ಸೋಮವಾರ, ಜುಲೈ 28, 2014

ವಿಶ್ವ ವ್ಯಾಪಾರ ಸಂಘಟನೆಯ ಕೃಷಿ ಒಪ್ಪಂದದ ವೈರುಧ್ಯಗಳು




ದಶಕದ ಹಿಂದೆ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನಾನ್ ಅವರು ಜಾಗತೀಕರಣ ವ್ಯವಸ್ಥೆಯಲ್ಲಿನ ವ್ಯಾಪಾರ ಒಪ್ಪಂಧಗಳ ಕುರಿತಂತೆ ಆಡಿದ ಕಟು ಮಾತುಗಳಿವು. “ ಶ್ರೀಮಂತ ರಾಷ್ಟ್ರಗಳು ಮುಕ್ತ ಮಾರುಕಟ್ಟೆಯ ಬಗ್ಗೆ ಗುಣಗಾನ ಮಾಡುವುದು ಅಥವಾ ಕುರಿತು ಬಡರಾಷ್ಟ್ರಗಳಿಗೆ ಬೋಧನೆ ಮಾಡುವುದು ಕಪಟ ಆಚರಣೆಯಾಗಿದೆ. ಸ್ವತಃ ಶ್ರೀಮಂತ ರಾಷ್ಟ್ರಗಳು ಬಡರಾಷ್ಟ್ರಗಳಿಗೆ ತಮ್ಮ ಮಾರುಕಟ್ಟೆಯನ್ನು ತೆರದಿಡದಿದ್ದರೆ ಅಥವಾ ತೃತೀಯ ಜಗತ್ತಿನ ರಾಷ್ಟ್ರಗಳ ಮಾರುಕಟ್ಟೆಗೆ ತಮ್ಮ ಭಾರಿ ರಿಯಾಯ್ತಿ ಹೊಂದಿದ ತಮ್ಮ ಸರಕು, ಸೇವೆ, ಸಾಮಾಗ್ರಿ, ಆಹಾರ ಪದಾರ್ಥಗಳನ್ನು ತಂದು ರಾಶಿ ಹಾಕಿದರೆ ಬಡರಾಷ್ಟ್ರಗಳು ಬದುಕುವುದು ಕಷ್ಟ. ಶ್ರೀಮಂತ ರಾಷ್ಟ್ರಗಳು ತಮ್ಮ ಉತ್ಪಾದನೆ ಮತ್ತು ಉಪಭೋಗದ ವಿಧಾನಗಳನ್ನು ಬದಲಾಯಿಸದೆ, ಜಾಗತಿಕ ಪರಿಸರವನ್ನು ರಕ್ಷಿಸಲು ಬಡರಾಷ್ಟ್ರಗಳಿಗೆ ಒತ್ತಾಯ ಮಾಡಿದರೆ ಅವುಗಳು ಕೇಳುವ ಸ್ಥಿತಿಯಲ್ಲಿ ಇಲ್ಲವರ್ತಮಾನದ ನೋವಿನ ಸಂಗತಿಯೆಂದರೆ, ಎರಡು ದಶಕ ಕಳೆದರೂ ಜಾಗತಿಕ ಅಸಮಾನತೆ ಮತ್ತು ವ್ಯಾಪಾರ ಮತ್ತು ವ್ಯವಹಾರ ಕುರಿತಂತೆ ಬಡರಾಷ್ಟ್ರಗಳು ಮತ್ತು ಶ್ರೀಮಂತ ರಾಷ್ಟ್ರಗಳ ನಡುವಿನ ಕಂದಕ ಕಿರಿದಾಗುವ ಬದಲು ಹಿರಿದಾಗುತ್ತಿದೆ. ಅದಕ್ಕೆ ಉದಾಹರಣೆ ಇತ್ತೀಚೆಗೆ ಜಿನಿವಾ ನಗರದಲ್ಲಿ ನಡೆದವ್ಯಾಪಾರ ಸುಗುಮಗೊಳಿಸುವ ನಿಟ್ಟಿನಲ್ಲಿ  ಒಪ್ಪಂದದ ಚರ್ಚೆಯವಿದ್ಯಾಮಾನ ವಿವಾದಕ್ಕೀಡಾದ ಸಂಗತಿ ನಮ್ಮ ಮುಂದಿದೆ.
ಇದೇ ಜುಲೈ 26 ರಂದು ಜಿನಿವಾ ನಗರದ ವಿಶ್ವವ್ಯಾಪಾರ ಸಂಘಟನೆಯ ಕೇಂದ್ರ ಕಛೇರಿಯಲ್ಲಿ ನಡೆದ 160 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಭಾರತ ಮತ್ತೊಮ್ಮೆ ಆಹಾರ ಸಬ್ಸಿಡಿ ಕುರಿತ ಕೃಷಿ ಒಪ್ಪಂಧಕ್ಕೆ ಸಹಿ ಹಾಕಲು ನಿರಾಕರಿಸುವುದರ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ಕಳೆದ ವರ್ಷ ಇಂಡೊನೇಷಿಯಾದ ಬಾಲಿಯಲ್ಲಿ ನಡೆದ ಸದಸ್ಯ ರಾಷ್ರಗಳ ವಾಣಿಜ್ಯ ಸಚಿವರ ಸಭೆಯಲ್ಲಿ ಹಿಂದಿನ ಯು.ಪಿ.. ಸರ್ಕಾರದಲ್ಲಿ ಕೇಂದ್ರ ವಾಣಿಜ್ಯ ಖಾತೆ ಸಚಿವರಾಗಿದ್ದ ಆನಂದ ಶರ್ಮರವರು ಕೃಷಿ ಕುರಿತ ಹಲವು ಒಪ್ಪಂಧಗಳ ಪುನರ್ ಪರಿಶೀಲನೆಗೆ ಒತ್ತಾಯಿಸಿದ್ದರು. ತಿಂಗಳ ಅಂತ್ಯದೊಳಗೆ ಎಲ್ಲಾ ರಾಷ್ಟ್ರಗಳ ಸಹಿ ಪಡೆದು ಡಿಸಂಬರ್ ಅಂತ್ಯಕ್ಕೆ ಕಾರ್ಯಸೂಚಿ ಮಾರ್ಗಸೂತ್ರಗಳನ್ನು ಸಿದ್ಧಪಡಿಸಿ ಮುಂದಿನ ಜನವರಿಯಿಂದ ಜಾರಿಗೆ ತರಲು ಹೊರಟಿದ್ದ ಅಮೇರಿಕಾ ಮತ್ತು ಮಿತ್ರ ಶ್ರೀಮಂತ ರಾಷ್ಟ್ರಗಳಿಗೆ ಕಳೆದ ಹದಿಮೂರು ವರ್ಷಗಳಿಂದ ಭಾರತ ತೋರುತ್ತಿರುವ ಪ್ರತಿರೋಧ ಮತ್ತು ಇದಕ್ಕೆ ವ್ಯಕ್ತವಾಗುತ್ತಿರುವ ತೃತೀಯ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳ ಬೆಂಬಲ ನುಂಗಲಾರದ ಬಿಸಿತುಪ್ಪವಾಗಿದೆ.
ನಮ್ಮ ನಡುವಿನ ಹಿರಿಯ ಲೇಖಕ ಪ್ರೊ. ಬರಗೂರು ರಾಮಚಂದ್ರಪ್ಪ ಜಾಗತೀಕರಣ ವ್ಯವಸ್ಥೆಯನ್ನುಶಬ್ದವಿಲ್ಲದ ನಿಶ್ಯಬ್ದ ಯುದ್ಧಎಂದು ದಶಕದ ಹಿಂದೆ ವಿಶ್ಲೇಷಿಸಿದ್ದರು. ಇವೊತ್ತಿಗೂ ವಿಶ್ವ ವ್ಯಾಪಾರ ಸಂಘಟನೆಯ ಜಾಗತೀಕರಣದ ಪ್ರಕ್ರಿಯೆಗಳು ಕಿಂಚಿತ್ತೂ ಬದಲಾಗಿಲ್ಲ. ಕಳೆದ ಶುಕ್ರವಾರ (ಜುಲೈ 25 ರಂದು) ನಡೆದ ಟ್ರೇಡ್ ಫೆಸಿಲಿಟೇಷನ್ ಅಗ್ರಿಮೆಂಟ್ ಅಂದರೆ ವಾಣಿಜ್ಯ ವ್ಯವಹಾರವನ್ನು ಸುಗುಮಗೊಳಿಸುವ ಒಪ್ಪಂಧಕ್ಕೆ ಭಾರತ ಸಹಿ ಹಾಕಲು ಸ್ಪøಷ್ಟವಾಗಿ ನಿರಾಕರಿಸಿದೆ. ದೇಶದ ಆಹಾರ ಭದ್ರತೆ, ಮತ್ತು ಕೃಷಿ ಚಟುವಟಿಕೆಗಳಿಗೆ ರೈತರಿಗೆ ನೀಡುತ್ತಿರುವ ಸಹಾಯಧನ ಹಾಗೂ ಕೃಷಿ ಉತ್ಪನ್ನಗಳಿಗೆ ನೀಡುತ್ತಿರುವ ಬೆಂಬಲ ಬೆಲೆಯನ್ನೂ ಒಳಗೊಂಡಂತೆ ಬಡವರಿಗೆ ಸಬ್ಸಿಡಿ ದರದಲ್ಲಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ನೀಡುತ್ತಿರುವ ಆಹಾರ ಧಾನ್ಯಗಳಿಗೆ ಒಪ್ಪಂಧ ಮುಳುವಾಗಲಿದೆ ಎಂಬುದು ಭಾರತದ ನಿಲುವು. ಇದು ಅಕ್ಷರಶಃ ಸತ್ಯ ಕೂಡ ಹೌದು.
ವಿಶ್ವ ವ್ಯಾಪಾರೀಕರಣ ಸಂಘಟನೆ ಸಿದ್ಧಪಡಿಸಿರುವ ಕರಡು ಒಪ್ಪಂಧದಲ್ಲಿ ಯಾವ ಕಾರಣಕ್ಕೂ ಸದಸ್ಯ ರಾಷ್ಟ್ರಗಳ ಒಟ್ಟು ಕೃಷಿ ಉತ್ಪಾದನೆಯ ಶೇಕಡ ಹತ್ತಕ್ಕಿಂತ ಹೆಚ್ಚು ಸಬ್ಸಿಡಿ ಮೊತ್ತ ಇರಬಾರದು ಎಂದು ಸೂಚಿಸಲಾಗಿದೆ. ಆದರೆ, ಅಮೇರಿಕಾ ಸೇರಿದಂತೆ ಶ್ರೀಮಂತ ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ರೈತರಿಗೆ ಕೃಷಿ ಸಬ್ಸಿಡಿ ನೀಡುವ ಬದಲು, ರಫ್ತು ಪ್ರೋತ್ಸಾಹ ಧನ ಎಂದು ನೀಡುವುದರ ಮೂಲಕ ಕೃಷಿ ಸಬ್ಸಿಯ ಒಪ್ಪಂಧದ ಮೂಲ ರೂಪು ರೇಷೆಗಳನ್ನು ಉಲ್ಲಂಘಿಸಲಾಗಿದೆ. ಶ್ರಿಮಂತ ರಾಷ್ಟ್ರಗಳಲ್ಲಿ ಹಸು ಸಾಕಾಣಿಕೆಗೆ ನೀಡುತ್ತಿರುವ ಪ್ರೊತ್ಸಾಹ ಧನ ಮತ್ತು ಕೃಷಿ ಜಮೀನನ್ನು ಪಾಳು ಬಿಟ್ಟಿದ್ದಕ್ಕೆ ನೀಡುವ ಪರಿಹಾರ ಧನ ಇವೆಲ್ಲವನ್ನೂ ಒಪ್ಪಂಧದ ವ್ಯಾಪ್ತಿಯಿಂದ ಹೊರಗಿಡಲಾಗಿದೆ.


ತಮ್ಮಲ್ಲಿರುವ ಆಧುನಿಕ ಕೃಷಿ ತಂತ್ರಜ್ಞಾನ ಮತ್ತು ಕುಲಾಂತರಿ ಬೆಳೆಗಳ ಮೂಲಕ ಅಪಾರ ಪ್ರಮಾಣದಲ್ಲಿ ಹತ್ತಿ, ಗೋಧಿ ಮತ್ತು ಮೆಕ್ಕೆಜೋಳ ಇವುಗಳನ್ನು ಬೆಳೆಯುತ್ತಿರುವ ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ , ಇಂಗ್ಲೇಂಡ್ ಮುಂತಾದ ಶ್ರೀಮಂತ ರಾಷ್ಟ್ರಗಳಿಗೆ ತಮ್ಮ ಆಹಾರ ದಾಸ್ತಾನನ್ನು ತುರ್ತು ವಿಲೇವಾರಿ ಮಾಡಲು ಕಂಡುಕೊಂಡ ರಹದಾರಿಯೇ ಟಿ.ಎಫ್.. ಅಥವಾ ವಾಣಿಜ್ಯ ಸುಗಮಗೊಳಿಸುವ ಒಪ್ಪಂಧ. ವಿಶ್ವ ವ್ಯಾಪಾರ ಸಂಘಟನೆಯ ಕೃಷಿ ಒಪ್ಪಂಧ ಕುರಿತ ಭಾರತದ ಪ್ರತಿಭಟನೆಗೆ ಸುದೀರ್ಘ ಇತಿಹಾಸವಿದೆ. 2001 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿದ್ದ ದಿ. ಮುರಸೋಳಿ ಮಾರನ್ ಹಾರಿಸಿದ ಪ್ರತಿಭಟನೆಯ ಭಾವುಟವನ್ನು ಸರ್ಕಾರ ಅಥವಾ ಪಕ್ಷಗಳ ಭೇದ ಭಾವವಿಲ್ಲದೆ, ನಿರಂತರವಾಗಿ  ಅರುಣ್ ಜೇಟ್ಲಿ ( ಎನ್.ಡಿ.. ಸರ್ಕಾರ) ಮತ್ತು ಡಾ. ಮನಮೋಹನ್ ನೃತೃತ್ವದ  ಯು.ಪಿ. ಸರ್ಕಾರದಲ್ಲಿ ಕಮಲ್ ನಾಥ್ ಮತ್ತು ಆನಂದ್ ಶರ್ಮ ಇವರು ವಾಣಿಜ್ಯ ಸಚಿವರಾಗಿ  ಎತ್ತಿ ಹಿಡಿದಿದ್ದಾರೆ. ಇದೀಗ ನರೇಂದ್ರ ಮೋದಿ ನೇತೃತ್ವದ ಎನ.ಡಿ.. ಸರ್ಕಾರದಲ್ಲಿ ವಾಣಿಜ್ಯ ಖಾತೆಯ ರಾಜ್ಯ ಸಚಿವೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಕೂಡ ಅಷ್ಟೇ ಪ್ರಭಾವಶಾಲಿಯಾಗಿ ಭಾರತದ ಹಿತಾಸಕ್ತಿಯನ್ನು ಕಾಪಾಡುತ್ತಿದ್ದಾರೆ. ಅರ್ಥಶಾಸ್ತ್ರದ ಸ್ನಾತಕೋತ್ತರ ಪದವೀಧರೆಯಾಗಿ ಹಾಗೂ ಭಾರತ ಮತ್ತು ಐರೋಪ್ಯ ರಾಷ್ಟ್ರಗಳ ನಡುವಿನ ಜವಳಿ ವ್ಯಾಪಾರ ಮತ್ತು ಒಪ್ಪಂಧ ( ಜಾಗತೀರಣದ ಒಪ್ಪಂಧದಡಿ) ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿರವ ನಿರ್ಮಾಲಾ ಸೀತಾರಾಮನ್ ಅವರಿಗೆ ವಿಶ್ವ ವ್ಯಾಪಾರ ಸಂಘಟನೆಯ ವ್ಯವಹಾರಗಳು ಅಥವಾ ಹುನ್ನಾರಗಳು ಹೊಸದೇನಲ್ಲ.

ವಿಶ್ವವ್ಯಾಪಾರ ಸಂಘಟನೆಯ ನಿಯಾಮಾವಳಿ ಸಂಖ್ಯೆ ಒಂಬತ್ತನೆಯ ನಿಯಮದ ಪ್ರಕಾರ ಒಂದು ಸದಸ್ಯ ರಾಷ್ಟ್ರಕ್ಕೆ ಒಂದೇ ಮತ ಎಂಬ ನಿಯಮ ಜಾರಿಯಲ್ಲಿದೆ. ಆದರೆ, ಅಮೇರಿಕಾ ನೇತೃತ್ವದ ಶ್ರೀಮಂತ ರಾಷ್ಟ್ರಗಳ ಒಕ್ಕೂಟ ತಾನು ರೂಪಿಸುವ ನಿಯಮಗಳಿಗೆ ಸದಸ್ಯ ರಾಷ್ಟ್ರಗಳ ಅಭಿಪ್ರಾಯಗಳನ್ನು ಕೇಳಬೇಕೆಂಬ ಕನಿಷ್ಠ ವಿವೇಚನೆಯನ್ನು ಇಟ್ಟುಕೊಳ್ಳದೆ, ತಾನು ಸೃಷ್ಟಿಸಿಕೊಂಡಿರುವ ಸರ್ವ ಸಮ್ಮತಿ ಸೂತ್ರವನ್ನು ಸದಾ ಬಳಕೆ ಮಾಡಿಕೊಂಡು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಶ್ರೀಮಂತ ರಾಷ್ಟ್ರಗಳ ಮೈತ್ರಿ ಒಕ್ಕೂಟ ತೆಗೆದುಕೊಳ್ಳುವ ತೀರ್ಮಾನವೇ ವಿಶ್ವ ವ್ಯಾಪಾರ ಅಥವಾ ವಾಣಿಜ್ಯ ಸಂಘಟನೆಯ ತೀರ್ಮಾನವಾಗುತ್ತದೆ. ಸರ್ವ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇರುವ ಅವಕಾಶ ಕೇವಲ ಭಾಷಣ ಮಾಡುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನಿಜವಾದ ತೀರ್ಮಾನಗಳು ಮೊದಲೇ ಅನೌಪಚಾರಿಕವಾಗಿ ವಿದ್ಯುಕ್ತವಲ್ಲದ ರೀತಿಯಲ್ಲಿ ತೀರ್ಮಾನವಾಗಿರುತ್ತದೆ. ತೀರ್ಮಾನಗಳನ್ನು ಒಪ್ಪಿಕೊಳ್ಳುವಂತೆ ಪ್ರತಿನಿಧಿಗಳ ಮೇಲೆ ಒತ್ತಡ ಕಾರ್ಯತಂತ್ರವನ್ನು ಹೇರಲಾಗುತ್ತದೆ


ಕಾರಣಕ್ಕಾಗಿ 1996 ರಲ್ಲಿ ನಡೆದಸಿಂಗಾಪುರ್ ವಿಷಯಗಳುಕುರಿತ ಚರ್ಚೆ, 1999 ರಲ್ಲಿ ಸಿಯಾಟಲ್ ನಗರದಲ್ಲಿ ನಡೆದ ಬಂಡವಾಳ ಹೂಡಿಕೆ ಕುರಿತಾದ ಚರ್ಚೆಗಳು ಹಲವು ರೀತಿಯ ವಿರೋಧ, ಪ್ರತಿಭಟನೆಗೆ ಕಾರಣವಾಗಿ ನೆನಗುದಿಗೆ ಬಿದ್ದವು.
2001 ರಲ್ಲಿ ಕತಾರ್ ದೋಹಾ ನಗರದಲ್ಲಿ ನಡೆದ ಶೃಂಗ ಸಭೆಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿದ್ದ ಅನೇಕ ವಾಣಿಜ್ಯ ಒಪ್ಪಂಧಗಳಿಗೆ ಭಾರತ ಪ್ರಥಮ ಬಾರಿಗೆ ಪ್ರತಿಭಟನೆ ಸೂಚಿಸಿತು. ಆಶ್ಚರ್ಯವೆಂದರೆ, ಒಪ್ಪಂಧ ಕುರಿತಾದ ಸಭೆಯಲ್ಲಿ ಮೂಡಿದ ಅಭಿಪ್ರಾಯ ಅಥವಾ ವಿರೋಧ ಇವುಗಳನ್ನು ಸಭೆಯ ನಡಾವಳಿ ದಾಖಲೆ ಪುಸ್ತಕದಲ್ಲಿ ದಾಖಲಿಸಲಿಲ್ಲ. 2001 ನವಂಬರ್ ತಿಂಗಳಿನಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ನವಂಬರ್ 13 ಮಧ್ಯ ರಾತ್ರಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೆಯಿ ಅವರಿಗೆ ದೂರವಾಣಿ ಕರೆ ಮಾಡಿದ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್, ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಾಣಿಜ್ಯ ಸಚಿವ ಮುರಸೊಳಿ ಮಾರನ್ ಅವರಿಗೆ ಒತ್ತಡ ಹೇರಿ  ಅವರ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು. ಇಂತಹದ್ದೇ ಒತ್ತಡ ತಂತ್ರವನ್ನು ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಶ್ರೀಮಂತ ರಾಷ್ಟ್ರಗಳು ಗುಪ್ತವಾಗಿ ಜಾರಿಯಲ್ಲಿಟ್ಟಿವೆ.
ಕೃಷಿ ಒಪ್ಪಂಧ ಕುರಿತ ಕರಡು ಮಸೂದೆಯು ವಿಶ್ವ ವ್ಯಾಪಾರ ಸಂಗಟನೆಯಲ್ಲಿ ಕೃಷಿ ಸಮಿತಿಯ ಅಧ್ಯಕ್ಷರಾಗಿದ್ದ ಸ್ಟುವರ್ಟ್ ಹಾರ್ಬಿನೇಷನ್ ಎಂಬುವರಿಂದ ರಚಿತವಾಗಿದೆ. ಇದು  ವ್ಯಾಪಾರ ಸುಗುಮ ಗೊಳಿಸುವ ಒಪ್ಪಂಧಕ್ಕೆ ಸಹಿ ಮಾಡುವ ಪ್ರಕ್ರಿಯೆಯಲ್ಲಿ ಶ್ರೀಮಂತ ಮತ್ತು ಬಡರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈಗಿನ ಕರಡು ಪ್ರತಿಯಲ್ಲಿ ಹಿಂದೆ ಉರುಗ್ವೆಯಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ  ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿಭಟನೆಯ ಕಾರಣದಿಂದ ಚರ್ಚೆಯಿಂದ ಹೊರಗಿಡಲಾಗಿದ್ದ ಸುಂಕ, ಆಂತರೀಕ ಪ್ರೋತ್ಸಾಹ, ರಫ್ತು ಸಬ್ಸಿಡಿ ಮುಂತಾದ ವಿಷಯಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ನಿಜವಾಗಿ ಪ್ರಾಧಾನ್ಯತೆ ನೀಡಬೇಕಾಗಿದ್ದ ಆಹಾರ ಭದ್ರತೆ, ಗ್ರಾಮೀಣಾಭಿವೃದ್ಧಿ ವಿಷಯಗಳ ಕುರಿತ ರಿಯಾಯಿತಿ ಹಾಗೂ ಬಡ ಮತ್ತು ಸಣ್ಣ ಕೃಷಿ ಕುಟುಂಬಗಳ ರಕ್ಷಣೆ ಕುರಿತು ವಿವರವಾದ ಮಾಹಿತಿಗಳಿಲ್ಲ. ಬಡರಾಷ್ಟ್ರಗಳನ್ನು ಕೃಷಿ ಸಬ್ಸಿಡಿಯಿಂದ ರಕ್ಷಿಸುವ ಬದಲು , ಶ್ರೀಮಂತರಾಷ್ಟ್ರಗಳು ನೀಡುತ್ತಿರುವ ವಿವಿಧ ಬಗೆಯ ಅಪಾರ ಪ್ರಮಾಣದ ಕೃಷಿ ಸಬ್ಸಿಡಿ ಪ್ರಮಾಣವನ್ನು ರಕ್ಷಿಸುವ ಅಂಶಗಳು ಎದ್ದು ಕಾಣುತ್ತಿವೆ. ಶ್ರೀಮಂತ ರಾಷ್ಟ್ರಗಳು ಕೃಷಿಕರಿಗೆ ಒದಗಿಸುತ್ತಿರುವ ವಿಶೇಷ ತರಬೇತಿ, ಪರಿಸರ ಮತ್ತು ಮಣ್ಣಿನ ರಕ್ಷಣೆ, ಭೂಮಿಯನ್ನು ಕೃಷಿ ಚಟುವಟಿಕೆಗೆ ಒಳಪಡಿಸದಿದ್ದರೆ ಅದಕ್ಕಾಗಿ ನೀಡುವ ವಿಶೇಷ ಪರಿಹಾರವನ್ನು ಈಗಿನ ಕೃಷಿ ಒಪ್ಪಂಧದಲ್ಲಿ ಸಬ್ಸಿಡಿ ಎಂದು ಪರಿಗಣಿಸಿಲ್ಲ. ಇದಕ್ಕೆ ಬದಲಾಗಿ ಅಂತರಾಷ್ಟ್ರೀಯ ವ್ಯಾಪಾರವು ಯಾವ ಕಾರಣಕ್ಕೂ ವಿಕೃತಿಗೊಳ್ಳುವುದಿಲ್ಲ ಎಂಬ ಪೊಳ್ಳು ಆಶ್ವಾಸನೆಯನ್ನು ಒಪ್ಪಂಧದ ವರದಿಯಲ್ಲಿ ನೀಡಲಾಗಿದೆ. ಸಧ್ಯ ಭಾರತ ದೇಶವು ಕೃಷಿ ಸಬ್ಸಿಡಿ ಮತ್ತು ಆಹಾರ ಧಾನ್ಯಗಳ ವಿತರಣೆ ಮತ್ತು ಬೆಂಬಲ ಬೆಲೆಗಾಗಿ ವಾರ್ಷಿಕವಾಗಿ ಸುಮಾರು ಒಂದೂವರೆ ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಮಾಡುತ್ತಿದೆ. ಈಗಿನ ಒಪ್ಪಂಧಕ್ಕೆ ಸಹಿ ಹಾಕಿದರೆ, ಭಾರತದ ಕೃಷಿ ಮತ್ತು ಆಹಾರ ಧಾನ್ಯಗಳ ಮೇಲಿನ ಸಬ್ಸಿಡಿಯ ಮೊತ್ತ ಹನ್ನೆರಡು ಸಾವಿರ ಕೋಟಿಯನ್ನು ದಾಟುವುದು ಕಷ್ಟವಾಗುತ್ತದೆ. ಕಾರಣಕ್ಕಾಗಿ ಭಾರತ ಸೇರಿದಂತೆ, ತೃತೀಯ ಜಗತ್ತಿನ ಬಡರಾಷ್ಟ್ರಗಳು, ಚೀನಾ ಮತ್ತು ಬ್ರೆಜಿಲ್ ರಾಷ್ಟ್ರಗಳು ಅಸಮಾನತೆ ಮತ್ತು ಗೊಂದಲದ ಗೂಡಾಗಿರುವ ಕೃಷಿ ಒಪ್ಪಂಧಕ್ಕೆ ಸಂಬಂಧಪಟ್ಟ ವ್ಯಾಪಾರ ಸುಗಮಗೊಳಿಸುವ ಒಪ್ಪಂಧಕ್ಕೆ ಸಹಿ ಹಾಕಲು ನಿರಾಕರಿಸಿವೆ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಬೋರಿಸ್ ಕಗ್ಲಿಲಿಸ್ಟ್ಕಿ ಎಂಬುವರು ಯಾವುದೇ ಒಂದು ರಾಷ್ಟ್ರದ ಅಥವಾ ಸರ್ಕಾರದ ಅಬಿವೃದ್ಧಿ ಪರವಾದ ಸಿದ್ಧಂತಗಳಲ್ಲಿ ಮೂರನೇ ಶಕ್ತಿಯ ಹಸ್ತಕ್ಷೇಪವಿರಬಾರದು ಎಂದಿದ್ದರು. ಆದರೆ, ವರ್ತಮಾನದ ಜಗತ್ತಿನಲ್ಲಿ ಜಾಗತೀಕರಣದ ನೆಪದಲ್ಲಿ ಏಕಮುಖ ನೀತಿ ಮತ್ತು ಸರ್ವಾಧಿಕಾರದ ಚಕ್ರಾಧಿಪತ್ಯವೊಂದು ಹಲವು ಬಗೆಗಳಲ್ಲಿ, ಹಲವು ರೂಪಗಳಲ್ಲಿ ಬಡ ಹಾಗೂ ಅಭಿವೃಧ್ಧಿಶೀಲ ರಾಷ್ಟ್ರಗಳನ್ನು ಶೋಷಣೆ ಮಾಡುತ್ತಿದೆ.


ಗುರುವಾರ, ಜುಲೈ 17, 2014

ಬ್ರಿಕ್ಸ್ ಬ್ಯಾಂಕ್- ಅಭಿವೃದ್ಧಿಶೀಲ ರಾಷ್ಟ್ರಗಳ ಆಶಾಕಿರಣ



ಬ್ರೆಜಿಲ್ ಬಂದರು ನಗರ ಪೋರ್ಟಲೆಜ ನಗರದಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ಒಕ್ಕೂಟದ ಅಂದರೆ, ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ನಾಯಕರ ಸಮಾವೇಶದಲ್ಲಿ ಜುಲೈ ಹದಿನೈದರೆಂದು ತೆಗೆದು ಕೊಂಡ ಒಂದು ನಿರ್ಣಯ ಇದೀಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ. ಸಮಾನ ಮನಸ್ಕ ರಾಷ್ಟ್ರಗಳ ಆರ್ಥಿಕ ಚಟುವಟಿಕೆಗೆ ಹಿನ್ನಡೆಯಾಗದಂತೆ, ಮೂಲಭೂತ ಸೌಕರ್ಯಗಳಿಗೆ ಬಂಡವಾಳ ದೊರೆಯುವಂತೆ ಹಾಗೂ ತಮ್ಮ ತಮ್ಮ ದೇಶಗಳ  ಸುಸ್ಥಿರ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಬ್ರಿಕ್ಸ್ ಬ್ಯಾಂಕ್ ಅಥವಾ ನೂತನ ಅಭಿವೃದ್ಧಿ ಬ್ಯಾಂಕ್  ಸ್ಥಾಪಿಸಲು ಉದ್ದೇಶಿಸಿ ಒಪ್ಪಂಧಕ್ಕೆ ಐದು ರಾಷ್ಟ್ರಗಳು ಸಹಿ ಹಾಕುವುದರ ಜೊತೆಗೆ  ನೂತನ ಬ್ಯಾಂಕಿಗೆ ನೂರು ಬಿಲಿಯನ್ ಡಾಲರ್ ( ಶತಕೋಟಿ ಡಾಲರ್) ಹಣವನ್ನು ಅಂದರೆ ಆರು ಲಕ್ಷ ಕೋಟಿ ಹಣವನ್ನು ಬಂಡವಾಳವಾಗಿ ತೊಡಗಿಸಲು ನಿರ್ಧಾರಕ್ಕೆ ಬಂದಿವೆ. ಅಂತರಾಷ್ಟ್ರೀಯ ಮಟ್ಟದ  ಬೆಳವಣಿಗೆ ಜಾಗತೀಕರಣದ ವ್ಯವಸ್ಥೆಯಾದ ವಿಶ್ವ ವ್ಯಾಪಾರ ಸಂಘಟನೆ ಮತ್ತು ಅದರ ಮುದ್ದಿನ ಅವಳಿ ಕೂಸುಗಳಾದ ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣ ಕಾಸು ನಿದಿ (.ಎಂ.ಎಫ್.) ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿದ್ದರೆ, ಜಾಗತಿಕ ವಿದ್ಯಾಮಾನದ ಸೂತ್ರಗಳನ್ನು ಮೂರು ಸಂಸ್ಥೆಗಳ ಮೂಲಕ ತಮ್ಮ ಕೈ ಯಲ್ಲಿರಿಸಿಕೊಂಡಿರುವ ಅಮೇರಿಕಾ ಹಾಗೂ ಅದರ ಮಿತ್ರ ಶ್ರೀಮಂತರಾಷ್ಟ್ರಗಳಿಗೆ ( ಗ್ರೂಪ್-8) ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.


ಕಳೆದ ವರ್ಷ ಮಾರ್ಚ್ ತಿಂಗಳಿನ ಕೊನೆಯ ವಾರದಲ್ಲಿ  ದಕ್ಷಿಣ ಆಫ್ರಿಕಾದ ಡರ್ಬಾನ್ ನಗರದಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ನಾಯಕರ ಸಮಾವೇಶದಲ್ಲಿ ನೂತನ ಅಭಿವೃದ್ಧಿಯ ಬ್ಯಾಂಕ್ ಸ್ಥಾಪಿಸಬೇಕೆಂಬ ಕನಸು ಚರ್ಚೆಯ ಸಂದರ್ಭದಲ್ಲಿ ಮೂಡಿಬಂದಿತ್ತು. ಬಾರಿಯ ಸಮಾವೇಶನದಲ್ಲಿ  ಕನಸು ಸಾಕಾರಗೊಂಡಿದೆ. ಚೀನಾದ ಶಾಂಗೈ ನಗರದಲ್ಲಿ ನೂತನ ಅಭಿವೃದ್ಧಿ ಬ್ಯಾಂಕಿನ ಕೇಂದ್ರ ಕಛೇರಿ ಇರುವುದೆಂತಲೂ, ಭಾರತವು ಬ್ಯಾಂಕಿನ ಅಧ್ಯಕ್ಷ ಸ್ಥಾನ ಅಲಂಕರಿಸುವುದೆಂತಲೂ ಹಾಗೂ ಬ್ಯಾಂಕಿನ ಒಂದು ಪ್ರಾದೇಶಿಕ ಕಛೇರಿಯನ್ನು ದಕ್ಷಿಣ ಆಫ್ರಿಕಾದಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಒಟ್ಟು ನೂರು ಶತಕೋಟಿ ಡಾಲರ್ ಬಂಡವಾಳದಲ್ಲಿ ಚೀನಾ 41  ಶತಕೋಟಿ ಡಾಲರ್, ಭಾರತ, ರಷ್ಯಾ ಮತ್ತು ಬ್ರೆಜಿಲ್ ರಾಷ್ಟ್ರಗಳು ತಲಾ 18 ಶತಕೋಟಿ ಡಾಲರ್ ಮತ್ತು ದಕ್ಷಿಣ ಆಫ್ರಿಕಾ 5 ಶತಕೋಟಿ ಡಾಲರ್ ವಿನಿಯೋಗಿಸಲು ತೀರ್ಮಾನಕ್ಕೆ ಬರಲಾಗಿದೆ. ಬ್ಯಾಂಕಿನ ಐದು ಸದಸ್ಯ ರಾಷ್ಟ್ರಗಳು ತಮ್ಮ ದೇಶದ ಅಭಿವೃದ್ಧಿಯ ಚಟುವಟಿಕೆಗೆ ಹಣವನ್ನು ಬಳಸಬಹುದಾಗಿದೆ.
ನೂತನ ಅಭಿವೃದ್ಧಿಯ ಬ್ಯಾಂಕಿನ ಸ್ಥಾಪನೆಯ ಹಿಂದೆ ಪಶ್ಚಿಮದ ಜಗತ್ತು ಜಾಗತಿಕರಣದ ನೆಪ ಹಾಗೂ ಗಡಿ ರೇಖೆಗಳಿಲ್ಲದ ಮುಕ್ತ ಮಾರುಕಟ್ಟೆಯ ಮೂಲಕ ಎಲ್ಲಾ ರಾಷ್ಟ್ರಗಳಿಗೂ ಸಮಾನ ಅವಕಾಶ ಎಂಬ ಘೋಷಣೆಯಡಿ ಕಳೆದ 24 ವರ್ಷಗಳಲ್ಲಿ ತೃತಿಯ ಜಗತ್ತಿನ ರಾಷ್ಟ್ರಗಳನ್ನು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ನಿರಂತರವಾಗಿ ಶೋಷಣೆ ಮಾಡಿದ ವೈಖರಿಗೆ ಮತ್ತು ಅವು ಸೃಷ್ಟಿದ ಜಾಗತಿಕ ಅಸಮಾನತೆ ಇವುಗಳಿಗೆ ಬ್ರಿಕ್ಸ್ ರಾಷ್ಟ್ರಗಳು  ಕೊಟ್ಟ ದಿಟ್ಟ ಉತ್ತರ ಎಂದು ವಿಶ್ಲೇಷಿಸಲಾಗುತ್ತಿದೆ. ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣ ಕಾಸು ನಿಧಿ ಎರಡು ಸಂಸ್ಥೆಗಳ ಪಕ್ಷಪಾತ ಧೋರಣೆ ಮತ್ತು ಎರಡು ಸಂಸ್ಥೆಗಳ ಮೇಲೆ ಅಧಿಕ ಶೇರು ಬಂಡವಾಳದ ನೆಪದಲ್ಲಿ ಅಮೇರಿಕಾ ಹೊಂದಿರುವ ಹಿಡಿತ ಇವುಗಳ ಕುರಿತಾದ ಸುಧೀರ್ಘ ಕಪ್ಪು ಅಧ್ಯಾಯವೊಂದು ಇತಿಹಾಸದಲ್ಲಿ  ಅಡಗಿ ಕುಳಿತಿದೆ.



ಜಾಗತೀರಣದ ಆತ್ಮಗಳೆಂದು ಕರೆಯಲಾಗುವ ವಿಶ್ವಬ್ಯಾಂಕ್,( world Bank)  ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ, (I.M.F..) ಮತ್ತು ವಿಶ್ವ ವಾಣಿಜ್ಯ ಮಂಡಳಿ (W.T.O.)  ಮೂರು ಸಂಘಟನೆಗಳು ಕಳೆದ ಕಾಲುಶತಮಾನದಿಂದ ಜಾಗತಿಕ ಮಟ್ಟದಲ್ಲಿ ಸಂಘರ್ಷ, ಹಿಂಸೆ ಮತ್ತು ರಕ್ತಪಾತದ ಕೇಂದ್ರ ಬಿಂದುಗಳಾಗಿವೆ ಜೊತೆಗೆ ತೃತಿಯ ಜಗತ್ತಿನ ಬಡರಾಷ್ಟ್ರಗಳು  ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲಿಗೆ ಕೊರಳಿಗೆ ಸುತ್ತಿದ ಉರುಳುಗಳಾಗಿವೆ.
ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಇರುವ ರಾಷ್ಟ್ರಗಳಲ್ಲಿ ಜನತೆ ತಮ್ಮ ಏಳಿಗೆಗಾಗಿ ಸರ್ಕಾರಗಳಿಂದ ಯೋಜನೆ ಮತ್ತು ಅಭಿವೃದ್ಧಿ ನೀತಿಗಳನ್ನು ನಿರೀಕ್ಷಿಸುತ್ತಾರೆ ವಿನಃ ಮುಕ್ತ ಮಾರುಕಟ್ಟೆಯ ಬಂಡವಾಳಶಾಹಿಯ ಲಾಭಕೋರ ನೀತಿಯನ್ನಲ್ಲ. ಮಾನವೀಯ ಮುಖವಿಲ್ಲದ ಮಾರುಕಟ್ಟೆಯ ಸಿದ್ಧಾಂತಗಳು ಜನತೆಯ ಮತ್ತು ಸಮಾಜದ ಕಲ್ಯಾಣ ಕಾರ್ಯದಲ್ಲಿ ನಿರತವಾಗಿರುವ ಸರ್ಕಾರಗಳ ಆಶಯಕ್ಕೆ ವಿರುದ್ಧವಾಗಿವೆ. ಭವಿಷ್ಯದ ದೃಷ್ಟಿಯಿಂದ ಇದು ಅಪಾಯಕಾರಿ ಬೆಳವಣಿಗೆ ಹಾಗೂ ಸರ್ಕಾರದ ಪಾತ್ರವಿಲ್ಲದೆ ಅಭಿವೃದ್ಧಿ ಅಸಾಧ್ಯ ಎಂದುಎಂದು ಪ್ರತಿಪಾತಿಸಿದ್ದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜೆ.ಎಂ. ಕೇನ್ಸ್, ರವರು ಸರ್ಕಾರಗಳು ಸಾರ್ವಜನಿಕವಾಗಿ ಅಂದರೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ವಸತಿ ಮುಂತಾದ ಕಾರ್ಯಗಳಿಗೆ ವಿನಿಯೋಗಿಸುವ ಬಂಡವಾಳ ಅಭಿವೃದ್ಧಿ ಮತ್ತು ಪ್ರಗತಿಗೆ ವಾಹಕವಾಗಲಿದೆ ಎಂದಿದ್ದರುಆದರೆ ಎಲ್ಲಾ ಸಮಸ್ಯೆಗಳಿಗೆ ಖಾಸಾಗೀಕರಣ ಮದ್ದು ಎಂಬ ಭ್ರಮೆ ಬಿತ್ತುತ್ತಿರುವ ವರ್ತಮಾನದ ಜಗತ್ತಿನಲ್ಲಿ ಅನೇಕ ರಾಷ್ಟ್ರಗಳು ಇದೀಗ ಎಚ್ಚೆತ್ತುಕೊಂಡಿವೆ. ವಿಶ್ವವಾಣಿಜ್ಯ ಮಂಡಳಿಯ ನೀತಿ ನಿಯಮಗಳು, ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ಸಾಲದ ನಿಬಂಧನೆಗಳೆಲ್ಲವೂ ಅಮೇರಿಕಾ ಮತ್ತು ಅದರ ಮೈತ್ರಿ ಕೂಟ ರಾಷ್ಟ್ರಗಳಿಗೆ ಪೂರಕವಾಗಿರುವುದು ಇದಕ್ಕೆ ಪರೋಕ್ಷವಾಗಿ ಕಾರಣವಾಗಿದೆ.


ಅಮೇರಿಕಾದ ವಾಷಿಂಗಟನ್ ಡಿ.ಸಿ. ನಗರದ ಹತ್ತೊಂತ್ತನೆಯ ಮುಖ್ಯರಸ್ತೆಯಲ್ಲಿರುವ ಹದಿಮೂರು ಹಂತಸ್ತುಗಳ ಭವ್ಯವಾದ ಕಟ್ಟಡದಲ್ಲಿ ವಿಶ್ವಬ್ಯಾಂಕ್ ಕಛೇರಿ ಇದೆ. ಕಚೇರಿಯ ಮುಂದೆ ಇರುವ ನಾಮಫಲಕದಲ್ಲಿಬಡತನವಿಲ್ಲದ ಜಗತ್ತು ನಮ್ಮ ಕನಸುಎಂಬ ಸುಂದರವಾದ ಮನಮೋಹಕವಾದ ವಾಖ್ಯೆವೊಂದನ್ನು ಫಲಕದಲ್ಲಿ ಬರೆಯಲಾಗಿದೆ. ಜೊತೆಗೆ ಕಟ್ಟಡದ ಮುಂಭಾಗ ಅಂಧನಾದ ವೃದ್ಧ ವ್ಯಕ್ತಿಯಿಬ್ಬನನ್ನು ಕೈ ಹಿಡಿದು ಮಾರ್ಗದರ್ಶನ ಮಾಡುತ್ತಿರುವ ಎಳೆಯ ಮುಗ್ಧ ಬಾಲಕನ ಪ್ರತಿಮೆಯೊಂದಿದೆ. ಕಟ್ಟಡಕ್ಕೆ ಹೊಂದಿಕೊಂಡಂತೆ ವಿಶ್ವ ಆರೋಗ್ಯ ಸಂಘಟನೆಯ ಕಛೇರಿಯಿದ್ದು, ವಿಶ್ವಾದ್ಯಂತ ಅಂಧತ್ವವನ್ನು ಹೋಗಲಾಡಿಸುವುದು ತನ್ನ ಗುರಿ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ವಿಶ್ವ ಬ್ಯಾಂಕ್ ಕೇಂದ್ರ ಕಛೇರಿ ಇರುವ ಕಟ್ಟಡದಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಕಛೇರಿ ಇರುವುದು ವಿಶೇಷ.
ವಿಪರ್ಯಾಸವೆಂದರೆ ಎರಡು ಸಂಸ್ಥೆಗಳು ಹೊಂದಿರುವ ಆಶಯ, ಗುರಿ, ಮತ್ತು ಕನಸುಗಳಿಗೂ, ವಾಸ್ತವವಾಗಿ ಕೈಗೊಂಡಿರುವ ಕಾರ್ಯವೈಖರಿಗೂ ಅಜಗಜಾಂತರ ವೆತ್ಯಾಸವಿರುವುದು. ಬಡತನ ನಿವಾರಣೆಗೆ ಕಂಕಣ ಬದ್ಧ ಎಂದು ವಿಶ್ವಬ್ಯಾಂಕ್ ಹೇಳುತ್ತಿದ್ದರೆ, ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸ್ಥಿರತೆ ತರುವುದು ತನ್ನ ಧ್ಯೇಯ ಎಂದು ಅಂತರಾಷ್ಟ್ರೀಯ ಹಣ ಕಾಸು ನಿಧಿ ಘೋಷಿಸಿಕೊಂಡಿದೆ. ವಿಶ್ವಬ್ಯಾಂಕ್ ತನ್ನ ಕಾರ್ಯಯೋಜನೆಯಲ್ಲಿ ಕನಿಷ್ಟ ಮಟ್ಟದಲ್ಲಾದರೂ ಜಾಗತಿಕ ಬಡತನ, ಹಸಿವು, ಇವುಗಳ ನಿವಾರಣೆಗೆ ತೊಡಗಿಸಿಕೊಂಡಿರುವುದನ್ನು ತಳ್ಳಿಹಾಕಲಾಗದು. ಆದರೆ, ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯಲ್ಲಿ ಶೇಕಡ 65 ರಷ್ಟು ಅಮೇರಿಕಾ ಶೇರು ಬಂಡವಾಳವನ್ನು ಹೊಂದಿದ್ದು, ಉಳಿದ ಬಂಡವಾ¼ವನ್ನುÀ ಬಹುತೇಕ ಬಹುರಾಷ್ಟ್ರೀಯ ಕಂಪನಿಗಳು ತೊಡಗಿಸಿವೆ. ಹಾಗಾಗಿ ಸಂಸ್ಥೆಯಿಂದ ಸಾಲ ಪಡೆಯುವ ರಾಷ್ಟ್ರಗಳು ಸಂಸ್ಥೆಯು ಹೇಳಿದಂತೆ ತನ್ನ ಉದ್ಯಮ ನೀತಿ, ಆರ್ಥಿಕ ನೀತಿಗಳನ್ನು ಬದಲಿಸಕೊಳ್ಳಬೇಕು. ಡಾಲರ್ ಎದುರು ತನ್ನ ದೇಶದ ಕರೆನ್ಸಿ ಅಪಮೌಲ್ಯ, ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಕಡಿವಾಣ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ರಂಗಗಳ ಮೇಲೆ ಸಬ್ಸಿಡಿ ಕಡಿತ, ಅಮೇರಿಕಾ ಸೇರಿದಂತೆ ಮುಂದುವರಿದ ಕೈಗಾರಿಕಾ ರಾಷ್ಟ್ರಗಳ ಉತ್ಪನ್ನಗಳಿಗೆ ಮುಕ್ಯವಾದ ಆಮದು ವ್ಯವಸ್ಥೆ, ಮುಂತಾದ ಕಠಿಣ ನಿಯಮಗಳನ್ನು ಹೇರುತ್ತದೆ. ಅಂತರಾಷ್ಟ್ರೀಯ ಹಣಕಾಸು ನಿಧಿಯ ಬಹುತೇಕ ನಿಯಮಗಳು ಅಮೇರಿಕಾದ ವಾಷಿಂಗ್ಟನ್ ನಗರದಿಂದ ನಿರ್ದೇಶಿಸಲ್ಪಡುತ್ತದೆ. ಅಮೇರಿಕಾ ಸರ್ಕಾರದ ಗುರಿ ಮತ್ತು ಯೋಜನೆಗಳನ್ನು ಸಾಕಾರಗೊಳಿಸುವುದು ಇದರ ಮುಖ್ಯ ಕಾರ್ಯವಾಗಿದೆ. ಸಾಲ ಅಥವಾ ಆರ್ಥಿಕ ನೆರವು ಕೋರಿ ಬರುವ ಬಡರಾಷ್ಟ್ರಗಳ ಬಡತನವಾಗಲಿ, ಅಲ್ಲಿನ ಜನತೆಯ ಹಸಿವು, ಅಥವಾ ಅನಾರೋಗ್ಯ, ದುಃಖ-ದುಮ್ಮಾನ ಎಂದೂ ಮುಖ್ಯವಾಗಿಲ್ಲ. ಸಂಸ್ಥೆಯ ಸದಸ್ಯರಾಷ್ಟ್ರಗಳಿಗೆ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ನೀಡಿಲ್ಲ. ಎಲ್ಲವೂ ಅಮೇರಿಕಾದ ಮೂಗಿನ ನೇರಕ್ಕೆ ನಡೆಯಲಾಗುತ್ತಿದೆ. ದಿನ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆ ಮೂಲ ಕಾರಣವಾಗಿರುವುದು ಇಂತಹ ಅಸಮಾನತೆಯ ಅಂಶಗಳು.
2004 ರಲ್ಲಿ ವಿಶ್ವವಾಣಿಜ್ಯ ಸಂಘಟನೆಯ ಆಶ್ರಯದಲ್ಲಿ ಕ್ಯಾನ್ ಕುನ್ ನಗರದಲ್ಲಿ ನಡೆದ ಸದಸ್ಯರಾಷ್ಟ್ರಗಳ ಸಭೆಂಲ್ಲಿ ಇಂತಹ ಜಾಗತಿಕ ಅಸಮಾನತೆಗಳ ವಿರುದ್ಧ ಸಿಡಿದೆದ್ದ ಭಾರತ ಮತ್ತು ಬ್ರೆಜಿಲ್ ರಾಷ್ಟ್ರಗಳು ಗ್ರೂಪ್-20 ಎಂಬ ಹೆಸರಿನಡಿ ಸಂಘಟನೆಗೊಂಡು ತಮ್ಮ ಅತೃಪ್ತಿಯನ್ನು ಹೊರಹಾಕಿದ್ದವು. ಜಾಗತಿಕ ಮಟ್ಟದಲ್ಲಿ ಶೇಕಡ 60 ರಷ್ಟು ಜನಸಂಖ್ಯೆ, ಶೇಕಡ 70 ರಷ್ಟು ರೈತರು, ಶೇಕಡ 26 ರಷ್ಟು ಕೃಷಿ ಉತ್ಪಾದನೆ ಹೊಂದಿದ್ದ  ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಪ್ರಾನ್ಸ್, ಜರ್ಮನಿ, ಇಟಲಿ, ಇಂಡೋನೇಷಿಯ, ಭಾರತ, ಜಪಾನ್, ಮೆಕ್ಸಿಕೊರಷ್ಯಾ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಮುಂತಾದ ರಾಷ್ಟ್ರಗಳು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದವು. ಇದರಿಂದ ಕಿಂಚಿತ್ತೂ ಎಚ್ಚೆತ್ತುಕೊಳ್ಳದ ವಿಶ್ವ ವಾಣಿಜ್ಯ ಸಂಘಟನೆ ಹಾಗೂ ಅದರ ಅವಳಿಗಳಾದ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಗಳು ಎಂದಿನಂತೆ ತಮ್ಮ ಯೋಜನೆಗಳನ್ನು ಮುಂದುವರಿಸಿದ್ದವು. ಅದರ ಫಲವಾಗಿ ಇದೀಗ ನೂತನ ಅಭಿವೃದ್ಧಿಯ ಬ್ಯಾಂಕ್ ಹೆಸರಿನಲ್ಲಿ ಬ್ರಿಕ್ಸ್ ಬ್ಯಾಂಕ್ ಉದಯವಾಗಿದೆ. ಜಗತ್ತಿನ ಆರ್ಥಿಕ ಚಟುವಟಿಕೆಗಳು ಮತ್ತು ರಾಜಕೀಯ ಸೂತ್ರಗಳು ಅಮೇರಿಕಾದಲ್ಲಿ ಕೇಂದ್ರೀಕೃತವಾದುದರ ಫಲ ಬ್ರಿಕ್ಸ್ ಬ್ಯಾಂಕ್ ಎಂದರೆ ತಪ್ಪಾಗಲಾರದು.
ಜಾಗತಿಕ ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಬ್ಯಾಂಕ್ ಸಹಕಾರಿಯಾಗಬಲ್ಲದು ಎಂದು  ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳು ವಿಶ್ಲೇಷಿಸತೊಡಗಿವೆ. ಜೊತೆಗೆ ವಿಶ್ವದ ಬಲಿಷ್ಟ ಆರ್ಥಿಕ ರಾಷ್ಟ್ರಗಳಾಗಿ ಹೊರಹೊಮ್ಮುತ್ತಿರುವ ಚೀನಾ, ಭಾರತ ಮತ್ತು ಬ್ರೆಜಿಲ್ ರಾಷ್ಟ್ರಗಳು ಬ್ಯಾಂಕಿನ ಸ್ಥಾಪನೆ ಹಿಂದೆ ನಿಂತಿರುವುದು ಅಮೇರಿಕಾ ಸೇರಿದಂತೆ ಮುಂದುವರಿದ ರಾಷ್ಟ್ರಗಳ ನಿದ್ದೆ ಕೆಡಿಸಿದೆ.


ಸಂದರ್ಭದಲ್ಲಿ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಂಡ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಡಿದ ಮಾತನ್ನೂ ಸಹ ಬ್ರಿಕ್ಸ್ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಬೇಕಿದೆ. “ ಜಾಗತಿಕ ಮಟ್ಟದಲ್ಲಿ ತಲೆ ಎತ್ತುತ್ತಿರುವ ಭಯೋತ್ಪಾದನೆ, ಮತ್ತು ಸಂಘಟನೆಗಳಿಗೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ರಾಷ್ಟ್ರಗಳ ಚಟುವಟಿಕೆಗಳನ್ನು ನಾವು ನಿಗ್ರಹಿಸದ ಹೊರತು  ನಮ್ಮ ಗುರಿಯನ್ನು ತಲುಪಲು ಸಾಧ್ಯವಿಲ್ಲಎಂಬ ಅವರ ಮಾತು ಸಂದರ್ಭದಲ್ಲಿ ಪ್ರಸ್ತುತವಾಗಿದೆ. ಜಾಗತಿಕವಾಗಿ ಆಯಾ ಪ್ರಾದೇಶಿಕ ನೆಲೆಯಲ್ಲಿ ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡುವ ನಿಟ್ಟಿನಲ್ಲಿ ಉದ್ಭವಿಸುತ್ತಿರುವ ಇಂತಹ ಸಂಸ್ಥೆಗಳು ಏಕರೂಪದ ನೀತಿ ಮತ್ತು ಸರ್ವಾಧಿಕಾರದ ನಡುವಳಿಕೆಗಳಿಗೆ ಕಡಿವಾಣ ಹಾಕಬಲ್ಲವು ಎಂದು ಕೆಲವು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿರುವುದರಿಂದ ಬ್ರಿಕ್ಸ್ ಬ್ಯಾಂಕಿನ ಚಟುವಟಿಕೆಯನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ.
                                 *****





              

ಗುರುವಾರ, ಜುಲೈ 10, 2014

ಗಾನ ಗಂಗೆಯರ ಗುಂಗಿನಲ್ಲಿ






ಮೊನ್ನೆ ಎಂ.ಎಸ್. ಸುಬ್ಬುಲಕ್ಷ್ಮಿಯವರ ಕಥನದ ಕೊನೆಯ ಅಧ್ಯಾಯವನ್ನು ಬರೆಯುವಾಗ  ಆ ಮಹಾತಾಯಿಯ  ಸಾರ್ಥಕದ ಬದುಕು, ಸಂಗೀತವನ್ನು ಬದುಕಿನುದ್ದಕ್ಕೂ ಉಸಿರಾಡಿದ ಪರಿ, ಹಾಗೂ ತಮ್ಮ ಪತಿ ಟಿ.ಸದಾಶಿವಂ ಅವರು ಮರಣ ಹೊಂದಿದ ನಂತರ ತಮ್ಮ ಸಾರ್ವಜನಿಕ ಸಂಗೀತ ಕಛೇರಿಗೆ ತಿಲಾಂಜಲಿ ನೀಡಿದ ನಂತರವೂ ತಮ್ಮ ಎಂಬತ್ತರ ಇಳಿವಯಸ್ಸಿನಲ್ಲೂ ಕರ್ನಾಟಕ ಸಂಗೀತದ ಕೀರ್ತನೆಗಳು, ರಾಗಗಳು ಮರೆತು ಹೋಗಬಾರದು ಎಂಬ ದೃಷ್ಟಿಯಿಂದ ತಮ್ಮ ನಿವಾಸದ ದೇವರ ಕೋಣೆಯಲ್ಲಿ ಕುಳಿತು ಗಂಟಗಟ್ಟಲೆ ತಮ್ಮಷ್ಟಕ್ಕೆ ಹಾಡಿಕೊಳ್ಳುತ್ತಿದ್ದ ವೈಖರಿ ಇವುಗಳನ್ನು ದಾಖಲಿಸುವಾಗ ಮನಸ್ಸು ಮೂಕವಾಗಿ ಕಣ್ಣು ಮತ್ತು ಹೃದಯ ಒದ್ದೆಯಾಗುತ್ತಿದ್ದವು. ತಾವು ಸಾಯುವ ಮುನ್ನ ಕೊನೆಯ ದಿನಗಳಲ್ಲಿ ಅಂದರೆ 2004 ರಲ್ಲಿ ತಮ್ಮ 87 ತುಂಬಿ 88 ರ ಹುಟ್ಟು ಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ನಿಮ್ಮ ಕೊನೆಯ ಆಸೆ ಏನು ಪ್ರಶ್ನಿಸಿದಾಗ, “ ನನ್ನ ಕೊನೆಯ ಉಸಿರು ಇರುವ ತನಕ ನನ್ನ ಕಿವಿಯ ಮೇಲೆ ಸಂಗೀತ ಶಬ್ಧ ಬೀಳುತ್ತಿರಬೇಕು” ಎಂದಿದ್ದರು. ಇವುಗಳನ್ನು ದಾಖಲಿಸುವಾಗ ಸುಬ್ಬುಲಕ್ಷ್ಮಿಯವರನ್ನು ಕಥನದ ಮೊದಲ ಅಧ್ಯಾಯದಲ್ಲಿ “ ನಾದದ ನದಿ’ ಎಂದು ಕರೆದಿದ್ದ ನಾನು ಇವರನ್ನು ಭಾರತದಲ್ಲಿ ಯಾರಿಗೆ ಹೋಲಿಸಬಹುದು ಎಂದು ಪ್ರಶ್ನೆ ಹಾಕಿಕೊಂಡಾಗ ನನಗೆ ತಟ್ಟನೆ ನೆನಪಾದವರು ನಮ್ಮವರೇ ಆದ ಗಾನಗಂಗೆ ಗಂಗೂಭಾಯಿ ಹಾನಗಲ್. ಇದೇ ಜುಲೈ 21 ಕ್ಕೆ  ಗಂಗೂಬಾಯಿ ಹಾನಗಲ್ ನಮ್ಮನ್ನು ಅಗಲಿ ಐದು ವರ್ಷವಾಗಲಿದೆ.  ಈ ಇಬ್ಬರೂ ಭಾರತೀಯ ಸಂಗೀತ ಲೋಕದ ಸಾಧಕಿಯರು  ಎರಡು ಮೇರು ಶಿಖರಗಳು ಎಂದರೆ ತಪ್ಪಾಗಲಾರದು. 


ಸುಬ್ಬುಲಕ್ಷ್ಮಿಯವರು ಕರ್ನಾಟಕ ಸಂಗೀತ ಕ್ರೇತ್ರದಲ್ಲಿ ಸಾಧನೆ ಮಾಡಿದರೆ, ಗಂಗೂಬಾಯಿ ಹಾನಗಲ್ ರವರು ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದರು. ಪುರುಷ ಪ್ರಧಾನವಾಗಿದ್ದ ಭಾರತದ ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆ ಹಾಗೂ ಸಂಗೀತಕ್ಕಾಗಿ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟ ರೀತಿ ನಿಜಕ್ಕೂ ವಿಸ್ಮಯಕಾರಿಯಾದುದು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರೂ ತಳಸಮುದಾಯದಲ್ಲಿ ಹುಟ್ಟಿದವರು ಬ್ರಾಹ್ಮಣ ಪುರುಷರನ್ನು ಕೈ ಹಿಡಿದು, ತಮ್ಮ ಅಗಾಧ ಸಾಧನೆಯಿಂದ ಸಂಗೀತ ಲೋಕದ ಸರಸ್ವತಿಯರಂತೆ ಮಿಂಚಿ, ಅಂತಿಮವಾಗಿ ಜಾತಿ, ಧರ್ಮ, ಭಾಷೆಯ ಗಡಿಯನ್ನು ದಾಟಿ, ಭಾರತದ ಎಲ್ಲರೆದಯಲ್ಲಿ ದೇವತೆಯರಂತೆ ಸ್ಥಾಪಿತಗೊಂಡವರು. ಭಾರತೀಯ ಸಂಗೀತದ ಎರಡು ಪ್ರಕಾರಗಳಾದ ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಸಾಧನೆಗೈದ ಈ ಇಬ್ಬರ ನಡುವೆ ಇರುವ ಸಾಮ್ಯ ನಿಜಕ್ಕೂ ಅಚ್ಚರಿ ಪಡುವಂತಹದ್ದು.ಇದನ್ನು ಸುಬ್ಬುಲಕ್ಷ್ಮಿಯವರ ಕೊನೆಯ ಅಧ್ಯಾಯದಲ್ಲಿ ದಾಖಲಿಸಿದ್ದೇನೆ.
ನನಗಿನ್ನೂ ನೆನಪಿದೆ. 2001 ರ ಆಗಸ್ಟ್ ತಿಂಗಳಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವ  ಉದಯ ಟಿ.ವಿ ಸಂಸ್ಥೆಯು ಉತ್ತರ ಕರ್ನಾಟಕ ಪ್ರಾದೇಶಿಕ ಕಛೇರಿಯನ್ನು ಆರಂಭಿಸಿದಾಗ ಮುಖ್ಯಸ್ಥನಾಗಿ ಹುಬ್ಬಳ್ಳಿ ನಗರಕ್ಕೆ ಬಂದೆ. 2002 ರ ಜನವರಿ ತಿಂಗಳಿನಲ್ಲಿ ಗಂಗೂಬಾಯಿ ಹಾನಗಲ್ ಅವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಿತು. ಪ್ರಶಸ್ತಿ ಘೋಷಣೆ ಮಾಡುವ ಸಮಯದಲ್ಲಿ ಅವರ ಒಪ್ಪಿಗೆ ಪಡೆಯುವಂತೆ ಕೇಂದ್ರ ಸರ್ಕಾರವು ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ ಕಪಿಲ್ ಮೋಹನ್ ಅವರಿಗೆ ಸೂಚಿಸಿತ್ತು. ಈ ವೇಳೆಯಲ್ಲಿ ಗಂಗೂಬಾಯಿ ಹಾನಗಲ್ ಕೊಲ್ಕತ್ತ ನಗರದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಪಾಲ್ಗೊಂಡು, ಅಲ್ಲಿಂದ ಪೂನಾ ನಗರಕ್ಕೆ ಬಂದು ಖ್ಯಾತ ಹಿಂದೂಸ್ಥಾನಿ ಗಾಯಕಿ ಕಿಶೋರಿ ಅಮೋಣ್ಕರ್ ರವರು ತಮ್ಮ ತಾಯಿಯವರ ಪುಣ್ಯ ತಿಥಿಯ ಅಂಗವಾಗಿ  ಏರ್ಪಡಿಸಲಾಗಿದ್ದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿಯವರು ದೂರವಾಣಿಯ ಮೂಲಕ ಸಂಪರ್ಕಿಸಿದಾಗ, ಸತತ ಎಂಟುಗಂಟೆಗಳ ಕಾಲ ಒಪ್ಪಿಗೆ ನೀಡಲು ಗಂಗೂಬಾಯಿ ಹಾನಗಲ್ ಸತಾಯಿಸಿದ್ದರು. ನಂತರ ಒಪ್ಪಿಗೆ ಸೂಚಿಸಿದ್ದರು. ಮಾರನೆಯ ದಿನ ಹುಬ್ಬಳ್ಳಿ ನಗರಕ್ಕೆ ಅವರು ಬಂದ ನಂತರ ಅವರ ಮೊಮ್ಮಗ ಹಾಗು ವಕೀಲರಾದ ಮನೋಜ್ ಹಾನಗಲ್ ಜೊತೆ ಮಾತನಾಡಿ ಉದಯ ಟಿ.ವಿ. ಗಾಗಿ ಹದಿನೈದು ನಿಮಿಷಗಳ ಕಾಲದ ಸಂದರ್ಶನ ಕ್ಕೆ ಅನುಮತಿ ಪಡೆದಿದ್ದೆ. ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಅವರ ಮನೆಯ ಹಾಲ್ ನಲ್ಲಿ ಅವರಿಗೆ ಬಂದಿರುವ ಪ್ರಶಸ್ತಿ ಫಲಕ ಗಳ ನಡುವೆ ಸಂದರ್ಶನಕ್ಕಾಗಿ ಸ್ಥಳ ನಿಗದಿ ಪಡಿಸಿ ಮನೋಜ್ ನಿಗದಿಪಡಿಸಿ, ಯಾವುದೇ ಗದ್ದಲ ಬಾರದಂತೆ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅವರಿಗೆ ನಮಸ್ಕರಿಸಿ,”ಅಮ್ಮಾ ಏಕೆ ಒಪ್ಪಿಗೆ ನೀಡಲು ತಡಮಾಡಿದಿರಿ? ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ಬಾಯ್ತುಂಬಾ ನಕ್ಕು  “ ತಮ್ಮಾ ಅದೊಂದು ದೊಡ್ಡ ಕಥಿ’ ಎಂದರು. ಈ ಮೊದಲು ಅವರಿಗೆ  ಭಾರತ ಸರ್ಕಾರವು 1971 ರಲ್ಲಿ ಅವರಿಗೆ ಪದ್ಮಭೂಷಣ ನೀಡಲಾಗಿತ್ತು. ಮತ್ತೆ ಯಾಕ ಪ್ರಶಸ್ತಿ ಕೊಡ್ಲಿಕ್ ಹತ್ತಾರಾ ಅಂತ ಗದ್ದಲಾಗಿತ್ತು ಆನಂತರ ತಿಳಿತು ನೋಡಪ್ಪಾ, ಪದ್ಮಭೂಷಣದ ಪ್ರಶಸ್ತಿ ಮೇಲೆ ಇನ್ನೊಂದು ಪದ್ಮವಿಭೂಷಣ ಪ್ರಶಸ್ತಿ ಐತಿ ಅಂತಾ” ಎಂದು ಹೇಳುತ್ತಾ ಅವರು ಮನಸ್ಸು ಬಿಚ್ಚಿ ಬಾಯ್ತುಂಬಾ ನಕ್ಕಾಗ ನನಗೂ ನಗು ತಡೆಯಲಿಕ್ಕೆ ಆಗಲಿಲ್ಲ. ಆ ಸಂದರ್ಭದಲ್ಲಿ ನನಗೆ ಓರ್ವ ಅಂತರಾಷ್ಟ್ರೀಯ ಮಟ್ಟದ ಗಾಯಕಿಯ ಜೊತೆ ಕುಳಿತು ಮಾತನಾಡುತ್ತಿದ್ದೀನಿ ಎನ್ನುವುದಕ್ಕಿಂತ  ಹೆಚ್ಚಾಗಿ ನನ್ನ ನೆರಮನೆಯ ದೊಡ್ಡಮ್ಮನೊ, ಅಜ್ಜಿಯೊ ಅಥವಾ ನನ್ನ ಹೆತ್ತವ್ವನ ಜೊತೆ ಕುಳಿತು ಮಾತನಾಡುತ್ತೀನಿ ಎಂಬ ಅನುಭವವಾಗತೊಡಗಿತು.



ತಮಗೆ ಭಾರತ ರತ್ನ ಪ್ರಶಸ್ತಿಯ ನಂತರ ದೇಶದ ಎರಡನೆಯ  ಅತ್ಯುನ್ನುತ ಪದ್ಮವಿಭೂಷಣ ಗೌರವ ದೊರೆತ ಬಗ್ಗೆ ಸಂತಸ ವ್ಯಕ್ತಪಡಿಸಿ ತಮ್ಮ ಭಾವನೆಗಳನ್ನು ಹಂಚಿಕೊಂಡ ಅವರು ತಮ್ಮ ಸಮಕಾಲೀನ ಸಂಗೀತಗಾರರಾದ ಭೀಮಸೇನ್ ಜೋಷಿ, ಮಲ್ಲಿಕಾರ್ಜುನ್ ಮನ್ಸೂರ್, ಬಸವರಾಜ ರಾಜಗುರು, ಕುಮಾರ ಗಂಧರ್ವ ಇವರನ್ನು ಸ್ಮರಿಸಿ ಅವರ ಸಾಧನೆಯನ್ನು ಹೃದಯ ತುಂಬಿ ಹೊಗಳಿದರು. ಅವರು ಮಾತನಾಡುತ್ತಿದ್ದರೆ, ಆ ಮಹಾನ್ ಗಾಯಕರ ಜೊತೆ ರಕ್ತ ಹಂಚಿಕೊಂಡು ಹುಟ್ಟಿದ ಸಹೋದರಿಯೊಬ್ಬಳು ಮನದುಂಬಿ ಮಾತನಾಡುತ್ತಿದ್ದಾಳೆ ಎಂದು ಅನಿಸುತ್ತಿತ್ತು. ಅವರ ಬಾಯಲ್ಲಿ ಭೀಮಸೇನಜೋಷಿ ಭೀಮು ಆಗಿದ್ದರು, ಮಲ್ಲಿಕಾರ್ಜುನ ಮನ್ಸೂರ್ ಮಲ್ಲಣ್ಣ ಆಗಿದ್ದರು. ಬಸವರಾಜ ರಾಜಗುರು ಬಸು ಆಗಿದ್ದರೆ, ಕುಮಾರ ಗಂಧರ್ವ ಕುಮಾರ ಆಗಿದ್ದರು. ಎದೆಯಲ್ಲಿ ಒಂದಿಷ್ಟು ಕಲ್ಮಶ ಮತ್ತು  ದ್ವೇಷವಿಲ್ಲದೆ ತಮ್ಮ ಸಮಕಾಲಿನ ಗಾಯಕರನ್ನು ಹಾಡಿಹೊಗಳುವುದು ಮತ್ತು ನನಗೆ ಬಂದ ಈ ಪ್ರಶಸ್ತಿಯಲ್ಲಿ ಅವರದೂ ಒಂದು ಪಾಲಿದೆ ಎಂದು ಹೇಳಿಕೊಳ್ಳುವುದನ್ನು ಕೇಳುತ್ತಿದ್ದ   ನನ್ನ ಪಾಲಿಗೆ ಗಂಗೂಬಾಯಿ ಹಾನಗಲ್ ಓರ್ವ ದೇವತೆಯಂತೆ ಕಂಡು ಬಂದರು. ಇಂತಹದ್ದೇ ವಿಷಯದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿಯವರು ಸಹ ಗಂಗೂಬಾಯಿ ಹಾನಗಲ್ ಅವರನ್ನು ಹೋಲುತ್ತಾರೆ. 1968 ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಂಸ್ಥೆಯು ಕರ್ನಾಟಕ ಸಂಗೀತದ ಅತ್ಯುನ್ನತ ಪ್ರಶಸ್ತಿಯನ್ನು ಎಂ.ಎಸ್.ಸುಬ್ಬುಲಕ್ಷ್ಮಿಯವರಿಗೆ ಘೋಷಿಸಿ,  ಮದ್ರಾಸ್ ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಿದಾಗ, ಸಮಾರಂಭದಲ್ಲಿ ಹಾಜರಿದ್ದ ತಮ್ಮ ಸಮಕಾಲೀನ ಖ್ಯಾತ ಕರ್ನಾಟಕ ಸಂಗೀತ ಗಾಯಕಿಯರಾದ ಡಿ.ಕೆ.ಪಟ್ಟಮ್ಮಾಳ್ ಮತ್ತು ಎಂ.ಎಲ್. ವಸಂತಕುಮಾರಿ ಅವರನ್ನು ವೇದಿಕೆಗೆ ಕರೆಸಿಕೊಂಡು, ಅವರನ್ನು ತಮ್ಮ ಎಡ ಬಲ ನಿಲ್ಲಿಸಿಕೊಂಡು ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ನಂತರ ಮಾತನಾಡಿ ಈ ಪ್ರಶಸ್ತಿ ಕರ್ನಾಟಕ ಸಂಗೀತ ಕ್ಷೇತ್ರದ ಸ್ತ್ರಿ ಸಮುದಾಯಕ್ಕೆ ಸಂದ ಗೌರವ ಎಂದು ಹೇಳುವುದರ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದರು. ಏಕೆಂದರೆ, ಕರ್ನಾಟಕ ಸಂಗೀತದ ಇತಿಹಾಸದಲ್ಲಿ  ಮೊಟ್ಟ ಮೊದಲ ಬಾರಿಗೆ ಸುಬ್ಬುಲಕ್ಷ್ಮಿಯವರಿಗೆ “ ಸಂಗೀತ ಕಲಾನಿಧಿ” ಪ್ರಶಸ್ತಿಯ ಗೌರವ ದೊರಕಿತ್ತು



ಇಬ್ಬರೂ ಕೂಡ ತಮ್ಮ ಸುಧೀರ್ಘ ಅರ್ಧಶತಮಾನಗಳ ಕಾಲ ತಮ್ಮ ಪುತ್ರಿಯರೊಂದಿಗೆ ಸಂಗೀತ ಕಛೇರಿ ನಡೆಸಿಕೊಟ್ಟರು. ಗಂಗೂಬಾಯಿ ಹಾನಗಲ್ ತಮ್ಮ ಪುತ್ರಿ ಕೃಷ್ಣ ಹಾನಗಲ್ ಜೊತೆ ಹಿಂದೂಸ್ಥಾನಿ ಸಂಗೀತ ಕಛೇರಿ ನಡೆಸಿಕೊಟ್ಟರೆ, ಸುಬ್ಬುಲಕ್ಷ್ಮಿಯವರು ತಮ್ಮ ಪುತ್ರಿ ಎಂ.ಎಸ್ ರಾಧಾ ಜೊತೆ ಕರ್ನಾಟಕ ಸಂಗೀತದ ಕಛೇರಿ ನಡೆಸಿಕೊಟ್ಟರು. ಇಬ್ಬರಿಗೂ ತಮ್ಮ ತಮ್ಮ ಸಂಗೀತದ ಬಗ್ಗೆ ಅಪಾರ ಹೆಮ್ಮೆ, ವಿಶ್ವಾಸ, ನಂಬಿಕೆ ಇತ್ತು. ಸಂದರ್ಶನದ ವೇಳೆ ಗಂಗೂಬಾಯಿ ಗಾನಗಲ್ ಅವರನ್ನು ಕೇಳಿದ್ದೆ. “ಅಮ್ಮಾ ಆಧುನಿಕ ಬದುಕಿನ ಅಬ್ಬರದ ಸಂಗೀತದ ನಡುವೆ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಭವಿಷ್ಯ ಇದೆ ಅನಿಸುತ್ತಾ?” ನನ್ನ ಪ್ರಶ್ನೆಗೆ ಅವರು ರೂಪಕದ ಭಾಷೆಯಲ್ಲಿ ಉತ್ತರ ಕೊಟ್ಟಾಗ ನಾನು ದಂಗು ಬಡಿದು ಮೂಕನಾಗಿದ್ದೆ. ಅವರು ಕೊಟ್ಟ ಉತ್ತರ ಹೀಗಿತ್ತು.” ತಮ್ಮಾ, ತುಂಬಿದ ಮನಿಯೊಳಗ ತೂಗವ ತೊಟ್ಟಿಲು ಇರ್ತದ , ತೊಟ್ಟಿಲೊಳಗ ಕೂಸು ಮಲಗಿರ್ತದ ತೊಟ್ಟಲು ತೂಗುವುದನ್ನು ನಿಲ್ಲಿಸುವ ವೇಳ್ಯಾಗ ಇನ್ಯಾರೊ ಬಂದು ಅದಕ್ಕೆ ಕೈ ಹಚ್ತಾರ. ಹಂಗಾನ ಈ ಸಂಗೀತ . ಕೂಸು ಮಲಗಿರುವ ತೊಟ್ಟಿಲು ಹ್ಯಾಂಗ ತೂಗುವುದನ್ನು ನಿಲ್ಲಿಸುವುದಿಲ್ಲವೊ, ಹಾಂಗಾನ ಈ ಸಂಗೀತ ನಿಲ್ಲೊದಿಲ್ಲಾ ಏನಂತಿ? “ ಗಂಗೂಬಾಯಿಯವರ ವ್ಯಕ್ತಿತ್ವದ ವಿಶಿಷ್ಟತೆ ಎಂದರೆ ಅವರು ನಮ್ಮ ಜೊತೆ ಮಾತನಾಡುವಾಗ ಪ್ರಶ್ನೆ ಎಸೆದು ನಗುತ್ತಿದ್ದರು ಮತ್ತು ಪ್ರತಿಕ್ರಯೆಗೆ ಎದುರು ನೋಡುತ್ತಿದ್ದರು.  ಅವರ ಜೊತೆ ಎಂಟು ವರ್ಷಗಳ ಒಡನಾಡಿದ ಹಾಗೂ ಉದಯ ಟಿ.ವಿ. ಗಾಗಿ ಕನಿಷ್ಟ ಒಂದು ಡಜನ್ ಕಾರ್ಯಕ್ರಮ, ಸಂದರ್ಶನ ಮಾಡಿದ ನನಗೆ ಒಮ್ಮೆಯೂ ಅವರ ಬಾಯಿಂದ ಸಂಗೀತ ಕೇಳುವ ಭಾಗ್ಯ ದೊರೆತಿರಲಿಲ್ಲ  ಅದೊಂದು ಕೊರಗು ಮಾತ್ರ ಸದಾ ನನ್ನನ್ನು ಕಾಡುತ್ತಿತ್ತು. 2007 ರ ಮೇ ತಿಂಗಳಿನಲ್ಲಿ ಅವರ ಗುರುಗಳಾದ ಸವಾಯ್ ಗಂಧರ್ವ ರ ಪುಣ್ಯ ತಿಥಿಯ ಸಂದರ್ಭದಲ್ಲಿ ಅವರು ಅನಿರೀಕ್ಷಿತವಾಗಿ ಹಾಡಿದಾಗ, ಅದನ್ನು ಕೇಳುವ ಭಾಗ್ಯವೂ ನನ್ನದಾಯಿತು
                                 (2007 ರಲ್ಲಿ ಕುಂದಗೋಳದಲ್ಲಿ ಕೊನೆಯ ಬಾರಿ ಹಾಡಿದ ಚಿತ್ರ)

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಾಡಗೀರ್ ವಾಡೆಯಲ್ಲಿ ( ಇದು ಸವಾಯ್ ಗಂಧರ್ವರ ಹುಟ್ಟೂರು) ಪ್ರತಿ ವರ್ಷ ಸವಾಯ್ ಗಂಧರ್ವ ರ ಪುಣ್ಯ ತಿಥಿಯನ್ನು ಆಚರಿಸುತ್ತಾ ಅಹೋರಾತ್ರಿ ಸಂಗೀತ ಕಛೇರಿಯನ್ನು ನಡೆಸಿಕೊಂಡು ಬರಲಾಗುತ್ತಿದೆ., ಸವಾಯ್ ಗಂಧರ್ವರ ಶಿಷ್ಯರಾದ ಪಂಡಿತ್ ಭೀಮಸೇನ್ ಜೋಷಿ ಮತ್ತು ಗಂಗೂಬಾಯಿ ಹಾನಗಲ್.ನೇತೃತ್ವದಲ್ಲಿ ನಡೆಯುತ್ತಿದ್ದ ಇಲ್ಲಿನ ಸಂಗೀತ ಕಛೇರಿಯಲ್ಲಿ ಹಾಡುವುದು ಪ್ರತಿಯೊಬ್ಬ ಹಿಂದೂಸ್ಥಾನಿ ಗಾಯಕ ಗಾಯಕಿಯರ ಕನಸಾಗಿತ್ತು.  ಭೀಮಸೇನ ಜೋಷಿಯವರು ತಾವು ವಾಸಿಸುತ್ತಿದ್ದ  ಪೂನಾ ನಗರದಲ್ಲಿ ತಮ್ಮ ಗುರುಗಳ ಸ್ಮರಣಾರ್ಥ ಸಂಗೀತ ಉತ್ಸವವನ್ನು ಆರಂಭಿಸಿದ ಮೇಲೆ ಗಂಗೂಬಾಯಿ ಮಾತ್ರ ತಪ್ಪದೆ ಕುಂದಗೋಳದ ಸವಾಯ್ ಗಂಧರ್ವರ  ಪುಣ್ಯ ತಿಥಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. 2007 ರ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ, ವೇದಿಕೆಯ ಎಡ ಭಾಗದಲ್ಲಿ ಕುಳಿತಿದ್ದ ಗಂಗೂಬಾಯಿಯವರು ಇದ್ದಕ್ಕಿದ್ದಂತೆ ಸ್ಪೂರ್ತಿಗೊಂಡವರಂತೆ ಜೈಜವಂತಿ ರಾಗದಲ್ಲಿ  ಹಾಡತೊಡಗಿದರು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಹಾಡಿದ ಆ ಅಪೂರ್ವ ದೃಶ್ಯವನ್ನು ನಾನು ನಮ್ಮ ಕ್ಯಾಮರಾಮನ್ ಮೂಲಕ ದಾಖಲಿಸಿದ್ದೆ. ಆ ಕ್ಯಾಸೆಟ್ ನನ್ನ ಪಾಲಿಗೆ ಅಮೂಲ್ಯ ಆಸ್ತಿಯಾಗಿತ್ತು. 2009 ಜುಲೈ 21 ರಂದು ಅವರು ಹುಬ್ಬಳ್ಳಿ ನಗರದಲ್ಲಿ ನಿಧನ ಹೊಂದಿದಾಗ ನಾನು ಸಿದ್ಧ ಪಡಿಸಿದ ನುಡಿ ನಮನ ದೊಂದಿಗೆ ಗಂಗೂಬಾಯಿ ಹಾನಗಲ್ ಅವರ ಹಿಂದೂಸ್ಥಾನಿ ಹಾಡುಗಾರಿಕೆ  ನಮ್ಮ  ಉದಯ ವಾರ್ತೆಯಲ್ಲಿ ದಿನವಿಡಿ ಪ್ರಸಾರವಾಯಿತು.
ತಮ್ಮ ಕೊನೆಯ ಉಸಿರು ಇರುವ ತನಕ ಸಂಗೀತಕ್ಕಾಗಿ ತುಡಿಯುತ್ತಿದ್ದ ಗಂಗೂಬಾಯಿಯವರು ಧಾರವಾಡ ನಗರದಲ್ಲಿ ನಡೆಯುತ್ತಿದ್ದ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸಂಗೀತ ಪ್ರಶಸ್ತಿ ಪ್ರಧಾನ , ಪಂಡಿತ್ ಬಸವರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಿಗೆ ಗಾಲಿ ಕುರ್ಚಿಯಲ್ಲಿ ಕುಳಿತು ಬಂದು ಪಾಲ್ಗೊಂಡು, ಆ ನಂತರ ಪ್ರಶಸ್ತಿ ಪುರಸ್ಕೃತರ ಸಂಗೀತವನ್ನು ಆಲಿಸುತ್ತಿದ್ದರು.ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಬಹುದೊಡ್ಡ ಕಲಾವಿದರು ತಮ್ಮ ಕಾರ್ಯಕ್ರಮಕ್ಕೆ ಮುನ್ನ ಗಂಗೂಬಾಯಿಯವರ ಮುಂದೆ ಹಾಡಲು ಅವಕಾಶ ಸಿಕ್ಕಿರುವುದು ತಮ್ಮ ಪುಣ್ಯ ಎಂದು ಸ್ಮರಿಸುತ್ತಿದ್ದರು. ಮದ್ರಾಸ್ ನಗರಕ್ಕೆ ಹೋದ ಕಲಾವಿದರು ಎಂ.ಎಸ್.ಸುಬ್ಬಲಕ್ಷ್ಮಿಯವರನ್ನು ಬೇಟಿ ಮಾಡಿ ಆರ್ಶಿವಾದ ಪಡೆಯುತ್ತಿದ್ದ ಹಾಗೆ, ಹುಬ್ಬಳ್ಳಿ- ಧಾರವಾಡ ನಗರಕ್ಕೆ ಆಗಮಿಸುತ್ತಿದ್ದ ಕಲಾವಿದರು ತಪ್ಪದೆ ಗಂಗೂಬಾಯಿಯವರ ನಿವಾಸಕ್ಕೆ ತೆರಳಿ ಆರ್ಶಿವಾದ ಪಡೆಯುತ್ತಿದ್ದರು.


ತಮ್ಮ ಕೊನೆಯ ದಿನಗಳಲ್ಲಿ ಎಂದು ಮನೆಯಲ್ಲಿ ಕೂರಲಿಚ್ಛಿಸಿದ ಗಂಗೂಬಾಯಿಯವರು ತಮ್ಮ ಇಳಿವಯಸ್ಸಿನ ಅನಾರೋಗ್ಯದ ನಡುವೆ ಪ್ರತಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು. ತಾವು ನಿಧನರಾಗುವ ಮೂರು ನಾಲ್ಕು ತಿಂಗಳ ಮುಂದೆ ಹುಬ್ಬಳ್ಳಿಯಲ್ಲಿ ತರುಣ್ ಭಾರತ್ ಎಂಬ ಮರಾಠಿ ಪತ್ರಿಕೆಗೆ ವರದಿಗಾರನಾಗಿದ್ದ ಅಬ್ಬಾಸ್ ಮುಲ್ಲಾ ಎಂಬ ಯುವಕನ ವಿವಾಹಕ್ಕೆ ಹಾಜರಾಗಿದ್ದರು. ಕಲ್ಯಾಣ ಮಂಟಪ ಮೊದಲ ಮಹಡಿಯಲ್ಲಿ ಇದ್ದ ಕಾರಣ ಗಾಲಿ ಕುರ್ಚಿಯಲ್ಲಿ ಮೇಲೆ ಬರಲು ಸಾಧ್ಯವಾಗಲಿಲ್ಲ ಆನಂತರ ಪ್ಲಾಸ್ಟಿಕ್ ಕುರ್ಚಿಯಲ್ಲಿ ಅವರನ್ನು ಕೂರಿಸಿ ಎತ್ತಿಕೊಂಡು ಬರಲಾಯಿತು. ಅವರನ್ನು ಎದುರಾದ ನಾನು ಅವರಿಗೆ ನಮಸ್ಕರಿಸಿ “ ಅಮ್ಮಾ ಈ ಸ್ಥಿತಿಯಲ್ಲಿ ಏಕೆ ಬಂದಿರಿ? ಎಂದು ಪ್ರಶ್ನಿಸಿದೆ. ಮನ್ಯಾಗ ಕುಂತು ಏನ್ ಮಾಡ್ಲಿ? ನೋಡು ಇಲ್ಲಿ ಎಷ್ಟು ಚೆಂದದ? ಎಷ್ಟು ಮಂದಿ ಇದ್ದಾರಾ? ಶಹನಾಯಿ ವಾದನ ಕೇಳ್ತಾ ಇದ್ದರ ಮನಸು ಹಗುರಾಗ್ತದ” ಎಂದು ನಗುತ್ತಾ ಅವರು ಉತ್ತರಿಸುವಾಗ ನನ್ನ ಕಣ್ಣುಗಳು ಒದ್ದೆಯಾದವು. ಸಂಗೀತವನ್ನು ತಮ್ಮ ಉಸಿರಿನಂತೆ ಪ್ರೀತಿಸಿದ, ಧ್ಯಾನಿಸಿದ, ಆರಾಧಿಸಿದ ಈ ಮಹಾನ್ ತಾಯಂದಿರ ವ್ಯಕ್ತಿತ್ವದ ಗುಣವೇ ಇಂತಹದ್ದು ಎಂದು ಕೊಂಡೆ.
ಎಂ.ಎಸ್. ಸುಬ್ಬುಲಕ್ಷ್ಮಿ, ಗಂಗೂಬಾಯಿ ಗಾನಗಲ್ ಅವರ ಕಾಲಘಟ್ಟದಲ್ಲಿ ನಾನೂ ಬದುಕಿದ್ದೆ, ಅವರ ಸಂಗೀತವನ್ನು ಕೇಳಿದ್ದೆ. ಅವರೊಡನೆ ಮಾತನಾಡಿದ್ದೆ ಎಂಬುದೇ ನನ್ನ ಬದುಕಿನ ಅಮೂಲ್ಯ ಕ್ಷಣಗಳು ಎಂದು ನಾನು ಭಾವಿಸಿದ್ದೇನೆ.