಲ್ಪನೆ. ಮನುಷ್ಯ ಜೀವಿ ತಾನು ಬದುಕಿರುವ ಕಾಲಘಟ್ಟದಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ ಸುಖ ಮತ್ತು ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಹೊಂದಿರಬೇಕು. ಜಗತ್ತು ಯಾವೊಂದು ಅಗೋಚರ ಶಕ್ತಿಯಿಂದ ನಿರ್ಮಾಣವಾಗಿಲ್ಲ. ಇಲ್ಲಿನ ಭೂಮಿ, ಅಗ್ನಿ, ವಾಯು, ಜಲ ಎಲ್ಲವೂ ಪ್ರಕೃತಿಯ ಸೃಷ್ಟಿಯೇ ಹೊರತು ಯಾವ ದೇವರ ಸೃಷ್ಟಿಯಲ್ಲ. ವೇದಗಳು ಮತ್ತು ಯಜ್ಞಯಾಗಾದಿಗಳು ಕೆಲವು ಜನರು ಹೊಟ್ಟೆಪಾಡಿಗಾಗಿ ಸೃಷ್ಟಿಸಿದ ಕ್ರಿಯೆಗಳು ಇಂತಹ ವೈಚಾರಿಕ ಸಿದ್ಧಾಂತಗಳನ್ನು ಅರ್ಥಪೂರ್ಣವಾಗಿ ಗೌತಮ ಬುದ್ಧನು ತನ್ನ ಬೌದ್ಧ ಧರ್ಮದಲ್ಲಿ ಜಾರಿಗೆ ತಂದನು. ಜೈನ ಧರ್ಮವು ಸಹ ಜಗತ್ತು ದೇವರ ಸೃಷ್ಟಿ ಎಂಬುದನ್ನು ನಿರಾಕರಿಸಿ ವಾತಾವರಣ ಅಥವಾ ಪ್ರಕೃತಿಯ ಕಣಗಳಿಂದ ಇಲ್ಲಿನ ಪ್ರತಿಯೊಂದು ಜೀವಿಯಿಂದ ಹಿಡಿದು ಸಕಲ ವಸ್ತುಗಳು ಸೃಷ್ಟಿಯಾಗಿವೆ ಎಂಬುದನ್ನು ಸ್ವೀಕರಿಸಿತು. ಚಾರ್ವಾಕನ ಪ್ರಕಾರ ಪ್ರತ್ಯಕ್ಷವೇ ಪ್ರಮಾಣ ಅಂದರೆ ಇಂದ್ರಿಯಗಳಿಗೆ ಮತ್ತು ಅನುಭವಕ್ಕೆ ದಕ್ಕುವ ಅಥವಾ ನಿಲುಕುವ ಸಂಗತಿಗಳಷ್ಟೇ ಪ್ರಮಾಣ ಎನ್ನುವ ನಿಲುವಾಗಿತ್ತು. ಕಾರಣದಿಂದಾಗಿ ಲೋಕಾಯುತ ದರ್ಶನದಲ್ಲಿ ಭ್ರಮೆ ಅಥವಾ ಭಾವನಾತ್ಮಕ ವಿಷಯಗಳಿಗೆ ಸ್ಥಾನವಿರಲಿಲ್ಲ.

ಬುದ್ಧನು ತನಗೆ ಜ್ಞಾನೋದಯವಾದ ನಂತರ ರೂಪಿಸಿದ ಬೌದ್ಧ ಧರ್ಮದ ತತ್ವಗಳಲ್ಲಿ ಲೋಕಾಯುತ ದರ್ಶನದ ಅಂಶಗಳಿಗೆ ಹೆಚ್ಚು ಮಹತ್ವ ನೀಡಿದ್ದಾನೆ. ಎಲ್ಲಾ ಸಂಯುಕ್ತ ವಸ್ತುಗಳೂ ನಶ್ವರ ಎಂದು ನಂಬುವುದು ಧರ್ಮ ಎನ್ನುವುದು ಬುದ್ಧನ ನಿಲುವಾಗಿತ್ತು. ಬುದ್ಧನ ನಶ್ವರತೆ ಸಿದ್ಧಾಂತದಲ್ಲಿ ಮೂರು ಬಗೆಯ ದೃಷ್ಟಿಕೋನಗಳಿದ್ದವು. ಎಲ್ಲಾ ಸಂಯುಕ್ತ ವಸ್ತುಗಳು ನಶ್ವರ ಮತ್ತು ಮನುಷ್ಯನ ಅಸ್ತಿತ್ವಕ್ಕೂ ನಶ್ವರ ಮತ್ತು ಸ್ವಯಂ ಸೃಷ್ಟಿಯ ವಸ್ತುಗಳಿಗೂ ನಶ್ವರತೆ ಇದೆ. ಅತೀಂದ್ರಿಯ ಶಕ್ತಿಗಳನ್ನು ನಂಬುವುದು ಧರ್ಮವಲ್ಲ ಇದು ಗೌತಮ ಬುದ್ಧನ ನಿಶ್ಚಿತವಾದ ನಿಲುವಾಗಿತ್ತು. ದೇವರಲ್ಲಿ ನಂಬಿಕೆ ಇಡುವುದು ಬೌದ್ಧ ಧರ್ಮದ ಭಾಗವಲ್ಲ ಎಂದು ಉಪದೇಶಿಸಿದ ಬುದ್ಧನು, ಬ್ರಾಹ್ಮಣ ಸಿದ್ಧಾಂತಗಳಲ್ಲಿ ದೇವರನ್ನು ಪ್ರಜಾಪತಿ, ಭ್ರಹ್ಮ, ಈಶ್ವರ ಹೀಗೆ ಹಲವು ಹೆಸರುಗಳಲ್ಲಿ ಕರೆಯಲಾಗಿದೆ ಆದರೆ, ದೇವರು ಯಾರು? ಅವನು ಜಗತ್ತಿನಲ್ಲಿ ಹೇಗೆ ಸೃಷ್ಟಿಯಾದನು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ ಎಂದು ನುಡಿದಿದ್ದನು. ಧರ್ಮಗ್ರಂಥಗಳನ್ನು ಓದುವುದು ಅಥವಾ ಧರ್ಮಗ್ರಂಥಗಳು ದೋಷಾತೀತವೆಂದು ನಂಬುವುದು ಧರ್ಮವಲ್ಲ ಎಂದು ಹೇಳುವುದರ ಮೂಲಕ ಲೋಕಾಯುತ ದರ್ಶನದ ಬಹುತೇಕ ಅಂಶಗಳನ್ನು ತನ್ನ ಧರ್ಮದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಪ್ರಾಚೀನ ಹಿಂದೂ ಧರ್ಮಕ್ಕೆ ಮಾರಣಾಂತಿಕ  ಪೆಟ್ಟು ನೀಡಿದ್ದನು.

ಮನುಷ್ಯ ಜೀವಿಯ ಸೃಷ್ಟಿ ಮತ್ತು ಸಾವಿನ ಕುರಿತಾಗಿ ವ್ಯಾಖ್ಯಾನಿಸಿದ ಬುದ್ಧನು ಪುನರ್ಜನ್ಮವನ್ನು ರೀತಿಯಲ್ಲಿ ಅಲ್ಲಗೆಳೆದನು. ಬುದ್ಧನ ಪಕ್ರಾರ ಮನುಷ್ಯ ದೇಹವು ನಾಲ್ಕು ದ್ರವ್ಯಗಳಿಂದ ಅಂದರೆ ಪೃಥ್ವಿ, ಅಪ () ತೇಜ(ಅಗ್ನಿ) ಮತ್ತು ವಾಯು ಇವುಗಳಿಂದ ಸೃಷ್ಟಿಯಾಗುತ್ತದೆ. ಅದೇ ರೀತಿಯಲ್ಲಿ ಮನುಷ್ಯ ಮರಣ ಹೊಂದಿದಾಗ ಶರೀರದಲ್ಲಿ ಅಥವಾ ದೇಹದಲ್ಲಿ ಇದ್ದ ಮೂಲದ್ರವ್ಯಗಳು ಮರಣ ಹೊಂದುವುದಿಲ್ಲ ಅವುಗಳು ಬಾಹ್ಯಾಕಾಶದಲ್ಲಿ ತೇಲುತ್ತಿರುವ ತಮ್ಮದೇ ರೀತಿಯ ಮೂಲ ದ್ರವ್ಯ ಸಮೂಹವನ್ನು ಸೇರಿಕೊಳ್ಳುತ್ತವೆ ಜೊತೆಗೆ ಇನ್ನೊಂದು ಜೀವಿಯ ಸೃಷ್ಟಿಗೆ ಕಾರಣವಾಗುತ್ತವೆ ಇದು ಆಧುನಿಕ ಜಗತ್ತಿನ ವೈಜ್ಞಾನಿಕ ಚಿಂತನೆಗೆ ಸಮಾನವಾದ  ಚಿಂತನೆಯಾಗಿದೆ. ಕಾರಣದಿಂದಾಗಿ ಬುದ್ಧನು ಪುನರ್ಜನ್ಮವನ್ನು ನಂಬಲಿಲ್ಲ ಮತ್ತು ಪ್ರತಿಪಾದಿಸಲಿಲ್ಲ. ಅದೇ ರೀತಿಯಲ್ಲಿ ಪೂರ್ವಜನ್ಮದ ಕರ್ಮ ಕುರಿತ ವೈದಿಕ ಜಗತ್ತಿನ ಎಲ್ಲಾ ನಂಬಿಕೆಗಳನ್ನು ಅವನು ನಿರಾಕರಿಸಿದನು. ಹುಟ್ಟು ಅನುವಂಶಿಕ ನಿಜ ಆದರೆ ಹುಟ್ಟುವ ಮಗುವಿಗೆ ಬರುವ ಎಲ್ಲಾ ಗುಣಗಳು ತಂದೆ ಅಥವಾ ತಾಯಿಯಿಂದ ಬಂದವುಗಳು ಎಂಉದನ್ನು ಅವನು ನಿರಾಕರಿಸಿ, ಅಲ್ಲಿನ ಪರಿಸರದ ಪ್ರಭಾವದ ಮಹತ್ವ ಇರುವುದನ್ನು ಪ್ರತಿಪಾದಿಸಿದನು.

ವೈದಿಕ ಪರಂಪರೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಚಾರ್ವಾಕ ಅಥವಾ ಲೋಕಾಯುತ ದರ್ಶನವು ಅತ್ಯಂತ ಪ್ರಭಾವಶಾಲಿಯಾಗಿ ಬಳಕೆಯಾಗಿರುವುದು ಬೌದ್ಧ ಧರ್ಮದಲ್ಲಿ ಮಾತ್ರ. ನಂತರ ಹುಟ್ಟಿಕೊಂಡ ಅನೇಕ ಅವೈದಿಕ ಪರಂಪರೆಗಳು ಅನೇಕ ಉಪ ಪಂಗಡ ಅಥವಾ ಶಾಖೆಗಳಾಗಿ ಛಿದ್ರಗೊಳ್ಳುವುದರ ಜೊತೆಗೆ ತಂತ್ರ, ಮಂತ್ರ, ಮಾಂಸ,, ಮದ್ಯ, ಮೈಥುನ ಹೀಗೆ ಹಲವು ನಂಬಿಕೆಗಳಿಗೆ ಜೋತು ಬಿದ್ದು ಸಮಾಜದಿಂದ ವಿಮುಖಗೊಂಡವು. ಹನ್ನೆರಡನೇ ಶತಮಾನದಲ್ಲಿ ಕಾಶ್ಮೀರದ ಅನೇಕ ಪಂಥಗಳ ವಿಕ್ಷಿಪ್ತ ಬೆಳವಣಿಗೆಯನ್ನು ನಮ್ಮ ಕನ್ನಡದ ಅಪ್ರತಿಮ ವಚನಕಾರ ಅಲ್ಲಮಪ್ರಭು ತನ್ನ ವಚನದ ಮೂಲಕ  ನಿರ್ಧಾಕ್ಷಣ್ಯವಾಗಿ ಖಂಡಿಸಿದ್ದಾನೆ.

ನಾನು ಘನ ನಾನು ಘನವೆಂಬ ಹಿರಿಯರುಂಟೆ ಜಗದೊಳಗೆ

ಹಿರಿಯರ ಹಿರಿಯತನ ಹಿಂದೇನಾಯಿತು?

ಹಿರಿಯ ಹಿರಿದೆಂಬ ಶಬ್ದವಡಗಿದೆ

ಆತನೇ ಶರಣ ಗುಹೇಶ್ವರಾ.

ಇಪ್ಪತ್ತೊಂದನೇ ಶತಮಾನದ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಯುಗದಲ್ಲಿಯೂ ಸಹ ಯಜ್ಞ ಯಾಗಾದಿಗಳು, ವಾಸ್ತು ಮತ್ತು  ಅಗ್ನಿಪೂಜೆಯಂತಹ ವೈದಿಕ ಪರಂಪರೆಯ ಧಾರ್ಮಿಕ ಕ್ರಿಯೆಗಳು ಎಲ್ಲಡೆ ಜರುಗುತ್ತಿವೆ. ದಲಿತರು ಮತ್ತು ಶೂದ್ರರು ಕ್ರಿಯೆಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸುವುದರ ಜೊತೆಗೆ ತಮ್ಮ ಮನೆಗಳಲ್ಲಿ ಸತ್ಯನಾರಾಯಣ ಪೂಜೆ, ರಾಘವೇಂದ್ರ ಆರಾಧನೆ, ವರಲಕ್ಷಿö್ಮಪೂಜೆ, ಗೌರಿಪೂಜೆ ಇವುಗಳ ಮೂಲಕ ನವ ಬ್ರಾಹ್ಮಣರಾಗಿ ಪರಿವರ್ತನೆ ಹೊಂದುತ್ತಿದ್ದಾರೆ. ನಮ್ಮ ದ್ರಾವಿಡ ಸಂಸ್ಕೃತಿಯ ನೆಲಮೂಲದ ಆಚರಣೆಗಳ ಬಗೆಗಿನ ತಾತ್ಸಾರ ಮತ್ತು ಅಸಡ್ಡೆ ಹಾಗೂ ಅವೈದಿಕ ಪರಂಪರೆಯ ಜ್ಞಾನದ ಕೊರತೆ ಇದಕ್ಕೆ ಮೂಲಕಾರಣವಾಗಿದೆ.

(  ಸೆಪ್ಟಂಬರ್ ತಿಂಗಳ ಸಮಾಜಮುಖಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಡಾ.ಎನ್.ಜಗದೀಶ್ ಕೊಪ್ಪ,

 

 

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ