ಶನಿವಾರ, ಅಕ್ಟೋಬರ್ 17, 2015

ಕೊಳಗೇರಿಗಳೆಂಬ ಬಡವರ ಕಗ್ಗತ್ತಲ ಕೂಪಗಳು



 ಈ ದಿನ ದೆಹಲಿ ನಗರದಲ್ಲಿ  ನಡೆದಿರುವ ಎರಡು ವರ್ಷ ಮತ್ತು ಐದು ವರ್ಷದ ಕಂದಮ್ಮಗಳ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆಯು  ( ಎರಡು ಪ್ರತ್ಯೇಖ ಘಟನೆಗಳಲ್ಲಿ) ಬೆಳಿಗ್ಗೆಯಿಂದ ಮನಸ್ಸನ್ನು ಆವರಿಸಿಕೊಂಡಿದೆ. ನಗರಗಳ ಕೊಳಚೆಗೇರಿಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಆದರೆ, ಇಂತಹುಗಳು ಸಮಾಜದ ಮುಖ್ಯವಾಹಿನಿಯ ಗಮನ ಸೆಳೆಯುವುದು ತುಂಬಾ ಅಪರೂಪ.
 1981 ರಿಂದ 1984 ರವರೆಗೆ ಮದ್ರಾಸ್ ನಗರದಲ್ಲಿದ್ದ ನನಗೆ ಜೀವನದಲ್ಲಿ ಪ್ರಥಮ ಬಾರಿಗೆ ಕೊಳಚೇಗೇರಿಗಳು, ಅಲ್ಲಿನ ಜನರ ಬಡತನ ಮತ್ತು ಬವಣೆಗಳು ಪರಿಚಯವಾದವು. ನಂತರದ ದಿನಗಳಲ್ಲಿ ಕೊಳಚೇಗೇರಿಗಳು ನನ್ನ ಕುತೂಹಲದ ಪ್ರಪಂಚವಾಗಿ ಮದ್ರಾಸ್, ಬೆಂಗಳೂರು, ಮುಂಬೈ ಹಾಗೂ ದೆಹಲಿಯ ಕೊಳಗೇರಿಗಳಿಗೆ ಅದೆಷ್ಟು ಬಾರಿ ಬೇಟಿ ನೀಡಿದ್ದೀನಿ. ಇದರ ಪರಿಣಾಮ ಮತ್ತು ಪ್ರಭಾವದಿಂದಾಗಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಮಾಡಬೇಕೆಂದು ಕನಸು ಕಂಡಿದ್ದ ನಾನು, ನಂತರ ದಿನಗಳಲ್ಲಿ ಮನಸ್ಸು ಬದಲಾಯಿಸಿ, ಅರ್ಥಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು, ಜಾಗತಿಕ ಬಡತನ ಮತ್ತು ಹಸಿವು ಇವುಗಳನ್ನು ನನ್ನ ಆಸಕ್ತಿಯ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡೆ.



ಇವೊತ್ತಿಗೂ ಧರ್ಮ, ಜಾತಿಗಳನ್ನು ಹಾಗೂ ಪ್ರಾದೇಶಿಕತೆ ಮತ್ತು ಭಾಷೆಗಳನ್ನು ಬದಿಗೊತ್ತಿ ಬದುಕುತ್ತಿರುವ ಜನರನ್ನು ಕಾಣಬೇಕಾದರೆ, ನಾವು ಕೊಳಗೇರಿಗಳಿಗೆ ಮಾತ್ರ ಹೋಗಬೇಕು. ಆವೊತ್ತಿನ ಹಸಿವು ನೀಗಿಸುವುದಕ್ಕೆ ಒಂದು ಹಿಡಿ ಅನ್ನ ಮತ್ತು ದಿನವಿಡಿ ದುಡಿದ ದೇಹಕ್ಕೆ ವಿಶ್ರಾಂತಿಗಾಗಿ ಒಂದು ಸೂರು ಇವಿಷ್ಟಿದ್ದರೆ ಸಾಕು ಜಗತ್ತಿನ ಯಾವ ಗೊಡವೆಯೂ ಬೇಡ ಎಂದು ಬದುಕವ ನತದೃಷ್ಟ ಜನರಿವರು. ಆದರೇ, ಇವರು ಬದುಕುತ್ತಿರುವ ಕೇವಲ ಎಂಟು ಅಡಿ ಅಗಲ, ಹತ್ತು ಅಡಿ ಉದ್ದದ ತಗಡು ಅಥವಾ ಪ್ಲಾಸ್ಟಿಕ್ ಹಾಳೆಯ ಗೂಡುಗಳಲ್ಲಿ  ಈ ಜನರಿಗೆ ಜನಿಸಿರುವ ಹೆಣ್ಣು ಮಕ್ಕಳ ಪಾಡು ನಿಜಕ್ಕೂ ನರಕವೇ ಸರಿ. ಸ್ನಾನಕ್ಕೆ, ಬಹಿರ್ದಸೆಗೆ ಹೀಗೆ ಯಾವ ವಿಷಯದಲ್ಲೂ  ಖಾಸಾಗಿತನವೆಂಬುದು ಹೆಣ್ಣುಮಕ್ಕಳಿಗೆ ಇಲ್ಲವಾಗಿದೆ.
ತಂದೆ ತಾಯಿಗಳು ದುಡಿಮೆಗೆ ಹೋದಾಗ, ಅಪ್ರಾಪ್ತ ಹೆಣ್ಣುಮಕ್ಕಳು ಕಾಮುಕರ ಕ್ರೌರ್ಯಕ್ಕೆ  ದಿನ ನಿತ್ಯ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಅತ್ಯಧಿಕ ಹೆಣ್ಣು ಮಕ್ಕಳು ಕಾಣೆಯಾಗುತ್ತಿರುವುದು ಹಾಗೂ ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದು ನಗರದ ಕೊಳಗೇರಿಗಳಲ್ಲಿ ಮಾತ್ರ. ಇಂತಹ ನತದೃಷ್ಟ ಹೆಣ್ಣು ಮಕ್ಕಳ ತಂದೆ ತಾಯಿಗಳು ಪೊಲೀಸ್ ಠಾಣೆಯ ಮೆಟ್ಟಿಲು ಏರಲು ಸಹ ಭಯಪಡುತ್ತಾರೆ. ಏಕೆಂದರೆ, ಅವರ ಬಳಿ ಯಾವುದೇ ರೀತಿಯ ಗುರುತಿನ ಚೀಟಿಗಳಾಗಲಿ ಅಥವಾ ಸಾಕ್ಷಾಧಾರಗಳು ಇರುವುದಿಲ್ಲ.
2012 ರ ಪೆಬ್ರವರಿ ತಿಂಗಳಿನ ಎರಡನೆಯ ವಾರದಲ್ಲಿ ದೆಹಲಿಯಲ್ಲಿದ್ದೆ. ಅಲ್ಲಿನ  ಕನಾಟ್ ಪ್ಲೇಸ್ ಮತ್ತು ಕರೋಲ್ ಬಾಗ್ ನಡುವಿನ ರಸ್ತೆಯಲ್ಲಿ ಇರುವ ಪಹಾರ್ ಗಂಜ್ ಪ್ರದೇಶದ ಬಳಿಯ ಕೊಳಚೆ ಪ್ರದೇಶಕ್ಕೆ ಬೇಟಿ ನೀಡಿ, ಒಬ್ಬ ವೃದ್ಧನ ಜೊತೆ ಮಾತನಾಡುತ್ತಿದ್ದೆ. ನಲವತ್ತು ವರ್ಷದ ಹಿಂದೆ ದೂರದ ಬಿಹಾರದಿಂದ ಬಂದು ಸೈಕಲ್ ರಿಕ್ಷಾ ತುಳಿದು  ಈಗ ದಣಿದು ಹೋಗಿರುವ ಆ ಜೀವ ತನ್ನ ಹೆಣ್ಣು ಮಗಳ ಆಶ್ರಯದಲ್ಲಿ ಬದುಕು ದೂಡುತ್ತಿತ್ತು. ಆ ವೃದ್ದ ತನ್ನ ಬದುಕಿನ ಬಹು ಭಾಗವನ್ನು ಕೊಳಗೇರಿಯಲ್ಲಿ ಸೆವೆಸಿದ ಕಾರಣ. ಆತನ ಬಾಯಿಂದ ಬರುತ್ತಿದ್ದ ಕಹಿ ಅನುಭವದ ಮಾತುಗಳನ್ನು ಕೇಳಿ ಮನಸ್ಸು ಮೌನದಿಂದ ಮುದುಡಿ ಹೋಯಿತು.



ಈ ದಿನ ದೆಹಲಿ ಅನುಭವದ ಘಟನೆಗಳನ್ನು ಕೇಳುವಾಗ, ಸಧ್ಯಕ್ಕೆ ಭಾರತಕ್ಕೆ ಬೇಕಾಗಿರುವುದು ಸ್ಮಾರ್ಟ್ ಸಿಟಿಗಳಲ್ಲ(ಪರಿಪೂರ್ಣ ನಗರಗಳು) ಬದಲಾಗಿ ಹಳ್ಳಿಗಳಿಂದ ನಗರಕ್ಕೆ ಬಡವರು ವಲಸೆ ಹೋಗುವುದನ್ನು ತಡೆಗಟ್ಟಲು ಹಾಗೂ  ಅವರ ಉದ್ಯೋಗ ಸೃಷ್ಟಿಗೆ ಸ್ಮಾರ್ಟ್ ವಿಲೇಜ್ ಗಳು ( ಪರಿಪೂರ್ಣ ಹಳ್ಳಿಗಳು) ಎಂದು ಯಾರಿಗೆ ಹೇಳೋಣ. ನೆಲದ ಮೇಲಿನ ನರಕದಂತಿರುವ ಕೊಳಗೇರಿಗಳಲ್ಲಿ ನಿರತಂತರ ನಡೆಯುವ ಅತ್ಯಾಚಾರಗಳಿಗೆ ಕೊನೆಯೆಂದು? ಎಂದು ಯಾರಿಗೆ ಕೇಳೋಣ?

ಶನಿವಾರ, ಅಕ್ಟೋಬರ್ 10, 2015

ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜಾಗತಿಕ ಮನ್ನಣೆ ದೊಕಿಸಿಕೊಟ್ಟ ಪತ್ರಕರ್ತ ; ವೆಬ್ ಮಿಲ್ಲರ್



ತಾನು ನೋಡುವ ಜಗತ್ತು ಮತ್ತು ಗ್ರಹಿಸುವ ಒಳನೋಟಗಳ ಮೂಲಕ  ಒಬ್ಬ ಪತ್ರಕರ್ತ ಜಗತ್ತಿನ ಗ್ರಹಿಕೆಗಳನ್ನು  ಹೇಗೆ ಬದಲಿಸಬಲ್ಲ ಎಂಬುದಕ್ಕೆ  ಅಮೇರಿಕಾದ ಪತ್ರಕರ್ತ ವೆಬ್ ಮಿಲ್ಲರ್ ನ ಸಾಹಸದ ಬದುಕು ಇಂದಿಗೂ ನಮಗೆ ಮಾದರಿಯಾಗಿದೆ. 1930 ರಲ್ಲಿ ಭಾರತದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು “The Marchers Simply Walked  Forward Until Struck Down” ಎಂಬ ಒಂದು ವರದಿಯ ಮೂಲಕ ಭಾರತ ಸ್ವಾತಂತ್ರ್ಯ ಚಳುವಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ. ಇದಕ್ಕಿಂತ ಮುಖ್ಯವಾಗಿ ತಾನು ವಶಪಡಿಸಿಕೊಂಡ ವಸಹಾತು ದೇಶಗಳಲ್ಲಿ ಇಂಗ್ಲೇಂಡ್ ದೇಶವು ಅಲ್ಲಿನ ನಾಗರೀಕರ ಮೇಲೆ  ಹೇಗೆ ಕ್ರೌರ್ಯದಿಂದ ಮೆರೆಯುತ್ತಿದೆ ಎಂಬುದನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿ, ಅಪರಾಧ ಪ್ರಜ್ಞೆಯಿಂದ ತಲೆ ತಗ್ಗಿಸುವಂತೆ ಮಾಡಿದ.
ವೆಬ್ ಮಿಲ್ಲರ್ ಅಮೇರಿಕಾದ ಮಿಚಿಗನ್ ನಲ್ಲಿ 1891 ರಲ್ಲಿ ಜನಿಸಿದವನು. ವಿದ್ಯಾಭ್ಯಾಸ ನಂತರ ಬರಹಗಾರನಾಗಬೇಕೆಂಬ ಹಂಬಲದಿಂದ ಚಿಕಾಗೋ ನಗರದಕ್ಕೆ ಬಂದು ಸೌತ್ ಬೆಂಡ್ ಟ್ರಿಬ್ಯೂನ್ ಮತ್ತು ಸೌತ್ ಬೆಂಡ್ ಇಂಡಿಯಾನ ಪತ್ರಿಕೆಗಳಲ್ಲಿ ಕೆಲಸ ಮಾಡಿದವನು. ಆನಂತರ ಮಿಚಿಗನ್ ಡೈಲಿ ಎಂಬ ಪ್ರಸಿದ್ಧ ದಿನಪತ್ರಿಕೆಗೆ ಯುದ್ಧ ಕುರಿತ ವರದಿಗಳಿಗಾಗಿ ವಿಶೇಷ ವರದಿನಾಗನಾಗಿ ನೇಮಕಗೊಂಡ. ಪ್ರಥಮ ವಿಶ್ವ ಮಹಾಯುದ್ಧ. ಸ್ಪೇನ್ ದೇಶದ ಆಂತರೀಕ ಯುದ್ಧ, ರಷ್ಯಾ-ಫಿನ್ಲೆಂಡ್ ಯುದ್ಧ ಮತ್ತು ಇಟಲಿಯು ಪಶ್ಚಿಮ ಆಫ್ರಿಕಾದ ಇಥಿಯೋಫಿಯಾವನ್ನು ವಶಪಡಿಸಿಕೊಂಡ ಯುದ್ಧದ ವರದಿಗಳನ್ನು ರೋಚಕವಾಗಿ ಬರೆದು ಅಮೇರಿಕಾ ಮಾತ್ರವಲ್ಲದೆ, ಜಗತ್ತಿನಾದ್ಯಂತ ಪ್ರಸಿದ್ಧ ಯುದ್ಧ ವರದಿಗಾರನಾಗಿ ಹೆಸರು ಮಾಡಿದವನು. 1922 ರಲ್ಲಿ ಪ್ರಾನ್ಸ್ ದೇಶದ ಪ್ರಸಿದ್ಧ ಸರಣಿ ಹಂತಕ ಹೆನ್ರಿ ಡಿಸೈರ್ ಎಂಬಾತನಿಗೆ ಅಲ್ಲಿನ ಸರ್ಕಾರ ಮರಣ ದಂಡನೆ ವಿಧಿಸಿದಾಗ, ಅಪರಾಧಿಯನ್ನು ಸಂದರ್ಶಿಸಿ, ಆತನ ಕೃತ್ಯಗಳ ಕುರಿತು ಸರಣಿ ಲೇಖನಗಳನ್ನು ಬರೆದ. ಈ ಸರಣಿ ಲೇಖನಗಳ ಮಾಲೆಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ ಸಹ ದೊರೆಯಿತು.

1930 ರಲ್ಲಿ ಭಾರತದ ಗುಜರಾತಿನ ಸೂರತ್ ಬಳಿಯ ದಂಡಿ ಎಂಬ ಕಡಲ ಕಿನಾರೆ ಬಳಿ ಗಾಂಧೀಜಿಯವರು ಹಮ್ಮಿಕೊಂಡಿದ್ದ ಉಪ್ಪಿನ ಸತ್ಯಾಗ್ರಹವನ್ನು ವರದಿ ಮಾಡಲು ವೆಬ್ ಮಿಲ್ಲರ್ ಭಾರತಕ್ಕೆ ಆಗಮಿಸಿದ. ದುರಾದೃಷ್ಟವಶಾತ್ ಅವನು ಭಾರತಕ್ಕೆ ಬರುವ ವೇಳೆಗೆ ಗಾಂಧೀಜಿಯವರು ಅಹಮದಾಬಾದಿನ ಸಬರ ಮತಿ ಆಶ್ರಮದಿಂದ 130 ಮೈಲುಗಳ ದಂಡಿಯಾತ್ರೆಯನ್ನು ಆರಂಭಿಸಿ, ದಂಡಿಯಲ್ಲಿ ಒಂದು ಹಿಡಿ ಉಪ್ಪನ್ನು ಎತ್ತಿ ಹಿಡಿಯುವುದರ ಮೂಲಕ ಬ್ರಿಟೀಷರಿಂದ ಬಂಧನಕ್ಕೆ ಒಳಗಾಗಿದ್ದರು. ಆದರೆ, ಅವರ ಅನುಯಾಯಿಗಳು ಸತ್ಯಾಗ್ರಹವನ್ನು ಮುಂದುವರಿಸಿದ್ದರು.
ಸರೋಜಿನಿ ನಾಯ್ಡು ನೇತೃತ್ವದಲ್ಲಿ ದರುಶನ ಎಂಬ ಪ್ರದೇಶದಲ್ಲಿ  ತಂಡೋಪ ತಂಡವಾಗಿ ಸತ್ಯಾಗ್ರಹಿಗಳು ಚಳುವಳಿಯಲ್ಲಿ ಪಾಲ್ಗೊಂಡು ಯಾವೊಂದು ಪ್ರತಿರೋಧ ಒಡ್ಡದೆ ಪೊಲೀಸರ ಲಾಠಿಯೆಟು ಹಾಗೂ ಬೂಟಿನೇಟು ತಿಂದು, ತಲೆ ಬುರುಡೆ ಒಡೆಸಿಕೊಂಡು ನೆಲಕ್ಕುರುಳವ ದೃಶ್ಯಗಳಿಗೆ ಸಾಕ್ಷಿಯಾದ ವೆಬ್ ಮಿಲ್ಲರ್ ಅಕ್ಷರಶಃ ನಡುಗಿ ಹೋದ. ಆತ ಅಲ್ಲಿಯವರೆಗೆ ಅಹಿಂಸೆ ಕುರಿತು ಮಾತ್ರ ಕೇಳಿ ತಿಳಿದಿದ್ದ ಆದರೆ, ಗಾಂಧೀಜಿಯವರು ಅಹಿಂಸೆಯನ್ನು  ಆಚರಣೆಗೆ ತಂದು, ಈ ರೀತಿಯಲ್ಲಿ ತಮ್ಮ ಅನುಯಾಯಿಯಗಳ ಪಡೆಯನ್ನು ಸಜ್ಜುಗೊಳಿಸಿದ್ದಾರೆ ಎಂದು ಅವನು ಊಹಿಸಿರಲಿಲ್ಲ. ಅಂದಿನ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಚಳುವಳಿ ಕುರಿತ ವರದಿಗಳ ಮೇಲೆ ವಿಶೇಷವಾಗಿ ಭಾರತದ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿತ್ತು. ಆದರೆ, ವಿದೇಶಿ ಮಾಧ್ಯಮಗಳ ಮೇಲೆ ನಿರ್ಬಂಧ ಇರದಿದ್ದರೂ ವರದಿಗಳ ಮೇಲೆ ಕಣ್ಗಾವಲು ಇರಿಸಿತ್ತು. ಆದರೆ, ಇವೆಲ್ಲವನ್ನೂ ಮೀರಿ ವೆಬ್ ಮಿಲ್ಲರ್ ಚಿತ್ರಗಳ ಸಮೇತ ವರದಿಯನ್ನು  ಅಮೇರಿಕಾದ ತನ್ನ ಮಿಚಿಗನ್ ಡೈಲಿ ಪತ್ರಿಕೆಗೆ ಕಳಿಹಿಸುವಲ್ಲಿ ಯಶಸ್ವಿಯಾಗಿದ್ದ. ಈ ವಿಷಯವನ್ನು ತಿಳಿದ ಬ್ರಿಟೀಷ್ ಸರ್ಕಾರ ವರದಿಯನ್ನು ತಡೆಯಲು ಶತ ಪ್ರಯತ್ನ ಮಾಡಿತು. ಆದರೆ, ಪತ್ರಿಕೆಯು ತನಗೆ ಎದುರಾದ ಎಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ಭಾರತದಲ್ಲಿ ನಡೆಯುತ್ತಿರುವ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟವನ್ನು ಪ್ರಕಟಿಸಿತು. ಆ ಕಾಲದಲ್ಲಿ ಈ ವರದಿಯನ್ನು ಜಗತ್ತಿನ 1350 ಪತ್ರಿಕೆಗಳು ಮರು ಮುದ್ರಣ ಮಾಡಿದವು. ಅಮೇರಿಕಾದ ನಾಗರೀಕರು ಈ ವರದಿಯನ್ನು ಎರಡು ಲಕ್ಷದ ಐವತ್ತು ಸಾವಿರ  ಕರಪತ್ರಗಳ ಮೂಲಕ  ಮುದ್ರಿಸಿ ಅಮೇರಿಕಾದ್ಯಂತ ಹಂಚಿದರು. ಪ್ರಪಥಮಬಾರಿಗೆ ಸೂರ್ಯ ಮುಳಗದ ಸಾಮ್ರಾಜ್ಯವೆಂಬ ಇಂಗ್ಲೇಂಡ್ ದೇಶವು ಜಗತ್ತಿನೆದುರು ತಲೆ ತಗ್ಗಿಸಿ ನಿಂತಿತು. ಗಾಂಧೀಜಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಜಗತ್ತಿನಾದ್ಯಂತ ವಿಶೇಷವಾದ ಅನುಕಂಪ ಮತ್ತು ಗೌರವ ಬೆಳೆಯಿತು.

1931 ರಲ್ಲಿ ಗಾಂಧೀಜಿಯವರು ದುಂಡು ಮೇಜಿನ ಸಭೆಗಾಗಿ ಲಂಡನ್ ನಗರಕ್ಕೆ ಹೋದಾಗ, ವೆಬ್ ಮಿಲ್ಲರ್ ನನ್ನು ಬೇಟಿಯಾದ ಸಂದರ್ಭದಲ್ಲಿ ಈ ವರದಿಯಿಂದ ಭಾರತಕ್ಕೆ ಆಗಿರುವ ಅನಕೂಲವನ್ನು ಸ್ವತಃ ಒಪ್ಪಿಕೊಂಡರು. ವೆಬ್ ಮಿಲ್ಲರ್ ಗೆ ಒಂದು ಅಬ್ಯಾಸವಿತ್ತು. ಜಗತ್ತಿನ ಯಾವುದೇ ನಾಯಕರನ್ನು ಬೇಟಿಯಾದಾಗ ತನ್ನ ಸಿಗರೇಟ್ ಪ್ಯಾಕಿನ ಮೇಲೆ ಅವರ ಹಸ್ತಾಕ್ಷರ ಪಡೆಯುತ್ತಿದ್ದ. ಜೊತೆಗೆ ಅವುಗಳನ್ನು ಸಂಗ್ರಹಿಸಿ ಇಡುತ್ತಿದ್ದ, ಇಟಲಿಯ ಮುಸಲೋನಿ, ರಷ್ಯಾದ ಸ್ಟಾಲಿನ್ , ಅಮೇರಿಕಾದ ರೂಸ್ ವೆಲ್ಟ್, ಜರ್ಮನಿಯ ಹಿಟ್ಲರ್ ಹೀಗೆ ಅನೇಕ ನಾಯಕರ ಸಹಿಗಳನ್ನು ಸಂಗ್ರಹಿಸಿದ್ದ. ಗಾಂಧೀಜಿಯವರನ್ನು ಬೇಟಿಯಾದ ಸಂದರ್ಭದಲ್ಲಿ ಸಿಗರೇಟ್ ಪ್ಯಾಕ್ ಮೇಲೆ ಸಹಿ ಮಾಡಲು ಕೋರಿದಾಗ, ಗಾಂಧೀಜಿಯವರು ವೆಬ್ ಮಿಲ್ಲರ್ ಗೆ ಒಂದು ಷರತ್ತನ್ನು ವಿಧಿಸಿದರು. “ ಇನ್ನು ಮುಂದೆ ನೀನು ಸಿಗರೇಟ್ ತ್ಯೆಜಿಸುವುದಾದರೆ ಮಾತ್ರ ನಾನು ಸಹಿ ಮಾಡುತ್ತೇನೆ” ಎನ್ನುತ್ತಾ, ನಗುತ್ತಲೇ ಆತನ ಪ್ರತಿಕ್ರಿಯೆಗೆ ಕಾಯದೆ ಹಸ್ತಾಕ್ಷರ ಹಾಕಿದರು. ಆಶ್ಚರ್ಯವೆಂದರೆ, ಆನಂತರ ವೆಬ್ ಮಿಲ್ಲರ್ ಸಿಗರೇಟ್ ಗೆ ವಿದಾಯ ಹೇಳಿದ್ದ. ಇಂತಹ ಅಪ್ರತಿಮ ಪತ್ರಕರ್ತ ತನ್ನ 49 ನೇ ವಯಸ್ಸಿನಲ್ಲಿ ಅಂದರೆ, 1940 ರಲ್ಲಿ ಲಂಡನ್ ನಗರದ ಸುರಂಗ ಮಾರ್ಗದಲ್ಲಿ ನಡೆದ ಅಪಘಾತದಲ್ಲಿ ನಿಧನ ಹೊಂದಿದ.

ಭಾರತದ ಸ್ವಾತಂತ್ರ್ಯ ಹೊರಾಟವನ್ನು ನಾವು ಕೇವಲ ಘಟನೆಗಳಾಗಿ ಗ್ರಹಿಸಿ, ಇತಿಹಾಸ ರಚಿಸಿರುವುದಕ್ಕೂ, ಪಾಶ್ಚಿಮಾತ್ಯ ವಿದ್ವಾಂಸರು ಅವುಗಳನ್ನು ಚಾರಿತ್ರಿಕ ಘಟನೆಗಳೆಂದು ಭಾವಿಸುವುದರ ಮೂಲಕ ವಿವಿಧ ಆಯಾಮಗಳಿಂದ ಪರಿಶೀಲಿಸಿ ಗ್ರಹಿಸುವುದಕ್ಕೂ ಏನೆಲ್ಲಾ ವೆತ್ಯಾಸಗಳಿವೆ ಎಂಬುದಕ್ಕೆ ವೆಬ್ ಮಿಲ್ಲರ್ ಉಪ್ಪಿನ ಸತ್ಯಾಗ್ರಹ ಕುರಿತ ಒಂದು ವರದಿ ( The Marchers Simply Walked Forward Until Struck Down)   ಹಾಗೂ ಆಸ್ಟ್ರೇಲಿಯಾದ ಸಮಾಜ ವಿಜ್ಞಾನಿ ಪ್ರೊ. ಥಾಮಸ್ ವೆಬರ್ ರವರ     “ On The salt March Historigraphy Of Gandhi March to Dandi” ಕೃತಿಯನ್ನು ನಾವು ಓದಬೇಕು.

ಗುರುವಾರ, ಅಕ್ಟೋಬರ್ 8, 2015

ಅಮಾರ್ತ್ಯ ಸೇನ್ ಬಿಚ್ಚಿಟ್ಟ ಮೋದಿಮಯ ಭಾರತದ ನಗ್ನ ಸತ್ಯಗಳು




ಅಮಾರ್ತ್ಯಸೇನ್ ಜಗತ್ತು ಕಂಡ ಅಪರೂಪದ ಅರ್ಥಶಾಸ್ತ್ರಜ್ಞ ಮಾತ್ರವಲ್ಲ, ಮಾನವೀಯ ಮುಖವಿಲ್ಲದ ಬಂಡವಾಳ ಮತ್ತು ಆರ್ಥಿಕ ಚಟುವಟಿಕೆಯ ಸುತ್ತಾ ಲಾಗ ಹೊಡೆಯುತ್ತಿದ್ದ ಅರ್ಥಿಕ ಚಿಂತನೆಗಳಿಗೆ ಮನುಕುಲದ ಚಿಂತನೆಯ ಲೇಪ ಹಚ್ಚಿದ ಅಪರೂಪದ ಮಹಾನ್ ಮಾನವತಾವಾದಿ. ಕಳೆದ 65 ವರ್ಷಗಳಿಂದ  ಜಗತ್ತಿನಾದ್ಯಂತ ಹಲವಾರು ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿರುವ ಲಿಂಗತಾರತಮ್ಯದ ಬಗ್ಗೆ ಹೋರಾಡುತ್ತಾ, ಮಹಿಳೆಯರು ಮತ್ತು ಮಕ್ಕಳ ಹಕ್ಕು ಮತ್ತು ಘನತೆಯ ಬದುಕಿಗಾಗಿ, ಮಾನವಅಭಿವೃದ್ಧಿಯನ್ನು  ಧ್ಯಾನಿಸುತ್ತಾ ಅರ್ಥಶಾಸ್ತ್ರದ ವ್ಯಾಖ್ಯಾನಕ್ಕೆ ಹೊಸ ಅರ್ಥ ಕೊಟ್ಟ ಅಮಾತ್ರ್ಯ ಸೇನೆ ತಮ್ಮ ಉದಾತ್ತ ಚಿಂತನೆಗಾಗಿ ಪ್ರತಿಷ್ಟಿತ ನೊಬಲ್ ಪ್ರಶಸ್ತಿಗೆ ಭಾಜನರಾದವರು.
ಅಶ್ಚರ್ಯಕರ ಸಂಗತಿಯೆಂದರೆ, ಅಮಾರ್ತ್ಯ ಸೇನ್ ಪ್ರತಿಪಾದಿಸುತ್ತಾ ಬಂದ ಮಹಿಳೆಯರ ಅಭಿವೃದ್ಧಿಪರವಾದ ಚಿಂತನೆಗಳು ಇದೀಗ ಇಪ್ಪತ್ತೊಂದನೆಯ ಶತಮಾನದ ಜಾಗತೀಕರಣದ ಮೊದಲ ಒಂದೂವರೆ ದಶಕದಲ್ಲಿ ಫಲ ನೀಡಿವೆ. ಜಾಗತೀಕರಣ ವ್ಯವಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾಗಿರುವ ಅಂತರಾಷ್ರೀಯ ಹಣ ಕಾಸು ನಿಧಿ(I.M.F) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಕ್ರಿಸ್ಚಿಯನ್ ಲಗಾರ್ಡೆ ಯವರು ಕಳೆದ ಆಗಸ್ಟ್ ಕೊನೆಯವಾರದಲ್ಲಿ ಟರ್ಕಿ ದೇಶದ ಅಂಕಾರದಲ್ಲಿ ನಡೆದ ವಿಶ್ವದ ಇಪ್ಪತ್ತು ರಾಷ್ಟ್ರಗಳ ಮಹಿಳಾ ಸಮಾವೇಶದಲ್ಲಿ ಮಾತನಾಡುತ್ತಾ, ಉದ್ಯೋಗದಲ್ಲಿ ಸಮಾನ ಅವಕಾಶ ನೀಡಿದ ರಾಷ್ಟ್ರಗಳ ಒಟ್ಟು  ಆಂತರೀಕ ಉತ್ಪಾದನೆಯ ಪ್ರಮಾಣದಲ್ಲಿ (G.D.P.) ಮಹಿಳೆಯರ ಪಾತ್ರವಿರುವುದನ್ನು ಸಮೀಕ್ಷೆ ಆಧಾರದ ಸಾಕ್ಷಾಧಾರಗಳ ಮೂಲಕ ಜಗತ್ತಿನ ಮುಂದಿಟ್ಟಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಇವುಗಳಿಗೆ ತೊಡಗಿಸುವ ಹಣವು ಆಯಾ ರಾಷ್ಟ್ರಗಳ ಪಾಲಿಗೆ ಭವಿಷ್ಯದಲ್ಲಿ ಪ್ರತಿಫಲ ನೀಡುವ ಅತ್ಯುತ್ತಮ ಬಂಡವಾಳ ಎಂದು ಲಗಾರ್ಡೆ ಅಭಿಪ್ರಾಯ ಪಟ್ಟಿದ್ದಾರೆ. ಸಂದರ್ಭದಲ್ಲಿ ಅಮಾತ್ರ್ಯಸೇನ್ ಪ್ರತಿಪಾದಿಸುತ್ತಾ ಬಂದಿರುವ ಲಿಂಗತಾರಮ್ಯ ಕುರಿತಾದ ಚಿಂತನೆಗಳು ಜಗತ್ತಿನ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯಲ್ಲಿ ನೆರವಾಗತೊಡಗಿವೆ ಎಂದಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಉದೋಗದಲ್ಲಿ ಮಹಿಳೆಯ ಪ್ರಮಾಣ ಶೇಕಡ 25 ಕ್ಕೆ ಹೆಚ್ಚಿದರೆ, ಆರ್ಥಿಕಾಭಿವೃದ್ಧಿಯಲ್ಲಿ ಭಾರತ ಶೇಕಡ 27ರಷ್ಟು, ಜಪಾನ್ ಶೇಕಡ 9 ರಷ್ಟು ಮತ್ತು ಅಮೇರಿಕಾ ಶೇಕಡ 5 ರಷ್ಟು ಬೆಳವಣಿಗೆ ಕಾಣಲು ಸಾಧ್ಯ ಎಂದು ತಿಳಿಸಿರುವ ಕ್ರಿಶ್ಚಿಯನ್ ಲಗಾರ್ಡೆಯವರು, ದಕ್ಷಿಣ ಆಫಿಕಾ ಮತ್ತು ಏಷ್ಯಾದ ಮುಸ್ಲಿಂ ರಾಷ್ಟ್ರಗಳು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಉದ್ಯೋಗದ ಮೇಲೆ ಹೇರಲಾಗಿರುವ ಕಾನೂನುಗಳನ್ನು ತೆಗೆದು ಹಾಕಿದರೆ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಎಚ್ಚರಿಸಿದ್ದಾರೆ.   ಇದು ಅಮಾತ್ರ್ಯ ಸೇನ್ ರವರಿಗೆ ಮತ್ತು ಅವರ ಚಿಂತನೆಗಳಿಗೆ ಜಾಗತಿಕ ಮಟ್ಟದಲ್ಲಿ ದಕ್ಕಿದ ಮನ್ನಣೆ ಅಥವಾ ಗೌರವ ಎನ್ನಬಹುದು.
ಆದರೆ, ತಾವು ಹುಟ್ಟಿ ಬೆಳೆದ ಭಾರತದಲ್ಲಿ ಪ್ರಧಾನಿಯಾಗಿರುವ  ನರೇಂದ್ರ ಮೋದಿ ಸರ್ಕಾರದ  ಕೆಲವು ಅವಿವೇಕತನದ ನಿರ್ಧಾರಗಳಿಂದ ಅವರು ವಿಚಲಿತರಾಗಿದ್ದಾರೆ. ತಾವು ನಂಬಿಕೊಂಡ ಸಿದ್ಧಾಂತಗಳೊಂದಿಗೆ ಎಂದೂ ರಾಜಿಯಾಗದ ಅವರು, ನಮ್ಮನ್ನಾಳುವ ಸರ್ಕಾರಗಳು ಹಾದಿ ತಪ್ಪಿದಾಗಲೆಲ್ಲಾ ತಮ್ಮ ಹರಿತವಾದ ಮಾತುಗಳು ಮೂಲಕ ಛಾಟಿ ಏಟು ಬೀಸಿದವರು. ಹಿಂದಿನ ಯು.ಪಿ.. ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಜಗತ್ ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿದ್ದರೂ ಸಹ ಅವರ ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸಿದವರುಅಮಾತ್ರ್ಯಸೇನ್ರವರು ಇದೀಗ ಮಾತುಗಳನ್ನು ಮಂತ್ರಗಳಾಗಿಸಿಕೊಂಡು, ಭಾರತವನ್ನು ಆಳಲು ಹೊರಟಿರುವ ನರೇಂದ್ರ ಮೋದಿಯವರ ಹದಿನೇಳು ತಿಂಗಳ ಅವಧಿಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಕಳೆದ ಆಗಸ್ಟ್ 26 ರಂದು ದೆಹಲಿಯ ಆಕ್ಸ್ ಪರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆಯು ಸೇನ್ ರವರ ಪ್ರಬಂಧಗಳು ಕುರಿತಾದ ಕಂಟ್ರಿ  ಆಪ್ ಫಸ್ಟ್ ಬಾಯ್ಸ್ಎಂಬ ಕೃತಿಯ ಬಿಡುಗಡೆಗಾಗೆ ಭಾರತಕ್ಕೆ ಬಂದಿದ್ದ ಸಮಯದಲ್ಲಿ ಅಮಾತ್ಯ ಸೇನ್ ರವರು ಮಾಧ್ಯಮಗಳ ಎದುರು ಮೋದಿಯ ಸರ್ಕಾರದ ಕಾರ್ಯವೈಖರಿಯನ್ನು ಹೀಗೆ ಬಣ್ಣಿಸಿದ್ದಾರೆ

ಮೋದಿಯವರು ಆರಂಭದ ದಿನಗಳಲ್ಲಿ ಮತ್ತು ಅಧಿಕಾರಕ್ಕೇರುವ ಮುನ್ನ ಮಾತನಾಡುತ್ತಿದ್ದ ವೈಖರಿ ಹಾಗೂ ಜನಸಾಮಾನ್ಯರಿಗೆ ಹಂಚುತ್ತಿದ್ದ ಕನಸಿನ ಯೋಜನೆಗಳನ್ನು ಗಮನಿಸಿದಾಗ, ಇವೆಲ್ಲವನ್ನೂ ಸಾಕರಗೊಳಿಸಬಲ್ಲ ಒಬ್ಬ ಜನ ನಾಯಕ ದೇಶಕ್ಕೆ  ದೊರಕಿದ ಎಂದು ನಾನು  ಸಹ ನಂಬಿದ್ದ. ನನಗೆ ಈಗ ಮನದಟ್ಟಾಗಿದೆ ಮೋದಿ ಕನಸಿದ್ದ ಭಾರತ ಸಾಧ್ಯವಿಲ್ಲವೆಂದು. ಏಕೆಂದರೆ, ಮೋದಿಯವರು ಭಾರತದ ಸಮಸ್ಯೆಗಳನ್ನು ಗ್ರಹಿಸಿರುವ ಪರಿಯಲ್ಲಿ ಸಂಪೂರ್ಣ ದೋಷವಿದೆ. ನರೇಂದ್ರಮೋದಿಯವರಲ್ಲಿ ಇರುವ ಕನಸುಗಳೆಲ್ಲವೂ ಜಾಗತೀಕರಣದಿಂದ ಪ್ರೇರಿತರಾದ ಕನಸುಗಳು. ಒಂದು ರಾಷ್ಟ್ರದ ಅಭಿವೃದ್ಧಿಗೆ ಅರ್ಥಿಕ ಅಥವಾ ಕೈಗಾರಿಕೆಗಳ ಬೆಳವಣಿಗೆ ಯಾವತ್ತೂ ಮಾನದಂಡವಲ್ಲ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಅವುಗಳು ಪೂರಕ ಅಂಶಗಳು ಮಾತ್ರ. ಹೌದು ಒಬ್ಬ ಪ್ರಧಾನಿಗೆ ಕೈಗಾರಿಕೋದ್ಯಮಿಗಳ ಸಹಕಾರ ಬೇಕು. ಆದರೆ, ಸಿರಿವಂತರು ಮತ್ತು ಉದ್ಯಮಿಗಳು ಇದೀಗ ಮೋದಿಯವರನ್ನು ಸುತ್ತುವರಿದಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಮೋದಿಯವರ ನಿರ್ಧಾರಗಳು ಬದಲಾಗುತ್ತಿವೆ. ಕಾರಣಕ್ಕಾಗಿ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿಯ ತಳಪಾಯ ಎನ್ನ ಬಹುದಾದ ಸರ್ವ ಶಿಕ್ಷಣ ಅಭಿಯಾನಕ್ಕೆ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿಯುಟದ ಯೋಜನೆಗಳಿಗೆ ಸಹಾಯಧನದ ಹಣವನ್ನು ಕಡಿತಗೊಳಿಸಲಾಗುತ್ತಿದೆ.
ಒಂದು ದೇಶದ ಅಭಿವೃಧ್ಧಿಯಲ್ಲಿ ಅರ್ಥಿಕ ಚಟುವಟಿಕೆಗಳು, ಕೈಗಾರಿಕೆಗಳ ಬೆಳವಣಿಗೆಗಳು ಎಷ್ಟು ಮುಖ್ಯವೂ, ಬಡವರ ಕುರಿತಾದ ಕಾಳಜಿ ಕೂಡ ಅಷ್ಟೇ ಮುಖ್ಯ. ಕಾರಣಕ್ಕಾಗಿ ಏಷ್ಯಾ ರಾಷ್ಟ್ರಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಚಿಂತನೆಗಳಿಗೆ ಭಿನ್ನವಾಗಿ ಮಾನವೀಯ ಮುಖವುಳ್ಳ ಅಭಿವೃದ್ಧಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಪಶ್ಚಿಮ ರಾಷ್ಟ್ರಗಳಿಗೆ ಎಂದಿಗೂ ಬಡತನವಾಗಲಿ, ನಿರುದ್ಯೋಗ ಸಮಸ್ಯೆಗಳಾಗಲಿ ಅಷ್ಟಾಗಿ ಬಾಧಿಸಿಲ್ಲ ಹಾಗಾಗಿ ಅವರ ಯೋಜನೆಗಳು ಯಾವಾಗಲೂ ಬಡವರನ್ನು ಹೊರಗಿಟ್ಟು ರೂಪಿಸಿದ ಯೋಜನೆಗಳು ಅಥವಾ ಚಿಂತನೆಗಳಾಗಿರುತ್ತವೆ. ಆದರೆ, ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಬಡತನದ ರೇಖೆಯ ಕೆಳಗೆ ಬದುಕುತ್ತಿರುವ ಅಸಂಖ್ಯಾತ ಬಡಜೀವಗಳನ್ನು ಮೇಲೆತ್ತಲು ಅವರಿಗೆ ಸಹಾಯಧನದ ರೂಪದಲ್ಲಿ ಆಹಾರ, ವಸತಿ, ಆರೋಗ್ಯ, ಶಿಕ್ಷಣ ನೀಡುವುದು ಬಹಳ ಮುಖ್ಯ. ಕಾರಣಕ್ಕಾಗಿ ನಾನು ಯಾವಾಗಲೂಒಂದು ದೇಶದ ಅಭಿವೃದ್ಧಿಯನ್ನು ಅಲ್ಲಿನ ಅರ್ಥಿಕ ಸ್ಥಿತಿ ಗತಿಗಳ ಮಾನದಂಡದಿಂದ ಅಳೆಯುವ ಬದಲಾಗಿ ಅಲ್ಲಿನ ಜನರ ಧಾರಣಾ ಸಾಮರ್ಥ್ಯ ಅಂದರೆ ಅವರಿಗೆ ಸಿಗುತ್ತಿರುವ ಸವಲತ್ತುಗಳಿಂದ ಅಳೆಯಬೇಕುಎಂದು ಪ್ರತಿಪಾದಿಸುತ್ತಾ ಬಂದಿದ್ದೀನಿ.
ನರೇಂದ್ರಮೋದಿಯವರು ಸ್ವತಃ ಮೂರು ಬಾರಿ ಮುಖ್ಯ ಮಂತ್ರಿಯಾಗಿದ್ದ ಗುಜರಾತಿನ ಬೆಳವಣಿಗೆಯನ್ನು ಗಮನಿಸಿ. ಅರ್ಥಿಕ ಮತ್ತು ಕೈಗಾರಿಕಾ ಬೆಳೆವಣಿಗೆಯ ದರದಲ್ಲಿ ರಾಜ್ಯ ಇಡೀ ಭಾರತದಲ್ಲಿ ಮುಂಚೂಣಿಯಲ್ಲಿದೆ. ಆದರೆ, ಮಾನವ ಅಭಿವೃದ್ಧಿಯ ದರದಲ್ಲಿ ರಾಜ್ಯವು ದೇಶದಲ್ಲಿ ಅತ್ಯಂತ ಹಿಂದುಳಿದ ಬಿಹಾರ ರಾಜ್ಯಕ್ಕಿಂತ ಹಿಂದಿದೆ. ಇಂದು ಭಾರತದ ಪ್ರತಿಭೆಗಳು ಜಗತ್ತಿನ ಮಾಹಿತಿ ತಂತ್ರಜ್ಞಾನದ ದಿಗ್ಗಜ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ. ಇದು ನಿಜಕ್ಕೂ ದೇಶಕ್ಕೆ ಹೆಮ್ಮೆಯ ವಿಷಯ. ಇಂತಹ ಪ್ರತಿಭೆಗಳನ್ನು ಸೃಷ್ಟಿಸಲು ಉದಾರವಾದ ಮನೋಭಾವ ಇರುವ ನಾಯಕ ಬೇಕು. ಇಂದು ನಮ್ಮ ಕಣ್ಣೆದುರು ದೈತ್ಯ ಶಕ್ತಿ ರಾಷ್ಟ್ರಗಳಾಗಿ ಬೆಳೆಯುತ್ತಿರುವ ಜಪಾನ್, ದಕ್ಷಿಣ ಕೋರಿಯಾ, ತೈವಾನ್, ಸಿಂಗಾಪುರ್, ಥಾಯ್ಲೆಂಡ್, ಹಾಂಕಾಂಗ್, ಚೀನಾ ರಾಷ್ಟ್ರಗಳ ಅಭಿವೃದ್ಧಿಯ ಮಾದರಿಗಳು ನಮ್ಮ ಮುಂದಿವೆ. ರಾಷ್ಟ್ರಗಳು ಮೂಲಭೂತ ಸೌಕರ್ಯಗಳಾದ ರಸ್ತೆ, ವಿಮಾನ ನಿಲ್ದಾಣ, ಬಂದರುಗಳು, ಕೈಗಾರಿಕಾ ವಲಯಗಳು ಮತ್ತು ನಗರಾಬಿವೃದ್ಧಿಗೆ ಕೊಟ್ಟಷ್ಟೇ ಆದ್ಯತೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಆ ರಾಷ್ಟ್ರಗಳು ನೀಡಿವೆ.
ಭಾರತದ ಜನತೆ  ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಮೋದಿ ನೇತೃತ್ವದ ಎನ್.ಡಿ.. ಸರ್ಕಾರದ ಒಂದೊಂದೇ ಮುಖವಾಡಗಳು ಕಳಚಿ ಬೀಳುತ್ತಿದ್ದು ಈಗ ನಿಜ ಬಣ್ಣ ಬಯಲಾಗುತ್ತಿದೆ. ಹಿಂಬಾಗಿಲಿನ ಮೂಲಕ ಎಲ್ಲಾ ಸಾಂಸ್ಕತಿಕ ವಲಯಗಳಲ್ಲಿ ಹಿಂದುತ್ವವನ್ನು ವ್ಯವಸ್ಥಿತವಾಗಿ ಜಾರಿಗೆ ತರಲಾಗುತ್ತಿದೆ. ನೆಲದ ಎಲ್ಲಾ ಭಾಷೆಗಳ, ಎಲ್ಲಾ ಸಂಸ್ಕತಿಗಳ ವಿದ್ವಾಂಸರನ್ನು ಮೂಲೆ ಗುಂಪು ಮಾಡಲಾಗಿದೆ. ಬಹುಮುಖಿ ಸಂಸ್ಕತಿಯ ಭಾರತದಲ್ಲಿ ಧರ್ಮ, ಜಾತಿ, ಭಾಷೆ ಮತ್ತು ಪ್ರಾದೇಶಿಕ ಗಡಿಗಳ ಮೀರಿ ಮನುಕುಲದ ಒಳಿತಿಗಾಗಿ ತುಡಿಯುತ್ತಿದ್ದ ಚಿಂತಕರು, ಸಾಹಿತಿಗಳು, ಕಲಾವಿದರು ಇದೀಗ ಮೌನಕ್ಕೆ ಶರಣಾಗಿದ್ದಾರೆ. ಈವರೆಗೆ ಅಂದರೆ, ತಮ್ಮ ಅಧಿಕಾರದ ಮೊದಲ ವರ್ಷ ಬಚ್ಚಿಟ್ಟುಕೊಂಡಿದ್ದ ಗೊತ್ತು, ಗುರಿಗಳನ್ನು ಮೋದಿ ಒಂದೊಂದಾಗಿ ಆಚರಣೆಗೆ ತರುತ್ತಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಸೇತುಮಾಧವನ್ ರವರನ್ನು ಬದಿಗೆ ಸರಿಸಿ, ಆರ್. ಎಸ್. ಎಸ್. ಚಿಂತನೆಗಳನ್ನು ಪ್ರತಿಪಾದಿಸುವ ವ್ಯಕ್ತಿಯೊಬ್ಬರನ್ನು ತಂದು ಕೂರಿಸಲಾಯಿತು. ಭಾರತೀಯ ಚಿತ್ರರಂಗಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ ಪುಣೆಯ ಫಿಲಂ ಇನ್ಸ್ಟ್ಯೂಟ್ ಸಂಸ್ಥೆಗೆ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಒಬ್ಬ ನಟನನ್ನು ಹೇರಲಾಗಿದೆ. ಇವಿಷ್ಟೇ ಅಲ್ಲದೆ, ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಷನ್ಸ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರೀಸರ್ಚ್ ಸಂಸ್ಥೆಗಳಿಗೂ ಸಹ ಆರ್. ಎಸ್.ಎಸ್.ಬೈಠಕ್ ನಿಂದ ನೇರವಾಗಿ ಆಮದು ಮಾಡಿಕೊಳ್ಳಲಾಗಿದೆ.
ಮೋದಿ ಮತ್ತು ಸಂಘಪರಿವಾರದ ಮಾತು ಮತ್ತು ಕೃತಿಗಳಿಗೆ ಯಾವುದೇ ಸಂಬಂಧಗಳಿರುವುದಿಲ್ಲ. ದೇಶದಲ್ಲಿ ಅಸಂಖ್ಯಾತ ಕ್ರೈಸ್ತ ಧರ್ಮದ ಚರ್ಚುಗಳು ಹತ್ತಿ ಉರಿಯುತ್ತಿವೆ.  ಆದರೆ,ಇವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ವಾಪಸ್ ಕರೆತರಲುಘರ್ ವಾಪಸಿಕಾರ್ಯಕ್ರಮವನ್ನು ಯಾವುದೇ ರೀತಿಯ ಆತ್ಮ ಸಾಕ್ಷಿಯ ಪ್ರಜ್ಞೆಯಿಲ್ಲದೆ ಹಮ್ಮಿಕೊಳ್ಳುತ್ತಾರೆ. ಇವರನ್ನು ಟೀಕಿಸುವ ವ್ಯಕ್ತಿಗಳ ಮೇಲೆ ವ್ಯವಸ್ಥಿತ ರೂಪದಲ್ಲಿ ಸೇಡು ತೀರಿಸಿಕೊಳ್ಳುವುದರಲ್ಲಿ ಮಾತ್ರ ಸಂಘ ಪರಿವಾರದವರು ಸಿದ್ಧ ಹಸ್ತರು.

ಹಿಂದಿನ ಕಾಂಗ್ರೇಸ್ ನೇತೃತ್ವದ ಯು.ಪಿ. ಸರ್ಕಾರ ಪ್ರಾಚೀನ ಭಾರತದ ನಳಂದ ವಿಶ್ವ ವಿದ್ಯಾಲಯವನ್ನು ಅದೇ ಮಾದರಿಯಲ್ಲಿ ಪುನರ್ ಪ್ರತಿಷ್ಠಾಪಿಸಬೇಕೆಂಬ ಉದ್ದೇಶದಿಂದ ಬೌದ್ಧ ಧರ್ಮಗಳು ಆಚರಣೆಯಲ್ಲಿರುವ ಏಷ್ಯಾದ ಹಲವು ರಾಷ್ಟ್ರಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿತು. ನಳಂದ ವಿಶ್ವ ವಿದ್ಯಾಲಯಕ್ಕೆ ಕೇಂದ್ರ ಸರ್ಕಾರದ ಮನವಿಯ ಮೇರೆಗೆ ನಾನು ಉಪಕುಲಪತಿಯಾಗಿ ಕಳೆದ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ. ಆದರೆ. ನಾನು ಮೋದಿ ನೇತೃತ್ವದ ಆಡಳಿತ ವೈಖರಿಯನ್ನು ಟೀಕಿಸಿದೆ ಎಂಬ ಏಕೈಕ ಕಾರಣಕ್ಕಾಗಿ ಸಂಘ ಪರಿವಾರದ ಕೆಲವು ವ್ಯಕ್ತಿಗಳ ಮೂಲಕ ನನ್ನ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡಲಾಯಿತು. ಅದರ ಪ್ರಯತ್ನವಾಗಿಅಮಾತ್ರ್ಯ ಸೇನರು ನಳಂದ ವಿ.ವಿ. ಆಡಳಿತ ಮಂಡಳಿಯ ಸಭೆ ಮತ್ತು ಇತರೆ ಕಾರ್ಯಕ್ರಮಗಳಿಗೆ ಭಾಗಿಯಾಗಲು, ದೂರದ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶಗಳಿಂದ ವಿಮಾನದಲ್ಲಿ ಬರುತ್ತಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಳಂದ ವಿ.ವಿ. ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂಬ ಆರೋಪವನ್ನು ಹೊರಿಸಲಾಯಿತು. ಇಂತಹ ಕ್ಷುಲ್ಲಕ ಆರೋಪ ಹೊರಿಸುವ ಮುನ್ನನನಗೆ ನೋಬಲ್ ಪ್ರಶಸ್ತಿ ಮತ್ತು ಭಾರತ ರತ್ನ ಪ್ರಶಸ್ತಿ ದೊರಕಿದ ಕಾರಣಕ್ಕಾಗಿ ಹಿಂದಿನ  ಯು.ಪಿ.ಎ. ಸರ್ಕಾರ ಏರ್ ಇಂಡಿಯಾ ವಿಮಾನ ಸಂಸ್ಥೆಯ ವಿಮಾನಗಳಲ್ಲಿ ಪ್ರಥಮ ದರ್ಜೆಯ ಪ್ರಯಣ ಮಾಡಲು ಉಚಿತ ಪಾಸ್ ನೀಡಲಾಗಿದೆಎಂಬ ವಿಷಯವನ್ನು ತಿಳಿದುಕೊಳ್ಳಲಾರದಷ್ಟು ಅವಿವೇಕತನವನ್ನು ಮೋದಿ ಸರ್ಕಾರ ಪ್ರದರ್ಶನ ಮಾಡಿತು. ನಂತರ ನಾನು ಆಡಳಿತ ಮಂಡಳಿಯ ಮನವಿಯನ್ನು ನಿರಾಕರಿಸಿ, ಎರಡನೆಯ ಅವಧಿಯ ಉಪಕುಲಪತಿ ಹುದ್ದೆಯನ್ನು ನಿರಾಕರಿಸಿದೆ. ನನಗೆ ವ್ಯಕ್ತಿಗಿಂತ ಸಂಸ್ಥೆ ದೊಡ್ಡದು. ಸಧ್ಯಕ್ಕೆ ಸಿಂಗಾಪುರದ ಮಾಜಿ ವಿದೇಶಾಂಗ ಸಚಿವ ಜಾರ್ಜ್ ಯೋ ಎಂಬುವರು ಉಪಕುಲಪತಿಗಳಾಗಿ ಮುಂದುವರಿದಿದ್ದಾರೆ. ನಾನು ಸಹ ಸಂದರ್ಶಕ ಪ್ರಾಧ್ಯಾಪಕನಾಗಿ ಮುಂದುವರಿದಿದ್ದೀನಿ. ಸಂಸ್ಕತ ಪಠ್ಯಗಳ ಮೇಲೆ ಅಪಾರ ಒಲವು ಮತ್ತು ಗೌರವಗಳನ್ನು ಇರಿಸಿಕೊಂಡಿರುವ ನಾನುಗಣಿತ ಶಾಸ್ತ್ರ ಕುರಿತು ಆರ್ಯಭಟ ಬರೆದಿರುವ ಕೃತಿಯನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡುತ್ತಿದ್ದೇನೆ


ನನ್ನ ಅಧ್ಯಾಪಕ ವೃತ್ತಿಯೆಲ್ಲಾ ವಿ.ವಿ.ಗಳಲ್ಲಿ ಕಳೆದು ಹೋಯಿತು ನಿಜ. ಆದರೆ, ಭಾರತದ ಶಿಕ್ಷಣ, ಆರೋಗ್ಯ, ಇಲ್ಲಿನ ಮಹಿಳೆಯರು ಮತ್ತು ಮಕ್ಕಳು ನನ್ನ ಮುಖ್ಯ ಕಾಳಜಿಯ ವಿಷಯಗಳಾಗಿದ್ದರು


ನನಗೆ ಬಂದ ನೊಬಲ್ ಪ್ರಶಸ್ತಿಯ ಹಣದಿಂದ ಶಾಂತಿನಿಕೇತನದಲ್ಲಿನ ನಮ್ಮ ನಿವಾಸದಲ್ಲಿ ಅರಂಭಿಸಿದ ಪ್ರಾಚಿ ಟ್ರಸ್ಟ್ ಅಭಿವೃದ್ಧಿಯ ಕಾರ್ಯಚಟುಕೆಗಳಿಂದ ಅಲ್ಲಿನ ಸುತ್ತಮುತ್ತಲಿನ ಸಂತಾಲ್ ಬುಡಕಟ್ಟು ಜನಾಂಗ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಇರಿಸಲು ಸಾಧ್ಯವಾಯಿತು. ಸಂತಾಲ್ ಬುಡಕಟ್ಟಿನ ಒಬ್ಬ ಹೆಣ್ಣು ಮಗಳೋಬ್ಬಳು ಪದವೀಧರೆಯಾಗಿರುವುದು  ನನ್ನ ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ ಎಂಬತ್ಮೂರರ ವಯಸ್ಸಿನಲ್ಲಿ ನನಗೆ ಯಾರ ಬಗ್ಗೆಯೂ ದ್ವೇಷ ಅಥವಾ ಅಸೂಯೆ ಇಟ್ಟುಕೊಳ್ಳಲಾರೆ.. ನನಗಿಷ್ಟವಾದ ಕಾಳಿದಾಸನಮೇಘದೂತಮತ್ತು ಶೂದ್ರಕನಮೃಚ್ಛಕಟಿಕಕೃತಿಗಳನ್ನು ಪದೇ ಪದೇ ಓದುವುದರ ಮೂಲಕ ಕಾಲ ಕಳೆಯುತ್ತಿದ್ದೇನೆ.
ಮಾಹಿತಿ ಸೌಜನ್ಯ- ಇಂಡಿಯನ್ ಎಕ್ಸ್ ಪ್ರಸ್ ದಿನಪತ್ರಿಕೆ ಮತ್ತು ಎನ್.ಡಿ.ಟಿ.ವಿ.ಛಾನಲ್
( ಅಕ್ಟೋಬರ್ ತಿಂಗಳ ಸಂವಾದ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

* - *