ಮಂಗಳವಾರ, ನವೆಂಬರ್ 24, 2015

ರಾಣಿ ಶಿವ ಶಂಕರ ಶರ್ಮರ " ಕೊನೆಯ ಬ್ರಾಹ್ಮಣ" ಕೃತಿ ಕುರಿತು...


ಹದಿನೈದು ವರ್ಷಗಳ ಹಿಂದೆ ತೆಲುಗು ಭಾಷೆಯಲ್ಲಿ ಪ್ರಕಟವಾದ “ ಕೊನೆಯ ಬ್ರಾಹ್ಮಣ’ ಎಂಬ ಹೆಸರಿನ ಈ ಆತ್ಮಕಥೆ ಈ ಕಾಲಘಟ್ಟದಲ್ಲಿ ಸಂಪ್ರದಾಯಸ್ಥ  ಮನೋಭಾವದ ಲೇಖಕರಿಗೂ ಹಾಗೂ ಬ್ರಾಹ್ಮಣರಿಗೂ ಜೀರ್ಣಿಸಿಕೊಳ್ಳುವುದು  ಇಂದಿಗೂ ಕಷ್ಟವಾಗಿದೆ ನಿಜ. ಏಕೆಂದರೆ,  ಇದು ಸಾಹಿತ್ಯ ಕೃತಿಯಾಗಿರದೆ,. ರಾಣಿ ಶಿವಶಂಕರ ಶರ್ಮ ಎಂಬ ಬ್ರಾಹ್ಮಣ ಕುಟುಂಬದಿಂದ ಲೇಖಕನೊಬ್ಬ ಅತ್ಯಂತ ನಿರ್ಭಾವುಕತೆಯಿಂದ  ತನ್ನ ಕುಟುಂಬದ ಸದಸ್ಯರುಗಳ ಕುರಿತಂತೆ  ಬರೆದ ಆತ್ಮಕಥೆಯಾಗಿದೆ. ಉತ್ತರ ಆಂದ್ರ ಪ್ರದೇಶದ ಗೋದಾವರಿ ಪ್ರಾಂತ್ಯದ ಕೊನಸೀಮ ಎಂಬ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧಿಯಾಗಿದ್ದ ಹಾಗೂ ವೇದಗಳ ಪಠಣ ಮತ್ತು ಯಜ್ಞ ಯಾಗದಿಯಲ್ಲಿ ಹೆಸರುವಾಸಿಯಾಗಿದ್ದ ಬ್ರಾಹ್ಮಣ ಕುಟುಂಬದಿಂದ ಬಂದವರಾದ ರಾಣಿ ಶಿವಶಂಕರ ಶರ್ಮರವರು   ತನ್ನ ತಂದೆಯವರ ಬ್ರಾಹ್ಮಣ್ಯ ಕುರಿತಾದ ನಂಬಿಕೆಗಳನ್ನು ಈ ಆತ್ಮಚರಿತ್ರೆಯ ನೆಪದಲ್ಲಿ ದಾಖಲಿಸಿದ್ದಾರೆ. ಜೊತೆಗೆ, ಭಾರತದ ಸನಾತನ ಬ್ರಾಹ್ಮಣ ಧರ್ಮದ ಆಚರಣೆಗಳು ಹಾಗೂ ಸಂಸ್ಕೃತಿಗಳನ್ನಲ್ಲದೆ,  ಬ್ರಾಹ್ಮಣ ಜಾತಿ ಮತ್ತು ಬ್ರಾಹ್ಮಣ್ಯದ ಪದ್ಧತಿಯಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದ್ದಾರೆ. ಜೊತೆಗೆ  ಭಾರತದ ಹಿಂದೂ, ಇಸ್ಲಾಂ, ಹಾಗೂ ಕ್ರೈಸ್ತ ದರ್ಮಗಳಲ್ಲಾದ  ಪಲ್ಲಟಗಳನ್ನೂ ಸಹ ನಮ್ಮ ಮುಂದೆ ಇತಿಹಾಸದ ದಾಖಲೆಗಳ ಸಮೇತ ಮುಂದಿಡುತ್ತಾರೆ.

ರಾಣಿ ಶಿವ ಶಂಕರ ಶರ್ಮ ಇದೀಗ ಗುಂಟೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ತೆಲುಗು ಭಾಷೆಯ ಶಿಕ್ಷಕರಾಗಿದ್ದು, ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಪಡೆದವರಾಗಿದ್ದಾರೆ. ಎಡಪಂಥೀಯ ಚಿಂತನೆಗಳನ್ನು ಮೈಗುಡಿಸಿಕೊಂಡಿರುವ ಶರ್ಮರವರು ತೆಲುಗು ಭಾಷೆಯಲ್ಲಿ ನಕ್ಸಲ್ ಚಳುವಳಿಯ ಕಥೆಯನ್ನು ಒಳಗೊಂಡಿರುವ ಗುಹಾಂತರ್ ವಾಸಿ: ಎಂಬ ಕಾದಂಬರಿಯನ್ನು ಸಹ ರಚಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಂಗ್ಲೀಷ್ ಭಾಷೆಯಲ್ಲಿ ಬಂದ ಅವರ ಈ ಕೃತಿಯನ್ನು ಓದಿ, ನನ್ನ ಮಿತ್ರ, ಕಲಾವಿದ ಬರಹಗಾರ ಸೃಜನ್ ಮೂಲಕ ಅವರನ್ನು ಸಂಪರ್ಕಿಸಿ ಅಭಿನಂದಿಸಿದ್ದೆ. ಅಂದಿನಿಂದ ಆತ್ಮೀಯ ಮಿತ್ರರಾಗಿರುವ  ಶರ್ಮಾ ಜೊತೆ ಮೂರು ದಿನಗಳ ಹಿಂದೆ  ದೂರವಾಣಿಯಲ್ಲಿ ಮಾತನಾಡುತ್ತಾ,  “ಅತ್ಯಂತ ಮೆದು ಮಾತಿನ, ತಣ್ಣನೆಯ ಮನಸ್ಸು ಹಾಗೂ ವ್ಯೆಕ್ತಿತ್ವದ ನಿಮ್ಮೊಳಗೆ ಇಂತಹ ಕ್ರಾಂತಿಕಾರಿ ಹೇಗೆ ಹುಟ್ಟಿಕೊಂಡ? “ ಎಂದು ನಾನು ಪ್ರಶ್ನಿಸಿದಾಗ,  ಅವರು ಬಾಯ್ತಂಬಾ ನಕ್ಕರು. ಕೊನೆಯ ಬ್ರಾಹ್ಮಣ ಕೃತಿ ನನಗೆ ತೆಲುಗು ಭಾಷೆಗಿಂತ ಇಂಗ್ಲೀಷ್ ಭಾಷೆಯಲ್ಲಿ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು ಎಂದರು.  ಜೊತೆಗೆ ನಿಮ್ಮಂತಹ ಅನೇಕ ಗೆಳೆಯರನ್ನು ಸಂಪಾದಿಸಿಕೊಟ್ಟಿತು ಎನ್ನುವ ಶರ್ಮರವರು ಈ ಕೃತಿಯು ಪ್ರಸಿದ್ಧ ಸಮಾಜ ವಿಜ್ಞಾನಿ ಹಾಗೂ ಚಿಂತಕ ಆಶೀಷ್ ನಂದಿಯವರಿಂದ ಹಿಡಿದು ಅನೇಕ ಭಾರತೀಯ ಲೇಖಕರ ಮೆಚ್ಚುಗೆ ಪಡೆದಿದೆ ಅದು ನನ್ನ ಪಾಲಿಗೆ ವಿಶೇಷವಾದ ಪ್ರಶಸ್ತಿ ಎಂದರು.
ಸಂಪ್ರಾದಾಯ ನಿಷ್ಟ ಬ್ರಾಹ್ಮಣ ಕುಟುಂಬದಿಂದ ಬಂದ  ಲೇಖಕರ ತಂದೆ, ರಾಣಿ ನರಸಿಂಹ ಶಾಸ್ತ್ರಿಗಳು ತಮ್ಮ ಸಾವಿನ ಕೊನೆಯ ದಿನಗಳಲ್ಲಿ ಎದುರಿಸಿದ ಬಿಕ್ಕಟ್ಟು, ಬ್ರಾಹ್ಮಣ್ಯದ  ಬಗೆಗಿನ ಅಚಲ ನಿಷ್ಠೆ,  ಜಿಜ್ಞಾಸೆ ಮತ್ತು ಬ್ರಾಹ್ಮಣ ದರ್ಶನ ಕುರಿತಂತೆ ಅವರಿಗೆ ಇರುವ ಒಳನೋಟ  ಎಲ್ಲವೂ ಈ ಕೃತಿಯಲ್ಲಿ ಸಂವಾದದ ರೂಪದಲ್ಲಿ ದಾಖಲಾಗಿವೆ.   ತಮ್ಮ ಇಬ್ಬರೂ ಪುತ್ರರು ಧರ್ಮ ಭ್ರಷ್ಟರು ಮತ್ತು ಜಾತಿ ಭ್ರಷ್ಟರಾದ ಕಾರಣ ತಮ್ಮ ಅಂತಿಮ ಸಂಸ್ಕಾರವನ್ನು ಅವರು ಮಾಡಬಾರದು ಎಂಬ ಕಠೋರ ನಿಲುವ ತಾಳುವ  ರಾಣಿ ನರಸಿಂಹ ಶಾಸ್ತ್ರಿಗಳು ಪುತ್ರರಿಂದ ಅಂತ್ಯ ಸಂಸ್ಕಾರ ಮತ್ತು ಶಾದ್ಧದಂತಹ ಕ್ರಿಯೆಗಳು ನೆರವೇರದಿದ್ದರೆ ತನಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂಬ ಚಿಂತೆಯೆಂಬ ಚಿತೆಗೆ ಬೀಳುತ್ತಾರೆ. ಶಾಸ್ತ್ರಿಗಳ ಹಿರಿಯ ಪುತ್ರ ತತ್ವಶಾಸ್ತ್ರಕ್ಕೆ ಮಾರು ಹೋಗಿ ಚೆನ್ನೈ ನಗರದ ಮಠವೊಂದರಲ್ಲಿ ದೀಕ್ಷೆ ಪಡೆದು ಸ್ವಾಮೀಜಿಯಾಗಿ ಪರಿವರ್ತನೆ ಹೊಂದಿರುತ್ತಾರೆ. ಎರಡನೇಯ ಪುತ್ರ ( ಈ ಕೃತಿಯ ಲೇಖಕ) ಎಡಪಂಥೀಯ ಚಿಂತನೆಗಳಿಂದ ಪ್ರಭಾವಿತಗೊಂಡು ದೇವರು, ಧರ್ಮಗಳನ್ನು ನಂಬದ ನಿರೀಶ್ವರವಾದಿಯಾಗಿದ್ದಾರೆ. ಇಂತಹ ಸಂಕಟಗಳ ನಡುವೆ ಸಾವಿನ ಹೊಸ್ತಿಲಲ್ಲಿ ತಲೆ ಇಟ್ಟು ಮಲಗಿರುವ ಶಾಸ್ತ್ರಗಳ ಮನಸ್ಸಿನೊಳಗಿನ ನಡೆಯುವ  ತಾಕಲಾಟ ಈ ಕೃತಿಯಲ್ಲಿ ನಮಗೆ ಬ್ರಾಹ್ಮಣ ದರ್ಶನದ ಅನೇಕ ಮಗ್ಗಲುಗಳನ್ನು ಪರಿಚಯಿಸುತ್ತದೆ. ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಎಲ್ಲವೂ ಒಂದೇ ಎಂದು ನಂಬಿಕೊಂಡಿದ್ದ ನನ್ನಂತಹ ಅನೇಕ ಬ್ರಾಹ್ಮಣೇತರರಿಗೆ ಹಲವು ಅಚ್ಚರಿಯ ಸಂಗತಿಗಳು ಈ ಕೃತಿಯಲ್ಲಿ ತೆರೆದು ಕೊಳ್ಳುತ್ತವೆ. ಗುಡಿ ಕಟ್ಟುವುದು ಅಥವಾ ಪೂಜೆ ಮಾಡುವುದು ಬ್ರಾಹ್ಮಣರ ಕರ್ತವ್ಯವಲ್ಲ ಎಂದು ಪ್ರತಿ ಪಾದಿಸುವ ಶಾಸ್ತ್ರಿಗಳು ಎಂದೂ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಹಾಗೂ ತೆಂಗಿನ ಕಾಯಿ ಹೊಡೆಯದ ವಿವರಗಳನ್ನು ಅವರ ಪುತ್ರ ಶರ್ಮ ಇಲ್ಲಿ  ದಾಖಲಿಸಿದ್ದಾರೆ. ಇದರ ಜೊತೆಗೆ ದಕ್ಷಿಣ ಭಾರತದಲ್ಲಿ ಗುಡಿ ಗೋಪುರಗಳು ಹದಿನೇಳನೆಯ ಶತಮಾನದ ಬ್ರಿಟೀಷರ ಆಳ್ವಿಕೆಯಲ್ಲಿ ಹೇಗೆ ಶೂದ್ರರ ಕೈಯಿಂದ ಜಾರಿ ಬ್ರಾಹ್ಮಣ ಸಮುದಾಯದ ಪಾಲಾದವು ಎಂಬುದನ್ನು ಸಾಕ್ಷಾಧಾರಗಳ ಸಮೇತ ವಿವರಿಸಿದ್ದಾರೆ. ಇನ್ನೊಂದು ಆಸಕ್ತಕರ ಸಂಗತಿಯೆಂದರೆ, ತಮಿಳುನಾಡಿನ ಶೈವ ಬ್ರಾಹ್ಮಣರು ಭಗವದ್ಗೀತೆಯನ್ನು ಓದುವುದನ್ನು ನಿರಾಕರಿಸಿದ ಘಟನಾವಳಿಗಳನ್ನು ಸಹ ದಾಖಲಿಸಿದ್ದಾರೆ.

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಹನ್ನೊಂದನೆಯ ಶತಮಾನದ ಕಾಶ್ಮೀರದಲ್ಲಿ ಹಿಂದೂ ದೇವಾಲಯಗಳ ವಿಗ್ರಹಗಳ ಅಡಿಯಲ್ಲಿ ಶೇಖರಿಸಿ ಇಡಲಾಗುತ್ತಿದ್ದ ಸಂಪತ್ತುಗಳನ್ನು ಕೊಳ್ಳೆ ಹೊಡೆಯಲು ಅನೇಕ ಹಿಂದು ಮಹಾರಾಜ, ರಾಜ ಹರ್ಷ ಎಂಬುವನು ದೇವೊತ್ಪತ ಎಂಬ ಹುದ್ದೆಯನ್ನು ಸೃಷ್ಟಿಸಿ, ಅದಕ್ಕೆ ಒಬ್ಬ ಸೈನಾಧಿಕಾರಿಯನ್ನು ನೇಮಕ ಮಾಡಿದ್ದ ವಿವರವೂ ಸಹ ಈ ಕೃತಿಯಲ್ಲಿದೆ. ಬ್ರಾಹ್ಮಣ ಸ್ತ್ರೀಯರನ್ನು ಶೂದ್ರರಂತೆ ನಡೆಸಿಕೊಳ್ಳಲು ಇರುವ ಕಾರಣಗಳಿಂದ ಹಿಡಿದು, ಲೇಖಕರ ಭಾವ ಪೂಜೆಯ ನೆಪದಲ್ಲಿ ಮದ್ಯ ಮತ್ತು ಮಾಂಸವನ್ನು ಸೇವನೆ ಮಾಡುತ್ತಿದ್ದ ಘಟನೆಯನ್ನು ಹಾಗೂ ಅದನ್ನು ಶಾಸ್ತ್ರಗಳ ಮೂಲಕ ಸಮರ್ಥಿಸಿಕೊಳ್ಳುವ ಬಗೆಯನ್ನು  ಲೇಖಕರು ಯಾವುದೇ ಮುಚ್ಚು ಮರೆಯಿಲ್ಲದೆ ಬರೆದುಕೊಂಡಿದ್ದಾರೆ.
ರಾಜಮಂಡ್ರಿ ನಗರದಲ್ಲಿ ವಿದ್ಯೆಯ ಸಂದರ್ಭದಲ್ಲಿ ತಲೆಯ ಮೇಲೆ ಜುಟ್ಟು ಬಿಟ್ಟುಕೊಂಡು ಬ್ರಾಹ್ಮಣ ಬಾಲಕನಾಗಿ ಅನುಭವಿಸಿದ ಅಪಮಾನಗಳು, ನಂತರದ ದಿನಗಳಲ್ಲಿ ವಿಶೇಷವಾಗಿ ಹರೆಯದ ದಿನಗಳ ತಾಕಲಾಟ ಇವುಗಳನ್ನು ಅತ್ಯಂತ ನಿರ್ಭಾವುಕರಾಗಿ ದಾಖಲಿಸುವ ಲೇಖಕರಿಗೆ, ಆದುನಿಕ ಹಾಗೂ ವರ್ತಮಾನದ ಜಗತ್ತು ನನ್ನದಲ್ಲ ಎಂದು ಭಾವಿಸುವ ಅವರ ತಂದೆ ಕೊನೆಯ ಬ್ರಾಹ್ಮಣ ಎಂದು ಕರೆದಿರುವುದು ಸೂಕ್ತವಾಗಿದೆ.
 ತಾವು ನಂಬಿದ ತತ್ವ ಮತ್ತು ಸಿದ್ಧಾಂತಗಳಿಗೆ ತಿಲಾಂಜಲಿ ನೀಡಲು ನಿರಾಕರಿಸುವ ಲೇಖಕರು ಕೊನೆಗೂ ಅವರ ತಂದೆ ರಾಣಿ ನರಸಿಂಹ ಶಾಸ್ತ್ರಿಗಳ ಅಂತ್ಯ ಕ್ರಿಯೆಯನ್ನು ಸಂಪ್ರದಾಯದಂತೆ ನಡೆಸಲು ನಿರಾಕರಿಸುತ್ತಾರೆ. ಅವರ ತಂದೆಯ ವ್ಯೆಕ್ತಿತ್ವ ನಮಗೆ ಅನಂತ ಮೂರ್ತಿಯವರ ಸಂಸ್ಕಾರದ ಪ್ರಾಣೇಶಚಾರ್ಯರನ್ನು ನೆನಪಿಸುತ್ತದೆ. ಮಂಚದ ಮೇಲೆ ಮಲಗಿದ್ದ ಶಾಸ್ತ್ರಿಯವರು ತಮ್ಮ ಪತ್ನಿಯನ್ನು ಕರೆದು ಕೊನೆಯ ಕ್ಷಣಗಳಲ್ಲಿ ನೆಲದ ಮೇಲೆ ಮಲಗಿ ಪ್ರಾಣ ಬಿಡುತ್ತಾರೆ. ಏಕೆಂದರೆ, ಅವರ ದೃಷ್ಟಿಯಲ್ಲಿ  ನಿಜವಾದ ಬ್ರಾಹ್ಮಣನಿಗೆ ಮಂಚದ ಮೇಲೆ ಸಾವು ನಿಷಿದ್ಧ. ತಾವು ಸಾಯುವ ಮುನ್ನ ತಮ್ಮ ಪತ್ನಿಗೆ  ನೀನು ಕೇಶ ಮುಂಡನ ಮಾಡಿಸಿಕೊಳ್ಳಬೇಕೆಂದು ವಾಗ್ದಾನ ಪಡೆದು ಶಾಸ್ತ್ರಿಯವರು ಪ್ರಾಣ ಬಿಡುತ್ತಾರೆ.
ರಾಣಿ ಶಿವಶಂಕರ ಶರ್ಮ ತಮ್ಮ ಈ ಕೃತಿಯ ಕೊನೆಯ ಸಾಲುಗಳನ್ನು ಈ ರೀತಿ ದಾಖಲಿಸಿದ್ದಾರೆ.
“ನಮ್ಮ ದೊಡ್ಡಪ್ಪನವರ ಜೇಷ್ಠ ಪುತ್ರ ರಾಣಿ ಅಣ್ಣಯ್ಯ ನಮ್ಮ ತಂದೆಯವರ ಕರ್ಮಗಳನ್ನು ಮಾಡಿದ. ಅವನು ಸನಾತನ ಧರ್ಮವನ್ನು ತಪ್ಪದ ಅನಕ್ಷರಸ್ತ.
ಹೈದರಾಬಾದಿನಲ್ಲಿ ಕೆಮಿಸ್ಟ್ ಆಗಿ ಕೆಲಸಮಾಡುತ್ತಿರುವ ನಮ್ಮ ಬಾಬಯ್ಯನವರ ಮಗ ಕೊಂಡ, ನಮ್ಮಣ್ಣ ತತ್ವವಿದಾನಂದ ಸರಸ್ವತಿ ಸ್ವಾಮಿಗಳ ಕಡೆಯಿಂದ ಸಂದೇಶ ತೆಗೆದುಕೊಂಡು ಬಂದ. ಪಿತೃ ಕರ್ಮಗಳನ್ನು ನಿರ್ವಹಿಸುವಂತೆ ನನಗೆ ಮತ್ತು ಕೂದಲು ತೆಗೆಸಿಕೊಳ್ಳಬೇಡವೆಂದು ನಮ್ಮಮ್ಮನಿಗೆ ನಮ್ಮಣ್ಣ ಸಂದೇಶವಿತ್ತಿದ್ದ.
ಕೂದಲು ತೆಗೆಸಿಕೊಳ್ಳಬೇಡವೆಂದ ಅಣ್ಣನ ಮಾತನ್ನು ನಾನು ಅಮ್ಮನಿಗೆ ಹೇಳಿದೆ. ವೇದ ಪಂಡಿತರು ಅಬ್ಬಾಯಿ ದೊಡ್ಡಪ್ಪ ಹೋದಾಗ ದೊಡ್ಡಮ್ಮ ಮುಂಡನ ಮಾಡಿಸಿಕೊಂಡಿರಲಿಲ್ಲವೆಂದು ನೆನಪು ಮಾಡಿದೆ.ಅಮ್ಮ ಒಪ್ಪಲಿಲ್ಲ. “ ಅವರು (ಅಪ್ಪ) ಇಡೀ ದೇಶಕ್ಕೆ ದೊಡ್ಡ  ಮಹಾ ಪಂಡಿತರು; ಆದ್ದರಿಂದ ನಾನು ಧರ್ಮ ತಪ್ಪುವುದು ಸರಿಯಲ್ಲ ಎಂದಳು,”


ಈ ಅಪರೂಪದ ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟವಾಗಿದ್ದು, ಯುವ ಪ್ರತಿಭಾವಂತ ಕವಿ ಹಾಗೂ ಲೇಖಕ ಆನಂದ ಲಕ್ಕೂರ್ ನೇರ ತೆಲುಗು ಭಾಷೆಯಿಂದ ಕನ್ನಕ್ಕೆ ಅತ್ಯಂತ ಪ್ರಭುದ್ಧ ಭಾಷೆಯಲ್ಲಿ ಸಮರ್ಥವಾಗಿ ಅನುವಾದ ಮಾಡಿದ್ದಾರೆ. ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಬಂದ ಎರಡು ಅತ್ಯುತ್ತಮ ಆತ್ಮ ಕಥೆಗಳೆಂದರೆ, ಒಂದು ಕೊನೆಯ ಬ್ರಾಹ್ಮಣ ಮತ್ತು ಇನ್ನೊಂದು ಸೃಜನ್ ಅನುವಾದ ಮಾಡಿರುವ “ ಕರಿ ಮೆಣಸಿನ ಗಿಡ” ಎಂಬ ದಲಿತ ಆತ್ಮ ಕಥನ.ಈ ಇಬ್ಬರು ಯುವ ಲೇಖಕರಿಂದ ನಾವು ಇನ್ನಷ್ಟು ತೆಲುಗು ಭಾಷೆಯ ಸಮೃದ್ಧವಾದ ಸಾಹಿತ್ಯವನ್ನು ನಿರೀಕ್ಷಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ