ಶನಿವಾರ, ಅಕ್ಟೋಬರ್ 17, 2015

ಕೊಳಗೇರಿಗಳೆಂಬ ಬಡವರ ಕಗ್ಗತ್ತಲ ಕೂಪಗಳು



 ಈ ದಿನ ದೆಹಲಿ ನಗರದಲ್ಲಿ  ನಡೆದಿರುವ ಎರಡು ವರ್ಷ ಮತ್ತು ಐದು ವರ್ಷದ ಕಂದಮ್ಮಗಳ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆಯು  ( ಎರಡು ಪ್ರತ್ಯೇಖ ಘಟನೆಗಳಲ್ಲಿ) ಬೆಳಿಗ್ಗೆಯಿಂದ ಮನಸ್ಸನ್ನು ಆವರಿಸಿಕೊಂಡಿದೆ. ನಗರಗಳ ಕೊಳಚೆಗೇರಿಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ. ಆದರೆ, ಇಂತಹುಗಳು ಸಮಾಜದ ಮುಖ್ಯವಾಹಿನಿಯ ಗಮನ ಸೆಳೆಯುವುದು ತುಂಬಾ ಅಪರೂಪ.
 1981 ರಿಂದ 1984 ರವರೆಗೆ ಮದ್ರಾಸ್ ನಗರದಲ್ಲಿದ್ದ ನನಗೆ ಜೀವನದಲ್ಲಿ ಪ್ರಥಮ ಬಾರಿಗೆ ಕೊಳಚೇಗೇರಿಗಳು, ಅಲ್ಲಿನ ಜನರ ಬಡತನ ಮತ್ತು ಬವಣೆಗಳು ಪರಿಚಯವಾದವು. ನಂತರದ ದಿನಗಳಲ್ಲಿ ಕೊಳಚೇಗೇರಿಗಳು ನನ್ನ ಕುತೂಹಲದ ಪ್ರಪಂಚವಾಗಿ ಮದ್ರಾಸ್, ಬೆಂಗಳೂರು, ಮುಂಬೈ ಹಾಗೂ ದೆಹಲಿಯ ಕೊಳಗೇರಿಗಳಿಗೆ ಅದೆಷ್ಟು ಬಾರಿ ಬೇಟಿ ನೀಡಿದ್ದೀನಿ. ಇದರ ಪರಿಣಾಮ ಮತ್ತು ಪ್ರಭಾವದಿಂದಾಗಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಮಾಡಬೇಕೆಂದು ಕನಸು ಕಂಡಿದ್ದ ನಾನು, ನಂತರ ದಿನಗಳಲ್ಲಿ ಮನಸ್ಸು ಬದಲಾಯಿಸಿ, ಅರ್ಥಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು, ಜಾಗತಿಕ ಬಡತನ ಮತ್ತು ಹಸಿವು ಇವುಗಳನ್ನು ನನ್ನ ಆಸಕ್ತಿಯ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡೆ.



ಇವೊತ್ತಿಗೂ ಧರ್ಮ, ಜಾತಿಗಳನ್ನು ಹಾಗೂ ಪ್ರಾದೇಶಿಕತೆ ಮತ್ತು ಭಾಷೆಗಳನ್ನು ಬದಿಗೊತ್ತಿ ಬದುಕುತ್ತಿರುವ ಜನರನ್ನು ಕಾಣಬೇಕಾದರೆ, ನಾವು ಕೊಳಗೇರಿಗಳಿಗೆ ಮಾತ್ರ ಹೋಗಬೇಕು. ಆವೊತ್ತಿನ ಹಸಿವು ನೀಗಿಸುವುದಕ್ಕೆ ಒಂದು ಹಿಡಿ ಅನ್ನ ಮತ್ತು ದಿನವಿಡಿ ದುಡಿದ ದೇಹಕ್ಕೆ ವಿಶ್ರಾಂತಿಗಾಗಿ ಒಂದು ಸೂರು ಇವಿಷ್ಟಿದ್ದರೆ ಸಾಕು ಜಗತ್ತಿನ ಯಾವ ಗೊಡವೆಯೂ ಬೇಡ ಎಂದು ಬದುಕವ ನತದೃಷ್ಟ ಜನರಿವರು. ಆದರೇ, ಇವರು ಬದುಕುತ್ತಿರುವ ಕೇವಲ ಎಂಟು ಅಡಿ ಅಗಲ, ಹತ್ತು ಅಡಿ ಉದ್ದದ ತಗಡು ಅಥವಾ ಪ್ಲಾಸ್ಟಿಕ್ ಹಾಳೆಯ ಗೂಡುಗಳಲ್ಲಿ  ಈ ಜನರಿಗೆ ಜನಿಸಿರುವ ಹೆಣ್ಣು ಮಕ್ಕಳ ಪಾಡು ನಿಜಕ್ಕೂ ನರಕವೇ ಸರಿ. ಸ್ನಾನಕ್ಕೆ, ಬಹಿರ್ದಸೆಗೆ ಹೀಗೆ ಯಾವ ವಿಷಯದಲ್ಲೂ  ಖಾಸಾಗಿತನವೆಂಬುದು ಹೆಣ್ಣುಮಕ್ಕಳಿಗೆ ಇಲ್ಲವಾಗಿದೆ.
ತಂದೆ ತಾಯಿಗಳು ದುಡಿಮೆಗೆ ಹೋದಾಗ, ಅಪ್ರಾಪ್ತ ಹೆಣ್ಣುಮಕ್ಕಳು ಕಾಮುಕರ ಕ್ರೌರ್ಯಕ್ಕೆ  ದಿನ ನಿತ್ಯ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಅತ್ಯಧಿಕ ಹೆಣ್ಣು ಮಕ್ಕಳು ಕಾಣೆಯಾಗುತ್ತಿರುವುದು ಹಾಗೂ ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದು ನಗರದ ಕೊಳಗೇರಿಗಳಲ್ಲಿ ಮಾತ್ರ. ಇಂತಹ ನತದೃಷ್ಟ ಹೆಣ್ಣು ಮಕ್ಕಳ ತಂದೆ ತಾಯಿಗಳು ಪೊಲೀಸ್ ಠಾಣೆಯ ಮೆಟ್ಟಿಲು ಏರಲು ಸಹ ಭಯಪಡುತ್ತಾರೆ. ಏಕೆಂದರೆ, ಅವರ ಬಳಿ ಯಾವುದೇ ರೀತಿಯ ಗುರುತಿನ ಚೀಟಿಗಳಾಗಲಿ ಅಥವಾ ಸಾಕ್ಷಾಧಾರಗಳು ಇರುವುದಿಲ್ಲ.
2012 ರ ಪೆಬ್ರವರಿ ತಿಂಗಳಿನ ಎರಡನೆಯ ವಾರದಲ್ಲಿ ದೆಹಲಿಯಲ್ಲಿದ್ದೆ. ಅಲ್ಲಿನ  ಕನಾಟ್ ಪ್ಲೇಸ್ ಮತ್ತು ಕರೋಲ್ ಬಾಗ್ ನಡುವಿನ ರಸ್ತೆಯಲ್ಲಿ ಇರುವ ಪಹಾರ್ ಗಂಜ್ ಪ್ರದೇಶದ ಬಳಿಯ ಕೊಳಚೆ ಪ್ರದೇಶಕ್ಕೆ ಬೇಟಿ ನೀಡಿ, ಒಬ್ಬ ವೃದ್ಧನ ಜೊತೆ ಮಾತನಾಡುತ್ತಿದ್ದೆ. ನಲವತ್ತು ವರ್ಷದ ಹಿಂದೆ ದೂರದ ಬಿಹಾರದಿಂದ ಬಂದು ಸೈಕಲ್ ರಿಕ್ಷಾ ತುಳಿದು  ಈಗ ದಣಿದು ಹೋಗಿರುವ ಆ ಜೀವ ತನ್ನ ಹೆಣ್ಣು ಮಗಳ ಆಶ್ರಯದಲ್ಲಿ ಬದುಕು ದೂಡುತ್ತಿತ್ತು. ಆ ವೃದ್ದ ತನ್ನ ಬದುಕಿನ ಬಹು ಭಾಗವನ್ನು ಕೊಳಗೇರಿಯಲ್ಲಿ ಸೆವೆಸಿದ ಕಾರಣ. ಆತನ ಬಾಯಿಂದ ಬರುತ್ತಿದ್ದ ಕಹಿ ಅನುಭವದ ಮಾತುಗಳನ್ನು ಕೇಳಿ ಮನಸ್ಸು ಮೌನದಿಂದ ಮುದುಡಿ ಹೋಯಿತು.



ಈ ದಿನ ದೆಹಲಿ ಅನುಭವದ ಘಟನೆಗಳನ್ನು ಕೇಳುವಾಗ, ಸಧ್ಯಕ್ಕೆ ಭಾರತಕ್ಕೆ ಬೇಕಾಗಿರುವುದು ಸ್ಮಾರ್ಟ್ ಸಿಟಿಗಳಲ್ಲ(ಪರಿಪೂರ್ಣ ನಗರಗಳು) ಬದಲಾಗಿ ಹಳ್ಳಿಗಳಿಂದ ನಗರಕ್ಕೆ ಬಡವರು ವಲಸೆ ಹೋಗುವುದನ್ನು ತಡೆಗಟ್ಟಲು ಹಾಗೂ  ಅವರ ಉದ್ಯೋಗ ಸೃಷ್ಟಿಗೆ ಸ್ಮಾರ್ಟ್ ವಿಲೇಜ್ ಗಳು ( ಪರಿಪೂರ್ಣ ಹಳ್ಳಿಗಳು) ಎಂದು ಯಾರಿಗೆ ಹೇಳೋಣ. ನೆಲದ ಮೇಲಿನ ನರಕದಂತಿರುವ ಕೊಳಗೇರಿಗಳಲ್ಲಿ ನಿರತಂತರ ನಡೆಯುವ ಅತ್ಯಾಚಾರಗಳಿಗೆ ಕೊನೆಯೆಂದು? ಎಂದು ಯಾರಿಗೆ ಕೇಳೋಣ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ