ಶನಿವಾರ, ಅಕ್ಟೋಬರ್ 26, 2013

ಗಾಂಧಿ ಎಂಬ ಚುಂಬಕ ಶಕ್ತಿ



ಗಾಂಧಿಯ ವ್ಯಕ್ತಿತ್ವದಲ್ಲಿ ನಾವು ಕಾಣಬಹುದಾದ ಜಿಗಟು ಸ್ವಭಾವ, ಹಠಮಾರಿತನ, ಮತ್ತು ಪಾರದರ್ಶಕ ನಡುವಳಿಕೆಗಳ ಜೊತೆ ಅವರಲ್ಲಿ ಇದ್ದ ಅತಿ ದೊಡ್ಡ ಸಾಮರ್ಥ್ಯವೆಂದರೆ, ಅವರಲ್ಲಿದ್ದ ಚುಂಬಕ ಶಕ್ತಿ. ಅವರ ಇಂತಹ ಸಾಮರ್ಥ್ಯದಿಂದಲಲೇ ಅವರು ಅಂದಿನ ಸ್ವಾತಂತ್ರ್ಯ ಚಳುವಳಿಯಲ್ಲಿ ದೇಶವನ್ನು ಮುನ್ನೆಡೆಸಲು ಸಾಧ್ಯವಾಯಿತು. ಮತ್ತೊಂದು ಸೋಜಿಗದ ಸಂಗತಿಯೆಂದರೆ, ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ, ಇಡೀ ತಮ್ಮ ಬದುಕನ್ನು ಸಮಾಜ ಸೇವೆಗೆ, ದೇಶ ಭಕ್ತಿಗೆ ತಮ್ಮ ಬದುಕನ್ನು ಮುಡಿಪಾಗಿ ಇಟ್ಟ ಅನೇಕ ಜೀವಗಳು, ಭಾರತದ ಸ್ವಾತಂತ್ರ್ಯ ಇತಿಹಾಸದ ಪುಟಗಳಲ್ಲಿ ಪರಿಣಾಮಕಾರಿಯಾಗಿ ದಾಖಲಾಗದೆ, ತೆರೆಮರೆಯಲ್ಲಿ ಸರಿದುಹೋಗಿದ್ದಾರೆ. ಇವರಲ್ಲಿ ಗಾಂಧೀಜಿಯವರಿಗೆ ಆತ್ಮದಂತೆ ಇದ್ದ ಮಹದೇವ ದೇಸಾಯಿ, ಹಾಗೂ ಗಾಂಧೀಜಿ ಚಿಂತನೆಗೆ ಮಾರುಹೋಗಿ ಇಂಗ್ಲೆಂಡ್ ತೊರೆದು ಬಂದ ಮೆಡಲಿನ್ ಸ್ಲೆಡ್ ( ಮೀರಾ ಬೆಹನ್) ಭಾರತದವರೇ ಆದ ಮೌಲನಾ ಅಜಾದ್, ಆಪ್ಘಾನಿಸ್ಥಾನದ ಖಾನ್ ಅಬ್ದುಲ್ ಗಪರ್ ಖಾನ್ ಮುಖ್ಯವಾದವರು,
ವರ್ತಮಾನದ ಈ ದಿನಗಳಲ್ಲಿ  ಧರ್ಮಗಳನ್ನು ವಿಭಜಿಸಿ, ಅಲ್ಪ ಸಂಖ್ಯಾತರನ್ನು ಅನುಮಾನದಿಂದ ನೋಡುವ ಮಂದಿ, ತಾವು ಅರಿಯದ, ಓದದ ಇತಿಹಾಸವೊಂದು ಭಾರತದಲ್ಲಿ ಇನ್ನೂ ಅಸ್ತಿತ್ವದಲ್ಲಿ ಇದೆ ಎಂಬುದನ್ನು ಮೊದಲು ಮನಗಾಣಬೇಕಿದೆ. 1941 ರಲ್ಲಿ ಇಂಡಿಯನ್ ಮುಸ್ಲಿಂ ಲೀಗ್, “ನಿನಗೆ ಧರ್ಮ ಮುಖ್ಯವೊ? ಗಾಂಧೀಜಿ ಮುಖ್ಯವೋ? ಎಂಬುದನ್ನು ನಿರ್ಧರಿಸು ಎಂಬ ಸವಾಲನ್ನು ಮೌಲಾನ ಅಜಾದ್ ಮುಂದೆ ಇಟ್ಟಾಗ, ತೀವ್ರವಾಗಿ ಮಾನಸಿಕ ಕ್ಷೋಭೆಗೆ ಒಳಗಾದ ಮೌಲಾನ ಅವರು, ಅಂತಿಮವಾಗಿ ನನಗೆ ಧರ್ಮಕ್ಕಿಂತ ಗಾಂಧೀಜಿ ಮತ್ತು ಭಾರತದ ಕಾಂಗ್ರೇಸ್ ಮುಖ್ಯ ಎಂಬುದಾಗಿ ಘೋಷಿಸಿದರು.  ಇದೇ ರೀತಿ ನೆರೆಯ ಆಪ್ಘಾನಿಸ್ಥಾನದಿಂದ ಬಂದ ಖಾನ್ ಅಬ್ದುಲ್ ಗಫಾರ್ ಗಾಂಧೀಜಿ ಜೊತೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿ, ನಿರಂತರ ಜೈಲು ವಾಸ ಅನುಭವಿಸಿದರು. ನಿತ್ಯ ಮಾಂಸಹಾರಿಯಾಗಿದ್ದ ಹಾಗೂ ದೈತ್ಯ ದೇಹದ, ಸುಮಾರು ಆರೂವರೆ ಅಡಿ ಎತ್ತರವಿದ್ದ ಅವರು, ಜೈಲಿನಲ್ಲಿ ಎರಡು ಚಪಾತಿ ಮತ್ತು ಒಂದು ಬಟ್ಟಲು ಬೇಳೆ ಯಂತಹ ಸಾಮಾನ್ಯ ಆಹಾರದಲ್ಲಿ ಬದುಕಿದರು. ಇವರ ಸಂಕಟವನ್ನು ನೋಡಲಾರದೆ, ಗಾಂಧೀಜಿಯವರು, ಖಾನ್ ಅವರಿಗೆ ಪ್ರತಿದಿನ ಮೊಟ್ಟೆ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ದೀನನಾಗಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದರು. ಇಂತಹ ತ್ಯಾಗ ಜೀವಿಗಳ ಸಮರ್ಪಣ ಮನೋಭಾವವನ್ನು ಇತಿಹಾಸದ ಪುಟಗಳಲ್ಲಿ ಗಮನಿಸುವಾಗ ಕಣ್ಣುಗಳು ಒದ್ದೆಯಾಗುತ್ತವೆ.


ಪೂನಾ ನಗರದಲ್ಲಿರುವ ಆಗಖಾನ್ ಅರಮನೆ ಗಾಂಧೀಜಿಯವರ ಪಾಲಿಗೆ ಒಂದು ನೋವಿನ ಸ್ಮರಣೆ. ಏಕೆಂದರೆ, ಅವರ ಆತ್ಮ ಸಂಗಾತಿ ಕಸ್ತೂರಬಾ ಮತ್ತು ಆಪ್ತ ಸಂಗಾತಿ ಮಹದೇವ ದೇಸಾಯಿ ಇಬ್ಬರೂ ಇದೇ ಅರಮನೆಯಲ್ಲಿ ಬ್ರಿಟೀಷ್ ಸರ್ಕಾರದಿಂದ ಗೃಹ ಬಂಧನದಲ್ಲಿ ಇದ್ದ ಸಮಯದಲ್ಲಿ ಮೃತ ಪಟ್ಟರು. ಅಂತಿಮವಾಗಿ, ಗಾಂಧೀಜಿ ಇಚ್ಛೆಯಂತೆ ಅವರಿಬ್ಬರಿಗೂ ಅಲ್ಲಿಯೇ (ಅರಮನೆಯ ಹಿಂಭಾಗ) ಅಂತ್ಯ ಸಂಸ್ಕಾರ ನೆರವೇರಿಸಿ ಸಮಾಧಿ ನಿರ್ಮಿಸಲಾಗಿದೆ. ಗಾಂಧೀಜಿಯವರ ನಿಧಾನಾ ನಂತರ ಅವರ ಚಿತಾ ಭಸ್ಮವನ್ನು ತಂದು ಅವರಿಗೂ ಸಹ ಒಂದು ಸಮಾಧಿಯನ್ನು ನಿರ್ಮಿಸಲಾಗಿದೆ. ಆಗಖಾನ್ ಅರಮನೆಯಲ್ಲಿ ಗಾಂಧೀಜಿ ಮತ್ತು ಕಸ್ತೂರಬಾ ಅವರನ್ನು ಕೂಡಿ ಹಾಕಿದ್ದ ಕೋಣೆ, ಮಹದೇವ ದೇಸಾಯಿ ಇದ್ದ ಕೋಣೆ ಹೀಗೆ ಎಲ್ಲವನ್ನೂ ಯಥಾವತ್ತಾಗಿ ಕಾಪಾಡಿಕೊಂಡು ಬರಲಾಗಿದೆ. ಅರಮನೆಯನ್ನು ಮಾತ್ರ ನವೀಕರಿಸಿ, ಗಾಂಧಿ ಸ್ಮಾರಕ ಟ್ರಸ್ಟ್ ಗೆ ಒಪ್ಪಿಸಲಾಗಿದೆ.

ಮಹದೇವ ದೇಸಾಯಿ ಕೂಡ ಗಾಂಧಿ ನಾಡಾದ ಗುಜರಾತಿನವರು. 1892 ರ ಜನವರಿ ಒಂದರಂದು, ಸೂರತ್ ಬಳಿಯ ಸರಸ್ ಎಂಬ ಹಳ್ಳಿಯಲ್ಲಿ ಓರ್ವ ಶಾಲಾ ಶಿಕ್ಷಕನ ಮಗನಾಗಿ ಜನಿಸಿದ ಇವರು, ತನ್ನ ಏಳನೆಯ ವಯಸ್ಸಿನಲ್ಲಿ ಹೆತ್ತ ತಾಯಿಯನ್ನು ಕಳೆದು ಕೊಂಡು, ತಂದೆಯ ಆಶ್ರಯದಲ್ಲಿ ಬೆಳೆದವರು. ಗಾಂಧೀಜಿಯವರಂತೆ ತನ್ನ ಹದಿಮೂರನೇ ವಯಸ್ಸಿಗೆ ಹನ್ನೆರೆಡು ವಯಸ್ಸಿನ ದುರ್ಗಾದೇವಿ ಎಂಬುವರನ್ನು ವಿವಾಹವಾದವರು. ಅಹಮದಾಬಾದ್ ನಗರದಲ್ಲಿ ಪದವಿ ಓದುತ್ತಿದ್ದ ಸಮಯದಲ್ಲಿ ಪ್ರತಿ ದಿನ ಸಬರಮತಿ ಅಶ್ರಮದ ಮುಂದೆ ಓಡಾಡುತ್ತಾ, ಗಾಂಧೀಜಿಯವರ ಚಟುವಟಿಕೆಗಳನ್ನು ಗಮನಿಸುತ್ತಾ, ಅಂತಿಮವಾಗಿ 1917 ರಲ್ಲಿ ಗುಜರಾತಿನ ಕೇಂದ್ರ ಸಹಕಾರ ಬ್ಯಾಂಕಿನ ಇನ್ಸ್‍ಪೆಕ್ಟರ್ ಹುದ್ದೆ ತೊರೆದು, ಗಾಂಧೀಜಿ ಜೊತೆ ಗುರುತಿಸಿಕೊಂಡು, ಮಹಾತ್ಮನ ಸೇವೆಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು.
ಅತ್ಯುತ್ತಮ ಅನುವಾದಕರಾಗಿದ್ದ ಮಹಾದೇವ ದೇಸಾಯಿ ಗಾಂಧೀಜಿಯವರ ಆತ್ಮಕಥೆಯನ್ನು ಪ್ರಥಮವಾಗಿ ಗುಜರಾತಿ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಅನುವಾದಿಸಿದರು. ಜೊತೆಗೆ ನವಜೀವನ ಪತ್ರಿಕೆಯಿಂದ ಹಿಡಿದು, ಗಾಂಧೀಜಿ ಹೊರ ತರುತ್ತಿದ್ದ ಹರಿಜನ ಮತ್ತು ಯಂಗ್ ಇಂಡಿಯ ಪತ್ರಿಕೆಯನ್ನು ಗಾಂಧಿ ಅನುಪ ಸ್ಥಿತಿಯಲ್ಲಿ ಸಂಪಾದಿಸುತ್ತಿದ್ದರು. ತಮ್ಮ ಬದುಕಿನುದ್ದಕ್ಕು ಗಾಂಧೀಜಿಯನ್ನು ನೆರಳಿನಂತೆ ಹಿಂಬಾಲಿಸಿದ ಮಹದೇವ ದೇಸಾಯಿ, ಗಾಂಧೀಜಿ ಜೊತೆ ನಿರಂತರ ಸರೆಮನೆ ವಾಸ ಅನುಭವಿಸಿದರು. ಅವರಂತೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಪ್ರಾರ್ಥನೆ, ಚರಕದಲ್ಲಿ ನೂಲು ತೆಗೆಯುವ ಕ್ರಿಯೆಯಲ್ಲಿ ತಲ್ಲೀನರಾಗುತ್ತಿದ್ದರು. 1929 ರಿಂದ ಭಾರತದಲ್ಲಿ ನಡೆದ ಬಹುತೇ ಗಾಂಧೀಜಿಯವರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಮಹದೇವದೇಸಾಯಿ, 1942 ರಲ್ಲಿ ಬ್ರಿಟೀಷರ ವಿರುದ್ಧ ಮಹಾತ್ಮ ಗಾಂಧೀಜಿü ಆರಂಭಿಸಿದ ಭಾರತ ಬಿಟ್ಟು ತೊಲಗಿಚಳುವಳಿಯಲ್ಲಿ ಪಾಲ್ಗೊಂಡು ಪೆಬ್ರವರಿ ತಿಂಗಳಿನಲ್ಲಿ ಮುಂಬೈ ನಗರದಲ್ಲಿ ಗಾಂಧೀಜಿ ಜೊತೆ ಬಂದನಕ್ಕೆ ಒಳಗಾದರು. 1942 ರ ಪೆಬ್ರವರಿ 9 ರಂದು ಗಾಂಧೀಜಿ, ಕಸ್ತೂರಬಾ, ಮಹದೇವ ದೇಸಾಯಿ ಎಲ್ಲರನ್ನೂ ಮುಂಬೈನಿಂದ ಪೂನಾದ ಆಗಖಾನ್ ಅರಮನೆಗೆ ಸ್ಥಳಾಂತರಿಸಿದ ಬ್ರಿಟೀಷ್ ಸರ್ಕಾರ ಗೃಹಬಂಧನದಲ್ಲಿರಿಸಿತು. ಅದೇ ವರ್ಷ (1942) ಆಗಸ್ಟ್ 15 ರಂದು ತಮ್ಮ ಐವತ್ತನೇಯ ವಯಸ್ಸಿನಲ್ಲಿ ಮಹದೇವ ದೇಸಾಯಿ ಆಗಖಾನ್ ಅರಮನೆಯ ಗೃಹ ಬಧನದಲ್ಲಿದ್ದಾಗ ಅಕಾಲ ಸಾವಿಗೆ ಈಡಾದರು. ಮಹಾದೇವ ದೇಸಾಯಿ ಅವರ ಸಾವು ಗಾಂಧೀಜಿಯ ಮೇಲೆ ತೀವ್ರ ಪರಿಣಾಮ ಬೀರಿತು. ಅವರು ಎಷ್ಟೊಂದು ಜರ್ಜಿತರಾದರೆಂದರೆ, ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು. ದೇಸಾಯಿ ಯವರ ಅಂತ್ಯ ಕ್ರಿಯೆಯನ್ನು ಅರಮನೆ ಆವರಣದಲ್ಲಿ ನೆರವೇರಿಸಿ, ತನ್ನ ಶಿಷ್ಯನನ್ನು “ “ಮಹದೇವದೇಸಾಯಿ ನನ್ನ ಗುರುಎಂದು ಕರೆದರು. ಅಲ್ಲದೆ, ಪ್ರತಿ ದಿನ ಬೆಳಿಗ್ಗೆ ಶಿಷ್ಯನ ಸಮಾಧಿ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದರು. 1944 ರ ಪೆಬ್ರವರಿ 22 ರಂದು ತಮ್ಮ ಪತ್ನಿ ಕಸ್ತೂರಭಾ ಗಾಂಧಿ ಮೃತಪಟ್ಟಾಗ, ಅವರಿಗೂ ಸಹ  ತಮ್ಮ ಶಿಷ್ಯನ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.
ಮಹದೇವ ದೇಸಾಯಿಯಂತೆ ಗಾಂಧೀಜಿ ಚಿಂತನೆಗೆ ಒಳಗಾದ ವಿದೇಶದ ಹೆಣ್ಣು ಮಗಳೆಂದರೆ, ಮೆಡಲಿನ್ ಸ್ಲೆಡ್. ಇಂಗ್ಲೇಂಡಿನ ಓರ್ವ ನೌಕಾ ಅಧಿಕಾರಿಯ ಪುತ್ರಿಯಾಗಿ ಜನಿಸಿದ ಈಕೆ (1892) ಒಮ್ಮೆ ನೆರೆಯ ಪ್ರಾನ್ಸಿನ ರಾಜಧಾನಿ ಪ್ಯಾರಿಸ್ ನಗರಕ್ಕೆ ಹೋಗಿದ್ದ ಸಂದರ್ಭದಲ್ಲಿ ಗಾಂಧಿ ಕುರಿತ ಪುಸ್ತಕದಿಂದ ಪ್ರಭಾವಗೊಂಡವರು. ತನ್ನ 23 ನೆಯ ವಯಸ್ಸಿನಲ್ಲಿ  ತಾತ ಹುಟ್ಟು ಹಬ್ಬು ಉಡೂಗರೆಯಾಗಿ ನೀಡಿದ್ದ 23 ಪೌಂಡ್ ಹಣವನ್ನು ಗಾಂಧಿ ಸ್ಥಾಪಿಸಿದ್ದ ನಿಧಿಗೆ ದಾನವಾಗಿ ನೀಡಿದವರು. ಆನಂತರ 1925 ರ ನವಂಬರ್ ತಿಂಗಳಿನಲ್ಲಿ ತನ್ನ ಪಾಶ್ಚಿಮಾತ್ಯ ಸಂಸ್ಕಾರವನ್ನು ತೊರೆದು ಭಾರತಕ್ಕೆ ಬಂದು ಗಾಂಧೀಜಿ ಜೊತೆ ಗುರುತಿಸಿಕೊಂಡರು. ಗಾಂಧೀಜಿ ಇವರಿಗೆ ಮೀರಾ ಎಂದು ನಾಮಕರಣ ಮಾಡಿದರು ಆನಂತರ ಇವರು ಭಾರತದಲ್ಲಿ ಮೀರಾ ಬೆಹನ್ ಎಂದು ಪ್ರಸಿದ್ಧಿಯಾದರು. ಮಹಾದೇವ ದೇಸಾಯಿಯಂತೆ, ಗಾಂಧೀಜಿಯನ್ನು ನೆರಳಿನಂತೆ ಹಿಂಬಾಲಿಸಿದ ಇವರು, ಉಪ್ಪಿನ ಸತ್ಯಾಗ್ರಹ, ಲಂಡನ್ ನಗರದಲ್ಲಿ ನಡೆದ ದುಂಡು ಮೇಜಿನ ಪರಿಷತ್ತು, ಚಲೇ ಜಾವ್ ಚಳುವಳಿಯಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದರು. 1947 ರ ಲ್ಲಿ ಗಾಂಧೀಜಿ ಅಣತಿ ಮೇರೆಗೆ ಹೃಷಿಕೇಶಕ್ಕೆ ತೆರಳಿ ಪಶುಲೋಕ್ ಎಂಬ ಆಶ್ರಮ ಸ್ಥಾಪಿಸಿ, ಗೋವುಗಳ ರಕ್ಷಣೆ, ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರು.
ಸ್ವಾತಂತ್ಯಾನಂತರ ಹೃಷಿಕೇಷದಿಂದ ಹಿಮಾಲಯಯದ ತಪ್ಪಲಿನತ್ತ ತೆರಳಿದ ಮೀರಾ ಬೆಹನ್ ತೆಹ್ರಿ ಹಾಗೂ ಚಮೋಲಿ, ಘರವಾಲ್ ಪ್ರದೇಶಗಳಲ್ಲಿ ನಡೆಯುತ್ತಿದ್ದ ಮರಗಳ ಮಾರಣ ಹೋಮದ ವಿರುದ್ಧ ಜನತೆಗೆ ಎಚ್ಚರಿಸಿದರು. ಓಕ್ ಮತ್ತು ಫೈನ್ ಮರಗಳು ನೆಲಸಮವಾಗುವುದನ್ನು ಕಂಡು, ಇದಕ್ಕೆ  ಮುಂದೆ ಬೆಲೆ ತೆರಬೇಕಾಗ ಬಹುದೆಂದು ಎಚ್ಚರಿಸಿದ್ದರು. ಅವರ ಮಾತು ಇದೇ ವರ್ಷ ನಡೆದ ಉತ್ತರಕಾಂಡ ನೈಸರ್ಗಿಕ ವಿಕೋಪದಲ್ಲಿ ನಿಜವಾಯಿತು. 1959 ರಲ್ಲಿ ಭಾರತ ಬಿಟ್ಟು ಇಂಗ್ಲೆಂಡಿಗೆ ವಾಪಾಸ್ಸಾದದ ಅವರು, ನಂತರ ವಿಯನ್ನಾ ಕ್ಕೆ ತೆರಳಿ, ಗಾಂಧೀಜಿ ಚಿಂತನೆಗಳ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1982 ರ ಜುಲೈ 20 ರಂದು ನಿಧನರಾದರು.


ಗಾಂಧೀಜಿಯ ನಡುವಳಿಕೆ ಕುರಿತು ಮಾತನಾಡುವ ಅನೇಕ ಮಂದಿ ತಿಳಿಯಬೇಕಾದ ಮಹತ್ವದ ವಿಷಯವೆಂದರೆ, ಗಾಂಧಿ ಎಂಬ ವ್ಯಕ್ತಿತ್ವ ಕೇವಲ ಮಾತಿಗೆ, ಅಥವಾ ಟೀಕೆಗೆ ಅರ್ಥವಾಗುವದಂತಹದಲ್ಲ. ಅದು ಮನಸ್ಸಿನೊಳಕ್ಕೆ ಇಟ್ಟುಕೊಂಡು ಮಂಥಿಸುವಂತಹ ವ್ಯಕ್ತಿತ್ವ. ಆವಾಗ ಮಾತ್ರ ಗಾಂಧಿ ನಮಗೆ ಅರ್ಥವಾಗಬಲ್ಲರು, ಅವರ ಚಿಂತನೆಗಳು ನಮ್ಮ ಬುದ್ಧಿ ಮತ್ತೆಗೆ ನಿಲುಕಬಲ್ಲವು.

ಬುಧವಾರ, ಅಕ್ಟೋಬರ್ 23, 2013

ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಹೈಕೋರ್ಟ್ ಕಪಾಳ ಮೋಕ್ಷ



ಭಾರತದಲ್ಲಿ ಬಿ.ಟಿ. ಹತ್ತಿಯನ್ನು ಬೆಳೆದು ರೈತರು ಹೈರಾಣಾಗಿರುವ ಸಂದರ್ಭದಲ್ಲಿ ನಮ್ಮ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾದ ಬದನೆಕಾಯಿಯನ್ನು ಬಿ.ಟಿ.ಬದನೆಯಾಗಿ ಪರಿವರ್ತಿಸಲು   ಅನೈತಿಕವಾಗಿ ಮಾನ್ಸಂಟೊ ಕಪನಿ ಜೊತೆ  ಒಪ್ಪಂಧ ಮಾಡಿಕೊಂಡಿದ್ದ ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ಕಪಾಳ ಮೋಕ್ಷ ಮಾಡುವುದರ ಜೊತೆಗೆ ಛಡಿ ಏಟು ಭಾರಿಸಿದೆ.
ಈ ವಿಶ್ವ ವಿದ್ಯಾನಿಲಯದ ವಿಜ್ಙಾನಿಗಳಿಗೆ ನೈತಿಕತೆ ಅಥವಾ ಪಾಪಪ್ರಜ್ಙೆ ಎಂಬುದೇನಾದರು ಇದ್ದರೆ, ಮೊದಲು ಈ ನೆಲದ ರೈತರ ಕ್ಷಮೆ ಕೋರಬೇಕು. ನಂತರ ತಮ್ಮ ತಮ್ಮ ಹುದ್ದೆಗಳನ್ನು ತೊರೆಯಬೇಕು. ತನ್ನ ಜೈವಿಕ ಕುಲಾಂತರಿ ತಳಿಗಳ ಮೂಲಕ ಜಗತ್ತಿನ ಆಹಾರ ಭದ್ರತೆಯ ಮೇಲೆ ಸ್ವಾಮ್ಯ ಸಾಧಿಸಲು ಹೊರಟಿರುವ ಮಾನ್ಸಂಟೊ ಕಂಪನಿಯ ಗುಲಾಮರಂತೆ ಎಂಜಲು ಕಾಸಿಗಾಗಿ, ಈ ನೆಲದ ಬೀಜ ಸಂಸ್ಕೃತಿಯನ್ನು ಒತ್ತೆ ಇಡಲು ಹೊರಟ ಎಲ್ಲರಿಗೂ ಇದು ಎಚ್ಚರಿಕೆಯ ಪಾಠವಾಗಿದೆ.
ಭಾರತದಲ್ಲಿ ಆಹಾರ ಬೆಳೆಗಳ ಕುರಿತ ಯಾವುದೇ ಪ್ರಯೋಗ ನಡೆಯ ಬೇಕಾದರೆ, ಕೇಂದ್ರದ ಜೈವಿಕ ವೈವಿಧ್ಯ ಮಂಡಳಿಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ, ಅಮೇರಿಕಾ ಮೂಲದ ಮಾನ್ಸಂಟೊ ಬಹು ರಾಷ್ರೀಯ ಕಂಪನಿಯ ಸಹಭಾಗಿತ್ವದ ಮಹಾರಾಷ್ಟ್ರ ಮೂಲದ ಮಹಿಕೋ ಕಂಪನಿಯ ಜೊತೆ ಒಪ್ಪಂಧ ಮಾಡಿಕೊಂಡ ಧಾರವಾಡದ ಕೃಷಿ ವಿಶ್ವ ವಿದ್ಯಾನಿಲಯ , ಬಿ.ಟಿ ಬದನೆ ಪ್ರಯೋಗವನ್ನು ನಡೆಸಿ ಯಶಸ್ಸು ಸಾಧಿಸಿತ್ತು. ಈ ಪ್ರಯೋಗಕ್ಕೆ ಕೃಷಿ ವಿ.ವಿ.ಯು ಕೇಂದ್ರ ಸರ್ಕಾರದ  ಅನುಮತಿಯನ್ನಾಗಲಿ, ಅಥವಾ ಯು.ಜಿ.ಸಿ.ಯ ಅನುಮತಿ ಪಡೆಯದೆ, ಪ್ರಯೋಗಕ್ಕಾಗಿ ಮಾನ್ಸಂಟೊ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ಹಣವನ್ನೂ ಸಹ ಪಡೆದಿತ್ತು.


ಇದನ್ನು ಗಮನಿಸಿದ ಕೇಂದ್ರ ಜೈವಿಕ ವೈವಿಧ್ಯ ಮಂಡಳಿಯ ಕಾರ್ಯದರ್ಶಿ, ಶ್ರಿ. ಅಚಲೇಂದ್ರ ರೆಡ್ಡಿ ಹಾಗೂ ರಾಜ್ಯ ಜೈವಿಕ ವೈವಿಧ್ಯ ಮಂಡಳಿಯ ಸದಸ್ಯ ಮತ್ತುಉಪಅರಣ್ಯಸಂರಕ್ಷಣಾಧಿಕಾರಿ ಶ್ರಿ.ಚಕ್ರಪಾಣಿ ಇವರು 2012 ರ ನವಂಬರ್ ತಿಂಗಳಿನ ಲ್ಲಿ  ಕೃಷಿ ವಿ.ವಿ.ಯ ಉಪಕುಲಪತಿ ಆರ್.ಆರ್. ಹಂಚಿನಾಳ, ರಿಜಿಸ್ಟ್ರಾರ್ ವಿಜಯಕುಮಾರ್,  ಮತ್ತು ಮಾಜಿ ಉಪಕುಲಪತಿ ಎಸ್.ಎ. ಪಾಟೀಲ್ ಇವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.ಏಕೆಂದರೆ, ಧಾರವಾಡ ಕೃಷಿ ವಿ.ವಿ.ಯ  ಪ್ರಯೋಗ ದೇಶದ ಜೈವಿಕ ವೈವಿಧ್ಯ ಮಸೂದೆಗೆ ವಿರುದ್ಧವಾಗಿತ್ತು. ಮೊಕದ್ದಮೆ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದ  ಧಾರವಾಡ ಕೃಷಿ ವಿ.ವಿ. ಯ ವಿವಾದಾತ್ಮಕ ಪ್ರಯೋಗ ಕುರಿತು ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ , ಜಸ್ಟೀಸ್ ಪಚಾಪುರೆ, ವಿ.ವಿ. ಪೂರ್ವ ಅನುಮತಿಯನ್ನು ತೆಗೆದುಕೊಳ್ಳದೆ ಪ್ರಯೋಗ ನಡೆಸಿರುವುದನ್ನು ಖಂಡಿಸಿದ್ದಾರೆ ಅಲ್ಲದೆ ವಿ.ವಿ.ಯ ಮೇಲ್ಮನವಿಯನ್ನು ಸಹ ತಳ್ಳಿ ಹಾಕಿದ್ದಾರೆ. ಈಗ ಕೃಷಿ ವಿ.ವಿ.ಯು ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗಿದೆ.

ಬಿ.ಟಿ. ಹತ್ತಿ ಬಗ್ಗೆ  ಪುಂಗಿದಾಸರು ಮತ್ತು ಮಾನ್ಸಂಟೊ ಭಜನಾ ಮಂಡಳಿಯ ಸದಸ್ಯರು ದಶಕದಿಂದ ಏನೆಲ್ಲಾ ಡಂಗೂರ ಸಾರಿದರೂ ಸಹ, ಹತ್ತಿಯ ಕಾಂಡ ಕೊರೆಯುವ ಹುಳುಗಳು ಹೊಸ ಹೊಸ ರೂಪದಲ್ಲಿ ಸೃಷ್ಟಿಯಾಗುತ್ತಿವೆ ಎಂಬುದು ದೃಢ ಪಟ್ಟಿದೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಿ.ಟಿ. ಚನ್ನೇಶ್ ಎಂಬುವರು ಬಿ.ಟಿ. ಹತ್ತಿಯ ಕರ್ಮಕಾಂಡದ ಬಗ್ಗೆ ವಿವರವಾದ ಲೇಖನ ಬರೆದಿದ್ದಾರೆ. ಆದರೆ, ನಮ್ಮ ವಿಜ್ಙಾನಿಗಳಿಗೆ ಕುರುಡು ಕಾಂಚಾಣದ ಮುಂದೆ ಯಾವುದು ಲೆಕ್ಕವಿಲ್ಲದಂತಾಗಿದೆ.
ಸದ್ಯ ನಮ್ಮ ಕನ್ನಡ ಭಾಷೆಯಲ್ಲಿ ನೆಲ-ಜಲ-ಕೃಷಿ ಕುರಿತು ಬರೆಯುತ್ತಿರುವ ಪತ್ರಕರ್ತರು ಮತ್ತು ಲೇಖಕರಾದ ರಾಧಾಕೃಷ್ಣ ಭಡ್ತಿ, ಮಲ್ಲಿಕಾರ್ಜುನ ಹೊಸಪಾಳ್ಯ, ಜಿ.ಕೃಷ್ಣಪ್ರಸಾದ್, ಗಾಣದಾಳು ಶ್ರೀಕಂಠ, ಆನಂದತೀರ್ಥ ಪ್ಯಾಟಿ. ಅನಿತಾ ಪೈಲೂರು, ಮೊದಲಾದವರು ಹಾಗೂ ಇವರಿಗೆ ಬೆಂಬಲವಾಗಿ ನಿಂತಿರುವ ನಾಗೇಶ್ ಹೆಗ್ಗಡೆ, ಶ್ರೀಪಡ್ರೆ ಇಂತಹವರಿಗೆ ಇರುವ ಕಾಳಜಿಯ ಶೇಕಡ ಹತ್ತರಷ್ಟು ಭಾಗ ನಮ್ಮ ಕೃಷಿ ವಿಜ್ಙಾನಿಗಳಿಗೆ ಇದ್ದರೆ, ಈ ನೆಲದ ರೈತರು ಎಂದೋ ಉದ್ಧಾರವಾಗುತ್ತಿದ್ದರು.
ಅದೇ ಹೈಬ್ರಿಡ್ ತಳಿಗಳು, ಅದೇ ಕೀಟನಾಶಕ, ಅದೇ ರಸಾಯಿನಿಕ ಗೊಬ್ಬರಗಳ ಕುರಿತು ಗಿಳಿ ಪಾಠ ಒಪ್ಪಿಸುವ ಈ ಕೂಚುಭಟ್ಟರಿಗೆ ಅದರಿಂದಾಚೆಗೆ ಏನನ್ನೂ ಯೋಚಿಸಲು ಸಾದ್ಯವಾಗಿಲ್ಲ. ಈಗ ನಮ್ಮ ರೈತರು ತಾವಾಗಿ ಕಂಡುಕೊಂಡ  ಸುಸ್ಥಿರ ಕೃಷಿ ಕುರಿತು ಅ ಆ ಇ ಈ ಗೊತ್ತಿಲ್ಲ. ಕಳೆದ ಒಂದು ದಶಕದಿಂದ ತೆಂಗಿನ ಬೆಳೆಗೆಗೆ ಕಾಡುತ್ತಿರುವ ನುಸಿ ಪೀಡೆ ರೋಗಕ್ಕೆ ಇವರ ಬತ್ತಳಿಕೆಯಲ್ಲಿ ಯಾವ ಬಾಣಗಳಿಲ್ಲ ಎಂದ ಮೇಲೆ , ಯಾವ ಪುರುಷಾರ್ಥಕ್ಕೆ ಈ ಕೃಷಿ ವಿಶ್ವ ವಿದ್ಯಾನಿಲಯಗಳು? ಯಾರಿಗೆ ಬೇಕು ಈ ಕೃಷಿ ವಿಜ್ಙಾನಿಗಳು? ಕಡೂರು, ಬೀರೂರು, ಅರಸಿಕೆರೆ, ತಿಪಟೂರು, ತುಮಕೂರು, ಮಂಡ್ಯ, ನಾಗಮಂಗಲ ಹಾಸನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಳಿ ಒಣಗಿ ನಿಂತಿರುವ ತೆಂಗಿನ ಮರಗಳನ್ನು ನೋಡಿದರೆ, ಕಣ್ಣಲ್ಲಿ ನೀರು ಬರುತ್ತದೆ. ಹತ್ತಾರು ವರ್ಷ ಬೆಳೆಸಿದ ತೆಂಗಿನ ಮರ ರೈತನ ಪಾಲಿಗೆ ಒಣಗುವುದು ಒಂದೇ, ಅದೇ ರೈತ ಎದೆಯುದ್ದ ಬೆಳೆದ ಮಗನನ್ನು ಕಳೆದುಕೊಳ್ಳುವುದೂ ಒಂದೇ. ಈ ಎರಡು ನೋವಿಗೆ ವೆತ್ಯಾಸವೇನಿಲ್ಲ.

( ಮಾನ್ಸಂಟೊ ಕಂಪನಿಯ ಹೀನ ಇತಿಹಾಸ ಕುರಿತ ಬರೆದ ಮೂರು ಲೇಖನಗಳು ಇದೇ ಬ್ಲಾಗ್ ನಲ್ಲಿ ಮೇ ತಿಂಗಳಿನಲ್ಲಿ ಪ್ರಕಟವಾಗಿವೆ. ಆಸಕ್ತರು ಗಮನಿಸಬಹುದು)

ಶನಿವಾರ, ಅಕ್ಟೋಬರ್ 19, 2013

ಆಹಾರಭದ್ರತೆಯ ಆತಂಕಗಳು



ಪ್ರತಿ ವರ್ಷ ಅಕ್ಟೋಬರ್ 16 ರಂದು  ವಿಶ್ವ ಆಹಾರ ದಿನಾಚರಣೆ. ಉಳಿದ ಆಚರಣೆಗಳಂತೆ   16 ರಂದು ಸಹ  ಹಸಿವಿನ ಬಗ್ಗೆ ಹಾಗೂ ಹಸಿದು ಮಲಗಿದವರ ಕುರಿತು,  ಜಾಗತಿಕ ಮಟ್ಟದಲ್ಲಿ ಪಂಚತಾರಾ ಹೋಟೆಲುಗಳ ಹವಾನಿಯಂತ್ರಣ ಕೊಠಡಿಗಳಲ್ಲಿ ಸಾಂಪ್ರದಾಯಕ ಚರ್ಚೆ ನಡೆಯುತ್ತದೆ. ಈಗಾಗಲೇ, ಇಟಲಿಯ ರೋಮ್ ನಗರದಲ್ಲಿ ಕಳೆದ ವಾರದಿಂದ ವಿಶ್ವ ಸಂಸ್ಥೆಯ ಆಶ್ರಯದಲ್ಲಿ ಜಾಗತಿಕ ಹಸಿವು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಕುರಿತು ಜಾಗತಿಕ ಮಟ್ಟದ ಚರ್ಚೆ ಆರಂಭಗೊಂಡಿದೆ.
ಜಗತ್ತಿನಲ್ಲಿ ಇರುವ 700 ಕೋಟಿ ಜನಸಂಖ್ಯೆ, ಮುಂದಿನ  2050 ರ ವೇಳೆಗೆ 900 ಕೋಟಿಗೆ ಏರಲಿದೆ. ಸಧ್ಯದ ಸ್ಥಿತಿಯಲ್ಲಿ ಜಗತ್ತಿನ ಅರವತ್ತು ರಾಷ್ಟ್ರಗಳಲ್ಲಿ ಸುಮಾರು 87 ಕೋಟಿ ಜನ ಹಸಿವಿನಿಂದ ಒಂದೊತ್ತಿನ ಊಟದಲ್ಲಿ ಬದುಕು ದೂಡುತ್ತಿದ್ದಾರೆ. ಕಳೆದ 2008 ರಿಂದ ಜಾಗತಿಕ ಮಟ್ಟದಲ್ಲಿ ಗೋಧಿಯ ಬೆಲೆ ಶೇಕಡ 130 ರಷ್ಟು, ಅಕ್ಕಿ ಬೆಲೆ ಶೇಕಡ 71ರಷ್ಟು ಮತ್ತು ಬೇಳೆಕಾಳುಗಳು ಮತ್ತು ತರಕಾರಿ, ಹಣ್ಣುಗಳ ಬೆಲೆ ಶೇಕಡ 87 ರಷ್ಟು ದುಬಾರಿಯಾಗಿದೆ.
ಆಹಾರ ಪದಾರ್ಥಗಳ  ಮಿತಿಯಿಲ್ಲದ ಬೆಲೆ ಏರಿಕೆಯಿಂದಾಗಿ ಜಗತ್ತಿನ ಹಸಿವು ನೀಗಿಸಲು ವಿಶ್ವಸಂಸ್ಥೆ ಜಗತ್ತಿನ ಅರವತ್ತು ರಾಷ್ಟ್ರಗಳಲ್ಲಿ ವಾರ್ಷಿಕವಾಗಿ 61 ಕೋಟಿ, 30 ಲಕ್ಷ ಡಾಲರ್ ಹಣವನ್ನು ವ್ಯಯಮಾಡುತ್ತಿದೆ. 2030 ರ ವೇಳೆಗೆ ಇದರ ಪ್ರಮಾಣ 100 ಕೋಟಿ ಡಾಲರ್ ಮೀರಬಹುದೆಂದು ಅಂದಾಜಿಸಲಾಗಿದೆ. 2008 ರಲ್ಲಿ 36 ರಾಷ್ಟ್ರಗಳು ಮಾತ್ರ ಆಹಾರದ ಕೊರತೆ ಎದುರಿಸುತ್ತಿದ್ದವು. 2012 ರ ಅಂತ್ಯದ ವೇಳೆಗೆ ಈ ಪ್ರಮಾಣ 66 ರಾಷ್ಟ್ರಗಳಿಗೆ ವಿಸ್ತರಣೆಯಾಗಿದೆ. ಈಗಿನ ಜಾಗತಿಕ ಆಹಾರದ ಬೇಡಿಕೆಯನ್ನು ಗಮನಿಸಿದರೆ, 2030 ರ ವೇಳೆಗೆ ಶೇಕಡ 50 ರಷ್ಟು ಆಹಾರ ಮತ್ತು ಶೇಕಡ 87ರಷ್ಟು ಮಾಂಸಕ್ಕೆ ಬೇಡಿಕೆಯುಂಟಾಗಬಹುದೆಂದು ಅಂದಾಜಿಸಲಾಗಿದೆ.
ಜಗತ್ತನ್ನು ಸದಾ ತನ್ನ ಹಿಡಿತದಲ್ಲಿ ಇಟ್ಟುಕೊಂಡು, ತನ್ನ ಮೂಗಿನ ನೇರಕ್ಕೆ ನಿಯಾಮಾವಳಿ ರೂಪಿಸುವ ದೊಡ್ಡಣ್ಣನಾದ ಅಮೇರಿಕಾ ದೇಶದಲ್ಲಿ ಐದು ಕೋಟಿ ಜನತೆ ತಮ್ಮ ಅವಶ್ಯಕತೆಗೆ ತಕ್ಕಂತೆ ಆಹಾರ ಕೊಳ್ಳಲು ಅಸಮರ್ಥರಾಗಿದ್ದಾರೆ. ಒಂದು ಕೋಟಿ, ಎಪ್ಪತ್ತು ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಇದು ನಾವು ಬದುಕುತ್ತಿರುವ ವರ್ತಮಾನದ ಜಗತ್ತಿನ ವೈರುಧ್ಯವೆಂದರೆ, ಅತಿಶಯೋಕ್ತಿಯಾಗಲಾರದು. ಒಂದೆಡೆ ಹಸಿದು ಮಲಗಿದವರು, ಇನ್ನೊಂದೆಡೆ ತಿಂದದ್ದನ್ನು ಜೀರ್ಣಿಸಲಾರದೆ, ಒದ್ದಾಡುವ ಜನತೆ. ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ 17 ಕೋಟಿ ಜನತೆ ಸ್ಥೂಲದೇಹಿಗಳಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುರೋಪ್ ರಾಷ್ಟ್ರಗಳು ಸೇರಿದಂತೆ, ಅಮೇರಿಕಾದಲ್ಲಿ ಇವರ ಪ್ರಮಾಣ ಹೆಚ್ಚಾಗಿದೆ. ಇದೀಗ ಮೆಕ್ಷಿಕೊ ದೇಶದಲ್ಲಿ ಶೇಕಡ 70 ರಷ್ಟು, ಬ್ರೆಜಿಲ್ ನಲ್ಲಿ ಶೇಕಡ 48 ರಷ್ಟು ಮತ್ತು ಚೀನಾದಲ್ಲಿ ಶೇಕಡ 28 ಹಾಗೂ ಭಾರತದಲ್ಲಿ ಶೇಕಡ 18 ರ ಪ್ರಮಾಣದಲ್ಲಿ ಸ್ಥೂಲದೇಹಿಗಳ ಪ್ರಮಾಣ ಹೆಚ್ಚುತ್ತಿದೆ.
ಇಷ್ಟೆಲ್ಲಾ ವೈರುದ್ಯ ಮತ್ತು ಸಮಸ್ಯೆಗಳ ನಡುವೆಯೂ ಆಹಾರ ಉತ್ಪಾದನೆಯನ್ನು ದ್ವಿಗುಣಗೊಳಿಸುವ ದೃಷ್ಟಿಯಿಂದ 1960 ರ ದಶಕದಲ್ಲಿ ಹೈಬ್ರಿಡ್ ಬೀಜಗಳ ಮೂಲಕ ಕೃಷಿ ಉತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಲಾಯಿತು. 1970 ರ ದಶಕದಲ್ಲಿ ಭಾರತಕ್ಕೆ ಪರಿಚಯಿಸಲಾದ ಹಸಿರುಕ್ರಾಂತಿಯ ಪ್ರತಿಫಲ ಕೇವಲ ಕೆಲವೇ ವರ್ಷಗಳಿಗೆ ಮಾತ್ರ ಸೀಮಿತವಾಯಿತು. ಆರಂಭದಲ್ಲಿ ಅಧಿಕ ಇಳುವರಿ ನೀಡಿದ ಆಹಾರ ಬೆಳೆಗಳು, ನಿರಂತರ ರಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ನಾಶವಾಗುವುದರ ಜೊತೆಗೆ ಇಳುವರಿ ನೀಡುವಲ್ಲಿ ವಿಫಲವಾದವು. ಜೊತೆಗೆ  ಕ್ರಮೇಣ ಕೀಟ ಭಾಧೆಗೆ ತುತ್ತಾಗಿ ಇಳುವರಿ ಕ್ಷೀಣಿಸತೊಡಗಿತು. ಇಂದಿಗೂ ಸಹ ಜಗತ್ತಿನಲ್ಲಿ ಶೇಕಡ 25 ರಷ್ಟು ಆಹಾರ ಬೆಳೆ ಕ್ರಿಮಿ ಕೀಟಗಳ ಪಾಲಾಗುತ್ತಿದೆ.
ಅಭಿವೃಧ್ಧಿಶೀಲ ರಾಷ್ಟ್ರಗಳಲ್ಲಿ ಉತ್ಪಾದಿಸಲಾಗುತ್ತಿರುವ ಆಹಾರ ಬೆಳೆಗಳು ವೈಜ್ಙಾನಿಕ ಸಂಸ್ಕರಣೆಯ ಕೊರತೆಯಿಂದಾಗ ಶೇಕಡ 37 ರಷ್ಟು ಆಹಾರ ಧಾನ್ಯ ಪೋಲಾಗುತ್ತಿದೆ. ಆಹಾರ ಉತ್ಪಾದನೆಗಾಗಿ ಇಷ್ಟೇ ಪ್ರಮಾಣದಲ್ಲಿ ಬಳಸಲಾದ ನೀರು, ಬೀಜ, ರಸಾಯನಿಕ ಗೊಬ್ಬರ ಮತ್ತು ಮಾನವ ಶ್ರಮ ಕೂಡ ವ್ಯರ್ಥ ಎಂದು ನಾವು ಭಾವಿಸಬೇಕು. ಇಂತಹ ಸಮಸ್ಯೆ ಮತ್ತು ಸವಾಲುಗಳು ಜಾಗತಿಕ ಮಟ್ಟದಲ್ಲಿ ಎದುರಾಗಿರುವಾಗ, ಜಗತ್ತಿನ ಹಸಿವು ನೀಗಿಸುವ ಪ್ರಶ್ನೆ ಪ್ರತಿ ದಿನ ನಮ್ಮೆದುರು ಬೃಹದಾಕಾರವಾಗಿ ಬೆಳೆಯುತ್ತಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಭಾರತವೂ ಸೇರಿದಂತೆ, ಹಲವು ರಾಷ್ಟ್ರಗಳಲ್ಲಿ ಆಹಾರ ಧಾನ್ಯಗಳನ್ನು ಬಡವರಿಗೆ ಸಬ್ಸಿಡಿ ರೂಪದಲ್ಲಿ ವಿತರಿಸುವುದಕ್ಕೆ ಜಾಗತೀಕರಣದ ಗರ್ಭಗುಡಿಯಾದ ವಿಶ್ವ ವಾಣ್ಯಿಜ್ಯ ಸಂಘಟನೆ ತನ್ನ ಅಸಮಾಧಾನ ಮತ್ತು ಅಸಹನೆಯನ್ನು ವ್ಯಕ್ತಪಡಿಸಿದೆ. ವರ್ತಮಾನದ  ಜಾಗತಿಕ ಬಡತನಕ್ಕೆ ತಾನು ರೂಪಿಸಿದ, ಬಂಡವಾಳಶಾಹಿ ಪ್ರಭುತ್ವ ಮತ್ತು ಮಾನವೀಯ ಮುಖವಿಲ್ಲದ ಮಾರುಕಟ್ಟೆ ನೀತಿ ಕಾರಣ ಎಂಬ ಸತ್ಯವನ್ನು ಅರಿವಿಗೆ ತಂದುಕೊಳ್ಳಲಾರದಷ್ಟು. ವಿಸ್ಮøತಿಗೆ ದೂಡಲ್ಪಟ್ಟಿರುವ ಅಭಿವೃದ್ದಿ ಹೊಂದಿದ ಶ್ರೀಮಂತ ರಾಷ್ಟಗಳಿಗೆ ಜಗತ್ತಿನ ಬಡತನ ನಿವಾರಣೆಗಿಂತ, ಈ ನೆಲದ ಮೇಲಿನ ಬಡವರ ನಿವಾರಣೆ ಮುಖ್ಯ ಗುರಿಯಾಗಿರುವಂತೆ ತೋರುತ್ತದೆ.
ಜಾಗತಿಕವಾಗಿ ಜಾರಿಗೆ ತಂದ ಹಲವು ತಪ್ಪು ಆರ್ಥಿಕ ನೀತಿಗಳಿಂದಾಗಿ ಬಡರಾಷ್ಟ್ರಗಳು ಮತ್ತು ಅಲ್ಲಿನ ಬಡವರು ಇಂದು ತಲೆದಂಡವಾಗುತ್ತಿದ್ದಾರೆ. ವಿಶ್ವ ಆಹಾರ ಸಂಘಟನೆ ಪ್ರಕಟಿಸಿರುವ ಜಾಗತಿಕ ಆಹಾರ ಭದ್ರತೆಯ ಸೂಚ್ಯಂಕ ವರ್ತಮಾನದ ಹಸಿವಿನ ಸಂಕಟಗಳನ್ನು ನಮ್ಮೆದುರು ಅನಾವರಣಗೊಳಿಸಿದೆ. 2010 ರಿಂದ 2012 ರ ವರೆಗಿನ ಅಧ್ಯಯನದ ಪ್ರಕಾರ ಭಾರತವೂ ಸೇರಿದಂತೆ ಶೇಕಡ 15 ರಷ್ಟು ಮಾತ್ರ ಬಡಜನತೆಗೆ ಆಹಾರ ಭದ್ರತೆ ಒದಗಿಸಲಾಗಿದೆ. ಅಂದರೆ, 85 ಕೋಟಿ, 20 ಲಕ್ಷ ಜನತೆ ಸಬ್ಸಿಡಿ ರೂಪದಲ್ಲಿ ಆಹಾರ ಧಾನ್ಯಗಳು ದೊರೆಯುತ್ತಿವೆ. ಏಷ್ಯಾ ಫೆಸಿಪಿಕ್ ರಾಷ್ಟ್ರಗಳಲ್ಲಿ ಹಸಿವಿನಿಂದ ಬಳಲುತ್ತಿದ್ದವರ ಸಂಖ್ಯೆ 73 ಕೋಟಿ, 9 ಲಕ್ಷದಿಂದ 56 ಕೋಟಿ 3 ಲಕ್ಷಕ್ಕೆ ಇಳಿಕೆಯಾಗಿದೆ. ಆದರೆ, ಆಫ್ರಿಕಾ ರಾಷ್ಟ್ರಗಳಲ್ಲಿ 17 ಕೋಟಿ 50 ಲಕ್ಷದಿಂದ 32 ಕೋಟಿ 9 ಲಕ್ಷಕ್ಕೆ ಏರಿಕೆಯಾಗಿದೆ. ಇಲ್ಲಿನ ಅಭಿವೃದ್ದಿಯ ಸೂಚ್ಯಂಕ 2004-6 ರ ನಡುವೆ ಶೇಕಡ 13 ರಷ್ಟು ಇದ್ದದ್ದು, 2010-12 ರ ವೇಳೆಗೆ ಕೇವಲ ಶೇಕಡ 16 ಕ್ಕೆ ಮಾತ್ರ ಏರಿಕೆಯಾಗಿದೆ.



ಇವೊತ್ತಿನ ದಿನಗಳಲ್ಲಿ ಅಭಿವೃದ್ಧಿ ಎಂಬ ಶಬ್ಧ ತನ್ನ ಮೂಲ ಅರ್ಥವನ್ನು ಕಳೆದುಕೊಂಡುನಾಲ್ಕು ಜನ ಉಳ್ಳವರ ಸವಲತ್ತಿಗಾಗಿ ನಲವತ್ತು ಜನರ ಬದುಕನ್ನು ಬಲಿ ಕೊಡುವ ಪ್ರಕ್ರಿಯೆಯೇನೊ ಎಂಬಂತಾಗಿದೆ.  ಆಹಾರ ಭದ್ರತೆಯ ಬಗ್ಗೆ ತುಟಿಯಂಚಿನ ಮಾತುಗಳನ್ನಾಡುವ ಜನ. ಮತ್ತು ಜಾಗತಿಕರಣವನ್ನು ಪ್ರತಿಪಾದಿಸುವ ರಾಷ್ಟ್ರಗಳು ಹಾಗೂ ಅವುಗಳ ನೇತಾರರು ಇಂದಿನ ಕೃಷಿಚಟುವಟಿಕೆಯ ಮೂಲ ಆಧಾರವಾದ ಬೀಜಗಳ ಮೇಲಿನ ಹಕ್ಕು  ಕೈ ಯಾರ ಬಳಿ ಇದೆ ಎಂಬುದನ್ನು ಮರೆ ಮಾಚುತ್ತಾರೆ, ನೈಸರ್ಗಿಕ ಕೊಡುಗೆಯಾದ ಕುಡಿಯುವ ನೀರಿನ ಮೇಲೆ ಪ್ರಭುತ್ವ ಸಾಧಿಸ ಹೊರಟ ಇಂತಹ ಸ್ವಾರ್ಥ ಜಗತ್ತಿನ ಬಗ್ಗೆ ನಮ್ಮ ನಮ್ಮ ಅಲೋಚನೆಗಳನ್ನು ಬದಲಾಯಿಸಿಕೊಳ್ಳದಿದ್ದರೆ, ಇನ್ನು ಕೇವಲ ಇಪ್ಪತ್ತೈದು ವರ್ಷಗಳಲ್ಲಿ ಈ ಜಗತ್ತಿನಲ್ಲಿ ಬಾಯಿಲ್ಲದ ಬಡವರಿಗೆ, ಜಾಗವಿರುವುದಿಲ್ಲ. ಕೇವಲ ಸಾಮಥ್ರ್ಯವಿದ್ದವರಷ್ಟೇ ಬದುಕಬೇಕಾದ ಜಗತ್ತಾಗಿ ಇದು ಪರಿವರ್ತನೆ ಹೊಂದುತ್ತದೆ. ಪ್ರತಿದಿನ ಅಪೌಷ್ಟಿಕತೆಯಿಂದಾಗಿ 46 ಸಾವಿರ ಮಕ್ಕಳು ಜಗತಿನಾದ್ಯಂತ ಸಾಯುತ್ತಿರುವುದು ಈ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸುತ್ತಿದೆ.
ಇತ್ತಿಚೆಗೆ ಬಡವರ ಹಸಿವು ನೀಗಿಸಲು ಭಾರತದಲ್ಲಿ ಜಾರಿಗೆ ಬಂದ ಆಹಾರ ಭದ್ರತೆ ಮಸೂದೆ ಕುರಿತಂತೆ ಕುಹಕದ ಮಾತುಗಳು  ಕೇಳಿಬಂದವು. ಇಂತಹ ಕೀಳು ಅಭಿರುಚಿಯ ಮಾತನಾಡುವ ಜನ, ಜನತೆಯ ಹಸಿವು ನೀಗಿಸುವುದು ಅನ್ನವೆ ಹೊರತು ಚಿನ್ನವಲ್ಲ ಎಂಬ ವಾಸ್ತವವನ್ನು ಮರೆಯುತ್ತಾರೆ. ಭಾರತದಂತ ದೇಶ ಪ್ರತಿ ವರ್ಷ ಒಂದು ಸಾವಿರ ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ ಎಂಬ ಅಂಶ ಇವರಿಗೆ ಅಪಮಾನದ ಸಂಗತಿ ಎನಿಸುವುದಿಲ್ಲ, ಆದರೆ, ಬಡವರಿಗೆ ಸಬ್ಸಿಡಿ ರೂಪದಲ್ಲಿ ಆಹಾರ ವಿತರಿಸಿದರೆ, ಇವರ ಕಣ್ಣು ಕೆಂಪಾಗುತ್ತವೆ.
ದೇಶದ ಒಟ್ಟು 121 ಕೋಟಿ ಜನಸಂಖ್ಯೆಯಲ್ಲಿ ಒಟ್ಟಾರೆ ಶೇಕಡ 67 ರಷ್ಟು ಜನತೆ ತಮ್ಮ ಅವಶ್ಯಕತೆಗೆ ತಕ್ಕಂತೆ ಆಹಾರ ಪದಾರ್ಥಗಳನ್ನು ಕೊಳ್ಳಲು ಅಸಮರ್ಥರಾಗಿದ್ದಾರೆ. ಇವರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇಕಡ 75 ಮತ್ತು ನಗರ ಪ್ರದೇಶಗಳಲ್ಲಿ ಶೇಕಡ 50 ರಷ್ಟು ಇದ್ದಾರೆ. ಅಂದರೆ, ದೇಶದ ಜನಸಂಖ್ಯೆಯ ಮುಕ್ಕಾಲು ಭಾಗ ಎಂದು ಹೇಳಬಹುದು. 1990 ದಶಕದಿಂದ ಭಾರತದಲ್ಲಿ ಜಾರಿಗೆ ಬಂದ ಉದಾರೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆ ಮತ್ತು ಆದರ್ಶ ಮರೆಯಾಗತೊಡಗಿದೆ. ಬಹುತೇಕ ಬಡವರು, ಕೃಷಿಕರು ಮತ್ತು ಕೂಲಿಕಾರರು ವಾಸಿಸುವ ಗ್ರಾಮಾಂತರ ಪ್ರದೇಶಗಳು ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬಡವವರು ಬಡವರಾಗಿ ಉಳಿದಿದ್ದಾರೆ, ಶ್ರೀಮಂತರ ಸಂಪತ್ತು ಪ್ರತಿ ವರ್ಷ ವೃದ್ಧಿಸುತ್ತಲೇ ಇದೆ. ಇಂತಹ ಅಸಮರ್ಪಕ ಬೆಳವಣಿಗಳ ಹಿಂದೆ ತಪ್ಪು ರಾಜಕೀಯ ನೀತಿಗಳಿವೆ ಎಂಬುದನ್ನು ಸಧ್ಯದ ಸ್ಥಿತಿಯಲ್ಲಿ ಯಾರೂ ಒಪ್ಪುವುದಿಲ್ಲ. ಈ ದಿನಗಳಲ್ಲಿ ಬಡವರಿಗೆ ನೀಡುತ್ತಿರುವ ಸಬ್ಸಿಡಿ, ಇತರೆ ಸವಲತ್ತುಗಳ ಹಿಂದಿರುವ ರಾಜಕೀಯ ಓಲೈಕೆಯನ್ನು ನಾವು ತಳ್ಳಿ ಹಾಕಲಾಗದು.
ಬಡತನವನ್ನು ಕೇವಲ ಆರ್ಥಿಕ ಮಾನದಂಡದಿಂದ ಅಳೆಯುವ ಬದಲು. ಹಲವು ಆಯಾಮಗಳಿಂದ ಗುರುತಿಸಬೆಕಾಗುತ್ತದೆ. ಬಡವರ ಹಸಿವು, ಅವರು ಬಳಸುವ ಅಹಾರದ ಪ್ರಮಾಣ, ಸಿಗುತ್ತಿರುವ ಆರೋಗ್ಯ, ಶಿಕ್ಷಣ, ವಸತಿ ಸವಲತ್ತುಗಳು ಇವುಗಳನ್ನು ಪರಿಗಣನೆ ತೆಗೆದುಕೊಂಡರೆ, ಭಾರತದ ಸ್ಥಿತಿ ಗತಿ ತೀರಾ ಶೋಚನೀಯವಾಗಿದೆ, 2010 ರಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ, ಜಗತ್ತಿನ 185 ರಾಷ್ಟ್ರಗಳಲ್ಲಿ 119 ನೇ ಸ್ಥಾನದಲ್ಲಿದ್ದ ಭಾರತ, 1012 ರಲ್ಲಿ 134 ನೇ ಸ್ಥಾನಕ್ಕೆ ಕುಸಿದಿದೆ. ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಏಷ್ಯಾ  ರಾಷ್ಟ್ರಗಳಲ್ಲಿ ಭಾರತದ ಸ್ಥಾನ 29 ನೇಯದು.
ಇಂತಹ  ಆತಂಕಕಾರಿ ಬೆಳವಣಿಗೆಗಳ ನಡುವೆ, ದೇಶದಲ್ಲಿ ಜಾರಿಗೆ ಬಂದ ಆಹಾರ ಭದ್ರತೆ ಮಸೂದೆಯಿಂದಾಗಿ ಒಟ್ಟು 87 ಕೋಟಿ, 30 ಲಕ್ಷ ಜನತೆ ಸಬ್ಸಿಡಿ ರೂಪದಲ್ಲಿ ಆಹಾರ ಪಡೆಯುತ್ತಿದ್ದಾರೆ.  ಅಸಮರ್ಪಕವಾಗಿರುವ  ಸಾರ್ವಜನಿಕ ಪಡಿತರ ಪದ್ದತಿಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸಿ, ಅಹಾರ ಪದಾರ್ಥಗಳು ಕಾಳಸಂತೆಯ ಪಾಲಾಗದಂತೆ ನೋಡಿಕೊಂಡು, ಬಡವರಿಗೆ ತಲುಪುವಂತೆÀ ಮಾಡುವುದು ನಮ್ಮ ಸರ್ಕಾರಗಳ ನೈತಿಕ ಜವಾಬ್ದಾರಿಯಾಗಿದೆ.
ಜಗತ್ತಿನ ಅಸಹಾಯಕ ಜನರ ಹಸಿವು ನೀಗಿಸುವ ಇಂತಹ ಕಾರ್ಯಕ್ರಮಗಳು  ತಾತ್ಕಾಲಿಕ ಕ್ರಿಯೆಗಳಾಗಿರಬೇಕೇ ಹೊರತು, ಇವು ಶಾಶ್ವತ .ಕಾರ್ಯಕ್ರಮಗಳಾಗಬಾರದು. ಇವು ಶಾಶ್ವತ ಪ್ರಕ್ರಿಯೆಯಾದರೆ, ಬಡವರನ್ನು ಬಡವರನ್ನಾಗಿ ಇಡುವ ಮತ್ತು ಕಾಪಾಡುವ ಹುನ್ನರಗಳಾಗಿ ಗಟ್ಟಿಯಾಗುತ್ತಾ ಹೊಗುತ್ತವೆ. ಹಾಗಾಗಿ ಬಡವರ ಹಸಿವು ನೀಗಿಸುವುದರ ಜೊತೆ ಜೊತೆಗೆ ಅವರಿಗೆ ಸೌಲಭ್ಯಗಳು, ಸವಲತ್ತುಗಳನ್ನು ಒದಗಿಸಿ ಕೊಡುವುದರ ಮೂಲಕ  ಬಡತನದ ಕೂಪದಿಂದ ಮೇಲೆತ್ತುವ ಕ್ರಿಯೆ ನಿರತರ ಜಾರಿಯಲ್ಲಿರಬೇಕು. ಆಗ ಮಾತ್ರ ಈ ಜಗತ್ತಿನಲ್ಲಿ ಮತ್ತು ಈ ದೇಶದಲ್ಲಿ ಹಸಿವಿನ ಆಕ್ರಂದನಗಳು  ನಿಲ್ಲಬಹುದು.
                           

                            ( 16-10-13 ರ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಶನಿವಾರ, ಅಕ್ಟೋಬರ್ 12, 2013

ಗಾಂಧಿ ಅರ್ಥಶಾಸ್ತ್ರದ ರೂವಾರಿ ಜೆ.ಸಿ. ಕುಮಾರಪ್ಪ ಒಂದು ನೆನಪು

ವಾರ್ಧಾ ಬಳಿಯ ಸೇವಾಗ್ರಾಮದಲ್ಲಿ ಇಂದಿಗೂ ಸಹ ಅಲ್ಲಿನ ಪ್ರತಿ ದಿನದ ಚಟುವಟಿಗಳು ಪ್ರಾರ್ಥನೆಯಾದ ನಂತರ, ಜೆ.ಸಿ. ಕುಮಾರಪ್ಪ ವಾಸವಾಗಿದ್ದ ಕುಟೀರದ ಬಳಿ  ನಮನ ಸಲ್ಲಿಸುವುದರೊಂದಿಗೆ, ಅಲ್ಲಿರುವ ಗ್ರಾಮೀಣ ವಿಜ್ಙಾನ ಕೇಂದ್ರದಲ್ಲಿ ಕಾರ್ಯಗಳು ಆರಂಭಗೊಳ್ಳುತ್ತವೆ. ಜಗತ್ತು ಈಗಾಗಲೆ ಭಾರತವೂ ಸೇರಿದಂತೆ ಆಧುನಿಕ ಜಗತ್ತು  ಗುರುತಿಸಿರುವ ಗಾಂಧಿ ಅರ್ಥಶಾಸ್ತ್ರವನ್ನು ಪ್ರಯೋಗ ಮತ್ತು ಫಲಿತಾಂಶಗಳ ಮೂಲಕ ಜಾರಿಗೆ ತಂದವರು ಜೆ.ಸಿ. ಕುಮಾರಪ್ಪ.
ಗಾಂಧೀಜಿ ಅಮೂರ್ತವಾಗಿ ಏನೇನು ಕನಸಿದ್ದರೊ, ಅವೆಲ್ಲವನ್ನು ಸಾಕಾರಗೊಳಿಸಿದ ಕುಮಾರಪ್ಪ, ಗಾಂಧೀಜಿಯವರ ಚಿಂತನೆಗಳಿಗೆ ಮೂರ್ತ ಸ್ವರೂಪ ನೀಡುವುದರ ಮೂಲಕ ಅರ್ಥಶಾಸ್ತ್ರಕ್ಕೆ ಹೊಸ ವ್ಯಾಖ್ಯಾನ ನೀಡಿದರು. ಗ್ರಾಮಭಾರತ ಕುರಿತಂತೆ, ಕೈಗಾರಿಕೆಗಳ ವಿಕೇಂದ್ರೀಕರಣ, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ, ಪರಿಸರಕ್ಕ ಧಕ್ಕೆಯಾಗದಂತೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹಾಗೂ ಶ್ರಮ ವಿಭಜನೆ ಹೀಗೆ ತಮ್ಮ ಪ್ರತಿಭೆ ಮತ್ತು ಚಿಂತನೆಯನ್ನು ಧಾರೆಯೆರೆದ ಜೆ.ಸಿ. ಕುಮಾರಪ್ಪನವರುದೈನಂದಿನ ಬದುಕಿನ ಲೌಕಿಕ ವ್ಯವಹಾರಕ್ಕೆ ಆಧ್ಯಾತ್ಮದ ಸ್ಪರ್ಶ ನೀಡಿ, ಶಾಶ್ವತ ಅರ್ಥಶಾಸ್ತ್ರ ಮತ್ತು ನಶ್ವರ ಅರ್ಥಶಾಸ್ತ್ರ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕುವುದರ ಮೂಲಕ ಗಾಂಧಿ ಅರ್ಥಶಾಸ್ತ್ರ ಎಂಬ ಜಾÐನ ಶಾಖೆಯೊಂದನ್ನು ಅಸ್ತಿತ್ವಕ್ಕೆ ತಂದರು.
ಮೂಲತಃ ಕ್ರೈಸ್ತ ಧರ್ಮಕ್ಕೆ ಸೇರಿದ ಕುಮಾರಪ್ಪನವರ ಪೂರ್ಣ ಹೆಸರು ಜೋಸೆಪ್ ಕಾರ್ನೆಲಿಯಸ್  ಎಂದು. ತಮಿಳುನಾಡಿನ ತಂಜಾವೂರಿನಲ್ಲಿ 4-1-1892 ರಲ್ಲಿ ಜನಸಿದ ಕುಮಾರಪ್ಪನªರ ಪೂರ್ವಿಕರು ಮೂಲತಃ ಹಿಂದುಗಳಾಗಿದ್ದು, ಬ್ರಿಟೀಷರ ಆಳ್ವಿಕೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಇಂಗ್ಲೇಂಡ್ ಮತ್ತು ಅಮೇರಿಕಾದಲ್ಲಿ ಸಾರ್ವಜನಿಕ ಹಣಕಾಸು ಮತ್ತು ಲೆಕ್ಕ ಪರಿಶೋಧಕ ವಿóಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಗಳಿಸಿದ್ದ ಕುಮಾರಪ್ಪ, ಅಂದಿನ ಬಾಂಬೆ ನಗರದಲ್ಲಿ ಬ್ರಿಟೀಷ್ ಸಂಸ್ಥೆಯೊಂದರಲ್ಲಿ ಲೆಕ್ಕ ಪರಿಶೋಧಕನಾಗಿ ವೃತ್ತಿ ಆರಂಭಿಸಿ, ನಂತರ ತಮ್ಮದೆ ಸ್ವಂತ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಎಂದೂ ಹಣದ ಮೇಲೆ ಮೋಹ ಬೆಳಸಿಕೊಳ್ಳದ ಕುಮಾರಪ್ಪ, “ ಮನುಷ್ಯನಿಗೆ ಹಣ ಸಂಪಾದನೆ ಮುಖ್ಯವಲ್ಲ, ರಾಜಕೀಯವಾಗಿ, ಸಾಮಾಜಿಕವಾಗಿ, ಶುದ್ಧಚಾರಿತ್ರ್ಯ ಕಾಪಾಡಿಕೊಂಡು, ಆಧ್ಯಾತ್ಮಕವಾಗಿಯೂ ಕೂಡ ಮನುಷ್ಯ ನೆಮ್ಮದಿ ಪಡೆಯಬಹುದುಎಂದು ಪ್ರತಿ ಪಾದಿಸುತ್ತಿದ್ದರು. ಜೊತೆಗೆ ಎಂದೂ ತಪ್ಪು ಮಾಡಬೇಡಿ, ನೀವು ಮಾಡುವ ತಪ್ಪಿಗೆ ಮತ್ತೊಬ್ಬರು ನರಳುತ್ತಾರೆಎಂದೂ ಸದಾ ಎಚ್ಚರಿಸುತ್ತಿದ್ದರು, ಜೊತೆಗೆ ಇಂತಹ ನೈತಿಕ ಪ್ರಜೆÐಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಕುಮಾರಪ್ಪನವರ ಇಂತಹ ಶಿಸ್ತಿನ ಜೀವನ ಮತ್ತು ವಿಚಾರೆಧಾರೆ, ಅಂತಿಮವಾಗಿ ಅವರನ್ನು ಗಾಂಧೀಜಿಯವರತ್ತ ಕೊಂಡೊಯ್ದು ನಿಲ್ಲಿಸಿತು.
ಕುಮಾರಪ್ಪನವರ ಆರ್ಥಿಕ ಶಿಸ್ತು, ಮತ್ತು ಆಧ್ಯಾತ್ಮಕ ಒಲವು ಇವುಗಳ ಹಿಂದೆ ಅವರ ಹೆತ್ತ ತಾಯಿಯವರ ಪ್ರಭಾವ ದಟ್ಟವಾಗಿದೆ. ಅವರ ತಂದೆ ಎಸ್.ಡಿ. ಕಾರ್ಲೆನಿಯಸ್  ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರಿಂದ ಅವರದು ಮಧ್ಯಮವರ್ಗದ ಕುಟುಂಬವಾಗಿತ್ತು. ಕುಮಾರಪ್ಪನವರ ತಾಯಿ ಎಸ್ತರ್ ರಾಜನಾಯಕನ್ ತಮ್ಮ ಗೃಹ ಕೃತ್ಯದ ಜೊತೆಗೆ ಪೇಟೆಗೆ ಹೋಗಿ ಕೋಳಿ ಮತ್ತು ಮೊಟ್ಟೆಗಳನ್ನು ತಂದು ತಮ್ಮ ಬಡಾವಣೆಯಲ್ಲಿ ಮಾರಾಟ ಮಾಡುತ್ತಿದ್ದರು. ಇದರ ಲೆಕ್ಕಾಚಾರ ಬರೆದಿಡುವ ಜವಾಬ್ದಾರಿ ಬಾಲಕ ಕುಮಾರಪ್ಪನವರ ಮೇಲಿತ್ತು. ಪ್ರತಿ ತಿಂಗಳು ಕೋಳಿಗಳು ಮತ್ತು ಮೊಟ್ಟೆಗಳಿಗೆ ವಿನಿಯೋಗಿಸಿದ ಬಂಡವಾಳ, ಹಾಗೂ ಅವುಗಳ ಮಾರಾಟದಿಂದ ಬಂದ ಲಾಭ ಇವೆಲ್ಲನ್ನೂ ಕರಾರುವಕ್ಕಾಗಿ ಕುಮಾರಪ್ಪ ಲೆಕ್ಕ ಬರೆದು ತಾಯಿಗೆ ಒಪ್ಪಿಸುತ್ತಿದ್ದರು. ವರ್ಷದ ಕೊನೆಯಲ್ಲಿ ಬಂದ ಲಾಭದಲ್ಲಿ ಶೇಕಡ ಇಪ್ಪತ್ತೈದು ಭಾಗವನ್ನು ಅವರ ತಾಯಿ ಕ್ರಿಸ್ ಮಸ್ ಹಬ್ಬದ ಸಮಯದಲ್ಲಿ ಬಡವರಿಗೆ ದಾನದ ರೂಪದಲ್ಲಿ ನೀಡುತ್ತಿದ್ದರು. ಹೀಗೆ ಬಾಲ್ಯದಲ್ಲಿ ತಾಯಿಯಿಂದ ಕಲಿತ ಲೆಕ್ಕಾಚಾರ ಮತ್ತು ಧಾನ ಧರ್ಮದಂತಹ ಆಚಾರ, ವಿಚಾರ, ಶಿಸ್ತು ಇವೆಲ್ಲವೂ  ಕುಮಾರಪ್ಪನವರ ಬದುಕಿನುದ್ದಕ್ಕೂ ಅವರನ್ನು ಆವರಿಸಿಕೊಂಡವು.

1913 ರಲ್ಲಿ ಲಂಡನ್ ನಗರಕ್ಕೆ ತೆರಳಿ, ಲೆಕ್ಕ ಪರಿಶೋಧಕನಾಗಿ ತರಬೇತಿ ಮತ್ತು ಪದವಿಯನ್ನು ಪಡೆದು , 1919 ರಲ್ಲಿ ಭಾರತಕ್ಕೆ ವಾಪಸ್ ಬಂದ ಕುಮಾರಪ್ಪ, ಅವರ ತಂದೆ ತಾಯಿಯ ಸಲಹೆಯಂತೆ ಬಾಂಬೆ ನಗರದಲ್ಲಿ ನೆಲೆ ನಿಂತು. ಬ್ರಿಟೀಷ್ ಲೆಕ್ಕ ಪರಿಶೋಧನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಬಾರತದ ಜನಸಾಮಾನ್ಯರು ಮತ್ತು ವರ್ತಕರನ್ನು ತೆರಿಗೆ ರೂಪದಲ್ಲಿ ಸುಲಿಯುತ್ತಿರುವ ಸಂಗತಿ ಅವರ ಗಮನಕ್ಕೆ ಬಂದಿತು. 1924 ರಲ್ಲಿ ಬ್ರಿಟೀಷ್ ಸಂಸ್ಥೆಯ ಉದ್ಯೋಗ ತೊರೆದು ಕಾರ್ಲೆನಿಯಸ್ ಅಂಡ್ ದೇವರ್ಎಂಬ ಹೆಸರಿನಲ್ಲಿ ಸ್ವಂತ ಸಂಸ್ಥೆಯನ್ನು ಆರಂಭಿಸಿ, ಆರ್ಥಿಕ ಮತ್ತು ತೆರಿಗೆ ಸಲಹೆಗಾರರಾಗಿ ವೃತ್ತಿ ಜೀವನ ಆರಂಭಿಸಿದರು. 1927 ರಲ್ಲಿ ಸಾರ್ವಜನಿಕ ಹಣಕಾಸು ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಉದ್ದೇಶದಿಂದ ಅಮೇರಿಕಾದ ಕೊಲಂಬಿಯ ವಿಶ್ವವಿದ್ಯಾನಿಲಯಕ್ಕೆ ತೆರಳಿದರು. ಅಲ್ಲಿನ ಸ್ಥಳೀಯ ಚರ್ಚ್ ಒಂದರಲ್ಲಿ ಕುಮಾರಪ್ಪ ನೀಡಿದ್ದಭಾರತದ ಬಡತನ ಕುರಿತ ಉಪನ್ಯಾಸದ ವರದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿ ಪ್ರಕಟವಾಗಿತ್ತು. ಇದು ಅವರ ಗುರುಗಳಾದ ಡಾ.ಸಲಿಗ್‍ಮನ್  ಅವರ ಗಮನಕ್ಕೆ ಬಂತು. ತಮ್ಮ ಶಿಷ್ಯನ ಪ್ರತಿಭೆಯನ್ನು ಗಮನಿಸಿದ ಸಲಿಗ್ ಮನ್ಎಂ.ಎ, ಪದವಿಯಲ್ಲಿ ಭಾರತದ ಬಡತನ ಮತ್ತು ಸಾರ್ವಜನಿಕ ಹಣಕಾಸುವಿಷಯ ಕುರಿತು ಪ್ರಬಂಧ ಬರೆಯಲು ಸೂಚಿಸಿದರು. ಈ ಕುರಿತು ಅಧ್ಯಯನ ಆರಂಭಿಸಿದ ಕುಮಾರಪ್ಪನವರಿಗೆ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸುಲಿಗೆಯ ವೈಖರಿಯ ಇತಿಹಾಸ ಅವರೆದುರು ಅನಾವರಣಗೊಂಡಿತ್ತು. ಈ ಸಂದರ್ಭದಲ್ಲಿ  ಬ್ರಿಟೀಷ್ ಸರ್ಕಾರದ ವಿರುದ್ಧ ಅವರೆಷ್ಟು  ಕ್ರೋಧಗೊಂಡಿದ್ದÀರೆಂದರೆ, ತಮ್ಮ ಮೂಲ ಹೆಸರಾದ ಜೋಸೆಪ್ ಕಾರ್ಲೆನಿಯಸ್ ಹೆಸರಿನ ಮುಂದೆ ಮತ್ತೆ ತಮ್ಮ ಪೂರ್ವಿಕರ ಹೆಸರಾದ ಹಿಂದೂ ಧರ್ಮದ ಕುಮಾರಪ್ಪ ಎಂಬ ಹೆಸರನ್ನು ಸೇರಿಸಿಕೊಂಡರು. 1929 ರಲ್ಲಿ ಭಾರತಕ್ಕೆ ಹಿಂತಿರುಗಿ ಬಂದ ಕುಮಾರಪ್ಪ, ಸಿ. ಹೆಚ್. ಸಫಾರಿವಾಲ ಎಂಬುವರ ಸಲಹೆ ಮೇರೆಗೆ ಗಾಂಧೀಜಿಯನ್ನು ಬೇಟಿ ಮಾಡಿದರು. ಆ ವೇಳೆಗಾಗಲೆ ಮದನ್ ಮೋಹನ್ ಮಾಳವೀಯ ಮುಖಾಂತರ ಕುಮಾರಪ್ಪನವರ ಬರಹಗಳನ್ನು ಓದಿದ್ದ ಗಾಂಧೀಜಿ, ತನ್ನಂತೆ ಭಾರತದ ಹಳ್ಳಿಗಳ ಬಗ್ಗೆ ಚಿಂತಿಸುತ್ತಿರುವ ವಿದ್ಯಾವಂತ ಯುವಕ ಕುಮಾರಪ್ಪನವರ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು. 1929 ರ ಕೊನೆಯ ದಿನಗಳಲ್ಲಿ ಬಾಂಬೆಯಿಂದ ಅಹಮದಾಬಾದ್‍ಗೆ ತೆರಳಿದ ಕುಮಾರಪ್ಪ, ಸಬರಮತಿ ಆಶ್ರಮದಲ್ಲಿ ಗಾಂಧೀಜಿಯನ್ನು ಬೇಟಿ ಮಾಡಿದರು. ಆವರೆಗೆ ಕೇವಲ ಪತ್ರಿಕೆಗಳಲ್ಲಿ ಪ್ರಕಟವಾಗುವ ಚಿತ್ರಗಳಲ್ಲಿ ಮಾತ್ರ ಗಾಂಧಿಯನ್ನು ನೋಡಿದ್ದ ಕುಮಾರಪ್ಪ, ಮೊದಲ ಬಾರಿಗೆ ಅವರನ್ನು ನೋಡಿದಾಗ, ಸ್ವಲ್ಪ ಕಾಲ ಗೊಂದಲವುಂಟಾಯಿತು. ಸಬರಮತಿ ಆಶ್ರಮದ ತಮ್ಮ ನಿವಾಸದ ಎದುರುಗಿನ ಬೇವಿನ ಮರದ ನೆರಳಿನಲ್ಲಿ ಸಗಣಿಯಿಂದ ಸಾರಿಸದ್ದ ನೆಲದ ಮೇಲೆ ಕುಳಿತ  ಓರ್ವ ವೃದ್ಧ  ಚರಕದಿಂದ ನೂಲು ನೇಯುತ್ತಿರುವುದನ್ನು ಕಂಡು ಹತ್ತಿರಕ್ಕೆ ಹೋದಾಗ, ಅವರು ಗಾಂಧಿಯೊ? ಅಲ್ಲವೊ? ಎಂಬ ಅನುಮಾನವುಂಟಾಯಿತು. ಕುಮಾರಪ್ಪ ನೇರವಾಗಿ ಅವರನ್ನೇ ಕೇಳಿದರು. ನೀವು ಮೋಹನ ದಾಸ್ ಕರಮಚಂದ ಗಾಂಧಿ ತಾನೆ? ಹಲ್ಲಿಲ್ಲದ ತಮ್ಮ ಬೊಚ್ಚುಬಾಯಿಯಲ್ಲಿ ಮುಖದ ತುಂಬಾ ನಗು ತಂದುಕೊಂಡ ಗಾಂಧೀಜಿ ಹೌದು ನಾನೇ ಆ ಗಾಂಧಿಎಂದು ಕುಮಾರಪ್ಪನವರಿಗೆ ಉತ್ತರಿಸಿದ್ದರು. ಸೂಟು ಬೂಟು ಧರಿಸಿ ಹೋಗಿದ್ದ ಕುಮಾರಪ್ಪನವರಿಗೆ ಕೂರಲು ಕುರ್ಚಿಯೊಂದನ್ನು ತರಿಸಿದಾಗ, ಅದರ ಮೇಲೆ ಗಾಂಧೀಜಿ ಎದುರು ಕೂರಲು ನಿರಾಕರಿಸಿದ ಕುಮಾರಪ್ಪ ಕಷ್ಟ ಪಟ್ಟು ನೆಲದ ಮೇಲೆ  ಕುಳಿತರು
ಕುಮಾರಪ್ಪನವರ ಪ್ರಬಂಧ ಹಾಗೂ ಲೇಖನಗಳ ಕುರಿತು ಮೆಚ್ಚುಗೆಯ ಮಾತನಾಡಿದ ಗಾಂಧೀಜಿ, ತಾವು ಸಂಪಾದಿಸುತ್ತಿದ್ದ ಯಂಗ್ ಇಂಡಿಯ ಮತ್ತು ಹರಿಜನ ಪತ್ರಿಕೆಗಳಿಗೆ ಲೇಖನ ಬರೆಯುವಂತೆ ಕುಮಾರಪ್ಪನವರನ್ನು ಆಹ್ವಾನಿಸಿದರು. ಅಲ್ಲದೆ, ಗುಡಿ ಕೈಗಾರಿಕೆ, ಮತ್ತು ಸ್ಥಳೀಯ ದೇಶಿ ತಂತ್ರಜಾÐನ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಗುಜರಾತಿನ ಖೇಡ್ ಜಿಲ್ಲೆಯ ಮಾಟಾರ್ ತಾಲ್ಲೂಕಿನ ಅಧ್ಯಯನ ನಡೆಸುವಂತೆ ವಿನಂತಿಸಿಕೊಂಡರು. ಗಾಂಧೀಜಿ ಅಣತಿಯಂತೆ  ಕುಮಾರಪ್ಪ ಅಧ್ಯಯನ ಮುಗಿಸಿ ಬರುವದರೊಳಗೆ, ಮಹಾತ್ಮ ತಮ್ಮ ಉಪ್ಪಿನ ಸತ್ಯಾಗ್ರಹದ ಅಂಗವಾಗಿ ಕಾಲ್ನಡಿಗೆಯಲ್ಲಿ ಅಹಮದಾಬಾದಿನಿಂದ 240 ಕಿಲೋಮೀಟರ್ ದೂರದ ಸೂರತ್ ಸಮೀಪದ ದಂಡಿಗೆ ಪ್ರಯಾಣ ಆರಂಭಿಸಿದ್ದರು. ಒಮ್ಮೆ ಮಾರ್ಗ ಮಧ್ಯೆ ಗಾಂಧೀಜಿಯನ್ನು ಬೇಟಿ ಮಾಡಿದಾಗ, ಕುಮಾರಪ್ಪನವರಿಗೆ ಗಾಂಧೀಜಿ ಮತ್ತೊಂದು ಜವಾಬ್ದಾರಿ ವಹಿಸಿದರು. ಯಾವುದೇ ಸಂದರ್ಭದಲ್ಲಿ ತಾನು ಮತ್ತು ಮಹದೇವ ದೇಸಾಯಿ ( ಗಾಂಧಿಯವರ ಆಪ್ತ ಕಾರ್ಯದರ್ಶಿ) ಬ್ರಿಟೀಷ್ ಸರ್ಕಾರದಿಂದ ಬಂಧನಕ್ಕೊಳಗಾಗುವ ಸಾಧ್ಯತೆ ಇದ್ದು, ನಾವು ಬಂಧಿಸಲ್ಪಟ್ಟರೆ, ಯಂಗ್ ಇಂಡಿಯ ಪತ್ರಿಕೆಯ ಸಂಪಾದಕತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಗಾಂಧೀಜಿ  ವಿನಂತಿಸಿಕೊಂಡರು. ಅವರ ನಿರೀಕ್ಷೆಯಂತೆ ಉಪ್ಪಿನ ಸತ್ಯಾಗ್ರಹ ವೇ¼ಯಲ್ಲಿÉ ಗಾಂಧಿಜಿ ಬಂಧಿಸಲ್ಪಟ್ಟಾಗ, ಯಂಗ್ ಇಂಡಿಯಾ ಪತ್ರಿಕೆಯ ಸಂಪಾದಕನಾಗಿ ಹೊಣೆ ಹೊತ್ತ ಕುಮಾರಪ್ಪ, ಬ್ರಿಟೀಷ್ ಸರ್ಕಾರದ ವಿರುದ್ಧ ಪತ್ರಿಕೆಯಲ್ಲಿ ಲೇಖನ ಬರೆದರು. ಅದರ ಪರಿಣಾಮವಾಗಿ ಅವರೂ ಸಹ ಬಂಧನಕ್ಕೊಳಗಾಗಿ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಆನಂತರ ಮತ್ತೊಮ್ಮೆ ಇಂತಹದ್ದೇ ಕೃತ್ಯವೆಸಗಿ ಮತ್ತೆ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದರು. 
ತಮ್ಮ ಬದುಕು ತೆಗೆದು ಕೊಂಡ ಅನಿರೀಕ್ಷಿತ ತಿರುವುಗಳ ಫಲವಾಗಿ ಕುಮಾರಪ್ಪನವರಿಗೆ ಸರಮನೆಯ ವಾಸದ ಅವಧಿಯಲ್ಲಿ ಅವರ ಬದುಕಿನ ಅಲೋಚನಾ ಕ್ರಮ ಬದಲಾವಣೆಗೊಂಡಿತು. ಭಾರತವನ್ನು ಬ್ರಿಟೀಷರಿಂದ ಬಿಡುಗಡೆ ಮಾಡುವುದರ ಜೊತೆ ಜೊತೆಗೆ ಇಲ್ಲಿನ ಜನರನ್ನು ಬಡತನದಿಂದ ಮತ್ತು ಸಂಕಟಗಳಿಂದ  ಮುಕ್ತಿ ಗೊಳಿಸಬೇಕೆಂಬ ಛಲ ಉಂಟಾಯಿತು. ಈ ಛಲ ಅವರನ್ನು ಭಾರತದ ಗ್ರಾಮೀಣಭಿವೃದ್ಧಿ ಮತ್ತು ನಮ್ಮ ಪೂರ್ವಿಕರ ದೇಶಿಯ ಜಾÐನ ಶಿಸ್ತುಗಳನ್ನು ಪುನರ್ ರೂಪಿಸಲು ಪ್ರೇರಣೆಗೊಳಿಸಿತು. ಭಾರತದ ಹಳ್ಳಿಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಹಳ್ಳಿಗಳಲ್ಲಿ ವಾಸಮಾಡಿದಾಗ ಮಾತ್ರ, ಗ್ರಾಮಭಾರತದ ನಾಡಿ ಮಿಡಿತ ಅರಿಯಲು ಸಾಧ್ಯ ಎಂಬ ತೀರ್ಮಾನಕ್ಕೆ ಬಂದರು. ಇದೇ ಸಮಯಕ್ಕೆ ಸರಿಯಾಗಿ, 1934 ರಲ್ಲಿ ಬಿಹಾರದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ  ನೆಲಸಮವಾದ ಹಳ್ಳಿಗಳ ಪುನರುಜ್ಜೀವನ ಮತ್ತು ಸಂತ್ರಸ್ತರ ಪುನರ್ವಸತಿ ಕಾರ್ಯ ಈ ಎರಡು ಜವಾಬ್ದಾರಿಗಳು ಕುಮಾರಪ್ಪನವರ ಹೆಗಲೇರಿದವು. ಗಾಂಧೀಜಿಯವರು ಭೂಕಂಪದ ಸಂತಸ್ತರಿಗಾಗಿ  ದೇಶಾದ್ಯಂತ ಸಂಗ್ರಹಿಸಿದ್ದ ಪರಿಹಾರದ ಹಣವನ್ನು ಕುಮಾರಪ್ಪನವರ ಕೈಗಿತ್ತು, ನೂರಾರು ಕಾರ್ಯಕರ್ತರ ಪಡೆಯೊಂದನ್ನು ಅವರ ಜೊತೆ ಬಿಹಾರಕ್ಕೆ ಕಳಿಸಿಕೊಟ್ಟರು.
ಕುಮಾರಪ್ಪನವರ ಆರ್ಥಿಕ ಶಿಸ್ತು ಮತ್ತು ಹಣಕಾಸು ನಿರ್ವಹಣೆಯಲ್ಲಿ ಅವರಿಗಿದ್ದ ಬದ್ಧತೆ ಇವೆಲ್ಲವನ್ನೂ ಸ್ವತಃ ಗಾಂಧೀಜಿ ಕಣ್ಣಾರೆ ಕಂಡು, ಅನುಭವಿಸಿ ಮೆಚ್ಚುಗೆ ಸೂಚಿಸಿದರು. ಪರಿಹಾರದ ಹಣದಲ್ಲಿ ಪ್ರತಿ ಕಾರ್ಯಕರ್ತನಿಗೆ ಊಟಕ್ಕಾಗಿ ಪ್ರತಿ ದಿನ ಮೂರಾಣೆ ( ಹದಿನೆಂಟು ಪೈಸೆ) ಖರ್ಚು ಮಾಡುತ್ತಿದ್ದ ಕುಮಾರಪ್ಪ, ತಾವು ಕೂಡ ಅಷ್ಟೇ ಹಣದಲ್ಲಿ ಬಿಹಾರದಲ್ಲಿ ಬದುಕತೊಡಗಿದರು. ಗಾಂಧೀಜಿ ಬಿಹಾರಕ್ಕೆ ಬೇಟಿ ನೀಡಲು ಬಂದಾಗ, ಮಹಾದೇವ ದೇಸಾಯಿ ಅವರಿಗೆ ಮುಂಚಿತವಾಗಿ ಕಾಗದ ಬರೆದ ಕುಮಾರಪ್ಪನವರು, ‘ ನಿಮಗೆ ಮತ್ತು ಬಾಪು ಇಬ್ಬರಿಗೂ ಬಿಹಾರ ಪ್ರವಾಸದ ಸಮಯದಲ್ಲಿ ದಿನಕ್ಕೆ ಮೂರಾಣೆಯಂತೆ ಖರ್ಚು ಮಾಡಲು ಸಾಧ್ಯ, ನಿಮ್ಮ ಮೋಟಾರು ವಾಹನದ ಪೆಟ್ರೋಲು, ಇತರೆ ಖರ್ಚುಗಳನ್ನು ನೀವು ವೈಯಕ್ತಿವಾಗಿ ಭರಿಸಬೇಕುಎಂದು ತಿಳಿಸಿದರು. ಕುಮಾರಪ್ಪನವರ ಮಾತಿಗೆ ತಲೆ ಬಾಗಿದ ಗಾಂಧೀಜಿ ಇತರೆ ಖರ್ಚುಗಳನ್ನು ಸ್ವಂತವಾಗಿ ಭರಿಸಿದರು. ಅಲ್ಲದೆ, ಕುಮಾರಪ್ಪನವರ ಶಿಸ್ತು ಬದ್ಧತೆಗಳನ್ನು ಮೆಚ್ಚಿ ಅವರಿಗೆ ಕಾಲೋನಿಯಲ್ ಸಾಹೇಬ್ಎಂಬ ತಮಾಷೆಯ ಬಿರುದನ್ನು ಕೊಟ್ಟು ಹೋದರು.

ಕುಮಾರಪ್ಪನವರಿಗೆ ಇದ್ದ ಆಳವಾದ ಒಳನೋಟ ಮತ್ತು ಅಭಿವೃದ್ಧಿ ಬಗೆಗಿನ ಕಲ್ಪನೆ ಇವುಗಳನ್ನು ಗಮನಿಸಿದ ಗಾಂಧೀಜಿತನ್ನ ಸಹೋದರನ ಪುತ್ರ ಸ್ಥಾಪಿಸಿದ್ದ ಗ್ರಾಮೀಣ ವಿಜ್ಙಾನ ಕೇಂದ್ರ ಜವಬ್ದಾರಿ ವಹಿಸಿದರು. 1934 ರಿಂದ 1948 ರ ವರೆಗೆ ಕುಮಾರಪ್ಪನವರಿಗೆ ವಾರ್ಧಾದ ಸೇವಾಗ್ರಾಮ ಅವರ ಪಾಲಿನ ಪ್ರಯೋಗಶಾಲೆ ಮತ್ತು ಕರ್ಮಭೂಮಿಯಾಯಿತು. ಆಧುನಿಕ ಜಗತ್ತು ಅವಲಂಬಿಸಿದ್ದ ವಸ್ತುಗಳ ಬದಲಾಗಿ ಪರ್ಯಾಯ ವಸ್ತುಗಳ ಹುಡುಕಾಟದಲ್ಲಿ ತೊಡಗಿದರು. ಕೃಷಿಯಲ್ಲಿ ರಸಾಯನಿಕ ಗೊಬ್ಬರಗಳ ಬದಲಾಗಿ ಹಸಿರಲೆ ಗೊಬ್ಬರವನ್ನು ರೈತರಿಗೆ ಪರಿಚಯಿಸಿದರು. ಸೀಮೆಎಣ್ಣೆ ಬದಲಾಗಿ, ನೈಸರ್ಗಿಕವಾಗಿ ಹೊಂಗೆ, ಬೇವು ಬೀಜಗಳಿಂದ ತಯಾರಿಸಿದ ತೈಲಗಳನ್ನು ದೀಪಗಳಿಗೆ ಬಳಸಲು ಉತ್ತೇಜನ ನೀಡಿದರು. ಟ್ರಾಕ್ಷರ್ ಬದಲಾಗಿ ರೈತರಿಗೆ ಅನೇಕ ಸುಧಾರಿತ ನೇಗಿಲುಗಳನ್ನು ಅವಿಷ್ಕರಿಸಿ ಪರಿಚಯಿಸಿದರು. ಸಾಬೂನು ಉತ್ಪಾದನೆಗೆ  ಪೆಟ್ರೋಲ್ ಅಧಾರಿತ ಕಚ್ಛಾ ವಸ್ತುಗಳನ್ನು ಬಳಸುವ ಬದಲು ಅರಣದಲ್ಲಿ ಉಚಿತವಾಗಿ ದೊರೆಯುವ ವನಸ್ಪತಿ ಬಳಸಲಾರಂಬಿಸಿದರು. ಉರವಲಿನಂತೆ ಬಳಕೆಯಾಗುತ್ತಿದ್ದ ಕಬ್ಬಿನ ಸಿಪ್ಪೆಯನ್ನು ಕಾಗದ ಉತ್ಪಾದನೆಗೆ ಬಳಸಿ ಇತರರಿಗೆ ಪ್ರೇರಣೆಯಾದರು. ಚರಕ ಮತ್ತು ಕೈಮಗ್ಗಗಳನ್ನು ಪರಿಷ್ಕರಿಸಿ, ಹತ್ತಿ ನೂಲು ಮತ್ತು ಬಟ್ಟೆಯ ಉತ್ಪಾದನೆ ಹೆಚ್ಚಾಗುವಂತೆ ನೋಡಿಕೊಂಡರು. ಇವೆಲ್ಲವೂ ಕುಮಾರಪ್ಪನವರು ಹೊಸದಾಗಿ ಕಂಡು ಹಿಡಿದ ತಂತ್ರಜ್ಙಾನಗಳಾಗಿರಲಿಲ್ಲ, ಬದಲಾಗಿ ನಾವು ಮರೆತು ಕೈ ಬಿಟ್ಟಿದ್ದ ನಮ್ಮವೇ ಆದ ದೇಶಿ ತಂತ್ರಜ್ಙಾನಗಳಾಗಿದ್ದವು. ಪ್ರಕೃತಿಯನ್ನು ಯಾವ ಕಾರಣಕ್ಕೂ ಶೋಷಿಸಿದೆ ಅದರ ಕೊಡುಗೆಗಳನ್ನು ಬಳಸಿಕೊಳ್ಳಬೇಕೆಂಬುದು ಕುಮಾರಪ್ಪನವರ ಅಚಲ ನಿಲುವಾಗಿತ್ತು. ಅಣೆಕಟ್ಟುಗಳ ಬದಲಾಗಿ ಸಣ್ಣ ಸಣ್ಣ ಒಡ್ಡುಗಳನ್ನು ಕಟ್ಟಲು ರೈತರಿಗೆ ಪ್ರೋತ್ಸಾಹಿಸಿದರು. ಅವರ ಇಂತಹ ಪ್ರಯೋಗ ಮತ್ತು ಚಿಂತನೆಗಳಿಂದಾಗಿ “Economy Of Permanence, A Quest For A Social Order Based On Non- Violence”( ಶಾಶ್ವತ ಅರ್ಥಶಾಸ್ತ್ರ ಮತ್ತು ಅಹಿಂಸೆಯನ್ನು ಅಧರಿಸಿದ ಸಮಾಜ ವ್ಯವಸ್ಥೆಯ ಅನ್ವೇಷಣೆ.) ಎಂಬ ಕೃತಿ ರಚನೆ ಅವರಿಂದ ಸಾಧ್ಯವಾಯಿತು.
ಕುಮಾರಪ್ಪನವರಿಗೆ ಇದ್ದ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಿಂದಾಗಿ, ಅವರನ್ನು ಅಖಿಲ ಭಾರತ ಸಣ್ಣ ಕೈಗಾರಿಕೆಗಳ ಒಕ್ಕೂಟದ ಕಾರ್ಯದರ್ಶಿ ಸ್ಥಾನ ಅವರನ್ನು ಅರಸಿಕೊಂಡು ಬಂದಿತು. ಗಾಂಧಿ ಮತ್ತು ಅವರ ಅನುಯಾಯಿಗಳು, ಇಡೀ ದೇಶಕ್ಕೆ ಸ್ವರಾಜ್ಯ ಮತ್ತು ಸ್ವಾವಲಂಬಿತನದ ಚಳುವಳಿಯನ್ನು ಹರಡುವ ಉದ್ದೇಶದಿಂದ, ಸೇವಾಗ್ರಾಮವನ್ನು ಕೇಂದ್ರವಾಗಿಟ್ಟು ಆರಂಭವಾದ ಈ ಒಕ್ಕೂಟದ ಕಾರ್ಯದರ್ಶಿಯಾಗಿಯೂ ಸಹ ಕುಮಾರಪ್ಪ ಕಾರ್ಯನಿರ್ವಹಿಸುತ್ತಾ, ಗಾಂಧಿ ಚಿಂತನೆಗಳ ವಾರಸುದಾರರಂತೆ ಸೇವಾಗ್ರಾಮದಲ್ಲಿ ಬದುಕತೊಡಗಿದರು. ಆದರೆ, 1945ರಲ್ಲಿ ಸ್ವಾತಂತ್ರ್ಯದ ದಿನಗಳು ಹತ್ತಿರವಾಗುತ್ತಿದ್ದಂತೆ, ಗಾಂಧೀಜಿ ಮತ್ತು ಕುಮಾರಪ್ಪನವರಿಗೆ ಇದ್ದ ಕನಸುಗಳು ಛಿದ್ರವಾಗತೊಡಗಿದವು. ಬ್ರಿಟೀಷ್ ಆಳ್ವಿಕೆಯಲ್ಲಿ ನೆಹರೂ ನೇತೃತ್ವದ ಉಸ್ತುವಾರಿ ಸರ್ಕಾರಕ್ಕೆ ಗಾಂಧಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆಗಳು, ವೃದ್ಧನೊಬ್ಬನ ಹಪಾಹಪಿತನದಂತೆ ಕಂಡು ಬಂದವು. ನೆಹರೂ ಗುಡಿಕೈಗಾರಿಕೆಗಳ ಯೋಜನೆಗಳನ್ನು ನೇರವಾಗಿ ತಿರಸ್ಕರಿಸಿದರು. ಈ ಕುರಿತು 1945 ರ ಅಕ್ಟೋಬರ್ 5 ಮತ್ತು 9 ನೇ ದಿನಾಂಕಗಳ ನಡುವೆ ಗಾಂಧಿ ಮತ್ತು ನೆಹರು ನಡುವೆ ತೀರಾ ಖಾರವಾದ ಪ್ರತಿಕ್ರಿಯೆಗಳನ್ನು ಒಳಗೊಂಡ ಪತ್ರಗಳ ಸಮರವೂ  ನಡೆಯಿತು. 1947 ರಲ್ಲಿ ಸ್ವಾತಂತ್ರ್ಯ ಹತ್ತಿರವಾಗುತ್ತಿದ್ದಂತೆ, ಭಾರತ ವಿಭಜನೆ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾದ ಪರಿಣಾಮಳಿಂದ ಗಾಂಧೀಜಿ , ನೆಹರೂ ಮತ್ತು ಪಟೇಲ ರಿಂದ ಮೂಲೆಗೆ ಒತ್ತರಿಸಲ್ಪಟ್ಟ್ಪು ಅಕ್ಷರಶಃ ಏಕಾಂಗಿಯಾದರು.
ಈ ಎಲ್ಲಾ ಬೆಳವಣಿಗೆಗಳಿಂದ ವಿಚಲಿತರಾಗಿ ನೊಂದುಕೊಂಡ ಕುಮಾರಪ್ಪನವರು ಗಾಂಧೀಜಿ ಹತ್ಯೆಯ ನಂತರ , ಪಂಚವಾರ್ಷಿಕ ಯೋಜನೆಗಳಿಗೆ ಸಲಹೆಗಾರರಾಗಿ ಇರುವಂತೆ ನೆಹರೂ ನೀಡಿದ ಆಹ್ವಾನವನ್ನು ತಿರಸ್ಕರಿಸಿದರು. 1948ರಲ್ಲಿ ಸೇವಾಗ್ರಾಮದಿಂದ ತಮಿಳುನಾಡಿಗೆ ಬಂದ ಅವರುಮಧುರೈ ಸಮೀಪದ ಕಳ್ಳುಪಟ್ಟಿ ಎಂಬ ಗ್ರಾಮದಲ್ಲಿ ಅರವತ್ತು ಎಕರೆ ಭೂಮಿ ಖರೀದಿಸಿ, ಗಾಂಧಿ ನಿಕೇತನ ಎಂಬ ಆಶ್ರಮ ಸ್ಥಾಪಿಸಿ, ತಾವು ಹಿಂದೆ ಸೇವಾಗ್ರಾಮದಲ್ಲಿ ಆರಂಭಿಸಿದ್ದ ಎಲ್ಲಾ ಯೋಜನೆಗಳನ್ನು ಮುಂದುವರಿಸಿದರು. ಗಾಂಧಿ ನಿಕೇತನ ಆಶ್ರಮದ ಚಟುವಟಿಕೆಗಳು ಅಂತರಾಷ್ಟ್ರ ಮಟ್ಟದಲ್ಲಿ ಗಮನ ಸೆಳದವು. ಅಮೇರಿಕಾದ ಗಾಂಧಿ ಎಂದು ಕರೆಸಿಕೊಳ್ಳುತ್ತಿದ್ದ ಮಾರ್ಟಿನ್ ಲೂಥರ್ ಕಿಂಗ್ ಎರಡು ಬಾರಿ ಬೇಟಿ ನೀಡಿದ್ದರು. ಗಾಂಧಿ ಚಿಂತನೆಗಳ ಮತ್ತೊಬ್ಬ ಪ್ರತಿಪಾದಕ ಹಾಗೂ ಜಗತ್ತಿನ ಶ್ರೇಷ್ಟ ಅರ್ಥಶಾಸ್ತ್ರಜ್ಙರಲ್ಲಿ ಒಬ್ಬರಾದ ಶೂ ಮಾಕರ್ ಕೂಡ ಇಲ್ಲಿಗೆ ಬೇಟಿ ನೀಡಿದ್ದರು. ಹೀಗೆ ಸತತ ಹನ್ನೆರೆಡು ವರ್ಷಗಳ ಕಾಲ ಆಶ್ರಮವನ್ನು ಮುನ್ನೆಡೆಸಿದ ಕುಮಾರಪ್ಪನವರು ಗಾಂಧೀಜಿ ಇನ್ನಿಲ್ಲವಾದ ದಿನ ಅಂದರೆ, 1960ರ ಜನವರಿ 30 ರಂದು ನಿಧನ ಹೊಂದಿದರು.  ಅವರನ್ನು ಗಾಂಧಿ ನಿಕೇತನದಲ್ಲಿ ಮಣ್ಣು ಮಾಡಿ, ಅವರ ಸಮಾಧಿ ನಿರ್ಮಿಸಲಾಗಿದೆ. ಪ್ರತಿ ದಿನ ಅವರ ಸಮಾಧಿಗೆ ನಮನ ಸಲ್ಲಿಸುವುದರ ಮೂಲಕ ನಿಕೇತನದ ಚಟುವಟಿಕೆ ಆರಂಭಗೊಳ್ಳುತ್ತವೆ.(ವಾರ್ಧಾದ ಸೇವಾಗ್ರಾಮದಲ್ಲೂ ಕೂಡ ಇದೇ ಆಚರಣೆ ಮುಂದುವರಿದಿದೆ) ಇದೀಗ ಗಾಂಧೀಜಿ ತತ್ವಗಳ ಅಡಿಯಲ್ಲಿ ಅವರ ಅನುಯಾಯಿಗಳು ಆಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ, ಕುಮಾರಪ್ಪನವರ ನೆನಪಿಗಾಗಿ ವಿದ್ಯಾ ಸಂಸ್ಥೆಗಳನ್ನು ಆರಂಭಿಸಿಲಾಗಿದ್ದುಗ್ರಾಮೀಣ ಕುಲ ಕಸುಬು ಮತ್ತು ಗೃಹ ಕೈಗಾರಿಕೆ ಕುರಿತಂತೆ ಡಿಪ್ಲಮೊ ಕೋರ್ಸುಗಳು ಆಶ್ರಮದಲ್ಲಿ ನಡೆಯುತ್ತಿವೆ, ಮಧುರೈ ನ ಕಾಮರಾಜ್ ವಿಶ್ವವಿದ್ಯಾನಿಲಯದಿಂದ ಗಾಂಧಿನಿಕೇತನ ಆಶ್ರಮದ ವಿದ್ಯಾ ಸಂಸ್ಥೆ ಮಾನ್ಯತೆ ಪಡೆದಿದೆ.
ಈ ಸಂಸ್ಥೆಯಿಂದ ಪ್ರೇರಣೆಗೊಂಡು, ಕರುಣಾಕರನ್ ಎಂಬ ಇಂಜಿನಿಯರ್ ವಿದ್ಯಾರ್ಥಿ 1980 ದಶಕದಲ್ಲಿ ಅದೇ ತಮಿಳುನಾಡಿನ ದಿಂಡಿಗಲ್ ಜಿಲ್ಲಾ ಕೇಂದ್ರದಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿ ಸೇಲಂ-ಮಧುರೈ ಹೆದ್ದಾರಿಯಲ್ಲಿ ಆರಂಭಿಸಿರುವ ಗಾಂಧಿ ಗ್ರಾಮ ಎಂಬ ಸಂಸೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ, ಇಲ್ಲಿ ತಯಾರಾಗುವ ಗೃಹ ಬಳಕೆಯ ಹಾಗೂ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾದ ವಸ್ತುಗಳು ಇಡೀ ತಮಿಳುನಾಡಿನಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿವೆ.

ಆಧುನಿಕತೆಯ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಅನುಭೋಗ ಮತ್ತು ಲೋಲುಪತೆಯ ಬೆನ್ನಟ್ಟಿ ಹೊರಟಿರುವ ಭಾರತದ ಹೊಸ ತಲೆಮಾರಿಗೆ ಕುಮಾರಪ್ಪ ಮತ್ತು ಗಾಂಧಿ ಚಿಂತನೆಗಳು ಈಗ ಅಪ್ರಸ್ತುತ ಎನಿಸಬಹುದು. ಆದರೆ, ಗಾಂಧೀಜಿ ಹೊತ್ತಿಸಿದ ಸ್ವಾವಲಂಬಿತನದ ಬದುಕಿನ ಮೂಲ ಮಂತ್ರದ ಆ ಬೆಳಕಿನ ದೀಪ ಈಗಲೂ ಹಲವು ರೂಪಗಳಲ್ಲಿ ಆರದೆ ಉರಿಯುತ್ತಿದೆ. ಗಾಂಧಿ ಮತ್ತು ಕುಮಾರಪ್ಪನವರ ಮುಂದುವರೆದ ವಾರಸುದಾರರಂತೆ ಕಾಣಬರುವ ಉತ್ತರಪ್ರದೇಶದ ವಾರಾಣಾಸಿಯ ಬನರಾಸ್ ವಿ.ವಿ.ಯ ಪ್ರೊ. ಸಹಸ್ರಬುಧೆ, “ಲೋಕ ವಿದ್ಯಾಎಂಬ ಸಂಸ್ಥೆಯೊಂದನ್ನು ಆರಂಭಿಸಿ, ಜನಸಮಾನ್ಯರಿಗೆ ಪರಿಷ್ಕರಿಸಿದ ಹಾಗೂ ಅಧುನಿಕ ಬದುಕಿಗೆ ಹೊಂದಿಕೊಳ್ಳಬಹುದಾದ ದೇಶಿ ತಂತ್ರಜಾÐನಗಳನ್ನು ತಲುಪಿಸುತ್ತಿದ್ದಾರೆ. ಅಲ್ಲದೆ, ಇತ್ತೀಚೆಗಿನ ದಿನಗಳಲ್ಲಿ ಗಾಂಧಿಯವರ ಚಿಂತನೆಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಲ್ಲಿ ಅವರು ರಚಿಸಿದ ಆಧುನಿಕ ವಿಜಾÐನಕ್ಕೆ ಗಾಂಧಿಯವರ ಸವಾಲುಎಂಬ ಕೃತಿ ಮಹಾತ್ಮನನ್ನು ಗ್ರಹಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.  ಈ ಕೃತಿ ಕನ್ನಡದಲ್ಲೂ ಲಭ್ಯವಾಗುತ್ತಿದೆ. ನನ್ನ ಮಿತ್ರ ಡಾ. ಕೆ. ಪುಟ್ಟಸ್ವಾಮಿ ಇದನ್ನು ಅನುವಾದ ಮಾಡಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ  ಪ್ರಕಟಿಸಿದೆ. ಆಸಕ್ತರು ಓದಲೇ ಬೇಕಾದ ಅನನ್ಯ ಕೃತಿ ಇದಾಗಿದೆ.  ಅದೇ ರೀತಿ ರಜನಿ ಭಕ್ಷಿ ಬರೆದ ಬಾಪು ಕುಟಿಇಂಗ್ಲೀಷ್ ಕೃತಿಯನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದ್ದು, ಇದರ ಕನ್ನಡ ಅನುವಾದವನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ. ಗಾಂಧೀಜಿಯನ್ನು ಹಾಗೂ ಅವರ ಚಿಂತನೆಗಳನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಎರಡು ಕೃತಿಗಳು ಸಹಕಾರಿಯಾಗಲಿವೆ.


ಗುರುವಾರ, ಅಕ್ಟೋಬರ್ 10, 2013

ವಾರ್ಧಾದ ಸೇವಾಗ್ರಾಮದಲ್ಲಿ ಗಾಂಧೀಜಿಯ ನೆನಪುಗಳು



ರಜನಿ ಭಕ್ಷಿಯವರ ಯವರ  ಬಾಪು ಕುಟಿಕೃತಿಯನ್ನು ಓದಿದ ನಂತರ ಕಳೆದ ಹತ್ತು ವರ್ಷಗಳಿಂದ ವಾರ್ಧಾ ಸಮೀಪದ  ಸೇವಾಗ್ರಾಮಕ್ಕೆ ಬೇಟಿ ನೀಡಬೇಕೆಂಬ ಅಸೆಯೊಂದು  ಮನಸ್ಸಿನೊಳಗೆ ಕಾಡುತ್ತಲೇ ಇತ್ತು. ಕಳೆದ ವರ್ಷ ನಾಲ್ಕುಬಾರಿ ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಡ ರಾಜ್ಯಗಳಿಗೆ  ಪ್ರವಾಸ ಹೋದ ಸಂದರ್ಭದಲ್ಲಿ  ಪೂನಾ ದಿಂದ ಗೊಂಡಿಯ ಮತ್ತು ರಾಯ್ ಪುರಕ್ಕೆ ರೈಲಿನಲ್ಲಿ ಪ್ರಯಾಣಿಸುವಾಗ, ಅಶ್ರಮದ ಮುಂದೆ ರೈಲು  ಹಾದು ಹೋಗುವಾಗ, ಈ ಆಶ್ರಮಕ್ಕೆ ಬೇಟಿ ನೀಡಲಿಲ್ಲವಲ್ಲಾ ಎಂಬ ಪಾಪ ಪ್ರಜ್ಞೆ ನನ್ನನ್ನು ಸದಾ  ಕಾಡುತ್ತಿತ್ತು. ಈ ಕೊರತೆಯ  ಎದೆಯ ಭಾರ ಇಳಿಸಿಕೊಳ್ಳಲೆಂಬಂತೆ ಈ ವರ್ಷದ ಜನವರಿಯಲ್ಲಿ ಪೂನಾನಗರಲ್ಲಿರುವ  ಆಗಾ ಖಾನ್ ಅರಮನೆ ಮತ್ತು ನಾಗಪುರ ಸಮೀಪದ ವಾರ್ಧಾ ಬಳಿಯ ಸೇವಾಗ್ರಾಮಕ್ಕೆ ದಿನ ಬೇಟಿ ನೀಡಿ ಬಂದೆ.
ಮಹಾರಾಷ್ರದ ನಾಗಪುರದಿಂದ ಎಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಹಾಗೂ ವಾರ್ಧಾ ಪಟ್ಟಣದಿಂದ ದಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿ, ಮುನ್ನೂರು ಎಕರೆ ವಿಸ್ತೀರ್ಣ ಪ್ರದೇಶ ಹೊಂದಿರುವ ಈ ಸೇವಾಗ್ರಾಮ 1934 ರಿಂದ 1942 ರವರೆಗೆ ಗಾಂಧೀಜಿಯವರ ಕರ್ಮಭೂಮಿಯಾಗಿತ್ತು. 1930ರಲ್ಲಿ ಉಪ್ಪಿನ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾಗುವವರೆಗೂ ಇಲ್ಲಿಗೆ ಕಾಲಿಡುವುದಿಲ್ಲ ಎಂದು ಶಪಥ ತೊಡುವುದರ ಮೂಲಕ  ಅಹಮದಾಬಾದಿನ ಸಬರಮತಿ ಆಶ್ರಮ ತೊರೆದ ಗಾಂಧೀಜಿ,  ಮತ್ತೆಂದೂ ಸಬರಮತಿ ಆಶ್ರಮಕ್ಕೆ ಕಾಲಿಡಲಿಲ್ಲ. ಸ್ವಾತಂತ್ಯ ಚಳವಳಿಗೆ ಕಾರ್ಯಕರ್ತರನ್ನು ರೂಪಿಸುವ ನಿಟ್ಟಿನಲ್ಲಿ ಸಬರಮತಿ ಅಶ್ರಮ ಪ್ರಮುಖ ಪಾತ್ರ ವಹಿಸಿತ್ತು. ಆನಂತರ ಗಾಂಧೀಜಿ ತಮ್ಮ ಕಾರ್ಯ ಚಟುವಟಿಕೆಗಳಿಗಾಗಿ ಮಧ್ಯ ಭಾರತದಲ್ಲಿ ನೆಲೆಗೊಳ್ಳಲು ಪ್ರಶಸ್ತವಾದ ಜಾಗಕ್ಕಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿ ಅನುಯಾಯಿ ಮತ್ತು ಮೂಲತಃ ವಾರ್ಧಾ ಪಟ್ಟಣದವರಾದ ಸೇಠ್ ಜಮ್ನಲಾಲ್ ಬಜಾಜ್ ಅವರು  ಗಾಂಧಿ ಕನಸನ್ನು ಸಾಕಾರಗೊಳಿಸಿದರು. ಸೇವಾಗ್ರಾಮದ ಆಶ್ರಮಕ್ಕಾಗಿ ಬಜಾಜ್ ಅವರು ಮುನ್ನೂರು ಎಕರೆ ಭೂಮಿಯನ್ನು ಖರೀದಿಸಿ ಗಾಂಧೀಜಿಯವರಿಗೆ ಬಳುವಳಿಯಾಗಿ ನೀಡಿದ್ದರು.
ಸಬರಮತಿ ಆಶ್ರಮ ಸ್ವಾತಂತ್ರ್ಯ ಚಳುವಳಿಗೆ ಕಾರ್ಯಕರ್ತರನ್ನು ತಯಾರು ಮಾಡುವ ಕೇಂದ್ರವಾಗಿದ್ದರೆ, ಸೇವಾ ಗ್ರಾಮ, ಗಾಂಧೀಜಿಯವರ ಕನಸಿದ್ದ ಗ್ರಾಮ ಭಾರತ ಹಾಗೂ ಗುಡಿ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಚಿಂತನೆಗಳ ಗರ್ಭ ಗುಡಿಯಾಗಿತ್ತು. ಸುಮಾರು  ವರ್ಷಗಳ ಕಾಲ ಇಲ್ಲಿನ ಭಾಪು ಕುಟಿಯಲ್ಲಿ ಕಸ್ತೂರಬಾ ಜೊತೆ ವಾಸವಾಗಿದ್ದ ಗಾಂಧೀಜಿಯವರ ಜೊತೆ, ವಿನೋಭಾ, ಮೀರಾಬೆಹನ್  ಜಮ್ನಲಾಲ್ ಬಜಾಜ್, ಜೆ.ಸಿ. ಕುಮಾರಪ್ಪ, ಮಹದೇವ ದೇಸಾಯಿ  ಮುಂತಾದವರು ವಾಸಿಸುತ್ತಾ ತಾವು ಕನಸಿದ್ದ ಗ್ರಾಮ ಭಾರತಕ್ಕೆ ಅಸ್ತಿಭಾರ ಹಾಕಿದರು. ಇದೇ ವೇಳೆಯಲ್ಲಿ ಗಾಧಿಜಿಯವರ ಸಹೋದರನ ಪುತ್ರ ಮಗನ್ ಲಾಲ್ ಸೇವಾಗ್ರಾಮ ಆಶ್ರಮದಲ್ಲಿ ಗ್ರಾಮೀಣ ಕೈಗಾರಿಕೆಗಳ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಿದರು. ಅವರು ತೀರಾ ಚಿಕ್ಕ ವಯಸ್ಸಿನಲ್ಲಿ ಅಕಾಲ ಮರಣ ಹೊಂದುದರಿಂದ ಮುಂದಿನ ದಿನಗಳಲ್ಲಿ ಅದನ್ನು ಜೆ.ಸಿ. ಕುಮಾರಪ್ಪ ಮುನ್ನಡೆಸಿದರು. ಮಗನ್ ಲಾಲ್ ನೆನಪಿನಲ್ಲಿ ಆಶ್ರಮದ ಪಕ್ಕದ ಜನ ವಸತಿಪ್ರದೇಶಕ್ಕೆ ಮಗನ್ ವಾಡಿ ಎಂದು ಹೆಸರಿಟ್ಟು ಕರೆಯಲಾಗುತ್ತಿದೆ.





1942 ರ ಜಗತ್ತಿನ  ಎರಡನಯ ಮಹಾಯುದ್ಧದ ಆತಂಕದ ಸಮಯದಲ್ಲಿ ದೂರದ ಅಮೇರಿಕಾದಿಂದ ಬಂದ ಪತ್ರಕರ್ತ ಲೂಯಿಫಿಶರ್ ಬೇಸಿಗೆಯಲ್ಲಿ ಬೆಂಕಿಯ ಮಳೆ ಸುರಿಯವ ಜೂನ್ ತಿಂಗಳಿನಲ್ಲಿ ಸೇವಾ ಗ್ರಾಮಕ್ಕೆ ಬೇಟಿ ನೀಡಿ ಒಂದು ವಾರ ತಂಗಿದ್ದರು. ಗಾಂಧಿಯ ಜೊತೆ ಒಡನಾಡಿ, ಆನಂತರ ಮಹಾತ್ಮನ ಜೊತೆ ಒಂದು ವಾರಎಂಬ ಲೇಖನ ಬರೆದಿದ್ದರು. ಗಾಂಧೀಜಿಯ ವ್ಯಕ್ತಿತ್ವದಿಂದ ತೀವ್ರವಾಗಿ ಪ್ರಭಾವಿತರಾದ ಲೂಯಿ ಫಿಶರ್ ನಂತರದ ದಿನಗಳಲ್ಲಿ ಬರೆದ ಮಹಾತ್ಮ ಗಾಂಧಿ ಕುರಿತ ಆತ್ಮ ಕಥೆ ಜಗತ್ ಪ್ರಸಿದ್ದ ಕೃತಿಯಾಯಿತು. ಪಾಶ್ಚಿಮಾತ್ಯ ಜಗತ್ತಿಗೆ ಗಾಂಧಿ ಮತ್ತು ಅವರ ಚಿಂತನೆಗಳನ್ನು ಪರಿಚಯಿಸಿತು. ಇದೇ ಕೃತಿಯನ್ನು ಆಧರಿಸಿ ಗಾಂಧಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ರಿಚರ್ಡ ಅಟನ್‍ಬರೋ ಎಂಬ ನಿರ್ಧೇಶಕ, ಬರೋಬ್ಬರಿ ಹದಿನೇಳು ವರ್ಷಗಳ ಕಾಲ ಧ್ಯಾನಿಸಿ, ಚಿತ್ರ ಕಥೆ ಸಿದ್ಧ ಪಡಿಸಿ 1982ರಲ್ಲಿ ಗಾಂಧಿ ಚಿತ್ರ ನಿರ್ಮಾಣ ಮಾಡಿದರು. ಹೀಗೆ ಹಲವು ಕ್ರಾಂತಿಗಳಿಗೆ, ಮನುಕುಕ್ಕೆ ಒಳಿತನ್ನು ಬಯಸುವ ಹಲವಾರು ಯೋಜನೆ ಮತ್ತು ಯೋಚನೆಗಳಿಗೆ
ಸಾಕ್ಷಿಯಾದ ಸೇವಾಗ್ರಾಮ ಇಂದಿಗೂ ತನ್ನ ಒಡಲೊಳಗೆ ಇತಿಹಾಸದ ಕುರುಹುಗಳನ್ನು ಹೊತ್ತುಕೊಂಡು ನಿಂತಿದೆ.
ಸೇವಾಗ್ರಾಮದ ಆಶ್ರಮವನ್ನು ಮತ್ತು ಅಲ್ಲಿನ ಚಟುವಟಿಕೆಗನ್ನು ಅಣಕಿಸುವಂತೆಮಹಾರಾಷ್ಟ್ರ ಸರ್ಕಾರ ಕೈಗಾರಿಕಾ ಬಡಾವಣೆಯನ್ನು ಸ್ಥಾಪಿಸಿದ  ಫಲವಾಗಿ ವಾರ್ಧ ಸುತ್ತ ಮುತ್ತ ತಲೆ ಎತ್ತಿ ನಿಂತಿರುವ ಬೃಹತ್ ಕೈಗಾರಿಕೆಗಳು ಸೇವಾ ಗ್ರಾಮದ ಆಶ್ರಮದ ಚಟುವಟಿಕೆಗಳನ್ನು ಮರೆ ಮಾಚುವಂತೆ  ಚಿಮಣಿಗಳಿಂದ ಹೊಗೆ ಉಗುಳುತ್ತಿವೆ. ಈ ಹೊಗೆ ಗುಡಿ ಕೈಗಾರಿಕೆಗಳ ವಿರುದ್ಧದ ದ್ವೇಷದ ಹೊಗೆಯೋ ? ಅಥವಾ ಬಂಡವಾಳಶಾಹಿ ಪ್ರಭುತ್ವದ ದಿಗ್ವಿಜಯದ ಸಂಕೇತವೂ ಒಂದೂ ಅರ್ಥವಾಗದ ಸ್ಥಿತಿ. ಇಡೀ ಸೇವಾಗ್ರಾಮದ ಚಟುವಟಿಕೆಯನ್ನು ಗಮನಿಸಿದಾಗ, ಇದನ್ನು ರೂಪಕದ ಭಾಷೆಯಲ್ಲಿ ಹೇಳುವುದಾದರೆ, “ ಮರ ಕಡಿದ ನಂತರವೂ, ಬುಡ ಚಿಗುರುತ್ತದಲ್ಲಾ ಹಾಗಿದೆ.ಸೇವಾ ಗ್ರಾಮದ ಆಶ್ರಮದಲ್ಲಿ  ಇವೊತ್ತಿಗೂ ಚರಕದ ಗಾಲಿ ತಿರುಗುವುದು ನಿಂತಿಲ್ಲ, ಭಾರತದ ವಿವಿಧ ಪ್ರದೇಶಗಳಿಗೆ, ಪರಿಸರಕ್ಕೆ ಎರವಾಗದಂತೆ, ಕಡಿಮೆ ಬಂಡವಾಳ ಬಯಸುವ ಹಾಗೂ ಅತಿ ಹೆಚ್ಚು ಮಾನವರ ಕೈಗಳಿಗೆ  ಕೆಲಸ ನೀಡುವ ತಂತ್ರಜ್ಙಾನಗಳ ಅನ್ವೇಷಣೆ ಮತ್ತು ಅವಿಷ್ಕಾರ ಕಾರ್ಯಗಳು ಮುಂದುವರಿದಿವೆ.
ಈ ಇಪ್ಪತ್ತೊಂದನೇಯ ಶತಮಾನದಲ್ಲೂ ಗಾಧೀಜಿಯ ಚಿಂತನೆಗಳಿಗೆ ಮೌಲ್ಯಗಳು ಇದೆಯಾ? ಎಂದು ಪ್ರಶ್ನಿಸಿಕೊಂಡು  ನಿರಾಸೆ ವ್ಯಕ್ತಪಡಿಸುವವರು ಒಮ್ಮೆ ಈ ಆಶ್ರಮಕ್ಕೆ ಬೇಟಿ ನೀಡಬೇಕು. ಬೆಳಿಗ್ಗೆ 4-30 ರಿಂದ ಆರಂಭ ವಾಗುವ ಚಟುವಟಿಕೆ ಸಂಜೆ 7 ಗಂಟೆಗೆ ಮುಕ್ತಾಯವಾಗುತ್ತದೆ. ಬೆಳಿಗ್ಗೆ ಪ್ರಾರ್ಥನೆ, ಆಶ್ರಮನ್ನು ಶೌಚಿಗೊಳಿಸುವ ಕಾರ್ಯ ಕ್ರಮಗಳು ಆರಂಭವಾಗಿ, 8 ಗಂಟೆಗೆ ಲಘು ಉಪಹಾರ, ಮಧ್ಯಾಹ್ನ 11 ಗಂಟೆಗೆ ಭೋಜನ ಹಾಗೂ 12 ರಿಂದ 2 ಗಂಟೆಯವರೆಗೆ ವಿಶ್ರಾಂತಿ, ಮತ್ತೇ ಎರಡು ಗಂಟೆಯಿಂದ ಚರಕದಿಂದ ನೂಲು ನೇಯುವುದು, ಕೈ ಮಗ್ಗ ದಲ್ಲಿ ಹತ್ತಿ ಬಟ್ಟೆಗಳನ್ನು ತಯಾರಿಸುವುದು,ಮುಂತಾದ ಚಟುವಟಿಕೆಗಳು ನಡೆಯುತ್ತವೆ. ಸಂಜೆ ಪ್ರಾರ್ಥನೆ, ಉಪನ್ಯಾಸ ಇವುಗಳೊಂದಿಗೆ ಮುಕ್ತಾಯವಾಗಿ ಏಳು ಗಂಟೆಗೆ ನೀಡುವ ರಾತ್ರಿ ಭೋಜನದೊಂದಿಗೆ  ದಿನದ ಕಾರ್ಯಕ್ರಮ ಮುಕ್ತಾಯವಾಗುತ್ತದೆ.
ವರ್ತಮಾನದ ಜಂಜಡದ ಜಗತ್ತಿನಿಂದ ನೊಂದವರು ಹಾಗೂ  ಬೇಸರವಾದವರು ತಂಡೋಪಾದಿಯಲ್ಲಿ ಅಶ್ರಮಕ್ಕೆ ಬಂದು ವಾರಗಟ್ಟಲೆ ಕಾರ್ಯಕರ್ತರಾಗಿ ಇದ್ದು ಸೇವೆ ಸಲ್ಲಿಸಿ ಹೋಗುತ್ತಾರೆ. ಈ ಕಾರಣಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳು ಆಶ್ರಮದ ಸ್ಟೇಶನ್ ನಲ್ಲಿ ಎರಡು ನಿಮಿಷ ನಿಂತು ಚಲಿಸುತ್ತವೆ. ಭಾರತ ನಾಲ್ಕು ಮೂಲೆಗಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ನಿಲ್ದಾಣವಾಗಿರುವ ನಾಗಪುರ ಹತ್ತಿರವಿರುವದರಿಂದ ಪ್ರತಿ ದಿನ ಸಾವಿರಾರು ಗಾಂಧಿ ಅಭಿಮಾನಿಗಳು ಇಲ್ಲಿಗೆ ಬೇಟಿ ನೀಡುತ್ತಾರೆ.
ಸೇವಾಶ್ರಮ ಟ್ರಸ್ಟ್ ನಿಂದ ನಡೆಯುತ್ತಿರುವ ಮಹಾತ್ಮ ಗಾಂಧಿ ಮೆಡಿಕಲ್ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಗ್ರಾಮಗಳ ಬದುಕನ್ನು ಪರಿಚಯ ಮಾಡಿಕೊಡುತ್ತವೆ. ಮೆಡಿಕಲ್ ವಿದ್ಯಾರ್ಥಿಗಳಿಗೆ ಗ್ರಾಮ ಸೇವೆಯನ್ನು ಕಡ್ಡಾಯ ಗೊಳಿಸಲಾಗಿದೆ. ಅದೇ ರೀತಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗ್ರಾಮ ಭಾರತಕ್ಕೆ ಅನುಕೂಲವಾಗುವಂತೆ, ವ್ಯವಸಾಯದ ಉಪಕರಣಗಳು, ನೀರೆತ್ತುವ ಸಾಧನಗಳು, ಚಕ್ಕಡಿ ಇವುಗಳ ತಂತ್ರ ಜ್ಙಾನ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ, ಯಾವುದೇ ಕ್ಯಾಪಿಟೇಶನ್ ಶುಲ್ಕ ಅಥವಾ ಮರೆ ಮಾಚಿದ ಶುಲ್ಕವಿಲ್ಲದೆ, ಮಹಾರಾಷ್ಟ್ರ ಸರ್ಕಾರ ನಿಗಧಿಪಡಿಸಿದ ಶಿಕ್ಷಣ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆದು ಕೊಳ್ಳಲಾಗುತ್ತಿದೆ. ಇಲ್ಲಿ ಐದು ವರ್ಷಗಳ ಕಾಲ ತಯಾರಾದ ವಿದ್ಯಾರ್ಥಿಗಳು ತಮಗೆ ಅರಿವಿಲ್ಲದಂತೆ, ಗ್ರಾಮಭಾರತದ ಬಗ್ಗೆ ಒಲವು ಮತ್ತು ನೈತಿಕ ಪ್ರಜ್ಙೆಯನ್ನು ಮೈಗುಡಿಸಿಕೊಳ್ಳುತ್ತಿರುವುದು ನೆಮ್ಮದಿಯ ಸಂಗತಿ. ಒಬ್ಬ ದಾರ್ಶನಿಕನ ಚಿಂತನೆಗಳು, ಆತ ಅಳಿದ ನಂತರವೂ ಹೇಗೆ ಕಾಲಘಟ್ಟಕ್ಕೆ ತಕ್ಕಂತೆ ಮರುಹುಟ್ಟು ಪಡೆಯಬಲ್ಲವು ಎಂಬುದಕ್ಕೆ ಸೇವಾಶ್ರಮ ನಮ್ಮದುರು ಸಾಕ್ಷಿಯಾಗಿದೆ.