ಗುರುವಾರ, ಅಕ್ಟೋಬರ್ 10, 2013

ವಾರ್ಧಾದ ಸೇವಾಗ್ರಾಮದಲ್ಲಿ ಗಾಂಧೀಜಿಯ ನೆನಪುಗಳು



ರಜನಿ ಭಕ್ಷಿಯವರ ಯವರ  ಬಾಪು ಕುಟಿಕೃತಿಯನ್ನು ಓದಿದ ನಂತರ ಕಳೆದ ಹತ್ತು ವರ್ಷಗಳಿಂದ ವಾರ್ಧಾ ಸಮೀಪದ  ಸೇವಾಗ್ರಾಮಕ್ಕೆ ಬೇಟಿ ನೀಡಬೇಕೆಂಬ ಅಸೆಯೊಂದು  ಮನಸ್ಸಿನೊಳಗೆ ಕಾಡುತ್ತಲೇ ಇತ್ತು. ಕಳೆದ ವರ್ಷ ನಾಲ್ಕುಬಾರಿ ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಡ ರಾಜ್ಯಗಳಿಗೆ  ಪ್ರವಾಸ ಹೋದ ಸಂದರ್ಭದಲ್ಲಿ  ಪೂನಾ ದಿಂದ ಗೊಂಡಿಯ ಮತ್ತು ರಾಯ್ ಪುರಕ್ಕೆ ರೈಲಿನಲ್ಲಿ ಪ್ರಯಾಣಿಸುವಾಗ, ಅಶ್ರಮದ ಮುಂದೆ ರೈಲು  ಹಾದು ಹೋಗುವಾಗ, ಈ ಆಶ್ರಮಕ್ಕೆ ಬೇಟಿ ನೀಡಲಿಲ್ಲವಲ್ಲಾ ಎಂಬ ಪಾಪ ಪ್ರಜ್ಞೆ ನನ್ನನ್ನು ಸದಾ  ಕಾಡುತ್ತಿತ್ತು. ಈ ಕೊರತೆಯ  ಎದೆಯ ಭಾರ ಇಳಿಸಿಕೊಳ್ಳಲೆಂಬಂತೆ ಈ ವರ್ಷದ ಜನವರಿಯಲ್ಲಿ ಪೂನಾನಗರಲ್ಲಿರುವ  ಆಗಾ ಖಾನ್ ಅರಮನೆ ಮತ್ತು ನಾಗಪುರ ಸಮೀಪದ ವಾರ್ಧಾ ಬಳಿಯ ಸೇವಾಗ್ರಾಮಕ್ಕೆ ದಿನ ಬೇಟಿ ನೀಡಿ ಬಂದೆ.
ಮಹಾರಾಷ್ರದ ನಾಗಪುರದಿಂದ ಎಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ಹಾಗೂ ವಾರ್ಧಾ ಪಟ್ಟಣದಿಂದ ದಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿ, ಮುನ್ನೂರು ಎಕರೆ ವಿಸ್ತೀರ್ಣ ಪ್ರದೇಶ ಹೊಂದಿರುವ ಈ ಸೇವಾಗ್ರಾಮ 1934 ರಿಂದ 1942 ರವರೆಗೆ ಗಾಂಧೀಜಿಯವರ ಕರ್ಮಭೂಮಿಯಾಗಿತ್ತು. 1930ರಲ್ಲಿ ಉಪ್ಪಿನ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾಗುವವರೆಗೂ ಇಲ್ಲಿಗೆ ಕಾಲಿಡುವುದಿಲ್ಲ ಎಂದು ಶಪಥ ತೊಡುವುದರ ಮೂಲಕ  ಅಹಮದಾಬಾದಿನ ಸಬರಮತಿ ಆಶ್ರಮ ತೊರೆದ ಗಾಂಧೀಜಿ,  ಮತ್ತೆಂದೂ ಸಬರಮತಿ ಆಶ್ರಮಕ್ಕೆ ಕಾಲಿಡಲಿಲ್ಲ. ಸ್ವಾತಂತ್ಯ ಚಳವಳಿಗೆ ಕಾರ್ಯಕರ್ತರನ್ನು ರೂಪಿಸುವ ನಿಟ್ಟಿನಲ್ಲಿ ಸಬರಮತಿ ಅಶ್ರಮ ಪ್ರಮುಖ ಪಾತ್ರ ವಹಿಸಿತ್ತು. ಆನಂತರ ಗಾಂಧೀಜಿ ತಮ್ಮ ಕಾರ್ಯ ಚಟುವಟಿಕೆಗಳಿಗಾಗಿ ಮಧ್ಯ ಭಾರತದಲ್ಲಿ ನೆಲೆಗೊಳ್ಳಲು ಪ್ರಶಸ್ತವಾದ ಜಾಗಕ್ಕಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿ ಅನುಯಾಯಿ ಮತ್ತು ಮೂಲತಃ ವಾರ್ಧಾ ಪಟ್ಟಣದವರಾದ ಸೇಠ್ ಜಮ್ನಲಾಲ್ ಬಜಾಜ್ ಅವರು  ಗಾಂಧಿ ಕನಸನ್ನು ಸಾಕಾರಗೊಳಿಸಿದರು. ಸೇವಾಗ್ರಾಮದ ಆಶ್ರಮಕ್ಕಾಗಿ ಬಜಾಜ್ ಅವರು ಮುನ್ನೂರು ಎಕರೆ ಭೂಮಿಯನ್ನು ಖರೀದಿಸಿ ಗಾಂಧೀಜಿಯವರಿಗೆ ಬಳುವಳಿಯಾಗಿ ನೀಡಿದ್ದರು.
ಸಬರಮತಿ ಆಶ್ರಮ ಸ್ವಾತಂತ್ರ್ಯ ಚಳುವಳಿಗೆ ಕಾರ್ಯಕರ್ತರನ್ನು ತಯಾರು ಮಾಡುವ ಕೇಂದ್ರವಾಗಿದ್ದರೆ, ಸೇವಾ ಗ್ರಾಮ, ಗಾಂಧೀಜಿಯವರ ಕನಸಿದ್ದ ಗ್ರಾಮ ಭಾರತ ಹಾಗೂ ಗುಡಿ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುವ ಚಿಂತನೆಗಳ ಗರ್ಭ ಗುಡಿಯಾಗಿತ್ತು. ಸುಮಾರು  ವರ್ಷಗಳ ಕಾಲ ಇಲ್ಲಿನ ಭಾಪು ಕುಟಿಯಲ್ಲಿ ಕಸ್ತೂರಬಾ ಜೊತೆ ವಾಸವಾಗಿದ್ದ ಗಾಂಧೀಜಿಯವರ ಜೊತೆ, ವಿನೋಭಾ, ಮೀರಾಬೆಹನ್  ಜಮ್ನಲಾಲ್ ಬಜಾಜ್, ಜೆ.ಸಿ. ಕುಮಾರಪ್ಪ, ಮಹದೇವ ದೇಸಾಯಿ  ಮುಂತಾದವರು ವಾಸಿಸುತ್ತಾ ತಾವು ಕನಸಿದ್ದ ಗ್ರಾಮ ಭಾರತಕ್ಕೆ ಅಸ್ತಿಭಾರ ಹಾಕಿದರು. ಇದೇ ವೇಳೆಯಲ್ಲಿ ಗಾಧಿಜಿಯವರ ಸಹೋದರನ ಪುತ್ರ ಮಗನ್ ಲಾಲ್ ಸೇವಾಗ್ರಾಮ ಆಶ್ರಮದಲ್ಲಿ ಗ್ರಾಮೀಣ ಕೈಗಾರಿಕೆಗಳ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಿದರು. ಅವರು ತೀರಾ ಚಿಕ್ಕ ವಯಸ್ಸಿನಲ್ಲಿ ಅಕಾಲ ಮರಣ ಹೊಂದುದರಿಂದ ಮುಂದಿನ ದಿನಗಳಲ್ಲಿ ಅದನ್ನು ಜೆ.ಸಿ. ಕುಮಾರಪ್ಪ ಮುನ್ನಡೆಸಿದರು. ಮಗನ್ ಲಾಲ್ ನೆನಪಿನಲ್ಲಿ ಆಶ್ರಮದ ಪಕ್ಕದ ಜನ ವಸತಿಪ್ರದೇಶಕ್ಕೆ ಮಗನ್ ವಾಡಿ ಎಂದು ಹೆಸರಿಟ್ಟು ಕರೆಯಲಾಗುತ್ತಿದೆ.





1942 ರ ಜಗತ್ತಿನ  ಎರಡನಯ ಮಹಾಯುದ್ಧದ ಆತಂಕದ ಸಮಯದಲ್ಲಿ ದೂರದ ಅಮೇರಿಕಾದಿಂದ ಬಂದ ಪತ್ರಕರ್ತ ಲೂಯಿಫಿಶರ್ ಬೇಸಿಗೆಯಲ್ಲಿ ಬೆಂಕಿಯ ಮಳೆ ಸುರಿಯವ ಜೂನ್ ತಿಂಗಳಿನಲ್ಲಿ ಸೇವಾ ಗ್ರಾಮಕ್ಕೆ ಬೇಟಿ ನೀಡಿ ಒಂದು ವಾರ ತಂಗಿದ್ದರು. ಗಾಂಧಿಯ ಜೊತೆ ಒಡನಾಡಿ, ಆನಂತರ ಮಹಾತ್ಮನ ಜೊತೆ ಒಂದು ವಾರಎಂಬ ಲೇಖನ ಬರೆದಿದ್ದರು. ಗಾಂಧೀಜಿಯ ವ್ಯಕ್ತಿತ್ವದಿಂದ ತೀವ್ರವಾಗಿ ಪ್ರಭಾವಿತರಾದ ಲೂಯಿ ಫಿಶರ್ ನಂತರದ ದಿನಗಳಲ್ಲಿ ಬರೆದ ಮಹಾತ್ಮ ಗಾಂಧಿ ಕುರಿತ ಆತ್ಮ ಕಥೆ ಜಗತ್ ಪ್ರಸಿದ್ದ ಕೃತಿಯಾಯಿತು. ಪಾಶ್ಚಿಮಾತ್ಯ ಜಗತ್ತಿಗೆ ಗಾಂಧಿ ಮತ್ತು ಅವರ ಚಿಂತನೆಗಳನ್ನು ಪರಿಚಯಿಸಿತು. ಇದೇ ಕೃತಿಯನ್ನು ಆಧರಿಸಿ ಗಾಂಧಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ರಿಚರ್ಡ ಅಟನ್‍ಬರೋ ಎಂಬ ನಿರ್ಧೇಶಕ, ಬರೋಬ್ಬರಿ ಹದಿನೇಳು ವರ್ಷಗಳ ಕಾಲ ಧ್ಯಾನಿಸಿ, ಚಿತ್ರ ಕಥೆ ಸಿದ್ಧ ಪಡಿಸಿ 1982ರಲ್ಲಿ ಗಾಂಧಿ ಚಿತ್ರ ನಿರ್ಮಾಣ ಮಾಡಿದರು. ಹೀಗೆ ಹಲವು ಕ್ರಾಂತಿಗಳಿಗೆ, ಮನುಕುಕ್ಕೆ ಒಳಿತನ್ನು ಬಯಸುವ ಹಲವಾರು ಯೋಜನೆ ಮತ್ತು ಯೋಚನೆಗಳಿಗೆ
ಸಾಕ್ಷಿಯಾದ ಸೇವಾಗ್ರಾಮ ಇಂದಿಗೂ ತನ್ನ ಒಡಲೊಳಗೆ ಇತಿಹಾಸದ ಕುರುಹುಗಳನ್ನು ಹೊತ್ತುಕೊಂಡು ನಿಂತಿದೆ.
ಸೇವಾಗ್ರಾಮದ ಆಶ್ರಮವನ್ನು ಮತ್ತು ಅಲ್ಲಿನ ಚಟುವಟಿಕೆಗನ್ನು ಅಣಕಿಸುವಂತೆಮಹಾರಾಷ್ಟ್ರ ಸರ್ಕಾರ ಕೈಗಾರಿಕಾ ಬಡಾವಣೆಯನ್ನು ಸ್ಥಾಪಿಸಿದ  ಫಲವಾಗಿ ವಾರ್ಧ ಸುತ್ತ ಮುತ್ತ ತಲೆ ಎತ್ತಿ ನಿಂತಿರುವ ಬೃಹತ್ ಕೈಗಾರಿಕೆಗಳು ಸೇವಾ ಗ್ರಾಮದ ಆಶ್ರಮದ ಚಟುವಟಿಕೆಗಳನ್ನು ಮರೆ ಮಾಚುವಂತೆ  ಚಿಮಣಿಗಳಿಂದ ಹೊಗೆ ಉಗುಳುತ್ತಿವೆ. ಈ ಹೊಗೆ ಗುಡಿ ಕೈಗಾರಿಕೆಗಳ ವಿರುದ್ಧದ ದ್ವೇಷದ ಹೊಗೆಯೋ ? ಅಥವಾ ಬಂಡವಾಳಶಾಹಿ ಪ್ರಭುತ್ವದ ದಿಗ್ವಿಜಯದ ಸಂಕೇತವೂ ಒಂದೂ ಅರ್ಥವಾಗದ ಸ್ಥಿತಿ. ಇಡೀ ಸೇವಾಗ್ರಾಮದ ಚಟುವಟಿಕೆಯನ್ನು ಗಮನಿಸಿದಾಗ, ಇದನ್ನು ರೂಪಕದ ಭಾಷೆಯಲ್ಲಿ ಹೇಳುವುದಾದರೆ, “ ಮರ ಕಡಿದ ನಂತರವೂ, ಬುಡ ಚಿಗುರುತ್ತದಲ್ಲಾ ಹಾಗಿದೆ.ಸೇವಾ ಗ್ರಾಮದ ಆಶ್ರಮದಲ್ಲಿ  ಇವೊತ್ತಿಗೂ ಚರಕದ ಗಾಲಿ ತಿರುಗುವುದು ನಿಂತಿಲ್ಲ, ಭಾರತದ ವಿವಿಧ ಪ್ರದೇಶಗಳಿಗೆ, ಪರಿಸರಕ್ಕೆ ಎರವಾಗದಂತೆ, ಕಡಿಮೆ ಬಂಡವಾಳ ಬಯಸುವ ಹಾಗೂ ಅತಿ ಹೆಚ್ಚು ಮಾನವರ ಕೈಗಳಿಗೆ  ಕೆಲಸ ನೀಡುವ ತಂತ್ರಜ್ಙಾನಗಳ ಅನ್ವೇಷಣೆ ಮತ್ತು ಅವಿಷ್ಕಾರ ಕಾರ್ಯಗಳು ಮುಂದುವರಿದಿವೆ.
ಈ ಇಪ್ಪತ್ತೊಂದನೇಯ ಶತಮಾನದಲ್ಲೂ ಗಾಧೀಜಿಯ ಚಿಂತನೆಗಳಿಗೆ ಮೌಲ್ಯಗಳು ಇದೆಯಾ? ಎಂದು ಪ್ರಶ್ನಿಸಿಕೊಂಡು  ನಿರಾಸೆ ವ್ಯಕ್ತಪಡಿಸುವವರು ಒಮ್ಮೆ ಈ ಆಶ್ರಮಕ್ಕೆ ಬೇಟಿ ನೀಡಬೇಕು. ಬೆಳಿಗ್ಗೆ 4-30 ರಿಂದ ಆರಂಭ ವಾಗುವ ಚಟುವಟಿಕೆ ಸಂಜೆ 7 ಗಂಟೆಗೆ ಮುಕ್ತಾಯವಾಗುತ್ತದೆ. ಬೆಳಿಗ್ಗೆ ಪ್ರಾರ್ಥನೆ, ಆಶ್ರಮನ್ನು ಶೌಚಿಗೊಳಿಸುವ ಕಾರ್ಯ ಕ್ರಮಗಳು ಆರಂಭವಾಗಿ, 8 ಗಂಟೆಗೆ ಲಘು ಉಪಹಾರ, ಮಧ್ಯಾಹ್ನ 11 ಗಂಟೆಗೆ ಭೋಜನ ಹಾಗೂ 12 ರಿಂದ 2 ಗಂಟೆಯವರೆಗೆ ವಿಶ್ರಾಂತಿ, ಮತ್ತೇ ಎರಡು ಗಂಟೆಯಿಂದ ಚರಕದಿಂದ ನೂಲು ನೇಯುವುದು, ಕೈ ಮಗ್ಗ ದಲ್ಲಿ ಹತ್ತಿ ಬಟ್ಟೆಗಳನ್ನು ತಯಾರಿಸುವುದು,ಮುಂತಾದ ಚಟುವಟಿಕೆಗಳು ನಡೆಯುತ್ತವೆ. ಸಂಜೆ ಪ್ರಾರ್ಥನೆ, ಉಪನ್ಯಾಸ ಇವುಗಳೊಂದಿಗೆ ಮುಕ್ತಾಯವಾಗಿ ಏಳು ಗಂಟೆಗೆ ನೀಡುವ ರಾತ್ರಿ ಭೋಜನದೊಂದಿಗೆ  ದಿನದ ಕಾರ್ಯಕ್ರಮ ಮುಕ್ತಾಯವಾಗುತ್ತದೆ.
ವರ್ತಮಾನದ ಜಂಜಡದ ಜಗತ್ತಿನಿಂದ ನೊಂದವರು ಹಾಗೂ  ಬೇಸರವಾದವರು ತಂಡೋಪಾದಿಯಲ್ಲಿ ಅಶ್ರಮಕ್ಕೆ ಬಂದು ವಾರಗಟ್ಟಲೆ ಕಾರ್ಯಕರ್ತರಾಗಿ ಇದ್ದು ಸೇವೆ ಸಲ್ಲಿಸಿ ಹೋಗುತ್ತಾರೆ. ಈ ಕಾರಣಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳು ಆಶ್ರಮದ ಸ್ಟೇಶನ್ ನಲ್ಲಿ ಎರಡು ನಿಮಿಷ ನಿಂತು ಚಲಿಸುತ್ತವೆ. ಭಾರತ ನಾಲ್ಕು ಮೂಲೆಗಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ನಿಲ್ದಾಣವಾಗಿರುವ ನಾಗಪುರ ಹತ್ತಿರವಿರುವದರಿಂದ ಪ್ರತಿ ದಿನ ಸಾವಿರಾರು ಗಾಂಧಿ ಅಭಿಮಾನಿಗಳು ಇಲ್ಲಿಗೆ ಬೇಟಿ ನೀಡುತ್ತಾರೆ.
ಸೇವಾಶ್ರಮ ಟ್ರಸ್ಟ್ ನಿಂದ ನಡೆಯುತ್ತಿರುವ ಮಹಾತ್ಮ ಗಾಂಧಿ ಮೆಡಿಕಲ್ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಗ್ರಾಮಗಳ ಬದುಕನ್ನು ಪರಿಚಯ ಮಾಡಿಕೊಡುತ್ತವೆ. ಮೆಡಿಕಲ್ ವಿದ್ಯಾರ್ಥಿಗಳಿಗೆ ಗ್ರಾಮ ಸೇವೆಯನ್ನು ಕಡ್ಡಾಯ ಗೊಳಿಸಲಾಗಿದೆ. ಅದೇ ರೀತಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗ್ರಾಮ ಭಾರತಕ್ಕೆ ಅನುಕೂಲವಾಗುವಂತೆ, ವ್ಯವಸಾಯದ ಉಪಕರಣಗಳು, ನೀರೆತ್ತುವ ಸಾಧನಗಳು, ಚಕ್ಕಡಿ ಇವುಗಳ ತಂತ್ರ ಜ್ಙಾನ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ, ಯಾವುದೇ ಕ್ಯಾಪಿಟೇಶನ್ ಶುಲ್ಕ ಅಥವಾ ಮರೆ ಮಾಚಿದ ಶುಲ್ಕವಿಲ್ಲದೆ, ಮಹಾರಾಷ್ಟ್ರ ಸರ್ಕಾರ ನಿಗಧಿಪಡಿಸಿದ ಶಿಕ್ಷಣ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆದು ಕೊಳ್ಳಲಾಗುತ್ತಿದೆ. ಇಲ್ಲಿ ಐದು ವರ್ಷಗಳ ಕಾಲ ತಯಾರಾದ ವಿದ್ಯಾರ್ಥಿಗಳು ತಮಗೆ ಅರಿವಿಲ್ಲದಂತೆ, ಗ್ರಾಮಭಾರತದ ಬಗ್ಗೆ ಒಲವು ಮತ್ತು ನೈತಿಕ ಪ್ರಜ್ಙೆಯನ್ನು ಮೈಗುಡಿಸಿಕೊಳ್ಳುತ್ತಿರುವುದು ನೆಮ್ಮದಿಯ ಸಂಗತಿ. ಒಬ್ಬ ದಾರ್ಶನಿಕನ ಚಿಂತನೆಗಳು, ಆತ ಅಳಿದ ನಂತರವೂ ಹೇಗೆ ಕಾಲಘಟ್ಟಕ್ಕೆ ತಕ್ಕಂತೆ ಮರುಹುಟ್ಟು ಪಡೆಯಬಲ್ಲವು ಎಂಬುದಕ್ಕೆ ಸೇವಾಶ್ರಮ ನಮ್ಮದುರು ಸಾಕ್ಷಿಯಾಗಿದೆ.












1 ಕಾಮೆಂಟ್‌:

  1. ತುಂಬಾ ಅರ್ಥಪೂರ್ಣವಾದ ಬರಹ ಸರ್... ಗಾಂಧಿಯ ಬಗೆಗಿನ ನನ್ನ ನಂಬಿಕೆಯನ್ನು ಗಟ್ಟಿಗೊಳಿಸಿದ್ದಕ್ಕೆ ಕೃತಜ್ಞತೆಗಳು ನಿಮಗೆ

    -ವಿ.ಆರ್.ಕಾರ್ಪೆಂಟರ್

    ಪ್ರತ್ಯುತ್ತರಅಳಿಸಿ