ಬುಧವಾರ, ಡಿಸೆಂಬರ್ 2, 2015

ಮೂಕ ಹಕ್ಕಿಯ ಹಾಡು




ಮುಖ್ತರ್ ಮಾಯಿ ಸಿದ್ಧವಾಗು ಹೊರಡೋಣಎನ್ನುವ  ಅಪ್ಪನ ಮಾತು ಕಿವಿಗೆ ಬೀಳುತ್ತಿದ್ದಂತೆ ಹೊರಡಲು ಸಿದ್ಧವಾದೆ. ರಾತ್ರಿ ಮನೆಯಿಂದ  ನಾನಿಡುವ ಹೆಜ್ಜೆಗಳ ಪಯಣ ನನ್ನನ್ನು ಎಲ್ಲಿಗೆ ಕೊಂಡೊಯ್ಯಬಹುದು ಎಂಬ ಕಲ್ಪನೆ ನನಗಿರಲಿಲ್ಲ. ನನ್ನ ಪುಟ್ಟ ಗುಡಿಸಲಿನಂತಹ ಮನೆಯಿಂದ ಶ್ರೀಮಂತ ಜಮೀನ್ದಾರನ ವಾಡೆ ಯಂತಹ ಬಂಗಲೆಯಲ್ಲಿರುವ  ಜನ ಅಥವಾ ಅವನ ಸೇವಕರಿಂದ ನನ್ನ ಮೇಲೆ ಏನಾದರೂ ನಡೆಯುತ್ತದೆ ಎಂಬ ಭಯವೂ ಇರಲಿಲ್ಲ. ನನ್ನ ಕಿರಿಯ ಸಹೋದರ ಶಕೂರ್ ಪರವಾಗಿ ನಾನು ಯಾಚಿಸುವ ಕ್ಷಮೆಯನ್ನು ಅವರು ಮನ್ನಿಸಿದರೆ, ಪಯಣ ಅಲ್ಲಿಗೆ ಕೊನೆಯಾಗುತ್ತದೆ. ಇಲ್ಲದಿದ್ದರೆ, ಮುಂದಿನ ದಾರಿ? ಕುರಿತು ಯಾವುದೇ ಕಲ್ಪನೆಯಿರಲಿಲ್ಲಆದರೆ, ಕುರಾನ್ ಧರ್ಮ ಗ್ರಂಥವು ನನ್ನನ್ನು ರಕ್ಷಿಸುತ್ತದೆ ಎಂದು ಆತ್ಮವಿಶ್ವಾಸವಿತ್ತು. ಕಾರಣಕ್ಕಾಗಿ ಕುರಾನ್ ಧರ್ಮ ಗ್ರಂಥವನ್ನು ಕೈಯಲ್ಲಿಡಿದು, ಬಿಗಿಯಾಗಿ ಎದೆಗೆ ಅಪ್ಪಿಕೊಂಡು ಮನೆಯಿಂದ ಹೊರಕ್ಕೆ ಹೆಜ್ಜೆ ಇಟ್ಟೆ.
ನಾನು ಕುರಾನ್ ಶ್ಲೋಕಗಳನ್ನು ಕಂಠಪಾಠ ಮಾಡಿ ಅವುಗಳನ್ನು ಹಳ್ಳಿಯ ಮಕ್ಕಳಿಗೆ ಬೋಧಿಸುತ್ತಿದ್ದೆ ಕಾರಣಕ್ಕಾಗಿ ಅಪ್ಪ  ನನ್ನನ್ನು ಜಮೀನ್ದಾರನ ಮನೆಗೆ ಕರೆದೊಯ್ಯಲು ಒಪ್ಪಿಗೆ ಸೂಚಿಸಿದ್ದ. ಘಟನೆ ನಡೆದ ದಿನ ನನ್ನ ವಯಸ್ಸು 28 ವರ್ಷ. ನಾನು ಬಾಲ್ಯದಿಂದಲೂ ಅನಕ್ಷರಸ್ತೆ. ನನ್ನ ಹಳ್ಳಿಯಲ್ಲಿ ಹೆಣ್ಣು ಮಕ್ಕಳಿಗೆ ಶಾಲೆ ಇಲ್ಲದಿರುವ ಕಾರಣ ನನಗೆ   ಓದು, ಬರಹ  ಏನೇನೂ ಗೊತ್ತಿರಲಿಲ್ಲ. ಹದಿನೆಂಟನೆಯ ವಯಸ್ಸಿಗೆ ವಿವಾಹವಾಗಿ, ಮರು ವರ್ಷ ವಿಚ್ಛೇಧಿತಳಾಗಿ ಅಪ್ಪನ ಮನೆ ಸೇರಿದ್ದೆ. ನನ್ನೂರಿನ ಮೌಲ್ವಿಗಳ ಮೂಲಕ ಕುರಾನ್ ಗ್ರಂಥವನ್ನು ಸಂಪೂರ್ಣವಾಗಿ ಬಾಯಿ ಪಾಠ ಮಾಡಿದ್ದೆ. ಬೆಳಿಗ್ಗೆಯಿಂದ  ಸಂಜೆಯವರೆಗೆ ಅಪ್ಪನ ಹೊಲದಲ್ಲಿ ದುಡಿದ ನಂತರ ಸಂಜೆ ವೇಳೆ ಊರಿನ ಹೆಣ್ಣು ಮಕ್ಕಳಿಗೆ ಸೇವಾರ್ಥದ ರೂಪದಲ್ಲಿ ಕುರಾನ್ ಪಾಠ ಹೇಳಿಕೊಡುತ್ತಿದ್ದೆ. ಹೀಗಾಗಿ ನನ್ನೂರಿನ ಬಹುತೇಕ ಮಂದಿಗೆ ನನ್ನ ಕುರಿತು ಅಪಾರ ಗೌರವವಿತ್ತು. ಯಾರೊಬ್ಬರೂ  ನನ್ನನ್ನು ಕೀಳಾಗಿ ಕಾಣಲಿಲ್ಲ ಅಥವಾ ಕೆಟ್ಟದಾಗಿ ಮಾತನಾಡಲಿಲ್ಲ. ಬಡತನದ ನಡುವೆ ಅಂತಹದ್ದೊಂದು ಗೌರವಯುತ ಬದುಕನ್ನು ನಾನು  ಬಾಳಿದ್ದೆ.
ರಸ್ತೆಯಲ್ಲಿ ಹರಿಯುತ್ತಿದ್ದ ಕೊಳಚೆ ನೀರನ್ನು ದಾಟುತ್ತಾ, ಅಪ್ಪ ಹಾಗೂ ಚಿಕ್ಕಪ್ಪಂದಿರಾದ ಹಾಜಿ ಅಲಾಫ್, ಗುಲಾಂ ಬಾಯಿ  ಮತ್ತು ಮೌಲ್ವಿ ಅಬ್ದುಲ್ ರಜಾಕ್ ಸೇರಿದಂತೆ ಊರಿನ ಇತರೆ ಜಾತಿಯ ಅಪ್ಪನ ಗೆಳಯರೊಂದಿಗೆ ಜಮೀನ್ದಾರನ ಮನೆಯತ್ತ ಹೆಜ್ಜೆ ಹಾಕಿದ್ದೆಅವರೆಲ್ಲರ ಮನದೊಳಗೆ ಒಂದು ರೀತಿಯ ಭಯ ಆವರಿಸಿತ್ತು. ಕಾರಣಕ್ಕಾಗಿ ನಮ್ಮೊಂದಿಗೆ ಬರಲು ಚಿಕ್ಕಪ್ಪ ಹಿಂದೆ ಮುಂದೆ ನೋಡಿದ್ದ. ಆದರೆ, ನಾನು  ಮಾತ್ರ ಎದೆಯೊಳಗೆ ಯಾವುದೇ ರೀತಿಯ ಕಲ್ಮಶವಿಲ್ಲದ ಮಗುವಿನಂತೆ ಆತ್ಮ ವಿಶ್ವಾಸದಲ್ಲಿ ಹೆಜ್ಜೆ ಹಾಕುತ್ತಿದ್ದೆ. ನಾನು ವೈಯಕ್ತಿವಾಗಿ ಯಾವ ತಪ್ಪನ್ನೂ  ಎಸಗಿರಲಿಲ್ಲ. ನನಗೆ ದೇವರ ಮೇಲೆ ಸಂಪೂರ್ಣ ನಂಬಿಕೆಯಿತ್ತು. ಅತ್ಯಂತ ಬಡತನದ ಕುಟುಂಬದಲ್ಲಿ ಬೆಳೆದ ನಾನು ಮನೆಯಲ್ಲಿನ ಎಲ್ಲಾ ರೀತಿಯ ಕಷ್ಟ ಸುಖಗಳಿಗೆ ಸಾಕ್ಷಿಯಾಗಿದ್ದೆ. ನನ್ನ ಸಹೋದರನ ಕೃತ್ಯದಿಂದಾಗಿ ಕುಟುಂಬದ ಸದಸ್ಯರು ಅತ್ಯಂತ ಅಪಾಯದ ಅಂಚಿನಲ್ಲಿದ್ದುಕೊಂಡು ಆತಂಕ ಪಡುತ್ತಿರುವಾಗ, ನಾನು ಹುಟ್ಟಿ ಬೆಳೆದ ಮನೆಗೆ ನನ್ನಿಂದಾಗಬಹುದಾದ ಸಹಾಯವನ್ನು ಮಾಡುವುದು ನನ್ನ ನೈತಿಕ ಜವಾಬ್ದಾರಿಯಾಗಿತ್ತು.

ನನ್ನ ಸಹೋದರನ ಮೇಲೆ ಆರೋಪ ಹೊರಿಸಿರುವ ಜಮೀನ್ದಾರನ ಮಗಳು ಸಲ್ಮಾ ಕುರಿತು ನನ್ನೂರು ಮೀರ್ ವಾಲ ಗ್ರಾಮದಲ್ಲಿ ಯಾರಿಗೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅತ್ಯಂತ ನಿರ್ಭಿಡೆಯ ವ್ಯಕ್ತಿತ್ವ ಹಾಗೂ ಸಡಿಲ ನಾಲಿಗೆಯ ಆಕೆ ತಾನು ಇಷ್ಟ ಪಟ್ಟಂತೆ ಊರೊಳಗೆ ಮತ್ತು  ಊರಾಚೆ ತಿರುಗುತ್ತಿದ್ದಳು. ಇಂತಹ ಒಂದು ಅವಕಾಶವನ್ನು ಬಳಸಿಕೊಂಡ ಜಮೀನ್ದಾರನ ಕುಟುಂಬದವರು ನನ್ನ ತಮ್ಮ ಅವರ ಹೆಣ್ಣು ಮಗಳನ್ನು ಮಾತನಾಡಿಸಿದ ಎಂಬ ಏಕೈಕ ಕಾರಣಕ್ಕಾಗಿ   ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸಿದ್ದರು.
2002 ಜೂನ್ 22 ಕರಾಳ ರಾತ್ರಿಯ ನೆನಪುಗಳು ಮನಸ್ಸಿನೊಳಗೆ ಇಂದಿಗೂ  ಅಗ್ನಿ ಜ್ವಾಲೆಯ ಹಾಗೆ ಉರಿಯುತ್ತಿವೆ. ದಿನ ರಾತ್ರಿ ಪಕ್ಷಿಗಳೆಲ್ಲಾ ತಮ್ಮ ತಮ್ಮ ಗೂಡುಗಳನ್ನು ಸೇರಿಕೊಂಡು ಮೌನಕ್ಕೆ ಶರಣಾಗಿದ್ದವು. ದನಕರುಗಳು ಮತ್ತು ಕುರಿ, ಮೇಕೆಗಳು ಮೆಲಕು ಹಾಕುತ್ತಾ ನಮಗೂ ವರ್ತಮಾನದ ಜಗತ್ತಿಗೂ ಏನೇನೂ ಸಂಬಂಧವಿಲ್ಲದಂತೆ ಕೊಟ್ಟಿಗೆಗಳಲ್ಲಿ  ಕಟ್ಟಿ ಹಾಕಿದ್ದ ಗೂಟಕ್ಕೆ ಒರಗಿ ತೂಕಡಿಸುತ್ತಿದ್ದವುಊರಿನ ನಡು ಬೀದಿಯಲ್ಲಿ ಮಾತ್ರ ನಾಯಿಗಳು ಏನೋ ದುರಂತ ನಡೆಯಲಿದೆ  ಎಂಬ ಮುನ್ಸೂಚನೆ ನೀಡುವಂತೆ ಆಕಾಶದತ್ತ ಮುಖಮಾಡಿ ಘೀಳಿಡುತ್ತಿದ್ದವು. ರಾತ್ರಿಯ ನೀರವತೆಯ ಮೌನ ನಿಧಾನವಾಗಿ ನನ್ನ ಆತ್ಮ ವಿಶ್ವಾಸವನ್ನು ಅಲುಗಾಡಿಸುವಂತಿತ್ತು. ಭಯದಿಂದ ಜಮೀನ್ದಾರನ ಮನೆಯ ಅಂಗಳಕ್ಕೆ ನಾನೂ ಸೇರಿದಂತೆ  ಅಪ್ಪ, ಚಿಕ್ಕಪ್ಪಂದಿರು, ಮುಲ್ಲಾ ಎಲ್ಲರೂ ಕಾಲಿಟ್ಟವು. ಮನೆಯ ಗೇಟ್ ನಲ್ಲಿ ಒಂದೇ ಒಂದು ವಿದ್ಯುತ್ ದೀಪವು ಉರಿಯುತ್ತಿತ್ತುಮನೆಯ ಅಂಗಳದಲ್ಲಿ ನೂರಾರು ಮಂದಿ ಗ್ರಾಮಸ್ಥರು ನೆರದಿದ್ದರು. ಅವರಲ್ಲಿ ಬಹುತೇಕ ಮಂದಿ ಮಸ್ತೊಯ್ ಜನಾಂಗಕ್ಕೆ ಸೇರಿದವರಾಗಿದ್ದರುಜಿರ್ಗ ಎಂಬ ಹೆಸರಿನಲ್ಲಿ ನ್ಯಾಯಪಂಚಾಯಿತಿಗಳನ್ನು ನಡೆಸುವ ಮುಖಂಡರು  ಸಹ ಸೇರಿದ್ದರುಗ್ರಾಮಸ್ಥರು ಮತ್ತು ಪಂಚಾಯಿತಿ ನಡೆಸುವ ಸದಸ್ಯರ ನಡುವೆ ಸಮನ್ವಯಕಾರನಂತೆ ಕಾರ್ಯ ನಿರ್ವಹಿಸುತ್ತಿದ್ದ ಮುಲ್ಲಾ ಅಬ್ದುಲ್ ರಜಾಕ್  ದಿನ ಸಂಪೂರ್ಣ ಅಸಹಾಯಕರಾಗಿದ್ದರುಗುಂಪಿನಲ್ಲಿ ಒಬ್ಬಾತ ಮಾತ್ರ ಕೋಪದಿಂದ ಕುದಿಯುತ್ತಾ ಧ್ವನಿಯೆತ್ತರಿಸಿ ಮಾತನಾಡುತ್ತಿದ್ದ. ನಮ್ಮನ್ನು ನೋಡುತ್ತಿದ್ದಂತೆ ನನ್ನೆದುರು ಬಂದು ನಿಂತ. ನಿಧಾನವಾಗಿ ತಲೆಯೆತ್ತಿ ನೋಡಿದೆ. ಫೈಜಾ ಎಂದು ಕರೆಯುವ ಫಯಾಜ್ ಮಹಮ್ಮದ್ ನಿಂತಿದ್ದಅವನ ಜೊತೆ ಅಬ್ದುಲ್ ಖಾಲಿಕ್, ಗುಲಾಂ ಫರಿದ್, ಅಲ್ಲಾದಿತ, ಮತ್ತು ಮಹಮ್ಮದ್ ಫಯಾಜ್ ಎಂಬುವರು ಬಂದೂಕುಧಾರಿಗಳಾಗಿ ಆತನ  ಹಿಂದೆ ನಿಂತಿದ್ದರು. ಅಧೀರಳಾಗಿ ನಿಂತಿದ್ದ ನನ್ನ  ಬೆನ್ನ ಹಿಂದೆ  ಅಪ್ಪ ಮತ್ತು ಚಿಕ್ಕಪ್ಪಂದಿರು ಊರಿನ ಗ್ರಾಮಸ್ಥರ ಎದುರು ತಲೆ ತಗ್ಗಿಸಿ ನಿಂತಿದ್ದರು.
ನಾನು ಮೈ ತುಂಬಾ ಶಾಲನ್ನು ಹೊದ್ದಿದ್ದೆ. ನನಗೆ ನೆನಪಿರುವಂತೆ ರಾತ್ರಿ ಕ್ಷಣದಲ್ಲಿ ಕುರಾನಿನ ಶ್ಲೋಕವೊಂದನ್ನು ಮನಸ್ಸಿನಲ್ಲಿ ಪಠಿಸುತ್ತಿದ್ದೆ. ಕೈ ಹಿಡಿದಿದ್ದ ಧರ್ಮ ಗ್ರಂಥವನ್ನು ಮತ್ತಷ್ಟು ಬಿಗಿಯಾಗಿ ಎದೆಗೆ ಅಪ್ಪಿಕೊಂಡು ಕುರಾನ್ ಪಠಿಸುತ್ತಿದ್ದೆ. ಕುರಾನ್ ಗ್ರಂಥದ ಶ್ಲೋಕಗಳನ್ನು ನಾನು ಓದಿ ತಿಳಿದವಳಲ್ಲ. ಬಾಲ್ಯದಿಂದಲೂ ನನ್ನ ಕಿವಿಯ ಮೇಲೆ ಬಿದ್ದ ಅವುಗಳನ್ನು ಕಂಠ ಪಾಠ ಮಾಡಿದ್ದೆ. ಮಸ್ತೋಯ್ ಜನಾಂಗದ ದಬ್ಬಾಳಿಕೆಯಲ್ಲಿ ಅಥವಾ ದಾಳಿಯಲ್ಲಿ ಅದು ನನ್ನನ್ನು ಪವಿತ್ರಳಾಗಿ ಇರಿಸುತ್ತದೆ ಎಂಬ ನಂಬಿಕೆಯಿತ್ತು. ನಾನು ಹುಟ್ಟಿ ಬೆಳೆದ ನೆಲ ಪಂಜಾಬ್ ಪ್ರಾಂತ್ಯವೊಂದರ ಅಂಗವಾಗಿತ್ತು. ಪಂಜಾಬ್ ನೆಲವನ್ನು ಪಂಚನದಿಗಳಿಂದ ಪಾವನವಾದ ಭೂಮಿ ಎಂದು ಕರೆಯಲಾಗುತ್ತದೆ.
ಅಬ್ದುಲ್ ಖಾಲಿಕ್ ಎಂಬಾತ ತನ್ನ ಪಿಸ್ತೂಲನ್ನು ನನ್ನ ಹಣೆಗೆ ಹಿಡಿಯುತ್ತಾ ಹತ್ತಿರ ಬಂದ. ಸೇಡು ತೀರಿಸಿಕೊಳ್ಳುವ ತವಕದಲ್ಲಿ ಉನ್ಮತ್ತನಾಗಿದ್ದ ಅವನ ಕಣ್ಣುಗಳಲ್ಲಿ ಸೇಡಿನ ಜ್ವಾಲೆ ಉರಿಯುತ್ತಿದ್ದವು. ನಾನು ಕ್ಷಣಕ್ಕೆ ಅಸಹಾಯಕಳಾಗಿದ್ದೆ. ನಾನು ಹುಟ್ಟಿದ ಗುಜಾರ್ ಸಮುದಾಯ ನನ್ನೂರಿನಲ್ಲಿ ಹಿಂದುಳಿದ ಜಾತಿಗೆ ಸೇರಿದ್ದಾಗಿತ್ತು. ಬೇಸಾಯವನ್ನು ನಂಬಿ ಶತ ಶತ ಮಾನಗಳ ಕಾಲ ಬದುಕಿದ್ದರೂ ಸಹ ಮೇಲ್ವರ್ಗದ ಜನರ ತೂಗು ಕತ್ತಿಯ ಕೆಳೆಗೆ ನಮ್ಮ ಸಮುದಾಯದ ಬದುಕು-ಭವಿಷ್ಯ ಇವೆಲ್ಲವೂ ನಿರ್ಧಾರವಾಗುತ್ತಿದ್ದವು.
ನಾನು ಸನ್ನಿವೇಶವನ್ನು ಎದುರಿಸಲು ಸನ್ನದ್ಧಳಾಗಿ ತಲೆ ಎತ್ತಿ ಫೈಜಾ ಮುಖ ನೋಡುತ್ತಿದ್ದಂತೆ, ಆತ ತನ್ನ ತಲೆಯನ್ನು ಅಲುಗಾಡಿಸಿ ನೇರವಾಗಿ ನನ್ನನ್ನು ನೋಡಲು ಆರಂಭಿಸಿದ. ಕೆಲ ಹೊತ್ತು ಮೌನ ಆವರಿಸಿತು. ನಾನು ಮನದೊಳಗೆ ದೇವರನ್ನು ಪ್ರಾರ್ಥಿಸುತ್ತಿದ್ದೆ. ಇದ್ದಕ್ಕಿದ್ದಂತೆ ಮುಂಗಾರಿನ ಮಳೆ ಮತ್ತು ಸಿಡಿಲು ಒಮ್ಮೆಲೆ ಅಪ್ಪಳಿಸಿದಂತೆ ಆಯಿತು.
ನಾನು ಆತನ ಕಣ್ಣುಗಳನ್ನೇ ದಿಟ್ಟಿಸುತ್ತಿದ್ದೆ. ಮಸ್ತೋಯ್ ಸಮುದಾಯದ ತೀರ್ಪಿನಂತೆ (ಜಿರ್ಗ) ಅವನು ಇಡೀ ಊರಿನ ಗ್ರಾಮಸ್ಥರ ಎದುರು ಗುಜಾರ್ ಬುಡಕಟ್ಟಿನ ಹೆಣ್ಣು ಮಗಳಾದ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಅಲ್ಲಿನ ಜನತೆ ನನ್ನ ಸಹೋದರ ಶಕೂರ್, ಅವನ ಪುತ್ರಿ ಸಲ್ಮಾಳನ್ನು ಮಾತನಾಡಿಸಿದ ತಪ್ಪಿಗಾಗಿ ಬಹಿರಂಗವಾಗಿ ನನ್ನ ಮೇಲೆ ಅತ್ಯಾಚಾರವೆಸಗಲು ತೀರ್ಪು ನೀಡಿತ್ತು. ಆದರೆ, ನಿರ್ಧಾರವನ್ನು ಅವರು ನಮ್ಮನ್ನು ಮನೆಯಿಂದ ಕರೆ ತರುವಾಗ ಮುಚ್ಚಿ ಹಾಕಿದ್ದರು.

ಅಬ್ದುಲ್ ಖಾಲಿಕ್ ತನ್ನ ರಕ್ಷಣಾ ಸಿಬ್ಬಂದಿಯತ್ತ ತಿರುಗಿ  ನನ್ನನ್ನು ಹಿಡಿದು ಕೊಳ್ಳುವಂತೆ ಕಣ್ಸನ್ನೆ ಮಾಡಿದ. ಆದಷ್ಟು ಬೇಗ ತೀರ್ಪನ್ನು ಜಾರಿಗೆ ತರುವ ದಾವಂತ ಅವರೆಲ್ಲರಲ್ಲೂ ಎದ್ದು ಕಾಣುತ್ತಿತ್ತು. ಅಬ್ದುಲ್ ಖಾಲಿಕ್ ನನ್ನನ್ನು ಹಿಂಬದಿಯಿಂದ ತಬ್ಬಿ ಹಿಡಿದುಕೊಂಡ ನಂತರ ಗುಲಾಂ ಫರೀದ್, ಅಲ್ಲಾದಿತ, ಮಹಮ್ಮದ್ ಫಯಾಜ್ ನನ್ನ ಮೇಲೆ ಬಹಿರಂಗವಾಗಿ ಸರದಿಯಂತೆ ಅತ್ಯಾಚಾರವೆಸಗಿದರು.

ನಾನು ಕ್ಷಣದಲ್ಲಿ ಎಲ್ಲವನ್ನೂ ಅನಿರೀಕ್ಷಿತ ಆಘಾತಗಳೊಂದಿಗೆ ಅನುಭವಿಸಿದೆ. ಜರ್ಜರಿತವಾದ ದೇಹ ನೆಲದ ಮೇಲೆ ಕೆಳಕ್ಕೆ ಕುಸಿಯುತ್ತಿದ್ದಂತೆ  ಕಾಲುಗಳಾಗಲಿ ಅಥವಾ  ದೇಹವಾಗಲಿ ನನ್ನದಾಗಿರಲಿಲ್ಲ. ನನ್ನ ಸ್ಥಿತಿ ಕಟುಕನೊಬ್ಬ ಕಸಾಯಿಖಾನೆಯಲ್ಲಿ  ಗೂಟಕ್ಕೆ ಕಟ್ಟಿ ಹಾಕಿದ ಮೇಕೆಯಂತಾಗಿತ್ತು. ಅವರು ನನ್ನ ಉಡುಪು, ಶಾಲು, ಎಲ್ಲವನ್ನು ಕಳಚಿ ಬಿಸಾಡಿ, ನನ್ನ ತಲೆಗೂದಲನ್ನು ಹಿಡಿದು ಅತ್ತಿತ್ತ ನೀರಿನಲ್ಲಿ ಬಟ್ಟೆಗಳನ್ನು ಜಾಲಾಡಿಸುವಂತೆ ನನ್ನನ್ನು ನೆಲದ ಮೇಲೆ ಜಾಲಾಡಿಸುತ್ತಿದ್ದರು.
ಕುರಾನ್ ಧರ್ಮಗ್ರಂಥ ಹೆಸರಿನಲ್ಲಾದರೂ ನನ್ನನ್ನು ಕ್ಷಮಿಸಿಬಿಡಿ, ಬಿಡುಗಡೆ ಮಾಡಿ ಎಂದು ಅಂಗಲಾಚಿ ಬೇಡಿಕೊಂಡೆ. ನನ್ನ ನಿವೇದನೆ ಅಲ್ಲಿ ಅರಣ್ಯ ರೋಧನವಾಯಿತು. ನನ್ನನ್ನು ಜೂನ್ 22 ರಾತ್ರಿಯಿಂದ 23 ರಾತ್ರಿಯವರೆಗೂ ಅಲ್ಲಿಯೆ ಕೂಡಿಹಾಕಿದರು. 23 ಬೆಳಿಗ್ಗೆ ಬೆಳಕರಿಯುತ್ತಿದ್ದಂತೆ ನನ್ನನ್ನು ಸತ್ತ ನಾಯಿಯನ್ನು ಬೀದಿಯಲ್ಲಿ ಎಳೆದುಕೊಂಡು ಹೋಗುವಂತೆ ಮನೆಯ ಅಂಗಳದಿಂದ ಕತ್ತಲು ಆವರಿಸಿದ್ದ ಕುದುರೆ ಲಾಯದೊಳಕ್ಕೆ ಜುಟ್ಟು ಹಿಡಿದು ದರ ದರೆನೆ  ಎಳೆದುಕೊಂಡು ಹೋಗಿ ಕೂಡಿ ಹಾಕಲಾಯಿತು. ಮತ್ತೆ ನಾಲ್ವರಿಂದ ನಿರಂತರ ಅತ್ಯಾಚಾರ ನಡೆಯಿತು. ಎಷ್ಟು ಎತ್ತು? ಎಷ್ಟು ಬಾರಿ? ಯಾವುದೂ ನನಗೆ ನೆನಪಿಲ್ಲ. ನಾನು ಪ್ರಜ್ಞಾಹೀನಳಾಗಿದ್ದೆ. ಜಮೀನ್ದಾನರನ ಮನೆಯ ಕಾಂಪೌಂಡಿನಿಂದ ಹಿಡಿದು, ಗೇಟಿನವರೆಗೆ ಎಲ್ಲಡೆ ಕಾವಲುಭಟರು ಬಂದೂಕಗಳನ್ನು ಹಿಡಿದು ನಿಂತಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಅಂತಹ ಸಮಯದಲ್ಲಿ ಬಿಡುಗಡೆಗಾಗಿ ನಾನು ಮಾಡಿಕೊಳ್ಳಬಹುದಾಗಿದ್ದ ಪ್ರಾರ್ಥನೆಗೂ ಅಲ್ಲಿ ಬೆಲೆಯಿರಲಿಲ್ಲ.
ಮುಖ್ತರನ್ ಬೀಬಿ ಅಥವಾ ಮುಖ್ತರ್ ಮಾಯಿ ಎಂದು ಜಗತ್ತಿನಿಂದ ಗುರುತಿಸಲ್ಪಟ್ಟಿದ್ದ  ನಾನು, ಗುಲಾಂ ಫರಿದ್ ಜಾಟ್ ಎಂಬ ಹೆಸರಿನ ನನ್ನ ತಂದೆಗೆ ಹಿರಿಯ ಮಗಳಾಗಿದ್ದೆ. ದುರಾದೃಷ್ಟದ ಕ್ಷಣದಲ್ಲಿ ನಾನೂ ಪ್ರಜ್ಞಾ ಹೀನಳಾಗಿದ್ದರೂ ಸಹ ಹರಿಣಿಯ ಮೇಲೆ ಹಸಿದ ಹೆಬ್ಬುಲಿಯಂತೆ ಎರಗುತಿದ್ದ ನಾಲ್ವರು ವ್ಯಕ್ತಿಗಳ ಮುಖಚರ್ಯೆಯನ್ನು ಮಾತ್ರ ನಾನು ಮರೆತಿರಲಿಲ್ಲ. ಅವರ ಪಾಲಿಗೆ ಹೆಣ್ಣು ಜೀವವೆಂದರೆ, ಹರಿದು ತಿನ್ನಬಹುದಾದ ಹಣ್ಣು ಎಂಬಂತಾಗಿತ್ತು. ಇದು ಪಾಕಿಸ್ತಾನದ ಪುರುಷ ಜಗತ್ತಿನಲ್ಲಿ ಜಾರಿಯಲ್ಲಿರುವ ಒಂದು ಅಲಿಖಿತ ನಿಯಮ. ಮರ್ಯಾದೆಯ ಹೆಸರಿನಲ್ಲಿ ತನ್ನ ಕುಟುಂಬಕ್ಕೆ ಅಥವಾ ಸಮುದಾಯಕ್ಕೆ ಕಳಂಕ ತರುವ ಹೆಣ್ಣೆದಂರೆ, ಕೋಳಿಯನ್ನು ತರಿದು ಹಾಕಿದಂತೆ ಮರ್ಯಾದೆ ಹತ್ಯೆಯ ಹೆಸರಿನಲ್ಲಿ ಕೊಲ್ಲಬಲ್ಲರು. ತಮ್ಮ ಕೈ ಕೆಳಗಿನ ಜಾತಿಯ ಜನರಿಂದ  ಮೇಲ್ವರ್ಗದ  ಜನರ ಅಂತಸ್ತಿಗೆ ಅಥವಾ ಗೌರವಕ್ಕೆ ಧಕ್ಕೆಯುಂಟಾದರೆ, ನೇರವಾಗಿ ಅವರ ಮನೆಗೆ ನುಗ್ಗಿ ರಾಜಾ ರೋಷವಾಗಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಬಲ್ಲರು. ನನ್ನ ನೆಲದಲ್ಲಿ ಹೆಣ್ಣನ್ನು ಕೊಲ್ಲಲು ಯಾವುದೇ ರೀತಿಯ ಆಯುಧಗಳು ಬೇಕಿಲ್ಲ. ಸರಳವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದರೆ ಸಾಕು. ಆಕೆ ತಂತಾನೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇಂತಹ ಸಾವಿರಾರು, ಲಕ್ಷಾಂತರ ಘಟನೆಗಳು ಹೊರಜಗತ್ತಿಗೆ ಬೆಳಕಿಗೆ ಬಾರದಂತೆ ಪಾಕಿಸ್ತಾನದಲ್ಲಿ ನಡೆದಿವೆ, ನಡೆಯುತ್ತಲೇ ಇವೆ.
ಅವರು ನನ್ನನ್ನು ತೀವ್ರವಾಗಿ ಥಳಿಸಿದ್ದರೆ ನಾನು ಯೋಚಿಸುತ್ತಿರಲಿಲ್ಲ ಏಕೆಂದರೆ, ನಾನು ಅವರ ಅಧೀನದಲ್ಲಿದ್ದೆಆದರೆ, ಅವರು ನನ್ನ ಸಹೋದರ, ಅಪ್ಪ ಮತ್ತು ಆತನ ಬಂಧುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವುದರ ಮೂಲಕ ತಮ್ಮೊಳಗಿನ ವಿಕೃತ ಕಾಮಕ್ಕೆ ಮತ್ತು ಕ್ರೌರ್ಯಕ್ಕೆ ನನ್ನನ್ನು ದಾಳವಾಗಿ ಬಳಸಿಕೊಂಡಿದ್ದರು.


ಸತತ ಇಪ್ಪತ್ತುನಾಲ್ಕು ಗಂಟೆಗಳ ಬಂಧನ ಮತ್ತು ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ನಂತರ ಮರುದಿನ ರಾತ್ರಿ ಕುದುರೆ ಲಾಯದ ಬಾಗಿಲು ತೆರೆದು ನನ್ನನ್ನು ಹೊರಹೋಗಲು ಹೇಳಿದ್ದರು. ಮೈ ಮೇಲೆ ಅಂಗೈ ಅಗಲದಷ್ಟು ಬಟ್ಟೆಯಿರಲಿಲ್ಲ. ಮಣ್ಣಿನಲ್ಲಿ ದೂಳಾಗಿ ಹರಿದು ಚಿಂದಿಯಾಗಿದ್ದ ನನ್ನ ಸೆಲ್ವಾರ್ ತುಂಡೊಂದನ್ನು ನನ್ನತ್ತ ಎಸೆದರುಜಮೀನ್ದಾರನ ಮನೆಯಾಚೆ ಅಪ್ಪ, ಚಿಕ್ಕಪ್ಪ, ಹಾಗೂ ಮುಲ್ಲಾ ಇವರುಗಳು  ಆಸ್ಪತ್ರೆಯ ಶವಾಗಾರದ ಮುಂದೆ ಕಾಯುವ ಬಂಧುಗಳಂತೆ ನನಗಾಗಿ ಕಾಯುತ್ತಿದ್ದರು. ನಾನು ಜಮೀನ್ದಾರನ ಮನೆಯ ಗೇಟಿನಿಂದ ನಿಧಾನವಾಗಿ ಹೆಜ್ಜೆ ಊರುತ್ತಾ ಹೊರಬಂದಾಗ ಆಗಸದಲ್ಲಿ ಚಂದ್ರನ ಬೆಳಕಿತ್ತು. ನನ್ನ ದೈನೇಸಿ ಸ್ಥಿತಿಯನ್ನು ನೋಡಲು ನನ್ನಿಂದ ಸಾಧ್ಯವಿಲ್ಲವೆಂಬಂತೆ ಚಂದ್ರನೂ ಕೂಡ ಮುಖಮುಚ್ಚಿಕೊಂಡವನಂತೆ ಮೋಡಗಳ ಹಿಂದೆ ಮರೆಯಾಗಿ ಹೋದ. ಅಪ್ಪ ತನ್ನ ಹೆಗಲ ಮೇಲಿದ್ದ ಶಾಲನ್ನು ನನಗೆ ನೀಡಿದ ನಂತರ ಅದನ್ನು ನನ್ನ ಸೊಂಟಕ್ಕೆ ಸುತ್ತಿಕೊಳ್ಳುವುದರ ಮೂಲಕ ಮಾನವನ್ನು ಮುಚ್ಚಿಕೊಂಡೆಎದೆಯನ್ನು ನನ್ನರೆಡು ಅಂಗೈಗಳಲ್ಲಿ ಮುಚ್ಚಿಕೊಂಡು ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕತೊಡಗಿದೆ. ಅಪ್ಪ ಮತ್ತು ಬಂಧುಗಳು ನನ್ನ ಹಿಂದೆ ಅನತಿ ದೂರದಲ್ಲಿ ತಲೆ ತಗ್ಗಿಸಿ ಹೆಜ್ಜೆ ಹಾಕುತ್ತಿದ್ದರು. ಇಡೀ ಊರಿಗೆ ಗರ ಬಡಿದಂತಾಗಿತ್ತು. ನನಗೊದಗಿದ ದುರಂತವನ್ನು ನೋಡಬಾರದು ಮತ್ತು ಕೇಳಬಾರದು ಎಂದು ತೀರ್ಮಾನಿಸಿದಂತೆ ನನ್ನೂರಿನ ಜನರು ತಮ್ಮ ಮನೆಯ ದೀಪಗಳನ್ನು ಆರಿಸಿ, ಕಿಟಿಕಿ ಬಾಗಿಲು ಮುಚ್ಚುವುದರ ಮೂಲಕ, ನಿದ್ದೆಯ ನೆಪದಲ್ಲಿ ಮೌನಕ್ಕೆ ಶರಣಾಗಿದ್ದರು. ರಾತ್ರಿ ಮೌನವೆಂಬುದು ಇಡೀ ಮೀರ್ವಾಲ ಎಂಬ ನನ್ನ ಊರನ್ನು  ಆಳುತ್ತಿತ್ತು.
( ದಿನಾಂಕ 5-12-2015 ರ ಶನಿವಾರ ದಂದು ಬಿಡುಗಡೆಯಾಗುತ್ತಿರುವ ಮೂಕ ಹಕ್ಕಿಯ ಹಾಡು ಕೃತಿಯಿಂದ)








ಬುಧವಾರ, ನವೆಂಬರ್ 25, 2015

ಅಹಿಷ್ಣುತೆ ಮತ್ತು ಅಮೀರ್ ಖಾನ್ ನ ಅಹಿತಕರ ಹೇಳಿಕೆ



ಇದು ಭಾರತದ  ಬಹುಮುಖಿ ಸಂಸ್ಕøತಿ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟೂ ಹೌದು, ದುರಂತವೂ ಹೌದು. ಪರಧರ್ಮ ಸಹಿಷ್ಣುತೆಗೆ ಹೆಸರಾದ ಭಾರತದ ನೆಲದಲ್ಲಿ ನಿಜಕ್ಕೂ ಸಾಂಸ್ಕøತಿಕ ಬಿಕ್ಕಟ್ಟು ತಲೆದೂರಿದೆಯಾಅಥವಾ ಧರ್ಮ ಧರ್ಮಗಳ ನಡುವೆ ಕಂದಕ ಏರ್ಪಟ್ಟಿದೆಯಾ? ಮಾಧ್ಯಮಗಳಲ್ಲಿ, ಬುದ್ದಿವಂತರ ಚಾವಡಿಗಳಲ್ಲಿ ದಿನನಿತ್ಯದ ಸರಕಾಗಿ ಎಲೆ ಅಡಿಕೆಯಂತೆ ಅಗಿಯಲ್ಪಡುತ್ತಿರುವ ಅಹಿಷ್ಣುತೆಯ ಪ್ರಶ್ನೆಯನ್ನಿಟ್ಟುಕೊಂಡು ನೀವು ದೇಶದಲ್ಲಿ ಬಡವರು ವಾಸಿಸುವ  ಯಾವುದೇ ಕೊಳಗೇರಿಗೆ ಹೋಗಿ ಅಥವಾ ಹಳ್ಳಿಗಳಿಗೆ ಹೋಗಿ ಬನ್ನಿಅಹಿಷ್ಣುತೆ ಎಂದರೇನು? ಎಂಬ ಪ್ರಶ್ನೆ ನಮಗೆ  ಎದುರಾಗುತ್ತದೆ. ಏಕೆಂದರೆ, ನೆಲದ ಸಕಲೆಂಟು ಜೀವರಾಶಿಗಳಿಗೆ ಎರವಾಗದಂತೆ ಬದುಕುವುದೇ ಜೀವನ ಎಂದು ನಂಬಿಕೊಂಡಿರುವ ಜನರ ನಂಬಿಕೆಗೂ, ದೇಶದ ಕೆಲವೆಡೆ ಕಿಡಿಗೇಡಿಗಳು ನಡೆಸಿದ ದುಷ್ಕøತ್ಯವನ್ನು ದೇಶದ ಅಹಿಷ್ಣುತೆ ಎಂಬ ಆರೋಪವನ್ನು ಆವಾಹಿಸಿಕೊಂಡು ಎಲ್ಲೆಡೆ ಅದನ್ನು ಜಾರಿಯಲ್ಲಿಟ್ಟಿರುವ ಉಳ್ಳವರ ನಡುವಳಿಕೆಗಳಿಗೆ ತಾಳೆ ಹಾಕಿ ನೋಡಿದಾಗ  ಮನಸ್ಸಿನಲ್ಲಿ ಜಿಗುಪ್ಸೆ ಮೂಡುತ್ತದೆ.
ಭಾರತದ ಪ್ರತಿಭಾವಂತ ಹಾಗೂ ಸೂಕ್ಷ್ಮ ಸಂವೇದನೆಯ ನಟರಲ್ಲಿ ಒಬ್ಬರಾಗಿರುವ ಅಮೀರ್ ಖಾನ್ ಕಳೆದ ಸೋಮವಾರ ನವದೆಹಲಿಯಲ್ಲಿ ನಡೆದ ಗೋಯಂಕಾ ಪ್ರತಿಷ್ಠಾನದ ಪ್ರಶಸ್ತಿ ಸಮಾರಂಭದಲ್ಲಿ ಆಡಿದರು ಎನ್ನಲಾದನನ್ನ ಪತ್ನಿಯು ಮಕ್ಕಳ ಭವಿಷ್ಯಕ್ಕಾಗಿ ದೇಶ ಬಿಟ್ಟು ಹೊರಟು ಹೋಗೋಣ ಎಂದು ನನ್ನ ಬಳಿ ಆತಂಕ ವ್ಯಕ್ತಪಡಿಸಿದಳುಎಂಬ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಯಾವ ಕಾರಣಕ್ಕೆ ಅಮೀರ್ ಖಾನ್ ರವರಿಂದ ಮಾತು ಹೊರಬಂತು? ಇದಕ್ಕೆ ಪ್ರೇರಣೆ ಎಲ್ಲಿಂದ ದೊರೆಯಿತು? ಎಂಬುದರ ಕುರಿತು ನಾವ್ಯಾರೂ ಯೋಚಿಸಲಿಲ್ಲ. ಜೊತೆಗೆ ಇಡೀ ದೇಶ ಅಪನಂಬಿಕೆಯ ದಳ್ಳುರಿಯಲ್ಲಿ ಬೇಯುತ್ತಿರುವಾಗ, ತಾನು ಮತ್ತು ತನ್ನ ಪತ್ನಿ ಕಿರಣ್ ನಡೆಸಿದ ಖಾಸಾಗಿ ಚರ್ಚೆಯನ್ನು ಅಮೀರ್ ಖಾನ್ ಸಂದರ್ಭದಲ್ಲಿ ಹೊರಹಾಕುವ ಅವಶ್ಯಕತೆಯೂ ಇರಲಿಲ್ಲ. ದೇಶದ ಒಬ್ಬ ಕಲಾವಿದ ಅಥವಾ ಬರಹಗಾರ, ಸಂಗೀತಗಾರ ಇವರುಗಳು ಯಾವುದೇ ನಿರ್ಧಿಷ್ಟ ಸಮುದಾಯಕ್ಕೆ ಸೇರಿದವರಲ್ಲ. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರ ಪ್ರೀತಿ ಮತ್ತು ಸಹಾನುಭೂತಿ  ಫಲವಾಗಿ ಮೇಲೆದ್ದು ಬಂದವರಾಗಿರುತ್ತಾರೆ. ಹಾಗಾಗಿ ಅತಿ ಸೂಕ್ಷ್ಮ ವಿಚಾರಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಇಂತಹವರು ಎಚ್ಚರದಿಂದರಬೇಕು. ಇಂತಹ ವ್ಯಕ್ತಿಗಳು ಹಾಡುವ ಪ್ರತಿ ಮಾತನ್ನು ದೇಶದ ಜನ ಮತ್ತು ಮಾಧ್ಯಮಗಳು ಕಣ್ಣಲ್ಲಿ ಕಣ್ಣಿಟ್ಟು, ಮೈಯೆಲ್ಲಾ ಕಿವಿಯಾಗಿಸಿಕೊಂಡು ಕಾಯುತ್ತಿರುತ್ತಾರೆ/ವೆ.
ಭಾರತದ ಸಾಮರಸ್ಯದ ಬದುಕನ್ನು ಹಾಗೂ ದೇಶ ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ದೃಶ್ಯ ಮಾಧ್ಯಮದ ಕಾರ್ಯಕ್ರಮಗಳ  ಮೂಲಕ ವಿಶ್ಲೇಷಿಸಿ, ಎಲ್ಲಾ ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದ ಅಮೀರ್ ಖಾನ್ಗೆ ಸೂಕ್ಷ್ಮತೆ ಏಕೆ ಅರ್ಥವಾಗಲಿಲ್ಲಅಮೀರ್ ಖಾನ್ರವರ ಮಾತಿಗೆ ಪ್ರತಿಯಾಗಿ ಬಾಂಗ್ಲಾ ದೇಶದ ಲೇಖಕಿ ತಸ್ಲಿಮಾ ನಸ್ರೀನ್  ಟ್ವಿಟರ್ನಲ್ಲಿ ಹೇಳಿರುವ  “ ಅಮೀರ್ ಖಾನ್ ನೀವು ಹಿಂದೂ ದೇವರುಗಳನ್ನು ಲೇವಡಿ ಮಾಡಿ ಪಿ.ಕೆ. ಸಿನಿಮಾ ಮಾಡಿ ಮುನ್ನೂರು ಕೋಟಿ ರೂಪಾಯಿ ಗಳಿಸಿದಿರಿ. ಇದೇ ಚಿತ್ರವನ್ನು ನೀವು ಪಾಕಿಸ್ತಾನ ಇಲ್ಲವೆ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾ ದೇಶದಲ್ಲಿ ನಿರ್ಮಾಣ ಮಾಡಿದ್ದರೆ, ನಿಮ್ಮನ್ನೂ ಒಳಗೊಂಡಂತೆ ನಿಮ್ಮ ನಿರ್ಮಾಪಕ ಮತ್ತು ನಿರ್ದೇಶಕನನ್ನು ಸಾರ್ವಜನಿಕವಾಗಿ ಅಲ್ಲಿನ ಸರ್ಕಾರಗಳು ಗಲ್ಲಿಗೇರಿಸುತ್ತಿದ್ದವುಎಂಬ ಮಾತುಗಳು ನಮಗೆ  ದ್ವೇಷ ಪೂರಿತವಾದ ಮಾತುಗಳಂತೆ  ಕಾಣಿಸುವುದಿಲ್ಲ ಬದಲಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತನ್ನ ಕೃತಿಗಳ ಮೂಲಕ ಪ್ರತಿಪಾದಿಸಿದ ತಪ್ಪಿಗಾಗಿ ಜೀವ ಭಯದಿಂದ ದೇಶ ಬಿಟ್ಟು, ಭಾರತದಲ್ಲಿ ಬದುಕುತ್ತಿರುವ ಒಬ್ಬ ಹೆಣ್ಣು ಮಗಳ ಒಡಲಾಳದ ಸಂಕಟದ ನುಡಿಗಳಾಗಿ ನಮಗೆ ಕಾಣುತ್ತವೆ. ಏಕೆಂದರೆ, ಭಾರತದಲ್ಲಿರುವ  ಧರ್ಮ ಸಹಿಷ್ಣುತೆಯ ಪರಿಸ್ಥಿತಿಯು ನೆರೆಯ ದೇಶಗಳಷ್ಟು ಹದಗೆಟ್ಟಿಲ್ಲ.

ತನ್ನ ಅಭಿನಯ ಮತ್ತು ಪ್ರತಿಭೆಯಿಂದಾಗಿ ಜಾತಿ, ಧರ್ಮಗಳ ಹಂಗಿಲ್ಲದೆ ಭಾರತದ  ಕೋಟ್ಯಾಂತರ ಜನರ ಮನ ಗೆದ್ದ ಅಮೀರ್ ಖಾನ್ ಕುಟುಂಬಕ್ಕೆ ಇಂದು ಕೀರ್ತಿ, ಹಣ, ಶ್ರೀಮಂತಿಕೆ ಎಲ್ಲವೂ ದಕ್ಕಿದೆ ಜಗತ್ತಿನ ಯಾವುದೇ ಪ್ರದೇಶಕ್ಕೆ ಹೋಗಿ ಬದುಕಲು ಅವರು ಸರ್ವ ಸ್ವತಂತ್ರರು ಇದರ ಬಗ್ಗೆ ಎರಡು ಮಾತಿಲ್ಲ. ಆದರೆ, ಇಂತಹ ಆಲೋಚನೆಗಳ ಕುರಿತು ಯೋಚಿಸುವ ಮುನ್ನ ಅಮೀರ್ ಖಾನ್ ದಂಪತಿಗಳು ತಾವು ವಾಸಿಸುತ್ತಿರುವ ಮುಂಬೈ ನಗರದಲ್ಲಿ ಕೂಗಳತೆಯಲ್ಲಿರುವ ಧಾರಾವಿ ಎಂಬ ಕೊಳಗೇರಿಗೆ ಒಮ್ಮೆ ನೀಡುವುದು ಒಳಿತು. ದೇಶದ ವಿವಿಧ ಮೂಲೆಗಳಿಂದ ಬಂದು ಒಂದು ಹಿಡಿ ಅನ್ನಕ್ಕೆ ಮತ್ತು ಒಂದು ಮಾರು ಅಗಲದ ಸೂರಿಗಾಗಿ ಮುಂಬೈ ನಗರಕ್ಕೆ ಜಮೆಯಾಗಿರುವ ಬಡ ಜನತೆ ಧರ್ಮ ಮತ್ತು ಜಾತಿಯ ಎಲ್ಲೆಗಳನ್ನು ಮೀರಿ  ಹೇಗೆ ಬದುಕುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ನೆರೆಮನೆಯ ಮುಸ್ಲಿಂ ಕುಟುಂಬದ ಒಲೆಯ ಕೆಂಡವು ಹಿಂದೂ ಕುಟುಂಬವೊಂದರ ಒಲೆಗೆ ಬೆಂಕಿಯಾಗುವ ಪರಿಯಿಂದ ಹಿಡಿದು, ಉತ್ತರ ಭಾರತದ ಕುಟುಂಬದ ರೊಟ್ಟಿ, ದಕ್ಷಿಣ ಭಾರತದ ಅನ್ನ ಹೇಗೆ ಕುಟುಂಬಗಳ ನಡುವೆ ವಿನಿಮಯವಾಗುತ್ತವೆ ಎಂಬುದು ಮನದಟ್ಟಾಗುತ್ತದೆಸತ್ತ ಮುಸ್ಲಿಂ ನಾಗರೀಕನ ಶವ ಯಾತ್ರೆಯಲ್ಲಿ ಹೆಗಲು ಕೊಡುವ ಹಿಂದೂ ವ್ಯಕ್ತಿಯ ಹೃದಯದಲ್ಲಿ ಕೋಮು ಭಾವನೆಗಳಿಲ್ಲ ಎಂಬ ನಿಜ ಬದುಕಿನ ಘಟನೆಗಳು ಸಹ ನಮಗೆ ಗೋಚರವಾಗುತ್ತವೆ. ನಾನು ಹುಟ್ಟಿ ಬೆಳೆದ ಗ್ರಾಮೀಣ ಬದುಕಿನ ಸಂಸ್ಕøತಿಯಲ್ಲಿ ಹಳೆಯ ಬೈಸಿಕಲ್ ಗೆ ಗೋಣಿ ಚೀಲ ಕಟ್ಟಿಕೊಂಡು, ಹಳ್ಳಿ ಹಳ್ಳಿ ತಿರುಗಿ ಹುಣಸೆ ಬೀಜ, ಬೇವು ಮತ್ತು ಹೊಂಗೆ ಬೀಜ ಸಂಗ್ರಹಿಸುತ್ತಿದ್ದ  ಬಡ ಹುಸೇನಣ್ಣ, ಖಾದೀರಣ್ಣ, ಫತಾವುಲ್ಲಾ ಷರೀಪಣ್ಣ ಮುಂತಾದವರ  ಹೆಣ್ಣು ಮಕ್ಕಳ ವಿವಾಹಕ್ಕೆ ಇಡೀ ಊರಿನ ಜನ ಅಕ್ಕಿ, ಬೆಲ್ಲ, ತೆಂಗಿನ ಕಾಯಿ, ತರಕಾರಿ, ಮೇಕೆ, ಕುರಿಹೀಗೆ ತರಾವರಿ ವಸ್ತುಗಳನ್ನು ಕೊಟ್ಟು ಮುಸ್ಲಿಂ ಹೆಣ್ಣು ಮಗಳ ವಿವಾಹವನ್ನು ತಮ್ಮ ಮನೆ ಮಗಳ ವಿವಾಹವೆಂಬಂತೆ ಸಂಭ್ರಮಿಸಿದ ಘಟನೆಗೆ ಸ್ವತಃ ನಾನು ಸಾಕ್ಷಿಯಾಗಿದ್ದಿನಿಇಂತಹ ಅಪರೂಪದ ಒಳನೋಟ ಹಾಗೂ ಮಾನವೀಯ ನೆಲೆಯುಳ್ಳ ಗ್ರಾಮೀಣ ಸಂಸ್ಕತಿಯ ಕುರಿತು ಲಗಾನ್ ನಂತಹ ಚಿತ್ರ ನಿರ್ಮಾಣ ಮಾಡಿದ ಅಮೀನ್ ಖಾನ್ ಗೆ ಸಂಸ್ಕತಿ ನೆನಪಾಗುತ್ತಿಲ್ಲವೇಕೆ?

 ನಾವು ಬದುಕುತ್ತಿರುವ ವರ್ತಮಾನದ ಭಾರತದಲ್ಲಿ ಪರಿಸ್ಥಿತಿ ಮೊದಲಿನಂತೆ ಇಲ್ಲ ನಿಜ. ಧರ್ಮ ಮತ್ತು ಜಾತಿಗಳನ್ನು ಮತ ಬ್ಯಾಂಕ್ ರಾಜಕಾರಣ ಮಾಡಿಕೊಂಡಿರುವ ರಾಜಕೀಯ ಪಕ್ಷಗಳಲ್ಲಿ ಮೊದಲಿನ ಪಾರದರ್ಶಕತೆ, ಪ್ರಾಮಾಣಿಕತೆ ಉಳಿದಿಲ್ಲ. ಹಾಗಾಗಿ  ಪುಷ್ಪಾ ಭಾರ್ಗವರಂತಹ ವಿಜ್ಞಾನಿ ಮತ್ತು ದೇವನೂರು ಮಹಾದೇವ ರಂತಹ ಸೂಕ್ಷ್ಮ ಮನಸ್ಸಿನ ಬರºಗಾರರು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುವ ಸಂದರ್ಭಗಳಲ್ಲಿ ಆಡಿರುವ  ಎದೆಯಾಳದ ಮಾತುಗಳು  ಎಲ್ಲರ ಎದೆಗೆ ತಾಕಿವೆಇದರಿಂದಾಗಿ ಮೋದಿ ನೇತೃತ್ವದ ಸರ್ಕಾರಕ್ಕೆ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮುಜುಗರವಾಗಿದೆ. ಇಂತಹ ಅಹಿತಕರ ಘಟನೆಗಳಿಗೆ ಇತಿಶ್ರೀ ಹಾಡಬೇಕಾದವರು ಭಾರತೀಯ ನೆಲದ ಕಲಾವಿದರು, ಸಂಗೀತಗಾರರು ಮತ್ತು ಬರಹಗಾರರು ಮಾತ್ರ. ಸಮುದಾಯಗಳ ನಡುವೆ ಬಾಂಧವ್ಯದ ಬೆಸುಗೆಯಾಗಬಲ್ಲ, ಸಂಪರ್ಕ ಮತ್ತು ಸಂವಹನದ ಸೇತುವೆಯಾಗಬಲ್ಲ ತಾಕತ್ತು ಇವರಿಗಿದೆ. ಸಮಾಜದ ಎಲ್ಲಾ ವಿಕಾರಗಳಿಗೆ, ಕಾಯಿಲೆಗಳಿಗೆ  ಮದ್ದು ಮತ್ತು ವೈದ್ಯರಾಗಬೇಕಾದ ಅಮೀರ್ಖಾನ್, ಶಾರುಕ್ಖಾನ್ ರಂತಹ ಕಲಾವಿದರು ತಾವೇ ರೋಗಿಗಳಾದರೆ, ನೆಲದ ಸಂಸ್ಕøತಿಯ ಭವಿಷ್ಯವೇನು? ಒಲೆ ಹತ್ತಿ ಉರಿದೊಡೆ ನಿಲಬಹುದು, ಧರೆ ಹೊತ್ತಿ ಉರಿದೊಡೆ ನಿಲಬಹುದೆ

ಮಂಗಳವಾರ, ನವೆಂಬರ್ 24, 2015

ರಾಣಿ ಶಿವ ಶಂಕರ ಶರ್ಮರ " ಕೊನೆಯ ಬ್ರಾಹ್ಮಣ" ಕೃತಿ ಕುರಿತು...


ಹದಿನೈದು ವರ್ಷಗಳ ಹಿಂದೆ ತೆಲುಗು ಭಾಷೆಯಲ್ಲಿ ಪ್ರಕಟವಾದ “ ಕೊನೆಯ ಬ್ರಾಹ್ಮಣ’ ಎಂಬ ಹೆಸರಿನ ಈ ಆತ್ಮಕಥೆ ಈ ಕಾಲಘಟ್ಟದಲ್ಲಿ ಸಂಪ್ರದಾಯಸ್ಥ  ಮನೋಭಾವದ ಲೇಖಕರಿಗೂ ಹಾಗೂ ಬ್ರಾಹ್ಮಣರಿಗೂ ಜೀರ್ಣಿಸಿಕೊಳ್ಳುವುದು  ಇಂದಿಗೂ ಕಷ್ಟವಾಗಿದೆ ನಿಜ. ಏಕೆಂದರೆ,  ಇದು ಸಾಹಿತ್ಯ ಕೃತಿಯಾಗಿರದೆ,. ರಾಣಿ ಶಿವಶಂಕರ ಶರ್ಮ ಎಂಬ ಬ್ರಾಹ್ಮಣ ಕುಟುಂಬದಿಂದ ಲೇಖಕನೊಬ್ಬ ಅತ್ಯಂತ ನಿರ್ಭಾವುಕತೆಯಿಂದ  ತನ್ನ ಕುಟುಂಬದ ಸದಸ್ಯರುಗಳ ಕುರಿತಂತೆ  ಬರೆದ ಆತ್ಮಕಥೆಯಾಗಿದೆ. ಉತ್ತರ ಆಂದ್ರ ಪ್ರದೇಶದ ಗೋದಾವರಿ ಪ್ರಾಂತ್ಯದ ಕೊನಸೀಮ ಎಂಬ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧಿಯಾಗಿದ್ದ ಹಾಗೂ ವೇದಗಳ ಪಠಣ ಮತ್ತು ಯಜ್ಞ ಯಾಗದಿಯಲ್ಲಿ ಹೆಸರುವಾಸಿಯಾಗಿದ್ದ ಬ್ರಾಹ್ಮಣ ಕುಟುಂಬದಿಂದ ಬಂದವರಾದ ರಾಣಿ ಶಿವಶಂಕರ ಶರ್ಮರವರು   ತನ್ನ ತಂದೆಯವರ ಬ್ರಾಹ್ಮಣ್ಯ ಕುರಿತಾದ ನಂಬಿಕೆಗಳನ್ನು ಈ ಆತ್ಮಚರಿತ್ರೆಯ ನೆಪದಲ್ಲಿ ದಾಖಲಿಸಿದ್ದಾರೆ. ಜೊತೆಗೆ, ಭಾರತದ ಸನಾತನ ಬ್ರಾಹ್ಮಣ ಧರ್ಮದ ಆಚರಣೆಗಳು ಹಾಗೂ ಸಂಸ್ಕೃತಿಗಳನ್ನಲ್ಲದೆ,  ಬ್ರಾಹ್ಮಣ ಜಾತಿ ಮತ್ತು ಬ್ರಾಹ್ಮಣ್ಯದ ಪದ್ಧತಿಯಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದ್ದಾರೆ. ಜೊತೆಗೆ  ಭಾರತದ ಹಿಂದೂ, ಇಸ್ಲಾಂ, ಹಾಗೂ ಕ್ರೈಸ್ತ ದರ್ಮಗಳಲ್ಲಾದ  ಪಲ್ಲಟಗಳನ್ನೂ ಸಹ ನಮ್ಮ ಮುಂದೆ ಇತಿಹಾಸದ ದಾಖಲೆಗಳ ಸಮೇತ ಮುಂದಿಡುತ್ತಾರೆ.

ರಾಣಿ ಶಿವ ಶಂಕರ ಶರ್ಮ ಇದೀಗ ಗುಂಟೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ತೆಲುಗು ಭಾಷೆಯ ಶಿಕ್ಷಕರಾಗಿದ್ದು, ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಪಡೆದವರಾಗಿದ್ದಾರೆ. ಎಡಪಂಥೀಯ ಚಿಂತನೆಗಳನ್ನು ಮೈಗುಡಿಸಿಕೊಂಡಿರುವ ಶರ್ಮರವರು ತೆಲುಗು ಭಾಷೆಯಲ್ಲಿ ನಕ್ಸಲ್ ಚಳುವಳಿಯ ಕಥೆಯನ್ನು ಒಳಗೊಂಡಿರುವ ಗುಹಾಂತರ್ ವಾಸಿ: ಎಂಬ ಕಾದಂಬರಿಯನ್ನು ಸಹ ರಚಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಂಗ್ಲೀಷ್ ಭಾಷೆಯಲ್ಲಿ ಬಂದ ಅವರ ಈ ಕೃತಿಯನ್ನು ಓದಿ, ನನ್ನ ಮಿತ್ರ, ಕಲಾವಿದ ಬರಹಗಾರ ಸೃಜನ್ ಮೂಲಕ ಅವರನ್ನು ಸಂಪರ್ಕಿಸಿ ಅಭಿನಂದಿಸಿದ್ದೆ. ಅಂದಿನಿಂದ ಆತ್ಮೀಯ ಮಿತ್ರರಾಗಿರುವ  ಶರ್ಮಾ ಜೊತೆ ಮೂರು ದಿನಗಳ ಹಿಂದೆ  ದೂರವಾಣಿಯಲ್ಲಿ ಮಾತನಾಡುತ್ತಾ,  “ಅತ್ಯಂತ ಮೆದು ಮಾತಿನ, ತಣ್ಣನೆಯ ಮನಸ್ಸು ಹಾಗೂ ವ್ಯೆಕ್ತಿತ್ವದ ನಿಮ್ಮೊಳಗೆ ಇಂತಹ ಕ್ರಾಂತಿಕಾರಿ ಹೇಗೆ ಹುಟ್ಟಿಕೊಂಡ? “ ಎಂದು ನಾನು ಪ್ರಶ್ನಿಸಿದಾಗ,  ಅವರು ಬಾಯ್ತಂಬಾ ನಕ್ಕರು. ಕೊನೆಯ ಬ್ರಾಹ್ಮಣ ಕೃತಿ ನನಗೆ ತೆಲುಗು ಭಾಷೆಗಿಂತ ಇಂಗ್ಲೀಷ್ ಭಾಷೆಯಲ್ಲಿ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು ಎಂದರು.  ಜೊತೆಗೆ ನಿಮ್ಮಂತಹ ಅನೇಕ ಗೆಳೆಯರನ್ನು ಸಂಪಾದಿಸಿಕೊಟ್ಟಿತು ಎನ್ನುವ ಶರ್ಮರವರು ಈ ಕೃತಿಯು ಪ್ರಸಿದ್ಧ ಸಮಾಜ ವಿಜ್ಞಾನಿ ಹಾಗೂ ಚಿಂತಕ ಆಶೀಷ್ ನಂದಿಯವರಿಂದ ಹಿಡಿದು ಅನೇಕ ಭಾರತೀಯ ಲೇಖಕರ ಮೆಚ್ಚುಗೆ ಪಡೆದಿದೆ ಅದು ನನ್ನ ಪಾಲಿಗೆ ವಿಶೇಷವಾದ ಪ್ರಶಸ್ತಿ ಎಂದರು.
ಸಂಪ್ರಾದಾಯ ನಿಷ್ಟ ಬ್ರಾಹ್ಮಣ ಕುಟುಂಬದಿಂದ ಬಂದ  ಲೇಖಕರ ತಂದೆ, ರಾಣಿ ನರಸಿಂಹ ಶಾಸ್ತ್ರಿಗಳು ತಮ್ಮ ಸಾವಿನ ಕೊನೆಯ ದಿನಗಳಲ್ಲಿ ಎದುರಿಸಿದ ಬಿಕ್ಕಟ್ಟು, ಬ್ರಾಹ್ಮಣ್ಯದ  ಬಗೆಗಿನ ಅಚಲ ನಿಷ್ಠೆ,  ಜಿಜ್ಞಾಸೆ ಮತ್ತು ಬ್ರಾಹ್ಮಣ ದರ್ಶನ ಕುರಿತಂತೆ ಅವರಿಗೆ ಇರುವ ಒಳನೋಟ  ಎಲ್ಲವೂ ಈ ಕೃತಿಯಲ್ಲಿ ಸಂವಾದದ ರೂಪದಲ್ಲಿ ದಾಖಲಾಗಿವೆ.   ತಮ್ಮ ಇಬ್ಬರೂ ಪುತ್ರರು ಧರ್ಮ ಭ್ರಷ್ಟರು ಮತ್ತು ಜಾತಿ ಭ್ರಷ್ಟರಾದ ಕಾರಣ ತಮ್ಮ ಅಂತಿಮ ಸಂಸ್ಕಾರವನ್ನು ಅವರು ಮಾಡಬಾರದು ಎಂಬ ಕಠೋರ ನಿಲುವ ತಾಳುವ  ರಾಣಿ ನರಸಿಂಹ ಶಾಸ್ತ್ರಿಗಳು ಪುತ್ರರಿಂದ ಅಂತ್ಯ ಸಂಸ್ಕಾರ ಮತ್ತು ಶಾದ್ಧದಂತಹ ಕ್ರಿಯೆಗಳು ನೆರವೇರದಿದ್ದರೆ ತನಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂಬ ಚಿಂತೆಯೆಂಬ ಚಿತೆಗೆ ಬೀಳುತ್ತಾರೆ. ಶಾಸ್ತ್ರಿಗಳ ಹಿರಿಯ ಪುತ್ರ ತತ್ವಶಾಸ್ತ್ರಕ್ಕೆ ಮಾರು ಹೋಗಿ ಚೆನ್ನೈ ನಗರದ ಮಠವೊಂದರಲ್ಲಿ ದೀಕ್ಷೆ ಪಡೆದು ಸ್ವಾಮೀಜಿಯಾಗಿ ಪರಿವರ್ತನೆ ಹೊಂದಿರುತ್ತಾರೆ. ಎರಡನೇಯ ಪುತ್ರ ( ಈ ಕೃತಿಯ ಲೇಖಕ) ಎಡಪಂಥೀಯ ಚಿಂತನೆಗಳಿಂದ ಪ್ರಭಾವಿತಗೊಂಡು ದೇವರು, ಧರ್ಮಗಳನ್ನು ನಂಬದ ನಿರೀಶ್ವರವಾದಿಯಾಗಿದ್ದಾರೆ. ಇಂತಹ ಸಂಕಟಗಳ ನಡುವೆ ಸಾವಿನ ಹೊಸ್ತಿಲಲ್ಲಿ ತಲೆ ಇಟ್ಟು ಮಲಗಿರುವ ಶಾಸ್ತ್ರಗಳ ಮನಸ್ಸಿನೊಳಗಿನ ನಡೆಯುವ  ತಾಕಲಾಟ ಈ ಕೃತಿಯಲ್ಲಿ ನಮಗೆ ಬ್ರಾಹ್ಮಣ ದರ್ಶನದ ಅನೇಕ ಮಗ್ಗಲುಗಳನ್ನು ಪರಿಚಯಿಸುತ್ತದೆ. ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಎಲ್ಲವೂ ಒಂದೇ ಎಂದು ನಂಬಿಕೊಂಡಿದ್ದ ನನ್ನಂತಹ ಅನೇಕ ಬ್ರಾಹ್ಮಣೇತರರಿಗೆ ಹಲವು ಅಚ್ಚರಿಯ ಸಂಗತಿಗಳು ಈ ಕೃತಿಯಲ್ಲಿ ತೆರೆದು ಕೊಳ್ಳುತ್ತವೆ. ಗುಡಿ ಕಟ್ಟುವುದು ಅಥವಾ ಪೂಜೆ ಮಾಡುವುದು ಬ್ರಾಹ್ಮಣರ ಕರ್ತವ್ಯವಲ್ಲ ಎಂದು ಪ್ರತಿ ಪಾದಿಸುವ ಶಾಸ್ತ್ರಿಗಳು ಎಂದೂ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಹಾಗೂ ತೆಂಗಿನ ಕಾಯಿ ಹೊಡೆಯದ ವಿವರಗಳನ್ನು ಅವರ ಪುತ್ರ ಶರ್ಮ ಇಲ್ಲಿ  ದಾಖಲಿಸಿದ್ದಾರೆ. ಇದರ ಜೊತೆಗೆ ದಕ್ಷಿಣ ಭಾರತದಲ್ಲಿ ಗುಡಿ ಗೋಪುರಗಳು ಹದಿನೇಳನೆಯ ಶತಮಾನದ ಬ್ರಿಟೀಷರ ಆಳ್ವಿಕೆಯಲ್ಲಿ ಹೇಗೆ ಶೂದ್ರರ ಕೈಯಿಂದ ಜಾರಿ ಬ್ರಾಹ್ಮಣ ಸಮುದಾಯದ ಪಾಲಾದವು ಎಂಬುದನ್ನು ಸಾಕ್ಷಾಧಾರಗಳ ಸಮೇತ ವಿವರಿಸಿದ್ದಾರೆ. ಇನ್ನೊಂದು ಆಸಕ್ತಕರ ಸಂಗತಿಯೆಂದರೆ, ತಮಿಳುನಾಡಿನ ಶೈವ ಬ್ರಾಹ್ಮಣರು ಭಗವದ್ಗೀತೆಯನ್ನು ಓದುವುದನ್ನು ನಿರಾಕರಿಸಿದ ಘಟನಾವಳಿಗಳನ್ನು ಸಹ ದಾಖಲಿಸಿದ್ದಾರೆ.

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಹನ್ನೊಂದನೆಯ ಶತಮಾನದ ಕಾಶ್ಮೀರದಲ್ಲಿ ಹಿಂದೂ ದೇವಾಲಯಗಳ ವಿಗ್ರಹಗಳ ಅಡಿಯಲ್ಲಿ ಶೇಖರಿಸಿ ಇಡಲಾಗುತ್ತಿದ್ದ ಸಂಪತ್ತುಗಳನ್ನು ಕೊಳ್ಳೆ ಹೊಡೆಯಲು ಅನೇಕ ಹಿಂದು ಮಹಾರಾಜ, ರಾಜ ಹರ್ಷ ಎಂಬುವನು ದೇವೊತ್ಪತ ಎಂಬ ಹುದ್ದೆಯನ್ನು ಸೃಷ್ಟಿಸಿ, ಅದಕ್ಕೆ ಒಬ್ಬ ಸೈನಾಧಿಕಾರಿಯನ್ನು ನೇಮಕ ಮಾಡಿದ್ದ ವಿವರವೂ ಸಹ ಈ ಕೃತಿಯಲ್ಲಿದೆ. ಬ್ರಾಹ್ಮಣ ಸ್ತ್ರೀಯರನ್ನು ಶೂದ್ರರಂತೆ ನಡೆಸಿಕೊಳ್ಳಲು ಇರುವ ಕಾರಣಗಳಿಂದ ಹಿಡಿದು, ಲೇಖಕರ ಭಾವ ಪೂಜೆಯ ನೆಪದಲ್ಲಿ ಮದ್ಯ ಮತ್ತು ಮಾಂಸವನ್ನು ಸೇವನೆ ಮಾಡುತ್ತಿದ್ದ ಘಟನೆಯನ್ನು ಹಾಗೂ ಅದನ್ನು ಶಾಸ್ತ್ರಗಳ ಮೂಲಕ ಸಮರ್ಥಿಸಿಕೊಳ್ಳುವ ಬಗೆಯನ್ನು  ಲೇಖಕರು ಯಾವುದೇ ಮುಚ್ಚು ಮರೆಯಿಲ್ಲದೆ ಬರೆದುಕೊಂಡಿದ್ದಾರೆ.
ರಾಜಮಂಡ್ರಿ ನಗರದಲ್ಲಿ ವಿದ್ಯೆಯ ಸಂದರ್ಭದಲ್ಲಿ ತಲೆಯ ಮೇಲೆ ಜುಟ್ಟು ಬಿಟ್ಟುಕೊಂಡು ಬ್ರಾಹ್ಮಣ ಬಾಲಕನಾಗಿ ಅನುಭವಿಸಿದ ಅಪಮಾನಗಳು, ನಂತರದ ದಿನಗಳಲ್ಲಿ ವಿಶೇಷವಾಗಿ ಹರೆಯದ ದಿನಗಳ ತಾಕಲಾಟ ಇವುಗಳನ್ನು ಅತ್ಯಂತ ನಿರ್ಭಾವುಕರಾಗಿ ದಾಖಲಿಸುವ ಲೇಖಕರಿಗೆ, ಆದುನಿಕ ಹಾಗೂ ವರ್ತಮಾನದ ಜಗತ್ತು ನನ್ನದಲ್ಲ ಎಂದು ಭಾವಿಸುವ ಅವರ ತಂದೆ ಕೊನೆಯ ಬ್ರಾಹ್ಮಣ ಎಂದು ಕರೆದಿರುವುದು ಸೂಕ್ತವಾಗಿದೆ.
 ತಾವು ನಂಬಿದ ತತ್ವ ಮತ್ತು ಸಿದ್ಧಾಂತಗಳಿಗೆ ತಿಲಾಂಜಲಿ ನೀಡಲು ನಿರಾಕರಿಸುವ ಲೇಖಕರು ಕೊನೆಗೂ ಅವರ ತಂದೆ ರಾಣಿ ನರಸಿಂಹ ಶಾಸ್ತ್ರಿಗಳ ಅಂತ್ಯ ಕ್ರಿಯೆಯನ್ನು ಸಂಪ್ರದಾಯದಂತೆ ನಡೆಸಲು ನಿರಾಕರಿಸುತ್ತಾರೆ. ಅವರ ತಂದೆಯ ವ್ಯೆಕ್ತಿತ್ವ ನಮಗೆ ಅನಂತ ಮೂರ್ತಿಯವರ ಸಂಸ್ಕಾರದ ಪ್ರಾಣೇಶಚಾರ್ಯರನ್ನು ನೆನಪಿಸುತ್ತದೆ. ಮಂಚದ ಮೇಲೆ ಮಲಗಿದ್ದ ಶಾಸ್ತ್ರಿಯವರು ತಮ್ಮ ಪತ್ನಿಯನ್ನು ಕರೆದು ಕೊನೆಯ ಕ್ಷಣಗಳಲ್ಲಿ ನೆಲದ ಮೇಲೆ ಮಲಗಿ ಪ್ರಾಣ ಬಿಡುತ್ತಾರೆ. ಏಕೆಂದರೆ, ಅವರ ದೃಷ್ಟಿಯಲ್ಲಿ  ನಿಜವಾದ ಬ್ರಾಹ್ಮಣನಿಗೆ ಮಂಚದ ಮೇಲೆ ಸಾವು ನಿಷಿದ್ಧ. ತಾವು ಸಾಯುವ ಮುನ್ನ ತಮ್ಮ ಪತ್ನಿಗೆ  ನೀನು ಕೇಶ ಮುಂಡನ ಮಾಡಿಸಿಕೊಳ್ಳಬೇಕೆಂದು ವಾಗ್ದಾನ ಪಡೆದು ಶಾಸ್ತ್ರಿಯವರು ಪ್ರಾಣ ಬಿಡುತ್ತಾರೆ.
ರಾಣಿ ಶಿವಶಂಕರ ಶರ್ಮ ತಮ್ಮ ಈ ಕೃತಿಯ ಕೊನೆಯ ಸಾಲುಗಳನ್ನು ಈ ರೀತಿ ದಾಖಲಿಸಿದ್ದಾರೆ.
“ನಮ್ಮ ದೊಡ್ಡಪ್ಪನವರ ಜೇಷ್ಠ ಪುತ್ರ ರಾಣಿ ಅಣ್ಣಯ್ಯ ನಮ್ಮ ತಂದೆಯವರ ಕರ್ಮಗಳನ್ನು ಮಾಡಿದ. ಅವನು ಸನಾತನ ಧರ್ಮವನ್ನು ತಪ್ಪದ ಅನಕ್ಷರಸ್ತ.
ಹೈದರಾಬಾದಿನಲ್ಲಿ ಕೆಮಿಸ್ಟ್ ಆಗಿ ಕೆಲಸಮಾಡುತ್ತಿರುವ ನಮ್ಮ ಬಾಬಯ್ಯನವರ ಮಗ ಕೊಂಡ, ನಮ್ಮಣ್ಣ ತತ್ವವಿದಾನಂದ ಸರಸ್ವತಿ ಸ್ವಾಮಿಗಳ ಕಡೆಯಿಂದ ಸಂದೇಶ ತೆಗೆದುಕೊಂಡು ಬಂದ. ಪಿತೃ ಕರ್ಮಗಳನ್ನು ನಿರ್ವಹಿಸುವಂತೆ ನನಗೆ ಮತ್ತು ಕೂದಲು ತೆಗೆಸಿಕೊಳ್ಳಬೇಡವೆಂದು ನಮ್ಮಮ್ಮನಿಗೆ ನಮ್ಮಣ್ಣ ಸಂದೇಶವಿತ್ತಿದ್ದ.
ಕೂದಲು ತೆಗೆಸಿಕೊಳ್ಳಬೇಡವೆಂದ ಅಣ್ಣನ ಮಾತನ್ನು ನಾನು ಅಮ್ಮನಿಗೆ ಹೇಳಿದೆ. ವೇದ ಪಂಡಿತರು ಅಬ್ಬಾಯಿ ದೊಡ್ಡಪ್ಪ ಹೋದಾಗ ದೊಡ್ಡಮ್ಮ ಮುಂಡನ ಮಾಡಿಸಿಕೊಂಡಿರಲಿಲ್ಲವೆಂದು ನೆನಪು ಮಾಡಿದೆ.ಅಮ್ಮ ಒಪ್ಪಲಿಲ್ಲ. “ ಅವರು (ಅಪ್ಪ) ಇಡೀ ದೇಶಕ್ಕೆ ದೊಡ್ಡ  ಮಹಾ ಪಂಡಿತರು; ಆದ್ದರಿಂದ ನಾನು ಧರ್ಮ ತಪ್ಪುವುದು ಸರಿಯಲ್ಲ ಎಂದಳು,”


ಈ ಅಪರೂಪದ ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟವಾಗಿದ್ದು, ಯುವ ಪ್ರತಿಭಾವಂತ ಕವಿ ಹಾಗೂ ಲೇಖಕ ಆನಂದ ಲಕ್ಕೂರ್ ನೇರ ತೆಲುಗು ಭಾಷೆಯಿಂದ ಕನ್ನಕ್ಕೆ ಅತ್ಯಂತ ಪ್ರಭುದ್ಧ ಭಾಷೆಯಲ್ಲಿ ಸಮರ್ಥವಾಗಿ ಅನುವಾದ ಮಾಡಿದ್ದಾರೆ. ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಬಂದ ಎರಡು ಅತ್ಯುತ್ತಮ ಆತ್ಮ ಕಥೆಗಳೆಂದರೆ, ಒಂದು ಕೊನೆಯ ಬ್ರಾಹ್ಮಣ ಮತ್ತು ಇನ್ನೊಂದು ಸೃಜನ್ ಅನುವಾದ ಮಾಡಿರುವ “ ಕರಿ ಮೆಣಸಿನ ಗಿಡ” ಎಂಬ ದಲಿತ ಆತ್ಮ ಕಥನ.ಈ ಇಬ್ಬರು ಯುವ ಲೇಖಕರಿಂದ ನಾವು ಇನ್ನಷ್ಟು ತೆಲುಗು ಭಾಷೆಯ ಸಮೃದ್ಧವಾದ ಸಾಹಿತ್ಯವನ್ನು ನಿರೀಕ್ಷಿಸಬಹುದು.

ಬುಧವಾರ, ನವೆಂಬರ್ 18, 2015

ಗಾಂಧಿ ಮತ್ತು ಶ್ರೀ ಗಂಧದ ಕಟ್ಟಿಗೆ

ಹಾತ್ಮ ಗಾಂಧೀಜಿಯವರ ಬದುಕಿನಲ್ಲಿ ಸೆರೆಮನೆಗಳ ವಾಸ ಎಂಬುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. 1915 ರಲ್ಲಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ತಾವು ಅನುಭವಿಸಿದ ಸೆರೆಮನೆಯ ವಾಸವನ್ನು ಲೆಕ್ಕವಿಟ್ಟಿರಲಿಲ್ಲ.. 1930 ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು ತನ್ನ ಪರಿಣಾಮಕಾರಿ ವರದಿಯ ಮೂಲಕ ಜಗತ್ತಿಗೆ ತಲುಪಿಸಿದ್ದ ಅಮೇರಿಕಾದ ಪತ್ರಕರ್ತ ವೆಬ್ ಮಿಲ್ಲರ್ 1931 ರಲ್ಲಿ ಲಂಡನ್ ನಗರದಲ್ಲಿ ಗಾಂಧೀಜಿಯವರನ್ನು ಸಂದರ್ಶನ ಮಾಡುವಾಗ, " ಎಷ್ಟು ವರ್ಷಗಳ ಕಾಲ ನೀವು ಜೈಲಿನಲ್ಲಿದ್ದರಿ? ಅಲ್ಲಿನ ವಾಸ ಹೇಗಿತ್ತು? " ಎಂಬ ಪ್ರಶ್ನೆಗೆ ಗಾಂಧೀಜಿಯವರು " ನಾನು ಎಷ್ಟು ಬಾರಿ ಜೈಲಿಗೆ ಎಂಬುದರ ಬಗ್ಗೆಯಾಗಲಿ, ದಿನಗಳ ಬಗ್ಗೆಯಾಗಲಿ ಲೆಕ್ಕವಿಟ್ಟವನಲ್ಲ. ಆದರೆ, ಜೈಲು ವಾಸವು ನನಗೆ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತು. ಜೊತೆಗೆ ಅನೇಕ ಕೃತಿಗಳನ್ನು ಮತ್ತು ಲೇಖನಗಳನ್ನು ಬರೆಯಲು ಸಹಕಾರಿಯಾಯಿತು. ನಾನು ಜೈಲಿನಲ್ಲಿ ಇದ್ದಷ್ಟು ದಿನಗಳ ಕಾಲ ಬ್ರಿಟೀಷ್ ಅಧಿಕಾರಿಗಳು ನನ್ನನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ನಡೆಸಿಕೊಂಡರು" ಎಂದು ಉತ್ತರಿಸಿದ್ದರು. 1942 ರಲ್ಲಿ ನಡೆದ ಚಲೆಜಾವ್ ಅಥವಾ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಾಂಬೆ ನಗರದಲ್ಲಿ  1942 ರ ಪೆಬ್ರವರಿ 9 ರಂದು ಬಂಧನಕ್ಕೆ ಒಳಗಾದ ಗಾಂಧಿ, ಕಸ್ತೂರಬಾ. ಮಹಾದೇವ ದೇಸಾಯಿ, ಮೀರಾ ಬೆಹನ್, ಸರೋಜಿನಿ ನಾಯ್ಡು  ಹಾಗೂ ಇನ್ನಿತರೆ ಕಾರ್ಯಕರ್ತರನ್ನು ಬ್ರಿಟೀಷ್ ಸರ್ಕಾರ ಪುಣೆ ನಗರಕ್ಕೆ ಸ್ಥಳಾಂತರಿಸಿ, ಯರವಾಡ ಜೈಲಿನ ಸಮೀಪವಿದ್ದ ಆಗಾ ಖಾನ್ ಅರಮನೆಯಲ್ಲಿ ಗೃಹ ಬಂಧನದಲ್ಲಿರಿಸಿತು.


ಆಗಖಾನ್ ಅರಮನೆಯ ಗೃಹಬಂಧನ ಗಾಂಧೀಜಿಯವರ ಪಾಲಿಗೆ ಮರೆಯಲಾರದ ಅನುಭವವಾಯಿತು. ಏಕೆಂದರೇ, ಅದೇ ಅರಮನೆಯಲ್ಲಿ ಗಾಂಧೀಜಿ ಪಾಲಿಗೆ ಆಪ್ತ ಕಾರ್ಯದರ್ಶಿಯಾಗಿದ್ದುಕೊಂಡು,ಅವರ ಆತ್ಮದಂತಿದ್ದ ಮಹಾದೇವ ದೇಸಾಯಿ 1942 ರ ಆಗಸ್ಟ್  15 ರಂದು ಹೃದಯಾಘಾತದಿಂದ ನಿಧನ ಹೊಂದಿದರು. “ ಶಿಷ್ಯನ ರೂಪದಲ್ಲಿದ್ದ ನನ್ನ ಗುರು” ಎಂದು ಬಣ್ಣಿಸಿದ ಗಾಂಧೀಜಿಯವರು, ಮಹಾದೇವ ದೇಸಾಯಿಯವರ ಅಂತ್ಯ ಕ್ರಿಯೆಯನ್ನು ಅರಮನೆಯ ಹಿಂಭಾಗ ನೆರವೇರಿಸಿ, ಅವರ ನೆನಪಿಗಾಗಿ ಸಮಾಧಿಯನ್ನು ನಿರ್ಮಿಸಿ, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಹೋಗಿ ಅಲ್ಲಿ ಗೌರವ ಸಲ್ಲಿಸಿ ಬರುತ್ತಿದ್ದರು.
ಅದೇ ಅರಮನೆಯಲ್ಲಿ 1944 ಪೆಬ್ರವರಿ 22 ರಂದು ಗಾಂಧೀಜಿಯವರ ಅರ್ಧಾಂಗಿ ಕಸ್ತೂರ ಬಾ ರವರು ಅದೇ ಅರಮನೆಯ ಕೊಠಡಿಯಲ್ಲಿ ಗಾಂಧೀಜಿಯವರ ಜೊತೆ ಗೃಹಬಂಧನದಲ್ಲಿದ್ದಾಗ  ನಿಧನ ಹೊಂದಿದರು.  ತಮ್ಮ ತೊಡೆಯ ಮೇಲೆ ಕಸ್ತೂರಬಾ ಅವರ ತಲೆಯನ್ನಿಟ್ಟುಕೊಂಡು ಇಡೀ ರಾತ್ರಿ ರೋಧಿಸಿದ ಗಾಂಧೀಜಿಯವರು, ಬ್ರಿಟೀಷ್  ಅಧಿಕಾರಿಗಳ ಮನವಿಯ ಮೇರೆಗೆ  ಬೆಳಗಿನ ಜಾವ ಅರಮನೆಯ ಮುಂದೆ ನೆರದಿದ್ದ ಜನಸ್ತೋಮವನ್ನು ನಿಯಂತ್ರಿಸಲು ಕೊಠಡಿಯಿಂದ ಹೊರಬಂದರು.
ಅಂತ್ಯಕ್ರಿಯೆಯನ್ನು ಹೇಗೆ ಮಾಡಬೇಕೆಂದು ಬ್ರಿಟಿಷ್ ಜೈಲು ಅಧಿಕಾರಿಗಳು ಗಾಂಧೀಜಿಯವರ ಸಲಹೆ ಕೇಳಿದಾಗ, ಗಾಂಧೀಜಿಯವರು ಅತ್ಯಂತ ಸರಳವಾಗಿ ಅರಮನೆಯ ಹಿಂಭಾಗ ನೆರವೇರಿಸೋಣ ಎಂದು ಸಲಹೆ ನೀಡಿದರು. ಜೊತೆಗೆ ಪುಣೆ ನಗರದಿಂದ ಸಾಧಾರಣ ಕಟ್ಟಿಗೆಯನ್ನು ತರಲು ಸೂಚಿಸಿದರು. ಈ ಸಂದರ್ಭದಲ್ಲಿ ಜೈಲು ಅಧಿಕಾರಿಯೊಬ್ಬ, “ ಬಾಪೂಜಿ ನೀವು ಅನುಮತಿ ನೀಡಿದರೆ ಗಂಧದ ಕಟ್ಟಿಗೆಯಲ್ಲಿ ಕಸ್ತೂರಬಾ ರವರ ಅಂತ್ಯ ಸಂಸ್ಕಾರ ನೆರವೇರಿಸಬಹುದು” ಎಂಬ ಸಲಹೆ ಕೊಟ್ಟ. ಈಗ ಗಂಧದ ಕಟ್ಟಿಗೆ ಎಲ್ಲಿಂದ ತರುತ್ತೀರಿ? ಗಾಂಧೀಜಿ ಪ್ರಶ್ನಿಸಿದಾಗ, ಜೈಲು ಅಧಿಕಾರಿ ತೀರಾ ಸಂಕೋಚದಿಂದ ಹಾಗೂ ತಣ್ಣನೆಯ ಧ್ವನಿಯಲ್ಲಿ “ ಬಾಪು ನೀವು ಪೂನಾ ಒಪ್ಪಂಧ ಕುರಿತಂತೆ ಉಪವಾಸ ಸತ್ಯಾಗ್ರಹ ಕುಳಿತಾಗ, ನೀವು ಬದುಕುವುದು ಖಾತ್ರಿಯಿಲ್ಲ ಎಂದು ನಿರ್ಧರಿಸಿ, ಸರ್ಕಾರ ನಿಮ್ಮ ಅಂತ್ಯಕ್ರಿಯೆಗಾಗಿ 1800 ಕೆ.ಜಿ. ಗಂಧದ ಕಟ್ಟಿಗೆಯನ್ನು ಶೇಖರಿಸಿ ಇಡಲಾಗಿತ್ತು.  ಈಗ  ಅದು ಪುಣೆಯ ಯರವಾಡ ಜೈಲಿನಲ್ಲಿದೆ” ಎಂದು ಉತ್ತರಿಸಿದ.
ಗಾಂಧೀಜಿಯ ಮುಖದ ಮೇಲೆ ಸಣ್ಣನೆಯ ನಗುವೊಂದು ಮೋಡದಂತೆ ಕ್ಷಣಾರ್ಧದಲ್ಲಿ ತೇಲಿ ಹೋಯಿತು. “ ಓ ಹಾಗಾದ್ರೆ ಅದು ನನ್ನ ಆಸ್ತಿ. ನನ್ನ ಮಡದಿಯ ಅಂತ್ಯ ಸಂಸ್ಕಾರಕ್ಕೆ ಬಳಸಬಹುದು” ಎಂದರು. ಅವರ ಅನುಮತಿಯಂತೆ ಅರಮನೆಯ ಹಿಂಭಾಗ ನೆರವೇರಿದ ಅಂತ್ಯಕ್ರಿಯೆಯಲ್ಲಿ ಕಿರಿಯ ಪುತ್ರ ದೇವದಾಸ್ ಗಾಂಧಿ ಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ, ಸನೀಹದಲ್ಲಿ ನಿಂತಿದ್ದ ಗಾಂಧೀಯವರು ಏಳುತ್ತಿದ್ದ ಬೆಂಕಿಯ ಜ್ವಾಲೆಯನ್ನು ನೋಡುತ್ತಾ, “ಈ ದಿನ ನನ್ನ ದೇಹದ  ಅರ್ಧ ಭಾಗ ಸುಟ್ಟಿ ಹೋಯಿತು” ಎಂದು ಸ್ವಗತದ ಧ್ವನಿಯಲ್ಲಿ ಮಾತನಾಡಿಕೊಂಡರು.

ತನ್ನದೊಂದು ಮನೆ, ತನ್ನದೊಂದು ಊರು, ತನ್ನ ಕುಟುಂಬ ಎಂಬ ಮಮಕಾರವಿಲ್ಲದೆ, ಇಡೀ ದೇಶವನ್ನು ಕುಟುಂಬ ಮಾಡಿಕೊಂಡು ಭಾರತವನ್ನು ಸುತ್ತಿದ ಗಾಂಧೀಜಿಯವರಿಗೆ ನಿಂತ ನೆಲವೇ ಮನೆಯಾಯಿತು. ಊರಾಯಿತು.ಇಪ್ಪತ್ತನೆಯ ಶತಮಾನದ ಭಾರತದ ರಾಜಕೀಯ ನಾಯಕ ಯಾರೆಂದು ನೀವು ಕೇಳಿದರೆ, ನನ್ನಲ್ಲಿ ಉತ್ತರವಿಲ್ಲ. ಆದರೆ, ದುರಂತ ನಾಯಕ ಯಾರೆಂದು ಕೇಳಿದರೆ, ನನ್ನ ಉತ್ತರ ಗಾಂಧೀಜಿ ಎಂಬುದಾಗಿರುತ್ತದೆ.
ಗಾಂಧೀಜಿಯವರ ಪರಮಾಪ್ತ ಹಾಗೂ ಪ್ರಖರ ವೈಚಾರಿಕತೆಯ ಶಿಷ್ಯ ಜೆ.ಬಿ. ಕೃಪಾಲನಿಯವರು ತಮ್ಮ ಮಹತ್ವದ ಕೃತಿಯಾದ “ Gandhi – His Life and Thougt” ಪುಸ್ತಕದಲ್ಲಿ ಅವರೊಂದಿಗಿನ ಒಡನಾಟದಲ್ಲಿ ತಾವು ಕಂಡುಕೊಂಡ ಗಾಂಧಿ ವ್ಯೆಕ್ತಿತ್ವವನ್ನು ಹೀಗೆ ದಾಖಲಿಸಿದ್ದಾರೆ.
“ ನನ್ನ ಬದುಕಿನಲ್ಲಿ ಆ ಮಹಾತ್ಮನ ಒಡನಾಟದ ದಿನಗಳು ಹಾಗೂ ನನ್ನ ಮೇಲಾದ ಪ್ರಭಾವಗಳು ಸದಾ ಹಸಿರಾಗಿವೆ. ಗಾಂಧಿಯೆಂದರೆ, ಕೇವಲ ಒಂದು ವ್ಯೆಕ್ತಿ ಅಥವಾ ವ್ಯೆಕ್ತಿತ್ವ ಮಾತ್ರವಲ್ಲ, ಅದೊಂದು ಅತೀತವಾದ ಶಕ್ತಿ. ಯಾವ ಕ್ಷಣದಲ್ಲಾರೂ ಅನ್ಯಾಯ ಮತ್ತು ಅಸತ್ಯಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ. ಸದಾ ಸತ್ಯ ಮತ್ತು ಪ್ರಾಮಾಣಿಕತೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಬಹು ದೊಡ್ಡ ವ್ಯೆಕ್ತಿತ್ವ ಅವರದು. ತನ್ನನ್ನು ನಂಬಿದವರ ಅಥವಾ ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ಎಂದೂ ಹಿಂಜರಿಯದ ವ್ಯೆಕ್ತಿತ್ವ ಅವರದಾಗಿತ್ತು. ಅವರು ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂಬ ಹಠಮಾರಿತನವಾಗಲಿ, ಜಿಗುಟುತನದ ಗುಣಗಳಾಗಲಿ ಅವರಲ್ಲಿ ಇರಲಿಲ್ಲ. ಅವರು ನಂಬಿದ್ದ ಅಹಿಂಸಾ ತತ್ವ ನನ್ನ ದೃಷ್ಟಿಯಲ್ಲಿ ನಕರಾತ್ಮಕ ಧೋರಣೆ ಎನಿಸಲಿಲ್ಲ. ಅವರು ಬಡವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು, ಅವರಂತೆ ಸರಳವಾಗಿ ಬದುಕಲು ಇಚ್ಛಿಸುತಿದ್ದರು. ಅವರ ಈ ನಡುವಳಿಕೆಯಲ್ಲಿ ಬಡವರನ್ನು ಬಡವರಾಗಿ ಉಳಿಸುವ ಆಲೋಚನೆಗಳಿಗಿಂತ ಅವರೊಳಗೆ ಆತ್ಮವಿಶ್ವಾಸ ತುಂಬುವ ಕಾರ್ಯವಿಧಾನ ಎದ್ದು ಕಾಣುತ್ತಿತ್ತು”
ಇದಕ್ಕಿಂತ ಪರಿಣಾಮಕಾರಿಯಾಗಿ ಗಾಂಧೀಯವರನ್ನು ಬಣ್ನಿಸಲು ನನ್ನಲ್ಲಿ ಶಬ್ಧಗಳಿಲ್ಲ. ಕ್ಷಮಿಸಿ.